ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಜೂನ್ 24, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -5: ಆಶಾವಾದವೇ ಜೀವನ, ನಿರಾಶಾವಾದವೇ ಮರಣ


     ಪಂ. ಸುಧಾಕರ ಚತುರ್ವೇದಿಯವರಿಗೆ ವೇದವೇ ಉಸಿರಾಗಿದೆ, ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. 'ವೇದೋಕ್ತ ಜೀವನ ಪಥ'ವೆಂಬ ಕಿರು ಪುಸ್ತಕದಲ್ಲಿ ಜೀವನದ ಮೌಲ್ಯಗಳು, ಜೀವಾತ್ಮ, ಪರಮಾತ್ಮ, ಪ್ರಕೃತಿಗಳ ಸ್ವರೂಪ, ಮಾನವ ಧರ್ಮ, ಚತುರ್ವರ್ಣಗಳು, ಬ್ರಹ್ಮಚರ್ಯಾದಿ ಚತುರಾಶ್ರಮಗಳು, ದೈನಂದಿನ ಕರ್ಮಗಳು, ಷೋಡಶ ಸಂಸ್ಕಾರಗಳು, ರಾಜನೀತಿ, ಸಾಮಾಜಿಕ ಜೀವನ, ಚತುರ್ವಿಧ ಪುರುಷಾರ್ಥಗಳನ್ನು ವೇದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದು, ಅದರಂತೆ ನಡೆದದ್ದೇ ಆದಲ್ಲಿ ಜೀವನ ಸಾರ್ಥಕವಾಗುವುದು. ಇಂದಿಗೂ ೧೧೮ ವರ್ಷಗಳ ಪಂಡಿತರ ವೈಚಾರಿಕ ಪ್ರಖರತೆಯ ಹೊಳಪು ಮಾಸಿಲ್ಲ, ನೆನಪು ಕುಂದಿಲ್ಲ. ಇವರ ಜೀವನೋತ್ಸಾಹ ಬತ್ತದ ಚಿಲುಮೆಯಾಗಿದ್ದು ದೇಹ, ಮನಸ್ಸು, ಬುದ್ಧಿಗಳನ್ನು ಹಿಡಿತದಲ್ಲಿಟ್ಟುಕೊಂಡಿರುವುದೇ ಇದಕ್ಕೆ ಕಾರಣವಿರಬಹುದು. ಪ್ರಶಸ್ತಿ, ಸನ್ಮಾನಗಳಿಗಾಗಿ ಲಾಬಿ ನಡೆಸುವವರೇ ತುಂಬಿರುವ, ಅದಕ್ಕಾಗಿ ತಮ್ಮತನವನ್ನೇ ಮಾರಿಕೊಳ್ಳುವವರಿರುವ ಈ ದೇಶದಲ್ಲಿ ಪ್ರಚಾರದಿಂದ ದೂರವಿರುವ ಇವರು ನಿಜವಾದ ಭಾರತರತ್ನರೆಂದರೆ ತಪ್ಪಿಲ್ಲ. ಇಂತಹವರು ನಮ್ಮೊಡನೆ ಇರುವುದೇ ನಮ್ಮ ಸೌಭಾಗ್ಯ, ಪುಣ್ಯವೆನ್ನಬೇಕು. ಇವರ ವಿಚಾರಧಾರೆಯ 5ನೆಯ ಕಂತು ಇಲ್ಲಿದೆ.
****************
     ವೇದ ಹೇಳುತ್ತದೆ, ಸರಿಯಾಗಿ ಬಾಳಿದರೆ ಜಮದಗ್ನಿಗೆ 300 ವರ್ಷ ಆಯಸ್ಸು ಎಂದು! ಜಮದಗ್ನಿ ಅಂದರೆ ಋಷಿಯಲ್ಲ, ಅಗ್ನಿಯನ್ನು ತನ್ನ ವಶದಲ್ಲಿಟ್ಟುಕೊಂಡವರು, ಅಗ್ನಿಹೋತ್ರ ಮಾಡುವ ಗೃಹಸ್ಥ/ಗೃಹಿಣಿ- ಅವರನ್ನು ಜಮದಗ್ನಿ ಎಂದು ಕರೆಯುತ್ತಾರೆ. ನಿಜವಾಗಿ ಅರ್ಥ ಇಟ್ಟುಕೊಂಡು ಆಚರಿಸಿದರೆ, ಅಂದರೆ ಅಗ್ನಿಯನ್ನು ವಶದಲ್ಲಿಟ್ಟುಕೊಂಡರೆ 300 ವರ್ಷ ಬದುಕಬಹುದು. ಅಷ್ಟೊಂದು ಭಗವಂತ ನಮಗೆ ಹೇಳಿರುವಾಗ ನಾವು ಯಾಕೆ ಸಾಯಬೇಕು, ಸಾಯಬೇಕು ಅನ್ನಬೇಕು? ಆ ಸಾವು ಇದೆಯಲ್ಲಾ, ಅದು ನಿರ್ಲಜ್ಜ. ನೀವು ಕರೆದರೂ ಬರುತ್ತೆ, ಕರೆಯದಿದ್ದರೂ ಬರುತ್ತೆ. ಯಾವತ್ತೂ ನೀವು ಸಾಯಬೇಕು ಎಂದು ಆಸೆಪಡಲೇಬೇಡಿ. 'ಜೀವೇದ ಶರದಶ್ಶತಮ್' ಕನಿಷ್ಠ ಪಕ್ಷ ನೂರು ವರ್ಷ ಆದರೂ ಬದುಕಿರಬೇಕು, ನೂರು ವರ್ಷಕ್ಕಿಂತ ಹೆಚ್ಚುಕಾಲ ಬದುಕೋಣ. ಲೋಕಾರೂಢಿಯ ಮಾತು 'ಶತಾಯುರ್ ವಯಃ ಪುರುಷಃ' ಅಂತ, ಒಬ್ಬ ಮನುಷ್ಯನ ವಯಸ್ಸು ನೂರು ವರ್ಷ, ನೂರು! ಆಶ್ಚರ್ಯ ಪಡಬೇಡಿ, ನಾವು ಆಸ್ತಿಕರು, ಭಗವಂತನಲ್ಲಿ ನಂಬಿಕೆ ಇರುವವರು, ಜೀವನವನ್ನು ಪರಿಪಕ್ವವಾಗಿ ಇಟ್ಟುಕೊಳ್ಳಬೇಕು ಅನ್ನುವವರು, ನಾವು ಏಕೆ ಆಸೆ ಕಳೆದುಕೊಳ್ಳಬೇಕು? ರಷ್ಯಾದಲ್ಲಿ ಕೆಲವು ಪ್ರದೇಶಗಳಿವೆ, 'ಡಡ್ ಸೀ' ಅಂತ, ಸತ್ತ ಸಮುದ್ರ, ಅದು ಯಾವ ಕಾಲದಲ್ಲಿ ನೀರಿತ್ತೋ, ಈಗ ನೀರಿಲ್ಲ, ಅದರ ಸುತ್ತಮುತ್ತ ಎಲ್ಲಾ ಸಾವೇ! ಅಂತಹ ಕಡೆ ಕೂಡ ಒಬ್ಬ ಮುದುಕ 190 ವರ್ಷ ಬದುಕಿದ್ದನಂತೆ. ತಿನ್ನಬಾರದ್ದೆಲ್ಲಾ ತಿಂದುಕೊಂಡು, ಕುಡಿಯಬಾರದ್ದೆಲ್ಲಾ ಕುಡಿದುಕೊಂಡು, ಮಾಡಬಾರದ್ದೆಲ್ಲಾ ಮಾಡಿಕೊಂಡು 190 ವರ್ಷ ಬದುಕಿದ್ದ. ಅಂಥವನೇ ಅಷ್ಟು ಕಾಲ ಬದುಕಿದ್ದಾಗ ಪವಿತ್ರವಾಗಿ ಬಾಳುವ ನಮಗೇಕೆ ಸಾಧ್ಯವಿಲ್ಲ? ನಾವು ಸೋತುಬಿಡುತ್ತೇವೆ, ಅದೇ ಕಷ್ಟ,  ಸೋಲಿನ ಮನೋಭಾವ ಇದೆಯಲ್ಲಾ, ನಿರಾಶಾವಾದ ಅದು ತುಂಬಾ ಕೆಟ್ಟದ್ದು. ನಾನು ದುರ್ಯೋಧನನ ಉದಾಹರಣೆ ಕೊಡುತ್ತೇನೆ. ಭೀಷ್ಮ ಹೋದರು, ದ್ರೋಣ ಹೋದರು, ಕರ್ಣನೂ ಹೋದ. ಆದರೆ ಶಲ್ಯ ಇನ್ನೂ ಇದ್ದಾನೆ, ಅವನು ಪಾಂಡವರನ್ನು ಜಯಿಸಿ ನನಗೆ ಗೆಲುವು ತಂದುಕೊಡುತ್ತಾನೆ ಎಂಬ ವಿಶ್ವಾಸ ಅವನಿಗೆ. ಶಲ್ಯನೂ ಹೋದ, ದುರ್ಯೋಧನನೂ ಸತ್ತ, ಅದು ಬೇರೆ ವಿಷಯ. ಆದರೆ ಬದುಕುವ ಅವನ ಆತ್ಮವಿಶ್ವಾಸ ಇತ್ತಲ್ಲಾ, ಅದು ಮೆಚ್ಚುವಂತಹುದು. ಮುಖ್ಯವಾಗಿ ನನ್ನ ಗುರು ಸ್ವಾಮಿ ಶ್ರದ್ಧಾನಂದಜೀಯವರು ಹೇಳುತ್ತಿದ್ದರು - Optimism is life, Pessimism is death itself! - ಆಶಾವಾದವೇ ನಿಜವಾದ ಜೀವನ, ನಿರಾಶಾವಾದವೇ ಸಾವು!
ಸಾವನ್ನು ಸ್ವಾಗತಿಸುವ ಧೈರ್ಯ
     ಸಾವನ್ನು ಏಕೆ ಬಯಸಬೇಕು? ಅದು ಬಂದೇ ಬರುತ್ತೆ, ಬಂದಾಗ ಹೋಗೋಣ, ಸಾವು ಬಂದಾಗ ಸ್ವಾಗತಿಸೋಣ, ಯಮನಿಗೆ ನಮಸ್ಕರಿಸಿ ಹೊರಡೋಣ. ಯಮ ಅಂದರೆ ಕೋಣನ ಮೇಲೆ ಕುಳಿತುಕೊಂಡು ಬರುತ್ತಾನೆ ಅಂತಾರಲ್ಲ, ಅವನಲ್ಲ, ಸಂಪೂರ್ಣ ಜಗತ್ತನ್ನೇ ತನ್ನ ವಶದಲ್ಲಿಟ್ಟುಕೊಂಡಿರುವ ಜಗನ್ನಿಯಾಮಕ ಭಗವಂತ, ಅವನು ಯಮ! ಅವನು ಅನ್ಯಾಯವಾಗಿ ಯಾರಿಗೂ ಸಾವು ಕೊಡುವುದಿಲ್ಲ, ಯಾವನ ಇಚ್ಛೆಯಿಂದಲೇ ಅಮೃತ ಸಿಕ್ಕುತ್ತೋ, ಯಾವನ ಇಚ್ಛೆಯಿಂದ ಸಾವು ಸಿಗುತ್ತದೋ ಆ ಯಮನಿಗೆ ನಮಸ್ಕಾರ! ಸಾವು, ಬಾಳು ಎರಡೂ ಅವನ ವಶದಲ್ಲೇ ಇದೆ, ಆ ಪರಮಾತ್ಮ ಯಾವ ಜೀವ ಎಷ್ಟು ಬಾಳಬೇಕು, ಬದುಕಬೇಕು ಅದನ್ನು ನಿರ್ಧರಿಸಿರುತ್ತಾನೆ, ಅದು ತೀರುವವರೆಗೂ ಸಾಯುವಹಾಗಿಲ್ಲ. ಬಾವಿಗೆ ಬಿದ್ದು, ನೇಣು ಹಾಕಿಕೊಂಡು ಮುಂಚೆಯೇ ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ, ಅದು ನಿಜವಾದ ಸಾವಲ್ಲ, ಅಪಮೃತ್ಯು. ಅದು ಯಾರಿಗೂ ಬೇಡ. ಅದಾಗೇ ಸಾವು ಬಂದಾಗ 'ಬಾ ಮೃತ್ಯು, ಕರೆದುಕೊಂಡು ಹೋಗು' ಎಂದು ಹೇಳುವ ಧೈರ್ಯ ನಮಗೆಲ್ಲಿ ಬರಬೇಕು! ಸ್ವಾಮಿ ದಯಾನಂದರಿಗೆ ಸಾವು ಬಂದಾಗ ಅವರು ಅಳುಕಲಿಲ್ಲ, 'ಭಗವಂತ, ನಿನ್ನ ಇಚ್ಛೆ, ಕರೆದುಕೊಂಡು ಹೋಗು' ಎಂದರು. ಅವರಿಗೆ ಸಾಯಬೇಕೆಂದಿರಲಿಲ್ಲ. ಭಗವಂತನ ಇಚ್ಛೆಯಿದ್ದರಿಂದ ಸಾಯಲು ಸಿದ್ಧರಾದರು, ಅಷ್ಟೆ. ಬದುಕುವುದಕ್ಕೆ ಆ ಹಟ ಇರಬೇಕು. ಯಾವತ್ತೂ ಸಾಯಬೇಕೆಂದು ಬಯಸಬೇಡಿ. ಏಕೆಂದರೆ ಆ ಆಸೆ ಇದೆಯಲ್ಲಾ ಅದು ದುರಾಸೆ, ಅದು ನಮ್ಮ ನಿಜವಾದ ನಿಶ್ಚಯ ಶಕ್ತಿಯನ್ನೇ ಹಾಳುಮಾಡಿಬಿಡುತ್ತದೆ.
[ಟಿಪ್ಪಣಿ: ಸ್ವಾಮಿ ದಯಾನಂದರ ಸಾವು:
     ಸತ್ಯವಿಚಾರವನ್ನು ದಿಟ್ಟವಾಗಿ ಹೇಳುತ್ತಿದ್ದ ಮಹರ್ಷಿ ದಯಾನಂದ ಸರಸ್ವತಿಯವರನ್ನು ಕೊಲೆ ಮಾಡಲು ಅನೇಕ ಸಂಚುಗಳು ನಡೆದಿದ್ದವು. ಕೆಲವು ಸಲ ಅವರಿಗೆ ಗುಟ್ಟಾಗಿ ವಿಷಪ್ರಾಶನವನ್ನೂ ಮಾಡಿಸಿದ್ದರು. ಹಠಯೋಗದ ಅಭ್ಯಾಸಿಗಳಾಗಿದ್ದ ಅವರು ವಿಷವನ್ನು ಹೊರಹಾಕುವಲ್ಲಿ ಯಶಸ್ವಿಯಾಗಿದ್ದರು. ಒಮ್ಮೆ ಪರಮತದ ಕೆಲವು ವಿದ್ರೋಹಿಗಳು ಅವರನ್ನು ನದಿಯಲ್ಲಿ ಮುಳುಗಿಸಿ ಸಾಯಿಸಲು ಪ್ರಯತ್ನಿಸಿದ್ದರು. ಕಟ್ಟುಮಸ್ತು ದೇಹದ ದಯಾನಂದರು ಅವರನ್ನೇ ನೀರಿನೊಳಗೆ ಎಳೆದುಕೊಂಡು ಹೋಗಿ ಇನ್ನೇನು ಅವರುಗಳು ಸಾಯುತ್ತಾರೆ ಎಂಬ ಸ್ಥಿತಿಯಲ್ಲಿದ್ದಾಗ ಅವರಿಗೆ ಎಚ್ಚರಿಕೆ ಕೊಟ್ಟು ಹೊರಗೆ ಬಿಟ್ಟಿದ್ದರು. ಆದರೆ ಕೊನೆಗೂ ಅವರು ವಿಷಪ್ರಾಶನಕ್ಕೆ ಬಲಿಯಾದರು.     1883ರಲ್ಲಿ ಜೋಧಪುರದ ಮಹಾರಾಜರ ಆಹ್ವಾನದ ಮೇಲೆ ಅವರ ಅತಿಥಿಯಾಗಿ ಹೋಗಿ ಅರಮನೆಯಲ್ಲಿ ತಂಗಿದ್ದರು. ಮಹಾರಾಜನಿಗೆ ಅವರ ಶಿಷ್ಯನಾಗಿ ಉಪದೇಶಗಳನ್ನು ತಿಳಿಯುವ ಆಸಕ್ತಿಯಿತ್ತು. ಒಮ್ಮೆ ದಯಾನಂದರು ಮಹಾರಾಜರ ವಿಶ್ರಾಂತಿ ಕೊಠಡಿಗೆ ಹೋದ ಸಂದರ್ಭದಲ್ಲಿ ಮಹಾರಾಜರು ನನ್ಹಿಜಾನ್ ಎಂಬ ನೃತ್ಯಗಾತಿಯ ಜೊತೆಗೆ ಇದ್ದುದನ್ನು ಕಂಡರು. ದಯಾನಂದರು ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಧೈರ್ಯವಾಗಿ ಮತ್ತು ನೇರವಾಗಿ ಮಹಾರಾಜರಿಗೆ ಸ್ತ್ರೀ ಸಹವಾಸ ಬಿಡಲು ಮತ್ತು ಒಬ್ಬ ನಿಜವಾದ ಆರ್ಯ(ಸಭ್ಯ)ನಂತೆ ಧರ್ಮ ಪಾಲನೆ ಮಾಡುವಂತೆ ಹೇಳಿದರು. ದಯಾನಂದರ ಸಲಹೆ ಆ ನೃತ್ಯಗಾತಿಯನ್ನು ಕೆರಳಿಸಿತು ಮತ್ತು ಸೇಡಿಗಾಗಿ ಹಪಹಪಿಸುವಂತೆ ಮಾಡಿತು. ಅಡಿಗೆಭಟ್ಟನಿಗೆ ಆಕೆ ಲಂಚ ನೀಡಿ ದಯಾನಂದರಿಗೆ ಆಹಾರದಲ್ಲಿ ವಿಷ ಬೆರೆಸಿ ಕೊಡಲು ಒಪ್ಪಿಸಿದಳು. ಅಡಿಗೆ ಭಟ್ಟ ರಾತ್ರಿಯ ಮಲಗುವ ಸಮಯದಲ್ಲಿ ವಿಷ ಮತ್ತು ನುಣ್ಣಗೆ ಪುಡಿ ಮಾಡಿದ ಗಾಜಿನ ಹರಳುಗಳನ್ನು ಸೇರಿಸಿದ ಹಾಲನ್ನು ದಯಾನಂದರಿಗೆ ಕುಡಿಯಲು ಕೊಟ್ಟ. ಹಾಲು ಕುಡಿದು ಮಲಗಿದ ದಯಾನಂದರಿಗೆ ಕೆಲ ಸಮಯದಲ್ಲಿಯೇ ಹೊಟ್ಟೆಯ ಒಳಗೆ ಸುಡುವ ಅನುಭವವಾದಾಗ ಎಚ್ಚರವಾಗಿ ತಮಗೆ ವಿಷ ಉಣಿಸಿದ್ದಾರೆಂದು ಗೊತ್ತಾಗಿ ವಿಷವನ್ನು ಹೊರಹಾಕಲು ಪ್ರಯತ್ನಿಸಿದರು. ಆದರೆ ಅದಾಗಲೇ ತಡವಾಗಿತ್ತು. ವಿಷವಾಗಲೇ ರಕ್ತ ಸೇರಿಬಿಟ್ಟಿತ್ತು. ಅವರು ಹಾಸಿಗೆ ಹಿಡಿದು ಅಸಾಧ್ಯ ನೋವನ್ನು ಸಹಿಸಬೇಕಾಯಿತು. ಅನೇಕ ವೈದ್ಯರುಗಳು ನೀಡಿದ ಚಿಕಿತ್ಸೆ ಫಲಕಾರಿ ಆಗಲಿಲ್ಲ. ಅವರ ದೇಹದಲ್ಲಿ ಎಲ್ಲೆಲ್ಲೂ ರಕ್ತ ಸೋರುವ ಹುಣ್ಣುಗಳಾದವು. ಅವರ ಸ್ಥಿತಿಯನ್ನು ನೋಡಲಾಗದ ಅಡಿಗೆಭಟ್ಟ ಕಣ್ಣೀರು ಸುರಿಸುತ್ತಾ ಬಂದು ದಯಾನಂದರಲ್ಲಿ ತನ್ನ ತಪ್ಪು ಒಪ್ಪಿಕೊಂಡ. ಅಂತಹ ಸಾವಿನ ಸಮೀಪದಲ್ಲಿ ಇದ್ದಾಗಲೂ ದಯಾನಂದರು ಆತನನ್ನು ಕ್ಷಮಿಸಿದ್ದಲ್ಲದೆ, ಅವನಿಗೆ ಒಂದು ಥೈಲಿಯಲ್ಲಿ ಹಣ ನೀಡಿ ಆದಷ್ಟು ಬೇಗ ರಾಜ್ಯ ತೊರೆದು ಹೋಗಿ ಮಹಾರಾಜರ ಭಟರಿಂದ ಜೀವ ಉಳಿಸಿಕೊಳ್ಳಲು ಸಲಹೆ ನೀಡಿದ್ದರು. 30-10-1883ರಲ್ಲಿ ಅವರು ದೇಹತ್ಯಾಗ ಮಾಡಿದರು. ಅಂತಹ ಸಾವನ್ನೂ ಸಹ ಅವರು ಆದರದಿಂದ ಬರಮಾಡಿಕೊಂಡಿದ್ದರು.]
ಸತ್ಯವನ್ನೇ ಹೇಳುವುದೆಂದರೆ . .
     ಕೋರ್ಟುಗಳಲ್ಲಿ ಪ್ರಮಾಣ ಮಾಡಿಸುತ್ತಾರೆ: 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' ಅಂತ. ಆದರೆ ಲಾಯರ್ ಹೇಳಿಕೊಟ್ಟಿರುತ್ತಾರೆ -'ಸತ್ಯ ಅಂತ ಎಲ್ಲಾ ಹೇಳಿದರೆ ಕೆಡುತ್ತೀಯ, ನಾನು ಹೇಳಿಕೊಟ್ಟದ್ದೇ ಸತ್ಯ, ಅದನ್ನೇ ಹೇಳು' ಅಂತ. ನಾನು ತಮಾಷೆ ಮಾಡುತ್ತಿರುತ್ತೇನೆ, ಲಾಯರ್ ಅಂದರೆ ಲೈಯರ್ ಅಂತ! ಮಾಡುತ್ತಾ ಇರುವುದು ಹಾಗೇನೇ, ಇವತ್ತು ಇರುವುದೂ ಹಾಗೇನೇ. ಇಂದಿನ ಸತ್ಯದ ಸ್ಥಿತಿ ಇದು.
-ಕ.ವೆಂ.ನಾಗರಾಜ್.
***************
ದಿನಾಂಕ 13.5.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

1 ಕಾಮೆಂಟ್‌:

  1. Jayaprakash Sumana
    Thappu maduva munna
    Oppisiko yenna, thppillade
    Badukuvare prerisuthiru
    Priyarellarige olaviralennaa !

    ಸಂಜೀವಕುಮಾರ ಅತಿವಾಳೆ
    ತುಂಬಾ ಒಳ್ಳೆಯ ಲೇಖನ, ಅಭಿನಂದನೆ.

    Sheshagiri Gandasi
    ಬದುಕುವ ಇಚ್ಛೆ ಬಲವಾಗಿರುವ, ಸಾಧಿಸಲು ಬಹಳ ಕಾರ್ಯಕ್ರಮಗಳಿರುವ, ಕ್ರಿಯಾಸಕ್ತಿಯ ಕ್ರಿಯಾಶೀಲರನ್ನೇ ಹುಡುಕುಡಿಕಿ ಒಯ್ಯುವ, ಸಾವಿಗಾಗಿ ಹಲುಬಿ ಜೀವಸವೆಸುವರತ್ತ ಕರುಣೆ ತೋರದ, ಕಾಲಯಮನಿಗೆ, ನಿಜವಾಗಿಯೂ ಒಂದು ಸಕಾರಣ ಬದ್ಧತೆ ಇದೆಯಂಬ ನಂಬಿಕೆ ನನಗಿಲ್ಲ. ಸಾವು ಬರುವುದೇ ತಿಳಿಯದೆಂದಮೇಲೆ ಸಾಯಲಿಚ್ಛೆಯಿಲ್ಲದಿದ್ದರೂ ಸಾವನ್ನು ಬರಮಾಡಿಕೊಂಡರು ಎಂಬುದು ಬರಿಯ ಕ್ಲೀಷೆಯಲ್ಲವೇ?

    Kavi Nagaraj
    Sheshagiri Gandasi ಯವರೇ, ಪೂರ್ಣ ಲೇಖನ ಓದಿ. ನಿಮ್ಮ ಪ್ರಶ್ನೆಗೆ ಉತ್ತರವಿದೆ.

    ಪ್ರತ್ಯುತ್ತರಅಳಿಸಿ