ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಆಗಸ್ಟ್ 31, 2012


ಎಲ್ಲರಿಗಾಗಿ ಸಾಪ್ತಾಹಿಕ ವೇದ ಪಾಠ

ದಿನಾಂಕ 2.09.2012 ಭಾನುವಾರ ಬೆಳಿಗ್ಗೆ 10.30 ಕ್ಕೆ

ಸ್ಥಳ: ಈಶಾವಾಸ್ಯಮ್,ಹೊಯ್ಸಳನಗರ, ಹಾಸನ

ಎಲ್ಲರಿಗೂ  ಮುಕ್ತ ಅವಕಾಶ

ಸ್ನೇಹಿತರೊಡಗೂಡಿ ಬನ್ನಿ

ಹೊಸಬರಿಗೆ   ಹಿಂದಿನ ಪಾಠವನ್ನೂ ಸಹ ಮಾಡಲಾಗುವುದು

ಸಂಪರ್ಕಿಸಲು:    ಹರಿಹರಪುರಶ್ರೀಧರ್- 9663572406
                          ಕವಿ ನಾಗರಾಜ್-      9448501804


                ನೀವು ಹೊರದೇಶದಲ್ಲಿ, ಹೊರ ಊರುಗಳಲ್ಲಿದ್ದೀರಾ? ಚಿಂತೆಯಿಲ್ಲ, ಈ ಮೇಲ್ ಮೂಲಕ ಉಚಿತವಾಗಿ ಪಾಠ ತರಿಸಿಕೊಳ್ಳಲು ವೇದಸುಧೆಗೆ    ಮೇಲ್ ಮಾಡಿ. ಈಗಾಗಲೇ ಸುಮಾರು ಇಪ್ಪತ್ತು ಜನ ವಿದ್ಯಾರ್ಥಿಗಳು ಮೇಲ್ ಮೂಲಕ ಪಾಠಗಳ ನ್ನು ತರಿಸಿಕೊಳ್ಳುತ್ತಿದ್ದಾರೆ. ಸುಮಾರು ಇಪ್ಪತ್ತು ಜನ ವಿದ್ಯಾರ್ಥಿಗಳು ಈ  ತಾಣದ ಮೂಲಕ ವೇದಾಭ್ಯಾಸವನ್ನು ಮಾಡುತ್ತಿದ್ದಾರೆ.ಅಷ್ಟೇಅಲ್ಲ ವೇದ ಪ್ರಸಾರದಲ್ಲಿ ಕೈ ಜೋಡಿಸಲು  ಹಾಸನದ ಸಮೀಪವಿರುವ  ನಿಮ್ಮ  ಪರಿಚಯದವರು/ಬಂಧು ಮಿತ್ರರಿಗೆ ತಿಳಿಸಿ
ನಮ್ಮ ಈ ಮೇಲ್  ವಿಳಾಸಗಳು:
mail@vedasudhe.com [ಪಾಠ ತರಿಸಿಕೊಳ್ಳಲು ಇದು ಸೂಕ್ತ]
vedasudhe@gmail.com


ಮನವಿ: 
ದಿನಾಂಕ 31.8.2012 ರ ವರಗೆ ಕೋರಿಕೆ ಬಂದವರಿಗೆಲ್ಲಾ  ವೇದಪಾಠವನ್ನು  ನಾಲ್ಕು ಭಾಗಗಳಲ್ಲಿ     ಮೇಲ್ ಮಾಡಲಾಗಿದೆ.  ಪಾಠ ತಲುಪಿದವರಿಂದ ಒಂದು ಸಾಲಿನ ಉತ್ತರ ಅಪೇಕ್ಷಿಸುತ್ತೇವೆ. ಇದರಿಂದ ಮುಂದಿನ ಪಾಠವನ್ನು ಕಳಿಸಲು ಪ್ರೇರಣೆ ಸಿಗುತ್ತದೆ. ಪಾಠ ತಲುಪಿದವರು  mail@vedasudhe.com ಗೆ  ದಯಮಾಡಿ ಸಾಲುತ್ತರ ಬರೆಯುವಿರಾ?



ಗುರುವಾರ, ಆಗಸ್ಟ್ 30, 2012

ವೇದ ಪಾಠ: ಒಂದು ನೋಟ



ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಹಾಸನದಲ್ಲಿ ದಿನಾಂಕ 19.8.2012 ಭಾನುವಾರ ಸಾಪ್ತಾಹಿಕ ವೇದಪಾಠವನ್ನು ಆರಂಭ ಮಾಡಿದ್ದಾರೆ. ಪತ್ರಿಕೆಗಳಲ್ಲಿ ಈ ಬಗ್ಗೆ ಸುದ್ಧಿಮಾಡಿದಾಗ ಹಲವರು ದೂರವಾಣಿ ಕರೆಮಾಡಿ ನಮಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಅವುಗಳಲ್ಲಿ ಕೆಲವು ಇಲ್ಲಿವೆ


1.ಎಲ್ಲಾ ಜಾತಿಯವರೂ ಬರಬಹುದೇ?

2.ಹೆಂಗಸರೂ ಬರಬಹುದೇ?

3.ಯಾವ ಯಾವ ಮಂತ್ರಗಳನ್ನು ಹೇಳಿಕೊಡುತ್ತಾರೆ?

4.ಪೂಜಾ ಮಂತ್ರವನ್ನೂ ಹೇಳಿಕೊಡುತ್ತಾರಲ್ಲವೇ?

5.ಶುಲ್ಕ?

6.ಇನ್ನೂ ಹಲವು ಪ್ರಶ್ನೆಗಳು.ನನ್ನ ಮಗನಿಗೆ ಈ ವರ್ಷ ಮುಂಜಿ ಮಾಡಿದ್ದೇನೆ. ಅವನನ್ನು ಕಳಿಸುತ್ತೇನೆ...ಇತ್ಯಾದಿ...ಇತ್ಯಾದಿ....

ಎಲ್ಲಾ ಪ್ರಶ್ನೆಗಳಿಗೂ ಒಂದೇ ಉತ್ತರ." ಬನ್ನಿ ಎಲ್ಲಾ ತಿಳಿಯುತ್ತೆ"

ಹೌದು, ಆಸಕ್ತರು ಬಂದರು. ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರು ಅವರ ಉಪನ್ಯಾಸದಲ್ಲಿ ಎಲ್ಲರ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದರು. ಉಪನ್ಯಾಸ ಕೇಳಿದ ಮೇಲೆ ಹಲವರು ಹೇಳಿದ್ದು..

1.ಮಂತ್ರ ಕಲಿಯೋಣ ಅಂತಾ ಬಂದೆ, ಜೀವನದ ಪಾಠ ಆರಂಭಿಸಿದ್ದಾರೆ. ನನಗಂತೂ ಆಶ್ಚರ್ಯವಾಗಿದೆ.

2.ವೇದಾಧ್ಯಯನ ಮಾಡುವವರು ಸತ್ಯವನ್ನೇ ಹೇಳಬೇಕು, ಅಹಿಂಸಾವಾದಿಗಳಾಗಿರಬೇಕು,.......ಯಾರೂ ವೇದಪಾಠದಲ್ಲಿ ಹೀಗೆ ಹೇಳಿಯೇ ಇರಲಿಲ್ಲ.

3. ಮನುಷ್ಯರೆಲ್ಲಾ ಒಂದೇ ಜಾತಿ! ಊಹಿಸಲೂ ಸಾಧ್ಯವಿಲ್ಲವಲ್ಲಾ!

4.ದೇವರ ಕಲ್ಪನೆಯೇ ವಿಭಿನ್ನ! ಪೂಜೆಯ ಕಲ್ಪನೆಯೇ ವಿಭಿನ್ನ! 33 ಕೋಟಿ ದೇವರು?

ವಿಶ್ವನಾಥಶರ್ಮರ ಉಪನ್ಯಾಸದ 5-10 ನಿಮಿಷಗಳ 5 ತುಣುಕುಗಳನ್ನು ಇಲ್ಲಿ ಕೇಳಿ.

ವೇದ ಪಾಠದ ಆಡಿಯೋ ಇಲ್ಲಿ ಕೇಳಿ
-ಹರಿಹರಪುರ ಶ್ರೀಧರ್.

ಹೊಸಬೆಳಕು


WE CONTINUE TO DISCUSS THE TRUTH AND MYTH ABOUT JYOTHISA IN THE NEXT EPISODE AND FOLLOWING THAT AN INTERESTING EPISODE ON MISCONCEPTIONS ABOUT VAASTU. THIS ARTICLE IN SUDHA MAGAZINE IS A RECOGNITION FOR OUR EFFORTS. DONT MISS HOSABELAKU EVERY SUNDAY MORNING 9.30 AM ON DD CHANDANA.
ಇದೇ ಭಾನುವಾರ  ಬೆಳಿಗ್ಗೆ 9.30ಕ್ಕೆ  ಚಂದನ ದೂರದರ್ಶನದಲ್ಲಿ ’ಹೊಸಬೆಳಕು "ದಾರಾವಾಹಿ ನೋಡಿ,  ವೇದ ವಿವರಣೆಯನ್ನು     ಶ್ರೀಸುಧಾಕರಶರ್ಮರ ಸರಳ ಮಾತುಗಳಲ್ಲಿ ಕೇಳಿ.

ಈ ಲೇಖನ ಓದಲು  ಚಿತ್ರದ ಮೇಲೆ ಕ್ಲಿಕ್ಕಿಸಿ ದೊಡ್ದದು ಮಾಡಿಕೊಂಡು ಓದಿ.



ಮಂಗಳವಾರ, ಆಗಸ್ಟ್ 28, 2012

ವೇದ ಪಾಠ -1




     ವೇದಸುಧೆಗೆ ನಿನ್ನೆ ಒಂದು ವಿಶೇಷ ದಿನವೇ ಹೌದು.ಹಲವಾರು ದಿನಗಳಿಂದ ಬಯಸುತ್ತಿದ್ದ ವೇದಪಾಠ ಸಾಪ್ತಾಹಿಕ ತರಗತಿಯು   ನಿನ್ನೆ ಉದ್ಘಾಟನೆಯಾಗಿ ಇಂದು ಮೊದಲಪಾಠ ಶುರುವಾಯ್ತು. ಬೇಲೂರಿನ ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ಬಹಳ ವಿಶಿಷ್ಟವಾಗಿ ಆರಂಭಿಸಿದ ವೇದಪಾಠವು ಹಲವರಿಗೆ ಅಚ್ಚರಿಯುಂಟುಮಾಡಿತು. ವೇದ ಪಾಠ ಎಂದರೆ ಹೀಗೂ ನಡೆಯುತ್ತದೆಯೇ! ಎಂಬ ಆಶ್ಚರ್ಯ ಕೆಲವರಿಗೆ. ಕೆಲವರು ಕೇಳಿದರು" ಪೂಜೆಯ ಮಂತ್ರಗಳನ್ನು ಯಾವಾಗ ಹೇಳಿಕೊಡ್ತೀರಿ? ಬಹುಪಾಲು ಜನರಿಗೆ ವಿಶ್ವನಾಥಶರ್ಮರು ಪೀಠಿಕೆಯ ರೂಪದಲ್ಲಿ ಮಾಡಿದ ಉಪನ್ಯಾಸದಿಂದ "ಇಲ್ಲಿ ನಡೆಯುವ ವೇದ ಪಾಠವೆಂದರೆ ಕೇವಲ ಮಂತ್ರ ಕಲಿಯುವುದಲ್ಲ" ಎಂಬ ಅರಿವುಂಟಾಗಿದೆ.ವೇದಸುಧೆಯ ಅಭಿಮಾನಿಗಳು ಬಯಸುವುದಾದರೆ ಶರ್ಮರು ಹೇಳಿಕೊಡುತ್ತಿರುವ ಪಾಠವನ್ನು  ಪ್ರತೀ ವಾರ ಇಲ್ಲಿ ಪ್ರಕಟಿಸಲಾಗುವುದು. ಈ ಬಗ್ಗೆ ಫೀಡ್ ಬ್ಯಾಕ್ ಇದ್ದರೆ ಉತ್ತಮ

ಕೊಂಡಿಯಲ್ಲಿರುವ ಆಡಿಯೋ ಕ್ಲಿಪ್ ನಿಮಗೆ ಮೇಲ್ ಮಾಡಬೇಕೇ? ನನಗೊಂದು  ಮನವಿ ಮೇಲ್ ಕಳಿಸಿ.ಕೂಡಲೇ  ಮೇಲ್ ಮಾಡುವೆ.
.-ಹರಿಹರಪುರ ಶ್ರೀಧರ್.


ಪಾಠ-1  ಆಡಿಯೋ ಕ್ಲಿಪ್  ಇಲ್ಲಿ ಕೇಳಿ






ಸೋಮವಾರ, ಆಗಸ್ಟ್ 27, 2012

ಹಾಸನದಲ್ಲಿ ವೇದಪಾಠದ ಶುಭಾರಂಭ







     ಹಾಸನ ಹೊಯ್ಸಳ ನಗರದ ಶ್ರೀ ಶಕ್ತಿ ಗಣಪತಿ ದೇವಾಲಯ ರಸ್ತೆಯಲ್ಲಿನ ‘ಈಶಾವಾಸ್ಯಂ’ ಕಾರ್ಯಾಲಯದಲ್ಲಿ ‘ವೇದ ಭಾರತೀ ಸಂಪ್ರತಿಷ್ಠಾನಂ’ ಹಾಸನ ಶಾಖೆ ವತಿಯಿಂದ ಭಾನುವಾರದಿಂದ ಆರಂಭವಾದ ‘ಎಲ್ಲರಿಗಾಗಿ ವೇದ’ ಎಂಬ ಸಾಪ್ತಾಹಿಕ ವೇದ ಪಾಠ ತರಗತಿಗಳನ್ನು ಶ್ರೀ ರಾಮಕೃಷ್ಣ ವಿದ್ಯಾಲಯದ ಪ್ರಾಂಶುಪಾಲರಾದ ಸಿ.ಎಸ್. ಕೃಷ್ಣಸ್ವಾಮಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಗಿನ್ನೀಸ್ ದಾಖಲೆಯ ಕು. ಸ್ವಾತಿ ಭಾರದ್ವಾಜ್ ಅವರಿಂದ ಆಕರ್ಷಕ ಭರತ ನಾಟ್ಯ ಕಾರ್ಯಕ್ರಮ ನಡೆಯಿತು.
‘ಮನುಜ ಮತಕ್ಕಾಗಿಯೇ ವೇದ ಪಥವಿದೆ’: ಶರ್ಮಾಜಿ
ಹಾಸನ, ಆ. ೧೯: ವೇದಗಳು ಯಾವುದೇ ಜಾತಿ, ಮತ, ಲಿಂಗ ಇತ್ಯಾದಿಗಳಿಗೆ ಸೀಮಿತವಾದುವಲ್ಲ; ವೇದಗಳು ಈ ಜಗತ್ತಿನ ಎಲ್ಲರಿಗಾಗಿಯೂ ಇವೆ; ಮನುಜ ಮತಕ್ಕಾಗಿಯೇ ವೇದ ಪಥವಿದೆ; ಸರ್ವರೂ ಇವುಗಳನ್ನು ಅರ್ಥ ಸಹಿತ ಅಧ್ಯಯನ ಮಾಡಿ ಆಚರಣೆಗೆ ತಂದಲ್ಲಿ ನಿಜಕ್ಕೂ ಮನುಕುಲ ಉದ್ಧಾರವಾಗುತ್ತದೆ ಎಂದು ಬೇಲೂರಿನ ಸಂಸ್ಕೃತ ಪಾಠಶಾಲೆ ಆಚಾರ್ಯರಾದ ವೇದಾಧ್ಯಾಯಿ ಶ್ರೀ ವಿಶ್ವನಾಥ ಶರ್ಮ ತಿಳಿಹೇಳಿದರು.
ನಗರದ ಹೊಯ್ಸಳ ನಗರದ ಶ್ರೀ ಶಕ್ತಿ ಗಣಪತಿ ದೇವಾಲಯ ರಸ್ತೆಯಲ್ಲಿನ ‘ಈಶಾವಾಸ್ಯಂ’ ಕಾರ್ಯಾಲಯದಲ್ಲಿ ‘ವೇದ ಭಾರತೀ ಸಂಪ್ರತಿಷ್ಠಾನಂ’ ಹಾಸನ ಶಾಖೆ ವತಿಯಿಂದ ಭಾನುವಾರದಿಂದ ಆರಂಭವಾದ ‘ಎಲ್ಲರಿಗಾಗಿ ವೇದ’ ಎಂಬ ಸಾಪ್ತಾಹಿಕ ವೇದ ಪಾಠ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ವೇದಗಳನ್ನು ಅರಿಯದವರು, ಮತ್ತು ಅವುಗಳ ಕುರಿತು ಪ್ರಾಥಮಿಕ ಜ್ಞಾನ ಸಹ ಇಲ್ಲದವರು ಪೂರ್ವಾಗ್ರಹ ಪೀಡಿತರಾಗಿ ವಿನಾಕಾರಣ ಅವುಗಳನ್ನು ಟೀಕಿಸುವುದು, ಜರೆಯುವುದು, ಅವುಗಳ ವಿರುದ್ಧ ದ್ವೇಷ ಸಾಧಿಸುವುದು ಮಾಡುತ್ತಾರೆ. ಇಂತಹವರ ವರ್ತನೆಗಳಿಂದೇನೂ ವೇದದ ಹಿರಿಮೆ ಅಥವಾ ಘನತೆ ಖಂಡಿತಾ ಕುಗ್ಗುವುದಿಲ್ಲ. ಆದ್ದರಿಂದ ಇಲ್ಲಸಲ್ಲದ ಪೂರ್ವಾಗ್ರಹ ಪೀಡಿತ ಭಾವನೆ ಇರುವವರು ಮೊದಲು ವೇದಗಳು ಎಂದರೇನು? ಅವುಗಳಲ್ಲಿ ಏನಿದೆ ಎಂಬುದನ್ನು ಅರಿಯುವ ಪ್ರಯತ್ನ ಮಾಡಬೇಕು; ವೇದ ಎಂದರೆ ಜ್ಞಾನ ಎಂದು ಅರ್ಥ. ಮನುಷ್ಯನಾದವನು ಹೇಗೆ ತನ್ನ ಬದುಕು ಸಾಗಿಸಬೇಕು ಎಂಬುದನ್ನು ವೇದ ತಿಳಿಸಿಕೊಡುತ್ತದೆ. ಹೀಗಾಗಿ ವೇದ ಮಂತ್ರಗಳನ್ನು ಯಥಾವತ್ತು ಕಲಿಯಲೇಬೇಕು; ಪಠಿಸಲೇಬೇಕು ಎಂದೇನೂ ಇಲ್ಲ; ವೇದಗಳಲ್ಲಿನ ಜ್ಞಾನವನ್ನು ನಮ್ಮದಾಗಿಸಿಕೊಂಡರೂ ಸಾಕು; ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದು ಶರ್ಮಾಜಿ ಕಿವಿಮಾತು ಹೇಳಿದರು.
ವೇದಗಳು ಅವುಗಳದೇ ಆದ ವೇದ ಭಾಷೆಯಲ್ಲಿವೆಯೇ ಹೊರತು ಸಂಸ್ಕೃತದಲ್ಲಿಲ್ಲ. ವೇದ ಭಾಷೆಯಿಂದ ಸಂಸ್ಕೃತ ಹುಟ್ಟಿಕೊಂಡಿದೆ. ಹೀಗಾಗಿ ವೇದದ ಶಬ್ದಗಳಿಗೆ ಅದರದೇ ಆದ ವೈಜ್ಞಾನಿಕ ಅರ್ಥಗಳಿವೆ. ಈ ಅರ್ಥಗಳನ್ನು ವಿವರಿಸಲಿಕ್ಕಾಗಿಯೇ ನಿರುಕ್ತ ಎಂಬ ವೇದಾಂಗವಿದೆ. ಜಾತಿ, ವರ್ಣ ಇತ್ಯಾದಿ ಶಬ್ದಗಳಿಗೆ ವೇದಗಳು ನೀಡುವ ಅರ್ಥಗಳೇ ಬೇರೆಯಾಗಿವೆ. ಜೀವವೊಂದು ಹುಟ್ಟುವ ವಿಧಾನವೇ ‘ಜಾತಿ’ ಎನಿಸಿಕೊಳ್ಳುತ್ತದೆ. ಮನುಷ್ಯನಾಗಿ ಹುಟ್ಟಿದರೆ ಮನುಷ್ಯ ಜಾತಿ; ಕುರಿ; ಕೋಳಿಯಾಗಿ ಹುಟ್ಟಿದರೆ ಅವುಗಳದ್ದೇ ಜಾತಿ ಅಷ್ಟೇ ಹೊರತು ಈಗ ನಾವು ವಿಂಗಡಿಸಿರುವ ಬ್ರಾಹ್ಮಣ, ಲಿಂಗಾಯಿತ, ಕುರುಬ ಇತ್ಯಾದಿಗಳಿಗೆ ಅರ್ಥವಿಲ್ಲ. ಅದೇ ರೀತಿ ವರ್ಣ ಎಂದರೆ ‘ಆರಿಸಿಕೊಳ್ಳುವುದು’ ಎಂಬ ಅರ್ಥವಿದೆಯೇ ಹೊರತು; ಈಗ ನಾವು ಹೇಳುವ ಜಾತಿ ಆಧಾರಿತ ವರ್ಣಾಶ್ರಮ ವ್ಯಾಖ್ಯಾನಕ್ಕೆ ಅರ್ಥವಿಲ್ಲ ಎಂದು ಅವರು ವಿವರಿಸಿದರು. ನಮ್ಮ ವೇದಗಳಲ್ಲಿನ ಪ್ರತಿಯೊಂದು ಜ್ಞಾನವನ್ನು ಆಚರಣೆಗೆ ತರಲೂ ಸಹ ನಾವು ವಿದೇಶಿಯರನ್ನೇ ಒರೆಗಲ್ಲಾಗಿ ಇಟ್ಟುಕೊಂಡಿರುವುದು ಹಾಗೂ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ತಂದುಕೊಂಡಿರುವುದ ದೊಡ್ಡ ದುರಂತ ಹಾಗೂ ವಿಪರ‍್ಯಾಸ ಎಂದು ಶರ್ಮಾಜಿ ನಿದರ್ಶನಗಳ ಸಹಿತ ವಿಷಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ರಾಮಕೃಷ್ಣ ವಿದ್ಯಾಲಯದ ಪ್ರಾಂಶುಪಾಲರಾದ ಸಿ.ಎಸ್. ಕೃಷ್ಣಸ್ವಾಮಿ ಮಾತನಾಡಿ, ಅರೆಬರೆ ಜ್ಞಾನ ಹೊಂದಿದ ಅಜ್ಞಾನಿಗಳು ಹೇಳುವಂತೆ ವೇದಗಳು ಯಾರ ಸ್ವತ್ತೂ ಅಲ್ಲ; ಅಥವಾ ಅವು ಒಂದು ಪಂಗಡಕ್ಕೆ ಮಾತ್ರ ಸೀಮಿತವೂ ಅಲ್ಲ; ಅದನ್ನು ಯಾರು ಬೇಕಾದರೂ ಕಲಿಯಬಹುದು. ಇವುಗಳನ್ನು ಬರೆದವರು ಯಾರು ಮತ್ತು ಯಾವ ಕಾಲದಲ್ಲಿ ಹುಟ್ಟಿಕೊಂಡವು ಎಂಬ ನಿಖರ ಮಾಹಿತಿ ಇಲ್ಲವಾದ್ದರಿಂದ ವೇದಗಳನ್ನು ‘ಅಪೌರುಷೇಯ’ ಎಂದಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಗಿನ್ನೀಸ್ ದಾಖಲೆಯ ಕು. ಸ್ವಾತಿ ಭಾರದ್ವಾಜ್ ಅವರಿಂದ ಆಕರ್ಷಕ ಭರತ ನಾಟ್ಯ ಕಾರ್ಯಕ್ರಮ ನಡೆಯಿತು. ‘ವೇದ ಸುಧೆ’ ಬ್ಲಾಗ್ ಗೌರವ ಸಂಪಾದಕ ಕವಿ ನಾಗರಾಜ್ ಅವರು ಸ್ವಾಗತಿಸಿದರಲ್ಲದೆ, ಕಲಾವಿದೆ ಕು. ಸ್ವಾತಿ ಭಾರದ್ವಾಜ್ ಪರಿಚಯ ಮಾಡಿಕೊಟ್ಟರು. ಬ್ಲಾಗ್ ಸಂಪಾದಕರಾದ ಹರಿಹರಪುರ ಶ್ರೀಧರ್ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕು. ಸ್ವಾತಿ ತಂದೆ ಪ್ರಕಾಶ್ ಹಾಗೂ ತಾಯಿ ಅನಿತಾ ಪ್ರಕಾಶ್, ಚ.ರಾ. ಪಟ್ಟಣದ ನಾಟ್ಯ ಭೈರವಿ ಟ್ರಸ್ಟ್ ಅಧ್ಯಕ್ಷ ನಾಗರಾಜ್, ಚೈತನ್ಯ ಶಾಲೆ ಮುಖ್ಯಸ್ಥ ರಮೇಶ್, ವಾಸವಿ ಶಾಲೆಯ ಜಿ.ಎಸ್. ಮಂಜುನಾಥ್ ಮತ್ತಿತರರು ಹಾಜರಿದ್ದರು.













ಹಾಸನ  ದಲ್ಲಿ  ಇದೇ ಸಪ್ಟೆಂಬರ್ 30 ರಂದು ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ  ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಪಾಲ್ಗೊಳ್ಳಲಿದ್ದು  ಪ್ರಶ್ನೆಗಳನ್ನು ಕಲಿಸುವವರು ಮತ್ತು ವೇದ ಪಾಠಗಳ ಕುರಿತು ಆಸಕ್ತಿ ಇರುವವರು ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿನಾಗರಾಜ್ 9448501806   ಅಥವಾ ಸಂಪಾದಕರಾದ ಶ್ರೀ ಹರಿಹರಪುರಶ್ರೀಧರ್  9663572406 ಅವರುಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಹೆಚ್ಚಿನ ದೃಶ್ಯಾವಳಿಗಾಗಿ ಕೊಂಡಿ ಇಲ್ಲಿದೆ.


ವರದಿ:ಹೆಚ್.ಎಸ್. ಪ್ರಭಾಕರ್,ಹಿರಿಯ ಪತ್ರಕರ್ತರು,ಹಾಸನ


ಸೋಮವಾರ, ಆಗಸ್ಟ್ 13, 2012


ಓಂ
ವೇದಭಾರತೀ ಸಂಪ್ರತಿಷ್ಠಾನಂ, ಹಾಸನ ಶಾಖೆ
ಕಾರ್ಯಾಲಯ: ಈಶಾವಾಸ್ಯಮ್, ಶಕ್ತಿ ಗಣಪತಿದೇವಾಲಯ ರಸ್ತೆ,
 ಹೊಯ್ಸಳನಗರ, ಹಾಸನ
 

 “ಎಲ್ಲರಿಗಾಗಿ ವೇದ”
ಸಾಪ್ತಾಹಿಕ ವೇದ ಪಾಠದ
ಉದ್ಘಾಟನಾ ಸಮಾರಂಭ

ದಿನಾಂಕ: 19.08.2012 ಭಾನುವಾರ ಬೆಳಿಗ್ಗೆ10.30 ಕ್ಕೆ
ಸ್ಥಳ: ಈಶಾವಾಸ್ಯಮ್, ಶಕ್ತಿ ಗಣಪತಿದೇವಾಲಯ ರಸ್ತೆ,
 ಹೊಯ್ಸಳನಗರ, ಹಾಸನ

ಉದ್ಘಾಟನೆ:
ಶ್ರೀ ಸಿ.ಎಸ್.ಕೃಷ್ಣಸ್ವಾಮಿ,
ಪ್ರಾಂಶುಪಾಲರು, ಶ್ರೀ ರಾಮಕೃಷ್ಣ ವಿದ್ಯಾಲಯ, ಹಾಸನ

ಉಪನ್ಯಾಸ:
 ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮ,ಬೇಲೂರು

ಭರತ ನಾಟ್ಯ:
ಗಿನ್ನೀಸ್ ದಾಖಲೆ ಮಾಡಿರುವ
 ಕು||ಸ್ವಾತೀ ಭಾರದ್ವಾಜ್,ಚನ್ನರಾಯಪಟ್ಟಣ

ನೀವೂ ಬನ್ನಿ, ಮಿತ್ರರನ್ನೂ ಕರೆತನ್ನಿ

ಸಂಯೋಜಕರು
ವೇದಭಾರತೀ ಸಂಪ್ರತಿಷ್ಠಾನಂ, ಹಾಸನ ಶಾಖೆ

ಸಂಪರ್ಕಿಸಲು:
1.ಕವಿ ನಾಗರಾಜ್       :9448501804
2. ಹರಿಹರಪುರಶ್ರೀಧರ್: 9663572406
3. ಅ.ನಾಗರಾಜ್        : 9448093830
4. ಅನಂತನಾರಾಯಣ    :9449969861

ಹೀಗೊಂದು ಅನುಕರಣೀಯ ಶ್ರದ್ಧಾಂಜಲಿ ಕಾರ್ಯಕ್ರಮ



     ಹಾಸನದ ನನ್ನ ಬಂಧು ಹಾಗೂ ಮಿತ್ರರಾದ ಪತ್ರಕರ್ತ ಪ್ರಭಾಕರರ ಕಿರಿಯ ಸಹೋದರ  ರಮೇಶಬಾಬು 30-07-2012 ರಂದು ವಿಧಿವಶನಾದ ಸಂದರ್ಭದಲ್ಲಿ ಪ್ರಭಾಕರ್ ಮತ್ತು ಸೋದರರು ದಿಟ್ಟ ನಿರ್ಧಾರ ತಳೆದು ಆತನ ದೇಹವನ್ನು ಮೃತನ ಇಚ್ಛೆಯಂತೆ ಹಾಸನದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್)ಗೆ ದಾನ ಮಾಡಿದರು. ಉಳಿದ ಕ್ರಿಯಾಕರ್ಮಗಳನ್ನು ನಡೆದುಕೊಂಡು ಬಂದ ಸಂಪ್ರದಾಯದಂತೆ ನೆರವೇರಿಸಿದರು. ಮೂರ್ಛೆ ರೋಗದಿಂದ ಬಳಲುತ್ತಿದ್ದ ರಮೇಶಬಾಬು ಅವಿವಾಹಿತರಾಗಿದ್ದು ನಿಧನರಾದಾಗ ಆತನ ವಯಸ್ಸು ಕೇವಲ ೪೫ ವರ್ಷಗಳು. ದಿನಾಂಕ 11-08-2012 ರಂದು ಪ್ರಭಾಕರ್ ಸೋದರರು ಅಂತಿಮ ಕಲಾಪವನ್ನು (ವೈಕುಂಠ ಸಮಾರಾಧನೆ)  ಶ್ರದ್ಧಾಂಜಲಿ ಕಾರ್ಯಕ್ರಮವಾಗಿ ಆಚರಿಸಿದರು. ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮ ಕೇವಲ ಮೃತ ವ್ಯಕ್ತಿಗೆ ಶ್ರದ್ಧಾಂಜಲಿ ಅರ್ಪಿಸುವುದಕ್ಕೆ ಮೀಸಲಾಗಿರದೆ ಜನಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವಾಗಿ ನಡೆದುದು ವಿಶೇಷವೇ ಸರಿ. 
     ರಮೇಶಬಾಬು ಮೂರ್ಛೆ ರೋಗದಿಂದ ನರಳಿ ಕೊನೆಯುಸಿರೆಳೆದವರು. ಮೂರ್ಛೆರೋಗದ ಬಗ್ಗೆ ಜನರಿಗೆ ಅನೇಕ ತಪ್ಪು ತಿಳುವಳಿಕೆಗಳಿದ್ದು ಅದನ್ನು ಹೋಗಲಾಡಿಸುವ ಕುರಿತು ಅರಿವು ಮೂಡಿಸುವ ಕೆಲಸ ಅಗತ್ಯವೆಂದು ಭಾವಿಸಿ ಮೆದುಳು ಮತ್ತು ನರರೋಗ ತಜ್ಞರಾದ ಡಾ. ಹಾಲಪ್ರಶಾಂತ್‌ರವರನ್ನು, ದೇಹದಾನದ ಮಹತ್ವ ವಿವರಿಸಲು ಹಿಮ್ಸ್ ನ ಸಹಾಯಕ ಪ್ರೊಫೆಸರ್ ಡಾ. ಸಿ.ಎಸ್. ಮಂಜುನಾಥರವರನ್ನು ಹಾಗೂ ವೇದದ ಹಿನ್ನೆಲೆಯಲ್ಲಿ ದೇಹ ಮತ್ತು ಜೀವಗಳ ಸಂಬಂಧ, ಶ್ರಾದ್ಧ ಎಂದರೇನು ಎಂಬುದನ್ನು ತಿಳಿಸಲು ಬೇಲೂರಿನ ವೇದಾಧ್ಯಾಯಿ ಶ್ರೀ ವಿಶ್ವನಾಥಶರ್ಮರವರನ್ನು ಪ್ರಭಾಕರ್ ಸೋದರರು ಆಹ್ವಾನಿಸಿ ಅವರಿಂದ ಉಪನ್ಯಾಸಗಳನ್ನು ಏರ್ಪಡಿಸಿದ್ದರು. 
     ಮೂರ್ಛೆ ರೋಗದ ಕುರಿತು ಸಾಮಾನ್ಯವಾಗಿ ಇರುವ ತಪ್ಪು ತಿಳಿವಳಿಕೆಗಳನ್ನು ಬಿಡಿಸಿ ಹೇಳಿದ ಡಾ. ಹಾಲಪ್ರಶಾಂತರು ಒಂದು ಅನಿಮೇಟೆಡ್ ಕಿರುಚಲನಚಿತ್ರ ತೋರಿಸಿ ವಿವರಣೆ ನೀಡಿದ್ದು ಗಮನ ಸೆಳೆಯಿತು. ಮೂರ್ಛೆ ತಪ್ಪಿದರೆ ಏನು ಮಾಡಬೇಕು, ಏನು ಮಾಡಬಾರದು ಎಂಬ ಬಗ್ಗೆ ಸಾಧಾರ ಮಾಹಿತಿ ನೀಡಿದ್ದಲ್ಲದೆ ಸಭಿಕರು ಕೇಳಿದ ಸಂದೇಹಗಳಿಗೆ ಸೂಕ್ತ ಉತ್ತರಗಳನ್ನು ನೀಡಿದರು. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ರೋಗವನ್ನು ಗುಣಪಡಿಸಬಹುದೆಂದು ತಿಳಿಸಿದರು.
     ದೇಹದಾನ ಮಾಡುವುದರಿಂದ ಏನು ಪ್ರಯೋಜನ, ಹೇಗೆ ದೇಹದಾನ ಮಾಡಬಹುದು ಎಂಬ ಬಗ್ಗೆ ಮಾಹಿತಿ ನೀಡಿದ ಡಾ. ಸಿ.ಎಸ್. ಮಂಜುನಾಥರು ಸಹ ಸಭಿಕರ ಸಂದೇಹಗಳಿಗೆ ಸೂಕ್ತ ವಿವರ ತಿಳಿಸಿದರು. ದೇಹದಾನ ಮಾಡುವುದಕ್ಕೆ ಸಂಬಂಧಿಸಿದ ಅರ್ಜಿ ನಮೂನೆಗಳನ್ನು ಆಸಕ್ತ ಸಭಿಕರು ಪಡೆದುಕೊಂಡರು.
     ಶ್ರೀ ವಿಶ್ವನಾಥ ಶರ್ಮರವರು ಜೀವಾತ್ಮ ಅವಿನಾಶಿಯಾಗಿದ್ದು ಅದಕ್ಕೆ ಹುಟ್ಟು ಸಾವುಗಳಿಲ್ಲವೆಂದೂ, ಅದು ದೇಹದಲ್ಲಿದ್ದಾಗ ಆ ಮಾಧ್ಯಮದ ಮೂಲಕ ಮಾಡುವ ಕರ್ಮಗಳಿಗನುಸಾರವಾಗಿ ಫಲ ಪಡೆಯುವುದೆಂದೂ, ತಾನು ಮಾಡಿದ ಕರ್ಮಕ್ಕೆ ತಾನೇ ಹೊಣೆಯೆಂದೂ, ಇತರರು ಮಾಡುವ ಕರ್ಮಗಳ ಫಲ ಇತರರಿಗೇ ಹೊರತು ಅದಕ್ಕಲ್ಲವೆಂದೂ ವೇದ ಮಂತ್ರಗಳನ್ನು ಉಲ್ಲೇಖಿಸಿ ಹೇಳುತ್ತಾ ಮೃತರ ಆತ್ಮಕ್ಕೆ ಉತ್ತಮ ಫಲ ಸಿಗಲೆಂದು ಆಶಿಸೋಣವೆಂದರು. 
     ಮಿತ್ರ ಪ್ರಭಾಕರ್ ಸ್ವಾಗತ ಮತ್ತು ವಂದನಾರ್ಪಣೆ ಹಾಗೂ ಮಿತ್ರ ಹರಿಹರಪುರ ಶ್ರೀಧರ ನಿರೂಪಣೆ ಮಾಡಿದ ವಿಭಿನ್ನ ರೀತಿಯ ಈ ಶ್ರದ್ಧಾಂಜಲಿ ಸಭೆ ಅನುಕರಣೀಯವೆನ್ನಲೇಬೇಕು. ರೂಢಿಗತ ರೀತಿಯಲ್ಲಿ ಉತ್ತರಕ್ರಿಯೆಗಳನ್ನು ನಡೆಸದಿರುವುದಕ್ಕೆ, ಸಾಂಪ್ರದಾಯಿಕರ ಅಸಮಾಧಾನಗಳನ್ನು ಎದುರಿಸುವುದಕ್ಕೆ ದಿಟ್ಟತನವಿರಬೇಕು. ಅಂತಹ ದಿಟ್ಟತನ ತೋರಿಸಿದ ಪ್ರಭಾಕರ್ ಮತ್ತು ಸೋದರರಿಗೆ ಅಭಿನಂದನೆಗಳು. ಏನೇ ಆಗಲಿ, ಇಂತಹ ಕ್ರಿಯೆಗಳು ಮನಸ್ಸಿನಲ್ಲಿ ವೈಚಾರಿಕ ತರಂಗಗಳನ್ನು ಎಬ್ಬಿಸಿ ಜಿಜ್ಞಾಸೆ ನಡೆಸಲು ಸಹಕಾರಿ ಎಂಬುದಂತೂ ಸತ್ಯ. 
ಶ್ರೀಯುತರಾದ ಪ್ರಭಾಕರ್, ವಿಶ್ವನಾಥಶರ್ಮ, ಡಾ. ಮಂಜುನಾಥ್, ಡಾ. ಹಾಲಪ್ರಶಾಂತ್


ಗುರುವಾರ, ಆಗಸ್ಟ್ 9, 2012

ಒಂದು ಅಪರೂಪದ ವೇದೋಕ್ತ ವಿವಾಹ

  
     “ವೇದಾಧ್ಯಾಯೀ  ಶ್ರೀ ಸುಧಾಕರಶರ್ಮಾರವರು ಮಂತ್ರಗಳ ಅರ್ಥ-  ವಿವರಣೆಗಳನ್ನು ನೀಡುತ್ತಾ ವೈದಿಕ ವಿವಾಹ ಸಂಸ್ಕಾರವನ್ನು ನೀಡಲಿದ್ದಾರೆ.  ತಾವು ಇಡೀ ಕಾರ್ಯಕ್ರಮದಲ್ಲಿ ಶಾಂತರೀತಿಯಿಂದ ಭಾಗವಹಿಸಬೇಕಾಗಿ ಸವಿನಯ ಪ್ರಾರ್ಥನೆ” - ಎಂದು ಆಹ್ವಾನಪತ್ರಿಕೆಯಲ್ಲಿಯೇ ಮುದ್ರಿಸಿ ಹಂಚುವುದರಿಂದ ವಿಶೇಷತೆಗಳ ಪ್ರಾರಂಭ.  ಅಂತೆಯೇ 05.08.2012 ರಂದು ಬೆಂಗಳೂರಿನಲ್ಲಿ ಚಿ.ಸ್ಮೃತಿ ಆರ್ಯ (ಕನಕಪುರದ ಶ್ರೀ ಬಾಲಕೃಷ್ಣ ಆರ್ಯ ಮತ್ತು ಶ್ರೀಮತಿ ಸನ್ಮತಿ ಆರ್ಯ ಇವರ ಮಗಳು) ಮತ್ತು ಚಿ.ಸುಮಂತ್ ಭಾರದ್ವಾಜ್‌ರವರ (ಕೆ.ಜಿ.ಎಫ್.ನ ಶ್ರೀ ಸೂರ್ಯನಾರಾಯಣ್ ಮತ್ತು ಶ್ರೀಮತಿ ನಿರ್ಮಲ ಇವರ ಮಗ) ವೈದಿಕ ವಿವಾಹ ನೆರವೇರಿತು.  
     ಸಭೆಯಲ್ಲಿದ್ದವರೆಲ್ಲರೂ ‘ಓಂ’ಕಾರವನ್ನು ಒಟ್ಟಿಗೆ ಉಚ್ಚರಿಸುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.  ಎರಡು ನೀರುಗಳು ಬೆರೆಯುವಂತೆ, ತಮ್ಮ ತಮ್ಮ ಹೃದಯಗಳನ್ನು ಬೆಸೆಯುವ ತಮ್ಮ ಸಂಕಲ್ಪವನ್ನು ನೆರೆದ ಹಿರಿಯರು, ಗೃಹಸ್ಥ-ಗೃಹಿಣಿಯರು, ವಿದುಷಿ, ವಿದ್ವಾಂಸರ ಸಮ್ಮುಖದಲ್ಲಿ ವಧೂ-ವರರು ಪ್ರಕಟಿಸಿದರು.  ಕುಟುಂಬವೆಂಬ ಇಟ್ಟಿಗೆಗಳಿಂದ ಆದದ್ದೇ ಸಮಾಜ/ರಾಷ್ಟ್ರವೆಂಬ ಕಟ್ಟಡ.  ಇಡಿಯು ಸುಭದ್ರವಾಗಿದ್ದಾಗ ಮಾತ್ರ ಅದರೊಳಗಣ ಬಿಡಿಯೂ ನೆಮ್ಮದಿಯಿಂದಿರಬಹುದು.  ನೂತನ ಕುಟುಂಬವನ್ನು ಆರಂಭಿಸುತ್ತಿರುವ ದಂಪತಿಗಳಿಗೆ ಈ ಬಗ್ಗೆ ಮಾರ್ಗದರ್ಶನ ನೀಡುವುದೇ ‘ರಾಷ್ಟ್ರಭೃತ್ ಯಜ್ಞ’.  ಜೀವನದಲ್ಲಿ ಜಯವನ್ನು ಸಾಧಿಸುವುದಕ್ಕಾಗಿ ಸಂಕಲ್ಪಶಕ್ತಿಯನ್ನು ಒಡಮೂಡಿಸುವದೇ ‘ಜಯಾ ಹೋಮ’.  ಸದ್ವಿಚಾರ, ಸದಾಚಾರಗಳನ್ನು ಎಲ್ಲೆಡೆಯೂ ಹರಡುವ ಅವಶ್ಯಕತೆಯ ಅರಿವನ್ನು ಮೂಡಿಸುವುದೇ ‘ಅಭ್ಯಾತನ ಹೋಮ’.  ಪಾಣಿಗ್ರಹಣ - ವರನು ವಧುವಿನ ಕೈಹಿಡಿದು ಮುಂದಿನ ಜೋಡಿಜೀವನದಲ್ಲಿ ತಾನು ಅನುಸರಿಸುವ ರೀತಿ-ನೀತಿಗಳ ವಿಷಯದಲ್ಲಿ ಪ್ರತಿಜ್ಞೆಗಳನ್ನು ಮಾಡುವುದು.  ‘ಧರ್ಮದ ಹೆಸರಿನಲ್ಲಿ, ಮುಪ್ಪಿನಕಾಲದವರೆಗಿನ ಸಹಬಾಳ್ವೆಗಾಗಿ ನಿನ್ನ ಕೈ ಹಿಡಿಯುತ್ತಿದ್ದೇನೆ. ಕಳ್ಳತನದಲ್ಲಿ ಯಾವುದೇ ಭೋಗವನ್ನು ಅನುಭವಿಸುವುದಿಲ್ಲ.  ಯಾವುದೇ ಮೋಹಗಳಿಗೆ ಒಳಗಾಗದೇ ನಿನ್ನನ್ನು ವರಿಸುತ್ತಿದ್ದೇನೆ’ - ಇದು ಸಾರಾಂಶ.  ಇದಕ್ಕೆ ಪ್ರತಿಯಾಗಿ ಕನ್ಯೆಯು ವರನಿಗೆ ನೀಡುವ ಮಾತುಗಳೇ ‘ಲಾಜಾಹೋಮ’.  ‘ತವರು ಮನೆಯಿಂದ ಬೇರ್ಪಟ್ಟು, ನಿಮ್ಮ ಕುಟುಂಬದ ಸದಸ್ಯೆಯಾಗುತ್ತಿದ್ದೇನೆ.  ಎರಡೂ ಮನೆಯವರು ಸುಖ-ಸಂತೋಷಗಳಿಂದ ಬಾಳಲು ನನ್ನ ಕಾಣಿಕೆಯನ್ನು ನೀಡುತ್ತೇನೆ.  ಇದನ್ನು ಅರಳಿದ ಮನಸ್ಸಿನಿಂದ ವ್ಯಕ್ತಪಡಿಸುತ್ತಿದ್ದೇನೆ’.  
     ‘ಇಷ ಏಕಪದೀ ಭವ’ - ಇಚ್ಛಾಶಕ್ತಿ, ಅನ್ನಾಹಾರಗಳ ಸಲುವಾಗಿ ಮೊದಲನೆಯ ಹೆಜ್ಜೆ.  ‘ಊರ್ಜೇ ದ್ವಿಪದೀ ಭವ’ - ಬಲ, ಆರೋಗ್ಯಗಳಿಗಾಗಿ ಎರಡನೆಯ ಹೆಜ್ಜೆ.  ‘ರಾಯಸ್ಪೋಷಾಯ ತ್ರಿಪದೀ ಭವ’ - ಸಾಧನ ಸಂಪತ್ತಿಗಾಗಿ, ಇಂತಹ ಸಾಧನಗಳ ಪ್ರಾಮಾಣಿಕ ಸಂಗ್ರಹಣೆ, ರಕ್ಷಣೆ, ಸದುಪಯೋಗಗಳಿಗಾಗಿ ಮೂರನೆಯ ಹೆಜ್ಜೆ.  ‘ಮಯೋಭವ್ಯಾಯ ಚತುಷ್ಪದೀ ಭವ’ - ಸುಖ, ಆನಂದಕ್ಕಾಗಿ ನಾಲ್ಕನೇ ಹೆಜ್ಜೆ.  ‘ಪ್ರಜಾಭ್ಯಃ ಪಂಚಪದೀ ಭವ’ - ಉತ್ತಮ ಸಂತಾನಕ್ಕಾಗಿ ಐದನೆಯ ಹೆಜ್ಜೆ.  ‘ಋತುಭ್ಯಃ ಷಟ್ಪದೀ ಭವ’ - ನಿಯಮಿತಜೀವನಕ್ಕಾಗಿ ಆರನೆಯ ಹೆಜ್ಜೆ.  ‘ಸಖಾ ಸಪ್ತಪದೀ ಭವ’ - ಸ್ನೇಹಕ್ಕಾಗಿ ಏಳನೆಯ ಹೆಜ್ಜೆ.  ಸಹಕಾರ, ತ್ಯಾಗ, ಸಮಾನತೆ, ಹೊಂದಾಣಿಕೆ, ಪ್ರೀತಿ, ಪ್ರೇಮ, ವಿಶ್ವಾಸ ಮೊದಲಾದವುಗಳೇ ಈ ಸ್ನೇಹದ ತಿರುಳು.  ಹೀಗೆ ಒಟ್ಟಿಗೆ ಏಳು ಹೆಜ್ಜೆಗಳನ್ನು ಇಟ್ಟ ಇವರು ಸತಿ-ಪತಿಗಳಾದರು.  ನೂತನ ದಂಪತಿಗಳಿಗೆ ಬೇಕಾದ ಸಲಹೆ, ಸಹಕಾರ, ಮಾರ್ಗದರ್ಶನಗಳನ್ನು ಕೊಡುತ್ತೇವೆಂದು ಸಭೆಯಲ್ಲಿದ್ದ ಹಿರಿಯರು ಆಶೀರ್ವಾದದ ರೂಪದಲ್ಲಿ ಆಶ್ವಾಸನೆಯನ್ನು ನೀಡಿದರು.  
     ಪ್ರತಿಯೊಬ್ಬ ಗೃಹಸ್ಥ-ಗೃಹಿಣಿಯರು ದಿನನಿತ್ಯವೂ ತಮ್ಮ ಮನೆಗಳಲ್ಲಿ ಪಾಲಿಸಲೇಬೇಕಾದ ಐದು ಮಹಾಯಜ್ಞಗಳ ಬಗ್ಗೆ ಪ್ರವಚನ ನೀಡಲಾಯಿತು. ಬ್ರಹ್ಮಯಜ್ಞ - ಜ್ಞಾನಾಭಿವೃದ್ಧಿಗಾಗಿ ನಿಯಮಿತ ಪ್ರಯತ್ನ.  ದೇವಯಜ್ಞ - ಪರಿಸರಶುದ್ಧಿಗಾಗಿ ಅಗ್ನಿಹೋತ್ರ.  ಪಿತೃಯಜ್ಞ - ಬದುಕಿರುವ ತಂದೆ-ತಾಯಿ, ಅತ್ತೆ-ಮಾವ, ಪಾಲಕ-ಪೋಷಕರ ಸೇವೆಯನ್ನು ಸ್ವತಃ, ಶ್ರದ್ಧೆಯಿಂದ ಮಾಡುವುದು.  ಅತಿಥಿಯಜ್ಞ - ಜ್ಞಾನಪ್ರಚಾರ, ಪ್ರಸಾರಕ್ಕಾಗಿ ಅಲೆಯುವ ಜ್ಞಾನಿಯು ಇದ್ದಕ್ಕಿದ್ದಂತೆ ಮನೆಗೆ ಬಂದಲ್ಲಿ, ಸತ್ಕರಿಸಿ, ಸದುಪದೇಶವನ್ನು ಪಡೆಯುವುದು.  ಬಲಿವೈಶ್ವದೇವಯಜ್ಞ - ನಮ್ಮ ಆಹಾರ, ಸಂಪತ್ತಿನಲ್ಲಿ ಸ್ವಲ್ಪಭಾಗವನ್ನು, ಇತರ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳೊಂದಿಗೆ, ದೀನ, ದುರ್ಬಲ, ಅಸಹಾಯಕರೊಂದಿಗೆ ಹಂಚಿಕೊಳ್ಳುವುದು.
     ಮಂಗಲನಿಧಿ ಸಮರ್ಪಣೆ.  ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಸೇವಾಸಂಸ್ಥೆಗಳಿಗೆ ಕಿರುಕಾಣಿಕೆಯನ್ನು ಸಲ್ಲಿಸುವಿಕೆ.  ಆರ್ಯಸಮಾಜ (ವೇದಪ್ರಚಾರ), ಓಂ ಶಾಂತಿಧಾಮ (ವೈದಿಕ ಗುರುಕುಲ), ರಾಷ್ಟ್ರೀಯ ಸ್ವಯಂಸೇವಕ ಸಂಘ (ಸಂಘಟನೆ), ಮಂಗಳ ಶಿಕ್ಷಣ ಸಮಿತಿ (ಶಿಕ್ಷಣ), ಭಾರತ್ ಸ್ವಾಭಿಮಾನ ಟ್ರಸ್ಟ್ (ಭ್ರಷ್ಟಾಚಾರದ ವಿರುದ್ಧದ ರಾಷ್ಟ್ರೀಯ ಆಂದೋಳನ) - ಇವುಗಳ ಪ್ರತಿನಿಧಿಗಳನ್ನು ವೇದಿಕೆಗೆ ಕರೆಸಿ, ಗೌರವಿಸಿ, ಕಾಣಿಕೆಯನ್ನು ಸಲ್ಲಿಸಲಾಯಿತು.
     ಶತಾಯುಷೀ ವೇದವಿದ್ವಾಂಸರಾದ ಪಂಡಿತ ಸುಧಾಕರ ಚತುರ್ವೇದಿಗಳು ನೂತನ ದಂಪತಿಗಳನ್ನು ಆಶೀರ್ವದಿಸುತ್ತಾ ‘ವಿಶೇಷವಾದ ಹೊಣೆಗಾರಿಕೆಗಳನ್ನು ಸ್ವೀಕರಿಸುದೇ ವಿವಾಹ.  ಈ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನೂತನ ದಂಪತಿಗಳು ನೆರವೇರಿಸುವಂತಾಗಲಿ’ ಎಂದು ಆಶೀರ್ವದಿಸಿದರು.
   ಸಭೆಯಲ್ಲಿದ್ದವರೆಲ್ಲರೂ ಎಲ್ಲರಿಗೂ ಶಾಂತಿಯನ್ನು ಕೋರುತ್ತಾ ‘ಶಾಂತಿಪಾಠ’ವನ್ನು ಪಠಿಸುವುದರೊಂದಿಗೆ ವೈದಿಕ ವಿವಾಹ ಸಂಸ್ಕಾರವು ಸಂಪನ್ನವಾಯಿತು.  ಇದೊಂದು ಅನುಕರಣೀಯ ಸಮಾರಂಭ. ಅರ್ಥಪೂರ್ಣವಾಗಿ, ವಿಚಾರಾತ್ಮಕವಾಗಿ, ಬೋಧಪ್ರದವಾಗಿ ಕಾರ್ಯಕ್ರಮವನ್ನು ನಿರ್ದೇಶಿಸಿದ ಶ್ರೀ ಸುಧಾಕರಶರ್ಮಾರವರು ಸಂಗ್ರಹಿಸಿದ ವೇದಸೂಕ್ತಿ,   ಚಂದನ ದೂರದರ್ಶನದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 9.30 ರಿಂದ10.00 ರವರೆಗೆ ಮೂಡಿಬರುತ್ತಿರುವ “ಹೊಸಬೆಳಕು’ ಕಾರ್ಯಕ್ರಮದಲ್ಲಿ ವೇದಗಳ ವಿಶಾಲ ಮಾನವೀಯ ಚಿಂತನೆ, ಮಾರ್ಗದರ್ಶನಗಳನ್ನು ಇವರು ಹಂಚಿಕೊಳ್ಳುತ್ತಿದ್ದಾರೆ.
ವರದಿ: ಶ್ರೀಮತಿ ಬಿ.ಎಸ್.ವಿಜಯಲಕ್ಷ್ಮೀ ಶ್ಯಾಂಪ್ರಸಾದ್.
-----------------------------------------------
ಟಿಪ್ಪಣಿ:
      ಈ ಅಪರೂಪದಲ್ಲಿ ಅಪರೂಪದ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದ ಸೌಭಾಗ್ಯ ನನ್ನದಾಗಿತ್ತು.ಇನ್ನಿತರ ವಿವಾಹದ ಸಂದರ್ಭಗಳಲ್ಲಿ ಮದುವೆಯ ಕಲಾಪಗಳು ಅದರ ಪಾಡಿಗೆ ನಡೆಯುತ್ತಿದ್ದು ಭಾಗವಹಿಸಿದವರು ಕೇವಲ ಹಾಜರಾತಿ, ಉಡುಗೊರೆ ನೀಡಿಕೆ, ಊಟ ಮಾಡಿಕೊಂಡು ಹೋಗುವುದು, ಮಿಕ್ಕ ಸಂದರ್ಭದಲ್ಲಿ ಗುಂಪುಕೂಡಿಕೊಂಡು ಹರಟೆಗಳಲ್ಲಿ  ತೊಡಗಿಕೊಳ್ಳುವುದು ಸಾಮಾನ್ಯ. ಆದರೆ ಈ ಮದುವೆಯ ಕಲಾಪಗಳನ್ನು ನಿಶ್ಶಬ್ದವಾಗಿ ಆಲಿಸಿದ್ಸಲ್ಲದೆ ಅಗತ್ಯದ ಸಂದರ್ಭಗಳಲ್ಲಿ ಒಪ್ಪಿಗೆ, ಅನುಮತಿ ರೂಪದ ಉದ್ಗಾರಗಳನ್ನು ಎಲ್ಲರೂ ಮಾಡುತ್ತಿದ್ದುದು ವಿಶೇಷವಾಗಿತ್ತು. ಹಾಗೆಂದು ಬಂದವರ ಸಂಖ್ಯೆ ಕಡಿಮೆಯೇನಾಗಿರಲಿಲ್ಲ. ವಿಶೇಷ ರೀತಿಯ ವಿವಾಹವನ್ನು ನೋಡುವ ಸಲುವಾಗಿಯೇ ಬಂದವರು, ಬಂಧು-ಮಿತರ್ರುಗಳ ಬಹು ದೊಡ್ಡ ಸಂಖ್ಯೆಯ ಉಪಸ್ಥಿತಿ ಅಲ್ಲಿತ್ತು.  ಬಂದವರೆಲ್ಲರಿಗೆ ರುಚಿಕರ ಭೋಜನದೊಂದಿಗೆ 'ಬಾಳಿಗೆ ಕೈಗನ್ನಡಿ' ಎಂಬ ಪುಸ್ತಕವನ್ನು ತಾಂಬೂಲವಾಗಿ ನೀಡುವುದರ ಜೊತೆಗೆ ಕುಟುಂಬಕ್ಕೆ ಒಂದರಂತೆ ಔಷಧೀಯ ಗಿಡಗಳ ಸಸಿಗಳನ್ನೂ ಕೊಟ್ಟು ಪರಿಸರ ಪ್ರಜ್ಞೆಯನ್ನೂ ಮೆರೆಯಲಾಯಿತು. ಆ ಸಂದರ್ಭದಲ್ಲಿ ಸೆರೆ ಹಿಡಿದ ಕೆಲವು ದೃಷ್ಯಗಳಿವು:
 -ಕ.ವೆಂ.ನಾಗರಾಜ್.


      ವಿವಾಹದ ಮಹತ್ವ ವಿವರಿಸುತ್ತಿರುವ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರು. ಆಸಕ್ತಿಯಿಂದ ಆಲಿಸುತ್ತಿರುವ ವಧೂವರರು ಮತ್ತು ಅವರ ಕುಟುಂಬದವರು
 ಪರಸ್ಪರ ಬದ್ಧತೆ ಘೋಷಿಸಿದ ವಧೂ ವರರು
 ಲಾಜಾಹೋಮ - ಅರಳಿನಂತೆ ಜೀವನ ಅರಳಲಿ, ವಿಕಸಿತಗೊಳ್ಳಲಿ ಎಂದು ಹಾರೈಕೆ
 ಸಪ್ತಪದಿ ವಿವರಣೆ ಕೇಳುತ್ತಾ ಸಪ್ತಪದಿ ತುಳಿಯಲು ಸಿದ್ಧರಾದರು ವಧೂವರರು
ಮಂಗಳನಿಧಿ ಸಮರ್ಪಣೆ:  ಆರ್ಯಸಮಾಜ (ವೇದಪ್ರಚಾರ), ಓಂ ಶಾಂತಿಧಾಮ (ವೈದಿಕ ಗುರುಕುಲ), ರಾಷ್ಟ್ರೀಯ ಸ್ವಯಂಸೇವಕ ಸಂಘ (ಸಂಘಟನೆ), ಮಂಗಳ ಶಿಕ್ಷಣ ಸಮಿತಿ (ಶಿಕ್ಷಣ), ಭಾರತ್ ಸ್ವಾಭಿಮಾನ ಟ್ರಸ್ಟ್ (ಭ್ರಷ್ಟಾಚಾರದ ವಿರುದ್ಧದ ರಾಷ್ಟ್ರೀಯ ಆಂದೋಳನ)ಗಳನ್ನು ಪ್ರತಿನಿಧಿಸಿದ ಗಣ್ಯರುಗಳಿಗೆ (ಹಿಂಬದಿಯಲ್ಲಿ ಆಸೀನರಾದವರು) ಮಂಗಳನಿಧಿ ಅರ್ಪಣೆ.
ಶುಭಾಶೀರ್ವಾದ ಮಾಡಿದ ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರನ್ನೂ ಚಿತ್ರದಲ್ಲಿ ಕಾಣಬಹುದು.