ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ ||
ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. ೫.೫೯.೬]
"ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ."
ಹಾಸನದ ವೇದಭಾರತಿ ತನ್ನದೇ ಆದ ರೀತಿಯಲ್ಲಿ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ವೇದ ಅರ್ಥಾತ್ ಜ್ಞಾನ ಸಮಾಜದ ಎಲ್ಲ ಆಸಕ್ತರಿಗೂ ತಲುಪಲಿ ಎಂಬ ಸದಾಶಯದಿಂದ 'ಎಲ್ಲರಿಗಾಗಿ ವೇದ' ಎಂಬ ಘೋಷ ವಾಕ್ಯದೊಂದಿಗೆ ಸುಮಾರು ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಈ ಸಂಸ್ಥೆಯನ್ನು ಪ್ರಾರಂಭದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರ ಮಾರ್ಗದರ್ಶನದಲ್ಲಿ ಪೋಷಿಸಿ ಬೆಳೆಸಿದವರು ಹರಿಹರಪುರ ಶ್ರೀಧರ್ ಮತ್ತು ಕವಿನಾಗರಾಜರು. ನಂತರದಲ್ಲಿ ಹಲವಾರು ಸಮಾನಮನಸ್ಕರ ಬೆಂಬಲ, ಪ್ರೋತ್ಸಾಹಗಳೂ ಸಿಕ್ಕಿ ಇಂದು ಒಂದು ಗುರುತಿಸಲ್ಪಡುವ ಸಂಘಟನೆಯಾಗಿದೆ. ಶ್ರೀ ಸುಧಾಕರ ಶರ್ಮರವರು ವೇದದ ಬೆಳಕಿನಲ್ಲಿ ನೀಡಿದ ಹಲವು ಉಪನ್ಯಾಸಗಳಿಂದ ಪ್ರಭಾವಿತರಾಗಿ 'ವೇದಸುಧೆ' ಹೆಸರಿನಲ್ಲಿ ಒಂದು ಅಂತರ್ಜಾಲ ಬ್ಲಾಗ್ ಅನ್ನು ಅಕ್ಟೋಬರ್, ೨೦೧೦ರಲ್ಲಿ ಪ್ರಾರಂಭಿಸಲಾಯಿತು. ಈ ಬ್ಲಾಗ್ ಎಷ್ಟು ಜನಪ್ರಿಯವಾತೆಂದರೆ ಇದರಲ್ಲಿ ವೇದದ ಹಿನ್ನೆಲೆಯಲ್ಲಿನ ಹಲವಾರು ಬರಹಗಳಿಗೆ, ಚರ್ಚೆಗಳಿಗೆ ಸಿಕ್ಕ ಪ್ರತಿಕ್ರಿಯೆಗಳು ಪ್ರೋತ್ಸಾಹದಾಯಕವಾಗಿದ್ದವು. ಆರೋಗ್ಯಕರ ಚರ್ಚೆಗಳು ಜ್ಞಾನದ ಹರವನ್ನು ಹೆಚ್ಚಿಸಲು ಸಹಕಾರಿಯಾದವು. ಇದುವರೆಗೆ ೧೨೨೦ ಬರಹಗಳು ಈ ಬ್ಲಾಗಿನಲ್ಲಿ ಪ್ರಕಟವಾಗಿ ಇದುವರೆವಿಗೆ ಸುಮಾರು ೧,೨೫,೦೦೦ ಪುಟವೀಕ್ಷಣೆಗಳಾಗಿವೆ. ಬ್ಲಾಗ್ ಪ್ರಾರಂಭವಾದ ನಂತರದಲ್ಲಿ ಒಂದು ವರ್ಷ ಪೂರ್ಣವಾದ ಸಂದರ್ಭದಲ್ಲಿ ವಾರ್ಷಿಕೋತ್ಸವ ಮಾಡಿ ಆ ಸಂದರ್ಭದಲ್ಲಿ ವಿದ್ವಾಂಸರುಗಳಿಂದ ವಿಚಾರಗೋಷ್ಠಿ , ಅಗ್ನಿಹೋತ್ರದ ಪ್ರಾತ್ಯಕ್ಷಿಕೆ, ವೇದದ ವಿಚಾರಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬ ಉಪನ್ಯಾಸ ಏರ್ಪಡಿಸಲಾಗಿತ್ತು. ೨೦೧೧ರಲ್ಲಿ ವೇದಸುಧೆ ಹೆಸರಿನಲ್ಲಿ ಒಂದು ವೆಬ್ ಸೈಟ್ ಅನ್ನು ಪ್ರಾರಂಭಿಸಲಾಯಿತು. ಈ ವೆಬ್ ಸೈಟಿನಲ್ಲಿ ಅನೇಕ ಪ್ರಬುದ್ಧ ವೈಚಾರಿಕ ಬರಹಗಳು, ಮಾಹಿತಿಗಳು, ವಿಡಿಯೋ, ಆಡಿಯೋಗಳು ಸಾರ್ವಜನಿಕರ ಅವಗಾಹನೆಗೆ ಲಭ್ಯವಿದೆ. ಬ್ಲಾಗ್ ಮತ್ತು ವೆಬ್ ಸೈಟಿನ ವಿಳಾಸ:
ನಂತರದ ದಿನಗಳಲ್ಲಿ ಏರ್ಪಡಿಸಿದ್ದ ಶ್ರೀ ಸುಧಾಕರ ಶರ್ಮರಿಂದ ಒಂದು ವಾರದ ಕಾಲ ಉಪನ್ಯಾಸ ಮಾಲೆ, ಸಾರ್ವಜನಿಕರೊಡನೆ ಮುಕ್ತ ಸಂವಾದ ಜನಮನವನ್ನು ಸೆಳೆಯುವಲ್ಲಿ, ವೈಚಾರಿಕ ಚಿಂತನೆ ಉದ್ದೀಪಿಸುವಲ್ಲಿ ಯಶಸ್ವಿಯಾದವು. ಕಳೆದ ವರ್ಷ ಮೂರು ದಿನಗಳ 'ವೇದೋಕ್ತ ಜೀವನ ಶಿಬಿರ' ನಡೆಸಿದ್ದು ಆ ಶಿಬಿರದಲ್ಲಿ ಹಾಸನ ಜಿಲ್ಲೆಯ ೩೦ ಮತ್ತು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ೪೦ ಶಿಬಿರಾರ್ಥಿಗಳು ಭಾಗವಹಿಸಿದ್ದರು. ದೂರದ ಪೂನಾದಿಂದಲೂ ಒಬ್ಬರು ಭಾಗವಹಿಸಿದ್ದರು. ಪ್ರತಿದಿನ ಸಾಯಂಕಾಲ ಸಾರ್ವಜನಿಕರಿಗೆ ಉಪನ್ಯಾಸ ಏರ್ಪಡಿಸಿತ್ತು. ಕೊನೆಯ ದಿನದಂದು ನಾಲ್ವರು ಮಹಿಳೆಯರೂ ಸೇರಿದಂತೆ ಏಳು ಜನರು ಉಪನಯನ ಸಂಸ್ಕಾರ ಪಡೆದು ಯಜ್ಞೋಪವೀತ ಧಾರಣೆ ಮಾಡಿಸಿಕೊಂಡಿದ್ದು ಉಲ್ಲೇಖನೀಯ. ಇದು ಟಿವಿಯ ವಿವಿಧ ಚಾನೆಲ್ಲುಗಳ ಮೂಲಕ ಬಿತ್ತರವಾಗಿ ಗಮನ ಸೆಳೆದಿತ್ತು. ಸ್ವಾಮಿ ಚಿದ್ರೂಪಾನಂದಜಿಯವರಿಂದ ಒಂದು ವಾರದ ಕಾಲ 'ಗೀತಾಜ್ಞಾನಯಜ್ಞ' ನಡೆಸಲಾಯಿತು. ಕಳೆದ ವರ್ಷದಿಂದ ಮಕ್ಕಳಲ್ಲೂ ವೇದಾಭ್ಯಾಸದಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಬಾಲಶಿಬಿರಗಳನ್ನು ನಡೆಸಲಾಗುತ್ತಿದೆ. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಈಗಲೂ ವೇದಮಂತ್ರಗಳನ್ನು ಹೇಳುತ್ತಿರುವುದು, ಕಲಿಕೆ ಮುಂದುವರೆಸುತ್ತಿರುವುದು ಮುದ ನೀಡುವ ಸಂಗತಿಯಾಗಿದೆ.
ವೇದ ಎಂದರೆ ಕೇವಲ ಪೂಜಾ ಮಂತ್ರಪಾಠಗಳಲ್ಲ, ಒಂದು ವರ್ಗಕ್ಕೆ ಮೀಸಲಲ್ಲ. ಈ ಜ್ಞಾನ ಸಂಪತ್ತು ಸಮಸ್ತ ಮಾನವಕುಲದ ಆಸ್ತಿಯಾಗಿದ್ದು ಎಲ್ಲರೂ ಇದರ ಪ್ರಯೋಜನ ಪಡೆಯಲು ಅರ್ಹರು. ವೇದಗಳಲ್ಲಿ ಎಲ್ಲೂ ಅಸಮಾನತೆಯ ಸೋಂಕಿಲ್ಲ, ಬದಲಾಗಿ ಸಮಸ್ತ ಜೀವರಾಶಿಯ ಶ್ರೇಯೋಭಿವೃದ್ಧಿ ಬಯಸುವ ಸಂದೇಶಗಳಿವೆ. ವೇದಗಳನ್ನು ಪುರಾಣಗಳು ಮತ್ತು ಕಟ್ಟುಕಥೆಗಳೊಂದಿಗೆ ಸೇರಿಸಿ ಅಥವ ಸಮೀಕರಿಸಿ ವಿಶ್ಲೇಷಿಸುವುದು ವೇದಕ್ಕೆ ಬಗೆಯುವ ಅಪಚಾರವಾಗುತ್ತದೆ. ಕರುಣಾಮಯಿ ಪರಮಾತ್ಮ ಜೀವಜಗತ್ತಿನ ವಿಚಾರದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಇವನು ಆಸ್ತಿಕ, ನನ್ನನ್ನು ಹಾಡಿ ಹೊಗಳುತ್ತಾನೆ, ಪೂಜಿಸುತ್ತಾನೆ ಎಂದು ಅವನಿಗೆ ವಿಶೇಷ ಅನುಗ್ರಹ ಕೊಡುವುದಿಲ್ಲ. ಅವನು ನಾಸ್ತಿಕ, ನನ್ನನ್ನು ನಂಬುವುದಿಲ್ಲ, ಹೀಗಳೆಯುತ್ತಾನೆ ಎಂದುಕೊಂಡು ಅವನಿಗೆ ಅನ್ನ, ನೀರು ಸಿಗದಂತೆ ಮಾಡುವುದೂ ಇಲ್ಲ. ಬಿಸಿಲು, ಮಳೆ, ಗಾಳಿ, ಬೆಂಕಿ, ಆಕಾಶಗಳೂ ಸಹ ಅನುಸರಿಸುವುದು ಪರಮಾತ್ಮನ ತಾರತಮ್ಯವಿಲ್ಲದ ಭಾವಗಳನ್ನೇ ಅಲ್ಲವೇ? ಹೀಗಿರುವಾಗ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸರಿ, ತಪ್ಪುಗಳ ವಿವೇಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ, ಪೂರ್ವಾಗ್ರಹಗಳನ್ನು ಬದಿಗಿಟ್ಟು ಚಿಂತನೆ ಮಾಡುವ ಮನೋಭಾವ ಮೂಡಿದರೆ ಅದು ನಿಜಕ್ಕೂ ಒಂದು ವೈಚಾರಿಕ ಕ್ರಾಂತಿಯೆನಿಸುತ್ತದೆ. ಈ ನಿಟ್ಟಿನಲ್ಲಿ ಜನಜಾಗೃತಿ ಮಾಡಲು ವೇದಭಾರತಿ ಎರಡು ವರ್ಷಗಳ ಹಿಂದೆ ಯಾವುದೇ ಜಾತಿ, ಮತ, ಪಂಗಡ, ಲಿಂಗ, ವಯಸ್ಸಿನ ತಾರತಮ್ಯವಿಲ್ಲದೆ ಆಸಕ್ತ ಎಲ್ಲರಿಗೂ ವೇದಮಂತ್ರಗಳನ್ನು ಅಭ್ಯಸಿಸುವ ಅವಕಾಶ ಕಲ್ಪಿಸಿ ಸಾಪ್ತಾಹಿಕ ವೇದಾಭ್ಯಾಸ ತರಗತಿ ಪ್ರಾರಂಭಿಸಿತು. ಒಂದೆರಡು ತಿಂಗಳ ನಂತರ ಇದು ಪ್ರತಿನಿತ್ಯದ ತರಗತಿಯಾಗಿ ಮಾರ್ಪಟ್ಟಿದೆ. ಕಳೆದ ಏಳೆಂಟು ತಿಂಗಳುಗಳಿಂದ ನಿತ್ಯ ಅಗ್ನಿಹೋತ್ರವನ್ನು ಸಾಮೂಹಿಕವಾಗಿ ಮಾಡಲಾಗುತ್ತಿದೆ. ಅಗ್ನಿಹೋತ್ರದ ಮಹತ್ವ, ಮಂತ್ರಗಳ ಅರ್ಥವನ್ನು ಜನರಿಗೆ ಪರಿಚಯಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಮೈಸೂರು, ಬೆಂಗಳೂರು, ಹಂಪಾಪುರ, ಅರಸಿಕೆರೆ ಮುಂತಾದೆಡೆಯಲ್ಲೂ ಈ ಪರಿಚಯ ಕಾರ್ಯ, ಜಾಗೃತಿ ಮೂಡಿಸುವ ಕೆಲಸಗಳಾಗಿವೆ.
ಪ್ರತಿನಿತ್ಯ ಹಾಸನದ ಹೊಯ್ಸಳನಗರದ 'ಈಶಾವಾಸ್ಯಮ್'ನಲ್ಲಿ ಸಾಯಂಕಾಲ ೬ರಿಂದ೭ರವರೆಗೆ ನಡೆಯುವ ವೇದಾಭ್ಯಾಸ ಸತ್ಸಂಗದ ಸ್ವರೂಪ ಪಡೆದುಕೊಂಡಿದೆ. ಪರಮಾತ್ಮಸ್ತುತಿ, ಅಗ್ನಿಹೋತ್ರ, ನಂತರ ವೇದಮಂತ್ರಗಳ ಸಾರವೆಂಬಂತಿರುವ ಎರಡು ಭಜನೆಗಳು, ವೇದಮಂತ್ರಗಳ ಅಭ್ಯಾಸ ನಡೆಯುತ್ತದೆ. ವೇದಮಂತ್ರಗಳ ಅರ್ಥ ತಿಳಿಸುವುದರೊಂದಿಗೆ ಆರೋಗ್ಯಕರ ಚರ್ಚೆಗೂ ಅವಕಾಶವಿರುತ್ತದೆ. ಆಗಾಗ್ಯೆ ಸಾಧು-ಸಂತರ, ಜ್ಞಾನವೃದ್ಧರ ಉಪನ್ಯಾಸಗಳನ್ನೂ ಏರ್ಪಡಿಸಲಾಗುತ್ತದೆ. ಪ್ರತಿನಿತ್ಯ ಸುಮಾರು ೨೦ರಿಂದ೩೦ ಆಸಕ್ತರು ಪಾಲುಗೊಳ್ಳುತ್ತಿದ್ದಾರೆ. ಆಸಕ್ತಿ ಇರುವ ಯಾರಿಗೇ ಆಗಲಿ, ಇಲ್ಲಿ ಮುಕ್ತ ಪ್ರವೇಶವಿದೆ. ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಕೇವಲ ಸ್ವಂತದ ಅಭಿವೃದ್ಧಿಗಾಗಿ ಬಯಸುವುದಲ್ಲ, ಸಮಾಜಮುಖಿಯಾಗಿ ನಮ್ಮ ನಡವಳಿಕೆಗಳು, ಮನೋಭಾವ ವೃದ್ಧಿಸಲಿ ಎಂಬ ಸದುದ್ದೇಶದ ಚಟುವಟಿಕೆಗಳನ್ನು ನಡೆಸುವುದು, ಸಜ್ಜನ ಶಕ್ತಿಯ ಜಾಗರಣೆಗೆ ತನ್ನದೇ ಆದ ರೀತಿಯಲ್ಲಿ ಮುಂದುವರೆಯುವುದು ವೇದಭಾರತಿಯ ಧ್ಯೇಯವಾಗಿದೆ. ವೇದದ ಈ ಕರೆಯನ್ನು ಸಾಕಾರಗೊಳಿಸುವತ್ತ ಸಜ್ಜನರು ಕೈಗೂಡಿಸಲಿ ಎಂದು ಆಶಿಸೋಣ.
ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || [ಅಥರ್ವ.೬.೬೪.೩]
"ನಿಮ್ಮ ಹಿತವು ಒಂದಿಗೇ ಆಗುವಂತೆ, ನಿಮ್ಮ ಮನಃಕಾಮನೆ ಸಮಾನವಾಗಿರಲಿ. ನಿಮ್ಮ ಹೃದಯಗಳು ಸಮಾನವಾಗಿರಲಿ. ನಿಮ್ಮ ಮನಸ್ಸುಗಳು ಸಮಾನವಾಗಿರಲಿ."
-ಕ.ವೆಂ.ನಾಗರಾಜ್.
***************
ದಿನಾಂಕ 16 ಮತ್ತು 17.8.2014ರಂದು ಹಾಸನದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ವೇದಭಾರತಿಯ ದ್ವಿತೀಯ ವಾರ್ಷಿಕೋತ್ಸವ ಸಂಭ್ರಮದಿಂದ ಜರುಗಿತು. ಈ ಸಂದರ್ಭದಲ್ಲಿ ಹೊಸದಿಗಂತ, ಜನಮಿತ್ರ ಮತ್ತು ಜನಹಿತ ಪತ್ರಿಕೆಗಳು ವಿಶೇಷ ಪುಟಗಳನ್ನು ಪ್ರಕಟಿಸಿ ವೇದಪ್ರಚಾರ ಕಾರ್ಯದಲ್ಲಿ ಕೈಜೋಡಿಸಿದ್ದು ವಿಶೇಷ. ಆ ವಿಶೇಷ ಪುಟಗಳಲ್ಲಿ ನನ್ನ ಮತ್ತು ಹರಿಹರಪುರ ಶ್ರೀಧರರ ಲೇಖನಗಳು ಪ್ರಕಟಗೊಂಡಿದ್ದವು.
ಹೊಸದಿಗಂತ:
ಜನಹಿತ:
***************
ದಿನಾಂಕ 16 ಮತ್ತು 17.8.2014ರಂದು ಹಾಸನದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ವೇದಭಾರತಿಯ ದ್ವಿತೀಯ ವಾರ್ಷಿಕೋತ್ಸವ ಸಂಭ್ರಮದಿಂದ ಜರುಗಿತು. ಈ ಸಂದರ್ಭದಲ್ಲಿ ಹೊಸದಿಗಂತ, ಜನಮಿತ್ರ ಮತ್ತು ಜನಹಿತ ಪತ್ರಿಕೆಗಳು ವಿಶೇಷ ಪುಟಗಳನ್ನು ಪ್ರಕಟಿಸಿ ವೇದಪ್ರಚಾರ ಕಾರ್ಯದಲ್ಲಿ ಕೈಜೋಡಿಸಿದ್ದು ವಿಶೇಷ. ಆ ವಿಶೇಷ ಪುಟಗಳಲ್ಲಿ ನನ್ನ ಮತ್ತು ಹರಿಹರಪುರ ಶ್ರೀಧರರ ಲೇಖನಗಳು ಪ್ರಕಟಗೊಂಡಿದ್ದವು.
ಹೊಸದಿಗಂತ:
ಜನಹಿತ:
ಜನಮಿತ್ರ
ಸಾರ್ಥಕವಾದ ಪ್ರಯತ್ನ .ವೇದಸುಧೆಯಲ್ಲೂ ಹಾಕಿ.
ಪ್ರತ್ಯುತ್ತರಅಳಿಸಿಧನ್ಯವಾದ, ಶ್ರೀಧರ್.
ಅಳಿಸಿಧನ್ಯವಾದಗಳು ನಾಗರಾಜ್ ಸರ್
ಪ್ರತ್ಯುತ್ತರಅಳಿಸಿಆತ್ಮೀಯ ಪ್ರಭಾಕರ್, ವೇದಭಾರತಿಯ ಕಾರ್ಯದಲ್ಲಿ ನಿಮ್ಮ ಸಹಕಾರ ಅನನ್ಯವಾಗಿದೆ. ಧನ್ಯವಾದಗಳು.
ಪ್ರತ್ಯುತ್ತರಅಳಿಸಿ