ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಮೇ 29, 2011

ಕೂಪ ಮಂಡೂಕೋಪನಿಷತ್!

     ಸಾಮಾನ್ಯವಾಗಿ ಅಲ್ಪಜ್ಞಾನಿಗಳನ್ನು, ವಿಶಾಲ ಮನಸ್ಸಿಲ್ಲದವರನ್ನು ಮತ್ತು ತಮ್ಮನ್ನೇ ಸರ್ವಜ್ಞರೆಂದುಕೊಂಡವರನ್ನು ಕಂಡಾಗ ಕೂಪ ಮಂಡೂಕ ಗಳೆಂದು ಮೂದಲಿಸುವುದು ವಾಡಿಕೆ. ನಿಜಾರ್ಥದಲ್ಲಿ ನೋಡಿದರೆ ಈ ಹೋಲಿಕೆ ಆ ಕೂಪದಲ್ಲಿರುವ ಮಂಡೂಕಕ್ಕೆ ಮಾಡುವ ಅಪಚಾರ/ಅವಹೇಳನವೇ ಸರಿ. ಆ ಭಾವಿಯಲ್ಲಿ ಆ ಕಪ್ಪೆ ತನಗೆ ಬೇಕಾದ ಆಹಾರಾಶ್ರಯಾದಿಗಳನ್ನು ಪಡೆದು ತನ್ನಷ್ಟಕ್ಕೆ ತಾನು ಸುಖ-ನೆಮ್ಮದಿಯಿಂದ ವಟರ್...ವಟರ್... ಎಂದು ಹಾಡುತ್ತಾ ಬದುಕುತ್ತಿದೆ. ಅದಕ್ಕೆ ಹೊರಗಿನ ನದಿ-ಸಮುದ್ರಗಳ ಅರಿವಿಲ್ಲ; ಅದಕ್ಕೆ ಆ ಅರಿವು ಬೇಡವೂ ಬೇಡ! ತನಗೆ ಬೇಕಾದದ್ದೆಲ್ಲಾ ಅದಕ್ಕೆ ಅಲ್ಲಿಯೇ ಸಿಕ್ಕಿದೆ; ಇಲ್ಲವೇ ಸಿಕ್ಕಷ್ಟರಲ್ಲಿ ತೃಪ್ತಿ ಹೊಂದಿದೆ. ಹಾಗಾಗಿಯೇ ಅದು ಅಲ್ಲಿ ಹಾಯಾಗಿದೆ!
     ಹಾಗೆ ನೋಡಿದರೆ ನಾವು ಒಬ್ಬೊಬ್ಬರೂ ಕೂಪ ಮಂಡೂಕಿಗಳೇ. ವ್ಯತ್ಯಾಸವಿಷ್ಟೇ: ಅದು ಪಡೆದುದನ್ನನುಭವಿಸುತ್ತಾ ಅದರಲ್ಲೇ ತೃಪ್ತಿ ಹೊಂದಿ ಹಾಯಾಗಿದೆ. ನಾವಿಲ್ಲ ಅಷ್ಟೆ. ನಮಗೆ ಇರುವ ಕೂಪದಲ್ಲೇ ನೆಮ್ಮದಿಯಾಗಿ ಬದುಕಲೂ ಬಾರದು; ನದಿ-ಸಮುದ್ರಗಳಲ್ಲಿ ಈಜಿ ಬದುಕಲೂ ಧೈರ್ಯ ಸಾಲದು. ಪ್ರತಿಯೊಬ್ಬರನ್ನೂ ಗಮನಿಸಿ. ಅವರವರ ಕಾರ್ಯಕ್ಷೇತ್ರವೇ ಅವರವರ ಕೂಪ! ಅದನ್ನು ಮೀರಿ ಬಹುಮಂದಿ ಚಿಂತಿಸಲಾರರು; ಬದುಕಲಾರರು. ಜಾಣನಾದವನು ಬೇರೆ ಕೂಪಗಳಲ್ಲಿನ ಮಂಡೂಕಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ತನ್ನ ಕೂಪದಲ್ಲಿಯೇ ಸುಖ-ಸಂತೋಷ-ನೆಮ್ಮದಿಯನ್ನು ಕಂಡುಕೊಳ್ಳುತ್ತಾನೆ. ಇಂತಹವರು ವಿರಳ. ತನ್ನ ಕೂಪವನ್ನೇ ಪಾಪಕೂಪವನ್ನಾಗಿಸಿಕೊಂಡು ಇತರೇ ಕೂಪಗಳಲ್ಲಿರುವ ಮಾನವ-ಮಂಡೂಕಗಳ ಬಗ್ಗೆಯೇ ಟೀಕೆ-ಟಿಪ್ಪಣಿ, ಪರಿಹಾಸ, ವ್ಯಂಗ್ಯ ಮತ್ತು ಅಪಹಾಸ್ಯ ಮಾಡುತ್ತಾ ಬಾಳುವವರೇ ಇಂದು ಬಹುಜನ. ಅಂತಹವರು ತಮ್ಮ ಕೂಪದಲ್ಲಿಯೂ ನೆಮ್ಮದಿಯಾಗಿ ಬಾಳಲಾರರು; ಇತರರನ್ನೂ ನೆಮ್ಮದಿಯಾಗಿ ಬದುಕಲು ಬಿಡಲಾರರು. ತಾನೂ ಬಾಳಲಾರ, ಉಳಿದವರನ್ನೂ ಬಾಳಲೂ ಬಿಡಲಾರ ಎಂಬಂತೆ.
     ಒಬ್ಬ ಬಡವನಿದ್ದನಂತೆ. ಅವನು ಪ್ರತಿದಿನ ಅಚಂಚಲ ಭಕ್ತಿಯಿಂದ ದೇವಸ್ಥಾನಕ್ಕೆ ಹೋಗಿ ನಮಸ್ಕರಿಸಿ ಕಾರ್ಯಪ್ರವೃತ್ತನಾಗುತ್ತಿದ್ದ. ಆತನ ಭಕ್ತಿಗೆ ಒಲಿದ ದೇವರು ಪ್ರತ್ಯಕ್ಷನಾಗಿ ನಿನಗೇನು ವರ ಬೇಕು, ಕೇಳು ಎಂದನಂತೆ. ಆ ಬಡವ ನನಗೆ ಆನೆ ಬೇಕು ಎಂದನಂತೆ. ಚಕಿತಗೊಂಡ ದೇವರು, ಅಲ್ಲಾ, ನಿನ್ನನ್ನು ನೀನೇ ಸಾಕಲು ನಿನಗಾಗುತ್ತಿಲ್ಲ. ಇನ್ನು ಆನೆಯನ್ನು ಎಲ್ಲಿಂದ ಸಾಕುವೆ, ಬೇರೆ ವರ ಕೇಳು ಎಂದನಂತೆ. ಆದರೆ ಆ ಬಡವ ತನಗೆ ಅನೆ ಯೇ ಬೇಕೆಂದಾಗ, ಬಹುಶ: ಚಿನ್ನದ ಆನೆ ಕೇಳುತ್ತಿದ್ದಾನೆಂದು ಭಾವಿಸಿ ದೇವರು ಅದನ್ನು ಕರುಣಿಸಲು ಮುಂದಾಗುತ್ತಾನೆ. ಆ ಬಡವ ಅದಲ್ಲ, ನನಗೆ ಆನೆ ಎಂದರೆ ಆರೋಗ್ಯ ಮತ್ತು ನೆಮ್ಮದಿಯ ವರ ಕರುಣಿಸು ಎಂದನಂತೆ!
     ನಮಗೆಲ್ಲರಿಗೂ ಬೇಕಾದ್ದೂ ಅದೇ ಆನೆಯೇ!; ದಿನನಿತ್ಯ ನಡೆಸುವ ಎಲ್ಲ ಕಸರತ್ತುಗಳೂ ಅದಕ್ಕಾಗಿಯೇ. ಕಸರತ್ತುಗಳ ವೈಖರಿ, ಮಾರ್ಗ, ಪರಿಕಲ್ಪನೆಗಳು ಮಾತ್ರಾ ಬೇರೆ ಬೇರೆ. ಹಾಗಾಗಿ ಒಬ್ಬೊಬ್ಬರದು ಒಂದೊಂದು ರೀತಿಯ ಸಾಧನಾಪಥ. ಕೆಲವರ ನನ್ನ ಪಥವೇ ಅಂತಿಮ - ಸುಗಮ ಎಂಬುದು ಬಹುಶ: ಅತೀ ಬಾಲಿಶವಾದ, ಅಹಂಕಾರದ ಮತ್ತು ಅಜ್ಞಾನದ ಮಾತಾದೀತು. ಭಗವದ್ಗೀತೆ ಕೂಡ ಆಧ್ಯಾತ್ಮಿಕ ಸಾಧನೆಗಾಗಿ ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಮುಂತಾದ ಹಲವಾರು ಸಾಧನಾ ಪಥಗಳನ್ನು ಪ್ರತಿಪಾದಿಸಿದೆ. ಎಲ್ಲರೂ ಎಲ್ಲವನ್ನೂ ಪರಿಪಾಲಿಸುವುದು ಅತೀ ಕಷ್ಟಸಾಧ್ಯವಾದ ವಿಚಾರ. ಅವರವರ ಕರ್ಮಾನುಸಾರ, ಶಕ್ತ್ಯಾನುಸಾರ ಮತ್ತು ಸಂಸ್ಕಾರಾನುಸಾರ ಒಬ್ಬೊಬ್ಬರು ಒಂದೊಂದು ಮಾರ್ಗಾಶ್ರಯವನ್ನು ಆರಿಸಿಕೊಳ್ಳುತ್ತಾರೆ. ಅದಕ್ಕೆಂದೇ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಅಲ್ಪ ಅನುಷ್ಠಾನವೂ ಕಾರ್ಯಸಿದ್ಧಿ ನೀಡುವುದು ಎಂಬುದನ್ನು ಈ ರೀತಿ ಹೇಳಿದ್ದಾರೆ:
'ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭೂಯಾತ್ '- ಅಂದರೆ ಗೀತಾಸಾರದ ಸ್ವಲ್ಪ ಅನುಷ್ಠಾನ ಕೂಡ ಮನುಷ್ಯನನ್ನು ಹೆಚ್ಚು ಶ್ರೀಮಂತನೂ, ಸುಂದರನೂ ಹಾಗೂ ಭಯರಹಿತನೂ ಆಗಿ ರೂಪುಗೊಳ್ಳುವಲ್ಲಿ ನೆರವಾಗುತ್ತದೆ. ಹೇಗೆ ಕೂಪದಲ್ಲಿರುವ ಮಂಡೂಕ ತನಗೆಟಕಿದಷ್ಟನ್ನು ಪಡೆದು ಮುನ್ನಡೆಯುತ್ತದೆಯೋ ಮತ್ತು ಅಷ್ಟರಲ್ಲಿಯೇ ನೆಮ್ಮದಿಯನ್ನು ಪಡೆಯುತ್ತದೆಯೋ ಅದೇ ರೀತಿ ನಮ್ಮ ಜ್ಞಾನಚಕ್ಷುಗಳಿಗೆಟಕುವಂತಹ ಕೆಲವೇ ಉತ್ತಮ ವಿಚಾರಗಳನ್ನು ಅರಿತು, ಪರಾಮರ್ಶಿಸಿಕೊಂಡು, ಅಳವಡಿಸಿಕೊಂಡು ನಂತರ ನಿರಂತರ ಸಾಧನೆಗೈಯುವುದು ದ್ವಂದ್ವರಹಿತ ಬಾಳ್ವೆಗೆ ಶ್ರೀ ಕೃಷ್ಣ ಹೇಳಿದಂತೆ ನಾಂದಿಯಾಗಬಲ್ಲದು.
     ಹಾಗಾಗಿ ಕೂಪದಲ್ಲಿರುವ ಬಡಪಾಯಿ ಮಂಡೂಕದ ಗೊಡವೆ ನಮಗೆ ಬೇಡ. ಅದು ಅಲ್ಲಿ ಸುಖವಾಗಿಯೇ ಇದೆ; ಇರುತ್ತದೆ. ಅದನ್ನು ಹಾಗೆಯೇ ಅಲ್ಲಿಯೇ ಬಿಟ್ಟುಬಿಡೋಣ. ಮಂಡೂಕದ ಬಾಳು ನಮಗೆ ಆದರ್ಶಪ್ರಾಯವದರಷ್ಟೇ ಸಾಕು. ಅದರಂತೇ, ನಮ್ಮ ಇತಿ-ಮಿತಿಯಲ್ಲಿಯೇ, ನಮ್ಮ ನಮ್ಮ ಕೂಪಗಳಲ್ಲಿಯೇ, ಸಂತೋಷ-ಚಿತ್ತರಾಗಿ ಬಾಳಿದರೆ ಅದಕ್ಕಿಂತ ಸುಖ-ಶಾಂತಿ-ನೆಮ್ಮದಿ ಬೇಕೆ?
ಅಲ್ಪಜ್ಞರೇ ಎಲ್ಲ ಇಲ್ಲಿ ಸರ್ವಜ್ಞರು ಯಾರು ಇಲ್ಲ
ಅಲ್ಪವಿದ್ಯಾ ಮಹಾಗರ್ವಿಗಳೇ ಬಹುತೇಕ ಇಲ್ಲಿ ಎಲ್ಲ
ಅಲ್ಪಮತಿಯಲ್ಲೇ ಅರಸೋಣ ಮನದ ಸಚ್ಚಿದಾನಂದ
ಅದಕ್ಕಿಂತಿನ್ನೇನು ಬೇಕು ಓ ಮುಕುಂದ
     ಜಗದ ಎಲ್ಲ ಸ್ವಯಂ-ನಿರ್ಮಿತ ಕೂಪಗಳಲ್ಲಿರುವ ಮಾನವ-ಮಂಡೂಕಿಗಳೆಲ್ಲರೂ ಸಮಾನರೇ. ಎಲ್ಲರೂ ಸಮಾನ-ಸುಖಿಗಳಾಗಿ ಬಾಳಲಿ ಎಂಬ ಭಾವ ಅಲ್ಪಮತಿಯನ್ನೂ (ಕೂಪ ಮಾನವ-ಮಂಡೂಕವನ್ನೂ) ಸರ್ವಜ್ಞನನ ಸಮೀಪವಾದರೂ ತರಬಲ್ಲದು.
-ಕವಿ ವೆಂ. ಸುರೇಶ್

ಶುಕ್ರವಾರ, ಮೇ 27, 2011

ಆಯುರ್ಧಾರಾ - 1

ಆತ್ಮೀಯರೇ,
                 ಈ ತಾಣದಲ್ಲಿ ಶಿವಮೊಗ್ಗದ ಡಾ. ಬಿ.ಎಸ್.ಆರ್. ದೀಪಕ್ ರವರು 'ಆಯುರ್ಧಾರಾ' ಶೀರ್ಷಿಕೆಯಲ್ಲಿ ಆಯುರ್ವೇದದ ಮಹತ್ವ ಮತ್ತು ಚಿಕಿತ್ಸಾ ಕ್ರಮಗಳ ಕುರಿತು ತಿಳಿಸಲಿದ್ದಾರೆ. ಈ ತಾಣದ ಲೇಖಕರಾದ ಕವಿ ಸುರೇಶರ ಪುತ್ರರಾದ ಇವರು ಕಳೆದ ಬಿ.ಎ.ಎಮ್.ಎಸ್. ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೆಯ ರಾಂಕ್ ಪಡೆದು ಉತ್ತೀರ್ಣರಾಗಿದ್ದಾರೆಂದು ತಿಳಿದುಬಂದಿದೆ. ಇವರು ವಯೊಲಿನ್ ವಿದ್ವತ್ ಪರೀಕ್ಷೆಯಲ್ಲಿ ಸಹ ಕಳೆದ ವರ್ಷ ರಾಜ್ಯಕ್ಕೆ ಮೊದಲಿಗರಾಗಿ ತೇರ್ಗಡೆಯಾಗಿರುವುದು ಅಭಿನಂದನೀಯ ಸಂಗತಿ. ಓದುಗರು ಇವರ ಲೇಖನಗಳ ಕುರಿತು ಸೂಕ್ತ ಸಲಹೆ, ಅಭಿಪ್ರಾಯ ನೀಡಲು ಕೋರಲಾಗಿದೆ.
-ಕ.ವೆಂ.ನಾಗರಾಜ್. 
***************************** 
ಆಯುರ್ವೇದದ ಪರಿಚಯಾತ್ಮಕ ಲೇಖನ ಮಾಲಿಕೆ - ೧
     ಆಯುರ್ವೇದವು ನಮ್ಮ ಪ್ರಾಚೀನ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ವೈದ್ಯ ವಿಜ್ಞಾನ. ಇದು ಅಂದಿಗೂ, ಇಂದಿಗೂ, ಎಂದೆಂದಿಗೂ ಪ್ರಸ್ತುತವಾಗಿದೆ. ಆಯುರ್ವೇದ ಪದವು ಆಯುಃ ಮತ್ತು ವೇದ ಎಂಬ ಎರಡು ಪದಗಳ ಜೋಡಣೆಯಿಂದ ಉಂಟಾಗಿದೆ. ಮೊದಲು ಈ ಎರಡು ಪದಗಳ ಅರ್ಥಗಳನ್ನು ಗಮನಿಸೋಣ. ಚರಕ ಸಂಹಿತೆಯಲ್ಲಿ ಆಯುಃ ಪದದ ವ್ಯಾಖ್ಯಾನ ಇಂತಿದೆ :
ಶರೀರೇಂದ್ರಿಯ ಸತ್ವಾತ್ಮ ಸಂಯೋಗೋ ಧಾರಿ ಜೀವಿತಂ |
ನಿತ್ಯಗಶ್ಚಾನುಬಂಧಶ್ಚ ಪರ್ಯಾಯೈಃ ಆಯುರುಚ್ಯತೆ || (ಚ.ಸಂ.ಸೂ. ೧/೪೨)
     ಶರೀರ, ಇಂದ್ರಿಯಗಳು, ಸತ್ವ(ಮನಸ್ಸು) ಹಾಗೂ ಆತ್ಮ, ಇವುಗಳ ಸಂಯೋಗವನ್ನು ಆಯು ಎಂದು ಕರೆಯುತ್ತಾರೆ. ಆಯು ಪದವು ಧಾರಿ, ಜೀವಿತ, ನಿತ್ಯಗ, ಅನುಬಂಧ ಎಂಬ ಪರ್ಯಾಯಗಳನ್ನೂ ಹೊಂದಿದೆ. ಮೇಲಿನ ನಾಲ್ಕೂ ಅಂಶಗಳು ಸಂಯುಕ್ತವಾಗಿರುವವರೆಗೂ ಮಾತ್ರ ಜೀವಿತಾವಧಿಯು. ವೇದ- ವೇದ ಎಂದರೆ ಜ್ಞಾನ ಎಂದರ್ಥ. ಮೇಲೆ ವಿವರಿಸಿರುವ ಆಯು ಅಥವಾ ಜೀವಿತದ ಬಗೆಗಿನ ಜ್ಞಾನವೇ ಆಯುರ್ವೇದ.
     ಆಯುರ್ವೇದದ ಪರಿಭಾಷೆಯನ್ನು ಚರಕ ಸಂಹಿತೆಯಲ್ಲಿ ಹೀಗೆ ವಿವರಿಸಲಾಗಿದೆ:
ಹಿತಾಹಿತಂ ಸುಖಂ ದುಃಖಮಾಯುಸ್ತಸ್ಯ ಹಿತಾಹಿತಂ |
ಮಾನಂ ಚ ತಚ್ಚ ಯತ್ರೋಕ್ತಂ ಆಯುರ್ವೇದಃ ಸ ಉಚ್ಯತೆ || ಚ.ಸಂ.ಸೂ. ೧/೪೧
     ಹಿತಾಯು, ಅಹಿತಾಯು, ಸುಖಾಯು, ದುಃಖಾಯು ಎಂಬ ನಾಲ್ಕು ವಿಧದ ಆಯುಗಳ ಬಗ್ಗೆ, ಅವುಗಳ ಹಿತಾಹಿತಗಳ ಬಗ್ಗೆ ಹಾಗೂ ಆಯುವಿನ ಪ್ರಮಾಣದ ಬಗ್ಗೆಯೂ ಎಲ್ಲಿ ವರ್ಣಿಸಲಾಗಿದೆಯೋ, ಆ ಶಾಸ್ತ್ರಕ್ಕೆ ಆಯುರ್ವೇದ ಎಂದು ಹೆಸರು.
ಆಯುರ್ವೇದದ ಚಿಕಿತ್ಸಾಕ್ರಮವನ್ನು ೮ ಅಂಗಗಳಾಗಿ ವಿಂಗಡಿಸಲಾಗಿದೆ. ಅವು ಯಾವುವೆಂದರೆ :
೧. ಕಾಯ ಚಿಕಿತ್ಸಾ.
೨. ಬಾಲ ಚಿಕಿತ್ಸಾ / ಕೌಮಾರ ಭೃತ್ಯ.
೩. ಗ್ರಹ ಚಿಕಿತ್ಸಾ.
೪. ಊರ್ಧ್ವಾಂಗ ಚಿಕಿತ್ಸಾ / ಶಾಲಾಕ್ಯ ತಂತ್ರ.
೫. ಶಲ್ಯ ತಂತ್ರ.
೬. ದಂಷ್ಟ್ರಾ ಚಿಕಿತ್ಸಾ / ವಿಷ ಚಿಕಿತ್ಸಾ.
೭. ಜರಾ ಚಿಕಿತ್ಸಾ / ರಸಾಯನ ಚಿಕಿತ್ಸಾ.
೮. ವಾಜೀಕರಣ ಚಿಕಿತ್ಸಾ.
**************
-ಡಾ.ಬಿ.ಎಸ್.ಆರ್.ದೀಪಕ್, ಬಿ.ಎ.ಎಮ್.ಎಸ್..ಶಿವಮೊಗ್ಗ

ಸೋಮವಾರ, ಮೇ 16, 2011

ಸೋಲದಿರು

ದೂಷಿಸದಿರು ಮನವೆ ಪರರು ಕಾರಣರಲ್ಲ
ನಿನ್ನೆಣಿಕೆ ತಪ್ಪಾಗಿ ಕಂಡಿರುವೆ ನೋವ |
ವಿಧಿಯು ಕಾರಣವಲ್ಲ ಹಣೆಬರಹ ಮೊದಲಲ್ಲ
ಕೊರಗಿದರೆ ಫಲವಿಲ್ಲ ದಣಿಯದಿರು ಮನವೆ ||


ಉಗ್ರವಾಗಿಹ ಮನವೆ ತಾಳು ತಾಳೆಲೆ ನೀನು
ವಿವೇಕ ನಲುಗೀತು ಕೆರಳದಿರು ತಾಳು |
ವ್ಯಗ್ರತೆಯ ನಿಗ್ರಹಿಸಿ ಸಮಚಿತ್ತದಲಿ ನಡೆಯೆ
ಸೋಲಿನ ಅನುಭವವೆ ಗೆಲುವಿಗಾಸರೆಯು ||


ಮೂಢನಂತಾಡದಿರು ಮತಿಗೆಟ್ಟು ನರಳದಿರು
ಮೈ ಕೊಡವಿ ಮೇಲೆದ್ದು ಅಡಿಯನಿಡು ಧೀರ |
ಸೋಲದಿರೆಲೆ ಜೀವ ಕಾಯ್ವ ನಮ್ಮನು ದೇವ
ಛಲಬಿಡದೆ ಮುನ್ನಡೆದು ಉಳಿಸು ಸ್ವಂತಿಕೆಯ ||


ಲೋಕದೊಪ್ಪಿಗೆ ಬೇಕೆ ಪರರ ಮನ್ನಣೆಯೇಕೆ
ದಾರಿ ಸರಿಯಿರುವಾಗ ಅಳುಕು ಅಂಜಿಕೆಯೇಕೆ
ಒಳಮನವು ಒಪ್ಪಿರಲು ಚಂಚಲತೆ ಇನ್ನೇಕೆ
ಪಯಣಿಗನೆ ನೀ ಸಾಗು ದಾರಿ ನಿಚ್ಛಳವಿರಲು ||
***************
-ಕ.ವೆಂ.ನಾಗರಾಜ್.

ಸಮಾನೋ ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ

     ಅನೇಕ ದಿನಗಳಿಂದ ನನ್ನ ಮನದೊಳಗೆ ಒಂದು ಚಿಂತೆ ಕಾಡುತ್ತಿದೆ.ನಮಗೆಲ್ಲಾ ಜನ್ಮಕೊಟ್ಟಈ ನೆಲಕ್ಕೆ  ಪುಣ್ಯಭೂಮಿ, ಮೋಕ್ಷಭೂಮಿ, ತ್ಯಾಗಭೂಮಿ,ದೇವಭೂಮಿ, ಎಂದೆಲ್ಲಾ ಕವಿಗಳು ಬಣ್ಣಿಸಿದ್ದಾರೆ.ನಮ್ಮ ಋಷಿಪುಂಗವರ ತಪಸ್ಸಿನಿಂದ, ಅವರ ಆದರ್ಶಮಯ ಜೀವನದಿಂದ ನಮ್ಮ ದೇಶಕ್ಕೆ "ವಿಶ್ವಗುರುವಿನ" ಸ್ಥಾನ ಲಭಿಸಿತ್ತು ಎಂಬ ವಿಚಾರವನ್ನೂ ಸಹ ಕೇಳುತ್ತೇವೆ.ನಮ್ಮ ಈ ನೆಲದಲ್ಲಿಯೇ "ಮುತ್ತು ರತ್ನಗಳನ್ನು ಬಳ್ಳದಿಂದ ಅಳೆದು ಮಾರುತ್ತಿದರೆಂದೂ" ಕೇಳಿದ್ದೇವೆ.ಇವೆಲ್ಲದರ ಜೊತೆಗೆ ನಮ್ಮ ನಿತ್ಯ ಸಂಕಲ್ಪವಾದರೋ " ಸರ್ವೇ ಭವಂತು ಸುಖಿನ:.......ಮಾ ಕಶ್ಚಿತ್ ದು:ಖ ಭಾಗಭವೇತ್"-ಎಲ್ಲರೂ ಸುಖವಾಗಿರಬೇಕು........, ಯಾರಿಗೂ ದು:ಖ ಬರುವುದು ಬೇಡ". ಇದು ನಮ್ಮ ನಿತ್ಯ ಪ್ರಾರ್ಥನೆ ಯಾಗಿತ್ತು. ಆದರೆ ಎಲ್ಲೋ ಎನೋ ತಪ್ಪಾಗಿದೆಯಲ್ಲಾ! ಯಾವುದೋ ಕೊಂಡಿ ಕಳಚಿದೆಯಲ್ಲಾ!!
     ಮೊನ್ನೆ ನಾನು ಅಗ್ನಿಹೋತ್ರ ಮಾಡುತ್ತಾ ಕುಳಿತಿದ್ದೆ. ನಮ್ಮಕ್ಕ ನಮ್ಮ ಮನೆಗೆ ಬಂದವರು " ಇದೇನೋ ನೀನು "ಹೋಮ ಮಾಡುತ್ತಿದ್ದೀಯಾ? ಯಜುರ್ವೇದವರು ಮಾಡಬೇಕಾದ್ದು,ಋಗ್ವೇದಿಯಾದ ನೀನು ಮಾಡುತ್ತಿದ್ದೀಯಲ್ಲಾ!!" ವೇದಸುಧೆಯ ವಾರ್ಷಿಕೋತ್ಸವದಲ್ಲಿ ನಡೆದ ಅಗ್ನಿಹೋತ್ರ ಕಾರ್ಯಕ್ರಮದಲ್ಲಿ ಸ್ವತ: ಅಗ್ನಿಹೋತ್ರ ಮಾಡಿದ್ದ ನಮ್ಮ ಅಕ್ಕ ಶ್ರೀ ಸುಧಾಕರ ಶರ್ಮರಿಂದ ಅಗ್ನಿಹೋತ್ರದ ಅರ್ಥವಿವರಣೆಯನ್ನು ಸವಿಸ್ತಾರವಾಗಿ ಕೇಳಿದ್ದರು. ಅಂದು ಮೆಚ್ಚುಗೆ ವ್ಯಕ್ತಪಡಿಸಿದ್ದವರು. ಇವರೇ. ಆದರೆ ಅವರ ಬಾಯಲ್ಲಿಯೇ ಈ ಪ್ರಶ್ನೆ. ನಾನು ನಮ್ಮಕ್ಕನಿಗೆ ಹೇಳಿದೆ " ಆರೋಗ್ಯ ನಿಮಗೆ ಮಾತ್ರ ಬೇಕೋ? ಬೇರೆಯವರಿಗೆ ಬೇಡವೋ? ಅವರು ನಿರುತ್ತರರಾಗಿದ್ದರು.
     ಬ್ರಾಹ್ಮಣರೆಂದು ಕರೆಸಿಕೊಳ್ಳುವ , ಅಲ್ಪಸ್ವಲ್ಪ ಸಾಮಾಜಿಕ  ಅರಿವು ಹೊಂದಿರುವ ಇವರೇ ಹೀಗೆ ಚಿಂತಿಸಿದರೆ ಹಿಂದುಸಮಾಜವು  ಇನ್ನೂ ಯಾವ ಬಗೆಯ ಅಜ್ಞಾನದ ಸುಳಿಯಲ್ಲಿ ಸಿಲುಕಿ ಬಳಲುತ್ತಿರಬಹುದೆಂದು ಚಿಂತೆಗೊಳಗಾಗುತ್ತೇನೆ. ಚಿಂತೆಗೆ ಕಾರಣವಿದೆ. ಯಜ್ಞೋಪವೀತವನ್ನು ಧಾರಣೆ ಮಾಡಿರುವ ಎಲ್ಲರಿಗೂ ವೈಜ್ಞಾನಿಕವಾಗಿ ಅದರ ಮಹತ್ವವನ್ನು ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತದೆ, ಸಂಧ್ಯಾವಂದನೆ ಮಾಡುವ, ಗಾಯತ್ರಿ ಮಂತ್ರ ಜಪಿಸುವ, ಊಟಮಾಡುವಾಗಿನ ಪರಿಶಂಚನೆಗೂ ಅರ್ಥ ವಿವರಣೆ ಕೊಟ್ಟು ಅದರಿಂದಾಗಿ ನಮ್ಮ  ಆರೋಗ್ಯದ ಮೇಲಾಗುವ ಸತ್ಪರಿಣಾಮದ ಬಗೆಗೆ ಅರಿವು ಮಾಡಿಸಲಾಗುತ್ತದೆ.ಆದರೆ " ಸರ್ವೇ ಭವಂತು ಸುಖಿನ:.......ಮಾ ಕಶ್ಚಿತ್ ದು:ಖ ಭಾಗಭವೇತ್"- ಎಂದು ಪ್ರಾರ್ಥಿಸುವ ನಾವು ನಮ್ಮೊಡನೆ ಉಪನಯನ ಸಂಸ್ಕಾರದಿಂದ, ವೇದಾಧ್ಯಯನದಿಂದ ಎಷ್ಟು ಜನ ನಮ್ಮ ಸೋದರರು ವಂಚಿತರಾಗಿದ್ದಾರೆಂಬ ಬಗ್ಗೆ ಯೋಚಿಸಿದ್ದೇವೆಯೇ?  " ಆತ್ಮವತ್ ಸರ್ವ ಭೂತೇಶು" ಎನ್ನುವ ನಮಗೆ ಮಾನವ ಜಾತಿಯಲ್ಲೂ ಒಂದುಬಹುದೊಡ್ದ ಭಾಗ ಈ ಸಂಸ್ಕಾರಗಳಿಂದ ವಂಚಿತವಾಗಿದೆ, ಎಂದು ಅನಿಸುವುದಿಲ್ಲವೇ?ಅವರಿಗೆ ಉತ್ತಮ ಆರೋಗ್ಯ ಬೇಡವೇ? ಉತ್ತಮ ಬದುಕು ಬೇಡವೇ?
     ನನಗೆ ಚಿಂತೆ ಕಾಡಲೂ ಇನ್ನೂ ಕಾರಣಗಳಿವೆ. ವೇದಾಧ್ಯಯನವನ್ನು ಮಾಡಿರುವ ಅದೆಷ್ಟು ವಿದ್ವಾಂಸರುಗಳಿಲ್ಲ! ಅವರಲ್ಲಿ ಈ ಚಿಂತೆ ಯಾಕೆ ಕಾಡುತ್ತಿಲ್ಲ? ನಮ್ಮ ವೈದಿಕ ಪರಂಪರೆಯಿಂದ ಒಂದು ಆರೋಗ್ಯಯುತವಾದ ಜೀವನ ನಡೆಸಬಹುದೆಂದಾದರೆ ಆ ಜೀವನ ಕೆಲವರಿಗೆ ದಕ್ಕಿದರೆ ಸಾಕೇ?
ಸಮಾನೋ ಮಂತ್ರ:  ಸಮಿತಿ: ಸಮಾನೀ ಸಮಾನಂ ವ್ರತಂ ಸಹ ಚಿತ್ತಮೇಷಾಮ್|
ಸಮಾನೇನ ವೋ ಹವಿಷಾ ಜುಹೋಮಿ ಸಮಾನಂ ಚೇತೋ ಅಭಿಸಂವಿಶಧ್ವಮ್||
[ಅಥರ್ವ-೬.೬೪.೨]
ಅಥರ್ವ ವೇದ ಈ ಮಂತ್ರ ಏನು ಹೇಳುತ್ತದೆ?
ಸಮಾನೋ ಮಂತ್ರ: = ಮಾನವರೆಲ್ಲರ ಮಂತ್ರವು ಸಮಾನವಾಗಿರಲಿ
ಸಮಿತಿ: ಸಮಾನೀ= ಸಮಿತಿಯು ಸಮಾನವಾಗಿರಲಿ[ ಸಮಿತಿ ಎಂದರೆ ಸಭೆ, ಕೂಟ, ಸಂಸ್ಥೆ,ಸಮಾಜ,ಸೇರುವಿಕೆ]
ಸಮಾನಂ ವ್ರತಂ=ವ್ರತವೂ ಸಮಾನವಾಗಿರಲಿ[ವ್ರತವೆಂದರೆ ಕಟ್ಟು, ಕಟ್ಟಳೆ,ನಿಯಮ,ಶಾಸನ,ವಿಧಿ, ಯಜ್ಞ,ಪೂಜೆ,ಧಾರ್ಮಿಕ ಪ್ರತಿಜ್ಞೆ ]
ಸಹ ಚಿತ್ತಮೇಷಾಮ್= ಇವರೆಲ್ಲರ ಚಿತ್ತವು ಒಂದೇ ದಿಕ್ಕಿನಲ್ಲಿ ಹರಿಯಲಿ
ವ:=ನಿಮ್ಮೆಲ್ಲರಿಗೂ
ಸಮಾನೇನ  ಹವಿಷಾ=ಸಮಾನವಾದ ಖಾದ್ಯ,ಪೇಯಗಳನ್ನೇ
ಜುಹೋಮಿ=ದಾನ ಮಾಡುತ್ತೇನೆ
 ಸಮಾನಂ ಚೇತ:=ಸಮಾನವಾದ ಚೈತನ್ಯದಲ್ಲಿಯೇ
ಅಭಿಸಂವಿಶಧ್ವಮ್= ಎಲ್ಲೆಡೆಯಿಂದಲೂ ಪ್ರವೇಶಿಸಿರಿ
     ಈ ಮಂತ್ರದ ಅರ್ಥವನ್ನು ತಿಳಿದಾಗ ಆ ಭಗವಂತನೇ ನೀಡಿರುವ  ಸವಲತ್ತನ್ನೂ ಕೂಡ ನಾವು ಸರಿಯಾಗಿ ಎಲ್ಲರೂ ಅನುಭವಿಸಲು ಸಾಧ್ಯವಾಗಿಲ್ಲವಲ್ಲಾ! [ಸುಪ್ರೀಮ್ ಕೋರ್ಟ್ ಆದೇಶವಿದ್ದರೂ ಸಹ ಸರ್ಕಾರವು  ಕಾರ್ಯಕ್ರಮವನ್ನು ಅನುಷ್ಠಾನ ಮಾಡದಿರುವಂತೆ] ಯಾಕೆ ಹೀಗೆ? ಯಾಕೆ ಹೀಗೆ? ಚಿಂತೆ ಕಾಡುತ್ತಿರುವುದು ತಪ್ಪೇ?
ಸಾಮಾಜಿಕ ಸಾಮರಸ್ಯದ ಬಗೆಗೆ ಚಿಂತನೆ ಮಾಡುವಾಗ  ನಿಜವಾಗಿ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಅದು ಮಾಂಸಾಹಾರ ಸೇವನೆ ಯ ಸಮಸ್ಯೆ. ಈ ಸಮಸ್ಯೆಯನ್ನು ಪರಿಹರಿಸುವುದೇನೂ ಕಷ್ಟವಿಲ್ಲ. ಆದರೂ ಬೆಳೆದುಬಂದಿರುವ ರೂಢಿಯಿಂದ ಹಲವರು ಮಾಂಸಾಹಾರದ ಅಭ್ಯಾಸವನ್ನು ಮಾಡಿಕೊಂಡಿರುವುದು ಸುಳ್ಳಲ್ಲ. ಮಾಂಸಾಹಾರಿ ಮಿತ್ರರನ್ನು ಬಹಳ ಆತ್ಮೀಯವಾಗಿ ವಿಚಾರಿಸಿದಾಗ ಅವರಿಂದ ಪ್ರಾಮಾಣಿಕವಾಗಿ ಬರುವ ಉತ್ತರವೇನು ಗೊತ್ತೇ? “ ಬಾಯಿ ಚಪಲ ದಿಂದಾಗಿ ಮಾಂಸಾಹರ ಬಿಡಲು ಆಗುತ್ತಿಲ್ಲ” ಸಸ್ಯಾಹಾರವು ಆರೋಗ್ಯಕ್ಕೆ ಉತ್ತಮವೆಂದು ಹೇಳಿದರೆ ಉತ್ತರ ಒಂದು ಸಿದ್ಧವಾಗಿರುತ್ತದೆ” ಬಹುತೇಕ  ವಿಜ್ಞಾನಿಗಳು ಭಾರತೀಯರಲ್ಲ. ಪಾಶ್ಚಿಮಾತ್ಯರಲ್ಲಿ ಮಾಂಸಾಹಾರ ಸರ್ವೇ ಸಾಮಾನ್ಯ. ಆದ್ದರಿಂದ ಮಾಂಸಾಹಾರಿ ವಿಜ್ಞಾನಿಗಳಿರಲಿಲ್ಲವೇ?
     ನಿಜವಾಗಿ ಪಾಶ್ಚಿಮಾತ್ಯ ವಿಜ್ಞಾನಿಗಳ ಆಹಾರ ಕ್ರಮವನ್ನು ಇವರೇನೂ ಅಧ್ಯಯನ ಮಾಡಿಲ್ಲ. ಆದರೂ ಅವರೆಲ್ಲರನ್ನೂ ಮಾಂಸಾಹಾರಿಗಳೆಂದು ಪರಿಗಣಿಸಿ ಮಾಂಸಾಹಾರ ಸೇವನೆಗೂ ಜ್ಞಾನಕ್ಕೂ  ಸಬಂಧವಿಲ್ಲ” ಎಂಬ ಸ್ವಂತ ತೀರ್ಮಾನಕ್ಕೆ ಬಂದು ಅದಕ್ಕೇ ಅಂಟಿಕೊಳ್ಳುವರಿಗೇನೆನ್ನಬೇಕು? ಯಜ್ಞಕ್ಕೆ ಅಧ್ವರ ಎಂಬ ಸಮಾನ ಪದವೂ ಇದೆ. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದಾಯ್ತು. ಹಾಗಾಗಿ ಹಿಂಸೆ ಮಾಡದೆ ,ಪ್ರಾಣಿಯನ್ನು ಕೊಲ್ಲದೆ ಮಾಂಸಾಹಾರ ಸೇವನೆ ಸಾಧ್ಯವೇ? ಆದ್ದರಿಂದ ಯಜ್ಞವನ್ನು ಮಾಡಬೇಕಾದ ಎಲ್ಲಾ ಮಾನವರೂ ಕೂಡ ಸಸ್ಯಾಹಾರಿಗಳೇ ಆಗಿರಬೇಕಲ್ಲವೇ? ಈ ಮಾತು ಹೇಳುವಾಗ  ಮಾಂಸಪ್ರಿಯರು ಕೂಡಲೇ ಉತ್ತರಿಸುತ್ತಾರೆ “ ನಾವು ಕುರಿ-ಕೋಳಿ ಕೊಂದು ತಿನ್ನದಿದ್ದರೆ , ಅವುಗಳ ಸಂಖ್ಯೆ ಎಷ್ಟಾಗುತ್ತಿತ್ತು ಗೊತ್ತಾ? ಎಂತಹಾ ಪ್ರಶ್ನೆ! ಸಿಂಹ, ಹುಲಿ ಇತ್ಯಾದಿ ಪ್ರಾಣಿಗಳ ಆಹಾರವೇ ಮತ್ತೊಂದು ಪ್ರಾಣಿಯ ಮಾಂಸ. ಸಿಂಹ, ಹುಲಿಗಳಿಗೆ  ಸಸ್ಯಾಹಾರ ಉಣಿಸಲು ಸಾಧ್ಯವೇ? ಒಂದು ಪ್ರಾಣಿ ಮತ್ತೊಂದು ಪ್ರಾಣಿಗೆ ಆಹಾರ. ಆದರೆ ಯಾವ ಪ್ರಾಣಿಯೂ ಮನುಷ್ಯನಿಗೆ ಆಹಾರವಾಗಬಾರದು. ಮನುಷ್ಯನ ದೇಹದ ರಚನೆಯೂ ಕೂಡ ಸಸ್ಯಾಹಾರಕ್ಕೇ ರಚಿತವಾಗಿದ್ದು.
     ಇಂತಹ ಸೂಕ್ಷ್ಮ ವಿಷಯಗಳ ಬಗೆಗೆ ಚಿಂತನ-ಮಂಥನ ಮಾಡಬಾರದೇ? ಬದಲಾಗಬೇಕಾದವರು ಕೇವಲ ಒಂದು ವರ್ಗವಲ್ಲ. ವೇದಜ್ಞಾನವನ್ನು ಹೊಂದಿರುವವರು ವೇದಜ್ಞಾನವಿಲ್ಲದ ಆದರೆ ಅದನ್ನು ಕಲಿಯುವ ಆಸಕ್ತಿ ಇರುವ ಯಾವುದೇ ವ್ಯಕ್ತಿಗಾಗಲೀ ಕಲಿಸಿಕೊಡಲು ಮುಂದೆ ಬರಬೇಕು, ಅಂತೆಯೇ ವೇದಜ್ಞಾನವಿಲ್ಲದವರು ವೇದಜ್ಞಾನವನ್ನು ಪಡೆಯಲು ಬೇಕಾದ ಮಾನಸಿಕತೆಯನ್ನು ಹೊಂದಬೇಕು. ಅಲ್ಲವೇ?  ಇಡೀ ವಿಶ್ವಕ್ಕೆ ಉತ್ತಮ ಬದುಕು  ನೀಡುವ ಸಾಮರ್ಥ್ಯವು ವೇದದಲ್ಲಿದ್ದು ಅದನ್ನು ಬಲ್ಲವರು ಆಸಕ್ತರಿಗೆ ನೀಡಲು ಮನಸ್ಸು ಮಾಡಬೇಕು,ಪಡೆಯುವವರೂ ಕೂಡ ಪಡೆಯಲು ಬೇಕಾದ ಮಾನಸಿಕತೆಯನ್ನು ಬೆಳಸಿಕೊ ಳ್ಳಬೇಕು. ಏನಂತೀರಾ?

ಸೋಮವಾರ, ಮೇ 2, 2011

ಅಗ್ನಿಹೋತ್ರ - ಪ್ರಾತ್ಯಕ್ಷಿಕೆ

     ದಿನಾಂಕ 29-01-2011ರಂದು ಹಾಸನದ ಶ್ರೀ ಶಂಕರಮಠದ ಆವರಣದಲ್ಲಿ ('ವೇದಸುಧೆ' ಅಂತರ್ಜಾಲತಾಣದ ವಾರ್ಷಿಕೋತ್ಸವದ ಮುನ್ನಾದಿನ) ಹಾಸನದ ರಾಷ್ಟ್ರಗೌರವ ಸಂರಕ್ಷಣಾ ಪರಿಷತ್ ವತಿಯಿಂದ 'ಸಾರ್ವಜನಿಕ ಜೀವನ ಮತ್ತು ವೇದ' ಎಂಬ ವಿಚಾರದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರಶರ್ಮರಿಂದ ಉಪನ್ಯಾಸ ಏರ್ಪಾಡಾಗಿತ್ತು. ಅದಕ್ಕೆ ಮುನ್ನ 'ಅಗ್ನಿಹೋತ್ರ' ಮಾಡುವ ಕುರಿತು ಪ್ರಾತ್ಯಕ್ಷಿಕೆ ಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಾನು, ನನ್ನ ಪತ್ನಿ ಭಾರತಿ ಸೇರಿದಂತೆ ನಾಲ್ವರು ದಂಪತಿಗಳು ಭಾಗವಹಿಸಿದ್ದೆವು. ಅಗ್ನಿಹೋತ್ರದ ಮಹತ್ವ ತಿಳಿಸಿದ ಶ್ರೀ ಶರ್ಮರು ಪ್ರತಿ ಮಂತ್ರದ ಅರ್ಥ ವಿವರಿಸಿ ಹೇಳಿದ್ದು ಎಲ್ಲರ ಮನಕ್ಕೆ ತಲುಪುವಂತಿತ್ತು. ಆ ಸಂದರ್ಭದ ಕೆಲವು ದೃಶ್ಯಗಳು: