ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಜುಲೈ 22, 2016

ಅಸಹಿಷ್ಣುತೆಯ ಗುಮ್ಮ


     ಭಾರತದಲ್ಲಿ ಈಗ ಅಸಹಿಷ್ಣುತೆಯ ಬಗ್ಗೆ ದೊಡ್ಡ ಗುಲ್ಲೆದ್ದಿದೆ. ಇದನ್ನು  ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯವಾಗಿ ಗಂಭೀರವಾದ ಸಮಸ್ಯೆಯೆಂಬಂತೆ ಕೆಲವು ಮಾಧ್ಯಮಗಳು ಮತ್ತು ಸಾಹಿತಿ, ಕಲಾವಿದರುಗಳು ಬಿಂಬಿಸುತ್ತಿರುವದಲ್ಲದೆ ಹಲವರು ತಾವು ಪಡೆದಿದ್ದ ಪ್ರಶಸ್ತಿಗಳನ್ನು ಹಿಂತಿರುಗಿಸುವುದರ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಪ್ರವೃತ್ತಿಯನ್ನು ಬಲವಾಗಿ ಖಂಡಿಸುವವರ ಸಂಖ್ಯೆಯೂ ಗಣನೀಯವಾಗಿದೆ. ಪ್ರಶಸ್ತಿ ಹಿಂತಿರುಗಿಸಿದ ಸಾಹಿತಿಗಳು ಬರೆದ ಪುಸ್ತಕಗಳನ್ನು ಅವರಿಗೇ ಹಿಂತಿರುಗಿಸುವ ಚಳುವಳಿಯೂ ಆರಂಭವಾಗಿದೆ. ಒಂದಂತೂ ನಿಜ, ಪ್ರಪಂಚದ ಇತರ ದೇಶಗಳತ್ತ ಕಣ್ಣು ಹಾಯಿಸಿದರೆ ಕಾಣುವುದೇನೆಂದರೆ ಭಾರತದಂತಹ ಸಹಿಷ್ಣುತೆ ಮೈಗೂಡಿಸಿಕೊಂಡಿರುವ ದೇಶ ಮತ್ತೊಂದು ಇಲ್ಲವೆಂಬುದು! ಆದರೂ ಹೀಗೇಕೆ ಎಂಬುದಕ್ಕೆ ಪರ-ವಿರೋಧದ ಹೇಳಿಕೆಗಳು, ಲೇಖನಗಳು ಸಾಕಷ್ಟು ಬೆಳಕು ಕಂಡಿವೆ. ಈ ಕೊಂಡಿಗೆ ಮತ್ತೊಂದು ಲೇಖನದ ಸೇರ್ಪಡೆ ಮಾಡದೆ ಮೂಲ ವಿಷಯವಾದ ಅಸಹಿಷ್ಣುತೆ ಎಂದರೇನು ಎಂಬ ಕುರಿತು ಇಲ್ಲಿ ತಡಕಾಡಿರುವೆ.
     ಅಸಹಿಷ್ಣುತೆ ಕುರಿತು ಮಾತನಾಡುವ ಮುನ್ನ ಸಹಿಷ್ಣುತೆಯ ಬಗ್ಗೆ ತಿಳಿದುಕೊಳ್ಳಬೇಕು. ಸಹಿಸಿಕೊಳ್ಳಲಾಗದಿದ್ದಾಗ ಅಸಹನೆ ಜನಿಸುತ್ತದೆ. ಸಹನೆ ಸಜ್ಜನರ ಆಸ್ತಿ ಮತ್ತು ಅವರ ಆಯುಧವೂ ಕೂಡಾ! ಸಹನೆಯೆಂದರೆ ಪ್ರಚೋದನೆ, ಕಿರಿಕಿರಿ, ದುರಾದೃಷ್ಟ, ನೋವು, ಕ್ಲಿಷ್ಟಕರ ಸನ್ನಿವೇಶಗಳು, ಇತ್ಯಾದಿಗಳನ್ನು ತಾಳ್ಮೆ ಕಳೆದುಕೊಳ್ಳದೆ, ಸಿಟ್ಟು ಮಾಡಿಕೊಳ್ಳದೆ, ಭಾವನೆಗಳನ್ನು ಹೊರತೋರ್ಪಡಿಸದೇ ಸ್ಥಿತಪ್ರಜ್ಞತೆಯಿಂದ, ನಿರ್ಭಾವುಕತೆಯಿಂದ ಸಹಿಸಿಕೊಳ್ಳುವ ಒಂದು ಅದ್ಭುತ ಗುಣ. ಜನನಾಯಕರು, ಸಾಧು-ಸಂತರು, ಹಿರಿಯರುಗಳಲ್ಲಿ, ಸಾಧಕರಲ್ಲಿ ಈ ಗುಣ ಕಾಣಬಹುದು. ಇದೊಂದು ದೈವಿಕ ಗುಣ. ಸಹನಾಶೀಲರು ಸಾಮಾನ್ಯವಾಗಿ ಜನಾನುರಾಗಿಗಳಾಗಿರುತ್ತಾರೆ, ಜನರು ಇಷ್ಟಪಡುವವರಾಗಿರುತ್ತಾರೆ. ಮನುಷ್ಯ ಸಮಾಜದಲ್ಲಿ ಬಾಳಬೇಕಾದರೆ ಕೆಲವೊಮ್ಮೆ ಸಹಜವಾಗಿ, ಕೆಲವೊಮ್ಮೆ ತನ್ನ ಸಂತೋಷಕ್ಕಾಗಿ, ಕೆಲವೊಮ್ಮೆ ಇತರರ ಸಂತೋಷಕ್ಕಾಗಿ, ಕೆಲವೊಮ್ಮೆ ಅನಿವಾರ್ಯವಾಗಿ ಅನೇಕ ರೀತಿಯ ಮುಖವಾಡಗಳನ್ನು ಧರಿಸಬೇಕಾಗುತ್ತದೆ. ಮುಖವಾಡವೆಂದರೆ ತನಗೆ ಇಷ್ಟವಿರಲಿ, ಇಲ್ಲದಿರಲಿ ತನ್ನ ಮನಸ್ಸಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕಾಗಿ ಬರುವುದು, ಸರಳವಾಗಿ ಹೇಳಬೇಕೆಂದರೆ ಒಳಗಿರುವುದೇ ಒಂದು, ಹೊರಗೆ ತೋರುವುದೇ ಮತ್ತೊಂದು! ಅವುಗಳ ಪೈಕಿ ಸಹನೆ ಅಥವ ತಾಳ್ಮೆ ಎಂಬುದು ಅತ್ಯಂತ ಸುಂದರವಾದ ಮುಖವಾಡ. ಸಮಾಜದ ಹಿತಕ್ಕೆ ಇದು ಅಗತ್ಯವಾದುದಾಗಿದೆ.
     ಅಸಹನೆ ದುರ್ಬಲತೆಯ ದ್ಯೋತಕ ಮತ್ತು ಇತರರಿಗಿಂತ ಕೀಳು ಎಂಬ ಮನೋಭಾವವನ್ನು ಬಿಂಬಿಸುತ್ತದೆ. ಅಸಹಿಷ್ಣುಗಳು ಬಹುಬೇಗ ಪ್ರಚೋದನೆಗೆ ಒಳಗಾಗುತ್ತಾರೆ. ಅವರು ಒತ್ತಡವನ್ನು ಸಹಿಸರು. ತಾಳ್ಮೆ ಕಳೆದುಕೊಂಡು ಉದ್ರಿಕ್ತರಾಗುತ್ತಾರೆ, ವಿವೇಕ ಮರೆಯಾಗಿ ತಮ್ಮ ಒಳಗಿನ ಅಸಹನೆಯನ್ನು ಒಂದಲ್ಲಾ ಒಂದು ರೀತಿಯಲ್ಲಿ ಹೊರಗೆಡವುತ್ತಾರೆ ಮತ್ತು ಇದರಿಂದಾಗಿ ಇತರರ ಎದುರಿಗೆ ಹಗುರವಾಗಿಬಿಡುತ್ತಾರೆ. ವಿಚಿತ್ರವೆಂದರೆ ಅಸಹಿಷ್ಣುಗಳು ಮತ್ತು ಸಣ್ಣ ಮನಸ್ಸಿನ ವ್ಯಕ್ತಿಗಳೇ ತಮ್ಮ ಸಹನಾಶೀಲತೆ ಮತ್ತು ವಿಶಾಲ ಮನೋಭಾವದ ಬಗ್ಗೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ! ಹಿಂದಿನ ಸರ್ಕಾರದಲ್ಲಿ ಮಂತ್ರಿಯಾಗಿದ್ದವರೊಬ್ಬರು ನೆರೆಯ ಶತ್ರುದೇಶಕ್ಕೆ ಹೋಗಿ ಅಲ್ಲಿನ ಟಿವಿ ಸಂದರ್ಶನದಲ್ಲಿ ಮಾತನಾಡುತ್ತಾ ಈಗಿನ ಸರ್ಕಾರವನ್ನು ಕಿತ್ತೊಗೆಯಬೇಕು ಅದಕ್ಕೆ ನಿಮ್ಮ ಸಹಕಾರ ಬೇಕು ಎಂದು ನಾಚಿಕೆಯಿಲ್ಲದೆ ಹೇಳಿಬಿಡುತ್ತಾರೆ. ಇದು ಅವರ ಅಧಿಕಾರದ ಹಪಾಹಪಿ ಮತ್ತು ಅಸಹಿಷ್ಣುತೆ ಪರಾಕಾಷ್ಠೆಯ ಮಟ್ಟ ತಲುಪಿರುವುದನ್ನು ತೋರಿಸುತ್ತದೆ. ಸ್ವಂತ ದೇಶದ ಜನರಿಂದ ಚುನಾಯಿತವಾದ ಸರ್ಕಾರದ ಪದಚ್ಯುತಿಗೆ ಶತ್ರುದೇಶದ ಸಹಾಯ ಬಯಸುವ ಮನಸ್ಥಿತಿಯಿಂದ ದೇಶದ ಹಿತಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದೇನೆಂದೂ ಅವರಿಗೆ ಅನ್ನಿಸದು. ಪೃಥ್ವೀರಾಜನ ಏಳಿಗೆಯನ್ನು ಸಹಿಸದ ಜಯಚಂದ್ರನ ಅಸಹಿಷ್ಣುತೆ ಅವನನ್ನು ಮಹಮದ್ ಘೋರಿಯ ಹಸ್ತಕನನ್ನಾಗಿಸಿ ಭಾರತವನ್ನೇ ಶತಮಾನಗಳವರೆಗೆ ದಾಸ್ಯಕ್ಕೆ ದೂಡಿತ್ತೆಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳ್ಳಬೇಕಿದೆ. ಇತಿಹಾಸದಿಂದ ಪಾಠ ಕಲಿಯದಿದ್ದರೆ ನಾವು ಮೂರ್ಖರೇ ಸರಿ.
     ಮತೀಯ ಅಥವ ಧಾರ್ಮಿಕ ಅಸಹಿಷ್ಣುತೆ ಇಂದು ಜಾಗತಿಕ ಭಯೋತ್ಪಾದನೆಯ ರೂಪದಲ್ಲಿ ಕಾಡುತ್ತಿದೆ. ಧರ್ಮ ಅಥವ ಮತದ ಹೆಸರಿನಲ್ಲಿ ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಳ್ಳಲಾಗುತ್ತಿದೆ. ಹೆಣ್ಣನ್ನು ಭೋಗದ ವಸ್ತುವಾಗಿ ಬಳಸಿಕೊಳ್ಳುತ್ತಿದೆ. ಎಳೆಯ ಕಂದಮ್ಮಗಳನ್ನೂ ನಿರ್ದಯದಿಂದ ಹೊಸಕಿಹಾಕುತ್ತಿರುವ ವಿಡಿಯೋಗಳು ಅಂತರ್ಜಾಲ ತಾಣಗಳಲ್ಲಿ ಹರಿದಾಡುತ್ತವೆ. ಅದನ್ನು ಬೆಂಬಲಿಸುವ ವಿಕೃತರ ಸಂಖ್ಯೆಯೂ ಗಾಬರಿ ಹುಟ್ಟಿಸುವಂತಿದೆ. ಉಗ್ರರು ಯಾವಾಗ ಎಲ್ಲಿ ಜೀವಗಳ ಬಲಿ ತೆಗೆದುಕೊಳ್ಳುತ್ತಾರೆ ಎಂಬುದು ಪ್ರಜ್ಞಾವಂತರ ಆತಂಕವಾಗಿದೆ. ೪೦ ದೇಶಗಳಿಂದ ಉಗ್ರರಿಗೆ ಹಣ ಮತ್ತು ಶಸ್ತ್ರಾಸ್ತ್ರಗಳ ಸರಬರಾಜಾಗುತ್ತಿದೆಯಂತೆ. ನಮ್ಮ ದೇಶದಲ್ಲೂ ಉಗ್ರರಿಗೆ ಬೆಂಬಲವಾಗಿ ನಿಲ್ಲುವ, ಸಹಾಯ ಮಾಡುವ ಜನರಿಗೆ ಕೊರತೆಯಿಲ್ಲ. ವಿವಿಧ ರಾಜಕೀಯ ಪಕ್ಷಗಳೂ ವೋಟಿನ ಸಲುವಾಗಿ ಮಾಡುವ ಮತೀಯ ಓಲೈಕೆ ಭಯೋತ್ಪಾದನೆಗೆ ಪರೋಕ್ಷವಾಗಿ ಸಹಕಾರಿಯಾಗಿದೆ. ಜನನಾಯಕರುಗಳಿಗೆ ದೇಶ ಮತ್ತು ಜನಸಾಮಾನ್ಯರ ಹಿತ ಮುಖ್ಯವೆನ್ನುವ ಪರಿಸ್ಥಿತಿ ಬಂದರೆ ಮಾತ್ರ ಸುಧಾರಣೆ ಕಾಣಬಹುದು. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುವ ರಾಜಕಾರಣಿಗಳೇ ಇಂದು ಹೆಚ್ಚಾಗಿರುವುದು ಸುಳ್ಳಲ್ಲ. ಸಹಿಷ್ಣುತೆ ಒಮ್ಮುಖದ ದಾರಿಯಾದರೆ ಅದು ಸಾಂಸ್ಕೃತಿಕ ಆತ್ಮಹತ್ಯೆಯಾಗುತ್ತದೆ. ಹಿಂದೂ ಧರ್ಮದ ಆಚರಣೆಗಳು, ಸಂಪ್ರದಾಯಗಳನ್ನು ಟೀಕಿಸಿದರೆ ಸಹಿಸಿಕೊಳ್ಳಬೇಕು ಎಂದು ಬಯಸುವವರು ಇದೇ ನೀತಿಯನ್ನು ಇಸ್ಲಾಮ್ ಮತ್ತು ಕ್ರಿಶ್ಚಿಯನ್ ಧರ್ಮಗಳಿಗೆ ಅನ್ವಯಿಸುವರೇ ಎಂದರೆ ಅದಕ್ಕೆ ಉತ್ತರ ಸಿಗದು. ಇಂತಹ ತಾರತಮ್ಯವೂ ಅಸಹಿಷ್ಣುತೆಗೆ ಪ್ರಚೋದನೆಯಾಗುತ್ತದೆ.
     ಜಾತಿ ಆಧಾರಿತ ರಾಜಕೀಯ ಸಂವಿಧಾನದ ಜಾತ್ಯಾತೀತತೆಗೆ ಕೊಡಲಿಪೆಟ್ಟು ಹಾಕುತ್ತಿದೆ. ಜಾತಿ ಆಧಾರದಲ್ಲಿ ಹಿಂದುಳಿದಿರುವಿಕೆ ಮತ್ತು ಮುಂದುವರೆದಿರುವಿಕೆಯನ್ನು ಗುರುತಿಸುವುದು ಅವೈಜ್ಞಾನಿಕ ಮತ್ತು ಅಮಾನವೀಯ. ಇದನ್ನು ರಾಜಕೀಯ ಅಧಿಕಾರ ಗಳಿಕೆಗೆ ಬಳಸುವ ರಾಜಕಾರಣಿಗಳು ಜಾತೀಯತೆಯನ್ನು ಪೋಷಿಸುತ್ತಿವೆ. ಪ್ರತಿಭಾ ಪಲಾಯನ, ಜಾತಿ-ಜಾತಿಗಳಲ್ಲಿ ವೈಮನಸ್ಯ, ಸಂಘರ್ಷಗಳು, ಅಸಹಿಷ್ಣುತೆ ಈ ಜಾತಿ ರಾಜಕೀಯದ ಫಲಗಳಾಗಿವೆ. ಸಹಿಷ್ಣುತೆ ಭಾರತೀಯರ ರಕ್ತದಲ್ಲಿ ಬಂದ ಗುಣವಾಗಿದೆ. ಅದನ್ನು ಕುಟಿಲ ರಾಜಕಾರಣಿಗಳು, ಅವಕಾಶವಾದಿ ಸಾಹಿತಿಗಳು, ಕಲಾವಿದರುಗಳು ಹಾಳು ಮಾಡದಿರುವಂತೆ ಜಾಗೃತರಾಗಿರುವುದು ಇಂದಿನ ಅಗತ್ಯವಾಗಿದೆ. ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ, ಸರ್ವಾಧಿಕಾರಿಗಳ ಆಳ್ವಿಕೆಯಲ್ಲಿರುವ ದೇಶಗಳಲ್ಲಿ, ಇಸ್ಲಾಮ್ ಧರ್ಮೀಯ ರಾಷ್ಟ್ರಗಳಲ್ಲಿ ಭಿನ್ನ ವಿಚಾರಗಳನ್ನು ಹೊಂದಿರುವವರನ್ನು ಹಿಂಸಿಸಲಾಗುತ್ತ್ತದೆ, ಬಲವಂತವಾಗಿ ವಿರುದ್ಧ ವಿಚಾರ ಒಪ್ಪುವಂತೆ ಮಾಡಲಾಗುತ್ತದೆ, ಗಡೀಪಾರು ಮಾಡಲಾಗುತ್ತದೆ, ಅವಮಾನಿಸಲಾಗುತ್ತದೆ, ಕೊಲ್ಲಲಾಗುತ್ತದೆ ಎಂಬುದಕ್ಕೆ ಹೇರಳ ಉದಾಹರಣೆಗಳು ಸಿಗುತ್ತವೆ. ಹೀಗಿರುವಾಗ ಭಾರತದ ಉದಾತ್ತತೆಯಾದ ಸಹಿಷ್ಣುತಾ ಗುಣವನ್ನು ಗುರುತಿಸೋಣ, ಗೌರವಿಸೋಣ, ಉಳಿಸೋಣ.
ಸಹಿಷ್ಣುತೆಯೆಂದರೆ ನೀವು ನಿಮಗೆ ಏನು ಬೇಕೆನ್ನುತ್ತೀರೋ, ಯಾವ ಹಕ್ಕು ಇರಬೇಕೆನ್ನುತ್ತೀರೋ ಅವು ಇತರರಿಗೂ ಇರಬೇಕೆನ್ನುವುದು! ನಿಮಗೆ ಮಾತ್ರ ಇರಲಿ ಇತರರಿಗೆ ಬೇಡ ಅನ್ನುವುದೇ ಅಸಹಿಷ್ಣುತೆ!
-ಕ.ವೆಂ.ನಾಗರಾಜ್.
***************
ದಿನಾಂಕ 27.04.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ