ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಮೇ 21, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ-1: 'ಮಾನವರಾಗಿ' ವಿಚಾರ ಮಾಡೋಣ!

ಓಂ ದೇವಾನಾಂ ಭದ್ರಾ ಸುಮತಿರ್ಋಜೂಯತಾಂ ದೇವಾನಾಗ್ಂ ರಾತಿರಭಿ ನೋ ನಿವರ್ತತಾಮ್ |
ದೇವಾನಾಗ್ಂ ಸಖ್ಯಮುಪಸೇದಿಮಾ ವಯಂ ದೇವಾ ನ ಆಯುಃ ಪ್ರತಿರಂತು ಜೀವಸೇ || (ಯಜು.೨೫.೧೫.)
     ಅರ್ಥ: ನೇರವಾದ ಸನ್ಮಾರ್ಗದಲ್ಲೇ ನಡೆಯುವ ವಿದ್ವಜ್ಜನರ ಕಲ್ಯಾಣಕಾರಿಣೀ ಸದ್ಬುದ್ಧಿಯು ಮತ್ತು ದಾನಶೀಲರಾದ ಉದಾರಾತ್ಮರ ದಾನಭಾವನೆಯು ನಮಗೆ ಎಲ್ಲೆಡೆಯಿಂದಲೂ ಲಭಿಸಲಿ. ನಾವು ವಿದ್ವಾಂಸರ ಸಖ್ಯವನ್ನು ಹತ್ತಿರದಿಂದ ಪಡೆದುಕೊಳ್ಳೋಣ. ಆ ಜ್ಞಾನೀ ಜನರು ಜೀವನ ಸೌಂದರ್ಯಕ್ಕಾಗಿ ನಮ್ಮ ಆಯಸ್ಸನ್ನು ಉತ್ಕೃಷ್ಟವಾಗಿ ಮಾಡಲಿ, ವರ್ಧಿಸಲಿ.
     ೧೧೯ ವರ್ಷಗಳ ಪಂಡಿತ ಸುಧಾಕರ ಚತುರ್ವೇದಿಯವರ ಮಾತುಗಳು ನೇರ, ಪ್ರಖರ. ವೇದದ ಬೆಳಕಿನಲ್ಲಿ ಅವರು ಮಂಡಿಸುವ ವಿಚಾರಗಳು ಎಂಥವರನ್ನೂ ನಿಬ್ಬೆರಗಾಗಿಸುತ್ತದೆ. ೧೩ನೆಯ ವಯಸ್ಸಿನಲ್ಲೇ ಹರಿದ್ವಾರದ ಸಮೀಪದ ಕಾಂಗಡಿ ಗುರುಕುಲದಲ್ಲಿ ವೇದಾಧ್ಯಯನ ಮಾಡಿದವರು. ಮಹರ್ಷಿ ದಯಾನಂದ ಸರಸ್ವತಿಯವರಿಂದ ಪ್ರಭಾವಿತರಾಗಿ, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಜ್ಞಾನಾರ್ಜನೆ ಮಾಡಿದವರು. ನಾಲ್ಕೂ ವೇದಗಳನ್ನು ಅಭ್ಯಸಿಸಿ ನಿಜ ಅರ್ಥದಲ್ಲಿ ಚತುರ್ವೇದಿಯಾಗಿ 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಪಡೆದವರು. ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡು, ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿ ಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು.
     ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದವರು. ಗಾಂಧೀಜಿಯವರ ಒಡನಾಡಿಯಾಗಿದ್ದವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿ, ಸುಮಾರು ೧೫ ವರ್ಷಗಳ ಕಾಲ ಸೆರೆಮನೆವಾಸ ಅನುಭವಿಸಿದವರು. ವೈಚಾರಿಕ ಭೇದಗಳಿದ್ದರೂ ಗಾಂಧೀಜಿ ಮತ್ತು ಪಂಡಿತರ ನಡುವಣ ಸ್ನೇಹಕ್ಕೆ ಎಂದೂ ಕುಂದು ಬಂದಿರಲಿಲ್ಲ. ಗಾಂಧೀಜಿಯ ಹತ್ಯೆಯಾಗುವವರೆಗೂ ಆ ಸ್ನೇಹ ಹಾಗೆಯೇ ಮುಂದುವರೆಯಿತು.
     ವೇದ ಇವರ ಉಸಿರಾಗಿದೆ. ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. ಇವರು ನಡೆಸುವ ಸತ್ಸಂಗಗಳು ಸತ್ಯಾನ್ವೇಷಿಗಳಿಗೆ ಸಹಕಾರಿಯಾಗಿದೆ. ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ವಿಚಾರಗಳನ್ನು ಸಂಗ್ರಹಿಸಿ ಇಲ್ಲಿ ಪ್ರಸ್ತುತಪಡಿಸಿದೆ. -ಲೇಖಕ.
***
ಪಂಡಿತರೊಡನೆ ಲೇಖಕ 

     ಪಶು-ಪಕ್ಷಿ, ಕ್ರಿಮಿ-ಕೀಟಗಳಿಗೂ ಮಾನವರಿಗೂ ಇರುವ ವ್ಯತ್ಯಾಸವೆಂದರೆ ಆ ಕ್ರಿಮಿ-ಕೀಟ, ಪಶು-ಪಕ್ಷಿಗಳು ತಮ್ಮ ಸ್ವಾಭಾವಿಕ ಪ್ರಕೃತಿ ಅನುಸರಿಸಿ ಬಾಳುತ್ತವೆ. ಒಂದು ನಾಯಿ ಒಂದು ಬೆಕ್ಕನ್ನು ಅಟ್ಟಿಸಿಕೊಂಡು ಹೋಗುತ್ತದೆ. ಆ ನಾಯಿಯ ತಲೆಯೊಳಗೆ ಆ ಬೆಕ್ಕು ಶತ್ರು ಎಂದು ಇರುವುದಿಲ್ಲ, ಅದು ಅದರ ಸ್ವಾಭಾವಿಕ ಪ್ರವೃತ್ತಿ. ಬೆಕ್ಕಿಗೆ ಇಲಿಯ ಮೇಲೆ ಏನಾದರೂ ಕೋಪ ಇದೆಯೇನು? ಇಲಿಗೂ ಅಷ್ಟೆ, ಬೆಕ್ಕಿನ ಮೇಲೆ ಕೋಪ ಇಲ್ಲ. ಸ್ವಾಭಾವಿಕ ಪ್ರವೃತ್ತಿ, ಯೋಚನೆ ಮಾಡುವ ಶಕ್ತಿ ಇಲ್ಲ, ಹಸಿವಾದಾಗ ಏನಾದರೂ ತಿನ್ನಬೇಕು, ಬಾಯಾರಿದಾಗ ಏನಾದರೂ ಕುಡಿಯಬೇಕು, ಅಷ್ಟೇ ಅವಕ್ಕೆ ಗೊತ್ತಿರುವುದು. ಆದರೆ ಮಾನವರಿಗೆ ವಿವೇಚನೆ ಮಾಡುವ ಶಕ್ತಿ ಇದೆ.  ತೆಂಗಿನ ಮರ ಇದೆ, ಈಚಲ ಮರ ಇದೆ, ಇವೆಲ್ಲಾ ಭಗವಂತನ ಸೃಷ್ಟಿಯೇ. ಪರಮಾತ್ಮ ತೆಂಗಿನ ಮರವನ್ನಾಗಲೀ, ಈಚಲಮರವನ್ನಾಗಲೀ ಸೃಷ್ಟಿಸಿರುವುದು, ಅದರಿಂದ ಹೆಂಡ ಇಳಿಸಿ ಕುಡಿದು ಮತ್ತಿನಿಂದ ಕುಣಿದಾಡಲಿ ಅನ್ನುವ ಉದ್ದೇಶದಿಂದ ಅಲ್ಲ. ಪ್ರಾಣಿಗಳನ್ನು ಸೃಷ್ಟಿಸಿರುವುದು ಅವನ್ನು ತಿಂದು ತೇಗಲಿ ಎಂದಲ್ಲ. ಯಾವುದನ್ನು ಯಾವುದಕ್ಕೆ ಉಪಯೋಗಿಸಬೇಕು, ಹೇಗೆ ಉಪಯೋಗಿಸಬೇಕು ಎಂದು ವಿವೇಚಿಸಿ ಉಪಯೋಗಿಸಬೇಕು. ಆದರೆ ಉಪಯೋಗ ಮಾಡುವಾಗ ನಾವು ತಪ್ಪುತ್ತೇವೆ. ಯಾವ ಕೆಲಸಕ್ಕೆ ಯಾವ ಪದಾರ್ಥ ಉಪಯೋಗಿಸಬೇಕೋ ಅದನ್ನು ಉಪಯೋಗಿಸುವುದಿಲ್ಲ.
     ಭಗವಂತ ಈ ಭೂಮಿ, ಆಕಾಶ, ನೀರು, ಬೆಂಕಿ, ಗಾಳಿ ಯಾವುದನ್ನೂ ನಿರರ್ಥಕವಾಗಿ ಕೊಟ್ಟಿಲ್ಲ. ಪ್ರತಿಯೊಂದಕ್ಕೂ ಒಂದೊಂದು ಉದ್ದೇಶ ಇದ್ದೇ ಇದೆ. ಈ ಬೆಂಕಿ ಇದೆ, ಅದನ್ನು ಒಳ್ಳೆಯ ಕೆಲಸಕ್ಕೆ ಅಂದರೆ ಅಡಿಗೆ ಮಾಡುವುದಕ್ಕೆ, ಅಗ್ನಿಹೋತ್ರ ಮಾಡುವುದಕ್ಕೆ, ಇತ್ಯಾದಿಗೆ ಬಳಸಬಹುದು. ಪಕ್ಕದ ಮನೆಯವನ ಮೇಲೆ ಕೋಪ ಇದೆ ಅಂತ ಅವನ ಮನೆಯನ್ನು ಸುಡಲು ಬಳಸಿದರೆ ಆ ಬೆಂಕಿ ಏನು ಮಾಡುತ್ತೆ? ಬೆಂಕಿಗೆ ವಿವೇಕವಿಲ್ಲ, ಅದರ ಕೆಲಸ ಸುಡುವುದು ಅಷ್ಟೆ. ವಾಯುಶುದ್ಧಿ ಬಗ್ಗೆ ಮಾತಾಡ್ತೀವಿ, ಅಗ್ನಿಹೋತ್ರ ಮಾಡ್ತೀವಿ, ಒಂದು ಚಮಚ ತುಪ್ಪ ಒಬ್ಬರು ತಿನ್ನಬಹುದು. ಅದನ್ನೇ ಅಗ್ನಿಗೆ ಹಾಕಿದರೆ ಅದು ನಾಶವಾಗುವುದಿಲ್ಲ, ಸೂಕ್ಷ್ಮ ಕಣಗಳಾಗಿ ಪರಿವರ್ತಿತವಾಗಿ ವಾಯುವಿನಲ್ಲಿ ಹರಡಿ ಅದನ್ನು ಎಷ್ಟು ಜನ ಉಸಿರಾಡುತ್ತಾರೋ ಅವರಿಗೆಲ್ಲಾ ಉಪಯೋಗವಾಗುತ್ತದೆ ಬಡವ ಇರುತ್ತಾನೆ, ಅವನಿಗೆ ಅಗ್ನಿಹೋತ್ರಕ್ಕೆ ಪಾತ್ರೆ ಉಪಯೋಗಿಸುವ ಶಕ್ತಿ ಇಲ್ಲ ಎಂದಿಟ್ಟುಕೊಳ್ಳಿ. ಅವನು ಮಣ್ಣಿನ ಮಡಿಕೆಯನ್ನೇ ಉಪಯೋಗಿಸಬಹುದು, ಏನೂ ಪರವಾಗಿಲ್ಲ. ಚಿನ್ನದ ಪಾತ್ರೆಯಲ್ಲಿ ಹಾಕಿದ ತುಪ್ಪವೂ ಹರಡುತ್ತದೆ, ಮಣ್ಣಿನ ಕುಡಿಕೆಯಲ್ಲಿ ಹಾಕಿದ ತುಪ್ಪವೂ ಹರಡುತ್ತದೆ. ಅದಕ್ಕೆ ಬಡವರು, ಶ್ರೀಮಂತರು ಅನ್ನುವ ಭೇದ ಇಲ್ಲ. ಬೆಂಕಿಯಿಂದ ಅಡಿಗೆ ಮಾಡುವುದು, ಹವನ ಮಾಡುವುದು, ಇಷ್ಟೇ ಮಾಡ್ತೀವೇನು? ಬೀಡಿ, ಸಿಗರೇಟು, ಚುಟ್ಟಾ ಸೇದಲೂ ಬಳಸುತ್ತೇವೆ. ಆ ಬೆಂಕಿ ಪಾಪ, ಅದೇನು ಮಾಡುತ್ತೆ? ಯಾವುದನ್ನು ಕೊಟ್ಟರೂ ಸುಡುತ್ತೆ. ವಾಯುಶುದ್ಧಿ ಬಗ್ಗೆ ಮಾತಾಡುವ ಬದಲು ಅದಕ್ಕೆ ಏನು ಬೇಕೋ ಅದನ್ನು ಮಾಡಬೇಕು. 'ವಾಯುವೇ ಸ್ವಾಹಾ' ಅನ್ನುವುದು, ಬೀಡಿ. ಚುಟ್ಟಾ ಹಚ್ಚುವುದು! ಏನು ಪ್ರಯೋಜನ? ಈ ತರಹ ಆಲೋಚನೆ ಮಾಡಬೇಕು.
     ಮಾನವನ ಮನಸ್ಸು 'ಏಕೆ? ಹೇಗೆ?' ಎಂಬ ಪ್ರಶ್ನೆಗಳನ್ನು ಕೇಳಬಲ್ಲ ವಿಕಾಸದ ಸ್ಥಿತಿಯನ್ನು ಮುಟ್ಟಿರುತ್ತದೆ. ಪ್ರಶ್ನೆ ಕೇಳುವ ಭಾಗ್ಯ ಮತ್ತು ಅದಕ್ಕೆ ಉತ್ತರ ಹುಡುಕುವ ಅಭಿಲಾಷೆ ಕೇವಲ ಮನುಷ್ಯನಿಗೆ ಸಿಕ್ಕಿರುವ ಸಂಪತ್ತು. 'ಹುಟ್ಟಿದ, ಇದ್ದ ಸತ್ತ' - ಇದು ಮಾನವನ ಜೀವನವನ್ನು ಚಿತ್ರಿಸಲು ಸಾಕು. 'ಮಾನವ ಕೇವಲ ಹುಟ್ಟಿ, ಇದ್ದು ಸಾಯಲಿಲ್ಲ, ಏನೋ ಅಗಿ, ತಾನೂ ಬೆಳಗಿ, ಬೇರೆಯವರನ್ನೂ ಬೆಳಗಿಸಿ, ಶರೀರತ್ಯಾಗ ಮಾಡಿ ಅಮರನಾಗಿ ಹೋದ' -  ಎಂದು ಮಾನವ ಚರಿತ್ರೆಯನ್ನು ಬರೆಯಬೇಕಾದರೆ, ನೈಮಿತ್ತಿಕ ಜ್ಞಾನ, ಅವನ ಬಾಳಿಗೆ ಹೊಸೆದುಕೊಂಡು ಬರಲೇಬೇಕು. 'ಹೇಗೆ? ಏಕೆ?'ಗಳಿಗೆ ಉತ್ತರ ಹುಡುಕಲು ಅವನು ನೈಮಿತ್ತಿಕ ಜ್ಞಾನಕ್ಕೆ ಶರಣಾಗಲೇಬೇಕು.
ನರಜನ್ಮ ದೊಡ್ಡದು
     ನಾವು ಯಾವ ದಾರಿಯನ್ನು ಹಿಡಿದು ನಡೆಯಬೇಕು, ಯಾವ ದಾರಿಯಲ್ಲಿ ಹೋದರೆ ನಮಗೆ ಆತ್ಮವಿಕಾಸ ಉಂಟಾಗುತ್ತದೆ ಅನ್ನುವ ವಿಷಯದಲ್ಲಿ ವೇದದ ಒಂದು ಮಂತ್ರದಲ್ಲಿ ವಿವರಿಸಿದೆ. ಇದು ಪ್ರಾರ್ಥನಾ ರೂಪದಲ್ಲಿದೆ. ವೇದಗಳಲ್ಲಿ ಇದೊಂದು ವಿಶೇಷ. ಪ್ರಾರ್ಥನಾ ರೂಪದಲ್ಲೇ ಎಲ್ಲವನ್ನೂ ನಾವು ತಿಳಿದುಕೊಳ್ಳುತ್ತೇವೆ. ವಿಶ್ವಾನಿ ದೇವ ಸವಿತರ್ದುರಿತಾನಿ ಪರಾ ಸುವ| ಯದ್ಭದ್ರಂ ತನ್ನ ಆ ಸುವ || (ಯಜು. ೩೦.೩.) ಭಗವಂತ, ಜಗತ್ ಶ್ರೇಯಕ, ಜಗತ್ ಉತ್ಪಾದಕ, ನೀನು ನಮಗೆ ಯಾವುದು ಒಳ್ಳೆಯದು ಇದೆಯೋ ಅದರ ಕಡೆಗೆ ಮಾತ್ರ ಕರೆದುಕೊಂಡು ಹೋಗು, ಕೆಟ್ಟದರಿಂದ ನಮ್ಮನ್ನು ದೂರ ಇರಿಸು ಎಂದು ಇದರ ಅರ್ಥ. ತಾತ್ಪರ್ಯವೆಂದರೆ ನಮ್ಮ ನಡೆಯಲ್ಲಿ ನಮ್ಮ ನುಡಿಯಲ್ಲಿ ಕೊಂಕು, ಸುತ್ತು ಇರಬಾರದು, ನೇರವಾದ ಮಾತು, ನೇರವಾದ ಯೋಚನೆಗಳು, ನೇರವಾದ ಕಾರ್ಯಗಳು, ಹೀಗಿದ್ದರೆ ಮಾತ್ರ ನಾವು ಧರ್ಮಿಗಳಾಗುತ್ತೇವೆ. ಮನುಷ್ಯ ಜನ್ಮ ಸಿಕ್ಕುವುದೇ ಕಷ್ಟ. ಸಿಕ್ಕಿರುವಾಗ ಅದನ್ನು ವ್ಯರ್ಥವಾಗಿ ಕಳೆಯುವುದು ಯಾರಿಗೂ ಶುಭವಲ್ಲ. ಜ್ಞಾಪಕವಿಟ್ಟುಕೊಳ್ಳಿ, ೮೬ ಲಕ್ಷ ಯೋನಿಗಳಿವೆ ಎನ್ನುತ್ತಾರೆ, ಅದರಲ್ಲಿ ಇದೂ ಒಂದು. ಸ್ವಲ್ಪ ಕಾಲು ಜಾರಿತೆಂದರೆ ಮನುಷ್ಯ ಜನ್ಮದಿಂದ ಕೆಳಗೆ ಬೀಳುತ್ತೇವೆ. ಮತ್ತೆ ಮೇಲಕ್ಕೆ ಬರಬೇಕೆಂದರೆ ಎಷ್ಟು ಜನ್ಮ ಜನ್ಮಾಂತರಗಳು ಬೇಕೋ ಗೊತ್ತಿಲ್ಲ. ಸಿಕ್ಕಿದೆಯಲ್ಲಾ ಮಾನವಜನ್ಮ, ಈ ಜನ್ಮದಲ್ಲಿ ಯಾರು ಚೆನ್ನಾಗಿ ಆಲೋಚಿಸಿ, ಚೆನ್ನಾಗಿ ಯೋಚನೆ ಮಾಡಿಯೇ ಕಾರ್ಯ ಮಾಡುತ್ತಾರೋ ಅವರೇ ಮನುಷ್ಯರು. ನಮ್ಮ ಶರೀರದ ಆಕಾರ ಏನೋ ಮನುಷ್ಯನ ಆಕಾರದಲ್ಲೇ ಇರಬಹುದು, ಆದರೆ ನಡೆ ನುಡಿಯಲ್ಲಿ ಪಶುವೃತ್ತಿ ಇದ್ದರೆ ಏನು ಪ್ರಯೋಜನ? ನಾವು ಒಂದು ವಿಷಯ ಮರೆಯುತ್ತೇವೆ, ೮೬ ಲಕ್ಷ ಹೋಗಲಿ, ಈ ಒಂದು ಜನ್ಮ ಇದೆಯಲ್ಲಾ ಇದು ಸಿಕ್ಕಬೇಕಾದರೆ ನಾವು ಎಷ್ಟು ಸಲ ಈ ಪ್ರಪಂಚಕ್ಕೆ ಬಂದಿರಬಹುದು, ಹೋಗಿರಬಹುದು! ಹಳೆಯ ಜನ್ಮದ ನೆನಪಿಲ್ಲ. ಕೆಲವರು ಹೇಳುತ್ತಾರೆ - 'ಪುನರ್ಜನ್ಮ ಇದ್ದರೆ ನೆನಪಿರಬೇಕಿತ್ತು, ನೆನಪೇಕಿಲ್ಲ?' ಅದಕ್ಕೆ ಎರಡು ಕಾರಣ ಕೊಡಬಹುದು: ಒಂದು, ಹಳೆಯ ಜನ್ಮದ ಒಳ್ಳೆಯ, ಕೆಟ್ಟ ಸಂಗತಿಗಳು ನೆನಪಿದ್ದರೆ, ಒಳ್ಳೆಯ ವಿಷಯಗಳನ್ನೇನೋ ಉತ್ಸಾಹದಿಂದ ಒಪ್ಪಿಕೊಳ್ಳಬಹುದು, ಕೆಟ್ಟ ವಿಷಯಗಳಿದ್ದರೆ ಈ ಜನ್ಮದ ಸುಖ ಎಲ್ಲೋ ಹೊರಟುಹೋಗುತ್ತದೆ. ನಾವು ಹಿಂದಿನ ಜನ್ಮದಲ್ಲಿ ಯಾರದೋ ಮನೆ ಕೊಳ್ಳೆ ಹೊಡೆದಿದ್ದೇವೆಂದು ನೆನಪಿಗೆ ಬಂದರೆ ಈ ಜನ್ಮದಲ್ಲಿ ನಮ್ಮ ಮನೆಯನ್ನು ಇನ್ನು ಯಾರು ಕೊಳ್ಳೆ ಹೊಡೆಯುತ್ತಾರೋ, ಏನು ಮಾಡುತ್ತಾರೋ ಎಂದು ಚಿಂತೆಯಲ್ಲೇ ನೆಮ್ಮದಿ ಕಳೆದುಕೊಳ್ಳುತ್ತೇವೆ. ಎರಡನೆಯದು, ಈಗಿರುವ ಜನ್ಮದಲ್ಲೇ ನಮಗೆ ಎಲ್ಲಾ ವಿಷಯ ನೆನಪಿನಲ್ಲಿ ಇರುವುದಿಲ್ಲ, ಅದು ಭಗವಂತನ ಕರುಣೆ ಎಂದಿಟ್ಟುಕೊಳ್ಳಿ. ಜ್ಞಾಪಕ ಇದ್ದಿದ್ದರೆ ಕೆಟ್ಟದು ನೆನಪಿಗೆ ಬಂದರೆ ಅದರ ಚಿಂತೆಯಲ್ಲೇ, ಕೊರಗಿನಲ್ಲೇ ಜೀವನ ಕಳೆದುಹೋಗುತ್ತಿತ್ತು.
ಅನಚ್ಛಯೇ ತುರಗಾತು ಜೀವಮೇಜತ್ ಧೃವಂ ಮಧ್ಯ ಆ ಹಸ್ತ್ಯಾನಾಮ್|
ಜೀವೋ ಮೃತಸ್ಯ ಚರತಿ ಸ್ವಧಾಭಿರಮರ್ತ್ಯೋ ಮರ್ತ್ಯೇನಾ ಸಯೋನಿಃ||  (ಋಕ್. ೧.೧೬೪.೩೦.)
     ವೇಗಶಾಲಿಯೂ, ಧೃಢವೂ ಆದ ಪರಮಾತ್ಮ ತತ್ವವು, ಎಲ್ಲರಿಗೂ ಜೀವದಾನ ಮಾಡುತ್ತಿದೆ. ಅಂತಃಸ್ಥಿತವಾಗಿದೆ. ಜೀವಾತ್ಮನನ್ನು ಲೋಕಲೋಕಾಂತರಗಳ ನಡುವೆ ಪ್ರವೇಶಗೊಳಿಸುತ್ತದೆ. ಮೃತನಾದವನ ಜೀವಾತ್ಮವು ಸ್ವತಃ ಅಮರವಾಗಿದ್ದು ಮೃತ್ಯುವಿಗೀಡಾಗುವ ಶರೀರದೊಂದಿಗೆ ಸಹಜೀವಿಯಾಗಿ ತನಗೆ ಪ್ರಾರಬ್ಧ ರೂಪದಲ್ಲಿ ಲಭಿಸಿದ ಅನ್ನ-ಜಲಗಳೊಂದಿಗೆ ಸಂಚರಿಸುತ್ತದೆ ಎಂದು ಇದು ಸಾರುತ್ತದೆ. ಇದು ವೇದೋಕ್ತವಾದ ಸತ್ಯ. ಇದು ಸುಳ್ಳಾಗಲಾರದು. ಈ ರೀತಿ ಜನ್ಮವೆತ್ತಿ ಅದೆಷ್ಟು ಸಾರಿ ಜಗತ್ತಿಗೆ ಬರುತ್ತಾರೋ, ಅಮರರಾದ ಜೀವಾತ್ಮರು.
-ಕ.ವೆಂ.ನಾಗರಾಜ್.
***************
ದಿನಾಂಕ 15-04-2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

1 ಕಾಮೆಂಟ್‌: