ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಜುಲೈ 8, 2016

ಸಾಧಕನ ದಾರಿ - 1


ಹಿಡಿದ ಗುರಿಯನು ಸಾಧಿಸುವವರೆಗೆ
ಮುಂದಿಟ್ಟ ಹೆಜ್ಜೆಯನು  ಹಿಂದಕ್ಕೆ ಇಡದೆ |
ಆವೇಶ ಉತ್ಸಾಹ ನರನಾಡಿಯಲಿರಿಸೆ
ಯಶವರಸಿ ಹರಸದಿಹುದೆ ಮೂಢ ||
     ಹೇಗೋ ಜೀವಿಸಬೇಕೆನ್ನುವವರು ಕಷ್ಟಪಡುವುದಿಲ್ಲ. ಅವರು ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು, ಸರಿ-ತಪ್ಪುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬಾಳುತ್ತಾರೆ. ಆದರೆ ಹೀಗೆಯೇ ಜೀವಿಸಬೇಕೆಂದುಕೊಂಡವರಿಗೆ ಅಡ್ಡಿ, ಅಡಚಣೆಗಳು, ಕಷ್ಟಗಳ ಸರಮಾಲೆಯೇ ಎದುರಾಗುತ್ತದೆ. ಆದರೆ ಅವರು ಅವೆಲ್ಲವನ್ನೂ ಎದುರಿಸಿ, ಅಗತ್ಯ ಬಿದ್ದರೆ ಪ್ರಾಣವನ್ನೂ ಪಣಕ್ಕಿಟ್ಟು ತಾವಂದುಕೊಂಡಂತೆಯೇ ಬದುಕುತ್ತಾರೆ. ಹಾಗೆ ಯಶಸ್ವಿಯಾಗಿ ಬದುಕುವವರನ್ನು ಸಾಧಕರೆನ್ನುತ್ತಾರೆ. ಅಂತಹ ಸಾಧಕರನ್ನು ಜಗತ್ತು ಗೌರವಿಸುತ್ತದೆ. ಹೇಗೋ ಬದುಕುವವರೂ ಸಹ  ಸಾಧಕರನ್ನು ಮೆಚ್ಚುಗೆಯಿಂದ, ಗೌರವದಿಂದ ಕಾಣುತ್ತಾರೆ. ಸಾಧsಕರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವುದೂ ಅಪರೂಪವಲ್ಲ. ಆದರೆ, ಸಾಧಕರ ಸಾಧನೆಯ ಹಿಂದಿನ ದಿವ್ಯ ಸಂದೇಶವನ್ನು ಎಲ್ಲರೂ ಮರೆತುಬಿಡುತ್ತೇವೆ. ಅದೆಂದರೆ, ಅಂತಹ ಸಾಧನೆಯನ್ನು ಯಾರು ಬೇಕಾದರೂ ಮಾಡಬಹುದು ಎಂಬುದೇ! ಸಾಧನೆ ಮಾಡಲು ಹಿಂಜರಿಯುವ ಸಾಮಾನ್ಯರಿಗೆ, ಅವರು ದೇವಾಂಶ ಸಂಭೂತರು, ಮಹಾಮಹಿಮರು. ಅವರೆಲ್ಲಿ, ನಾವೆಲ್ಲಿ, ಉಂಟೇ, ಉಂಟೇ, ಏನು ಹೇಳುತ್ತಿದ್ದೀರಿ? ಅವರೊಡನೆ ನಮ್ಮನ್ನು ಹೋಲಿಸುವುದೇ! ಎಂಬಂತಹ ಕುಂಟು ನೆಪಗಳೂ ನೆರವಿಗೆ ಬರುತ್ತದೆ. ಆದರೆ ನಿಜವಾದ ಕಾರಣವೆಂದರೆ, ಅವರಿಗೆ ಕಷ್ಟಪಡುವುದು ಬೇಕಿರುವುದಿಲ್ಲ ಮತ್ತು ಮೌಲ್ಯಗಳು, ನೀತಿ-ನಿಯಮಗಳು ಎಂದುಕೊಂಡು ಬೇಕಿಲ್ಲದ ತೊಂದರೆಗಳನ್ನು ಮೈಮೇಲೆ ಏಕೆ ಎಳೆದುಕೊಳ್ಳಬೇಕು ಎಂಬ ಮನೋಭಾವ. ಹೇಗೋ ಜೀವಿಸುವವರಿಗೆ ಸ್ವಾರ್ಥ ಪ್ರಮುಖವಾಗಿರುತ್ತದೆ. ಅದಕ್ಕಾಗಿ ಸಮಾಜದ ಹಿತ ಅವರಿಗೆ ಗೌಣವೆನಿಸುತ್ತದೆ. ಈ ಮನೋಭಾವವೇ ಸಮಾಜ ಇಂದು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಮೂಲವೆಂಬುದು ಆಳವಾಗಿ ಚಿಂತಿಸಿದರೆ ಅರ್ಥವಾದೀತು. ಒಂದಂತೂ ಸತ್ಯ, ನೀತಿ-ನಿಯಮ, ಮೌಲ್ಯಗಳಿಗೆ ಬೆಲೆ ಕೊಡುವವರ, ಅದಕ್ಕಾಗಿ ಸ್ವಂತದ ಹಿತ ತ್ಯಾಗ ಮಾಡುವ ಸಾಧಕರಿಂದ ಸಮಾಜ ಲಾಭ ಪಡೆಯುತ್ತದೆ. ಈ ಕಾರಣಕ್ಕಾಗಿಯೇ ಸಮಾಜ ಸಾಧಕರನ್ನು ಗೌರವದಿಂದ ಕಾಣುತ್ತದೆ, ಕಾಣಲೇಬೇಕು.
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ |
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ ||
     ಸಾಧಕರು ಇದ್ದಕ್ಕಿದ್ದಂತೆ ಮೂಡಿಬರುವುದಿಲ್ಲ. ಅವಿರತ ಶ್ರಮ ಅವರ ಸಾಧನೆಯ ಬೆನ್ನಿಗಿರುತ್ತದೆ. ಸರ್ವಜ್ಞನೆಂಬುವನು ಗರ್ವದಿಂದಾದವನೆ, ಹಲವಂ ಬಲ್ಲವರಿಂದ ಕಲಿತು . . ವಿದ್ಯೆಯ ಪರ್ವತವೆ ಆದ ಸರ್ವಜ್ಞ ಎಂಬ ತ್ರಿಪದಿ ಸರ್ವಜ್ಞನ ಸಾಧನೆಯ ಹಾದಿಯ ಕಿರುನೋಟ ಬೀರುತ್ತದೆ. ಸಾಧಕರ ಜೀವನವನ್ನು ಅವಲೋಕಿಸಿದರೆ ಕಂಡು ಬರುವ ವಿಚಾರಗಳು ಸಾಧನೆಯ ಹಾದಿಯಲ್ಲಿರುವವರ ಕಣ್ತೆರೆಸುವಂತಹವು. ತನ್ನನ್ನು ತಾನು ಅರಿತುಕೊಳ್ಳುವುದು ಸಾಧನಾಪಥದ ಮೊದಲ ಹೆಜ್ಜೆಯಾದರೆ, ಸತತ ಪರಿಶ್ರಮ, ಬರುವ ಕಷ್ಟಗಳು, ನೋವುಗಳನ್ನು ಸಹಿಸಿಕೊಳ್ಳುವ ಶಕ್ತಿ, ಯಾವುದೇ ಸಂದರ್ಭಗಳಲ್ಲಿ ನಂಬಿದ ತತ್ವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಸಾಮಾನ್ಯವಾಗಿ ಸಾಧಕರಲ್ಲಿ ಕಂಡು ಬರುವ ಗುಣಗಳು. ಸೋಲುಗಳು, ಎಡರು-ತೊಡರುಗಳು ಅವರ ಧೃತಿಗೆಡಿಸುವ ಬದಲಾಗಿ ಜಗತ್ತನ್ನು ಅರಿಯುವ ಅವರ ಹಸಿವನ್ನು, ಪಟ್ಟು ಬಿಡದೆ ಮತ್ತೆ ಮುಂದುವರೆಯುವ ಛಲವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಸಹಜವೆಂಬಂತೆ ಸಾಧಕ ದುಷ್ಕರ್ಮಗಳಿಂದ ದೂರವಿದ್ದು, ಸತ್ಕರ್ಮಗಳನ್ನು ಮಾಡುತ್ತಾ ಹೋಗುತ್ತಾನೆ.
ಮೊಂಡುವಾದಗಳಿಲ್ಲ ಗರ್ವ ಮೊದಲೇ ಇಲ್ಲ
ಧನ ಪದವಿ ಕೀರ್ತಿ ಮೆಚ್ಚುಗೆಯು ಬೇಕಿಲ್ಲ |
ಸೋಲು ಗೆಲವುಗಳ ಸಮದಿ ಕಾಣಲುಬಲ್ಲ
ಧೀರನವನೆ ನಿಜನಾಯಕನು ಮೂಢ ||
     ಅಲ್ಪ ವಿದ್ಯಾವಂತ ಮಹಾಗರ್ವಿ, ಮಹಾವಿದ್ಯಾವಂತ ಘನಪಂಡಿತ ಎಂಬ ಲೋಕೋಕ್ತಿಗೆ ತಕ್ಕಂತೆ ಸಾಧಕನಿಗೆ ತಾನೇ ದೊಡ್ಡವನು, ಎಲ್ಲವನ್ನೂ ತಿಳಿದವನು ಎಂಬ ದರ್ಪ,  ಅಹಂಕಾರವಿರುವುದಿಲ್ಲ. ತನ್ನ ಮಾತನ್ನು ಇತರರು ಕೇಳದಿದ್ದರೆ, ಅವಗಣಿಸಿದರೆ ಆತನಿಗೆ ಸಿಟ್ಟು ಬರುವುದಿಲ್ಲ. ಮೆಚ್ಚಿ ಹೊಗಳಿದರೂ ಅವನಿಗೆ ಲೆಕ್ಕಕ್ಕಿಲ್ಲ. ಇತರರು ಏನೆಂದುಕೊಂಡಾರೋ ಎಂಬ ಅಳುಕು, ಅಂಜಿಕೆ, ಲಜ್ಜೆಗಳಿಲ್ಲದೆ ನಿರ್ಲಿಪ್ತತೆಯಿಂದ ತನ್ನ ಕಾರ್ಯ ತಾನು ಮಾಡುತ್ತಿರುತ್ತಾನೆ. ಅವನಿಗೆ ಬಿಸಿಲು, ಮಳೆ, ಚಳಿ, ಗಾಳಿ, ಇತ್ಯಾದಿ ವೈಪರೀತ್ಯಗಳು ಅಡ್ಡಿಯೆನಿಸುವುದಿಲ್ಲ. ಕಾರ್ಯಕ್ಕೆ ಬೇಕಾದ ಅವಶ್ಯಕತೆಗಳು ಸಮೃದ್ಧಿಯಾಗಿರಲಿ, ಕೊರತೆಯಿರಲಿ ಬಾಧಕವೆನಿಸದು. ಒಬ್ಬ ಯಶಸ್ವಿ ವ್ಯಕ್ತಿ ತನ್ನ ಸಾಮರ್ಥ್ಯವನ್ನು ಅರಿತು ಕೆಲಸವನ್ನು ಕೈಗೆತ್ತಿಕೊಳ್ಳುತ್ತಾನೆ. ಅದನ್ನು ವ್ಯವಸ್ಥಿತವಾಗಿ ಮಾಡುತ್ತಾನೆ. ಹಾಗೆ ಮಾಡುವಾಗ ಯಾವುದೊಂದನ್ನೂ ಸಣ್ಣದೆಂಬ ಭಾವನೆಯಿಂದ ಕಡೆಗಣಿಸುವುದಿಲ್ಲ. ಮಾಡಬಲ್ಲೆನೆಂಬ ಧೃಢ ವಿಶ್ವಾಸವಿದ್ದು, ಹಿಡಿದ ಕೆಲಸವನ್ನು ಮಧ್ಯೆ ನಿಲ್ಲಿಸುವುದಿಲ್ಲ. ವ್ಯರ್ಥವಾಗಿ ಕಾಲಹರಣ ಮಾಡುವುದಿಲ್ಲ. ಚಂಚಲತೆಯಿಂದ ದೂರವಿದ್ದು, ಕೆಲಸವನ್ನು ವಿಚಲಿತಗೊಳಿಸುವ ಸಂಗತಿಗಳಿಂದ ದೂರವಿದ್ದುಬಿಡುತ್ತಾನೆ. ಸಿಗಲು ಸಾಧ್ಯವಿಲ್ಲವೆಂಬುದನ್ನು ಬಯಸದೆ, ಕಳೆದುಹೋದದ್ದರ ಬಗ್ಗೆ ಚಿಂತಿಸದೆ, ಆತಂಕದ ಸ್ಥಿತಿಯಲ್ಲೂ ಧೃತಿ ಕಳೆದುಕೊಳ್ಳದಿರುವವನು ನಾಯಕನೆನಿಸಿಕೊಳ್ಳುತ್ತಾನೆ.
ಪರರು ನಮಿಪುವ ತೇಜವಿರುವವನು
ಕೆಡುಕ ಸೈರಿಸಿ  ಕ್ಷಮಿಪ ಗುಣದವನು |
ನಾನತ್ವ ದೂರ ನಡೆನುಡಿಯು ನೇರ
ಸಾತ್ವಿಕನು ಸಾಧಕನು ಅವನೆ ಮೂಢ ||
     ಸಾಮಾನ್ಯರಲ್ಲಿ ಕಾಣುವ ಮತ್ಸರ ಸಾಧಕರಿಂದ ದೂರವಿರುತ್ತದೆ. ಈ ಮತ್ಸರ ಸಾಮಾನ್ಯರಿರಲಿ, ಅಪ್ರತಿಮರೆನಿಸಿಕೊಂಡವರನ್ನೂ ಕಾಡುತ್ತದೆ. ರಾಜಕಾರಣಿಗಳಲ್ಲಿ, ಅಧಿಕಾರಿಗಳಲ್ಲಿ, ಸಾಹಿತಿಗಳಲ್ಲಿ, ವೈಚಾರಿಕವಾಗಿ ಪ್ರಬುದ್ಧರೆನಿಸಿದವರಲ್ಲಿ, ಅಷ್ಟೇ ಏಕೆ ಜೀವನದ ಎಲ್ಲಾ ರಂಗಗಳಲ್ಲಿ ತಾನು ಎಲ್ಲರಿಗಿಂತ ಶ್ರೇಷ್ಠರೆನಿಸಬೇಕು, ತನಗಿಂತ ಹೆಚ್ಚು ಗೌರವ ಇತರರಿಗೆ ಸಿಗಬಾರದು ಎನ್ನುವ ಹಪಾಹಪಿತನ ಒಂದಲ್ಲಾ ಒಂದು ಹಂತದಲ್ಲಿ ತನ್ನ ಅವತಾರವನ್ನು ತೋರಿಸಿಬಿಡುತ್ತದೆ. ಕನ್ನಡದ ಉನ್ನತ ಪ್ರಶಸ್ತಿಯನ್ನು ಪಡೆದವರೊಬ್ಬರು ತಾನು ಸದಾ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ತವಕದಿಂದ ವೈಚಾರಿಕ ಪ್ರಜ್ಞೆಯನ್ನೇ ಕಳೆದುಕೊಂಡು ಅಪದ್ಧವಾಗಿ ಮಾತನಾಡುವುದನ್ನು ಕಂಡಿದ್ದೇವೆ. ಆದರೆ ನಿಜವಾದ ಸಾಧಕ ನಾನತ್ವದಿಂದ ದೂರವೇ ಉಳಿದಿರುತ್ತಾನೆ. ಶ್ರೇಷ್ಠ ವಿಚಾರವನ್ನು ಚೆನ್ನಾಗಿ ಮಂಡಿಸುವವರನ್ನು, ಶ್ರೇಯಸ್ಕರವಾದ ಕಾರ್ಯವನ್ನು ಯಾರೇ ಮಾಡಿದರೂ ಕಂಡು ಸಂತೋಷಿಸಿ ಅವರ ಬೆನ್ನು ತಟ್ಟುತ್ತಾನೆಯೇ ಹೊರತು ಕರುಬುವುದಿಲ್ಲ. ಸಾಧಕರಿಗೆ ಸಿಗುವ ಜನಮನ್ನಣೆಯನ್ನು ಕಂಡು ಕರುಬುವವರು ಸಾಧಕರಿಗೆ ಕೇಡು ಬಗೆಯಲು ಪ್ರಯತ್ನಿಸಿದರೂ, ಅದನ್ನು ನಿರ್ಲಕ್ಷಿಸುವ ಅಸಾಮಾನ್ಯ ಗುಣ ಸಾಧಕರಿಗೆ ಮಾತ್ರ ಒಲಿದಿರುತ್ತದೆ.
-ಕ.ವೆಂ.ನಾಗರಾಜ್.
*****************
ದಿನಾಂಕ 06-04-2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

3 ಕಾಮೆಂಟ್‌ಗಳು: