ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಮೇ 3, 2015

ಮೋಹದ ಬಲೆ


"ನಿನಗೆ ಅತ್ಯಂತ ಇಷ್ಟವಾದ ವ್ಯಕ್ತಿ ಯಾರು?"

     ಈ ಪ್ರಶ್ನೆಗೆ ಉತ್ತರವಾಗಿ ಯಾರೋ ಒಬ್ಬ ಸುಪ್ರಸಿದ್ಧ ಜನನಾಯಕನ, ಗುರು, ನಟ, ತಂದೆ-ತಾಯಿ, ಬಂಧು, ಗಂಡ/ಹೆಂಡತಿ, ಮಕ್ಕಳು, ಮೊಮ್ಮಕ್ಕಳು, ಪ್ರಿಯಕರ/ಪ್ರೇಯಸಿ, ಇತ್ಯಾದಿಗಳ ಪೈಕಿಯೋ ಅಥವ ಇನ್ನು ಯಾರದಾದರೋ ಹೆಸರು ಹೇಳಿಯಾರು. ಮುಂದೆ ಈ ಪ್ರಶ್ನೆ ಕೇಳಿ:
"ನೀನು ಅಥವ ನಿನಗೆ ಇಷ್ಟವಾದವರು ಇಬ್ಬರಲ್ಲಿ ಒಬ್ಬರನ್ನು ಮಾತ್ರ ಆರಿಸಿಕೊಳ್ಳಬೇಕು. ಯಾರನ್ನು ಆರಿಸಿಕೊಳ್ಳುವೆ?"
     ಇದಕ್ಕೆ ತಕ್ಷಣ ಉತ್ತರಿಸದಿದ್ದರೂ, ಆಲೋಚಿಸಿ ತಡೆದು ಬರುವ ಉತ್ತರ ಸಹಜವಾಗಿ 'ನನ್ನನ್ನೇ' ಎಂಬುದೇ.
"ದೇವರು ದೊಡ್ಡವನೋ? ನೀನು ದೊಡ್ಡವನೋ?"
"ದೇವರೇ ದೊಡ್ಡವನು."
"ದೇವರು ಅಥವ ನೀನು - ಹೇಳು, ಇಬ್ಬರಲ್ಲಿ ನಿನಗೆ ಯಾರು ಬೇಕು?"
     ಗೊಂದಲಕ್ಕೆ ಒಳಗಾದರೂ ಅಂತಿಮವಾಗಿ ಬರುವ ಉತ್ತರ 'ನಾನೇ' ಎಂಬುದೇ ಆಗಿರುತ್ತದೆ. 'ನಾನು' ಇದ್ದರೆ ತಾನೇ, ನನಗೆ ಇಷ್ಟವಾದವರು, ದೇವರು, ಗೀವರುಗಳೆಲ್ಲಾ ಇರುವುದು! ನಾನೇ ಇಲ್ಲದಿದ್ದರೆ ಅವು ಯಾವುದಕ್ಕೂ ಅರ್ಥವೇ ಇರುವುದಿಲ್ಲ. 'ನಾನು' ಮಹತ್ವದವನಾಗಿರದಿರಲಿ, ಶ್ರೇಷ್ಠನಾಗಿರದಿರಲಿ, ಹೇಗೇ ಇರಲಿ, ಪ್ರಪಂಚದಲ್ಲಿ 'ನಾನು' ಎಲ್ಲರಿಗಿಂತ ಹೆಚ್ಚಾಗಿ ಇಷ್ಟಪಡುವುದು 'ನನ್ನನ್ನೇ'. 'ನನ್ನ' ನಂತರದಲ್ಲಿ ಬೇರೆಯವರು ಬರುತ್ತಾರೆ! ಅರಿಷಡ್ವರ್ಗದಲ್ಲಿ ಒಂದೆನಿಸಿದ ಮೋಹದ ಬೀಜರೂಪ ಇಲ್ಲಿದೆ. ಎಲ್ಲರಿಗಿಂತ ಇಷ್ಟಪಡುವ ವ್ಯಕ್ತಿ 'ನಾನೇ' ಎಂಬುದರಲ್ಲಿ ಒಳ್ಳೆಯ ಆಯ್ಕೆಯಿದೆ. ಏಕೆಂದರೆ ಇಷ್ಟಪಡುವ ಇತರರು ಮುಂದೊಮ್ಮೆ ಯಾವುದೋ ಕಾರಣಗಳಿಗಾಗಿ ಇಷ್ಟವಾಗದೇ ಹೋಗಬಹುದು. ಅಥವ ಅವರುಗಳಿಗೇ ನಾವು ಇಷ್ಟವಾಗದೇ ಹೋಗಬಹುದು. ಪ್ರೀತಿಸಿದ ಹುಡುಗ/ಹುಡುಗಿ ಕೈಕೊಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರಲ್ಲಾ, ಅದು ತಮಗಿಂತ ಬೇರೆಯವರನ್ನು ಹೆಚ್ಚು ಪ್ರೀತಿಸುವುದನ್ನು ತೋರಿಸುವುದಲ್ಲವೇ ಎಂದು ಕೇಳಬಹುದು. ಇದಕ್ಕೆ ಉತ್ತರ 'ಖಂಡಿತಾ ಅಲ್ಲ' ಎನ್ನಬೇಕಾಗುತ್ತದೆ. ಪ್ರೀತಿಸಿದ ಹುಡುಗ/ಹುಡುಗಿ ಸಿಗದಿದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವವರು ತಮ್ಮನ್ನು ತಾವು ಹೆಚ್ಚು ಇಷ್ಟಪಡುವುದನ್ನು ತೋರಿಸುತ್ತದೆ. ನಿಧಾನವಾಗಿ ಯೋಚಿಸಿದರೆ ಈ ಅಂಶ ಸ್ಪಷ್ಟವಾಗುತ್ತದೆ. 
ನನದು ನನ್ನವರೆಂಬ ಭಾವವದು ಮೋಹ
ಪರದಾಟ ತೊಳಲಾಟ ಸಂಕಟಕೆ ಮೂಲ|
ಹೆಣ್ಣು ಜೇಡಕೆ ತುತ್ತು ಗಂಡು ಸಂಗಮದಿ 
ಜೀವಿಯ ಮೋಹಕೆ ಜೀವವೆ ಬಲಿ ಮೂಢ|| 
     ಮನುಷ್ಯನ ಆರು ಶತ್ರುಗಳಲ್ಲಿ ಒಂದಾದ ಈ ಮೋಹ ಅನ್ನುವುದು ಕೆಟ್ಟದ್ದೇ? ಈ ಪ್ರಶ್ನೆ ಹರಿತವಾದ ಚಾಕು ಒಳ್ಳೆಯದೋ, ಕೆಟ್ಟದೋ ಎಂದು ಕೇಳುವುದಕ್ಕೆ ಸಮನಾಗಿದೆ. ಚಾಕುವನ್ನು ಹಣ್ಣು, ತರಕಾರಿ ಹೆಚ್ಚಲೂ ಬಳಸಬಹುದು, ಯಾರನ್ನೋ ಕೊಲೆ ಮಾಡಲೂ ಬಳಸಬಹುದು. ಇದು ಚಾಕುವಿನ ತಪ್ಪೇ? ಖಂಡಿತಾ ಅಲ್ಲ. ಬಳಸುವವರ ಬಳಸುವ ರೀತಿಯಲ್ಲಿನ ತಪ್ಪಲ್ಲವೇ? ಅದೇ ರೀತಿ ಮೋಹವಶನಾದ ವ್ಯಕ್ತಿ ಮೋಹವನ್ನು ಯಾವ ರೀತಿಯಲ್ಲಿ ತೋರ್ಪಡಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅದು ಒಳ್ಳೆಯದೋ, ಕೆಟ್ಟದೋ ಆಗುತ್ತದೆ. ಈ ಮೋಹವನ್ನು ಆತ್ಮೋದ್ಧಾರಕ್ಕೂ ಬಳಸಬಹುದು, ಕೇವಲ ತನ್ನೊಬ್ಬನ ಉದ್ಧಾರಕ್ಕಾಗಿ ಇತರರನ್ನು ಹಾಳು ಮಾಡಲೂ ಬಳಸಬಹುದು. 'ತಾನು' ಮತ್ತು 'ತನ್ನೊಬ್ಬನಲ್ಲಿ' ಮೋಹವಿರುವವನು ಪರಮಸ್ವಾರ್ಥಿಯಾಗಿರುತ್ತಾನೆ. ಇಂತಹವನು ತನ್ನೊಬ್ಬನ ಹಿತಕ್ಕಾಗಿ ಯಾರಿಗಾದರೂ ಕೇಡು ಬಗೆಯಲು ಹಿಂದೆಗೆಯಲಾರ. ಈ ಭಾವ ಉನ್ಮಾದ ಸ್ಥಿತಿ ತಲುಪಿದಾಗ ಆಸ್ತಿಗಾಗಿ, ಹಣಕ್ಕಾಗಿ ಸ್ವಂತ ತಂದೆ/ತಾಯಿ/ಬಂಧು/ಬಳಗ ಯಾರನ್ನಾದರೂ ಕರುಣೆಯಿಲ್ಲದೆ ಹತ್ಯೆಗೈಯುವುವರನ್ನು ಕಾಣುತ್ತೇವೆ. ಪತ್ನಿಯನ್ನೇ ವೇಶ್ಯಾವಾಟಿಕೆಗೆ ಮಾರುವ ಕಟುಕರೂ ಕಾಣಸಿಗುತ್ತಾರೆ. ಇತಿಹಾಸದ ಪುಟಗಳಲ್ಲಿ ಇದಕ್ಕೆ ಹೇರಳವಾದ ಉದಾಹರಣೆಗಳು ಸಿಗುತ್ತವೆ. ಅಧಿಕಾರಕ್ಕಾಗಿ ಸ್ವಂತ ತಂದೆ ಷಹಜಹಾನನನ್ನೇ ಸೆರೆಯಲ್ಲಿರಿಸಿದ, ಸೋದರರ ವಿರುದ್ಧವೇ ಯುದ್ಧ ನಡೆಸಿದ, ಸ್ವಂತ ಸೋದರರಾದ ದಾರಾ ಶಿಕೋ ಮತ್ತು ಮುರಾದ ಬಕ್ಷರನ್ನೇ ಇಸ್ಲಾಮ್ ವಿರೋಧಿಗಳೆಂಬ ಹಣೆಪಟ್ಟಿ ಹಚ್ಚಿ ಸಾಯಿಸಿದ ಔರಂಗಜೇಬನ ಉದಾಹರಣೆಯನ್ನೂ ಕೊಡಬಹುದು.
ಮೋಹಪಾಶದ ಬಲೆಯಲ್ಲಿ ಸಿಲುಕಿಹರು ನರರು
ಮಡದಿ ಮಕ್ಕಳ ಮೋಹ ಪರಿಜನರ ಮೋಹ|
ಜಾತಿ-ಧರ್ಮದ ಮೋಹ ಮಾಯಾವಿ ಮೋಹವೇ
ಜಗದ ದುಸ್ಥಿತಿಗೆ ಮೂಲವೋ ಮೂಢ|| 
     ಮೋಹವೆಂಬ ಮಾಯಾಮೋಹಿನಿಯ ಸೆಳೆತಕ್ಕೆ ಒಳಗಾಗದವರು ಯಾರು? ಮೋಹ ಹೆಚ್ಚಾದಷ್ಟೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಹೆಚ್ಚಾಗುತ್ತಾ ಹೋಗುತ್ತದೆ. ಕೇವಲ ತನ್ನೊಬ್ಬನ ಮೇಲಿನ ಮೋಹದ ನಂತರದ ಬೆಳವಣಿಗೆ ತನ್ನ ಕುಟುಂಬದವರ, ಪರಿವಾರದ ಜನರ ಮೇಲಿನ ಮೋಹ. ಇದು ತನ್ನೊಬ್ಬನ ಮೇಲಿನ ಮೋಹಕ್ಕಿಂತ ಸ್ವಲ್ಪ ಉತ್ತಮ. ಏಕೆಂದರೆ ಇದರಲ್ಲಿ ಕುಟುಂಬದ ಜನರೂ 'ತನ್ನೊಡನೆ' ಸೇರಿರುತ್ತಾರೆ. ಈ ಕುಟುಂಬದ ಮೋಹ ಸಹ ಹಾನಿಕರವೇ. ಧೃತರಾಷ್ಟ್ರನ ಮಕ್ಕಳ ಮೇಲಿನ ಮೋಹ 'ಮಹಾಭಾರತ'ಕ್ಕೆ ಕಾರಣವಾಯಿತು. ಮೋಹಾಂಧನಾದ ಧೃತರಾಷ್ಟ್ರನ ಪುತ್ರ ವ್ಯಾಮೋಹ ನ್ಯಾಯ, ನೀತಿ, ಧರ್ಮವನ್ನೇ ತಿಂದದ್ದಲ್ಲದೆ ಕೊನೆಗೆ ಅವನ ಮಕ್ಕಳನ್ನೇ ನುಂಗಿ ನೀರು ಕುಡಿಯಿತು. ನಮ್ಮ ಜನನಾಯಕರುಗಳ ಕುಟುಂಬದ ಮೋಹ ದೇಶ, ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಸಲ್ಲಬೇಕಾಗಿದ್ದ ಹಣದ ದೊಡ್ಡ ಭಾಗವನ್ನು ಕಮಿಷನ್, ಪರ್ಸೆಂಟೇಜು, ಕಾಣಿಕೆಗಳ ರೂಪದಲ್ಲಿ ನುಂಗಿ ಹಾಕುತ್ತಿದೆ. ಮೊದಲು ಏನೇನೂ ಅಲ್ಲದಿದ್ದವರು ಇಂದು ಎಷ್ಟು ಕೋಟಿಗಳ ಒಡೆಯರೋ ಯಾರಿಗೂ ಲೆಕ್ಕ ಗೊತ್ತಿಲ್ಲ. ಜನಸೇವೆ, ದೀನ-ದಲಿತೋದ್ಧಾರ, ಜಾತ್ಯಾತೀತತೆ, ಮುಂತಾದ ಮರುಳು ಮಾಡುವ ಮುಖವಾಡಗಳೊಂದಿಗೆ ಜನರ ತಲೆಯ ಮೇಲೆ ಟೋಪಿಯಿಟ್ಟು ತಾವು ಕಿರೀಟ ಧರಿಸುತ್ತಾರೆ.
     ಸ್ವಂತದ್ದಾಯಿತು, ಕುಟುಂಬದ್ದಾಯಿತು, ಇನ್ನು ಜಾತಿ, ಮತ, ಧರ್ಮ, ಸಮುದಾಯ ಇತ್ಯಾದಿಗಳ ಮೇಲಿನ ಮೋಹ ಸಹ ಅಪಾಯಕಾರಿಯೇ. ಸ್ವಂತದ ಜಾತಿ, ಮತಗಳನ್ನು ಪ್ರೀತಿಸಲಿ ಪರವಾಗಿಲ್ಲ. ಆದರೆ, ಇದು ಇತರರ ಮೇಲಿನ ದ್ವೇಷವಾಗಿ ರೂಪುಗೊಂಡರೆ ಸಮಾಜದಲ್ಲಿ ಶಾಂತಿಗೆ ಎಡೆಯೆಲ್ಲಿ? ಅಧಿಕಾರಸ್ಥ ರಾಜಕಾರಣಿಗಳು ಮಾಡುತ್ತಿರುವ ಮೊದಲ ಕೆಲಸವೆಂದರೆ ತಮ್ಮ ಸಿಬ್ಬಂದಿಗಳು, ಸಹಕಾರಿಗಳು, ಹಿತೈಷಿಗಳು, ಸಲಹೆ ಕೊಡುವವರು ಮುಂತಾದವರು ತಮ್ಮ ಜಾತಿಯವರೇ ಆಗಿರುವಂತೆ ನೋಡಿಕೊಳ್ಳುವುದು. ಇವರೇ 'ಜಾತ್ಯಾತೀತತೆ'ಯ ತುತ್ತೂರಿ ಊದುವವರು. ಈಗಂತೂ ಮತ/ಧರ್ಮದ ಹೆಸರಿನಲ್ಲಿ ಘೋರ ರಕ್ತಪಾತಗಳೇ ಆಗುತ್ತಿವೆ. ಇದು ಸಮುದಾಯ ಮೋಹದ ಪರಾಕಾಷ್ಠೆ. ಭಯೋತ್ಪಾದಕರ, ಉಗ್ರಗಾಮಿಗಳ ಉಪಟಳ ಇಂದು ಕೇವಲ ಒಂದು ದೇಶದ್ದಲ್ಲ, ಇಡೀ ಪ್ರಪಂಚದ ಸಮಸ್ಯೆಯಾಗಿಬಿಟ್ಟಿದೆ. ಇದನ್ನು ತಡೆಯಲು ಎಲ್ಲಾ ರಾಷ್ಟ್ರಗಳೂ ಕೈಜೋಡಿಸಲೇ ಬೇಕಾದ ಸನ್ನಿವೇಶ ದೂರವೇನಿಲ್ಲ. ಹೀಗೆ ಮಾಯಾವಿ ಮೋಹಿನಿ ರಮಣೀಯ ಮೋಹದ ಬಲೆ ಬೀಸಿ ಜಗತ್ತನ್ನೇ ಕುಣಿಸುತ್ತಿದ್ದಾಳೆ. ಈ ಮಾಯೆಗೆ ಮರುಳಾಗಿ ಗೊತ್ತಿದ್ದೂ ತಪ್ಪು ಮಾಡುವವರ ಅಂತರಂಗಗಳು ಈ ಮೋಹಕ್ಕೆ ಸೆರೆಯಾಳಾಗಿವೆ.
     ಈ ಜಗತ್ತು ಅದ್ಭುತ ವೈಚಿತ್ರ್ಯಗಳಿಂದ ಕೂಡಿದೆ. ಇಡೀ ಜೀವರಾಶಿಯನ್ನು ಪ್ರೀತಿಸುವ, ಸಕಲರ ಸುಖವನ್ನೂ ಬಯಸುವ ಸಾಧು-ಸಂತರುಗಳು, ದಾರ್ಶನಿಕರನ್ನೂ ಈ ಜಗತ್ತು ಹೊಂದಿದೆ. ಇವರ ಈ ಸುಮೋಹ ಜನರನ್ನು ಸರಿದಾರಿಯೆಡೆಗೆ ನಡೆಯಲು ಸಹಕಾರಿಯಾಗಿದೆ. ಇಂತಹವರನ್ನು ಗುರುತಿಸಿ, ಆದರಿಸಿ ಇವರುಗಳು ತೋರುವ ದಾರಿಯಲ್ಲಿ ಮುನ್ನಡೆದರೆ ಅದು ಶತ್ರುವಾದ ಮೋಹವನ್ನು ನಮ್ಮ ಸ್ನೇಹಿತನನ್ನಾಗಿ ಮಾಡಿಕೊಂಡಂತೆ. 'ವಸುಧೈವ ಕುಟುಂಬಕಮ್' - ಇಡೀ ಪ್ರಪಂಚವೇ ಒಂದು ಕುಟುಂಬದಂತೆ ಅನ್ನುವುದು ಸನಾತನ ಧರ್ಮದ ತಿರುಳು. ಒಂದು ಕುಟುಂಬದಲ್ಲಿ ಹಲವಾರು ವಿಭಿನ್ನ ಗುಣಗಳುಳ್ಳ ಅಣ್ಣ-ತಮ್ಮಂದಿರು ಇರುವಂತೆ ಪ್ರಪಂಚದಲ್ಲೂ ವಿಭಿನ್ನ ಆಚರಣೆಗಳು, ಸಂಪ್ರದಾಯಗಳನ್ನು ಅನುಸರಿಸುವ ಜನರಿದ್ದಾರೆ. ಇಡೀ ಪ್ರಪಂಚವೇ ಒಂದು ರಾಷ್ಟ್ರವಾಗಬೇಕು, ನಮ್ಮ ದೇವರನ್ನೇ ನಾವು ಹೇಳಿದ ರೀತಿಯಲ್ಲೇ ಪೂಜಿಸಬೇಕು, ಹೀಗೆ ಮಾಡದಿದ್ದವರನ್ನು ಬಲವಂತದಿಂದ ಮತಾಂತರಿಸಬೇಕು, ಒಪ್ಪದಿದ್ದವರನ್ನು ಸಂಹರಿಸಬೇಕು ಎಂಬ ಮನೋಭಾವದಿಂದ ಜಗತ್ತನ್ನು ಒಟ್ಟುಗೂಡಿಸಲು ಆ ದೇವರಿಂದಲೂ ಅಸಾಧ್ಯ. ಆದರೂ ಈ ಉದ್ದೇಶದಿಂದ ಭಯೋತ್ಪಾದಕ ಚಟುವಟಿಕೆಗಳು, ರಕ್ತಪಾತಗಳು, ಅತ್ಯಾಚಾರಗಳು, ಯುದ್ಧಗಳು ನಡೆಯುತ್ತಿರುವುದು ದುರ್ದೈವ. ಇಡೀ ಪ್ರಪಂಚವೇ ಒಂದು ಕುಟುಂಬದಂತೆ ಆಗಲು, ಒಂದು ರಾಷ್ಟ್ರವೆನಿಸಲು ಸಾಧ್ಯವಿದೆ. ಈ ಜಗತ್ತು ಹೀಗಿರಲಿ ಎಂದು ಬದಲಾಯಿಸಲು ಹೋಗದೆ, ಹೇಗಿದೆಯೋ ಹಾಗೆಯೇ ಇರಲಿ ಎಂದು ಸುಮ್ಮನಿದ್ದರೆ, ಕಿತ್ತುಕೊಳ್ಳುವುದಕ್ಕಿಂತ ಕೊಡಲು ಮನಸ್ಸು ಮಾಡಿದರೆ, ಯಾರನ್ನೂ ಪ್ರತ್ಯೇಕಿಸದೆ ಸಮನಾಗಿ ಕಂಡು, ಎಲ್ಲರನ್ನೂ ಸೇರಿಸಿಕೊಂಡರೆ, ಎಲ್ಲಾ ಧರ್ಮಗ್ರಂಥಗಳೂ, ವೇದಗಳು, ಕುರಾನ್, ಬೈಬಲ್ ಇತ್ಯಾದಿ, ನಮ್ಮವೇ ಅಂದುಕೊಂಡು ಅದರಲ್ಲಿನ ನಮಗೆ ಹಿತವಾಗುವ ಎಲ್ಲಾ ಸಂಗತಿಗಳನ್ನು ಅಳವಡಿಸಿಕೊಂಡರೆ ಮಾತ್ರ ಜಗತ್ತು ಒಂದು ಕುಟುಂಬವೆನಿಸೀತು. ಇತರರು ಅನುಸರಿಸಲಿ, ನಮ್ಮದು ಒಣ ಉಪದೇಶ ಮಾತ್ರ ಅನ್ನುವಂತಹ ಮುಖವಾಡ ಧರಿಸಿದ ಜನನಾಯಕರ, ವಿಚಾರವಾದಿಗಳ ನಿಜಬಣ್ಣ ಬಯಲಾಗಬೇಕು. ಈಗ ಅಗತ್ಯವಿರುವುದು ಮಾನವರು ಸಹಮಾನವರನ್ನು ಪ್ರೀತಿಸುವ, ಗೌರವಿಸುವ ಅರ್ಥಪೂರ್ಣ ಧರ್ಮವೇ ಹೊರತು ಮತ್ತೊಂದಲ್ಲ. ಇಲ್ಲದಿದ್ದರೆ ದಾಯಾದಿಕಲಹಗಳಿಂದ ವಿನಾಶವೇ ಕಟ್ಟಿಟ್ಟ ಬುತ್ತಿ. ವಿಶ್ವಮಾನವತೆಯನ್ನು ಎತ್ತಿ ಹಿಡಿಯಲು ಎಲ್ಲ ಜನರನ್ನೂ ಅವರುಗಳು ಹೇಗಿರುವರೋ ಹಾಗೆ ಒಪ್ಪಿಕೊಳ್ಳುವ, ಪರಸ್ಪರರ ಭಾವನೆಗಳನ್ನು ಗೌರವಿಸುವ ವಿಶ್ವವ್ಯಾಮೋಹ ಬಂದರೆ ವಿಶ್ವ ಬದುಕುಳಿದೀತು. 
ದುರ್ಜನಃ ಸಜ್ಜನೋ ಭೂಯಾತ್ ಸಜ್ಜನಃ ಶಾಂತಿಮಾಪ್ನುಯಾತ್ |
ಶಾಂತೋ ಮುಚ್ಯೇತ ಬಂಧೇಭ್ಯೋ ಮುಕ್ತಶ್ಚಾನ್ಯಾನ್ ವಿಮೋಚಯೇತ್ ||
     ಇದರ ಅರ್ಥ: "ದುರ್ಜನರು ಸಜ್ಜನರಾಗಲಿ, ಸಜ್ಜನರಿಗೆ ಶಾಂತಿ ಸಿಗಲಿ, ಶಾಂತರು ಬಂಧನಗಳಿಂದ ವಿಮೋಚಿತರಾಗಲಿ, ಆ ವಿಮುಕ್ತರು ಇತರರನ್ನೂ ಸಹ ಬಂಧನದಿಂದ ಬಿಡಿಸಲಿ."
-ಕ.ವೆಂ.ನಾಗರಾಜ್.
**************
25.3.2015ರ ಜನಹಿತದ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


4 ಕಾಮೆಂಟ್‌ಗಳು:

 1. ಮೋಹವೇ ಮೂಲ ಸಕಲ ಮಹಾಕಾವ್ಯಗಳಿಗೂ, ಒಳಿತಲೂ ಅದು ಕೆಡುಕಿಗೂ ಅದೇ ಮೂಲ!
  ನಾನೆಂಬ ಮೋಹ ಪಾಶ ಬಿಡವೊಲ್ಲದು ಚಟ್ಟಸ್ಥತೆಯವರೆವಿಗೂ..

  ಹೆಣ್ಣು ಜೇಡಕೆ ತುತ್ತು ಗಂಡು ಸಂಗಮದಿ ಎಂಬುದು ನನ್ನ ಒಂದು ಕವನದ ಮೂಲವಸ್ತು!

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಧನ್ಯವಾದ, ಬದರೀನಾಥರೇ. ನಿಮ್ಮ ಕವನದ ಮೂಲವಸ್ತು ನನ್ನ ಮುಕ್ತಕದ ಸಾಲು ಎಂದಿದ್ದೀರಿ. ನನಗೆ ನೀವು ಮತ್ತು ನಿಮಗೆ ನಾನು ರಾಯಲ್ಟಿ ಕೊಟ್ಟುಕೊಂಡು, ಇಬ್ಬರದನ್ನೂ ಸೇರಿಸಿ ಜೇಡಕ್ಕೆ, ಅದರ ನಿರ್ಮಾತೃ ಪರಮಾತ್ಮನಿಗೆ ಕೊಟ್ಟುಬಿಡೋಣ. :)

   ಅಳಿಸಿ
  2. ಧನ್ಯವಾದ, ಬದರೀನಾಥರೇ. ನಿಮ್ಮ ಕವನದ ಮೂಲವಸ್ತು ನನ್ನ ಮುಕ್ತಕದ ಸಾಲು ಎಂದಿದ್ದೀರಿ. ನನಗೆ ನೀವು ಮತ್ತು ನಿಮಗೆ ನಾನು ರಾಯಲ್ಟಿ ಕೊಟ್ಟುಕೊಂಡು, ಇಬ್ಬರದನ್ನೂ ಸೇರಿಸಿ ಜೇಡಕ್ಕೆ, ಅದರ ನಿರ್ಮಾತೃ ಪರಮಾತ್ಮನಿಗೆ ಕೊಟ್ಟುಬಿಡೋಣ. :)

   ಅಳಿಸಿ
  3. Anitha Nadig
   V nice

   Sripada Rao Manjunath
   Very true

   Naveen Krhalli
   Wah...!!!! sogasaagide lekhani...

   ಅಳಿಸಿ