ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಮೇ 17, 2015

ಶ್ರಾದ್ಧ - ಏಕೆ ಮತ್ತು ಹೇಗೆ?

ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದು ಬೆಳೆಯದು ನಾಶವಾಗದು 
ಚಿರಂಜೀವ ನಿತ್ಯ ಶಾಶ್ವತವು ಮೂಢ ||
     ಶ್ರಾದ್ಧ ಎಂಬ ಪದವನ್ನು ಸಾಮಾನ್ಯವಾಗಿ ಮೃತರ ಆತ್ಮಕ್ಕೆ ಸದ್ಗತಿ ಕೋರಿ ಮಾಡುವ ತಿಥಿ, ವೈದಿಕ, ಪುಣ್ಯಸ್ಮರಣೆ, ಶಾಂತಿ, ಉತ್ತರ ಕ್ರಿಯೆ, ಇತ್ಯಾದಿಗಳಿಗೆ ಬಳಸಲಾಗುತ್ತಿದೆ. ಆದರೆ ಶ್ರಾದ್ಧ ಎಂದರೆ ಶ್ರದ್ಧೆಯಿಂದ ಮಾಡುವ ಕೆಲಸ ಎಂದಷ್ಟೇ ಅರ್ಥ. ಶ್ರದ್ಧೆಯಿಂದ ಮಾಡುವ ಯಾವುದೇ ಕೆಲಸವೂ ಶ್ರಾದ್ಧವೇ! ಒಬ್ಬ ಶಿಕ್ಷಕ, ನೌಕರ, ಅಧಿಕಾರಿ, ಕಾರ್ಮಿಕ, ವಿದ್ಯಾರ್ಥಿ, ವ್ಯಾಪಾರಿ, ರಾಜಕಾರಣಿ, ಹೀಗೆ ಯಾರೇ ಆಗಿರಲಿ, ತಮ್ಮ ಕರ್ತವ್ಯ, ಜವಾಬ್ದಾರಿಗಳನ್ನು ಅರಿತು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಅದೇ ನಿಜವಾದ ಶ್ರಾದ್ಧ. ಇರಲಿ ಬಿಡಿ, ಸಾಮಾನ್ಯ ಅರ್ಥದಲ್ಲಿ ಬಳಸುವ ಶ್ರಾದ್ಧದ ಬಗ್ಗೆ ಚಿಂತಿಸೋಣ. ವೈದಿಕ ಧರ್ಮದಲ್ಲಿ ಹೇಳಿರುವ ೧೬ ಸಂಸ್ಕಾರಗಳಲ್ಲಿ ಅಂತ್ಯ ಸಂಸ್ಕಾರವೇ ಮಾನವನ ಕೊನೆಯ ಸಂಸ್ಕಾರವಾಗಿದೆ. ಅಂತ್ಯ ಸಂಸ್ಕಾರವನ್ನು ಹಲವರು ಹಲವು ರೀತಿಯಲ್ಲಿ ಮಾಡುತ್ತಾರೆ. ತಮ್ಮ ಸಂಪ್ರದಾಯಗಳಿಗೆ ಅನುಸಾರವಾಗಿ ಕೆಲವರು ಹೂಳುತ್ತಾರೆ, ಕೆಲವರು ಸುಡುತ್ತಾರೆ, ಕೆಲವರು ಶವಪೆಟ್ಟಿಗೆಗಳಲ್ಲಿಡುತ್ತಾರೆ, ಕೆಲವರು ನದಿಯಲ್ಲಿ ತೇಲಿಬಿಡುತ್ತಾರೆ, ಕೆಲವರು ಹದ್ದುಗಳಿಗೆ ಆಹಾರವಾಗಿಸುತ್ತಾರೆ. ವೇದವು 'ಭಸ್ಮಾಂತಂ ಶರೀರಮ್||' [ಯಜು.೪೦.೧೫]-(ಶರೀರವು ಬೂದಿಯಲ್ಲಿ ಕೊನೆಯಾಗುತ್ತದೆ) ಎಂದು ಹೇಳುತ್ತದೆ. ಮೃತ ಶರೀರವನ್ನು ದಹನದ ಮೂಲಕ ಪಂಚಭೂತಗಳಲ್ಲಿ ಲೀನವಾಗಿಸುವುದು ವೈಜ್ಞಾನಿಕವಾಗಿ ಸೂಕ್ತವೆನಿಸುತ್ತದೆ. ಸತ್ತವರನ್ನೆಲ್ಲಾ ಹೂಳುತ್ತಾ ಹೋದರೆ ಸ್ಮಶಾನಗಳಿಗಾಗಿ ಹೆಚ್ಚು ಹೆಚ್ಚು ಭೂಮಿಯ ಅಗತ್ಯ ಬೀಳುತ್ತಾ ಹೋಗುತ್ತದೆ, ಅಲ್ಲದೆ ಪರಿಸರ ಮಾಲಿನ್ಯವೂ ಆಗುತ್ತದೆ. ನದಿಯಲ್ಲಿ ತೇಲಿಬಿಟ್ಟರೆ ಜಲಮಾಲಿನ್ಯವಾಗುತ್ತದೆ, ಹದ್ದು-ಪಕ್ಷಿಗಳಿಗೆ ಆಹಾರವಾಗಿಸಲು ಮುಕ್ತವಾಗಿರಿಸಿದರೆ ವಾಯುಮಾಲಿನ್ಯವಾಗುತ್ತದೆ. ದಹನದ ಕಾಲದಲ್ಲಿ ಸೂಕ್ತ ಪ್ರಮಾಣದಲ್ಲಿ ತುಪ್ಪ-ಸಾಮಗ್ರಿಗಳನ್ನು ಬಳಸಿದರೆ ದುರ್ಗಂಧದ ಹರಡುವಿಕೆ ಇಲ್ಲವಾಗುತ್ತದೆ. ಹಲವಾರು ಕಾರಣಗಳಿಗಾಗಿ ದಹನದ ಮೂಲಕ ಮಾಡುವ ಸಂಸ್ಕಾರವೇ ಸರಿಯೆಂಬ ವಾದ ಈಗ ವಿದೇಶಗಳಲ್ಲೂ ಕೇಳಿಬರುತ್ತಿದೆ. 
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು? |
ನಿನಗರ್ಥ ನೀಡಿರುವ ಜೀವಾತ್ಮನೇ ನೀನು 
ನೀನಲ್ಲ ತನುವೆಂಬುದರಿಯೋ ಮೂಢ ||
     ಶ್ರಾದ್ಧ ಮಾಡುವುದು ಏತಕ್ಕಾಗಿ ಮತ್ತು ಯಾರಿಗಾಗಿ? ಯೋಚಿಸೋಣ. ದೇಹದಲ್ಲಿ ಪ್ರಾಣವಿರುವವರೆಗೂ ಅದು ವ್ಯಕ್ತಿಯಾಗಿ ಗುರುತಿಸಲ್ಪಡುತ್ತದೆ. ಪ್ರಾಣ ಹೋದ ತಕ್ಷಣದಲ್ಲಿ ಅದು ಹೆಣವೆನಿಸುತ್ತದೆ. ಆತ್ಮವಿಲ್ಲದ ಶರೀರಕ್ಕೆ ಬೆಲೆಯಿಲ್ಲ. ಅದು ಕೇವಲ ಒಂದು ಜಡವಸ್ತು. ಹೀಗಾಗಿ ಅದನ್ನು ಶೀಘ್ರವಾಗಿ ಅಂತ್ಯಸಂಸ್ಕಾರ ಮಾಡಬೇಕಾಗುತ್ತದೆ. ಇಡೀ ಜಗತ್ತನ್ನೇ ಆಳಿದ ಚಕ್ರವರ್ತಿಯ ಹೆಣವೆಂದು ಅದನ್ನು ಯಾರಾದರೂ ಇಟ್ಟುಕೊಳ್ಳಬಯಸುತ್ತಾರೆಯೇ? ಮೃತ ಶರೀರವನ್ನು ದಹನ ಮಾಡಿಯೋ, ಇನ್ನು ಯಾವುದೋ ರೀತಿಯಲ್ಲಿ ವಿಲೇವಾರಿ ಮಾಡಿದ ನಂತರದಲ್ಲಿ ಶ್ರಾದ್ಧಾದಿ ಕರ್ಮಗಳನ್ನು ಮಾಡಿದರೆ ಅದು ಶರೀರಕ್ಕಂತೂ ಅಲ್ಲ. ಇನ್ನು ಆತ್ಮಕ್ಕೆ ಸದ್ಗತಿ ಕೋರಿ ಮಾಡುವ ಕರ್ಮಗಳು ಎಂದೆನ್ನಬಹುದೆ? ವೇದಗಳು ಆತ್ಮ ಅವಿನಾಶಿ, ಅನಾದಿ, ಅನಂತವಾದುದು ಎನ್ನುತ್ತವೆ. ತನ್ನ ಕರ್ಮಫಲಕ್ಕನುಸಾರವಾಗಿ ಜನನ-ಮರಣಗಳ ಚಕ್ರದಲ್ಲಿ ನಿರಂತರ ಸುತ್ತುತ್ತಿರುತ್ತದೆ ಎಂಬುದು ತಿಳಿದವರ ನುಡಿ. ಯಾವುದೇ ಜನ್ಮದಲ್ಲಿ ಯಾವುದೇ ಜೀವ ತನ್ನ ಜೀವಿತಾವಧಿಯಲ್ಲಿ ಗಳಿಸಿದ್ದನ್ನು, ಮನೆ, ಸಂಪತ್ತು, ಮಡದಿ, ಮುಂತಾದುವನ್ನು, ಅಷ್ಟೇ ಏಕೆ, ತನ್ನ ಶರೀರ ಮಾತ್ರವಲ್ಲ, ಕನಿಷ್ಠ ತಾನು ಧರಿಸಿದ್ದ ವಸ್ತ್ರವನ್ನಾಗಲೀ ಸಾಯುವಾಗ ಹೊತ್ತೊಯ್ದುದನ್ನು ಯಾರೂ ಕಂಡಿದ್ದಿಲ್ಲ. ವೇದದ ಈ ಮಂತ್ರ ಹೇಳುತ್ತದೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ ||  (ಅಥರ್ವ.೧೨.೩.೪೮)
     ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಮಧ್ಯವರ್ತಿಗಳ, ಬಂಧುಗಳ ಸಹಾಯದಿಂದ ನಾನು ರಕ್ಷಿತನಾಗಿದ್ದು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದ್ದು, ಬೇಯಿಸಿದ ಅನ್ನ, ಕರ್ಮಫಲವಿಪಾಕವು ಅಡಿಗೆ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂಬುದು ಇದರ ಅರ್ಥ. ವಿಷಯ ಸ್ಷಷ್ಟ - ಮಾಡಿದ್ದುಣ್ಣೋ ಮಹರಾಯ! ಅವನು ಕಟ್ಟಿಕೊಂಡ ಬುತ್ತಿ ಅವನದೇ ಆಗಿದ್ದು ಅವನೇ ತಿನ್ನಬೇಕು! ಜೀವಿ ತಾನು ಜೀವಿತಾವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳಿಗನುಸಾರವಾಗಿ ಫಲ ಅನುಭವಿಸುವುದು ಶತಸ್ಸಿದ್ಧವಂದಾದಾಗ ಅದನ್ನು ಬೇರೊಬ್ಬರು, ಮಧ್ಯವರ್ತಿಗಳು ಶ್ರಾದ್ಧಾದಿ ಕರ್ಮಗಳ ಮೂಲಕ ಬದಲಾಯಿಸಲು ಸಾಧ್ಯವೇ? ಸಾಧ್ಯವೆಂದಾದಲ್ಲಿ, ಇದು ವೇದಗಳು ಮತ್ತು ಭಗವದ್ಗೀತೆ ಉಪದೇಶಿಸುವ ನೀತಿಗೆ ವಿರುದ್ಧವಾಗುತ್ತದೆ. ನನಗೆ ಕಾಯಿಲೆ ಬಂದರೆ ಔಷಧಿಯನ್ನು ನಾನೇ ಕುಡಿದು ಆರೋಗ್ಯ ಸರಿಪಡಿಸಿಕೊಳ್ಳಬೇಕು. ಬೇರೆ ಯಾರೋ ಔಷಧಿ ಕುಡಿದರೆ ನನ್ನ ಕಾಯಿಲೆ ಹೇಗೆ ವಾಸಿಯಾದೀತು? ಬಳಕೆಯಲ್ಲಿರುವ ಶ್ರಾದ್ಧಾದಿ ಕರ್ಮಗಳಿಂದ ಮೃತರ ಆತ್ಮಕ್ಕೆ ಸದ್ಗತಿ ದೊರೆಯುತ್ತದೆಂಬುದು, ಸಾಮಾನ್ಯ ಜ್ಞಾನವನ್ನು, ಕ್ರಿಯೆಗೆ ತಕ್ಕಂತೆ ಪ್ರತಿಕ್ರಿಯೆ ಇರುತ್ತದೆ ಎಂಬುದನ್ನು ಅಲ್ಲಗಳೆಯುವ ಸಂಗತಿ. ಬದುಕಿದ್ದಾಗ ಏನು ಬೇಕಾದರೂ ಮಾಡಿಬಿಡಬಹುದು, ಯಾರ ತಲೆಯನ್ನಾದರೂ ಒಡೆದು ಸಂಪತ್ತು ದೋಚಬಹುದು, ಸತ್ತ ನಂತರದಲ್ಲಿ ಮಕ್ಕಳು ಲಕ್ಷಾಂತರ ರೂ. ವೆಚ್ಚ ಮಾಡಿ ಶ್ರಾದ್ಧ ಮಾಡಿಬಿಟ್ಟರೆ ಎಲ್ಲಾ ಸರಿಹೋಗುತ್ತದೆ ಎಂಬ ವಾದದಂತೆಯೇ ಇದು! ಮೃತ ಶರೀರವನ್ನು ಪಂಚಭೂತಗಳಲ್ಲಿ ವಿಲೀನಗೊಳಿಸುವ ಕ್ರಿಯೆಯೊಂದಿಗೆ ಅಂತ್ಯ್ಟೇಷ್ಟಿ ಕರ್ಮ ಮುಗಿಯುತ್ತದೆ. ನಂತರದಲ್ಲಿ ಮಾಡುವ ಕ್ರಿಯೆಗಳಿಗೆ ಈಗ ತಿಳಿದಿರುವಂತೆ ಸಮರ್ಥನೆ ಕಾಣುವುದಿಲ್ಲ. ಇಂತಹ ಯಾವುದೇ ಕ್ರಿಯೆಗಳು ಮೃತರ ಸಂಬಂಧಿಕರ ಮಾನಸಿಕ ಸಮಾಧಾನಕ್ಕಷ್ಟೇ ಸೀಮಿತವೆಂದರೆ ಕಠಿಣ ಮಾತಾಗುತ್ತದೆ.
     ಶ್ರಾದ್ಧ ಕರ್ಮಾದಿಗಳನ್ನು ಮಾಡುವುದರಿಂದ ಆತ್ಮ ಸದ್ಗತಿ ಪಡೆಯುವುದಿಲ್ಲವೆಂದಾದರೆ ತಲೆ ತಲಾಂತರಗಳಿಂದ ಹಿರಿಯರು ನಡೆಸಿಕೊಂಡು ಬರುತ್ತಿರುವ ಈ ಕ್ರಿಯೆಗಳಿಗೆ ಅರ್ಥವಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಶ್ರಾದ್ಧ ಮಾಡುವ ಮೂಲಕ ಹಿರಿಯರನ್ನು ನೆನೆಸಿಕೊಂಡು ಅವರು ಹಾಕಿಕೊಟ್ಟ ಉತ್ತಮ ರೀತಿಯ ಸಂಸ್ಕಾರಗಳನ್ನು ಮುಂದುವರೆಸಿಕೊಂಡು ಹೋಗಬಹುದು. ಅವರ ನೆನಪನ್ನು ಸ್ಥಾಯಿಯಾಗಿ ಉಳಿಯುವಂತೆ ಮಾಡಬಹುದು, ಅವರು ಪೂರ್ಣ ಮಾಡದೆ ಉಳಿಸಿದ್ದ ಉತ್ತಮ ಕೆಲಸಗಳನ್ನು ಪೂರ್ಣಗೊಳಿಸುವುದು ನಿಜವಾದ ಅರ್ಥದ ಶ್ರಾದ್ಧವೆನಿಸುತ್ತದೆ. ಮೃತರ ನೆನಪಿನಲ್ಲಿ, ಅವರ ಹೆಸರಿನಲ್ಲಿ ಸಮಾಜಕ್ಕೆ ಹಿತವಾಗುವ ಕೆಲಸಗಳನ್ನು ಮಾಡಬಹುದು. ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಮಾಡುವ ಮಂತ್ರೋಚ್ಛಾರಗಳಿಂದ ಮೃತ ಶರೀರಕ್ಕೆ ಯಾವುದೇ ಅನುಕೂಲವಾಗುವುದಿಲ್ಲ. ಅನುಕೂಲವಾಗುವುದೇನಾದರೂ ಇದ್ದರೆ ಅದು ಸಂಸ್ಕಾರ ಕಾರ್ಯ ನೆರವೇರಿಸುವವರಿಗೆ ಅಷ್ಟೆ. ಶಾಶ್ವತವಲ್ಲದ ಜೀವನದ ಅನುಭವವನ್ನು ಈ ಕ್ರಿಯೆ ಉಂಟುಮಾಡುತ್ತದೆ. ಈ ವೇದಮಂತ್ರ ಹೇಳುತ್ತದೆ:
ಸಂ ಗಚ್ಛಸ್ವ ಪಿತೃಭಿಃ ಸಂ ಯಮೇನೇಷ್ಟಾಪೂರ್ತೇನ ಪರಮೇ ವ್ಯೋಮನ್ |
ಹಿತ್ವಾಯಾವದ್ಯಂ ಪುನರಸ್ತಮೇಹಿ ಸಂ ಗಚ್ಛಸ್ವ ತನ್ವಾ ಸುವರ್ಚಾಃ || (ಋಕ್.೧೦.೧೪.೮.)
     ಓ ಜೀವ! ನಿನ್ನನ್ನು ಪಾಲಿಸುವವರೊಂದಿಗೆ, ಅಹಿಂಸಾ, ಸತ್ಯಾದಿ ವ್ರತಗಳೊಂದಿಗೆ, ಪ್ರಾಪ್ತ ಮತ್ತು ಪ್ರಾಪ್ಯ ಅಭಿಲಾಷೆಗಳೊಂದಿಗೆ, ಪರಮರಕ್ಷಕನಾದ ಪ್ರಭುವಿನಲ್ಲಿ ಆಶ್ರಯ ಪಡೆದುಕೋ. ಕೆಟ್ಟದ್ದನ್ನು ಬಿಟ್ಟು, ಮತ್ತೆ ಮನೆಗೆ ಹೋಗು. ಸುವರ್ಚಸ್ವಿಯಾಗಿ, ಶರೀರದೊಂದಿಗೆ ಮುಂದೆ ಸಾಗು ಎಂಬ ಅರ್ಥದ ಈ ಮಂತ್ರ ಸತ್ತವರಿಗೋ, ಬದುಕಿರುವವರಿಗೋ?
     ಅಂತ್ಯ ಸಂಸ್ಕಾರದ ಸಂದರ್ಭದ ಕ್ರಿಯೆಗಳಿಂದ ಜೀವನದ ನಶ್ವರತೆ ಗೋಚರವಾಗುತ್ತದೆ. ಇರುವುದು ಮೂರು ದಿನ, ಅಷ್ಟರಲ್ಲಿ ನಾವು ಚಿರಂಜೀವಿಗಳಂತೆ ವರ್ತಿಸುತ್ತೇವಲ್ಲಾ, ಮಾಡಬಾರದ್ದನ್ನೆಲ್ಲಾ ಮಾಡುತ್ತೇವಲ್ಲಾ ಎಂಬ ಅರಿವು ಮೂಡಿಸುತ್ತದೆ. ಮುಂದಾದರೂ ಅರ್ಥಪೂರ್ಣವಾಗಿ ಬಾಳೋಣವೆಂಬ ಭಾವನೆ ಬರಿಸುತ್ತದೆ. ಇದನ್ನು ಸ್ಮಶಾನ ವೈರಾಗ್ಯವೆನ್ನುತ್ತಾರೆ. ವಿಪರ್ಯಾಸವೆಂದರೆ ಈ ಭಾವನೆ ಹೆಚ್ಚು ಕಾಲ ಇರುವುದಿಲ್ಲ. ನಂತರ ನಾಯಿಯ ಬಾಲದ ಡೊಂಕಿನಂತೆ ಹಿಂದಿನ ಮಾಮೂಲು ಜೀವನದಲ್ಲಿ ತೊಡಗಿಕೊಳ್ಳುತ್ತೇವೆ. 
     ಮೃತರ ಆತ್ಮ ಸದ್ಗತಿ ಅರ್ಥಾತ್ ಮೋಕ್ಷ ಪಡೆಯಲೆಂಬ ಉದ್ದೇಶದಿಂದ ಶ್ರಾದ್ಧ ಮಾಡುವುದೇನೋ ಸರಿ. ಆದರೆ ಹಿಂದೆಯೇ ಹೇಳಿದಂತೆ ಆತ್ಮ ಮೋಕ್ಷ ಪಡೆಯಲು ಸ್ವಪ್ರಯತ್ನದಿಂದ ಮಾತ್ರ ಸಾಧ್ಯ, ಇತರರು ಸದ್ಗತಿ ನೀಡಲಾರರು. ಜನರಲ್ಲಿ ದೇವರ ಬಗ್ಗೆ, ಧರ್ಮದ ಬಗ್ಗೆ ಹಲವಾರು ಜಿಜ್ಞಾಸೆಗಳು, ಕಲ್ಪನೆಗಳು ಇರುವಂತೆಯೇ, ಮೋಕ್ಷದ ಬಗ್ಗೆ ಸಹ ತಮ್ಮದೇ ಆದ ಕಲ್ಪನೆಗಳಿವೆ. ಬೈಬಲ್ಲಿನ ಪ್ರಕಾರ ದೇವರನ್ನು ನಂಬುವವರಿಗಾಗಿ,  ಪ್ರೀತಿಸುವವರಿಗಾಗಿ ಒಂದು ಹೊಸ ಸೃಷ್ಟಿ, ಒಂದು ಹೊಸ ನಗರ, ಒಂದು ಹೊಸ ಸಮುದಾಯವೇ ಒಂದು ಹೊಸ ಸಂವಿಧಾನದಂತೆ ನಿರ್ಮಾಣವಾಗಿರುತ್ತದೆ. ಆ ಸ್ವರ್ಗವು ಕಣ್ಣು ಕಾಣದಿದ್ದ, ಕಿವಿಗೆ ಕೇಳದಿದ್ದ, ಕಲ್ಪನೆಗೆ ಎಟುಕದಿದ್ದ ರೀತಿಯಲ್ಲಿ ಇದ್ದು, ಅದರಲ್ಲೂ ಮೂರು ರೀತಿಯ ಸ್ವರ್ಗಗಳಿರುತ್ತವೆ ಎನ್ನುತ್ತದೆ (ಬೈಬಲ್ಲಿನ Revelation chapter 21). ಕುರಾನಿನ ಪ್ರಕಾರ ಅದರಲ್ಲಿ ಸುಮಾರು ೧೪೦ ಸಲ ಹೇಳಲ್ಪಡುವ ಸ್ವರ್ಗಸದೃಶ ತೋಟದಲ್ಲಿ ದೇವರನ್ನು ನಂಬುವ, ಅವನು ತೋರಿಸಿದ ಮಾರ್ಗದಲ್ಲಿ ನಡೆಯುವವರಿಗೆ ಅವರು ಬಯಸಿದ ಎಲ್ಲಾ ಸುಖ ಸಂಪತ್ತುಗಳೂ ಶಾಶ್ವತವಾಗಿ ಸಿಗುತ್ತವೆ. ಇನ್ನು ದೇವರನ್ನು ನಂಬದವರಿಗೆ ಚಿತ್ರ ವಿಚಿತ್ರ ಶಿಕ್ಷೆಗಳನ್ನು ಕೊಡುವ ನರಕಗಳ ವರ್ಣನೆಗಳೂ ಬೈಬಲ್ ಮತ್ತು ಕುರಾನುಗಳಲ್ಲಿವೆ. ಹಿಂದೂಗಳಲ್ಲಿಯೂ ಸಹ ತಮ್ಮದೇ ಆದ ಭ್ರಾಂತ ಕಲ್ಪನೆಗಳಿವೆ. ತಮ್ಮ ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅನುಸಾರವಾಗಿ ಸತ್ತ ಮೇಲೆ ಕೈಲಾಸವನ್ನೋ, ವೈಕುಂಠವನ್ನೋ, ಇನ್ನು ಯಾವುದೋ ದೇವರ ಆವಾಸಸ್ಥಾನವನ್ನೋ ಸೇರುತ್ತಾರೆ ಎಂದು ನಂಬುತ್ತಾರೆ. ಅಲ್ಲಿ ಹೋಗಿಬಿಟ್ಟರೆ ಆನಂದದಿಂದ ಇದ್ದುಬಿಡಬಹುದು ಎಂದು ಭಾವಿಸುತ್ತಾರೆ. ನರಕದ ವರ್ಣನೆಗಳೂ ಕಾಣಸಿಗುತ್ತವೆ. ಗರುಡಪುರಾಣದಲ್ಲಂತೂ ಪಾಪಿಗಳಿಗೆ ಕೊಡುವ ಭೀಭತ್ಸ ಶಿಕ್ಷೆಗಳ ವರ್ಣನೆಯ ಸರಮಾಲೆಯೇ ಇದೆ. ಈ ಧರ್ಮಗ್ರಂಥಗಳು, ಪುರಾಣಗಳಲ್ಲಿ ಬರುವ ಸ್ವರ್ಗ-ನರಕಗಳ ವಿವರಣೆಗಳು ಮಾನವರು ಧರ್ಮಮಾರ್ಗದಲ್ಲಿ ನಡೆಯಬೇಕೆಂಬ ಕಾರಣಗಳಿಗಾಗಿ ಇರಬಹುದೇ ಹೊರತು ಮತ್ತೇನೂ ಅಲ್ಲ.
     ಹಾಗಾದರೆ ಈ ಶ್ರಾದ್ಧವನ್ನು ಹೇಗೆ ಮಾಡಬೇಕು? ಹಿರಿಯರು ಬದುಕಿದ್ದಾಗ ಅವರನ್ನು ಶ್ರದ್ಧೆಯಿಂದ, ಗೌರವದಿಂದ ನೋಡಿಕೊಳ್ಳುವುದೇ ನಿಜವಾದ ಶ್ರಾದ್ಧ. ಅವರು ಜೀವಂತವಿದ್ದಾಗ ಕೀಳಾಗಿ ಕಂಡು, ಅವಮಾನಿಸಿ, ಸರಿಯಾಗಿ ನೋಡಿಕೊಳ್ಳದೆ, ಸತ್ತಾಗ ವಿಜೃಂಭಣೆಯಿಂದ ತಿಥಿ ಮಾಡಿದರೆ ಏನು ಪ್ರಯೋಜನ? ಜಗಳದ ಸಂದರ್ಭದಲ್ಲಿ ಬಳಸುವ 'ನಿನ್ನ ತಿಥಿ ಮಾಡಿಬಿಡ್ತೀನಿ' ಎಂಬ ಮಾತಿಗೂ ಈ ರೀತಿಯ ಕೃತಿಗೂ ಹೆಚ್ಚು ವ್ಯತ್ಯಾಸವೇನಿಲ್ಲ. ಸತ್ತ ಮೇಲೆ ಭೂತ-ಪ್ರೇತವಾಗಿ ಕಾಡಿಯಾರು ಎಂಬ ಭಯದಿಂದ ಈ ಕ್ರಿಯೆಗಳನ್ನು ಮಾಡುವವರೂ ಇರುತ್ತಾರೆ. ಇಂತಹ ಆಚಾರಗಳಲ್ಲಿ ನಂಬಿಕೆಯಿಲ್ಲದವರೂ ಸಹ ಇತರರು ಏನಾದರೂ ಅಂದುಕೊಂಡಾರು ಎಂಬ ಲೋಕಾಪವಾದದ ಭಯದಿಂದ ಮಾಡುವವರೂ ಇರುತ್ತಾರೆ. ಮಾಡಿದರೆ ಕಳೆದುಕೊಳ್ಳುವುದೇನು ಎಂದು ಮಾಡುವವರೂ ಸಿಗುತ್ತಾರೆ. ಉಪನಯನ ಸಂಸ್ಕಾರದ ಸಂದರ್ಭದಲ್ಲಿ ಧರಿಸುವ ಯಜ್ಞೋಪವೀತದ ಮೂರು ಎಳೆಗಳು ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ತೀರಿಸಲು ಬದ್ಧತೆಯನ್ನು ಜ್ಞಾಪಿಸುವ ಸಾಧನ ಮತ್ತು ಅವುಗಳನ್ನು ತೀರಿಸುವ ಸಂಕಲ್ಪದ ಸಂಕೇತ. ಇವು ಕೇವಲ ಒಂದು ನಿರ್ದಿಷ್ಟ ವರ್ಗ ಅಥವ ಲಿಂಗಕ್ಕೆ ಸೀಮಿತವೆಂದರೆ ಅದಕ್ಕೆ ಅರ್ಥವಿಲ್ಲ.  ದೇವಋಣವನ್ನು ತೀರಿಸುವುದೆಂದರೆ ಭಗವಂತನ ಸೃಷ್ಟಿಯಾದ ಪಂಚಭೂತಗಳಿಂದ ನಿರ್ಮಿತವಾಗಿರುವ ಶರೀರದ ಋಣ ತೀರಿಸುವ ಸಲುವಾಗಿ ಪಂಚಭೂತಗಳಾದ ಜಲ, ನೆಲ, ಆಕಾಶ, ಅಗ್ನಿ, ವಾಯುಗಳ ಸದುಪಯೋಗ ಮಾಡಿಕೊಳ್ಳುವುದರೊಟ್ಟಿಗೆ ಅವುಗಳ ರಕ್ಷಣೆಯ ಹೊಣೆಯನ್ನೂ ಹೊರುವುದು. ಪಿತೃಋಣವನ್ನು ತೀರಿಸುವುದೆಂದರೆ ನಮ್ಮ ಹುಟ್ಟಿಗೆ ಮಾಧ್ಯಮಗಳಾದವರಿಗೆ, ಪ್ರೌಢಾವಸ್ಥೆಗೆ ಬರುವವರೆಗೂ ಮತ್ತು ನಂತರದಲ್ಲೂ ಎಲ್ಲಾ ರೀತಿಯ ಸೇವೆ ಮಾಡಿ, ಪಾಲಿಸಿ, ಪೋಷಿಸಿದವರಿಗೆ ಪ್ರತಿಯಾಗಿ ಅವರ ಸೇವೆಯನ್ನು ಮಾಡುತ್ತಾ ಸಂತೋಷದಿಂದ ಇರುವಂತೆ ನೋಡಿಕೊಳ್ಳುವುದು. ಇಂದಿನ ಪ್ರಗತಿಗೆ, ಉನ್ನತಿಗೆ ಕಾರಣರಾದ, ಸುಯೋಗ್ಯ ಮಾರ್ಗದರ್ಶನ ಮಾಡಿದ ಎಲ್ಲಾ ಆಚಾರ್ಯರುಗಳ ಪ್ರತಿ ಶ್ರದ್ಧಾಗೌರವಗಳನ್ನು ಹೊಂದುವುದು ಮತ್ತು ಮುಖ್ಯವಾಗಿ ನಮಗೆ ತಿಳಿದ ಜ್ಞಾನವನ್ನು ಮುಂದಿನವರಿಗೆ ತಿಳಿಸುವ, ಹಂಚುವ ಕೆಲಸವನ್ನು ಮಾಡುವುದು  ಆಚಾರ್ಯಋಣವನ್ನು ತೀರಿಸುವ ರೀತಿಯಾಗಿದೆ. ಪಿತೃಋಣವೆಂದರೆ ಸತ್ತ ನಂತರ ಮಾಡುವ ಕ್ರಿಯಾಕರ್ಮಗಳಲ್ಲ, ಬದುಕಿದ್ದಾಗ ಸಲ್ಲಿಸಬೇಕಾದ ಸೇವೆಯಾಗಿದೆ. ನಿಜವಾದ ಶ್ರಾದ್ಧವೆಂದರೆ ಇದೇ! ಸತ್ಸಂಗಗಳು, ವೇದಾಧ್ಯಾಯಿ ಸುಧಾಕರ ಶರ್ಮರು, ಪಂ. ಸುಧಾಕರ ಚತುರ್ವೇದಿಯವರು ಮುಂತಾದವರ ಮಾರ್ಗದರ್ಶನ, ಓದಿದ ಪುಸ್ತಕಗಳು, ಇತ್ಯಾದಿ ಪ್ರಭಾವಗಳಿಂದ ಹಾಗೂ ಮನನ, ಮಂಥನಗಳಿಂದ ಒಡಮೂಡಿದ ಮನದ ಭಾವನೆಗಳನ್ನು ಹಂಚಿಕೊಂಡಿರುವೆ. ಶ್ರಾದ್ಧವನ್ನು ಹೇಗೆ ಮಾಡಬೇಕೆಂಬುದು ಓದುಗರ ವಿವೇಚನೆಗೆ ಬಿಟ್ಟಿದ್ದು.
     ಕೆಲವು ಪ್ರಸ್ತುತವೆನಿಸಿದ ಘಟನೆಗಳನ್ನು ನೋಡೋಣ. ಸಂನ್ಯಾಸಿಯ ರೀತಿಯಲ್ಲಿ ಬಾಳಿ ಅನೇಕರಿಗೆ ಜೀವನ ದರ್ಶನ ಮಾಡಿಸಿದ ದಿ. ಬೆಳಗೆರೆ ಕೃಷ್ಣಶಾಸ್ತ್ರಿಗಳು ಯಾವುದೇ ಶ್ರಾದ್ಧಾದಿ ಕರ್ಮಗಳಲ್ಲಿ ನಂಬಿಕೆಯಿರಿಸಿರಲಿಲ್ಲ. 'ಸತ್ತಾಗ ಬೆಂಕಿಗೆ ಬಿಸಾಕಿ' ಎನ್ನುತ್ತಿದ್ದವರು. ಅವರ ಅಭಿಲಾಷೆಯಂತೆಯೇ ನಡೆಯಿತು. ಇತ್ತೀಚೆಗೆ ನಿಧನರಾದ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರೂ ಸಹ ತಾವು ಸತ್ತ ನಂತರದಲ್ಲಿ ಯಾವುದೇ ಸಾಂಪ್ರದಾಯಿಕ ಕ್ರಿಯೆಗಳನ್ನು ಮಾಡದೇ, ತಮ್ಮ ಶರೀರವನ್ನು ಅಗ್ನಿಗೆ ಅರ್ಪಿಸಬೇಕೆಂದು ಬಯಸಿದ್ದರು. ಹಾಗೆಯೇ ಆಯಿತು. ಕೆಲವು ವರ್ಷಗಳ ಹಿಂದೆ ಮೃತ ತಂದೆಯವರ ದೇಹವನ್ನು ಮೃತರ ಇಚ್ಛೆಯಂತೆಯೇ ಅವರ ಮಗ ಡಾ. ಮಹಾಂತೇಶ ರಾಮಣ್ಣವರ್ ಅವರೇ ಬೆಳಗಾವಿಯ ಕಂಕನವಾಡಿ ಆಯರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಮೃತರ ಎರಡನೆಯ ವರ್ಷದ ಪುಣ್ಯತಿಥಿಯ ದಿನದಂದು ಅಂಗವಿಚ್ಛೇದನ ಮಾಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದರು. ಹಾಸನದ ಜನಹಿತ ಪತ್ರಿಕೆಯ ಸಂಪಾದಕ ಮತ್ತು ಬಂಧು ಹೆಚ್.ಎಸ್. ಪ್ರಭಾಕರರವರು ತಮ್ಮ ಕಿರಿಯ ಸಹೋದರ ರಮೇಶಬಾಬು ನಿಧನರಾದ ಸಂದರ್ಭದಲ್ಲಿ ಅವರ ಇಚ್ಛೆಯಂತೆ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದರು. ಉಳಿದ ಕ್ರಿಯಾಕರ್ಮಗಳನ್ನು ಸಾಂಪ್ರದಾಯಿಕವಾಗಿ ಮಾಡಿದರೂ ವೈಕುಂಠ ಸಮಾರಾಧನೆಯನ್ನು ವಿಶಿಷ್ಟ ರೀತಿಯಲ್ಲಿ ಮಾಡಿದರು. ಮೂರ್ಛೆ ರೋಗದಿಂದ ನರಳಿ ಕೊನೆಯುಸಿರೆಳೆದಿದ್ದವರು ರಮೇಶಬಾಬು. ಮೂರ್ಛೆ ರೋಗದ ಬಗ್ಗೆ ಜನರಲ್ಲಿ ಇರುವ ತಪ್ಪು ತಿಳಿವಳಿಕೆಗಳನ್ನು ಹೋಗಲಾಡಿಸುವುದರೊಂದಿಗೆ ಅನುಸರಿಸಬೇಕಾದ ಚಿಕಿತ್ಸಾಕ್ರಮದ ಬಗ್ಗೆ ಡಾ. ಹಾಲಪ್ರಶಾಂತರಿಂದ, ದೇಹದಾನದ ಮಹತ್ವದ ಕುರಿತು ಹಿಮ್ಸ್ ಸಹಾಯಕ ಪ್ರೊಫೆಸರ್ ಡಾ. ಸಿ.ಎಸ್. ಮಂಜುನಾಥರವರಿಂದ ಮತ್ತು ವೇದದ ಹಿನ್ನೆಲೆಯಲ್ಲಿ ದೇಹ, ಜೀವಗಳ ಸಂಬಂಧ, ಶ್ರಾದ್ಧ ಎಂದರೇನು ಎಂದು ವಿವರಿಸಲು ಬೇಲೂರಿನ ವೇದಾಧ್ಯಾಯಿ ವಿಶ್ವನಾಥ ಶರ್ಮರಿಂದ ಸಾರ್ವಜನಿಕ ಉಪನ್ಯಾಸಗಳನ್ನು ಏರ್ಪಡಿಸಿ ಪ್ರಭಾಕರ್ ವಿಶಿಷ್ಟತೆ ಮೆರೆದರು. ವೈಯಕ್ತಿಕವಾಗಿ ನಾನಂತೂ ಸತ್ತ ನಂತರದಲ್ಲಿ ಶ್ರಾದ್ಧಾದಿ ಕರ್ಮಗಳಿಗೆ ಸಮಯ, ಹಣ, ಶ್ರಮ ವಿನಿಯೋಗಿಸದೆ ಜನೋಪಯೋಗಿ ಕಾರ್ಯಗಳಿಗೆ ಮನ ಹರಿಸುವಂತೆ ನನ್ನ ಬಂಧುಗಳಿಗೆ ತಿಳಿಸಿರುವೆ. ತಲೆ ತಲಾಂತರಗಳಿಂದ ನಡೆದುಕೊಂಡು ಬರುತ್ತಿರುವ ಸಾಂಪ್ರದಾಯಿಕ ಕ್ರಿಯೆಗಳನ್ನು ಅರ್ಥಪೂರ್ಣವಾಗಿಸುವತ್ತ ಮುನ್ನಡೆಸುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ. ವಿಚಾರ ಮಾಡೋಣ.
-ಕ.ವೆಂ.ನಾಗರಾಜ್.
**************
[ಚಿತ್ರಕೃಪೆ: http://technoayurveda.wordpress.com/2010/11/11/dissect/]
ದಿನಾಂಕ 08.04.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:




4 ಕಾಮೆಂಟ್‌ಗಳು:

  1. ಮೋಕ್ಷ ಸ್ವರ್ಗ ನರಕಗಳ ಕಲ್ಪನೆ ಜನರು ಧರ್ಮಮಾರ್ಗದಲ್ಲಿ ನಡೆಯಲಿ ಎಂಬುವುದಕ್ಕಾಗಿಯೇ ಇರಬಹುದು. ಯಾವುದೋ ಒಂದು ಸಣ್ಣ ಜೀವರಾಸಾಯನಿಕ ಕ್ರಿಯೆಯಿಂದಷ್ಟೇ ಜನನ. ಪರಿಸರಕ್ಕನುಗುಣವಾಗಿ ನಡೆವ ಜೀವರಾಸಾಯನಿಕ ಕ್ರಿಯೆಗಳಿಂದಲೇ ಹೀಗೆಲ್ಲ ಯೋಚಿಸುತ್ತೇವೆ. ಶವವಾದಾಗ ಆ ಕ್ರಿಯೆ ಮುಗಿದಿರುತ್ತದೆಯಾದರೂ ಬದುಕಿದ್ದಾಗ ಸುತ್ತಮುತ್ಲಲ ಪರಿಸರದ ಮೇಲೆ ಆ ಕ್ರಿಯೆಯ ಪರಿಣಾಮದ ನೆರಳಿರುತ್ತದೆ ಅಷ್ಟೆ. ಯಾವುದರಲ್ಲೂ ಇಂತಹದೇ ಎಂಬ ಸಾರ್ವಕಾಲಿಕ ಸತ್ಯ ಇರಲಾರದು

    ಪ್ರತ್ಯುತ್ತರಅಳಿಸಿ
  2. ಕೆಲವು ವೇದಗಳ ವಿಚಾರ ತಿಳಿಸಿ ಅಂದಿನಿಂದ ಅದರ ಕುರಿತು ಇದ್ದ ವಿಚಾರತೆಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಪ್ರತಿಕ್ರಿಯೆಗೆ ವಂದನೆಗಳು, ಮನಸಿನಮನೆಯವರಿಗೆ.

      ಅಳಿಸಿ
    2. Vasudevarao Rao
      ಉತ್ತಮ ಲೇಖನ. ಸಂಪ್ರದಾಯಕ್ಕೆ ಕಟ್ಟು ಬಿದ್ದು ಅರ್ಥಹೀನ ಆಚರಣೆಗಳಲ್ಲಿ ತೊಡಗಿರುವವರಿಗೆ ಇದೊಂದು ಉತ್ತಮ ಮಾರ್ಗದರ್ಶಿಯಾಗಬಲ್ಲದು.

      ಅರುಣ್ ಕುಮಾರ್ ಹೆಚ್ ಎಸ್
      arthapoorna lekhana

      Shivaprasad Shagrithaya
      ನನಗೆ ತುಂಬಾ ಉಪಕಾರವಾಯ್ತ ಸಾರ್ ನಾನು ಈ ಸಂಬಂಧ ಹುಡುಕುತ್ತಿದ್ದೆ....ಜುಲೈ ತಿಂಗಳಲ್ಲಿ ತಂದೆಯವರ ವರ್ಷಾಂತಿಕ ಅದರ ಮೊದಲು ಪೂರ್ತಿ ಮಾಹಿತಿ ಬೇಕಿತ್ತು ..

      ಅಳಿಸಿ