ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಡಿಸೆಂಬರ್ 26, 2012

ವೇದೋಕ್ತ ಜೀವನ ಪಥ: ಬ್ರಹ್ಮಚರ್ಯಾದಿ ಚತುರಾಶ್ರಮಗಳು -4 : ಸಂನ್ಯಾಸಾಶ್ರಮ



ಪಂಡಿತರು ಸಂನ್ಯಾಸಾಶ್ರಮದ ಕುರಿತು ಹೇಳುವುದು ಹೀಗೆ:
     ಈ ರೀತಿ ವಾನಪ್ರಸ್ಥವನ್ನು ನಿರ್ವಹಿಸಿ, ಮಾನವನು 75 ವರ್ಷದವನಾದಾಗ, ನಾಲ್ಕನೆಯದೂ, ಕೊನೆಯದೂ ಆದ ಸಂನ್ಯಾಸಾಶ್ರಮದಲ್ಲಿ ಪ್ರವೇಶ ಮಾಡಬೇಕು. 25 ವರ್ಷಗಳ ಕಠೋರ ಸಾಧನೆಯಿಂದ ಜಗತ್ತಿನ ಸರ್ವವಿಧ ಮಮತಾಮೋಹಗಳನ್ನೂ ಸರ್ವಥಾ ತ್ಯಾಗ ಮಾಡಿ, ಪರಿವ್ರಾಜಕ ವೃತ್ತಿಯನ್ನವಲಂಬಿಸಿ, ಭಿಕ್ಷಾಮಾತ್ರೋಪಜೀವಿಯಾಗಿ, ಕಾಷಾಯ ವಸ್ತ್ರದಿಂದ ಭೂಷಿತನಾಗಿ, ಯೋಗಸಾಧನೆಯನ್ನೂ ಮಾಡುತ್ತಾ, ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥರಿಗೆ ಜ್ಞಾನದಾನ ಮಾಡುತ್ತಾ ತಿರುಗಾಡಬೇಕು. ಮಾನವನು ಮುಟ್ಟಬಹುದಾದ ಸರ್ವೋನ್ನತ ಆದರ್ಶ ಈ ಸಂನ್ಯಾಸ. ಯಾವ ದೇಶಕ್ಕೂ, ಯಾವ ಭಾಷೆಗೂ, ಯಾವ ಜನಾಂಗಕ್ಕೂ ಸೇರದವನಾಗಿ, ಪೂರ್ಣ ನಿರ್ಮೋಹನೂ, ಪೂರ್ಣ ನಿರ್ಲೇಪನೂ, ಪೂರ್ಣ ಅಸಂಗನೂ ಆಗಿ, ಎಲ್ಲರಿಗೂ ಅಭಯದಾನ ಮಾಡುತ್ತಾ, ಗ್ರಾಮದಿಂದ ಗ್ರಾಮಕ್ಕೆ, ನಗರದಿಂದ ನಗರಕ್ಕೆ, ದೇಶದಿಂದ ದೇಶಕ್ಕೆ ತಿರುಗಾಡುತ್ತಾ, ಮಾನವಮಾತ್ರರಿಗೆ, ಪರಮಶಾಂತಿಯಿಂದ, ಯಾವ ಕಾರಣದಿಂದಲೂ ಉದ್ರಿಕ್ತನಾಗದೆ, ಸತ್ಯಜ್ಞಾನ, ಸತ್ಯಕರ್ಮ, ಸತ್ಯೋಪಾಸನೆಗಳನ್ನು ಬೋಧಿಸಬೇಕು. ಋಗ್ವೇದ ಸಂನ್ಯಾಸಿಗೆ ನೀಡುವ ಉದ್ಬೋಧನವಿದು:- 
     ಋತಂ ವದನೃತದ್ಯುಮ್ನ ಸತ್ಯಂ ವದನ್ ಸತ್ಯಕರ್ಮನ್ | ಶ್ರದ್ಧಾಂ ವದನ್ ತ್ಸೋಮ ರಾಜನ್ ಧಾತ್ರಾ ಸೋಮ ಪರಿಷ್ಕೃತ ಇಂದ್ರಾಯೇಂದೋ ಪರಿ ಸ್ರವ || (ಋಕ್.9.113.4.)
     [ಋತದ್ಯುಮ್ನ] ವೇದಗಳನ್ನೇ, ಧರ್ಮವನ್ನೇ ಶಕ್ತಿಯಾಗಿ ಉಳ್ಳವನೇ, [ಸತ್ಯಕರ್ಮನ್] ಸತ್ಯಾನುಕೂಲ ಕರ್ಮಗಳನ್ನೇ ಆಚರಿಸುವವನೇ, [ಸೋಮರಾಜನ್] ಭಗವದಾನಂದದಿಂದ ಪ್ರಕಾಶಿಸುವವನೇ, [ಸೋಮ] ಪ್ರಶಾಂತನೇ, [ಇಂದೋ] ಜನಜೀವನವನ್ನು ಸರಸಗೊಳಿಸುವವನೇ, [ಧಾತ್ರಾ] ಜಗದಾಧಾರನಿಂದ [ಪರಿಷ್ಕೃತಃ] ಶುದ್ಧೀಕೃತನಾಗಿ, [ಋತಮ್] ವೇದಗಳನ್ನೂ, ಧರ್ಮವನ್ನೂ [ವದನ್] ಬೋಧಿಸುತ್ತಾ, [ಸತ್ಯಂ ವದನ್] ಸತ್ಯವನ್ನು ಉಪದೇಶಿಸುತ್ತಾ, [ಶ್ರದ್ಧಾಂ ವದನ್] ಶ್ರದ್ಧೆಯನ್ನು ಪಸರಿಸುತ್ತಾ, [ಇಂದ್ರಾಯ] ಜೀವಾತ್ಮನ ಹಿತಕ್ಕಾಗಿ, ಪರಮೈಶ್ವರ್ಯವಾನ್ ಪ್ರಭುವಿನ ಪ್ರಾಪ್ತಿಗಾಗಿ [ಪರಿ ಸ್ರವ] ಪರ್ಯಟನ ಮಾಡು, ಕರುಣೆಯನ್ನು ಸುರಿಸು.
     ಈ ಒಂದು ಮಂತ್ರದಲ್ಲಿ ಸಂನ್ಯಾಸಿಯ ಸಮಸ್ತ ಲಕ್ಷಣಗಳನ್ನೂ ಹೇಳಿದೆ. ವೇದ, ಧರ್ಮ, ಸತ್ಯ, ಶ್ರದ್ಧೆ ಇವನ್ನು ಪ್ರಸರಿಸುತ್ತಾ ಕೇವಲ ಮಾತಿನಿಂದಲ್ಲ, ತನ್ನ ಸ್ವಂತ ಜೀವನದಿಂದ ಪರಿವ್ರಜನ ಮಾಡುವುದು, ಸುತ್ತಾಡುವುದು ಸಂನ್ಯಾಸಿಯ ಧರ್ಮ. "ಪರಿವ್ರಾಟ್" ಎಂದರೆ ಸುತ್ತಾಡುವವನು ಎಂದೇ ಸಂನ್ಯಾಸಿಯ ಹೆಸರು. ಮಠ, ಆಶ್ರಮಗಳನ್ನು ಕಟ್ಟಿಕೊಂಡು ರಾಜವೈಭವದಿಂದ, ಕಿರೀಟಧಾರಣೆ ಮಾಡಿ, ಆನೆಯ ಮೇಲೋ, ಪಲ್ಲಕ್ಕಿಯಲ್ಲಿಯೋ ಕುಳಿತು ಮೆರವಣಿಗೆ ಹೊರಡುವುದು, ದೊಡ್ಡ ದೊಡ್ಡ ದೇವಾಲಯಗಳನ್ನು ನಿರ್ಮಿಸಿ ಜಡಾರಾಧನೆಯಿಂದ ಮೊದಲೇ ಜಡವಾಗಿ ಕುಳಿತ ಜನಮಾನಸವನ್ನು ಮತ್ತೂ ಜಡವಾಗಿಸುವುದು, ಗೃಹಸ್ಥರಿಗೂ ಕೂಡ ಉಪಲಬ್ಧವಾಗದ ಷಡ್ರಸೋಪೇತವಾದ ಭೋಜನವನ್ನು ಸವಿಯುವುದು, ಜಗತ್ತನ್ನು ತ್ಯಜಿಸಿದ್ದೇವೆಂದು ಹೇಳಿಕೊಂಡರೂ ಜಗತ್ತಿನ ವೈಭವಗಳಿಗೇ ಅಂಟಿಕೊಂಡಿರುವುದು, ಇದಾವುದೂ ವೈದಿಕ ಸಂನ್ಯಾಸಿಯ ಲಕ್ಷಣವಲ್ಲ.
     ಹಿಂದೆಯೇ ಹೇಳಿರುವಂತೆ, ಸಂನ್ಯಾಸ ಮಾನವೋತ್ಕರ್ಷದ ಪರಮಾವಧಿ. ಶಾಸ್ತ್ರಜ್ಞಾನರಹಿತನಾದವನು, ಬ್ರಹ್ಮಾನುಭೂತಿಯಿಲ್ಲದವನು, ಸಂಪೂರ್ಣ ನಿರ್ಲಿಪ್ತ ಹಾಗೂ ತ್ಯಾಗಭಾವನೆಯಿಲ್ಲದವನು, ಆರೋಗ್ಯ-ಧೃಢಕಾಯವಿಲ್ಲದವನು, ಸಂನ್ಯಾಸದ ಈ ಮಹೋಚ್ಛ ಪದವಿಯನ್ನು ಪಡೆಯಲಾರನು. ಈ ರೀತಿ ಜಗದುಪಕಾರ ಹಾಗೂ ಆಧ್ಯಾತ್ಮಿಕ ಸುಧಾರಣೆ ಮಾಡಿಕೊಳ್ಳುತ್ತಾ ಸಂನ್ಯಾಸಿಯು ಸಾವು ಬರುವವರೆಗೂ ನಿಃಸ್ಪೃಹನಾಗಿ, ಚಲಿಸುವ ಜ್ಞಾನಜ್ಯೋತಿಸ್ತಂಭರಂತೆ ಓಡಾಡುತ್ತಿರಬೇಕು.
     ಈ ಚತುರಾಶ್ರಮಗಳ ವಿಷಯದಲ್ಲಿ ಸರ್ವರೂ ನೆನಪಿನಲ್ಲಿಡಬೇಕಾದ ಅಂಶ ಒಂದಿದೆ. ಪ್ರಥಮಾಶ್ರಮವಾದ ಬ್ರಹ್ಮಚರ್ಯವೊಂದು ಮಾತ್ರ ಸರ್ವರಿಗೂ ಅನಿವಾರ್ಯ. ಉಳಿದ ಮೂರೂ ಯೋಗ್ಯತೆಯನ್ನವಲಂಬಿಸಿ ಸ್ವೀಕರಿಸಬೇಕಾದ ಆಶ್ರಮಗಳಾಗಿವೆ. ಜನ್ಮಾರಭ್ಯ ವೈದಿಕ ಸಂಸ್ಕಾರಗಳನ್ನೇ ಹೊತ್ತುಬಂದು ಅದೇ ವಾತಾವರಣದಲ್ಲಿ ಜೀವಿಸುವ ಮಾನವರಿಗೆ ಈ ನಾಲ್ಕೂ ಆಶ್ರಮಗಳನ್ನೂ ವಿಧಿವತ್ತಾಗಿ ಪಾಲಿಸುವ ಯೋಗ್ಯತೆ ಬಂದೇ ಬರುತ್ತದೆ. ಪುರುಷನಿಗೆಂತೋ, ಸ್ತ್ರೀಗೂ ಅಂತೆಯೇ ಈ ನಿಯಮಗಳು ಅನ್ವಯಿಸುತ್ತವೆ. ವಯಃಪ್ರಮಾಣದಲ್ಲಿ ಮಾತ್ರ, ಸಾಧಾರಣ ಸ್ಥಿತಿಯಲ್ಲಿ ನಾರಿಗೆ 16-18 ವರ್ಷಗಳವರೆಗೆ ಬ್ರಹ್ಮಚರ್ಯ, 41-45ರವರೆಗೆ ಗಾರ್ಹಸ್ಥ್ಯ, 46-70ರವರೆಗೆ ವಾನಪ್ರಸ್ಥ ಹಾಗೂ ಜೀವನಾಂತ ಪರ್ಯಂತ ಸಂನ್ಯಾಸ, ಈ ರೀತಿ ಮನು ಮೊದಲಾದ ಸ್ಮೃತಿಕಾರರ ಅಭಿಪ್ರಾಯವಿರುತ್ತದೆ. ಸ್ವತಃ ಪ್ರಮಾಣಗಳಾದ ವೇದಗಳಲ್ಲಿ ಕೇವಲ ಪ್ರಾಪ್ತಯೌವನಳಾದ ಅಂದರೆ, ಸದೃಢವಾದ ಸಂತಾನ ನಿರ್ಮಾಣಕ್ಕೆ ಶಕ್ತಳಾದ ನಾರಿಯ ವಿವಾಹವಿಧಿ ಮಾತ್ರ ಕಂಡುಬರುತ್ತದೆ. ಉದಾಹರಣೆಗೆ, ಬ್ರಹ್ಮಚರ್ಯೇಣ ಕನ್ಯಾಃ ಯುವಾನಂ ವಿಂದತೇ ಪತಿಮ್ || (ಅಥರ್ವ.11.15.18.)- ಇಂದ್ರಿಯನಿಗ್ರಹ, ವಿದ್ಯಾದಿ ಸಮಸ್ತ ಗುಣವಿಶಿಷ್ಟತೆಯಿಂದ ಕೂಡಿದ ಕನ್ಯೆ, ತನಗೆ ಅನುರೂಪನಾದ ಯುವಕನಾದ ಪುರುಷನನ್ನು ಪತಿಯಾಗಿ ಪಡೆಯುತ್ತಾಳೆ- ಎಂಬ ಮೌಲಿಕ ತಥ್ಯ (Fundamental Principle) ಮಾತ್ರ ಕಂಡುಬರುತ್ತದೆ. ದೇಶ, ಕಾಲ, ದೈಹಿಕಸ್ಥಿತಿ ಮೊದಲಾದುವನ್ನು  ದೃಷ್ಟಿಪಥದಲ್ಲಿಟ್ಟು ನಿರ್ಧರಿಸಬೇಕಾದ ವಿಷಯವಿದು. 
ಹಿಂದಿನ ಲೇಖನಕ್ಕೆ ಲಿಂಕ್:ವಾನಪ್ರಸ್ಥಾಶ್ರಮ

ಮಂಗಳವಾರ, ಡಿಸೆಂಬರ್ 18, 2012

ಸಮನ್ವಯದ ಕೊಂಡಿಗಳಾಗೋಣ


     ಲಭ್ಯ ಸಾಹಿತ್ಯಗಳಲ್ಲಿ ಅತಿ ಪುರಾತನವೆಂದು ಪರಿಗಣಿಸಲ್ಪಟ್ಟಿರುವ ವೇದಗಳಲ್ಲಿ ಒಟ್ಟು 20,379 ಮಂತ್ರಗಳಿವೆಯೆಂದು ಹೇಳಲಾಗಿದೆ. ಋಗ್ವೇದ ಸಂಹಿತೆಯಲ್ಲಿ 10,552 ಮಂತ್ರಗಳು, ಯಜುರ್ವೇದ ಸಂಹಿತೆಯಲ್ಲಿ 1,975 ಮಂತ್ರಗಳು, ಸಾಮವೇದ ಸಂಹಿತೆಯಲ್ಲಿ 1,875 ಮಂತ್ರಗಳು ಮತ್ತು ಅಥರ್ವವೇದ ಸಂಹಿತೆಯಲ್ಲಿ 5,977 ಮಂತ್ರಗಳಿವೆ. ನಂತರದಲ್ಲಿ ರಚಿತಗೊಂಡ ಪುರಾಣಗಳು, ಪುಣ್ಯ ಕಥೆಗಳು, ರಾಮಾಯಣ, ಮಹಾಭಾರತಗಳನ್ನು ವೇದ ಸಾಹಿತ್ಯದೊಡನೆ ಥಳುಕು ಹಾಕಿ ಚರ್ಚೆ, ವಿಮರ್ಶೆ ಮಾಡುವುದು ಸೂಕ್ತವಾಗಲಾರದು. ಅವುಗಳಿಗೆ ವೇದವೇ ಆಧಾರವೆನಿಸಿದರೂ, ಅವುಗಳಲ್ಲಿ ಕಂಡು ಬರುವ ಎಲ್ಲಾ ಸಂಗತಿಗಳೂ ವೇದದ ಆಶಯವೇ ಆಗಿವೆ ಎನ್ನಲಾಗದು. ವೇದದ 20,379 ಮಂತ್ರಗಳಲ್ಲಿ ಎಲ್ಲಿಯೂ, ಹುಟ್ಟಿನಿಂದ ಬರುವ ಜಾತಿಯ ಕುರಿತು ಉಲ್ಲೇಖಗಳು, ಪ್ರಮಾಣಗಳು ಕಾಣಲಾರದು. ಮಂತ್ರಗಳಲ್ಲಿ ಬ್ರಾಹ್ಮಣ, ವೈಶ್ಯ, ಶೂದ್ರ, ಕ್ಷತ್ರಿಯ, ದಾಸ, ದಸ್ಯು ಇಂತಹ ಪದಗಳ ಬಳಕೆಯಾಗಿರುವುದು ಕಂಡು ಬಂದರೂ ಅವು ಹುಟ್ಟಿನಿಂದ ಬಂದ ಜಾತಿ ಸೂಚಕ ಪದಗಳಾಗಿವೆಯೆಂದು ಹೇಳಲಾಗುವುದಿಲ್ಲ. ನಮ್ಮ ಕಲ್ಪನೆಗೆ ಮೀರಿದ ಹಿಂದಿನ ಯಾವುದೋ ಒಂದು ಕಾಲಘಟ್ಟದಲ್ಲಿ ವರ್ಣ ವ್ಯವಸ್ಥೆ ವಿರೂಪಗೊಂಡು ಪ್ರಚಲಿತ ಜಾತಿ ಪದ್ಧತಿ ಮೈತಳೆದು ಬಂದಿರಬಹುದು. ವೇದಸಾಹಿತ್ಯದ ಮೂಲಪುರುಷನೆಂದು, ಗುರುಗಳ ಗುರುವೆಂದು ಕರೆಯಲ್ಪಡುವ ವ್ಯಾಸ ಮಹರ್ಷಿಯೇ ಹುಟ್ಟಿನಿಂದ ಬ್ರಾಹ್ಮಣನಲ್ಲ, ಅದು ಗಳಿಸಿದ ಬ್ರಾಹ್ಮಣಿಕೆ. ಸಪ್ತರ್ಷಿಗಳೂ  ಸಹ ಹುಟ್ಟಿನ ಬ್ರಾಹ್ಮಣರಲ್ಲವೆಂಬುದು ವಿಶೇಷ. ಇವಲ್ಲದೆ ಇಂತಹ ಅನೇಕಾನೇಕ ದೃಷ್ಟಾಂತಗಳು ಕಾಣಸಿಗುತ್ತವೆ.  'ಶಾಸ್ತ್ರಾದ್ರೂಢಿರ್ಬಲೀಯಸಿ' ಎಂಬ ಮಾತು ಸತ್ಯ. ಶಾಸ್ತ್ರಗಳಿಗಿಂತ ರೂಢಿಗತ ಸಂಪ್ರದಾಯ ಹೆಚ್ಚು ಬಲಶಾಲಿಯಂತೆ. ಇಂತಹ ರೂಢಿಗತವಾಗಿ ಬಂದ ಜಾತಿ ಪದ್ಧತಿ ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಲ್ಲ. ಇತರ ಧರ್ಮಗಳಲ್ಲೂ ಇವು ಪ್ರಚಲಿತವಿವೆ. ರೂಢಿಗತವಾಗಿ ಬಂದ ಸಂಪ್ರದಾಯಗಳನ್ನೇ ಧರ್ಮವೆನ್ನುತ್ತಾ, ಅದಕ್ಕೆ ಪೋಷಕ ಅಂಶಗಳನ್ನು ಸೇರಿಸುತ್ತಾ ಬಂದ ಸಂಪ್ರದಾಯವಾದಿಗಳು ಈ ಸ್ಥಿತಿಗೆ ಕಾರಣವೆಂದರೆ ತಪ್ಪಾಗಲಾರದು. ಹೊಸ ಹೊಸ ಸಂಪ್ರದಾಯಗಳು ದಿನೇ ದಿನೇ ಜಾರಿಗೆ ಬರುತ್ತಲೇ ಇವೆ, ಪ್ರಬಲವಾಗುತ್ತಲೂ ಇವೆ. ಪ್ರತಿ ತಿಂಗಳ ಚತುರ್ಥಿ ದಿನದಂದು ಮಾಡಲಾಗುತ್ತಿರುವ ಸಂಕಷ್ಟಹರ ಗಣಪತಿ ಪೂಜೆ ಇದಕ್ಕೆ ತಾಜಾ ಉದಾಹರಣೆ. ಈ ಸಂಪ್ರದಾಯ ಆರಂಭವಾದ ನಂತರದಲ್ಲಿ ಅನೇಕ ಸಂಕಷ್ಟಹರ ಗಣಪತಿ ದೇವಾಲಯಗಳು ನಿರ್ಮಾಣಗೊಂಡಿವೆ/ಗೊಳ್ಳುತ್ತಿವೆ. ಒಬ್ಬೊಬ್ಬ ದೇವಮಾನವರು/ದೇವಮಾನವರೆನಿಸಿಕೊಂಡವರು  ಪ್ರಬುದ್ಧಮಾನಕ್ಕೆ ಬರುತ್ತಿದ್ದಂತೆ ಅವರ ವಿಚಾರಗಳಿಗನುಗುಣವಾಗಿ ಹೊಸ ಹೊಸ  ಸಂಪ್ರದಾಯಗಳು, ಹೊಸ ಹೊಸ ಜಾತಿಗಳು, ಹೊಸ ಹೊಸ ದೇವಾಲಯಗಳು ಹುಟ್ಟಿವೆ, ಹುಟ್ಟುತ್ತಲಿವೆ, ಮುಂದೆಯೂ ಹುಟ್ಟುತ್ತವೆ. ಇವು ಎಲ್ಲಾ ಮತ/ಧರ್ಮಗಳಿಗೂ ಅನ್ವಯಿಸುವ ವಿಚಾರ. ಸಮಾಜ ಸುಧಾರಣೆಯ ದೃಷ್ಟಿಯಿಂದ ಹೊಸ ಸಂಪ್ರದಾಯಗಳು, ಜಾತಿಗಳು ಜನಿಸಿದರೂ, ಅನುಸರಿಸುವವರು ವಿಚಾರಕ್ಕೆ ಪ್ರಾಧಾನ್ಯತೆ ಕೊಡದೆ ಕೇವಲ ಆಚಾರಕ್ಕೆ ಪ್ರಾಧಾನ್ಯತೆ ಕೊಡುವ ಪರಿಸ್ಥಿತಿ ಇರುವವರೆಗೂ ಸುಧಾರಣೆ ಕನಸಿನ ಮಾತಾಗಿ ಉಳಿಯುತ್ತದೆ. 
      ಇಂದಿನ ಪರಿಸ್ಥಿತಿ ಸರಿಪಡಿಸಲು ದೂಷಿಸುವವರೊಂದಿಗೆ, ದೂಷಿಸಲ್ಪಡುವವರೂ ಪೂರ್ವಾಗ್ರಹ ಪೀಡಿತರಾಗದೆ ಒಳ್ಳೆಯ ರೀತಿ-ನೀತಿಗಳ ವ್ಯವಸ್ಥೆ ತರಲು ಕೈಜೋಡಿಸುವುದು ಅಗತ್ಯವಾಗಿದೆ. ಏಕೆಂದರೆ ಈಗಿರುವ ಈ ಇಬ್ಬರೂ ಇಂದಿನ ಈ ಸ್ಥಿತಿಗೆ ಕಾರಣರಲ್ಲ. ಯಾರೋ ಮಾಡಿದ ತಪ್ಪಿಗೆ ಇನ್ನು ಯಾರೋ ಮತ್ಯಾರನ್ನೋ ದೂಷಿಸುವುದರಿಂದ ಪರಿಸ್ಥಿತಿ ಸುಧಾರಿಸಬಹುದೆಂದು ನಿರೀಕ್ಷಿಸಲಾಗದು. ಪರಸ್ಪರರ ದೂಷಣೆಯಿಂದ ದೊರಕುವ ಫಲವೆಂದರೆ ಮನಸ್ಸುಗಳು ಕಹಿಯಾಗುವುದು, ಕಲುಷಿತಗೊಳ್ಳುವುದು ಅಷ್ಟೆ. ಸೈದ್ಧಾಂತಿಕವಾಗಿ ಯಾವುದೇ ವಿಚಾರವನ್ನು ಒಪ್ಪಬೇಕು ಅಥವ ವಿರೋಧಿಸಬೇಕೇ ಹೊರತು, ಅದು ವ್ಯಕ್ತಿಗಳ ನಡುವಣ ದ್ವೇಷವಾಗಿ ತಿರುಗಬಾರದು. ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸುವವರಾದರೆ, ನಡೆಯುವುದಾದರೆ ಈ ಜಗತ್ತು ನಡೆಯುವುದಾದರೂ ಹೇಗೆ? ನಮ್ಮ ನಮ್ಮ ವಿಚಾರಗಳನ್ನು ಬಿಟ್ಟುಕೊಡಬೇಕಿಲ್ಲ, ಇತರರ ವಿಚಾರಗಳನ್ನು ಒಪಲೇಬೇಕೆಂದಿಲ್ಲ. ಅವರವರ ವಿಚಾರ ಅವರಿಗಿರಲಿ. ನನ್ನ ವಿಚಾರವೇ ಸರಿ, ಅದನ್ನು ಎಲ್ಲರೂ ಒಪ್ಪಲೇಬೇಕೆಂಬ ಆಗ್ರಹ ಮಾತ್ರ ಸರಿಯೆನಿಸುವುದಿಲ್ಲ. ಕರುಣಾಮಯಿ ಪರಮಾತ್ಮ ಜೀವಜಗತ್ತಿನ ವಿಚಾರದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಇವನು ಆಸ್ತಿಕ, ನನ್ನನ್ನು ಹಾಡಿ ಹೊಗಳುತ್ತಾನೆ, ಪೂಜಿಸುತ್ತಾನೆ ಎಂದು ಅವನಿಗೆ ವಿಶೇಷ ಅನುಗ್ರಹ ಕೊಡುವುದಿಲ್ಲ. ಅವನು ನಾಸ್ತಿಕ, ನನ್ನನ್ನು ನಂಬುವುದಿಲ್ಲ, ಹೀಗಳೆಯುತ್ತಾನೆ ಎಂದುಕೊಂಡು ಅವನಿಗೆ ಅನ್ನ, ನೀರು ಸಿಗದಂತೆ ಮಾಡುವುದೂ ಇಲ್ಲ. ಬಿಸಿಲು, ಮಳೆ, ಗಾಳಿ, ಬೆಂಕಿ, ಆಕಾಶಗಳೂ ಸಹ ಅನುಸರಿಸುವುದು ಪರಮಾತ್ಮನ ತಾರತಮ್ಯವಿಲ್ಲದ ಭಾವಗಳನ್ನೇ ಅಲ್ಲವೇ? ಹೀಗಿರುವಾಗ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸರಿ, ತಪ್ಪುಗಳ ವಿವೇಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ, ಪೂರ್ವಾಗ್ರಹಗಳನ್ನು ಬದಿಗಿಟ್ಟು ಚಿಂತನೆ ಮಾಡುವ ಮನೋಭಾವ ಮೂಡಿದರೆ ಅದು ನಿಜಕ್ಕೂ ಒಂದು ವೈಚಾರಿಕ ಕ್ರಾಂತಿಯೆನಿಸುತ್ತದೆ. ಒಂದು ನಾಣ್ಯಕ್ಕೆ ಎರಡು ಮುಖಗಳಿರುತ್ತವೆ. ಎರಡು ಮುಖಗಳೂ ವಿರುದ್ಧ ದಿಕ್ಕಿನಲ್ಲಿದ್ದರೂ ಪರಸ್ಪರ ಪೂರಕವಾಗಿರುತ್ತವೆ.  ದೂಷಿಸುವವರು ಮತ್ತು ದೂಷಿಸಲ್ಪಡುವವರ ನಡುವಣ ಸಮನ್ವಯದ ಕೊಂಡಿಗಳಾಗೋಣ. ಇದು ಬಹಳ ಕಷ್ಟದ ಕೆಲಸ, ಧೈರ್ಯವೂ ಇರಬೇಕು. ಏಕೆಂದರೆ ಇಂತಹವರು ಎರಡೂ ಕಡೆಗಳಿಂದ ಪೆಟ್ಟು ತಿನ್ನುತ್ತಾರೆ, ದೂಷಣೆಗೊಳಗಾಗುತ್ತಾರೆ. ಆದರೆ ಒಂದೊಮ್ಮೆ ಇಂತಹ ಕೊಂಡಿಗಳು ಬಲಶಾಲಿಯಾದರೆ ಎರಡೂ ಕಡೆಯವರು ಇವರ ಮಾತು ಕೇಳುತ್ತಾರೆ, ಸಮಾಜದಲ್ಲಿ ಸಾಮರಸ್ಯದ ವಾತಾವರಣ ನಿರ್ಮಾಣವಾಗುತ್ತದೆ. ವೈಚಾರಿಕ ಸಂಘರ್ಷವಿದ್ದರೂ ಅದು ವ್ಯಕ್ತಿಗತ ಸಂಘರ್ಷಕ್ಕೆ ತಿರುಗದಂತೆ ಎಚ್ಚರ ವಹಿಸುವುದು ಆರೋಗ್ಯಕರ ಸಮಾಜದ ಲಕ್ಷಣ. ಯಾವುದು ಒಳ್ಳೆಯದೋ ಅದನ್ನು ಸೀಕರಿಸುವ ಮನಸ್ಸು ಹೊಂದೋಣ. ಪೂರ್ವಾಗ್ರಹ ಪೀಡಿತರಾಗದಿರೋಣ. ಒಳ್ಳೆಯ ಸಂಗತಿಗಳು, ವಿಚಾರಗಳು ಯಾರಿಂದಲೇ ಬರಲಿ, ಎಲ್ಲಿಂದಲೇ ಬರಲಿ ಅದನ್ನು ಸ್ವಾಗತಿಸೋಣ.
     ಸಮಾನತೆಯ ಅಂಶವನ್ನು ಒತ್ತಿ ಹೇಳುವ ಕೆಲವು ವೇದಮಂತ್ರಗಳನ್ನು ಉದಾಹರಿಸುವೆ. ಮಂತ್ರಗಳ ಅರ್ಥ ವಿವರಣೆ ಪಂ. ಸುಧಾಕರ ಚತುರ್ವೇದಿಯವರದು.


ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. ೫.೫೯.೬]
     ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ.


ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ | ಸಂ ಭ್ರಾತರೋ ವಾವೃಧುಃ 
ಸೌಭಗಾಯ || ಯುವಾ ಪಿತಾ ಸ್ವಪಾ ರುದ್ರ ಏಷಾಂ | ಸುದುಘಾ ಪೃಶ್ನಿಃ ಸುದಿನಾ  ಮರುದ್ಭ್ಯಃ || [ಋಗ್. ೫.೬೦.೫]
     ಈ ಮಾನವರು ತಮಗಿಂತ ಉಚ್ಛರನ್ನು ಹೊಂದಿಲ್ಲ, ನೀಚರನ್ನೂ ಹೊಂದಿಲ್ಲ, ಇವರು ಪರಸ್ಪರ ಅಣ್ಣ ತಮ್ಮಂದಿರು, ಸೌಭಾಗ್ಯಕ್ಕಾಗಿ ಮುಂದೆ ಸಾಗುತ್ತಾರೆ. ಆತ್ಮರಕ್ಷಕನೂ, ಅಜರನೂ ಆದ, ಪಾಪಿಗಳಿಗೆ ದಂಡ ವಿಧಿಸುವ ಭಗವಂತನು, ಇವರೆಲ್ಲರ ತಂದೆ. ಭೂಮಿದೇವಿ, ಮರ್ತ್ಯರಾದ ಈ ಮಾನವರಿಗಾಗಿ ಶುಭದಿನಗಳನ್ನು ತೋರಿಸುವವಳೂ, ಉತ್ತಮ ಜೀವನಪ್ರದ ರಸಗಳನ್ನು ಕರೆಯುವವಳೂ ಆಗಿದ್ದಾಳೆ.


ಸಮಾನೋ ಮಂತ್ರಃ ಸಮಿತಿಃ ಸಮಾನಂ ವ್ರತಂ ಸಹ ಚಿತ್ತಮೇಷಾಂ | ಸಮಾನೇನ ವೋ ಹವಿಷಾ ಜುಹೋಮಿ ಸಮಾನಂ ಚೇತೋ ಅಭಿಸಂವಿಶದ್ವಮ್ || [ಅಥರ್ವ.೬.೬೪.೨]
     ಈ ನಿಮ್ಮೆಲ್ಲರಿಗೂ ಮಂತ್ರವು ಸಮಾನವಾಗಿದೆ. ಸಮಿತಿಯೂ ಸಮಾನವಾಗಿದೆ. ವ್ರತವೂ ಸಮಾನವೇ. ನಿಮ್ಮ ಮನಸ್ಸು ಸಹಕರಿಸುವಂತಹುದಾಗಲಿ. ನಿಮ್ಮೆಲ್ಲರನ್ನೂ ಸಮಾನವಾದ ಭೋಗ್ಯವಸ್ತುವಿನೊಂದಿಗೆ ಯುಕ್ತರನ್ನಾಗಿ ಮಾಡುತ್ತೇನೆ. ಸಮಾನವಾದ ಆಹಾರ-ಪಾನೀಯಗಳನ್ನೇ ನೀಡುತ್ತೇನೆ. 


ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ ನಮಃ ಪೂರ್ವಜಾಯ ಚಾಪರಜಾಯ ಚ ನಮೋ ಮಧ್ಯಮಾಯ ಚಾಪಗಲ್ಫಾಯ ಚ ನಮೋ ಜಘನ್ಯಾಯ ಚ ಬುದ್ಧ್ಯಾಯ ಚ || [ಯಜು. ೧೬-೩೨]
     ಗುಣ-ಕರ್ಮ ಸ್ವಭಾವಗಳಿಂದ ದೊಡ್ಡವನಾಗಿರುವವನಿಗೆ ನಮಸ್ಕಾರ. ಹಾಗೆಯೇ ಗುಣ-ಕರ್ಮ ಸ್ವಭಾವಗಳಿಂದ ಚಿಕ್ಕವನಾಗಿರುವವನಿಗೂ ನಮಸ್ಕಾರ. ಮತ್ತು, ವಯಸ್ಸಿನಲ್ಲಿ ಹಿರಿಯನಿಗೆ ನಮಸ್ಕಾರ. ಹಾಗೂ ವಯಸ್ಸಿನಲ್ಲಿ ಕಿರಿಯನಿಗೂ ನಮಸ್ಕಾರ. ಅಂತೆಯೇ ನಡುವಯಸ್ಕನಿಗೆ ನಮಸ್ಕಾರ. ಅದೇ ರೀತಿ, ಅವಿಕಸಿತ ಶಕ್ತಿಯುಳ್ಳವನಿಗೆ ನಮಸ್ಕಾರ. ಹೀನ ಸ್ಥಿತಿಯಲ್ಲಿರುವವನಿಗೂ, ವಿಶಾಲ ಮನಸ್ಕನಿಗೂ ನಮಸ್ಕಾರ.


ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || [ಅಥರ್ವ.೬.೬೪.೩]
     ನಿಮ್ಮ ಹಿತವು ಒಂದಿಗೇ ಆಗುವಂತೆ, ನಿಮ್ಮ ಮನಃಕಾಮನೆ ಸಮಾನವಾಗಿರಲಿ. ನಿಮ್ಮ ಹೃದಯಗಳು ಸಮಾನವಾಗಿರಲಿ. ನಿಮ್ಮ ಮನಸ್ಸುಗಳು ಸಮಾನವಾಗಿರಲಿ.


ಅಯಂ ನಾಭಾ ವದತಿ ವಲ್ಗು ವೋ ಗೃಹೇ | ದೇವಪುತ್ರಾ ಋಷಯಸ್ತಚ್ಛೃಣೋತನ || ಸುಬ್ರಹ್ಮಣ್ಯಮಂಗೀರಸೋ ವೋ ಅಸ್ತು | ಪ್ರತಿಗೃಭ್ಣೀತ ಮಾನವಂ ಸುಮೇಧಸಃ || [ಋಗ್.೧೦.೬೨.೪]
     ಭಗವಂತನ ಮಕ್ಕಳೇ, ಪ್ರಗತಿಶೀಲರೇ, ತತ್ತ್ವದರ್ಶನಸಮರ್ಥರೇ, ಉತ್ತಮ ಬುದ್ಧಿಸಂಪನ್ನರೇ, ಆತ್ಮನಲ್ಲಿ ರಮಿಸುವವರೇ, ದೇಹಧಾರಿಗಳಿಗೆ ದಾನ ಮಾಡುವ ಉದಾರಾತ್ಮರೇ, ವಿಶ್ವಬ್ರಹ್ಮಾಂಡಕ್ಕೆ ಕೇಂದ್ರಭೂತನಾದ ಈ ಪ್ರಭುವು, ನಿಮ್ಮ ಗೃಹಗಳಲ್ಲಿ/ಗ್ರಾಹ್ಯನಾದ ಆತ್ಮನಲ್ಲಿ ವ್ಯಾಪಕನಾಗಿ ಒಳ್ಳೆಯದನ್ನು ಪ್ರೇರಿಸುತ್ತಿದ್ದಾನೆ. ಆ ಒಳಕರೆಯನ್ನು ಆಲಿಸಿರಿ. ನಿಮ್ಮ ವೇದಜ್ಞಾನ ಕಲ್ಯಾಣಕಾರಿಯಾಗಲಿ. ಮಾನವೀಯ ಜ್ಞಾನ ಗ್ರಹಿಸಿರಿ.


ದ್ಯೌರ್ವಃ ಪಿತಾ ಪೃಥಿವಿ ಮಾತಾ ಸೋಮೋ ಭ್ರಾತಾದಿತಿ ಸ್ವಸಾ | ಅದೃಷ್ಟಾ ವಿಶ್ವದೃಷ್ಟಾಸ್ತಿಷ್ಟತೇಳಯತಾ ಸು ಕಮ್ || 
[ಋಗ್.೧.೧೯೧.೬]
     ಮಾನವರೇ, ಜ್ಯೋತಿರ್ಮಯ ಪರಮಾತ್ಮನು ತಂದೆ, ಭೂಮಿಯೇ ತಾ, ವಿವೇಕವೇ ಸೋದರ, ಅಖಂಡತೆ/ಪ್ರಾಮಾಣಿಕತೆ ಬಾಳಿಗೊದಗಿದ ಸೋದರಿ, ಕಣ್ಣಿಗೆ ಕಾಣುವವರೂ, ಕಾಣದಿರುವವರೂ ಸುಖದಿಂದ ಉಪಭೋಗಿಸಿರಿ, ಒಳ್ಳೆಯ ರೀತಿಯಲ್ಲಿ ಬಾಳಿರಿ.


ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ | ಸರ್ವಭೂತೇಷು ಚಾತ್ಮಾನಂ ತತೋ ನ ವಿ ಚಿಕಿತ್ಸತಿ || [ಯಜು.೪೦.೬.]
     ಯಾರು ಸಮಸ್ತ ಪ್ರಾಣಿಗಳೂ ತಮ್ಮಂತೆಯೇ ಇಚ್ಛಾ-ದ್ವೇಷ-ಪ್ರಯತ್ನ-ಸುಖ-ದುಃಖ-ಜ್ಞಾನಗಳನ್ನು ಹೊಂದಿದ ಆತ್ಮಗಳೇ ಎಂದು ಭಾವಿಸುವರೋ, ತಮ್ಮಂತೆಯೇ ಎಂದು ಕಂಡುಕೊಳ್ಳುವರೋ ಅವರು ಸಂದೇಹಗಳಿಗೆ ಸಿಲುಕುವುದಿಲ್ಲ.


ಯೇನ ದೇವಾ ನ ವಿಯಂತಿ ನೋ ಚ ವಿದ್ವಿಷತೇ ಮಿಥಃ | ತತ್ಕೃಣ್ಮೋ ಬ್ರಹ್ಮ ವೋ ಗೃಹೇ ಸಂಜ್ಞಾನಂ ಪುರುಷೇಭ್ಯಃ || 
[ಅಥರ್ವ.೩.೩೦.೪.]
     ಯಾವುದರಿಂದ ಉದಾರಾತ್ಮರಾದ ವಿದ್ವಾಂಸರು, ಒಡೆದು ಬೇರೆ ಬೇರೆಯಾಗುವುದಿಲ್ಲವೋ ಮತ್ತು ಪರಸ್ಪರ ವೈರ ಕಟ್ಟಿಕೊಳ್ಳುವುದಿಲ್ಲವೋ ಅಂತಹ ಅರಿವು ಕೊಡುವ ವೇದಜ್ಞಾನವನ್ನು ಮಾನವರಾದ ನಿಮ್ಮ ಸಲುವಾಗಿ ಉಂಟುಮಾಡುತ್ತೇವೆ.


     ಸದ್ವಿಚಾರಿಗಳಾಗೋಣ, ಸರಿಯೆಂದು ಕಂಡುದನ್ನು ಅನುಸರಿಸೋಣ, ನಿಜಮಾನವರಾಗೋಣ.
-ಕ.ವೆಂ. ನಾಗರಾಜ್.
[ಚಿತ್ರಕೃಪೆ: ರಾಯಲ್ಟಿ ಮುಕ್ತ ಕ್ಲಿಪ್ ಕಲೆ: www.dreamstime.com]

ಮಂಗಳವಾರ, ಡಿಸೆಂಬರ್ 11, 2012

ಚನ್ನರಾಯಪಟ್ಟಣದಲ್ಲಿ ವೇದಾಭ್ಯಾಸ

ಚನ್ನರಾಯಪಟ್ಟಣದ ವೇದಾಭ್ಯಾಸಿಗಳು ಪಠಿಸುತ್ತಿರುವ ಪುರುಷ ಸೂಕ್ತ


     ಹಿರಿಯರೊಡನೆ ಪುಟಾಣಿಗಳೂ ಸ್ವರಬದ್ಧವಾಗಿ ಮಂತ್ರಪಠಣ ಮಾಡುತ್ತಿದ್ದುದು ಮನಸ್ಸಿಗೆ ಮುದ ನೀಡಿತು. ಈ ವಿಡಿಯೋ ಚಿತ್ರೀಕರಿಸಿದ ಮಿತ್ರ ಹರಿಹರಪುರ ಶ್ರೀಧರರಿಗೆ ಧನ್ಯವಾದ.

ಭಾನುವಾರ, ಡಿಸೆಂಬರ್ 9, 2012

ಸಾಪ್ತಾಹಿಕ ವೇದಪಾಠ - 18.11.2012


     ದಿನಾಂಕ 18.11.2012 ರಂದು ನಡೆದ ವೇದಪಾಠವನ್ನು ಇಲ್ಲಿ ಪ್ರಕಟಿಸಲಾಗಿದೆ. ಮೇಲ್ ಮೂಲಕ ವಿಳಾಸ ನೀಡಿರುವ    ಎಲ್ಲರಿಗೂ ಪಾಠವನ್ನು ಕಳಿಸಲಾಗಿದೆ. ತಲುಪದಿದ್ದವರು ತಿಳಿಸಿದರೆ ಪುನ: ಕಳಿಸಿಕೊಡಲಾಗುವುದು. ಹೊಸದಾಗಿ  ಸಾಪ್ತಾಹಿಕ ವೇದ ಪಾಠವನ್ನು ವೆಬ್ ಸೈಟ್ ಮೂಲಕ ಕಲಿಯಬಯಸುವವರು " ವೇದಪಾಠ" ಲೇಬಲ್ ಮೇಲೆ ಕ್ಲಿಕ್ ಮಾಡಿ ಮೊದಲ ಪಾಠದಿಂದ ಅನುಸರಿಸಬಹುದು. ಆರಂಭದಲ್ಲಿರುವ ಪರಿಚಯ ಉಪನ್ಯಾಸವನ್ನು ಕೇಳಿ ವೇದಪಾಠವನ್ನು ಆರಂಭಿಸುವುದು ಸೂಕ್ತ. ಹಾಸನದಲ್ಲಿ ನಡೆಯುತ್ತಿರುವ "ಎಲ್ಲರಿಗಾಗಿ ವೇದ ಪಾಠವು" ಪೂರ್ಣ ಉಚಿತವಾಗಿದ್ದು ಹಾಸನಕ್ಕೆ ಸಮೀಪ ಇರುವ ನಿಮ್ಮ ಮಿತ್ರರನ್ನು  ಪ್ರತ್ಯಕ್ಷ ವೇದಪಾಠದಲ್ಲಿ ಪಾಲ್ಗೊಳ್ಳುವಂತೆ ಮಾಡಿ. ನಮ್ಮ ವಿಳಾಸ:
ಈಶಾವಾಸ್ಯಮ್, ಶಕ್ತಿ ಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ ಪೋಲೀಸ್ ಕಾಲೊನಿ, ಹಾಸನ.
ಸಂಪರ್ಕ ದೂರವಾಣಿ: 08172-250566/9663572406













-ಹರಿಹರಪುರ ಶ್ರೀಧರ್.

ಶನಿವಾರ, ಡಿಸೆಂಬರ್ 8, 2012

ವಾನಪ್ರಸ್ಥ - ಒಂದು ಚಿಂತನೆ


      'ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ' ಅನ್ನುವ ಮಾತನ್ನು ವಯಸ್ಸಾದವರು ಹೇಳುವುದನ್ನು ಕೇಳುತ್ತಿರುತ್ತೇವೆ. ಆದರೆ ಹೋಗು ಎಂದರೂ ಹೋಗಲೊಲ್ಲದವರೇ ಹೆಚ್ಚು. ಅಷ್ಟಕ್ಕೂ ಒಂದು ವೇಳೆ ಹೋಗಬೇಕೆಂದರೂ ಈಗ ಕಾಡಾದರೂ ಎಲ್ಲಿದೆ? ಇರುವ ಕಾಡುಗಳನ್ನೆಲ್ಲಾ ಮನುಷ್ಯನೇ ಆಕ್ರಮಿಸಿಕೊಂಡು ಕಾಡಿನ ಪ್ರಾಣಿಗಳಿಗೇ ಇರಲು ಜಾಗವಿಲ್ಲದಾಗಿದೆ. ವಿಧಿಯಿಲ್ಲದೆ ನಾಡಿಗೆ ಬರುತ್ತಿರುವ ಆ ಕಾಡುಪ್ರಾಣಿಗಳೂ ಈಗ ನಾಶದ ಅಂಚಿಗೆ ಬರುತ್ತಿವೆ. ಏಕೋ ಏನೋ ಇತ್ತೀಚೆಗೆ ನನ್ನ ಮನಸ್ಸು ವಾನಪ್ರಸ್ಥದ ಕುರಿತು ತಲೆ ಕೆಡಿಸಿಕೊಂಡಿದೆ. ಪ್ರಾಯಶಃ ವಯೋಸಹಜವಿರಬಹುದು. ನನ್ನ 6 ವರ್ಷದ ಮೊಮ್ಮಗಳೊಡನೆ ಆಟವಾಡುತ್ತಾ ನನ್ನಷ್ಟಕ್ಕೆ ನಾನೇ ಸ್ವಗತವೆಂಬಂತೆ ಮಾತನಾಡಿಕೊಳ್ಳುತ್ತಾ, 'ನನಗೆ ಸಾಕಾಗಿದೆ ಕಣಮ್ಮಾ, ವಾನಪ್ರಸ್ಥಕ್ಕೆ ಹೋಗಿಬಿಡ್ತೀನಿ' ಅಂದಿದ್ದೆ. ಪಾಪ, ಅವಳಿಗೆ ವಾನಪ್ರಸ್ಥ ಅಂದರೆ ಏನು ಅರ್ಥವಾದೀತು? ಅವಳು ಆಟ ಆಡುವುದನ್ನು ನಿಲ್ಲಿಸಿ, "ತಾತಾ, ಪ್ಲೀಸ್, ವಾನಾಸ್ಪತ್ರೆಗೆ ಹೋಗಬೇಡ, ಪ್ಲೀಸ್, ಪ್ಲೀಸ್" ಎಂದು ಗೋಗರೆದಿದ್ದಳು. ವಾನಪ್ರಸ್ಥ ಅವಳ ಬಾಯಲ್ಲಿ ವಾನಾಸ್ಪತ್ರೆ ಆಗಿತ್ತು. 'ಹೂಂ, ಆಯಿತು, ಹೋಗಲ್ಲ' ಅಂದ ಮೇಲೆಯೇ ನಮ್ಮ ಆಟ ಮುಂದುವರೆದಿದ್ದು.   ವಾನಪ್ರಸ್ಥ(ವನಪ್ರಸ್ಥ)ವೆಂದರೆ ಕಾಡಿನೆಡೆಗೆ ತೆರಳುವುದು ಎಂಬ ಅರ್ಥವೂ ಇದೆ. ಕಾಡುಗಳು ನಾಶವಾಗಿರುವ, ಆಗುತ್ತಿರುವ ಇಂದಿನ ದಿನಗಳಲ್ಲಿ ಇದು ಅರ್ಥ ಕಳೆದುಕೊಂಡಿದೆ. ಮಾನವಸಹಜ ಆಸೆ, ಆಕಾಂಕ್ಷೆಗಳಿಗೆ ಕಡಿವಾಣ ಹಾಕಿಕೊಂಡು ಪ್ರಾಪಂಚಿಕತೆಯಿಂದ ಕ್ರಮೇಣ ದೂರ ಸರಿಯುವ, ಲೋಕಹಿತ ಬಯಸುವ ಎಡೆಗೆ ಕಾಲಿಡುವುದು ವಾನಪ್ರಸ್ಥದ ಆರಂಭಿಕ ನಡೆರಬಹುದು. ಗೃಹಸ್ಥರಿಗೆ ಈ ಕಾಲ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸಿದ ನಂತರ ಬರುತ್ತದೆ. ಚತುರಾಶ್ರಮಗಳಲ್ಲಿ ಎರಡನೆಯದಾದ ಬ್ರಹ್ಮಚರ್ಯದ ನಂತರವೂ ನೇರವಾಗಿ ಈ ಆಶ್ರಮಕ್ಕೆ ಸಾಗಬಹುದಾಗಿದೆ, ಸಾಗಿದವರಿದ್ದಾರೆ. 
     ಮಾನವನ ಆಯಸ್ಸನ್ನು ಒಂದು ನೂರು ವರ್ಷಗಳು ಎಂದಿಟ್ಟುಕೊಂಡರೆ ಮೊದಲ 25 ವರ್ಷಗಳು ಬ್ರಹ್ಮಚರ್ಯ, ನಂತರದ 25 ವರ್ಷಗಳನ್ನು ಗೃಹಸ್ಥರಾಗಿ ಕಳೆದು, ನಂತರದ 51 ರಿಂದ 75 ವರ್ಷಗಳು ವಾನಪ್ರಸ್ಥದ ಕಾಲ. ಅದರ ನಂತರ ಸಂನ್ಯಾಸಾಶ್ರಮ. ಇರುವ ಬಂಧಗಳು, ಬಂಧನಗಳನ್ನು ಕಳೆದುಕೊಂಡು ಜೀವಿಸಲು ಅತಿ ಅಗತ್ಯವಾದಷ್ಟನ್ನು ಮಾತ್ರ ಹೊಂದಿ ಆಧ್ಯಾತ್ಮಿಕ ಸಾಧನೆಗೆ ತೊಡಗುವ ಕಾಲವೇ ವಾನಪ್ರಸ್ಥವೆನಿಸುವುದು. ಇದು ಪರಿವರ್ತನಾ ಕಾಲ. 
     ಗೃಹಸ್ಥನಿಗೆ ವಯಸ್ಸಾದ ನಂತರ ಅವನ ಚರ್ಮ ಸುಕ್ಕುಗಟ್ಟುತ್ತದೆ, ತಲೆಯ ಕೂದಲು ಬೆಳ್ಳಗಾಗುತ್ತದೆ ಅಥವ ಉದುರಿ ಬೋಳಾಗುತ್ತದೆ. ಮೊಮ್ಮಕ್ಕಳು ಜನಿಸಿರುತ್ತಾರೆ. ಆಗ ವಾನಪ್ರಸ್ಥಕ್ಕೆ ತೆರಳಲು ಸಮಯ ಪ್ರಶಸ್ತವಾಗಿರುತ್ತದೆ. ಕೌಟುಂಬಿಕ ಬಂಧನಗಳನ್ನು ಕಳಚಿಕೊಂಡು ಈ ಹಾದಿಯಲ್ಲಿ ಕ್ರಮಿಸುವ ಸಮಯದಲ್ಲಿ ಪತ್ನಿ ಬಯಸಿದರೆ ಅವನ ಜೊತೆಗೆ ಹೋಗಬಹುದು, ಆದರೆ ಸಹಚಾರಿಣಿಯಾಗಿ ಮತ್ತು ಸಹಸಾಧಕಿಯಾಗಿ ಮಾತ್ರ. ಹಾಗೆ ಹೊರಡುವಾಗ ಮನಸ್ಸು ಶಾಂತವಿರಬೇಕು. ಅತಿ ಕಡಿಮೆ ವಸ್ತ್ರಗಳನ್ನು ಧರಿಸುವುದು, ಕಾಡಿನಲ್ಲಿ ದೊರೆಯುವ ಸೊಪ್ಪು-ಸದೆಗಳು, ಗೆಡ್ಡೆ-ಗೆಣಸುಗಳನ್ನು  ಜೀವಾಧಾರಕ್ಕೆ ಸೇವಿಸುವುದು, ದೈಹಿಕ ಕಾಮನೆಗಳಿಂದ ದೂರವಿರುವುದು ಹಿಂದೆ ವಾನಪ್ರಸ್ಥಿಗಳು ಅನುಸರಿಸುತ್ತಿದ್ದ ಕ್ರಮವೆಂದು ಕೇಳಿದ್ದೇವೆ. ಪುಣ್ಯಕ್ಷೇತ್ರಗಳಿಗೆ ಪ್ರವಾಸವನ್ನೂ ಸಹ ಸಾಧನೆಯ ಅಂಗವಾಗಿ ಮಾಡುತ್ತಾರೆಂದು ಹೇಳುತ್ತಾರೆ. ಈಗಲೂ ಹಿಮಾಲಯದ ತಪ್ಪಲಿನಲ್ಲಿ ಇಂತಹವರು ಸಿಗಬಹುದು. ಆತ್ಮಾನುಸಂಧಾನ, ಆತ್ಮಚಿಂತನೆಗಳನ್ನು ನಡೆಸುತ್ತಾ ಕೊನೆಗೊಮ್ಮೆ ಅವರು ಸಂನ್ಯಾಸಿಯ ಅರ್ಹತೆ ಪಡೆಯುವರು. 
     ವಾನಪ್ರಸ್ಥಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಕೆಲವು ನಿಬಂಧನೆಗಳೂ ಇವೆಯೆನ್ನುತ್ತಾರೆ. ಭೂಮಿಯನ್ನು ಉತ್ತಿ. ಬಿತ್ತಿ ಬೆಳೆದ ಧಾನ್ಯಗಳು, ಪೂರ್ಣ ಕಳಿಯದ ಹಣ್ಣುಗಳು ಮತ್ತು ಬೇಯಿಸಿದ ಪದಾರ್ಥಗಳನ್ನು ಅವರು ಸೇವಿಸಬಾರದೆನ್ನುತ್ತಾರೆ. ತಿನ್ನುವ ಪದಾರ್ಥಗಳನ್ನು ಸಂಗ್ರಹಿಸಿಡಬಾರದು. ಸಮಯ, ಸ್ಥಳ ಮತ್ತು ತನ್ನ ಶಕ್ತಿ ಅನುಸರಿಸಿ ಜೀವಾಧಾರಕ್ಕೆ ಅವಶ್ಯಕ ಸಂಗತಿಗಳನ್ನು ಮಾತ್ರ ಪಡೆಯಬೇಕು. ಯಾವ ಕಾರಣಕ್ಕೂ ಅಗತ್ಯಕ್ಕಿಂತ ಹೆಚ್ಚು ತೆಗೆದುಕೊಳ್ಳಬಾರದು. ಬಿಸಿಲಿನಲ್ಲಿ ಪೂರ್ಣವಾಗಿ ಮಾಗಿದ ಫಲಗಳನ್ನು ಮಾತ್ರ ಸೇವಿಸಬೇಕು. ಒಂದು ಗುಡಿಸಲು ನಿರ್ಮಿಸಿಕೊಂಡು ಅಲ್ಲಿ ಅಥವ ಬೆಟ್ಟದ ಗುಹೆಯಲ್ಲಿ ವಾಸವಿದ್ದು ಪವಿತ್ರಾಗ್ನಿಯನ್ನು ರಕ್ಷಿಸಬೇಕು. ಗಾಳಿ, ಬೆಂಕಿ, ಮಳೆ, ಬಿಸಿಲು, ಹಿಮ, ಇತ್ಯಾದಿಗಳನ್ನು ಸಹಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ಇದಕ್ಕಾಗಿ ಸುಡುಬೇಸಿಗೆಯಲ್ಲಿ ಸುತ್ತಲೂ ಬೆಂಕಿ ಉರಿಸಿ ಮಧ್ಯದಲ್ಲಿ ಕುಳಿತು ಧ್ಯಾನ(ತಪಸ್ಸು) ಮಾಡಬೇಕು. ಮಳೆಗಾಲದಲ್ಲಿ ಸುರಿಯುವ ಮಳೆಯಲ್ಲಿ ಅದರ ಆರ್ಭಟವನ್ನು ಸಹಿಸಿ ಹೊರಗೆ ಇದ್ದು, ಚಳಿಗಾಲದಲ್ಲಿ ಕೊರೆಯುವ ಹೆಪ್ಪುಗಟ್ಟಿದ ನೀರಿನಲ್ಲಿ ಕತ್ತಿನವರೆಗೆ ನೀರಿನಲ್ಲಿ ಮುಳುಗಿದ್ದು ಧ್ಯಾನಸ್ಥರಾಗಬೇಕು. ಕೂದಲು, ಮೀಸೆ, ಉಗುರುಗಳನ್ನು ಕತ್ತರಿಸಬಾರದು, ಜಟೆಗಟ್ಟಿದ ಕೂದಲನ್ನು ತಲೆಯ ಮೇಲೆ ಎತ್ತಿಕಟ್ಟಬೇಕು. ಅಕಾಲಿಕವಾಗಿ ಮಲ, ಮೂತ್ರ ವಿಸರ್ಜಿಸಬಾರದು. ಮಲಿನವಾದ ಶರೀರದ ಶುದ್ಧತೆ ಬಗ್ಗೆ ಚಿಂತಿಸಬಾರದು. ದಿನಕ್ಕೆ 3 ಸಲ ಸ್ನಾನ ಮಾಡುವುದರಿಂದ ತೃಪ್ತನಾಗಬೇಕು. ನೆಲದ ಮೇಲೆ ಮಲಗಬೇಕು. ಒಂದು ಕುಡಿಯುವ ನೀರಿನ ಮಡಿಕೆ ಮತ್ತು ಒಂದು ದಂಡ ಹಿಡಿದಿರಬೇಕು. ವಾನಪ್ರಸ್ಥಿ 12 ವರ್ಷಗಳು ಅಥವ 8 ವರ್ಷಗಳು ಅಥವ 4 ವರ್ಷಗಳು ಅಥವ 2 ವರ್ಷಗಳು ಅಥವ ಕನಿಷ್ಠ 1 ವರ್ಷವಾದರೂ ಕಾಡಿನಲ್ಲಿ ವಾಸಿಸಬೇಕೆನ್ನುತ್ತಾರೆ. ಅತಿ ಸರಳವಾಗಿ ತೋರಿದರೂ ಕಠಿಣವಾದ ನಿಯಮಗಳಿಂದ ವಿಚಲಿತನಾಗಬಾರದು. ಸಾಮಯಿಕವಾಗಿ ಅಕ್ಕಿ ಅಥವ ಕಾಡಿನಲ್ಲಿ ದೊರೆತ ಧಾನ್ಯಗಳನ್ನು ಅರ್ಪಿಸಿ ಹೋಮ, ಹವನ, ಅಗ್ನಿಹೋತ್ರ ಮಾಡಬೇಕು. ಯಾವ ಕಾರಣಕ್ಕೂ ಪ್ರಾಣಿಬಲಿ ಕೊಡಬಾರದು.  
     ವಯಾಧಿಕ್ಯದಿಂದ ಅಥವ ಕಾಯಿಲೆಗಳಿಂದ ಅನುಷ್ಠಾನ ಕಷ್ಟವೆನಿಸಿದಾಗ ಆಹಾರ ಸೇವಿಸದೆ ಉಪವಾಸವಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಅಂತಹ ಸಂದರ್ಭದಲ್ಲಿ ನಡುಗುವ ಶರೀರದ ಕಾರಣದಿಂದ ಅನುಷ್ಠಾನ ಮಾಡಲಾಗದವರು, ಶರೀರಧಾರಣೆ ಕಷ್ಟವಾದಾಗ ಅಗ್ನಿಯನ್ನು ಧ್ಯಾನದ ಮೂಲಕ ಹೃದಯಸ್ಥ ಮಾಡಿಕೊಂಡು ಅದರೊಳಗೆ ಪ್ರವೇಶಿಸಿ ಶರೀರ ತ್ಯಾಗ ಮಾಡುವರು. ಕೆಲವು ಸಂತ ವಾನಪ್ರಸ್ಥಿಗಳು ಕಠಿಣ ವ್ರತಗಳನ್ನು ಆಚರಿಸುತ್ತಾ ಸೊರಗಿ ಕೇವಲ ಚರ್ಮ ಮತ್ತು ಮೂಳೆಗಳ ಹಂದರದಂತೆ ತೋರುತ್ತಾರೆ. ಇಂತಹ ಕಠಿಣ ಮತ್ತು ದೀರ್ಘವಾದ ಸಾಧನೆ ಮಾಡಿ ಮೋಕ್ಷಕ್ಕೆ ಹಂಬಲಿಸುವ ಬದಲು, ಪ್ರಾಪಂಚಿಕ ಸಂಗತಿಗಳನ್ನು ಪಡೆಯಲು ಹಂಬಲಿಸುವವರು ದೊಡ್ಡ ಮೂರ್ಖರೇ ಸರಿ. ಅಸುರರು ದೀರ್ಘ ತಪಸ್ಸು ಮಾಡಿ ಪಡೆದರೆಂದು ಹೇಳಲಾಗುವ ಅಸುರೀ ಸಾಧನೆಗಳನ್ನು ಈ ಸಾಲಿಗೆ ಸೇರಿಸಬಹುದು. ತಾನು ಯಾವುದಕ್ಕಾಗಿ ಸಾಧನೆ ಮಾಡುತ್ತಿದ್ದಾನೋ ಅದರ ಫಲವನ್ನೂ ಬಯಸದ ಸ್ಥಿತಿ ತಲುಪಿದಾಗ, ಅಂದರೆ ಮನಸ್ಸಿನ ಹಿಡಿತದಿಂದ ಪೂರ್ಣವಾಗಿ ಹೊರಬಂದಾಗ ಸಂನ್ಯಾಸಾಶ್ರಮಕ್ಕೆ ಕಾಲಿಡಬಹುದಾಗಿದೆ. ವಾನಪ್ರಸ್ಥಿ ತನ್ನತನದ ಹಿರಿಮೆಯಿಂದ ಹೊರಬಂದು ವಿನೀತಭಾವ ಹೊಂದಲು ಇತರರ ಕರುಣೆಯಿಂದ, ದೀನ ರೀತಿಯಲ್ಲಿ ಪಡೆದ ಧಾನ್ಯದಿಂದ ಜೀವಿಸುತ್ತಾನೆ. ವಾನಪ್ರಸ್ಥದ ಕುರಿತ ಈ ಕೆಲವು ವಿವರಗಳನ್ನು ಶ್ರೀಮದ್ಭಾಗವತದಲ್ಲಿ ಇರುವ ಅಂಶಗಳನ್ನು ಆಧರಿಸಿ ಬರೆದಿರುವೆ.
     ವೇದದ ನಾಲ್ಕು ಅಂಗಗಳಾದ ಬ್ರಾಹ್ಮಣ, ಸಂಹಿತಾ, ಅರಣ್ಯಕ ಮತ್ತು ಉಪನಿಷತ್ತುಗಳಲ್ಲಿ ಅರಣ್ಯಕವು ವಾನಪ್ರಸ್ಥಕ್ಕೆ ಸಂಬಂಧಿಸಿದೆ. ವಾನಪ್ರಸ್ಥ ಮತ್ತು ಸಂನ್ಯಾಸಗಳು ಎರಡೂ ವೈರಾಗ್ಯ ಪ್ರಾಧಾನ್ಯ ಆಶ್ರಮಗಳು. ವಾನಪ್ರಸ್ಥಿ ಸಮಾಜದ ಸೇವೆ ಮಾಡುತ್ತಾ ಮುಕ್ತಿ ಹೊಂದುವ ಸಿದ್ಧತೆ ಮಾಡಿಕೊಳ್ಳಬೇಕು. ಧರ್ಮ, ಅರ್ಥ, ಕಾಮ, ಮೋಕ್ಷಗಳು ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸಂನ್ಯಾಸಗಳಲ್ಲಿ ಹಾಸುಹೊಕ್ಕಾಗಿವೆ. ಸಂನ್ಯಾಸಿಯು ಬ್ರಹ್ಮಚಾರಿ, ಗೃಹಸ್ಥ ಅಥವ ವಾನಪ್ರಸ್ಥಿಯಿಂದ ಹೊರತಾದವನಲ್ಲ/ ಬೇರ್ಪಟ್ಟವನಲ್ಲ. ಬ್ರಹ್ಮಚರ್ಯವು ಬೀಜರೂಪವಾಗಿದ್ದು ಗೃಹಸ್ಥಾಶ್ರಮದ ವಾಸ್ತವಿಕ ಅನುಭವವಾಗಿ ಬೆಳೆಯುತ್ತದೆ ಮತ್ತು ಅದು ವಾನಪ್ರಸ್ಥದ ವೈರಾಗ್ಯವಾಗಿ ಮುಂದುವರೆಯುತ್ತದೆ. ಹಾಗೂ, ಅದು ಮುಂದುವರೆದು ಸಂನ್ಯಾಸದ ಸಾರವಾಗಿ ಫಲಿತಗೊಳ್ಳುತ್ತದೆ.
     ಸನಾತನ ಧರ್ಮದ ಮಹತ್ವ ಅರಿವಾಗುವುದು ಈ ಆಶ್ರಮಗಳ ಸರಿಯಾದ ಅನುಷ್ಠಾನದಿಂದ. ಬ್ರಹ್ಮಚರ್ಯದಲ್ಲಿ ಒಬ್ಬ ಬಾಲಕ/ಬಾಲಿಕೆ ಗುರುಕುಲಕ್ಕೆ ಸೇರಿ ತನಗೆ ಬೇಕೆನಿಸಿದ ಜ್ಞಾನದ ಅರಿವನ್ನು ತಾನು ಯಾವ ಸಮಾಜಕ್ಕೆ ಸೇರಿದ್ದಾನೋ ಆ ಸಮಾಜದ ಹಿತವನ್ನು ಗಮನದಲ್ಲಿರಿಸಿ ಪಡೆಯುತ್ತಾನೆ/ಳೆ. ಈ ಹಂತದಲ್ಲಿ ಪಡೆಯುವ ಜ್ಞಾನ ಮುಂದಿನ ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸಾಶ್ರಮಗಳಿಗೆ ತಳಹದಿಯಂತಿರುತ್ತದೆ. ವಾನಪ್ರಸ್ತವು ಪ್ರಾಪಂಚಿಕ ಆಕರ್ಷಣೆಗಳಿಂದ ದೂರವಿರಲು ಮಾಡುವ ಸಾಧನೆಯ ಅವಧಿಯೆನ್ನಬಹುದು. 
     ಗೃಹಸ್ಥಾಶ್ರಮವು ಸಮಾಜದ ತಳಪಾಯವಿದ್ದಂತೆ. ಇತರ ಮೂರು ಆಶ್ರಮಗಳಿಗೆ ತಾಯಿಬೇರು ಇದೇ ಆಗಿದೆ. ಮಕ್ಕಳು ಬ್ರಹ್ಮಚಾರಿಗಳಾಗುತ್ತಾರೆ, ಪೋಷಕರು ವಾನಪ್ರಸ್ಥಕ್ಕೆ ಪ್ರವೇಶಿಸುತ್ತಾರೆ ಮತ್ತು ಅವರು ಲೋಕಹಿತ ಬಯಸುವ ಸಂನ್ಯಾಸಿಗಳಿಗೆ ಆಶ್ರಯ ಕೊಡುವವರೂ ಆಗಿರುತ್ತಾರೆ. ವಾನಪ್ರಸ್ಥದ ಅವಧಿಯಲ್ಲಿ ಮಕ್ಕಳು ಬೆಳೆದವರಾಗಿರುತ್ತಾರೆ ಮತ್ತು ಕೌಟುಂಬಿಕ ಜವಾಬ್ದಾರಿ ಕಡಿಮೆಯಾಗುತ್ತದೆ. ಸಾಮಾಜಿಕ ಹಿತದ ಕೆಲಸಗಳನ್ನು ಮಾಡಲು ಅವಕಾಶವಿರುತ್ತದೆ. ಈ ಅವದಿಯು ಕಿರಿಯರಿಗೆ, ಗೃಹಸ್ಥರಿಗೆ ಮತ್ತು ಸಂನ್ಯಾಸಿಗಳಿಗೆ ಬಲವಾದ ಆಧಾರರೂಪಿಯಾಗಿರಲು ಸೂಕ್ತವಾಗಿರುತ್ತದೆ. ಜ್ಞಾನವನ್ನು ಸಂಪಾದಿಸಿ ದೇಶಕ್ಕೆ, ಸಮಾಜಕ್ಕೆ ಉಪಕಾರಿಯಾಗಿರಬೇಕಾದ ಹಂತವಿದು. ಕೆಲವರು ನೇರವಾಗಿ ಸಂನ್ಯಾಸಾಶ್ರಮಕ್ಕೆ ಪ್ರವೇಶಿಸಿ ನಂತರದಲ್ಲಿ ಪ್ರಾಪಂಚಿಕ ಆಕರ್ಷಣೆಗಳಿಗೆ ಒಳಗಾಗಿ ಕೆಳಗೆ ಬಿದ್ದಿರುವುದನ್ನೂ ಕಂಡಿದ್ದೇವೆ. ಹಾಗಾಗಿ ಗೃಹಸ್ಥ, ವಾನಪ್ರಸ್ಥದ ಅವಧಿಯನ್ನು ಪೂರ್ಣಗೊಳಿಸಿ ಪ್ರಾಪಂಚಿಕ ಆಕರ್ಷಣೆಗಳಿಂದ ಮುಕ್ತರಾದ ನಂತರವೇ ಸಂನ್ಯಾಸಿಗಳಾಗುವುದು ಸಮಾಜದ ಮತ್ತು ಸ್ವಂತದ ಹಿತದಿಂದ ಒಳ್ಳೆಯದು. ವಾನಪ್ರಸ್ಥಕ್ಕೆ ತೆರಳುವವರಿಂದ ಇನ್ನೊಂದು ಲಾಭವೂ ಇದೆ. ವೃದ್ಧರ ನಿವೃತ್ತಿಯಿಂದ ಯುವಕರಿಗೆ ಸಹಜವಾಗಿ ಅಧಿಕಾರ, ಸಾಧನ ಸೌಲಭ್ಯಗಳು ಸಿಗುತ್ತವೆ. ಅಥರ್ವ ವೇದದ ಈ ಮಂತ್ರ ಹೀಗೆ ಹೇಳುತ್ತದೆ:
ಆ ನಯೈತಮಾ ರಭಸ್ಯ ಸುಕೃತಾಂ ಲೋಕಮಪಿ ಗಚ್ಛತು ಪ್ರಜಾನನ್ |
ತೀರ್ತ್ವಾ ತಮಾಂಸಿ ಬಹುಧಾ ಮಹಾಂತ್ಯಜೋ ನಾಕಮಾ ಕ್ರಮತಾಂ ತೃತೀಯಮ್ || (ಅಥರ್ವ.೯.೫.೧.)
     ಅರ್ಥ: ಓ ಗೃಹಸ್ಥ! ಈ ನಿನ್ನ ಆತ್ಮನನ್ನು ಮುನ್ನಡೆಸು. ಸಾಧನೆಯನ್ನಾರಂಭಿಸು. ನಿನ್ನ ಆತ್ಮನು, ಚೆನ್ನಾಗಿ ಜ್ಞಾನ ಗಳಿಸಿ, ಪುಣ್ಯವಂತರ ಸ್ಥಿತಿಯನ್ನು ಮುಟ್ಟಲಿ. ಆಜನ್ಮನಾದ, ನಿತ್ಯನಾದ ನಿನ್ನ ಅತ್ಮನು ಅನ್ಯ ಸಾಧನೆಗಳಿಂದ, ಮಹಾ ಅಂಧಕಾರಗಳನ್ನು ದಾಟಿ, ಮೂರನೆಯದಾದ ವಾನಪ್ರಸ್ಥದ ಸುಖಮಯ ಆಶ್ರಮವನ್ನು ಆಕ್ರಮಿಸಲಿ.
     ಎಲ್ಲಾ ವಯೋವೃದ್ಧರಿಗೂ ಜೀವನದ ಅಂತಿಮ ದಿನಗಳನ್ನು ಪ್ರಾಪಂಚಿಕ ಆಕರ್ಷಣೆಗಳಿಂದ ದೂರವಾಗಿ ಕಳೆಯುವ ಮನಸ್ಸು ಬರಲಾರದು. ಒಂದು ಹಾಸ್ಯಪ್ರಸಂಗ ಇಲ್ಲಿ ನೆನಪಾಗುತ್ತಿದೆ. ಒಬ್ಬ ವ್ಯಾಪಾರಿ ಇನ್ನೇನು ಆಗಲೋ, ಈಗಲೋ ಎಂಬಂತೆ ಸಾಯುವ ಸ್ಥಿತಿಯಲ್ಲಿದ್ದಾಗ, ಅವನ ಹತ್ತಿರವಿರಲು ಮಗ ಮನೆಗೆ ಧಾವಿಸಿಬರುತ್ತಾನೆ. ಅವನಿಗೆ ಏನೋ ಹೇಳಬೇಕೆಂದು ಆ ವ್ಯಾಪಾರಿ ಬಯಸಿದರೂ ಗಂಟಲಿನಿಂದ ಸ್ವರ ಹೊರಡದೆ ಗೊರಗೊರ ಶಬ್ದ ಬರುತ್ತಿದೆ. ವೈದ್ಯರ ಶತಪ್ರಯತ್ನದಿಂದ ಕೊನೆಗೆ ಮಾತನಾಡಿದ ಅವನು ಮಗನಿಗೆ "ಇಷ್ಟು ಬೇಗ ಏಕೆ ಅಂಗಡಿ ಬಾಗಿಲು ಹಾಕಿದೆ?" ಎಂದು ಕೇಳಿದ್ದೇ ಅವನ ಜೀವನದ ಕೊನೆಯ ಮಾತಾಗಿತ್ತು! ಗೋಂದಾವಲೀ ಮಹಾರಾಜರು ಉಪನ್ಯಾಸವೊಂದರಲ್ಲಿ ಹೇಳಿದ ಪ್ರಸಂಗ (ಧ್ವನಿಮುದ್ರಿಕೆಯಲ್ಲಿ ಕೇಳಿದ್ದು) ಇಲ್ಲಿ ಉಲ್ಲೇಖಿಸಬಹುದು. ಒಬ್ಬ ಭಕ್ತರ ಮನೆಗೆ ಅವರು ಹೋಗಿದ್ದಾಗ ಆ ಮನೆಯಲ್ಲಿದ್ದ 90 ವರ್ಷ ದಾಟಿದ್ದ ವೃದ್ಧೆಯೊಬ್ಬರು ಅವರನ್ನು ಉದ್ದೇಶಿಸಿ, "ಸ್ವಾಮಿ, ನನಗೆ ಇನ್ನು ಯಾವ ಆಸೆಯೂ ಇಲ್ಲ. ನಿಮ್ಮ ಪಾದದ ಕೆಳಗೆ ತಲೆಯಿಟ್ಟು ಈ ಜೀವನ ಮುಗಿಸಬೇಕು ಎಂಬುದೊಂದೇ ಆಸೆ" ಎಂದಳು. ಅದಕ್ಕೆ ಅವರು, "ಆಗಲಿ, ಅದಕ್ಕೇನಂತೆ? ಹಾಗೇ ಮಾಡಿ" ಎಂದು ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತಾಗ ಗಾಬರಿಯಾದ ಆ ವೃದ್ಧೆ, "ಅಯ್ಯೋ, ಸ್ವಾಮಿ, ಈಗಲೇ ಅಲ್ಲ. ನನ್ನ ಮೊಮ್ಮಗಳ ಮದುವೆ ಆಗಬೇಕು. ಅವಳ ಮಗುವನ್ನು ಎತ್ತಿ ಮುದ್ದಾಡಬೇಕು. ನಾಮಕರಣ ಆಗಬೇಕು. ನಂತರ ನನ್ನ ಈ ಆಸೆ ಈಡೇರಿಸಿಕೊಳ್ಳುತ್ತೇನೆ" ಅಂದಳಂತೆ! ಸಾಯುವ ಕೊನೆಯ ಕ್ಷಣದವರೆಗೂ ರಾಜಕೀಯ ಮಾಡುತ್ತಾ ಅಧಿಕಾರಕ್ಕಾಗಿ ಹಪಹಪಿಸುವ ಇಂದಿನ ರಾಜಕಾರಣಿಗಳೂ ಇದೇ ವರ್ಗಕ್ಕೆ ಸೇರಿದವರು. ಹಾಗಾಗಿ ಏನು ಬದಲಾವಣೆ ನಿರೀಕ್ಷಿಸಲಾದೀತು? ಇರಲಿ ಬಿಡಿ, ವಾನಪ್ರಸ್ಥ ಬಯಸದವರ ಮಾತನ್ನು ಮುಂದುವರೆಸುವುದಿಲ್ಲ. 
     ಇಂದಿನ ಕಾಲಮಾನದ ಪರಿಸ್ಥಿತಿಯಲ್ಲಿ ವಾನಪ್ರಸ್ಥದ ಮೂಲ ಪರಿಕಲ್ಪನೆಯನ್ನು ಸೂಕ್ತವಾಗಿ ಪರಿವರ್ತಿಸಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. 45-50ರ ವಯಸ್ಸಿನಲ್ಲಿ ಇರುವವರು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಮುಂಚಿತವಾಗಿ ಯೋಜನೆ ಮಾಡಿಕೊಂಡು, ಮಾನಸಿಕವಾಗಿ ಸಿದ್ಧರಾಗಿದ್ದಲ್ಲಿ ನಿವೃತ್ತರಾದ ಕೂಡಲೇ ಉಂಟಾಗಬಹುದಾದ ಶೂನ್ಯಭಾವದಿಂದ ಹೊರಬರಬಹುದು. ನಿವೃತ್ತ ಜೀವನವನ್ನು ಒಳ್ಳೆಯ ರೀತಿಯಲ್ಲಿ ಕಳೆಯುವ ಸಾಧನವಾಗಿ ಮಾಡಿಕೊಳ್ಳುವುದನ್ನು ವಾನಪ್ರಸ್ಥವೆನ್ನೋಣ. ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ಒಳಿತನ್ನು ಕಾಣುವ ಮನೋಭಾವ ಬೆಳೆಸಿಕೊಂಡು, ಅಂತರಂಗ, ಬಹಿರಂಗಗಳಲ್ಲಿ ಸಾಮ್ಯತೆ ಸಾಧಿಸುವ ಕ್ರಿಯೆಯಲ್ಲಿ ತೊಡಗುವುದು ಕಡಿಮೆ ಸಾಧನೆಯಲ್ಲ. ಪ್ರಾಪಂಚಿಕ ಆಕರ್ಷಣೆಗಳಿಂದ ವಿಮುಕ್ತರಾಗಿ ಸರಳ ವಸ್ತ್ರಗಳನ್ನು ಧರಿಸಿ, ಸರಳ ಜೀವನವನ್ನು ನಡೆಸಿ ಆತ್ಮಚಿಂತನೆಯಲ್ಲಿ ತೊಡಗಬಹುದಾಗಿದೆ. ತನ್ನ ಚಿಂತನೆ, ಜ್ಞಾನಾಭಿವೃದ್ಧಿಗಳಿಗೆ ಪೂರಕವಾಗುವ ಸತ್ಸಂಗಗಳಲ್ಲಿ ಪಾಲುಗೊಳ್ಳುವುದು, ಅಂತಹ ಆದರ್ಶದ ಜೀವನ ಸಾಗಿಸುತ್ತಿರುವ ಧೀಮಂತರ ಮಾರ್ಗದರ್ಶನ ಪಡೆಯುವುದು ಸಹಕಾರಿಯಾಗುತ್ತದೆ. ಇಂತಹವರು ಸಹಜವಾಗಿ ದೇಶಾತೀತ, ಭಾಷಾತೀತ, ಜನಾಂಗಾತೀತ, ಮತಾತೀತ ಮಾನವರಾಗುತ್ತಾರೆ. ಕೌಟುಂಬಿಕ ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸಿ ನಿರ್ಲಿಪ್ತ, ನಿಶ್ಚಿಂತರಾಗುವುದು ಮೊದಲ ಕ್ರಮವಾಗಬೇಕು. ನಂತರದಲ್ಲಿ ಸಾಧ್ಯವಾದಷ್ಟು ಪ್ರಶಾಂತ ಕೊಠಡಿ ಅಥವ ಸ್ಥಳದಲ್ಲಿ ಇರಬೇಕು. ಕುಟುಂಬದವರು ಕೌಟುಂಬಿಕ ಸಮಸ್ಯೆ ಅಥವ ವಿಚಾರಗಳಿಗೆ ಸಲಹೆ, ಸಹಕಾರ ಬಯಸಿದಲ್ಲಿ ಕೊಡಬೇಕು. ಆದರೆ ಅವುಗಳಲ್ಲಿ ವ್ಯಸ್ತರಾಗಬಾರದು. ಕೌಟುಂಬಿಕ ಸಾಮರಸ್ಯ, ಬಂಧುಗಳ ಸಾಮರಸ್ಯ, ಜನಾಂಗದ ಸಾಮರಸ್ಯ, ಸಕಲ ಜೀವಕೋಟಿಯ ಸಾಮರಸ್ಯದ ಗುರಿಯಿರಬೇಕು. ಈ ದಿಸೆಯಲ್ಲಿ ಎಷ್ಟು ಸಾಧಿಸಲು ಸಾಧ್ಯ, ಸಾಧಿಸಿದೆವು ಎಂಬುದು ಮಹತ್ವದ್ದಲ್ಲ. ಒಂದು ಗಾದೆಯಿದೆ, ಸಾವಿರ ಮೈಲುಗಳ ಪಯಣ ಪ್ರಾರಂಭವಾಗುವುದು ಒಂದು ಹೆಜ್ಜೆ ಮುಂದಿಡುವುದರಿಂದ. ಸಣ್ಣ ಕೌಟುಂಬಿಕ ವ್ಯಾಪ್ತಿಯಿಂದ ಹೊರಬಂದು ವಿಶ್ವವೇ ಒಂದು ಕುಟುಂಬವಾಗಿದ್ದು ತಾನು ಅದರ ಭಾಗವೆಂದು ಭಾವಿಸುವ ಮನೋವೃತ್ತಿ ಬೆಳೆಸಿಕೊಳ್ಳಬೇಕು. ಸರ್ವರ ಹಿತ ಬಯಸುವ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು, ಬೆಂಬಲಿಸಬೇಕು. ಮನೋವಿಕಾರಗಳನ್ನು ನಿಯಂತ್ರಿಸಲು ಸಾಧನೆ ನಡೆಸಬೇಕು. ದುಷ್ಟ ವಿಚಾರಗಳಿಂದ ದೂರವಿದ್ದು, ಸದ್ವಿಚಾರಗಳ ಅನುಸರಣೆ, ಪ್ರಸರಣೆಗೆ ಗಮನ ಕೊಡಬೇಕು. ಒಳಿತನ್ನು, ಒಳ್ಳೆಯ ಸಂಗತಿಗಳನ್ನು ಗುರುತಿಸಿ ಗೌರವಿಸಬೇಕು. ಸಾಧ್ಯವಾದಷ್ಟೂ ಇತರರಿಗೆ ಹೊರೆಯಾಗದಂತೆ ಬಾಳಬೇಕು. 
     ಸಾಮಾನ್ಯವಾಗಿ ಒಬ್ಬೊಬ್ಬರಿಗೆ ಒಂದೊಂದು ವೃತ್ತಿ, ಪ್ರವೃತ್ತಿ, ಹವ್ಯಾಸಗಳು ತೃಪ್ತಿ, ಸಂತೋಷ ಕೊಡುವ ಸಂಗತಿಯಾಗಿರುತ್ತದೆ. ನಿವೃತ್ತಿಯೆಂದರೆ ಅಂತಹ ಹವ್ಯಾಸಗಳನ್ನು ನಿಲ್ಲಿಸುವುದಲ್ಲ. ಬದಲಾಗಿ ಅವುಗಳನ್ನು ಇತರರ ಹಿತಕ್ಕಾಗಿ ಬಳಸುವುದು. ಆದರೆ ಅದು ಹಣಗಳಿಕೆಯ ಸಾಧನವಾಗಬಾರದಷ್ಟೆ. ಒಬ್ಬ ನಿವೃತ್ತ ಶಿಕ್ಷಕ ಬಡ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಬಹುದು, ಸಂಗೀತಗಾರ ತನ್ನ ಸಾಧನೆಯನ್ನು ಉತ್ತುಂಗಕ್ಕೇರಿಸುವುದರ ಜೊತೆಗೆ ಇತರರಿಗೆ ಸಂಗೀತ ಹೇಳಿಕೊಡಬಹುದು, ಬರಹಗಾರ ತನ್ನ ಅನುಭವದ ಸಾರಗಳನ್ನು ಬರಹದ ಮೂಲಕ ಅಭಿವ್ಯಕ್ತಿಸಬಹುದು ಮತ್ತು ಆ ಮೂಲಕ ಪರಿಣಾಮ ಬೀರಬಹುದು. ಇವೆಲ್ಲಾ ಉದಾಹರಣೆಗಳಷ್ಟೆ. ಕೇವಲ ಆತ್ಮತೃಪ್ತಿ ಮತ್ತು ಇತರರಿಗೆ ಮಾರ್ಗದರ್ಶಿಯಾಗಿರಲು ಮಾತ್ರ ಇವುಗಳ ಬಳಕೆಯಾಗಬೇಕು. ಪಡೆಯುವುದಕ್ಕಿಂತ ಕೊಡುವುದಕ್ಕೆ ಆದ್ಯತೆಯಿರಬೇಕು. ಅಷ್ಟಕ್ಕೂ ನಮ್ಮಲ್ಲಿರುವುದೆಲ್ಲಾ ನಾವು ಪಡೆದಿದ್ದೇ ಅಲ್ಲವೇ? ಬದುಕಿನ ಜಂಜಾಟದಲ್ಲಿ ತನ್ನತನಕ್ಕೆ ಅದುವರೆಗೆ ಸಿಕ್ಕದ ಆದ್ಯತೆಯನ್ನು ಜೀವನದ ಅಂತಿಮ ಘಟ್ಟದಲ್ಲಾದರೂ ಸಿಕ್ಕುವಂತೆ ನೋಡಿಕೊಂಡು 'ತಾನು ತಾನಾಗಿರಬೇಕು', ಅರ್ಥಾತ್ 'ತನಗಾಗಿ' ಬಾಳಬೇಕು. 'ತನಗಾಗಿ' ಬಾಳುವ ಈ ರೀತಿಯ ಬಾಳು"ಕೆಯಲ್ಲಿ ಸ್ವಾರ್ಥವಿರಲಾರದು. ಏಕೆಂದರೆ, ಅದು ಆತ್ಮತೃಪ್ತಿಯ, ಆತ್ಮ ಚಿಂತನೆಯ, ಆತ್ಮಾನುಸಂಧಾನದ ಮಾರ್ಗ. ಒಂದು ರೀತಿಯಲ್ಲಿ ಅದು ಹಿಂದೆ ಮಾಡಿರಬಹುದಾದ ತಪ್ಪುಗಳಿಗೆ ಪ್ರಾಯಶ್ಚಿತ್ತವೂ ಆದೀತು. ಇಂತಹ ಚಿಂತನೆಗಳನ್ನು ಹೊಂದಿದವರ ಭಾವನೆಯನ್ನು ಗೌರವಿಸಿ ಸಹಕರಿಸುವ ಕುಟುಂಬದ ಇತರ ಸದಸ್ಯರೂ ಅಭಿನಂದನಾರ್ಹರಾಗುತ್ತಾರೆ. ಇಂತಹ ಕ್ರಿಯೆಯಿಂದ ಯುವಕರಿಗೆ ಸಹಜವಾಗಿ ನಾಯಕತ್ವ ಸಿಗುವುದಲ್ಲದೇ, ಅವರಿಗೆ ಸುಯೋಗ್ಯ ಮಾರ್ಗದರ್ಶನ ಸಹ ನೀಡಿದಂತಾಗುತ್ತದೆ. 'ಯಾರಂತೆ ಅಂದರೆ ಊರಂತೆ' ಎಂದುಕೊಂಡು ಅದುವರೆಗೆ ಹೇಗೆ ಹೇಗೋ ಸಾಗಿಸಿದ ಜೀವನವನ್ನು ಮರೆತು, ಮೌಲ್ಯಗಳನ್ನು ಕಡೆಗಣಿಸಿ ಬಾಳಿದ ಹಿಂದಿನ ದಿನಗಳನ್ನು ಮರೆತು, ಕಷ್ಟವಾದರೂ ಸರಿ, ಜೀವನದ ಉಳಿದ ಕೊನೆಯ ದಿನಗಳಲ್ಲಿ ಮೌಲ್ಯಗಳಿಗೆ ಅಂಟಿಕೊಂಡು ಬಾಳಿದರೆ ಅದು ಜೀವಕೋಟಿಗೆ ನೀಡುವ, ಭಗವಂತ ಮೆಚ್ಚುವ ಅತಿ ದೊಡ್ಡ ಕಾಣಿಕೆಯಾಗುತ್ತದೆ.
-ಕ.ವೆಂ.ನಾಗರಾಜ್.

ಗುರುವಾರ, ಡಿಸೆಂಬರ್ 6, 2012

ವೇದೋಕ್ತ ಜೀವನ ಪಥ: ಬ್ರಹ್ಮಚರ್ಯಾದಿ ಚತುರಾಶ್ರಮಗಳು -೩: ವಾನಪ್ರಸ್ಥಾಶ್ರಮ


ಪಂಡಿತರು ವಾನಪ್ರಸ್ಥಾಶ್ರಮದ ಕುರಿತು ಹೇಳುತ್ತಾರೆ:
     ಪುರುಷನು ೫೦ ವರ್ಷದವನಾಗುವವರೆಗೆ ಗೃಹಸ್ಥಾಶ್ರಮದ ಮೂಲಕ ಜೀವಕೋಟಿಗೆ ಸೇವೆ ಸಲ್ಲಿಸುತ್ತಾ ಇದ್ದು, ಅನಂತರ ವಾನಪ್ರಸ್ಥಾಶ್ರಮದಲ್ಲಿ ಕಾಲಿಡಬೇಕು. ತನ್ನ ಪತ್ನಿ ಜೊತೆಗೆ ಬರುವುದಾದರೆ ಅವಳನ್ನೂ ಕರೆದುಕೊಂಡು, ಬಾರದ ಪಕ್ಷದಲ್ಲಿ ಅವಳನ್ನು ಪುತ್ರನ ವಶಕ್ಕೊಪ್ಪಿಸಿ, ಆಧ್ಯಾತ್ಮಿಕ ಸಾಧನೆಗಳು, ತತ್ತ್ವಧ್ಯಾನ, ಶಾಸ್ತ್ರಾಧ್ಯಯನಾದಿಗಳಿಂದ ತನ್ನನ್ನು ಸಂನ್ಯಾಸಾಶ್ರಮಕ್ಕೆ ಅರ್ಹನನ್ನಾಗಿ ಮಾಡಲು ಮತ್ತು ರಾಷ್ಟ್ರದ ಮಕ್ಕಳಿಗೆ ಸಮುಚಿತ ಶಿಕ್ಷಣವನ್ನು ನೀಡಲು ಪ್ರಶಾಂತ ಸ್ಥಳದಲ್ಲಿ ನೆಲೆಮಾಡಿಕೊಳ್ಳಬೇಕು. ಇದರಿಂದ ಆತ್ಮಿಕಶಕ್ತಿ ಬೆಳೆಯುವುದಲ್ಲದೇ, ದೇಶದ ಮುಂದಿನ ಪ್ರಜೆಗಳಾದ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವೂ ಸಿಕ್ಕುವುದು. ಏಕೆಂದರೆ, ಅರಗಿಸಿಕೊಂಡ, ಪರಿಪಕ್ವವಾದ ಜ್ಞಾನ, ಕ್ರಿಯಾತ್ಮಕ ಜೀವನದಿಂದ ಲಭಿಸಿದ ಸ್ವಾನುಭವಗಳು ಹಾಗೂ ತೀರಿಹೋದ ಸಾಂಸಾರಿಕ ಮಮತಾಮೋಹಗಳು, ಈ ಕಾರಣಗಳಿಂದ ಗುರುಕುಲಗಳಲ್ಲಿ ಅಧ್ಯಾಪನ ಮಾಡಲು ವಾನಪ್ರಸ್ಥಿಗಳೇ ಸರಿಯಾದ ಅಧಿಕಾರಿಗಳು. ಪತ್ನಿ ಜೊತೆಯಲ್ಲಿ ಬಂದ ಪಕ್ಷದಲ್ಲಿ ಅವಳು ಪತ್ನಿಯಾಗಿ ಅಲ್ಲ, ಸೋದರಿಯಂತೆ ಅಥವಾ ಸಹಕರ್ಮಚಾರಿಣಿಯಂತೆ ಜೊತೆಗಿದ್ದು, ತಾನೂ ಕೈಲಾದ ಸೇವೆ ಸಲ್ಲಿಸುವಳು, ತಾನೂ ಸಾಧನೆ ಮಾಡುವಳು.
ಆ ನಯೈತಮಾ ರಭಸ್ಯ ಸುಕೃತಾಂ ಲೋಕಮಪಿ ಗಚ್ಛತು ಪ್ರಜಾನನ್ |
ತೀರ್ತ್ವಾ ತಮಾಂಸಿ ಬಹುಧಾ ಮಹಾಂತ್ಯಜೋ ನಾಕಮಾ ಕ್ರಮತಾಂ ತೃತೀಯಮ್ || (ಅಥರ್ವ.೯.೫.೧.)
     ಓ ಗೃಹಸ್ಥ! [ಏತಂ ಆ ನಯ] ಈ ನಿನ್ನ ಆತ್ಮನನ್ನು ಮುನ್ನಡೆಸು. [ಆ ರಭಸ್ಯ] ಸಾಧನೆಯನ್ನಾರಂಭಿಸು. ನಿನ್ನ ಆತ್ಮನು, [ಪ್ರಜಾನನ್] ಚೆನ್ನಾಗಿ ಜ್ಞಾನ ಗಳಿಸಿ, [ಸುಕೃತಾಂ ಲೋಕಮಪಿ] ಪುಣ್ಯವಂತರ ಸ್ಥಿತಿಯನ್ನೂ, [ಗಚ್ಛತು] ಮುಟ್ಟಲಿ. [ಅಜಃ] ಆಜನ್ಮನಾದ, ನಿತ್ಯನಾದ ನಿನ್ನ ಅತ್ಮನು, [ಬಹುಧಾ] ಅನ್ಯ ಸಾಧನೆಗಳಿಂದ, [ಮಹಾಂತಿ ತಮಾಂಸಿ ತೀರ್ತ್ವಾ] ಮಹಾ ಅಂಧಕಾರಗಳನ್ನು ದಾಟಿ, [ತೃತೀಯಂ ನಾಕಂ ಆ ಕ್ರಮತಾಮ್] ಮೂರನೆಯದಾದ ವಾನಪ್ರಸ್ಥದ ಸುಖಮಯ ಆಶ್ರಮವನ್ನು ಆಕ್ರಮಿಸಲಿ.
     ನಾವು ಮೇಲೆ ಹೇಳಿರುವ ಲಾಭಗಳೇ ಅಲ್ಲದೇ ವೃದ್ಧರು ನಿವೃತ್ತರಾಗುವುದರಿಂದ, ಯುವಕರಿಗೆ ಆಜೀವಿಕಾ ಸಾಧನಗಳು ಸಹಜವಾಗಿಯೇ ಲಭಿಸುತ್ತವೆ.
ಹಿಂದಿನ ಲೇಖನಕ್ಕೆ ಲಿಂಕ್:ಗೃಹಸ್ಥಾಶ್ರಮ

ಬುಧವಾರ, ನವೆಂಬರ್ 21, 2012

ಆದರ್ಶದ ಬೆನ್ನು ಹತ್ತಿ…..




“ಇವರನ್ನು ಯಾಕೆ ಅರೆಸ್ಟ್ ಮಾಡಿದ್ದೀರಿ?”
“ಇವರು ಕೇಂದ್ರ ಸರ್ಕಾರದ ವಿರುದ್ಧವಾಗಿ ದೇಶದ್ರೋಹದ ಕೆಲಸಮಾಡ್ತಾ ಇದಾರೆ ಸ್ವಾಮಿ”
“ಇವರು ದೇಶದ್ರೋಹದ ಕೆಲಸ ಮಾಡ್ತಾ ಇದಾರೆ ಅನ್ನೋದಕ್ಕೆ ಸಾಕ್ಷಿ ಇದೆಯಾ?”
“ಸಾಕ್ಷಿ ಇದೆ ಸ್ವಾಮಿ”
“ಏನು ಸಾಕ್ಷಿ?”
“ಇವರ ಮನೆಯಲ್ಲಿ ಮಹಾತ್ಮಗಾಂಧಿಜಿಯ ಫೋಟೋ   ಇರುವ ಕರಪತ್ರಗಳು ಸಿಕ್ಕಿವೆ."
“ಹಾಸನದಲ್ಲಿ ಎಷ್ಟು ಮನೆಗಳಿವೆ?”
"ಗೊತ್ತಿಲ್ಲ."
"ಅಂದಾಜಾಗಿ ಹೇಳಿ ಪರವಾಗಿಲ್ಲ.ಇಪ್ಪತ್ತು ಸಾವಿರ ಮನೆಗಳು ಇರಬಹುದಾ? ಅದರಲ್ಲಿ ಎಷ್ಟು ಮನೆಗಳಲ್ಲಿ ಮಹಾತ್ಮಗಾಂಧಿಜಿಯ ಫೋಟೋ ಇರಬಹುದು? ಒಂದು ಐದು ನೂರು ಮನೆಗಳಲ್ಲಿ? ಹೋಗಲಿ, ಒಂದು ಇನ್ನೂರು ಮನೆಗಳಲ್ಲಿ?”
“ಇರಬಹುದು.”
“ಹಾಗಾದರೆ ಅವರನ್ನೆಲ್ಲಾ ಯಾಕೆ ಅರೆಸ್ಟ್ ಮಾಡಲಿಲ್ಲ? ಇವರನ್ನೇ ಯಾಕೆ ಮಾಡಿದಿರಿ?”
“ಫೋಟೋ ಮಾತ್ರಾ ಆಗಿದ್ರೆ ಅವರನ್ನು ಅರೆಸ್ಟ್ ಮಾಡ್ತಿರಲಿಲ್ಲ. ಫೋಟೋದ ಮೇಲೆ  ರಾಷ್ಟ್ರದ್ರೋಹದ ಬರಹ ಇತ್ತು”
£ÀÄ ಬರಹ ಇತ್ತು?”
“ಅಸತ್ಯ,ಅಧರ್ಮ,ದಬ್ಬಾಳಿಕೆಗೆ ತಲೆಬಾಗುವುದು ಹೇಡಿತನ ಅಂತಾ ಬರೆದಿತ್ತು.”
“ಅದು ಗಾಂಧೀಜಿ ನೇ ಹೇಳಿದ್ದಲ್ವಾ?"
"ಇರಬಹುದು."
"ಆ ಮಾತು ರಾಷ್ಟ್ರದ್ರೋಹ ಅನ್ನೋದಾದ್ರೆ ,  ಗಾಂಧೀಜಿಯವರೂ ರಾಷ್ಟ್ರದ್ರೋಹಿ ಆಗುತ್ತಾರೆ. ಹೋಗಲಿ ಬಿಡಿ, ಆ ಮಾತು ಹೇಗೆ    ರಾಷ್ಟ್ರದ್ರೋಹ ಆಗುತ್ತೆ ಅನ್ನೋದನ್ನು ವಿವರಿಸುತ್ತೀರಾ?"
"........."

    ಇದು ಯಾವುದೋ    ಸಿನೆಮಾ   ಡೈಲಾಗ್ ಅಲ್ಲ. 1975 ನೇ ಇಸವಿಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಾಸನದಲ್ಲೂ ಕೂಡ ತುರ್ತು ಪರಿಸ್ಥಿತಿ ವಿರುದ್ಧ ನಡೆದ ಹೋರಾಟದ ಸಂದರ್ಭದಲ್ಲಿ ಅಂದು ಭಾರತ ರಕ್ಷಣಾ ನಿಯಮ [DIR] ಮತ್ತು ಆಂತರಿಕ ಭದ್ರತಾ ಕಾಯದೆಯನ್ವಯ [MISA] ನೂರಾರು ಜನ ದೇಶ ಭಕ್ತರನ್ನು ಜೈಲಿಗೆ  ಕಳಿಸಲಾಗಿತ್ತು. DUÀ ಫುಡ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಕೆ.ವಿ.ನಾಗರಾಜರನ್ನೂ ಅರೆಸ್ಟ್  ಮಾಡಲಾಗಿತ್ತು. ನಾಗರಾಜರ ಕೇಸ್ ನಡೆಸುತ್ತಿದ್ದ   ವಕೀಲರಾದ ಶ್ರೀ ಬಿ.ಎಸ್.ವೆಂಕಟೇಶಮೂರ್ತಿಯವರು  ನ್ಯಾಯಾಲಯದಲ್ಲಿ  ಪಾಟೀಸವಾಲು ಮಾಡುವಾಗ   ಪೋಲೀಸರಿಗೆ ಹಾಕಿದ ಪ್ರಶ್ನೆಗಳಿವು.
      ಶ್ರೀ ಕೆ.ವಿ.ನಾಗರಾಜರು  ತುರ್ತುಪರಿಸ್ಥಿಯ ತಮ್ಮ ಹೋರಾಟದ ಘಟನೆಗಳನ್ನು  ಮುಂದಿನ ಪೀಳಿಗೆಗೆ ಮರೆಯಬಾರದೆಂಬ ಕಾರಣಕ್ಕಾಗಿ ದಾಖಲಿಸಿರುವ "ಆದರ್ಶದ ಬೆನ್ನು ಹತ್ತಿ…..” ಪುಸ್ತಕವು ಇದೇ 29.11.2012 ಗುರುವಾರ ಲೋಕಾರ್ಪಣೆಯಾಗಲಿದೆ. ತುರ್ತುಪರಿಸ್ಥಿತಿಯ ಹೋರಾಟಗಳ ನೆನಪು ಒಂದು ಭಾಗವಾದರೆ ರಾಜ್ಯ ಸರ್ಕಾರೀ ಅಧಿಕಾರಿ/ನೌಕರನಾಗಿ ಸೇವೆ ಮಾಡುವಾಗಿನ ತಮ್ಮ ಅನುಭವಗಳನ್ನು ಇನ್ನೊಂದು ಭಾಗದಲ್ಲಿ ಹಂಚಿಕೊಂಡಿದ್ದಾರೆ. ಭ್ರಷ್ಠಾಚಾರ ಎಂಬುದು ಚರ್ಚಾರ್ಹ ವಿಷಯವೇ ಅಲ್ಲ,ಅದೊಂದು ಸರ್ವೇ ಸಾಮಾನ್ಯ ಎಂಬ ಮಾನಸಿಕತೆಗೆ ಬಂದು ನಿಂತಿರುವ ಈ ದಿನಗಳಲ್ಲಿ  ಶ್ರೀ ನಾಗರಾಜರು ತಮ್ಮ ಸೇವಾ ಅವಧಿಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸುವಾಗ ಎದುರಾದ ಸಮಸ್ಯೆಗಳು, ಅದನ್ನೆಲ್ಲಾ ದಿಟ್ಟವಾಗಿ ಎದುರಿಸಿದ ರೀತಿ, ಎಲ್ಲವನ್ನೂ ಮನಮುಟ್ಟುವಂತೆ ದಾಖಲಿಸಿದ್ದಾರೆ. ಕೃತಿಯನ್ನು ಓದಲು ಆರಂಭಿಸಿದರೆ ಎಲ್ಲವನ್ನೂ ಮರೆತು ತನ್ನೆಡೆಗೆ ಹಿಡಿದಿಟ್ಟುಕೊಳ್ಳುವ ಅವರ ಬರವಣಿಗೆಯ ಶೈಲಿ ಓದುಗರನ್ನು ಬೆರಗುಗೊಳಿಸದೆ ಇರದು.
     1970 ರ ನಂತರ ಜನ್ಮ ತಾಳಿರುವ ಇಂದಿನ ಪೀಳಿಗೆಗೆ “ತುರ್ತು ಪರಿಸ್ಥಿತಿಯ ಹೋರಾಟ ಎಂದರೇನೆಂಬುದು UÉÆvÉÛà E®è. ಅಂದು ಹೋರಾಟದಲ್ಲಿ ಪಾಲ್ಗೊಂಡಿದ್ದ ಹಲವಾರು ಜನರು ಇಂದು ನಮ್ಮೊಂದಿಗಿಲ್ಲ. ಅಂದು ಎಲ್ಲಾ ಪತ್ರಿಕೆಗಳ ಬಾಯಿ ಮುಚ್ಚಿಸಲಾಗಿತ್ತು.  ಯಾವ ನಾಗರೀಕನೂ ಸರ್ಕಾರದ ವಿರುದ್ಧವಾಗಿ ಮಾತನಾಡುವಂತಿರಲಿಲ್ಲ. ಅಂತಹ ವಿಷಮ ಸಂದರ್ಭದಲ್ಲೂ  ತುರ್ತುಪರಿಸ್ಥಿತಿಯ ವಿರುದ್ಧವಾಗಿ ಪೋಲೀಸರ ಹದ್ದುಗಣ್ಣನ್ನು ಮರೆಮಾಚಿಸಿ ಪ್ರಕಟವಾಗುತ್ತಿದ್ದ “ಕಹಳೆ” ಪತ್ರಿಕೆಯು ಎಲ್ಲಿ ಮುದ್ರಣವಾಗುತ್ತೆ? ಯಾರು ಪ್ರಸಾರ ಮಾಡುತ್ತಾರೆಂಬುದು ಪೋಲೀಸರಿಗೆ ದೊಡ್ದ ಪ್ರಶ್ನೆಯಾಗಿತ್ತು. ಅನುಮಾನ ಬಂದವರನ್ನು ಸ್ಟೇಶನ್ನಿಗೆ ಎಳೆದೊಯ್ದು “ಏರೋಪ್ಲೇನ್” ಎತ್ತುತ್ತಿದ್ದ ಕಾಲ. ಆದರೆ ಅಂದು ಹಲವಾರು ದೇಶಭಕ್ತರೂ ಕೂಡ ಪೋಲೀಸರ ಅಮಾನುಷ ಶಿಕ್ಷೆಗೆ ಒಳಗಾಗಿದ್ದ ಕೆಟ್ಟದಿನಗಳು.  ಆರೆಸ್ಸೆಸ್ ಸೇರಿದಂತೆ 50-60 ಸಂಘ-ಸಂಸ್ಥೆಗಳನ್ನು ನಿಷೇಧಿಸಲಾಗಿತ್ತು. ಆರೆಸ್ಸೆಸ್ ಮುಂಚೂಣಿಯಲ್ಲಿ ನಿಂತು ಜಯಪ್ರಕಾಶ ನಾರಾಯಣರ ನಾಯಕತ್ವದಲ್ಲಿ ಲೋಕ ಸಂಘರ್ಷ ಸಮಿತಿ ಹೆಸರಿನಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ನಡೆದ ಅಭೂತಪೂರ್ವ ಆಂದೋಲನ ದೇಶದಲ್ಲಿ ಪ್ರಜಾಸತ್ತೆ ಉಳಿಯಲು ಕಾರಣವಾಯಿತು. ಲಕ್ಷಾಂತರ ತರುಣರು ಇದರಲ್ಲಿ ಭಾಗವಹಿಸಿ ಅನೇಕ ಕಷ್ಟ-ನಷ್ಟಗಳನ್ನು ಎದುರಿಸಿದರು. ನೂರಾರು ಜನರು ತಮ್ಮ ಜೀವವನ್ನೇ ತೆತ್ತರು. ಕರ್ನಾಟಕದಲ್ಲೂ ಸಹ ಆಂದೋಲನ ಜನ ಜಾಗೃತಿಗೊಳಿಸುವಲ್ಲಿ, ಸರ್ವಾಧಿಕಾರಿಗಳನ್ನು ಬೆಚ್ಚಿ ಬೀಳಿಸುವಲ್ಲಿ ಯಶಸ್ವಿಯಾಯಿತು. ಹಾಸನ ಜಿಲ್ಲೆಯಲ್ಲೂ ಸಾವಿರಾರು ತರುಣರು ಪ್ರತಿಭಟನೆಯಲ್ಲಿ ಪಾಲುಗೊಂಡದ್ದು ಇತಿಹಾಸ. 13 ಜನರನ್ನು ಯಾವುದೇ ವಿಚಾರಣೆಗೊಳಪಡದೆ 2 ವರ್ಷಗಳ ಕಾಲ ಬಂಧಿಸಿಡಬಹುದಾದ ಮೀಸಾ ಕಾಯದೆಯನ್ವಯ ಬಂಧಿಸಲಾಗಿತ್ತು. ಸುಮಾರು 300 ಜನರನ್ನು ಭಾರತ ರಕ್ಷಣಾ ಕಾಯದೆಯನ್ವಯ ಬಂಧಿಸಿದ್ದರು. ಸಾವಿರಾರು ತರುಣರ ಮೇಲೆ ದಂಡ ಪ್ರಕ್ರಿಯಾ ಸಂಹಿತೆಯ ವಿವಿಧ ಕಲಮುಗಳ ಪ್ರಕಾರ ಮೊಕದ್ದಮೆಗಳನ್ನು ಹೂಡಲಾಗಿತ್ತು. ಕೊನೆಕೊನೆಗೆ ಜೈಲಿನಲ್ಲಿ ಸ್ಥಳವಿರದ ಕಾರಣ ಬಂಧಿಸಿ, ಮುಚ್ಚಳಿಕೆ ಬರೆಯಿಸಿಕೊಂಡು, ಹೊಡೆದು ಬಡಿದು ಬಿಟ್ಟದ್ದೂ ಉಂಟು. ಆ ಸಂದರ್ಭದಲ್ಲಿ ಅನುಭವಿಸಿದ ಕಿರುಕುಳ, ಹಿಂಸೆಗಳಿಂದಾಗಿ ಆಗ ಹಾಸನ ಜಿಲ್ಲೆಯ ಆರೆಸ್ಸೆಸ್ ಪ್ರಚಾರಕರಾಗಿದ್ದ ಶ್ರೀ ಪ್ರಭಾಕರ ಕೆರೆಕೈಯವರು ತಮ್ಮ 30-32ರ  ಕಿರಿಯ ವಯಸ್ಸಿನಲ್ಲೇ ಮತಿವಿಕಲ್ಪತೆಗೆ ಒಳಗಾಗಿ ಕೊನೆಯುಸಿರೆಳೆದದ್ದು ದುರಂತ.
     ಶ್ರೀ ನಾಗರಾಜರು ಬರೆದಿರುವುದು    ಹೋರಾಟಕಾಲದ ಸಮಗ್ರ ಚಿತ್ರಣವಲ್ಲ. ಒಬ್ಬ ಹೋರಾಟಗಾರನಾಗಿ ಅವರ ಅನುಭವಗಳನ್ನು ದಾಖಲಿಸಿದ್ದಾರೆ. ತುರ್ತು ಪರಿಸ್ಥಿಯ ದಿನಗಳನ್ನು ನೆನೆದುಕೊಂಡರೆ ಕಣ್ಣುಗಳು  ತೇವ ವಾಗುತ್ತವೆ. ಹೀಗೂ ಇತ್ತಾ! ಎಂದು ಅಂದಿನ ದಿನಗಳನ್ನು ಕಣ್ಣಾರೆ ಕಂಡ, ಹೋರಾಟದಲ್ಲಿ ನೇರವಾಗಿ ಅಥವಾ ಗುಪ್ತವಾಗಿ ಹೋರಾಡಿದ ನಮ್ಮಂತವರಿಗೇ ಅಚ್ಚರಿಯಾಗುತ್ತದೆ. ಸ್ವಾತಂತ್ರ್ಯ ಆಂಧೋಳನದಲ್ಲಿದ್ದ 99% ಜನರು ಇಂದು ನಮ್ಮೆದುರು ಇಲ್ಲ. ಎರಡನೆಯ ಸ್ವಾತಂತ್ರ್ಯಹೋರಾಟವೆಂದೇ ಹೇಳಬಹುದಾದ 1975-77 ರ ಹೋರಾಟದಲ್ಲಿ ಪಾಲ್ಗೊಂಡವರಲ್ಲಿ ಕೆಲವರನ್ನಾದರೂ ನೋಡಬೇಕೆ?
ಹಾಗಾದರೆ ಬನ್ನಿ…..
ಸ್ಥಳ: ಶ್ರೀ  ರಾಮಕೃಷ್ಣ ವಿದ್ಯಾಲಯ ಸಭಾಂಗಣ
ದಿನಾಂಕ: 29.11.2012 ಗುರುವಾರ ಸಂಜೆ 6.00 ಕ್ಕೆ.
ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದ ಕಥನ ಕೇಳ  ಬನ್ನಿ...


ಭಾನುವಾರ, ನವೆಂಬರ್ 18, 2012

ದಿನಾಂಕ 18.11.2012 ರಂದು ನಡೆದ ವೇದಪಾಠ








ದಿನಾಂಕ 18.11.2012 ರಂದು ನಡೆದ ವೇದಪಾಠವನ್ನು ಇಲ್ಲಿ ಪ್ರಕಟಿಸಲಾಗಿದೆ. ಮೇಲ್ ಮೂಲಕ ವಿಳಾಸ ನೀಡಿರುವ    ಎಲ್ಲರಿಗೂ ಪಾಠವನ್ನು ಕಳಿಸಲಾಗಿದೆ. ತಲುಪದಿದ್ದವರು ತಿಳಿಸಿದರೆ ಪುನ: ಕಳಿಸಿಕೊಡಲಾಗುವುದು. ಹೊಸದಾಗಿ  ಸಾಪ್ತಾಹಿಕ ವೇದ ಪಾಠವನ್ನು ವೆಬ್ ಸೈಟ್ ಮೂಲಕ ಕಲಿಯಬಯಸುವವರು " ವೇದಪಾಠ" ಲೇಬಲ್ ಮೇಲೆ ಕ್ಲಿಕ್ ಮಾಡಿ ಮೊದಲ ಪಾಠದಿಂದ ಅನುಸರಿಸಬಹುದು. ಆರಂಭದಲ್ಲಿರುವ ಪರಿಚಯ ಉಪನ್ಯಾಸವನ್ನು ಕೇಳಿ ವೇದಪಾಠವನ್ನು ಆರಂಭಿಸುವುದು ಸೂಕ್ತ. ಹಾಸನದಲ್ಲಿ ನಡೆಯುತ್ತಿರುವ "ಎಲ್ಲರಿಗಾಗಿ ವೇದ ಪಾಠವು" ಪೂರ್ಣ ಉಚಿತವಾಗಿದ್ದು ಹಾಸನಕ್ಕೆ ಸಮೀಪ ಇರುವ ನಿಮ್ಮ ಮಿತ್ರರನ್ನು  ಪ್ರತ್ಯಕ್ಷ ವೇದಪಾಠದಲ್ಲಿ ಪಾಲ್ಗೊಳ್ಳುವಂತೆ ಮಾಡಿ. ನಮ್ಮ ವಿಳಾಸ:

ಈಶಾವಾಸ್ಯಮ್
ಶಕ್ತಿ ಗಣಪತಿ ದೇವಾಲಯ ರಸ್ತೆ
ಹೊಯ್ಸಳನಗರ ಪೋಲೀಸ್ ಕಾಲೊನಿ, ಹಾಸನ
ಸಂಪರ್ಕ ದೂರವಾಣಿ: 08172-250566/9663572406

ಮಂಗಳವಾರ, ನವೆಂಬರ್ 13, 2012

ಸಮಾನತೆ ಸಾರುವ ವೇದ


ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ  ಜಿಗಾತನ || [ಋಗ್. ೫.೫೯.೬]
     ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ.

ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ | ಸಂ ಭ್ರಾತರೋ ವಾವೃಧುಃ ಸೌಭಗಾಯ || ಯುವಾ ಪಿತಾ ಸ್ವಪಾ ರುದ್ರ ಏಷಾಂ | ಸುದುಘಾ ಪೃಶ್ನಿಃ ಸುದಿನಾ ಮರುದ್ಭ್ಯಃ || [ಋಗ್. ೫.೬೦.೫]
     ಈ ಮಾನವರು ತಮಗಿಂತ ಉಚ್ಛರನ್ನು ಹೊಂದಿಲ್ಲ, ನೀಚರನ್ನೂ ಹೊಂದಿಲ್ಲ, ಇವರು ಪರಸ್ಪರ ಅಣ್ಣ ತಮ್ಮಂದಿರು, ಸೌಭಾಗ್ಯಕ್ಕಾಗಿ ಮುಂದೆ ಸಾಗುತ್ತಾರೆ. ಆತ್ಮರಕ್ಷಕನೂ, ಅಜರನೂ ಆದ, ಪಾಪಿಗಳಿಗೆ ದಂಡ ವಿಧಿಸುವ ಭಗವಂತನು, ಇವರೆಲ್ಲರ ತಂದೆ. ಭೂಮಿದೇವಿ, ಮರ್ತ್ಯರಾದ ಈ ಮಾನವರಿಗಾಗಿ ಶುಭದಿನಗಳನ್ನು ತೋರಿಸುವವಳೂ, ಉತ್ತಮ ಜೀವನಪ್ರದ ರಸಗಳನ್ನು ಕರೆಯುವವಳೂ ಆಗಿದ್ದಾಳೆ.

ಸಮಾನೋ ಮಂತ್ರಃ ಸಮಿತಿಃ ಸಮಾನಂ ವ್ರತಂ ಸಹ ಚಿತ್ತಮೇಷಾಂ | ಸಮಾನೇನ ವೋ ಹವಿಷಾ ಜುಹೋಮಿ ಸಮಾನಂ ಚೇತೋ ಅಭಿಸಂವಿಶದ್ವಮ್ || [ಅಥರ್ವ.೬.೬೪.೨]
     ಈ ನಿಮ್ಮೆಲ್ಲರಿಗೂ ಮಂತ್ರವು ಸಮಾನವಾಗಿದೆ. ಸಮಿತಿಯೂ ಸಮಾನವಾಗಿದೆ. ವ್ರತವೂ ಸಮಾನವೇ. ನಿಮ್ಮ ಮನಸ್ಸು ಸಹಕರಿಸುವಂತಹುದಾಗಲಿ. ನಿಮ್ಮೆಲ್ಲರನ್ನೂ ಸಮಾನವಾದ ಭೋಗ್ಯವಸ್ತುವಿನೊಂದಿಗೆ ಯುಕ್ತರನ್ನಾಗಿ ಮಾಡುತ್ತೇನೆ. ಸಮಾನವಾದ ಆಹಾರ-ಪಾನೀಯಗಳನ್ನೇ ನೀಡುತ್ತೇನೆ. 

ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ ನಮಃ ಪೂರ್ವಜಾಯ ಚಾಪರಜಾಯ ಚ ನಮೋ ಮಧ್ಯಮಾಯ ಚಾಪಗಲ್ಫಾಯ ಚ ನಮೋ ಜಘನ್ಯಾಯ ಚ ಬುದ್ಧ್ಯಾಯ ಚ || [ಯಜು. ೧೬-೩೨]
     ಗುಣ-ಕರ್ಮ ಸ್ವಭಾವಗಳಿಂದ ದೊಡ್ಡವನಾಗಿರುವವನಿಗೆ ನಮಸ್ಕಾರ. ಹಾಗೆಯೇ ಗುಣ-ಕರ್ಮ ಸ್ವಭಾವಗಳಿಂದ ಚಿಕ್ಕವನಾಗಿರುವವನಿಗೂ ನಮಸ್ಕಾರ. ಮತ್ತು, ವಯಸ್ಸಿನಲ್ಲಿ ಹಿರಿಯನಿಗೆ ನಮಸ್ಕಾರ. ಹಾಗೂ ವಯಸ್ಸಿನಲ್ಲಿ ಕಿರಿಯನಿಗೂ ನಮಸ್ಕಾರ. ಅಂತೆಯೇ ನಡುವಯಸ್ಕನಿಗೆ ನಮಸ್ಕಾರ. ಅದೇ ರೀತಿ, ಅವಿಕಸಿತ ಶಕ್ತಿಯುಳ್ಳವನಿಗೆ ನಮಸ್ಕಾರ. ಹೀನ ಸ್ಥಿತಿಯಲ್ಲಿರುವವನಿಗೂ, ವಿಶಾಲ ಮನಸ್ಕನಿಗೂ ನಮಸ್ಕಾರ.

ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || [ಅಥರ್ವ.೬.೬೪.೩]
     ನಿಮ್ಮ ಹಿತವು ಒಂದಿಗೇ ಆಗುವಂತೆ, ನಿಮ್ಮ ಮನಃಕಾಮನೆ ಸಮಾನವಾಗಿರಲಿ. ನಿಮ್ಮ ಹೃದಯಗಳು ಸಮಾನವಾಗಿರಲಿ. ನಿಮ್ಮ ಮನಸ್ಸುಗಳು ಸಮಾನವಾಗಿರಲಿ.

ಬುಧವಾರ, ನವೆಂಬರ್ 7, 2012

ವೇದಪಾಠ - 8



















http://www.vedasudhe.com/wp-content/uploads/2012/10/08-01.mp3
http://www.vedasudhe.com/wp-content/uploads/2012/10/08-02.mp3
http://www.vedasudhe.com/wp-content/uploads/2012/10/08-03.mp3
http://www.vedasudhe.com/wp-content/uploads/2012/10/04.mp3
ಈ ಮೇಲ್ ಮೂಲಕ ಪಾಠವನ್ನು ತರಿಸಿಕೊಳ್ಳುವವರಿಗೆಲ್ಲರಿಗೂ ಇಂದು  ಮೇಲ್ ಮಾಡಲಾಗಿದೆ. ತಲುಪದಿದ್ದವರು  ತಿಳಿಸಿದರೆ ಕೂಡಲೇ ಮೇಲ್ ಮಾಡುವೆ. ಈ ತಾಣದಲ್ಲಿ ಆಡಿಯೋ ಸಮಸ್ಯೆ ಆದರೆ ಕೆಳಗಿನ ಕೊಂಡಿಯಲ್ಲಿ  ವೇದಪಾಠವನ್ನು ಕೇಳಬಹುದು.
http://vedabharatihassan.blogspot.in/

-ಹರಿಹರಪುರಶ್ರೀಧರ್

ಗುರುವಾರ, ನವೆಂಬರ್ 1, 2012

ಆಯುರ್ಧಾರಾ - ೬


ಆಹಾರ ವಿಧಿ ವಿಧಾನಗಳು :

ಹಿಂದಿನ ಸಂಚಿಕೆಯಲ್ಲಿ ನಾವು ಆಹಾರದ ಗುಣ ಮತ್ತು ಪ್ರಮಾಣದ ಬಗ್ಗೆ ತಿಳಿದುಕೊಂಡೆವು. ಈಗ ಆಹಾರವನ್ನು ಸೇವಿಸುವ ವಿಧಿ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.
ಆಹಾರ ಸೇವಿಸುವಾಗ ಈ ಕೆಳಗಿನ ನಿಯಮಗಳನ್ನು ಪಾಲಿಸುವುದು ಅವಶ್ಯಕ :
ಬಿಸಿಯಾಗಿರುವ ಆಹಾರವನ್ನೇ ಸೇವಿಸಬೇಕು.
  • ಆಹಾರವು ಸ್ನಿಗ್ಧವಾಗಿರಬೇಕು (ತುಪ್ಪ ಮುಂತಾದ ಜಿಡ್ಡುಯುಕ್ತ ಆಹಾರ)
  • ಸರಿಯಾದ ಪ್ರಮಾಣದಲ್ಲಿ ಆಹಾರ ಸೇವಿಸಬೇಕು.
  • ಈ ಹಿಂದೆ ಸೇವಿಸಿದ ಆಹಾರವು ಸಂಪೂರ್ಣ ಜೀರ್ಣವಾದ  ನಂತರವಷ್ಟೇ ಮತ್ತೆ ಆಹಾರ ಸೇವಿಸಬೇಕು.
  • ಪರಸ್ಪರ ವಿರುದ್ಧಾಹಾರವನ್ನು ಸೇವಿಸಬಾರದು.
  • ಉತ್ತಮ ಪರಿಸರದಲ್ಲಿ ಆಹಾರವನ್ನು ಸೇವಿಸಬೇಕು.
  • ಅತಿ ವೇಗವಾಗಿ ಅಥವಾ ಅತಿ ವಿಳಂಬವಾಗಿ ಆಹಾರ                        ಸೇವಿಸಬಾರದು.
  • ಆಹಾರ ಸೇವಿಸುವಾಗ ಮಧ್ಯದಲ್ಲಿ ಮಾತನಾಡಬಾರದು.
  • ಆಹಾರ ಸೇವಿಸುವಾಗ ಮಧ್ಯದಲ್ಲಿ ನಗಬಾರದು.
  • ತನ್ಮಯತೆಯಿಂದ, ಏಕಾಗ್ರಚಿತ್ತರಾಗಿ, ಪ್ರಸನ್ನವಾದ ಮನಸ್ಸಿನಿಂದ ಆಹಾರವನ್ನು ಸೇವಿಸಬೇಕು.
                 ಈ ಮೇಲಿನ ನಿಯಮಾವಳಿಗಳನ್ನು ಪಾಲಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ :
  • ಬಿಸಿಯಾಗಿ ತಯಾರಿಸಿದ ಆಹಾರವು ಹೆಚ್ಚು ರುಚಿಕರವಾಗಿರುತ್ತದೆ, ಪಚನ ಶಕ್ತಿಯನ್ನು ವೃದ್ಧಿಸುತ್ತದೆ ಹಾಗು ಬೇಗ ಜೀರ್ಣವಾಗುತ್ತದೆ. ಆದ್ದರಿಂದ ಬಿಸಿಯಾದ ಆಹಾರವನ್ನೇ ಸೇವಿಸಬೇಕು. ಆರಿದ, ತಂಗಳು ಹಾಗು ಹಳಸಿದ ಪದಾರ್ಥವು ಪಚನ ಶಕ್ತಿಯನ್ನು ಕುಗ್ಗಿಸಿ, ಆಮವನ್ನು ಉಂಟುಮಾಡಿ ರೋಗಗಳಿಗೆ ಕಾರಣವಾಗುತ್ತದೆ. 
  • ಸ್ನಿಗ್ಧವಾದ ಆಹಾರವು (ತುಪ್ಪ, ಬೆಣ್ಣೆ ಮುಂತಾದ ಜಿಡ್ಡು ಪದಾರ್ಥ ಬೆರೆಸಿದ ಆಹಾರ) ರುಚಿಕರವಾಗಿರುತ್ತದೆ, ಪಚನ ಶಕ್ತಿಯನ್ನು ವೃದ್ಧಿಸುತ್ತದೆ, ಬೇಗ ಜೀರ್ಣವಾಗುತ್ತದೆ, ವಾತಾನುಲೋಮನ ಮಾಡುತ್ತದೆ, ಶರೀರಕ್ಕೆ ಪುಷ್ಟಿ ನೀಡುತ್ತದೆ, ಇಂದ್ರಿಯಗಳನ್ನು ದೃಢಮಾಡುತ್ತದೆ, ಅಂಗ-ಪ್ರತ್ಯಂಗಗಳ ಬಲವನ್ನು ವೃದ್ಧಿಸುತ್ತದೆ ಹಾಗು ಯೌವನವನ್ನು ಕಾಪಾಡುತ್ತದೆ. ಆದ್ದರಿಂದ ಸ್ನಿಗ್ಧಾಹಾರವನ್ನೇ ಸೇವಿಸಬೇಕು.  ಇತ್ತೀಚೆಗೆ ಜಿಡ್ಡು ತಿನ್ನುವುದರಿಂದ ಕೊಲೆಸ್ಟ್ರಾಲ್   ಹೆಚ್ಚಾಗಿ ರೋಗ ಬರುತ್ತದೆ ಎಂದು ಎಲ್ಲರೂ ಭಾವಿಸಿ ಜಿಡ್ಡು ತಿನ್ನುವುದನ್ನೇ ಬಿಟ್ಟಿದ್ದಾರೆ. ಇದು ತಪ್ಪು ಕಲ್ಪನೆಯಾಗಿದ್ದು, ತುಪ್ಪ ತಿನ್ನುವುದರಿಂದ ಯಾವ ತೊಂದರೆಯೂ ಆಗುವುದಿಲ್ಲ. ಬದಲಾಗಿ ಮೇಲೆ ತಿಳಿಸಿದ ಪ್ರಯೋಜನಗಳು ದೊರಕುತ್ತವೆ. ಆದ್ದರಿಂದ ಧೈರ್ಯವಾಗಿ, ಯಾವುದೇ ಅಂಜಿಕೆಯಿಲ್ಲದೆ ಸ್ನಿಗ್ಧಾಹಾರವನ್ನು ಸೇವಿಸಬಹುದು. 
  • ಪ್ರಮಾಣವು ಹೆಚ್ಚು ಕಡಿಮೆಯಾಗದಂತೆ ಊಟ ಮಾಡುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ, ಪಚನ ಶಕ್ತಿಯು ಕುಗ್ಗದೆ ಸುಖ ಪರಿಣಾಮವಾಗಿ(ಸುಖವಾಗಿ ಜೀರ್ಣವಾಗಿ) ಮಲ ಪ್ರವೃತ್ತಿಯು ಯಾವುದೇ ಕಷ್ಟವಿಲ್ಲದೇ ಆಗುವುದು. ಆದ್ದರಿಂದ ಸರಿಯಾದ ಪ್ರಮಾಣದಲ್ಲೇ ಊಟ ಮಾಡಬೇಕು.
  • ಈ ಹಿಂದೆ ಸೇವಿಸಿದ ಆಹಾರವು ಸಂಪೂರ್ಣ ಜೀರ್ಣವಾದ ನಂತರವಷ್ಟೇ ಮತ್ತೆ ಆಹಾರ ಸೇವಿಸುವುದರಿಂದ  ಆಹಾರ ಪಚನ ಕ್ರಿಯೆಯು ಸುಲಭವಾಗಿ ಆಗಿ, ಆಹಾರದ ರಸ ಭಾಗವು ಸರ್ವ ಧಾತುಗಳಿಗೂ ಒದಗಿ , ಆಯಸ್ಸಿನ ವೃದ್ಧಿಯಾಗುತ್ತದೆ. ಉದ್ಗಾರ(ತೇಗು) ಶುದ್ಧಿ ಹಾಗು ಹೃದಯ ಶುದ್ಧಿಯಾಗಿ(ಎದೆ ಭಾಗದಲ್ಲಿ ಉರಿ ಮುಂತಾದ ತೊಂದರೆ ಆಗುವುದಿಲ್ಲ) ದೇಹವು ಹಗುರವೆನಿಸುತ್ತದೆ. ಹೀಗೆ ಮಾಡದಿದ್ದಲ್ಲಿ ಸೇವಿಸಿದ ಆಹಾರವು ಸಂಪೂರ್ಣವಾಗಿ ಪಚನವಾಗದ ಹಿಂದಿನ ಆಹಾರದೊಡನೆ ಬೆರೆತು ದೋಷ ಪ್ರಕೋಪವನ್ನುಂಟು ಮಾಡಿ ರೋಗಗಳನ್ನು ಉದ್ಭವಿಸುತ್ತದೆ.
  • ಪರಸ್ಪರ ವಿರುದ್ಧವಾದ ಆಹಾರಗಳು ಗರ ವಿಷದಂತೆ ಕೆಲಸ ಮಾಡುತ್ತದೆ. ಆದ್ದರಿಂದ ವಿರುದ್ಧಾಹಾರವು ನಿಷಿದ್ಧ. ವಿರುದ್ಧ ಆಹಾರಗಳ ಬಗೆಗೆ ಮುಂದಿನ ಸಂಚಿಕೆಗಳಲ್ಲಿ ವಿವರವಾಗಿ ತಿಳಿದುಕೊಳ್ಳೋಣ.
  • ಉತ್ತಮ, ಶುಚಿಯಾದ ಪರಿಸರದಲ್ಲಿ ಆಹಾರವನ್ನು ಸೇವಿಸುವುದರಿಂದ ಮನಸ್ಸು ಉಲ್ಲಸಿತವಾಗುತ್ತದೆ. ಕೊಳಕು ವಾತಾವರಣದಲ್ಲಿ ಮನಸ್ಸಿಗೆ ಅಸಹ್ಯ ಉಂಟಾಗಿ, ಊಟ ಸೇರುವುದಿಲ್ಲ ಹಾಗು ಸರಿಯಾಗಿ ಪಚನವಾಗುವುದಿಲ್ಲ.
  • ಅತಿ ವೇಗವಾಗಿ ಆಹಾರ ಸೇವಿಸುವುದರಿಂದ ಆಹಾರ ಪದಾರ್ಥವು ಮೂಗು ಮುಂತಾದ ರಂಧ್ರಗಳಿಗೆ ಹೋಗಿ ತೊಂದರೆ ಉಂಟುಮಾಡುತ್ತದೆ(ನೆತ್ತಿ ಹತ್ತುವುದು) ಹಾಗು ಆಹಾರದ ಸಂಪೂರ್ಣ ಸಾದ್ಗುಣ್ಯ ದೇಹಕ್ಕೆ ದೊರಕುವುದಿಲ್ಲ. ಆದ್ದರಿಂದ ಆತಿ ವೇಗವಾಗಿ ಊಟ ಮಾಡಬಾರದು.
  • ಅತಿ ನಿಧಾನವಾಗಿ ತಿನ್ನುವುದರಿಂದ ಸರಿಯಾಗಿ ತೃಪ್ತಿಯಾಗದೆ ಹೆಚ್ಚು ತಿನ್ನುತ್ತಾರೆ. ಆಹಾರವು ತಣ್ಣಗಾಗಿ ವಿಷಮವಾಗಿ ಪಚನಗೊಳ್ಳುತ್ತದೆ. ಆದ್ದರಿಂದ ಆತಿ ನಿಧಾನವಾಗಿ ಊಟ ಮಾಡಬಾರದು.
  • ಮಾತನಾಡುತ್ತಾ, ನಗುತ್ತಾ, ತನ್ಮಯತೆಯಿಲ್ಲದೆ ತಿನ್ನುವುದರಿಂದಲೂ ಅತಿ ವೇಗವಾಗಿ ಆಹಾರ ಸೇವಿಸುವುದರಿಂದ ಆಗುವ ತೊಂದರೆಗಳು ಉಂಟಾಗುತ್ತವೆ.
  • ಅಂತಿಮವಾಗಿ ನಮ್ಮ ಆತ್ಮಸಮೀಕ್ಷೆಯಂತೆ ಅಂದರೆ ನಮಗೆ ಯಾವ ಆಹಾರವು ಹೆಚ್ಚು ಸೂಕ್ತ, ಹೆಚ್ಚು ಒಗ್ಗುತ್ತದೆ ಮತ್ತು ಯಾವುದು ಒಗ್ಗುವುದಿಲ್ಲ ಎಂಬುದನ್ನು ನಿರ್ಧರಿಸಿಯೇ ಊಟ ಮಾಡಬೇಕು.
   ಹೀಗೆ ಮೇಲೆ ತಿಳಿಸಿದ ವಿಧಿ ವಿಧಾನಗಳನ್ನು ಅನುಸರಿಸಿ ಆಹಾರ ಸೇವಿಸಿದಾಗ ಖಂಡಿತ ಉತ್ತಮ ಆರೋಗ್ಯ ಭಾಗ್ಯ ಲಭಿಸಿ, ಸುದೀರ್ಘಾಯಸ್ಸು ನಮ್ಮದಾಗುತ್ತದೆ. 

ಬುಧವಾರ, ಅಕ್ಟೋಬರ್ 31, 2012

ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ



     ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ.  ಇದೇ ಗುರುವಾರ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಸರ್ಕಾರವು ಪಂಡಿತರನ್ನು ಸನ್ಮಾನಿಸಲಿದೆ. 116 ವರ್ಷ ವಯೋವೃದ್ಧರಾದ        ಚತುರ್ವೇದಿಗಳು ಒಂದು ನೂರುವರ್ಷಗಳಿಂದ ನಾಲ್ಕೂ ವೇದಗಳನ್ನು ಅಭ್ಯಾಸಮಾಡುತ್ತಿದ್ದಾರೆಂಬುದು ಅತ್ಯಂತ ಸಂತಸದ ಮತ್ತು ಆಶ್ಚರ್ಯದ ಸಂಗತಿಯೂ ಹೌದು. 'ವೇದಜೀವನ'ವು ಪಂಡಿತರಿಗೆ ಸಾಸ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತದೆ.

-ಹರಿಹರಪುರಶ್ರೀಧರ್

ಮಂಗಳವಾರ, ಅಕ್ಟೋಬರ್ 16, 2012

ವೇದ ಪಾಠ - 6





ಮನವಿ:  ವೇದಸುಧೆಬಳಗದ ಶ್ರಮ ಸಾರ್ಥಕ ಆಗಬೇಕಾದರೆ ಓದುಗರ  ರೆಸ್ಪಾನ್ಸ್  ಇರಬೇಕು. ಉಪಯೋಗ ವಾಗುತ್ತಿರುವುದು ಖಚಿತವಾದರೆ ಎಷ್ಟಾದರೂ ಶ್ರಮ ಹಾಕುವುದಕ್ಕೆ ವೇದಸುಧೆ ಸಿದ್ಧ.  ಈ ವರಗಿನ ಎಲ್ಲಾ ಪಾಠಗಳನ್ನೂ   ಡಿವ್ ಶೇರ್ ಡಾಟ್ ಕಾಮ್ ಗೆ ಅಪ್ ಲೋಡ್ ಮಾಡಿ ಅದನ್ನು "ವೇದಭಾರತಿ"ಯಲ್ಲಿ ಪ್ರಕಟ್ಸಲಾಗುವುದು. ಅಲ್ಲದೆ ಡೌನ್ ಲೋಡ್ ಲಿಂಕ್ ಕೂಡ ಕೊಡಲಾಗುವುದು. ಪ್ರಯೋಜನ ಪಡೆದವರು ದಯಮಾಡಿ  mail@vedasudhe.com ಗೆ ಸಾಲುತ್ತರ ನೀಡಬೇಕೆಂದು ಕೋರುವೆ.
-ಹರಿಹರಪುರ ಶ್ರೀಧರ್.


ಸೋಮವಾರ, ಅಕ್ಟೋಬರ್ 15, 2012

ಗ್ರಾಮ ವಿಕಾಸಕ್ಕಾಗಿ ಕಾಲ್ನಡಿಗೆ - ನಿಜವಾದ ಪರಿವ್ರಾಜಕರೆಂದರೆ ಹೀಗಿರಬೇಕು

ಗ್ರಾಮ ವಿಕಾಸಕ್ಕಾಗಿ ಕಾಲ್ನಡಿಗೆ:

     ಕನ್ನಡ ನೆಲದಲ್ಲಿ ಭಾರತ ಪರಿಕ್ರಮ ಯಾತ್ರೆ ,ವೃದ್ಧಾಶ್ರಮಗಳ  ಅಗತ್ಯವಿರುವ  ಹಳ್ಳಿಗಳರಕ್ಷಣೆ,  ಕಾಡು  ನಾಶದಿಂದ ಬರಡಾಗುತ್ತಿರುವ ಗ್ರಾಮಗಳ  ಉಳಿವು,  ಅತಿಯಾದ  ರಾಸಾಯನಿಕ ಉಪಯೋಗದಿಂದ ಸತ್ವ ಕಳೆದುಕೊಂಡಿರುವ ಭೂಮಿಯ  ಪೋಷಣೆ,  ಅಧುನಿಕ  ತಂತ್ರಜ್ಞಾನದ ಅತಿಯಾದ ಅವಲಂಬಿಕೆಯಿಂದಾಗಿ ಕಳೆದು ಹೋಗುತ್ತಿರುವ ಗ್ರಾಮ ಪರಂಪರೆಗಳ ಸಂರಕ್ಷಣೆ, ಕ್ಷೀಣಿಸುತ್ತಿರುವ ಗೋಸಂಪತ್ತಿನ ಸಂವರ್ಧನೆ, ಜೀವ ಸಂಕುಲಕ್ಕೆ ಅಗತ್ಯವಾದ ಜಲ ಸ್ರೋತಗಳ ಕಾಯಕಲ್ಪ-    ಪ್ರಮುಖ  ಆಶಯಗಳನ್ನು ಕೇಂದ್ರೀಕರಿಸಿ ಭಾರತ ಪರಿಕ್ರಮ ಪಾದಯಾತ್ರೆಯನ್ನು   ಶ್ರೀ ಸೀತಾರಾಮ ಕೆದಿಲಾಯರು ಕೈಗೊಂಡಿದ್ದಾರೆ. ವಿಶ್ವಮಂಗಳ ಗೋಗ್ರಾಮ ಯಾತ್ರೆಯ ಅನುವರ್ತೀಪ ಕ್ರಿಯೆಯಾಗಿ ಗ್ರಾಮ ಜಾಗೃತಿಯ ಈ ಮಹತ್ವದ  ಪಾದಯಾತ್ರೆಯನ್ನು  ಕೆದಿಲಾಯರು ಕೈಗೊಂಡಿದ್ದಾರೆ
ಅಕ್ಟೋಬರ್ ೧೦ : ಕಾಸರಗೋಡು ಜಿಲ್ಲೆಯ ನೀಲೇಶ್ವರ
ಅಕ್ಟೋಬರ್ ೧೧  :  ಕಾಂಞ್ಞಂಗಾಡು ಬಳಿಯ ಮೂಕಾಂಬಿಕ ದೇಗುಲ
ಅಕ್ಟೋಬರ್ ೧೨  : ಪಳ್ಳಿಕ್ಕರ
ಅಕ್ಟೋಬರ್ ೧೩  : ಪರವನಡ್ಕಂ
ಅಕ್ಟೋಬರ್ ೧೪ : ಬೆಳಗ್ಗೆ ೭ ಗಂಟೆಗೆ ಕಾಸರಗೋಡಿಗೆ ಆಗಮನ
ಸಂಜೆ ಮಾಯಿಪ್ಪಾಡಿ ಬಳಿ ವಾಸ್ತವ್ಯ
ಅಕ್ಟೋಬರ್ ೧೫ : ಪುತ್ತಿಗೆ
ಅಕ್ಟೋಬರ್ ೧೬  : ಧರ್ಮತ್ತಡ್ಕ
ಅಕ್ಟೋಬರ್ ೧೭ :  ಪೆರೋಡಿ, ಬಾಯಾರು ಬಳಿಯ ನೀರ್ಮುಡಿಗದ್ದೆ
ಅಕ್ಟೋಬರ್ ೧೮ : ಬೇಡಗುಡ್ಡ
ಅಕ್ಟೋಬರ್ ೧೯ : ಬಾಕ್ರೆಬೈಲು
ಅಕ್ಟೋಬರ್ ೨೦ : ಕೋಣಾಜೆ
ಅಕ್ಟೋಬರ್ ೨೧ : ಕುತ್ತಾರು ಪದವು
ಅಕ್ಟೋಬರ್ ೨೨ : ಕಡೆಕ್ಕಾರು, ನೇತ್ರಾವತಿ ಸೇತುವೆಬಳಿ
ಅಕ್ಟೋಬರ್ ೨೩ : ಕೋಡಿಕಲ್
ಅಕ್ಟೋಬರ್ ೨೪ :  ತಂಡಂಬೈಲು, ಸುರತ್ಕಲ್‌ಬಳಿ
ಅಕ್ಟೋಬರ್ ೨೫ :  ಸಸಿಹಿತ್ಲು
ಅಕ್ಟೋಬರ್ ೨೬ : ಹೆಜಮಾಡಿ, ಉಡುಪಿ ಜಿಲ್ಲೆ
ನಂತರ  ರಾಷ್ಟ್ರೀಯ  ಹೆದ್ದಾರಿ  ಮೂಲಕ  ಉತ್ತರ  ಕನ್ನಡ  ಜಿಲ್ಲೆಯನ್ನು
ಪ್ರವೇಶಿಸಿ ನಂತರ ಗೋವಾಕ್ಕೆ ಯಾತ್ರೆ ಮುಂದುವರಿಯಲಿದೆ
ಭಾರತ ಪರಿಕ್ರಮ ಯಾತ್ರೆ :
- ಗೋಪಾಲ್ ಚೆಟ್ಟಿಯಾರ್, ಕ್ಷೇತ್ರೀಯ ಸೇವಾ ಪ್ರಮುಖ್,
ಆರೆಸ್ಸೆಸ್ (ಕರ್ನಾಟಕ ಮತ್ತು ಆಂಧ್ರ )
ಯಾತ್ರೆ ಸಾಗುವ ಬಗೆ
     ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಸೀತಾರಾಮ ಕೆದಿಲಾಯರು, ಆರೆಸ್ಸೆಸ್‌ನ ಅಖಿಲ ಭಾರತೀಯ ಸೇವಾ ಪ್ರಮುಖರಾಗಿ ಈ ಹಿಂದೆ ಜವಾಬ್ದಾರಿಯಲ್ಲಿದ್ದವರು. ಕಳೆದ ಮಾರ್ಚ್‌ನಲ್ಲಿ ನಾಗಪುರದಲ್ಲಿ ನಡೆದ ಆರೆಸ್ಸೆಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭಾ ಬೈಠಕ್ ಬಳಿಕ ಭಾರತ ಪರಿಕ್ರಮ ಯಾತ್ರೆಯ ಸಂಕಲ್ಪ ಕೈಗೊಂಡರು. ಸುಮಾರು ೫ ವರ್ಷಗಳಲ್ಲಿ ೧೫೦೦೦ ಕಿಲೋ ಮೀಟರ್‌ನಷ್ಟು ದೂರ ವಿವಿಧ ಹಳ್ಳಿಗಳಲ್ಲಿ ಪಾದಯಾತ್ರೆಯ ಮೂಲಕ ಸಂಚರಿಸಿ ಗ್ರಾಮಗಳಲ್ಲಿ ರಾಷ್ಟ್ರೀಯ ಜಾಗೃತಿ ಮೂಡಿಸುವ ಯೋಜನೆ ಅವರದ್ದು. ಅದಕ್ಕಾಗಿ ಸರಳವಾದ ದಿನಚರಿ ಹೊಂದಿದ್ದಾರೆ. ಬೆಳಗ್ಗೆ ೬.೧೫ಕ್ಕೆ ಗೋ ಪೂಜೆಯಿಂದ ಮೊದಲ್ಗೊಂಡು ರಾತ್ರಿವರೆಗೆ ವಿವಿಧ ಚಟುವಟಿಕೆಗಳಲ್ಲಿ ಗ್ರಾಮಸ್ಥರೊಂದಿಗೆ ಬೆರೆಯುತ್ತಾರೆ ಕೆದಿಲಾಯರು.
     ಬೆಳಗ್ಗೆ ೬.೩೦ಕ್ಕೆ ತಾನಿದ್ದ ಹಳ್ಳಿಯಿಂದ ಪಾದಯಾತ್ರೆ ಆರಂಭಿಸುತ್ತಾರೆ. ೩ ತಾಸಿನ ನಡಿಗೆಯ  ಬಳಿಕ ಅಂದರೆ ಸುಮಾರು ೯.೩೦ಕ್ಕೆ ಇನ್ನೊಂದು ಹಳ್ಳಿಯನ್ನು ಪ್ರವೇಶಿಸುತ್ತಾರೆ. ೯.೩೦ಕ್ಕೆ ಆ ಊರಿನ ದೇಗುಲ ಭೇಟಿ. ಅಲ್ಲೇ ಪರಿಸರದಲ್ಲಿ ಸಸಿಯೊಂದನ್ನು ನೆಡುತ್ತಾರೆ. ೧೨.೩೦ಕ್ಕೆ ಆ ಊರಿನ ಮನೆಯೊಂದರಲ್ಲಿ ಭೋಜನ. ವಿಶೇಷವೆಂದರೆ ಕಳೆದ ಹತ್ತಾರು ವರ್ಷಗಳಿಂದ ಕೆದಿಲಾಯರು ದಿನಕ್ಕೆ ಒಮ್ಮೆ ಮಾತ್ರ ಆಹಾರ ಸೇವಿಸುತ್ತಾರೆ. ಮಧ್ಯಾಹ್ನದ ಊಟ ಬಿಟ್ಟರೆ ಬೇರೆ ಯಾವ ಆಹಾರವನ್ನೂ ಅವರು ತೆಗೆದುಕೊಳ್ಳುವುದಿಲ್ಲ .ಯಾವುದೇ ಜಾತಿಯ ಮನೆಯಿರಲಿ, ಆ ಮನೆಯಲ್ಲಿ  ಊಟ, ಒಂದಷ್ಟು ಕುಶಲೋಪರಿ, ವಿಶ್ರಾಂತಿ. ಸಂಜೆ ೩.೩೦ರಿಂದ ಗ್ರಾಮ ಸಂಪರ್ಕ. ೫.೩೦ಕ್ಕೆ ಗ್ರಾಮ ಸಂಕೀರ್ತನೆ. ನಂತರ ಭಜನೆ ಸತ್ಸಂಗ. ನೆರೆದ ಗ್ರಾಮವಾಸಿಗಳಿಗೆ ಭಾರತದ ಬಗ್ಗೆ ಉಪನ್ಯಾಸ. ೯ ವಿಷಯಗಳ ಬಗ್ಗೆ ಸರಳ ಭಾಷೆಯಲ್ಲಿ ಭಾಷಣ. ಅವೆಂದರೆ ಭೂ ಸಂರಕ್ಷಣೆ , ಗೋ ಸಂರಕ್ಷಣೆ, ವೃಕ್ಷ ಸಂರಕ್ಷಣೆ , ಜೈವಿಕ ಸಂರಕ್ಷಣೆ , ಜನ ಸಂರಕ್ಷಣೆ , ಜಲ ಸಂರಕ್ಷಣೆ , ಗ್ರಾಮ ಸಂಸ್ಕೃತಿ,  ಗ್ರಾಮೋದ್ಯೋಗ ಮತ್ತು ಗ್ರಾಮ ವೈದ್ಯ. ರಾತ್ರಿ ಅದೇ ಹಳ್ಳಿಯಲ್ಲಿ ವಾಸ್ತವ್ಯ. ಬೆಳಗ್ಗೆ ಇನ್ನೊಂದು ಹಳ್ಳಿಗೆ ಪಯಣ. ಯಾತ್ರೆಗೆ ಬೇಕಾದ ವ್ಯವಸ್ಥೆಗಳನ್ನು ಸ್ಥಾನೀಯ ಆರೆಸ್ಸೆಸ್ ಕಾರ್ಯಕರ್ತರು ಪೂರೈಸುತ್ತಾರೆ. 'Know Bharath, Be Bharth Make Bharath Vishwaguru' ಎನ್ನುವುದು ಯಾತ್ರೆಯ ಧ್ಯೇಯ ವಾಕ್ಯ.
     ಕಣ್ಣೂರಿನಲ್ಲಿ ಚರ್ಚ್‌ಗೆ ಭೇಟಿ ನೀಡಿದ ಕೆದಿಲಾಯರು  ನಂತರ  ಊರಿನ  ಮುಸ್ಲಿಂ ಮುಖಂಡರೊಂದಿಗೆ ಮಾತುಕತೆ, ರಾಷ್ಟ್ರೀಯ ವಿಚಾರಗಳ ವಿನಿಮಯ  ಗ್ರಾಮವಾಸಿಗಳಿಗೆ ಭಾರತದ ಬಗ್ಗೆ ಉಪನ್ಯಾಸ ಯಾತ್ರೆಗೆ ಗ್ರಾಮಸ್ಥರಿಂದ ಸಂಭ್ರಮದ ಸ್ವಾಗತ. ಪ್ರತೀ ಗ್ರಾಮದಲ್ಲೂ ವೃಕ್ಷಾರೋಪಣ ಗ್ರಾಮ ವಿಕಾಸಕ್ಕಾಗಿ ಕಾಲ್ನಡಿಗೆಯಲ್ಲೇ ಭಾರತದಾದ್ಯಂತ ಹಳ್ಳಿಗಳಲ್ಲಿ ಸಂಚರಿಸುವ ಭಾರತ ಪರಿಕ್ರಮ ಯಾತ್ರೆಗೆ ಕಮ್ಯುನಿಷ್ಟರ ನೆಲೆವೀಡು ಎಂದೇ ಒಂದೊಮ್ಮೆ ಖ್ಯಾತವಾಗಿದ್ದ ಕೇರಳದ ಕಣ್ಣೂರಿನಲ್ಲಿ ಭರ್ಜರಿ ಸ್ವಾಗತ ದೊರೆತಿದೆ. ಹಿರಿಯ ಆರೆಸ್ಸೆಸ್ ಪ್ರಚಾರಕರಾದ ಸೀತಾರಾಮ ಕೆದಿಲಾಯರ ನೇತೃತ್ವದ  ಭಾರತ ಪರಿಕ್ರಮ ಯಾತ್ರೆಯನ್ನು ಆರೆಸ್ಸೆಸ್ ಕಣ್ಣೂರು ವಿಭಾಗ ಸಂಘಚಾಲಕ ಸಿ. ಚಂದ್ರಶೇಖರ್ ಬರಮಾಡಿಕೊಂಡರು. ಅಗಸ್ಟ್ ೯ರಂದು ಕನ್ಯಾಕುಮಾರಿಯಿಂದ ಪ್ರಾರಂಭಗೊಂಡ ಯಾತ್ರೆಯು ಇದೀಗ ಸುಮಾರು ೭೫೦ ಕಿ.ಮೀ. ಹಾದಿಯನ್ನು ಕ್ರಮಿಸಿದೆ. ಅಕ್ಟೋಬರ್ ೨ರಂದು ಕಣ್ಣೂರಿನ  ಓಡತ್ತಿಲ್ ಮಸೀದಿಗೆ ಭೇಟಿಯಿತ್ತ ಕೆದಿಲಾಯರು ಅಲ್ಲಿನ ದಾರುಲ್ ಇಸ್ಲಾಂನ ಯತೀಂಖಾನದ  ಅಧ್ಯಕ್ಷ  ಮೌಲಾನ  ಮೊಹಮ್ಮದ್  ಹಾಜಿಯವರ  ಜೊತೆಗೆ  ಮಾತುಕತೆ  ನಡೆಸಿದರು.  ತಲಶ್ಶೇರಿ ಸಮೀಪದಲ್ಲೇ  ಗಾಂಧೀ  ಪುತ್ಥಳಿಯೊಂದಕ್ಕೆ  ಹಾರಾರ್ಪಣೆ  ಮಾಡುವ  ಮೂಲಕ  ಗ್ರಾಮಸ್ಥರೊಂದಿಗೆ  ಗಾಂಧೀ ಜಯಂತಿಯನ್ನು ಆಚರಿಸಿದರು. ಸಂಜೆ ಊರಿನ ವಿವಿಧ ಜಾತಿ ಮುಖಂಡರೊಂದಿಗೆ ಸಾಮಾಜಿಕ ಸಾಮರಸ್ಯದ ಕುರಿತು ಮಾತುಕತೆ ನಡೆಸಿ, ಗ್ರಾಮಾಭಿವೃದ್ಧಿಗೆ  ಸಾಮರಸ್ಯದ ಅಗತ್ಯವನ್ನು ಮನವರಿಕೆ ಮಾಡಿದರು. ಅಕ್ಟೋಬರ್  ೧೪ರಂದು ಬೆಳಗ್ಗೆ  ೭ ಗಂಟೆಗೆ ಭಾರತ ಪರಿಕ್ರಮ  ಯಾತ್ರೆಯು  ಕಾಸರಗೋಡು ನಗರವನ್ನು ತಲುಪಲಿದ್ದು, ಅಕ್ಟೋಬರ್ ೩ನೇ ವಾರದಲ್ಲಿ ಕರ್ನಾಟಕ ಪ್ರವೇಶಿಸಲಿದೆ. ಯಾತ್ರೆಗೆ ಇದುವರೆಗೆ ಸಿಕ್ಕ ಪ್ರತಿಕ್ರಿಯೆ ಅದ್ಭುತ.  ಕೇರಳದ  ನೂರಾರು  ಹಳ್ಳಿಗಳಲ್ಲಿ  ಓಡಾಡಿದ  ಕೆದಿಲಾಯರು  ಪ್ರತಿ  ಹಳ್ಳಿಯಲ್ಲೂ  ಗ್ರಾಮ  ಜಾಗೃತಿಯ  ಕುರಿತು ಮಾತನಾಡಿದಾಗ, ಗ್ರಾಮಸ್ಥರು ವ್ಯಸನಗಳನ್ನು ತ್ಯಜಿಸಿ, ತಮ್ಮ ಗ್ರಾಮವನ್ನು ಸ್ವಾವಲಂಬೀ  ಗ್ರಾಮವನ್ನಾಗಿ ಮಾಡುವ ಮನಸ್ಸು ಮಾಡಿದ್ದಾರೆ


























-ಹರಿಹರಪುರ ಶ್ರೀಧರ್.