ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಸೆಪ್ಟೆಂಬರ್ 19, 2014

ಜೀವಿಯ ಮೂಲ ಅಥವ ಸೃಷ್ಟಿ ರಹಸ್ಯ


     ದಿನಾಂಕ ೨೪.೮.೨೦೧೪ರ 'ವಿಕ್ರಮ'ದಲ್ಲಿ ಪ್ರಕಟವಾಗಿರುವ 'ಜೀವಿಯ ಮೂಲ ಪತ್ತೆ!' ಎಂಬ ಸುದ್ದಿಯ ಪ್ರಕಾರ ಲಂಡನ್ನಿನ ವಿವಿಯೊಂದರ ಗಣಿತ ವಿದ್ಯಾರ್ಥಿಗಳು ಜಗತ್ತಿನಜೀವಿಯ ಮೂಲ ಯಾವುದು ಎಂಬುದನ್ನು ಕಂಡುಹಿಡಿದಿದ್ದಾರಂತೆ. ಅವರ ಸಂಶೋಧನೆಯ ಪ್ರಕಾರ ಎಲ್ಲ ಜೀವಿಗಳಿಗೂ ಮೂಲವಾಗಿ ಜಗತ್ತಿನಲ್ಲಿ ಒಂದು ಜೀವಿಯಿತ್ತು, ಅದು ಸೋರುವ ಪೊರೆಯಂಥ ದೇಹವನ್ನು ಹೊಂದಿತ್ತು. ಅದರಿಂದಲೇ ಜೀವಿಯ ಉಗಮ ಆರಂಭವಾಗಿದ್ದು ಎಂಬುದು ಇದರ ಸಾರ. ಈ ವಿಚಾರದಲ್ಲಿ ವೇದಗಳು ಹೇಳಿರುವ ವಿಚಾರದ ಬಗ್ಗೆ ತಿಳಿಯೋಣ. 
     ವೇದಗಳು ಸೃಷ್ಟಿ ರಹಸ್ಯದ ಬಗ್ಗೆ ಈಗಾಗಲೇ ಬೆಳಕು ಚೆಲ್ಲಿವೆ. ಸೃಷ್ಟಿ, ಸ್ಥಿತಿ, ಲಯಗಳು ನಿರಂತರವಾಗಿ ನಡೆಯುವ ಕ್ರಿಯೆಗಳಾಗಿದ್ದು ಈ ವಿಶ್ವ ಎಷ್ಟು ಸಲ ಉಗಮವಾಗಿದೆಯೋ, ಎಷ್ಟು ಸಲ ನಾಶವಾಗಿದೆಯೋ ದೇವರಿಗೇ ಗೊತ್ತು. ಆತ್ಮ, ಪರಮಾತ್ಮ ಮತ್ತು ಪ್ರಕೃತಿಗಳು ಅನಾದಿ, ಅನಂತ ಮತ್ತು ಅವಿನಾಶಿಯಾಗಿವೆ ಎಂಬುದು ವೇದಗಳ ಸಿದ್ಧಾಂತ. ಶೂನ್ಯದಿಂದ ಸೃಷ್ಟಿ ಸಾಧ್ಯವಿಲ್ಲವೆಂಬುದು ತಿಳಿದ ವಿಷಯವೇ. ಹಾಗಾದರೆ ಸೃಷ್ಟಿಗೆ ಸಾಧ್ಯವಾದ ವಸ್ತು ಏನಾದರೂ ಇರಲೇಬೇಕು. ಅದು ಏನು? ಋಗ್ವೇದದ ಈ ಮಂತ್ರ ನೋಡಿ:
ನಾಸದಾಸೀನ್ನೋ ಸದಾಸೀತ್ ತದಾನೀಂ ನಾಸೀದ್ರಜೋ ನೋ ವ್ಯೋಮಾ ಪರೋ ಯತ್ |
ಕಿಮಾವರೀವಃ ಕುಹ ಕಸ್ಯ ಶರ್ಮನ್ನಂಭಃ ಕಿಮಾಸೀದ್ಗಹನಂ ಗಭೀರಮ್ || (ಋಕ್. ೧೦.೧೨೯.೧)
      ಸೃಷ್ಟಿಗೆ ಮುನ್ನ ಏನೋ ಇತ್ತು, ಅಲ್ಲಿ ಅಭಾವವಾಗಲೀ, ಶೂನ್ಯವಾಗಲೀ ಇರಲಿಲ್ಲ. ಈ ವಿಶ್ವದ ಸತ್ತೆ ಅಥವಾ ಭಾವವಾಗಲೀ, ಲೋಕವಾಗಲೀ, ಆಕಾಶವಾಗಲೀ ಇರಲಿಲ್ಲ. ಆದರೆ ಆವರಿಸುವ ಏನೋ ಒಂದು ತತ್ವವಿತ್ತು. ಎಲ್ಲಿತ್ತು? ಆನಂದಮಯನಾದ ಪರಮಾತ್ಮನ ಆಶ್ರ್ರಯದಲ್ಲಿತ್ತು. ಗಹನವೂ, ಗಂಭೀರವೂ ಆದ ಏನೋ ಒಂದು ತರಳ ಪದಾರ್ಥವು ಇದ್ದಿತು. ಇದು ಈ ಮಂತ್ರದ ಅರ್ಥ. ಅಂದರೆ, ಮೊದಲಿಗೆ ಏನೋ ಒಂದು ಸೂಕ್ಷ್ಮವಾದ ತರಳ ಅಂದರೆ ಹರಿದಾಡುವ ದ್ರವರೂಪವಾದ ವಸ್ತುವಿತ್ತು. ಬೇರೆ ಯಾವ ಆಧಾರ, ಅಥವ ಆಶ್ರಯ ಸ್ಥಾನವಿಲ್ಲದುದರಿಂದ, ಅದು ಪರಮಾತ್ಮನ ಆಶ್ರಯದಲ್ಲಿಯೇ ಇತ್ತು. ಏನೂ ಇರಲಿಲ್ಲ, ಕೇವಲ ಶೂನ್ಯವಿತ್ತೆಂಬುದು ಸರಿಯಲ್ಲ. ಇನ್ನೊಂದು ವಿಶೇಷವಾದ ಮಂತ್ರ ಗಮನಿಸಿ:
ನ ಮೃತ್ಯುರಾಸೀದಮೃತಂ ನ ತರ್ಹಿ ನ ರಾತ್ರ್ಯಾ ಅಹ್ನ ಆಸೀತ್ ಪ್ರಕೇತಃ |
ಅನೀದವಾತಂ ಸ್ವಧಯಾ ತದೇಕಂ ತಸ್ಮಾದ್ಧಾನ್ಯನ್ನ ಪರಃ ಕಿಂ ಚನಾಸ || (ಋಕ್. ೧೦.೧೨೯.೨)
     ಈ ಸ್ಥಿತಿಯಲ್ಲಿ ಸಾವು ಇರಲಿಲ್ಲವಾದ್ದರಿಂದ ಅಮರತ್ವವೂ ಇರಲಿಲ್ಲ. ರಾತ್ರಿ ಮತ್ತು ಹಗಲುಗಳಿರಲಿಲ್ಲ. ಆ ಮೂಲ ಶಕ್ತಿ ತನ್ನ ಇರುವಿಕೆಯಿಂದಾಗಿ ವಾಯುರಹಿತವಾಗಿ ಬೇರೆಯವರಿಗೆ ಪ್ರಾಣ ನೀಡಬಲ್ಲದಾಗಿತ್ತು. ಇದನ್ನು ಹೊರತುಪಡಿಸಿ ಬೇರೆ ಯಾವು ವಸ್ತುವೂ ಇರಲಿಲ್ಲ ಎಂಬುದು ಇದರ ಅರ್ಥವಾಗಿದೆ. ಸೃಷ್ಟಿಗೂ ಮುನ್ನ ಏನೋ ಇತ್ತು. ಸೂರ್ಯ, ಭೂಮಿ, ಚಂದ್ರ, ಇತ್ಯಾದಿಗಳು ಇಲ್ಲದ್ದರಿಂದ ರಾತ್ರಿ, ಹಗಲುಗಳ ಪ್ರಶ್ನೆ ಇರಲಿಲ್ಲ. ಪ್ರಕೃತಿಯ ಉಗಮದ ಬಗ್ಗೆ ಹೇಳುವ ಮಂತ್ರವಿದು:
ತಮ ಆಸೀತ್ ತಮಸಾ ಗೂಳ್ಹಮಗ್ರೇs ಪ್ರಕೇತಂ ಸಲಿಲಂ ಸರ್ವಮಾ ಇದಮ್ |
ತುಚ್ಛ್ಯೇನಾಭ್ಯವಿಹಿತಂ ಯದಾಸೀತ್ ತಪಸಸ್ತನ್ಮ ಹಿನಾಜಾಯತೈಕಮ್ || (ಋಕ್.೧೦.೧೨೯.೩)
     ಯಾವುದೇ ಲಕ್ಷಣವಿಲ್ಲದೆ, ಕತ್ತಲೆಯಲ್ಲಿ ದ್ರವರೂಪವಾಗಿ ರಹಸ್ಯಮಯವಾಗಿ ಸೃಷ್ಟಿ ಪೂರ್ವದಲ್ಲಿ ಯಾವುದು ಇದ್ದಿತೋ ಅದು ತನ್ನ ತುಚ್ಛತ್ವದಿಂದ ನಾಲ್ಕೆಡೆಯಿಂದಲೂ ಮುಚ್ಚಲಟ್ಟಿದ್ದಿತು. ಅದು ಪರಮಾತ್ಮನ ಮಹಿಮೆಯಿಂದ 'ಒಂದು' ಎಂದಾಯಿತು ಎಂದು ಈ ಮಂತ್ರ ಹೇಳುತ್ತದೆ. ಆದಿಮಾನವನ ಕಾಲಕ್ಕಿಂತಲೂ ಹಿಂದಿನ ಕಾಲದ ವೇದಮಂತ್ರಗಳಲ್ಲಿನ ಇಂತಹ ಅಪೂರ್ವ ವೈಜ್ಞಾನಿಕ ವಿವರಗಳು ಬೆರಗು ಮೂಡಿಸುತ್ತವೆ. 
     ಅಥರ್ವವೇದದಲ್ಲಿ ಬರುವ ಪ್ರಕೃತಿಯ ವರ್ಣನೆ:
ಏಷಾ ಸನತ್ನೀ ಸನಮೇವ ಜಾತೈಷಾ ಪುರಾಣೀ ಪರಿ ಸರ್ವಂ ಬಭೂವ |
ಮಹೀ ದೇವ್ಯುಷಸೋ ವಿಭಾತೀ ಸೈಕೇನೈಕೇನ ಮಿಷತಾ ವಿ ಚಷ್ಟೇ || (ಅಥರ್ವ. ೧೦.೮.೩೦)
     ಈ ಅನಾದಿಯಾದ ಪ್ರಕೃತಿ ಎಲ್ಲ ಸ್ಪಷ್ಟ ಪದಾರ್ಥಗಳಿಗಿಂತ ಮೊದಲಿದ್ದಿತು. ಪರಮಾತ್ಮನ ಸಂಕಲ್ಪದಂತೆ ಮತ್ತು ಅವನ ಇಚ್ಛೆಯಂತೆ, ಹಲವು ರೂಪಗಳಲ್ಲಿ ಪ್ರಕಟವಾಗುವ ಮಹತ್ತತ್ವವಾದ ಈ ಸರ್ವದಾತ್ರೀ ಪ್ರಕೃತಿಯು, ತಾನಾಗಿ ಪ್ರತಿ ಜೀವಿಯ ಮೂಲಕವೂ, ಕಂಡು ಬರುತ್ತದೆ, ಕೆಲಸ ಮಾಡುತ್ತಿದೆ, ವ್ಯಕ್ತವಾಗುತ್ತಿದೆ. ಪ್ರಕೃತಿ ತಾನೇ ತಾನಾಗಿ ಏನನ್ನೂ ಮಾಡಲಾರದಾದರೂ ಪರಮಾತ್ಮನ ಸಂಕಲ್ಪ ಮತ್ತು ಇಚ್ಛಾಶಕ್ತಿಯ ಮೂಲಕ ಮೌನವಾಗಿಯೇ ತನ್ನ ಇರುವನ್ನು ಪ್ರಕಟಪಡಿಸುತ್ತದೆ. 
     ಮತ್ತೆ ಮತ್ತೆ ಪ್ರಪಂಚದ ಸೃಷ್ಟಿಯ ಕುರಿತು ಈ ಮಂತ್ರ ಬೆಳಕು ಚೆಲ್ಲುತ್ತದೆ:
ಸೂರ್ಯಾಚಂದ್ರಮಸೌ ಧಾತಾ ಯಥಾಪೂರ್ವಮಕಲ್ಪಯತ್ | 
ದಿವಂ ಚ ಪೃಥಿವೀಂ ಚಾಂತರಿಕ್ಷಮಥೋ ಸ್ವಃ ||
(ಋಕ್. ೧೦.೧೯೦.೩)
     ಸರ್ವಕರ್ತ ಮತ್ತು ಸರ್ವಾಧಾರ ಪರಮಾತ್ಮನು ಮೊದಲಿದ್ದಂತೆಯೇ ಸೂರ್ಯ-ಚಂದ್ರರನ್ನೂ, ದ್ಯುಲೋಕವನ್ನೂ, ಭೂಮಿಯನ್ನೂ, ಆಕಾಶವನ್ನೂ ಮತ್ತು ಹಾಗೆಯೇ ಆನಂದಮಯ ಸ್ಥಿತಿಯನ್ನು ರಚಿಸಿದನು ಎಂದು ಹೇಳುವ ಮಂತ್ರ ಸೃಷ್ಟಿ, ಸ್ಥಿತಿ, ಲಯಗಳನ್ನು ವಿವರಿಸಿದೆ.
     ವೇದಗಳು ಜ್ಞಾನದ, ವಿಜ್ಞಾನದ ಗಣಿಯಾಗಿವೆ. ಆಸಕ್ತಿಯಿಂದ ಅಧ್ಯಯನ ಮಾಡಿದರೆ ಅನೇಕ ಗಹನ ವಿಚಾರಗಳಿಗೆ, ಸಮಸ್ಯೆಗಳಿಗೆ ಪರಿಹಾರ ತೋರಿಸಬಲ್ಲವಾಗಿವೆ.
-ಕ.ವೆಂ.ನಾಗರಾಜ್.
**************
ದಿನಾಂಕ21.9.2014ರ ವಿಕ್ರಮ ಪತ್ರಿಕೆಯಲ್ಲಿ ಪ್ರಕಟಿತ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ