ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. ೫.೫೯.೬]
ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ.
ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ | ಸಂ ಭ್ರಾತರೋ ವಾವೃಧುಃ ಸೌಭಗಾಯ || ಯುವಾ ಪಿತಾ ಸ್ವಪಾ ರುದ್ರ ಏಷಾಂ | ಸುದುಘಾ ಪೃಶ್ನಿಃ ಸುದಿನಾ ಮರುದ್ಭ್ಯಃ || [ಋಗ್. ೫.೬೦.೫]
ಈ ಮಾನವರು ತಮಗಿಂತ ಉಚ್ಛರನ್ನು ಹೊಂದಿಲ್ಲ, ನೀಚರನ್ನೂ ಹೊಂದಿಲ್ಲ, ಇವರು ಪರಸ್ಪರ ಅಣ್ಣ ತಮ್ಮಂದಿರು, ಸೌಭಾಗ್ಯಕ್ಕಾಗಿ ಮುಂದೆ ಸಾಗುತ್ತಾರೆ. ಆತ್ಮರಕ್ಷಕನೂ, ಅಜರನೂ ಆದ, ಪಾಪಿಗಳಿಗೆ ದಂಡ ವಿಧಿಸುವ ಭಗವಂತನು, ಇವರೆಲ್ಲರ ತಂದೆ. ಭೂಮಿದೇವಿ, ಮರ್ತ್ಯರಾದ ಈ ಮಾನವರಿಗಾಗಿ ಶುಭದಿನಗಳನ್ನು ತೋರಿಸುವವಳೂ, ಉತ್ತಮ ಜೀವನಪ್ರದ ರಸಗಳನ್ನು ಕರೆಯುವವಳೂ ಆಗಿದ್ದಾಳೆ.
ಸಮಾನೋ ಮಂತ್ರಃ ಸಮಿತಿಃ ಸಮಾನಂ ವ್ರತಂ ಸಹ ಚಿತ್ತಮೇಷಾಂ | ಸಮಾನೇನ ವೋ ಹವಿಷಾ ಜುಹೋಮಿ ಸಮಾನಂ ಚೇತೋ ಅಭಿಸಂವಿಶದ್ವಮ್ || [ಅಥರ್ವ.೬.೬೪.೨]
ಈ ನಿಮ್ಮೆಲ್ಲರಿಗೂ ಮಂತ್ರವು ಸಮಾನವಾಗಿದೆ. ಸಮಿತಿಯೂ ಸಮಾನವಾಗಿದೆ. ವ್ರತವೂ ಸಮಾನವೇ. ನಿಮ್ಮ ಮನಸ್ಸು ಸಹಕರಿಸುವಂತಹುದಾಗಲಿ. ನಿಮ್ಮೆಲ್ಲರನ್ನೂ ಸಮಾನವಾದ ಭೋಗ್ಯವಸ್ತುವಿನೊಂದಿಗೆ ಯುಕ್ತರನ್ನಾಗಿ ಮಾಡುತ್ತೇನೆ. ಸಮಾನವಾದ ಆಹಾರ-ಪಾನೀಯಗಳನ್ನೇ ನೀಡುತ್ತೇನೆ.
ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ ನಮಃ ಪೂರ್ವಜಾಯ ಚಾಪರಜಾಯ ಚ ನಮೋ ಮಧ್ಯಮಾಯ ಚಾಪಗಲ್ಫಾಯ ಚ ನಮೋ ಜಘನ್ಯಾಯ ಚ ಬುದ್ಧ್ಯಾಯ ಚ || [ಯಜು. ೧೬-೩೨]
ಗುಣ-ಕರ್ಮ ಸ್ವಭಾವಗಳಿಂದ ದೊಡ್ಡವನಾಗಿರುವವನಿಗೆ ನಮಸ್ಕಾರ. ಹಾಗೆಯೇ ಗುಣ-ಕರ್ಮ ಸ್ವಭಾವಗಳಿಂದ ಚಿಕ್ಕವನಾಗಿರುವವನಿಗೂ ನಮಸ್ಕಾರ. ಮತ್ತು, ವಯಸ್ಸಿನಲ್ಲಿ ಹಿರಿಯನಿಗೆ ನಮಸ್ಕಾರ. ಹಾಗೂ ವಯಸ್ಸಿನಲ್ಲಿ ಕಿರಿಯನಿಗೂ ನಮಸ್ಕಾರ. ಅಂತೆಯೇ ನಡುವಯಸ್ಕನಿಗೆ ನಮಸ್ಕಾರ. ಅದೇ ರೀತಿ, ಅವಿಕಸಿತ ಶಕ್ತಿಯುಳ್ಳವನಿಗೆ ನಮಸ್ಕಾರ. ಹೀನ ಸ್ಥಿತಿಯಲ್ಲಿರುವವನಿಗೂ, ವಿಶಾಲ ಮನಸ್ಕನಿಗೂ ನಮಸ್ಕಾರ.
ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || [ಅಥರ್ವ.೬.೬೪.೩]
ನಿಮ್ಮ ಹಿತವು ಒಂದಿಗೇ ಆಗುವಂತೆ, ನಿಮ್ಮ ಮನಃಕಾಮನೆ ಸಮಾನವಾಗಿರಲಿ. ನಿಮ್ಮ ಹೃದಯಗಳು ಸಮಾನವಾಗಿರಲಿ. ನಿಮ್ಮ ಮನಸ್ಸುಗಳು ಸಮಾನವಾಗಿರಲಿ.
ಈ ಸಮಾನತೆಯ ಮಂತ್ರಗಳನ್ನು ನಿತ್ಯವೂ ಪಠಿಸುತ್ತಾ ಅದರ ಅರ್ಥವನ್ನೇ ತಿಳಿಯದಿರುವ ವೇದಪಂಡಿತರ ಹಾವಳಿಯಿಂದ ನಮ್ಮ ಸಮಾಜವು ಇಂತಹಾ ಸಂಘರ್ಷವನ್ನು ಎದುರಿಸುವ ಸ್ಥಿತಿಗೆ ಬಂದಿರುವುದು ಸುಳ್ಳಲ್ಲ. ಇನ್ನು ಮುಂದಾದರೂ ಇಂದಿನ ಯುವ ಜನತೆ ಇದನ್ನು ಅರ್ಥಮಾಡಿಕೊಂಡು ವೇದಮಂತ್ರಗಳನ್ನು ಅಧ್ಯಯನ ಮಾಡುತ್ತಾ,ಅರ್ಥಾನುಸಂಧಾನಮಾಡಿಕೊಂಡು ಜೀವನ ಸಾಗಿಸುವಂತಾದರೆ ನಮ್ಮ ದೇಶವು ಮತ್ತೊಮ್ಮೆ ವಿಶ್ವಗುರು ಆಗುವುದರಲ್ಲಿ ಸಂದೇಹವೇ ಇಲ್ಲ.
ಪ್ರತ್ಯುತ್ತರಅಳಿಸಿನಿಜ, ಶ್ರೀಧರ್.ಆದರೆ, ಉರು ಹೊಡೆದು ಹೇಳುವ ಪಂಡಿತರ ಹಾವಳಿ ತಪ್ಪಿಸಲಾದೀತೇ?
ಪ್ರತ್ಯುತ್ತರಅಳಿಸಿ