ಮಹಾಕಾವ್ಯ ರಾಮಾಯಣ ಬರೆದ ವಾಲ್ಮೀಕಿ ಇಂದು ಬದುಕಿದ್ದಿದ್ದರೆ? ಆತನ ಹಿನ್ನೆಲೆಯನ್ನು ಹುಡುಕಿ, ಕೆದಕಿ ರಂಪ-ರಾಮಾಯಣ ಮಾಡುತ್ತಿದ್ದರು. 'ಆದರ್ಶ ಪುರುಷ ರಾಮನ ಆದರ್ಶ ಗುಣಗಳು ಎಲ್ಲರಲ್ಲೂ ಬರಲಿ ಎನ್ನುವ ನೀನು ಹಿಂದೆ ಎಷ್ಟು ಆದರ್ಶವಾಗಿ ಬದುಕಿದ್ದೆ?' ಎಂದು ಕೇಳುತ್ತಿದ್ದರು. 'ನಿನ್ನ ಸ್ವಾರ್ಥಕ್ಕಾಗಿ ಎಷ್ಟು ಜನರ ತಲೆ ಒಡೆದು ಹಣ ದೋಚಿದೆ, ಎಷ್ಟು ಪ್ರಾಣಿಗಳನ್ನು ಕೊಂದೆ, ಎಷ್ಟು ಸಂಸಾರಗಳನ್ನು ಕಣ್ಣೀರಿನಲ್ಲಿ ಮುಳುಗುವಂತೆ ಮಾಡಿದೆ?' ಎಂದು ಪ್ರಶ್ನಿಸುತ್ತಿದ್ದರು. ಈ ಕುರಿತ ಚರ್ಚೆ, ಕೆಸರೆರಚಾಟ, ದೂಷಣೆ, ನಿಂದನೆಗಳಲ್ಲಿ ರಾಮಾಯಣದ ಮಹತ್ವ ಹಿಂದೆ ಸರಿದುಬಿಡುತ್ತಿತ್ತು. 'ನದಿ ಮೂಲ, ಋಷಿ ಮೂಲ ಹುಡುಕಬಾರದು' ಎಂಬ ಗಾದೆ ಹುಟ್ಟಿಕೊಂಡದ್ದು ಬಹುಷಃ ಇಂತಹ ಕಾರಣಕ್ಕಾಗಿಯೇ!
ವ್ಯಕ್ತಿಯೊಬ್ಬನ ಭೂತಕಾಲದ ಸಂಗತಿಗಳು ವರ್ತಮಾನದಲ್ಲಿ ಅವನನ್ನು ಭೂತವಾಗಿ ಕಾಡುವ ಸಂದರ್ಭಗಳು ಬರುತ್ತವೆ. ನನ್ನನ್ನು ಈಗಲೂ ಹಲವು ಭೂತಗಳು ಕಾಡುತ್ತಿರುತ್ತವೆ. ಅಂತಹ ಒಂದು ಭೂತದ ಬಗ್ಗೆ ತಿಳಿಸುವೆ. ಆಗ ನನಗೆ ಸುಮಾರು 7-8 ವರ್ಷಗಳಿದ್ದಿರಬಹುದು. ಚಿಕ್ಕಮಗಳೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 2ನೆಯ ತರಗತಿಯಲ್ಲಿ ಓದುತ್ತಿದ್ದ ಸಮಯ. ಶಾಲೆ ಮುಗಿಸಿಕೊಂಡು ಸ್ಲೇಟು, ಪುಸ್ತಕವಿದ್ದ ಚೀಲವನ್ನು ತೂಗಾಡಿಸುತ್ತಾ ಬರುತ್ತಿದ್ದೆ. ದಾರಿಯ ಬದಿಯಲ್ಲಿ ನಿಂತಿದ್ದ ಲಾರಿಯ ಬಂಪರಿನ ಬದಿಗಳಲ್ಲಿ ಕಟ್ಟಿದ್ದ ಕುಚ್ಚನ್ನು (ಹೆಣ್ಣು ಮಕ್ಕಳು ಜಡೆಗೆ ಕಟ್ಟಿಕೊಳ್ಳುವಂತಹದು) ಮುಟ್ಟಿ ಮುಂದೆ ಹೋಗುತ್ತಿದ್ದಾಗ ಧುತ್ತನೆ ಎದುರು ಬಂದು ನಿಂತಿದ್ದ ಲಾರಿಯ ಕ್ಲೀನರ್ ನನ್ನ ಕೆನ್ನೆಗೆ ಪಟಾರನೆ ಬಾರಿಸಿದ್ದ. ನಾನು ತತ್ತರಿಸಿಹೋಗಿದ್ದೆ, ಹೆದರಿಬಿಟ್ಟಿದ್ದೆ. ಈಗಲೂ ಸಹ ಯಾವದೇ ವಾಹನದ ಬಂಪರಿನಲ್ಲಿ ಕಟ್ಟಿರುವ ಕುಚ್ಚನ್ನು ಕಂಡಾಗ ಕೆನ್ನೆಗೆ ಬಿದ್ದಿದ್ದ ಏಟು ಮತ್ತು ಹೊಡೆದವನ ಮುಖ ನೆನಪಾಗುತ್ತದೆ. ಕುಚ್ಚನ್ನು ಮುಟ್ಟಲು ಭಯವಾಗುತ್ತದೆ. ಹಿಂದೆ ನಡೆದ ಪೇಚಿನ ಪ್ರಸಂಗಗಳು, ಅಕಾರಣವಾಗಿಯೋ, ಸಕಾರಣವಾಗಿಯೋ ಅವಮಾನಿತರಾಗುವ ಪ್ರಸಂಗಗಳು, ಕೆಟ್ಟ ಮತ್ತ ಕಹಿ ಘಟನೆಗಳು ಸಾಮಾನ್ಯವಾಗಿ ಎಲ್ಲರನ್ನೂ ಭೂತವಾಗಿ ಕಾಡುತ್ತವೆ. 'ಅವನಿ(ಳಿ)ಗೆ ಭೂತ ಮೆಟ್ಟಿಕೊಂಡಿದೆ' ಎಂಬಂತಹ ಮಾತುಗಳನ್ನು ಕೇಳುತ್ತಿರುತ್ತೇವೆ. ನಿಜವಾಗಿ ಮೆಟ್ಟಿಕೊಂಡಿರುವುದು ಹೊರಗಿನ ಭೂತವಲ್ಲ, ಒಳಗಿನ ಭೂತವೇ ಆಗಿರುತ್ತದೆ. ಒಬ್ಬರೇ ತಮ್ಮಷ್ಟಕ್ಕೆ ತಾವೇ ಗುಣುಗುಣಿಸುತ್ತಾ ಹೋಗುವವರು, ಏನನ್ನೋ ನೆನೆಸಿಕೊಂಡು ತಮ್ಮಷ್ಟಕ್ಕೆ ತಾವೇ ನಗುವವರು, ಅಳುವವರು ಮುಂತಾದವರು ಇಂತಹ ಭೂತಚೇಷ್ಟೆಗೆ ಒಳಗಾದವರೇ!
ಭೂತ ಎಂದಾಕ್ಷಣ ದೆವ್ವ, ಪ್ರೇತ, ಪಿಶಾಚಿ, ಇತ್ಯಾದಿಗಳ ಕಲ್ಪನೆಯ ರೂಪ ಕಣ್ಣು ಮುಂದೆ ಬರುತ್ತದೆ. ವಾಸ್ತವಿಕವಾಗಿ ಭೂತ ಎಂದರೆ ಹಿಂದೆ ನಡೆದದ್ದು ಎಂದು ಮಾತ್ರ ಅರ್ಥ. ಹಾಗಾದರೆ ಈ ಭೂತ ಕಾಡುವುದು ಅಂದರೆ? ನಾವು ಸಾಮಾನ್ಯವಾಗಿ ವರ್ತಮಾನದಲ್ಲಿರುವುದು ಕಡಿಮೆ. ಒಂದೋ, ಕಳೆದುಹೋದ ಸಂಗತಿಗಳ ಬಗ್ಗೆ ಚಿಂತಿತರಾಗಿರುತ್ತೇವೆ ಅಥವ ಭವಿಷ್ಯತ್ತಿನ ವಿಷಯಗಳ ಕುರಿತು ಕಲ್ಪನೆ, ಊಹಾಪೋಹಗಳಲ್ಲಿ ಕಳೆದುಹೋಗಿರುತ್ತೇವೆ. ಕಳೆದುಹೋದ ಸಂಗತಿಗಳ ಬಗ್ಗೆ ಚಿಂತಿತರಾಗಿರುವದೇ ಭೂತ ನಮ್ಮನ್ನು ಕಾಡುವುದು. ಕಳೆದುಹೋದುದನ್ನು ಮತ್ತೆ ಸರಿಪಡಿಸಲಾಗುವುದಿಲ್ಲ. ಹಿಂದಿನ ಸಂಗತಿಗಳಿಂದ ಪಾಠ ಕಲಿತು ಮುಂದುವರೆಯಬೇಕೇ ಹೊರತು ಅದನ್ನು ಕುರಿತೇ ಯೋಚಿಸಿ ಮನಸ್ಸು ಕೆಡಿಸಿಕೊಳ್ಳುವುದು ತರವಲ್ಲ. ವರ್ತಮಾನದಲ್ಲಿ ಹೇಗಿರಬೇಕು, ಹೇಗೆ ವರ್ತಿಸಬೇಕು ಎಂಬ ಬಗ್ಗೆ ಜಾಗೃತರಾಗಿರಬೇಕೇ ಹೊರತು, ಏನೂ ಮಾಡಲು ಸಾಧ್ಯವಿಲ್ಲದ ಭೂತಕಾಲದ ಬಗ್ಗೆ ಚಿಂತಿಸದೆ, ಬದಲಾಯಿಸಲು ಆಗದ ಅದನ್ನು ಹೇಗಿದೆಯೋ ಹಾಗಿ ಒಪ್ಪಿಕೊಂಡು ಸುಮ್ಮನಿರಬೇಕು. ಭವಿಷ್ಯತ್ತಿನ ಬಗ್ಗೆಯೂ ಚಿಂತಿಸುವುದು ತರವಲ್ಲ. ಎಕೆಂದರೆ ಅದು ನಿರ್ಭರವಾಗಿರುವುದು ವರ್ತಮಾನದ ನಮ್ಮ ನಡೆನುಡಿಗಳಿಂದ ಮಾತ್ರ.
ಹೊರಗಣ್ಣು ತೆರೆದಿರಲು ಬೀಳುವ ಭಯವಿಲ್ಲ
ಒಳಗಣ್ಣು ತೆರೆದಿರಲು ಪತನದ ಭಯವಿಲ್ಲ |
ತಪ್ಪೊಪ್ಪಿ ನಡೆವವರು ಹಿರಿಯರೆಂದೆನಿಸುವರು
ತಪ್ಪೆ ಸರಿಯೆಂದವರು ಜಾರುವರು ಮೂಢ ||
ಮಾಡುವ ತಪ್ಪುಗಳು ಭೂತವಾಗಿ ಕಾಡುತ್ತವೆ ಎಂದಾಯಿತು. ತಪ್ಪುಗಳು ಜೀವನದಲ್ಲಿ ಸರಿಯಾಗಿ ಹೇಗೆ ಮುನ್ನಡೆಯಬೇಕೆಂಬುದನ್ನು ಕಲಿಸುವ ಗುರುಗಳು. ಈಜು ಕಲಿಯಬೇಕಾದರೆ ಮೊದಲು ತಪ್ಪು ಮಾಡುತ್ತೇವೆ. ಆ ತಪ್ಪು ಮಾಡದಿರಲು ಹೋಗಿ ಬೇರೆ ತಪ್ಪುಗಳನ್ನು ಮಾಡುತ್ತೇವೆ. ಕೊನೆಗೆ ಎಲ್ಲಾ ತಪ್ಪುಗಳನ್ನು ಮಾಡಿ, ಹಲವು ತಪ್ಪುಗಳನ್ನು ಪದೇ ಪದೇ ಮಾಡುತ್ತಾ ಮುಳುಗದಿರುವಂತೆ ನೋಡಿಕೊಂಡು ಈಜು ಕಲಿತುಬಿಡುತ್ತೇವೆ. ಈ ಜೀವನವೂ ಈಜುವುದನ್ನು ಕಲಿಯುವ ಹಾಗೇನೇ! ಹಲವಾರು ತಪ್ಪುಗಳನ್ನು ಮಾಡುತ್ತೇವೆ, ಪಾಠ ಕಲಿಯುತ್ತೇವೆ. ಹೇಗೆ ಬದುಕಬೇಕೆಂಬುದಕ್ಕೆ ಬೇರೆ ದಾರಿಯಿಲ್ಲ. ತಪ್ಪುಗಳನ್ನು ಮಾಡುತ್ತಾ, ಪೆಟ್ಟು ತಿನ್ನುತ್ತಾ ಬದುಕುವುದನ್ನು ಕಲಿಯಬೇಕಾಗುತ್ತದೆ. ಪರಿಪೂರ್ಣವಾಗಿರುವುದಕ್ಕಿಂತ ಹೆಚ್ಚು ಮೌಲ್ಯಯುತವಾದುದನ್ನು ತಪ್ಪುಗಳು ಕಲಿಸುತ್ತವೆ. ಗಾಂಧೀಜಿಯವರು ಬಾಲ್ಯದಲ್ಲಿ ಮನೆಯ ಆಳಿನ ಜೇಬಿನಿಂದ ಕೆಲವು ಕಾಸುಗಳನ್ನು ಕದ್ದು ಬೀಡಿ ಸೇದಿದ್ದರು. ತನ್ನ ಅಣ್ಣನ ಚಿನ್ನದ ಆಭರಣದ ಚೂರನ್ನೂ ಕಳವು ಮಾಡಿದ್ದರು. ನಂತರದಲ್ಲಿ ತಮ್ಮ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು, ತಪ್ಪನ್ನು ಒಪ್ಪಿಕೊಂಡು ಪತ್ರದಲ್ಲಿ ಬರೆದು ಕಾಯಿಲೆಯಿಂದ ನರಳುತ್ತಿದ್ದ ತಂದೆಯವರಿಗೆ ಕೊಟ್ಟು ತಲೆ ತಗ್ಗಿಸಿ ನಿಂತಿದ್ದರು. ಮಲಗಿದ್ದ ತಂದೆಯವರು ಕಷ್ಟಪಟ್ಟು ಎದ್ದು ಕುಳಿತು ಅದನ್ನು ಓದಿ ಏನೂ ಮಾತನಾಡದೆ ಕಣ್ಣೀರು ಸುರಿಸಿ ಪತ್ರವನ್ನು ಹರಿದು ಹಾಕಿ ಮತ್ತೆ ಮಲಗಿದ್ದರು. ಅದು ಗಾಂಧಿಯ ಮೇಲೆ ಅಗಾಧ ಪರಿಣಾಮ ಬೀರಿತ್ತು ಮತ್ತು ಅವರ ವ್ಯಕ್ತಿತ್ವ ರೂಪಿಸಲು ಪ್ರಧಾನ ಪಾತ್ರ ವಹಿಸಿತ್ತು.
ಭೂತಗಳು ಕಾಡದಿರಲು ಏನು ಮಾಡಬೇಕು? ಹಿಂದಿನದನ್ನು ಮರುಮಾತಾಡದೆ ಒಪ್ಪಿಕೊಂಡುಬಿಡಬೇಕು. ಹಿಂದಿನ ನಮ್ಮ ಮತ್ತು ಇತರರ ತಪ್ಪುಗಳನ್ನು ಮರೆತು ಕ್ಷಮಿಸಿ, ಆ ತಪ್ಪುಗಳಿಂದ ಪಾಠ ಕಲಿತು, ಅವನ್ನು ಮುಂದಿನ ಯಶಸ್ಸಿಗೆ ಮೆಟ್ಟಿಲುಗಳನ್ನಾಗಿಸಿಕೊಳ್ಳಬೇಕು. ಎರಡು ಅವಕಾಶಗಳಿರುತ್ತವೆ: 'ತಪ್ಪುಗಳಿಂದ ಪಾಠ ಕಲಿಯಬೇಕು ಅಥವ ಸಮಸ್ಯೆಗಳಿಂದ ಓಡಿಹೋಗಬೇಕು'. ಭೂತದ ಕಾಟ ಬೇಡವೆಂದರೆ ಮೊದಲನೆಯದನ್ನು ಆರಿಸಿಕೊಳ್ಳಬೇಕು. ಇಂದು ನಾಳೆಗೆ ಭೂತವಾಗುವುದರಿಂದ ಇಂದು ಸರಿಯಾಗಿರುವಂತೆ ಎಚ್ಚರದಿಂದಿರಬೇಕು. ಯಾವುದಾದರೂ ಹೊಸ ಕೆಲಸ ಮಾಡಬೇಕೆಂದರೆ 'ಅನುಭವಸ್ಥ'ರನ್ನು ಕೇಳಬೇಕು ಅನ್ನುತ್ತಾರಲ್ಲವೇ? ಆ ಅನುಭವಸ್ಥರು ಯಾರೆಂದರೆ ಅಂತಹ ಕೆಲಸಗಳಲ್ಲಿ ತೊಡಗಿಕೊಂಡು, ತಪ್ಪುಗಳನ್ನು ಮಾಡಿ ತಿದ್ದಿಕೊಂಡವರು, ತಪ್ಪಾಗದಿರುವಂತೆ ಏನು ಮಾಡಬೇಕೆಂಬ ಅರಿವಿರುವವರು! ಬುದ್ಧಿವಂತರು ಇತರರ ತಪ್ಪುಗಳಿಂದ ಕಲಿತುಕೊಳ್ಳುತ್ತಾರಾದರೆ, ದಡ್ಡರು ತಮ್ಮದೇ ತಪ್ಪುಗಳಿಂದ ಪಾಠ ಕಲಿಯುತ್ತಾರೆ. ತಪ್ಪುಗಳು ನಾವು ಏನನ್ನು ಕಲಿಯಬೇಕಿದೆ ಎಂಬುದನ್ನು ತೋರಿಸುತ್ತವೆ. ಹೊಸ ಹೊಸ ಸಂಶೋಧನೆಗಳು ಹಲವಾರು ತಪ್ಪುಗಳ ನಂತರವೇ ಆವಿಷ್ಕಾರವಾದದ್ದು!
ಜೀವದಲ್ಲಿ ಚಿತ್ರ ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಕಳ್ಳನನ್ನು ಕಳ್ಳ ಎಂದರೆ, ಸುಳ್ಳನನ್ನು, ಲಂಪಟನನ್ನು ಸುಳ್ಳ, ಲಂಪಟ ಎಂದರೆ ಬೇಸರವಾಗುವುದಿಲ್ಲ. ಕಳ್ಳ, ಸುಳ್ಳ, ಲಂಪಟರಲ್ಲದವರು ಸುಖಾಸುಮ್ಮನೆ ಇಂತಹ ಅಪವಾದಗಳಿಗೆ ಒಳಗಾದರೆ? ವರ್ಣನಾತೀತ ನೋವನ್ನು ಸಂಬಂಧಿಸಿದವರು ಅನುಭವಿಸುತ್ತಾರೆ. ನಿಧಾನವಾಗಿ ಯೋಚಿಸಿದರೆ, ಇದೂ ಒಂದು ರೀತಿಯಲ್ಲಿ ಭೂತದ ಕಾಟವೇ ಆಗಿರುತ್ತದೆ. ಹಿಂದಿನ ಯಾವುದೋ ಘಟನೆಗಳು, ಸಂಗತಿಗಳು, ವೈಯಕ್ತಿಕ ದ್ವೇಷಗಳು ಈ ರೀತಿಯ ಸುಳ್ಳು ಆಪಾದನೆಗಳಿಗೆ ಪ್ರೇರಣೆಯಾಗಿರುತ್ತವೆ. ತಮಗೆ ಆಗದವರ ಪ್ರತಿಯೊಂದು ನಡೆಯೂ ತಪ್ಪಾಗಿ ಗೋಚರಿಸುವುದರ ಫಲ ಇಂತಹ ಆಪಾದನೆಗಳು. ಆಗುವ ನೋವು, ನಿರಾಶೆ, ಹತಾಶೆಗಳನ್ನು ತಮಗೆ ಬೇಕಾದವರೊಂದಿಗೆ ಹಂಚಿಕೊಂಡು ಹಗುರವಾಗಬಹುದು. ಹೀಗೆ ಮಾಡುವುದು ಎಲ್ಲಾ ಸಂದರ್ಭಗಳಲ್ಲೂ ಸರಿಯಾಗಲಾರದು. ಅವರಿಂದ ಅನುಕಂಪ ಸಿಗಬಹುದು. ಪರಿಹಾರ ಸಿಗದು ಎಂಬಂತಹ ಸಂಗತಿಗಳನ್ನು ಹಂಚಿಕೊಳ್ಳದಿರುವುದೇ ಒಳಿತು. ನೋವಿನ ತೀವ್ರತೆ ಕಡಿಮೆಯಾಗಬೇಕೆಂದರೆ ಮನಸ್ಸಿಗೆ ತಿಳುವಳಿಕೆ ಹೇಳಬೇಕಾಗುತ್ತದೆ: "ನೋಡು, ಅವರು ಏನು ಹೇಳಿದರು, ಏನು ಮಾಡಿದರು ಎಂದು ತಲೆ ಕೆಡಿಸಿಕೊಳ್ಳಬೇಡ, ಮರೆತುಬಿಡು. ನಿನ್ನನ್ನು ಅಲಕ್ಷ್ಯಿಸಿದ, ಅವಮಾನಿಸಿದ ಸಂಗತಿಗಳನ್ನು ಮನಸ್ಸಿನಿಂದ ತೆಗೆದುಹಾಕಿಬಿಡು. ನೀನು ಸರಿಯಾಗಿರುವೆ ಎಂದು ನಿನಗೆ ಗೊತ್ತಿದೆ ತಾನೇ? ಅಷ್ಟು ಸಾಕು. ನಿನ್ನ ಕುರಿತ ಅವರ ಭಾವನೆಗಳು ಬದಲಾಗುವುದೇ ಇಲ್ಲವೆನಿಸಿದರೆ ಅವರನ್ನು ಮರೆತುಬಿಡು. ನೋಯುತ್ತಿರುವುದು ನಿನ್ನ ಹೃದಯ. ಅದನ್ನು ನೀನೇ ಸಂತಯಿಸಬೇಕು. ಅಳುತ್ತಿರುವುದು ನಿನ್ನ ಕಣ್ಣು. ನೀನೇ ನಿನ್ನ ಕೈಯಿಂದ ಅದನ್ನು ಒರೆಸಿಕೊಳ್ಳಬೇಕು. ಜೀವ ನಿನ್ನದು, ಜೀವನ ನಿನ್ನದು. ನಿನ್ನ ಆತ್ಮ ಒಪ್ಪುವಂತೆ ಜೀವಿಸು. ನಿನ್ನ ತಪ್ಪೇನಾದರೂ ಇದ್ದರೆ ಸರಿಪಡಿಸಿಕೋ. ತಪ್ಪಿಲ್ಲದಿದ್ದರೆ ಚಿಂತಿಸದಿರು. ಎದ್ದು ನಿಲ್ಲು. ಮುಂದೆ ನಡೆ, ಎಲ್ಲರಿಗೂ ನೀನು ಏನು ಎಂಬುದನ್ನು ತೋರಿಸು."
ದಾರಿ ಸುಂದರವಿರಲು ಗುರಿಯ ಚಿಂತ್ಯಾಕೆ
ಗುರಿಯು ಸುಂದರವಿರಲು ದಾರಿ ಚಿಂತ್ಯಾಕೆ |
ಕಲ್ಲಿರಲಿ ಮುಳ್ಳಿರಲಿ ಹೂವು ಹಾಸಿರಲಿ
ರೀತಿ ಸುಂದರವಿರೆ ಯಶ ನಿನದೆ ಮೂಢ ||
ಆತ್ಮಾವಲೋಕನ ಮಾಡಿಕೊಂಡು, ಭೂತಕಾಲದ ತಪ್ಪುಗಳಿಂದ ಪಾಠ ಕಲಿತು, ವರ್ತಮಾನದಲ್ಲಿ ಸರಿಯಾಗಿ ನಡೆದರೆ ಯಾವ ಭೂತವೂ ನಮ್ಮನ್ನು ಕಾಡಿಸದು. ಭವಿಷ್ಯತ್ತೂ ಸುಂದರವಾಗಿರುವುದು. "ದುರ್ಬಲತೆಗಳ ಅರಿವಿರುವವರು ಬಲಶಾಲಿಯಾಗುವರು; ಲೋಪಗಳನ್ನು ಒಪ್ಪಿಕೊಳ್ಳುವವರು ಒಳ್ಳೆಯವರೆನಿಸುವರು; ತಪ್ಪುಗಳನ್ನು ತಿದ್ದಿಕೊಂಡು ನಡೆವವರು ಬುದ್ಧಿವಂತರೆನಿಸುವರು."
ಮೊಕೇದ ಉಡಲ್ ಸುದೀಪ್
ಪ್ರತ್ಯುತ್ತರಅಳಿಸಿಉತ್ತಮ ಲೇಖನ . . .ಆಚರಣೆಗಳನ್ನು ಎತ್ತಿ ತೋರಿಸುವ ಕೇಲವು ಮೂಡರು ನಂಬಿಕೆ ಆಚರಣೆ ಏನೂ ಅನ್ನೋದನ್ನ ತೀಳಿಸುವ ಬದಲು ವ್ಯಂಗವಾಗಿ ಬರೆಯುವರು. ಜ್ಞಾನಿಗಳು ಮಾತ್ರ ಆಚರಣೆ ನಂಬಿಕೆಯನ್ನು ವೀಷ್ಲೆಷಿ ಅದರ ಬಗ್ಗೆ ತೀಳಿಸುವರು. . ಈ ಲೇಖನ ಜ್ಞಾನಿಗಳ ಸಾಲಿಗೆ ನಿಲ್ಲುತದೆ. ದನ್ಯಾವಾದಗಳು ಬರಹಗಾರರಿಗೆ