ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ಆಗಸ್ಟ್ 9, 2012

ಒಂದು ಅಪರೂಪದ ವೇದೋಕ್ತ ವಿವಾಹ

  
     “ವೇದಾಧ್ಯಾಯೀ  ಶ್ರೀ ಸುಧಾಕರಶರ್ಮಾರವರು ಮಂತ್ರಗಳ ಅರ್ಥ-  ವಿವರಣೆಗಳನ್ನು ನೀಡುತ್ತಾ ವೈದಿಕ ವಿವಾಹ ಸಂಸ್ಕಾರವನ್ನು ನೀಡಲಿದ್ದಾರೆ.  ತಾವು ಇಡೀ ಕಾರ್ಯಕ್ರಮದಲ್ಲಿ ಶಾಂತರೀತಿಯಿಂದ ಭಾಗವಹಿಸಬೇಕಾಗಿ ಸವಿನಯ ಪ್ರಾರ್ಥನೆ” - ಎಂದು ಆಹ್ವಾನಪತ್ರಿಕೆಯಲ್ಲಿಯೇ ಮುದ್ರಿಸಿ ಹಂಚುವುದರಿಂದ ವಿಶೇಷತೆಗಳ ಪ್ರಾರಂಭ.  ಅಂತೆಯೇ 05.08.2012 ರಂದು ಬೆಂಗಳೂರಿನಲ್ಲಿ ಚಿ.ಸ್ಮೃತಿ ಆರ್ಯ (ಕನಕಪುರದ ಶ್ರೀ ಬಾಲಕೃಷ್ಣ ಆರ್ಯ ಮತ್ತು ಶ್ರೀಮತಿ ಸನ್ಮತಿ ಆರ್ಯ ಇವರ ಮಗಳು) ಮತ್ತು ಚಿ.ಸುಮಂತ್ ಭಾರದ್ವಾಜ್‌ರವರ (ಕೆ.ಜಿ.ಎಫ್.ನ ಶ್ರೀ ಸೂರ್ಯನಾರಾಯಣ್ ಮತ್ತು ಶ್ರೀಮತಿ ನಿರ್ಮಲ ಇವರ ಮಗ) ವೈದಿಕ ವಿವಾಹ ನೆರವೇರಿತು.  
     ಸಭೆಯಲ್ಲಿದ್ದವರೆಲ್ಲರೂ ‘ಓಂ’ಕಾರವನ್ನು ಒಟ್ಟಿಗೆ ಉಚ್ಚರಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.  ಎರಡು ನೀರುಗಳು ಬೆರೆಯುವಂತೆ, ತಮ್ಮ ತಮ್ಮ ಹೃದಯಗಳನ್ನು ಬೆಸೆಯುವ ತಮ್ಮ ಸಂಕಲ್ಪವನ್ನು ನೆರೆದ ಹಿರಿಯರು, ಗೃಹಸ್ಥ-ಗೃಹಿಣಿಯರು, ವಿದುಷಿ, ವಿದ್ವಾಂಸರ ಸಮ್ಮುಖದಲ್ಲಿ ವಧೂ-ವರರು ಪ್ರಕಟಿಸಿದರು.  ಕುಟುಂಬವೆಂಬ ಇಟ್ಟಿಗೆಗಳಿಂದ ಆದದ್ದೇ ಸಮಾಜ/ರಾಷ್ಟ್ರವೆಂಬ ಕಟ್ಟಡ.  ಇಡಿಯು ಸುಭದ್ರವಾಗಿದ್ದಾಗ ಮಾತ್ರ ಅದರೊಳಗಣ ಬಿಡಿಯೂ ನೆಮ್ಮದಿಯಿಂದಿರಬಹುದು.  ನೂತನ ಕುಟುಂಬವನ್ನು ಆರಂಭಿಸುತ್ತಿರುವ ದಂಪತಿಗಳಿಗೆ ಈ ಬಗ್ಗೆ ಮಾರ್ಗದರ್ಶನ ನೀಡುವುದೇ ‘ರಾಷ್ಟ್ರಭೃತ್ ಯಜ್ಞ’.  ಜೀವನದಲ್ಲಿ ಜಯವನ್ನು ಸಾಧಿಸುವುದಕ್ಕಾಗಿ ಸಂಕಲ್ಪಶಕ್ತಿಯನ್ನು ಒಡಮೂಡಿಸುವದೇ ‘ಜಯಾ ಹೋಮ’.  ಸದ್ವಿಚಾರ, ಸದಾಚಾರಗಳನ್ನು ಎಲ್ಲೆಡೆಯೂ ಹರಡುವ ಅವಶ್ಯಕತೆಯ ಅರಿವನ್ನು ಮೂಡಿಸುವುದೇ ‘ಅಭ್ಯಾತನ ಹೋಮ’.  ಪಾಣಿಗ್ರಹಣ - ವರನು ವಧುವಿನ ಕೈಹಿಡಿದು ಮುಂದಿನ ಜೋಡಿಜೀವನದಲ್ಲಿ ತಾನು ಅನುಸರಿಸುವ ರೀತಿ-ನೀತಿಗಳ ವಿಷಯದಲ್ಲಿ ಪ್ರತಿಜ್ಞೆಗಳನ್ನು ಮಾಡುವುದು.  ‘ಧರ್ಮದ ಹೆಸರಿನಲ್ಲಿ, ಮುಪ್ಪಿನಕಾಲದವರೆಗಿನ ಸಹಬಾಳ್ವೆಗಾಗಿ ನಿನ್ನ ಕೈ ಹಿಡಿಯುತ್ತಿದ್ದೇನೆ. ಕಳ್ಳತನದಲ್ಲಿ ಯಾವುದೇ ಭೋಗವನ್ನು ಅನುಭವಿಸುವುದಿಲ್ಲ.  ಯಾವುದೇ ಮೋಹಗಳಿಗೆ ಒಳಗಾಗದೇ ನಿನ್ನನ್ನು ವರಿಸುತ್ತಿದ್ದೇನೆ’ - ಇದು ಸಾರಾಂಶ.  ಇದಕ್ಕೆ ಪ್ರತಿಯಾಗಿ ಕನ್ಯೆಯು ವರನಿಗೆ ನೀಡುವ ಮಾತುಗಳೇ ‘ಲಾಜಾಹೋಮ’.  ‘ತವರು ಮನೆಯಿಂದ ಬೇರ್ಪಟ್ಟು, ನಿಮ್ಮ ಕುಟುಂಬದ ಸದಸ್ಯೆಯಾಗುತ್ತಿದ್ದೇನೆ.  ಎರಡೂ ಮನೆಯವರು ಸುಖ-ಸಂತೋಷಗಳಿಂದ ಬಾಳಲು ನನ್ನ ಕಾಣಿಕೆಯನ್ನು ನೀಡುತ್ತೇನೆ.  ಇದನ್ನು ಅರಳಿದ ಮನಸ್ಸಿನಿಂದ ವ್ಯಕ್ತಪಡಿಸುತ್ತಿದ್ದೇನೆ’.  
     ‘ಇಷ ಏಕಪದೀ ಭವ’ - ಇಚ್ಛಾಶಕ್ತಿ, ಅನ್ನಾಹಾರಗಳ ಸಲುವಾಗಿ ಮೊದಲನೆಯ ಹೆಜ್ಜೆ.  ‘ಊರ್ಜೇ ದ್ವಿಪದೀ ಭವ’ - ಬಲ, ಆರೋಗ್ಯಗಳಿಗಾಗಿ ಎರಡನೆಯ ಹೆಜ್ಜೆ.  ‘ರಾಯಸ್ಪೋಷಾಯ ತ್ರಿಪದೀ ಭವ’ - ಸಾಧನ ಸಂಪತ್ತಿಗಾಗಿ, ಇಂತಹ ಸಾಧನಗಳ ಪ್ರಾಮಾಣಿಕ ಸಂಗ್ರಹಣೆ, ರಕ್ಷಣೆ, ಸದುಪಯೋಗಗಳಿಗಾಗಿ ಮೂರನೆಯ ಹೆಜ್ಜೆ.  ‘ಮಯೋಭವ್ಯಾಯ ಚತುಷ್ಪದೀ ಭವ’ - ಸುಖ, ಆನಂದಕ್ಕಾಗಿ ನಾಲ್ಕನೇ ಹೆಜ್ಜೆ.  ‘ಪ್ರಜಾಭ್ಯಃ ಪಂಚಪದೀ ಭವ’ - ಉತ್ತಮ ಸಂತಾನಕ್ಕಾಗಿ ಐದನೆಯ ಹೆಜ್ಜೆ.  ‘ಋತುಭ್ಯಃ ಷಟ್ಪದೀ ಭವ’ - ನಿಯಮಿತಜೀವನಕ್ಕಾಗಿ ಆರನೆಯ ಹೆಜ್ಜೆ.  ‘ಸಖಾ ಸಪ್ತಪದೀ ಭವ’ - ಸ್ನೇಹಕ್ಕಾಗಿ ಏಳನೆಯ ಹೆಜ್ಜೆ.  ಸಹಕಾರ, ತ್ಯಾಗ, ಸಮಾನತೆ, ಹೊಂದಾಣಿಕೆ, ಪ್ರೀತಿ, ಪ್ರೇಮ, ವಿಶ್ವಾಸ ಮೊದಲಾದವುಗಳೇ ಈ ಸ್ನೇಹದ ತಿರುಳು.  ಹೀಗೆ ಒಟ್ಟಿಗೆ ಏಳು ಹೆಜ್ಜೆಗಳನ್ನು ಇಟ್ಟ ಇವರು ಸತಿ-ಪತಿಗಳಾದರು.  ನೂತನ ದಂಪತಿಗಳಿಗೆ ಬೇಕಾದ ಸಲಹೆ, ಸಹಕಾರ, ಮಾರ್ಗದರ್ಶನಗಳನ್ನು ಕೊಡುತ್ತೇವೆಂದು ಸಭೆಯಲ್ಲಿದ್ದ ಹಿರಿಯರು ಆಶೀರ್ವಾದದ ರೂಪದಲ್ಲಿ ಆಶ್ವಾಸನೆಯನ್ನು ನೀಡಿದರು.  
     ಪ್ರತಿಯೊಬ್ಬ ಗೃಹಸ್ಥ-ಗೃಹಿಣಿಯರು ದಿನನಿತ್ಯವೂ ತಮ್ಮ ಮನೆಗಳಲ್ಲಿ ಪಾಲಿಸಲೇಬೇಕಾದ ಐದು ಮಹಾಯಜ್ಞಗಳ ಬಗ್ಗೆ ಪ್ರವಚನ ನೀಡಲಾಯಿತು. ಬ್ರಹ್ಮಯಜ್ಞ - ಜ್ಞಾನಾಭಿವೃದ್ಧಿಗಾಗಿ ನಿಯಮಿತ ಪ್ರಯತ್ನ.  ದೇವಯಜ್ಞ - ಪರಿಸರಶುದ್ಧಿಗಾಗಿ ಅಗ್ನಿಹೋತ್ರ.  ಪಿತೃಯಜ್ಞ - ಬದುಕಿರುವ ತಂದೆ-ತಾಯಿ, ಅತ್ತೆ-ಮಾವ, ಪಾಲಕ-ಪೋಷಕರ ಸೇವೆಯನ್ನು ಸ್ವತಃ, ಶ್ರದ್ಧೆಯಿಂದ ಮಾಡುವುದು.  ಅತಿಥಿಯಜ್ಞ - ಜ್ಞಾನಪ್ರಚಾರ, ಪ್ರಸಾರಕ್ಕಾಗಿ ಅಲೆಯುವ ಜ್ಞಾನಿಯು ಇದ್ದಕ್ಕಿದ್ದಂತೆ ಮನೆಗೆ ಬಂದಲ್ಲಿ, ಸತ್ಕರಿಸಿ, ಸದುಪದೇಶವನ್ನು ಪಡೆಯುವುದು.  ಬಲಿವೈಶ್ವದೇವಯಜ್ಞ - ನಮ್ಮ ಆಹಾರ, ಸಂಪತ್ತಿನಲ್ಲಿ ಸ್ವಲ್ಪಭಾಗವನ್ನು, ಇತರ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳೊಂದಿಗೆ, ದೀನ, ದುರ್ಬಲ, ಅಸಹಾಯಕರೊಂದಿಗೆ ಹಂಚಿಕೊಳ್ಳುವುದು.
     ಮಂಗಲನಿಧಿ ಸಮರ್ಪಣೆ.  ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಸೇವಾಸಂಸ್ಥೆಗಳಿಗೆ ಕಿರುಕಾಣಿಕೆಯನ್ನು ಸಲ್ಲಿಸುವಿಕೆ.  ಆರ್ಯಸಮಾಜ (ವೇದಪ್ರಚಾರ), ಓಂ ಶಾಂತಿಧಾಮ (ವೈದಿಕ ಗುರುಕುಲ), ರಾಷ್ಟ್ರೀಯ ಸ್ವಯಂಸೇವಕ ಸಂಘ (ಸಂಘಟನೆ), ಮಂಗಳ ಶಿಕ್ಷಣ ಸಮಿತಿ (ಶಿಕ್ಷಣ), ಭಾರತ್ ಸ್ವಾಭಿಮಾನ ಟ್ರಸ್ಟ್ (ಭ್ರಷ್ಟಾಚಾರದ ವಿರುದ್ಧದ ರಾಷ್ಟ್ರೀಯ ಆಂದೋಳನ) - ಇವುಗಳ ಪ್ರತಿನಿಧಿಗಳನ್ನು ವೇದಿಕೆಗೆ ಕರೆಸಿ, ಗೌರವಿಸಿ, ಕಾಣಿಕೆಯನ್ನು ಸಲ್ಲಿಸಲಾಯಿತು.
     ಶತಾಯುಷೀ ವೇದವಿದ್ವಾಂಸರಾದ ಪಂಡಿತ ಸುಧಾಕರ ಚತುರ್ವೇದಿಗಳು ನೂತನ ದಂಪತಿಗಳನ್ನು ಆಶೀರ್ವದಿಸುತ್ತಾ ‘ವಿಶೇಷವಾದ ಹೊಣೆಗಾರಿಕೆಗಳನ್ನು ಸ್ವೀಕರಿಸುದೇ ವಿವಾಹ.  ಈ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನೂತನ ದಂಪತಿಗಳು ನೆರವೇರಿಸುವಂತಾಗಲಿ’ ಎಂದು ಆಶೀರ್ವದಿಸಿದರು.
   ಸಭೆಯಲ್ಲಿದ್ದವರೆಲ್ಲರೂ ಎಲ್ಲರಿಗೂ ಶಾಂತಿಯನ್ನು ಕೋರುತ್ತಾ ‘ಶಾಂತಿಪಾಠ’ವನ್ನು ಪಠಿಸುವುದರೊಂದಿಗೆ ವೈದಿಕ ವಿವಾಹ ಸಂಸ್ಕಾರವು ಸಂಪನ್ನವಾಯಿತು.  ಇದೊಂದು ಅನುಕರಣೀಯ ಸಮಾರಂಭ. ಅರ್ಥಪೂರ್ಣವಾಗಿ, ವಿಚಾರಾತ್ಮಕವಾಗಿ, ಬೋಧಪ್ರದವಾಗಿ ಕಾರ್ಯಕ್ರಮವನ್ನು ನಿರ್ದೇಶಿಸಿದ ಶ್ರೀ ಸುಧಾಕರಶರ್ಮಾರವರು ಸಂಗ್ರಹಿಸಿದ ವೇದಸೂಕ್ತಿ,   ಚಂದನ ದೂರದರ್ಶನದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 9.30 ರಿಂದ10.00 ರವರೆಗೆ ಮೂಡಿಬರುತ್ತಿರುವ “ಹೊಸಬೆಳಕು’ ಕಾರ್ಯಕ್ರಮದಲ್ಲಿ ವೇದಗಳ ವಿಶಾಲ ಮಾನವೀಯ ಚಿಂತನೆ, ಮಾರ್ಗದರ್ಶನಗಳನ್ನು ಇವರು ಹಂಚಿಕೊಳ್ಳುತ್ತಿದ್ದಾರೆ.
ವರದಿ: ಶ್ರೀಮತಿ ಬಿ.ಎಸ್.ವಿಜಯಲಕ್ಷ್ಮೀ ಶ್ಯಾಂಪ್ರಸಾದ್.
-----------------------------------------------
ಟಿಪ್ಪಣಿ:
      ಈ ಅಪರೂಪದಲ್ಲಿ ಅಪರೂಪದ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದ ಸೌಭಾಗ್ಯ ನನ್ನದಾಗಿತ್ತು.ಇನ್ನಿತರ ವಿವಾಹದ ಸಂದರ್ಭಗಳಲ್ಲಿ ಮದುವೆಯ ಕಲಾಪಗಳು ಅದರ ಪಾಡಿಗೆ ನಡೆಯುತ್ತಿದ್ದು ಭಾಗವಹಿಸಿದವರು ಕೇವಲ ಹಾಜರಾತಿ, ಉಡುಗೊರೆ ನೀಡಿಕೆ, ಊಟ ಮಾಡಿಕೊಂಡು ಹೋಗುವುದು, ಮಿಕ್ಕ ಸಂದರ್ಭದಲ್ಲಿ ಗುಂಪುಕೂಡಿಕೊಂಡು ಹರಟೆಗಳಲ್ಲಿ  ತೊಡಗಿಕೊಳ್ಳುವುದು ಸಾಮಾನ್ಯ. ಆದರೆ ಈ ಮದುವೆಯ ಕಲಾಪಗಳನ್ನು ನಿಶ್ಶಬ್ದವಾಗಿ ಆಲಿಸಿದ್ಸಲ್ಲದೆ ಅಗತ್ಯದ ಸಂದರ್ಭಗಳಲ್ಲಿ ಒಪ್ಪಿಗೆ, ಅನುಮತಿ ರೂಪದ ಉದ್ಗಾರಗಳನ್ನು ಎಲ್ಲರೂ ಮಾಡುತ್ತಿದ್ದುದು ವಿಶೇಷವಾಗಿತ್ತು. ಹಾಗೆಂದು ಬಂದವರ ಸಂಖ್ಯೆ ಕಡಿಮೆಯೇನಾಗಿರಲಿಲ್ಲ. ವಿಶೇಷ ರೀತಿಯ ವಿವಾಹವನ್ನು ನೋಡುವ ಸಲುವಾಗಿಯೇ ಬಂದವರು, ಬಂಧು-ಮಿತರ್ರುಗಳ ಬಹು ದೊಡ್ಡ ಸಂಖ್ಯೆಯ ಉಪಸ್ಥಿತಿ ಅಲ್ಲಿತ್ತು.  ಬಂದವರೆಲ್ಲರಿಗೆ ರುಚಿಕರ ಭೋಜನದೊಂದಿಗೆ 'ಬಾಳಿಗೆ ಕೈಗನ್ನಡಿ' ಎಂಬ ಪುಸ್ತಕವನ್ನು ತಾಂಬೂಲವಾಗಿ ನೀಡುವುದರ ಜೊತೆಗೆ ಕುಟುಂಬಕ್ಕೆ ಒಂದರಂತೆ ಔಷಧೀಯ ಗಿಡಗಳ ಸಸಿಗಳನ್ನೂ ಕೊಟ್ಟು ಪರಿಸರ ಪ್ರಜ್ಞೆಯನ್ನೂ ಮೆರೆಯಲಾಯಿತು. ಆ ಸಂದರ್ಭದಲ್ಲಿ ಸೆರೆ ಹಿಡಿದ ಕೆಲವು ದೃಷ್ಯಗಳಿವು:
 -ಕ.ವೆಂ.ನಾಗರಾಜ್.


      ವಿವಾಹದ ಮಹತ್ವ ವಿವರಿಸುತ್ತಿರುವ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರು. ಆಸಕ್ತಿಯಿಂದ ಆಲಿಸುತ್ತಿರುವ ವಧೂವರರು ಮತ್ತು ಅವರ ಕುಟುಂಬದವರು
 ಪರಸ್ಪರ ಬದ್ಧತೆ ಘೋಷಿಸಿದ ವಧೂ ವರರು
 ಲಾಜಾಹೋಮ - ಅರಳಿನಂತೆ ಜೀವನ ಅರಳಲಿ, ವಿಕಸಿತಗೊಳ್ಳಲಿ ಎಂದು ಹಾರೈಕೆ
 ಸಪ್ತಪದಿ ವಿವರಣೆ ಕೇಳುತ್ತಾ ಸಪ್ತಪದಿ ತುಳಿಯಲು ಸಿದ್ಧರಾದರು ವಧೂವರರು
ಮಂಗಳನಿಧಿ ಸಮರ್ಪಣೆ:  ಆರ್ಯಸಮಾಜ (ವೇದಪ್ರಚಾರ), ಓಂ ಶಾಂತಿಧಾಮ (ವೈದಿಕ ಗುರುಕುಲ), ರಾಷ್ಟ್ರೀಯ ಸ್ವಯಂಸೇವಕ ಸಂಘ (ಸಂಘಟನೆ), ಮಂಗಳ ಶಿಕ್ಷಣ ಸಮಿತಿ (ಶಿಕ್ಷಣ), ಭಾರತ್ ಸ್ವಾಭಿಮಾನ ಟ್ರಸ್ಟ್ (ಭ್ರಷ್ಟಾಚಾರದ ವಿರುದ್ಧದ ರಾಷ್ಟ್ರೀಯ ಆಂದೋಳನ)ಗಳನ್ನು ಪ್ರತಿನಿಧಿಸಿದ ಗಣ್ಯರುಗಳಿಗೆ (ಹಿಂಬದಿಯಲ್ಲಿ ಆಸೀನರಾದವರು) ಮಂಗಳನಿಧಿ ಅರ್ಪಣೆ.
ಶುಭಾಶೀರ್ವಾದ ಮಾಡಿದ ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರನ್ನೂ ಚಿತ್ರದಲ್ಲಿ ಕಾಣಬಹುದು.

8 ಕಾಮೆಂಟ್‌ಗಳು:

  1. ಶ್ರೀ ನಾಗರಾಜ್, ನಿಮ್ಮಲ್ಲಿ ಈ ವಿವಾಹದ ಫೋಟೋಗಳು ಇರಬಹುದೆಂದು ನಂಬುವೆ. ದಯಮಾಡಿ ಈ ಲೇಖನದೊಟ್ಟಿಗೆ, ನಿಮ್ಮ ಮಾತುಗಲನ್ನೂ ಸೇರಿಸಿ ಪ್ರಕಟಿಸಿ

    ಪ್ರತ್ಯುತ್ತರಅಳಿಸಿ
  2. ಅರ್ಥಪೂರ್ಣ ಸಮಾರ೦ಭವನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  3. ನನಗೆ ಒಂದು ದೊಡ್ಡ ಬೇಸರದ ಸಂಗತಿ ಎಂದರೆ ನಾನು ಆ ವಿವಾಹದಲ್ಲಿ ಭಾಗವಹಿಸಲಾಗಲಿಲ್ಲವಲ್ಲವೆಂದು

    ಪ್ರತ್ಯುತ್ತರಅಳಿಸಿ
  4. maanyare, naanU madhuveyaagiddEne. nooraaru madhubegalalli bhagavahisiddene. Adare maduve swalpavU arthvaaguvudilla. purOhitaru Eno Heluttiddare. avaru hElidante kEluvudu aste namme kelasa. adarallu kelvu purohitaru pustaka nodikondu Slokagalannu Heluttiruttaare. nimma blog vivarneina ondu maduve sampoornavaayitu. enisuttade. entaha vivaranegalu innu hechchu barali. tilidukollabEku emba Asaktraige tiliyali. bErobbarigu tilisi hElali. nimma maahiti mattu photogala vivaranegaagi dhanyavaadagalu. vandanegalodane.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಂಜುಂಡರಾಜುರವರೇ, ನಿಮ್ಮಂತಹ ಆಸಕ್ತರಿಂದಲೇ ಇತರರಿಗೆ ಪ್ರೇರಣೆ ಸಿಗುವುದು. ಈ ಲೇಖನದ ಉದ್ದೇಶವೂ ಇದೇ ಆಗಿದೆ. ಧನ್ಯವಾದಗಳು.

      ಅಳಿಸಿ