ದೇವರ ಫಜೀತಿ
ಪರಮಾತ್ಮನೇ ಸೃಷ್ಟಿಸಿದ ತೆಂಗಿನಕಾಯಿಯನ್ನು ದೇವಸ್ಥಾನಕ್ಕೆ ಹೋಗಿ ಅವನಿಗೇ ಅರ್ಪಿಸಿ, "ಭಗವಂತಾ, ನಮಗೆ ಒಳ್ಳೆಯದು ಮಾಡಪ್ಪಾ" ಅಂತಾ ಕೈಮುಗೀತೇವೆ. ನಮಗೆ ಒಳ್ಳೆಯದು ಮಾಡಬೇಕು ಅನ್ನುವುದು ಭಗವಂತನಿಗೆ ಗೊತ್ತಿಲ್ಲವೇ? ಅವನಿಗೆ ನೆನಪಿಸಬೇಕೇ? ಇದನ್ನೆಲ್ಲಾ ಯಾರೂ ಯೋಚನೆ ಮಾಡುವುದಿಲ್ಲ. ಸುಮ್ಮನೆ ಕಣ್ಣು ಮುಚ್ಚಿಕೊಂಡು ಮಾಡುತ್ತಾ ಹೋಗುತ್ತೇವೆ. ನಿಮ್ಮ ಪಕ್ಕದ ಮನೆಯವರನ್ನು ಕಂಡರೆ ನಿಮಗೆ ಆಗುವುದಿಲ್ಲವೆಂದು ಇಟ್ಟುಕೊಳ್ಳಿ. ನೀವು ಪ್ರಾರ್ಥನೆ ಸಲ್ಲಿಸುತ್ತೀರಿ-'ದೇವರೇ, ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ಆ ಪಕ್ಕದ ಮನೆಯವನ ಎರಡೂ ಕಣ್ಣು ಹೋಗಲಿ'. ಆ ಪಕ್ಕದ ಮನೆಯವನೂ ಹಾಗೆಯೇ ಕೇಳುತ್ತಾನೆ. ಪಾಪ, ದೇವರು ಯಾರ ಮಾತು ಕೇಳಬೇಕು? ಫಜೀತಿಗೆ ಸಿಕ್ಕಿಕೊಳ್ಳುತ್ತಾನೆ. ನಿಮ್ಮ ಮಾತು ಕೇಳಿದರೆ ಪಕ್ಕದ ಮನೆಯವನಿಗೆ ಸಿಟ್ಟು ಬರುತ್ತದೆ, ಅವನ ಮಾತು ಕೇಳಿದರೆ ನಿಮಗೆ ಸಿಟ್ಟು ಬರುತ್ತದೆ. 'ಭಗವಂತಾ, ನನ್ನನ್ನು ಪರೀಕ್ಷೆಯಲ್ಲಿ ಪಾಸು ಮಾಡಿಸಿಬಿಡು', 'ಅಪ್ಪಾ, ನನಗೆ ಒಳ್ಳೆಯ ಹೆಣ್ಣು ಸಿಕ್ಕೋ ಹಾಗೆ ಮಾಡು' ಅಂತೆಲ್ಲಾ ಪ್ರಾರ್ಥನೆ ಮಾಡೋದು! ನಮ್ಮ ಸಾಂಸಾರಿಕ ವ್ಯವಹಾರದಲ್ಲಿ ಅವನನ್ನೂ ಸಿಕ್ಕಿಸಲು ಹೋಗುತ್ತೇವೆ.
ಸರ್ವಾಧಾರ ಪರಮಾತ್ಮ
"ಸ್ಕಂಭೋದಾಧಾರ ಪೃಥಿವೀಮುತದ್ಯಾ . . . ." ಅಥರ್ವಣ ವೇದದ ಮಂತ್ರ ಇದು. ಪರಮಾತ್ಮನನ್ನು ಅನೇಕ ರೀತಿಯಲ್ಲಿ ವರ್ಣಿಸುವುದುಂಟು. ಇಲ್ಲಿ ಅವನನ್ನು ಕಂಬ ಎಂದು ಹೇಳಿದ್ದಾರೆ. ಭೂಲೋಕ ಪರಲೋಕಗಳನ್ನು ಕಂಬದಂತಿರುವ ಪರಮಾತ್ಮ ಎತ್ತಿ ಹಿಡಿದಿದ್ದಾನೆ ಎಂದು ಇದರ ಅರ್ಥ. ಅವನು ಎತ್ತಿ ಹಿಡಿಯದಿದ್ದರೆ ಎಲ್ಲವೂ ಛಿದ್ರ ಛಿದ್ರವೇ. ಭೂಮಿಯ ಆಕರ್ಷಣ ಶಕ್ತಿ ಸೀಮಿತ. ಎಲ್ಲಾ ಕಡೆ ವ್ಯಾಪಿಸಿಲ್ಲ. ಭೂಮಿಯ ಈ ಆಕರ್ಷಣ ಶಕ್ತಿ ಚಂದ್ರನನ್ನು ತನ್ನ ಸುತ್ತ ತಿರುಗುವಂತೆ ನೋಡಿಕೊಳ್ಳುತ್ತಿದೆ. ಈ ಆಕರ್ಷಣ ಶಕ್ತಿ ಇಲ್ಲದಿದ್ದರೆ ಚಂದ್ರ ಎಲ್ಲೋ, ನಾವು ಎಲ್ಲೋ! ಭಗವಂತನ ನಿಯಮವೇ ಹಾಗೆ. ಮನುಷ್ಯನ ನಿಯಮ ವ್ಯತ್ಯಾಸ ಆಗಬಹುದು. ಭಗವಂತನ ನಿಯಮ ವ್ಯತ್ಯಾಸವಾಗುವುದಿಲ್ಲ.
ಒಂದು ರಾಜ್ಯಕ್ಕೆ ಹಲವರು ರಾಜರು!
ನಾವು ಭಗವಂತನನ್ನು ಸಾರ್ವಕಾಲಿಕ, ಸಾರ್ವದೇಶಿಕ ಎಂತೆಲ್ಲಾ ಹೇಳುತ್ತೇವೆ. ನಮಗೆ ಬ್ರಹ್ಮಾಂಡ ಎಷ್ಟಿದೆ ಗೊತ್ತಿಲ್ಲ. 'ನಮ್ಮ ಸರ್ವ' ಅನ್ನುವುದು ಚಿಕ್ಕದು. ಎಲ್ಲವನ್ನೂ ತಿಳಿಯುವುದು ನಮಗೆ ಸಾಧ್ಯವೇ ಇಲ್ಲ. ಅಷ್ಟೇ ಏಕೆ, ನಮ್ಮ ಭೂಮಿ ಬಗ್ಗೆ ತಿಳಿಯ ಹೊರಟರೆ ನಮ್ಮ ತಲೆ ತಿರುಗುತ್ತೆ. ನಮ್ಮ ಮನೆಯೇ ನಮಗೆ ಒಂದು ಪ್ರಪಂಚ. ಈ ಮನೆಯಲ್ಲೂ ಒಳಗೆ ಕುಳಿತವರಿಗೆ ಹೊರಗಿನವರು ಕಾಣುವುದಿಲ್ಲ, ಹೊರಗಿನವರಿಗೆ ಒಳಗಿರುವವರು ಕಾಣುವುದಿಲ್ಲ. ನಮ್ಮ ಪರಿಸ್ಥಿತಿ ಸಂಕುಚಿತ. ಹೀಗಿರುವಾಗ ನಾವು ಸರ್ವಜ್ಞರು ಅಂದುಕೊಂಡರೆ ಆ ಸರ್ವ ಅನ್ನುವ ಪದಕ್ಕೆ ಅರ್ಥವೇ ಇಲ್ಲ. ಯಾರೂ ಸರ್ವಜ್ಞರಲ್ಲ. ಈ ಮಾತು ಹೇಳಿದರೆ ಕೆಲವರಿಗೆ ಕೋಪ ಬರುತ್ತೆ. ಶಂಕರಾಚಾರ್ಯರು ಸರ್ವಜ್ಞರಲ್ಲವೇ, ರಾಮಾನುಜಾಚಾರ್ಯರು ಸರ್ವಜ್ಞರಲ್ಲವೇ, ಮಧ್ವರು ಸರ್ವಜ್ಞರಲ್ಲವಾ ಅನ್ನುತ್ತಾರೆ. (ಅವರುಗಳು ತಮ್ಮನ್ನು ಸರ್ವಜ್ಞರು ಅಂದುಕೊಳ್ಳಲಿಲ್ಲ. ಅವರ ಅನುಯಾಯಿಗಳು ಅನ್ನುತ್ತಾರೆ!) ಇಷ್ಟೊಂದೆಲ್ಲಾ ಸರ್ವಜ್ಞರಿದ್ದರೆ ಆ 'ಸರ್ವ'ನ ಗತಿಯೇನು? ಒಂದು ಭೂಪ್ರದೇಶವನ್ನು ಒಬ್ಬ ರಾಜ ಆಳಬಹುದು. ಅದೇ 25 ರಾಜರು ಕಿತ್ತಾಡಿ ಆಳಿದರೆ ಆ ರಾಜ್ಯದಲ್ಲಿ ಬಾಳುವ ಪ್ರಜೆಗಳಿಗೆ ಏನು ಸುಖ? ಆದ್ದರಿಂದ ಒಬ್ಬ ನಿಯಾಮಕನನ್ನು ನಂಬಬೇಕು. ನನ್ನ ಗುರು ದೊಡ್ಡವನು, ನಿನ್ನ ಗುರು ಚಿಕ್ಕವನು ಅನ್ನುವ ಮಾತು ತಕ್ಕದ್ದಲ್ಲ. ಈಗಿನ ಕಾಲದಲ್ಲಿ ಗುರುಗಳ ಕಾಟ ಬಹಳ ಜಾಸ್ತಿ. ಕೆಲವರು ಗುರುಗಳಿಗೆ ಶಿಷ್ಯರೇ ಇಲ್ಲ. ಶಿಷ್ಯರುಗಳಿಗಿಂತ ಗುರುಗಳೇ ಜಾಸ್ತಿ ಈಗ. ಗುರು ಅಂದರೆ ಭಾರ, ದೊಡ್ಡವನು ಎಂದರ್ಥ. ಸತ್ಯವನ್ನು ಉಪದೇಶಿಸುವವನೇ ಗುರು. ಸತ್ಯ ಬಿಟ್ಟು ನಾನು ಹೇಳುವುದೇ ಸತ್ಯ ಎಂದು ತಮ್ಮ ಮನಸ್ಸಿಗೆ ಬಂದದ್ದನ್ನು ಹೇಳುತ್ತಾ ಹೋಗುತ್ತಾರೆ. ಆ ಗುರು ದೊಡ್ಡವನು, ಈ ಗುರು ಚಿಕ್ಕವನು ಅನ್ನುವುದೆಲ್ಲಾ ಇಲ್ಲ. 'ಸತ್ಯಮೇವ ಜಯತೇ ನಾನೃತಮ್. . . . .' ದೇವಗುಣ ಸಂಪನ್ನರಿಗೆ, ದೇವಜ್ಞರಿಗೆ ಸತ್ಯ ಯೋಗ್ಯವಾದ ದಾರಿ ತೋರಿಸುತ್ತದೆ. ಸತ್ಯವನ್ನು ಆಶ್ರಯಿಸಿದರೆ ಮಾತ್ರ ಸುಖ. ಹಿಂದೆ ಮೇಷ್ಟ್ರಿಗೆ ವಿದ್ಯಾರ್ಥಿಗಳು ಹೆದರುತ್ತಿದ್ದರು. ಇಂದು ಮೇಷ್ಟ್ರೇ ಹುಡುಗರಿಗೆ ಹೆದರುತ್ತಾ ಶಾಲಾಕೊಠಡಿಗೆ ಹೋಗುತ್ತಾರೆ, ಯಾರು ಏನು ಕೀಟಲೆ ಮಾಡುತ್ತಾರೋ, ಏನು ತೊಂದರೆ ಕೊಡುತ್ತಾರೋ ಅಂತ! ಕಾಲ ಹಾಗೆ ಬಂದಿದೆ. ಅದಕ್ಕೇ ಈ ಪ್ರಪಂಚದಲ್ಲಿ ಶಾಂತಿ ಇಲ್ಲ. ಸುಖ ಶಾಂತಿ ಬೇಕೆಂದರೆ ಸತ್ಯವನ್ನು ಆಶ್ರಯಿಸಬೇಕು.
ಗಿಣಿಪಾಠ
ಅದೇನು ಮಂತ್ರವೋ ಗೊತ್ತಿಲ್ಲದೆ 40-50 ವರ್ಷಗಳಿಂದ ಅಗ್ನಿಹೋತ್ರ ಮಾಡುವವರು, ಪೂಜೆ, ಜಪ,ತಪ ಮಾಡುವವರು ನನಗೆ ಗೊತ್ತಿದ್ದಾರೆ. ಒಂದು ಮಂತ್ರದ ಅರ್ಥವೂ ಗೊತ್ತಿಲ್ಲವೆಂದರೆ ಪ್ರಯೋಜನವೇನು? ಇದರಿಂದ ಲಾಭ ಉಂಟೇ? ಶುಕಪಾಠ -ಗಿಳಿಪಾಠ- ಅಂತ ಹೇಳ್ತಾರೆ. ರಾಮ-ರಾಮ ಅಂತ ಗಿಳಿಗೆ ಹೇಳಿಕೊಟ್ಟರೆ ಅದು ರಾಮ-ರಾಮ ಅನ್ನುತ್ತೆ. ಅದಕ್ಕೆ ರಾಮ ಯಾರು, ರಾವಣ ಯಾರು ಗೊತ್ತೇನು? ಅದರ ತಲೆಯಲ್ಲಿ ಆ ವಿಷಯ ಇರುವುದೇ ಇಲ್ಲ. ಅಂತಹ ಪಾಠವನ್ನು ನಾವೂ ಮಾಡಿದರೆ ಏನು ಪ್ರಯೋಜನ? ಅರ್ಥಸಹಿತವಾಗಿ ತಿಳಿದುಕೊಂಡರೆ ಆ ಮಂತ್ರಗಳಲ್ಲಿ ಏನು ಅರ್ಥ ಇದೆ ಅದನ್ನು ಜೀವನಕ್ಕೆ ತರಬಹುದು. 'ಅರ್ಥ ಗೊತ್ತಿಲ್ಲದೆ ಮಂತ್ರ ಹೇಳ್ತೀರಲ್ಲಾ, ಅದರಿಂದ ಏನು ಲಾಭ?' ಅಂತ ಅವರನ್ನು ಕೇಳಿದರೆ, ಅವರು ಕೊಟ್ಟ ಉತ್ತರ -"ಭಗವಂತನಿಗೇ ಗೊತ್ತು ಸ್ವಾಮಿ, ನಮಗೆ ಅದೆಲ್ಲಾ ಯಾಕೆ ಬೇಕು? ನಮ್ಮ ತಂದೆ ಮಾಡ್ತಾ ಇದ್ದರು, ನಾವೂ ಮಾಡ್ತಾ ಇದೀವಿ. ಮಂತ್ರದ ಅರ್ಥ ಅವನಿಗೆ ಗೊತ್ತಿಲ್ವಾ? ತಿಳಿದುಕೊಳ್ಳುತ್ತಾನೆ. ನಮಗೆ ಅರ್ಥ ಗೊತ್ತಿಲ್ಲದೇ ಹೋದರೆ ಏನಂತೆ? ಭಗವಂತನಿಗೆ ಗೊತ್ತಾಗಲ್ವಾ?" ವೇದ ಉಪದೇಶ ಮಾಡಿರುವುದು ಭಗವಂತ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅಲ್ಲ, ಮಾನವಜಾತಿಯ ಬುದ್ಧಿಶಕ್ತಿಯನ್ನು ಎಚ್ಚರಿಸುವ ಸಲುವಾಗಿ ವೇದ ಇರುವುದು! ಅದನ್ನೇ ತಿಳಿಯದೇ ಗಿಳಿಪಾಠ ಮಾಡಿದರೆ ಏನು ಲಾಭ? ಸ್ವಲ್ಪ ಲಾಭ ಇದೆ, ಮಂತ್ರ ಪಾಠ ಮಾಡುವ -ಅರ್ಧ ಗಂಟೆಯೋ ಒಂದು ಗಂಟೆಯೋ- ಆ ಸಮಯದಲ್ಲಿ ಯಾರನ್ನೋ ಬಯ್ಯುವುದಕ್ಕೋ, ಕೆಟ್ಟ ಮಾತಾಡುವುದಕ್ಕೋ, ಇನ್ನು ಯಾವುದೋ ಕೆಟ್ಟ ರೀತಿಯಲ್ಲಿ ಬಳಕೆಯಾಗಬಹುದಾದುದು ತಪ್ಪಿದ ಲಾಭ!
ಯಾಂತ್ರಿಕ ಪೂಜೆಯ ಫಲ
ಭಗವಂತನ ಪ್ರಾರ್ಥನೆ, ಪೂಜೆಯನ್ನು ಯಾಂತ್ರಿಕವಾಗಿ ಮಾಡಿದರೆ ಫಲವಿಲ್ಲ. ನಮ್ಮ ಪ್ರಾರ್ಥನೆ ಮಾಡುವ ಮಂತ್ರದ ಅರ್ಥದ ಮನನ ಮಾಡಿಕೊಂಡು ಅಳವಡಿಸಿಕೊಂಡರೆ ಮಾತ್ರ ಅದರಲ್ಲಿ ಅರ್ಥವಿರುತ್ತದೆ. ಇಲ್ಲದಿದ್ದರೆ ಅದು ಕೇವಲ ನಾಲಿಗೆಗೆ ವ್ಯಾಯಾಮ ಅಷ್ಟೆ. ನಾವು ಈಗ ಅಗ್ನಿಹೋತ್ರ ಮಾಡುವಾಗ ಮೂರು ಸಲ ಗಾಯತ್ರಿ ಮಂತ್ರದ ಉಚ್ಛಾರ ಮಾಡಿದೆವು. ಅದರ ಅರ್ಥ ನಮ್ಮ ಅರಿವಿಗೆ ಬಂತೇ, ನಮ್ಮ ಮನಸ್ಸನ್ನು ತಟ್ಟಿತೇ ಎಂಬುದನ್ನು ಅರಿಯೋಣ. ಇಲ್ಲದಿದ್ದರೆ ಸಾವಿರ ಸಲ ಗಾಯತ್ರಿ ಮಂತ್ರ ಹೇಳಿದರೂ ಫಲ ಮಾತ್ರ ಶೂನ್ಯ. ಸ್ನಾನ ಮಾಡಿದರೆ ದೇಹದ ಕೊಳಕು ಹೋಗುತ್ತದೆ. ಆತ್ಮಕ್ಕೆ ಅಂಟಿದ ಕೊಳಕು ಹೋಗಬೇಕೆಂದರೆ ಸತ್ಕರ್ಮದಿಂದ ಮಾತ್ರ ಸಾಧ್ಯ.
ಸಂಸ್ಕಾರ
ನಾನು ಒಂದು ಉಪನಯನ ಸಮಾರಂಭಕ್ಕೆ ಹೋಗಿದ್ದೆ. ನೆಂಟರು, ಇಷ್ಟರನ್ನೆಲ್ಲಾ ಕರೆದಿದ್ದರು. ದೊಡ್ಡ ಗುಂಪೇ ಸೇರಿತ್ತು. ಪುರೋಹಿತರು ಅವರ ಪಾಡಿಗೆ ಅವರು ಮಂತ್ರ ಹೇಳ್ತಾ ಇದ್ದರು. ಬಂದವರೆಲ್ಲಾ ಸಬ್ ಕಮಿಟಿಗಳನ್ನು ಮಾಡಿಕೊಂಡು ಕಾಡುಹರಟೆ ಹೊಡೆಯುತ್ತಾ ಕೂತಿದ್ದರು. ಉಪನಯನ ಮಾಡಿದವರಿಗಾಗಲೀ, ಮಾಡಿಸಿಕೊಂಡವರಿಗಾಗಲೀ, ಮಂತ್ರ ಹೇಳುತ್ತಿದ್ದವರಿಗಾಗಲೀ ಅದರ ಅರ್ಥ ಗೊತ್ತಿತ್ತೋ ಇಲ್ಲವೋ! ಇಂತಹ ಆಚರಣೆಗಳನ್ನಾದರೂ ಮಾಡಿದರೂ ಒಂದೇ, ಮಾಡದಿದ್ದರೂ ಒಂದೇ! ಅರ್ಥ ತಿಳಿದು, ಎಲ್ಲರೂ ಮನಃಪೂರ್ವಕ ಭಾಗವಹಿಸಿದರೆ ಅದರಲ್ಲಿ ಸಾರ್ಥಕ್ಯವಿದೆ.
Thinking by proxy
ಮಾನವ ಜನ್ಮ ಎತ್ತಿರುವ ನಾವು ಆಲೋಚನೆ ಮಾಡುವ ಶಕ್ತಿ ಉಪಯೋಗಿಸಿಕೊಳ್ಳಬೇಕು, ತಿಳಿದವರು, ವಿದ್ವಾಂಸರು ಎನ್ನಿಸಿಕೊಂಡವರೇ ವಿವೇಚನೆ ಮಾಡದೆ 'ಹಿಂದಿನವರು ಮಾಡುತ್ತಿದ್ದರು, ನಾವೂ ಮಾಡೋಣ', ಎಂಬಂತೆ ವರ್ತಿಸಿದರೆ, ಇನ್ನು ಮೂಢರು ಇನ್ನೇನು ಮಾಡ್ತಾರೆ? ಅವರನ್ನೇ ಅನುಸರಿಸುತ್ತಾರೆ. ಬೇರೆಯವರು ಏನು ಮಾಡ್ತಾರೋ ಅದನ್ನು ನೋಡಿಕೊಂಡು ಮಾಡ್ತಾ ಹೋಗೋದು, ಅಷ್ಟೆ. ಯಾವುದಕ್ಕೂ ಯೋಚನೆ ಮಾಡುವುದಕ್ಕೇ ಹೋಗುವುದಿಲ್ಲ. ಕೇಳಿದರೆ 'ನಮ್ಮ ಗುರುಗಳು ಯೋಚನೆ ಮಾಡಿದ್ದಾರೆ, ಅವರಿಗೆ ಎಲ್ಲಾ ತಿಳಿದಿದೆ, ಅವರು ಹೇಳಿದ ಮೇಲೆ ಆಯಿತು' ಅನ್ನುತ್ತಾರೆ. 'thinking by proxy'-ಇದು ಸರಿಯೇ? ನಮಗೆ ನಾವು ಯೋಚನೆ ಮಾಡಬೇಕೇ ಹೊರತು ನಮ್ಮ ಪರವಾಗಿ ಬೇರೆಯವರು ಯೋಚನೆ ಮಾಡಬೇಕೆ?
ಅರಿತು ಆಚರಿಸುವುದೇ ಜ್ಞಾನದ ತಳಹದಿ
ಯಾಸ್ಕರು ಕೇವಲ ವ್ಯಾಕರಣ ಅಲ್ಲ, ಇತಿಹಾಸವನ್ನೂ ತಿಳಿದುಕೊಂಡು ಆಲೋಚನೆ ಮಾಡಿ ಒಂದು ಮಾತು ಹೇಳುತ್ತಾರೆ- "ಯಾವನು ತಪಸ್ವಿಯಲ್ಲವೋ, ಇಂದ್ರಿಯ ನಿಗ್ರಹ ಮಾಡುವುದಿಲ್ಲವೋ ಕೇವಲ ವೇದಪಾಠ ಮಾಡುತ್ತಾ ಹೋಗುತ್ತಾನೋ ಅದರಿಂದ ಏನೂ ಪ್ರಯೋಜನವಿಲ್ಲ." ಪ್ರತ್ಯಕ್ಷ ಅರ್ಥ ಆಗಬೇಕು. ತಪಸ್ವಿ ಆಗಬೇಕು, ಬ್ರಹ್ಮಚಾರಿ ಆಗಬೇಕು, ಆಮೇಲೆ ಇಂದ್ರಿಯ ನಿಗ್ರಹ ಮಾಡಬೇಕು, ಆನಂತರವೇ ನಮಗೆ ಅರ್ಥವಾಗುವುದು. ಮಾಡಬಾರದ್ದನ್ನು ಮಾಡಿಕೊಂಡು, ತಿನ್ನಬಾರದ್ದನ್ನು ತಿಂದುಕೊಂಡು, ಆಡಬಾರದ್ದನ್ನು ಆಡಿಕೊಂಡು 'ಓಹೋ, ನಾನು ಅಗ್ನಿಹೋತ್ರ ಮಾಡಿಬಿಟ್ಟೆ' ಅಂದರೆ ಏನೂ ಪ್ರಯೋಜನ ಇಲ್ಲ. ಹಾಗೆಯೇ ವಾಯುಶುದ್ಧಿ ಆಗಬೇಕು ಅಂದುಕೊಂಡು ಈ ಮಂತ್ರ ಎಲ್ಲಾ ಹೇಳಿಕೊಂಡು ಅಗ್ನಿಹೋತ್ರ ಮಾಡೋದು ಏಕೆ? ಮಂತ್ರ ಹೇಳದೇ ಮಾಡಬಹುದಲ್ಲಾ! ಆಗಲೂ ವಾಯುಶುದ್ಧಿ ಆಗುತ್ತಲ್ಲಾ! ಹಾಗಲ್ಲ, ಈ ಮಂತ್ರದಲ್ಲಿ ಆಧ್ಯಾತ್ಮ ತುಂಬಿಕೊಂಡಿದೆ. ಅನೇಕ ಸಾರಿ ನಾನು ಹೇಳಿದ್ದೇನೆ 'ಅಯಂತ ಇದ್ಮ ಆತ್ಮ ಜಾತ ವೇದ' ಅಂತ ಮೊದಲು ಒಂದು ಸಲ ಹೇಳ್ತೀವಿ, ಆಮೇಲೆ 5 ಸಲ ಹೇಳ್ತೀವಿ, ಯಾತಕ್ಕೆ? ಮೊದಲು ಒಂದು ಸಲ ಹೇಳುವಾಗ "ಭಗವಂತ ನನ್ನ ಜೀವನ, ಈ ಆತ್ಮ ನಿನಗೆ ಕಾಷ್ಠ, ಸಮಿತ್ತು ಇದ್ದ ಹಾಗೆ" ಎಂದು ಇದರ ಅರ್ಥ. ಭಗವಂತ ಬ್ರಹ್ಮಾಂಡ, ದೊಡ್ಡ ಅಗ್ನಿ, ಆ ಅಗ್ನಿಯಲ್ಲಿ ನಮ್ಮ ಆತ್ಮವನ್ನು ಹಾಕಿದರೆ, ನಮ್ಮ ಆತ್ಮ ಇಲ್ಲದಂತಹ ಅದ್ಭುತ ಜ್ಞಾನ ನಮಗೆ ಬರುತ್ತದೆ. ನೀವು ಸುಳ್ಳು ಅಂತ ತಿಳಿದುಕೊಳ್ಳಬೇಡಿ, ಈಗಲಾದರೋ ನೀವು ವಿಮಾನ ನೋಡುತ್ತೀರಿ, ಸ್ಪೇಸ್ ಶಿಪ್ಪುಗಳನ್ನು ನೋಡ್ತೀರಿ. ಅವು ಯಾವುವೂ ಗೊತ್ತಿಲ್ಲದೇ ಇರುವಾಗ ಜ್ಯೋತಿಗಳು 100 ವರ್ಷ ಆದಮೇಲೆ ಯಾವ ದೇಶದಲ್ಲಿ ಯಾವಾಗ ಸೂರ್ಯಗ್ರಹಣ ಆಗುತ್ತೆ, ಚಂದ್ರ ಗ್ರಹಣ ಆಗುತ್ತೆ, ಎಷ್ಟು ಕಾಲ ಇರುತ್ತೆ, ಇದನ್ನೆಲ್ಲಾ ಹೇಳಿಬಿಡುತ್ತಿದ್ದರಲ್ಲಾ, ಹೇಗೆ? ಅವರೇನು ಪ್ರಾಪಂಚಿಕ ವಿಷಯದಲ್ಲಿ ಯಾವುದೇ ಬಿ.ಎ., ಎಂ.ಎ. ಪಾಸು ಮಾಡಿದವರಲ್ಲ. ನಮ್ಮ ಋಷಿಗಳೂ ಅಷ್ಟೆ, ವಸಿಷ್ಠ ಋಷಿ, ವಸಿಷ್ಠ, ಬಿ.ಎ., ಎಂ.ಎ. ಅಂತ ಹೆಸರಿನ ಮುಂದೆ ಹಾಕಿಕೊಂಡಿದ್ದರಾ? ಏನೂ ಇಲ್ಲ, ಡಿಗ್ರಿಗಳು ಬೇಕೇ ಇಲ್ಲ. ನನ್ನ ಗುರು ಸ್ವಾಮಿ ಶ್ರದ್ಧಾನಂದರು ಹೇಳುತ್ತಿದ್ದರು: "ನಿಮಗೆ ನಾವು ಡಿಗ್ರಿ ಕೊಡುತ್ತೇವೆ, ವಿದ್ಯಾಲಂಕಾರ, ವೇದಾಲಂಕಾರ, ವಿದ್ಯಾವಾಚಸ್ಪತಿ, ಡಿಗ್ರಿ ಕೊಡುತ್ತೇವೆ. ಅದರಿಂದ ನೀವು ಉದ್ಧಾರವಾಗುವುದಿಲ್ಲ. ಅದು ತಳಹದಿ. ಅದರ ಮೇಲೆ ನೀವು ಕಟ್ಟಡ ಕಟ್ಟಬೇಕು. ಹೊಟ್ಟೆಪಾಡಿಗಲ್ಲ, ಹೊಟ್ಟೇಪಾಡೂ ಬೇಕು, ಸಿಕ್ಕುತ್ತೆ." ಸಂಸಾರಿಗಳು ಹೇಳೋರು, "ಸ್ವಾಮೀಜಿ, ನಿಮಗೇನೋ ಪರವಾಗಿಲ್ಲ, ಸಂಸಾರವಿಲ್ಲ, ಹೆಂಡರಿಲ್ಲ, ಮಕ್ಕಳಿಲ್ಲ, ಹ್ಯಾಗೋ ನಡೆದುಹೋಗುತ್ತೆ, ನಾವು ಗೃಹಸ್ಥರು, ಪೂಜೆ ಮಾಡೋದು ಬಿಟ್ಟುಬಿಟ್ರೆ, ನಮಗೆ ನೈವೇದ್ಯ ಕೊಡೋರು ಯಾರು? ದಕ್ಷಿಣೆ ಕೊಡೋರು ಯಾರು?ದಾನ ಕೊಡೋರು ಯಾರು? ನಮ್ಮ ಹೊಟ್ಟೆಪಾಡು?". ದಯಾನಂದರು ಹೇಳೋರು: "ನಿಮ್ಮ ಪ್ರಾರಬ್ಧ ನಿಮ್ಮ ಜೊತೆಯಲ್ಲಿದೆ, ನಿಮಗೆ ಇದೊಂದೇ ಜನ್ಮ ಅಲ್ಲ, ಹಿಂದೆ ಯಾವ ಯಾವುದೋ ಜನ್ಮ ಎತ್ತಿದ್ದೀರಾ. ಅವುಗಳ ಫಲ ನಿಮ್ಮ ಜೊತೆಯಲ್ಲೇ ಇರುತ್ತೆ. ನಿಮಗೆ ಅನ್ನ ಸಿಕ್ಕೇ ಸಿಕ್ಕುತ್ತೆ. ಜನರಿಗೆ ಟೋಪಿ ಹಾಕಿ, ಸುಳ್ಳು ಹೇಳಿ ನೀವು ನಿಮ್ಮ ಅನ್ನ ದುಡಿಯಬೇಕಿಲ್ಲ."
-ಕ.ವೆಂ.ನಾಗರಾಜ್.
***************
ದಿನಾಂಕ 22.04.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ: