ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಜುಲೈ 22, 2016

ಅಸಹಿಷ್ಣುತೆಯ ಗುಮ್ಮ


     ಭಾರತದಲ್ಲಿ ಈಗ ಅಸಹಿಷ್ಣುತೆಯ ಬಗ್ಗೆ ದೊಡ್ಡ ಗುಲ್ಲೆದ್ದಿದೆ. ಇದನ್ನು  ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯವಾಗಿ ಗಂಭೀರವಾದ ಸಮಸ್ಯೆಯೆಂಬಂತೆ ಕೆಲವು ಮಾಧ್ಯಮಗಳು ಮತ್ತು ಸಾಹಿತಿ, ಕಲಾವಿದರುಗಳು ಬಿಂಬಿಸುತ್ತಿರುವದಲ್ಲದೆ ಹಲವರು ತಾವು ಪಡೆದಿದ್ದ ಪ್ರಶಸ್ತಿಗಳನ್ನು ಹಿಂತಿರುಗಿಸುವುದರ ಮೂಲಕ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಪ್ರವೃತ್ತಿಯನ್ನು ಬಲವಾಗಿ ಖಂಡಿಸುವವರ ಸಂಖ್ಯೆಯೂ ಗಣನೀಯವಾಗಿದೆ. ಪ್ರಶಸ್ತಿ ಹಿಂತಿರುಗಿಸಿದ ಸಾಹಿತಿಗಳು ಬರೆದ ಪುಸ್ತಕಗಳನ್ನು ಅವರಿಗೇ ಹಿಂತಿರುಗಿಸುವ ಚಳುವಳಿಯೂ ಆರಂಭವಾಗಿದೆ. ಒಂದಂತೂ ನಿಜ, ಪ್ರಪಂಚದ ಇತರ ದೇಶಗಳತ್ತ ಕಣ್ಣು ಹಾಯಿಸಿದರೆ ಕಾಣುವುದೇನೆಂದರೆ ಭಾರತದಂತಹ ಸಹಿಷ್ಣುತೆ ಮೈಗೂಡಿಸಿಕೊಂಡಿರುವ ದೇಶ ಮತ್ತೊಂದು ಇಲ್ಲವೆಂಬುದು! ಆದರೂ ಹೀಗೇಕೆ ಎಂಬುದಕ್ಕೆ ಪರ-ವಿರೋಧದ ಹೇಳಿಕೆಗಳು, ಲೇಖನಗಳು ಸಾಕಷ್ಟು ಬೆಳಕು ಕಂಡಿವೆ. ಈ ಕೊಂಡಿಗೆ ಮತ್ತೊಂದು ಲೇಖನದ ಸೇರ್ಪಡೆ ಮಾಡದೆ ಮೂಲ ವಿಷಯವಾದ ಅಸಹಿಷ್ಣುತೆ ಎಂದರೇನು ಎಂಬ ಕುರಿತು ಇಲ್ಲಿ ತಡಕಾಡಿರುವೆ.
     ಅಸಹಿಷ್ಣುತೆ ಕುರಿತು ಮಾತನಾಡುವ ಮುನ್ನ ಸಹಿಷ್ಣುತೆಯ ಬಗ್ಗೆ ತಿಳಿದುಕೊಳ್ಳಬೇಕು. ಸಹಿಸಿಕೊಳ್ಳಲಾಗದಿದ್ದಾಗ ಅಸಹನೆ ಜನಿಸುತ್ತದೆ. ಸಹನೆ ಸಜ್ಜನರ ಆಸ್ತಿ ಮತ್ತು ಅವರ ಆಯುಧವೂ ಕೂಡಾ! ಸಹನೆಯೆಂದರೆ ಪ್ರಚೋದನೆ, ಕಿರಿಕಿರಿ, ದುರಾದೃಷ್ಟ, ನೋವು, ಕ್ಲಿಷ್ಟಕರ ಸನ್ನಿವೇಶಗಳು, ಇತ್ಯಾದಿಗಳನ್ನು ತಾಳ್ಮೆ ಕಳೆದುಕೊಳ್ಳದೆ, ಸಿಟ್ಟು ಮಾಡಿಕೊಳ್ಳದೆ, ಭಾವನೆಗಳನ್ನು ಹೊರತೋರ್ಪಡಿಸದೇ ಸ್ಥಿತಪ್ರಜ್ಞತೆಯಿಂದ, ನಿರ್ಭಾವುಕತೆಯಿಂದ ಸಹಿಸಿಕೊಳ್ಳುವ ಒಂದು ಅದ್ಭುತ ಗುಣ. ಜನನಾಯಕರು, ಸಾಧು-ಸಂತರು, ಹಿರಿಯರುಗಳಲ್ಲಿ, ಸಾಧಕರಲ್ಲಿ ಈ ಗುಣ ಕಾಣಬಹುದು. ಇದೊಂದು ದೈವಿಕ ಗುಣ. ಸಹನಾಶೀಲರು ಸಾಮಾನ್ಯವಾಗಿ ಜನಾನುರಾಗಿಗಳಾಗಿರುತ್ತಾರೆ, ಜನರು ಇಷ್ಟಪಡುವವರಾಗಿರುತ್ತಾರೆ. ಮನುಷ್ಯ ಸಮಾಜದಲ್ಲಿ ಬಾಳಬೇಕಾದರೆ ಕೆಲವೊಮ್ಮೆ ಸಹಜವಾಗಿ, ಕೆಲವೊಮ್ಮೆ ತನ್ನ ಸಂತೋಷಕ್ಕಾಗಿ, ಕೆಲವೊಮ್ಮೆ ಇತರರ ಸಂತೋಷಕ್ಕಾಗಿ, ಕೆಲವೊಮ್ಮೆ ಅನಿವಾರ್ಯವಾಗಿ ಅನೇಕ ರೀತಿಯ ಮುಖವಾಡಗಳನ್ನು ಧರಿಸಬೇಕಾಗುತ್ತದೆ. ಮುಖವಾಡವೆಂದರೆ ತನಗೆ ಇಷ್ಟವಿರಲಿ, ಇಲ್ಲದಿರಲಿ ತನ್ನ ಮನಸ್ಸಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕಾಗಿ ಬರುವುದು, ಸರಳವಾಗಿ ಹೇಳಬೇಕೆಂದರೆ ಒಳಗಿರುವುದೇ ಒಂದು, ಹೊರಗೆ ತೋರುವುದೇ ಮತ್ತೊಂದು! ಅವುಗಳ ಪೈಕಿ ಸಹನೆ ಅಥವ ತಾಳ್ಮೆ ಎಂಬುದು ಅತ್ಯಂತ ಸುಂದರವಾದ ಮುಖವಾಡ. ಸಮಾಜದ ಹಿತಕ್ಕೆ ಇದು ಅಗತ್ಯವಾದುದಾಗಿದೆ.
     ಅಸಹನೆ ದುರ್ಬಲತೆಯ ದ್ಯೋತಕ ಮತ್ತು ಇತರರಿಗಿಂತ ಕೀಳು ಎಂಬ ಮನೋಭಾವವನ್ನು ಬಿಂಬಿಸುತ್ತದೆ. ಅಸಹಿಷ್ಣುಗಳು ಬಹುಬೇಗ ಪ್ರಚೋದನೆಗೆ ಒಳಗಾಗುತ್ತಾರೆ. ಅವರು ಒತ್ತಡವನ್ನು ಸಹಿಸರು. ತಾಳ್ಮೆ ಕಳೆದುಕೊಂಡು ಉದ್ರಿಕ್ತರಾಗುತ್ತಾರೆ, ವಿವೇಕ ಮರೆಯಾಗಿ ತಮ್ಮ ಒಳಗಿನ ಅಸಹನೆಯನ್ನು ಒಂದಲ್ಲಾ ಒಂದು ರೀತಿಯಲ್ಲಿ ಹೊರಗೆಡವುತ್ತಾರೆ ಮತ್ತು ಇದರಿಂದಾಗಿ ಇತರರ ಎದುರಿಗೆ ಹಗುರವಾಗಿಬಿಡುತ್ತಾರೆ. ವಿಚಿತ್ರವೆಂದರೆ ಅಸಹಿಷ್ಣುಗಳು ಮತ್ತು ಸಣ್ಣ ಮನಸ್ಸಿನ ವ್ಯಕ್ತಿಗಳೇ ತಮ್ಮ ಸಹನಾಶೀಲತೆ ಮತ್ತು ವಿಶಾಲ ಮನೋಭಾವದ ಬಗ್ಗೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ! ಹಿಂದಿನ ಸರ್ಕಾರದಲ್ಲಿ ಮಂತ್ರಿಯಾಗಿದ್ದವರೊಬ್ಬರು ನೆರೆಯ ಶತ್ರುದೇಶಕ್ಕೆ ಹೋಗಿ ಅಲ್ಲಿನ ಟಿವಿ ಸಂದರ್ಶನದಲ್ಲಿ ಮಾತನಾಡುತ್ತಾ ಈಗಿನ ಸರ್ಕಾರವನ್ನು ಕಿತ್ತೊಗೆಯಬೇಕು ಅದಕ್ಕೆ ನಿಮ್ಮ ಸಹಕಾರ ಬೇಕು ಎಂದು ನಾಚಿಕೆಯಿಲ್ಲದೆ ಹೇಳಿಬಿಡುತ್ತಾರೆ. ಇದು ಅವರ ಅಧಿಕಾರದ ಹಪಾಹಪಿ ಮತ್ತು ಅಸಹಿಷ್ಣುತೆ ಪರಾಕಾಷ್ಠೆಯ ಮಟ್ಟ ತಲುಪಿರುವುದನ್ನು ತೋರಿಸುತ್ತದೆ. ಸ್ವಂತ ದೇಶದ ಜನರಿಂದ ಚುನಾಯಿತವಾದ ಸರ್ಕಾರದ ಪದಚ್ಯುತಿಗೆ ಶತ್ರುದೇಶದ ಸಹಾಯ ಬಯಸುವ ಮನಸ್ಥಿತಿಯಿಂದ ದೇಶದ ಹಿತಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದೇನೆಂದೂ ಅವರಿಗೆ ಅನ್ನಿಸದು. ಪೃಥ್ವೀರಾಜನ ಏಳಿಗೆಯನ್ನು ಸಹಿಸದ ಜಯಚಂದ್ರನ ಅಸಹಿಷ್ಣುತೆ ಅವನನ್ನು ಮಹಮದ್ ಘೋರಿಯ ಹಸ್ತಕನನ್ನಾಗಿಸಿ ಭಾರತವನ್ನೇ ಶತಮಾನಗಳವರೆಗೆ ದಾಸ್ಯಕ್ಕೆ ದೂಡಿತ್ತೆಂಬುದನ್ನು ಇಲ್ಲಿ ನೆನಪು ಮಾಡಿಕೊಳ್ಳ್ಳಬೇಕಿದೆ. ಇತಿಹಾಸದಿಂದ ಪಾಠ ಕಲಿಯದಿದ್ದರೆ ನಾವು ಮೂರ್ಖರೇ ಸರಿ.
     ಮತೀಯ ಅಥವ ಧಾರ್ಮಿಕ ಅಸಹಿಷ್ಣುತೆ ಇಂದು ಜಾಗತಿಕ ಭಯೋತ್ಪಾದನೆಯ ರೂಪದಲ್ಲಿ ಕಾಡುತ್ತಿದೆ. ಧರ್ಮ ಅಥವ ಮತದ ಹೆಸರಿನಲ್ಲಿ ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಳ್ಳಲಾಗುತ್ತಿದೆ. ಹೆಣ್ಣನ್ನು ಭೋಗದ ವಸ್ತುವಾಗಿ ಬಳಸಿಕೊಳ್ಳುತ್ತಿದೆ. ಎಳೆಯ ಕಂದಮ್ಮಗಳನ್ನೂ ನಿರ್ದಯದಿಂದ ಹೊಸಕಿಹಾಕುತ್ತಿರುವ ವಿಡಿಯೋಗಳು ಅಂತರ್ಜಾಲ ತಾಣಗಳಲ್ಲಿ ಹರಿದಾಡುತ್ತವೆ. ಅದನ್ನು ಬೆಂಬಲಿಸುವ ವಿಕೃತರ ಸಂಖ್ಯೆಯೂ ಗಾಬರಿ ಹುಟ್ಟಿಸುವಂತಿದೆ. ಉಗ್ರರು ಯಾವಾಗ ಎಲ್ಲಿ ಜೀವಗಳ ಬಲಿ ತೆಗೆದುಕೊಳ್ಳುತ್ತಾರೆ ಎಂಬುದು ಪ್ರಜ್ಞಾವಂತರ ಆತಂಕವಾಗಿದೆ. ೪೦ ದೇಶಗಳಿಂದ ಉಗ್ರರಿಗೆ ಹಣ ಮತ್ತು ಶಸ್ತ್ರಾಸ್ತ್ರಗಳ ಸರಬರಾಜಾಗುತ್ತಿದೆಯಂತೆ. ನಮ್ಮ ದೇಶದಲ್ಲೂ ಉಗ್ರರಿಗೆ ಬೆಂಬಲವಾಗಿ ನಿಲ್ಲುವ, ಸಹಾಯ ಮಾಡುವ ಜನರಿಗೆ ಕೊರತೆಯಿಲ್ಲ. ವಿವಿಧ ರಾಜಕೀಯ ಪಕ್ಷಗಳೂ ವೋಟಿನ ಸಲುವಾಗಿ ಮಾಡುವ ಮತೀಯ ಓಲೈಕೆ ಭಯೋತ್ಪಾದನೆಗೆ ಪರೋಕ್ಷವಾಗಿ ಸಹಕಾರಿಯಾಗಿದೆ. ಜನನಾಯಕರುಗಳಿಗೆ ದೇಶ ಮತ್ತು ಜನಸಾಮಾನ್ಯರ ಹಿತ ಮುಖ್ಯವೆನ್ನುವ ಪರಿಸ್ಥಿತಿ ಬಂದರೆ ಮಾತ್ರ ಸುಧಾರಣೆ ಕಾಣಬಹುದು. ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುವ ರಾಜಕಾರಣಿಗಳೇ ಇಂದು ಹೆಚ್ಚಾಗಿರುವುದು ಸುಳ್ಳಲ್ಲ. ಸಹಿಷ್ಣುತೆ ಒಮ್ಮುಖದ ದಾರಿಯಾದರೆ ಅದು ಸಾಂಸ್ಕೃತಿಕ ಆತ್ಮಹತ್ಯೆಯಾಗುತ್ತದೆ. ಹಿಂದೂ ಧರ್ಮದ ಆಚರಣೆಗಳು, ಸಂಪ್ರದಾಯಗಳನ್ನು ಟೀಕಿಸಿದರೆ ಸಹಿಸಿಕೊಳ್ಳಬೇಕು ಎಂದು ಬಯಸುವವರು ಇದೇ ನೀತಿಯನ್ನು ಇಸ್ಲಾಮ್ ಮತ್ತು ಕ್ರಿಶ್ಚಿಯನ್ ಧರ್ಮಗಳಿಗೆ ಅನ್ವಯಿಸುವರೇ ಎಂದರೆ ಅದಕ್ಕೆ ಉತ್ತರ ಸಿಗದು. ಇಂತಹ ತಾರತಮ್ಯವೂ ಅಸಹಿಷ್ಣುತೆಗೆ ಪ್ರಚೋದನೆಯಾಗುತ್ತದೆ.
     ಜಾತಿ ಆಧಾರಿತ ರಾಜಕೀಯ ಸಂವಿಧಾನದ ಜಾತ್ಯಾತೀತತೆಗೆ ಕೊಡಲಿಪೆಟ್ಟು ಹಾಕುತ್ತಿದೆ. ಜಾತಿ ಆಧಾರದಲ್ಲಿ ಹಿಂದುಳಿದಿರುವಿಕೆ ಮತ್ತು ಮುಂದುವರೆದಿರುವಿಕೆಯನ್ನು ಗುರುತಿಸುವುದು ಅವೈಜ್ಞಾನಿಕ ಮತ್ತು ಅಮಾನವೀಯ. ಇದನ್ನು ರಾಜಕೀಯ ಅಧಿಕಾರ ಗಳಿಕೆಗೆ ಬಳಸುವ ರಾಜಕಾರಣಿಗಳು ಜಾತೀಯತೆಯನ್ನು ಪೋಷಿಸುತ್ತಿವೆ. ಪ್ರತಿಭಾ ಪಲಾಯನ, ಜಾತಿ-ಜಾತಿಗಳಲ್ಲಿ ವೈಮನಸ್ಯ, ಸಂಘರ್ಷಗಳು, ಅಸಹಿಷ್ಣುತೆ ಈ ಜಾತಿ ರಾಜಕೀಯದ ಫಲಗಳಾಗಿವೆ. ಸಹಿಷ್ಣುತೆ ಭಾರತೀಯರ ರಕ್ತದಲ್ಲಿ ಬಂದ ಗುಣವಾಗಿದೆ. ಅದನ್ನು ಕುಟಿಲ ರಾಜಕಾರಣಿಗಳು, ಅವಕಾಶವಾದಿ ಸಾಹಿತಿಗಳು, ಕಲಾವಿದರುಗಳು ಹಾಳು ಮಾಡದಿರುವಂತೆ ಜಾಗೃತರಾಗಿರುವುದು ಇಂದಿನ ಅಗತ್ಯವಾಗಿದೆ. ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ, ಸರ್ವಾಧಿಕಾರಿಗಳ ಆಳ್ವಿಕೆಯಲ್ಲಿರುವ ದೇಶಗಳಲ್ಲಿ, ಇಸ್ಲಾಮ್ ಧರ್ಮೀಯ ರಾಷ್ಟ್ರಗಳಲ್ಲಿ ಭಿನ್ನ ವಿಚಾರಗಳನ್ನು ಹೊಂದಿರುವವರನ್ನು ಹಿಂಸಿಸಲಾಗುತ್ತ್ತದೆ, ಬಲವಂತವಾಗಿ ವಿರುದ್ಧ ವಿಚಾರ ಒಪ್ಪುವಂತೆ ಮಾಡಲಾಗುತ್ತದೆ, ಗಡೀಪಾರು ಮಾಡಲಾಗುತ್ತದೆ, ಅವಮಾನಿಸಲಾಗುತ್ತದೆ, ಕೊಲ್ಲಲಾಗುತ್ತದೆ ಎಂಬುದಕ್ಕೆ ಹೇರಳ ಉದಾಹರಣೆಗಳು ಸಿಗುತ್ತವೆ. ಹೀಗಿರುವಾಗ ಭಾರತದ ಉದಾತ್ತತೆಯಾದ ಸಹಿಷ್ಣುತಾ ಗುಣವನ್ನು ಗುರುತಿಸೋಣ, ಗೌರವಿಸೋಣ, ಉಳಿಸೋಣ.
ಸಹಿಷ್ಣುತೆಯೆಂದರೆ ನೀವು ನಿಮಗೆ ಏನು ಬೇಕೆನ್ನುತ್ತೀರೋ, ಯಾವ ಹಕ್ಕು ಇರಬೇಕೆನ್ನುತ್ತೀರೋ ಅವು ಇತರರಿಗೂ ಇರಬೇಕೆನ್ನುವುದು! ನಿಮಗೆ ಮಾತ್ರ ಇರಲಿ ಇತರರಿಗೆ ಬೇಡ ಅನ್ನುವುದೇ ಅಸಹಿಷ್ಣುತೆ!
-ಕ.ವೆಂ.ನಾಗರಾಜ್.
***************
ದಿನಾಂಕ 27.04.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಶನಿವಾರ, ಜುಲೈ 16, 2016

ಅನ್ಯಾಯವನ್ನು ಸಹಿಸದಿರೋಣ


ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ |
ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.)
     'ಎಲ್ಲಿ ಬ್ರಾಹ್ಮೀಶಕ್ತಿ ಮತ್ತು ಕ್ಷಾತ್ರಶಕ್ತಿಯು ಒಂದಕ್ಕೊಂದು ಆಶ್ರಯ ನೀಡುತ್ತಾ ಒಟ್ಟಿಗೆ ಪ್ರವೃತ್ತವಾಗುತ್ತವೋ, ಎಲ್ಲಿ ಉದಾರಾಶಯರೂ, ಸತ್ಯಮಯರೂ, ಪವಿತ್ರಚಾರಿತ್ರರೂ ಆದ ವಿದ್ವಜ್ಜನರು, ರಾಷ್ಟ್ರನಾಯಕನೊಂದಿಗೆ ಸಹಕರಿಸಿ ನಡೆಯುತ್ತಾರೋ, ಆ ಲೋಕವನ್ನೇ ಪುಣ್ಯಶಾಲಿ ಎಂದು ತಿಳಿಯುತ್ತೇನೆ' ಎಂಬುದು ಈ ಮಂತ್ರದ ಅರ್ಥ. ಇಲ್ಲಿ ಬ್ರಾಹ್ಮೀಶಕ್ತಿ ಮತ್ತು ಕ್ಷಾತ್ರಶಕ್ತಿ ಎಂದರೆ ಜಾತಿಗಳಲ್ಲ, ವಿದ್ವಜ್ಜನರು ಮತ್ತು ಶಕ್ತಿವಂತ ಯುವಜನರು ಒಟ್ಟುಗೂಡಿ ಮೈತಾಳುವ ಪ್ರಚಂಡ ಶಕ್ತಿ!
     ಸಮಾಜದಲ್ಲಿ ಯಾವೊಂದು ರೀತಿಯ ವಿಭಾಗವೂ ಮೇಲಲ್ಲ, ಕೀಳೂ ಅಲ್ಲ. ವಿದ್ವಜ್ಜನರು, ವ್ಯಾಪಾರಿಗಳು, ಶ್ರಮಿಕರು, ಯೋಧರು ಇವರೆಲ್ಲರೂ ಪರಸ್ಪರ ಅವಲಂಬಿತರು. ಇದು ನನ್ನ ಕೆಲಸವಲ್ಲ, ನನ್ನ ಕೆಲಸ ನಾನು ಮಾಡುತ್ತೇನೆ, ಅವರ ಕೆಲಸ ಅವರು ಮಾಡಲಿ; ನನ್ನ ತಂಟೆಗೆ ಅವರು ಬರುವುದು ಬೇಡ, ಅವರ ತಂಟೆಗೆ ನಾನೂ ಹೋಗುವುದಿಲ್ಲವೆಂದರೆ ಅದು ಸಮಾಜಕ್ಕೆ ಪೂರಕವಾದ ನಡೆಯಾಗುವುದಿಲ್ಲ. ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಪೂರಕವಾಗಿ ಸಹಕರಿಸುತ್ತಾ ನಡೆದರೆ ಸಮಾಜವೂ, ದೇಶವೂ ಅಭಿವೃದ್ಧಿಯತ್ತ ಸಾಗುತ್ತದೆ. ಈ ಜಗತ್ತು ಭಿನ್ನತೆಗಳ ಗೂಡು. ಭಿನ್ನತೆಯಿಂದಲೇ ಜಗತ್ತು ನಡೆಯಲು ಸಾಧ್ಯ. ಎಲ್ಲರೂ ಬುದ್ಧಿವಂತರು, ಜ್ಞಾನವಂತರಾಗಬೇಕು ಎಂದು ಬಯಸಿದರೂ ಅದು ಸಾಧ್ಯವಿಲ್ಲ. ಎಲ್ಲರೂ ಆರೋಗ್ಯವಂತರಾಗಿರುತ್ತಾರೆಯೇ? ಎಲ್ಲರೂ ಶಕ್ತಿವಂತರಾಗಿರುತ್ತಾರೆಯೇ? ಎಲ್ಲರೂ ವ್ಯಾಪಾರಿಗಳಾಗಲು ಸಾಧ್ಯವೇ? ಎಲ್ಲರೂ ಧೃಢಕಾಯರಾಗಿರುವ ಯೋಧರಾಗಬೇಕೆಂದು ಇಷ್ಟಪಟ್ಟರೂ ಆಗುತ್ತದೆಯೇ? ಹೀಗಿರುವಾಗ ವಸ್ತುಸ್ಥಿತಿಯನ್ನು ಒಪ್ಪಿಕೊಂಡು ಪರಸ್ಪರ ಪೂರಕರಾಗಿ ಕೆಲಸ ಮಾಡಿದರೆ ದೇಶಕ್ಕೆ ಒಳಿತಲ್ಲವೇ? ಇವರೆಲ್ಲರನ್ನೂ ಸಮನ್ವಯದಿಂದ ಕರೆದೊಯ್ಯಬಲ್ಲ ಆಡಳಿತವೇ ಉತ್ತಮ ಆಡಳಿತವೆನಿಸಿಕೊಳ್ಳುತ್ತದೆ. ಸ್ವಾರ್ಥಕ್ಕಾಗಿ ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವವರು ಆಡಳಿತದ ಚುಕ್ಕಾಣಿ ಹಿಡಿದರೆ ಅಥವ ಅಂತಹವರೇ ಆಡಳಿತಗಾರರಿಗೆ ಸಲಹೆ ಕೊಡುವವರಾದರೆ ದೇಶ ಅಧಃಪತನದ ಹಾದಿ ಹಿಡಿದಂತೆಯೇ! ಆಡಳಿತ ಮಾಡುವ ಸ್ಥಾನದಲ್ಲಿರುವವರು ತಾವು ಪ್ರತಿನಿಧಿಸುವ ಸಮೂಹದ ಅಥವ ಜನಾಂಗದ ಅಥವ ತಮ್ಮನ್ನು ಬೆಂಬಲಿಸುವವರ ಹಿತವನ್ನು ಮಾತ್ರ ಪ್ರಧಾನವಾಗಿರಿಸಿಕೊಂಡರೆ ಉಳಿದವರು ಸಹಜವಾಗಿ ಅಸಂತುಷ್ಟರಾಗುತ್ತಾರೆ. ಶಾಸನಾಧೀಶರು ಇಡೀ ಸಮಾಜದ ಹಿತವನ್ನು ಸಮಾನವಾಗಿ ನೋಡುವವರಾಗಬೇಕು. ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನವನ್ನು ಆಳುವವರಿಗೆ ವಿದ್ವಜ್ಜನರು ನೀಡದಿದ್ದರೆ, ಅಥವ ಆಳುವವರು ದುಷ್ಟಕೂಟದ ಸಂಚಿಗೆ ಬಲಿಯಾಗಿ ಸಮಾಜಹಿತಕ್ಕೆ ವಿರೋಧವಾಗಿ, ಅನ್ಯಾಯಿಗಳಾಗಿ, ಪಕ್ಷಪಾತಿಗಳಾಗಿ ವರ್ತಿಸಿದರೆ ಅವರನ್ನು ಎಚ್ಚರಿಸುವ ಕೆಲಸವನ್ನು ವಿದ್ವಜ್ಜನರು ಮತ್ತು ಭುಜಬಲಿಗಳು ಒಟ್ಟಾಗಿ ಮಾಡಬೇಕಾಗುತ್ತದೆ. ಇದಕ್ಕಾಗಿ ಜನರನ್ನು ಯೋಗ್ಯ ರೀತಿಯಲ್ಲಿ ಪ್ರೋತ್ಸಾಹಿಸುವ ಕೆಲಸ ವಿದ್ವಜ್ಜನರದ್ದೇ ಆಗಿದೆ. ಈ ಮಾಡಬೇಕಾದ ಕೆಲಸವನ್ನು ಮಾಡದಿದ್ದರೆ ಅದರ ಫಲವನ್ನು ಅನುಭವಿಸುವವರೂ ಅವರೇ ಆಗುತ್ತಾರೆ.
     ಬ್ರಹ್ಮತೇಜ ಮತ್ತು ಕ್ಷಾತ್ರ ತೇಜಗಳ ಸಮ್ಮಿಲನವಾದರೆ ಎಂತಹ ಚಮತ್ಕಾರವಾಗುತ್ತದೆ ಎಂಬುದಕ್ಕೆ ಚಂದ್ರಗುಪ್ತನನ್ನು ಪ್ರೇರಿಸಿದ ಚಾಣಕ್ಯ, ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದ ವಿದ್ಯಾರಣ್ಯರು ಉದಾಹರಣೆಗಳಾಗಿದ್ದಾರೆ. ಅಣ್ಣಾ ಹಜಾರೆಯವರು ಭ್ರಷ್ಠಾಚಾರದ ವಿರುದ್ಧ ದ್ವನಿಯೆತ್ತಿದಾಗ ದೇಶದ ವಿದ್ವಜ್ಜನರು ಮತ್ತು ಪ್ರಚಂಡ ಯುವಶಕ್ತಿ ಅವರ ಬೆನ್ನಿಗೆ ನಿಂತಿತ್ತು. ದೇಶದಲ್ಲಿ ಏನೋ ಬದಲಾವಣೆ ಆಗಿಬಿಡುತ್ತದೆಂದು ಬಹುಜನರು ನಿರೀಕ್ಷಿಸಿದ್ದರು. ಆದರೆ ಆಡಳಿತಶಾಹಿ ಎಲ್ಲಾ ರೀತಿಯ ತಂತ್ರಗಳನ್ನು ಬಳಸಿ ಚಳುವಳಿಯನ್ನು ಹತ್ತಿಕ್ಕಿಬಿಟ್ಟಿತು. ಅದರ ಪರಿಣಾಮವನ್ನು ಆಡಳಿತ ಪಕ್ಷ ಹಿಂದೆಂದೂ ಕಾಣದ ರೀತಿಯಲ್ಲಿ ಸೋಲುವ ಮೂಲಕ ಅನುಭವಿಸಿತು.
     ಅಧಿಕಾರದ ಬಲದಿಂದ ಬಹುಜನರ ಅಭಿಪ್ರಾಯಗಳನ್ನು ಮೀರಿ ನಡೆದುಕೊಳ್ಳುವ ನಡವಳಿಕೆಗಳನ್ನು ಆಡಳಿತಗಾರರಲ್ಲಿ ಕಾಣುತ್ತಿದ್ದೇವೆ. ಭ್ರಷ್ಠಾಚಾರದ ಆರೋಪಗಳನ್ನು ಹೊತ್ತ ಮಂತ್ರಿಗಳು, ಶಾಸಕರನ್ನು ರಾಜಾರೋಷಾಗಿ ಸಮರ್ಥಿಸಿಕೊಳ್ಳಲಾಗುತ್ತದೆ. ಎಲ್ಲರನ್ನೂ ಸಮನಾಗಿ ಕಾಣಬೇಕಾದ ಕಾನೂನುಗಳನ್ನು ಸರ್ಕಾರದ ಕ್ರಮಗಳನ್ನು ಒಪ್ಪದವರ ವಿರುದ್ಧ ಕಠಿಣವಾಗಿ ಬಳಸುವುದನ್ನು ಮತ್ತು ಸಮರ್ಥಕರ ಅಪರಾಧಗಳನ್ನು ಕಾಣದಂತಿರುವುದು ಅಥವ ಮುಚ್ಚಿ ಹಾಕುವ ಪ್ರಯತ್ನಗಳನ್ನು ಎಗ್ಗಿಲ್ಲದೆ ಮಾಡುವುದನ್ನು ಕಾಣುತ್ತಿದ್ದೇವೆ. ಭ್ರಷ್ಠಾಚಾರ ತಡೆಯಬೇಕಾದ ಲೋಕಾಯುಕ್ತ ಸಂಸ್ಥೆಯೇ ಭ್ರಷ್ಠಾಚಾರದ ಕೂಪವಾಗುವುದಕ್ಕೆ ಆಡಳಿತದಲ್ಲಿರುವವರು ಸಹಕಾರಿಗಳಲ್ಲವೆಂದು ಹೇಳಲಾಗುವುದಿಲ್ಲ. ತನಿಖಾ ಸಂಸ್ಥೆಗಳು, ಆಯೋಗಗಳು ಆಡಳಿತದ ಮರ್ಜಿಯಂತೆ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಕಂಡೂ ಕಾಣದಂತೆ ಇರುವ ಪರಿಸ್ಥಿತಿ ಇದೆ. ಈ ಪರಿಸ್ಥಿತಿಗೆ ಆಡಳಿತಗಾರರಿಗೆ ಸಲಹೆ ಕೊಡುವವರ, ಅವರ ಬೆನ್ನಿಗೆ ನಿಂತಿರುವ ಸ್ವಹಿತಾಸಕ್ತಿ ಪ್ರಧಾನ ಶಕ್ತಿಗಳ ಕುಮ್ಮಕ್ಕು ಇರುವುದು ಗುಟ್ಟಾಗಿ ಉಳಿದಿಲ್ಲ. ಕೆಲವು ಮಾಧ್ಯಮಗಳೂ ಸಹ ಪಕ್ಷಪಾತದಿಂದ ವರ್ತಿಸುತ್ತಿವೆ. ಇಂದು ಅಸಹನೆ ಹೆಚ್ಚಾಗುತ್ತಿರುವ ಬಗ್ಗೆ ಚರ್ಚೆಗಳಾಗುತ್ತಿವೆ. ಈ ಅಸಹನೆ ಅನ್ನುವುದು ಒಮ್ಮುಖವಾಗಿಲ್ಲ ಎಂಬುದನ್ನು ಅಸಹನೆಯನ್ನು ದಾಳವಾಗಿ ಬಳಸುತ್ತಿರುವವರ ವಿರುದ್ಧದ ಅಸಹನೆಯೂ ಪ್ರಖರವಾಗಿರುವುದು ತೋರಿಸುತ್ತಿದೆ.
     ಗಾಂಧಿಯವರು ಹೇಳಿದಂತೆ ಅಸತ್ಯ, ಅನ್ಯಾಯ, ದಬ್ಬಾಳಿಕೆಗಳನ್ನು ಸಹಿಸಿಕೊಳ್ಳುವುದು ಹೇಡಿತನವಾಗುತ್ತದೆ. ಹೋರಾಡಲು ನಮಗೆ ಶಕ್ತಿ ಇರದಿರಬಹುದು, ಆದರೆ ಹೋರಾಡುವವರನ್ನು ಹುರಿದುಂಬಿಸುವ, ಪ್ರೋತ್ಸಾಹಿಸುವ ಕನಿಷ್ಠ ಕೆಲಸವನ್ನಾದರೂ ನಾವು ಮಾಡಬಹುದು. ಸುಂಕದವನ ಮುಂದೆ ಸುಖ-ದುಃಖ ಹೇಳಿಕೊಳ್ಳಲಾಗದು, ಕಟುಕನ ಮುಂದೆ ಅಹಿಂಸೆಯ ಪಾಠ ಬೋಧಿಸಲಾಗದು. ಇಂದು ಅಂತರ್ಜಾಲ ತಾಣಗಳು ಪ್ರಭಾವಿಯಾಗಿವೆ. ಸಮಯಸಾಧಕರ ಬಂಡವಾಳಗಳು ಬಯಲಾಗುತ್ತಿವೆ. ಇದರ ಮುಂದೆ ಎಷ್ಟೋ ಸಲ ಮಾಧ್ಯಮಗಳೂ ಮಂಕಾಗಿವೆ. ನಮ್ಮ ಗೋಳು ಕೇಳುವವರಾರು ಎಂದು ಹತಾಶೆಗೊಳ್ಳುತ್ತಿದ್ದ ಸ್ಥಿತಿ ಈಗ ಬದಲಾಗುತ್ತಿದೆ. ಅನ್ಯಾಯವನ್ನು ಪ್ರತಿಭಟಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಒಳ್ಳೆಯ ಸಂಕೇತವಾಗಿದೆ. ಯುವಶಕ್ತಿ ನಮ್ಮ ದೇಶದ ಶಕ್ತಿ. ಅವರುಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತಿದರೆ ತಡೆಯುವವರು ಯಾರು?
ಸಲೆ ಕಷ್ಟಕೋಟಿ ಬರಲಿ ನಮಗಾದರಾತ್ಮ ಧಾತ |
ತಲೆ ಮಾತ್ರ ಬಾಗದಿರಲಿ ಅನ್ಯಾಯದೆದುರು ಧಾತಾ ||
-ಕ.ವೆಂ.ನಾಗರಾಜ್.
***************
ದಿನಾಂಕ 20.04.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಸೋಮವಾರ, ಜುಲೈ 11, 2016

ಸಾಧಕನ ದಾರಿ - 2


ನುಡಿದಂತೆ ನಡೆದು ಮಾದರಿಯು ತಾನಾಗೆ
ಪರರ ಮನವರಿತು ನಡೆವ ಕರುಣೆಯಿರಲಾಗೆ |
ಕರಗತವು ತಾನಾಗೆ ಕೆಲಸ ಮಾಡಿಪ ಕಲೆಯು
ನಾಯಕನು ಉದಯಿಸುವ ಕಾಣು ಮೂಢ ||
     ಈ ಘಟನೆಯ ಬಗ್ಗೆ ನೀವೂ ಕೇಳಿರಬಹುದು ಅಥವ ಓದಿರಬಹುದು. ಒಮ್ಮೆ ರಾಮಕೃಷ್ಣ ಪರಮಹಂಸರ ಹತ್ತಿರ ಒಬ್ಬ ತಾಯಿ ತನ್ನ ಮಗನನ್ನು ಕರೆದುಕೊಂಡು ಬಂದು, "ಪೂಜ್ಯರೇ, ನನ್ನ ಮಗನಿಗೆ ಜಿಲೇಬಿ ತಿನ್ನುವ ಚಪಲ ಜಾಸ್ತಿ. ಎಷ್ಟು ಕೊಟ್ಟರೂ ತಿನ್ನುತ್ತಾನೆ, ಮತ್ತೆ ಮತ್ತೆ ಕೇಳುತ್ತಾನೆ. ಅಷ್ಟೊಂದು ತಿಂದರೆ ಅವನ ಆರೋಗ್ಯ ಏನಾಗಬೇಕು? ನೀವು ಸ್ವಲ್ಪ ಬುದ್ಧಿ ಹೇಳಿ ಪೂಜ್ಯರೇ" ಎಂದು ಕೇಳಿಕೊಳ್ಳುತ್ತಾಳೆ. ರಾಮಕೃಷ್ಣರು ಆ ತಾಯಿಗೆ ಒಂದು ವಾರ ಬಿಟ್ಟು ಬರಲು ಹೇಳುತ್ತಾರೆ. ಒಂದು ವಾರದ ನಂತರದಲ್ಲಿ ಮತ್ತೆ ಕೆಲವು ದಿನಗಳು ಬಿಟ್ಟು ಬರಲು ಹೇಳುತ್ತಾರೆ. ಇದು ನಾಲ್ಕು-ಐದು ಸಲ ಮುಂದುವರೆಯುತ್ತದೆ. ಕೊನೆಗೆ ಒಂದು ದಿನ ರಾಮಕೃಷ್ಣರು ಮಗುವನ್ನು ಹತ್ತಿರ ಕರೆದು ಪ್ರೀತಿಯಿಂದ ತಲೆ ನೇವರಿಸುತ್ತಾ, "ಮಗು ತುಂಬಾ ಜಿಲೇಬಿ ತಿನ್ನುವುದು ಒಳ್ಳೆಯದಲ್ಲ. ಅಪರೂಪಕ್ಕೆ ಸ್ವಲ್ಪ ತಿನ್ನು. ಜಾಸ್ತಿ ತಿನ್ನಬೇಡ" ಎನ್ನುತ್ತಾರೆ. ಮಗುವಿಗೆ ಅವರು ಹೇಳಿದ ರೀತಿ ಒಪ್ಪಿಗೆಯಾಗುತ್ತದೆ. ಅದರಂತೆ ಪಾಲಿಸುತ್ತದೆ ಕೂಡಾ! ಆ ತಾಯಿಗೆ ಆಶ್ಚರ್ಯವಾಗುತ್ತದೆ. ಈ ಮಾತನ್ನು ಅವರು ಮೊದಲ ದಿನವೇ ಹೇಳಬಹುದಿತ್ತಲ್ಲಾ ಎಂದು ಮನಸ್ಸಿನಲ್ಲಿ ಅಂದುಕೊಂಡರೂ ಆಗ ವಿಚಾರಿಸದೆ ಇನ್ನೊಂದು ದಿನ ತಾನೊಬ್ಬಳೇ ಬಂದಾಗ ಈ ಪ್ರಶ್ನೆ ಕೇಳಿಯೇಬಿಡುತ್ತಾಳೆ. ರಾಮಕೃಷ್ಣರು ನಗುತ್ತಾ ಹೇಳುತ್ತಾರೆ, "ತಾಯಿ, ನನಗೂ ಜಿಲೇಬಿ ಅಂದರೆ ಬಹಳ ಇಷ್ಟ. ಅದನ್ನು ತಿನ್ನಬೇಕೆಂಬ ಚಪಲದಿಂದ ಬಿಡಿಸಿಕೊಳ್ಳಲು ನನಗೆ ಅಷ್ಟು ಸಮಯ ಬೇಕಾಯಿತು". ದೊಡ್ಡವರ ರೀತಿಯೇ ಹಾಗೆ! ಇನ್ನೊಬ್ಬರಿಗೆ ಹೇಳುವ ಮುನ್ನ ಅದನ್ನು ತಾವು ಅನುಸರಿಸಿರಬೇಕು. ಅವರ ಅಂತರಂಗ ಮತ್ತು ಬಹಿರಂಗಗಳಲ್ಲಿ ಭಿನ್ನತೆ ಇಲ್ಲ. ಹೇಳುವುದೊಂದು ಮಾಡುವುದು ಮತ್ತೊಂದು ಅನ್ನುವುದು ಇಲ್ಲವೇ ಇಲ್ಲ. ಅಂತಹವರ ಮಾತಿನಲ್ಲಿ ಶಕ್ತಿ ಇರುತ್ತದೆ. ಆ ಶಕ್ತಿ ಹೊರಗಿನದಲ್ಲ. ಒಳಗಿನಿಂದ ಬಂದುದು. ಆ ಮಾತುಗಳನ್ನು ಕೇಳಿದವರು ಮಂತ್ರಮುಗ್ಧರಂತೆ ಅನುಸರಿಸುವುದಕ್ಕೆ ಇರುವ ವಿಶೇಷ ಕಾರಣವೇ ಇದಾಗಿದೆ.
ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ |
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸಾಧಕನು ಮೂಢ ||
     ಆದಿ ಶಂಕರಾಚಾರ್ಯ ವಿರಚಿತ ಸಾಧನಾಪಂಚಕ ಒಬ್ಬ ಸಾಧಕ ಹೇಗೆ ಇರಬೇಕೆಂಬುದನ್ನು ತಿಳಿಸುವ ಒಂದು ಅಪೂರ್ವ ರಚನೆ. ನಿತ್ಯ ವೇದಾಧ್ಯಯನ, ಮಾಡುವ ಕೆಲಸಗಳನ್ನು ಭಗವಂತ ಆರಾಧನೆ ಎಂದು ಭಾವಿಸಿ ಮಾಡುವುದು, ಅಂತರಂಗದ ಕೊಳೆಯನ್ನು ತೊಡೆದು ಹಾಕುವುದು, ಮೋಹದ ಸಂಕೋಲೆಯಿಂದ ಹೊರಬರುವುದು, ಜ್ಞಾನಿಗಳ ಸತ್ಸಂಗ, ಯೋಗ್ಯ ಗುರುಗಳ ಆಶ್ರಯ, ವಿತಂಡ ವಾದಗಳಿಂದ ದೂರವಿರುವುದು, ಸಮಚಿತ್ತ ಹೊಂದುವುದು, ಇತ್ಯಾದಿಗಳು ಸಾಧಕನಿಗೆ ಇರಬೇಕೆಂದು ಅದು ಹೇಳುತ್ತದೆ.
ಹೊರಶುಚಿಯೊಡನೆ ಒಳಶುಚಿಯು ಇರಲು
ಮಾನಾಪಮಾನದಲುದಾಸೀನನಾಗಿರಲು |
ನಿರ್ಭಯತೆ ಮೇಳವಿಸೆನಿಸೆ ಸಮರ್ಥ
ದೇವಪ್ರಿಯನವನಲ್ಲದಿನ್ಯಾರು ಮೂಢ ||
     ಅಬ್ಬಬ್ಬಾ, ಸಾಧಕರಾಗುವುದು ಇಷ್ಟೊಂದು ಕಷ್ಟವೇ! ಇನ್ನೂ ಏನಾದರೂ ಇದೆಯೋ? ಎಂಬ ಪ್ರಶ್ನೆ ಮೂಡುತ್ತದೆ. ಹೌದು, ಇನ್ನೂ ಇದೆ ಎಂಬುದು ಸಾಧಕರ ನಡೆ-ನುಡಿಗಳನ್ನು ಕಂಡವರಿಗೆ ಅರಿವಾಗದೇ ಇರದು. ಅವರು ತಾನೇ ಸರಿ, ತನ್ನದೇ ಸರಿ ಅನ್ನುವುದಿಲ್ಲ. ಒಂದು ಪುಟ್ಟ ಮಗುವೂ ಏನನ್ನೋ ಹೇಳುತ್ತಿದ್ದರೂ ಅದನ್ನೂ ಬೆರಗಾಗಿ ಕಣ್ಣರಳಿಸಿ ಕೇಳುವ ಆ ತನ್ಮಯತೆ ಸಾಧಕರಿಗಲ್ಲದೆ ಬೇರೆ ಯಾರಿಗೆ ಬಂದೀತು! ಎಲ್ಲವನ್ನೂ ಕೇಳುವ ಆ ಗುಣ ಅನನ್ಯ. ಅವರು ಮೇಲು, ಇವರು ಕೀಳು, ಅವನು ಬಡವ, ಇವನು ಶ್ರೀಮಂತ, ಇತ್ಯಾದಿ ತಾರತಮ್ಯ ಮಾಡುವುದಿಲ್ಲ. ಎಂತಹ ಸ್ಥಿತಿಯಲ್ಲೂ ಆನಂದ ಕಾಣುವ ಗುಣ, ಆಸೆ, ಆಮಿಷಗಳಿಂದ ಮೈಮರೆತು ದಾರಿ ತಪ್ಪದ ನಡತೆ, ಅಪಾಯವನ್ನೆದುರಿಸುವ ಗಟ್ಟಿತನ, ಹೀನ-ದೀನರ ಸೇವೆಯನ್ನು ದೇವರ ಪೂಜೆಯೆಂದು ಭಾವಿಸುವ ಉದಾತ್ತತೆ, ಸರಳತೆ, ನಿಷ್ಕಾಮ ಕರ್ಮ, ಅಚಲ ವಿಶ್ವಾಸ, ಹೊರಮನದ ಕೋರಿಕೆಗಳನ್ನು ಅಲ್ಲಗಳೆದು ಒಳಮನದ ಕರೆಯನ್ನು ಆಲಿಸಿ ಅದರಂತೆ ಜೀವಿಸುವ ಕಲೆ ಸಾಧಕರ ಅಮೂಲ್ಯ ಸಂಪತ್ತು. ಇಷ್ಟೆಲ್ಲಾ ಇದ್ದ ಮೇಲೆ, ಅವರು ದೇವರೇ ಸರಿ, ಸಾಮಾನ್ಯ ಮನುಷ್ಯರಲ್ಲವೇ ಅಲ್ಲ, ಸಾಮಾನ್ಯರು ಹೀಗಿರಲು ಸಾಧ್ಯವೇ ಇಲ್ಲ ಎಂದು ನಿರ್ಧರಿಸಿ ಅವರನ್ನು ಆರಾಧಿಸಲು ಪ್ರಾರಂಭಿಸಿಬಿಡುತ್ತೇವೆ. ಇಂದು ಅನೇಕ ಸಾಧು-ಸಂತ-ಮಹಾಂತರ ಗುಡಿಗಳನ್ನು ಕಟ್ಟಿ ನಿತ್ಯ ಪೂಜೆ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಹಾಗೆ ಪೂಜಿಸುವವರದೇ ಒಂದು ಪಂಥವಾಗಿ ಬಿಡುತ್ತದೆ. ಹೊಸ ಹೊಸ ರೀತಿ-ನೀತಿಗಳು, ಕಟ್ಟಳೆಗಳು, ಸಂಪ್ರದಾಯಗಳು ರೂಢಿಗೆ ಬಂದುಬಿಡುತ್ತವೆ. ಅವರನ್ನು ಆರಾಧಿಸುವುದು ತಪ್ಪೇ, ಪೂಜಿಸಬಾರದೇ ಎಂದು ಸಿಟ್ಟಾಗದಿರಿ. ನಮಗೆ ಯೋಗ್ಯ ಮಾರ್ಗದರ್ಶನ ಮಾಡಿದವರನ್ನು, ಮಾಡುವವರನ್ನು ಆರಾಧಿಸುವುದು ತಪ್ಪಲ್ಲವೇ ಅಲ್ಲ. ಅದರೆ ಅದರಲ್ಲಿ ಒಂದು ಅಪಾಯವಿದೆ. ಅಂತಹ ಪೂಜ್ಯರುಗಳನ್ನು ಹೊರಗೆ ಇಟ್ಟುಬಿಡುವುದೇ ಆ ಅಪಾಯ. ಸಾಷ್ಟಾಂಗ ನಮಸ್ಕಾರ ಮಾಡಿ, ಆರತಿ ಬೆಳಗಿ, ತೀರ್ಥ-ಪ್ರಸಾದಗಳನ್ನು ಪಡೆದು ಕೃತಕೃತ್ಯರಾದೆವೆಂದು ಅಂದುಕೊಂಡುಬಿಡುತ್ತೇವೆ. ವಿಚಾರ ಮಾಡೋಣ. ಹೃದಯ ಮಂದಿರಗಳಲ್ಲಿ ಅವರನ್ನು ಪ್ರತಿಷ್ಠಾಪಿಸಿ ಮಾಡುವ ಪೂಜೆಯೇ ನಿಜವಾದ ಪೂಜೆ. ಅವರು ತೋರಿದ ಹಾದಿಯಲ್ಲಿ ನಡೆಯುವುದೇ ಅವರಿಗೆ ಸಲ್ಲಿಸಬಹುದಾದ ಯೋಗ್ಯ ಗುರುಕಾಣಿಕೆ. ಹಾಗೆ ನಡೆದು ಮಾಡುವ ಸಾಧನೆಯೇ ಪೂಜಾಫಲ ಎಂಬುದನ್ನು ಅರಿಯೋಣ.
-ಕ.ವೆಂ.ನಾಗರಾಜ್.
**************
ದಿನಾಂಕ 13-04-2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಶುಕ್ರವಾರ, ಜುಲೈ 8, 2016

ಸಾಧಕನ ದಾರಿ - 1


ಹಿಡಿದ ಗುರಿಯನು ಸಾಧಿಸುವವರೆಗೆ
ಮುಂದಿಟ್ಟ ಹೆಜ್ಜೆಯನು  ಹಿಂದಕ್ಕೆ ಇಡದೆ |
ಆವೇಶ ಉತ್ಸಾಹ ನರನಾಡಿಯಲಿರಿಸೆ
ಯಶವರಸಿ ಹರಸದಿಹುದೆ ಮೂಢ ||
     ಹೇಗೋ ಜೀವಿಸಬೇಕೆನ್ನುವವರು ಕಷ್ಟಪಡುವುದಿಲ್ಲ. ಅವರು ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು, ಸರಿ-ತಪ್ಪುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬಾಳುತ್ತಾರೆ. ಆದರೆ ಹೀಗೆಯೇ ಜೀವಿಸಬೇಕೆಂದುಕೊಂಡವರಿಗೆ ಅಡ್ಡಿ, ಅಡಚಣೆಗಳು, ಕಷ್ಟಗಳ ಸರಮಾಲೆಯೇ ಎದುರಾಗುತ್ತದೆ. ಆದರೆ ಅವರು ಅವೆಲ್ಲವನ್ನೂ ಎದುರಿಸಿ, ಅಗತ್ಯ ಬಿದ್ದರೆ ಪ್ರಾಣವನ್ನೂ ಪಣಕ್ಕಿಟ್ಟು ತಾವಂದುಕೊಂಡಂತೆಯೇ ಬದುಕುತ್ತಾರೆ. ಹಾಗೆ ಯಶಸ್ವಿಯಾಗಿ ಬದುಕುವವರನ್ನು ಸಾಧಕರೆನ್ನುತ್ತಾರೆ. ಅಂತಹ ಸಾಧಕರನ್ನು ಜಗತ್ತು ಗೌರವಿಸುತ್ತದೆ. ಹೇಗೋ ಬದುಕುವವರೂ ಸಹ  ಸಾಧಕರನ್ನು ಮೆಚ್ಚುಗೆಯಿಂದ, ಗೌರವದಿಂದ ಕಾಣುತ್ತಾರೆ. ಸಾಧsಕರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವುದೂ ಅಪರೂಪವಲ್ಲ. ಆದರೆ, ಸಾಧಕರ ಸಾಧನೆಯ ಹಿಂದಿನ ದಿವ್ಯ ಸಂದೇಶವನ್ನು ಎಲ್ಲರೂ ಮರೆತುಬಿಡುತ್ತೇವೆ. ಅದೆಂದರೆ, ಅಂತಹ ಸಾಧನೆಯನ್ನು ಯಾರು ಬೇಕಾದರೂ ಮಾಡಬಹುದು ಎಂಬುದೇ! ಸಾಧನೆ ಮಾಡಲು ಹಿಂಜರಿಯುವ ಸಾಮಾನ್ಯರಿಗೆ, ಅವರು ದೇವಾಂಶ ಸಂಭೂತರು, ಮಹಾಮಹಿಮರು. ಅವರೆಲ್ಲಿ, ನಾವೆಲ್ಲಿ, ಉಂಟೇ, ಉಂಟೇ, ಏನು ಹೇಳುತ್ತಿದ್ದೀರಿ? ಅವರೊಡನೆ ನಮ್ಮನ್ನು ಹೋಲಿಸುವುದೇ! ಎಂಬಂತಹ ಕುಂಟು ನೆಪಗಳೂ ನೆರವಿಗೆ ಬರುತ್ತದೆ. ಆದರೆ ನಿಜವಾದ ಕಾರಣವೆಂದರೆ, ಅವರಿಗೆ ಕಷ್ಟಪಡುವುದು ಬೇಕಿರುವುದಿಲ್ಲ ಮತ್ತು ಮೌಲ್ಯಗಳು, ನೀತಿ-ನಿಯಮಗಳು ಎಂದುಕೊಂಡು ಬೇಕಿಲ್ಲದ ತೊಂದರೆಗಳನ್ನು ಮೈಮೇಲೆ ಏಕೆ ಎಳೆದುಕೊಳ್ಳಬೇಕು ಎಂಬ ಮನೋಭಾವ. ಹೇಗೋ ಜೀವಿಸುವವರಿಗೆ ಸ್ವಾರ್ಥ ಪ್ರಮುಖವಾಗಿರುತ್ತದೆ. ಅದಕ್ಕಾಗಿ ಸಮಾಜದ ಹಿತ ಅವರಿಗೆ ಗೌಣವೆನಿಸುತ್ತದೆ. ಈ ಮನೋಭಾವವೇ ಸಮಾಜ ಇಂದು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಮೂಲವೆಂಬುದು ಆಳವಾಗಿ ಚಿಂತಿಸಿದರೆ ಅರ್ಥವಾದೀತು. ಒಂದಂತೂ ಸತ್ಯ, ನೀತಿ-ನಿಯಮ, ಮೌಲ್ಯಗಳಿಗೆ ಬೆಲೆ ಕೊಡುವವರ, ಅದಕ್ಕಾಗಿ ಸ್ವಂತದ ಹಿತ ತ್ಯಾಗ ಮಾಡುವ ಸಾಧಕರಿಂದ ಸಮಾಜ ಲಾಭ ಪಡೆಯುತ್ತದೆ. ಈ ಕಾರಣಕ್ಕಾಗಿಯೇ ಸಮಾಜ ಸಾಧಕರನ್ನು ಗೌರವದಿಂದ ಕಾಣುತ್ತದೆ, ಕಾಣಲೇಬೇಕು.
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ |
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ ||
     ಸಾಧಕರು ಇದ್ದಕ್ಕಿದ್ದಂತೆ ಮೂಡಿಬರುವುದಿಲ್ಲ. ಅವಿರತ ಶ್ರಮ ಅವರ ಸಾಧನೆಯ ಬೆನ್ನಿಗಿರುತ್ತದೆ. ಸರ್ವಜ್ಞನೆಂಬುವನು ಗರ್ವದಿಂದಾದವನೆ, ಹಲವಂ ಬಲ್ಲವರಿಂದ ಕಲಿತು . . ವಿದ್ಯೆಯ ಪರ್ವತವೆ ಆದ ಸರ್ವಜ್ಞ ಎಂಬ ತ್ರಿಪದಿ ಸರ್ವಜ್ಞನ ಸಾಧನೆಯ ಹಾದಿಯ ಕಿರುನೋಟ ಬೀರುತ್ತದೆ. ಸಾಧಕರ ಜೀವನವನ್ನು ಅವಲೋಕಿಸಿದರೆ ಕಂಡು ಬರುವ ವಿಚಾರಗಳು ಸಾಧನೆಯ ಹಾದಿಯಲ್ಲಿರುವವರ ಕಣ್ತೆರೆಸುವಂತಹವು. ತನ್ನನ್ನು ತಾನು ಅರಿತುಕೊಳ್ಳುವುದು ಸಾಧನಾಪಥದ ಮೊದಲ ಹೆಜ್ಜೆಯಾದರೆ, ಸತತ ಪರಿಶ್ರಮ, ಬರುವ ಕಷ್ಟಗಳು, ನೋವುಗಳನ್ನು ಸಹಿಸಿಕೊಳ್ಳುವ ಶಕ್ತಿ, ಯಾವುದೇ ಸಂದರ್ಭಗಳಲ್ಲಿ ನಂಬಿದ ತತ್ವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಸಾಮಾನ್ಯವಾಗಿ ಸಾಧಕರಲ್ಲಿ ಕಂಡು ಬರುವ ಗುಣಗಳು. ಸೋಲುಗಳು, ಎಡರು-ತೊಡರುಗಳು ಅವರ ಧೃತಿಗೆಡಿಸುವ ಬದಲಾಗಿ ಜಗತ್ತನ್ನು ಅರಿಯುವ ಅವರ ಹಸಿವನ್ನು, ಪಟ್ಟು ಬಿಡದೆ ಮತ್ತೆ ಮುಂದುವರೆಯುವ ಛಲವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಸಹಜವೆಂಬಂತೆ ಸಾಧಕ ದುಷ್ಕರ್ಮಗಳಿಂದ ದೂರವಿದ್ದು, ಸತ್ಕರ್ಮಗಳನ್ನು ಮಾಡುತ್ತಾ ಹೋಗುತ್ತಾನೆ.
ಮೊಂಡುವಾದಗಳಿಲ್ಲ ಗರ್ವ ಮೊದಲೇ ಇಲ್ಲ
ಧನ ಪದವಿ ಕೀರ್ತಿ ಮೆಚ್ಚುಗೆಯು ಬೇಕಿಲ್ಲ |
ಸೋಲು ಗೆಲವುಗಳ ಸಮದಿ ಕಾಣಲುಬಲ್ಲ
ಧೀರನವನೆ ನಿಜನಾಯಕನು ಮೂಢ ||
     ಅಲ್ಪ ವಿದ್ಯಾವಂತ ಮಹಾಗರ್ವಿ, ಮಹಾವಿದ್ಯಾವಂತ ಘನಪಂಡಿತ ಎಂಬ ಲೋಕೋಕ್ತಿಗೆ ತಕ್ಕಂತೆ ಸಾಧಕನಿಗೆ ತಾನೇ ದೊಡ್ಡವನು, ಎಲ್ಲವನ್ನೂ ತಿಳಿದವನು ಎಂಬ ದರ್ಪ,  ಅಹಂಕಾರವಿರುವುದಿಲ್ಲ. ತನ್ನ ಮಾತನ್ನು ಇತರರು ಕೇಳದಿದ್ದರೆ, ಅವಗಣಿಸಿದರೆ ಆತನಿಗೆ ಸಿಟ್ಟು ಬರುವುದಿಲ್ಲ. ಮೆಚ್ಚಿ ಹೊಗಳಿದರೂ ಅವನಿಗೆ ಲೆಕ್ಕಕ್ಕಿಲ್ಲ. ಇತರರು ಏನೆಂದುಕೊಂಡಾರೋ ಎಂಬ ಅಳುಕು, ಅಂಜಿಕೆ, ಲಜ್ಜೆಗಳಿಲ್ಲದೆ ನಿರ್ಲಿಪ್ತತೆಯಿಂದ ತನ್ನ ಕಾರ್ಯ ತಾನು ಮಾಡುತ್ತಿರುತ್ತಾನೆ. ಅವನಿಗೆ ಬಿಸಿಲು, ಮಳೆ, ಚಳಿ, ಗಾಳಿ, ಇತ್ಯಾದಿ ವೈಪರೀತ್ಯಗಳು ಅಡ್ಡಿಯೆನಿಸುವುದಿಲ್ಲ. ಕಾರ್ಯಕ್ಕೆ ಬೇಕಾದ ಅವಶ್ಯಕತೆಗಳು ಸಮೃದ್ಧಿಯಾಗಿರಲಿ, ಕೊರತೆಯಿರಲಿ ಬಾಧಕವೆನಿಸದು. ಒಬ್ಬ ಯಶಸ್ವಿ ವ್ಯಕ್ತಿ ತನ್ನ ಸಾಮರ್ಥ್ಯವನ್ನು ಅರಿತು ಕೆಲಸವನ್ನು ಕೈಗೆತ್ತಿಕೊಳ್ಳುತ್ತಾನೆ. ಅದನ್ನು ವ್ಯವಸ್ಥಿತವಾಗಿ ಮಾಡುತ್ತಾನೆ. ಹಾಗೆ ಮಾಡುವಾಗ ಯಾವುದೊಂದನ್ನೂ ಸಣ್ಣದೆಂಬ ಭಾವನೆಯಿಂದ ಕಡೆಗಣಿಸುವುದಿಲ್ಲ. ಮಾಡಬಲ್ಲೆನೆಂಬ ಧೃಢ ವಿಶ್ವಾಸವಿದ್ದು, ಹಿಡಿದ ಕೆಲಸವನ್ನು ಮಧ್ಯೆ ನಿಲ್ಲಿಸುವುದಿಲ್ಲ. ವ್ಯರ್ಥವಾಗಿ ಕಾಲಹರಣ ಮಾಡುವುದಿಲ್ಲ. ಚಂಚಲತೆಯಿಂದ ದೂರವಿದ್ದು, ಕೆಲಸವನ್ನು ವಿಚಲಿತಗೊಳಿಸುವ ಸಂಗತಿಗಳಿಂದ ದೂರವಿದ್ದುಬಿಡುತ್ತಾನೆ. ಸಿಗಲು ಸಾಧ್ಯವಿಲ್ಲವೆಂಬುದನ್ನು ಬಯಸದೆ, ಕಳೆದುಹೋದದ್ದರ ಬಗ್ಗೆ ಚಿಂತಿಸದೆ, ಆತಂಕದ ಸ್ಥಿತಿಯಲ್ಲೂ ಧೃತಿ ಕಳೆದುಕೊಳ್ಳದಿರುವವನು ನಾಯಕನೆನಿಸಿಕೊಳ್ಳುತ್ತಾನೆ.
ಪರರು ನಮಿಪುವ ತೇಜವಿರುವವನು
ಕೆಡುಕ ಸೈರಿಸಿ  ಕ್ಷಮಿಪ ಗುಣದವನು |
ನಾನತ್ವ ದೂರ ನಡೆನುಡಿಯು ನೇರ
ಸಾತ್ವಿಕನು ಸಾಧಕನು ಅವನೆ ಮೂಢ ||
     ಸಾಮಾನ್ಯರಲ್ಲಿ ಕಾಣುವ ಮತ್ಸರ ಸಾಧಕರಿಂದ ದೂರವಿರುತ್ತದೆ. ಈ ಮತ್ಸರ ಸಾಮಾನ್ಯರಿರಲಿ, ಅಪ್ರತಿಮರೆನಿಸಿಕೊಂಡವರನ್ನೂ ಕಾಡುತ್ತದೆ. ರಾಜಕಾರಣಿಗಳಲ್ಲಿ, ಅಧಿಕಾರಿಗಳಲ್ಲಿ, ಸಾಹಿತಿಗಳಲ್ಲಿ, ವೈಚಾರಿಕವಾಗಿ ಪ್ರಬುದ್ಧರೆನಿಸಿದವರಲ್ಲಿ, ಅಷ್ಟೇ ಏಕೆ ಜೀವನದ ಎಲ್ಲಾ ರಂಗಗಳಲ್ಲಿ ತಾನು ಎಲ್ಲರಿಗಿಂತ ಶ್ರೇಷ್ಠರೆನಿಸಬೇಕು, ತನಗಿಂತ ಹೆಚ್ಚು ಗೌರವ ಇತರರಿಗೆ ಸಿಗಬಾರದು ಎನ್ನುವ ಹಪಾಹಪಿತನ ಒಂದಲ್ಲಾ ಒಂದು ಹಂತದಲ್ಲಿ ತನ್ನ ಅವತಾರವನ್ನು ತೋರಿಸಿಬಿಡುತ್ತದೆ. ಕನ್ನಡದ ಉನ್ನತ ಪ್ರಶಸ್ತಿಯನ್ನು ಪಡೆದವರೊಬ್ಬರು ತಾನು ಸದಾ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ತವಕದಿಂದ ವೈಚಾರಿಕ ಪ್ರಜ್ಞೆಯನ್ನೇ ಕಳೆದುಕೊಂಡು ಅಪದ್ಧವಾಗಿ ಮಾತನಾಡುವುದನ್ನು ಕಂಡಿದ್ದೇವೆ. ಆದರೆ ನಿಜವಾದ ಸಾಧಕ ನಾನತ್ವದಿಂದ ದೂರವೇ ಉಳಿದಿರುತ್ತಾನೆ. ಶ್ರೇಷ್ಠ ವಿಚಾರವನ್ನು ಚೆನ್ನಾಗಿ ಮಂಡಿಸುವವರನ್ನು, ಶ್ರೇಯಸ್ಕರವಾದ ಕಾರ್ಯವನ್ನು ಯಾರೇ ಮಾಡಿದರೂ ಕಂಡು ಸಂತೋಷಿಸಿ ಅವರ ಬೆನ್ನು ತಟ್ಟುತ್ತಾನೆಯೇ ಹೊರತು ಕರುಬುವುದಿಲ್ಲ. ಸಾಧಕರಿಗೆ ಸಿಗುವ ಜನಮನ್ನಣೆಯನ್ನು ಕಂಡು ಕರುಬುವವರು ಸಾಧಕರಿಗೆ ಕೇಡು ಬಗೆಯಲು ಪ್ರಯತ್ನಿಸಿದರೂ, ಅದನ್ನು ನಿರ್ಲಕ್ಷಿಸುವ ಅಸಾಮಾನ್ಯ ಗುಣ ಸಾಧಕರಿಗೆ ಮಾತ್ರ ಒಲಿದಿರುತ್ತದೆ.
-ಕ.ವೆಂ.ನಾಗರಾಜ್.
*****************
ದಿನಾಂಕ 06-04-2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಶನಿವಾರ, ಜುಲೈ 2, 2016

ತಪ್ಪು ಯಾರದು?


     'ನನ್ನ ಮಗ ಅಂತಹವನಲ್ಲ, ಅವನು ತುಂಬಾ ಒಳ್ಳೆಯವನು. ಅವನನ್ನು ಬಲಿಪಶು ಮಾಡಿದ್ದಾರೆ. ಅವನದ್ದೇನೂ ತಪ್ಪಿಲ್ಲ' - ಯಾವುದೋ ಕ್ರಿಮಿನಲ್ ಕೇಸಿನಲ್ಲಿ ಬಂದಿಯಾದ ಮಗನನ್ನು ವಹಿಸಿಕೊಂಡು ತಾಯಿ ಗೋಳಾಡುತ್ತಾಳೆ. 'ನನ್ನ ಮಗಳು ಆ ಪಾತರಗಿತ್ತಿ ಸಹವಾಸದಿಂದ ಹಾಳಾದಳು, ಅವನು ಶ್ರೀರಾಮಚಂದ್ರ. ಆದರೆ ಆ ಮಿಟಕಲಾಡಿ ಅವನನ್ನು ಬಲೆಗೆ ಹಾಕಿಕೊಂಡಿದ್ದಾಳೆ, ಮೊದಲು ಇವನು ಹೀಗಿರಲಿಲ್ಲ, ಪೋಲಿ ಪಟಾಲಮ್ ಸೇರಿ ಕೆಟ್ಟುಹೋದ' - ಇಂತಹ ಮಾತುಗಳು ಕಿವಿಗೆ ಬೀಳುತ್ತಿರುತ್ತವೆ. ಇದರಲ್ಲಿ ಹೊರಹೊಮ್ಮುವ ಅಂಶವೆಂದರೆ ತಪ್ಪು ನಮ್ಮವರದಲ್ಲ, ಬೇರೆಯವರದು. ಇದು ಇಲ್ಲಿಗೇ ನಿಲ್ಲುವುದಿಲ್ಲ. ನಮ್ಮ ತಪ್ಪುಗಳು, ಸೋಲುಗಳು, ಕೆಟ್ಟ ಸಂಗತಿಗಳಿಗೆಲ್ಲಾ ಕಾರಣ ನಾವಲ್ಲ, ಬೇರೆಯವರೇ ಎಂದು ವಾದಿಸುತ್ತೇವೆ. ಆದರೆ, ಯಶಸ್ಸುಗಳಿಗೆ, ಒಳ್ಳೆಯ ಸಂಗತಿಗಳಿಗೆಲ್ಲಾ ನಾವು ಮಾತ್ರ ಕಾರಣರು ಎಂದು ನಂಬುತ್ತೇವೆ.
     ವಿವೇಚನೆ ಮಾಡೋಣ, ಯಾರಾದರೂ ಇನ್ನೊಬ್ಬರ ಕಾರಣದಿಂದ ನಿಜವಾಗಿಯೂ ಹಾಳಾಗುತ್ತಾರೆಯೇ? ಇತರರಿಂದ ನಮಗೆ ತೊಂದರೆಯಾಗಬಹುದು, ಕೇಡಾಗಬಹುದು. ಆದರೆ ಆ ತೊಂದರೆಯಲ್ಲಿ ನಮ್ಮ ಪಾಲೂ ಇರುತ್ತದೆ. ಒಂದು ಉದಾಹರಣೆ ನೋಡೋಣ. ಮಾವಿನಮರ ಮತ್ತು ಬೇವಿನಮರ ಅಕ್ಕ ಪಕ್ಕದಲ್ಲಿ ಇವೆಯೆಂದು ಭಾವಿಸೋಣ. ಬೇವಿನಮರದ ಪಕ್ಕದಲ್ಲಿರುವ ಮಾವಿನಮರದ ಹಣ್ಣುಗಳು ಕಹಿಯಾಗಿರುವುವೇ? ಮಾವಿನಮರದ ಪ್ರಭಾವದಿಂದ ಬೇವಿನ ಕಹಿಯಲ್ಲಿ ವ್ಯತ್ಯಾಸವಾಗುವುದೇ? ಒಂದು ವೇಳೆ ಮಾವಿನಮರ ಇದ್ದ ಸ್ಥಳದಲ್ಲಿ ಬೇವಿನಮರ ಮತ್ತು ಬೇವಿನಮರ ಇದ್ದ ಸ್ಥಳದಲ್ಲಿ ಮಾವಿನಮರ ಇದ್ದಿದ್ದರೆ? ಆಗಲೂ ಏನೂ ವ್ಯತ್ಯಾಸವಾಗುತ್ತಿರಲಿಲ್ಲ. ಎರಡು ಮರಗಳು ಇರುವ ಭೂಮಿಯ ಗುಣ ಒಂದೇ ಆದರೂ ಮಾವಿನಮರ ಭೂಮಿಯಲ್ಲಿ ತನಗೆ ಬೇಕಾದ ಸಾರವನ್ನು ಮಾತ್ರ ಹೀರಿಕೊಳ್ಳುತ್ತದೆ. ಬೇವಿನಮರವೂ ಅಷ್ಟೆ. ಮಾವು ಮತ್ತು ಬೇವಿನ ಮರಗಳಿಗೆ ವಿಭಿನ್ನ ಫಲಗಳನ್ನು ನೀಡುವ ಆಯ್ಕೆಯಿಲ್ಲ. ಮನುಷ್ಯನ ವಿಷಯದಲ್ಲಿ ಈ ತತ್ವ ಅನ್ವಯಿಸಿ ನೋಡೋಣ. ವಿವೇಚನೆ ಮಾಡುವ ಶಕ್ತಿಯಿರುವ ಮನುಷ್ಯ ವಿಚಿತ್ರ ಜೀವಿ, ಅದ್ಭುತ ಜೀವಿ. ಅವನಲ್ಲಿ ಒಳ್ಳೆಯ ಮತ್ತು ಕೆಟ್ಟ ಅಂಶಗಳೆರಡೂ ಇರುತ್ತವೆ. ಮರದ ಬೇರುಗಳು ಹೇಗೆ ನೀರಿನ ಸೆಲೆಯಿರುವ ಕಡೆಗೆ ಚಾಚಿ ಮುನ್ನಡೆಯುವುವೋ ಅದೇ ರೀತಿ ಒಳ್ಳೆಯ ಅಂಶ ಪ್ರಧಾನವಾಗಿರುವ ವ್ಯಕ್ತಿ ಅಂತಹವರದೇ ಸಹವಾಸ ಇಷ್ಟಪಡುತ್ತಾನೆ. ಒಂದುವೇಳೆ ಅವನು ಕೆಟ್ಟವರ ನಡುವೆಯೇ ಬಾಳಬೇಕಾದ ಪರಿಸ್ಥಿತಿಯಿದ್ದರೆ ಅವನಲ್ಲಿನ ಕೆಟ್ಟ ಅಂಶಗಳಿಗೆ ಪ್ರಚೋದನೆ ದೊರೆತು, ಕೆಟ್ಟವನೆನಿಸಿಕೊಂಡರೂ ಸಹ ಅವನು ಕೆಟ್ಟವರಲ್ಲಿ ಒಳ್ಳೆಯವನು ಅನ್ನಿಸಿಕೊಳ್ಳಬಹುದು. ಅದೇ ರೀತಿ ಕೆಟ್ಟ ಅಂಶಗಳು ಪ್ರಧಾನವಾಗಿರುವ ವ್ಯಕ್ತಿ ಒಳ್ಳೆಯವರ ನಡುವೆ ಇರಬೇಕಾದ ಅನಿವಾರ್ಯತೆ ಬಂದರೆ ಅವನ ಒಳ್ಳೆಯತನಕ್ಕೆ ಪ್ರಚೋದನೆ ಸಿಕ್ಕಿ ಒಳ್ಳೆಯವನೆನಿಸಿದರೂ, ಆಗಾಗ್ಗೆ ಅವನ ಕೆಟ್ಟತನ ಪ್ರಕಟವಾಗದೇ ಇರದು.
     ಹಾಗಾದರೆ ಕೆಟ್ಟವರು ಕೆಟ್ಟವರಾಗೇ ಇರುತ್ತಾರೆಯೇ? ಒಳ್ಳೆಯವರು ಒಳ್ಳೆಯವರಾಗೇ ಇರುತ್ತಾರೆಯೇ? ಎಂಬ ಪ್ರಶ್ನೆಗೆ ಕಾಲ ನೀಡಿರುವ ಉತ್ತರವೆಂದರೆ ಇಲ್ಲ, ಹಾಗಿಲ್ಲ ಎಂಬುದೇ. ಪರಿಸ್ಥಿತಿಯ ಶಿಶುವಾಗಿ ಮುಸ್ಲಿಮನಾದ ಕಾಳಿಚರಣ ಮಾತೃಧರ್ಮಕ್ಕೆ ಮರಳಲು ಬಯಸಿದಾಗ ಅದನ್ನು ಒಪ್ಪದ ಅಂಧ ಸಂಪ್ರದಾಯವಾದಿಗಳು ಅದನ್ನು ವಿರೋಧಿಸಿದರು. ಅವರ ವಿರುದ್ಧ ಕೆರಳಿ ನಿಂತ ಅವನು ಕಾಲಾಪಹಾಡ್ ಆಗಿ ಖಡ್ಗ ಹಿರಿದು ಅಸಂಖ್ಯಾತ ಹಿಂದೂಗಳನ್ನು ಮುಸ್ಲಿಮರನ್ನಾಗಿ ಮಾಡಿದ ಇತಿಹಾಸ ಕಣ್ಣ ಮುಂದಿದೆ. ಅಂತಹ ತಪ್ಪುಗಳ ಫಲವೇ ಈಗಿನ ಕಾಶ್ಮೀರ ಸಮಸ್ಯೆ, ಉಗ್ರಗಾಮಿಗಳ ಸಮಸ್ಯೆ. ಬೇಡನಾಗಿ ಬೇಟೆಯಾಡಿ ಜೀವಿಸುತ್ತಿದ್ದ ವಾಲ್ಮೀಕಿ ಸಂತನಾಗಿ ಪರಿವರ್ತಿತನಾಗಿ ಅದ್ಭುತ ರಾಮಾಯಣ ರಚಿಸಿದ್ದನ್ನೂ ನಾವು ಅರಿತಿದ್ದೇವೆ. ಒಳ್ಳೆಯತನಕ್ಕೆ ಮತ್ತು ಕೆಟ್ಟತನಕ್ಕೆ ಜಾತಿ, ಮತ, ಪಂಥಗಳ ಭೇದವಿಲ್ಲ.
     ನಮ್ಮ ಮನೋಭಾವ ಹೇಗಿದೆ? ಯಾರನ್ನಾದರೂ ಕುರಿತು ಅವನು ಎಷ್ಟು ಒಳ್ಳೆಯವನು ಎಂದರೆ ಅದನ್ನು ತಕ್ಷಣ ಒಪ್ಪಿಕೊಳ್ಳುವುದಿಲ್ಲ. 'ನನಗೆ ಗೊತ್ತಿಲ್ಲವೇ ಅವನ ಬೇಳೆಕಾಳು' ಎಂದು ಮೂಗು ಮುರಿಯುತ್ತೇವೆ ಅಥವ ಅವನ ಒಳ್ಳೆಯತನಕ್ಕೆ ಸಾಕ್ಷಿ ಬಯಸುತ್ತೇವೆ. ಅದೇ ಕೆಟ್ಟವನು ಅಂದರೆ ಹಿಂದೆ ಮುಂದೆ ನೋಡದೆ ಒಪ್ಪಿಬಿಡುತ್ತೇವೆ! ನಮ್ಮ ಮತ್ತು ನಮ್ಮವರ ತಪ್ಪುಗಳು ನಮಗೆ ಗೌಣವಾಗಿ ಕಾಣುತ್ತವೆ. ಇತರರ ಸಣ್ಣ ತಪ್ಪುಗಳೂ ಬೃಹದಾಕಾರ ತಳೆಯುತ್ತವೆ. ನಿಜವಾದ ದೋಷ ಇಲ್ಲಿದೆ. ನಾವು ತಪ್ಪುಗಳನ್ನು, ಲೋಪಗಳನ್ನು ಹೊರಗೆ ಹುಡುಕುತ್ತೇವೆ, ಕಾಣುತ್ತೇವೆ. ನಿಜವಾದ ತಪ್ಪು, ನಿಜವಾದ ಲೋಪ ಒಳಗೆ ಇದೆ! ಆ ಒಳಗಿನ ತಪ್ಪನ್ನು ಅರಿಯುವ, ತಿದ್ದಿಕೊಳ್ಳುವ ಪ್ರಯತ್ನ ಮಾಡಲು ಪ್ರಾರಂಭಿಸಿದಾಗ ನಾವು ನಿಜವಾದ ಮನುಷ್ಯರಾಗುತ್ತಾ ಹೋಗುತ್ತೇವೆ. ಸಮಸ್ಯೆ ಬರುವುದು ಇಲ್ಲೇ. ಏಕೆಂದರೆ ಒಳ್ಳೆಯವರಾಗುವುದು ಎಂದರೆ ಮೇಲೇರುತ್ತಾ ಹೋಗುವುದು. ಇದು ಕಠಿಣವಾದ ಹಾದಿ. ಮೇಲೇರುವುದು ಕಷ್ಟ, ಆದರೆ ಕೆಳಕ್ಕೆ ಬೀಳುವುದು? ಹಾಗೆಂದು ಇದ್ದಲ್ಲೇ ಇದ್ದರೆ ನಾವು ನಿಜವಾದ ಮನುಷ್ಯರೆನಿಸಿಕೊಳ್ಳುವುದಾದರೂ ಹೇಗೆ?
     ಅವರು ಅಂಥವರು, ಇವರು ಇಂಥವರು, ಇವರುಗಳಿಂದಲೇ ನಮ್ಮ ದೇಶ ಈ ಸ್ಥಿತಿಗೆ ಬಂದಿದೆ ಎಂದು ದೂರುತ್ತೇವೆ. ಅವರೇನೋ ಅಂಥವರು, ಆದರೆ ನೀನೇಕೆ ಹೀಗೆ? ಅಂದರೆ ಸಿಗಬಹುದಾದ ಉತ್ತರ, ನ್ಯಾಯ, ನೀತಿ, ಧರ್ಮ ಎಂದರೆ ಈ ಕಾಲದಲ್ಲಿ ಬದುಕಲು ಸಾಧ್ಯವೇ? ಎಂಬುದೇ. ಅವರದು ದೊಡ್ಡ ತಪ್ಪುಗಳು, ನಮ್ಮದಾದರೋ ಪರಿಸ್ಥಿತಿಯ ಕಾರಣದಿಂದ ಅನಿವಾರ್ಯವಾಗಿ ಮಾಡುವ ಸಣ್ಣ ತಪ್ಪುಗಳು ಎಂದು ಸಮರ್ಥಿಸಿಕೊಳ್ಳುತ್ತೇವೆ. ಈ ಸಣ್ಣ ತಪ್ಪುಗಳೇ ಮುಂದೆ ದೊಡ್ಡ ತಪ್ಪುಗಳನ್ನು ಮಾಡಲು ತಳಪಾಯ. ನಾವು ಒಳ್ಳೆಯವರಾಗಲು ಅಥವ ಕೆಟ್ಟವರಾಗಲು ಇತರರು ಕೇವಲ ನೆಪಗಳಾಗಬಹುದೇ ಹೊರತು ಅವರು ಕಾರಣರಾಗುವುದಿಲ್ಲ. ನಿಜವಾದ ಕಾರಣ ನಮ್ಮ ಒಳಗೇ ಇರುವಾಗ ನಾವು ಏನಾಗಬೇಕು ಅನ್ನುವುದು ನಮ್ಮ ಮೇಲೇ ನಿರ್ಭರವಾಗಿದೆ. ಒಳ್ಳೆಯತನಕ್ಕೆ ನಮ್ಮನ್ನು ನಾವು ತೆರೆದುಕೊಳ್ಳೋಣ, ಪ್ರಯತ್ನ ಮಾಡೋಣ.
ಶುಭವ ನೋಡದಿರೆ ಕಣ್ಣಿದ್ದು ಕುರುಡ
ಶುಭವ ಕೇಳದಿರೆ ಕಿವಿಯಿದ್ದು ಕಿವುಡ |
ಶುಭವ ನುಡಿಯದಿರೆ ಬಾಯಿದ್ದು ಮೂಕ
ಇದ್ದೂ ಇಲ್ಲದವನಾಗದಿರು ಮೂಢ ||
-ಕ.ವೆಂ.ನಾಗರಾಜ್.
***************
ದಿನಾಂಕ 30.03.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ: