ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಆಗಸ್ಟ್ 27, 2012

ಹಾಸನದಲ್ಲಿ ವೇದಪಾಠದ ಶುಭಾರಂಭ







     ಹಾಸನ ಹೊಯ್ಸಳ ನಗರದ ಶ್ರೀ ಶಕ್ತಿ ಗಣಪತಿ ದೇವಾಲಯ ರಸ್ತೆಯಲ್ಲಿನ ‘ಈಶಾವಾಸ್ಯಂ’ ಕಾರ್ಯಾಲಯದಲ್ಲಿ ‘ವೇದ ಭಾರತೀ ಸಂಪ್ರತಿಷ್ಠಾನಂ’ ಹಾಸನ ಶಾಖೆ ವತಿಯಿಂದ ಭಾನುವಾರದಿಂದ ಆರಂಭವಾದ ‘ಎಲ್ಲರಿಗಾಗಿ ವೇದ’ ಎಂಬ ಸಾಪ್ತಾಹಿಕ ವೇದ ಪಾಠ ತರಗತಿಗಳನ್ನು ಶ್ರೀ ರಾಮಕೃಷ್ಣ ವಿದ್ಯಾಲಯದ ಪ್ರಾಂಶುಪಾಲರಾದ ಸಿ.ಎಸ್. ಕೃಷ್ಣಸ್ವಾಮಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಗಿನ್ನೀಸ್ ದಾಖಲೆಯ ಕು. ಸ್ವಾತಿ ಭಾರದ್ವಾಜ್ ಅವರಿಂದ ಆಕರ್ಷಕ ಭರತ ನಾಟ್ಯ ಕಾರ್ಯಕ್ರಮ ನಡೆಯಿತು.
‘ಮನುಜ ಮತಕ್ಕಾಗಿಯೇ ವೇದ ಪಥವಿದೆ’: ಶರ್ಮಾಜಿ
ಹಾಸನ, ಆ. ೧೯: ವೇದಗಳು ಯಾವುದೇ ಜಾತಿ, ಮತ, ಲಿಂಗ ಇತ್ಯಾದಿಗಳಿಗೆ ಸೀಮಿತವಾದುವಲ್ಲ; ವೇದಗಳು ಈ ಜಗತ್ತಿನ ಎಲ್ಲರಿಗಾಗಿಯೂ ಇವೆ; ಮನುಜ ಮತಕ್ಕಾಗಿಯೇ ವೇದ ಪಥವಿದೆ; ಸರ್ವರೂ ಇವುಗಳನ್ನು ಅರ್ಥ ಸಹಿತ ಅಧ್ಯಯನ ಮಾಡಿ ಆಚರಣೆಗೆ ತಂದಲ್ಲಿ ನಿಜಕ್ಕೂ ಮನುಕುಲ ಉದ್ಧಾರವಾಗುತ್ತದೆ ಎಂದು ಬೇಲೂರಿನ ಸಂಸ್ಕೃತ ಪಾಠಶಾಲೆ ಆಚಾರ್ಯರಾದ ವೇದಾಧ್ಯಾಯಿ ಶ್ರೀ ವಿಶ್ವನಾಥ ಶರ್ಮ ತಿಳಿಹೇಳಿದರು.
ನಗರದ ಹೊಯ್ಸಳ ನಗರದ ಶ್ರೀ ಶಕ್ತಿ ಗಣಪತಿ ದೇವಾಲಯ ರಸ್ತೆಯಲ್ಲಿನ ‘ಈಶಾವಾಸ್ಯಂ’ ಕಾರ್ಯಾಲಯದಲ್ಲಿ ‘ವೇದ ಭಾರತೀ ಸಂಪ್ರತಿಷ್ಠಾನಂ’ ಹಾಸನ ಶಾಖೆ ವತಿಯಿಂದ ಭಾನುವಾರದಿಂದ ಆರಂಭವಾದ ‘ಎಲ್ಲರಿಗಾಗಿ ವೇದ’ ಎಂಬ ಸಾಪ್ತಾಹಿಕ ವೇದ ಪಾಠ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ವೇದಗಳನ್ನು ಅರಿಯದವರು, ಮತ್ತು ಅವುಗಳ ಕುರಿತು ಪ್ರಾಥಮಿಕ ಜ್ಞಾನ ಸಹ ಇಲ್ಲದವರು ಪೂರ್ವಾಗ್ರಹ ಪೀಡಿತರಾಗಿ ವಿನಾಕಾರಣ ಅವುಗಳನ್ನು ಟೀಕಿಸುವುದು, ಜರೆಯುವುದು, ಅವುಗಳ ವಿರುದ್ಧ ದ್ವೇಷ ಸಾಧಿಸುವುದು ಮಾಡುತ್ತಾರೆ. ಇಂತಹವರ ವರ್ತನೆಗಳಿಂದೇನೂ ವೇದದ ಹಿರಿಮೆ ಅಥವಾ ಘನತೆ ಖಂಡಿತಾ ಕುಗ್ಗುವುದಿಲ್ಲ. ಆದ್ದರಿಂದ ಇಲ್ಲಸಲ್ಲದ ಪೂರ್ವಾಗ್ರಹ ಪೀಡಿತ ಭಾವನೆ ಇರುವವರು ಮೊದಲು ವೇದಗಳು ಎಂದರೇನು? ಅವುಗಳಲ್ಲಿ ಏನಿದೆ ಎಂಬುದನ್ನು ಅರಿಯುವ ಪ್ರಯತ್ನ ಮಾಡಬೇಕು; ವೇದ ಎಂದರೆ ಜ್ಞಾನ ಎಂದು ಅರ್ಥ. ಮನುಷ್ಯನಾದವನು ಹೇಗೆ ತನ್ನ ಬದುಕು ಸಾಗಿಸಬೇಕು ಎಂಬುದನ್ನು ವೇದ ತಿಳಿಸಿಕೊಡುತ್ತದೆ. ಹೀಗಾಗಿ ವೇದ ಮಂತ್ರಗಳನ್ನು ಯಥಾವತ್ತು ಕಲಿಯಲೇಬೇಕು; ಪಠಿಸಲೇಬೇಕು ಎಂದೇನೂ ಇಲ್ಲ; ವೇದಗಳಲ್ಲಿನ ಜ್ಞಾನವನ್ನು ನಮ್ಮದಾಗಿಸಿಕೊಂಡರೂ ಸಾಕು; ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ಶರ್ಮಾಜಿ ಕಿವಿಮಾತು ಹೇಳಿದರು.
ವೇದಗಳು ಅವುಗಳದೇ ಆದ ವೇದ ಭಾಷೆಯಲ್ಲಿವೆಯೇ ಹೊರತು ಸಂಸ್ಕೃತದಲ್ಲಿಲ್ಲ. ವೇದ ಭಾಷೆಯಿಂದ ಸಂಸ್ಕೃತ ಹುಟ್ಟಿಕೊಂಡಿದೆ. ಹೀಗಾಗಿ ವೇದದ ಶಬ್ದಗಳಿಗೆ ಅದರದೇ ಆದ ವೈಜ್ಞಾನಿಕ ಅರ್ಥಗಳಿವೆ. ಈ ಅರ್ಥಗಳನ್ನು ವಿವರಿಸಲಿಕ್ಕಾಗಿಯೇ ನಿರುಕ್ತ ಎಂಬ ವೇದಾಂಗವಿದೆ. ಜಾತಿ, ವರ್ಣ ಇತ್ಯಾದಿ ಶಬ್ದಗಳಿಗೆ ವೇದಗಳು ನೀಡುವ ಅರ್ಥಗಳೇ ಬೇರೆಯಾಗಿವೆ. ಜೀವವೊಂದು ಹುಟ್ಟುವ ವಿಧಾನವೇ ‘ಜಾತಿ’ ಎನಿಸಿಕೊಳ್ಳುತ್ತದೆ. ಮನುಷ್ಯನಾಗಿ ಹುಟ್ಟಿದರೆ ಮನುಷ್ಯ ಜಾತಿ; ಕುರಿ; ಕೋಳಿಯಾಗಿ ಹುಟ್ಟಿದರೆ ಅವುಗಳದ್ದೇ ಜಾತಿ ಅಷ್ಟೇ ಹೊರತು ಈಗ ನಾವು ವಿಂಗಡಿಸಿರುವ ಬ್ರಾಹ್ಮಣ, ಲಿಂಗಾಯಿತ, ಕುರುಬ ಇತ್ಯಾದಿಗಳಿಗೆ ಅರ್ಥವಿಲ್ಲ. ಅದೇ ರೀತಿ ವರ್ಣ ಎಂದರೆ ‘ಆರಿಸಿಕೊಳ್ಳುವುದು’ ಎಂಬ ಅರ್ಥವಿದೆಯೇ ಹೊರತು; ಈಗ ನಾವು ಹೇಳುವ ಜಾತಿ ಆಧಾರಿತ ವರ್ಣಾಶ್ರಮ ವ್ಯಾಖ್ಯಾನಕ್ಕೆ ಅರ್ಥವಿಲ್ಲ ಎಂದು ಅವರು ವಿವರಿಸಿದರು. ನಮ್ಮ ವೇದಗಳಲ್ಲಿನ ಪ್ರತಿಯೊಂದು ಜ್ಞಾನವನ್ನು ಆಚರಣೆಗೆ ತರಲೂ ಸಹ ನಾವು ವಿದೇಶಿಯರನ್ನೇ ಒರೆಗಲ್ಲಾಗಿ ಇಟ್ಟುಕೊಂಡಿರುವುದು ಹಾಗೂ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ತಂದುಕೊಂಡಿರುವುದ ದೊಡ್ಡ ದುರಂತ ಹಾಗೂ ವಿಪರ‍್ಯಾಸ ಎಂದು ಶರ್ಮಾಜಿ ನಿದರ್ಶನಗಳ ಸಹಿತ ವಿಷಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ರಾಮಕೃಷ್ಣ ವಿದ್ಯಾಲಯದ ಪ್ರಾಂಶುಪಾಲರಾದ ಸಿ.ಎಸ್. ಕೃಷ್ಣಸ್ವಾಮಿ ಮಾತನಾಡಿ, ಅರೆಬರೆ ಜ್ಞಾನ ಹೊಂದಿದ ಅಜ್ಞಾನಿಗಳು ಹೇಳುವಂತೆ ವೇದಗಳು ಯಾರ ಸ್ವತ್ತೂ ಅಲ್ಲ; ಅಥವಾ ಅವು ಒಂದು ಪಂಗಡಕ್ಕೆ ಮಾತ್ರ ಸೀಮಿತವೂ ಅಲ್ಲ; ಅದನ್ನು ಯಾರು ಬೇಕಾದರೂ ಕಲಿಯಬಹುದು. ಇವುಗಳನ್ನು ಬರೆದವರು ಯಾರು ಮತ್ತು ಯಾವ ಕಾಲದಲ್ಲಿ ಹುಟ್ಟಿಕೊಂಡವು ಎಂಬ ನಿಖರ ಮಾಹಿತಿ ಇಲ್ಲವಾದ್ದರಿಂದ ವೇದಗಳನ್ನು ‘ಅಪೌರುಷೇಯ’ ಎಂದಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಗಿನ್ನೀಸ್ ದಾಖಲೆಯ ಕು. ಸ್ವಾತಿ ಭಾರದ್ವಾಜ್ ಅವರಿಂದ ಆಕರ್ಷಕ ಭರತ ನಾಟ್ಯ ಕಾರ್ಯಕ್ರಮ ನಡೆಯಿತು. ‘ವೇದ ಸುಧೆ’ ಬ್ಲಾಗ್ ಗೌರವ ಸಂಪಾದಕ ಕವಿ ನಾಗರಾಜ್ ಅವರು ಸ್ವಾಗತಿಸಿದರಲ್ಲದೆ, ಕಲಾವಿದೆ ಕು. ಸ್ವಾತಿ ಭಾರದ್ವಾಜ್ ಪರಿಚಯ ಮಾಡಿಕೊಟ್ಟರು. ಬ್ಲಾಗ್ ಸಂಪಾದಕರಾದ ಹರಿಹರಪುರ ಶ್ರೀಧರ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕು. ಸ್ವಾತಿ ತಂದೆ ಪ್ರಕಾಶ್ ಹಾಗೂ ತಾಯಿ ಅನಿತಾ ಪ್ರಕಾಶ್, ಚ.ರಾ. ಪಟ್ಟಣದ ನಾಟ್ಯ ಭೈರವಿ ಟ್ರಸ್ಟ್ ಅಧ್ಯಕ್ಷ ನಾಗರಾಜ್, ಚೈತನ್ಯ ಶಾಲೆ ಮುಖ್ಯಸ್ಥ ರಮೇಶ್, ವಾಸವಿ ಶಾಲೆಯ ಜಿ.ಎಸ್. ಮಂಜುನಾಥ್ ಮತ್ತಿತರರು ಹಾಜರಿದ್ದರು.













ಹಾಸನ  ದಲ್ಲಿ  ಇದೇ ಸಪ್ಟೆಂಬರ್ 30 ರಂದು ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಪಾಲ್ಗೊಳ್ಳಲಿದ್ದು  ಪ್ರಶ್ನೆಗಳನ್ನು ಕಲಿಸುವವರು ಮತ್ತು ವೇದ ಪಾಠಗಳ ಕುರಿತು ಆಸಕ್ತಿ ಇರುವವರು ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜ್ 9448501806   ಅಥವಾ ಸಂಪಾದಕರಾದ ಶ್ರೀ ಹರಿಹರಪುರಶ್ರೀಧರ್  9663572406 ಅವರುಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಹೆಚ್ಚಿನ ದೃಶ್ಯಾವಳಿಗಾಗಿ ಕೊಂಡಿ ಇಲ್ಲಿದೆ.


ವರದಿ:ಹೆಚ್.ಎಸ್. ಪ್ರಭಾಕರ್,ಹಿರಿಯ ಪತ್ರಕರ್ತರು,ಹಾಸನ


5 ಕಾಮೆಂಟ್‌ಗಳು:

  1. ಆತ್ಮೀಯ ನಾಗರಾಜರೆ,
    ಉತ್ತಮ ಕೆಲಸಕ್ಕೆ ಕೈಹಾಕಿದ್ದಿರಾ. ನಿಮ್ಮಡನೆ ಬಂದು ಇದ್ದು ಕೈಜೋಡಿಸಲು ನಂಗೆ ಶಕ್ತಿ ಕಡಿಮೆ. ಬೇರೆ ಯಾವರೀತಿ ನಾನು ನಿಮ್ಮ ಜೊತೆ ಕೈಜೋಡಿಸ ಬಹುದು? ಎಂದು ತಿಳಿಸಿದರೆ ಖಂಡಿತ ಮಾಡುವೆ. ಇ ಮೇಲ್ ಮುಖಾಂತರ ವೇದ ಪಾಠ ಕಳುಹಿಸಿ.
    ನಿಮ್ಮ ಈ ಪ್ರಯತ್ನಕ್ಕೆ ಹೆಚ್ಚು ಯಶಸ್ಸು ಸಿಗಲೆಂದು ಆಶಿಸುತ್ತಾ,
    ಪ್ರಕಾಶ್

    ಪ್ರತ್ಯುತ್ತರಅಳಿಸಿ
  2. ಆತ್ಮೀಯ ಪ್ರಕಾಶರೇ, ನಿಮ್ಮ ಆತ್ಮೀಯತೆಗಿಂತ ಹೆಚ್ಚಿನ ಸಹಕಾರ ಇನ್ನೇನು ಬೇಕು? ನಿಮ್ಮ ಹಾರೈಕೆಗೆ ವಂದನೆಗಳು.

    ಪ್ರತ್ಯುತ್ತರಅಳಿಸಿ
  3. ಪಾಠಗಳನ್ನು ಮೇಲ್ ಮಾಡಿರುವೆ. ಮೇಲ್ ನಲ್ಲಿ ಪಾಠಗಳು ತಲ್ಪಿದ್ದಕ್ಕೆ ತಿಳಿಸಿ

    ಪ್ರತ್ಯುತ್ತರಅಳಿಸಿ
  4. ಮಾನ್ಯ ನಾಗರಾಜರಿಗೆ,

    ದಯಮಾಡಿ ಪಾಠಗಳನ್ನು ಈಮೇಲ್ ಮುಖೇನ ಕಳಿಸಿರಿ.
    ಧನ್ಯವಾದಗಳು.
    ಕೌ ಲ ವೆಂ

    kowlavem@gmail.com

    ಪ್ರತ್ಯುತ್ತರಅಳಿಸಿ
  5. ವೇದಪಾಠವನ್ನು ಇಂದು ಸಂಜೆ ವೇಳೆಗೆ ಮೇಲ್ ಮಾಡಲಾಗುವುದು
    -ಶ್ರೀಧರ್

    ಪ್ರತ್ಯುತ್ತರಅಳಿಸಿ