ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಸೆಪ್ಟೆಂಬರ್ 16, 2014

ನೈಜ ಸಂನ್ಯಾಸಿಗಳು ಯಾರು?


     ಸನಾತನ ಧರ್ಮದಲ್ಲಿ ಜೀವನದ ನಾಲ್ಕು ಘಟ್ಟಗಳನ್ನು ವಿವರಿಸಲಾಗಿದೆ. ಅವೆಂದರೆ, ಬಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ. ಮನುಷ್ಯನ ಆಯುವನ್ನು ನೂರು ವರ್ಷಗಳು ಎಂದಿಟ್ಟುಕೊಂಡರೆ, ಪ್ರಥಮ ೨೫ ವರ್ಷಗಳನ್ನು ಬ್ರಹ್ಮಚರ್ಯದಲ್ಲೂ, ನಂತರದ ೨೫ ವರ್ಷಗಳನ್ನು ಗೃಹಸ್ಥಾಶ್ರಮದಲ್ಲೂ, ಮುಂದಿನ ೨೫ ವರ್ಷಗಳಲ್ಲಿ ವಾನಪ್ರಸ್ಥಾಶ್ರಮವನ್ನೂ, ಕೊನೆಯ ೨೫ ವರ್ಷಗಳನ್ನು ಸಂನ್ಯಾಸಾಶ್ರಮದಲ್ಲಿ ವಿನಿಯೋಗಿಸಬಹುದು. ಬ್ರಹ್ಮಚರ್ಯವೆಂದರೆ ಮದುವೆಯಾಗದಿರುವುದು ಎಂದು ಭಾವಿಸುವುದು ತರವಲ್ಲ. ಪ್ರಥಮ ೨೫ ವರ್ಷಗಳು ಜೀವನಕಾಲದ ಪ್ರಮುಖ ಅವಧಿಯಾಗಿದ್ದು ಬೌದ್ಧಿಕ, ಮಾನಸಿಕ, ಶಾರೀರಕ ಶಕ್ತಿಗಳನ್ನು ಸಂಚಯಿಸುವ ಕಾಲ. ಈ ಅವಧಿ ಜೀವನದ ತಳಹದಿಯಾಗಿದೆ. ಈ ಅವಧಿಯನ್ನು ಯಾರು ಸಮರ್ಪಕವಾಗಿ ಬಳಸಿಕೊಳ್ಳುತ್ತಾರೋ ಅವರು ಉತ್ತಮ ನಾಗರಿಕರಾಗುವುದಲ್ಲದೆ, ಯಶಸ್ವೀ ವ್ಯಕ್ತಿಗಳಾಗುತ್ತಾರೆ. ಉಪಯೋಗಿಸದವರು ಮತ್ತು ಉಪಯೋಗಿಸಿಕೊಳ್ಳಲಾಗದವರು ಸಹಜವಾಗಿ ಹಿಂದುಳಿಯುತ್ತಾರೆ. ಉತ್ತಮವಾದ ವಿದ್ಯೆ, ಜ್ಞಾನ, ಚಾತುರ್ಯ, ದಿವ್ಯ ಶಕ್ತಿ ಮತ್ತು ಗುಣಗಳನ್ನು ಪಡೆಯಲು ಉಪಯೋಗಿಸಿಕೊಳ್ಳಬೇಕಾದ ಈ ಅಮೂಲ್ಯ ಅವಧಿಯಲ್ಲಿ ಇಂದ್ರಿಯ ಕಾಮನೆಗಳನ್ನು ಹತೋಟಿಯಲ್ಲಿ ಇಟ್ಟುಕೊಂಡವರು ಅಗ್ರಗಣ್ಯರಾಗುವರು. ಸ್ತ್ರೀಯರ ಶರೀರ ಪ್ರಕೃತಿಯ ಕರೆಯಂತೆ ಬೇಗ ಯೌವನ ಗಳಿಸುವುದರಿಂದ ಅವರ ಬ್ರಹ್ಮಚರ್ಯಾವಧಿ ಕನಿಷ್ಠ ೧೬ ವರ್ಷಗಳೆಂದು ಹೇಳುತ್ತಾರೆ. ಆದರೆ ಕನ್ಯೆಯರೇ ಆಗಲೀ, ಪುರುಷರೇ ಆಗಲಿ ಬ್ರಹ್ಮಚರ್ಯದ ಅವಧಿ ಮುಗಿದ ಕೂಡಲೇ ವಿವಾಹಿತರಾಗಬೇಕೆಂದೇನೂ ಇಲ್ಲ. ಅವರ ಮನೋನಿಗ್ರಹಶಕ್ತಿ ಅನುಸರಿಸಿ, ಇಟ್ಟುಕೊಂಡ ಯಾವುದೋ ಗುರಿ ಸಾಧನೆಗಾಗಿ ಸೂಕ್ತ ಕಾಲದವರೆಗೆ ಅಥವ ಜೀವನಪೂರ್ತಿ ಬ್ರಹ್ಮಚಾರಿಗಳಾಗಿಯೇ ಇರಬಹುದು. ಇದು ಎಲ್ಲರಿಗೂ ಸಾಧ್ಯವಿಲ್ಲ.
     ಯಶಸ್ವಿಯಾಗಿ ವಿದ್ಯೆ, ಜ್ಞಾನ, ಚತುರತೆ, ನೈಪುಣ್ಯತೆಯನ್ನು ಬ್ರಹ್ಮಚರ್ಯಾಶ್ರಮದಲ್ಲಿ ಗಳಿಸಿದ ನಂತರ ಗೃಹಸ್ಥಾಶ್ರಮದ ಬಾಗಿಲು ತೆರೆದಿರುತ್ತದೆ. ಈ ಗೃಹಸ್ಥಾಶ್ರಮ ಇತರ ಮೂರು ಆಶ್ರಮಗಳವರಿಗೆ ಆಧಾರ ಮತ್ತು ಆಶ್ರಯಸ್ಥಾನವಾಗಿದೆ. ಸಮಾಜ ಅವಲಂಬಿತವಾಗಿರುವುದು ಈ ಗೃಹಸ್ಥರಿಂದಲೇ! ಉತ್ತಮ, ಚಾರಿತ್ರ್ಯವಂತರಾದ ಗೃಹಸ್ಥರು ಕೇವಲ ತಮ್ಮ ಕುಟುಂಬದ ಬಗ್ಗೆ ಮಾತ್ರ ಚಿಂತಿಸದೆ ಸಮಾಜದ ಏಳಿಗೆಗೂ ಉತ್ತಮ ಕೊಡುಗೆ ಕೊಡಬಲ್ಲವರಾಗಿರುತ್ತಾರೆ. ಗೃಹಸ್ಥಾಶ್ರಮದಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ ನಂತರದಲ್ಲಿ ಆತ್ಮೋನ್ನತಿಯ ಗಳಿಕೆಗಾಗಿ ವಾನಪ್ರಸ್ಥಕ್ಕೆ ತೆರಳುವ ಕಾಲ ಬರುತ್ತದೆ. ಇಂದಿನ ಕಾಲಮಾನ ಪರಿಸ್ಥಿತಿಗೆ ಅನುಸಾರವಾಗಿ ವಾನಪ್ರಸ್ಥದ ಪರಿಕಲ್ಪನೆಯನ್ನು ಸೂಕ್ತವಾಗಿ ಬದಲಾಯಿಸಿಕೊಳ್ಳಬಹುದಾಗಿದೆ. ವಾನಪ್ರಸ್ಥದ ಕುರಿತು ಪ್ರತ್ಯೇಕ ಲೇಖನದಲ್ಲಿ ವಿವರಿಸಿದೆ. ಪ್ರಾಪಂಚಿಕ ಆಕರ್ಷಣೆಗಳಿಂದ ಮುಕ್ತರಾಗಿ ಸರಳ ಜೀವನಪದ್ಧತಿ ಅಳವಡಿಸಿಕೊಂಡು, ಮನೆಯ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸಿ, ಸದ್ವಿಚಾರ, ಸತ್ಸಂಗತಿಗಳ ಪ್ರಚಾರ, ಪ್ರಸಾರಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ತಮ್ಮ ವೃತ್ತಿಯ ನೈಪುಣ್ಯ, ಪ್ರವೃತ್ತಿ, ಹವ್ಯಾಸಗಳನ್ನು ಇತರರ ಉಪಕಾರಕ್ಕಾಗಿ ಹಣದ ಆಸೆಯಿಲ್ಲದೆ ಬಳಸಬಹುದಾಗಿದೆ. ಈರೀತಿ ನಿವೃತ್ತ ಜೀವನ ನಡೆಸುವುದರಿಂದ ಯುವಕ-ಯುವತಿಯರಿಗೆ ಸಹಜವಾಗಿ ಜವಾಬ್ದಾರಿ ಲಭಿಸುತ್ತದೆ. ನಂತರದ ಅವಧಿಯೇ ಸಂನ್ಯಾಸಾಶ್ರಮವಾಗಿದ್ದು ಈ ಕುರಿತು ವಿಚಾರ ಮಾಡೋಣ.
      ಚತುರಾಶ್ರಮಗಳ ಶಿಖರಪ್ರಾಯವಾದ ಸಂನ್ಯಾಸಾಶ್ರಮದ ಅವಧಿಯೇ ಇಂದು ವಿಚಾರ ಮಾಡತಕ್ಕದ್ದಾಗಿದೆ. ನಮ್ಮ ಜೀವನ ಶೈಲಿಯಲ್ಲಿನ ಬದಲಾವಣೆಗಳು, ಪ್ರಾರಂಭಿಕ ಹಂತದ ಜೀವನವನ್ನು ಯೋಗ್ಯ ರೀತಿಯಲ್ಲಿ ನಡೆಸದಿರುವುದರಿಂದ ೭೫ ವರ್ಷಗಳ ನಂತರದಲ್ಲಿ ಬದುಕಿರುವುದೇ ದುಸ್ಸಾಹಸವೆನಿಸಿದೆ. ಬದುಕಿದ್ದರೂ ನೂರೆಂಟು ರೀತಿಯ ಕಾಯಿಲೆ, ಕಸಾಲೆಗಳಿಂದ ಜರ್ಜರಿತಾಗಿ ಇನ್ನೊಬ್ಬರ ಮೇಲೆ ಅವಲಂಬಿತರಾಗಿರುವ ಪರಿಸ್ಥಿತಿಯಿದೆ. ಗುಣಕ್ಕೆ ಪ್ರಾಧಾನ್ಯ ಕೊಡದೆ, ಹಣಕ್ಕೆ ಮಾತ್ರ ಬೆಲೆ ಕೊಡುವ ಶಿಕ್ಷಣ ಪದ್ಧತಿಯ ಕೊಡುಗೆ ಇದರಲ್ಲಿ ಅಪಾರವಾಗಿದೆ. ಸಂನ್ಯಾಸಿಗಳಾಗಿ ತಮ್ಮ ಕಾರ್ಯಗಳ ಛಾಪು ಒತ್ತಿದವರು, ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿ ಸಾಧಿಸದವರು ಅನೇಕರು ಬ್ರಹ್ಮಚಾರಿಗಳಾಗಿಯೇ ಮುಂದುವರೆದವರು. ಚಿಕ್ಕ ವಯಸ್ಸಿನಲ್ಲೇ ಪ್ರಾಪಂಚಿಕ ವಿಷಯಗಳ ಬಗ್ಗೆ ನಿರಾಸಕ್ತರಾಗಿ ಪರಿವ್ರಾಜಕರಾಗಿ ದೇಶ ಸುತ್ತಿ ಇಂದಿಗೂ ಜನಮಾನ್ಯರಾಗಿರುವ ವಿವೇಕಾನಂದ, ಶಂಕರಾಚಾರ್ಯ, ರಮಣಮಹರ್ಷಿ ಮುಂತಾದವರ ಸಾಲೇ ಕಣ್ಣೆದುರಿಗೆ ಇದೆ. 
     ಸಂನ್ಯಾಸಿ ಹೇಗಿರಬೇಕು? ಈ ವೇದಮಂತ್ರ ಹೇಳುತ್ತದೆ:
     ಋತಂ ವದನೃತದ್ಯುಮ್ನ ಸತ್ಯಂ ವದನ್ ಸತ್ಯಕರ್ಮನ್ | ಶ್ರದ್ಧಾಂ ವದನ್ ತ್ಸೋಮ ರಾಜನ್ ಧಾತ್ರಾ ಸೋಮ ಪರಿಷ್ಕೃತ ಇಂದ್ರಾಯೇಂದೋ ಪರಿ ಸ್ರವ || (ಋಕ್.೯.೧೧೩.೪.)
     ವೇದಗಳನ್ನೇ, ಧರ್ಮವನ್ನೇ ಶಕ್ತಿಯಾಗಿ ಉಳ್ಳವನೇ, ಸತ್ಯಾನುಕೂಲ ಕರ್ಮಗಳನ್ನೇ ಆಚರಿಸುವವನೇ, ಭಗವದಾನಂದದಿಂದ ಪ್ರಕಾಶಿಸುವವನೇ, ಪ್ರಶಾಂತನೇ, ಜನಜೀವನವನ್ನು ಸರಸಗೊಳಿಸುವವನೇ, ಜಗದಾಧಾರನಿಂದ ಶುದ್ಧೀಕೃತನಾಗಿ, ವೇದಗಳನ್ನೂ, ಧರ್ಮವನ್ನೂ ಬೋಧಿಸುತ್ತಾ, ಸತ್ಯವನ್ನು ಉಪದೇಶಿಸುತ್ತಾ, ಶ್ರದ್ಧೆಯನ್ನು ಪಸರಿಸುತ್ತಾ, ಜೀವಾತ್ಮನ ಹಿತಕ್ಕಾಗಿ, ಪರಮೈಶ್ವರ್ಯವಾನ್ ಪ್ರಭುವಿನ ಪ್ರಾಪ್ತಿಗಾಗಿ ಪರ್ಯಟನ ಮಾಡು, ಕರುಣೆಯನ್ನು ಸುರಿಸು ಎನ್ನುವ ಈ ಮಂತ್ರ ಸಂನ್ಯಾಸಿಯ ಕರ್ತವ್ಯದ ಬಗ್ಗೆ ಬೆಳಕು ಚೆಲ್ಲುತ್ತದೆ. ಸಂನ್ಯಾಸಿಯಾದವನು ಯಾವುದೇ ಜಾತಿಗಾಗಲೀ, ಭಾಷೆಗಾಗಲೀ, ದೇಶಕ್ಕಾಗಲೀ ಸೀಮಿತನಾಗಿರದೆ ಸಕಲ ಜೀವಿಗಳಿಗೆ ಸೇರಿದವನಾಗಿರುತ್ತಾನೆ. ನಿರ್ಮೋಹಿಯಾಗಿ, ಪ್ರಾಪಂಚಿಕ ವಿಷಯಗಳಲ್ಲಿ ನಿರಾಸಕ್ತನಾಗಿ ಆತ್ಮಸಾಧನೆ ಮುಂದುವರೆಸುತ್ತಾ ಹಳ್ಳಿಯಿಂದ ಹಳ್ಳಿಗೆ, ನಗರಗಳಿಗೆ, ದೇಶಗಳಿಗೆ ಸಂಚರಿಸುತ್ತಾ ಮನುಕುಲಕ್ಕೆ ಅಗತ್ಯವಾದ ಸತ್ಯಜ್ಞಾನ, ಸತ್ಯಕರ್ಮ, ಸತ್ಯೋಪಾಸನೆಗಳ ಬಗ್ಗೆ ತಿಳುವಳಿಕೆ ಕೊಡುತ್ತಾ ಸಂಚರಿಸಬೇಕು. ಕೇವಲ ಮಾತಿನಿಂದಲ್ಲ, ಕೃತಿಯಿಂದಲೂ ಇದನ್ನು ಸಾಧಿಸುತ್ತಾ ಸಂಚರಿಸುವ, ಪರಿವ್ರಜನ ಮಾಡುವ ಪರಿವ್ರಾಜಕರೇ ನೈಜ ಸಂನ್ಯಾಸಿಗಳು. ಚಲಿಸುವ ದೇವರಂತೆ ಸಾವು ಬರುವವರೆಗೂ ಜಗತ್ತಿನ ಒಳಿತಿಗೆ, ಹಿತಕ್ಕೆ ಪೂರಕವಾದ ಜ್ಞಾನಪ್ರಸಾರ ಮಾಡುತ್ತಾ ಸುತ್ತಾಡುವವರು ಅವರು! ಸದಾ ಪರ್ಯಟನೆ ಮಾಡುತ್ತಿರಬೇಕಾದುದರಿಂದ ಇತರ ಆಶ್ರಮಗಳಲ್ಲಿಯಂತೆ (ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ) ನಿತ್ಯ ಕರ್ಮಾನಿಷ್ಠಾನಗಳೂ ಸಹ ಅವರಿಗೆ ಕಡ್ಡಾಯವಲ್ಲ. ಶಾಸ್ತ್ರಜ್ಞಾನವಿಲ್ಲದವರು, ಬ್ರಹ್ಮಜ್ಞಾನದ ಅರಿವಿಲ್ಲದವರು, ನಿರ್ಲಿಪ್ತರಲ್ಲದವರು, ವಿಷಯವಾಸನೆಯಿಂದ ಮುಕ್ತರಾಗದವರು, ಆರೋಗ್ಯವಿಲ್ಲದವರು, ಧೃಢಕಾಯರಲ್ಲದವರು ಸಂನ್ಯಾಸಿಗಳಾಗಲಾರರು.
ವಿರಾಗದಲಿ ಮನೆಯ ತೊರೆಯಬೇಕಿಲ್ಲ
ತಪವನಾಚರಿಸೆ ವನವನರಸಬೇಕಿಲ್ಲ |
ನಿಷ್ಕಾಮಕರ್ಮದ ನಿಜಮರ್ಮವನರಿಯೆ
ಅದುವೆ ವಿರಾಗ ಅದುವೆ ತಪ ಮೂಢ ||
      ಭಗವದ್ಗೀತೆಯ ೧೮ನೆಯ ಅಧ್ಯಾಯವು ಮೋಕ್ಷಸಂನ್ಯಾಸಯೋಗಕ್ಕೆ ಸಂಬಂಧಿಸಿದ್ದಾಗಿದ್ದು ಅದರಲ್ಲಿ ಯಜ್ಞ, ದಾನ ಮತ್ತು ತಪರೂಪವಾದ ಕರ್ಮಗಳು ತ್ಯಜಿಸತಕ್ಕದ್ದಲ್ಲ, ಆದರೆ ಇವುಗಳ ಫಲತ್ಯಾಗ ಮಹತ್ವದ್ದೆಂದು ಹೇಳಿದೆ. ಕರ್ಮ ಮಾಡುವುದಷ್ಟೇ ನಮ್ಮ ಕೆಲಸ, ಫಲಾಫಲಗಳ ಕುರಿತು ಚಿಂತಿಸಬೇಕಿಲ್ಲವೆಂದು ಉಪದೇಶಿಸಿದೆ. ಶ್ರೀ ಶಂಕರರ ಯತಿಪಂಚಕದಲ್ಲಿ ಒಬ್ಬ ಯತಿಯ ಲಕ್ಷಣಗಳನ್ನು ವಿವರಿಸಲಾಗಿದೆ. 'ಕೌಪೀನವಂತಃ ಖಲುಭಾಗ್ಯವಂತಃ' ಎಂದು ಪ್ರತಿ ಶ್ಲೋಕದಲ್ಲಿ ಅಂತ್ಯವಾಗುವ ಈ ಪಂಚಕದಲ್ಲಿ ಒಬ್ಬ ಯತಿ ಹೇಗಿರುತ್ತಾನೆಂದು ಹೇಳುತ್ತದೆ. ಅವನು ವೇದದ ವಾಕ್ಯಗಳಲ್ಲಿ ವಿಹರಿಸುತ್ತಾ, ಭಿಕ್ಷಾನ್ನದಿಂದ ತೃಪ್ತನಾಗಿರುತ್ತಾ, ಶೋಕಮುಕ್ತನಾಗಿ ಇತರರ ಬಗ್ಗೆ ಕರುಣಾಳುವಾಗಿರುತ್ತಾನೆ. ಮರಗಳ ಬುಡವೇ ಆಶ್ರಯತಾಣವಾಗಿ, ಕೈಗಳೇ ಆಹಾರದ ಪಾತ್ರೆಯಾಗಿರುವ ಅವನಿಗೆ ಸಂಪತ್ತು ಹಳೆಯ ವಸ್ತ್ರದಂತೆ ಇರುತ್ತದೆ. ದೇಹಾಭಿಮಾನದಿಂದ ದೂರನಾಗಿ, ಆತ್ಮನನ್ನು ಆತ್ಮನಾಗೇ ನೋಡುತ್ತಾ ಆನಂದಮಯನಾಗಿರುವ, ಅಂತರಂಗ, ಮಧ್ಯಮ ಮತ್ತು ಬಹಿರಂಗಗಳ ಸ್ಮರಣೆಯಿಡದವನಾಗಿರುತ್ತಾನೆ. ಆತ್ಮಾನುಭೂತಿಯ ಆನಂದವನ್ನು ಅನುಭವಿಸುತ್ತಾ, ಸರ್ವೇಂದ್ರಿಯಗಳನ್ನು ಶಾಂತಗೊಳಿಸಿಕೊಂಡು ಅಹರ್ನಿಶಿ ಬ್ರಹ್ಮನೊಂದಿಗೆ ತಾದಾತ್ಮ್ಯಭಾವ ಹೊಂದಿರುತ್ತಾನೆ. ಸರ್ವಶಕ್ತ ಭಗವಂತನನ್ನು ಸ್ಮರಿಸುತ್ತಾ, ಹೃದಯದಲ್ಲೇ ಅವನನ್ನು ಕಾಣುತ್ತಾ, ಎಲ್ಲಾ ದಿಕ್ಕುಗಳಲ್ಲೂ ಭಿಕ್ಷಾನ್ನದಿಂದ ಸಂತುಷ್ಟನಾಗಿ ಸಂಚರಿಸುತ್ತಿರುತ್ತಾನೆ. ಮೇಲೆ ಹೇಳಿದ ವೇದಮಂತ್ರದಲ್ಲಿ ತಿಳಿಸಿದ ಪರಿವ್ರಾಜಕನ ಗುಣಗಳನ್ನೇ ಇಲ್ಲಿ ವಿಷದೀಕರಿಸಿದೆಯೆನ್ನಬಹುದು. 
     ಪರಿವ್ರಾಜಕನ ಕೆಲಸ ಮಾಡುತ್ತಿರುವ ಒಬ್ಬ ಸಾಧಕರ ಪರಿಚಯ ಮಾಡಬೇಕೆನಿಸಿದೆ. ಇದಕ್ಕೆ ಕಾರಣವೂ ಇದೆ. ಸೇವಾಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ನನ್ನನ್ನು ಪ್ರೇರಿಸಿದವರು ಅವರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಾಲ್ಮರದ ಸೀತಾರಾಮ ಕೆದಿಲಾಯರೇ ಅವರು. ಚಿಕ್ಕಂದಿನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ತೊಡಗಿಕೊಂಡು, ಬ್ರಹ್ಮಚಾರಿಯಾಗಿ ಉಳಿದು ಸಂಘದ ಪ್ರಚಾರಕರಾಗಿ ಗ್ರಾಮೋತ್ಥಾನ, ಗ್ರಾಮವಿಕಾಸ, ಗೋತಳಿ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಜನಜಾಗೃತಿ ಮಾಡಿದವರು. ಅಖಿಲಭಾರತ ಸೇವಾಪ್ರಮುಖರಾಗಿ ಕಾರ್ಯ ನಿರ್ವಹಿಸಿದವರು. ೨೦೦೯ರಲ್ಲಿ ಭಾರತದಾದ್ಯಂತ ನಡೆದ ವಿಶ್ವಮಂಗಳ ಗೋಯಾತ್ರೆಯ ಶಿಲ್ಪಿ ಅವರು. ಐದು ಅಡಿಯ ವಾಮನಮೂರ್ತಿ, ಕೃಷದೇಹಿ ಕೆದಿಲಾಯರಿಗೆ ಈಗ ೬೭ ವರ್ಷಗಳು. ಇವರು ೨೦೧೨ರ ಆಗಸ್ಟ್ ೯ರಂದು ಭಾರತದ ಅಖಂಡತೆ ಮತ್ತು ಗ್ರಾಮಜೀವನದ ಪುನರುತ್ಥಾನದ ಸಲುವಾಗಿ ಇಡೀ ಭಾರತದ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಲುನಡಿಗೆಯಲ್ಲೇ ಪ್ರಾರಂಭಿಸಿದ್ದು, ಈ ಯಾತ್ರೆ ಮೂರನೆಯ ವರ್ಷದಲ್ಲೂ ಮುಂದುವರೆದಿದೆ. ಇದುವರೆಗೆ ದೇಶದ ೧೨ ರಾಜ್ಯಗಳ ಪ್ರವಾಸ ಮುಗಿಸಿದ್ದಾರೆ. ಅವರ ಪಾದಯಾತ್ರೆ ವಿಶಿಷ್ಟ ರೀತಿಯಲ್ಲಿ ಇರುತ್ತದೆ. ಬೆಳಗಿನ ಜಾವ ಮೂರು ಗಂಟೆಗೆ ಎದ್ದು ವ್ಯಾಯಾಮ, ಪ್ರಾಣಾಯಾಮ, ಪ್ರಾರ್ಥನೆ, ಗೋಪೂಜೆ ಮಾಡಿ ಪಾದಯಾತ್ರೆ ಆರಂಭಿಸುತ್ತಾರೆ. ಸುಮಾರು ೧೦-೧೫ ಕಿ.ಮೀ. ನಡೆದು ೧೨.೩೦ಕ್ಕೆ ಭಿಕ್ಷಾನ್ನ ಸ್ವೀಕಾರ, ವಿಶ್ರಾಂತಿ. ಸಂಜೆ ಊರಿನ ಶಾಲೆಗೆ ಹೋಗಿ ಮಕ್ಕಳಿಂದ ವೃಕ್ಷಾರೋಪಣ, ಗ್ರಾಮದ ವಿವಿಧ ಮುಖಂಡರ ಭೇಟಿ, ದೇಗುಲ, ಚರ್ಚು, ಮಸೀದಿ, ಮಂದಿರಗಳಿಗೆ ಭೇಟಿ, ಜಾತಿ-ಮತಭೇದವಿಲ್ಲದೆ ಎಲ್ಲರೊಡನೆ ಮಾತುಕತೆ, ಮುಕ್ತ ಸಂವಾದ ನಡೆಸುತ್ತಾರೆ. ಒಂದು ರಾಜ್ಯದ ಪ್ರವಾಸ ಮುಗಿದ ನಂತರ ಆಯಾ ರಾಜ್ಯದ ಅಭಿವೃದ್ಧಿ, ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅವರ ಗಮನ ಸೆಳೆಯುತ್ತಾರೆ. ಹೋದೆಡೆಯಲ್ಲೆಲ್ಲಾ ಅವರಿಗೆ ಅಪೂರ್ವ ಸ್ವಾಗತ ಸಿಗುತ್ತಿದೆ. ಮುಂದಿನ ಗ್ರಾಮಕ್ಕೆ ಹೋಗುವಾಗ ಗ್ರಾಮಸ್ಥರೂ ಕೆಲವು ಕಿ.ಮೀ.ಗಳವರೆಗೆ ಅವರೊಡನೆ ಹೆಜ್ಜೆ ಹಾಕುತ್ತಾರೆ. ಅವರ ಈ ಪರ್ಯಟನೆಯ ಉದ್ದೇಶಗಳು ಎರಡು. ಒಂದು: ವಿದೇಶೀಯರು ಭಾರತ ಬಿಟ್ಟರೂ ಅವರ ಸಂಸ್ಕೃತಿ, ದಿರಿಸು, ಭಾಷೆ, ಇತ್ಯಾದಿ ನಮ್ಮನ್ನು ಬಿಟ್ಟಿಲ್ಲ. ಇದು ತಪ್ಪಿ ನಮ್ಮ ಭಾರತೀಯತೆಯ ಛಾಪು ಮೂಡಬೇಕು. ಇನ್ನೊಂದು: ಹೆಚ್ಚುತ್ತಿರುವ ನಗರೀಕರಣದ ವಾತಾವರಣದ ಬದಲಾಗಿ ಹಳ್ಳಿಜೀವನ ಪುನರುಜ್ಜೀವನಗೊಳ್ಳಬೇಕು. ಈ ಕೆಲಸ ಮಾಡುವುದರಿಂದ ಈ ವ್ಯಕ್ತಿಗೆ ಏನು ಲಾಭ? ಲಾಭದ ಅಪೇಕ್ಷೆಯಿಲ್ಲದೆ ಮಾಡುತ್ತಿರುವ ಈ ಕೆಲಸ ಒಬ್ಬ ಶ್ರೇಷ್ಠ ಪರಿವ್ರಾಜಕನದೇ ಅಲ್ಲವೇ? ಇದಲ್ಲವೇ ನೈಜ ಸಂನ್ಯಾಸ?
     ಕಾವಿ ಧರಿಸಿದವರೆಲ್ಲರೂ ಸಂನ್ಯಾಸಿಗಳೆನಿಸಲಾರರು. ಮಠಗಳು, ಆಶ್ರಮಗಳನ್ನು ಸ್ಥಾಪಿಸಿಕೊಂಡು ವೈಭವೋಪೇತವಾಗಿ ಜೀವಿಸುವ ಸಂತರುಗಳೂ ಇರುತ್ತಾರೆ. ಅವರನ್ನು ಮಠಾಧೀಶರು, ಪೀಠಾಧೀಶರು, ಮುಖ್ಯಸ್ಥರು, ಇತ್ಯಾದಿ ಅನ್ನಬಹುದೇ ಹೊರತು ಸಂನ್ಯಾಸಿಗಳು ಎಂದು ಹೇಳಲಾಗದು. ಜಾತಿಗೊಬ್ಬೊಬ್ಬರು ಗುರುಗಳು ಅನ್ನುವುದು ಸಂನ್ಯಾಸತ್ವದ ಮೂಲತತ್ತ್ವಕ್ಕೇ ವಿರುದ್ಧವಾದುದು. ಜಗತ್ತಿನ ವೈಭವಗಳು, ಅನುಕೂಲಗಳನ್ನು ತ್ಯಜಿಸಿದ್ದೇವೆಂದು ಹೇಳುತ್ತಾ ಅದಕ್ಕೇ ಅಂಟಿಕೊಂಡವರು ಸಂನ್ಯಾಸಿಯ ಲಕ್ಷಣಗಳಿಗೆ ಹೊರತಾಗಿರುತ್ತಾರೆ. ಅವರುಗಳೂ ಉತ್ತಮ ಕೆಲಸಗಳನ್ನು ಮಾಡುತ್ತಿರಬಹುದು, ಸಮಾಜಮುಖಿಯಾಗಿ ಜ್ಞಾನಪ್ರಸಾರಕಾರ್ಯದಲ್ಲಿ, ಆಧ್ಯಾತ್ಮಿಕ ವಿಚಾರಗಳ ಪ್ರಸಾರದಲ್ಲಿ ತೊಡಗಿರಬಹುದು. ಕಪಟ ಸಂನ್ಯಾಸಿಗಳಿಗೂ, ಕಾವಿಧಾರಿಗಳಿಗೂ ಏನೂ ಕೊರತೆಯಿಲ್ಲ. ತಮ್ಮ ಜ್ಞಾನವನ್ನು ಹಣ ಸಂಪಾದನೆಗಾಗಿ ಬಳಸುವಂತಹವರೂ ಇದ್ದಾರೆ.  ಆದರೆ, ನೈಜ ಸಂನ್ಯಾಸಿ ಪ್ರಾಪಂಚಿಕ ಬಂಧನಗಳಿಂದ ಮುಕ್ತನಾಗಿ, ಯಾವುದೇ ಜನಾಂಗ, ಧರ್ಮ, ಜಾತಿ, ಪಂಥಗಳಲ್ಲಿ ಗುರುತಿಸಿಕೊಳ್ಳದೆ, ಯಾವುದೇ ದೇಶಕ್ಕೆ ಕಟ್ಟು ಬೀಳದೆ ಪರ್ಯಟನೆ ಮಾಡುತ್ತಾ ವಿಶ್ವಮಾನವ ಸಂದೇಶ ಸಾರುವವನಾಗಿರುತ್ತಾನೆ. ಇಂತಹ ಸಂನ್ಯಾಸಿಗಳ ಅಗತ್ಯತೆ ಇಂದು ದೇಶಕ್ಕಿದೆ. ಪುಣ್ಯಭೂಮಿ ಭಾರತದಲ್ಲಿ ಇಂತಹವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅಂತಹವರ ಮಾರ್ಗದರ್ಶನದಲ್ಲಿ ದೇಶ ಸುದಿಕ್ಕಿನಲ್ಲಿ ಸಾಗಲಿ ಎಂದು ಆಶಿಸೋಣ.
ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ |
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸಂನ್ಯಾಸಿ ಮೂಢ ||
-ಕ.ವೆಂ.ನಾಗರಾಜ್.
**************
15.9.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ:


3 ಕಾಮೆಂಟ್‌ಗಳು:

  1. K Venkatesh Karanth
    ಕೆಲವೊಂದು ಪೀಠ ವನ್ನು ನೋಡಿ..... ಅಲ್ಲಿಯ 'ಸಂಸ್ಥೆ' ಗೆ ತಾನು,ತಂದೆ, ತಂಗಿ, ಇದ್ದು ಉಳಿದ ಹನ್ನೆರಡು ಜನ 'ನಿರ್ದೇಶಕ' ರಿದ್ದರೆ ...ಹೇಗೆ NGO ಆಗತ್ತೆ ಹೇಳಬಲ್ಲಿರಾ?

    Sadyojata Bhatta
    ಸನ್ಯಾಸ ಧರ್ಮದ ಬಗ್ಗೆ ತುಂಬಾ ಒಳ್ಲೆಯ ಮಾಹಿತಿ ಕೊಟ್ಟಿದ್ದೀರಿ. ಆದರೆ ಶ್ರೀ ಶಂಕರಭಗವತ್ಪಾದರ ಅನುಯಾಯಿಗಲಲ್ಲೇ ಸನ್ಯಾಸ ಧರ್ಮ ನಶಿಸಿದೆಯಲ್ಲ, ವಾದ ವಿವಾದ ಗೊಂದಲಗಳು ಸಮರ್ಥನೆಗಳಲ್ಲಿಯೇ ಸನ್ಯಾಸ ಧರ್ಮ ಮುಗಿಯಿತಲ್ಲವೆ ? ಬೇಸರವಾಗುತ್ತಿದೆ.

    Kavi Nagaraj
    ನಿಜ ಸಂನ್ಯಾಸಿಗಳು ಇದ್ದಾರೆ. ಅವರನ್ನು ಜನ ಗುರುತಿಸಿ ಗೌರವಿಸುವುದಿಲ್ಲ, ಅವರಿಗೂ ಅದು ಬೇಕಿಲ್ಲ. ಆಡಂಬರ, ಶೋಕಿ ಮಾಡುವವರಿಗೇ ಆದ್ಯತೆ! ಪಾದಪೂಜೆಗೂ ಲಕ್ಷ ಲಕ್ಷ ಕಾಣಿಕೆ ಬಯಸುವವರು ಸಂನ್ಯಾಸಿಗಳೆನಿಸಿಕೊಂಡಿದ್ದಾರೆ!.

    Srinivas Yelandur
    fantastic comments

    ಪ್ರತ್ಯುತ್ತರಅಳಿಸಿ
  2. ೧. ಅತ್ಯಂತ ತೂಕ ಬದ್ಧ ವಾಕ್ಯಗಳಲ್ಲಿ " ನಿಜ ಸನ್ಯಾಸದ " ದ ಪರಿಯನ್ನು ವಿವರಿಸಿದ ಶ್ರೀ ನಾಗರಾಜರವರಿಗೆ ವಂದನೆಗಳು | ನಾಗರಾಜರೆಂದಂತೇ -- ಗೌರವಿಸುವ ಜನರ ಮಧ್ಯೆ ಅವರು ಇರಲಾರರು " ನೈವ ತಸ್ಯ ಕೃತೇನಾರ್ಥೋ ನಾಕೃತೇನೇಹ ಕಶ್ಚನ " | -- ಗೌರವಿಸುವವರಲ್ಲೂ ಹೆಚ್ಚಿನವರು - ಅವರಲ್ಲಿ ತುಂಬಿದ "ರಾಗ " ವೆಂಬ ರಾಜಸ ಪ್ರವೃತ್ತಿಯಿಂದ ಪ್ರೇರೇಪಿಸಲ್ಪಟ್ಟವರು -- ಅದರ ಹಿಂದೆಯೇ " ದ್ವೇಷವೂ " ಅವಿತಿರುತ್ತದೆ |
    ೨. ಜೀವನದ ಕೊನೆಯ ಭಾಗದಲ್ಲಿ -- ವಾನಪ್ರಸ್ತ ಕ್ಕೆ ಅಣಿಯಾಗುವುದಕ್ಕೆ ಪೂರಕವೋ ಎಂಬಂತೇ - ಪ್ರಕೃತಿ ಮಾತೆಯು - ಪ್ರಾಪಂಚಿಕ ಭೋಗಗಳು ಇಂದ್ರಿಯಗಳ ಪ್ರತಿ ಹುಟ್ಟು ಹಾಕುವ "ಸೆಳೆತಗಳ ವೇಗ " ವನ್ನು ಅತಿ ಕಡಿಮೆ ಗೊಳಿಸಿ ಕೃಪೆದೋರುತ್ತಾಳೆ - ಇದನ್ನು ಉಪಯೋಗಿಸಿ ಬುದ್ಧಿಯ ಮೂಲಕ ಮನಸನ್ನು ಅಂಕೆಯಲ್ಲಿಡುವವನೇ ಜಾಣನು -- " ಕಾಮ ಕ್ರೋಧೋದ್ಭವಂ ವೇಗಂ ಸ ಯುಕ್ತಃ ಸ ಸುಖೀ ನರಃ "|

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ವಂದನೆಗಳು, ವೆಂಕಟೇಶ ಕಾರಂತ್, ಸದ್ಯೋಜಾತ ಭಟ್ಟರು, ಶ್ರೀನಿವಾಸ ಯಳಂದೂರು ಮತ್ತು ಎದುರ್ಕಳ ಈಶ್ವರ ಭಟ್ಟರಿಗೆ.

      ಅಳಿಸಿ