ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಜೂನ್ 26, 2012

ರಕ್ತ ಸಂಬಂಧಗಳು ಮತ್ತು ಜೀವಾತ್ಮ

     ಅಲ್ಪ ಶಕ್ತ ಜೀವಾತ್ಮನಿಗೆ ಯಾವುದೇ ಕ್ರಿಯೆ ಮಾಡಲು ಶರೀರವೆಂಬ ಮಾಧ್ಯಮದ ಅಗತ್ಯವಿದೆ, ಅದು ಮಾಧ್ಯಮದ ಸಹಾಯವಿಲ್ಲದೆ ತಾನೇ ತಾನಾಗಿ ಏನೂ ಮಾಡಲಾರದು ಎಂದು ತಿಳಿದವರು ಹೇಳುತ್ತಾರೆ. ಹಿಂದೂಗಳು ಪುನರ್ಜನ್ಮದಲ್ಲಿ ನಂಬಿಕೆಯಿರುವವರು. ಹಿಂದಿನ ಜನ್ಮದ ಮಾತಾ-ಪಿತರೇ ಇನ್ನೊಂದು ಜನ್ಮದ ಮಾತಾ-ಪಿತೃಗಳಾಗಲಾರರು. ತಂದೆ-ತಾಯಿಯರ ಗುಣ ವಿಶೇಷಗಳೇ ಮಕ್ಕಳಿಗೆ ಇರದಿರುವುದು, ಎಲ್ಲಾ ಮಕ್ಕಳೂ ಒಂದೇ ಸ್ವಭಾವದವರಾಗದಿರುವುದು, ಕುಟುಂಬದ ಸದಸ್ಯರುಗಳಲ್ಲಿ ಹೊಂದಾಣಿಕೆಯ ಕೊರತೆ ಕಾಣುವುದು, ಇತ್ಯಾದಿ ಅಂಶಗಳು ಪುನರ್ಜನ್ಮದ ನಂಬಿಕೆಗೆ ಪೂರಕವಾಗಿವೆ. ಹಿಂದಿನ ಜನ್ಮದಲ್ಲಿ ಸಂಬಂಧಿಗಳಾಗಿದ್ದವರು ಈ ಜನ್ಮದಲ್ಲೂ ಸಂಬಂಧಿಗಳಾಗಿದ್ದರೆ ಪರಸ್ಪರರಲ್ಲಿ ಮಧುರ ಸಂಬಂಧವಿರುತ್ತದೆ ಎಂದು ಹೇಳುತ್ತಾರೆ. ಇದೇನೇ ಇದ್ದರೂ ಕೆಲವು ಗುಣಗಳು ಅನುವಂಶಿಕವಾಗಿ ಬರುವುದನ್ನೂ ಕಾಣುತ್ತೇವೆ. ಸಂಬಂಧಗಳು, ಅದರಲ್ಲೂ ರಕ್ತ ಸಂಬಂಧಿಗಳ ನಡುವಣ ಸಂಬಂಧಗಳು ಚೆನ್ನಾಗಿರುವುದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಈ ಹಿನ್ನೆಲೆಯಲ್ಲಿ ರಕ್ತ ಸಂಬಂಧಗಳು ಮತ್ತು ಜೀವಾತ್ಮರ ಸಂಬಂಧದ ಕುರಿತು ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರನ್ನು ವಿಚಾರಿಸಿದಾಗ ಅವರು ಕೊಟ್ಟ ಉತ್ತರ ಈ ವಿಡಿಯೋ ತುಣುಕಿನಲ್ಲಿದೆ:








ಮಾಹಿತಿಗೆ: ಅನುಭವ ಮತ್ತು ತಾಂತ್ರಿಕ ಕೌಶಲ್ಯವಿರದ ಕಾರಣ ಕೈತಪ್ಪಿನಿಂದ ಒಂದಾಗಿದ್ದ ವಿಡಿಯೋ ಎರಡಾಗಿ 
                ವಿಭಜಿತಗೊಂಡಿದೆ. ಕೂಡಿಸಲು ನನಗೆ ಬಾರದು. ನೋಡುಗರು/ಕೇಳುಗರು ಅನುಸರಿಸಿಕೊಳ್ಳಬೇಕು.
                ಮಿತ್ರ ಶ್ರೀಧರ್ ವಿಡಿಯೋವನ್ನು ಆಡಿಯೋ ಆಗಿ ಪರಿವರ್ತಿಸಿಕೊಟ್ಟಿದ್ದಾರೆ. ಆಡಿಯೋ ಕೇಳುವುದು ಸುಲಭ.
                 ಅವರಿಗೆ ವಂದನೆಗಳು.
-ಕ.ವೆಂ.ನಾಗರಾಜ್.

ಗುರುವಾರ, ಜೂನ್ 21, 2012

ಪರಮಾತ್ಮನನ್ನು ಪೂಜಿಸುವ ಅಗತ್ಯವಿದೆಯೇ? ಪರಮಾತ್ಮನಿಗೆ ಆತ್ಮನ ಮೇಲೆ ಅಧಿಕಾರವಿದೆಯೇ?

     ದಿನಾಂಕ 13-06-2012ರಂದು  ವೇದಾಧ್ಯಾಯಿ ಶ್ರೀ ಸುಧಾಕರಶರ್ಮರವರನ್ನು  ನನ್ನ ಕೆಲವು ಸಂಶಯಗಳಿಗೆ ಉತ್ತರ ಪಡೆಯುವ ಸಲುವಾಗಿ ಭೇಟಿ ಮಾಡಿದ್ದೆ. ಆ ಸಂದರ್ಭದಲ್ಲಿ ನಾನು ಕೇಳಿದ್ದ ಒಂದು ಪ್ರಶ್ನೆ ಇದು: 
    "ಶರ್ಮಾಜಿ, ಜೀವಾತ್ಮ, ಪರಮಾತ್ಮ ಮತ್ತು ಜಡ ಪ್ರಕೃತಿ - ಈ ಮೂರೂ ಸಂಗತಿಗಳು ಅನಾದಿ, ಅನಂತ ಮತ್ತು ಶಾಶ್ವತವಾದವುಗಳು ಎಂದು ಹೇಳುತ್ತಾರೆ. ಜೀವಾತ್ಮ ಸ್ವತಃ ಅನಾದಿ, ಅನಂತ ಮತ್ತು ಶಾಶ್ವತವಾಗಿರುವಾಗ ಪರಮಾತ್ಮನನ್ನು ಏಕೆ ಪೂಜಿಸಬೇಕು? ಆ ಪರಮಾತ್ಮನಿಗೆ ಜೀವಾತ್ಮರ ಮೇಲೆ ಯಾವ ರೀತಿಯ ಅಧಿಕಾರವಿದೆ? ಈ ವಿಚಾರದಲ್ಲಿ ಬೆಳಕು ಚೆಲ್ಲುವಿರಾ?"
       ಶರ್ಮರವರು ನೀಡಿದ ಉತ್ತರವನ್ನು ಅವರ ಧ್ವನಿಯಲ್ಲೇ ಕೇಳಿ:

     ವಿಡಿಯೋ ನೋಡುವುದು ಕೆಲವೊಮ್ಮೆ ಪ್ರಯಾಸವಾಗುತ್ತದೆ. ಹರಿಹರಪುರ ಶ್ರೀಧರ್ ಇದನ್ನು ಆಡಿಯೋ ಆಗಿ ಪರಿವರ್ತಿಸಿದ್ದಾರೆ. ಇಗೋ ಕೇಳಿ:



-ಕ.ವೆಂ.ನಾಗರಾಜ್.

ಬುಧವಾರ, ಜೂನ್ 6, 2012

ಸಾರಗ್ರಾಹಿಯ ರಸೋದ್ಗಾರಗಳು - 14: ಸಂತ ಮತ್ತು ಮಹಾರಾಜ

     ಶತಾಯುಷಿ ಪಂ. ಸುಧಾಕರ  ಚತುರ್ವೇದಿಯವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ 5.30ಕ್ಕೆ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು.   ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
******************************
ಸಂತರು ಮತ್ತು ನಾಲ್ಮಡಿ ಕೃಷ್ಣರಾಜ ಒಡೆಯರು
     ಈ ಹಿಮಾಲಯ ಪರ್ವತ ಇದೆಯಲ್ಲಾ, ಮೂರು ಸಾಲು ಇದೆ, ಎರಡು ಸಾಲು ನಮ್ಮ ದೇಶಕ್ಕೆ ಸೇರಿದ್ದು, ಇನ್ನೊಂದು ಚೀನಾ ದೇಶಕ್ಕೆ ಸೇರಿದ್ದು. ಮಾನಸ ಸರೋವರಕ್ಕೆ ನಾವು ಹೋಗಬೇಕಾದರೆ ಚೀನಾದವರ ಪರ್ಮಿಶನ್ ಬೇಕು, ಏಕೆಂದರೆ ಅವರ ರಾಷ್ಟ್ರದ ಮೇಲೆ ನಾವು ಹೋಗಬೇಕು. ಇಲ್ಲದೆ ಹೋದರೆ ಅವರು ಅರೆಸ್ಟ್ ಮಾಡಬಹುದು, ನಮ್ಮ ದೇಶಕ್ಕೆ ಇವರು ನುಗ್ಗಿ ಬಂದಿದಾರೆ ಅಂತ. ಇಷ್ಟು ಕಷ್ಟಪಟ್ಟು ಹೋಗಬೇಕು. ನನಗೆ ಚೆನ್ನಾಗಿ ನೆನಪಿದೆ. ೧೯೩೪ನೆ ಇಸವಿ. ನಾಲ್ಮಡಿ ಕೃಷ್ಣರಾಜ ಒಡೆಯರು ಮಾನಸ ಸರೋವರದಲ್ಲಿ ಸ್ನಾನ ಮಾಡಲು ಬಂದಿದ್ದರು. ಸ್ನಾನ ಎಲ್ಲಾ ಮಾಡಿದರು. ಬಹಳ ಉದಾರಾತ್ಮ. ಅವರ ಜೊತೆ ಪಾರಸಿಕ ಇದ್ದ, ಮುಸಲ್ಮಾನರು ಇದ್ದರು, ಅವರಿಗೆ ಸ್ನಾನ ಮಾಡಿ ಅಂತ ಹೇಳಲಿಲ್ಲ. ನಿಮ್ಮಲ್ಲಿ ಯಾರು ಹಿಂದುಗಳು ಇದ್ದೀರೋ ಅವರು ಸ್ನಾನ ಮಾಡಿ ಅಂದರು. ಎಲ್ಲಾ ಆಯ್ತು. ಆಮೇಲೆ ಒಬ್ಬರು ಮಹಾತ್ಮರು ಸಂತ . . . . . .ದಾಸರು ಹರಿದ್ವಾರದಲ್ಲಿದ್ದಾರೆ ಅಂತ ಅವರಿಗೆ ಗೊತ್ತಾಯ್ತು. ಸಂತರ ದರ್ಶನ ಮಾಡೋಣ ಅಂತ ಹೇಳಿ, ಒಂದು ತಪ್ಪು ಮಾಡಿಬಿಟ್ಟರು. ಒಬ್ಬ ಅಧೀನ ಅಧಿಕಾರಿಯನ್ನು ಕಳಿಸಿಬಿಟ್ಟರು. ಅವನು ನಮ್ಮಂತೆ ಅರೆ ಬರೆ ಉರ್ದು ಮಾತನಾಡೋನು. ಅವನು ಹೋಗಿ, 
"ಮಹಾರಾಜ್ ಸಾಬ್ ಆಕು ಹೈ, ಆಪ್ಕೋ ಮಿಲ್ನಾ ಚಾಹ್ತಾ ಹೈ" ಅಂತ ಹೇಳಿದ. ಆ ಸಂತರು ಹೇಳಿದರು, 
"ಮಹಾರಾಜ ? ಯಾವ ಮಹಾರಾಜ? ನನಗೆ ಗೊತ್ತಿರುವವನು ಒಬ್ಬನೇ ಮಹಾರಾಜ, ಜಗತ್ ಸಾಮ್ರಾಟ್, ಬೇರೆ ಯಾರೂ ಇಲ್ಲ." 
"ಮೈಸೂರ್ ಕಾ ಮಹಾರಾಜ." 
"ಆಯ್ತು, ಬರಕ್ಕೆ ಹೇಳು."
ಮಹಾರಾಜರು ಒಂದು ತಟ್ಟೆಯಲ್ಲಿ ೫೦೦ ಬೆಳ್ಳಿ ನಾಣ್ಯಗಳನ್ನು ಇಟ್ಟುಕೊಂಡು ಸಂತರಿಗೆ ಕೊಡಬೇಕೆಂದು ಬಂದರು. ಅವರು ಬಂದಾಗ ಪೇಟ ತೆಗೆದಿಟ್ಟು, ಕಚ್ಚೆ ಪಂಚೆ ಉಟ್ಟುಕೊಂಡು ಬರಿಗಾಲಿನಲ್ಲಿ ಬಂದಿದ್ದರು. ಅವರು ಬಂದಿದ್ದ ರೀತಿಯಿಂದ ಸಂತರಿಗೆ ಸ್ವಲ್ಪ ಸಮಾಧಾನವಾಗಿತ್ತು. ಸಂತರು ನೋಡಿದರು,  ಎರಡು ಮಾತು ಕೇಳಿದರು: "ನೀನು ರಾಜ ಅಂತೆ, ಯಾರಿಗೆ ರಾಜ? ಓಹೋ, ಮೈಸೂರು ದೇಶದ ರಾಜ, ಎಷ್ಟು ಅಗಲ, ಎಷ್ಟು ಉದ್ದ ಇದೆ, ನಿನ್ನ ಮೈಸೂರು?" ಈರೀತಿ ಕೇಳಲು ಸಂತರಿಗೇ ಸಾಧ್ಯ. ನಾನು ಪಕ್ಕದಲ್ಲೇ ಕುಳಿತಿದ್ದೆ. ನಾನು ಕನ್ನಡಿಗ ಅನ್ನುವುದು ಗೊತ್ತಾದರೆ ರಾಜರಿಗೆ ಮುಜುಗರ ಆಗುತ್ತಲ್ಲಾ ಅಂತ ಗೊತ್ತಾಗಿ ಸುಮ್ಮನೆ ಕುಳಿತಿದ್ದೆ. ನನಗೆ ಏನೂ ತೋಚಿರಲಿಲ್ಲ, ರಾಜರು ಇಟ್ಟಿದ್ದ ತಟ್ಟೆಯ ಮೇಲೆ ಮುಚ್ಚಿದ್ದ ವಸ್ತ್ರ ಸರಿಸಿ ನೋಡಿದ ಸಂತರು ಕೇಳಿದರು:
"ಇದರಲ್ಲಿ ತಿನ್ನೋದಕ್ಕೆ ಏನಿದೆ? ಇದನ್ನು ತಿನ್ನೋಕಾಗಲ್ಲ."
"ತಮ್ಮ ಖರ್ಚಿಗೆ." 
"ನನಗೇನು ಖರ್ಚಿದೆ? ಭಗವಂತ ಕೊಟ್ಟಿರೋ ಪಾತ್ರೆ ಇದು. ಕೈಲಿ ಹಿಡಕೊಂಡು ಭಿಕ್ಷಕ್ಕೆ ಹೋಗ್ತೀನಿ. ಅದರಲ್ಲಿ ಒಂದೋ, ಎರಡೋ ರೊಟ್ಟಿ ಬಿದ್ದರೆ ಆಯಿತು, ನನ್ನ ಊಟ. ನನಗೆ ರೊಟ್ಟಿ ಬೇಕಾಗಿದೆ, ಅನ್ನ ಬೇಕಾಗಿದೆ, ಅದನ್ನು ಬಿಟ್ಟುಬಿಟ್ಟು ನೀವು ಚಿನ್ನದ್ದೋ, ಬೆಳ್ಳಿಯದೋ ನಾಣ್ಯ ಕೊಟ್ಟರೆ ನಾನು ಏನು ಮಾಡಲಿ, ಅದನ್ನು ತೆಗೆದುಕೊಂಡು? ತಿನ್ನಕ್ಕಾಗುತ್ತಾ ಇದು?"
     ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳ್ತಾನೆ: ಮಣ್ಣಿನ ಹೆಂಟೆ, ಕಲ್ಲು, ಚಿನ್ನ ಇವೆಲ್ಲವನ್ನೂ ಯಾವನು ಸಮನಾಗಿ ಭಾವಿಸುತ್ತಾನೋ ಅವನೇ ಯೋಗಿ. ಎಷ್ಟು ಜನ ಯೋಗಿಗಳು ಸಿಗ್ತಾರೆ? ಯಾರೂ ಸಿಕ್ಕಲಾರರು. 
ಧನಂಜಯ
     ಧನಂಜಯ ಅಂದರೆ ನೀವು ಏನು ತಿಳಿದುಕೊಳ್ಳುತ್ತೀರಿ? ಹಣ ಸಂಪಾದನೆ ಮಾಡುವವನು ಅಂತ.  ಹಾಗಲ್ಲ.  ಹಾಗಾದರೆ ನಿಜವಾದ ಧನ ಯಾವುದು? ಯಾವುದು ನಮ್ಮ ಸಹಾಯಕ್ಕೆ ಬರುತ್ತೋ ಅದು ನಿಜವಾದ ಧನ.  ಯಾವುದು ಉಪಭೋಗಕ್ಕೆ ಬರುತ್ತೋ ಅದನ್ನು ತೆಗೆದುಕೊಂಡು ಹೋಗಿ ಕೊಡಬೇಕು. ಯಾತಕ್ಕಾಗಿ ನಾವು ಹಣ ಸಂಪಾದಿಸಬೇಕು? ಆ ಧನ ನಮ್ಮನ್ನು ಆಳುವುದಕ್ಕೆ ಅಲ್ಲ, ನಾವು ಧನವನ್ನಾಳಬೇಕು, ಐಶ್ವರ್ಯಗಳಿಗೆ ನಾವು ಸ್ವಾಮಿಗಳಾಗೋಣ, ಐಶ್ವರ್ಯ ನಮ್ಮನ್ನು ಕುಣಿಸಬಾರದು. ನಾವು ಐಶ್ವರ್ಯವನ್ನು ಕುಣಿಸಬೇಕು. ಎಷ್ಟು ಜನಕ್ಕೆ ಆ ಶಕ್ತಿ ಬರುತ್ತೆ? ಇಲ್ಲ, 
     ಎಲ್ಲೂ ದುಡ್ಡು ಇಲ್ಲದೆ ಇರುವಾಗ., ಅಕಸ್ಮಾತ್ ದುಡ್ಡು ಬಂತೋ, ಖುಷಿ! ಒಬ್ಬ ಸಾಧುವಿನ ವೇಷ ಹಾಕ್ಕೊಂಡಿದಾನೆ, ಯಾರೋ ಭಕ್ತರು ತಂದಿಡ್ತಾರೆ, ಇವನು ಲಕ್ಷಣವಾಗಿ ತಿಂದು ಹಾಕಿಬಿಡುತ್ತಾನೆ, ಅವನೇನು ಕಷ್ಟಪಟ್ಟು ಸಂಪಾದಿಸಿದನಾ? ಯಾರೋ ಸಂಪಾದಿಸಿದ್ದು, ಹೋಟೆಲಿಗೆ ಹೋದ, ಸಿಕ್ಕಾಪಟ್ಟೆ ತಿಂದ. ಸಿನೆಮಾ ನೋಡಿದ, ಅದು ಮಾಡಿದ, ಇದು ಮಾಡಿದ, ಬಿಟ್ಟಿ, ಏನಾದರೂ ಕಷ್ಟಪಟ್ಟಿದ್ದಾ? ಕಷ್ಟಪಟ್ಟಿದ್ದಲ್ಲ. ಯಾವುದನ್ನು ಕಷ್ಟಪಟ್ಟು ಬೆವರು ಸುರಿಸಿ ಸಂಪಾದನೆ ಮಾಡ್ತಾನೋ, ಅದು ನಿಜವಾದ ಧನ. ಅದಕ್ಕೆ ಬೆಲೆ ಉಂಟು. 
ದಕ್ಷಿಣೆ
     ವೇಷ ಹಾಕಿ ಕೂತ್ಕೊಂಡು, ನಾನು ಗುರೂಜಿಯಪ್ಪಾ, ನನಗೆ ದಕ್ಷಿಣೆ ಕೊಡಿ ಅಂತ ದಕ್ಷಿಣೆ ವಸೂಲು ಮಾಡ್ತಾ ಕೂತ್ರೆ, ಅವನು ಗುರೂನೂ ಅಲ್ಲ, ಅವನು ತೆಗೆದುಕೊಳ್ತಾನಲ್ಲಾ ಅದು ದಕ್ಷಿಣೆನೂ ಅಲ್ಲ. ದಕ್ಷ ಅಂದರೆ ಬಲ, ಯಾವುದು ಬಲವನ್ನು ಕೊಡುತ್ತೋ ಅದು ದಕ್ಷಿಣೆ. ನೀವು ಆ ಮೋಸದ ದುಡ್ಡು ತೆಗೆದುಕೊಂಡು, ಅದನ್ನು ದಕ್ಷಿಣೆ ಅಂತ ಕರಿತೀರಾ? ವಿದ್ವಜ್ಜನರು, ಸತ್ಪುರುಷರು, ಸಾಧು-ಸಂತರು, ಯಾವುದನ್ನು ಗೌರವಿಸುತ್ತಾರೋ ಅದು ನಿಜವಾದ ದಕ್ಷಿಣೆ. ಗೊತ್ತಾಯ್ತಾ? ದಕ್ಷಿಣ ದೇಶದಲ್ಲಾದರೂ ಸ್ವಲ್ಪ ಪರವಾಗಿಲ್ಲ. ಉತ್ತರ ದೇಶದಲ್ಲಿ, ದಕ್ಷಿಣೆ ಅಂತ ಎಡಗೈಲಿ ಹೀಗೆ ಬಿಸಾಕೋದು, 'ಲೋ, ಪಂಡಿತಜಿ' ಅಂತ. ಒಂದು ಅಜ್ಜಿ ಒಂದು ಸಲ ಬಂದು ಎದುರಿಗೆ ಕೂತ್ಕೊಂಡಿತು, ಒಂದು ರೂ. ನಾಣ್ಯ ನೋಡಿ ತೆಗೆದುಕೊಂಡು, 'ಲೋ ಪಂಡಿತಜಿ' ಅಂತ ಎಸೆಯಿತು. ಅದು ಉರುಳಿಕೊಂಡು ದೂರ ಹೋಯಿತು. 'ಅಜ್ಜಿ, ನೀನೇ ತೊಗೋ, ನಿನ್ನ ಹತ್ತಿರವೇ ಇರಲಿ' ಅದು ಅಂದೆ. 'ನೀವು ನನಗೆ ಅವಮಾನ ಮಾಡಿದಿರಿ' ಅಂದಳು. 'ನಿನಗೆ ಮಾನ ಯಾವಾಗ ಇತ್ತಮ್ಮ? ಮಾನ ಇದ್ದಿದ್ದರೆ ಇಂತಹ ಕೆಲಸ ಮಾಡುತ್ತಿರಲಿಲ್ಲ. ಮಾನವೇ ಇಲ್ಲ. ಹೋಯಿತು ಅಂದರೆ ಎಲ್ಲಿಗೆ ಹೋಗಬೇಕು?' ಇದೆಲ್ಲಾ ಸೂಕ್ಷ್ಮವಾದ ವಿಷಯ. 
ವ್ರತಗಳು
     ಈ ವ್ರತಗಳು ಅಂತ ಹೇಳ್ತಾರಲ್ಲಾ, ವ್ರತ ಅಂದರೆ ನಾನು ಇಂತಹ ಕೆಲಸವನ್ನೇ ಮಾಡುತ್ತೇನೆ ಅಂತ ಅಂದುಕೊಳ್ಳುವುದು, ಮಾಡುವುದು. ನಾವು ಮಾಡ್ತೀವಲ್ಲಾ ಇವತ್ತು, ಅನಂತ ಪದ್ಮನಾಭ ವ್ರತ, ವಿಷ್ಣು ಸಹಸ್ರನಾಮ ಪೂಜೆ, ಲಲಿತಾ ಸಹಸ್ರನಾಮ ಪೂಜೆ ಮಾಡ್ತೀನಿ, ದುರ್ಗಾಸಪ್ತಶತಿ ಅಂತ ಹೇಳಿ ಅದರ ಹೆಸರಿನಲ್ಲಿ ಪೂಜೆ ಮಾಡಿ ಯಾವ ವ್ರತವನ್ನೂ ಪಾಲಿಸುವುದಿಲ್ಲ. ನಾವು ಯಾವುದನ್ನೂ ಕೂಡ ಆಲೋಚನೆ ಮಾಡದೆ ವ್ರತವಾಗಿ ತೆಗೆದುಕೊಳ್ಳಲೇಬಾರದು. ಗುರು ಬ್ರಹ್ಮಚಾರಿ ಕೈಲಿ ೫ ಸಲ ಹೇಳಿಸ್ತಾರೆ 'ಪಂಚಜ್ಞಾನೇಂದ್ರಿಯಗಳಿಂದ ಯಾವುದರಿಂದಲೂ ಕೂಡ ನಾನು ಸುಳ್ಳು ಹೇಳುವುದಿಲ್ಲ. ಸತ್ಯವನ್ನೆ ಹೇಳುತ್ತೇನೆ' ಅಂತ. ಆದರೆ ಆ ಗುರುವೇ ಬೆಳಿಗ್ಗೆಯಿಂದ ಸಾಯಂಕಾಲದವರೆಗೂ ಸುಳ್ಳು ಹೇಳ್ತಾನೇ ಇರ್ತಾರೆ. ಆ ಶಿಷ್ಯ ಇನ್ನೇನು ಕಲಿತಾನು? ಏನೂ ಕಲಿಯುವುದೇ ಎಲ್ಲ. 
ಸತ್ಯ ಹೇಳುವ ಶಪಥ ಮಾಡಬೇಡ! ಸತ್ಯ ಹೇಳು!
     ಒಬ್ಬ ಕೇಳಿದ, 'ಅಪ್ಪಾ, ನೀನು ಅಂಗಡಿಯಲ್ಲಿ ಕೂತ್ಕೊಳ್ತೀಯಲ್ಲಾ, ಸರಿಯಾಗಿ ತೂಕ ಮಾಡಿ ಕೊಡ್ತೀಯಾ? ಮತ್ತೆ ಧಾರಣೆ ಹೇಳ್ತೀಯಲ್ಲಾ, ಸರಿಯಾಗಿ ಹೇಳ್ತೀಯಾ? ' ಅದಕ್ಕೆ ಅಪ್ಪನ ಉತ್ತರ,  'ಹಾಗೆ ಹೇಳಿದರೆ ಹೊಟ್ಟೆ ತುಂಬೋದಿಲ್ಲ ಮಗನೆ, ನಾವು ಸುಳ್ಳು ಹೇಳದೇ ಹೋದರೆ ನಮ್ಮ ಹೊಟ್ಟೆ ತುಂಬೋದೇ ಇಲ್ಲ.' ಅಂಥಾ ತಂದೆ, ತಕ್ಕ ಮಗ, ಇನ್ನು ಉದ್ಧಾರ ಹೇಗೆ ಆಗಬೇಕು? ಇದೆಲ್ಲಾ ಸೂಕ್ಷ್ಮ ವಿಷಯ. ಮಾತಾಡೋದು ಸುಲಭ. ಕೆಲಸ ಮಾಡೋದು ಕಷ್ಟ. ಆದ್ದರಿಂದ  ಸ್ವಾಮಿ ದಯಾನಂದರು ಹೇಳ್ತಾ ಇದ್ದರು. "ನೀನು ಶಪಥ ಮಾಡಬೇಡ, ನಾನು ಸತ್ಯವನ್ನೇ ಹೇಳುತ್ತೇನೆ, ಅಂತ ಶಪಥ ಮಾಡೋಕ್ಕೆ ಹೋಗಬೇಡ. ಹೇಳು, ಸತ್ಯವನ್ನೇ ಹೇಳು, ಆದರೆ ಶಪಥ ಮಾಡಬೇಡ. ಯಾಕೆ ಅಂತ ಹೇಳಿದರೆ, ಶಪಥ ಮಾಡೋ ಕಾಲಕ್ಕೆ ಸತ್ಯ ಅನ್ನುವುದನ್ನು ನೀನೇ ತಪ್ಪು ತಿಳಿದುಕೊಂಡಿರಬಹುದು, ಯಾವುದನ್ನೋ ಸತ್ಯ ಅಂತ ತಪ್ಪು ತಿಳಿದುಕೊಂಡಿರಬಹುದು. ಅದರಿಂದ ಬೇರೆಯವರಿಗೆ ಹಾನಿಯಾಗಬಹುದು." ಬೇರೆಯವರಿಗೆ ಹಾನಿ ಉಂಟುಮಾಡತಕ್ಕಂಥದ್ದು ಸತ್ಯವಲ್ಲ. ತನಗೆ ಮಾತ್ರ ಒಳ್ಳೆಯದಾಗಬೇಕು ಅಂತ ಬಯಸುವುದೂ ಸತ್ಯ ಅಲ್ಲ. ನನ್ನ ಹಾಗೇ ಎಲ್ಲರಿಗೂ ಒಳ್ಳೆಯದಾಗಬೇಕು, ಯಾರಿಗೂ ಕೆಟ್ಟದಾಗಬಾರದು, ಈ ಭಾವನೆ ಬೆಳೆಸಿಕೊಳ್ಳಬೇಕು. 
[ಮಹಾರಾಜರ ಚಿತ್ರ: ಅಂತರ್ಜಾಲದಿಂದ ಹೆಕ್ಕಿದ್ದು].
**************
ಹಿಂದಿನ ಲೇಖನಕ್ಕೆ ಲಿಂಕ್: http://vedajeevana.blogspot.in/2012/05/13.html

ಶನಿವಾರ, ಜೂನ್ 2, 2012

ನೀನಿಲ್ಲೆ ಇರುವಾಗ ಎಲ್ಲಿಹೋಗಲಿ ನಾನು


Podcast Powered By Podbean
ರಚನೆ:ಹರಿಹರಪುರಶ್ರೀಧರ್ ಗಾಯಕಿ: ಶ್ರೀಮತಿ ಲಲಿತಾ ರಮೇಶ್

 ಸೂಚನೆ:" ನಾನಿಡುವ ಅಡಿ ಅಡಿಯು ನಿನ್ನದೇ ನಡೆನಡೆಯು " ಎಂಬಲ್ಲಿ "ನೀ ನಿಡುವ ಅಡಿ ಅಡಿಯು" ಎಂದು ಹಾಡಿದ್ದಾರೆ, ಆದರೆ"ನಾನಿಡುವ ಅಡಿ ಅಡಿಯು" ಎಂಬುದು ಸರಿ.