ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಮೇ 16, 2011

ಸೋಲದಿರು

ದೂಷಿಸದಿರು ಮನವೆ ಪರರು ಕಾರಣರಲ್ಲ
ನಿನ್ನೆಣಿಕೆ ತಪ್ಪಾಗಿ ಕಂಡಿರುವೆ ನೋವ |
ವಿಧಿಯು ಕಾರಣವಲ್ಲ ಹಣೆಬರಹ ಮೊದಲಲ್ಲ
ಕೊರಗಿದರೆ ಫಲವಿಲ್ಲ ದಣಿಯದಿರು ಮನವೆ ||


ಉಗ್ರವಾಗಿಹ ಮನವೆ ತಾಳು ತಾಳೆಲೆ ನೀನು
ವಿವೇಕ ನಲುಗೀತು ಕೆರಳದಿರು ತಾಳು |
ವ್ಯಗ್ರತೆಯ ನಿಗ್ರಹಿಸಿ ಸಮಚಿತ್ತದಲಿ ನಡೆಯೆ
ಸೋಲಿನ ಅನುಭವವೆ ಗೆಲುವಿಗಾಸರೆಯು ||


ಮೂಢನಂತಾಡದಿರು ಮತಿಗೆಟ್ಟು ನರಳದಿರು
ಮೈ ಕೊಡವಿ ಮೇಲೆದ್ದು ಅಡಿಯನಿಡು ಧೀರ |
ಸೋಲದಿರೆಲೆ ಜೀವ ಕಾಯ್ವ ನಮ್ಮನು ದೇವ
ಛಲಬಿಡದೆ ಮುನ್ನಡೆದು ಉಳಿಸು ಸ್ವಂತಿಕೆಯ ||


ಲೋಕದೊಪ್ಪಿಗೆ ಬೇಕೆ ಪರರ ಮನ್ನಣೆಯೇಕೆ
ದಾರಿ ಸರಿಯಿರುವಾಗ ಅಳುಕು ಅಂಜಿಕೆಯೇಕೆ
ಒಳಮನವು ಒಪ್ಪಿರಲು ಚಂಚಲತೆ ಇನ್ನೇಕೆ
ಪಯಣಿಗನೆ ನೀ ಸಾಗು ದಾರಿ ನಿಚ್ಛಳವಿರಲು ||
***************
-ಕ.ವೆಂ.ನಾಗರಾಜ್.

2 ಕಾಮೆಂಟ್‌ಗಳು:

  1. [ಲೋಕದೊಪ್ಪಿಗೆ ಬೇಕೆ ಪರರ ಮನ್ನಣೆಯೇಕೆ
    ದಾರಿ ಸರಿಯಿರುವಾಗ ಅಳುಕು ಅಂಜಿಕೆಯೇಕೆ]
    ಸರಿ ಎಂದು ಮನದಟ್ಟಾಗುವುದೇ ಕಷ್ಟ. ಹೀಗೆಂದಾಗ ನಿನ್ನ ಬಗ್ಗೆ ನಿನಗೆ ನಂಬಿಕೆ ಇಲ್ಲವೇ? ಎನ್ನ ಬಹುದು.ಆದರೆ ನನಗಿಂತ ಬುದ್ಧಿವಂತರು,ಜ್ಞಾನಿಗಳು ಹೋಗುವ ದಾರಿಗೆ ನನ್ನ ದಾರಿ ಹೋಲಿಸಿದಾಗ ವಿರುದ್ಧವಾಗಿ ಕಂಡರೆ ನಾನು ತಡಬಡಿಸಬೇಡವೇ? ಆದರೂ ನನ್ನ ಆತ್ಮ ಒಪ್ಪಿದಂತೆ ಸಾಗುತ್ತಿರುವೆ. ಮುಂದಿನದನ್ನು ಕಾದುನೋಡಬೇಕಷ್ಟೆ.

    ಪ್ರತ್ಯುತ್ತರಅಳಿಸಿ
  2. ಬ್ಲಾಗ್ ತಲೆಬರಹದೊಡನಿರುವ ಚಿತ್ರವು ಯಾಕೋ ನನಗೆ ಚುಚ್ಚುತ್ತಿದೆ

    ಪ್ರತ್ಯುತ್ತರಅಳಿಸಿ