ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಜನವರಿ 14, 2013

ಲಂಡನ್ ಮಕ್ಕಳ ಸಂಸ್ಕೃತ ಪ್ರೇಮ






"ಬೈ ಡ್ಯಾಡ್, ಬೈ ಮಾಮ್, ಬೈ ತಾತ್"
     ಒಂದನೆಯ ತರಗತಿಯಲ್ಲಿ ಓದುತ್ತಿರುವ ನನ್ನ ಮೊಮ್ಮಗಳು ಪುಸ್ತಕದ ಮೂಟೆಯನ್ನು ಹೊತ್ತುಕೊಂಡು ಶಾಲೆಯ ಬಸ್ಸಿಗೆ ಹತ್ತುವಾಗ ಕೈಬೀಸಿ ಹೇಳಿದ್ದು ಹೀಗೆ. ಅವಳು ನನ್ನನ್ನು 'ತಾತ್' ಎಂದು ಕರೆಯುವುದಕ್ಕೆ ಕೊಟ್ಟಿದ್ದ ವಿವರಣೆ: "ತಾತಾ, ಗ್ರ್ಯಾಂಡ್ ಫಾದರ್, ಗ್ರ್ಯಾಂಡ್ ಪಾ ಈಸ್ ಟೂ ಲಾಂಗ್. ಸೋ ಐ ಕಾಲ್ ಯು ತಾತ್!" ಲಕ್ಷಗಟ್ಟಲೆ ಡೊನೇಶನ್ ಕೊಟ್ಟು ಸೇರಿಸಿದ್ದ ಆ ಪ್ರತಿಷ್ಠಿತ  ಶಾಲೆಯಲ್ಲಿ ಕನ್ನಡ ಮಾತನಾಡುವಂತಿರಲಿಲ್ಲ. ಎಲ್ಲಾ ಇಂಗ್ಲಿಷಿನಲ್ಲೇ ಆಗಬೇಕು. ಬೆಂಗಳೂರಿನಲ್ಲಿ ಕೆಲವು ದಶಕಗಳ ಹಿಂದೆ ಮಕ್ಕಳು ಮಾತ್ರ ಇಂಗ್ಲಿಷಿನಲ್ಲಿ ಮಾತನಾಡುತ್ತಿದ್ದವು. ಈಗ ಆ ಮಕ್ಕಳೂ ದೊಡ್ಡವರಾಗಿದ್ದಾರೆ. ಈಗ ಎಲ್ಲರೂ, ಎಲ್ಲೆಲ್ಲೂ ಇಂಗ್ಲಿಷಿನಲ್ಲೇ ಮಾತನಾಡುತ್ತಾರೆ. ಬೆಂಗಳೂರಿನಲ್ಲಿ ಅವಿದ್ಯಾವಂತರೂ ಸಹ ಇಂಗ್ಲಿಷಿನಲ್ಲಿ ಸರಾಗವಾಗಿ ಮಾತನಾಡಬಲ್ಲರು. ಅದೇ ಕನ್ನಡ ಮಾತನಾಡಬೇಕಾದರೆ ಕನ್ನಡಿಗರೇ ಬಹಳ ಕಷ್ಟಪಡುತ್ತಾರೆ. ಕನ್ನಡ ಬಾರದಿದ್ದವರು ಮಾತನಾಡುವ ಕನ್ನಡದ ಉಚ್ಛಾರದಂತೆ ಕನ್ನಡಿಗರೇ ಮಾತನಾಡುವುದನ್ನು ಕಂಡು ಅಚ್ಚರಿಪಟ್ಟಿದ್ದೇನೆ. ಹಿಂದೆ ಲಾರ್ಡ್ ಮೆಕಾಲೆ ಹೇಳಿದ್ದ, "ಈ ರೀತಿಯ ವಿದ್ಯಾಭ್ಯಾಸ ಕ್ರಮದಿಂದ ಇನ್ನು ಕೆಲವು ದಶಕಗಳಲ್ಲಿ ಇಂಡಿಯಾದಲ್ಲಿ ಕರಿಚರ್ಮದ ಬ್ರಿಟಿಷರು ಇರುತ್ತಾರೆ" ಎಂಬ ಮಾತು ನಿಜವಾಗಿದೆ. ಆದರೆ ಯಾವ ದೇಶದ ಗುಲಾಮಗಿರಿಯ ಕಾಣಿಕೆಯಾದ ಇಂಗ್ಲಿಷನ್ನು ಹೆಮ್ಮೆಯಿಂದ ಆಡುತ್ತೇವೋ, ಆ ದೇಶದ ರಾಜಧಾನಿ ಲಂಡನ್ನಿಗೆ ಸಂಬಂಧಿಸಿದ ಸಂಗತಿಯನ್ನು ನಿಮ್ಮೊಡನೆ ಹಂಚಿಕೊಳ್ಳುವೆ.
     ಅದು ಲಂಡನ್ನಿನ ಸೈಂಟ್ ಜೇಮ್ಸ್ ಜೂನಿಯರ್ ಸ್ಕೂಲ್. ಅಲ್ಲಿ ೧೯೭೫ರಿಂದಲೂ ಸಂಸ್ಕೃತವನ್ನು ಕಲಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸಂಸ್ಕೃತ ಕಲಿಯುತ್ತಿರುವವರ ಸಂಖ್ಯೆ ಇಂಗ್ಲೆಂಡಿನಲ್ಲಿ ಮಿತಿಯನ್ನು ಮೀರಿ ಬೆಳೆಯುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇಂಗ್ಲಿಷ್ ಮಾತನಾಡುವವರಿಗೆ ಸಂಸ್ಕೃತದ ಉಚ್ಛಾರ ಕಷ್ಟವಾದರೂ ಅಲ್ಲಿ ಸಂಸ್ಕೃತ ಕಲಿಯಲು ಬರುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಾರ್ಷಿಕ ಸಂಸ್ಕೃತ ಸಂಭಾಷಣಾ ಸ್ಪರ್ಧೆಯಲ್ಲಿ ತಮ್ಮ ಪುಟಾಣಿಗಳು ಭಾಗವಹಿಸಿ, ವೇದ ಮಂತ್ರ, ಉಪನಿಷತ್ತಿನ ಶ್ಲೋಕಗಳನ್ನು ಹೇಳುತ್ತಿದ್ದರೆ ಅದನ್ನು ಕೇಳುವ ಪೋಷಕರು, ತಂದೆ-ತಾಯಿಗಳು ಹೆಮ್ಮೆಯಿಂದ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಾರೆ. ಸಂಸ್ಕೃತ ವಿಭಾಗದ ಮುಖ್ಯಸ್ಥ ವಾರ್ವಿಕ್ ಜೆಸೊಪ್, "ಸಂಸ್ಕೃತ ಭಾಷೆ ಅದ್ಭುತವಾಗಿದೆ. ಸಂಸ್ಕೃತದ ಸಾಹಿತ್ಯ ಸ್ಫೂರ್ತಿದಾಯಕವಾಗಿದೆ ಮತ್ತು ತತ್ವಾದರ್ಶಗಳಿಂದ ಕೂಡಿದೆ. ಅದಕ್ಕಾಗಿ ಅದನ್ನು ಮಕ್ಕಳಿಗೆ ಕಲಿಸಿಕೊಡುತ್ತಿದ್ದೇವೆ" ಎನ್ನುತ್ತಾರೆ. ಇದೇ ಮಾತನ್ನು ಇಲ್ಲಿ ಯಾರಾದರೂ ಹೇಳಿದರೆ ವಿಚಾರವಂತರೆಂದು ಹಣೆಪಟ್ಟಿ ಹಚ್ಚಿಕೊಂಡವರು ಏನು ಹೇಳಬಹುದೆಂಬುದು ನಿಮಗೇ ಬಿಟ್ಟ ವಿಷಯ. ಸಂಸ್ಕೃತ ಕಲಿಯುವ ಮಕ್ಕಳನ್ನು ಕೇಳಿದರೆ ಅವರು ಹೇಳುವುದೇನೆಂದರೆ, "ಅದು ನಮಗೆ ಬಹಳ ಖುಷಿ ಕೊಡುತ್ತದೆ. ಅದು ನಮ್ಮ ಮೆಚ್ಚಿನ ಭಾಷೆ!"
     ಸಂಸ್ಕೃತ ಕಲಿಯುತ್ತಿದ್ದ ಒಬ್ಬ ವಿದ್ಯಾರ್ಥಿಯ ಹೃದಯದ ಮಾತಿದು: "ಸಂಸ್ಕೃತ ಕಲಿಯುವುದು ಒಂದು ವಿಶೇಷ ಅನುಭವ. ಅದನ್ನು ಕಲಿಯಲು ನನಗೆ ಬಹಳ ಆನಂದವಾಗುತ್ತದೆ, ಏಕೆಂದರೆ ಸಂಸ್ಕೃತ ಕಲಿಸುತ್ತಿರುವ ಕೆಲವೇ ಶಾಲೆಗಳಿದ್ದು, ಅದರ ಪೈಕಿ ನಾವೂ ಒಬ್ಬರು ಎಂಬುದು. ಅದು ನಮಗೆ ಹಲವಾರು ರೀತಿಯಲ್ಲಿ ಉಪಯೋಗವಾಗಿದೆ. ನಮ್ಮ ಉಚ್ಚಾರಣೆ ಸುಧಾರಿಸುತ್ತದೆ ಮತ್ತು ಪದಸಂಪತ್ತನ್ನು ಹೆಚ್ಚಿಸುತ್ತದೆ. ಪಾರಮಾರ್ಥಿಕ ಅನುಕೂಲಗಳೂ ಇವೆ. ರಾಮಾಯಣ ಮತ್ತು ಮಹಾಭಾರತದಂತಹ ಹಲವಾರು ಕಥೆಗಳಿದ್ದು, ಹಿಂದೆ ಪ್ರಪಂಚದಲ್ಲಿ ಏನೆಲ್ಲಾ ಆಯಿತು ಎಂಬುದನ್ನೂ ತಿಳಿಯಲು ಸಹಾಯ ಮಾಡುತ್ತದೆ."
     ಈ ಶಾಲೆಯಲ್ಲಿ ೪ ರಿಂದ ೧೮ ವರ್ಷಗಳವರೆಗೆ ಸಂಸ್ಕೃತ ಕಲಿಯಲು ಸೌಲಭ್ಯವಿದೆ. ನಂತರದಲ್ಲಿ ಪ್ರತಿಷ್ಠಿತ ಶಾಲೆಗಳಾದ ಆಕ್ಸ್ ಫರ್ಡ್, ಕೇಂಬ್ರಿಡ್ಜ್, ಎಡಿನ್ ಬರೋ ಮುಂತಾದ ಶಾಲೆಗಳಲ್ಲಿ ಮುಂದುವರೆದ ಸಂಸ್ಕೃತ ವಿದ್ಯಾಭಾಸ ಮಾಡಬಹುದಾಗಿದೆ. ಲಂಡನ್ ಶಾಲೆಗೆ ಸಂಬಂಧಿಸಿದ ಒಂದು ಕಿರುವಿಡಿಯೋ ಅನ್ನು ಈ ಲಿಂಕಿನಲ್ಲಿ ನೋಡಬಹುದು.
     ನಾನು ಕೇವಲ ಇಂಗ್ಲೆಂಡಿನ ಉದಾಹರಣೆ ನೀಡಿದ್ದರೂ, ಅಮೆರಿಕಾ ಸೇರಿದಂತೆ ಹಲವಾರು ವಿದೇಶಿ ರಾಷ್ಟ್ರಗಳಲ್ಲಿ ಸಂಸ್ಕೃತ ಕಲಿಕೆ ಗಣನೀಯವಾಗಿ ಹೆಚ್ಚಿದ್ದು, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವವರ ಸಂಖ್ಯೆ ಕಡಿಮೆಯಲ್ಲ. ಊರು ಕೊಳ್ಳೆ ಹೋದ ನಂತರದಲ್ಲಿ ನಮ್ಮವರಿಗೆ ಎಚ್ಚರವಾಗಬಹುದು.
-ಕ.ವೆಂ.ನಾಗರಾಜ್.


2 ಕಾಮೆಂಟ್‌ಗಳು:

  1. ಹಿಂದೆ ಬ್ರಿಟೀಷ್ ಆಡಳಿತವಿದ್ದ ಕಾಲದಲ್ಲಿ ಇಲ್ಲಿನ ಅಧಿಕಾರಿಯೊಬ್ಬ ತನ್ನ ಇಂಗ್ಲೆಂಡಿನ ಸ್ನೇಹಿತನೊಬ್ಬನಿಗೆ ಹೇಳಿದನಂತೆ,
    Our System works very much like a sponge, it abosrbs all that is good from the Ganges and squeezes it into the Thames. ಅವರು ಅಂದು ಭಾರತದ ಭೌತಿಕ ಸಂಪತ್ತಿನ ಮೇಲೆ ಮಾತ್ರ ಕಣ್ಣಿಟ್ಟು ಹಾಗೆ ಹೇಳಿದ್ದರು. ಅದರೊಂದಿಗೆ ಅವರು ನಮ್ಮ ಆಧ್ಯಾತ್ಮಿಕ ಸಂಪತ್ತನ್ನೂ ಸಹ ಕೊಂಡೊಯ್ದರು. ಇಂದು ನಾವು ಥೇಮ್ಸ್ ನದಿಯಲ್ಲಿರುವ ಗಲೀಜನೆಲ್ಲಾ ಗಂಗೆಯಲ್ಲಿ ಕಲಿಸಿ ಕೇವಲ ನಮ್ಮ ಭೌತಿಕ ಸಂಪತ್ತನ್ನಷ್ಟೇ ಅಲ್ಲ ಆಧ್ಯಾತ್ಮಿಕ ಸಂಪತ್ತನ್ನೂ ಸಹ ನಾಶ ಮಾಡಿಕೊಳ್ಳುವ ದಾರಿಯಲ್ಲಿ ಸಾಗಿದ್ದೇವೆ ‌ಎನ್ನುವುದೇ ಖೇದದ ಸಂಗತಿ.
    ಒಳ್ಳೆಯ ಲೇಖನ ಕವಿಗಳೆ, ಅದು ಹೇಗೋ ಇದನ್ನು ನಾನು ಇದುವರೆಗೆ ನೋಡಿರಲಿಲ್ಲ. Face Book ನ ಮೂಲಕ ಇದರೊಳಗೆ ಬಂದೆ. ನಮಸ್ಕಾರಗಳು, ಶ್ರೀಧರ್ ಬಂಡ್ರಿ

    ಪ್ರತ್ಯುತ್ತರಅಳಿಸಿ