ಪಂ. ಸುಧಾಕರ ಚತುರ್ವೇದಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿದ್ದವರು. ಗಾಂಧೀಜಿಯವರ ಒಡನಾಟ ಹೊಂದಿದವರಾಗಿದ್ದರು. ಪಂಡಿತರು ಇದ್ದ ಗುರುಕುಲಕ್ಕೆ ಗಾಂಧೀಜಿಯವರು ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಇವರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದಂತೆ, ಗಾಂಧೀಜಿಯವರೂ ಇವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿಯವರ ಹತ್ಯೆಯಾಗುವವರೆಗೂ ಇವರಿಬ್ಬರ ಸ್ನೇಹ ಮುಂದುವರೆದಿತ್ತು. ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷ ಸಾಕ್ಷಿಯಾಗಿದ್ದವರು. ಕ್ರಾಂತಿಕಾರಿ ಭಗತ್ ಸಿಂಗರಿಗೆ ಕೆಲಕಾಲ ಗುರುವೂ ಆಗಿದ್ದವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸ್ವಾಮಿ ಶ್ರದ್ಧಾನಂದರ ಪ್ರೋತ್ಸಾಹ ಕಾರಣವಾದರೂ ವೇದದ 'ಅದೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - 'ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ' ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಪ್ರೇರಿಸಿತ್ತು ಎಂದು ಹೇಳುತ್ತಾರೆ. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆಂಗ್ಲರ ನಡವಳಿಕೆ ಇವರ ಮತ್ತು ಇವರಂತಹ ಸಾವಿರಾರು ಜನರ ಸ್ವಾಭಿಮಾನವನ್ನು ಕೆಣಕಿ ಹೋರಾಟ ಕಾವು ಪಡೆದಿತ್ತು. ಹೋರಾಟ ಕಾಲದಲ್ಲಿ ಕೃಶ ಶರೀರದವರಾದರೂ ಇವರ ಮನೋಬಲ ಮತ್ತು ಛಲದಿಂದಾಗಿ ಅನೇಕ ಪ್ರಾಣಾಂತಿಕ ಪೆಟ್ಟುಗಳನ್ನು ಹಲವಾರು ಬಾರಿ ತಿಂದರೂ ಸಹಿಸಿ ಅರಗಿಸಿಕೊಂಡವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದವರು. ಸುಮಾರು 15 ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಭಾರತ-ಪಾಕಿಸ್ತಾನದ ವಿಭಜನೆಯ ಕಾಲದ ಭೀಕರ ಮಾರಣಹೋಮವನ್ನು ಕಂಡ ನೆನಪು ಮಾಸದೆ ಇರುವವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ನಮ್ಮೊಡನಿರುವ ಇತಿಹಾಸದ ಜೀವಂತ ನೈಜ ಪ್ರತಿನಿಧಿ. ಇವರ ವಿಚಾರಧಾರೆಯ ನಾಲ್ಕನೆಯ ಕಂತು ಇಲ್ಲಿದೆ.
*************
ಗಾಂಧೀಜಿ ಮತ್ತು ಉಪವಾಸ
ಗಾಂಧೀಜಿ ಮತ್ತು ಪಂಡಿತರ ನಡುವೆ ಮಧುರ ಸ್ನೇಹವಿತ್ತು. ಪಂಡಿತರನ್ನು ಅವರು ಕರ್ನಾಟಕಿ ಎಂದು ಕರೆಯುತ್ತಿದ್ದರು. ಗಾಂಧೀಜಿ ಜೊತೆ ಮಾತನಾಡುವಾಗ ಪಂಡಿತರು ಕೆಳುತ್ತಿದ್ದರಂತೆ: "ಗಾಂಧೀಜಿ, ನೀವು ಮಾತುಮಾತಿಗೆ ಉಪವಾಸ, ಉಪವಾಸ ಅಂತ ಮಾಡ್ತೀರಲ್ಲಾ, ಅದು ಹಿಂಸೆಯಲ್ಲವೋ?" ಗಾಂಧೀಜಿ "ಯಾಕಪ್ಪಾ ಹಾಗೆ ಹೇಳ್ತೀಯಾ?" ಅಂದಾಗ ಪಂಡಿತರು ಕೇಳಿದ್ದರು: "ನೀವು ಬೇರೆಯವರನ್ನು ಉಪವಾಸ ಕೆಡವಿದರೆ ಅದೂ ಪಾಪವೇ, ನೀವು ಉಪವಾಸ ಮಾಡಿದರೆ ನಿಮ್ಮ ಆತ್ಮಕ್ಕೆ ಉಪವಾಸ ಮಾಡಿಸಿದ ಹಾಗೆ ಆಯಿತು, ಇದು ಎಲ್ಲಿಯ ಪುಣ್ಯ? ಇದರಿಂದ ಯಾರಿಗೆ ಲಾಭ?" ಗಾಂಧಿ ಒಂದೇ ಮಾತು ಹೇಳಿಬಿಟ್ಟರು: "ಅಪ್ಪಾ, ನೀನೇ ಮಹಾತ್ಮ, ನಾನಲ್ಲ." ಸ್ವಲ್ಪ ಚೇಷ್ಟೆ ಸ್ವಭಾವದ ಪಂಡಿತರು ಹೇಳಿದ್ದರು: "ಗಾಂಧೀಜಿ, ದಯವಿಟ್ಟು ನನ್ನನ್ನು ಮಹಾತ್ಮ ಅಂತ ಕರೀಬೇಡಿ. ಯಾಕೆ ಅಂದರೆ, ಮಹಾತ್ಮನಾದ ರಾವಣ ಸೀತೆಯನ್ನು ಅಪಹರಿಸಿದ ಅಂತ ರಾಮಾಯಣದಲ್ಲಿದೆ. ನಾನು ಯಾವ ಸೀತೆಯನ್ನೂ ಅಪಹರಿಸಿಲ್ಲ. ಆದ್ದರಿಂದ ನನಗೆ ಮಹಾತ್ಮ ಅನ್ನಬೇಡಿ, ಅದನ್ನು ನೀವೇ ಇಟ್ಟುಕೊಳ್ಳಿ". "ನಿನ್ನ ಹತ್ತಿರ ತರ್ಕ ಮಾಡುವುದಿಲ್ಲಪ್ಪಾ" ಎಂದು ನಗುತ್ತಾ ಹೇಳಿದ ಗಾಂಧೀಜಿ ಸುಮ್ಮನಾಗಿಬಿಟ್ಟಿದ್ದರಂತೆ.
ಬಡತನ ಅನ್ನುವುದು ಒಂದು ಅಭಿಶಾಪ. ಭಗವಂತ ಸರ್ವೈಶ್ಯರ್ಯ ಸಂಪನ್ನ. ಅವನ ಮಕ್ಕಳು ನಾವು ಬಡತನದಲ್ಲಿದ್ದರೆ ಅವನಿಗೆ ಸಂತೋಷವಿರುತ್ತೇನು? ಅವನ ಮಕ್ಕಳು ನಾವು ಚೆನ್ನಾಗಿ ತಿನ್ನಬೇಕು, ಸುಖವಾಗಿರಬೇಕು, ಅದು ಭಗವಂತನ ಆಸೆ. ನಾವು ಬಲವಂತವಾಗಿ ಉಪವಾಸ ಮಾಡಿದರೆ ಅವನಿಗೆ ಸಂತೋಷ ಆಗುತ್ತೆ ಅಂತ ಮಾಡಿದ್ದೀರಾ?
ಗಾಂಧೀಜಿಯವರ ಪತ್ನಿ ಕಸ್ತೂರಿಬಾ ಹೇಳುತ್ತಿದ್ದರಂತೆ: "ನಮ್ಮ ಯಜಮಾನರು 7 ದಿನ, 15 ದಿನ, 21 ದಿನ ಹೀಗೆಲ್ಲಾ ಉಪವಾಸ ಮಾಡುತ್ತಾರೆ. ಸ್ವಲ್ಪ ಸ್ವಲ್ಪ ದಿನ ಏಕೆ, ಪೂರ್ಣ ಸಾಯುವವರೆಗೂ ಉಪವಾಸ ಮಾಡಿ ಸತ್ತುಬಿಡಲಿ, ನಾಲ್ಕು ದಿನ ಅತ್ತು ಸುಮ್ಮನಾಗುತ್ತೇನೆ, ನಂತರ ಮರೆತುಬಿಡುತ್ತೇನೆ" ಅಂತ. ಆ ಸಾಧ್ವಿಯ ಬಾಯಲ್ಲಿ, ಮಹಾಪತಿವ್ರತೆಯ ಬಾಯಲ್ಲಿ ಅಂತಹ ಮಾತು ಬರಬೇಕಾದರೆ ಆಕೆ ಎಷ್ಟು ನೊಂದಿರಬೇಕು, ಊಹಿಸಿ.
ಬದುಕೋಣ
ಪ್ರಬಲ ಬದುಕುವ ಇಚ್ಛೆಗೆ ಪಂಡಿತರು ಜೀವಂತ ಸಾಕ್ಷಿಯಾಗಿದ್ದಾರೆ. ಅವರು ಹೇಳುತ್ತಾರೆ: "ಸ್ವಲ್ಪ ಯೋಚನೆ ಮಾಡಿ, ಒಂದು ಜೈಲಿನಲ್ಲಿ ಬೆಳಿಗ್ಗೆಂದ ಸಾಯಂಕಾಲದವರೆಗೆ ಕುಳಿತುಕೊಂಡರೆ ಎಷ್ಟು ಬೇಸರವಾಗುತ್ತದೆ. ಅಂತಹುದರಲ್ಲಿ ಒಟ್ಟು 13 ವರ್ಷ ಜೈಲಿನಲ್ಲಿ -ಕರಾಚಿಯಿಂದ ಹಿಡಿದು ಬೆಂಗಳೂರು ಸೆಂಟ್ರಲ್ ಜೈಲಿನವರೆಗೆ, ಕೊಚ್ಚಿ, ಆಂಧ್ರ ಸೇರಿ ಹಲವು ಜೈಲುಗಳಲ್ಲಿ -ಕಳೆದಿದ್ದೇನೆ. ಅಲ್ಲಿನ ರೊಟ್ಟಿ, ಅನ್ನ ಎಲ್ಲಾ ತಿಂದಿದ್ದೇನೆ. ಅದೂ ಎಂತಹ ರೊಟ್ಟಿ? ಹಿಟ್ಟಿನಲ್ಲಿ ಬೇಕಂತಲೇ ಮರಳು ಸೇರಿಸಿ ತಿನ್ನಕ್ಕಾಗಬಾರದು ಎಂದು ಮಾಡಿದ್ದ ರೊಟ್ಟಿ. ಸಾರಿನಲ್ಲೂ ಬೇಳೆಕಾಳು ಕಡಿಮೆ, ಮರಳೇ ಜಾಸ್ತಿ. ಅದನ್ನೇ ತಿಂದು ಬದುಕಬೇಕು. ಭಗವಂತನ ದಯೆ ಅಂತ ಕಾಣುತ್ತೆ, ಅಂತಹುದನ್ನು ತಿಂದೂ ಸಹ ಈಗಲೂ ಬದುಕಿದ್ದೀನಿ, ಇನ್ನೂ ಸಾಯುವ ಯೋಚನೆಯಿಲ್ಲ್ಲ. ಏಕೆಂದರೆ ಬದುಕುವುದು ಕಷ್ಟ, ಸಾಯುವುದು ಸುಲಭ, ಬಹಳ ಸುಲಭ. ಸುಲಭವೆಂದು ಹೇಳಿ ಸಾಯಲು ಹೋಗಬಾರದು. ಪೂರ್ಣವಾಗಿ ಬದುಕಬೇಕು." ಜವಾಹರಲಾಲ್ ನೆಹರುರವರೂ ಸಹ ಬಂದಿಯಾಗಿ ಜೈಲಿನಲ್ಲಿರುತ್ತಿದ್ದರೆ ಅವರಿಗೆ ಜೈಲಿನಲ್ಲಿ ರಾಜೋಪಚಾರ ಸಿಗುತ್ತಿತ್ತು. ಪತ್ರಿಕೆಗಳನ್ನು ಓದಲು ಕೊಡುತ್ತಿದ್ದರು, ಮನೆಯಿಂದ ಊಟ ಬರುತ್ತಿತ್ತು, ಪ್ರತ್ಯೇಕ ಕೊಠಡಿಯಲ್ಲಿ ಇರಿಸುತ್ತಿದ್ದರು.
ಆತ್ಮವಂಚನೆ ಬೇಡ
ಸರ್ದಾರ್ ಭಗತ್ ಸಿಂಗ್ ಹೆಸರು ಎಲ್ಲರೂ ಕೇಳಿಯೇ ಇರುತ್ತಾರೆ, ಮಹಾನ್ ಕ್ರಾಂತಿಕಾರಿ, ಅವನು ಪಂಡಿತರ ಶಿಷ್ಯ. ಲಾಹೋರಿನಲ್ಲಿ ದಯಾನಂದ ಕಾಲೇಜಿನಲ್ಲಿ ಅವನು ಓದುತ್ತಿದ್ದಾಗ ಪಂಡಿತರು ಗಣಿತದ ಪಾಠ ಹೇಳಲು ಹೋಗುತ್ತಿದ್ದರು. ಒಂದು ಸಲ ಅವನು ಪಂಡಿತರ ಹತ್ತಿರ ಬಂದು ಹೇಳಿದ್ದ: "ಪಂಡಿತಜಿ, ನಾನು ಲೆಕ್ಕದಲ್ಲಿ ಸ್ವಲ್ಪ ಹಿಂದೆ. ಕಡಿಮೆ ಅಂಕ ಬಂದರೆ, ಕರುಣೆ ಇದ್ದರೆ ನನಗೆ ಐದು ಅಂಕ ಸೇರಿಸಿ ಕೊಟ್ಟರೆ ಉಪಕಾರವಾಗುತ್ತದೆ". ಪಂಡಿತರ ಉತ್ತರ: "ಲಕ್ಷಣವಾಗಿ ಫೇಲಾಗು. ನಾನು ಅಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ." 'ಇವನು ನನ್ನ ಶಿಷ್ಯ, ಇವನು ಉದ್ಧಾರವಾಗಲಿ' ಎಂದು ಅಂಕ ಸೇರಿಸಿಕೊಟ್ಟು ಆತ್ಮವಂಚನೆ ಮಾಡಿಕೊಳ್ಳಲು ಪಂಡಿತರು ಸಿದ್ಧರಿರಲಿಲ್ಲ. ನಂತರದ ಕಥೆ ಎಲ್ಲರಿಗೂ ತಿಳಿದೇ ಇದೆ. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡು ದೇಶಕ್ಕಾಗಿ ಬಲಿದಾನ ಮಾಡಿದ ಪುಣ್ಯಾತ್ಮ!
ಭಗವಂತನಿಗೆ ಪ್ರಿಯವಾದ ಕೆಲಸ
ಭಗವಂತನಿಗೆ ಅನೇಕ ಹೆಸರುಗಳಿವೆ, ಸೋಮ ಅನ್ನುವುದೂ ಅವನ ಹೆಸರೇ. ಆ ಸೋಮ ಅನ್ನುವುದಕ್ಕೆ ಬೇಕಾದಷ್ಟು ಅರ್ಥ ಇದೆ. ಭಕ್ತಿರಸ ಅಂತಲೂ ಅರ್ಥ ಇದೆ, ಜಗತ್ತಿನ ಪ್ರೇರಕ, ಉತ್ಪಾದಕ ಅನ್ನುವ ಅರ್ಥವೂ ಇದೆ. ದೇವತೆಗಳ ಉತ್ಪಾದಕ, ಪ್ರೇರಕನೂ ಅವನೇ. ಅವನನ್ನು ಪ್ರಾರ್ಥನೆ ಮಾಡುವುದನ್ನು ಬಿಟ್ಟು ಅವನ ಹೆಸರಿನಲ್ಲಿ ಬೇರೆ ಯಾವ ಯಾವುದನ್ನೋ ಪೂಜೆ ಮಾಡುತ್ತಾ ಹೋದರೆ ಫಲ ಸಿಗುತ್ತಾ? ಮತ್ತೆ ಆ ಸೋಮ ವಿಶ್ವಪ್ರಿಯ. ಪ್ರತಿದಿನ ಅವನಿಗೆ ಪ್ರಿಯವಾದ ಕೆಲಸವನ್ನು ಮಾಡಿಕೊಂಡು ಹೋಗುವುದೇ ಪೂಜೆ. ಭಗವಂತನಿಗೆ ಪ್ರಿಯವಾದ ಕೆಲಸ ಯಾವುದು? ಅವನಿಗೇನು ಉದ್ಧಾರ ಆಗಬೇಕಿಲ್ಲ. ಉದ್ಧಾರ ಆಗಬೇಕಾಗಿರುವುದು ನಮಗೆ. ನಾವು ಅಂದರೆ ನಮ್ಮ ಸಮೂಹ. ನಮ್ಮ ಸಮೂಹದ ಉದ್ಧಾರಕ್ಕಾಗಿ ನಾವು ಕೆಲಸ ಮಾಡಬೇಕಾಗಿದೆ. ಪೀಡಿಸೋದು, ಎಲ್ಲರನ್ನೂ ಗೋಳು ಹುಯ್ಕೊಳ್ಳೋದು, ಅನ್ಯಾಯ ಮಾಡೋದು, ಮತ್ತೆ ನಾನು ಭಗವದ್ಭಕ್ತ ಕಣಯ್ಯಾ ಅನ್ನೋದು, ಎಂಥಾ ಭಕ್ತರು? ಅವನಿಗೆ ಪ್ರಿಯರಾಗಿ, ಭಗವಂತನ ಮಕ್ಕಳು ನಾವೆಲ್ಲಾ, ಕಷ್ಟ, ಕಾರ್ಪಣ್ಯದಲ್ಲಿರುವವರಿಗೆ, ಬಡವರಿಗೆ, ಬಗ್ಗರಿಗೆ, ದೀನ ದಲಿತರಿಗೆ ಸಹಾಯ ಮಾಡಿದರೆ ನಿಜವಾದ ಭಗವಂತನ ಭಕ್ತರು ಅನ್ನಬಹುದು.
ಭಗವಂತನ ಮಕ್ಕಳ ಸೇವೆ ಭಗವಂತನ ಸೇವೆ
ಅಯ್ಯೋ, ಅವನು ನಾಸ್ತಿಕ, ದೇವಸ್ಥಾನಕ್ಕೇ ಹೋಗೋದಿಲ್ಲ, ಅವನ ಮಾತು ಕೇಳ್ಬೇಡಿ ಅಂತ ಹೇಳ್ತಾರೆ. ಒಳ್ಳೇ ತಮಾಷೆ ಆಯ್ತಲ್ಲಾ ಇದು! ದೇವಸ್ಥಾನದಲ್ಲಿ ಮಾತ್ರ ಅವನಿದ್ದಿದ್ದರೆ ಬೇರೆ ಇನ್ನೆಲ್ಲೂ ಇಲ್ಲ ಅಂತಿದ್ದರೆ ಅಲ್ಲಿಗೆ ಹೋಗಬೇಕಾಗಿತ್ತು. ಸರ್ವವ್ಯಾಪಕ ಅಂತೀರಿ, ಎಲ್ಲಾ ಕಡೆಯೂ ಇದ್ದಾನೆ ಅಂತೀರಿ, ನಿಮ್ಮ ಹೃದಯಕ್ಕಿಂತ ದೊಡ್ಡ ಮಂದಿರ ಬೇಕಾ? ನಿಮ್ಮ ಹೃದಯದಲ್ಲೂ ಪರಮಾತ್ಮನಿದ್ದಾನೆ. ಸುಖವಾಗಿ ಆ ಪರಮಾತ್ಮನ ಕುರಿತು ಧ್ಯಾನ ಮಾಡಿ. ನಿಜವಾಗಿ ನಿಮಗೆ ಆನಂದ ಸಿಕ್ಕುತ್ತೆ. ಈ ಮಾತನ್ನು ನಾನು ನೂರು ವರ್ಷಗಳ ಅನುಭವದಿಂದ ಹೇಳುತ್ತಿದ್ದೇನೆ. ನಾನು ಆ ಸ್ಥಿತಿಯಲ್ಲಿ ಇರುವಾಗ ಈ ಪ್ರಪಂಚ ಏನೂ ಇರುವುದೇ ಇಲ್ಲ. ನನ್ನ ದೃಷ್ಟಿಯ ಒಳಗೆ ಈ ಪ್ರಪಂಚ ಇರೋದೆ ಇಲ್ಲ, ಇರೋದು ನನ್ನೊಳಗಿನ ಪರಮಾತ್ಮ ಒಬ್ಬನೇ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು; ಭಗವಂತನ ಮಕ್ಕಳ ಸೇವೆಯೇ ಭಗವಂತನ ಸೇವೆ.
ದೇವಸ್ಥಾನಗಳನ್ನು ಕಟ್ಟುವ ಬದಲು ಧರ್ಮಶಾಲೆ ಕಟ್ಟಿಸಿ, ಅನಾಥಾಲಯಗಳನ್ನು ಕಟ್ಟಿಸಿ, ಛತ್ರಗಳನ್ನು ನಿರ್ಮಾಣ ಮಾಡಿ, ಜನ ವಾಸ ಮಾಡಲಾದರೂ ಆಗುತ್ತೆ, ಅದು ಬಿಟ್ಟು ದೇವಸ್ಥಾನದಲ್ಲಿ ಮಾತ್ರ ಅವನಿದ್ದಾನೆ, ಬೇರೆ ಕಡೆ ಇಲ್ಲ ಅನ್ನೋದು ಸರಿಯಲ್ಲ. ಮೊದಲೇ ಅಜ್ಞಾನದಲ್ಲಿ ನರಳುತ್ತಿದ್ದೇವೆ, ನಮ್ಮನ್ನು ಇನ್ನೂ ಅಜ್ಞಾನಕ್ಕೆ ತಳ್ಳಿ ನೋಡೋದು ಎಷ್ಟು ಸರಿ? ಇದು ತಪ್ಪಬೇಕು. ಭಗವಂತನ ಮಕ್ಕಳ ಸೇವೆ ಮಾಡುವುದಕ್ಕೆ ನಮಗೆ ಉದಾರವಾದ ಮನಸ್ಸು ಕೊಡು ಅಂತ ದೇವರಲ್ಲಿ ಪ್ರಾರ್ಥಿಸಬೇಕು.
ಒಳ್ಳೆಯ ರೀತಿ ಬಾಳೋಣ
ಯಾರು ಏನೇ ಅನ್ನಲಿ, ನಿಮ್ಮನ್ನು ಶತ್ರುವಾಗೇ ಕಾಣಲಿ, ನೀವು ಮಾತ್ರಾ 'ನಾನು ಎಲ್ಲರ ಮಿತ್ರ' ಎಂದುಕೊಳ್ಳಿ, ಇತರರು ನಿಮ್ಮನ್ನು ದ್ವೇಷಿಸಲಿ, ಪ್ರತಿಯಾಗಿ ನೀವು ದ್ವೇಷಿಸಲು ಹೋಗಬೇಡಿ. 'ದೊಡ್ಡಮಾತು, ಮಹಾತ್ಮರಿಗೆ ಅರ್ಥವಾಗುತ್ತೆ, ನಮಗೆ ಅರ್ಥವಾಗಲ್ಲ, ನಮಗೆ ಯಾಕೆ?' ಅಂದುಕೊಂಡು 'ಅವನು ಎರಡು ಮಾತು ಬೈದನಲ್ಲಾ, ಹತ್ತು ಮಾತು ಜಾಡಿಸಿಬಿಡುತ್ತೇನೆ' ಅಂದರೆ ಅವನದು ಎರಡು, ನಿಮ್ಮದು ಹತ್ತು, ಹನ್ನೆರಡು ಮಾತು ಕೇಳಿ ಬಂತು, ಯಾರ ಉದ್ಧಾರಕ್ಕೆ? ನಾವು ಈರೀತಿ ಯೋಚನೆ ಮಾಡುವುದನ್ನು ಕಲಿಯಬೇಕು, ಯೋಚನೆ ಮಾಡದೆ ಯಾವ ಕೆಲಸವನ್ನೂ ಮಾಡಬಾರದು, ವಿದ್ಯೆ, ಜ್ಞಾನದಿಂದ ಮಾಡುವ ಕೆಲಸದಲ್ಲಿ ಶಕ್ತಿ ತುಂಬಿಕೊಂಡಿರುತ್ತದೆ, ಎಲ್ಲರೊಡನೆ ಮೃದುವಾಗಿ, ಮಧುರವಾಗಿ ಮಾತನಾಡಬೇಕೆಂದು ವೇದ ಹೇಳುತ್ತದೆ. ಮಾತು ಜೇನುತುಪ್ಪದಂತಿರಬೇಕೆಂದು ಹೇಳುತ್ತದೆ. ಒಳ್ಳೆಯ ಮಾತು ಎಲ್ಲಿ ಕೇಳುತ್ತೇವೆ? ಒಬ್ಬರನ್ನೊಬ್ಬರು ಬಯ್ಯುವುದು, ಒಬ್ಬರನ್ನೊಬ್ಬರು ಹಂಗಿಸುವುದು, ಇದರಲ್ಲೇ ಕಳೆಯುತ್ತೇವೆ. ಆಲೋಚನೆ ಮಾಡೋಣ, ಒಳ್ಳೆಯ ರೀತಿ ಬಾಳೋಣ. ಸತ್ಸಂಗಕ್ಕೆ ಬರುವುದರಿಂದ ಇನ್ನೂ ಒಂದು ಅನುಕೂಲವಿದೆ. ಅದೆಂದರೆ ಆ ಒಂದು ಗಂಟೆಯ ಅವಧಿಯಲ್ಲಾದರೂ ಕೆಟ್ಟ ಮಾತುಗಳನ್ನಾಡುವುದು, ನೋಯಿಸುವುದು, ಇತ್ಯಾದಿಗಳು ಇರುವುದಿಲ್ಲ!
ಭೇದ ಮಾಡದ ಭಗವಂತ
ಹಾಸ್ಯಮಯವಾಗಿ ಇಂದಿನ ಸ್ಥಿತಿ ಕುರಿತು ಪಂಡಿತರು ವಿಮರ್ಶಿಸುವ ಪರಿಯಿದು: ಸರ್ಕಾರಿ ಚಿಹ್ನೆ ಹಾಕ್ತಾರೆ - "ಸತ್ಯಮೇವ ಜಯತೇ". ಇದು ಯಾರ ಜೀವನದಲ್ಲೂ ಇಲ್ಲ, ದೊಡ್ಡ ನಾಯಕರುಗಳಿಂದ ಹಿಡಿದು ಒಬ್ಬ ಸಾಧಾರಣ ಮಿನಿಸ್ಟರ್‌ವರೆಗೂ ಯಾರಿಗೂ ಇಲ್ಲ. ಒಂದು ಸಲ ಒಬ್ಬ ಅಂತಿದ್ದನಂತೆ; 'ಪರಮಾತ್ಮ ನೀನು ಬಲೇ ಕಂತ್ರಿ, ಯಾಕೆ ನಾನಾಗಲಿಲ್ಲ ಮಂತ್ರಿ? ನನ್ನನ್ನು ಮಂತ್ರಿನೂ ಮಾಡಲಿಲ್ಲ, ನೀನೆಂಥಾ ದೇವ್ರು, ಕಂತ್ರಿ ನೀನು.' ನಮ್ಮ ದೌರ್ಬಲ್ಯವನ್ನು ಮುಚ್ಚಿಕೊಳ್ಳುವುದಕ್ಕೆ ಆ ದೌರ್ಬಲ್ಯವನ್ನು ಪರಮಾತ್ಮನ ಮೇಲೆ ಹಾಕೋದು! ಇಷ್ಟು ತಿಳ್ಕೊಳ್ಳಿ, ನಿಮ್ಮ ನಿಂದೆ, ನಿಮ್ಮ ಸ್ತುತಿ ಯಾವುದೂ ಭಗವಂತನ ಮೇಲೆ ಪರಿಣಾಮ ಬೀರುವುದಿಲ್ಲ. ಹೊಗಳಿದರು ಅಂತ ಕೇಳಿದ್ದನ್ನೆಲ್ಲಾ ಕೊಟ್ಟುಬಿಡುವುದಿಲ್ಲ, ಬೈದುಬಿಟ್ಟರು, ಅವರು ನಾಸ್ತಿಕರು ಅಂತ ಅವರ ಆಹಾರವನ್ನು ಕಿತ್ತುಕೊಳ್ಳುವುದಿಲ್ಲ, ನಾಸ್ತಿಕರು ಹೆಚ್ಚಿರುವ ರಷ್ಯದವರು ನಮಗಿಂತ ಚೆನ್ನಾಗಿ ಊಟ ಮಾಡ್ತಾರೆ. ಭಗವಂತ ಅವರ ಅನ್ನ ಕಿತ್ತುಕೊಳ್ಳಲಿಲ್ಲ. ನನ್ನನ್ನೇ ಇಲ್ಲ ಅಂತ ಹೇಳ್ತಾರಲ್ಲಾ, ಅವರೆಲ್ಲಾ ನಾಸ್ತಿಕರು ಅಂತ ಅನ್ನ ಕಿತ್ತುಕೊಳ್ಳೋದಿಲ್ಲ, ಆಸ್ತಿಕರಿಗೂ ಅನ್ನ ಕೊಡ್ತಾನೆ, ನಾಸ್ತಿಕರಿಗೂ ಅನ್ನ ಕೊಡ್ತಾನೆ. ನಮ್ಮ ಕುಂದುಕೊರತೆಗಳನ್ನು ಭಗವಂತನ ಮೇಲೆ ಹೊರಿಸುವುದು ಸರಿಯಲ್ಲ.
-ಕ.ವೆಂ.ನಾಗರಾಜ್.
**************
ದಿನಾಂಕ 04.05.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:
Maharshi Pandeji
ಪ್ರತ್ಯುತ್ತರಅಳಿಸಿOne of the important VEDIC scholars.. Impartial Thinker.. A strong pillar of "SANAATANA DHARMA "...!!!
what is this about? I have visited this sage.
ಪ್ರತ್ಯುತ್ತರಅಳಿಸಿ