ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಫೆಬ್ರವರಿ 19, 2016

ಹೀಗೊಂದು ವೇದೋಕ್ತ ಉಪನಯನ



     ಬೇಲೂರು ತಾಲ್ಲೂಕಿನ ಆಂದಲೆ ಗ್ರಾಮದ ಶ್ರೀ ಕೃಷ್ಣಮೂರ್ತಿ ಶನಿದೇವಾಲಯದ ಅರ್ಚಕರು. ವೇದಭಾರತಿಯ ಚಟುವಟಿಕೆಗಳ ಬಗ್ಗೆ ಬೇಲೂರಿನ ಮಿತ್ರರಿಂದ ತಿಳಿದು ದೂರವಾಣಿ ಮೂಲಕ ಸಂಯೋಜಕ ಶ್ರೀ ಹರಿಹರಪುರ ಶ್ರೀಧರರನ್ನು ಕೆಲವು ದಿನಗಳ ಹಿಂದೆ ಸಂಪರ್ಕಿಸಿದರು. ದಲಿತ ಸಮುದಾಯಕ್ಕೆ ಸೇರಿದ ಅವರು ತಮ್ಮ ಮಗ ಚಂದನನಿಗೆ ವೇದೋಕ್ತವಾಗಿ ಉಪನಯನ ಮಾಡಿಸುವ ತಮ್ಮ ಮನದ ಆಸೆಯನ್ನು ಹಂಚಿಕೊಂಡರು. ಸ್ವತಃ ಹಾಸನಕ್ಕೆ ಬಂದು ಮಾತನಾಡಿ ತಮ್ಮ ಇಚ್ಛೆಯನ್ನು ಪುನರುಚ್ಛರಿಸಿದರು. ವೇದಭಾರತಿಯ ಕಾರ್ಯಕರ್ತರು ಇದಕ್ಕೆ ಒಪ್ಪಿದರು. ಅದರಂತೆ ದಿನಾಂಕ 19.02.2016ರಂದು ಗ್ರಾಮದಲ್ಲಿ ಈ ಕಾರ್ಯ ಮಾಡುವುದೆಂದೂ ನಿಶ್ಚಯವಾಯಿತು. ಉತ್ಸಾಹಿ ಕೃಷ್ಣಮೂರ್ತಿಯವರು ಗ್ರಾಮದ ದೇವಸ್ಥಾನದ ಪಕ್ಕದ ಅರಳಿಮರದ ನೆರಳಿನಲ್ಲಿ ಶಾಮಿಯಾನಾ ಹಾಕಿಸಿದರು. ಉಪನಯನಕ್ಕೆ ಅಗತ್ಯದ ಎಲ್ಲಾ ಸಿದ್ಧತೆಗಳನ್ನೂ ವಿವರಗಳನ್ನು ಕೇಳಿ ಮಾಡಿಕೊಂಡಿದ್ದರು. ಗ್ರಾಮಸ್ಥರು, ಬಂಧುಗಳನ್ನು ಆಹ್ವಾನಿಸಿದ್ದರು. 

     ಹಾಸನದಿಂದ ಶ್ರೀಧರ್, ನಾನು, ಸತೀಶ, ರಾಜಶೇಖರ್ ಮತ್ತು ವೇದಾಧ್ಯಾಯಿ ಶ್ರೀ ನವೀನ ಬೆಳಿಗ್ಗೆ 8ರ ವೇಳೆಗೆ ಸ್ಥಳ ತಲುಪಿದಾಗ ಅಲ್ಲಿನ ಹಬ್ಬದ ವಾತಾವರಣ ಕಂಡು ಹರ್ಷಿತರಾದೆವು. ಶ್ರೀ ನವೀನರು ವೇದೋಕ್ತ ರೀತಿಯಲ್ಲಿ ಉಪನಯನ ಕಾರ್ಯ ನಡೆಸಿಕೊಟ್ಟರು. ಸಹಕಾರಿಗಳಾಗಿ ನಾವು ಜೊತೆಯಲ್ಲಿದ್ದೆವು. ಪ್ರತಿ ಕ್ರಿಯೆಯನ್ನೂ ಶ್ರದ್ಧೆಯಿಂದ ಮಾಡುತ್ತಿದ್ದ ವಟು ಚಂದನ್ ಮತ್ತು ಅವನ ತಂದೆ-ತಾಯಿಯರು ಋತ್ವಿಕರು ಪ್ರತಿ ಮಂತ್ರದ ಅರ್ಥ, ಉದ್ದೇಶಗಳನ್ನು ವಿವರಿಸುತ್ತಿದ್ದುದನ್ನು ಗಮನವಿಟ್ಟು ಕೇಳುತ್ತಿದ್ದುದು ವಿಶೇಷವಾಗಿತ್ತು. ಹಾಜರಿದ್ದ ಗ್ರಾಮಸ್ಥರೂ ಸಹ ಆಸಕ್ತಿಯಿಂದ ವೀಕ್ಷಿಸುತ್ತಿದ್ದರು.

     ಯಜ್ಞೋಪವೀತ ಧಾರಣೆಯಾದ ನಂತರದಲ್ಲಿ ಶ್ರೀ ನವೀನರು ಮಾತನಾಡಿ ಉಪನಯನವೆಂದರೆ 'ಹತ್ತಿರಕ್ಕೆ ಕರೆದೊಯ್ಯುವುದು' ಎಂದು ಅರ್ಥ, ಅಂದರೆ ವಟುವನ್ನು ಗುರುಗಳ ಹತ್ತಿರ ವೇದಾಧ್ಯಯನ ಮತ್ತು ಜ್ಞಾನಸಂಪಾದನೆ ಸಲುವಾಗಿ ಕರೆದೊಯ್ಯುವ ಕ್ರಿಯೆಯಾಗಿದೆ. ವೇದ ಎಂಬ ಪದದ ಅರ್ಥ ಸಹ ಜ್ಞಾನ ಎಂಬುದೇ ಆಗಿದೆ. ಅಗ್ನಿಸಾಕ್ಷಿಯಾಗಿ, ಸೂರ್ಯ, ಚಂದ್ರ, ಸಕಲ ದೇವತೆಗಳ ಸಾಕ್ಷಿಯಾಗಿ, ಗುರು-ಹಿರಿಯರ ಸಾಕ್ಷಿಯಾಗಿ ಸತ್ಯಪಥದಲ್ಲಿ ನಡೆಯತ್ತೇನೆ, ಸಮಾಜಕ್ಕೆ ಹಿತಕಾರಿಯಾಗಿ ಬಾಳುತ್ತೇನೆ ಎಂದು ಈ ಸಂದರ್ಭದಲ್ಲಿ ಸಂಕಲ್ಪವನ್ನೂ ಮಾಡಬೇಕಾಗುತ್ತದೆ ಎಂದರಲ್ಲದೆ ಧರಿಸುವ ಮೂರು ಎಳೆಯ ಯಜ್ಞೋಪವೀತ ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ನೆನಪಿಸುವ, ಸತ್ಯಪಥದಲ್ಲಿ ಸಾಗಬೇಕೆಂಬುದನ್ನು ನೆನಪಿಸುವ ಸಾಧನವಾಗಿದೆಯೆಂದರು. ಎಲ್ಲಾ ಮಾನವರಿಗೂ ವೇದಾಧ್ಯಯನ ಮಾಡಲು ಮತ್ತು ಉಪನಯನ ಸಂಸ್ಕಾರ ಪಡೆಯಲು ಅಧಿಕಾರವಿದೆಯೆಂದರು.

      ಹರಿಹರಪುರ ಶ್ರೀಧರ್, "ನಾವೆಲ್ಲರೂ ಭೂತಾಯಿಯ ಮಕ್ಕಳು, ಸೋದರರಂತೆ ಬಾಳಬೇಕು, ಅಸಮಾನತೆಗೆ ಅವಕಾಶವಿಲ್ಲವೆಂದು ಸಾರಿ ಹೇಳುವ ವೇದಮಂತ್ರದ ಉದಾಹರಣೆಯೊಂದಿಗೆ ಹುಟ್ಟಿನಿಂದ ಯಾರೂ ಶ್ರೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ; ನಮ್ಮ ನಡವಳಿಕೆ ಮತ್ತು ಕರ್ಮಗಳಿಗೆ ಅನುಸಾರವಾಗಿ ಯೋಗ್ಯತೆ ಬರುತ್ತದೆ; ವೇದಭಾರತಿ ಹಲವು ವರ್ಷಗಳಿಂದ ಯಾವುದೇ ಜಾತಿ, ಮತ, ಪಂಥ, ಲಿಂಗ, ವಯಸ್ಸಿನ ಭೇದವಿಲ್ಲದೆ ವೇದಾಸಕ್ತ ಎಲ್ಲರಿಗೂ ವೇದವನ್ನು ಕಲಿಯಲು ಅವಕಾಶ ಮಾಡಿಕೊಟ್ಟಿದೆ. ಇಂತಹ ಸಾಮರಸ್ಯ ಸಾರುವ ಕಾರ್ಯಗಳು ನಮ್ಮನಮ್ಮಲ್ಲಿ ಬಾಂಧವ್ಯವನ್ನು ಹೆಚ್ಚಿಸಲು ಸಹಕಾರಿ" ಎಂದು ಅಭಿಪ್ರಾಯಪಟ್ಟರು. ಕವಿನಾಗರಾಜರು ಮಾತನಾಡಿ, "ವೇದಭಾರತಿ ಸಮಾಜಮುಖಿಯಾದ ಯಾವುದೇ ಚಟುವಟಕೆಗಳನ್ನು ಯಾರೇ ಮಾಡಲಿ, ಅವರೊಂದಿಗೆ ಕೈಜೋಡಿಸುತ್ತದೆ. ನೀವುಗಳೂ ಸಹ ವೇದಭಾರತಿಯೊಂದಿಗೆ ಕೈಜೋಡಿಸಿದರೆ ಉತ್ತಮ ಕಾರ್ಯಗಳಿಗೆ ಉತ್ತೇಜನ ದೊರೆಯುತ್ತದೆ" ಎಂದರು.

     ಹರ್ಷಭರಿತರಾಗಿದ್ದ ವಟುವಿನ ತಂದೆ ಕೃಷ್ಣಮೂರ್ತಿಯವರು ಮನದುಂಬಿ ಹೇಳಿದ ಮಾತುಗಳಿವು: "ನಮಗೆ ಇಂದು ಅತ್ಯಂತ ಸಂತೋಷವಾಗಿದೆ. ಯಾವುದೇ ಸಂಕೋಚ, ತಾರತಮ್ಯವಿಲ್ಲದೆ ನಮ್ಮನ್ನೂ ತಮ್ಮವರಂತೆ ಭಾವಿಸಿ ಉಪನಯನ ಮಾಡಿಸಿರುವುದಕ್ಕೆ ವೇದಭಾರತಿಯವರಿಗೆ ಆಭಾರಿಯಾಗಿದ್ದೇನೆ. ನಮ್ಮಲ್ಲೂ ಸಹ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ತಾಮಸ ಆಹಾರವನ್ನು ಬಿಟ್ಟು, ಸಾತ್ವಿಕ ಆಹಾರ ಸೇವಿಸುವುದು, ನಮ್ಮ ಜೀವನದ ರೀತಿಗಳಲ್ಲಿ ಬದಲಾವಣೆ ಮಾಡಿಕೊಂಡು ಶುದ್ಧಜೀವನ ನಡೆಸುವ ಬಗ್ಗೆ ಗಮನಕೊಡಬೇಕು. ನಮ್ಮ ಅನೇಕ ಬಂಧುಗಳು ಆಮಿಷಕ್ಕೊಳಗಾಗಿ ಅನ್ಯಮತಗಳಿಗೆ ಮತಾಂತರ ಹೊಂದಿದ್ದಾರೆ. ಈಗ ಹೇಳಿದಂತೆ ವೇದದ ಆಶಯದಂತೆ ಒಳ್ಳೆಯ ರೀತಿಯಲ್ಲಿ ಎಲ್ಲರೂ ನಡೆದರೆ ಹಿಂದೂಧರ್ಮದ ಉಳಿವಿಗೆ ಸಹಾಯವಾಗುತ್ತದೆ. ಮತಾಂತರಗಳನ್ನು ತಡೆಯಲು ಹಿಂದಿನಿಂದಲೂ ನನ್ನ ಕೈಲಾದ ಪ್ರಯತ್ನ ಮಾಡುತ್ತಲೇ ಇದ್ದೇನೆ. ಇನ್ನು ಮುಂದೆಯೂ ಈ ಕೆಲಸ ಮುಂದುವರೆಸುತ್ತೇನೆ." 
     ವೇದಾಭಿಮಾನಿಗಳು, ಹಿರಿಯರು ವಟುವಿಗೆ ಆಶೀರ್ವದಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಭೋಜನ ಸ್ವೀಕರಿಸಿ ಒಳ್ಳೆಯ ಕೆಲಸವಾಯಿತೆಂಬ ಭಾವದೊಂದಿಗೆ ಹಾಸನಕ್ಕೆ ಹಿಂತಿರುಗಿದೆವು.
-ಕ.ವೆಂ.ನಾಗರಾಜ್.
*****************
ಚಿತ್ರಕೃಪೆ: ಹರಿಹರಪುರ ಶ್ರೀದರ್.
   

ಭಾನುವಾರ, ಫೆಬ್ರವರಿ 14, 2016

ಭೂತದ ಕಾಟ


     ಮಹಾಕಾವ್ಯ ರಾಮಾಯಣ ಬರೆದ ವಾಲ್ಮೀಕಿ ಇಂದು ಬದುಕಿದ್ದಿದ್ದರೆ? ಆತನ ಹಿನ್ನೆಲೆಯನ್ನು ಹುಡುಕಿ, ಕೆದಕಿ ರಂಪ-ರಾಮಾಯಣ ಮಾಡುತ್ತಿದ್ದರು. 'ಆದರ್ಶ ಪುರುಷ ರಾಮನ ಆದರ್ಶ ಗುಣಗಳು ಎಲ್ಲರಲ್ಲೂ ಬರಲಿ ಎನ್ನುವ ನೀನು ಹಿಂದೆ ಎಷ್ಟು ಆದರ್ಶವಾಗಿ ಬದುಕಿದ್ದೆ?' ಎಂದು ಕೇಳುತ್ತಿದ್ದರು. 'ನಿನ್ನ ಸ್ವಾರ್ಥಕ್ಕಾಗಿ ಎಷ್ಟು ಜನರ ತಲೆ ಒಡೆದು ಹಣ ದೋಚಿದೆ, ಎಷ್ಟು ಪ್ರಾಣಿಗಳನ್ನು ಕೊಂದೆ, ಎಷ್ಟು ಸಂಸಾರಗಳನ್ನು ಕಣ್ಣೀರಿನಲ್ಲಿ ಮುಳುಗುವಂತೆ ಮಾಡಿದೆ?' ಎಂದು ಪ್ರಶ್ನಿಸುತ್ತಿದ್ದರು. ಈ ಕುರಿತ ಚರ್ಚೆ, ಕೆಸರೆರಚಾಟ, ದೂಷಣೆ, ನಿಂದನೆಗಳಲ್ಲಿ ರಾಮಾಯಣದ ಮಹತ್ವ ಹಿಂದೆ ಸರಿದುಬಿಡುತ್ತಿತ್ತು. 'ನದಿ ಮೂಲ, ಋಷಿ ಮೂಲ ಹುಡುಕಬಾರದು' ಎಂಬ ಗಾದೆ ಹುಟ್ಟಿಕೊಂಡದ್ದು ಬಹುಷಃ ಇಂತಹ ಕಾರಣಕ್ಕಾಗಿಯೇ!
     ವ್ಯಕ್ತಿಯೊಬ್ಬನ ಭೂತಕಾಲದ ಸಂಗತಿಗಳು ವರ್ತಮಾನದಲ್ಲಿ ಅವನನ್ನು ಭೂತವಾಗಿ ಕಾಡುವ ಸಂದರ್ಭಗಳು ಬರುತ್ತವೆ. ನನ್ನನ್ನು ಈಗಲೂ ಹಲವು ಭೂತಗಳು ಕಾಡುತ್ತಿರುತ್ತವೆ. ಅಂತಹ ಒಂದು ಭೂತದ ಬಗ್ಗೆ ತಿಳಿಸುವೆ. ಆಗ ನನಗೆ ಸುಮಾರು 7-8 ವರ್ಷಗಳಿದ್ದಿರಬಹುದು. ಚಿಕ್ಕಮಗಳೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 2ನೆಯ ತರಗತಿಯಲ್ಲಿ ಓದುತ್ತಿದ್ದ ಸಮಯ. ಶಾಲೆ ಮುಗಿಸಿಕೊಂಡು ಸ್ಲೇಟು, ಪುಸ್ತಕವಿದ್ದ ಚೀಲವನ್ನು ತೂಗಾಡಿಸುತ್ತಾ ಬರುತ್ತಿದ್ದೆ. ದಾರಿಯ ಬದಿಯಲ್ಲಿ ನಿಂತಿದ್ದ ಲಾರಿಯ ಬಂಪರಿನ ಬದಿಗಳಲ್ಲಿ ಕಟ್ಟಿದ್ದ ಕುಚ್ಚನ್ನು (ಹೆಣ್ಣು ಮಕ್ಕಳು ಜಡೆಗೆ ಕಟ್ಟಿಕೊಳ್ಳುವಂತಹದು) ಮುಟ್ಟಿ ಮುಂದೆ ಹೋಗುತ್ತಿದ್ದಾಗ ಧುತ್ತನೆ ಎದುರು ಬಂದು ನಿಂತಿದ್ದ ಲಾರಿಯ ಕ್ಲೀನರ್ ನನ್ನ ಕೆನ್ನೆಗೆ ಪಟಾರನೆ ಬಾರಿಸಿದ್ದ. ನಾನು ತತ್ತರಿಸಿಹೋಗಿದ್ದೆ, ಹೆದರಿಬಿಟ್ಟಿದ್ದೆ. ಈಗಲೂ ಸಹ ಯಾವದೇ ವಾಹನದ ಬಂಪರಿನಲ್ಲಿ ಕಟ್ಟಿರುವ ಕುಚ್ಚನ್ನು ಕಂಡಾಗ ಕೆನ್ನೆಗೆ ಬಿದ್ದಿದ್ದ ಏಟು ಮತ್ತು ಹೊಡೆದವನ ಮುಖ ನೆನಪಾಗುತ್ತದೆ. ಕುಚ್ಚನ್ನು ಮುಟ್ಟಲು ಭಯವಾಗುತ್ತದೆ. ಹಿಂದೆ ನಡೆದ ಪೇಚಿನ ಪ್ರಸಂಗಗಳು, ಅಕಾರಣವಾಗಿಯೋ, ಸಕಾರಣವಾಗಿಯೋ ಅವಮಾನಿತರಾಗುವ ಪ್ರಸಂಗಗಳು, ಕೆಟ್ಟ ಮತ್ತ ಕಹಿ ಘಟನೆಗಳು ಸಾಮಾನ್ಯವಾಗಿ ಎಲ್ಲರನ್ನೂ ಭೂತವಾಗಿ ಕಾಡುತ್ತವೆ. 'ಅವನಿ(ಳಿ)ಗೆ ಭೂತ ಮೆಟ್ಟಿಕೊಂಡಿದೆ' ಎಂಬಂತಹ ಮಾತುಗಳನ್ನು ಕೇಳುತ್ತಿರುತ್ತೇವೆ. ನಿಜವಾಗಿ ಮೆಟ್ಟಿಕೊಂಡಿರುವುದು ಹೊರಗಿನ ಭೂತವಲ್ಲ, ಒಳಗಿನ ಭೂತವೇ ಆಗಿರುತ್ತದೆ. ಒಬ್ಬರೇ ತಮ್ಮಷ್ಟಕ್ಕೆ ತಾವೇ ಗುಣುಗುಣಿಸುತ್ತಾ ಹೋಗುವವರು, ಏನನ್ನೋ ನೆನೆಸಿಕೊಂಡು ತಮ್ಮಷ್ಟಕ್ಕೆ ತಾವೇ ನಗುವವರು, ಅಳುವವರು ಮುಂತಾದವರು ಇಂತಹ ಭೂತಚೇಷ್ಟೆಗೆ ಒಳಗಾದವರೇ!
     ಭೂತ ಎಂದಾಕ್ಷಣ ದೆವ್ವ, ಪ್ರೇತ, ಪಿಶಾಚಿ, ಇತ್ಯಾದಿಗಳ ಕಲ್ಪನೆಯ ರೂಪ ಕಣ್ಣು ಮುಂದೆ ಬರುತ್ತದೆ. ವಾಸ್ತವಿಕವಾಗಿ ಭೂತ ಎಂದರೆ ಹಿಂದೆ ನಡೆದದ್ದು ಎಂದು ಮಾತ್ರ ಅರ್ಥ. ಹಾಗಾದರೆ ಈ ಭೂತ ಕಾಡುವುದು ಅಂದರೆ? ನಾವು ಸಾಮಾನ್ಯವಾಗಿ ವರ್ತಮಾನದಲ್ಲಿರುವುದು ಕಡಿಮೆ. ಒಂದೋ, ಕಳೆದುಹೋದ ಸಂಗತಿಗಳ ಬಗ್ಗೆ ಚಿಂತಿತರಾಗಿರುತ್ತೇವೆ ಅಥವ ಭವಿಷ್ಯತ್ತಿನ ವಿಷಯಗಳ ಕುರಿತು ಕಲ್ಪನೆ, ಊಹಾಪೋಹಗಳಲ್ಲಿ ಕಳೆದುಹೋಗಿರುತ್ತೇವೆ. ಕಳೆದುಹೋದ ಸಂಗತಿಗಳ ಬಗ್ಗೆ ಚಿಂತಿತರಾಗಿರುವದೇ ಭೂತ ನಮ್ಮನ್ನು ಕಾಡುವುದು. ಕಳೆದುಹೋದುದನ್ನು ಮತ್ತೆ ಸರಿಪಡಿಸಲಾಗುವುದಿಲ್ಲ. ಹಿಂದಿನ ಸಂಗತಿಗಳಿಂದ ಪಾಠ ಕಲಿತು ಮುಂದುವರೆಯಬೇಕೇ ಹೊರತು ಅದನ್ನು ಕುರಿತೇ ಯೋಚಿಸಿ ಮನಸ್ಸು ಕೆಡಿಸಿಕೊಳ್ಳುವುದು ತರವಲ್ಲ. ವರ್ತಮಾನದಲ್ಲಿ ಹೇಗಿರಬೇಕು, ಹೇಗೆ ವರ್ತಿಸಬೇಕು ಎಂಬ ಬಗ್ಗೆ ಜಾಗೃತರಾಗಿರಬೇಕೇ ಹೊರತು, ಏನೂ ಮಾಡಲು ಸಾಧ್ಯವಿಲ್ಲದ ಭೂತಕಾಲದ ಬಗ್ಗೆ ಚಿಂತಿಸದೆ, ಬದಲಾಯಿಸಲು ಆಗದ ಅದನ್ನು ಹೇಗಿದೆಯೋ ಹಾಗಿ ಒಪ್ಪಿಕೊಂಡು ಸುಮ್ಮನಿರಬೇಕು. ಭವಿಷ್ಯತ್ತಿನ ಬಗ್ಗೆಯೂ ಚಿಂತಿಸುವುದು ತರವಲ್ಲ. ಎಕೆಂದರೆ ಅದು ನಿರ್ಭರವಾಗಿರುವುದು ವರ್ತಮಾನದ ನಮ್ಮ ನಡೆನುಡಿಗಳಿಂದ ಮಾತ್ರ.
ಹೊರಗಣ್ಣು ತೆರೆದಿರಲು ಬೀಳುವ ಭಯವಿಲ್ಲ
ಒಳಗಣ್ಣು ತೆರೆದಿರಲು ಪತನದ ಭಯವಿಲ್ಲ |
ತಪ್ಪೊಪ್ಪಿ ನಡೆವವರು ಹಿರಿಯರೆಂದೆನಿಸುವರು
ತಪ್ಪೆ ಸರಿಯೆಂದವರು ಜಾರುವರು ಮೂಢ ||
     ಮಾಡುವ ತಪ್ಪುಗಳು ಭೂತವಾಗಿ ಕಾಡುತ್ತವೆ ಎಂದಾಯಿತು. ತಪ್ಪುಗಳು ಜೀವನದಲ್ಲಿ ಸರಿಯಾಗಿ ಹೇಗೆ ಮುನ್ನಡೆಯಬೇಕೆಂಬುದನ್ನು ಕಲಿಸುವ ಗುರುಗಳು. ಈಜು ಕಲಿಯಬೇಕಾದರೆ ಮೊದಲು ತಪ್ಪು ಮಾಡುತ್ತೇವೆ. ಆ ತಪ್ಪು ಮಾಡದಿರಲು ಹೋಗಿ ಬೇರೆ ತಪ್ಪುಗಳನ್ನು ಮಾಡುತ್ತೇವೆ. ಕೊನೆಗೆ ಎಲ್ಲಾ ತಪ್ಪುಗಳನ್ನು ಮಾಡಿ, ಹಲವು ತಪ್ಪುಗಳನ್ನು ಪದೇ ಪದೇ ಮಾಡುತ್ತಾ ಮುಳುಗದಿರುವಂತೆ ನೋಡಿಕೊಂಡು ಈಜು ಕಲಿತುಬಿಡುತ್ತೇವೆ. ಈ ಜೀವನವೂ ಈಜುವುದನ್ನು ಕಲಿಯುವ ಹಾಗೇನೇ! ಹಲವಾರು ತಪ್ಪುಗಳನ್ನು ಮಾಡುತ್ತೇವೆ, ಪಾಠ ಕಲಿಯುತ್ತೇವೆ. ಹೇಗೆ ಬದುಕಬೇಕೆಂಬುದಕ್ಕೆ ಬೇರೆ ದಾರಿಯಿಲ್ಲ. ತಪ್ಪುಗಳನ್ನು ಮಾಡುತ್ತಾ, ಪೆಟ್ಟು ತಿನ್ನುತ್ತಾ ಬದುಕುವುದನ್ನು ಕಲಿಯಬೇಕಾಗುತ್ತದೆ. ಪರಿಪೂರ್ಣವಾಗಿರುವುದಕ್ಕಿಂತ ಹೆಚ್ಚು ಮೌಲ್ಯಯುತವಾದುದನ್ನು ತಪ್ಪುಗಳು ಕಲಿಸುತ್ತವೆ. ಗಾಂಧೀಜಿಯವರು ಬಾಲ್ಯದಲ್ಲಿ ಮನೆಯ ಆಳಿನ ಜೇಬಿನಿಂದ ಕೆಲವು ಕಾಸುಗಳನ್ನು ಕದ್ದು ಬೀಡಿ ಸೇದಿದ್ದರು. ತನ್ನ ಅಣ್ಣನ ಚಿನ್ನದ ಆಭರಣದ ಚೂರನ್ನೂ ಕಳವು ಮಾಡಿದ್ದರು. ನಂತರದಲ್ಲಿ ತಮ್ಮ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು, ತಪ್ಪನ್ನು ಒಪ್ಪಿಕೊಂಡು ಪತ್ರದಲ್ಲಿ ಬರೆದು ಕಾಯಿಲೆಯಿಂದ ನರಳುತ್ತಿದ್ದ ತಂದೆಯವರಿಗೆ ಕೊಟ್ಟು ತಲೆ ತಗ್ಗಿಸಿ ನಿಂತಿದ್ದರು. ಮಲಗಿದ್ದ ತಂದೆಯವರು ಕಷ್ಟಪಟ್ಟು ಎದ್ದು ಕುಳಿತು ಅದನ್ನು ಓದಿ ಏನೂ ಮಾತನಾಡದೆ ಕಣ್ಣೀರು ಸುರಿಸಿ ಪತ್ರವನ್ನು ಹರಿದು ಹಾಕಿ ಮತ್ತೆ ಮಲಗಿದ್ದರು. ಅದು ಗಾಂಧಿಯ ಮೇಲೆ ಅಗಾಧ ಪರಿಣಾಮ ಬೀರಿತ್ತು ಮತ್ತು ಅವರ ವ್ಯಕ್ತಿತ್ವ ರೂಪಿಸಲು ಪ್ರಧಾನ ಪಾತ್ರ ವಹಿಸಿತ್ತು.
     ಭೂತಗಳು ಕಾಡದಿರಲು ಏನು ಮಾಡಬೇಕು? ಹಿಂದಿನದನ್ನು ಮರುಮಾತಾಡದೆ ಒಪ್ಪಿಕೊಂಡುಬಿಡಬೇಕು. ಹಿಂದಿನ ನಮ್ಮ ಮತ್ತು ಇತರರ ತಪ್ಪುಗಳನ್ನು ಮರೆತು ಕ್ಷಮಿಸಿ, ಆ ತಪ್ಪುಗಳಿಂದ ಪಾಠ ಕಲಿತು, ಅವನ್ನು ಮುಂದಿನ ಯಶಸ್ಸಿಗೆ ಮೆಟ್ಟಿಲುಗಳನ್ನಾಗಿಸಿಕೊಳ್ಳಬೇಕು. ಎರಡು ಅವಕಾಶಗಳಿರುತ್ತವೆ: 'ತಪ್ಪುಗಳಿಂದ ಪಾಠ ಕಲಿಯಬೇಕು ಅಥವ ಸಮಸ್ಯೆಗಳಿಂದ ಓಡಿಹೋಗಬೇಕು'. ಭೂತದ ಕಾಟ ಬೇಡವೆಂದರೆ ಮೊದಲನೆಯದನ್ನು ಆರಿಸಿಕೊಳ್ಳಬೇಕು. ಇಂದು ನಾಳೆಗೆ ಭೂತವಾಗುವುದರಿಂದ ಇಂದು ಸರಿಯಾಗಿರುವಂತೆ ಎಚ್ಚರದಿಂದಿರಬೇಕು. ಯಾವುದಾದರೂ ಹೊಸ ಕೆಲಸ ಮಾಡಬೇಕೆಂದರೆ 'ಅನುಭವಸ್ಥ'ರನ್ನು ಕೇಳಬೇಕು ಅನ್ನುತ್ತಾರಲ್ಲವೇ? ಆ ಅನುಭವಸ್ಥರು ಯಾರೆಂದರೆ ಅಂತಹ ಕೆಲಸಗಳಲ್ಲಿ ತೊಡಗಿಕೊಂಡು, ತಪ್ಪುಗಳನ್ನು ಮಾಡಿ ತಿದ್ದಿಕೊಂಡವರು, ತಪ್ಪಾಗದಿರುವಂತೆ ಏನು ಮಾಡಬೇಕೆಂಬ ಅರಿವಿರುವವರು! ಬುದ್ಧಿವಂತರು ಇತರರ ತಪ್ಪುಗಳಿಂದ ಕಲಿತುಕೊಳ್ಳುತ್ತಾರಾದರೆ, ದಡ್ಡರು ತಮ್ಮದೇ ತಪ್ಪುಗಳಿಂದ ಪಾಠ ಕಲಿಯುತ್ತಾರೆ. ತಪ್ಪುಗಳು ನಾವು ಏನನ್ನು ಕಲಿಯಬೇಕಿದೆ ಎಂಬುದನ್ನು ತೋರಿಸುತ್ತವೆ. ಹೊಸ ಹೊಸ ಸಂಶೋಧನೆಗಳು ಹಲವಾರು ತಪ್ಪುಗಳ ನಂತರವೇ ಆವಿಷ್ಕಾರವಾದದ್ದು!
    ಜೀವದಲ್ಲಿ ಚಿತ್ರ ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಕಳ್ಳನನ್ನು ಕಳ್ಳ ಎಂದರೆ, ಸುಳ್ಳನನ್ನು, ಲಂಪಟನನ್ನು ಸುಳ್ಳ, ಲಂಪಟ ಎಂದರೆ ಬೇಸರವಾಗುವುದಿಲ್ಲ. ಕಳ್ಳ, ಸುಳ್ಳ, ಲಂಪಟರಲ್ಲದವರು ಸುಖಾಸುಮ್ಮನೆ ಇಂತಹ ಅಪವಾದಗಳಿಗೆ ಒಳಗಾದರೆ? ವರ್ಣನಾತೀತ ನೋವನ್ನು ಸಂಬಂಧಿಸಿದವರು ಅನುಭವಿಸುತ್ತಾರೆ. ನಿಧಾನವಾಗಿ ಯೋಚಿಸಿದರೆ, ಇದೂ ಒಂದು ರೀತಿಯಲ್ಲಿ ಭೂತದ ಕಾಟವೇ ಆಗಿರುತ್ತದೆ. ಹಿಂದಿನ ಯಾವುದೋ ಘಟನೆಗಳು, ಸಂಗತಿಗಳು, ವೈಯಕ್ತಿಕ ದ್ವೇಷಗಳು ಈ ರೀತಿಯ ಸುಳ್ಳು ಆಪಾದನೆಗಳಿಗೆ ಪ್ರೇರಣೆಯಾಗಿರುತ್ತವೆ. ತಮಗೆ ಆಗದವರ ಪ್ರತಿಯೊಂದು ನಡೆಯೂ ತಪ್ಪಾಗಿ ಗೋಚರಿಸುವುದರ ಫಲ ಇಂತಹ ಆಪಾದನೆಗಳು. ಆಗುವ ನೋವು, ನಿರಾಶೆ, ಹತಾಶೆಗಳನ್ನು ತಮಗೆ ಬೇಕಾದವರೊಂದಿಗೆ ಹಂಚಿಕೊಂಡು ಹಗುರವಾಗಬಹುದು. ಹೀಗೆ ಮಾಡುವುದು ಎಲ್ಲಾ ಸಂದರ್ಭಗಳಲ್ಲೂ ಸರಿಯಾಗಲಾರದು. ಅವರಿಂದ ಅನುಕಂಪ ಸಿಗಬಹುದು. ಪರಿಹಾರ ಸಿಗದು ಎಂಬಂತಹ ಸಂಗತಿಗಳನ್ನು ಹಂಚಿಕೊಳ್ಳದಿರುವುದೇ ಒಳಿತು. ನೋವಿನ ತೀವ್ರತೆ ಕಡಿಮೆಯಾಗಬೇಕೆಂದರೆ ಮನಸ್ಸಿಗೆ ತಿಳುವಳಿಕೆ ಹೇಳಬೇಕಾಗುತ್ತದೆ: "ನೋಡು, ಅವರು ಏನು ಹೇಳಿದರು, ಏನು ಮಾಡಿದರು ಎಂದು ತಲೆ ಕೆಡಿಸಿಕೊಳ್ಳಬೇಡ, ಮರೆತುಬಿಡು. ನಿನ್ನನ್ನು ಅಲಕ್ಷ್ಯಿಸಿದ, ಅವಮಾನಿಸಿದ ಸಂಗತಿಗಳನ್ನು ಮನಸ್ಸಿನಿಂದ ತೆಗೆದುಹಾಕಿಬಿಡು. ನೀನು ಸರಿಯಾಗಿರುವೆ ಎಂದು ನಿನಗೆ ಗೊತ್ತಿದೆ ತಾನೇ? ಅಷ್ಟು ಸಾಕು. ನಿನ್ನ ಕುರಿತ ಅವರ ಭಾವನೆಗಳು ಬದಲಾಗುವುದೇ ಇಲ್ಲವೆನಿಸಿದರೆ ಅವರನ್ನು ಮರೆತುಬಿಡು. ನೋಯುತ್ತಿರುವುದು ನಿನ್ನ ಹೃದಯ. ಅದನ್ನು ನೀನೇ ಸಂತಯಿಸಬೇಕು. ಅಳುತ್ತಿರುವುದು ನಿನ್ನ ಕಣ್ಣು. ನೀನೇ ನಿನ್ನ ಕೈಯಿಂದ ಅದನ್ನು ಒರೆಸಿಕೊಳ್ಳಬೇಕು. ಜೀವ ನಿನ್ನದು, ಜೀವನ ನಿನ್ನದು. ನಿನ್ನ ಆತ್ಮ ಒಪ್ಪುವಂತೆ ಜೀವಿಸು. ನಿನ್ನ ತಪ್ಪೇನಾದರೂ ಇದ್ದರೆ ಸರಿಪಡಿಸಿಕೋ. ತಪ್ಪಿಲ್ಲದಿದ್ದರೆ ಚಿಂತಿಸದಿರು. ಎದ್ದು ನಿಲ್ಲು. ಮುಂದೆ ನಡೆ, ಎಲ್ಲರಿಗೂ ನೀನು ಏನು ಎಂಬುದನ್ನು ತೋರಿಸು."
ದಾರಿ ಸುಂದರವಿರಲು ಗುರಿಯ ಚಿಂತ್ಯಾಕೆ
ಗುರಿಯು ಸುಂದರವಿರಲು ದಾರಿ ಚಿಂತ್ಯಾಕೆ |
ಕಲ್ಲಿರಲಿ ಮುಳ್ಳಿರಲಿ ಹೂವು ಹಾಸಿರಲಿ
ರೀತಿ ಸುಂದರವಿರೆ ಯಶ ನಿನದೆ ಮೂಢ ||
     ಆತ್ಮಾವಲೋಕನ ಮಾಡಿಕೊಂಡು, ಭೂತಕಾಲದ ತಪ್ಪುಗಳಿಂದ ಪಾಠ ಕಲಿತು, ವರ್ತಮಾನದಲ್ಲಿ ಸರಿಯಾಗಿ ನಡೆದರೆ ಯಾವ ಭೂತವೂ ನಮ್ಮನ್ನು ಕಾಡಿಸದು. ಭವಿಷ್ಯತ್ತೂ ಸುಂದರವಾಗಿರುವುದು. "ದುರ್ಬಲತೆಗಳ ಅರಿವಿರುವವರು ಬಲಶಾಲಿಯಾಗುವರು; ಲೋಪಗಳನ್ನು ಒಪ್ಪಿಕೊಳ್ಳುವವರು ಒಳ್ಳೆಯವರೆನಿಸುವರು; ತಪ್ಪುಗಳನ್ನು ತಿದ್ದಿಕೊಂಡು ನಡೆವವರು ಬುದ್ಧಿವಂತರೆನಿಸುವರು."
-ಕ.ವೆಂ.ನಾಗರಾಜ್.
**************
ದಿನಾಂಕ 03-02-2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:



ಗುರುವಾರ, ಫೆಬ್ರವರಿ 11, 2016

ಸಾಧನಾ ಸೋಪಾನ - 24: ಪರಿಪೂರ್ಣ ಆನಂದ


ಸುಖ ಬೇಕು ಮನುಜನಿಗೆ ದುಃಖ ಬೇಡ
ಸುಖಿಯು ತಾ ಹೆಚ್ಚು ಸುಖ ಬಯಸುವನು |
ಬೇಡವೆನಿಸದ ದುಃಖಗಳೆರಗೆರಗಿ ಬರುತಿರಲು
ಸುಖವ ನಿನ್ನೊಳಗೆ ಅರಸು ಮೂಢ ||
    'ಆ ಆನಂದ ಪರಮೋಚ್ಛ, ಅದು ಪರಿಪೂರ್ಣ, ಅದು ಅಖಂಡ, ಶಾಶ್ವತ, ಅದು ಸಚ್ಚಿದಾನಂದ!'- ಪರಮಾತ್ಮನನ್ನು, ಪರಮಾನಂದನನ್ನು ಹೀಗೆ ವರ್ಣಿಸುತ್ತಾರೆ. ನಿಜವಾದ ಆನಂದ ಶಾಶ್ವತವಾದದ್ದಾದರೆ, ಅದೇ ಆನಂದ ಅನ್ನುವುದಾದರೆ ನಾವು ವಿಷಯೋಪಭೋಗಗಳಲ್ಲಿ, ಇನ್ನಿತರ ಬಾಹ್ಯ ಸಂಗತಿಗಳಲ್ಲಿ ಸಂತೋಷ ಕಾಣುತ್ತೇವಲ್ಲಾ, ಇದ ಹೇಗೆ? ಅಶಾಶ್ವತವಾದ ಸಂಗತಿಗಳಲ್ಲಿ ಆನಂದವಿರುವುದಿಲ್ಲವೆಂದಾದರೆ, ಅಂತಹುದರಲ್ಲಿ ಆನಂದ ಕಾಣಸಿಗುವುದರಲ್ಲಿ ಏನೋ ರಹಸ್ಯವಿರಬೇಕು. ಅದೇನಿರಬಹುದು? ನಶ್ವರವಾದ ಸಂಗತಿಗಳಲ್ಲಿ ಆನಂದ ಸಿಗುವುದೇ ಇಲ್ಲವೆಂದಾದರೆ ಯಾರೂ ಸಹ ಐಹಿಕ ಸುಖ-ಭೋಗಗಳಲ್ಲಿ ತೊಡಗುವುದೇ ಇಲ್ಲವಲ್ಲವೇ? ನಿಜಸಂಗತಿಯೆಂದರೆ, ಪರಮಾನಂದದ ಅಸ್ತಿತ್ವ ಪ್ರತಿಯೊಂದರಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಕಂಡುಬರುತ್ತದೆ. ಈ ರೀತಿ ಕಂಡುಬರುವ ಸಂತೋಷ ಅಥವ ಆನಂದದ ಹಿಂದೆ ಆನಂದದ ದೊಡ್ಡ ಸಂಗ್ರಹವೇ ಇದೆಯೆಂದು ತೋರಿಸಿಕೊಡುವ ರೀತಿ ಇದಾಗಿದೆ. ನಶ್ವರವಾದ ವಿಷಯಗಳಲ್ಲಿ ಸಿಗುವ ಅಲ್ಪ ಮತ್ತು ಕ್ಷಣಿಕ ಆನಂದದ ಘಳಿಗೆಗಳಲ್ಲೂ ಆನಂದದ ಪರಿಪೂರ್ಣ ತೋರಿಕೆಯ ಅನುಭವವಾಗುತ್ತದೆ. ಪರಿಪೂರ್ಣ ಎಂದು ಅನ್ನಿಸುವ ಎಲ್ಲಾ ಸಂಗತಿಗಳಲ್ಲೂ ಆನಂದ ಎನ್ನುವುದು ಇದ್ದೇ ಇರುತ್ತದೆ.
     ಪ್ರಾಪಂಚಿಕ ಆನಂದ ಬಯಸುವವರು ಮತ್ತು ಬಯಸುವ ವಿಷಯದ ಸಂಗಮವಾದಾಗ ಅದನ್ನು ಹುಡುಕುತ್ತಿರುವ, ಆಶಿಸುತ್ತಿರುವ ಮನಸ್ಸಿಗೆ ತಾನು ಬಯಸಿದ್ದು ಸಿಕ್ಕಿತೆಂಬ ಸಂದೇಶ ರವಾನೆಯಾಗುತ್ತದೆ. ಆಗ ತನ್ನ ಗುರಿ ಈಡೇರಿತೆಂಬ ಭಾವದೊಂದಿಗೆ ಪರಿಪೂರ್ಣತೆಯ ತೃಪ್ತಿ ಲಭ್ಯವಾಗುತ್ತದೆ ಮತ್ತು ಪರಿಣಾಮವಾಗಿ ಆನಂದದ ಸುಖಾನುಭವವಾಗುತ್ತದೆ. ಮನಸ್ಸಿಗೆ ತಾನು ಕೇಳಿದ್ದು ಸಿಕ್ಕಿತೆಂದು ಸಂತೋಷವಾಗುತ್ತದೆ. ಆದರೆ, ಈ ಆನಂದ ಸ್ವಲ್ಪ ಕಾಲ ಮಾತ್ರ ಇರುತ್ತದೆ. ಆಗ ಮನಸ್ಸು ಅಶಾಂತಗೊಳ್ಳುತ್ತದೆ.  ಇನ್ನೊಂದು ಸಂತೋಷದ ಸಂಗತಿಗಾಗಿ ಹಾತೊರೆಯುತ್ತದೆ ಮತ್ತು ಚಡಪಡಿಕೆ ಮತ್ತೆ ಆರಂಭವಾಗುತ್ತದೆ. ಆ ಆನಂದ ಕ್ಷಣಿಕವಾಗಿ ಬರುವಂತಹದು ಮತ್ತು ಮರೆಯಾಗುವಂತಹದು. ಅಲ್ಲೇ ನೆಲೆಸುವಂತಹದು ಅಲ್ಲ. ಇದೇ ಸಮಸ್ಯೆ.  ಪ್ರಾಪಂಚಿಕ ಸಂಗತಿಗಳಲ್ಲಿ ಆನಂದ ಅರಸುವವರು ಯಾರಲ್ಲೇ ಆಗಲಿ, ಅವರು ಆ ಆನಂದವನ್ನು ಸತತವಾಗಿ ಅನುಭವಿಸುತ್ತಿರುವವರನ್ನು ಯಾರನ್ನಾದರೂ ಕಂಡಿದ್ದೇವೆಯೇ? ಮನೆ ಕಟ್ಟಿಸುವುದಿರಬಹುದು, ಸಾಮಾಜಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಉನ್ನತಿ ಹೊಂದುವುದಾಗಿರಬಹುದು, ಅಧಿಕಾರ ಪಡೆಯುವುದಾಗಿರಬಹುದು, ಉತ್ತಮ ಸಂಗಾತಿಯನ್ನು ಹೊಂದುವುದಾಗಿರಬಹುದು, ಅದು ಏನೇ ಇರಬಹುದು, ಅಂತಹ ಇಚ್ಛೆ ಈಡೇರಿದಾಗಲೂ ಹೊಂದುವ ಆನಂದ ಪರಿಪೂರ್ಣವೆಂದು ಭಾವಿಸುವವರು ಮತ್ತು ಅದನ್ನು ಸದಾಕಾಲ ಆನಂದದ ಸ್ಥಿತಿಯಲ್ಲಿಯೇ ಆನುಭವಿಸುವವರು ಇರುತ್ತಾರೆ ಅಂದರೆ ಅದು ವಿಶೇಷವೇ ಸರಿ. ಏಕೆಂದರೆ ಮನಸ್ಸು ಪಡೆದಷ್ಟಕ್ಕೇ ಒಪ್ಪಿ ಸುಮ್ಮನಾಗವುದೇ ಇಲ್ಲ. ಅದು ಇನ್ನೂ ಹೆಚ್ಚಿನದನ್ನು ಬಯಸಲು ಪ್ರಾರಂಭಿಸುತ್ತದೆ. ಹೀಗೆ ಬಯಸುವ ಮತ್ತು ಬಯಸಿದ್ದು ಸಿಕ್ಕಿದಾಗ ಸಿಗುವ ಆನಂದದಲ್ಲಿ ಏನೋ ಒಂದು ಕೊರತೆ ಇರುತ್ತದೆ. ಗೀತೆ ಹೇಳುವಂತೆ ಪ್ರತಿ ಯೋಗದ ಹಿಂದೆ ವಿಯೋಗವೂ ಇದ್ದೇ ಇರುತ್ತದೆ. ಈ ಪ್ರಪಂಚದಲ್ಲಿ ಪ್ರಾಪಂಚಿಕ ಸಂಗತಿಗಳಲ್ಲಿ ಆನಂದವೆಂಬುದು ತೋರಿಕೆಗಾಗಿ ಕಾಣುವಂತಹುದಾಗಿದೆಯೆಂಬುದು ಅವುಗಳ ಅಲ್ಪಕಾಲಿಕ ಮತ್ತು ಕ್ಷಣಿಕ ಸ್ವರೂಪದಿಂದ ತಿಳಿದುಬರುವುದಿಲ್ಲವೇ? ಎಲ್ಲದರ ಹಿಂದೆ ಪರಮೋಚ್ಛ ಆನಂದದ ಪ್ರಭಾವ ಇರುವುದರಿಂದಲೇ ಕ್ಷಣಿಕವಾಗಿಯಾದರೂ ಪ್ರಾಪಂಚಿಕ ವಿಷಯಗಳಲ್ಲಿ ಆನಂದದ ಅನುಭವ ಜೀವಿಗಳಿಗೆ ಆಗುತ್ತಿರುತ್ತದೆ.
ಸುಖವು ಸ್ವಾಭಾವಿಕ ದುಃಖವಾಗಂತುಕನು
ಯೋಗವನುಸರಿಸುವುದು ನಿಜವಿಯೋಗ |
ದುಃಖಸಂಯೋಗ ವಿಯೋಗವೀವುದು ಸುಖ
ವಿಯೋಗವೆ ಯೋಗವೆನುವರು ಮೂಢ ||
     ಸಂಗಮದಲ್ಲಿ ಸುಖವಿದೆ, ಹೌದು, ಸಂಗಮದಲ್ಲಿ ಸುಖವಿದೆ. ನಾವು ಇದುವರೆವಿಗೂ ಹೇಳಿದ್ದು ಇದನ್ನೇ! ಬಯಸುವ ಮತ್ತು ಬಯಸಿದ್ದು ಸಿಗುವ ಸಂಗಮದಲ್ಲಿ ಸುಖವಿದೆ. ಅದು ವಸ್ತುವಾಗಬಹುದು, ವ್ಯಕ್ತಿಯಾಗಬಹುದು, ವ್ಯಕ್ತಿಗಳಾಗಬಹುದು, ಗುಂಪಾಗಬಹುದು, ಸಮಾಜವಾಗಬಹುದು. ಇಲ್ಲಿ ಪ್ರಧಾನ ಸಂಗತಿಯನ್ನು ಗುರುತಿಸೋಣ. ಆ ಪ್ರಧಾನ ಸಂಗತಿಯೆಂದರೆ 'ಒಂದಾಗುವುದು' ಆಗಿದೆ. ನೈಜವಾಗಿ ಒಂದಾಗಲು ಸಾಧ್ಯವಾದರೆ ಅಲ್ಲಿ ನೈಜ ಮತ್ತು ಪೂರ್ಣ ಆನಂದ ಸಿಗುತ್ತದೆ. ಯಾವುದಾದರೂ ವಸ್ತುವಿನೊಂದಿಗೆ ಪೂರ್ಣವಾಗಿ ಒಂದಾಗಲು ಸಾಧ್ಯವೇ? ವ್ಯಕ್ತಿಯೊಂದಿಗೆ ಒಂದಾಗಲು ಸಾಧ್ಯವೇ? ಒಂದಾಗಲು ಪ್ರಯತ್ನಿಸಿ ಬೇರೆಯಾಗುವುದರಿಂದ ಸಿಗುವ ಆನಂದ ಸಹ ಕ್ಷಣಿಕ ಮತ್ತು ಅಲ್ಪಕಾಲಿಕವಾಗಿರುತ್ತದೆ. ಯೋಗದೊಂದಿಗೇ, ಅದರ ಬೆನ್ನ ಹಿಂದೆಯೇ ವಿಯೋಗವೂ ಹಿಂಬಾಲಿಸುತ್ತದೆ. ಇನ್ನು ಸಾಮಾಜಿಕವಾಗಿ ಒಂದುಗೂಡುವಿಕೆ ಅನ್ನುವುದು ಒಂದುಗೂಡುವಿಕೆಯೇ ಅಲ್ಲ. ಭೌತಿಕವಾಗಿ, ಮಾನಸಿಕವಾಗಿ ಅಥವ ಸಾಮಾಜಿಕ ಪ್ರಜ್ಞೆಯ ಕಾರಣಗಳಿಂದ, ಧಾರ್ಮಿಕ ಕಾರಣಗಳಿಂದ ಒಂದಾಗಿರುವಂತೆ ತೋರಬಹುದಾದರೂ ಅದು ನಿಜವಾದ ಒಂದಾಗುವಿಕೆಯಂತೂ ಅಲ್ಲ. ಯಾರಾದರೂ ಇಬ್ಬರು ವ್ಯಕ್ತಿಗಳು ಅಥವ ಗುಂಪು ಅಥವ ಸಮಾಜ ಒಂದಾಗಿರುವುದನ್ನು ನಾವು ನೋಡಿಲ್ಲ. 'ಎರಡು ದೇಹ ಒಂದು ಆತ್ಮ' ಎಂಬಂತಹ ಮಾತಗಳನ್ನು ಇಬ್ಬರ ನಡುವಿನ ಅನ್ಯೋನ್ಯತೆಯ ಸ್ನೇಹದ ಕಾರಣದಿಂದಾಗಿ ಹೇಳುವುದನ್ನು ಕೇಳಿದ್ದೇವೆ. ಆದರೆ ವಾಸ್ತವಿಕವಾಗಿ ಇಬ್ಬರೂ ಒಂದೇ ವ್ಯಕ್ತಿತ್ವದವರಾಗಿ ಹೊರಹೊಮ್ಮುವುದಂತೂ ಅಸಾಧ್ಯವೇ ಸರಿ. ಹೀಗೆ ಎಲ್ಲಿಯವರೆಗೆ ಎರಡು ಸಂಗತಿಗಳು 'ಒಂದಾಗುವುದು' ಸಾಧ್ಯವಿಲ್ಲವೋ ಅಲ್ಲಿಯವರೆಗೆ ಪರಿಪೂರ್ಣ ಆನಂದ ಅನ್ನುವುದು ಸಿಗುವುದು ಸಾಧ್ಯವಿಲ್ಲ.
     ಈ ಪ್ರಪಂಚದಲ್ಲಿ ಆನಂದಕ್ಕಾಗಿ ಅರಸುವುದು ಅಂದರೆ ಮರಳುಗಾಡಿನಲ್ಲಿ ನೀರಿನ ತೊರೆ ಅರಸಿದಂತೆಯೇ ಸರಿ. ಪ್ರಾಪಂಚಿಕ ಸಂಗತಿಗಳಲ್ಲಿ ಆನಂದ ಸಿಗುವುದಿಲ್ಲವೆಂಬುದು ಖಚಿತವಾಯಿತು. ಪರಿಪೂರ್ಣತೆಯಲ್ಲಿ, ಸಚ್ಚಿದಾನಂದದಲ್ಲಿ ಒಂದಾದಾಗ ಮಾತ್ರ ನೈಜ ಆನಂದ ಸಿಗುತ್ತದೆ ಎಂದಾಯಿತು. ಅದೇನೋ ಸರಿ, ಆದರೆ ಈ ಪರಿಪೂರ್ಣತೆ, ಈ ಸಚ್ಚಿದಾನಂದ ಎಂದರೆ ಏನೆಂದು ತಿಳಿಯದೇ ಜೀವಿ ಅದರೊಂದಿಗೆ ಹೇಗೆ ಒಂದಾದೀತು?
ಪರಮಾತ್ಮ ರಚಿಸಿಹನು ಭವ್ಯ ಬ್ರಹ್ಮಾಂಡ
ಬ್ರಹ್ಮಾಂಡಕಿಂ ಹಿರಿದಲ್ತೆ ಅಂತರಂಗದ ಹರವು |
ಪರಮಾತ್ಮ ಕಾಣನೆ ಒಳಗೆ ನಿನ್ನೊಳಗೆ
ಅಣೋರಣೀಯನ ಮಹತಿಯಿದು ಮೂಢ ||
     ಆತ್ಮ ಮತ್ತು ಪರಮಾತ್ಮಗಳ ಒಂದಾಗುವಿಕೆಯಿಂದ ಪರಮಾನಂದ ಸಿಗುತ್ತದೆ ಎನ್ನುತ್ತಾರೆಂದರೆ ಮೊದಲು ಆತ್ಮದ ಅರಿವು ನಮಗಾಗಬೇಕು. ನಮ್ಮ ಹುಡುಕಾಟ ಹೊರಗೆ ಬಿಟ್ಟು ಒಳಗೆ ನಡೆಯಬೇಕು. ನಮ್ಮ ಆನಂದದ ಅನುಭವ ಬರುವುದು, ಆಗುವುದು ಎರಡೂ ನಮ್ಮ ಒಳಗಿನಿಂದ. ನಮ್ಮ ಅಂತರಂಗ ಬಿಟ್ಟು ಬೇರೆ ಏನೂ ನಮಗೆ ಕಾಣುವುದಿಲ್ಲವೋ, ನಮ್ಮ ಅಂತರಂಗ ಹೇಳುವುದನ್ನು ಬಿಟ್ಟು ಬೇರೆ ಏನೂ ನಮಗೆ ಕೇಳುವುದಿಲ್ಲವೋ, ನಮ್ಮ ಅಂತರಂಗವನ್ನು ಬಿಟ್ಟು ಬೇರೆ ಏನೂ ನಮಗೆ ಅರ್ಥವಾಗುವುದಿಲ್ಲವೋ ಅದೇ ಪೂರ್ಣಸ್ಥಿತಿ. ಇದಕ್ಕೆ ವಿರುದ್ಧವಾಗಿ ನಮಗೆ ಅಂತರಂಗ ಬಿಟ್ಟು ಹೊರಗಿನ ಸಂಗತಿಗಳು ಮಾತ್ರ ಕಾಣುವುವೋ, ಕೇಳುವುವೋ, ಅರ್ಥವಾಗುವುವೋ ಅದು ಅಪೂರ್ಣಸ್ಥಿತಿ.
     ಪರಿಪೂರ್ಣ ಆನಂದ ಎನ್ನುವ ಆ ಪರಮಾತ್ಮ ಎಲ್ಲಿದ್ದಾನೆ? ಆಕಾಶ ಎಲ್ಲಿದೆ ಎಂಬ ಪ್ರಶ್ನೆಯಂತೆಯೇ ಈ ಪ್ರಶ್ನೆ ಇದೆ. ಆಕಾಶ ಇಲ್ಲದಿರುವ ಸ್ಥಳ ಇದೆಯೇ? ಹಾಗೆಯೇ ಈ ಪರಮಾತ್ಮ ಇಲ್ಲದಿರುವ ಸ್ಥಳವಿಲ್ಲ. ಎಲ್ಲಿದ್ದಾನೆ ಎಂಬ ಪ್ರಶ್ನೆಯೇ ಅಪ್ರಸ್ತುತವೆನಿಸುತ್ತದೆ. ಏಕೆಂದರೆ ಎಲ್ಲೆಲ್ಲೂ ಇರುವುದನ್ನು ಎಲ್ಲಿಯೋ ಇದೆ ಎಂದು ಭಾವಿಸಿ ಕೇಳಿದಂತೆ ಆಗುತ್ತದೆ ಮತ್ತು ಇರುವ ಸ್ಥಳ ಅದಕ್ಕೆ ಆಧಾರವಾಗಿದೆಯೆಂಬ ಭಾವ ಬರುತ್ತದೆ. ಎಲ್ಲದಕ್ಕೂ ಆಧಾರವಾಗಿರುವುದಕ್ಕೆ ಆಧಾರದ ಅಗತ್ಯವಿದೆಯೇ?  ಈ ಪ್ರಪಂಚದಲ್ಲಿ ಭವ್ಯವಾದ ಬಂಗಲೆಗಳು, ಹೇರಳವಾದ ಆಸ್ತಿ, ಲೆಕ್ಕವಿಲ್ಲದಷ್ಟು ಹಣ, ಸೇವೆ ಮಾಡಲು ಆಳು-ಕಾಳುಗಳು, ಐಷಾರಾಮಿ ಕಾರುಗಳು ಇರುವವರನ್ನು ಶ್ರೀಮಂತರು ಎಂದು ಭಾವಿಸುತ್ತಾರೆ. ಅವರ ಶ್ರೀಮಂತಿಕೆಗೆ, ಸುಖಕ್ಕೆ ಇವುಗಳೆಲ್ಲಾ ಆಧಾರವಾಗಿವೆ. ಆದರೆ ಪರಮಾತ್ಮನ ಪರಮಾನಂದದ ಸ್ಥಿತಿಗೆ ಇಂತಹ ಯಾವುದೇ ಆಧಾರಗಳ ಅಗತ್ಯವಿಲ್ಲ. ಅದು ಸ್ವಯಂ ಆಧಾರಿತ. ಜಗತ್ತಿನ ಎಲ್ಲಾ ಸಂಗತಿಗಳಿಗೆ ಆಧಾರವಾಗಿರುವ ಸಂಗತಿಗೆ ಪ್ರತ್ಯೇಕ ಆಧಾರದ ಅಗತ್ಯವಾದರೂ ಎಲ್ಲಿದೆ?
     ಈ ಪ್ರಪಂಚದಲ್ಲಿ ಯಾವುದೇ ಒಂದು ಸಂಗತಿ ಇನ್ನೊಂದಕ್ಕೆ ಆಧಾರವಾಗಿರುತ್ತದೆ. ಒಬ್ಬರು ಇನ್ನೊಬ್ಬರಿಗೆ ಅವಲಂಬಿತರಾಗಿರುತ್ತಾರೆ. ಹೀಗೆಯೇ ಪ್ರಪಂಚ ಸಾಗುತ್ತಿರುವುದು. ಆದರೆ ಯಾವುದೇ ಆಧಾರದ ಅಗತ್ಯವಿಲ್ಲದೆ ಇರುವುದೆಂದರೆ ಆ ಪರಮ, ಪರಿಪೂರ್ಣತೆ ಮಾತ್ರ. ಹೊರಗಿನ ಸಂಗತಿಗಳಲ್ಲಿ ಆನಂದ ಅರಸುವುದನ್ನು ಬಿಟ್ಟು, ಅದನ್ನು ಒಳಗೆ, ನಮ್ಮೊಳಗೆ, ನಮ್ಮ ಅಂತರಂಗದ ಒಳಗೆ ಅರಸಿದರೆ ನಮ್ಮ ಆತ್ಮದ ಅರಿವು ನಮಗೆ ಆಗದೇ ಇರದು. ಪರಮಾತ್ಮನೂ ಅಲ್ಲಿಯೇ ಸಿಕ್ಕಾನು! ಪರಮಾನಂದದ ಅನುಭವವೂ ಆದೀತು!!
-ಕ.ವೆಂ.ನಾಗರಾಜ್.
****************
ದಿನಾಂಕ 27.01.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಶುಕ್ರವಾರ, ಫೆಬ್ರವರಿ 5, 2016

ಸಾಧನಾ ಸೋಪಾನ 23: ಬೇಕೇ ಬೇಕು, ಆನಂದ ಬೇಕು!


     ಒಬ್ಬ ಸತ್ಯಾನ್ವೇಷಿ ಸಾಧಕ ಮುಂದುವರೆದಂತೆ ಅಂತರ್ಮುಖಿಯಾಗುತ್ತಾ ಹೋಗುತ್ತಾನೆ. ಬಹಿರ್ಮುಖವಾದ ಸಂಗತಿಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾನೆ. ವಿರಕ್ತಿಯೆನ್ನಬಹುದಾದ ಈ ಸ್ಥಿತಿ ಯಾವುದೇ ಬಾಹ್ಯ ಒತ್ತಡದಿಂದ, ಬಲವಂತದಿಂದ ಬಂದದ್ದಾಗಿರದೆ, ತನ್ನ ಸ್ವ ಇಚ್ಛೆಯಿಂದ ತಾನು ಸತ್ಯವಿಚಾರಕ್ಕೆ ಕೊಟ್ಟ ನಿಷ್ಠೆಯಿಂದ ಬಂದಿರುವಂತಹದಾಗಿರುತ್ತದೆ. ಪರಮಾತ್ಮ ತತ್ತ್ವಕ್ಕೆ ಸಮೀಕರಿಸಿಕೊಳ್ಳುವ ಈ ಪ್ರಯತ್ನ ಅವನನ್ನು 'ನಾನು', 'ನೀನು', 'ಅವನು', ಇತ್ಯಾದಿಗಳಿಂದ ದೂರ ಮಾಡಿಬಿಡುತ್ತದೆ. ಈ ನಾನು, ನೀನುಗಳು ಹೋದಾಗ ಏನೂ ಇರುವುದಿಲ್ಲ! ಆನಂದಮಯ ಸ್ಥಿತಿಯೆನ್ನಬಹುದಾದ ಈ ಸ್ಥಿತಿ ಸಾಧಕನೊಬ್ಬನ ಅತ್ಯುನ್ನತ ಸಾಧನೆಯಾಗಿರುತ್ತದೆಂದು ಉಪನಿಷತ್ತಿನಲ್ಲಿ ಹೇಳಲಾಗಿದೆ.
ಸುಖವನಾಳೆ ಭೋಗಿ ಮನವನಾಳೆ ಯೋಗಿ
ಸುಖವನುಂಡೂ ದುಃಖಪಡುವವನೆ ರೋಗಿ |
ಸುಖವಿಮುಖಿಯಾದರೂ ಸದಾಸುಖಿ ಯೋಗಿ
ಸುಖವ ಬಯಸದಿರೆ ದುಃಖವೆಲ್ಲಿ ಮೂಢ ||
     ಜೀವಿ ಸದಾ ಆನಂದವನ್ನು ಹಿಂಬಾಲಿಸುತ್ತಲೇ ಇರುತ್ತದೆ, ಸಿಗುತ್ತದೋ, ಇಲ್ಲವೋ ಅದು ಬೇರೆ ವಿಷಯ, ಆದರೆ ಆನಂದ ಪಡೆಯುವ ಪ್ರಯತ್ನ ಮಾತ್ರ ಸದಾ ಇರುತ್ತದೆ. ನಮ್ಮ ಎಲ್ಲಾ ಕ್ರಿಯೆಗಳು, ಆಸೆಗಳು, ಗುರಿಗಳ ಹಿಂದೆ ಆನಂದ ಪಡೆಯುವುದೇ ಉದ್ದೇಶವಾಗಿರುತ್ತದೆ. ವಿದ್ಯಾವಂತನಾಗಬೇಕು. ಒಳ್ಳೆಯ ಹೆಂಡತಿ/ಗಂಡ ಸಿಗಬೇಕು, ದೊಡ್ಡ ಮನೆ ಕಟ್ಟಿಸಬೇಕು, ನೌಕರಿಯಲ್ಲಿ ಬಡ್ತಿ ಸಿಗಬೇಕು, ದೊಡ್ಡ ಕಂಪೆನಿಯ ಮಾಲಿಕನಾಗಬೇಕು, ಹಣ ಬೇಕು, ಅಧಿಕಾರ ಬೇಕು, ಮಂತ್ರಿ ಆಗಬೇಕು, ಮುಖ್ಯಮಂತ್ರಿ ಆಗಬೇಕು, ಪ್ರಧಾನ ಮಂತ್ರಿ ಆಗಬೇಕು, ಇಡೀ ಜಗತ್ತು ನನ್ನ ಅಧೀನದಲ್ಲಿ ಬರಬೇಕು, ದೊಡ್ಡ ವ್ಯಕ್ತಿಯೆನ್ನಿಸಿಕೊಳ್ಳಬೇಕು, ಇತ್ಯಾದಿ ಬೇಕುಗಳಿಗೆ ಮಿತಿ ಇದೆಯೇ? ಇವೆಲ್ಲವೂ ಸಿಕ್ಕರೆ ನಮಗೆ ಆನಂದ ಸಿಗುತ್ತದೆ ಎಂದು ನಾವು ಭಾವಿಸುವುದಿಲ್ಲವೇ? ಆನಂದ ಸಿಗುತ್ತದೆಯೆಂಬ ಕಾರಣದಿಂದ ಈ ಜಗತ್ತಿನಲ್ಲಿ ಸೃಷ್ಟಿಯ ಎಲ್ಲಾ ಸಂಗತಿಗಳೂ, ಎಲ್ಲಾ ಕ್ರಿಯೆಗಳೂ ಮುಂದುವರೆಯುತ್ತಿವೆ. ಆದ್ದರಿಂದ ಈ ಆನಂದ ಅನ್ನುವುದು ಏನು ಎಂದು ತಿಳಿಯುವುದು ಅವಶ್ಯಕವಾಗಿದೆ.
     ಈ ಬ್ರಹ್ಮಾಂಡದ ಸೃಷ್ಟಿ, ಸ್ಥಿತಿ. ಲಯಗಳಿಗೆ, ವಿಕಾಸ ಮತ್ತು ಹಿನ್ನಡೆಗಳಿಗೆ, ಸಕಲ ಚಟುವಟಿಕೆಗಳ ಹಿಂದಿನ ಪ್ರೇರಕ ಶಕ್ತಿಯೇ ಆನಂದವಾಗಿದೆ. ಈ ಆನಂದವೇ ತನ್ನ ಉನ್ನತ ಸ್ಥಿತಿಯನ್ನು ತಲುಪಲು, ಉಚ್ಛ್ರಾಯ ಮಟ್ಟವನ್ನು ತಲುಪಲು ಪ್ರಯತ್ನಿಸುತ್ತಿರುತ್ತದೆ. ಜೀವಿಗಳಲ್ಲಿನ ಸುಪ್ತ ಬಯಕೆಗಳಿಗೆ ಮತ್ತು ಆ ಕಾರಣದಿಂದ ಮಾಡಲಾಗುವ ಚಟುವಟಿಕೆಗಳಿಗೆ ಇದೇ ಮೂಲವಾಗಿದೆ. ಜೀವ ವಿಕಾಸಕ್ಕೆ ಇದೇ ಹೇತುವಾಗಿದೆ. ಪ್ರತಿಯೊಂದರ ಹಿಂದೆ ಆನಂದವಿದೆ ಮತ್ತು ಆನಂದ ಮಾತ್ರ ಇದೆ.
     ನಾವು ಕ್ರಮೇಣ ನಮ್ಮ ಎಲ್ಲಾ ಕ್ರಿಯೆಗಳೂ ಆನಂದದ ಅಪೇಕ್ಷೆಯಿಂದ ಜರುಗುತ್ತವೆ ಎಂಬ ಅಂಶವನ್ನು ಒಪ್ಪುವ ಹಂತಕ್ಕೆ ಬಂದೆವು. ಇದು ಕೇವಲ ವಾಸ್ತವಿಕ ಸತ್ಯ ಮಾತ್ರವಾಗಿರದೆ ಮಾನಸ ಶಾಸ್ತ್ರದ ಪ್ರಕಾರವೂ ಸತ್ಯವಾಗಿದೆ. ಇಷ್ಟು ತಿಳಿದಾಕ್ಷಣ ಎಲ್ಲವನ್ನೂ ತಿಳಿದಂತಾಗಲಿಲ್ಲ. ದಿನನಿತ್ಯದ ಜೀವನದಲ್ಲಿ ಆನಂದವೆಂದರೆ ಕಷ್ಟಪಟ್ಟು ಮಾಡಿದ ಪ್ರಯತ್ನದಿಂದ ಸಿಗುವ ಸಾಧನೆ ಎಂದುಕೊಳ್ಳುತ್ತೇವೆ. ವಿಚಿತ್ರವೆಂದರೆ, ಹಲವರು ಹಲವು ರೀತಿಯ ಸಾಧನೆಗಳನ್ನು ಗುರಿಯಾಗಿರಿಸಿಕೊಂಡು ಮುಂದುವರೆಯುತ್ತಾರೆ ಮತ್ತು ಅದರಲ್ಲಿ ಆನಂದವನ್ನು ಕಾಣಬಯಸುತ್ತಾರೆ. ಆದರೆ, ವಾಸ್ತವತೆಯ ವ್ಯಂಗ್ಯವೆಂದರೆ ಆನಂದ ಅನ್ನುವುದು ಎಲ್ಲಾ ಸಂಗತಿಗಳಲ್ಲಿ ಇರುವಂತೆ ಗೋಚರವಾದರೂ ಅದನ್ನು ಎಲ್ಲರೂ ಆನಂದವೆಂದು ಪರಿಗಣಿಸಲಾರರು. ಸಾಧನೆಯಿಂದ ಆನಂದ ಸಿಗುವುದಾದರೂ ಅದನ್ನೇ ಪರಮ ಎಂದು ಮನಸ್ಸು ಒಪ್ಪಲಾರದು. ಅದಕ್ಕೇ ಆನಂದ ಎಲ್ಲಿದೆ ಎಂಬ ಬಗ್ಗೆ ಮನಸ್ಸಿನಲ್ಲಿ ಸಂದೇಹ ಉದ್ಭವಿಸುತ್ತದೆ.
     ಈ ಆನಂದ ಅನ್ನುವುದು ನಮ್ಮಲ್ಲಿಯೇ ಇದೆಯೇ ಅಥವ ಬೇರೆ ಯಾರಲ್ಲಾದರೂ ಇದೆಯೇ ಅಥವ ಯಾವುದರಲ್ಲಾದರೂ ಇದೆಯೇ? ಆನಂದ ಅನ್ನುವುದು ನಮ್ಮ ಮನಸ್ಸಿನ ಸ್ಥಿತಿ ಎಂದು ಹೇಳುವುದನ್ನು ಕೇಳಿದ್ದೇವೆ. ಮನೋವಿಜ್ಞಾನಿಗಳೂ ಇದನ್ನೇ ಹೇಳುತ್ತಾರೆ. ಆನಂದ ಅನ್ನುವುದು ನಮ್ಮ ಮನಸ್ಸಿನಲ್ಲೇ ಇರುವುದಾದರೆ ಅದನ್ನು ಹೊರಗೆ ಹುಡುಕಬೇಕಾದರೂ ಏಕೆ? ಆನಂದವನ್ನು ಹೊರಗಿನ ಸಂಗತಿಗಳಲ್ಲಿ, ಹೊರಗಿನ ವಿಷಯಗಳಲ್ಲಿ ಹುಡುಕುತ್ತೇವೆ ಎಂಬ ಸಂಗತಿಯೇ, ನಮ್ಮ ಮನಸ್ಸು ಮನಸ್ಸಿನಿಂದ ತೃಪ್ತವಾಗಿಲ್ಲ ಮತ್ತು ನಮ್ಮ ಮನಸ್ಸಿನಲ್ಲಿ ಏನೋ ಕೊರತೆ ಇದೆ ಎಂಬುದನ್ನು ತೋರಿಸುತ್ತದೆಯಲ್ಲವೇ? ಆನಂದವನ್ನು ತನ್ನಿಂದ ತಾನೇ ಕಾಣಲಾಗದ ಮನಸ್ಸಿನ ಅಸಾಮರ್ಥ್ಯವೇ, ಕೊರತೆಯೇ ಅದನ್ನು ಹೊರಗೆ ಹುಡುಕುವಂತೆ ಮಾಡುವ ಮೂಲ ಕಾರಣವಾಗಿದೆ. ಮನಸ್ಸಿನ ಚಂಚಲ ಸ್ಥಿತಿ, ನಮ್ಮ ಸುತ್ತಲಿನ ಪ್ರಪಂಚದಲ್ಲಿರುವ ಸಂಗತಿಗಳಲ್ಲಿ ಆನಂದವನ್ನು ಅರಸಬಯಸುವ ಮನೋಸ್ಥಿತಿ ಮನಸ್ಸೇ ಆನಂದದ ಮೂಲ ಎಂಬ ತತ್ವದಲ್ಲಿ ಏನೋ ದೋಷವಿದೆಯೆಂದು ಅನ್ನಿಸುವಂತೆ ಮಾಡುತ್ತದೆ.
     ಆನಂದದ ಮೂಲ ಈ ಪ್ರಪಂಚದಲ್ಲಿರುವ ಸಂಗತಿಗಳಲ್ಲಿದೆಯೇ ಎಂದು ನೋಡಿದರೆ ಅಲ್ಲೂ ನಿರಾಸೆಯೇ ಕಾಣಬರುತ್ತದೆ. ಇಲ್ಲಿನ ಯಾವುದೇ ಸಂಗತಿ ಪ್ರತಿಯೊಬ್ಬರ ಗಮನವನ್ನು ಏಕಕಾಲದಲ್ಲಿ ಮತ್ತು ಸದಾಕಾಲದಲ್ಲಿ ಸೆಳೆಯುವಂತಹದು ಅಲ್ಲ. ಆದ್ದರಿಂದ ಈ ಆನಂದ ಅನ್ನುವುದು ಪ್ರಾಪಂಚಿಕ ಸಂಗತಿಗಳಲ್ಲಿ ಇದೆ ಎಂದು ಭಾವಿಸುವುದು ಕಷ್ಟ. ಒಬ್ಬೊಬ್ಬರಿಗೆ ಒಂದೊಂದು ವಿಷಯದಲ್ಲಿ ಆಸಕ್ತಿಯಿದ್ದರೂ, ಆನಂದ ಸಿಕ್ಕರೂ ಅದು ಸದಾ ಕಾಲಕ್ಕೆ ಇರುತ್ತದೆಯೆಂದು ಹೇಳಲಾಗುವುದಿಲ್ಲ. ಆದರೆ, ಈ ಆನಂದ ಅನ್ನುವುದು ಎಲ್ಲೋ ಇರಲೇಬೇಕಲ್ಲಾ! ಏಕೆಂದರೆ ಮನಸ್ಸು ಅದಕ್ಕಾಗಿಯೇ ಚಡಪಡಿಸುತ್ತಿರುತ್ತದೆ. ಅದು ನಮ್ಮ ಮನಸ್ಸಿನೊಳಗೂ ಇಲ್ಲ, ಹೊರಗೂ ಇಲ್ಲವೆಂದರೆ ಅದು ರಹಸ್ಯವೇ ಸರಿ. ಸಮಗ್ರ ವಿಶ್ಲೇಷಣೆಯಿಂದ ಆನಂದ ಎಲ್ಲಿದೆಯೆಂದು ಹೇಳುವುದೂ ಸುಲಭವಲ್ಲ. ಸಾಂದರ್ಭಿಕವಾಗಿ ಒಳಮನಸ್ಸಿನ ಸ್ಥಿತಿ ಮತ್ತು ಹೊರಗಿನ ಸಂಗತಿಯ ತುಲನೆ ಮಾತ್ರ ಹಾಗೆ ಮಾಡಲು ಸಾಧ್ಯವಾಗುತ್ತದೆ. ಹಾಗಾದರೆ ಈ ಆನಂದವಾದರೂ ಎಲ್ಲಿರಬಹುದು?
     ಆನಂದ ಅನ್ನುವುದನ್ನು ಒಂದು ಸೀಮಿತ ವ್ಯಾಪ್ತಿಯ ವಸ್ತುವಾಗಿ ನೋಡುವುದೇ ಸರಿಯಾಗಲಾರದು. ಅದು ಮನಸ್ಸಿನ ಸ್ಥಿತಿಯೆಂದರೆ, ಅದು ಸೀಮಿತವಾದ ಸಂಗತಿಯಾಗಿಬಿಡುತ್ತದೆ. ಹೊರಗಿನ ಪ್ರಾಪಂಚಿಕವಾದ ಯಾವುದೇ ಸಂಗತಿ ಅಥವ ವಿಷಯ ಸಹ ಸೀಮಿತ ವ್ಯಾಪ್ತಿಯದಾಗಿರುತ್ತದೆ ಅರ್ಥಾತ್ ಆ ಆನಂದ ಶಾಶ್ವತ ಅಥವ ಸದಾ ಕಾಲ ಇರುವಂತಹದಲ್ಲ. ಸೀಮಿತ ವ್ಯಾಪ್ತಿಯ ಮನಸ್ಸು ಮತ್ತು ಸೀಮಿತ ವ್ಯಾಪ್ತಿಯ ಪ್ರಾಪಂಚಿಕ ಸಂಗತಿ ಎರಡೂ ಸೇರಿದರೂ ಸಹ ಒಟ್ಟು ಪರಿಣಾಮ ಸೀಮಿತವಾದದ್ದೇ ಆಗಿರುತ್ತದೆ. ಸೀಮಿತ ವ್ಯಾಪ್ತಿಯ ಎರಡು ಸಂಗತಿಗಳನ್ನು ಸೇರಿಸಿದರೆ ಅಥವ ಅಸಂಖ್ಯ ಸೀಮಿತ ವ್ಯಾಪ್ತಿಯ ಸಂಗತಿಗಳನ್ನೆಲ್ಲಾ ಸೇರಿಸಿದರೆ ಆಗಲೂ ಸಹ ಅದು ಅಸೀಮಿತವಾಗುವುದಿಲ್ಲ. ಇಡೀ ಪ್ರಪಂಚವನ್ನೇ ಒಟ್ಟಾಗಿಸಿದರೂ ಅದೂ ಸೀಮಿತವೇ ಆಗಿರುತ್ತದೆ. ಐಹಿಕ ಸುಖ-ಭೋಗಗಳಿರಬಹುದು, ಹಣ-ಸಂಪತ್ತುಗಳಿರಬಹುದು, ಅಧಿಕಾರ-ಹೆಸರು-ಕೀರ್ತಿಗಳಿರಬಹುದು, ಏನೇ ಇರಬಹುದು, ಅವುಗಳಲ್ಲಿ ಆನಂದ ಸಿಕ್ಕರೂ ಅದು ಶಾಶ್ವತವೆಂದು ಯಾರೂ ಹೇಳಲಾರರು. ಯಾರಾದರೂ ಸೀಮಿತವಾದ ಆನಂದ ಬಯಸುತ್ತಾರೆಯೇ? ಎಲ್ಲರಿಗೂ ನಿರಂತರವಾದ ಮತ್ತು ಸದಾ ಇರುವ ಆನಂದವೇ ಬೇಕು! ನಮ್ಮೊಳಗಿನ ಒಳತುಡಿತವೇ ಸದಾ ಆನಂದ ನಮಗೆ ಇರಬೇಕೆಂಬುದು! ಇದೇ ನಮ್ಮ ಪ್ರಶ್ನೆಗೆ, ಆನಂದ ಎಲ್ಲಿದೆಯೆಂಬ ಪ್ರಶ್ನೆಗೆ, ಉತ್ತರಿಸುತ್ತದೆ. ಮನಸ್ಸು ಸೀಮಿತವಾದ ಆನಂದದಿಂದ ತೃಪ್ತಗೊಳ್ಳುವುದೇ ಇಲ್ಲ. ನೈಜ ಆನಂದ ಅನ್ನುವುದು ಅಸೀಮಿತವಾದದ್ದಾಗಿದೆ, ಅದನ್ನು ಸೀಮಿತ ಸಂಗತಿಗಳಲ್ಲಿ ಹುಡುಕಿದರೆ ಸಿಗಲಾರದು!
     ನೈಜ ಆನಂದಕ್ಕೆ ಮಿತಿಿಯಲ್ಲ, ಅಂತ್ಯವಿಲ್ಲ ಅನ್ನುವುದಾದರೆ, ಅದು ಮನಸ್ಸಿನ ಒಳಗೆ ಮತ್ತು ಯಾವುದೇ ಸೀಮಿತ ವ್ಯಾಪ್ತಿಯ ವಸ್ತು/ಸಂಗತಿಗಳಲ್ಲಿ ಸಿಗುವುದಿಲ್ಲವೆಂದಾದರೆ ಅದು ಇರುವುದಾದರೂ ಎಲ್ಲಿ? ಅಂತಹ ಆನಂದಕ್ಕೆ ವಿವರಣೆ ಕೊಡುವುದಾಗಲೀ, ವಿವರಿಸುವುದಾಗಲೀ ಅಶಕ್ಯವೇ ಸರಿ. ಅದನ್ನು ಆಧ್ಯಾತ್ಮಿಕ ಪರಿಪೂರ್ಣತೆಯ ಸ್ಥಿತಿ ಎಂದಷ್ಟೇ ಹೇಳಬಹುದೇನೋ! ಅದನ್ನು ದಾರ್ಶನಿಕರು ಸಂಪೂರ್ಣತೆ, ಅತ್ಯುನ್ನತ ಸ್ಥಿತಿ ಎಂದರೆ, ಧಾರ್ಮಿಕರು ದೇವರು ಎನ್ನುತ್ತಾರೆ. ಮನೋಶಾಸ್ತ್ರಜ್ಞರು ಅದನ್ನು ಪರಮೋಚ್ಛ ಭಾವ ಎಂದಾರು! ಸಚ್ಚಿದಾನಂದ ಎಂದೂ ದೇವರನ್ನು ಸಂಬೋಧಿಸುತ್ತಾರೆ. ಸೀಮಿತ ಆನಂದದಿಂದ ಮನಸ್ಸು ತೃಪ್ತಗೊಳ್ಳುವುದಿಲ್ಲವೆಂದಾದರೆ ಅದನ್ನು ಅಸೀಮಿತವಾದ ಅಂತ್ಯವಿಲ್ಲದ ಆನಂದದಲ್ಲಿ, ಸಚ್ಚಿದಾನಂದದಲ್ಲೇ ಕಾಣುವುದನ್ನು ಬಿಟ್ಟು ಬೇರೆ ಮಾರ್ಗವೇ ಇಲ್ಲ.
     ಇಂತಹ ಪರಮೋಚ್ಛ ಸ್ಥಿತಿಯನ್ನು ತಲುಪಲು ಸಾಧಕರಿಗೆ ಮಾತ್ರ ಸಾಧ್ಯವಿದೆ. ಆದರೆ, ಅಂತಹ ಸಾಧಕರಾಗಲು ಸಾಮಾನ್ಯರಿಗೂ ಅವಕಾಶವಿದೆ. ಅವಕಾಶವನ್ನು ಬಳಸಿಕೊಳ್ಳದೆ ಜೀವನದ ಜಂಜಾಟದಲ್ಲಿ, ಮಾಯೆಯ ಸುಳಿಯಲ್ಲಿ ಸಿಲುಕಿರುವ ನಮ್ಮಂತಹ ಸಾಮಾನ್ಯರು ಹೊಂದಿರುವಷ್ಟರಲ್ಲೇ ತೃಪ್ತಭಾವ ಹೊಂದಿದರೆ ಮಾತ್ರ ಆನಂದವನ್ನು ಅನುಭವಿಸಲು ಸಾಧ್ಯವಿದೆಯೆಂಬುದು ಸಮಾಧಾನದ ಸಂಗತಿ.
ಆನಂದದ ಬಯಕೆ ನಂದದೆಂದೆಂದು
ಆನಂದವೇನೆಂದು ತಿಳಿಯಬೇಕಿಂದು |
ಸಿಕ್ಕಷ್ಟು ಸಾಲದೆನೆ ಆನಂದವಿನ್ನೆಲ್ಲಿ
ಇರುವುದೆ ಸಾಕೆನಲು ಆನಂದ ಮೂಢ ||
-ಕ.ವೆಂ.ನಾಗರಾಜ್.
***************
ದಿನಾಂಕ 20.02.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಮಂಗಳವಾರ, ಫೆಬ್ರವರಿ 2, 2016

ಸಾಧನಾ ಸೋಪಾನ 22: ಸತ್ಯಾನ್ವೇಷಣೆ- 2


     ತರ್ಕದ ಎಳೆಯನ್ನು ಬಿಡಿಸುತ್ತಾ ಹೋದಂತೆ ನಮಗೆ ಸತ್ಯದ ಅರಿವಾಗುತ್ತಾ ಹೋಗುತ್ತದೆ. ವೇದಗಳು ಹೇಳುವುದೂ ಇದನ್ನೇ! ಸತ್ಯವನ್ನು ಕಂಡುಕೊಳ್ಳಿರಿ, ಸತ್ಯವನ್ನು ಆವಿಷ್ಕರಿಸಿರಿ, ಅಸತ್ಯವೆಂದು ಕಂಡುದನ್ನು ಕಿತ್ತೆಸೆಯಿರಿ. (ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || -ಋಕ್.೧.೮೬.೯) ಯಾವುದನ್ನೂ ಕಣ್ಣು ಮುಚ್ಚಿ ಒಪ್ಪಬೇಕಿಲ್ಲ, ಯಾರೋ ಹೇಳಿದರೆಂದು ಕೇಳಬೇಕಿಲ್ಲ, ಕೇಳಿರಿ, ತಿಳಿಯಿರಿ, ವಿಚಾರ ಮಾಡಿರಿ, ಚರ್ಚಿಸಿರಿ, ಅಂತರಂಗಕ್ಕೆ ಒಪ್ಪಿಗೆಯಾದರೆ ಸ್ವೀಕರಿಸಿ, ಸತ್ಯವನ್ನು ನೀವೇ ಕಂಡುಕೊಳ್ಳಿ ಎಂಬ ಮಾತು ವೈಚಾರಿಕ ಪ್ರಜ್ಞೆ ಇರಬೇಕೆಂಬುದನ್ನು ಒತ್ತಿ ಹೇಳುತ್ತದೆ. ಇದನ್ನು 'ಮತಿ' ಎಂದೂ ಹೇಳುತ್ತಾರೆ. ಸತ್ಯ ಅನ್ನುವುದು ಅತ್ಯಂತ ಉನ್ನತ ಸ್ತರದಲ್ಲಿ ನಮ್ಮ ಮೆದುಳು ಗ್ರಹಿಸಬಹುದಾದುದಕ್ಕಿಂತ ಮೇಲಿರುತ್ತದೆ, ಯಾವುದು ಮೇಲುನೋಟಕ್ಕೆ ಕಂಡುಬರುತ್ತದೋ ಅದಕ್ಕಿಂತ ಭಿನ್ನವಾಗಿರಬಹುದು. ಅಂತಹ ಸ್ಥಿತಿಯಲ್ಲಿ ನಾವು ಏನು ಮಾತನಾಡುತ್ತೇವೋ, ಏನನ್ನು ಕೇಳುತ್ತೇವೋ ನಮಗೇ ಗೊತ್ತಾಗುವುದಿಲ್ಲ.
     ಹಿಂದಿನ ಒಂದು ಲೇಖನದಲ್ಲಿ ಬದುಕುವ ಆಸೆ ನಮ್ಮನ್ನು ಬದುಕಿಸುತ್ತದೆ ಎಂಬ ಬಗ್ಗೆ ಚರ್ಚಿಸಿದೆವು. ಈಗಿನ ಸ್ಥಿತಿಗಿಂತ ಉನ್ನತ ಸ್ಥಿತಿಗೆ ಏರುತ್ತೇವೆಂಬ ಒಳ ಆಸೆ ನಮ್ಮಲ್ಲಿ ಜಾಗೃತವಾಗಿದ್ದು ಬದುಕಿಗೆ ಪ್ರೇರಿಸುತ್ತದೆ ಎಂಬ ಸತ್ಯವನ್ನು ಅರಿತೆವಲ್ಲವೇ? ಇದರ ಮುಂದುವರೆದ ಸ್ಥಿತಿಯೇ ಆತ್ಮ ಪರಮಾತ್ಮನಾಗುವ, ಪರಮಾತ್ಮನೆಡೆಗೆ ಧಾವಿಸುವ, ಪರಮಾತ್ಮನನ್ನು ಅರಿಯುವ ಕ್ರಿಯೆಯಾಗಿದ್ದು, ಇದು ಸುಪ್ತವಾಗಿರುತ್ತದೆ. ಇದೇ ಸತ್ಯಾನ್ವೇಷಣೆ. ಇದು ಒಬ್ಬೊಬ್ಬರಲ್ಲಿ ಒಂದೊಂದು ಪ್ರಮಾಣದಲ್ಲಿದ್ದು ಅವರವರ ಸಾಧನೆ ಅನುಸರಿಸಿ ಮುನ್ನಡೆಯುತ್ತಿರುತ್ತದೆ. ಇದು ನಿರಂತರ ಕ್ರಿಯೆಯಾಗಿದೆ. ಈ ದೇವರನ್ನು ಕಾಣುವ, ಕಾಣಬೇಕೆನ್ನಿಸುವ, ಅರಿಯಬೇಕೆನ್ನಿಸುವ, ಸತ್ಯ ತಿಳಿಯಬೇಕೆನ್ನುವ ವಿಚಾರವನ್ನು ನಮ್ಮ ತಲೆಯಲ್ಲಿ ತುರುಕಿದವರು ಯಾರು? ಈ ವಿಷಯದಲ್ಲಿ ಅನೇಕ ಮಹಾಮಹಿಮರು, ಸಾಧು-ಸಂತರು, ದಾರ್ಶನಿಕರು, ಧಾರ್ಮಿಕರು ಅನೇಕ ರೀತಿಯ ಮಾರ್ಗದರ್ಶನಗಳು, ವಿಚಾರಗಳನ್ನು ನೀಡಿದ್ದಾರೆ, ನೀಡುತ್ತಿರುತ್ತಾರೆ. ಸಾಧಕರು ಇವೆಲ್ಲವನ್ನೂ ಜ್ಞಾನ ಗಳಿಸುವ ಸಲುವಾಗಿ ತಿಳಿದುಕೊಳ್ಳುತ್ತಾರೆ, ಮನನ ಮಾಡಿಕೊಳ್ಳುತ್ತಾರೆ, ಮಥಿಸುತ್ತಾರೆ, ಧ್ಯಾನಿಸುತ್ತಾರೆ, ಅಂತಿಮವಾಗಿ ಸತ್ಯವನ್ನು ಕಂಡುಕೊಳ್ಳುತ್ತಾರೆ. ಲೋಕದಲ್ಲಿ ಎಲ್ಲಾ ರೀತಿಯ ಜನರಿರುತ್ತಾರೆ. ತಿಳಿದಷ್ಟಕ್ಕೇ ಸಾಕು ಅಂದುಕೊಳ್ಳುವವರು, ತಿಳಿದದ್ದೇ ಸತ್ಯ ಎಂದ ವಾದಿಸುವವರು, 'ನಮ್ಮ ಗುರುಗಳು ಹೇಳಿದ್ದಾರಲ್ಲಾ, ಅವರು ಹೇಳಿದ ಮೇಲೆ ಮುಗಿಯಿತು, ಅದು ಸತ್ಯವೇ' ಎಂದು ವಿಚಾರ ಮಾಡದಿರುವವರು, ತಿಳಿಯುವ ಕುತೂಹಲವನ್ನೇ ತೋರದವರು, ಎಲ್ಲಾ ಸುಳ್ಳು ಅನ್ನುವವರು, ತಿಳಿಯಲು ಇಚ್ಛಿಸದವರು, ಹೀಗೆ ವಿವಿಧ ವಿಚಾರಿಗಳಿರುತ್ತಾರೆ. ಆದರೆ, ಒಂದಂತೂ ನಿಜ, ಯಾವ ಪ್ರಮಾಣದಲ್ಲೇ ಆಗಲಿ, 'ಇದು ಏನು?' ಎಂದು ತಿಳಿಯುವ ಕುತೂಹಲವಂತೂ ಸುಪ್ತವಾಗಿ ವಿವಿಧ ಪ್ರಮಾಣಗಳಲ್ಲಿ ಅಂತರ್ಗತವಾಗಿರುವುದಂತೂ ಸತ್ಯ. ನಾವೀಗ ಚರ್ಚಿಸುತ್ತಿರುವುದು ಸುಪ್ತ ಕುತೂಹಲವನ್ನು ತಣಿಸಿಕೊಳ್ಳಬಯಸುವ ಮನೋಸ್ಥಿತಿಯವರ ಕುರಿತು.
     ಸತ್ಯವನ್ನು ತಿಳಿಯುವ ಬಯಕೆ ಅಂತರಂಗದಲ್ಲಿ ಸುಪ್ತವಾಗಿರುತ್ತದೆ ಎಂದೆವು. ಈ ಬಯಕೆ ಬಂದಿದ್ದಾದರೂ ಹೇಗೆ? ಎಲ್ಲಿಂದ ಬಂದದ್ದು? ಎಂಬುದು ಯಾರಿಗೂ ಗೊತ್ತಿಲ್ಲ. ಅದು ನಮ್ಮ ಪ್ರಯತ್ನದಿಂದ ಬಂದದ್ದಂತೂ ಅಲ್ಲ. ಏಕೆಂದರೆ ಜ್ಞಾನವಿದ್ದರೆ ತಾನೇ ಪ್ರಯತ್ನದ ಪ್ರಶ್ನೆ ಉದ್ಭವಿಸುವುದು! ಹಾಗಾದರೆ ಈ ಜ್ಞಾನದ ಉಗಮವಾದರೂ ಹೇಗಾಯಿತು? ಯಾವುದರ ಬಗ್ಗೆ ಮೂಲಕಾರಣ ಗೊತ್ತಿಲ್ಲವೋ ಅದನ್ನು 'ಈಶ್ವರಾನುಗ್ರಹ' ಅಥವ 'ದೇವರ ಕೃಪೆ' ಅನ್ನೋಣವೇ? ತಿಳಿಯಬೇಕೆಂಬ ಒಳತುಡಿತವಿದೆ. ಹೇಗೆ ತಿಳಿಯಬೇಕು ಮತ್ತು ಅದು ಏನು ಎಂಬುದರ ಬಗ್ಗೆ ನಿಜವಾದ ಸಾಧಕ ತನ್ನದೇ ಆದ ಪಥದಲ್ಲಿ ಮುಂದಡಿಡುತ್ತಾನೆ. ಈ ಅಂತರ್ಗತ ತುಡಿತವೇ ಜೀವಿಯನ್ನು ಸತ್ಯಾನ್ವೇಷಣೆಗೆ ಮುನ್ನಡೆಯುವಂತೆ ಮಾಡುವ ಶಕ್ತಿಯಾಗಿದೆ. ಸತ್ಯ ಯಾವುದು, ಅಸತ್ಯ ಯಾವುದು ಎಂದು ವಿವೇಚಿಸುವ ಕ್ರಿಯೆಯನ್ನು 'ಮತಿ' ಎನ್ನುತ್ತಾರೆ.
     ಈಗ ಇನ್ನೊಂದು ಅಂಶವನ್ನೂ ಗಮನಿಸಬೇಕಿದೆ. ಸತ್ಯವನ್ನು ತಿಳಿಯುವ ಸುಪ್ತ ಆಸೆ ಅಂತರ್ಗತವಾಗಿ ಇರುತ್ತದೆ ಎಂದಾದರೆ ಆ ಸತ್ಯ ಅನ್ನುವುದು ಇದೆ ಎಂಬುದನ್ನು ಒಪ್ಪಬೇಕಾಗುತ್ತದೆ. ಹಾಗೆ ಒಪ್ಪಿ ಮುಂದುವರೆಯುವುದೇ ಸತ್ಯದಲ್ಲಿ ಇರುವ ನಂಬಿಕೆ ಅಥವ ಶ್ರದ್ಧೆಯನ್ನು ವ್ಯಕ್ತಪಡಿಸಿದಂತೆ! ಈ ಮತಿ ಮತ್ತು ಶ್ರದ್ಧೆ ಅನ್ನುವುದು ಒಂದಕ್ಕೊಂದಕ್ಕೆ ಪೂರಕವಾದುದು. ಸತ್ಯ ಇದೆ ಎಂದು ಹೇಗೆ ನಂಬುವುದು? ಅದು ನಮ್ಮ ಮನಸ್ಸಿನಲ್ಲಿ ಇರುವ ನಂಬಿಕೆಯಾಗಿದೆ. ಸತ್ಯವನ್ನು ತಿಳಿಯುವ ಒಳಬಯಕೆಯೇ ನಂಬಿಕೆಯಾಗಿ, ಶ್ರದ್ಧೆಯಾಗಿ ತನ್ನನ್ನು ತಾನು ಅರಿಯುವ ಕ್ರಿಯೆಯಾಗಿ ಮುಂದುವರೆಯುತ್ತದೆ. ಹೀಗಾಗಿ ನಂಬಿಕೆ ಅನ್ನುವುದು ಚಿಂತನೆ ಮತ್ತು ಅರಿವಿಗಿಂತ ಉನ್ನತವಾದುದಾಗುತ್ತದೆ. ಅದು ಕುರುಡು ನಂಬಿಕೆಯೆಂದು ನಾವು ಹೇಳುವಂತಹದಲ್ಲ, ಬದಲಾಗಿ ಸತ್ಯ ಇದೆ ಅನ್ನುವ ನಿಗ್ರಹಿಸಲಾಗದ ಭಾವನೆಯಾಗಿದೆ. ಅದು ಇರಲೇಬೇಕು. ಸತ್ಯದೆಡೆಗೆ ತುಡಿಯುವ ಒಳಮನಕ್ಕಿಂತ ಅಂದರೆ ಮತಿಗಿಂತ, ಸತ್ಯವಿದೆಯೆಂದು ನಂಬುವ ಶ್ರದ್ಧೆ ಅನ್ನುವುದು ಹಿರಿದೆಂದು ತಿಳಿದವರು ಹೇಳುತ್ತಾರೆ. ಸಾಮಾನ್ಯವಾದ ನಂಬಿಕೆಗಿಂತ ಇಲ್ಲಿ ಪ್ರಸ್ತಾಪಿಸಿದ ಅಚಲ ನಂಬಿಕೆಯಿದ್ದರೆ ಅದು 'ನಮ್ಮನ್ನು ನಾವು ಅರಿಯುವುದಕ್ಕೆ' ಸಹಕಾರಿಯಾಗುತ್ತದೆ. ಎಂತಹ ಉನ್ನತವಾದ ಪಾಂಡಿತ್ಯವಿದ್ದರೂ ನಂಬಿಕೆಯಿಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವೇ ಇಲ್ಲ.
     ಅಚಲ ನಂಬಿಕೆ ಬರಬೇಕೆಂದರೆ ನಿಷ್ಠೆ ಇರಬೇಕಾಗುತ್ತದೆ. ನಂಬಿದ ಸತ್ಯದಲ್ಲಿ ನಿಷ್ಠೆ ಹೊಂದಿದವನು ಸತ್ಯದೊಂದಿಗೆ ಒಂದಾಗಿರುತ್ತಾನೆ. ನಿಷ್ಠೆಯಿದ್ದಲ್ಲಿ ಶ್ರದ್ಧೆ ಇರುತ್ತದೆ, ಶ್ರದ್ಧೆ ಇರುವಲ್ಲಿ ಸತ್ಯದೆಡೆಗೆ ಧಾವಿಸುವ ತವಕವಾದ ಮತಿ ಇರುತ್ತದೆ. ಈ ನಿಷ್ಠೆ ಅನ್ನುವುದಾದರೂ ಏನು? ನಿಷ್ಠೆ ಅಂದರೆ ನಂಬಿದ್ದನ್ನು ಹೊರತುಪಡಿಸಿ ಮಿಕ್ಕೆಲ್ಲವನ್ನೂ ಒಪ್ಪದ ಮನೋಸ್ಥಿತಿ ಅನ್ನಬಹುದು. ಮನಸ್ಸು ತಾನು ನಂಬಿದ ಸತ್ಯವನ್ನು ಮಾತ್ರ ಕುರಿತು ಯೋಚಿಸುತ್ತದೆ, ಮತ್ತೇನನ್ನೂ ಯೋಚಿಸುವುದಿಲ್ಲ. ಮನಸ್ಸಿನ ಕ್ರಿಯೆಯೇ ಒಂದು ರೀತಿಯಲ್ಲಿ ಟ್ಯೂನ್ ಮಾಡಿದಂತೆ ಆಗಿಬಿಟ್ಟಿರುತ್ತದೆ. ಅಚಲ ನಂಬಿಕೆ ಇಂತಹ ನಿಷ್ಠೆಯನ್ನು ಸೃಷ್ಟಿಸುತ್ತದೆ.
     ಮುಂದಿನ ಭಾಗದಲ್ಲಿ ಮತ್ತಷ್ಟು ವಿಚಾರಗಳನ್ನು ಗಮನಿಸೋಣ. ಈ ಭಾಗವನ್ನು ಸಂಕ್ಷಿಪ್ತಗೊಳಿಸಿ ಹೇಳಬೇಕೆಂದರೆ: ತನ್ನನ್ನು ತಾನು ಅರಿಯುವ, ಸತ್ಯವನ್ನು ತಿಳಿಯುವ ಬಯಕೆ ನಮ್ಮೊಳಗೆ ಅಂತರ್ಗತವಾಗಿದೆ. ಸತ್ಯ ತಿಳಿಯಬೇಕೆಂಬ ಬಯಕೆ ಇದೆಯೆಂದರೆ ಆ ಸತ್ಯ ಅನ್ನುವುದು ಇದೆ ಎಂದು ಅರ್ಥ. ಇರುವ ಸತ್ಯವನ್ನು ತಿಳಿಯಲು ಮತಿ ಸಹಾಯಕವಾಗುತ್ತದೆ. ಮತಿಗೆ  ಸತ್ಯವಿದೆಯೆಂದು ನಂಬುವ ಶ್ರದ್ಧೆ/ನಂಬಿಕೆ ಸಾಥ್ ನೀಡುತ್ತದೆ. ಶ್ರದ್ಧೆಗೆ ನಿಷ್ಠೆ ಬೆನ್ನೆಲುಬಾಗುತ್ತದೆ. ಪ್ರಾರಂಭದ ವಾಕ್ಯದೊಂದಿಗೇ ಮುಕ್ತಾಯಗೊಳಿಸುವೆ: 'ಸ್ವತಃ ದೇವರೂ ಸಹ ಬದಲಾಯಿಸಲಾಗದಂತಹ ಯಾವುದಾದರೂ ಸಂಗತಿ ಇದ್ದರೆ ಅದು 'ಸತ್ಯ' ಒಂದೇ! ಆ 'ಸತ್ಯ'ವೇ ದೇವರು!!'
-ಕ.ವೆಂ.ನಾಗರಾಜ್.
***************
ದಿನಾಂಕ 13.01.2016ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ: