ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಆಗಸ್ಟ್ 14, 2014

ಶ್ರಮವಿರದ ಸಂಪತ್ತು

     'ಲಕ್ಷಾಧೀಶ್ವರರಾಗುವುದು ಹೇಗೆ?', ಕೋಟ್ಯಾಧೀಶ್ವರರಾಗುವುದು ಹೇಗೆ?' ಇಂತಹ ವಿಷಯಗಳ ಬಗ್ಗೆ ಪುಸ್ತಕಗಳು ಬಿಡುಗಡೆಯಾದರೆ ಆ ಪುಸ್ತಕಗಳು ಬೇಗನೇ ಮಾರಾಟವಾಗಿ ಮರುಮುದ್ರಣ ಕಾಣುತ್ತವೆ. ಪ್ರಕಾಶಕರು ಹಣ ಮಾಡಿಕೊಳ್ಳುತ್ತಾರೆ. ಲಾಟರಿ, ಜೂಜು, ಕುದುರೆ ರೇಸು, ಬೆಟ್ಟಿಂಗ್, ಕಾಳಸಂತೆ, ಕಲಬೆರಕೆ, ಮಾದಕ ದ್ರವ್ಯಗಳು/ವಸ್ತುಗಳ ದಂಧೆ, ದರೋಡೆ, ಕಳ್ಳತನ, ವೇಶ್ಯಾವಾಟಿಕೆ, ದೇಶದ್ರೋಹ, ಪ್ರಾಣಹಾನಿ, ಮಾನಹಾನಿ, ಭಯೋತ್ಪಾದಕತೆ, ಇತ್ಯಾದಿಗಳಲ್ಲಿ ಹಲವರು ಆಸಕ್ತಿ ತಾಳುವುದೂ ಧಿಡೀರ್ ಶ್ರೀಮಂತರಾಗುವ ಕನಸಿನಿಂದಲೇ. ಆದರೆ ಇಂತಹವುಗಳಲ್ಲಿ ಹಣ ಹೂಡಿದವರು ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಜಾಸ್ತಿ. ಆದರೂ ಶ್ರಮ ಪಡದೆ ಸಂಪತ್ತಿಗೆ ಒಡೆಯರಾಗಬಯಸುವವರೇ ಎಲ್ಲರೂ! ಏನನ್ನೂ ಕೊಡದೇ ಏನನ್ನಾದರೂ ಪಡೆಯಬಯಸುವ ಮನುಷ್ಯನ ಈ ಸ್ವಭಾವವನ್ನು ಲೋಭವೆನ್ನೋಣವೇ ಅಥವ ದುರಾಸೆಯೆನ್ನೋಣವೇ? ಏನಾದರೂ ಅನ್ನೋಣ, ಈ ಗುಣದ ಅವಗುಣಗಳ ಕಡೆಗೆ ಕಿರುನೊಟ ಹರಿಸೋಣ.
     ಸಪ್ತ ಮಹಾಪಾತಕಗಳು ಎಂದು ಮಹಾತ್ಮ ಗಾಂಧಿಯವರು ಪಟ್ಟಿ ಮಾಡಿರುವ ಸಂಗತಿಗಳೆಂದರೆ: ೧. ತತ್ತ್ವರಹಿತ ರಾಜಕೀಯ, ೨. ನೀತಿರಹಿತ ವಾಣಿಜ್ಯ, ೩. ಶೀಲರಹಿತ ಜ್ಞಾನ, ೪. ದುಡಿಮೆರಹಿತ ಸಂಪತ್ತು, ೫. ಆತ್ಮಸಾಕ್ಷಿರಹಿತ ಭೋಗ, ೬. ಮಾನವತಾಶೂನ್ಯ ವಿಜ್ಞಾನ ಮತ್ತು ೭. ತ್ಯಾಗವಿಲ್ಲದ ಪೂಜೆ. ಈ ಏಳು ಸಂಗತಿಗಳೂ ಸಂಬಂಧಿಸಿದ ವ್ಯಕ್ತಿಯನ್ನಲ್ಲದೆ ಸಮಾಜವನ್ನೂ ಅಧಃಪತನಕ್ಕೆ ತಳ್ಳುವುವಾಗಿವೆ. ಈ ಏಳೂ ಸಂಗತಿಗಳು ಅಕ್ರಮವಾದ ರೀತಿಯಲ್ಲಿ ಸ್ವಲಾಭ ಮಾಡಿಕೊಳ್ಳುವುದಕ್ಕೆ ಉದ್ದೇಶಿಸಿವೆ. ಎಲ್ಲಿ ಅಕ್ರಮವಿರುವುದೋ ಅಲ್ಲಿ ಅನ್ಯಾಯವಿರುತ್ತದೆ, ಶೋಷಿತರಿರುತ್ತಾರೆ, ನೋವಿರುತ್ತದೆ, ಕ್ಷೋಭೆಯಿರುತ್ತದೆ. ದೇಶದ ನಾಗರಿಕರಾಗಿ ಸಿಗುವ ಎಲ್ಲಾ ಸೌಲಭ್ಯಗಳೂ ಬೇಕು, ಆದರೆ ಕರ್ತವ್ಯಗಳು ಇರಬಾರದು ಎಂಬುದು ಈ ಸಪ್ತಪಾತಕಗಳ ಅಂತರ್ನಿಹಿತ ತಿರುಳು.
     ಶ್ರಮಪಡದೆ ಹಣ ಗಳಿಸಬಯಸುವ ಮನುಷ್ಯನ ಗುಣವನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡಿಕೊಂಡ, ಮಾಡಿಕೊಳ್ಳುತ್ತಿರುವ ಖದೀಮರು ಎಲ್ಲೆಲ್ಲೂ ಕಾಣಸಿಗುತ್ತಾರೆ. ಮನಿ ಸರ್‍ಕ್ಯುಲೇಟಿಂಗ್ ಸ್ಕೀಮ್, ಹಣ ದ್ವಿಗುಣಗೊಳಿಸುವ ಪ್ರಲೋಭನೆ, ಚಿಟ್ ಫಂಡ್ ಸಂಸ್ಥೆಗಳ ಆಮಿಷ, ಖೋಟಾನೋಟುಗಳ ಚಲಾವಣೆ, ಹೀಗೆ ಹಲವಾರು ಬಗೆಯಲ್ಲಿ ಜನರಿಗೆ ಮಕ್ಮಲ್ ಟೋಪಿ ಹಾಕುತ್ತಾರೆ. ಈಗ ಮೊಬೈಲುಗಳಿಗೆ, ಇ-ಮೇಲುಗಳಿಗೆ ನಿಮಗೆ ಲಾಟರಿ ಬಂದಿದೆ ಅಂತಲೋ, ಮತ್ತೇನೋ ಇದೇ ರೀತಿಯ ಸಂದೇಶಗಳನ್ನು ಕಂಡು ಮೋಸ ಹೋಗಿ ಹಣ ಕಳೆದುಕೊಳ್ಳುವವರೂ ಇರುತ್ತಾರೆ. ಜೀವಮಾನವೆಲ್ಲಾ ದುಡಿದು ಕಷ್ಟಪಟ್ಟು ಕೂಡಿಟ್ಟ ಹಣವನ್ನು, ಮಕ್ಕಳ ಮದುವೆ, ವಿದ್ಯಾಭ್ಯಾಸ, ಮುಂತಾದುವಕ್ಕೆ ತೆಗೆದಿಟ್ಟ ಹಣ, ಆಭರಣಗಳನ್ನು ಕಳವು ಮಾಡುವ, ದರೋಡೆ ಮಾಡುವ ಚಾಣಾಕ್ಷರೂ ಇದ್ದಾರೆ. ಎಟಿಎಮ್ಮುಗಳಲ್ಲಿ ಹಣ ಬಿಡಿಸಿಕೊಳ್ಳಲು ಹೋದವರನ್ನೇ ಹೆದರಿಸಿ ಹಣ ಕಿತ್ತು ಪ್ರಾಣಾಂತಿಕ ಹಲ್ಲೆ ಮಾಡಿರುವವರನ್ನೂ ಕಂಡಿದ್ದೇವೆ. ಸರ್ಕಾರದ ಖಜಾನೆಗೇ ಕನ್ನ ಹಾಕುವ ಬಿಳಿ ಕಾಲರಿನ ಅಧಿಕಾರಿಗಳು ಮತ್ತು ರಾಜಕಾರಣಿಗಳೂ ನಮ್ಮ ನಡುವೆಯೇ ಇದ್ದಾರೆ. ಎಲ್ಲರದೂ ಒಂದೇ ಗುರಿ, ಕಡಿಮೆ ಶ್ರಮದಲ್ಲಿ ಹೆಚ್ಚು ಸಂಪಾದನೆ ಮಾಡುವುದು!
     ಹೇಳುತ್ತಾ ಹೋದರೆ ಶ್ರಮವಿಲ್ಲದೆ ಗಳಿಸುವ ಸಂಪತ್ತಿನ ರೀತಿಗಳ ಬಗ್ಗೆ ಹೇಳುತ್ತಲೇ ಹೋಗಬಹುದು. ಶ್ರಮರಹಿತ ಸಂಪತ್ತು ಪಾಪದ ಗಳಿಕೆಯೆಂಬುದನ್ನು ಒಂದೆಡೆ ಇಟ್ಟುಬಿಡೋಣ. ಕೆಲವರು ಬಡವರ ಮನೆಯಲ್ಲಿ ಹುಟ್ಟುತ್ತಾರೆ, ಕೆಲವರು ಆಗರ್ಭ ಶ್ರೀಮಂತರ ಮನೆಯಲ್ಲಿ ಜನಿಸುತ್ತಾರೆ. ಶ್ರೀಮಂತರೆನಿಸಿಕೊಂಡ ಮನೆಯವರ ಹಿಂದಿನ ತಲೆಮಾರಿನ ಯಾರೋ ಅಗಾಧ ಸಂಪತ್ತು ಕೂಡಿಟ್ಟಿದ್ದು ಅವರ ಮಕ್ಕಳು ಶ್ರಮವಿಲ್ಲದೆ ಅದನ್ನು ಅನುಭವಿಸುವ ಸ್ಥಿತಿಯಲ್ಲಿರುತ್ತಾರೆ. ಬಡವರಾದರೋ ತಮ್ಮ ತುತ್ತಿನ ಗಳಿಕೆಗಾಗಿ ಶ್ರಮ ಪಡಲೇಬೇಕು. ಕಷ್ಟಪಟ್ಟು ಗಳಿಸಿದ ಶ್ರೀಮಂತರಿಗೆ ಬಡತನದ ಅರಿವಿರುತ್ತದೆ. ಆದರೆ ಪಿತ್ರಾರ್ಜಿತವಾಗಿ ಬಂದ ಶ್ರೀಮಂತಿಕೆಗೆ ಬಡತನದ ಕಷ್ಟ, ನೋವುಗಳು ಅರ್ಥವಾಗಲಾರವು. ಮೇಲು-ಕೀಳುಗಳ ಅಂತಸ್ತಿನ ತಾರತಮ್ಯ ಉದ್ಭವವಾಗುವುದು ಇಲ್ಲಿಯೇ. ಯಾವಾಗ ಇಂತಹ ತಾರತಮ್ಯ ಮನೋಭಾವದಿಂದ ಕುರುಡಾಗಿಬಿಡುತ್ತೇವೆಯೋ ಆಗಲೇ ತಮಗಿಂತ ಕಡಿಮೆ ಶ್ರೀಮಂತಿಕೆ ಇರುವವರೊಂದಿಗೆ ನಮ್ಮ ವ್ಯವಹಾರದ ರೀತಿ ಬದಲಾಗಿಬಿಡುತ್ತದೆ. ತಮ್ಮ ಜೀವಿತಕ್ಕಾಗಿ ಯಾರು ಶ್ರಮಪಡುವ ಅಗತ್ಯವಿಲ್ಲವೋ ಅಥವ ಶ್ರಮಪಡುವುದಿಲ್ಲವೋ ಅವರು ತಮ್ಮಂತಹವರ ಜೊತೆಗೇ ಸ್ನೇಹ ಬೆಳೆಸುತ್ತಾರೆ. ಶ್ರಮಜೀವಿಗಳನ್ನು ಕೀಳಾಗಿ ನೋಡುತ್ತಾರೆ. ಹೊಟ್ಟೆಪಾಡಿಗೆ ಮನೆಗೆಲಸ ಮಾಡುವವರು, ಕೂಲಿಗಳು ಮುಂತಾದವರೊಂದಿಗೆ ಮಾತನಾಡಿಸುವ, ವರ್ತಿಸುವ ರೀತಿಯಲ್ಲೇ ವ್ಯತ್ಯಾಸ ಗುರುತಿಸಬಹುದು. ಇಂತಹ ವ್ಯತ್ಯಾಸವನ್ನು ಕೆಳಗಿನ ಅಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳ ನಡುವೆಯೂ ಕಾಣಸಿಗುತ್ತವೆ. 'ಹಣದ ಮೋಹವೇ ಎಲ್ಲಾ ಕೆಡಕುಗಳ ಮೂಲ' ಎಂದು ಬೈಬಲ್ ಹೇಳುತ್ತದೆ. ಇಲ್ಲಿ ಗಮನಿಸಬೇಕಾದುದೇನೆಂದರೆ, ಹಣ ಕೆಡುಕಿನ ಮೂಲವಲ್ಲ, ಹಣದ ಮೋಹ ಕೆಡುಕುಗಳಿಗೆ ಕಾರಣವೆಂಬುದು! ಹಣದ ಹಿಂದೆ ಬೀಳುವುದೆಂದರೆ ಬದುಕಿನ ನೈಜ ಮೌಲ್ಯಗಳಿಂದ ದೂರ ಹೋದಂತೆಯೇ ಸರಿ. ಓಡುತ್ತಿರುವ ಎರಡು ಮೊಲಗಳನ್ನೂ ಒಟ್ಟಿಗೇ ಹಿಡಿಯಲು ಹೋದರೆ ಯಾವುದೂ ಸಿಗಲಾರದು. ಹಣದ ವಿಚಾರವೂ ಹಾಗೆಯೇ, ಹಣವೆಂಬ ಮೊಲದ ಹಿಂದೆ ಮಾತ್ರ ಗಮನ ಹರಿಸಿದಾಗ ಸಹಜವಾಗಿ ಗುಣವೆಂಬ ಮೊಲ ಸಿಗಲಾರದು.
     ಸಂಪತ್ತು ಎಂದಾಕ್ಷಣ ಹಣದ ಸಂಪತ್ತೇ ಕಣ್ಣಿಗೆ ಬೀಳುತ್ತದೆ. ಆದರೆ, ಸಂಪತ್ತು ಎಂದರೆ ಹಣ ಮಾತ್ರ ಆಗಬೇಕಿಲ್ಲ, ಯಾವುದೇ ಆಗಲಿ ಹೇರಳವಾಗಿದ್ದರೆ ಅದನ್ನು ಸಂಪತ್ತು ಎನ್ನಬಹುದು. ಅದು ಅನುಭವವೂ ಆಗಬಹುದು, ಜ್ಞಾನವೂ ಆಗಬಹುದು. ಇಂತಹ ಸಂಪತ್ತು ಹೆಚ್ಚಾದಷ್ಟೂ ಒಳ್ಳೆಯದೇ. ಏಕೆಂದರೆ ಅನುಭವಗಳಾಗಲೀ, ಜ್ಞಾನವಾಗಲೀ ಶ್ರಮಪಡದೇ ಸಿಗುವಂತಹುದಲ್ಲ. ಆದರೆ ಇಂದಿನ ಕಾಲದಲ್ಲಿ ಶ್ರಮಪಡದೇ ಡಿಗ್ರಿಗಳನ್ನು ಪಡೆಯುವುದು, ಡಾಕ್ಟರೇಟ್ ಗಳಿಸುವುದು, ಪ್ರಶಸ್ತಿ, ಸಮ್ಮಾನಗಳನ್ನು ಪಡೆಯುವುದು ಸಾಧ್ಯವಿದೆಯೆಂಬುದು ಮಾತ್ರ ಪರಿಸ್ಥಿತಿಯ ವ್ಯಂಗ್ಯವಾಗಿದೆ. ನೈಜ ಜ್ಞಾನಿಗಳಿಗೂ, ಇಂತಹ ನಕಲಿ ಜ್ಞಾನಿಗಳಿಗೂ ಇರುವ ವ್ಯತ್ಯಾಸ ಅಸಲಿ ಬಂಗಾರ ಮತ್ತು ಕಾಗೆ ಬಂಗಾರಕ್ಕೆ ಇರುವಷ್ಟೇ ಆಗಿರುತ್ತದೆ. ಹುಳುಕು ಒಂದಲ್ಲಾ ಒಂದು ದಿನ, ಒಂದಲ್ಲಾ ಒಂದು ರೀತಿಯಲ್ಲಿ ಗೊತ್ತಾಗಿಬಿಡುತ್ತದೆ. ಕಷ್ಟಪಡದೆ ಶ್ರೀಮಂತಿಕೆಯಲ್ಲಿ ತೇಲಾಡುವ ಯುವಕ, ಯುವತಿಯರು ಇಂದು ಯಾವ ರೀತಿಯಲ್ಲಿ ವರ್ತಿಸುತ್ತಿದ್ದಾರೆ, ಹೇಗೆ ಸಮಾಜದ ಕಾನೂನು-ಕಟ್ಟಳೆಗಳನ್ನು ಮೀರಿ ನಡೆಯುತ್ತಿದ್ದಾರೆ, ಸಮಾಜಕ್ಕೆ ಶತ್ರುಗಳಾಗಿದ್ದಾರೆ, ಕಂಟಕರಾಗಿದ್ದಾರೆ ಎಂಬುದು ದಿನಬೆಳಗಾದರೆ ನೋಡುವ, ಕೇಳುವ ಸುದ್ದಿಗಳೇ ಹೇಳುತ್ತವೆ. ಅವರುಗಳು ಅಪರಾಧಗಳನ್ನು ಮಾಡಿಯೂ ಅದನ್ನು ಸಮರ್ಥಿಸಿಕೊಳ್ಳುವ, ವರ್ತಿಸುವ ನಿರ್ಲಜ್ಜ ನಡವಳಿಕೆಗಳು ಹೇವರಿಕೆ ತರಿಸುತ್ತವೆ. ಶ್ರಮರಹಿತ ಸಂಪತ್ತು ಮಹಾಪಾತಕವೆಂಬ ಮಹಾತ್ಮ ಗಾಂಧಿಯವರ ಮಾತು ಇಂತಹ ನಿರ್ಲಜ್ಜರ ವರ್ತನೆಯಿಂದ ಮಹಾಸತ್ಯವೆನಿಸುತ್ತದೆ.
     ಸಾಮಾನ್ಯವಾಗಿ ಶ್ರಮವಿರದ ಸಂಪತ್ತು ಅಕ್ರಮ ಸಂಪತ್ತೇ ಆಗಿರುವ ಸಾಧ್ಯತೆ ಹೆಚ್ಚು. ಅದರ ತಾಳಿಕೆ, ಬಾಳಿಕೆ ಕಡಿಮೆ. ಜೈಲಿನಲ್ಲಿರುವ ಗಣಿಧಣಿಗಳು, ಒಬ್ಬರನ್ನೊಬ್ಬರು ಕೊಚ್ಚಿಹಾಕುತ್ತಿರುವ ಭೂಗತ ಪಾತಕಿಗಳನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು. ಅಂತಹ ಸಂಪತ್ತೇ ಜೀವನದ ನೆಮ್ಮದಿಯನ್ನು ಹಾಳುಗೆಡವಿಬಿಡುತ್ತದೆ. ಹಣವಿದ್ದು ಗುಣವಿಲ್ಲದಿದ್ದರೆ ಅದು ಸಮಾಜಕ್ಕೆ ಕಂಟಕಕಾರಿಯೇ ಸರಿ. ಅಕ್ರಮ ಸಂಪತ್ತು ಅದನ್ನು ಉಳಿಸಿಕೊಳ್ಳುವ ಯತ್ನದಲ್ಲಿಯೇ ಶೀಘ್ರವಾಗಿ ಕರಗಿಹೋಗುತ್ತದೆ ಮತ್ತು ಕೆಟ್ಟ ಕಾರ್ಯಗಳಿಗಾಗಿಯೇ ವಿನಿಯೋಗವಾಗುತ್ತದೆ. ಕಷ್ಟಪಟ್ಟು ಮಾಡುವ ಸಂಪಾದನೆ ಬೆಳೆಯುತ್ತಾ ಹೋಗುತ್ತದೆ ಮತ್ತು ಉತ್ತಮ ಮೌಲ್ಯ ಬಿಂಬಿಸುತ್ತದೆ. ಭೋಗವಾದ ಅಥವ ಕೊಳ್ಳುಬಾಕತನ ಶ್ರೀಮಂತರಾಗಿರುವ ಅನಿವಾರ್ಯತೆ ಸೃಷ್ಟಿಸುತ್ತದೆ ಮತ್ತು ಶ್ರಮವಿರದ ಸಂಪತ್ತನ್ನು ಗಳಿಸಲು ಪ್ರೇರಿಸುತ್ತದೆ. ಆದರೆ, ಆಧ್ಯಾತ್ಮಿಕವಾದ ಮಾತ್ರ ವ್ಯಕ್ತಿಯನ್ನು ದೇವರಲ್ಲಿ ಹೀಗೆ ಪ್ರಾರ್ಥಿಸುವಂತೆ ಮಾಡುತ್ತದೆ: "ಓ ದೇವರೇ, ಸಾಯುವ ಮುನ್ನ ನನಗೆ ಎರಡು ವರಗಳನ್ನು ನೀಡು. ಒಂದು, ನಾನು ಸುಳ್ಳು ಹೇಳದಿರುವಂತೆ ಮಾಡು ಮತ್ತು ಇನ್ನೊಂದು, ನನಗೆ ಬಡತನವನ್ನಾಗಲೀ, ಶ್ರೀಮಂತನನ್ನಾಗಲೀ ಮಾಡದೆ ನನಗೆ ಅಗತ್ಯವಿರುವಷ್ಟನ್ನು ಮಾತ್ರ ಹೊಂದಿರುವಂತೆ ಮಾಡು. ಬಡವನಾದರೆ ಕದಿಯಬೇಕಾದ ಪರಿಸ್ಥಿತಿ ಬರಬಹುದು. ಶ್ರೀಮಂತನಾದರೆ ನಾನು ನಿನ್ನನ್ನು ನೆನೆಯದೇ ಹೋಗಬಹುದು." ವೇದಗಳು ಈ ವಿಷಯದಲ್ಲಿ ಸುಯೋಗ್ಯ ಮಾರ್ಗದರ್ಶನ ನೀಡುತ್ತಿವೆ. ಸಂಪಾದಿಸಬೇಕು, ಆದರೆ, ಧರ್ಮ ಸದಾ ಗಮನದಲ್ಲಿರಬೇಕು. ಅನ್ಯಾಯಮಾರ್ಗಕ್ಕೆ, ಅಸತ್ಯವ್ಯವಹಾರಗಳಿಗೆ, ಪರಿವಂಚನೆಗೆ, ಸುಲಭವಾಗಿ ಹಣ ರಾಶಿಹಾಕುವ ಪ್ರಲೋಭನಕ್ಕೆ ಎಂದೂ ಸಿಕ್ಕಿಕೊಳ್ಳಬಾರದು ಎಂದು ಬೋಧಿಸುವ ಮಂತ್ರವಿದು:
ಅಕ್ಷೈರ್ಮಾ ದೀವ್ಯಃ ಕೃಷಿಮಿತ್ ಕೃಷಸ್ಯ ವಿತ್ತೇ ರಮಸ್ವ ಬಹು ಮನ್ಯಮಾನಃ |
ತತ್ರ ಗಾವಃ ಕಿತವ ತತ್ರ ಜಾಯಾ ತನ್ಮೇ ವಿ ಚಷ್ಟೇ ಸವಿತಾಯಮರ್ಯಃ || (ಋಕ್.೧೦.೩೪.೧೩.)
     ದಾಳಗಳಿಂದ ಜೂಜಾಡಬೇಡ. ಕೃಷಿಯನ್ನೇ ಮಾಡು, ಕಷ್ಟಪಟ್ಟು ದುಡಿ. ನಿಜವಾದ ದುಡಿಮೆಯಿಂದ ಲಭಿಸುವುದೇ ಸಾಕಷ್ಟು ಎಂದು ತಿಳಿದು, ಆ ಹಣದಲ್ಲಿ ಸಂತುಷ್ಟನಾಗಿರು. ಕಷ್ಟದ ದುಡಿಮೆಯಲ್ಲೇ ಗೋಸಂಪತ್ತಿದೆ. ಅದರಲ್ಲೇ ದಾಂಪತ್ಯಸುಖವೂ ಇದೆ ಎಂಬುದು ಇದರ ಅರ್ಥ. 'ಅಕ್ಷ' ಎಂದರೆ ದಾಳ ಎಂಬುದನ್ನು ಕೇವಲ ಉದಾಹರಣೆಯಾಗಿ ಭಾವಿಸಬೇಕು. ಕುದುರೆ ಜೂಜು, ಲಾಟರಿ, ಕಾಳಸಂತೆ, ಲಾಭಕೋರತನ, ಕಳ್ಳದಾಸ್ತಾನು ಮುಂತಾದವು ಸಹ ಜೂಜಿನ ಗುಂಪಿಗೇ ಸೇರಿದ ಪಾಪವೃತ್ತಿಗಳು ಎಂಬುದನ್ನು ಮರೆಯಬಾರದು. ಇನ್ನು, ಹೇಗೆ ಸಂಪಾದಿಸಬೇಕು ಎಂಬ ಪ್ರಶ್ನೆಗೆ ಉತ್ತರವಿದು:-
ಪರಿ ಚಿನ್ಮರ್ತೋ ದ್ರವಿಣಂ ಮಮನ್ಯಾದೃತಸ್ಯ ಪಥಾ ನಮಸಾ ವಿವಾಸೇತ್|
ಉತ ಸ್ವೇನ ಕ್ರತುನಾ ಸಂ ವದೇಶ ಶ್ರೇಯಾಂಸಂ ದಕ್ಷಂ ಮನಸಾ ಜಗೃಬ್ಯಾತ್ || (ಋಕ್.೧೦.೩೧.೨.)
     ಹಣವು ಎಲ್ಲೆಡೆಯೂ ಇದೆ ಎಂದರಿಯಬೇಕು. ನ್ಯಾಯದ ಹಾಗೂ ಸತ್ಯದ ಮಾರ್ಗದಿಂದ ನಮ್ರತೆಯಿಂದ ನಡೆದುಹೋಗಬೇಕು ಮತ್ತು ತನ್ನ ಸ್ವಂತ ಸದ್ವಿಚಾರ ಸದಾಚಾರಗಳಿಂದ ಮಾತನಾಡಬೇಕು. ಮನಸ್ಸಿನಿಂದ ಶ್ರೇಯಸ್ಕರವಾದ ಶಕ್ತಿಯನ್ನು ಗ್ರಹಿಸಬೇಕು. ಈ ವೇದೋಕ್ತ ಮಾರ್ಗದಲ್ಲಿ ಸಂಪತ್ತು ಗಳಿಸುವುದೇ ಶ್ರೇಯಸ್ಕರವೆನ್ನುವ ಈ ಮಂತ್ರ ಸ್ವಚ್ಛ ಸಮಾಜಕ್ಕೆ ಆದರ್ಶವಾಗುತ್ತದೆ. ದೈನಂದಿನ ಅಗತ್ಯತೆಗಳಿಗೆ, ನೆಮ್ಮದಿಯ ಜೀವನಕ್ಕೆ ಮತ್ತು ಇತರರ ಸಲುವಾಗಿ ಸಹ ಹಣಗಳಿಕೆ  ಅನಿವಾರ್ಯವಾಗಿದೆ. 'ವಯಂ ಸ್ಯಾಮ ಪತಯೋ ರಯೀಣಾಮ್||' (ಯಜು.೨೩.೬೫.) - [ಪ್ರಜೆಗಳ ಸ್ವಾಮಿಯೇ, ನಾವು ಸಂಪತ್ತಿನ ಒಡೆಯರಾಗೋಣ.] ನಿಜ, ನಾವು ಸಂಪತ್ತಿನ ಒಡೆಯರಾಗಬೇಕು, ಆದರೆ ಸಂಪತ್ತು ನಮ್ಮ ಒಡೆಯರಾಗಬಾರದು.
    ಗಳಿಸಿದ ಸಂಪತ್ತಿನ ಯೋಗ್ಯರೀತಿಯ ಬಳಕೆಯ ಬಗ್ಗೆಯೂ ವೇದ ಮಾರ್ಗದರ್ಶನ ನೀಡಿದೆ. ಗಮನಿಸಿ:
ಶತಹಸ್ತ ಸಮಾಹರ ಸಹಸ್ರಹಸ್ತ ಸಂ ಕಿರ | ಕೃತಸ್ಯ ಕಾರ್ಯಸ್ಯ ಚೇಹ ಸ್ಫಾತಿಂ ಸಮಾವಹ ||  (ಅಥರ್ವ.೩.೨೪.೫.)
     ನೂರು ಕೈಗಳುಳ್ಳವನೇ, ಚೆನ್ನಾಗಿ ಸಂಪಾದನೆ ಮಾಡು. ಸಾವಿರ ಕೈಗಳುಳ್ಳವನೇ, ಚೆನ್ನಾಗಿ ಹಂಚು. ಈ ಲೋಕದಲ್ಲಿ ನೀನು ಮಾಡಿದ ಕಾರ್ಯದ ವಿಸ್ತಾರವನ್ನು ಈ ರೀತಿ ಸಾಧಿಸಿಕೋ ಎಂಬುದು ಇದರ ಅರ್ಥ. ಸಂಪತ್ತಿನ ಸಂಚಯ ಒಳಿತಲ್ಲವಾದರೂ, ಸಂಪಾದಿಸುವುದೇ ಬೇಡ ಅನ್ನುವುದು ತಪ್ಪಾಗುತ್ತದೆ. ಕಷ್ಟಪಟ್ಟು  ದುಡಿದು ನೂರು ರೀತಿಯಲ್ಲಿ ಸಂಪಾದಿಸಬೇಕು. ಅದನ್ನು ಸ್ವಂತಕ್ಕೆ ಮಾತ್ರ ಉಪಯೋಗಿಸುವುದಲ್ಲದೆ,  ದೀನ-ದುಃಖಿಗಳಿಗೆ, ನಾನಾ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಸಾವಿರ ರೀತಿಗಳಲ್ಲಿ ವಿನಿಯೋಗಿಸಬೇಕು ಎಂಬ ಈ ಮಾತು ಮನನೀಯ ಮತ್ತು ಪಾಲನೀಯವಾಗಿದೆ. ನಮ್ಮ ಉಳಿವಿಗೆ ಸಮಾಜ ಬೇಕು, ಆದರೆ ಸಮಾಜಕ್ಕೆ ನಮ್ಮಿಂದ  ಏನೂ ಇಲ್ಲವೆಂದಾದರೆ ಅದು ಕೃತಘ್ನತೆಯಾಗುತ್ತದೆ. ಒಂದು ವೃಕ್ಷ ತಾನು ಪ್ರಕೃತಿಯಿಂದ ಏನೆಲ್ಲಾ ಪಡೆದಿದೆಯೋ ಅದೆಲ್ಲವನ್ನೂ ನಮಗೆ ಧಾರೆಯೆರೆಯುತ್ತದೆ. ಅದೇ ರೀತಿ ಯಾವುದೇ ವ್ಯಕ್ತಿ ತಾನು ಏನು ಹೊಂದಿದ್ದಾನೆಯೋ ಅದೆಲ್ಲವನ್ನೂ ಹೊರಗಿನಿಂದ ಪಡೆದದ್ದೇ ಹೊರತು ತಾನು ತಂದಿದ್ದಲ್ಲ ಮತ್ತು ಅವನು ಅವೆಲ್ಲಕ್ಕೆ ಒಡೆಯನೂ ಅಲ್ಲ. ಈ ಪರಿಜ್ಞಾನ ಬಂದಾಗ ಇರುವುದರಲ್ಲಿ ತೃಪ್ತಿ ಹೊಂದಿ ಸಂತೋಷದಿಂದಿರುವ ಮನೋಭಾವ ನಮ್ಮದಾಗುತ್ತದೆ.
ಇರುವುದು ನಿನದಲ್ಲ ಬರುವುದು ನಿನಗಲ್ಲ
ತರಲಾರದ ನೀನು ಹೊರುವೆಯೇನನ್ನು?|
ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ
ಫಲಧಾರೆ ಹರಿಯಗೊಡು ಮರುಳು ಮೂಢ||
-ಕ.ವೆಂ.ನಾಗರಾಜ್.
**************
11.8.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ.5 ಕಾಮೆಂಟ್‌ಗಳು:

 1. `ವೇದೋಕ್ತ ಮಾರ್ಗದಲ್ಲಿ ಸಂಪತ್ತು ಗಳಿಸುವ' ಮತ್ತು ಅದನ್ನು ಸದ್ವಿನಿಯೋಗ ಮಾಡುವ ಬಗ್ಗೆ ಬಹಳ ಚೆನ್ನಾಗಿ ತಿಳಿಸಿದ್ದೀರಿ ಸರ್, ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ವಂದನೆಗಳು, ಪ್ರಭಾಮಣಿಯವರೇ.

   ಅಳಿಸಿ
  2. Prathibha Rai
   ನಿಜ.... ನಾವು ಸಂಪತಿನ ಒಡೆಯರಾಗಬೇಕು...ಸಂಪತ್ ನಮ್ಮ ಒಡೆಯರಾಗಬಾರದು...

   Chanakya Chandira
   Innu heli janake ,,,namma kivudarige,,,,,,,sir tq for social attitude,,,,

   ಅಳಿಸಿ
  3. nageshamysore
   ಸಂಪತ್ತಿನ ಬಗೆ ಬಗೆ ಬಣ್ಣಗಳನ್ನು ತೊಳೆಗಳಂತೆ ಬಿಡಿಸಿಟ್ಟ ಲೇಖನ. ಲೋಭಕಾರಕ ದ್ರವ್ಯ ಸಂಪತ್ತಿನ ಜತೆಗೆ ಜ್ಞಾನದಂತಹ ಉಪಯುಕ್ತ ಸಂಪತ್ತಿನ ಸಂಪಾದನೆಯನ್ನು ಸೇರಿಸಿ ಹೆಣೆದ ರೀತಿ ಲೇಖನಕ್ಕೆ ಪೂರ್ಣ ರೂಪವೀಯುವಲ್ಲಿ ಸಹಕಾರಿಯಾಗಿದೆ. ಒಟ್ಟಾರೆ ಯಾವ ಸಂಪತ್ತಾದರೂ ಸರಿ, ಅಂತಿಮವಾಗಿ 'ಶೂನ್ಯ ಸಂಪಾದನೆ' ಯತ್ತ ಕೊಂಡೊಯ್ದರೆ ಸರಿ :-)

   kavinagaraj
   ಶೂನ್ಯ ಸಂಪಾದನೆಯೂ ಮಹತ್ವದ್ದೇ, ನಾಗೇಶರೇ. ಧನ್ಯವಾದಗಳು.

   ಅಳಿಸಿ