ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಮೇ 27, 2011

ಆಯುರ್ಧಾರಾ - 1

ಆತ್ಮೀಯರೇ,
                 ಈ ತಾಣದಲ್ಲಿ ಶಿವಮೊಗ್ಗದ ಡಾ. ಬಿ.ಎಸ್.ಆರ್. ದೀಪಕ್ ರವರು 'ಆಯುರ್ಧಾರಾ' ಶೀರ್ಷಿಕೆಯಲ್ಲಿ ಆಯುರ್ವೇದದ ಮಹತ್ವ ಮತ್ತು ಚಿಕಿತ್ಸಾ ಕ್ರಮಗಳ ಕುರಿತು ತಿಳಿಸಲಿದ್ದಾರೆ. ಈ ತಾಣದ ಲೇಖಕರಾದ ಕವಿ ಸುರೇಶರ ಪುತ್ರರಾದ ಇವರು ಕಳೆದ ಬಿ.ಎ.ಎಮ್.ಎಸ್. ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೆಯ ರಾಂಕ್ ಪಡೆದು ಉತ್ತೀರ್ಣರಾಗಿದ್ದಾರೆಂದು ತಿಳಿದುಬಂದಿದೆ. ಇವರು ವಯೊಲಿನ್ ವಿದ್ವತ್ ಪರೀಕ್ಷೆಯಲ್ಲಿ ಸಹ ಕಳೆದ ವರ್ಷ ರಾಜ್ಯಕ್ಕೆ ಮೊದಲಿಗರಾಗಿ ತೇರ್ಗಡೆಯಾಗಿರುವುದು ಅಭಿನಂದನೀಯ ಸಂಗತಿ. ಓದುಗರು ಇವರ ಲೇಖನಗಳ ಕುರಿತು ಸೂಕ್ತ ಸಲಹೆ, ಅಭಿಪ್ರಾಯ ನೀಡಲು ಕೋರಲಾಗಿದೆ.
-ಕ.ವೆಂ.ನಾಗರಾಜ್. 
***************************** 
ಆಯುರ್ವೇದದ ಪರಿಚಯಾತ್ಮಕ ಲೇಖನ ಮಾಲಿಕೆ - ೧
     ಆಯುರ್ವೇದವು ನಮ್ಮ ಪ್ರಾಚೀನ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ವೈದ್ಯ ವಿಜ್ಞಾನ. ಇದು ಅಂದಿಗೂ, ಇಂದಿಗೂ, ಎಂದೆಂದಿಗೂ ಪ್ರಸ್ತುತವಾಗಿದೆ. ಆಯುರ್ವೇದ ಪದವು ಆಯುಃ ಮತ್ತು ವೇದ ಎಂಬ ಎರಡು ಪದಗಳ ಜೋಡಣೆಯಿಂದ ಉಂಟಾಗಿದೆ. ಮೊದಲು ಈ ಎರಡು ಪದಗಳ ಅರ್ಥಗಳನ್ನು ಗಮನಿಸೋಣ. ಚರಕ ಸಂಹಿತೆಯಲ್ಲಿ ಆಯುಃ ಪದದ ವ್ಯಾಖ್ಯಾನ ಇಂತಿದೆ :
ಶರೀರೇಂದ್ರಿಯ ಸತ್ವಾತ್ಮ ಸಂಯೋಗೋ ಧಾರಿ ಜೀವಿತಂ |
ನಿತ್ಯಗಶ್ಚಾನುಬಂಧಶ್ಚ ಪರ್ಯಾಯೈಃ ಆಯುರುಚ್ಯತೆ || (ಚ.ಸಂ.ಸೂ. ೧/೪೨)
     ಶರೀರ, ಇಂದ್ರಿಯಗಳು, ಸತ್ವ(ಮನಸ್ಸು) ಹಾಗೂ ಆತ್ಮ, ಇವುಗಳ ಸಂಯೋಗವನ್ನು ಆಯು ಎಂದು ಕರೆಯುತ್ತಾರೆ. ಆಯು ಪದವು ಧಾರಿ, ಜೀವಿತ, ನಿತ್ಯಗ, ಅನುಬಂಧ ಎಂಬ ಪರ್ಯಾಯಗಳನ್ನೂ ಹೊಂದಿದೆ. ಮೇಲಿನ ನಾಲ್ಕೂ ಅಂಶಗಳು ಸಂಯುಕ್ತವಾಗಿರುವವರೆಗೂ ಮಾತ್ರ ಜೀವಿತಾವಧಿಯು. ವೇದ- ವೇದ ಎಂದರೆ ಜ್ಞಾನ ಎಂದರ್ಥ. ಮೇಲೆ ವಿವರಿಸಿರುವ ಆಯು ಅಥವಾ ಜೀವಿತದ ಬಗೆಗಿನ ಜ್ಞಾನವೇ ಆಯುರ್ವೇದ.
     ಆಯುರ್ವೇದದ ಪರಿಭಾಷೆಯನ್ನು ಚರಕ ಸಂಹಿತೆಯಲ್ಲಿ ಹೀಗೆ ವಿವರಿಸಲಾಗಿದೆ:
ಹಿತಾಹಿತಂ ಸುಖಂ ದುಃಖಮಾಯುಸ್ತಸ್ಯ ಹಿತಾಹಿತಂ |
ಮಾನಂ ಚ ತಚ್ಚ ಯತ್ರೋಕ್ತಂ ಆಯುರ್ವೇದಃ ಸ ಉಚ್ಯತೆ || ಚ.ಸಂ.ಸೂ. ೧/೪೧
     ಹಿತಾಯು, ಅಹಿತಾಯು, ಸುಖಾಯು, ದುಃಖಾಯು ಎಂಬ ನಾಲ್ಕು ವಿಧದ ಆಯುಗಳ ಬಗ್ಗೆ, ಅವುಗಳ ಹಿತಾಹಿತಗಳ ಬಗ್ಗೆ ಹಾಗೂ ಆಯುವಿನ ಪ್ರಮಾಣದ ಬಗ್ಗೆಯೂ ಎಲ್ಲಿ ವರ್ಣಿಸಲಾಗಿದೆಯೋ, ಆ ಶಾಸ್ತ್ರಕ್ಕೆ ಆಯುರ್ವೇದ ಎಂದು ಹೆಸರು.
ಆಯುರ್ವೇದದ ಚಿಕಿತ್ಸಾಕ್ರಮವನ್ನು ೮ ಅಂಗಗಳಾಗಿ ವಿಂಗಡಿಸಲಾಗಿದೆ. ಅವು ಯಾವುವೆಂದರೆ :
೧. ಕಾಯ ಚಿಕಿತ್ಸಾ.
೨. ಬಾಲ ಚಿಕಿತ್ಸಾ / ಕೌಮಾರ ಭೃತ್ಯ.
೩. ಗ್ರಹ ಚಿಕಿತ್ಸಾ.
೪. ಊರ್ಧ್ವಾಂಗ ಚಿಕಿತ್ಸಾ / ಶಾಲಾಕ್ಯ ತಂತ್ರ.
೫. ಶಲ್ಯ ತಂತ್ರ.
೬. ದಂಷ್ಟ್ರಾ ಚಿಕಿತ್ಸಾ / ವಿಷ ಚಿಕಿತ್ಸಾ.
೭. ಜರಾ ಚಿಕಿತ್ಸಾ / ರಸಾಯನ ಚಿಕಿತ್ಸಾ.
೮. ವಾಜೀಕರಣ ಚಿಕಿತ್ಸಾ.
**************
-ಡಾ.ಬಿ.ಎಸ್.ಆರ್.ದೀಪಕ್, ಬಿ.ಎ.ಎಮ್.ಎಸ್..ಶಿವಮೊಗ್ಗ

3 ಕಾಮೆಂಟ್‌ಗಳು:

  1. ವೇದಸುಧೆಯಲ್ಲಿ ಈ ಬಗ್ಗೆ ಮನವಿ ಮಾಡಿದ್ದೆ. ಅಂತೂ ಡಾ||ದೀಪಕ್ ರಿಂದಲೇ ಆಯುರ್ವೇದ ಶಾಸ್ತ್ರದ ಪರಿಚಯವಾಗುತ್ತಿರುವುದು ಬಲು ಸಂತೋಷದ ಸಂಗತಿ.ಈ ತಾಣದಲ್ಲೂ ಹಾಗೂ ವೇದಸುಧೆಯಲ್ಲೂ ದೀಪಕ್ ನೇರವಾಗಿ ಬರೆಯಲೆಂದು ಆಶಿಸುವೆ. ಹಿತಾಯು, ಅಹಿತಾಯು, ಸುಖಾಯು, ದುಃಖಾಯು ಈ ನಾಲ್ಕು ವಿಧದ ಆಯುಗಳ ಬಗ್ಗೆ ವಿವರವಾದ ಲೇಖನ ನಿರೆಕ್ಷಿಸಬಹುದೇ?

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. ಪ್ರಿಯ ಶ್ರೀಧರ್ ಶ್ರೀಮನ್, ನೀವು ನೀಡಿದ ಸಲಹೆಯಂತೆ ಹಿತಾಯು ಮುಂತಾದ ಆಯುವಿನ ವಿಧಗಳ ಬಗ್ಗೆ ಲೇಖನ ಬರೆದಿರುವೆ. ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ.

    ಪ್ರತ್ಯುತ್ತರಅಳಿಸಿ