ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯು ಪಂಡಿತ ಸುಧಾಕರ ಚತುರ್ವೇದಿಯವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿಯೇ. ಶಿಕ್ಷಣ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶ್ರೀ ಟಿ.ವಿ. ಕೃಷ್ಣರಾವ್ ಮತ್ತು ಶ್ರೀಮತಿ ಲಕ್ಷ್ಮಮ್ಮನವರ ಮಗನಾಗಿ 1897ರ ರಾಮನವಮಿಯಂದು ಬಳೇಪೇಟೆಯಲ್ಲಿದ್ದ ಮನೆಯಲ್ಲಿ ಜನಿಸಿದ ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೂ ಅರ್ಥವಿಲ್ಲದ ಕುರುಡು ಸಂಪ್ರದಾಯಗಳನ್ನು ಒಪ್ಪದಿದ್ದವರು, ಸರಿ ಅನ್ನಿಸಿದ್ದನ್ನು ಮಾತ್ರ ಮಾಡಿದವರು. ಅಪ್ಪಟ ಕನ್ನಡಿಗರಾದ ಪಂ. ಸುಧಾಕರ ಚತುರ್ವೇದಿಯವರು ತಮ್ಮ 13ನೆಯ ವಯಸ್ಸಿನಲ್ಲಿಯೇ ಉತ್ತರ ಭಾರತದ ಹರಿದ್ವಾರದ ಹತ್ತಿರದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವಿತರಾಗಿದ್ದು, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದವರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ಚತುರ್ವೇದಿಯಾಗಿ, 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಗಳಿಸಿದವರು. ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು. ಅವರ ವಿಚಾರಧಾರೆಯ ಮೂರನೆಯ ಕಂತು ಇಲ್ಲಿದೆ.
*****************
ಅರ್ಪಣಾಭಾವ
ಅಗ್ನಿಹೋತ್ರ ಮಾಡುವಾಗ ಮೊದಲು ಒಂದುಸಲ 'ಅಯಂತ ಇಧ್ಮ' ಎಂದು ಹೇಳುತ್ತೇವೆ. ಆಮೇಲೆ 5ಸಲ . 'ಅಯಂತ ಇಧ್ಮ' ಎಂದು ಹೇಳುತ್ತೇವೆ. ಅಗ್ನಿಹೋತ್ರ ಮಾಡುವ ವಿಚಾರದಲ್ಲಿ ತಿಳಿದುಕೊಳ್ಳಬೇಕಾದ್ದಿದೆ. ವಾಯುಶುದ್ಧಿ, ಜಲಶುದ್ದಿ ಇವೆಲ್ಲಾ ಇದ್ದದ್ದೇ. ಎಲ್ಲರಿಗೂ ಅರ್ಥವಾಗುತ್ತೆ. ಆಧ್ಯಾತ್ಮಿಕ ಭಾವನೆಯನ್ನು ಸಹ ಅರ್ಥ ಮಾಡಿಕೊಳ್ಳಬೇಕು. ಹೋಮ, ಹವನ ಮಾಡಿದೆವು ಅಂತೀವಿ, ನಮ್ಮ ಉದ್ಧಾರವಾಗುತ್ತೋ, ಭಗವಂತನ ಉದ್ಧಾರವಾಗುತ್ತೋ ತಿಳಿದುಕೊಳ್ಳುವುದಿಲ್ಲ., ಭಗವಂತ, ನೀನು ಮಹಾನ್ ಅಗ್ನಿ, 'ಅಯಂ ಆತ್ಮಾ ತೇ ಇಧ್ಮ' - ನನ್ನ ಆತ್ಮ ಇದು ನಿನಗೆ ಸಮಿತ್ತು- ಅಂತ. ನಾನು ಸಮಿತ್ತು. ನನ್ನ ಆತ್ಮ ಇದೆಯಲ್ಲಾ, ಭಗವಂತಾ, ಅದನ್ನು ನಿನಗೆ ಸಮರ್ಪಿಸುತ್ತಿದ್ದೇನೆ, ಅಂತ. ಅರ್ಥ ಮಾಡಿಕೊಳ್ಳಿ, ಅಗ್ನಿಯಲ್ಲಿ ಬೆಳಕಿದೆ, ಸಮಿತ್ತಿನಲ್ಲಿ ಸ್ವತಃ ಬೆಳಕಿಲ್ಲ. ಅಗ್ನಿಯೊಡನೆ ಬೆರೆತಾಗ ಸಮಿತ್ತು ಉರಿದು ಬೆಳಕು ಕೊಡುತ್ತದೆ. ಹೀಗೆ, ಪರಮಾತ್ಮ ಜ್ಯೋತಿಸ್ವರೂಪ, ಸರ್ವಶಕ್ತ, ನಮ್ಮ ಆತ್ಮ ಅಲ್ಪಜ್ಞ, ಅಲ್ಪಶಕ್ತ. ಒಳ್ಳೆ ಕೆಲಸಾನೂ ಮಾಡ್ತೇವೆ, ಕೆಟ್ಟ ಕೆಲಸಾನೂ ಮಾಡ್ತೇವೆ. ಒಳ್ಳೆ ಕೆಲಸ ಮಾಡಿದಾಗ ಸ್ವಲ್ಪ ಮೇಲೇರುತ್ತೇವೆ, ಕೆಟ್ಟ ಕೆಲಸ ಮಾಡಿದಾಗ ಕೆಳಕ್ಕೆ ಬೀಳುತ್ತೇವೆ. ಈ ಏಳೋದು, ಬೀಳೋದು ನಮ್ಮ ಹಣೆಬರಹ. ಅದರ ಫಲವೇನೇ ಈ ಸುಖ-ದುಃಖ ಅನ್ನುವುದು,.ಒಳ್ಳೆ ಕೆಲಸ ಮಾಡಿದಾಗ ಸುಖ, ಕೆಟ್ಟ ಕೆಲಸ ಮಾಡಿದಾಗ ದುಃಖ. ಇದು ಇದ್ದದ್ದೇ. ಇದನ್ನು ಇಲ್ಲವೆನ್ನುವಂತಿಲ್ಲ. ಇದನ್ನು ಮೀರಿ, ಪರಮಾತ್ಮನಲ್ಲಿ ಆತ್ಮ ಸಮರ್ಪಣೆ ಮಾಡಿಕೊಂಡರೆ ಜೀವಾತ್ಮಕ್ಕೆ ಪ್ರಕಾಶ ಬರುತ್ತದೆ. ಜೀವಾತ್ಮ ಸಮಿತ್ತಿದ್ದಂತೆ, ಅದಕ್ಕೆ ಸ್ವಯಂಪ್ರಕಾಶವಿಲ್ಲ, ಪರಮಾತ್ಮನೆಂಬ ಅಗ್ನಿಯೊಂದಿಗೆ ಒಂದಾದಾಗ ಅದಕ್ಕೆ ಪ್ರಕಾಶ ಬರುತ್ತದೆ. ಈಶ್ವರ ಸನ್ನಿಧಾನ ಅಂತ ಹೇಳ್ತೀವಲ್ಲಾ, ಏನಿದರ ಅರ್ಥ? ತ್ರಿಕರಣ ಪೂರ್ವಕವಾಗಿ ನಮ್ಮನ್ನು ಅಂದರೆ ಆತ್ಮನನ್ನು ಪರಮಾತ್ಮನೊಂದಿಗೆ ಅರ್ಪಿಸಿಕೊಂಡಾಗ ನಮಗೆ ಪರಮಾನಂದ ಸಿಕ್ಕುತ್ತೆ.
ನಾವೆಲ್ಲರೂ ದೇವರ ಮಕ್ಕಳು
ಯಾರೋ ಒಬ್ಬರನ್ನು ದೇವರ ಮಗ ಅನ್ನುವುದು ಎಷ್ಟು ಸರಿ? ವೇದ ಹೇಳುತ್ತೆ: 'ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ . . . . ' ಈ ದಿವ್ಯವಾದ ಲೋಕ ಲೋಕಾಂತರದಲ್ಲಿ ಎಷ್ಟು ಜನ ಬದುಕಿದ್ದಾರೆ, ಜೀವಿಸಿದ್ದಾರೆ, ಅವರೆಲ್ಲಾ 'ಅಮೃತಸ್ಯ ಪುತ್ರಾಃ' - ಅವರೆಲ್ಲರೂ ಆ ಅಮರನಾದ ಪರಮಾತ್ಮನ ಮಕ್ಕಳೇ. ಯಾರೋ ಒಬ್ಬರನ್ನು ಮಾತ್ರ ದೇವರ ಮಗ ಅನ್ನುವುದು ಸರಿಯಲ್ಲ.
ಚೇತನ ಅಚೇತನ ವಸ್ತುವನ್ನು ಪೂಜಿಸಬೇಕೆ?
'ಯಥಾ ಪ್ರಕಾರ ಸತ್ಸಂಗಕ್ಕೆ ಬಂದ್ರು, ಕೂತ್ಕೊಂಡ್ರು, 'ಪಂಡಿತಜಿ ಬಹಳ ಸೊಗಸಾಗಿ ಮಾತನಾಡಿದರು' ಅನ್ನೋದು. ಹೊರಗೆ ಹೋಗುವಾಗ ಕೇಳಿದ್ದನ್ನೆಲ್ಲಾ ಪಂಡಿತಜಿಗೇ ಬಿಟ್ಟು ಹೋಗೋದು. ತೆಗೆದುಕೊಂಡು ಹೋಗೋದು ಏನೂ ಇಲ್ಲ, ಮನೆಗೆ ಹೋದ ಮೇಲೆ ಅದೇ ಪ್ರಕಾರ ಮೂರ್ತಿ ಪೂಜೆ, ಅದೇ ಪ್ರಕಾರ ನಡೆದುಕೊಳ್ಳುವುದು, ಮೂರ್ತಿಪೂಜೆ ಮಾಡಲೇಬೇಕು ಅನ್ನುವ ಹಟ ಇದ್ದರೆ, ಪರಮಾತ್ಮನ ಮೂರ್ತಿ ಆಚಾರ್ಯ, ತಂದೆಗೆ ಪ್ರಜಾಪತಿ ಸ್ಥಾನ, ತಾಯಿಯೇ ಪೃಥ್ವಿ, ಅವರುಗಳನ್ನು ಪೂಜೆ ಮಾಡಿ, ಅದು ಬಿಟ್ಟು ಜೀವ ಇಲ್ಲದ ಅಚೇತನವಾದ ವಸ್ತುಗಳನ್ನು ಎದುರಿಗೆ ಇಟ್ಟುಕೊಂಡು ಅಡ್ಡ ಬೀಳುವುದೇಕೆ? ಅವಕ್ಕೆ ಗೊತ್ತಾಗುತ್ತಾ?'- ಇದು ಚತುರ್‍ವೇದಿಯವರು ಅರಿತು ಆಚರಿಸಬೇಕೆಂಬುದಕ್ಕೆ ಒತ್ತು ಕೊಟ್ಟ ಪರಿ.
ಭಗವಂತನ ಭಕ್ತರ ಭಯ!
ನನಗೆ ಭಕ್ತರ ಭಯ, ಭಗವಂತನ ಭಯವಿಲ್ಲ, ಭಗವಂತನ ಭಕ್ತರಿದ್ದಾರಲ್ಲಾ, ಅವರದ್ದೇ ಯಾವಾಗಲೂ ಅಪಾಯವೇ. ಹಿಂದೆ ಒಮ್ಮೆ ಗ್ರಾಮದೇವತೆಯ ಉತ್ಸವ ಮೂರ್ತಿ ಹೊತ್ತುಕೊಂಡು ಬಂದು ನಮ್ಮ ಬಾಡಿಗೆ ಮನೆಯ ಮುಂದೆ ನಿಲ್ಲಿಸಿದರು. ಉತ್ಸವ ಮಾಡುವಾಗ ಗ್ರಾಮದೇವತೆಯ ಕಥೆ ಹೇಳುವುದಿಲ್ಲ, ಸಂಬಂಧವಿಲ್ಲದ ಸಿನೆಮಾ ಹಾಡುಗಳನ್ನು ಹಾಕಿಕೊಂಡು ಕುಣೀತಾ ಹೋಗೋದು. ಇದೆಂಥಾ ಭಕ್ತಿ? ನಾನು ಹೇಳಿದೆ: "ತೆಗೆದುಕೊಂಡು ಹೋಗ್ರಪ್ಪಾ, ಬೇರೆ ಎಲ್ಲಾದರೂ ಕೂಡಿಸಿಕೊಳ್ಳಿ, ಯಾಕೆ ನಮ್ಮ ಪ್ರಾಣ ತಿಂತೀರಿ?" - ಅರ್ಥವಿಲ್ಲದ ಆಚರಣೆಗಳ ಕುರಿತು ಪಂಡಿತರು ಅಸಮಾಧಾನ ವ್ಯಕ್ತಪಡಿಸಿದ ಪರಿ ಇದು!
ವಿದ್ವಾಂಸರಲ್ಲಿ ದೇವರನ್ನು ಕಾಣೋಣ
ಈ ಪ್ರಪಂಚದಲ್ಲಿ ಯಾರು ವಿದ್ವಾಂಸರು ಇರುತ್ತಾರೋ ಅವರನ್ನೇ ದೇವರು ಅನ್ನಬಹುದು. ಆ ವಿದ್ವಾಂಸರಲ್ಲಿ ಫಟಿಂಗರೂ ಇರುತ್ತಾರೆ, ಎಲ್ಲರೂ ಒಳ್ಳೆಯವರಿರುವುದಿಲ್ಲ. ಜನರಿಗೆ ಟೋಪಿ ಹಾಕುವುದಕ್ಕೆ ಏನು ಬೇಕೋ ಅದನ್ನು ಹೇಳುವವರು ಇರುತ್ತಾರೆ. ಋಜು ಮಾರ್ಗದಲ್ಲಿ, ನೇರ ಮಾರ್ಗದಲ್ಲಿ ಯಾರು ನಡೆಯುತ್ತಾರೋ ಅಂತಹ ವಿದ್ವಾಂಸರ ಬುದ್ಧಿ ನಮಗೆ ಬರಲಿ, ವಿದ್ವಾಂಸರುಗಳು ನೇರವಾದ ಮಾರ್ಗವನ್ನು ತೋರಿಸಬೇಕು. 'ಜ್ಞಾನ ಕೊಡುವ, ಫಲ ಕೊಡುವ ವಿದ್ವಾಂಸರೇ ನಮಗೆ ಉಪದೇಶ ಕೊಡಿ' ಇದು ವೇದ ಹೇಳುವ ಮಾತು. ಆ ಪುಣ್ಯಾತ್ಮನಿಗೇ ಜ್ಞಾನ ಇಲ್ಲದೇ ಹೋದರೆ, ಅವನೇ ಅವಿದ್ಯಾವಂತನಾದರೆ ಅವನಿಂದ ನಮಗೆ ಏನು ಸಿಕ್ಕುತ್ತೆ? ಆದ್ದರಿಂದ ವಿದ್ವಾಂಸರಿಗೆ ಶರಣಾಗಬೇಕು, ಜ್ಞಾನಿಗಳಿಗೆ ಶರಣಾಗಬೇಕು, ಅವರನ್ನು ನಾವು ಪ್ರಾರ್ಥನೆ ಮಾಡಬೇಕು.
ಗಂಭೀರವಾಗಿ ಯೋಚಿಸಿ, ಆಲೋಚಿಸಿ, ವೇದದ ಮಂತ್ರ ಹೇಳುತ್ತೆ, ಸತ್ಕರ್ಮ ಮಾಡುವುದನ್ನು ಬಿಟ್ಟು ಬೇರೆಡೆ ಹೊರಳದಿರೋಣ, ನಾವು ಯಾವ ದಾರಿಯಲ್ಲಿ ಹೋಗಬೇಕೋ ಆ ದಾರಿಯನ್ನು ಬಿಟ್ಟು ಹೋಗದಿರೋಣ, ಸರ್ವೈಶ್ವರ್‍ಯನಾದ ಪರಮಾತ್ಮ ನಮಗೆ ಬದುಕು ಕೊಟ್ಟಿದ್ದಾನೆ, ಜೊತೆಗೆ ಐಶ್ವರ್ಯವನ್ನೂ ಕೊಟ್ಟಿದ್ದಾನೆ. ಸೋಮ ಅನ್ನುವ ಪದ ಇದೆ, ಆ ಪದಕ್ಕೆ 40 ಅರ್ಥ ಇದೆ. ಎಲ್ಲಾ ಬೇಡ, 2-3 ಅರ್ಥ ನೋಡೋಣ, ಒಂದು ಮಥನ ಮಾಡು ಅಂತ. ಹಾಲನ್ನು ಸುಮ್ಮನೆ ಇಟ್ಟರೆ ಕೆನೆ ಸಿಕ್ಕುವುದಿಲ್ಲ, ಕಾಯಿಸಿ ಹೆಪ್ಪಿಟ್ಟರೆ ಮೊಸರಾಗುತ್ತದೆ, ಮಥಿಸಿದರೆ ಬೆಣ್ಣೆ ಸಿಗುತ್ತದೆ, ಆ ಮಥನ ಶಕ್ತಿ ನಿಮ್ಮಲ್ಲಿರಬೇಕು. ಇನ್ನೊಂದು ವಿಚಾರ ಮಾಡುವ ಶಕ್ತಿ, ಆಲೋಚನೆ ಮಾಡುವ ಶಕ್ತಿ. ಗುರೂಜಿ ಎಲ್ಲಾ ಯೋಚನೆ ಮಾಡಿಬಿಟ್ಟಿದ್ದಾರೆ, ನಾವೇನು ಯೋಚನೆ ಮಾಡುವುದು ಬೇಡ, ಅವರು ಹೇಳಿದಂತೆ ನಡೆದರೆ ಸಾಕು ಎಂದು ಭಾವಿಸುವುದು ಸರಿಯಲ್ಲ. ಗುರು ಅಂದರೆ ಎರಡು ನಮೂನೆ - ಒಂದು ಸತ್ಯೋಪದೇಶ ಮಾಡುವವನು, ಇನ್ನೊಂದು ಭಾರ ಅಂತ. ಈಗ ಹೆಚ್ಚಿನ ಗುರುಗಳು ಭಾರವಾಗಿರುವವರೇ.
ಮೂರ್ತಿಪೂಜೆಯ ತಪ್ಪು ಕಲ್ಪನೆ
ಪಂಡಿತರು ಮೂರ್ತಿಪೂಜೆ ಕುರಿತ ಚರ್ಚೆಯೊಂದರ ಸಂದರ್ಭವನ್ನು ವಿವರಿಸಿದ್ದು ಹೀಗೆ: ಒಮ್ಮೆ ಆರ್ಯ ಸಮಾಜದ ಒಬ್ಬ ದೊಡ್ಡ ವಿದ್ವಾಂಸರು ಮತ್ತು ಮಾಧವಾಚಾರ್ಯ ಅನ್ನುವ ಪೌರಾಣಿಕರ ನಡುವೆ ಹೈದರಾಬಾದಿನಲ್ಲಿ ಮೂರ್ತಿಪೂಜೆ ಕುರಿತು ಚರ್ಚೆ, ಜಿಜ್ಞಾಸೆ ನಡೆಯುತ್ತಿತ್ತು. ಆ ಮಾಧವಾಚಾರ್ಯರಿಗೆ ಇನ್ನೇನೂ ಉಪಾಯ ಹೊಳೆಯಲಿಲ್ಲ, ದಯಾನಂದರ ಫೋಟೋ ತಂದು ಎದುರಿಗೆ ಇಟ್ಟರು. "ನೀವು ಮೂರ್ತಿ ಪೂಜೆ ಮಾಡಲ್ಲ ಅಲ್ವಾ? ಹಾಗಾದರೆ ಈ ದಯಾನಂದರ ಫೋಟೋಗೆ ಎಕ್ಕಡದಿಂದ ಹೊಡೀರಿ, ನೋಡೋಣ" ಅಂದರು. ಆ ವಿದ್ವಾಂಸ ಪುಣ್ಯಾತ್ಮ ಯೋಚನೆ ಮಾಡಲಿಲ್ಲ, ಆ ದಯಾನಂದರ ಫೋಟೋಗೆ ಚಚ್ಚಿಯೇ ಬಿಟ್ಟರು. ನಾನು ಹೇಳಿದೆ, "ಪಂಡಿತಜಿ, ನಿಮ್ಮ ಬುದ್ಧೀನೂ ಜೇಡಿ ಮಣ್ಣಾಯಿತಾ? ಆ ಫೋಟೋ ಯಾರದು? ದಯಾನಂದರದು. ಆ ದಯಾನಂದರಿಗೆ ಒಂದು ಆಕಾರ ಇತ್ತು. ಅವರ ಫೋಟೋ ಹಿಡಿಯುವುದು ಸಾಧ್ಯವಿತ್ತು. ಹಾಗಾಗಿ ನೀವು ಮಾಡಿದ್ದು ಸರಿಯಲ್ಲ. ನಿರಾಕಾರನಾದ ಭಗವಂತನ ಫೋಟೋ ಹಿಡಿಯುವುದಕ್ಕೆ ಸಾಧ್ಯವಿದೆಯೇ? ಇಲ್ಲದಿರುವಾಗ ಕಲ್ಪನೆಯ ಆಕಾರವನ್ನು ಭಗವಂತ ಅನ್ನಬಹುದೇ ಎಂದು ಕೇಳಬಹುದಿತ್ತಲ್ಲವೇ?"
ಪರಮಾತ್ಮ ಎಲ್ಲಿದ್ದಾನೆ ಎಂಬುದಕ್ಕೆ ಪಂಡಿತರು ಹೇಳಿದ್ದಿದು:
'ನನಗೆ ಒಂದು ಟೈಟಲ್ಲು ಸಿಕ್ಕಿದೆ, ಪಂಡಿತಜಿ ಸುಮ್ಮನೆ ವೇದ, ವೇದ ಅಂತ ಹೇಳ್ತಾರೆ, ಅವರು ನಾಸ್ತಿಕರು, ದೇವಸ್ಥಾನಕ್ಕೆ ಹೋಗೋದಿಲ್ಲ, ಮಸೀದಿಗೆ ಹೋಗೋದಿಲ್ಲ, ಚರ್ಚಿಗೂ ಹೋಗೋದಿಲ್ಲ. ಹೌದು, ನಾನು ಎಲ್ಲಿಗೂ ಹೋಗುವುದಿಲ್ಲ. ಆ ಎಲ್ಲಾ ನನ್ನ ಎದೆಯಲ್ಲೇ ಇದೆ. ದೇವಸ್ಥಾನವೂ ನನ್ನ ಎದೆಯಲ್ಲಿದೆ, ಮಸೀದಿಯೂ ನನ್ನ ಎದೆಯಲ್ಲಿದೆ, ಚರ್ಚೂ ನನ್ನ ಎದೆಯಲ್ಲಿದೆ. ಪರಮಾತ್ಮ ಇಲ್ಲೇ ಇದ್ದಾನೆ. ನಾನು ಹೊರಗೆ ಇನ್ನೆಲ್ಲಿ ಅವನನ್ನು ಹುಡುಕಲು ಹೋಗಬೇಕು? ಇದು ಒಂದು ಪ್ರಶ್ನೆ, ಇದನ್ನು ಸ್ವಲ್ಪ ದರ್ಶನ ಶಾಸ್ತ್ರಕ್ಕೆ ಹೋಗಬೇಕು. 'ವ್ಯಾಪ್ಯ-ವ್ಯಾಪಕ'- ವ್ಯಾಪಕ ಪರಮಾತ್ಮ, ಬೊಂಬೆಯಲ್ಲೂ ಇದ್ದಾನೆ, ಬೊಂಬೆಯ ಹೊರಗೂ ಇದ್ದಾನೆ, ಎಲ್ಲಾ ಕಡೆಯೂ ಇದ್ದಾನೆ, ನೀವು ಪೂಜೆ ಮಾಡುವುದು ವ್ಯಾಪ್ಯನನ್ನೋ, ವ್ಯಾಪಕನನ್ನೋ? ವಿಗ್ರಹ ಪೂಜೆ ಮಾಡ್ತಾ ಇದ್ದರೆ, ಸ್ಪಷ್ಟವಾಗಿದೆ, ನೀವು ವ್ಯಾಪಕನನ್ನಲ್ಲ, ವ್ಯಾಪ್ಯನನ್ನು ಪೂಜೆ ಮಾಡ್ತಾ ಇದೀರಿ. ಬಲ್ಬು ಇದೆ, ಅದರಲ್ಲಿ ವಿದ್ಯುತ್ ಇದೆ, ಸ್ವಿಚ್ ಹಾಕಿದರೆ ಅದರಲ್ಲಿ ಲೈಟು ಹತ್ತುತ್ತದೆ, ಆ ಸ್ವಿಚ್ಚೇ ಇಲ್ಲದಿದ್ದರೆ ಆ ಬಲ್ಬು 100 ವೋಲ್ಟಿನದಾಗಿರಲಿ, 1000 ವೋಲ್ಟಿನದಾಗಿರಲಿ, ಹತ್ತುತ್ತಾ? ಸ್ವಿಚ್ಚು ಒತ್ತಿದರೇ ಹತ್ತುವುದು, ಇಲ್ಲದಿದ್ದರೆ ಹತ್ತುವುದಿಲ್ಲ, ಹಾಗೆಯೇ ನಿಮಗೆ ಧ್ಯಾನ ಅನ್ನುವುದು ಸ್ವಿಚ್ಚು, ಆ ಸ್ವಿಚ್ಚಿರಬೇಕು, ಆ ಸ್ವಿಚ್ಚು ನಿಮ್ಮ ಎದೆಯಲ್ಲೇ ಇದೆ. ಆಗ ಪರಮಾತ್ಮನನ್ನು ನೀವು ಕಂಡುಕೊಳ್ಳುತ್ತೀರಿ, ಜ್ಞಾನಕ್ಕೇ ಸೊನ್ನೆ ಬಿದ್ದಿದ್ದರೆ ಪರಮಾತ್ಮನೂ ಇಲ್ಲ, ಜೀವಾತ್ಮನೂ ಇಲ್ಲ, ಎಲ್ಲಾ ಬರೀ ಮಾತು, ಟೊಳ್ಳು ಮಾತು,'
ಸುಪ್ಪತ್ತಿಗೆ
ಪುರಾಣದ ಕಥೆಗಳು, ನಾಟಕ, ನೃತ್ಯ ಇವುಗಳನ್ನು ನೋಡ್ತಾ ಇದ್ದರೆ ರಾತ್ರಿ ಪೂರ್ತಾ ನಿದ್ದೆ ಬರುವುದಿಲ್ಲ, ವೇದ, ಉಪನಿಷತ್ತುಗಳ ವಿಚಾರ ಕೇಳ್ತಾ ಇದ್ದರೆ ಸ್ವಲ್ಪ ಹೊತ್ತಿಗೇ ನಿದ್ದೆ ಬಂದುಬಿಡುತ್ತೆ. ಒಬ್ಬ ಭಕ್ತ ಕೇಳಿದ, 'ಯಾಕೆ ಸ್ವಾಮಿ, ಹೀಗಾಗುತ್ತೆ?' ಅದಕ್ಕೆ ದಯಾನಂದರು ಹೇಳಿದ್ದರು: 'ಪುರಾಣದ ಕಥೆಗಳು, ನಾಟಕ, ನೃತ್ಯ, ಎಲ್ಲಾ ಮುಳ್ಳಿನ ಹಾಸಿಗೆ ಇದ್ದಂತೆ, ವೇದ, ಉಪನಿಷತ್ತುಗಳು ಸುಪ್ಪತ್ತಿಗೆ ಇದ್ದಂತೆ. ಮುಳ್ಳಿನ ಹಾಸಿಗೆ ಮೇಲೆ ಮಲಗಿದರೆ ನಿದ್ದೆ ಹೇಗೆ ಬರಬೇಕು? ಸುಪ್ಪತ್ತಿಗೆ ಮೇಲೆ ಮಲಗಿದರೆ ನಿದ್ದೆ ಬರದೆ ಇದ್ದರೆ ಇನ್ನು ಯಾವುದರ ಮೇಲೆ ಬರಬೇಕು?'
-ಕ.ವೆಂ.ನಾಗರಾಜ್.
***************
ದಿನಾಂಕ 29.04.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:
Balakrishna Shetty
ಪ್ರತ್ಯುತ್ತರಅಳಿಸಿSatyakku meerida naannudi...
Subraya Kamath K
Very true!
Lalitha Mb
Sir naanu nimma nilume group nalli bareetha iruva chaturvedi avara lekhanagalannu odi ista pattiddene avara satsangagalu elli nadeyuttive endu dayavittu thilisuvira
Aruna Hindu Ranganatha Sharma
ಹಾಗೆಂದರೆ ಹೇಗೆ ಪ್ರಕಟಗೊಳ್ಳಬೇಕಲ್ಲವೇ ಪ್ರಪಂಚದಾದ್ಯಂತ ಗಾಳಿಯಿದೆ ನಾನೇಕೆ ಉಸಿರಾಡಬೇಕು ಎನ್ನಲಾಗುತ್ತದೆಯೇ ಅವರ ಙ್ಞಾನದ ಮುಂದೆ ನಾನು ಏನೂ ಅಲ್ಲ ಆದರೆ ತಕ್ಷಣಕ್ಕೆ ನನಗೆ ತೋಚಿದ್ದು ಇದು
Nanda Chitradurga H
Nanna nilumeyu same. Devaru dharmada hesarinalli bhaya bheeti huttisi sulige maaduthare. Devaru yaara swathuu alla. Nammalle eruva devarannu brick & mortar nalli yeke hudukutheera..,.
Maharshi Pandeji
A genuine VEDIC SCHOLAR..!!!
Shivag Swabhiman Shivag Swabhiman
999% truth full words
Venugopal Nvv
ನಾನು ಕೂಡ ಈಗೇನೆ ಪರಮಾತ್ಮ ನಮ್ಮ ನಮ್ಮಲ್ಲೇ ಇದ್ದಾನೆಂದು. ದೇವಸ್ಥಾನಕ್ಕೆ ಹೋಗಬಾರದೆಂದೆನಿಲ್ಲ ಹೋಗುತ್ತೇನೆ, ಆದರೆ ಅದೇ ಕಾರಣವಾಗೆಯಲ್ಲ. ಇವರ ಮುಂದಾಳತ್ವದಲ್ಲಿ ಬಂದ " ವೇದ ತರಂಗ " ಮಾಸಿಕ ಜ್ಞಾನದ ಪುಸ್ತಕದಿಂದ ನಾನು ನನ್ನ ಜೀವನವನ್ನು ತಿದ್ದಿಕೊಳ್ಳಲು ಬಹಳಷ್ಟು ಸಹಕಾರಿಯಾಗಿದೆ. ಈವರ ಶಿಷ್ಯನ ಮುಖಾಂತರ ದೂರದರ್ಶನದಲ್ಲಿ ಮೂಡಿಬಂದ " ಹೊಸಬೆಳಕು " ಕೂಡ ಜ್ಞಾನ ಮಾರ್ಗಕ್ಕೆ ನಮ್ಮನ್ನು ಒಯ್ಯುತ್ತದೆ..
ಕ.ವೆಂ.ನಾಗರಾಜ್
ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು.
ಜಗತ್ತೆಲ್ಲವೂ ಪರಮಾಣುವಿನಿಂದ ಆಗಿದೆ ಎಂದರೇ ನಾನು ಪರಮಾಣುವೇ, ನೀನೂ. ಜಗತ್ತೇ ದೇವರಿಂದ ರಚಿತವಾಗಿದೆ ಎಂದರೇ ನಾನು ದೇವರೇ.,ನೀನೂ. - ಎಲ್ಲೋ ಓದಿದ್ದು. ಎಷ್ಟು ಅರ್ಥಪೂರ್ಣವಲ್ಲವೇ.
ಪ್ರತ್ಯುತ್ತರಅಳಿಸಿಜಗತ್ತೆಲ್ಲವೂ ಪರಮಾಣುವಿನಿಂದ ಆಗಿದೆ ಎಂದರೇ ನಾನು ಪರಮಾಣುವೇ, ನೀನೂ. ಜಗತ್ತೇ ದೇವರಿಂದ ರಚಿತವಾಗಿದೆ ಎಂದರೇ ನಾನು ದೇವರೇ.,ನೀನೂ. - ಎಲ್ಲೋ ಓದಿದ್ದು. ಎಷ್ಟು ಅರ್ಥಪೂರ್ಣವಲ್ಲವೇ.
ಪ್ರತ್ಯುತ್ತರಅಳಿಸಿಜಗತ್ತೆಲ್ಲವೂ ಪರಮಾಣುವಿನಿಂದ ಆಗಿದೆ ಎಂದರೇ ನಾನು ಪರಮಾಣುವೇ, ನೀನೂ. ಜಗತ್ತೇ ದೇವರಿಂದ ರಚಿತವಾಗಿದೆ ಎಂದರೇ ನಾನು ದೇವರೇ.,ನೀನೂ. - ಎಲ್ಲೋ ಓದಿದ್ದು. ಎಷ್ಟು ಅರ್ಥಪೂರ್ಣವಲ್ಲವೇ.
ಪ್ರತ್ಯುತ್ತರಅಳಿಸಿಧನ್ಯವಾದ, ಗುರುಪ್ರಸಾದಗೌಡರೇ (ಮನಸಿನ ಮನೆಯವನು).
ಅಳಿಸಿGowripura Chandru
ಅಳಿಸಿಸಿಹಿಯೊಂದೇ ರೂಪ ಬೇರೆ. ಹಾಗೆ ದೇವರೊಂದೇ ರೂಪ ಬೇರೆ. ಅಂದಮೇಲೇಕೆ ತರ್ಕ, ವಿತರ್ಕ
Kavi Nagaraj
ಪೂರ್ಣ ಲೇಖನ ಓದಲು ಕೋರುವೆ, Gowripura Chandru ರವರೇ. ತರ್ಕವಿತರ್ಕ ಬೇಡವೆಂದರೆ ಬೈಬಲ್ಲೇಕೆ, ಗೀತೆಯೇಕೆ, ಕುರಾನ್ ಏಕೆ, ಅಲ್ಲವೇ?
Ndr Swamy
Nice
Shivaram Kaansen
ಅಳಿಸಿAHAM BRAMHAASMI & THATHVAMASI ! Simple words having broad meaning !!