ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಜೂನ್ 30, 2010

ವೇದೋಕ್ತ ಜೀವನ ಪಥ - ಜೀವನ ಬುನಾದಿ -೫



ಸ್ವತಃ ಯಜುರ್ವೇಧ ಸ್ಪಷ್ಟವಾಗಿ ಸಾರುತ್ತಿದೆ:
ಯಥೇಮಾಂ ವಾಚಂ ಕಲ್ಯಾಣೇಮಾವದಾನಿ ಜನೇಭ್ಯಃ|
ಬ್ರಹ್ಮ ರಾಜನ್ಯಾಭ್ಯಾಂ ಶೂದ್ರಾಯ ಚಾರ್ಯಾಯ ಚ ಸ್ವಾಯ ಚಾರಣಾಯ ಚ|
ಪ್ರಿಯೋದೇವಾನಾಂ ದಕ್ಷಿಣಾಯೈ ದಾತುರಿಹನಭೂಯಾಸಮಯಂ
ಮೇ ಕಾಮಃ ಸಮೃಧ್ಯತಾಮುಪ ಮಾದೋ ನಮತು|| (ಯಜು.೨೬.೨)
ಸರ್ವಾಧಾರನಾದ ಸರ್ವಜ್ಞಾನ ಪ್ರಕಾಶಕನಾದ ಪರಮಾತ್ಮನು ಈ ಮಂತ್ರದ ಮೂಲಕ ಹೇಳುತ್ತಿದ್ದಾನೆ:
[ಇಹ] ಈ ಲೋಕದಲ್ಲಿ [ಯಥಾ ದೇವಾನಾಂ ದಕ್ಷಿಣಾಯೈ ದಾತುಃ ಭೂಯಾಸಂ] ನಾನು ವಿದ್ವಜ್ಜನರಿಗೂ, ಉದಾರಾತ್ಮರಿಗೂ ಆಧ್ಯಾತ್ಮಿಕ ಶಕ್ತಿಯ ದಾತೃವಾಗುವಂತೆ [ಇಮಾಂ ಕಲ್ಯಾಣೀಂ ವಾಚಂ] ಈ ಕಲ್ಯಾಣಕಾರಿಯಾದ ವಾಣೀಯನ್ನು [ಜನೇಭ್ಯಃ] ಮಾನವರೆಲ್ಲರ ಸಲುವಾಗಿ [ಬ್ರಹ್ಮರಾಜನಾಭ್ಯಾಂ] ಬ್ರಾಹ್ಮಣ ಕ್ಷತ್ರಿಯರಿಗಾಗಿ [ಶೂದ್ರಾಯ] ಶೂದ್ರನಿಗಾಗಿ [ಚ] ಮತ್ತು [ಆರ್ಯಾಯ] ವೈಶ್ಯನ ಸಲುವಾಗಿ [ಸ್ವಾಯ] ತನ್ನವನಿಗಾಗಿ [ಚ] ಅದೇ ರೀತಿ [ಅರಣಾಯ] ಬೇರೆಯವನ ಸಲುವಾಗಿ [ಅವದಾನಿ] ಉಪದೇಶಿಸುತ್ತೇನೆ. [ಅಯಂ ಮೇ ಕಾಮಃ] ಈ ನನ್ನ ಕಾಮನೆ [ಸಮೃಧ್ಯತಾಂ] ಸಮೃದ್ಧವಾಗಲಿ. [ಅದಃ] ಈ ಜಗತ್ತು [ಮಾ ಉಪನಮತು] ನನ್ನ ಬಳಿ ನಮ್ರವಾಗಿ ಬರಲಿ.
     ಈ ಮಂತ್ರ ಮಾನವ ಸಮಾಜದಲ್ಲಿ ವೇದಗಳ ಸ್ಥಾನವೇನೆಂಬುದನ್ನು, ಅವುಗಳ ಉದ್ದೇಶವೇನೆಂಬುದನ್ನು ತೆರೆನುಡಿಗಳಲ್ಲಿ ಉಸುರುತ್ತಿದೆ.
-ಪಂ. ಸುಧಾಕರ ಚತುರ್ವೇದಿ.

ಮಂಗಳವಾರ, ಜೂನ್ 29, 2010

ವೇದೋಕ್ತ ಜೀವನ ಪಥ - ಜೀವನ ಬುನಾದಿ -೪




ಯಜುರ್ವೇದದಲ್ಲಿ ನಾವು ಈ ಸ್ಪಷ್ಟವಾದ ಮಂತ್ರವನ್ನು ಕಾಣುತ್ತೇವೆ:
ತಸ್ಮಾದ್ಯಜ್ಯಾತ್ ಸರ್ವಹುತ ಋಚ ಸಾಮಾನಿ ಜಜ್ಞಿರೇ
ಛಂದಾಂಸಿ ಜಜ್ಞಿರೇ ತಸ್ಮಾದ್ಯಜುಸ್ತಸ್ಮಾದಜಾಯತ (ಯಜು.೩೧.೭)
[ತಸ್ಆತ್ ಸರ್ವಹುತಃ ಯಜ್ಞಾತ್] ಆ ಸರ್ವದಾತೃವೂ, ಉಪಾಸನೀಯನೂ ಆದ ಭಗವಂತನಿಂದ [ಋಚ ಸಾಮಾನಿ ಜಜ್ಞಿರೇ] ಋಗ್ವೇದ, ಸಾಮವೇದಗಳು ಪ್ರಕಟವಾದವು. [ತಸ್ಮಾತ್ ಛಂದಾಂಸಿ ಜಜ್ಞಿರೇ] ಅವನಿಂದ ಅಥರ್ವ ಮಂತ್ರಗಳು ಪ್ರಕಟವಾದವು. [ತಸ್ಮಾತ್ ಯಜುಃ ಅಜಾಯತ] ಅವನಿಂದ ಯಜುರ್ವೇದವು ಪ್ರಕಾಶಿತವಾಯಿತು. ಪುನಃ ನಾವು ಅಥರ್ವ ವೇದದಲ್ಲಿ ಈ ಸ್ಪಷ್ಟಾರ್ಥ ಬೋಧಕವಾದ ಮಂತ್ರವನ್ನು ನೋಡುತ್ತೇವೆ:
ಯಸ್ಮಾದೃಚೋ ಅಪಾತಕ್ಷನ್ಯಜುರ್ಯಸ್ಮಾದಪಾಕಷನ್
ಸಾಮಾನಿ ಯಸ್ಯ ಲೋಮಾನ್ಯಥರ್ವಾಂಗಿರಸೋ ಮುಖಂ
ಸ್ಕಂಭಂ ತಂ ಬ್ರೂಹಿ ಕತಮ ಸ್ವಿದೇವ ಸಃ (ಅಥರ್ವ.೧೦.೭.೨೦)
[ಯಸ್ಮಾತ್] ಯಾವನಿಂದ [ಋಚಃ ಅಪಾತಕ್ಷನ್] ಋಗ್ವೇದ ಮಂತ್ರಗಳು ಪ್ರಕಾಶಿತವಾದವೋ [ಯಸ್ಮಾತ್] ಯಾವನಿಂದ [ಯಜುಃ ಅಪಾಕಷನ್] ಯಜುರ್ವೇದ ಪ್ರಕಟವಾಯಿತೋ [ಸಾಮಾನಿ] ಸಾಮ ಮಂತ್ರಗಳು [ಯಸ್ಯ ಲೋಮಾನಿ] ಯಾವನ ಸೂಕ್ಷ್ಮ ನಾಳಗಳಂತಿವೆಯೋ [ಅಥರ್ವಾಂಗಿರಸಃ] ಅಂಗಿರಾ ಋಷಿಯಿಂದ ಹೊರ ಬಂದ ಅಥರ್ವ ವೇದವು [ಮುಖಮ್] ಯಾವನ ಮುಖದಿಂದ ಮುಖ್ಯವಾಗಿದೆಯೋ [ತಂ ಸ್ಕಂಭಂ ಬ್ರೂಹಿ] ಅವನನ್ನು ವಿಶ್ವಾಧಾರನೆಂದು ಹೇಳು. [ಸಃ] ಅವನು [ಕತಮಃ ಸ್ವಿತ್ ಏವ] ಅತ್ಯಂತ ಆನಂದಸ್ವರೂಪನೇ ಆಗಿದ್ದಾನೆ.
ಈ ಎರಡು ಮಂತ್ರಗಳೂ ಸ್ಪಷ್ಟವಾಗಿ ನಾಲ್ಕು ವೇದಗಳ ಪ್ರಕಾಶಕನೂ ಪರಮಾತ್ಮನೇ ಎಂದು ಸಾರುತ್ತಿವೆ. ನಾಲ್ಕು ವೇದಗಳೂ ಅಪೌರುಷೇಯ ಜ್ಞಾನಸಾಗರಗಳಾಗಿವೆ. ಆ ವೇದಗಳು ಪೂರ್ಣತಃ ಬುದ್ಧಿಯುಕ್ತವೂ, ವೈಜ್ಞಾನಿಕವೂ, ಸರ್ವಹಿತಸಾಧಕವೂ ಆದ ದಿವ್ಯಜ್ಞಾನದಿಂದ ಪರಿಪ್ಲುತವಾಗಿವೆ. ಕೇವಲ ಯಾವುದೋ ಒಂದು ಕಾಲದ, ಯಾವುದೋ ಒಂದು ದೇಶದ, ಯಾವುದೋ ಒಂದು ಜನಾಂಗದ ಶಾಸ್ತ್ರಗಳಾಗಿರದೆ, ಸಾರ್ವಕಾಲಿಕವೂ, ಸಾರ್ವಭೌಮವೂ, ಸಮಸ್ತ ಮಾನವಸಮಾಜಕ್ಕೂ ಏಕಪ್ರಕಾರವಾಗಿ ಅನ್ವಯಿಸುವಂತಹುದೂ ಆದ ನಿರ್ಮಲಜ್ಞಾನದ ವಿಶಾಲ ಆಕರಗಳಾಗಿವೆ.

ಗುರುವಾರ, ಜೂನ್ 17, 2010

ವೇದೋಕ್ತ ಜೀವನ ಪಥ -ಜೀವನ ಬುನಾದಿ - ೩








     ಹೀಗೆ ತರ್ಕಿಸಿ ಚಿಂತನಶೀಲರಾದಾಗ ಯಾವುದೋ ಒಂದು ದಿವ್ಯ ನಿಮಿತ್ತದ ಕಡೆ ನಮ್ಮ ದೃಷ್ಟಿ ಹೊರಳುತ್ತದೆ. ನಮ್ಮ ಆಧ್ಯಾತ್ಮಿಕ - ಭೌತಿಕ ವಿಕಾಸಗಳೆರಡಕ್ಕೂ ನೆರವಾಗುವ ಪೂರ್ಣ ನಿರ್ದೋಷವಾದ ದಿವ್ಯ ನೈಮಿತ್ತಿಕ ಜ್ಞಾನವನ್ನು ನಮಗೆ ನೀಡಬಲ್ಲ ದಿವ್ಯನಿಮಿತ್ತ ಸರ್ವಜ್ಞನಾದ ಪರಮಾತ್ಮನನ್ನು ಬಿಟ್ಟರೆ ಬೇರಾವುದೂ ಇಲ್ಲ. ವಸ್ತುತಃ ನಮ್ಮೆಲ್ಲರ ಪ್ರಭುವಾದ, ಆ ಸರ್ವಜ್ಞ ಪರಮಾತ್ಮನೇ ಸದಿವ್ಯನಿಮಿತ್ತವಾಗಿ ಸೃಷ್ಟಿಯ ಆದಿಯಲ್ಲಿ ದಿವ್ಯ ನೈಮಿತ್ತಕ ಜ್ಞಾನವನ್ನು ಕರುಣಿಸಿದ್ದಾನೆ. ಆ ದಿವ್ಯ ನೈಮಿತ್ತಕ ಜ್ಞಾನದ ಅಮೂಲ್ಯ ನಿಧಿಗಳೇ, ಅಖಂಡ ಭಂಡಾರಗಳೇ ಚತುರ್ವೇದಗಳು. ಸ್ವತಃ ಋಗ್ವೇದವೇ ಮೊಳಗುತ್ತಲಿದೆ:-
ಆಪ್ರಾ ರಜಾಂಸಿ ದಿವ್ಯಾನಿ ಪಾರ್ಥಿವಾ ಶ್ಲೋಕಂ
ದೇವಃ ಕೃಣುತೇ ಸ್ವಾಯ ಧರ್ಮಣೇ
ಪ್ರ ಬಾಹೂ ಅಸ್ರಾಕ್ ಸವಿತಾ ಸವೀಮನಿ ನಿವೇಶಯನ್ ಪ್ರಸುವನ್ನಕ್ತುಭಿಜರ್ಗತ್
(ಋಕ್. ೪.೫೩.೩)
     [ದೇವಃ] ಪ್ರಕಾಶಮಯನೂ, ಸರ್ವದಾತೃವೂ ಆದ ಭಗವಂತನು, [ದಿವ್ಯಾನಿ ಪಾರ್ಥಿವಾ ರಜಾಂಸಿ] ದಿವ್ಯಲೋಕಗಳಲ್ಲಿಯೂ, ಮೃಣ್ಮಯವಾದ ಲೋಕಗಳಲ್ಲಿಯೂ, [ಆಪ್ರಾಃ] ವ್ಯಾಪಕನಾಗಿದ್ದಾನೆ. [ಸ್ವಾಯಧರ್ಮಣೇ] ತನ್ನ ಧರ್ಮದ ಪ್ರಕಾಶನಕ್ಕಾಗಿ, [ಶ್ಲೋಕಂ ಕೃಣುತೇ] ಮಂತ್ರಸಮೂಹವನ್ನು ಪ್ರಕಟಪಡಿಸುತ್ತಾನೆ. [ಸವಿತಾ] ಸರ್ವೋತ್ಪಾದಕನೂ, ಸರ್ವಪ್ರೇರಕನೂ ಆದ ಭಗವಂತನು [ಸವೀಮನಿ] ಸೃಷ್ಟಿಯಲ್ಲಿ [ಜಗತ್]ನಲೋಕವನ್ನು [ಅಕ್ಷುಭಿಃ] ಸ್ಫುಟ ಲಕ್ಷಣಗಳೊಂದಿಗ್ದಿಗೆ [ನಿವೇಶಯನ್] ನೆಲೆಗೊಳಿಸುತ್ತಾ [ಪ್ರಸುವನ್] ಉತ್ಪಾದಿಸುತ್ತಾ [ಬಾಹೂ ಪ್ರ ಅಸ್ರಾಕ್] ತನ್ನ ಉತ್ಪಾದನ, ಪಾಲನ ಸಾಮರ್ಥ್ಯಗಳನ್ನು ವ್ಯಕ್ತಪಡಿಸುತ್ತಾನೆ. ಇದು ಬುದ್ಧಿಗಮ್ಯವಾದ ಘೋಷಣೆಯೇ ಸರಿ. ಶಾಸನಗಳನ್ನೇ ಪ್ರಕಾಶಪಡಿಸದೆ ಯಾವನಾದರೂ ಶಾಸಕನು ಪ್ರಜೆಗಳನ್ನು ದಂಡಿಸತೊಡಗಿದರೆ ಅದನ್ನು ಉಚಿತವೆನ್ನಲಾದೀತೆ? ಜಗತ್ಸಾಮ್ರಾಟನಾದ ಭಗವಂತನು ಆದಿಯಲ್ಲಿಯೇ ವಿಧಿ - ನಿಷೇದಗಳನ್ನು ವ್ಯಕ್ತಪಡಿಸದೆ, ಸತ್ಯಾಸತ್ಯ - ಪಾಪಪುಣ್ಯ - ಧರ್ಮಾಧರ್ಮಗಳ ವಿಧಾನವನ್ನೇ ವ್ಯಕ್ತಗೊಳಿಸದೆ ಜೀವಾತ್ಮರನ್ನು ಅಪರಾಧಿಗಳು - ನಿರಪರಾಧಿಗಳು ಎಂದು ವಿಭಜಿಸಲು ಸಾಧ್ಯವೇ? ಅದು ಸಾಧುವೇ?

ಬುಧವಾರ, ಜೂನ್ 2, 2010

ವೇದೋಕ್ತ ಜೀವನಪಥ - ಜೀವನ ಬುನಾದಿ -೨


ನೈಮಿತ್ತಿಕ ಜ್ಞಾನದ ಅನಿವಾರ್ಯತೆ ಬಗ್ಗೆ ಪಂ. ಸುಧಾಕರ ಚತುರ್ವೇದಿಯವರ ಮಾತು:

     ನೈಮಿತ್ತಿಕ ಜ್ಞಾನ ಗುರುಹಿರಿಯರಿಂದ, ಋಷಿಮುನಿಗಳಿಂದ, ವಿದ್ವಜ್ಜನರಿಂದ ನಮಗೆ ಲಭಿಸಬಹುದು; ವಿಶ್ವದ ವಿವಿಧ ಘಟನೆಗಳನ್ನು ನೋಡುವುದರಿಂದ ಹಾಗೂ ಕೇಳುವುದರಿಂದ,ಇಲ್ಲವೇ ಆ ಘಟನೆಗಳಲ್ಲಿ ಭಾಗವಹಿಸುವುದರಿಂದ ಲಭಿಸಬಹುದು. ಈ ಬಗೆಯ ನೈಮಿತ್ತಿಕ ಜ್ಞಾನ ಸಾಮಾನ್ಯ ದೃಷ್ಟಿಯಿಂದ ನೋಡಿದಾಗ, ಜಗತ್ತಿನಲ್ಲಿ ಸಾಧಾರಣತಃ ಗೌರವದಿಂದ ಜೀವಿಸಲು ಸಾಕಾದಷ್ಟು ಸಾಮರ್ಥ್ಯವನ್ನು ಮಾನವನಿಗೆ ಒದಗಿಸಲೂಬಹುದು. ಆದರೆ ಇನ್ನೂ ಗಂಭೀರ ದೃಷ್ಟಿಯಿಂದ ಅವಲೋಕಿಸಿದಾಗ ಈ ಬಗೆಯ ನೈಮಿತ್ತಕಜ್ಞಾನ ಇಂದ್ರಿಯಗಮ್ಯವಾದ ಭೌತಿಕವಸ್ತುಗಳಲ್ಲೇ ಸಂಚರಿಸುತ್ತದಯೇ ಹೊರತು, ಅತೀಂದ್ರಿಯ ವಿಷಯಗಳಾದ ಪರಮಾತ್ಮ, ಜೀವಾತ್ಮ, ಬಂಧ, ಮೋಕ್ಷ, ಧರ್ಮ - ಮೊದಲಾದ ತತ್ವಗಳ ಆಂತರ್ಯವನ್ನು ಸ್ಪರ್ಶಿಸಲಾರದು - ಎಂಬಂಶ ಸ್ಫುಟವಾಗಿ ಗೋಚರಿಸುತ್ತದೆ. ವಿಕಸಿತ ಮನಸ್ಕನಾದ ಮಾನವನ ಜೀವನಕ್ಕೆ ಕೇವಲ ಇಂದ್ರಿಯಗಮ್ಯಗಳಾದ ಪದಾರ್ಥಗಳ ನೆರವೇ ಸಾಲದು; ಅತೀಂದ್ರಿಯ ತತ್ವಗಳ ಆಶ್ರಯವೂ ಬೇಕೇ ಬೇಕು. ಆದಕಾರಣ ಅನ್ಯಜೀವರಿಂದ ಹಾಗೂ ವಿಶ್ವದಆಗು ಹೋಗುಗಳಿಂದ ಲಭಿಸುವ ನೈಮಿತ್ತಿಕ ಜ್ಞಾನಕ್ಕಿಂತ ಮಿಗಿಲಾಗಿ, ದಿವ್ಯ ನೈಮಿತ್ತಿಕ ಜ್ಞಾನ ಮಾನವನ ಜೀವನದ ಪರಿಪೂರ್ಣ ವಿಕಾಸಕ್ಕೆ ಆವಶ್ಯಕ ಮಾತ್ರವಲ್ಲ, ಅನಿವಾರ್ಯವೂ ಆಗಿದೆ.