ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಗುರುವಾರ, ನವೆಂಬರ್ 1, 2012

ಆಯುರ್ಧಾರಾ - ೬


ಆಹಾರ ವಿಧಿ ವಿಧಾನಗಳು :

ಹಿಂದಿನ ಸಂಚಿಕೆಯಲ್ಲಿ ನಾವು ಆಹಾರದ ಗುಣ ಮತ್ತು ಪ್ರಮಾಣದ ಬಗ್ಗೆ ತಿಳಿದುಕೊಂಡೆವು. ಈಗ ಆಹಾರವನ್ನು ಸೇವಿಸುವ ವಿಧಿ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.
ಆಹಾರ ಸೇವಿಸುವಾಗ ಈ ಕೆಳಗಿನ ನಿಯಮಗಳನ್ನು ಪಾಲಿಸುವುದು ಅವಶ್ಯಕ :
ಬಿಸಿಯಾಗಿರುವ ಆಹಾರವನ್ನೇ ಸೇವಿಸಬೇಕು.
  • ಆಹಾರವು ಸ್ನಿಗ್ಧವಾಗಿರಬೇಕು (ತುಪ್ಪ ಮುಂತಾದ ಜಿಡ್ಡುಯುಕ್ತ ಆಹಾರ)
  • ಸರಿಯಾದ ಪ್ರಮಾಣದಲ್ಲಿ ಆಹಾರ ಸೇವಿಸಬೇಕು.
  • ಈ ಹಿಂದೆ ಸೇವಿಸಿದ ಆಹಾರವು ಸಂಪೂರ್ಣ ಜೀರ್ಣವಾದ  ನಂತರವಷ್ಟೇ ಮತ್ತೆ ಆಹಾರ ಸೇವಿಸಬೇಕು.
  • ಪರಸ್ಪರ ವಿರುದ್ಧಾಹಾರವನ್ನು ಸೇವಿಸಬಾರದು.
  • ಉತ್ತಮ ಪರಿಸರದಲ್ಲಿ ಆಹಾರವನ್ನು ಸೇವಿಸಬೇಕು.
  • ಅತಿ ವೇಗವಾಗಿ ಅಥವಾ ಅತಿ ವಿಳಂಬವಾಗಿ ಆಹಾರ                        ಸೇವಿಸಬಾರದು.
  • ಆಹಾರ ಸೇವಿಸುವಾಗ ಮಧ್ಯದಲ್ಲಿ ಮಾತನಾಡಬಾರದು.
  • ಆಹಾರ ಸೇವಿಸುವಾಗ ಮಧ್ಯದಲ್ಲಿ ನಗಬಾರದು.
  • ತನ್ಮಯತೆಯಿಂದ, ಏಕಾಗ್ರಚಿತ್ತರಾಗಿ, ಪ್ರಸನ್ನವಾದ ಮನಸ್ಸಿನಿಂದ ಆಹಾರವನ್ನು ಸೇವಿಸಬೇಕು.
                 ಈ ಮೇಲಿನ ನಿಯಮಾವಳಿಗಳನ್ನು ಪಾಲಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ :
  • ಬಿಸಿಯಾಗಿ ತಯಾರಿಸಿದ ಆಹಾರವು ಹೆಚ್ಚು ರುಚಿಕರವಾಗಿರುತ್ತದೆ, ಪಚನ ಶಕ್ತಿಯನ್ನು ವೃದ್ಧಿಸುತ್ತದೆ ಹಾಗು ಬೇಗ ಜೀರ್ಣವಾಗುತ್ತದೆ. ಆದ್ದರಿಂದ ಬಿಸಿಯಾದ ಆಹಾರವನ್ನೇ ಸೇವಿಸಬೇಕು. ಆರಿದ, ತಂಗಳು ಹಾಗು ಹಳಸಿದ ಪದಾರ್ಥವು ಪಚನ ಶಕ್ತಿಯನ್ನು ಕುಗ್ಗಿಸಿ, ಆಮವನ್ನು ಉಂಟುಮಾಡಿ ರೋಗಗಳಿಗೆ ಕಾರಣವಾಗುತ್ತದೆ. 
  • ಸ್ನಿಗ್ಧವಾದ ಆಹಾರವು (ತುಪ್ಪ, ಬೆಣ್ಣೆ ಮುಂತಾದ ಜಿಡ್ಡು ಪದಾರ್ಥ ಬೆರೆಸಿದ ಆಹಾರ) ರುಚಿಕರವಾಗಿರುತ್ತದೆ, ಪಚನ ಶಕ್ತಿಯನ್ನು ವೃದ್ಧಿಸುತ್ತದೆ, ಬೇಗ ಜೀರ್ಣವಾಗುತ್ತದೆ, ವಾತಾನುಲೋಮನ ಮಾಡುತ್ತದೆ, ಶರೀರಕ್ಕೆ ಪುಷ್ಟಿ ನೀಡುತ್ತದೆ, ಇಂದ್ರಿಯಗಳನ್ನು ದೃಢಮಾಡುತ್ತದೆ, ಅಂಗ-ಪ್ರತ್ಯಂಗಗಳ ಬಲವನ್ನು ವೃದ್ಧಿಸುತ್ತದೆ ಹಾಗು ಯೌವನವನ್ನು ಕಾಪಾಡುತ್ತದೆ. ಆದ್ದರಿಂದ ಸ್ನಿಗ್ಧಾಹಾರವನ್ನೇ ಸೇವಿಸಬೇಕು.  ಇತ್ತೀಚೆಗೆ ಜಿಡ್ಡು ತಿನ್ನುವುದರಿಂದ ಕೊಲೆಸ್ಟ್ರಾಲ್   ಹೆಚ್ಚಾಗಿ ರೋಗ ಬರುತ್ತದೆ ಎಂದು ಎಲ್ಲರೂ ಭಾವಿಸಿ ಜಿಡ್ಡು ತಿನ್ನುವುದನ್ನೇ ಬಿಟ್ಟಿದ್ದಾರೆ. ಇದು ತಪ್ಪು ಕಲ್ಪನೆಯಾಗಿದ್ದು, ತುಪ್ಪ ತಿನ್ನುವುದರಿಂದ ಯಾವ ತೊಂದರೆಯೂ ಆಗುವುದಿಲ್ಲ. ಬದಲಾಗಿ ಮೇಲೆ ತಿಳಿಸಿದ ಪ್ರಯೋಜನಗಳು ದೊರಕುತ್ತವೆ. ಆದ್ದರಿಂದ ಧೈರ್ಯವಾಗಿ, ಯಾವುದೇ ಅಂಜಿಕೆಯಿಲ್ಲದೆ ಸ್ನಿಗ್ಧಾಹಾರವನ್ನು ಸೇವಿಸಬಹುದು. 
  • ಪ್ರಮಾಣವು ಹೆಚ್ಚು ಕಡಿಮೆಯಾಗದಂತೆ ಊಟ ಮಾಡುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ, ಪಚನ ಶಕ್ತಿಯು ಕುಗ್ಗದೆ ಸುಖ ಪರಿಣಾಮವಾಗಿ(ಸುಖವಾಗಿ ಜೀರ್ಣವಾಗಿ) ಮಲ ಪ್ರವೃತ್ತಿಯು ಯಾವುದೇ ಕಷ್ಟವಿಲ್ಲದೇ ಆಗುವುದು. ಆದ್ದರಿಂದ ಸರಿಯಾದ ಪ್ರಮಾಣದಲ್ಲೇ ಊಟ ಮಾಡಬೇಕು.
  • ಈ ಹಿಂದೆ ಸೇವಿಸಿದ ಆಹಾರವು ಸಂಪೂರ್ಣ ಜೀರ್ಣವಾದ ನಂತರವಷ್ಟೇ ಮತ್ತೆ ಆಹಾರ ಸೇವಿಸುವುದರಿಂದ  ಆಹಾರ ಪಚನ ಕ್ರಿಯೆಯು ಸುಲಭವಾಗಿ ಆಗಿ, ಆಹಾರದ ರಸ ಭಾಗವು ಸರ್ವ ಧಾತುಗಳಿಗೂ ಒದಗಿ , ಆಯಸ್ಸಿನ ವೃದ್ಧಿಯಾಗುತ್ತದೆ. ಉದ್ಗಾರ(ತೇಗು) ಶುದ್ಧಿ ಹಾಗು ಹೃದಯ ಶುದ್ಧಿಯಾಗಿ(ಎದೆ ಭಾಗದಲ್ಲಿ ಉರಿ ಮುಂತಾದ ತೊಂದರೆ ಆಗುವುದಿಲ್ಲ) ದೇಹವು ಹಗುರವೆನಿಸುತ್ತದೆ. ಹೀಗೆ ಮಾಡದಿದ್ದಲ್ಲಿ ಸೇವಿಸಿದ ಆಹಾರವು ಸಂಪೂರ್ಣವಾಗಿ ಪಚನವಾಗದ ಹಿಂದಿನ ಆಹಾರದೊಡನೆ ಬೆರೆತು ದೋಷ ಪ್ರಕೋಪವನ್ನುಂಟು ಮಾಡಿ ರೋಗಗಳನ್ನು ಉದ್ಭವಿಸುತ್ತದೆ.
  • ಪರಸ್ಪರ ವಿರುದ್ಧವಾದ ಆಹಾರಗಳು ಗರ ವಿಷದಂತೆ ಕೆಲಸ ಮಾಡುತ್ತದೆ. ಆದ್ದರಿಂದ ವಿರುದ್ಧಾಹಾರವು ನಿಷಿದ್ಧ. ವಿರುದ್ಧ ಆಹಾರಗಳ ಬಗೆಗೆ ಮುಂದಿನ ಸಂಚಿಕೆಗಳಲ್ಲಿ ವಿವರವಾಗಿ ತಿಳಿದುಕೊಳ್ಳೋಣ.
  • ಉತ್ತಮ, ಶುಚಿಯಾದ ಪರಿಸರದಲ್ಲಿ ಆಹಾರವನ್ನು ಸೇವಿಸುವುದರಿಂದ ಮನಸ್ಸು ಉಲ್ಲಸಿತವಾಗುತ್ತದೆ. ಕೊಳಕು ವಾತಾವರಣದಲ್ಲಿ ಮನಸ್ಸಿಗೆ ಅಸಹ್ಯ ಉಂಟಾಗಿ, ಊಟ ಸೇರುವುದಿಲ್ಲ ಹಾಗು ಸರಿಯಾಗಿ ಪಚನವಾಗುವುದಿಲ್ಲ.
  • ಅತಿ ವೇಗವಾಗಿ ಆಹಾರ ಸೇವಿಸುವುದರಿಂದ ಆಹಾರ ಪದಾರ್ಥವು ಮೂಗು ಮುಂತಾದ ರಂಧ್ರಗಳಿಗೆ ಹೋಗಿ ತೊಂದರೆ ಉಂಟುಮಾಡುತ್ತದೆ(ನೆತ್ತಿ ಹತ್ತುವುದು) ಹಾಗು ಆಹಾರದ ಸಂಪೂರ್ಣ ಸಾದ್ಗುಣ್ಯ ದೇಹಕ್ಕೆ ದೊರಕುವುದಿಲ್ಲ. ಆದ್ದರಿಂದ ಆತಿ ವೇಗವಾಗಿ ಊಟ ಮಾಡಬಾರದು.
  • ಅತಿ ನಿಧಾನವಾಗಿ ತಿನ್ನುವುದರಿಂದ ಸರಿಯಾಗಿ ತೃಪ್ತಿಯಾಗದೆ ಹೆಚ್ಚು ತಿನ್ನುತ್ತಾರೆ. ಆಹಾರವು ತಣ್ಣಗಾಗಿ ವಿಷಮವಾಗಿ ಪಚನಗೊಳ್ಳುತ್ತದೆ. ಆದ್ದರಿಂದ ಆತಿ ನಿಧಾನವಾಗಿ ಊಟ ಮಾಡಬಾರದು.
  • ಮಾತನಾಡುತ್ತಾ, ನಗುತ್ತಾ, ತನ್ಮಯತೆಯಿಲ್ಲದೆ ತಿನ್ನುವುದರಿಂದಲೂ ಅತಿ ವೇಗವಾಗಿ ಆಹಾರ ಸೇವಿಸುವುದರಿಂದ ಆಗುವ ತೊಂದರೆಗಳು ಉಂಟಾಗುತ್ತವೆ.
  • ಅಂತಿಮವಾಗಿ ನಮ್ಮ ಆತ್ಮಸಮೀಕ್ಷೆಯಂತೆ ಅಂದರೆ ನಮಗೆ ಯಾವ ಆಹಾರವು ಹೆಚ್ಚು ಸೂಕ್ತ, ಹೆಚ್ಚು ಒಗ್ಗುತ್ತದೆ ಮತ್ತು ಯಾವುದು ಒಗ್ಗುವುದಿಲ್ಲ ಎಂಬುದನ್ನು ನಿರ್ಧರಿಸಿಯೇ ಊಟ ಮಾಡಬೇಕು.
   ಹೀಗೆ ಮೇಲೆ ತಿಳಿಸಿದ ವಿಧಿ ವಿಧಾನಗಳನ್ನು ಅನುಸರಿಸಿ ಆಹಾರ ಸೇವಿಸಿದಾಗ ಖಂಡಿತ ಉತ್ತಮ ಆರೋಗ್ಯ ಭಾಗ್ಯ ಲಭಿಸಿ, ಸುದೀರ್ಘಾಯಸ್ಸು ನಮ್ಮದಾಗುತ್ತದೆ. 

1 ಕಾಮೆಂಟ್‌:

  1. ಉಪಯುಕ್ತ ಲೇಖನ ಮುಂದುವರೆಸಿ ದೀಪಕ್. ಮುಂದಿನ ಸಂಚಿಕೆಯಲ್ಲಿ ವಿರುದ್ಧ ಆಹಾರದ ಬಗ್ಗೆ ತಿಳಿಸುತ್ತೇನೆಂದು ಹೇಳಿದ್ದೀರಿ. ಆದರೂ ಮಧ್ಯೆಯಲ್ಲಿ ಒಂದು ಅನುಮಾನ. ಸಾಮಾನ್ಯವಾಗಿ ಬೆಳಿಗ್ಗೆ ತಿಂಡಿ[ರೊಟ್ಟಿ, ಉಪ್ಪಿಟ್ಟು,ಇಡ್ಲಿ] ಜೊತೆಗೆ ಹಸಿ ಗೆಡ್ಡೆಕೋಸು ತಿನ್ನುವ ಅಭ್ಯಾಸ ನನ್ನದು. ಕೋಸು ಮತ್ತು ತಿಂಡಿಯ ಪ್ರಮಾಣ 50:50 ಇರುತ್ತೆ. ಇದು ಸರಿಯೇ? ತಪ್ಪೇ?

    ಪ್ರತ್ಯುತ್ತರಅಳಿಸಿ