ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಫೆಬ್ರವರಿ 19, 2016

ಹೀಗೊಂದು ವೇದೋಕ್ತ ಉಪನಯನ     ಬೇಲೂರು ತಾಲ್ಲೂಕಿನ ಆಂದಲೆ ಗ್ರಾಮದ ಶ್ರೀ ಕೃಷ್ಣಮೂರ್ತಿ ಶನಿದೇವಾಲಯದ ಅರ್ಚಕರು. ವೇದಭಾರತಿಯ ಚಟುವಟಿಕೆಗಳ ಬಗ್ಗೆ ಬೇಲೂರಿನ ಮಿತ್ರರಿಂದ ತಿಳಿದು ದೂರವಾಣಿ ಮೂಲಕ ಸಂಯೋಜಕ ಶ್ರೀ ಹರಿಹರಪುರ ಶ್ರೀಧರರನ್ನು ಕೆಲವು ದಿನಗಳ ಹಿಂದೆ ಸಂಪರ್ಕಿಸಿದರು. ದಲಿತ ಸಮುದಾಯಕ್ಕೆ ಸೇರಿದ ಅವರು ತಮ್ಮ ಮಗ ಚಂದನನಿಗೆ ವೇದೋಕ್ತವಾಗಿ ಉಪನಯನ ಮಾಡಿಸುವ ತಮ್ಮ ಮನದ ಆಸೆಯನ್ನು ಹಂಚಿಕೊಂಡರು. ಸ್ವತಃ ಹಾಸನಕ್ಕೆ ಬಂದು ಮಾತನಾಡಿ ತಮ್ಮ ಇಚ್ಛೆಯನ್ನು ಪುನರುಚ್ಛರಿಸಿದರು. ವೇದಭಾರತಿಯ ಕಾರ್ಯಕರ್ತರು ಇದಕ್ಕೆ ಒಪ್ಪಿದರು. ಅದರಂತೆ ದಿನಾಂಕ 19.02.2016ರಂದು ಗ್ರಾಮದಲ್ಲಿ ಈ ಕಾರ್ಯ ಮಾಡುವುದೆಂದೂ ನಿಶ್ಚಯವಾಯಿತು. ಉತ್ಸಾಹಿ ಕೃಷ್ಣಮೂರ್ತಿಯವರು ಗ್ರಾಮದ ದೇವಸ್ಥಾನದ ಪಕ್ಕದ ಅರಳಿಮರದ ನೆರಳಿನಲ್ಲಿ ಶಾಮಿಯಾನಾ ಹಾಕಿಸಿದರು. ಉಪನಯನಕ್ಕೆ ಅಗತ್ಯದ ಎಲ್ಲಾ ಸಿದ್ಧತೆಗಳನ್ನೂ ವಿವರಗಳನ್ನು ಕೇಳಿ ಮಾಡಿಕೊಂಡಿದ್ದರು. ಗ್ರಾಮಸ್ಥರು, ಬಂಧುಗಳನ್ನು ಆಹ್ವಾನಿಸಿದ್ದರು. 

     ಹಾಸನದಿಂದ ಶ್ರೀಧರ್, ನಾನು, ಸತೀಶ, ರಾಜಶೇಖರ್ ಮತ್ತು ವೇದಾಧ್ಯಾಯಿ ಶ್ರೀ ನವೀನ ಬೆಳಿಗ್ಗೆ 8ರ ವೇಳೆಗೆ ಸ್ಥಳ ತಲುಪಿದಾಗ ಅಲ್ಲಿನ ಹಬ್ಬದ ವಾತಾವರಣ ಕಂಡು ಹರ್ಷಿತರಾದೆವು. ಶ್ರೀ ನವೀನರು ವೇದೋಕ್ತ ರೀತಿಯಲ್ಲಿ ಉಪನಯನ ಕಾರ್ಯ ನಡೆಸಿಕೊಟ್ಟರು. ಸಹಕಾರಿಗಳಾಗಿ ನಾವು ಜೊತೆಯಲ್ಲಿದ್ದೆವು. ಪ್ರತಿ ಕ್ರಿಯೆಯನ್ನೂ ಶ್ರದ್ಧೆಯಿಂದ ಮಾಡುತ್ತಿದ್ದ ವಟು ಚಂದನ್ ಮತ್ತು ಅವನ ತಂದೆ-ತಾಯಿಯರು ಋತ್ವಿಕರು ಪ್ರತಿ ಮಂತ್ರದ ಅರ್ಥ, ಉದ್ದೇಶಗಳನ್ನು ವಿವರಿಸುತ್ತಿದ್ದುದನ್ನು ಗಮನವಿಟ್ಟು ಕೇಳುತ್ತಿದ್ದುದು ವಿಶೇಷವಾಗಿತ್ತು. ಹಾಜರಿದ್ದ ಗ್ರಾಮಸ್ಥರೂ ಸಹ ಆಸಕ್ತಿಯಿಂದ ವೀಕ್ಷಿಸುತ್ತಿದ್ದರು.

     ಯಜ್ಞೋಪವೀತ ಧಾರಣೆಯಾದ ನಂತರದಲ್ಲಿ ಶ್ರೀ ನವೀನರು ಮಾತನಾಡಿ ಉಪನಯನವೆಂದರೆ 'ಹತ್ತಿರಕ್ಕೆ ಕರೆದೊಯ್ಯುವುದು' ಎಂದು ಅರ್ಥ, ಅಂದರೆ ವಟುವನ್ನು ಗುರುಗಳ ಹತ್ತಿರ ವೇದಾಧ್ಯಯನ ಮತ್ತು ಜ್ಞಾನಸಂಪಾದನೆ ಸಲುವಾಗಿ ಕರೆದೊಯ್ಯುವ ಕ್ರಿಯೆಯಾಗಿದೆ. ವೇದ ಎಂಬ ಪದದ ಅರ್ಥ ಸಹ ಜ್ಞಾನ ಎಂಬುದೇ ಆಗಿದೆ. ಅಗ್ನಿಸಾಕ್ಷಿಯಾಗಿ, ಸೂರ್ಯ, ಚಂದ್ರ, ಸಕಲ ದೇವತೆಗಳ ಸಾಕ್ಷಿಯಾಗಿ, ಗುರು-ಹಿರಿಯರ ಸಾಕ್ಷಿಯಾಗಿ ಸತ್ಯಪಥದಲ್ಲಿ ನಡೆಯತ್ತೇನೆ, ಸಮಾಜಕ್ಕೆ ಹಿತಕಾರಿಯಾಗಿ ಬಾಳುತ್ತೇನೆ ಎಂದು ಈ ಸಂದರ್ಭದಲ್ಲಿ ಸಂಕಲ್ಪವನ್ನೂ ಮಾಡಬೇಕಾಗುತ್ತದೆ ಎಂದರಲ್ಲದೆ ಧರಿಸುವ ಮೂರು ಎಳೆಯ ಯಜ್ಞೋಪವೀತ ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ನೆನಪಿಸುವ, ಸತ್ಯಪಥದಲ್ಲಿ ಸಾಗಬೇಕೆಂಬುದನ್ನು ನೆನಪಿಸುವ ಸಾಧನವಾಗಿದೆಯೆಂದರು. ಎಲ್ಲಾ ಮಾನವರಿಗೂ ವೇದಾಧ್ಯಯನ ಮಾಡಲು ಮತ್ತು ಉಪನಯನ ಸಂಸ್ಕಾರ ಪಡೆಯಲು ಅಧಿಕಾರವಿದೆಯೆಂದರು.

      ಹರಿಹರಪುರ ಶ್ರೀಧರ್, "ನಾವೆಲ್ಲರೂ ಭೂತಾಯಿಯ ಮಕ್ಕಳು, ಸೋದರರಂತೆ ಬಾಳಬೇಕು, ಅಸಮಾನತೆಗೆ ಅವಕಾಶವಿಲ್ಲವೆಂದು ಸಾರಿ ಹೇಳುವ ವೇದಮಂತ್ರದ ಉದಾಹರಣೆಯೊಂದಿಗೆ ಹುಟ್ಟಿನಿಂದ ಯಾರೂ ಶ್ರೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ; ನಮ್ಮ ನಡವಳಿಕೆ ಮತ್ತು ಕರ್ಮಗಳಿಗೆ ಅನುಸಾರವಾಗಿ ಯೋಗ್ಯತೆ ಬರುತ್ತದೆ; ವೇದಭಾರತಿ ಹಲವು ವರ್ಷಗಳಿಂದ ಯಾವುದೇ ಜಾತಿ, ಮತ, ಪಂಥ, ಲಿಂಗ, ವಯಸ್ಸಿನ ಭೇದವಿಲ್ಲದೆ ವೇದಾಸಕ್ತ ಎಲ್ಲರಿಗೂ ವೇದವನ್ನು ಕಲಿಯಲು ಅವಕಾಶ ಮಾಡಿಕೊಟ್ಟಿದೆ. ಇಂತಹ ಸಾಮರಸ್ಯ ಸಾರುವ ಕಾರ್ಯಗಳು ನಮ್ಮನಮ್ಮಲ್ಲಿ ಬಾಂಧವ್ಯವನ್ನು ಹೆಚ್ಚಿಸಲು ಸಹಕಾರಿ" ಎಂದು ಅಭಿಪ್ರಾಯಪಟ್ಟರು. ಕವಿನಾಗರಾಜರು ಮಾತನಾಡಿ, "ವೇದಭಾರತಿ ಸಮಾಜಮುಖಿಯಾದ ಯಾವುದೇ ಚಟುವಟಕೆಗಳನ್ನು ಯಾರೇ ಮಾಡಲಿ, ಅವರೊಂದಿಗೆ ಕೈಜೋಡಿಸುತ್ತದೆ. ನೀವುಗಳೂ ಸಹ ವೇದಭಾರತಿಯೊಂದಿಗೆ ಕೈಜೋಡಿಸಿದರೆ ಉತ್ತಮ ಕಾರ್ಯಗಳಿಗೆ ಉತ್ತೇಜನ ದೊರೆಯುತ್ತದೆ" ಎಂದರು.

     ಹರ್ಷಭರಿತರಾಗಿದ್ದ ವಟುವಿನ ತಂದೆ ಕೃಷ್ಣಮೂರ್ತಿಯವರು ಮನದುಂಬಿ ಹೇಳಿದ ಮಾತುಗಳಿವು: "ನಮಗೆ ಇಂದು ಅತ್ಯಂತ ಸಂತೋಷವಾಗಿದೆ. ಯಾವುದೇ ಸಂಕೋಚ, ತಾರತಮ್ಯವಿಲ್ಲದೆ ನಮ್ಮನ್ನೂ ತಮ್ಮವರಂತೆ ಭಾವಿಸಿ ಉಪನಯನ ಮಾಡಿಸಿರುವುದಕ್ಕೆ ವೇದಭಾರತಿಯವರಿಗೆ ಆಭಾರಿಯಾಗಿದ್ದೇನೆ. ನಮ್ಮಲ್ಲೂ ಸಹ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ತಾಮಸ ಆಹಾರವನ್ನು ಬಿಟ್ಟು, ಸಾತ್ವಿಕ ಆಹಾರ ಸೇವಿಸುವುದು, ನಮ್ಮ ಜೀವನದ ರೀತಿಗಳಲ್ಲಿ ಬದಲಾವಣೆ ಮಾಡಿಕೊಂಡು ಶುದ್ಧಜೀವನ ನಡೆಸುವ ಬಗ್ಗೆ ಗಮನಕೊಡಬೇಕು. ನಮ್ಮ ಅನೇಕ ಬಂಧುಗಳು ಆಮಿಷಕ್ಕೊಳಗಾಗಿ ಅನ್ಯಮತಗಳಿಗೆ ಮತಾಂತರ ಹೊಂದಿದ್ದಾರೆ. ಈಗ ಹೇಳಿದಂತೆ ವೇದದ ಆಶಯದಂತೆ ಒಳ್ಳೆಯ ರೀತಿಯಲ್ಲಿ ಎಲ್ಲರೂ ನಡೆದರೆ ಹಿಂದೂಧರ್ಮದ ಉಳಿವಿಗೆ ಸಹಾಯವಾಗುತ್ತದೆ. ಮತಾಂತರಗಳನ್ನು ತಡೆಯಲು ಹಿಂದಿನಿಂದಲೂ ನನ್ನ ಕೈಲಾದ ಪ್ರಯತ್ನ ಮಾಡುತ್ತಲೇ ಇದ್ದೇನೆ. ಇನ್ನು ಮುಂದೆಯೂ ಈ ಕೆಲಸ ಮುಂದುವರೆಸುತ್ತೇನೆ." 
     ವೇದಾಭಿಮಾನಿಗಳು, ಹಿರಿಯರು ವಟುವಿಗೆ ಆಶೀರ್ವದಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಭೋಜನ ಸ್ವೀಕರಿಸಿ ಒಳ್ಳೆಯ ಕೆಲಸವಾಯಿತೆಂಬ ಭಾವದೊಂದಿಗೆ ಹಾಸನಕ್ಕೆ ಹಿಂತಿರುಗಿದೆವು.
-ಕ.ವೆಂ.ನಾಗರಾಜ್.
*****************
ಚಿತ್ರಕೃಪೆ: ಹರಿಹರಪುರ ಶ್ರೀದರ್.
   

1 ಕಾಮೆಂಟ್‌:


 1. Dany Perera
  ಎಲ್ಲರಿಗಾಗಿ ವೇದ ಸಂಸ್ಕಾರ...ಸಂಘದ (RSS)ಚಿಂತನೆಗಳಿಂದ ಬೆಳೆದ ಕಾರ್ಯಕರ್ತರುಗಳಾದ ಹರಿಹರಪುರ ಶ್ರೀಧರ್ ಜೀ, ಕಂ.ವೆ.ನಾಗರಾಜ್ ಜೀ ಯವರಂತಹ ಹಿರಿಯರ ಆದರ್ಶದ ಬದುಕು ಹಿಂದೂ ಸಮಾಜದ ಎಲ್ಲ ಆಚರಣೆಗಳು ಎಲ್ಲಾ ಜಾತಿ-ವರ್ಗಗಳಿಗೂ ಸೇರಿದ್ದು ಎಂಬುದನ್ನು ನಿರೂಪಿಸಿದೆ. ಅವರೆಲ್ಲರ ಸಾಮಾನ್ಯ ನಡವಳಿಕೆಗಳು ನಮಗೆ ನಿಜಕ್ಕೂ ಪ್ರೇರಣಾದಾಯಿಯಾಗಿದೆ.

  Maharshi Pandeji
  I welcome it...

  Chitra Prashanth
  Same here, vyakti gunadinda shresta aagodu

  Keshava Narayana
  Thumbs Olleya Kelasa.

  Bommanna D. Bamsvns
  ಬದಲಾವಣೆಯ ಮೊದಲ ಹೆಜ್ಜೆ, ಶುಭವಾಗಲಿ.

  ಪ್ರತ್ಯುತ್ತರಅಳಿಸಿ