ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಆಗಸ್ಟ್ 13, 2012

ಹೀಗೊಂದು ಅನುಕರಣೀಯ ಶ್ರದ್ಧಾಂಜಲಿ ಕಾರ್ಯಕ್ರಮ



     ಹಾಸನದ ನನ್ನ ಬಂಧು ಹಾಗೂ ಮಿತ್ರರಾದ ಪತ್ರಕರ್ತ ಪ್ರಭಾಕರರ ಕಿರಿಯ ಸಹೋದರ  ರಮೇಶಬಾಬು 30-07-2012 ರಂದು ವಿಧಿವಶನಾದ ಸಂದರ್ಭದಲ್ಲಿ ಪ್ರಭಾಕರ್ ಮತ್ತು ಸೋದರರು ದಿಟ್ಟ ನಿರ್ಧಾರ ತಳೆದು ಆತನ ದೇಹವನ್ನು ಮೃತನ ಇಚ್ಛೆಯಂತೆ ಹಾಸನದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್)ಗೆ ದಾನ ಮಾಡಿದರು. ಉಳಿದ ಕ್ರಿಯಾಕರ್ಮಗಳನ್ನು ನಡೆದುಕೊಂಡು ಬಂದ ಸಂಪ್ರದಾಯದಂತೆ ನೆರವೇರಿಸಿದರು. ಮೂರ್ಛೆ ರೋಗದಿಂದ ಬಳಲುತ್ತಿದ್ದ ರಮೇಶಬಾಬು ಅವಿವಾಹಿತರಾಗಿದ್ದು ನಿಧನರಾದಾಗ ಆತನ ವಯಸ್ಸು ಕೇವಲ ೪೫ ವರ್ಷಗಳು. ದಿನಾಂಕ 11-08-2012 ರಂದು ಪ್ರಭಾಕರ್ ಸೋದರರು ಅಂತಿಮ ಕಲಾಪವನ್ನು (ವೈಕುಂಠ ಸಮಾರಾಧನೆ)  ಶ್ರದ್ಧಾಂಜಲಿ ಕಾರ್ಯಕ್ರಮವಾಗಿ ಆಚರಿಸಿದರು. ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮ ಕೇವಲ ಮೃತ ವ್ಯಕ್ತಿಗೆ ಶ್ರದ್ಧಾಂಜಲಿ ಅರ್ಪಿಸುವುದಕ್ಕೆ ಮೀಸಲಾಗಿರದೆ ಜನಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವಾಗಿ ನಡೆದುದು ವಿಶೇಷವೇ ಸರಿ. 
     ರಮೇಶಬಾಬು ಮೂರ್ಛೆ ರೋಗದಿಂದ ನರಳಿ ಕೊನೆಯುಸಿರೆಳೆದವರು. ಮೂರ್ಛೆರೋಗದ ಬಗ್ಗೆ ಜನರಿಗೆ ಅನೇಕ ತಪ್ಪು ತಿಳುವಳಿಕೆಗಳಿದ್ದು ಅದನ್ನು ಹೋಗಲಾಡಿಸುವ ಕುರಿತು ಅರಿವು ಮೂಡಿಸುವ ಕೆಲಸ ಅಗತ್ಯವೆಂದು ಭಾವಿಸಿ ಮೆದುಳು ಮತ್ತು ನರರೋಗ ತಜ್ಞರಾದ ಡಾ. ಹಾಲಪ್ರಶಾಂತ್‌ರವರನ್ನು, ದೇಹದಾನದ ಮಹತ್ವ ವಿವರಿಸಲು ಹಿಮ್ಸ್ ನ ಸಹಾಯಕ ಪ್ರೊಫೆಸರ್ ಡಾ. ಸಿ.ಎಸ್. ಮಂಜುನಾಥರವರನ್ನು ಹಾಗೂ ವೇದದ ಹಿನ್ನೆಲೆಯಲ್ಲಿ ದೇಹ ಮತ್ತು ಜೀವಗಳ ಸಂಬಂಧ, ಶ್ರಾದ್ಧ ಎಂದರೇನು ಎಂಬುದನ್ನು ತಿಳಿಸಲು ಬೇಲೂರಿನ ವೇದಾಧ್ಯಾಯಿ ಶ್ರೀ ವಿಶ್ವನಾಥಶರ್ಮರವರನ್ನು ಪ್ರಭಾಕರ್ ಸೋದರರು ಆಹ್ವಾನಿಸಿ ಅವರಿಂದ ಉಪನ್ಯಾಸಗಳನ್ನು ಏರ್ಪಡಿಸಿದ್ದರು. 
     ಮೂರ್ಛೆ ರೋಗದ ಕುರಿತು ಸಾಮಾನ್ಯವಾಗಿ ಇರುವ ತಪ್ಪು ತಿಳಿವಳಿಕೆಗಳನ್ನು ಬಿಡಿಸಿ ಹೇಳಿದ ಡಾ. ಹಾಲಪ್ರಶಾಂತರು ಒಂದು ಅನಿಮೇಟೆಡ್ ಕಿರುಚಲನಚಿತ್ರ ತೋರಿಸಿ ವಿವರಣೆ ನೀಡಿದ್ದು ಗಮನ ಸೆಳೆಯಿತು. ಮೂರ್ಛೆ ತಪ್ಪಿದರೆ ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಸಾಧಾರ ಮಾಹಿತಿ ನೀಡಿದ್ದಲ್ಲದೆ ಸಭಿಕರು ಕೇಳಿದ ಸಂದೇಹಗಳಿಗೆ ಸೂಕ್ತ ಉತ್ತರಗಳನ್ನು ನೀಡಿದರು. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ರೋಗವನ್ನು ಗುಣಪಡಿಸಬಹುದೆಂದು ತಿಳಿಸಿದರು.
     ದೇಹದಾನ ಮಾಡುವುದರಿಂದ ಏನು ಪ್ರಯೋಜನ, ಹೇಗೆ ದೇಹದಾನ ಮಾಡಬಹುದು ಎಂಬ ಬಗ್ಗೆ ಮಾಹಿತಿ ನೀಡಿದ ಡಾ. ಸಿ.ಎಸ್. ಮಂಜುನಾಥರು ಸಹ ಸಭಿಕರ ಸಂದೇಹಗಳಿಗೆ ಸೂಕ್ತ ವಿವರ ತಿಳಿಸಿದರು. ದೇಹದಾನ ಮಾಡುವುದಕ್ಕೆ ಸಂಬಂಧಿಸಿದ ಅರ್ಜಿ ನಮೂನೆಗಳನ್ನು ಆಸಕ್ತ ಸಭಿಕರು ಪಡೆದುಕೊಂಡರು.
     ಶ್ರೀ ವಿಶ್ವನಾಥ ಶರ್ಮರವರು ಜೀವಾತ್ಮ ಅವಿನಾಶಿಯಾಗಿದ್ದು ಅದಕ್ಕೆ ಹುಟ್ಟು ಸಾವುಗಳಿಲ್ಲವೆಂದೂ, ಅದು ದೇಹದಲ್ಲಿದ್ದಾಗ ಆ ಮಾಧ್ಯಮದ ಮೂಲಕ ಮಾಡುವ ಕರ್ಮಗಳಿಗನುಸಾರವಾಗಿ ಫಲ ಪಡೆಯುವುದೆಂದೂ, ತಾನು ಮಾಡಿದ ಕರ್ಮಕ್ಕೆ ತಾನೇ ಹೊಣೆಯೆಂದೂ, ಇತರರು ಮಾಡುವ ಕರ್ಮಗಳ ಫಲ ಇತರರಿಗೇ ಹೊರತು ಅದಕ್ಕಲ್ಲವೆಂದೂ ವೇದ ಮಂತ್ರಗಳನ್ನು ಉಲ್ಲೇಖಿಸಿ ಹೇಳುತ್ತಾ ಮೃತರ ಆತ್ಮಕ್ಕೆ ಉತ್ತಮ ಫಲ ಸಿಗಲೆಂದು ಆಶಿಸೋಣವೆಂದರು. 
     ಮಿತ್ರ ಪ್ರಭಾಕರ್ ಸ್ವಾಗತ ಮತ್ತು ವಂದನಾರ್ಪಣೆ ಹಾಗೂ ಮಿತ್ರ ಹರಿಹರಪುರ ಶ್ರೀಧರ ನಿರೂಪಣೆ ಮಾಡಿದ ವಿಭಿನ್ನ ರೀತಿಯ ಈ ಶ್ರದ್ಧಾಂಜಲಿ ಸಭೆ ಅನುಕರಣೀಯವೆನ್ನಲೇಬೇಕು. ರೂಢಿಗತ ರೀತಿಯಲ್ಲಿ ಉತ್ತರಕ್ರಿಯೆಗಳನ್ನು ನಡೆಸದಿರುವುದಕ್ಕೆ, ಸಾಂಪ್ರದಾಯಿಕರ ಅಸಮಾಧಾನಗಳನ್ನು ಎದುರಿಸುವುದಕ್ಕೆ ದಿಟ್ಟತನವಿರಬೇಕು. ಅಂತಹ ದಿಟ್ಟತನ ತೋರಿಸಿದ ಪ್ರಭಾಕರ್ ಮತ್ತು ಸೋದರರಿಗೆ ಅಭಿನಂದನೆಗಳು. ಏನೇ ಆಗಲಿ, ಇಂತಹ ಕ್ರಿಯೆಗಳು ಮನಸ್ಸಿನಲ್ಲಿ ವೈಚಾರಿಕ ತರಂಗಗಳನ್ನು ಎಬ್ಬಿಸಿ ಜಿಜ್ಞಾಸೆ ನಡೆಸಲು ಸಹಕಾರಿ ಎಂಬುದಂತೂ ಸತ್ಯ. 
ಶ್ರೀಯುತರಾದ ಪ್ರಭಾಕರ್, ವಿಶ್ವನಾಥಶರ್ಮ, ಡಾ. ಮಂಜುನಾಥ್, ಡಾ. ಹಾಲಪ್ರಶಾಂತ್


2 ಕಾಮೆಂಟ್‌ಗಳು:

  1. ಶ್ರೀ ಪ್ರಭಾಕರ್ ತಮ್ಮ ಇಡೀ ಕುಟುಂಬವನ್ನು ವಿಶ್ವಾಸಕ್ಕ್ಕೆ ತೆಗೆದುಕೊಂಡು ಇಂತಹ ನಿರ್ಧಾರ ತೆಗೆದುಕೊಂದರು. ಅವರ ಕುಟುಂಬದ ನಿರ್ಧಾರ ಶ್ಲಾಗನೀಯ.

    ಪ್ರತ್ಯುತ್ತರಅಳಿಸಿ
  2. ಪ್ರಭಾಕರರದು ಅಳುಕಿಲ್ಲದ, ಅನುಮಾನವಿಲ್ಲದ ನಿರ್ಧಾರ. ನೀವಂದಂತೆ ಕುಟುಂಬದ ಇತರ ಸದಸ್ಯರನ್ನೂ ಒಪ್ಪಿಸಿದ್ದು ಅವರ ಹೆಚ್ಚುಗಾರಿಕೆಯೇ ಸರಿ.

    ಪ್ರತ್ಯುತ್ತರಅಳಿಸಿ