ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಸೆಪ್ಟೆಂಬರ್ 29, 2015

ಸಾಧನಾ ಸೋಪಾನ - 4: ಇಚ್ಛಾಶಕ್ತಿಯಿರದ ಸೃಷ್ಟಿಯಿಲ್ಲ!


     ಮನಸ್ಸು ಅನ್ನುವುದು ಜ್ಞಾನ ಮತ್ತು ಮಾತಿನ ಕ್ರಿಯೆಗಳಿಗೆ ಮೇಲಿನದೆಂದು ತಿಳಿದೆವು. ನಮ್ಮ ಎಲ್ಲಾ ಭೌತಿಕ ಚಟುವಟಿಕೆಗಳಿಗೆ ಮತ್ತು ಮಾತಿನ ಮೂಲಕ ನಾವು ಹೊರಸೂಸುವ ಎಲ್ಲಾ ಭಾವಗಳಿಗೆ ಮನಸ್ಸೇ ಕಾರಣಕರ್ತವಾಗಿದೆ. ಇಂತಹ ಪ್ರಬಲ ಮನಸ್ಸಿನ ಹಿಂದೆಯೂ ಒಂದು ನಿರ್ದಿಷ್ಟ ಚಿಂತನೆಯ ಚಟುವಟಿಕೆ ಇದ್ದು ಅದು ಮನಸ್ಸನ್ನು ಹಿಡಿದಿಡಬಲ್ಲುದಾಗಿದೆ. ಅದೇ ಇಚ್ಛಾಶಕ್ತಿ! ಸಂಸ್ಕೃತದಲ್ಲಿ ಇದನ್ನು 'ಸಂಕಲ್ಪ' ಎನ್ನುತ್ತಾರೆ. ಈ ಇಚ್ಛಾಶಕ್ತಿ ಅನುಸರಿಸಿ ಮನಸ್ಸು ಕೆಲಸ ಮಾಡುತ್ತದೆ.
     ಪ್ರತಿಯೊಂದು ಸಂಗತಿ/ವಿಷಯದ ಹಿಂದೆ ಒಂದು ನಿರ್ದಿಷ್ಟ ಇಚ್ಛಾಶಕ್ತಿ ಇರುತ್ತದೆ. ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ಭೂಮಿ, ನೀರುಗಳಿಗೂ ತಮ್ಮದೇ ಆದ ಇಚ್ಛಾಶಕ್ತಿ ಇರುತ್ತದೆ. ಅವುಗಳ ಗುಣ, ಸ್ವಭಾವಗಳ ಹಿಂದೆ ಅವುಗಳದೇ ಆದ ಇಚ್ಛಾಶಕ್ತಿ ಅಡಗಿರುತ್ತದೆ. ಅದು ಅವುಗಳ ಗುಣ, ಸ್ವಭಾವ, ಅಸ್ತಿತ್ವಗಳನ್ನು ಉಳಿಸಿಕೊಳ್ಳುವುದಕ್ಕೆ ಕಾರಣವಾಗಿದೆ. ಹಾಗೆ ಇರದಿದ್ದರೆ ಒಂದು ಇನ್ನೊಂದರ ಗುಣಗಳನ್ನು ಅರಗಿಸಿಕೊಂಡು ಎಲ್ಲವೂ ಒಂದೇ ಆಗಿಬಿಡುತ್ತಿದ್ದವು. ಈ ವಿಶ್ವದಲ್ಲಿ ಇಚ್ಛಾಶಕ್ತಿಯಿಲ್ಲದ ಯಾವ ಒಂದು ಸೃಷ್ಟಿಯೂ ಇಲ್ಲ, ಅಣುವೂ ಇಲ್ಲ. ಇದು ವಿಶ್ವಶಕ್ತಿ! ಜೀವಿಗಳೂ ಸಹ ಇಚ್ಛಾಶಕ್ತಿಯಿಂದಲೇ ಅಸ್ತಿತ್ವ ಕಂಡುಕೊಂಡಿವೆ. ನಮ್ಮ ದೇಹರಚನೆ, ಉಸಿರಾಟ, ಹೃದಯದ ಬಡಿತ, ರಕ್ತಪರಿಚಲನೆ ಮುಂತಾದುವುಗಳನ್ನೂ ನಿರ್ದಿಷ್ಟ ಇಚ್ಛಾಶಕ್ತಿ ನಿಯಂತ್ರಿಸುತ್ತಿದೆ.
     ಇಂತಹ ಪ್ರಬಲ ಇಚ್ಛಾಶಕ್ತಿಯಿಂದ ಮನಸ್ಸನ್ನು ನಿಯಂತ್ರಿಸಬಹುದಾಗಿದೆ. ಎಲ್ಲರಿಗೂ ಇಚ್ಛಾಶಕ್ತಿ ಇರುತ್ತದೆ. ಅದನ್ನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆ ಎಂಬುದೇ ಮುಖ್ಯ. ಉತ್ತರಪ್ರದೇಶದ ಅಂಬೇಡ್ಕರ್ ನಗರದ ಅರುಣಿಮಾ ಸಿನ್ಹಾ ಪ್ರಬಲ ಇಚ್ಛಾಶಕ್ತಿಗೆ ಇತ್ತೀಚಿನ ಮಾದರಿಯಾಗಿದ್ದಾಳೆ. ಸಿ.ಐ.ಎಸ್.ಎಫ್ ಪರೀಕ್ಷೆಗೆ ಹೋಗುವ ಸಲುವಾಗಿ ಲಕ್ನೌನಿಂದ ದೆಹಲಿಗೆ ಹೋಗುವ ಪದ್ಮಾವತಿ ಎಕ್ಸ್‌ಪ್ರೆಸ್ ರೈಲಿಗೆ 11.4.2011ರಲ್ಲಿ ಹತ್ತಿ ಕುಳಿತಾಗ ಆಕೆಯ ವಯಸ್ಸು 23 ವರ್ಷಗಳು. ಮಾರ್ಗಮಧ್ಯದಲ್ಲಿ ಕಳ್ಳರು ಆಕೆಯ ಚೀಲ ಮತ್ತು ಸರವನ್ನು ಕಿತ್ತುಕೊಳ್ಳಲು ಬಂದಾಗ ಪ್ರತಿಭಟಿಸಿದ್ದ ಅವಳನ್ನು ಚಲಿಸುತ್ತಿದ್ದ ರೈಲಿನಿಂದ ಅವರು ಹೊರಗೆ ಎಸೆದುಬಿಟ್ಟಿದ್ದರು. ಅದೇ ಸಮಯಕ್ಕೆ ಎದುರಿನಿಂದ ಬರುತ್ತಿದ್ದ ರೈಲಿಗೆ ಸಿಕ್ಕಿ ಅವಳ ಕಾಲು ಜರ್ಜರಿತವಾಗಿತ್ತು. ಪ್ರಜ್ಞೆಯಿಲ್ಲದೆ ಬಿದ್ದಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಅವಳನ್ನು ಆ ಸ್ಥಿತಿಯಲ್ಲಿ ಕಂಡಿದ್ದವರಿಗೆ ಅವಳು ಬದುಕುವ ಬಗ್ಗೆ ಸಂದೇಹವಿತ್ತು. ಜೀವ ಉಳಿಸಲು ಆಸ್ಪತ್ರೆಯಲ್ಲಿ ಆಕೆಯ ಕಾಲನ್ನು ಮೊಳಕಾಲಿನಿಂದ ಕೆಳಕ್ಕೆ ಕತ್ತರಿಸಿದ್ದರು. ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯಾಗಿದ್ದ ಆಕೆಗೆ ಇದರಿಂದ ಆಘಾತವಾಗಿತ್ತು. ಆಕೆಗೆ ಕೇಂದ್ರ ಕ್ರೀಡಾ ಪ್ರಾಧಿಕಾರದಿಂದ ಆರ್ಥಿಕ ನೆರವು ದೊರೆತು. ಖಾಸಗಿ ಕಂಪೆನಿಯೊಂದು ಆಕೆಗೆ ಉಚಿತವಾಗಿ ಕೃತಕ ಕಾಲು ಅಳವಡಿಸಲು ನೆರವಾಯಿತು. ಅಲಹಾಬಾದ್ ಉಚ್ಛನ್ಯಾಯಾಲಯ ರೈಲ್ವೆಯವರು ಆಕೆಗೆ ರೂ.5.00 ಲಕ್ಷ ಪರಿಹಾರಧನ ನೀಡಬೇಕೆಂದು ಆದೇಶಿಸಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಆಕೆ ಎವರೆಸ್ಟ್ ಶಿಖರವನ್ನು ಏರುವ ಕನಸು ಕಂಡದ್ದು. ಕ್ಯಾನ್ಸರ್ ಗೆದ್ದು ಬಂದಿದ್ದ ಕ್ರಿಕೆಟಿಗ ಯುವರಾಜಸಿಂಗನಿಂದ ಆಕೆ 'ಏನನ್ನಾದರೂ ಸಾಧಿಸಬೇಕೆಂದು' ಪ್ರೇರಿತಳಾಗಿದ್ದಳು. ಮೌಂಟನಿಯರಿಂಗ್ ಕೋರ್ಸಿಗೆ ಸೇರಿದ ಅಕೆ ಅದರ ಪ್ರಾಥಮಿಕ ವಿಷಯಗಳಲ್ಲಿ ಅಗ್ರಗಣ್ಯತೆ ಗಳಿಸಿದಳು. ವಡೋದರದ ಸ್ವಾಮಿ ರಾಮಕೃಷ್ಣ ಮಿಶನ್ನಿನ ಸಹಾಯದಿಂದ ಕೃತಕ ಕಾಲಿನಿಂದ ಎವರೆಸ್ಟ್ ಏರುವ ಆಸೆಗೆ ಬೆಂಬಲ ಸಿಕ್ಕಿತು. ಎವರೆಸ್ಟ್ ಏರಿದ ಪ್ರಥಮ ಮಹಿಳೆ ಬಚೇಂದ್ರಿಪಾಲಳಿಂದ ಅಗತ್ಯದ ತರಬೇತಿ ಪಡೆದಳು. ಪೂರ್ವಭಾವಿಯಾಗಿ 6150 ಮೀಟರ್ ಎತ್ತರದ ಐಲೆಂಡ್ ಶಿಖರವನ್ನು 2012ರಲ್ಲಿ ಯಶಸ್ವಿಯಾಗಿ ಏರಿದ್ದಳು. 1.4.2013ರಂದು ಮಾರ್ಗದರ್ಶಿ ಸುಸೇನ್ ಮಹತೋ ಜೊತೆಗೂಡಿ ಎವರೆಸ್ಟ್ ವಿಜಯಕ್ಕೆ ಹೊರಟ ಅರುಣಿಮಾ 51 ದಿನಗಳ ಸತತ ಕಠಿಣ ಪರಿಶ್ರಮದ ನಂತರದಲ್ಲಿ ಯಶಸ್ವಿಯಾಗಿ ಶಿಖರದ ತುತ್ತ ತುದಿಯನ್ನು 21.5.2013ರಂದು ತಲುಪಿಯೇಬಿಟ್ಟಳು! ಶಿಖರವೇರಿದ ಆಕೆ ಒಂದು ಸಂದೇಶವನ್ನು ಬರೆದು ಬಟ್ಟೆಯಲ್ಲಿ ಸುತ್ತಿ ಹಿಮದಲ್ಲಿ ಹೂತಿಟ್ಟಳು. ಆಕೆಯೇ ಹೇಳಿದಂತೆ ಅದು, "ಶಂಕರ ಭಗವಾನ್ ಮತ್ತು ಜೀವನದುದ್ದಕ್ಕೂ ತನಗೆ ಚೈತನ್ಯದಾಯೆನಿಸಿದ್ದ ಸ್ವಾಮಿ ವಿವೇಕಾನಂದರಿಗೆ ಸಲ್ಲಿಸಿದ ಕೃತಜ್ಞತೆಯಾಗಿತ್ತು". ಕೈಕಾಲುಗಳು ಗಟ್ಟಿಯಾಗಿರುವವರಿಗೇ ಕಷ್ಟವೆನಿಸುವ ಆ ಕೆಲಸ ಆಕೆಗೆ ಸಾಧ್ಯವಾಗಿಸಿದ್ದು ಆಕೆಯ ಇಚ್ಛಾಶಕ್ತಿ!
     ನಮ್ಮ ಕನಸುಗಳನ್ನು ಜೀವಂತವಾಗಿರಿಸಿಕೊಳ್ಳಬೇಕು. ಅದಕ್ಕಾಗಿ ನಮ್ಮ ಬಗ್ಗೆಯೇ ನಮಗೆ ನಂಬಿಕೆ ಮತ್ತು ವಿಶ್ವಾಸಗಳಿರಬೇಕು. ದೂರದೃಷ್ಟಿ, ಕಠಿಣ ಶ್ರಮ, ಧೃಢ ನಿರ್ಧಾರ ಮತ್ತು ಅದಕ್ಕೋಸ್ಕರ ಅರ್ಪಣಾ ಮನೋಭಾವಗಳಿದ್ದರೆ ಎಂತಹುದನ್ನಾದರೂ ಸಾಧಿಸಬಹುದು ಎಂಬುದಕ್ಕೆ ನೂರಾರು ನಿದರ್ಶನಗಳು ಸಿಗುತ್ತವೆ. ಹಿಂದೆ ಆಗಿಹೋದ ಹಲವಾರು ಸಾಧು-ಸಂತರು, ಸಾಧಕರುಗಳು, ವಿವಿಧ ಕ್ಷೇತ್ರಗಳಲ್ಲಿ ಉತ್ತುಂಗ ಸಾಧನೆಗಳನ್ನು ಮಾಡಿದವರು, ಮಾಡುತ್ತಿರುವವರನ್ನು ಕಾಣುತ್ತಿರುತ್ತೇವೆ. ದೌರ್ಭಾಗ್ಯವೆಂದರೆ ಅಂತಹ ಸಾಧಕರುಗಳನ್ನು ದೇವರುಗಳಂತೆ ಕಂಡು ಗುಡಿ ಕಟ್ಟಿ ಪೂಜಿಸಿ ಧನ್ಯರಾದೆವೆಂದುಕೊಂಡುಬಿಡುತ್ತೇವೆ. ಅವರುಗಳಿಗೆ ನಾವು ಸಲ್ಲಿಸಬಹುದಾದ ನಿಜವಾದ ಗೌರವವೆಂದರೆ ಅವರುಗಳು ತೋರಿದ ಹಾದಿಯಲ್ಲಿ ನಡೆದು ನಾವುಗಳೂ ಸಹ ಅಂತಹ ಸಾಧನಾ ಪರಂಪರೆ ಮುಂದುವರೆಸುವುದು. ಪ್ರತಿಯೊಂದು ಸಾಧನೆಯೂ ಸುಮ್ಮನೆ ಆದುದಲ್ಲ. ಪ್ರಯತ್ನಿಸುವ ನಿರ್ಧಾರದಿಂದ ಆ ಸಾಧನೆ ಆರಂಭವಾಗುತ್ತದೆ ಅಷ್ಟೆ. ಸಾವಿರ ಮೈಲುಗಳ ಪ್ರಯಾಣ ಆರಂಭವಾಗುವುದೂ ನಾವಿಡುವ ಮೊದಲ ಸಣ್ಣ ಹೆಜ್ಜೆಯಿಂದಲೇ! ಆ ಹೆಜ್ಜೆಯಿಡಲು ಬೇಕಿರುವುದು ಇಚ್ಛಾಶಕ್ತಿ! ವಿವೇಕಾನಂದರ ವಾಣಿಯಿದು: "ಧೃಢನಿರ್ಧಾರದ ಒಬ್ಬ ವ್ಯಕ್ತಿ ಬದಲಾವಣೆ ತರಬಲ್ಲ; ಧೃಢ ನಿರ್ಧಾರ ಹೊಂದಿದ ಸಣ್ಣ ಜನರ ಗುಂಪು ಇತಿಹಾಸದ ಗತಿಯನ್ನೇ ಬದಲಾಯಿಸಬಲ್ಲದು!"
     ಇಚ್ಛಾಶಕ್ತಿಯನ್ನು ಹೊಸದಾಗಿ ಗಳಿಸಿಕೊಳ್ಳಬೇಕಿಲ್ಲ, ನಮ್ಮೊಳಗೆಯೇ ಇರುವ ಅದನ್ನು ಉಪಯೋಗಿಸಿಕೊಳ್ಳಬೇಕಷ್ಟೆ. ಕುಡಿಯುವುದು ಕೆಟ್ಟದ್ದು, ಸಿಗರೇಟು ಸೇದುವುದರಿಂದ ನಮ್ಮ ಆರೋಗ್ಯದ ಜೊತೆಗೆ ಇತರರ ಆರೋಗ್ಯವೂ ಹಾಳಾಗುತ್ತದೆ ಎಂಬುದು ಕುಡಿಯುವವರಿಗೂ ಗೊತ್ತು, ಧೂಮಪಾನಿಗಳಿಗೂ ಗೊತ್ತು. ಆದರೂ ಅವರು ಕುಡಿಯುತ್ತಾರೆ, ಸಿಗರೇಟು ಸೇದುತ್ತಾರೆ. ಏಕೆಂದರೆ ಇಚ್ಛಾಶಕ್ತಿಯನ್ನು ಉಪಯೋಗಿಸಿಕೊಳ್ಳಲು ಅವರ ಮನಸ್ಸು ಬಿಡುವುದಿಲ್ಲ. ಮಧುಮೇಹದಿಂದ ನರಳುತ್ತಿರುವವನ ಮನಸ್ಸು 'ಇದೊಂದು ಸಲ ಹೋಳಿಗೆ ತಿಂದುಬಿಡು, ಒಂದು ಮಾತ್ರೆ ಜಾಸ್ತಿ ತೆಗೆದುಕೊಂಡರಾಯಿತು' ಎಂದು ಪುಸಲಾಯಿಸುತ್ತದೆ. ಚಂಚಲ ಮನಸ್ಸಿಗೆ ಕಡಿವಾಣ ಹಾಕಬೇಕೆಂದರೆ ನಮ್ಮ ಅಂತರಂಗದ ಧ್ವನಿಗೆ ಕಿವಿಗೊಡಲೇಬೇಕು.
     ಮನಸ್ಸಿನ ನಿಯಂತ್ರಣಕ್ಕೆ ಮತ್ತು ಇಚ್ಛಾಶಕ್ತಿಯ ಉಪಯೋಗಕ್ಕೆ ಕೆಲವು ಆಂತರಿಕ ಮತ್ತು ಬಾಹ್ಯ ಆಚರಣೆಗಳು ನೆರವಾಗುತ್ತವೆ. ಯಾವುದಾದರೂ ಶುಭ ಕಾರ್ಯ ಮಾಡುವ ಮುನ್ನ ಸಂಕಲ್ಪ ಮಾಡುವ, ಕಂಕಣ ಕಟ್ಟಿಕೊಳ್ಳುವ ಸಂಪ್ರದಾಯವಿದೆ. ನಾವು ಮಾಡುವ ಈ ಕೆಲಸದಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ನಿಶ್ಚಯದಿಂದ ಆ ಕೆಲಸ ಮುಗಿಯುವವರೆಗೂ ಶ್ರದ್ಧೆಯಿಂದ ಮಾಡುವವರು ಇರುತ್ತಾರೆ. ಅಂತಹ ಕೆಲಸಗಳಿಂದ ಮನಸ್ಸಿಗೆ ನೆಮ್ಮದಿ, ಸಂತೋಷವೂ ಸಿಗುತ್ತದೆ. ಸ್ವಾಮಿ ಅಯ್ಯಪ್ಪನ ದರ್ಶನ ಮತ್ತು ಪೂಜೆಯ ಸಲುವಾಗಿ ಮಾಲೆ ಧರಿಸುವವರ ನಡವಳಿಕೆಗಳನ್ನು ನಾವು ಕಂಡಿರುತ್ತೇವೆ ಅಲ್ಲವೇ? ಅವರು ವ್ರತದಲ್ಲಿರುವ ಅವಧಿಯಲ್ಲಿ ಅವರು ಎಲ್ಲರನ್ನೂ 'ಸ್ವಾಮಿ' ಎಂದೇ ಸಂಬೋಧಿಸುತ್ತಾರೆ, ಸ್ತ್ರೀ ಸಂಗ ಮಾಡುವುದಿಲ್ಲ, ಯಾರ ಮೇಲೂ ಸಿಟ್ಟಿಗೇಳುವುದಿಲ್ಲ, ಕುಡಿಯುವ, ಮಾಂಸ ತಿನ್ನುವ ಅಭ್ಯಾಸವಿರುವವರು ಆ ಅವಧಿಯಲ್ಲಿ ಅವನ್ನೆಲ್ಲಾ ವರ್ಜಿಸುತ್ತಾರೆ. ಇದನ್ನೆಲ್ಲಾ ಅವರುಗಳು ಮಾಡುವುದು ಅವರ 'ಸಂಕಲ್ಪ'ದ/ಇಚ್ಛಾಶಕ್ತಿಯ ಕಾರಣದಿಂದ! ಇಂತಹ ಒಳ್ಳೆಯ ನಿರ್ಧಾರಗಳನ್ನು ಮುಂದುವರೆಸಲು ಅವಕಾಶವಿದೆ ಅಲ್ಲವೇ? ಭಜನೆ, ಪೂಜೆ, ಪುನಸ್ಕಾರ, ಇತ್ಯಾದಿಗಳು ಮನಸ್ಸನ್ನು ನಿಯಂತ್ರಿಸಲು, ಶಾಂತಗೊಳಿಸಲು ಪೂರಕ ಸಹಕಾರ ಕೊಡುತ್ತವೆ. ಸಜ್ಜನರ ಸಹವಾಸ, ಗುರು-ಹಿರಿಯರ ಮಾರ್ಗದರ್ಶನಗಳು, ಸಂಸ್ಕಾರಯುತ ನಡವಳಿಕೆಗಳು, ಸುಯೋಗ್ಯ ಶಿಕ್ಷಣ, ಉತ್ತಮ ವೃತ್ತಿ, ಪ್ರವೃತ್ತಿಗಳು ಸಹ ಹುಚ್ಚು ಕುದುರೆಯಂತೆ ಓಡುವ ಮನಸ್ಸಿಗೆ ಕಡಿವಾಣ ಹಾಕಲು ಸಹಕಾರಿ. ನಿಯಮಿತವಾದ ಒಳ್ಳೆಯ ಅಭ್ಯಾಸಗಳು- ಪ್ರತಿನಿತ್ಯ ವಾಕಿಂಗ್ ಮಾಡುವುದು, ವ್ಯಾಯಾಮ, ಯೋಗಾಭ್ಯಾಸ, ಇತ್ಯಾದಿಗಳಲ್ಲಿ ತೊಡಗುವುದು, ಉತ್ತಮ ಸಾಹಿತ್ಯವನ್ನು ಓದಲು ಸಮಯ ಮಾಡಿಕೊಳ್ಳುವುದು, ಆರೋಗ್ಯಕರವಾದ ಆಹಾರ ಸೇವನೆ, ಇತ್ಯಾದಿಗಳೂ ಸಹ ಮನಸ್ಸನ್ನು ಹಿಡಿತದಲ್ಲಿಡಲು ಉಪಯೋಗಕಾರಿ. ಹಿಡಿತದಲ್ಲಿರುವ ಮನಸ್ಸಿಗೆ ಇಚ್ಛಾಶಕ್ತಿಯ ಆದೇಶವನ್ನು ಪಾಲಿಸುವ ಮನಸ್ಸು ಬರುತ್ತದೆ.
     "ಯಶಸ್ಸು ಮುಕ್ತಾಯವಲ್ಲ, ಸೋಲು ಹೀನಾಯವಲ್ಲ; ಆದರೆ ಸತತ ಪ್ರಯತ್ನ ಮಾಡುತ್ತಿರುವುದು ಮಾತ್ರ ಲೆಕ್ಕಕ್ಕೆ ಬರುತ್ತದೆ! ಗೆಲ್ಲಬೇಕೆಂಬ ಇಚ್ಛಾಶಕ್ತಿ ಪ್ರಬಲವಾಗಿದ್ದರೆ ಸೋಲು ಅದನ್ನು ಹಿಮ್ಮೆಟ್ಟಿಸಲಾರದು. ಅಸಾಧ್ಯ ಮತ್ತು ಸಾಧ್ಯಗಳ ನಡುವಣ ವ್ಯತ್ಯಾಸ ಇಚ್ಛಾಶಕ್ತಿಯಲ್ಲಿದೆ. ಗೆಲ್ಲುವ ಧೃಢನಿರ್ಧಾರ ಗೆಲ್ಲುವುದಕ್ಕಿಂತಲೂ ದೊಡ್ಡದು. ಸೋಲಿಗೆ ನಿಜವಾದ ಕಾರಣವೆಂದರೆ ಇಚ್ಛಾಶಕ್ತಿಯ ಕೊರತೆಯಷ್ಟೆ."
     ಇಚ್ಛಾಶಕ್ತಿರುವ ವ್ಯಕ್ತಿ ಹೇಗೆ ಯೋಚಿಸುತ್ತಾನೆ, ಗೊತ್ತೇ? ಆರ್ಕಿಮಿಡಿಸ್ ಹೇಳುತ್ತಿದ್ದ ಮಾತು ಇದು: 'ನನಗೆ ಒಂದು ದೊಡ್ಡ ಮೀಟುಕೋಲು ಮತ್ತು ಅದನ್ನು ಸನ್ನೆಯಂತೆ ಬಳಸಲು ಒಂದು ಕಲ್ಲು ಹಾಗೂ ನಿಲ್ಲಲು ಸರಿಯಾದ ಸ್ಥಳ ಸಿಕ್ಕರೆ ಪ್ರಪಂಚವನ್ನೇ ಮೀಟುವೆ." ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಸ್ಪರ್ಧಿಗಳು ಗೆಲ್ಲುವ ಪದಕಗಳು ಚಿನ್ನದ್ದಿರಬಹುದು, ಆದರೆ ಅವುಗಳು ನಿಜವಾಗಿಯೂ ಚಿನ್ನದ್ದಲ್ಲ, ಸ್ಪರ್ಧಿಗಳ ಬೆವರು, ಧೃಢನಿರ್ಧಾರ ಮತ್ತು ಅದಮ್ಯ ಶಕ್ತಿಗಳಿಂದ ಕೂಡಿದ್ದಾಗಿರುತ್ತವೆ. ರಾಹುಲ್ ದ್ರಾವಿಡರ ಈ ಮಾತು ಮನನೀಯ: "ನಾವು ಕೌಶಲ್ಯವನ್ನು ತಪ್ಪಾಗಿ ಅರ್ಥೈಸುತ್ತೇವೆ. ನಾನೂ ಸಹ ಆ ತಪ್ಪು ಮಾಡಿದ್ದೇನೆ. ಕ್ರಿಕೆಟ್ ಚೆಂಡನ್ನು ಹೊಡೆಯುವ ರೀತಿ, ಹೊಡೆಯುವ ಆ ಸರಿಯಾದ ಸಮಯಗಳನ್ನು ಕೌಶಲ್ಯವಾಗಿ ಕಾಣುತ್ತೇವೆ. ಆದರೆ ಅದರ ಹಿಂದಿನ ಧೃಢನಿರ್ಧಾರ, ಧೈರ್ಯ, ಶಿಸ್ತು, ಮನೋಭಾವ, ಇತ್ಯಾದಿಗಳೂ ಕೌಶಲ್ಯಗಳಾಗಿವೆ." ದ್ರಾವಿಡರ ಆ ಇಚ್ಛಾಶಕ್ತಿಯೇ ಅವರನ್ನು ಬೌಲರುಗಳು ಬೀಳಿಸಲಾಗದ 'ಗೋಡೆ'ಯಾಗಿ ಅವರನ್ನು ರೂಪಿಸಿದ್ದು, ಭಾರತವನ್ನು ಅನೇಕ ಸಂದರ್ಭಗಳಲ್ಲಿ ಸಂಕಷ್ಟದ ಸ್ಥಿತಿಯಿಂದ ಪಾರು ಮಾಡಿದ್ದು! ನಾವೂ ಸಹ ನಮ್ಮೊಳಗೇ ಇರುವ ಇಚ್ಛಾಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನಿರ್ಧರಿಸಿಕೊಳ್ಳಬಹುದಲ್ಲವೇ?
-ಕ.ವೆಂ.ನಾಗರಾಜ್.
***************
ದಿನಾಂಕ 16-09-2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಸೋಮವಾರ, ಸೆಪ್ಟೆಂಬರ್ 14, 2015

ಸಾಧನಾ ಸೋಪಾನ -3: ಮನಸ್ಸಿನ ಶಕ್ತಿ


     ಜ್ಞಾನ ದೊಡ್ಡದು, ಜ್ಞಾನಕ್ಕೆ ಆಧಾರವಾದ ಮಾತು ಅದಕ್ಕಿಂತ ದೊಡ್ಡದು ಎಂಬ ಬಗ್ಗೆ ತಿಳಿದುಕೊಂಡೆವು. ಈ ಜ್ಞಾನ ಮತ್ತು ಮಾತುಗಳಿಗೂ ಒಬ್ಬ ಯಜಮಾನನಿದ್ದಾನೆ. ಅವನೇ ಮನಸ್ಸು! ಭಾಷೆಯ ಮೂಲಕ ಮೂಡುವ ಎಲ್ಲಾ ಅಭಿವ್ಯಕ್ತಿಗಳು ಮನಸ್ಸಿನಿಂದಲೇ ನಿಯಂತ್ರಿತವಾದವು. ಮನಸ್ಸು ನಿಷ್ಕ್ರಿಯವಾಗಿದ್ದರೆ, ಮಾತೂ ಇಲ್ಲ, ಜ್ಞಾನವೂ ಸೊನ್ನೆ. ಆದ್ದರಿಂದ ಮನಸ್ಸು ಈ ಎರಡಕ್ಕಿಂತಲೂ ದೊಡ್ಡದಾಗಿದೆ. ಮನಸ್ಸಿನಲ್ಲಿ ಜ್ಞಾನವೂ ಇದೆ, ಮಾತೂ ಇದೆ. ಇದೇ ಮನಸ್ಸಿನ ಶಕ್ತಿ. ನಾವು ಏನನ್ನೇ ಮಾಡಲಿ, ಏನನ್ನೇ ಮಾತನಾಡಲಿ, ಮೊದಲು ಮನಸ್ಸು ಅದನ್ನು ನಿರ್ಧರಿಸುತ್ತದೆ. ನಾವು, "ಹೀಗೆ ಮಾಡೋಣ, ಹಾಗೆ ಮಾಡೋಣ" ಎಂದು ಮೊದಲು ಅಂದುಕೊಳ್ಳುತ್ತೇವೆ, ನಂತರ ಮಾಡಲು ಹೊರಡುತ್ತೇವೆ, ಮಾಡುತ್ತೇವೆ.
     ಜೀವನದಲ್ಲಿ ಮನಸ್ಸು ಪ್ರಧಾನವಾದದ್ದು, ಇದು ಎಲ್ಲರಿಗೂ ತಿಳಿದದ್ದೇ. ವ್ಯಾವಹಾರಿಕವಾಗಿ ಹೇಳಬೇಕೆಂದರೆ ನಾವು ಅಂದರೆ ನಮ್ಮ ಮನಸ್ಸೇ ಆಗಿದೆ. 'ನಾನು' ಅನ್ನುತ್ತೇವೆ. ಈ 'ನಾನು' ಅಂದರೆ ಯಾರು? ಈ 'ನಾನು' ಎಂದರೆ ಮನಸ್ಸು ಬಿಟ್ಟು ಮತ್ತೇನೂ ಅಲ್ಲವೆಂದು ಅಂದುಕೊಳ್ಳುತ್ತೇವೆ. ಹಾಗಾದರೆ ಈ ಮನಸ್ಸು ನಮ್ಮತನವನ್ನು ಹೊಂದಿದೆ. 'ನಾನು' ಎಂದರೆ ಮನಸ್ಸಲ್ಲವೆಂಬುದು ತರ್ಕಿಸಿದಾಗ ಗೊತ್ತಾಗುತ್ತಾ ಹೋಗುತ್ತದೆ. ಕನ್ನಡಿ ಬೆಳಕನ್ನು ಪ್ರತಿಫಲಿಸಿದಂತೆ ಮನಸ್ಸು ಆತ್ಮನನ್ನು ಪ್ರತಿಫಲಿಸುತ್ತಿದೆಯಷ್ಟೆ. ಆದ್ದರಿಂದ ವ್ಯಾವಹಾರಿಕ ಉದ್ದೇಶಗಳಿಗೆ ಮನಸ್ಸು ಎಂದರೆ ಆತ್ಮ ಅರ್ಥಾತ್ 'ನಾನು' ಆಗಿರುತ್ತದೆ. ಈ ಪ್ರಪಂಚದಲ್ಲಿ ನಾವು ಏನು ಸಾಧಿಸುತ್ತೇವೆಯೋ ಅದೆಲ್ಲದಕ್ಕೂ ಮನಸ್ಸೇ ಕಾರಣವಾಗಿದೆ, ಏಕೆಂದರೆ ಪ್ರಪಂಚವೆಂದರೆ ನಮ್ಮ ಅನುಭವಕ್ಕೆ ಏನು ಬರುತ್ತದೆಯೋ ಅದೇ ಆಗಿದೆ. ನಮ್ಮ ಜೀವನದಲ್ಲಿ ಗಳಿಸುವ ಅನುಭವಗಳೆಲ್ಲವೂ ನಮ್ಮ ಕ್ರಿಯೆಗಳ ಕಾರಣಗಳಿಂದಲೇ ಬಂದಿದೆ ಮತ್ತು ಆ ಕ್ರಿಯೆಗಳ ಹಿಂದೆ ಅವನ್ನು ಮಾಡಿಸಿದ ಮನಸ್ಸು ಕೆಲಸ ಮಾಡಿದೆ. ಆದ್ದರಿಂದ ನಮ್ಮ ಅನುಭವಗಳು, ಎಲ್ಲಾ ಕಾರ್ಯಗಳು ನಿಯಂತ್ರಿಸಲ್ಪಟ್ಟಿರುವುದು ಮನಸ್ಸಿನಿಂದಲೇ ಆಗಿದೆ. ಆದ್ದರಿಂದ ಒಂದು ಅರ್ಥದಲ್ಲಿ ಮನಸ್ಸೇ ಪ್ರಪಂಚವಾಗಿದೆ.
     ಧ್ಯಾನದಲ್ಲಿ ಮನಸ್ಸು ಪ್ರಧಾನ ಪಾತ್ರ ವಹಿಸುತ್ತದೆ. ಮನಸ್ಸು ಏನನ್ನು ಚಿಂತಿಸಲು ಸಾಧ್ಯವೋ ಅಷ್ಟನ್ನು ಧ್ಯಾನದ ಮಿತಿಯಲ್ಲಿ ತರಲು ಸಾಧ್ಯ. ಸಾಮಾನ್ಯರಾದ ನಾವುಗಳು ಧ್ಯಾನದಲ್ಲಿ ತಲುಪಬಹುದಾದ ಅಂತಿಮ ಘಟ್ಟ ಇದು. ಮನಸ್ಸಿನ ಚಿಂತನಾಧಾಟಿಯನ್ನು ಮೀರಿ ಏನು ಮಾಡಲಾದೀತು? ಆದ್ದರಿಂದ ಮನಸ್ಸಿನ ಎಲ್ಲಾ ಸಾಧ್ಯತೆಗಳನ್ನು ಒಟ್ಟುಗೂಡಿಸಿ ಕಲಾತ್ಮಕವಾಗಿ, ಸುಂದರವಾಗಿ, ನಮ್ಮ ತಿಳುವಳಿಕೆಯ ಮಟ್ಟಕ್ಕೆ ಪರಿಪೂರ್ಣ ಅನ್ನುವ ಒಂದು ನಿರ್ದಿಷ್ಟ ರೀತಿಗೆ ತಂದುಕೊಂಡಲ್ಲಿ 'ಪರಿಪೂರ್ಣ' ಅನ್ನುವುದರ ಕಲ್ಪನೆ ನಮಗೆ ಬಂದೀತು! ಯಾವುದೇ ಸಂಗತಿಯಿರಲಿ, ವಿಚಾರವಿರಲಿ, ಅದರ ಪರಿಪೂರ್ಣತೆಯ ಹಂತಕ್ಕೆ ಮನಸ್ಸನ್ನು ಕರೆದೊಯ್ಯಬೇಕು. ಮನಸ್ಸು ಚಂಚಲಗೊಳ್ಳಲು ಕಾರಣವೆಂದರೆ ನಾವು ಏನನ್ನು ಧ್ಯಾನಿಸುತ್ತಿರುತ್ತೇವೆಯೋ ಅದಕ್ಕಿಂತ ಹೊರತಾಗಿ, ಅದಕ್ಕಿಂತ ಮೇಲಿನದು ಮತ್ತೇನೋ ಇದೆಯೆಂಬ ಸೂಕ್ಷ್ಮ ಭಾವನೆ ಬರುವುದೇ ಆಗಿದೆ. ಮನಸ್ಸನ್ನು ಧ್ಯಾನದಲ್ಲಿ ಕೇಂದ್ರೀಕರಿಸಲು ಮನಸ್ಸು ಚಿಂತಿಸಲು ಸಾಧ್ಯವಿರುವ ಪ್ರತಿಯೊಂದು ಒಳ್ಳೆಯ ವಿಚಾರಗಳನ್ನು ಒಳಗೊಂಡಂತೆ ಇರುವಂತಹ ಸಂಗತಿಯಾದರೆ ಉತ್ತಮವಾಗಿರುತ್ತದೆ.
     'ನಾನು' ಅಂದರೆ ಮನಸ್ಸು ಎಂದು ಅಂದುಕೊಂಡರೆ ನಾವು ಮನಸ್ಸಿನ ಯಜಮಾನರಾಗಿರಬೇಕು. ಆದರೆ ಹಾಗೆ ಇದೆಯೇ? ಮನಸ್ಸು ವಿವಿಧ ದಿಕ್ಕುಗಳಲ್ಲಿ ಹೊಯ್ದಾಡುತ್ತಲೇ ಇರುತ್ತದೆ. ಮನಸೆಂಬ ಗಾಳಿ ಬೀಸಿದೆಡೆಗೆ ನಾವು ಹೋಗುತ್ತಿರುತ್ತೇವೆ. ಮನಸ್ಸು ನಮ್ಮ ಯಜಮಾನನಂತೆ ವರ್ತಿಸುತ್ತದೆ. ಆದ್ದರಿಂದ ಮನಸ್ಸು ಅನ್ನುವುದು 'ನಾನು' ಹೇಳಿದಂತೆ ಕೇಳದಿದ್ದಾಗ, ಮನಸ್ಸು ಅನ್ನುವುದು ನಮ್ಮ ನಿಜವಾದ 'ನಾನು' ಅಥವ ಆತ್ಮ ಆಗಲಾರದು. ಧ್ಯಾನ ಅನ್ನುವುದು ಈ 'ನಾನು' ಮತ್ತು ಮನಸ್ಸನ್ನು ಒಟ್ಟುಗೂಡಿಸಿ ಮನಸ್ಸನ್ನು ನಿಯಂತ್ರಿಸಲು ಇರುವ ಸಾಧನವಾಗಿದೆ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ನಾವು ಯಜಮಾನರೆನಿಸಿಕೊಳ್ಳಬೇಕೆಂದರೆ ಅದರ ಮೇಲೆ ನಮ್ಮ ನಿಯಂತ್ರಣವಿರಬೇಕು. ಮನಸ್ಸನ್ನು ನಿಯಂತ್ರಿಸಿ ಅದನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದಾದ ಸಾಧನವೆಂದರೆ ಧ್ಯಾನವೇ ಆಗಿದೆ.
     ಮನಸ್ಸಿನ ಚಂಚಲತೆ ಕುರಿತು ಈ ಉದಾಹರಣೆಯನ್ನು ಒಮ್ಮೆ ಹೇಳಿದ್ದೆ. ಪ್ರಸ್ತುತವೆನಿಸಿರುವುದರಿಂದ ಮತ್ತೆ ಉಲ್ಲೇಖಿಸುವೆ. ಕುಡಿಯುವುದು ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಕುಡುಕನ ಮನಸ್ಸೂ ಹೇಳುತ್ತದೆ, 'ಬೇಡ, ಕುಡಿಯಬೇಡ, ಒಳ್ಳೆಯದಲ್ಲ' ಅಂತ. ಆದರೆ, 'ಜೀವನದ ಅವಧಿ ಕಡಿಮೆ. ಇರುವಷ್ಟು ದಿನ ಮಜಾ ಮಾಡಿ, ಖುಷಿಪಟ್ಟು ಹೋಗೋಣ' ಎಂದು ಉಪದೇಶಿಸುವ ಅದೇ ಮನಸ್ಸು 'ಕುಡಿ, ಮಜಾ ಮಾಡು. ನಿನಗೆ ಅದರಿಂದ ಸಂತೋಷ ಸಿಗುವುದಾದರೆ ಅದನ್ನು ಏಕೆ ಕಳೆದುಕೊಳ್ಳುತ್ತೀಯೆ' ಎಂದು ಪ್ರಚೋದಿಸುತ್ತದೆ. ಹಾಗೂ ಡೋಲಾಯಮಾನ ಸ್ಥಿತಿ ಮುಂದುವರೆದರೆ,  ಮಧ್ಯಮ ಮಾರ್ಗ ಸೂಚಿಸಿ ಹೇಳುತ್ತದೆ: 'ಇದೊಂದು ಸಲ ಕುಡಿದು ಬಿಡು, ಆಮೇಲೆ ಕುಡಿಯದಿದ್ದರಾಯಿತು.' ಕೊನೆಗೆ ಅವನು ಯೋಚನೆ ಮುಂದುವರೆಸಿದ್ದಂತೆಯೇ ಅವನ ಕಾಲುಗಳು ಬಾರಿನ ಹಾದಿ ಹಿಡಿದಿರುತ್ತವೆ.
     'ಯಾರು ಏನೇ ಅನ್ನಲಿ, ನನ್ನ ಮನಸ್ಸು ಒಪ್ಪಿದಂತೆ ಮಾಡುತ್ತೇನೆ, ಅದರಿಂದ ನನಗೆ ಸಂತೋಷವಾಗುತ್ತದೆ' ಎಂದು ಸಮರ್ಥಿಸಿಕೊಳ್ಳುತ್ತೇವೆ. ಖ ಅಂದರೆ ಇಂದ್ರಿಯ, ಸು-ಖ ಅಂದರೆ,  ಯಾವುದು ಇಂದ್ರಿಯಕ್ಕೆ ಒಳ್ಳೆಯದಾಗಿ ಕಾಣುತ್ತೋ ಅದು ಸುಖ, ದುಃ-ಖ ಅಂದರೆ, ಯಾವುದು ಇಂದ್ರಿಯಕ್ಕೆ ಕೆಟ್ಟದಾಗಿ ಕಾಣುತ್ತೋ ಅದು ದುಃಖ. ವಾಸ್ತವವಾಗಿ ಆಲೋಚನೆ ಮಾಡಿ ನೋಡಿದರೆ, ನಾವು ಸುಖ ಎಂದು ತಿಳಿದುಕೊಂಡಿರುವುದು ದುಃಖವೇ ಆಗಿರಬಹುದು, ದುಃಖ ಎಂದು ತಿಳಿದುಕೊಂಡಿರುವುದು ಸುಖವೇ ಆಗಿರಬಹುದು, ತತ್ಕಾಲಕ್ಕೆ ಸಂತೋಷವಾಯಿತು ಅನ್ನಿಸುವ ಕ್ರಿಯೆಗಳು ನಂತರ ಮನಃಕ್ಲೇಷಕ್ಕೆ ಈಡು ಮಾಡಬಹುದು. ಈಗ ಕಷ್ಟ ಅನ್ನಿಸುವ ಸಂಗತಿಗಳು ನಂತರದಲ್ಲಿ ಸಂತೋಷ ಕೊಡುವುದೂ ಇದೆ. ಇಂದ್ರಿಯಗಳು ಆರೋಗ್ಯವಾಗಿದ್ದರೆ ಸುಖ, ದುಃಖ ನಮಗೆ ಗೊತ್ತಾಗೋದು. ಒಂದೇ ಮನಸ್ಸು ಹಲವು ರೀತಿಗಳಲ್ಲಿ ಹೇಳುತ್ತದೆ. ಮನಸ್ಸು ಹೇಳಿದಂತೆ ಕೇಳಿದರೆ ಒಳ್ಳೆಯದೂ ಆಗಬಹುದು, ಕೆಟ್ಟದೂ ಆಗಬಹುದು.
     ನಿದ್ದೆ ಮಾಡಿದಾಗ ಆ ಮನಸ್ಸು ಎಲ್ಲಿರುತ್ತದೆ? ಮನಸ್ಸು ಅಂತಿರಲಿ, ನಾವೇ ಇರುವುದಿಲ್ಲ. ನಿದ್ದೆಯಲ್ಲಿ 'ನಾನು' ಇಲ್ಲ, ಜಗತ್ತೂ ಇಲ್ಲ, ದೇವರೂ ಇಲ್ಲ, ಯಾರೂ ಇಲ್ಲ. ಏನೂ ಇಲ್ಲ, ಶೂನ್ಯ. ಆಗ ಸುಖವೂ ಇಲ್ಲ, ದುಃಖವೂ ಇಲ್ಲ. ವಿಚಾರಗಳ ಗೊಂದಲವಿಲ್ಲ. ದ್ವೈತ, ಅದ್ವೈತ, ತ್ರೈತ, ಇತ್ಯಾದಿ ಯಾವ 'ತ'ಗಳೂ ಇಲ್ಲ. ಧರ್ಮಗಳಿಲ್ಲ, ಜಾತಿ, ಮತ, ಪಂಗಡಗಳಿಲ್ಲ. ಅದೇ ಎಚ್ಚರವಾದ ತಕ್ಷಣ, ಮೊದಲು 'ನಾನು' ಏಳುತ್ತದೆ. ಆ 'ನಾನು'ಗೆ ಜಗತ್ತು ಕಾಣುತ್ತದೆ, ಇದಕ್ಕೆಲ್ಲಾ ಕಾರಣನಾದ 'ಅವನು' ಇದ್ದಾನೆ ಅನ್ನುತ್ತದೆ. ಅಂದರೆ ನಾನು ಬೇರೆ, ಜಗತ್ತು ಬೇರೆ, ದೇವರು ಬೇರೆ ಎಂದು ಅಂದುಕೊಳ್ಳುತ್ತದೆ. ನಿದ್ದೆಯಲ್ಲಿ ಇರದ ಸಂಗತಿಗಳು, ಎಚ್ಚರವಾದಾಗ ಬರುತ್ತವೆ. ನಾನು ತಹಸೀಲ್ದಾರ್, ನಾನು ಇಂಜನಿಯರ್, ನಾನು ಪ್ರಧಾನ ಮಂತ್ರಿ ಅನ್ನುವುದೆಲ್ಲಾ ಹುಟ್ಟುವುದು ಎಚ್ಚರವಾದಾಗ ಮಾತ್ರ, ನಿದ್ದೆಯಲ್ಲಿ ಅವು ಯಾವುವೂ ಇರುವುದಿಲ್ಲ. ಮನಸ್ಸಿನ ಮೇಲೆ ಮಾಯಾ ಮೋಹಿನಿ ಆಡುವ ಆಟಗಳಿವು.
     ಹೀಗಿರುವಾಗ ದೇವರು ಮನುಷ್ಯನಿಗೆ ಕೊಟ್ಟಿರುವ ವಿವೇಚನಾ ಶಕ್ತಿಯನ್ನು ಬಳಸಿಕೊಂಡು ಸರಿ-ತಪ್ಪುಗಳ ಸರಿಯಾದ ವಿಶ್ಲೇಷಣೆ ಮಾಡಿ ಮುನ್ನಡೆಯುವುದು ಸೂಕ್ತ. ಮನಸ್ಸಿನಲ್ಲಿ ದ್ವಂದ್ವವಿದ್ದು, ವಿವೇಚನಾ ಶಕ್ತಿ ಹೇಳಿದ ವಿಚಾರ ಕಡೆಗಣಿಸಿ 'ಯಾರು ಏನಾದರೂ ಅಂದುಕೊಳ್ಳಲಿ, ಹೀಗೆ ಮಾಡಿದರೆ ನನ್ನ ಮನಸ್ಸಿಗೆ ಸಂತೋಷವಾಗುತ್ತದೆ' ಎಂದು ಮಾಡಿದರೆ ಒಳಮನಸ್ಸು ನಿಮ್ಮನ್ನು ಪ್ರಶ್ನಿಸದೇ ಇರುವುದಿಲ್ಲ. ಹೀಗೆ ಮಾಡು ಎನ್ನುವುದೇ ಮನಸ್ಸು, ಹೀಗೇಕೆ ಮಾಡಿದೆ ಎಂದು ಪ್ರಶ್ನಿಸುವುದೂ ಅದೇ ಮನಸ್ಸೇ. ಮನಸ್ಸು ನಮ್ಮನ್ನು ನಿಯಂತ್ರಿಸುವ ಬದಲು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದೇ ದ್ವಂದ್ವವನ್ನು ಕೊನೆಗೊಳಿಸಲು ಸರಿಯಾದ ದಾರಿ. ಕೆಲವು ಸಂದರ್ಭಗಳಲ್ಲಿ ಅಂತರಾತ್ಮ ಒಪ್ಪುವಂತೆ ನಡೆದುಕೊಳ್ಳಲು ಕಷ್ಟವಾಗಬಹುದು. ಅನಿವಾರ್ಯವಾಗಿ ಹಾಗೆ ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ಹೋಗದೆ ಸರಿಯಾದ ಹಾದಿಯಲ್ಲಿ ನಡೆಯಲು ನಮ್ಮ ಪ್ರಯತ್ನ ಮುಂದುವರೆಸುವುದು ಸೂಕ್ತ.
     ಮನಸ್ಸಿನ ನಿಯಂತ್ರಣ ಒಂದು ಅಂತರಂಗದ ಆಟ. ಈ ಅಟದಲ್ಲಿ ನಾವು ಕೆಲವೊಮ್ಮೆ ಗೆಲ್ಲುತ್ತೇವೆ, ಕೆಲವೊಮ್ಮೆ ಸೋಲುತ್ತೇವೆ, ಕೆಲವೊಮ್ಮೆ ಎಡವುತ್ತೇವೆ. ಈ ಆಟ ಆಡಲು ಚತುರತೆ, ಎಚ್ಚರಿಕೆ, ಹೃದಯದ ಶ್ರೀಮಂತಿಕೆ, ಯೋಜಿಸುವ ಸಾಮರ್ಥ್ಯ, ತಾಳ್ಮೆ, ಸಹನೆ, ಇತ್ಯಾದಿಗಳೆಲ್ಲವೂ ಇರಬೇಕಾಗುತ್ತದೆ. ಗೆದ್ದಾಗ ಮೈಮರೆಯದೆ, ಸೋತಾಗ ಕುಗ್ಗದೆ ಇರುವ ಮನೋಭಾವವಿರಬೇಕಾಗುತ್ತದೆ.
     ಭಗವದ್ಗೀತೆಯಲ್ಲಿ ಅರ್ಜುನ ಶ್ರೀಕೃಷ್ಣನಿಗೆ ಕೇಳುವ ಈ ಪ್ರಶ್ನೆ ನಮ್ಮ ಪ್ರಶ್ನೆಯೂ ಆಗಿದೆ: ಅಥಕೇನ ಪ್ರಯುಕ್ತೋಯಂ ಪಾಪಂ ಚರತಿ ಪೂರುಷಃ | ಅನಿಚ್ಛನ್ನಪಿ ವಾರ್ಷ್ಣೇಯ ಬಲಾರ್ದಿವ ನಿಯೋಜಿತಃ || (೩.೩೬) - 'ಇಷ್ಟವಿಲ್ಲದಿದ್ದರೂ ಬಲವಂತವಾಗಿ ಮಾಡಲ್ಪಡುವವನಂತೆ ಮನುಷ್ಯನು ಪಾಪವನ್ನು ಮಾಡಲು ಇರುವ ಪ್ರೇರಣೆಯಾದರೂ ಎಂತಹುದು?' ಎಂಬ ಈ ಪ್ರಶ್ನೆ 'ಕುಡಿಯುವುದು ಕೆಟ್ಟದ್ದು ಎಂದು ಕುಡುಕನಿಗೇ ಗೊತ್ತಿದ್ದರೂ ಆತ ಏಕೆ ಕುಡಿಯುತ್ತಾನೆ?' ಎಂದು ಕೇಳಿದಂತೆ ಇದೆ. ಶ್ರೀಕೃಷ್ಣ ಹೇಳುತ್ತಾನೆ: "ಕಾಮ, ಕ್ರೋಧಗಳು ರಜೋಗುಣದಿಂದ ಹುಟ್ಟಿದ್ದು ಇವುಗಳನ್ನು ತೃಪ್ತಿಗೊಳಿಸಲಾಗದು. ಹೊಗೆಯಿಂದ ಬೆಂಕಿ, ಧೂಳಿನಿಂದ ಕನ್ನಡಿ ಮುಚ್ಚಿ ಹೋಗುವಂತೆ ಈ ಪ್ರಪಂಚ ಕಾಮ-ಕ್ರೋಧಗಳಿಂದ ಮುಚ್ಚಿಹೋಗಿದೆ. ಇಂದ್ರಿಯಗಳು, ಬುದ್ಧಿ, ಮನಸ್ಸು ಇವುಗಳು ಕಾಮದ ನೆಲೆವೀಡುಗಳು. ಆದ್ದರಿಂದ ಇಂದ್ರಿಯಗಳನ್ನು ನಿಗ್ರಹಿಸಿ, ಜ್ಞಾನ-ವಿಜ್ಞಾನಗಳನ್ನು ನಾಶ ಮಾಡುವ ಕಾಮವನ್ನು ಹತ್ತಿಕ್ಕಬೇಕು." ಮುಂದುವರೆದು ಹೇಳುತ್ತಾನೆ: 'ವಿಷಯಗಳಿಗಿಂತ ಇಂದ್ರಿಯಗಳು ಹೆಚ್ಚಿನವು, ಇಂದ್ರಿಯಗಳಿಗಿಂತ ಮನಸ್ಸು ಹೆಚ್ಚಿನದು, ಬುದ್ಧಿಯು ಮನಸ್ಸಿಗಿಂತ ಹೆಚ್ಚಿನದು. ಈ ಬುದ್ಧಿಗಿಂತಲೂ ಆತ್ಮ ಶ್ರೇಷ್ಠವಾದುದು.' ಆತ್ಮ ಜ್ಞಾನವನ್ನು ಅರಿಯುವ ಅಂತರಂಗದ ಆಟ ಆಡಲು ತೊಡಗಿದಾಗ ಸತ್ಯಾಸತ್ಯತೆಯ ಅರಿವು ಗೊತ್ತಾಗುತ್ತಾ ಹೋಗುತ್ತದೆ. ಈ ಅಟದಲ್ಲಿ ಗೆಲ್ಲಬೇಕೆಂದರೆ ಮೊದಲು ಮನಸ್ಸನ್ನು ನಿಯಂತ್ರಿಸಬೇಕೆಂಬ ಧೃಡವಾದ ಸಂಕಲ್ಪ ಹೊಂದಬೇಕು, ಮನಸ್ಸಿನ ಸ್ವಭಾವವನ್ನು ಅರಿಯಬೇಕು ಮತ್ತು ಅದಕ್ಕಾಗಿ ನಮ್ಮದೇ ಆದ ತಂತ್ರಗಳು, ರೀತಿ-ನೀತಿಗಳನ್ನು ರೂಪಿಸಿಕೊಂಡು ಅವುಗಳನ್ನು ಬುದ್ದಿವಂತಿಕೆಯಿಂದ, ಪ್ರಾಮಾಣಿಕತೆಯಿಂದ ಜಾರಿಗೆ ತರಬೇಕು. ವಜ್ರವನ್ನು ವಜ್ರ ಕತ್ತರಿಸುವಂತೆ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸಲು ಬೇಕಿರುವುದು ಮಾನಸಿಕ ಬಲವೇ ಹೊರತು ಮತ್ತಾವುದರಿಂದಲೂ ಅದು ಜಗ್ಗುವುದಿಲ್ಲ.
      ಸಾಧನೆಯ ಮೊದಲ ಹಂತ ಜ್ಞಾನದೊಡೆಯರಾಗುವುದು. ಎರಡನೆಯ ಹಂತ ನಾವಾಡುವ ಮಾತುಗಳಿಗೆ ಒಡೆಯರಾಗುವುದು. ಮೂರನೆಯ ಹಂತವೇ 'ನಾನು' ಎಂದು ನಾವು ಅಂದುಕೊಂಡಿರುವ ನಮ್ಮ ಮನಸ್ಸುಗಳಿಗೆ ಯಜಮಾನರಾಗುವುದು!
ಪರಮಾತ್ಮ ನೀಡಿಹನು ಪರಮ ಸಂಪತ್ತು
ವಿವೇಚಿಪ ಶಕ್ತಿ ಮೇಣ್ ಮನಸಿನ ಬಲವು |
ನಿನಗೆ ನೀನೆ ಮಿತ್ರ ಸರಿಯಾಗಿ ಬಳಸಿದೊಡೆ
ಇಲ್ಲದಿರೆ ನಿನಗೆ ನೀನೆ ಅರಿಯು ಮೂಢ ||
-ಕ.ವೆಂ.ನಾಗರಾಜ್.  
***************
ದಿನಾಂಕ - ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ: 

ಶುಕ್ರವಾರ, ಸೆಪ್ಟೆಂಬರ್ 11, 2015

ಸಾಧನಾ ಸೋಪಾನ - 2: ಮಾತಿನ ಹಿರಿಮೆ!


ಶ್ರವಣದಿಂದಲೆ ವಿದ್ಯೆ ಶ್ರವಣದಿಂದಲೆ ಜ್ಞಾನ
ಶ್ರವಣದಿಂದಲೆ ಅರಿವು ಶ್ರವಣದಿಂದಲೆ ಮೋಕ್ಷ|
ಸುಜನವಾಣಿ ಗುರುವಾಣಿ ಕೇಳುವವ ಧನ್ಯ
ಕೇಳು ಕೇಳು ಕೇಳು ನೀ ಕೇಳು ಮೂಢ||
     ಮಾನವನಿಗೆ ಅಗತ್ಯವಿರುವ ಜ್ಞಾನ ಮತ್ತು ಜ್ಞಾನದ ಅಂತಸ್ಸತ್ವದ ಅರಿವಿರದಿದ್ದರೆ ಜ್ಞಾನ ಹೇಗೆ ಅರ್ಥಹೀನವಾಗುತ್ತದೆ ಎಂಬ ಬಗ್ಗೆ ತಿಳಿದುಕೊಂಡೆವು. ಈ ಜ್ಞಾನ ಅನ್ನುವುದು ಹೇಗೆ ಪ್ರಾಪ್ತವಾಗುತ್ತದೆ? ಜ್ಞಾನದ ಮೂಲ ಯಾವುದು?  ಈ ಜ್ಞಾನದ ಉಗಮದ ಮೂಲ ವಾಕ್ಕುವೇ ಆಗಿದೆ. ವೇದ ಸಾಹಿತ್ಯ ಈಗ ಲಭ್ಯವಿರುವ ಸಾಹಿತ್ಯಗಳ ಪೈಕಿ ಅತ್ಯಂತ ಪುರಾತನವಾದುದು. ಸುಮಾರು 5000 ವರ್ಷಗಳ ಹಿಂದೆ ವೇದಸಾಹಿತ್ಯ ರಚಿತವಾಯಿತೆನ್ನುತ್ತಾರೆ. ಅದಕ್ಕೂ ಮುಂಚೆ ವೇದವಿರಲಿಲ್ಲವೇ? ಇತ್ತು, ಅದರೆ ಅದನ್ನು ಲಿಪಿಯಲ್ಲಿ ಒಡಮೂಡಿಸಿದ್ದು ಆ ಸಮಯದಲ್ಲಿ ಅಷ್ಟೆ. ಅಪೌರುಷೇಯವೆನ್ನಲಾಗುವ ವೇದಗಳು ಮಂತ್ರದ್ರಷ್ಟಾರರಾದ ಋಷಿಮುನಿಗಳ ಮೂಲಕ ಪ್ರಕಟವಾಗಿ ಒಬ್ಬರಿಂದ ಒಬ್ಬರಿಗೆ ಮೌಖಿಕವಾಗಿ ಕಲಿಸಲ್ಪಟ್ಟು ಮುಂದುವರೆದುಕೊಂಡು ಬಂದಿತ್ತು. ವೇದವ್ಯಾಸರು ಅವುಗಳನ್ನು ಸಂಗ್ರಹಿಸಿ ಒಂದು ರೂಪವಿತ್ತರು.
      ಮಾತು ಅನ್ನುವುದು ಒಳಗೆ ಉತ್ಪನ್ನವಾಗುವ ಭಾವದ ಪ್ರಕಟರೂಪ. ತಮ್ಮೊಳಗಿನ ಭಾವಗಳನ್ನು ಇನ್ನೊಬ್ಬರಿಗೆ ವ್ಯಕ್ತಪಡಿಸುವ ಸಲುವಾಗಿ ಹೊರಡಿಸಿದ ಶಬ್ದ/ಧ್ವನಿ/ಸಂಜ್ಞೆಗಳೇ ಮಾತುಗಳಾದವು. ಒಂದು ಪ್ರದೇಶದಲ್ಲಿನ ಜನರಿಗೂ, ಬೇರೆ ಪ್ರದೇಶಗಳಲ್ಲಿನ ಜನರ ಅಭಿವ್ಯಕ್ತಿಯ ಸ್ವರೂಪದ ಶಬ್ದಗಳು/ರೀತಿಗಳು ಬೇರೆ ಬೇರೆ ರೀತಿಯಲ್ಲಿದ್ದುದರಿಂದ ಆ ಮಾತುಗಳು ಬೇರೆ ಬೇರೆ ಭಾಷೆಗಳೆನಿಸಿದವು. ಇದನ್ನು ಭಾಷಾವಿಜ್ಞಾನವೆನ್ನಬಹುದು. ಬೇರೆ ಬೇರೆ ಭಾಷೆಗಳಿಗೆ ಬೇರೆ ಬೇರೆ ಲಿಪಿಗಳು ರಚಿಸಲ್ಪಟ್ಟವು. ಈ ಎಲ್ಲಾ ರಚನೆಗಳಿಗೂ ಮೂಲವಾದುದು ಒಡಮೂಡಿದ ಮಾತುಗಳೇ! ನಾವು ಜ್ಞಾನಭಂಡಾರವೆಂದು ಪರಿಗಣಿಸುವ ವೇದಗಳು, ಬೈಬಲ್, ಕುರಾನ್ ಮೊದಲಾದ ಧರ್ಮಗ್ರಂಥಗಳು, ವಿಜ್ಞಾನ, ಗಣಿತ ಮುಂತಾದವುಗಳು ರಚಿತವಾಗಬೇಕಾದರೆ ಅವು ಮೊದಲು ಮಾತುಗಳ ಮೂಲಕವೇ ಮೂಡಿದವು ಅಲ್ಲವೇ? ಆದುದರಿಂದ ಯಾವುದರಿಂದ ಜ್ಞಾನ ಮೂಡಿತೋ ಆ ಮಾತುಗಳು ಜ್ಞಾನಕ್ಕಿಂತ ಮೇಲಿನದು. ಎಲ್ಲ ಜ್ಞಾನಗಳ ಹಿಂದಿನ ಬೆನ್ನೆಲುಬು, ಹಿನ್ನೆಲೆ ಮಾತುಗಳೇ ಆಗಿವೆ. ಕಾರಣವು ಪರಿಣಾಮಕ್ಕಿಂತ ಹಿರಿದು. ಈ ಭೂಮಿ, ಈ ವಿಶ್ವ, ಪ್ರತಿಯೊಂದು ವಸ್ತು, ಸಂಗತಿಗಳು ಜ್ಞಾನದ ಮೂಲಕ ಅರ್ಥಾತ್ ಅದರ ಹಿಂದಿನ ಮಾತು/ಅಭಿವ್ಯಕ್ತಿಗಳ ಮೂಲಕವೇ ನಮ್ಮ ಅರಿವಿಗೆ ಬಂದಿದೆ.
     ಮುಖವು ವ್ಯಕ್ತಿತ್ವದ ಸೂಚಿ ಎನ್ನುತ್ತಾರೆ. ಆದರೆ ಮಾತು ನಿಜವಾಗಿ ಮನುಷ್ಯನ ಸ್ವಭಾವದ ಕನ್ನಡಿ ಅನ್ನಬಹುದು. ನೋಡಲು ಕೆಲವರು ದೊಡ್ಡ ಜ್ಞಾನಿಯಂತೆ ತೋರುತ್ತಾರೆ. ಆದರೆ ಅವರು ಮಾತನಾಡಿದಾಗ ಗೊತ್ತಾಗುತ್ತದೆ ದಡ್ಡಶಿಖಾಮಣಿಗಳೆಂದು! ಅಂತಹವರನ್ನೇ ಕುರಿತು ಇರುವ ಗಾದೆ ಮಾತು ಇದು: 'ಬಾಯಿ ಬಿಟ್ಟರೆ ಬಣ್ಣಗೇಡು'. ನಯ-ವಿನಯದ ಮಾತುಗಳು ಸುಸಂಸ್ಕಾರವನ್ನು ತೋರಿಸಿದರೆ, ಸಭ್ಯತೆಯ ಎಲ್ಲೆ ಮೀರಿದ ಮಾತುಗಳು ಕುಸಂಸ್ಕಾರವನ್ನು ಬಿಂಬಿಸುತ್ತವೆ. ಮಾತುಗಳು ಹೊರಡುವ ರೀತಿಯಿಂದ ವ್ಯಕ್ತಿ ಕೋಪದಲ್ಲಿದ್ದಾನೋ, ತಾಳ್ಮೆಯಿಂದಿದ್ದಾನೋ, ವ್ಯಂಗ್ಯವಿದೆಯೋ, ಪ್ರೀತಿಯಿದೆಯೋ, ದ್ವೇಷವಿದೆಯೋ, ದರ್ಪಿಷ್ಟನೋ, ಅಹಂಕಾರಿಯೋ, ಇತ್ಯಾದಿಗಳು ತಿಳಿದುಬಿಡುತ್ತವೆ. ಜ್ಞಾನಕ್ಕೂ ಮಾತಿಗೂ ಅವಿನಾಭಾವ ಸಂಬಂಧವಿದೆ. ಜ್ಞಾನ ಹೆಚ್ಚಿದಷ್ಟೂ ಮಾತಿನ ಸೌಂದರ್ಯ ಹೆಚ್ಚುತ್ತಾ ಹೋಗುತ್ತದೆ.
ಮಾತಿನಲಿ ವಿಷಯ ಭಾಷೆಯಲಿ ಭಾವ
ಅನುಭವದಿ ಪಾಂಡಿತ್ಯ ಮೇಳವಿಸಿ|
ಕೇಳುಗರಹುದಹುದೆನುವ ಮಾತುಗಾರ
ಸರಸತಿಯ ವರಸುತನು ಮೂಢ||
     ನಾನು ಹೊಳೆನರಸಿಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಗೊಂಬೆ ಸುಬ್ಬಯ್ಯ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಆತ ಅವಿದ್ಯಾವಂತ, ಶಾಲೆಯ ಮೆಟ್ಟಲು ಹತ್ತಿದವನಲ್ಲ. ತೊಗಲು ಗೊಂಬೆ ಆಡಿಸಿ ಜೀವನ ನಡೆಸುತ್ತಿದ್ದವನು. ಅವನು ಊರೂರು ಸುತ್ತಿ ತೊಗಲು ಗೊಂಬೆ ಆಡಿಸಲು ಹೋಗುತ್ತಿದ್ದರಿಂದ ಆ ಅವಕಾಶ ಉಪಯೋಗಿಸಿಕೊಂಡು, ಸರ್ಕಾರದಿಂದ ಅವನಿಗೆ ಮಂಜೂರಾಗಿದ್ದ ದರ್ಖಾಸ್ತು ಜಮೀನನ್ನು ಗ್ರಾಮದ ಒಬ್ಬ ಬಲಾಢ್ಯ ಅತಿಕ್ರಮಿಸಿಕೊಂಡಿದ್ದ. ಅದನ್ನು ಮರಳಿ ಸುಬ್ಬಯ್ಯನಿಗೆ ಬಿಡಿಸಿಕೊಟ್ಟಿದ್ದೆ. ಈ ವಿಷಯ ಒತ್ತಟ್ಟಿಗಿರಲಿ. ಒಮ್ಮೆ ಬಿಡುವಾಗಿದ್ದಾಗ ಆತನಿಂದ ಗೊಂಬೆ ಆಡಿಸುವ ಸಲುವಾಗಿ ಹಿನ್ನೆಲೆಯಾಗಿ ಹೇಳುತ್ತಿದ್ದ ಪದ್ಯಗಳು, ಕಥೆಗಳು ಇವುಗಳನ್ನು ಹೇಳಿಸಿ ಕೇಳಿದ್ದೆ. ಪುರಾಣದ, ಜನಪದದ ಕಥೆಗಳನ್ನು ಆತ ಹೇಳುತ್ತಿದ್ದ ರೀತಿ, ಸುಶ್ರಾವ್ಯವಾಗಿ ಹೇಳುತ್ತಿದ್ದ ಪದ್ಯಗಳು, ಅದರಲ್ಲಿ ಬರುವ ಪಾತ್ರಗಳ ಸಂಭಾಷಣೆಗಳು ಇತ್ಯಾದಿಗಳನ್ನು ಕೇಳಿ ಬೆರಗಾಗಿದ್ದೆ. ಭೀಮ, ದುರ್ಯೋಧನ, ಇತ್ಯಾದಿ ಪಾತ್ರಗಳ ಕುರಿತು ಅವನ ವಿಮರ್ಶೆ ಮಾಡುತ್ತಿದ್ದ ರೀತಿ ಯಾವ ಪಂಡಿತೋತ್ತಮರಿಗಿಂತಲೂ ಕಡಿಮೆಯಿರಲಿಲ್ಲ. ವಂಶ ಪಾರಂಪರ್ಯವಾಗಿ ಈ ಕಲೆ ಅವನಿಗೆ ಒಲಿದಿತ್ತಾದರೂ, ಜೀವನಾನುಭವಗಳು ಕಲೆಯ ಮೆರುಗನ್ನು ಹೆಚ್ಚಿಸಿದ್ದವು. ಆತ ತನ್ನ ಕಲಾಪ್ರದರ್ಶನದ ಹೊರತಾಗಿಯೂ ಮಾತನಾಡುತ್ತಿದ್ದ ರೀತಿ-ನೀತಿಗಳು ಅವನೊಬ್ಬ ಜ್ಞಾನಿ ಎಂಬುದನ್ನು ತೋರಿಸುತ್ತಿದ್ದವು. ಆತನ ಜ್ಞಾನದ ಮೂಲ ಮಾತೇ ಆಗಿತ್ತು!
     ಮಾತು ಎಂತಹ ಪವಾಡ ಮಾಡುತ್ತದೆ ಎಂಬುದಕ್ಕೆ ತಮಿಳುನಾಡಿನ ಪಾಲಂ ಕಲ್ಯಾಣಸುಂದರಮ್ ಜೀವಂತ ನಿದರ್ಶನವಾಗಿದ್ದಾರೆ. ವಿಶ್ವಸಂಸ್ಥೆ ಇವರನ್ನು '20ನೆಯ ಶತಮಾನದ ಪ್ರಮುಖ ವ್ಯಕ್ತಿಗಳಲ್ಲೊಬ್ಬರು' ಎಂದು ಪರಿಗಣಿಸಿದೆ. ಅಮೆರಿಕಾದ ಒಂದು ಸಂಸ್ಥೆ ಇವರನ್ನು 'ಸಹಸ್ರಮಾನದ ಪುರುಷ'ನೆಂದು ಗೌರವಿಸಿದೆ. ಭಾರತ ಸರ್ಕಾರ ಇವರನ್ನು 'ಭಾರತದ ಅತ್ಯುತ್ತಮ ಗ್ರಂಥಪಾಲಕ'ರೆಂದು ಸನ್ಮಾನಿಸಿದೆ. ಇವರನ್ನು ಪ್ರಪಂಚದ ಅತ್ಯುಚ್ಛ ಹತ್ತು ಗ್ರಂಥಪಾಲಕರುಗಳಲ್ಲೊಬ್ಬರು ಎಂದು ಗುರುತಿಸಲಾಗಿದೆ. ಕೇಂಬ್ರಿಡ್ಜಿನ ಇಂಟರ್ ನ್ಯಾಶನಲ್ ಬಯೋಗ್ರಾಫಿಕಲ್ ಸೆಂಟರ್ ಇವರನ್ನು 'ಪ್ರಪಂಚದ ಅತ್ಯುಚ್ಛ ಗೌರವಾನ್ವಿತರಲ್ಲೊಬ್ಬರು' ಎಂದು ಅಭಿದಾನವಿತ್ತು ಗೌರವಿಸಿದೆ. ಶೀವೈಕುಂಠಮ್‌ನಲ್ಲಿನ ಕಲಾಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಮಾಡುತ್ತಿದ್ದ ಕೆಲಸದಿಂದ ಬರುತ್ತಿದ್ದ ಸಂಬಳದ ಹಣವನ್ನು ಪೂರ್ಣವಾಗಿ ದೀನದಲಿತರ ಸೇವೆಗಾಗಿ ಖರ್ಚು ಮಾಡಿದ ವ್ಯಕ್ತಿ ಬಹುಷಃ ಇವರೊಬ್ಬರೇ ಇರಬೇಕು. ಮದುವೆಯಾಗದೆ ಬ್ರಹ್ಮಚಾರಿಯಾಗಿಯೇ ಉಳಿದಿದ್ದ ಇವರು ತಮ್ಮ ವೈಯಕ್ತಿಕ ಖರ್ಚುವೆಚ್ಚಗಳಿಗಾಗಿ ಹೋಟೆಲು ಮಾಣಿಯಾಗಿಯೂ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರೆಂದರೆ ನಂಬಲು ಕಷ್ಟವಾದರೂ ಸತ್ಯವಾದ ಸಂಗತಿ. 'ಸಹಸ್ರಮಾನದ ಪುರುಷ'ರೆಂಬ ಗೌರವದ ಜೊತೆಗೆ ಬಂದ 30 ಕೋಟಿ ರೂ. ಹಣವನ್ನೂ ಸಹ ಬಿಡಿಗಾಸೂ ಉಳಿಸಿಕೊಳ್ಳದೆ ಎಂದಿನಂತೆ ಸಮಾಜಕ್ಕೇ ಧಾರೆಯೆರೆದ ಪುಣ್ಯಾತ್ಮರಿವರು. ಇವರ ಈ ರೀತಿಯ ಜೀವನಕ್ಕೆ ಪ್ರೇರಣೆ ನೀಡಿದ್ದು ಅವರು ಕೇಳಿದ ಒಂದು ಮಾತು! ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಜನರು ನಾಮುಂದು-ತಾಮುಂದು ಎಂಬಂತೆ ತಮ್ಮ ತನು-ಮನ-ಧನಗಳನ್ನು ಅರ್ಪಿಸುತ್ತಿದ್ದರು. ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಕಾಮರಾಜರು ಜನರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾಗ ಕಲ್ಯಾಣಸುಂದರಮ್ ಆಗಿನ್ನೂ ಕಾಲೇಜು ವಿದ್ಯಾರ್ಥಿ. ದೇಶಭಕ್ತಿ ಪ್ರೇರಿತ ಹುಡುಗ ತನ್ನ ಕೊರಳಲ್ಲಿದ್ದ ಚಿನ್ನದ ಸರವನ್ನೇ ತೆಗೆದು ಕಾಮರಾಜರಿಗೆ ಯುದ್ಧ ಸಂತ್ರಸ್ತರ ನಿಧಿಗಾಗಿ ಅರ್ಪಿಸಿದ. ನಂತರದಲ್ಲಿ ಆನಂದವಿಕಟನ್ ಪತ್ರಿಕೆ ಸಂಪಾದಕರಾಗಿದ್ದ ಬಾಲಸುಬ್ರಹ್ಮಣ್ಯಮ್‌ರನ್ನು ಕಂಡು ವಿಷಯವನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಕೋರಿದಾಗ ಅವರು, "ನೀನು ಸ್ವತಃ ದುಡಿದು ದಾನ ಮಾಡಿದಾಗ ಹೇಳು, ಪ್ರಕಟಿಸುವೆ" ಎಂದು ಹೇಳಿ ವಾಪಸು ಕಳಿಸಿದ್ದರು. ಈ ಮಾತು ಪವಾಡವನ್ನೇ ಮಾಡಿತು. ಆ ಹುಡುಗ ಅದನ್ನು ಸವಾಲಾಗಿ ಸ್ವೀಕರಿಸಿದ, ದಿಟ್ಟ ನಿರ್ಧಾರ ಮಾಡಿದ. ಅದೇ ಮುಂದೆ ಅವನನ್ನು ಗ್ರಂಥಪಾಲಕನಾಗಿ ಕೆಲಸಕ್ಕೆ ಸೇರಿದ ನಂತರ ಬಂದ ಪ್ರತಿ ತಿಂಗಳ ಪೂರ್ಣ ಹಣವನ್ನು ಸಮಾಜೋಪಯೋಗೀ ಕಾರ್ಯಕ್ಕೆ ವಿನಿಯೋಗಿಸುವಂತೆ ಮಾಡಿದ್ದು. ಸುಮಾರು 30 ವರ್ಷಗಳ ಕಾಲ ಸಲ್ಲಿಸಿದ ಸೇವೆಯಲ್ಲಿ ಗಳಿಸಿದ ಎಲ್ಲಾ ಹಣವನ್ನೂ, ಪಿಂಚಣಿ ಸೇರಿದಂತೆ. ಸಮಾಜಕ್ಕೆ ಅರ್ಪಿಸಿದ ಆ ಅಸಾಮಾನ್ಯ ಪುಣ್ಯಾತ್ಮ ಸಾಮಾನ್ಯನಾಗೇ ಉಳಿದುದು ವಿವರಣೆಗೆ ನಿಲುಕದ ಸಂಗತಿ.
     ಧೀಮಂತ ಸಿಂಹ ಸಂನ್ಯಾಸಿ ಮಹರ್ಷಿ ದಯಾನಂದ ಸರಸ್ವತಿಯವರನ್ನು ಜಗತ್ತಿಗೆ ಪರಿಚಯಿಸಿದ ಗುರು ವಿರಜಾನಂದರು ರೂಪಿತವಾಗಿದ್ದೂ ನಿಂದನೆಯ ಮಾತುಗಳಿಂದ! ವಿರಜಾನಂದರು ಹುಟ್ಟು ಕುರುಡರು, ಚಿಕ್ಕಂದಿನಲ್ಲೇ ಅವರ ತಂದೆ-ತಾಯಿ ತೀರಿಹೋಗಿದ್ದರು. ಅವರ ಅಣ್ಣ, ಅತ್ತಿಗೆ ಆ ಚಿಕ್ಕ ಬಾಲಕನನ್ನು ಪ್ರತಿನಿತ್ಯವೆಂಬಂತೆ ದಂಡಪಿಂಡ, ಶನಿ, ಇತ್ಯಾದಿ ಮೂದಲಿಸುತ್ತಿದ್ದುದಲ್ಲದೆ, 'ಎಲ್ಲಿಗಾದರೂ ತೊಲಗಿ ಹೋಗಬಾರದೇ' ಎಂದು ಶಪಿಸುತ್ತಿದ್ದರು. ಇನ್ನು ಸಹಿಸುವುದು ಸಾಧ್ಯವಿಲ್ಲವೆನಿಸಿದಾಗ, ಪಂಜಾಬಿನ ಕರ್ತಾರಪುರದಲ್ಲಿದ್ದ ಆ ಎಂಟು ವರ್ಷದ ಕುರುಡ ಬಾಲಕ ಕೈಯಲ್ಲಿ ಒಂದು ಕೋಲು ಹಿಡಿದುಕೊಂಡು ಮನೆ ಬಿಟ್ಟು ಹೊರಟ. 18ನೆಯ ಶತಮಾನದ ಆ ಸಂದರ್ಭದಲ್ಲಿ ಈಗಿನಂತೆ ರಸ್ತೆಗಳಾಗಲೀ, ವಾಹನ ಸೌಲಭ್ಯಗಳಾಗಲೀ ಇರಲಿಲ್ಲ. ಧೃಢಕಾಯರೇ ಒಬ್ಬರೇ ಓಡಾಡಲು ಹಿಂಜರಿಯುತ್ತಿದ್ದ ಆ ಸಮಯದಲ್ಲಿ ಕುರುಡ ಬಾಲಕ ಸುಮಾರು 2000 ಮೈಲುಗಳ ದೂರ ಕ್ರಮಿಸಿ ಹರಿದ್ವಾರ ತಲುಪಿದ್ದೇ ಒಂದು ಸಾಧನೆ. ಆತನ ಸಾಧನೆ ಇಲ್ಲಿಗೇ ನಿಲ್ಲಲಿಲ್ಲ. ಏಕಗ್ರಾಹಿಯಾಗಿದ್ದ ಅವರು ಗುರುಗಳಿಂದ ಪುರಾತನ ಋಷಿ-ಮುನಿಗಳು ರಚಿಸಿದ ಸಾಹಿತ್ಯ, ಸಂಸ್ಕೃತ ವ್ಯಾಕರಣ, ನಿರುಕ್ತ, ಮುಂತಾದುವನ್ನು ಕಲಿತದ್ದಲ್ಲದೇ, ಕೇವಲ ಕೇಳಿಯೇ ವೇದಗಳನ್ನು ಕಲಿತರು. ಅನೇಕ ವರ್ಷಗಳ ಕಾಲ ಗಾಯತ್ರಿ ಮಂತ್ರ ಪಠಿಸಿದ್ದರಿಂದ ದಿವ್ಯಜ್ಞಾನ ಪ್ರಾಪ್ತವಾಯಿತೆನ್ನುತ್ತಾರೆ. ಅದೇನೇ ಇರಲಿ, ಅವರು ನಾಲ್ಕೂ ವೇದಗಳಲ್ಲಿ ಪಾಂಡಿತ್ಯ ಪಡೆದಿದ್ದಂತೂ ನಿರ್ವಿವಾದದ ವಿಚಾರವಾಗಿತ್ತು. ಕಣ್ಣಿರುವವರಿಗೂ ಕಷ್ಟವಾದ ಆ ಜ್ಞಾನಪ್ರಾಪ್ತಿ ಪ್ರಜ್ಞಾಚಕ್ಷು ವಿರಜಾನಂದರಿಗೆ ಆಗಿತ್ತು.
ಮಾತಾಗಲಿ ಮುತ್ತು ತರದಿರಲಿ ಆಪತ್ತು
ಮಾತು ನಿಜವಿರಲಿ ನೋವು ತರದಿರಲಿ |
ಪ್ರಿಯವಾದ ಹಿತವಾದ ನುಡಿಗಳಾಡುವನು
ನುಡಿಯೋಗಿ ಜನಾನುರಾಗಿ ಮೂಢ ||
     ಈ ಮಾತಿನಿಂದಲೇ ಜಗತ್ತು ನಡೆಯುತ್ತಿದೆ! ಮಾತಿನಿಂದ ಸೃಷ್ಟಿಯಾಗುತ್ತಿದೆ, ಮಾತಿನಿಂದ ವಿನಾಶವಾಗುತ್ತಿದೆ, ಮಾತಿನಿಂದಲೇ ಎಲ್ಲವೂ ಆಗುತ್ತಿದೆ. ಮಾತಿನ ಮಹತ್ವದ ಕುರಿತು ಅದೆಷ್ಟು ಗಾದೆಗಳು, ನೀತಿಮಾತುಗಳು, ಅದೆಷ್ಟು ವಚನಗಳು, ದಾಸರ ಪದಗಳು, ಅದೆಷ್ಟು ಸಾಧು-ಸಂತರ ಮಾರ್ಗದರ್ಶನಗಳು!  ಕೇವಲ ಮಾತಿನಿಂದಲೇ ಒಬ್ಬರ ನೋವನ್ನು ಶಮನಗೊಳಿಸಬಹುದು, ಮಾತುಗಳಿಂದಲೇ ಒಬ್ಬರಿಗೆ ಚಿತ್ರಹಿಂಸೆ ಕೊಡಬಹುದು! ನಿಜವಾದ ಸಾಧಕ ಮಾತುಗಳಿಗೆ ಒಡೆಯನಾಗಿರುತ್ತಾನೆ. ದೇವರು ಎರಡು ಕಣ್ಣುಗಳು, ಎರಡು ಕಿವಿಗಳನ್ನು ಕೊಟ್ಟಿದ್ದರೂ ಬಾಯಿ ಒಂದೇ ಇದೆ. ಏಕೆಂದರೆ ಮಾತನಾಡುವುದಕ್ಕಿಂತ ನೋಡಲು, ಕೇಳಲು ಹೆಚ್ಚು ಆದ್ಯತೆ ಕೊಡಬೇಕಿದೆ. ವಾಕ್ಕೊಡೆಯನಾದವನು ಕೇವಲ ತಾನು ಆಡುವ ಮಾತುಗಳ ಮೇಲೆ ಹತೋಟಿ ಹೊಂದಿರುವುದಲ್ಲದೆ, ಇತರರ ಸ್ತುತಿ, ನಿಂದೆಗಳ ಕುರಿತೂ ನಿರ್ಲಿಪ್ತನಾಗಿರುತ್ತಾನೆ. ಜೈನ ಮುನಿ ಶ್ರೀ ತರುಣಸಾಗರರು ಹೇಳಿದ ಈ ಸಾಂದರ್ಭಿಕ ಉದಾಹರಣೆ ಮನನೀಯವಾಗಿದೆ. ಒಮ್ಮೆ ಶಿಷ್ಯ ಗುರುವಿಗೆ, "ಗುರುಗಳೇ, ಆಶ್ರಮಕ್ಕೆ ಭಕ್ತನೊಬ್ಬ ಹಸು ನೀಡಿದ್ದಾನೆ" ಎಂದಾಗ ಗುರು, "ಒಳ್ಳೆಯದಾಯಿತು. ಹಾಲು ಸಿಗುತ್ತದೆ" ಎಂದರು. ಒಂದು ವಾರದ ನಂತರದಲ್ಲಿ ಶಿಷ್ಯ, "ಗುರುಗಳೇ, ಯಾರು ಹಸುವನ್ನು ನೀಡಿದ್ದರೋ ಆ ಭಕ್ತ ಹಸುವನ್ನು ವಾಪಸು ತೆಗೆದುಕೊಂಡು ಹೋಗಿದ್ದಾನೆ" ಎಂದಾಗ ಗುರು, "ಒಳ್ಳೆಯದಾಯಿತು. ಸಗಣಿ ಬಾಚುವ ಕೆಲಸ ತಪ್ಪಿತು" ಎಂದರಂತೆ! ಬಂದದ್ದನ್ನು ಬಂದಂತೆ ಸ್ವೀಕರಿಸುವ, ಒಪ್ಪುವ ಮನೋಭಾವ ಸಾಧಕರಿಗೆ ಸುಲಭವಾಗಿರುತ್ತದೆ. ನಾವೂ ಸಹ 'ವಾಕ್ಕೊಡೆಯ'ರಾಗುವ ಪ್ರಯತ್ನ ಮಾಡೋಣ.
ನಿಂದನೆಯ ನುಡಿಗಳು ಅಡಿಯನೆಳೆಯುವುವು
ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು|
ಪರರ ನಿಂದಿಪರ ಜಗವು ಹಿಂದಿಕ್ಕುವುದು
ವಂದಿತನಾಗು ನಲ್ನುಡಿಯೊಡೆಯನಾಗು ಮೂಢ||
-ಕ.ವೆಂ.ನಾಗರಾಜ್.
***************
ದಿನಾಂಕ 2-9-2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


ಮಂಗಳವಾರ, ಸೆಪ್ಟೆಂಬರ್ 8, 2015

ಸಾಧನಾ ಸೋಪಾನ - 1: ಜ್ಞಾನದ ಮಹತ್ವ


     ಹೀಗೆಯೇ ಯಾವುದೋ ವಿಷಯದ ಕುರಿತು ಚಿಂತಿಸುತ್ತಿದ್ದಾಗ ಈ ಹಳೆಯ ಘಟನೆ ನೆನಪಾಯಿತು. ಆಗಿನ್ನೂ ಬಿ.ಎಸ್.ಸಿ. ಪದವಿ ಮುಗಿಸಿದ ತರುಣದಲ್ಲೇ ೧೯೭೧ರಲ್ಲಿ ನನಗೆ ಅಂಚೆ ಕಛೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿ ಹಾಸನದ ಪ್ರಧಾನ ಅಂಚೆ ಕಛೇರಿಯಲ್ಲಿ ಒಂದು ವರ್ಷ ಕೆಲಸ ಮಾಡಿದ್ದೆ. ಅಲ್ಲಿನ ಉಳಿತಾಯ ಖಾತೆ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಕಾಲೇಜಿನಲ್ಲಿ ನಮಗೆ ಗಣಿತದ ಪಾಠ ಮಾಡುತ್ತಿದ್ದ ಲೆಕ್ಚರರೊಬ್ಬರು ತಮ್ಮ ಉಳಿತಾಯ ಖಾತೆಗೆ ಹಣ ಜಮ ಮಾಡಲು ಬಂದಿದ್ದರು. ಎ.ಬಿ.ಚನ್ನೇಗೌಡ ಎಂಬ ಹೆಸರಿನ ಅವರನ್ನು ನಾವು ಎಬಿಸಿ ಗೌಡರು ಎಂದು ಕರೆಯುತ್ತಿದ್ದೆವು. ನಾನು ಓದಿದ ಓದಿಗೂ, ಆಗ ಮಾಡುತ್ತಿದ್ದ ಕೆಲಸಕ್ಕೂ ಯಾವುದೇ ಸಂಬಂಧವಿರಲಿಲ್ಲ. ಇದರ ಹಿನ್ನೆಲೆಯಲ್ಲಿ ನಾನು ಅವರಿಗೆ ನಮಸ್ಕಾರ ಮಾಡುತ್ತಾ ಹೇಳಿದ್ದೆ; "ಸರ್, ನಿಮ್ಮ ಟ್ರಿಗೊನೊಮೆಟ್ರಿ, ಕ್ಯಾಲ್ಕ್ಯುಲಸ್, ಅಸ್ಟ್ರಾನಮಿ ಯಾವುದೂ ಈಗ ಪ್ರಯೋಜನಕ್ಕೆ ಬರಲಿಲ್ಲ." ನಾನು ಅವರನ್ನು ಅವಹೇಳನ ಮಾಡುತ್ತಿದ್ದೇನೆಂದು ಭಾವಿಸಿದ ಅವರು ಗಟ್ಟಿಯಾಗಿ ಕೂಗಾಡಿ ನನ್ನ ಮೇಲೆ ತಿರುಗಿ ಬಿದ್ದಿದ್ದರು. ಕೊನೆಯಲ್ಲಿ, "ಮೈಂಡ್ ಯುವರ್ ಬಿಸಿನೆಸ್" ಎಂದೂ ಎಚ್ಚರಿಸಿದ್ದರು. ಈ ಗದ್ದಲದಿಂದಾಗಿ ಅಕ್ಕಪಕ್ಕದಲ್ಲಿದ್ದವರು ಮತ್ತು ನನ್ನ ಸಹೋದ್ಯೋಗಿಗಳ ಗಮನವೆಲ್ಲಾ ಅವರ ಮತ್ತು ನನ್ನ ನಡುವೆ ಕೇಂದ್ರೀಕೃತವಾಗಿಬಿಟ್ಟಿತ್ತು.  ಅವರ ಕ್ಷಮೆ ಕೇಳಿ ನನ್ನ ಮಾತಿನ ಅಂತರಾರ್ಥ ಅವರಿಗೆ ಗೊತ್ತಾಗುವಂತೆ ಮಾಡಿಸುವಷ್ಟರಲ್ಲಿ ನನಗೆ ಸಾಕೋಸಾಕಾಗಿತ್ತು. 
     ಹೌದು, ನಾನು ಭೌತಶಾಸ್ತ್ರ ಮತ್ತು ಗಣಿತಗಳನ್ನು ಪ್ರಧಾನ ವಿಷಯಗಳನ್ನಾಗಿ ಹೊಂದಿ ಬಿ.ಎಸ್.ಸಿ. ಪದವಿ ಪಡೆದಿದ್ದೆ. ಈ ವಿಷಯಗಳಿಗೆ ಸಂಬಂಧಿಸಿದಂತೆ ನಾನು ಕಲಿತಿದ್ದ ಬಹಳಷ್ಟು ಸಂಗತಿಗಳು ಈಗ ನನ್ನ ನೆನಪಿನಲ್ಲಿ ಉಳಿದಿಲ್ಲ ಮತ್ತು ಉಪಯೋಗಕ್ಕೂ ಬರುತ್ತಿಲ್ಲ. ಈಗ ಪರೀಕ್ಷೆ ಎದುರಿಸಿದರೆ ನಾನು ಖಂಡಿತಾ ಅನುತ್ತೀರ್ಣನೇ ಆಗುತ್ತೇನೆ. ಹಾಗಾದರೆ ಇಂತಹ ವಿದ್ಯೆಗೆ ಅರ್ಥವಿದೆಯೇ? ಯಾವುದಾದರೂ ಒಂದು ನೌಕರಿ ಪಡೆಯುವ ಸಲುವಾಗಿ ಆ ಡಿಗ್ರಿ ಪಡೆದಿದ್ದೆ. ನೌಕರಿ ಸಿಕ್ಕಿತು. ಅಷ್ಟರ ಮಟ್ಟಿಗೆ ನನ್ನ ಡಿಗ್ರಿ ಉಪಯೋಗಕ್ಕೆ ಬಂದಿತು. ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಮಾರ್ಪಾಡು ಮಾಡಿ ಗುಮಾಸ್ತರ ಸೈನ್ಯ ನಿರ್ಮಿಸುತ್ತೇನೆಂದು ಹೇಳಿದ್ದ ಮೆಕಾಲೆಯ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಣ ಪಡೆದ ನಾನು ಒಬ್ಬ ಗುಮಾಸ್ತ ಸೈನಿಕನಾಗುವಲ್ಲಿ ಯಶಸ್ವಿಯಾಗಿದ್ದೆ. 
     ೮೪ ಲಕ್ಷ ಜೀವವೈವಿಧ್ಯಗಳಿವೆಯೆಂದು ಹೇಳಲಾಗುತ್ತಿದ್ದು, ಇವುಗಳಲ್ಲಿ ಮಾನವಜೀವಿ ವಿಶಿಷ್ಟವಾಗಿ ಎದ್ದು ಕಾಣುತ್ತಾನೆ. ಅದಕ್ಕೆ ಕಾರಣ ಆತನಲ್ಲಿನ ವಿವೇಚನಾಶಕ್ತಿ. ವಿವೇಚನಾಶಕ್ತಿ ಬಳಸದಿರುವ, ಬಳಸಲಾಗದಿರುವ ಮಾನವನಿಗೂ ಇತರ ಪ್ರಾಣಿಗಳಿಗೂ ವ್ಯತ್ಯಾಸವೇನಿರುತ್ತದೆ? ಈ ವಿವೇಚನಾಶಕ್ತಿ ಬರಲು ಕಾರಣ ಅವನು ಪಡೆಯುವ ಜ್ಞಾನದಲ್ಲಿದೆ. ಈ ಜ್ಞಾನ ಅವನಿಗೆ ನೋಡುವುದರಿಂದ, ಕೇಳುವುದರಿಂದ, ಸೇವಿಸುವುದರಿಂದ, ಮನೆಯಿಂದ, ಸುತ್ತಮುತ್ತಲಿನ ಪರಿಸರದಿಂದ, ಹಿರಿಯರಿಂದ, ಗುರುಗಳಿಂದ, ಶಿಕ್ಷಣ ಶಾಲೆಗಳಿಂದ ಸಿಗುತ್ತದೆ. ಅವನ ಶಕ್ತ್ಯಾನುಸಾರ ಅವನು ಜ್ಞಾನಿಯಾಗುತ್ತಾನೆ. ಹಿಂದೆ ಮಕ್ಕಳಿಗೆ ಎಂಟು ವರ್ಷಗಳಾದಾಗ ಅವರಿಗೆ ಉಪನಯನ ಸಂಸ್ಕಾರ ನೀಡಿ ಗುರುಕುಲಕ್ಕೆ ಶಿಕ್ಷಣ ಪಡೆಯಲು ಕಳಿಸಲಾಗುತ್ತಿತ್ತು. ಆ ಗುರುಕುಲಗಳಲ್ಲಿ ಶಾಸ್ತ್ರವಿದ್ಯೆ, ಶಸ್ತ್ರವಿದ್ಯೆ ಸೇರಿದಂತೆ ಬದುಕಿಗೆ ಪೂರಕವಾಗುವ ವಿದ್ಯೆಗಳು, ಲಲಿತಕಲೆಗಳು ಮುಂತಾದುವನ್ನು ಕಲಿಯಲು ಅವಕಾಶವಿತ್ತು. ಪ್ರತಿಯೊಬ್ಬನಿಗೂ ತಾನು ಇಷ್ಟಪಡುವ ವಿಷಯದಲ್ಲಿ ಪ್ರಾವೀಣ್ಯತೆ ಪಡೆಯುವುದಕ್ಕೆ ಅವಕಾಶವಿರುತ್ತಿತ್ತು. ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ, ನೈತಿಕತೆಯ ಮಹತ್ವ ಅರಿಯುವಲ್ಲಿ ಸುಯೋಗ್ಯ ಮಾರ್ಗದರ್ಶನ ಸಿಗುತ್ತಿತ್ತು. ಅಂತಹ ಶಿಕ್ಷಣ ಪಡೆದು ಮರಳುತ್ತಿದ್ದ ವಿದ್ಯಾರ್ಥಿಗಳು ದೇಶದ ಸುಯೋಗ್ಯ ಪ್ರಜೆಗಳಾಗಿ ಸಮಾಜದ ಆಸ್ತಿಯಾಗುತ್ತಿದ್ದರು. ಇಂದು ಇಂತಹ ಶಿಕ್ಷಣ ಪದ್ಧತಿಯನ್ನು ಈಗ ಊಹಿಸಿಕೊಳ್ಳಲೂ ಆಗುವುದಿಲ್ಲ.
     ಈಗ ಜ್ಞಾನ ಅನ್ನುವುದು ಕೇವಲ ಹೆಸರಿಗಷ್ಟೇ ಆಗಿದೆ ಎಂಬುದನ್ನು ಒಪ್ಪಲೇಬೇಕು. ಕೆಲವರು ತಮ್ಮ ಹೆಸರಿನ ಜೊತೆಗೆ ತಾವು ಪಡೆದಿರುವ ದೇಶ-ವಿದೇಶಗಳ ಅನೇಕ ಪದವಿಗಳನ್ನು ಹಾಕಿಕೊಂಡಿರುವುದನ್ನು ಕಾಣಬಹುದು. ಅವರು ಅದರಲ್ಲಿ ಪ್ರವೀಣರೂ ಆಗಿರಬಹುದು. ಆದರೆ ಒಂದಂತೂ ಸತ್ಯ. ಅವರು ಏನು ಕಲಿತಿದ್ದಾರೋ ಅದರ ಅಂತಸ್ಸತ್ವವನ್ನು ಅರಿತಿರದಿದ್ದರೆ ಅದೆಲ್ಲವೂ ವ್ಯರ್ಥವೇ ಸರಿ. ಅವರು ಕಲಿತಿರುವ ವಿದ್ಯೆ ತಮ್ಮ ದೈನಂದಿನ ಜೀವನ, ವೃತ್ತಿಗಳಿಗೆ ಪೂರಕವಾಗಿದ್ದರೆ ಅದು ಉಳಿಯಬಹುದು. ಇಲ್ಲದಿದ್ದರೆ ಕ್ರಮೇಣ ಮಸುಕಾಗಿ ಅವು ಪುಸ್ತಕದ ಬದನೆಕಾಯಿ ಮಾತ್ರ ಆಗುತ್ತದೆ. ಅದನ್ನು ನೋಡಬಹುದಷ್ಟೆ, ಬಳಸಲಾಗುವುದಿಲ್ಲ.
     ಉಪನಿಷತ್ತಿನಲ್ಲಿ ನಾರದ-ಸನತ್ಕುಮಾರ ಸಂವಾದ ಎಂದು ಬರುತ್ತದೆ, ಬಹಳ ಮನನೀಯವಾಗಿದೆ. ಸನತ್ಕುಮಾರ ಜ್ಞಾನಪರ್ವತ, ಚಿರಕುಮಾರ. ನಾರ ಅಂದರೆ ನರರ ಜ್ಞಾನ ಮತ್ತು ದ ಎಂದರೆ ಕೊಡುವವನು- ನರರಿಗೆ ಜ್ಞಾನ ಕೊಡುವವನು ನಾರದ. ಸ್ವತಃ ಸಂತ ಮತ್ತು ಜ್ಞಾನಿಯಾಗಿದ್ದ, ಎಲ್ಲವನ್ನೂ ಬಲ್ಲವನಾಗಿದ್ದ ನಾರದ ಸನತ್ಕುಮಾರನ ಬಳಿ ಬಂದು ಕೇಳುತ್ತಾನೆ: "ಎಲ್ಲಾ ವಿಷಯಗಳನ್ನೂ ತಿಳಿದಿದ್ದರೂ ನನ್ನ ಮನಸ್ಸಿಗೆ ಶಾಂತಿಯಿಲ್ಲವಾಗಿದೆ. ದಯಮಾಡಿ ಮಾರ್ಗದರ್ಶನ ನೀಡಿ. ನಾನು ನಿಮ್ಮ ನಮ್ರ ವಿದ್ಯಾರ್ಥಿಯಾಗಿ ಬಂದಿರುವೆ." ಸನತ್ಕುಮಾರ ಹೇಳುತ್ತಾನೆ: "ನಾನು ಏನು ಕಲಿಸಬೇಕು? ನಿನ್ನ ತೊಂದರೆ ಏನು? ಮೊದಲು ನಿನಗೆ ಏನು ಗೊತ್ತಿದೆ ಹೇಳು. ಏನಾದರೂ ಉಳಿದಿದ್ದರೆ ಅದರ ಬಗ್ಗೆ ಕಲಿಸುವೆ." ಇದಕ್ಕೆ ನಾರದ ಉತ್ತರಿಸುತ್ತಾನೆ: "ಗುರುವೆ, ನಾನು ಋಗ್ವೇದದಲ್ಲಿ ಪರಿಣಿತ. ಯಜುರ್ವೇದದಲ್ಲಿ ಯಾಜಮಾನಿಕೆ ಹೊಂದಿರುವೆ. ಸಾಮವೇದದಲ್ಲಿ ನಾನು ಪಾರಂಗತ. ಅಥರ್ವವೇದ ಗೊತ್ತು. ಪುರಾಣಗಳು, ಗ್ರಂಥಗಳು ಮತ್ತು ವ್ಯಾಕರಣಗಳ ಬಗ್ಗೆ ಎಲ್ಲವೂ ತಿಳಿದಿರುವೆ. ಯಾವುದೂ ನನಗೆ ಗೊತ್ತಿಲ್ಲದ್ದು ಇಲ್ಲ. ಗಣಿತ, ಜ್ಯೋತಿಷ್ಯ, ಶಕುನಗಳು, ತರ್ಕ, ಇತಿಹಾಸ, ಸಂಪತ್ವಿದ್ಯೆ, ರಾಜನೀತಿ, ಖಗೋಳವಿದ್ಯೆ, ವೇದದ ಷಡಂಗಗಳ ಬಗ್ಗೆ ಗೊತ್ತಿದೆ. ಭೌತವಿಜ್ಞಾನ ಗೊತ್ತು, ಸಂಗೀತ ಬಲ್ಲೆ, ಕಲೆ, ನೃತ್ಯಗಳಲ್ಲಿ ಪ್ರವೀಣನಿರುವೆ. ಇಂತಹುದನ್ನು ಕಲಿತಿಲ್ಲ, ಗೊತ್ತಿಲ್ಲ ಎಂಬುದಿಲ್ಲ. ಇವು ನಾನು ಅಧ್ಯಯನ ಮಾಡಿರುವ, ತಿಳಿದಿರುವ ವಿಷಯಗಳು." ಸನತ್ಕುಮಾರ ನಾರದನ ಕಲಿಕೆಯ ಕುರಿತು ಹೇಳುತ್ತಾನೆ: "ಇವೆಲ್ಲಾ ಕೇವಲ ಹೆಸರುಗಳು. ಈ ಎಲ್ಲಾ ಜ್ಞಾನಗಳು ಸಾಕಾಗದು. ಅದಕ್ಕೇ ನಿನಗೆ ಶಾಂತಿ ಸಿಕ್ಕಿಲ್ಲ." ನಾರದನೂ ವಿನೀತನಾಗಿ ಹೇಳುತ್ತಾನೆ: "ಹೌದು, ಇವೆಲ್ಲಾ ಕೇವಲ ಹೆಸರುಗಳು, ಕೇವಲ ವಿದ್ಯೆಗಳ ಪಟ್ಟಿ. ಯಾರು ಆತ್ಮನನ್ನು ಅರಿಯುತ್ತಾರೋ ಅವರು ಶಾಂತಿ ಗಳಿಸುತ್ತಾರೆ ಎಂದು ಹೇಳುವುದನ್ನು ಕೇಳಿರುವೆ. ಈ ಆತ್ಮ ಅಂದರೆ ಏನು? ಎಲ್ಲವನ್ನೂ ತಿಳಿದೂ ನಾನು ಅಶಾಂತನಾಗಿದ್ದೇನೆ. ನನ್ನನ್ನು ಅಶಾಂತಸಾಗರದಿಂದ ಪಾರು ಮಾಡಲು ಕೋರಿ ನಿನ್ನಲ್ಲಿಗೆ ಬಂದಿದ್ದೇನೆ." ಹೀಗೆ ಸಂಭಾಷಣೆ ಮುಂದುವರೆಯುತ್ತದೆ.
     ಜ್ಞಾನದ ಅಂತಸ್ಸತ್ವದ ಮಹತ್ವವನ್ನು ಮೇಲಿನ ಸಂಭಾಷಣೆ ಹೇಳುತ್ತದೆ. ಪ್ರಪಂಚದ ಅನೇಕ ವಿಷಯಗಳ ಜ್ಞಾನ ನಮಗೆ ಇರಬಹುದು. ಉದಾಹರಣೆಗೆ ಸೂರ್ಯ, ಸೂರ್ಯಮಂಡಲ, ಇವುಗಳ ಉಗಮ ಹೇಗಾಯಿತು, ಇವುಗಳ ರಚನೆ ಹೇಗಿದೆ, ಇತ್ಯಾದಿಗಳ ಬಗ್ಗೆ ನಮಗೆ ಜ್ಞಾನವಿರಬಹುದು. ಆದರೆ ಈ ಜ್ಞಾನ ಕೇವಲ ಅಭಿಪ್ರಾಯ (ಥಿಯರಿ) ಮಾತ್ರ. ಇವುಗಳ ಈ ಜ್ಞಾನದಿಂದ ಮಾತ್ರ ಇವುಗಳು ನಮ್ಮ ಅಧೀನಕ್ಕೆ ಬರುತ್ತವೆಯೆಂದಾಗಲೀ, ಇವುಗಳು ನಮ್ಮ ಸ್ವತ್ತಾಗುತ್ತದೆಯೆಂಬುದಾಗಲೀ ಇಲ್ಲ. ಥಿಯರಿಗೂ ವಸ್ತುಸ್ಥಿತಿಗೂ ಭಿನ್ನತೆಯಿದೆ. ನಾರದನ ಜ್ಞಾನವೂ ಥಿಯರಿಯ ಜ್ಞಾನದಂತೆ. ಆತನಿಗೆ ವೇದಮಂತ್ರಗಳು ಗೊತ್ತು, ಅವುಗಳ ಹೆಸರುಗಳು ಗೊತ್ತು, ಅವುಗಳ ವಿಚಾರ ಗೊತ್ತು, ಅರ್ಥವೂ ಗೊತ್ತು. ಆದರೆ ಈ ಮಂತ್ರಗಳ ಆತ್ಮ -ಅಂತಸ್ಸತ್ವ- ಆತನ ಅರಿವಿನ ವ್ಯಾಪ್ತಿಯಿಂದ ಹೊರಗಿದೆ ಎಂಬುದು ಸನತ್ಕುಮಾರನ ಅಭಿಮತ. ನಾರದ ಹೀಗಿದ್ದನೋ, ಇಲ್ಲವೋ, ಆದರೆ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ, ಅದೆಂದರೆ ಕೇವಲ ಥಿಯರಿಯ ಜ್ಞಾನ ಪ್ರಯೋಜನಕ್ಕೆ ಬಾರದು, ಅದರೊಳಗಿನ ಆತ್ಮವನ್ನು ಅರಿತಾಗಲೇ ಜ್ಞಾನಕ್ಕೆ ಅರ್ಥ ಬರುತ್ತದೆ ಎಂಬುದು.
     ಹಾಗಾದರೆ ಥಿಯರಿಯ ಜ್ಞಾನ ಪ್ರಯೋಜನವಿಲ್ಲವೆಂದರೆ ಕಲಿಯುವ ಅಗತ್ಯವಿಲ್ಲವೇ ಎಂದರೆ ಅಗತ್ಯವಿದೆ. ಮೂಲಜ್ಞಾನವಿಲ್ಲದೆ ಅದರ ಅಂತಸ್ಸತ್ವವನ್ನು ಅರಿಯುವುದಾದರೂ ಹೇಗೆ? ಈ ಸಿದ್ಧಾಂತದ ಜ್ಞಾನ ನಿಜವಾದ ಜ್ಞಾನ ಪಡೆಯಲು ಸಾಧನವಾಗುತ್ತದೆ. ಕಲಿಕೆಯು ಮಾಹಿತಿ ಸಂಗ್ರಹದಿಂದಲೇ ಆರಂಭವಾಗುವುದು. ಪ್ರಯೋಗ ಸಿದ್ಧಾಂತದ ನಂತರವೇ ಬರುವಂತಹುದು. ಯಾವುದೇ ವಿಷಯದಲ್ಲಿ ಸಿದ್ಧಿಯಾಗಬೇಕೆಂದರೆ ಆ ವಿಷಯದ ಕುರಿತು ಸಮಗ್ರ ಮಾಹಿತಿ ಮೊದಲು ಹೊಂದಬೇಕು. ನಂತರ ಮುಂದಿನ ಹಂತ ಆರಂಭವಾಗುವುದು. ಸಂಗೀತ ಕಲಿತವರು ಬಹಳ ಜನರಿರುತ್ತಾರೆ. ಕಲಾವಿದರೂ ಬಹಳ್ಟದ್ದಾರೆ. ಆಧ್ಯಾತ್ಮಿಕ ಪಥದಲ್ಲಿ ಸಾಗುವವರಿಗೂ ಕಡಿಮೆಯೇನಿಲ್ಲ. ಆದರೆ ಅವರಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತ್ಯುನ್ನತ ಸ್ಥಿತಿಗೆ ಏರಿದವರನ್ನು ಗಮನಿಸಿದರೆ ಅರ್ಥವಾಗುತ್ತದೆ. ಅಂತಹ ಸಾಧಕರು ತಮ್ಮ ವಿಷಯಗಳಲ್ಲಿ ತಾದಾತ್ಮ್ಯತೆ ಹೊಂದಿರುತ್ತಾರೆ. ಆಯಾ ವಿಷಯಗಳ ಅಂತರಂಗವನ್ನು ಅರಿತವರಾಗಿರುತ್ತಾರೆ. ಒಂದು ಅರ್ಥದಲ್ಲಿ ಅವರೇ ವಿಷಯವಾಗಿಬಿಟ್ಟಿರುತ್ತಾರೆ. ಇದು ನೈಜ ಜ್ಞಾನಿಗಳ ಲಕ್ಷಣ.
     ಈಗ ಅರ್ಥವಾಗಿರಬಹುದು. ನಾವು ಯಾವುದೇ ವಿಷಯದಲ್ಲಿ ಪಡೆದಿರುವ ಡಿಗ್ರಿ/ಪದವಿ ಅನ್ನುವುದು ಜ್ಞಾನದ ಪ್ರಾಥಮಿಕ ಹಂತ ಮಾತ್ರ. ನಮ್ಮ ಎದುರಿನಲ್ಲಿ ಸುಮಾರು ಒಂದು ಮೈಲು ದೂರದಲ್ಲಿ ಒಂದು ಪರ್ವತವಿದೆಯೆಂದುಕೊಳ್ಳೋಣ. ಅದು ಅಷ್ಟು ಎತ್ತರವಿದೆ, ಇಷ್ಟು ದೂರದಲ್ಲಿದೆ, ಇತ್ಯಾದಿ ಮಾಹಿತಿಗಳನ್ನು ಹೊರತುಪಡಿಸಿ ನಾವು ಹೆಚ್ಚು ವಿಷಯ ತಿಳಿದುಕೊಳ್ಳಲಾರೆವು. ಅದನ್ನು ಪೂರ್ಣವಾಗಿ ತಿಳಿಯಲು ಅದರ ಬಳಿಯೇ ಹೋಗಬೇಕು. ಹಾಗೆಯೇ ವಿಷಯದ ಒಳಹೊಕ್ಕು ಅದರೊಳಗೆ ಒಂದಾದಾಗ ಜ್ಞಾನ ಸಿದ್ಧಿಸುತ್ತದೆ. ಅಲ್ಲಿಯವರೆಗೆ ಕಲಿತಿರುವುದನ್ನು ಧ್ಯಾನಿಸುತ್ತಿರಬೇಕು, ಮನನ ಮಾಡುತ್ತಿರಬೇಕು, ಚಿಂತಿಸುತ್ತಿರಬೇಕು. ಕಲಿತಿರುವಷ್ಟರಲ್ಲಿ ಪ್ರಾವೀಣ್ಯತೆ ಪಡೆದ ನಂತರ ಮುಂದಿನ ಹಂತಕ್ಕೆ ಹೋಗಬೇಕು. ಪಡೆಯುವ ಜ್ಞಾನಕ್ಕೂ ಇತಿಮಿತಿಗಳಿರುತ್ತವೆ. ಶಿಕ್ಷಕ ವೃತ್ತಿಯವರಿಗೆ, ವೈದ್ಯಕೀಯ ವೃತ್ತಿಯವರಿಗೆ ಅವರುಗಳು ಪಡೆದ ಜ್ಞಾನ ಮುಂದೂ ಸಹ ಉಪಯೋಗಕ್ಕೆ ಬರುತ್ತದೆ. ಅದೇ ಶಿಕ್ಷಣ ನದಿಯಲ್ಲಿ ದೋಣಿಯಲ್ಲಿ ಸಾಗುತ್ತಿದ್ದು, ಪ್ರವಾಹದ ಕಾರಣ ಅಪಾಯದ ಸ್ಥಿತಿ ಎದುರಾದಾಗ ಉಪಯೋಗಕ್ಕೆ ಬರದು. ಆಗ ಬೇರೆಯದೇ ರೀತಿಯ ಜ್ಞಾನ ಅಗತ್ಯವಿರುತ್ತದೆ.  
     ಇಂದು ಶಿಕ್ಷಣ ಅನ್ನುವುದು ಮಾರಾಟದ ಸರಕಾಗಿದೆ. ಪದವಿಗಳು, ಡಾಕ್ಟರೇಟುಗಳನ್ನೂ ಕೊಳ್ಳಲು ಅವಕಾಶಗಳಿರುವ ಇಂದಿನ ದಿನಗಳಲ್ಲಿ ನೈಜ ಜ್ಞಾನ ಕಲಿಸುವ ಶಿಕ್ಷಣ ಪದ್ಧತಿ ಜಾರಿಗೆ ಬರುತ್ತದೆ ಎಂದು ನಿರೀಕ್ಷಿಸುವುದು ವಿಪರ್ಯಾಸವೇ ಸರಿ. ಸಾಧಕರು ತಮ್ಮ ತಮ್ಮ ಅಭಿರುಚಿ, ಆಸಕ್ತಿಗಳನ್ನು ಆಧರಿಸಿ ಸ್ವಂತ ಸಾಧನೆಯ ಮೂಲಕ ಜ್ಞಾನ ಗಳಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಹೀಗಿದ್ದೂ ಹಲವಾರು ಸಾಧಕರುಗಳನ್ನು ಹಲವು ರಂಗಗಳಲ್ಲಿ ನಾವು ಕಾಣುತ್ತಿದ್ದೇವೆ ಅಂದರೆ ಅಂತಹವರ ಜ್ಞಾನಾಕಾಂಕ್ಷೆ ಉನ್ನತ ಸ್ತರದಲ್ಲಿದೆ ಎಂದೇ ಅರ್ಥ. ಅವರುಗಳೇ ಏನಾದರೂ ಸಾಧಿಸಬೇಕೆಂದುಕೊಂಡವರಿಗೆ ಮಾರ್ಗದರ್ಶಿಗಳು, ಪ್ರೋತ್ಸಾಹಕರು ಹಾಗೂ ಆದರ್ಶಪ್ರಾಯರು.
-ಕ.ವೆಂ.ನಾಗರಾಜ್.
**************
ಚಿತ್ರಕೃಪೆ: http://www.fernhurst.net/images/ReadingManiacs.gif

ದಿನಾಂಕ 26.08.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ'ದಲ್ಲಿ ಪ್ರಕಟಿತ: 




ಮಂಗಳವಾರ, ಸೆಪ್ಟೆಂಬರ್ 1, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -17: ಮಾನವ ಧರ್ಮ ಪಾಲಿಸೋಣ


     ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯುಷಿ ಪಂ. ಸುಧಾಕರ ಚತುರ್ವೇದಿಯವರ ವಿಚಾರಗಳು ಸತ್ಯಾನ್ವೇಷಿಗಳಿಗೆ ಮಾರ್ಗದರ್ಶಿಯಾಗಿವೆ.  ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದವರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ಚತುರ್ವೇದಿಯಾಗಿ, 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಗಳಿಸಿದವರು.  ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು. ಇವರ 'ವೇದೋಕ್ತ ಜೀವನ ಪಥ' ಪುಸ್ತಕದಲ್ಲಿ ಒಬ್ಬ ಆದರ್ಶ ಮಾನವ ಹೇಗಿರಬೇಕು ಎಂಬುದನ್ನು ವೇದಮಂತ್ರಗಳ ಹಿನ್ನೆಲೆಯಲ್ಲಿ ವಿವರಿಸಿರುವುದು ಸಾಧಕರುಗಳಿಗೆ ಮಾರ್ಗದರ್ಶಿಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ವಿಚಾರಗಳನ್ನು ಸಂಗ್ರಹಿಸಿ ಕೊಟ್ಟಿರುವ ಈ ಲೇಖನಮಾಲೆ ಈ ಕಂತಿನೊಂದಿಗೆ ಮುಕ್ತಾಯವಾಗುತ್ತಿದೆ.
   ***************
      ಆಕಾಶದಲ್ಲಿ ಮೋಡ ಕಂಡಾಗ, ಆಕಾರದಲ್ಲಿ ತುಂಬಾ ಚಿಕ್ಕ ಚಿಕ್ಕದಾದ ಇರುವೆಗಳು ಏನು ಮಾಡುತ್ತವೆ ಗೊತ್ತಾ? ದವಸ, ಆಹಾರವನ್ನು ಹೊತ್ತುಕೊಂಡು ಸಾಲು ಸಾಲಾಗಿ ಹೋಗಿ ಗೂಡಲ್ಲಿ ಇಟ್ಟುಕೊಳ್ಳುತ್ತವೆ. ಯಾಕೆ ಅಂದ್ರೆ ಮಳೆಗಾಲದಲ್ಲಿ ಹೊರಕ್ಕೆ ಬರಕ್ಕೆ ಆಗಲ್ಲವಲ್ಲ, ಅದಕ್ಕೆ. ಅಷ್ಟು ಸಣ್ಣ ಇರುವೆಗೆ ತಲೆ ಎಷ್ಟಿರಬಹುದು? ಅದರ ಒಳಗೆ ಮೆದುಳು ಎರಬಹುದು? ಅಷ್ಟು ಸೂಕ್ಷ್ಮವಾದ ಮೆದುಳು ಇರುವೆಗೆ ಕೂಡಾ ಇದೆ. ಹೀಗಿರುವಾಗ ಆ ಪರಮಾತ್ಮನ ವಿಷಯದಲ್ಲಿ ನಾವು ಮಾತಾಡೋದೇನು? ಅವನನ್ನು ಮರೆಮಾಡಿ ನಾವು ಕದಿಯಬಹುದು, ಮೋಸ ಮಾಡಬಹುದು, ಸುಳ್ಳು ಹೇಳಬಹುದು ಅಂತ ಹೇಳಿ ನಾವು ಭಾವಿಸುತ್ತೇವಲ್ಲಾ, ಅದು ಸಾಧ್ಯವಾ? ಅವನು ಸಹಸ್ರಾಕ್ಷ, ಸಹಸ್ರಪಾತ್, ಅವನಿಗೆ ಎಲ್ಲಾ ಕಡೆಯೂ ಕಣ್ಣಿದೆ, ಅಂದರೆ ಕಣ್ಣಿಲ್ಲದೆ ನೋಡತಕ್ಕ ಶಕ್ತಿ ಆ ವಿಶ್ವಚೇತನನಲ್ಲಿ ಇದೆ. ಅವನಿಗೆ ಕಿವಿಯಿಲ್ಲ, ದೇವರ ಕಿವಿ ಯಾವುದು ತೋರಿಸುತ್ತೀರಾ? ಆದರೆ ಅವನು ಕೇಳದೇ ಇರುವ ಪದಾರ್ಥವೇ ಇಲ್ಲ. ಪ್ರತಿಯೊಂದನ್ನೂ ಅವನು ಕೇಳ್ತಾನೆ, ಪ್ರತಿಯೊಬ್ಬರನ್ನೂ ಅವನು ನೋಡ್ತಾನೆ. ಎಲ್ಲವೂ ಅವನಿಗೆ ಗೊತ್ತಾಗುತ್ತೆ. ಮತ್ತೆ ಅವನಿಗೆ ಕಾಲು ಇದೆಯಾ? ಇಲ್ಲ. ಆದರೆ ಅವನು ಇಲ್ಲದೆ ಇರುವ ಜಾಗವೇ ಇಲ್ಲ. ಪಾತ್ ಅಂದರೆ ಕಾಲು ಅಂತ ಇಟ್ಕೋಬೇಡಿ. ಕಾಲಿನ ಕೆಲಸ ಏನು? ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗೋದು. ಅವನು ಮೊದಲೇ ಇದ್ದು ಬಿಟ್ಟಿದ್ದಾನೆ. ಹೋಗೋದೆಲ್ಲಿಗೆ? ಆ ಸಮಸ್ಯೆಯೇ ಇಲ್ಲ ಅವನಿಗೆ. ನಾವು ಹೇಳಿಕೊಳ್ಳುತ್ತೇವಲ್ಲಾ, 'ಅಪರಾಧ ಸಹಸ್ರಾಣಿ . . ' 'ಹಗಲೂ ರಾತ್ರಿ ಏನೇನೋ ಪಾಪ ಮಾಡಿರ್ತೀನಿ. ನಿನ್ನ ದಾಸ ಅಂದುಕೊಂಡುಬಿಟ್ಟು ನನ್ನನ್ನು ಕ್ಷಮಿಸು' ಅಂತ! ಹಾಗೆ ದೇವರು ಕ್ಷಮಿಸಲು ಪ್ರಾರಂಭಿಸಿದರೆ ಪ್ರಪಂಚ ನಡೆಯುವ ಹಾಗೇ ಇರಲಿಲ್ಲ, ಯಾವ ಕೆಲಸವೂ ನಡೆಯುವ ಹಾಗಿರಲಿಲ್ಲ. ಆ ಪರಮಾತ್ಮನ ದಯೆ, ಎಲ್ಲರ ಮೇಲಿದೆ. ತಾಯಿ-ತಂದೆಗಳು ತಪ್ಪು ಮಾಡಿರುವ ಮಕ್ಕಳನ್ನು ದಂಡಿಸುತ್ತಾರೆ, ಹಾಗೆಂದು ಅವರಿಗೆ ಮಕ್ಕಳ ಮೇಲೆ ಕೋಪ ಇದೆಯೇನು? ಇಲ್ಲ, ಮಗು ಸುಧಾರಿಸಲಿ, ಒಳ್ಳೆಯ ಗುಣ ಕಲಿತುಕೊಳ್ಳಲಿ ಅಂತ ದಂಡಿಸುತ್ತಾರೆ. ಆ ಪರಮಾತ್ಮ ವಿಶ್ವತಶ್ಚಕ್ಷು, ಎಲ್ಲಾ ಕಡೆಯೂ ನೋಡಬಲ್ಲ! ವಿಶ್ವತೋಮುಖ- ಎಲ್ಲಾ ಕಡೆಯೂ ಮುಖ ಇರುವವನು! ಒಂದೇ ಕಡೆ ಇದಾನಾ ಅವನು? ಎಲ್ಲೆಡೆಯೂ ಇದ್ದಾನೆ.
ನೆನಪಿನಲ್ಲಿಡೋಣ
     ವೇದಗಳು ಆತ್ಮಾವಲಂಬನೆಯ ಭವ್ಯಪಾಠವನ್ನು ಕಲಿಸುತ್ತವೆ. ಪ್ರತಿಯೊಬ್ಬ ಜೀವಾತ್ಮನ ಏಳಿಗೆ ಅಥವ ಬೀಳಿಗೆ ಸ್ವತಃ ಅವನೇ ಕಾರಣ, ಬೇರೆಯವರಲ್ಲ. ಈ ಮಂತ್ರ ಹೇಳುತ್ತದೆ:
ಸ್ವಯಂ ವಾಜಿಸ್ವನ್ವಂ ಕಲ್ಪಯಸ್ವ ಸ್ವಯಂ ಯಜಸ್ವ| ಸ್ವಯಂ ಜುಷಸ್ವ ಮಹಿಮಾ ತೇsನ್ಯೇನ ನ ಸನ್ನಶೇ|| (ಯಜು.23.15.)
     ಓ ಬಲಶಾಲಿ, ಅನ್ನವಾನ್, ಜ್ಞಾನವಾನ್ ಜೀವಾತ್ಮ! ಸ್ವತಃ ಶರೀರಧಾರ್ಢ್ಯವನ್ನು ಸಾಧಿಸಿಕೋ. ಸ್ವತಃ ಸತ್ಕರ್ಮ ಮಾಡು. ಸ್ವತಃ ಸಂತೋಷಪಡು. ನಿನ್ನ ಮಾಹಾತ್ಮ್ಯ ಬೇರೆಯವರಿಂದ ಸಿದ್ಧಿಸದು ಎಂದು ಇದರ ಅರ್ಥ. ಸತ್ಯವಾದ ಮಾತು. ಬೇರೆಯವರ ಪುಣ್ಯವನ್ನು ದೋಚಿಕೊಂಡು ತಾನು ಸ್ವರ್ಗ ಅಥವಾ ಮೋಕ್ಷಕ್ಕೆ ಹೋಗಲು ಮೂರು ಕಾಲಕ್ಕೂ ಸಾಧ್ಯವಿಲ್ಲ. ಎಲ್ಲರೂ ಪ್ರತಿಯೊಂದು ಕ್ಷಣದಲ್ಲಿಯೂ ನೆನಪಿಡಲೇಬೇಕಾದ ಅಂಶವೆಂದರೆ ಪ್ರತಿಯೊಬ್ಬ ಜೀವಾತ್ಮನೂ ತನ್ನ ಕರ್ಮಕ್ಕೆ -ಅದು ಪುಣ್ಯವಾಗಿರಲಿ, ಪಾಪವಾಗಿರಲಿ- ತಾನೇ ಹೊಣೆಗಾರ. ಸ್ವೇಚ್ಛೆಯ ಹಾಗೂ ಹಿಂಸಾಮಯ ಜೀವನ ಸಾಗಿಸುತ್ತಾ. 'ನಾನು ಈ ಮಹಾತ್ಮನನ್ನು ನಂಬಿದ್ದೇನೆ, ಆದುದರಿಂದ ಮುಕ್ತಿ ನನಗೆ ಕಟ್ಟಿಟ್ಟ ಬುತ್ತಿ' ಎಂದು ಯಾರೂ ಹೇಳುವಂತಿಲ್ಲ.
     ವೇದೋಕ್ತ ಕರ್ಮಫಲಸಿದ್ಧಾಂತ ಸರ್ವತಂತ್ರ, ಸಾರ್ವಭೌಮ, ಸಾರ್ವಕಾಲಿಕ ಸತ್ಯ. ಈ ವೇದಮಂತ್ರ ಇದನ್ನೇ ಸಾರುತ್ತಿದೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾವಿಶಾತಿ ||  (ಅಥರ್ವ.12.3.48.)
     ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ ಮಧ್ಯೆ ಸೇರಿಕೊಂಡು ನಾನು ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದೆ. ಬೇಯಿಸಿದ ಅನ್ನವನ್ನು (ಕರ್ಮಫಲವಿಪಾಕ) ಅಡುಗೆ ಮಾಡಿದವನೇ ತಿನ್ನಲೇಬೇಕಾಗುತ್ತದೆ. ಅರ್ಥ ಸ್ಪಷ್ಟವಾಗಿದೆ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ. ಆದ ಕಾರಣ ಅನ್ಯ ವ್ಯಕ್ತಿಯ ಹೆಗಲ ಮೇಲೆ ತನ್ನ ಪಾಪದ ಹೊರೆ ಹೊರಿಸಿ, ಮುಕ್ತನಾಗುತ್ತೇನೆಂದು ಭಾವಿಸುವುದು ಆತ್ಮಘಾತಕವಾದ ಘೋರ ಅಜ್ಞಾನ. ಮಾಡಿದ್ದುಣ್ಣೋ ಮಹರಾಯ!
ಮಾನವ ಧರ್ಮದ ಮೂರು ಅಭಿನ್ನ ಅಂಗಗಳು
      ಜ್ಞಾನ, ಕರ್ಮ ಮತ್ತು ಉಪಾಸನೆಗಳು ಮಾನವ ಧರ್ಮದ ಮೂರು ಅಭಿನ್ನ ಅಂಗಗಳು. ಈ ಮೂರರಲ್ಲಿ ಯಾವುದೊಂದು ನಷ್ಟವಾದರೂ, ಧರ್ಮ ಪರಿಪೂರ್ಣವಾಗಿ ಉಳಿಯುವುದಿಲ್ಲ. ವೇದಗಳ ದೃಷ್ಟಿಯಲ್ಲಿ ಧಾರ್ಮಿಕರಾದವರು ಹೇಗಿರುತ್ತಾರೆಂದರೆ:
ಏತೇ ಅಸ್ಯಗ್ರಮಾಶವೋssತಿ ಹ್ವರಾಂಸಿ ಬಭ್ರವಃ | ಸೋಮಾ ಋತಸ್ಯ ಧಾರಯಾ || (ಋಕ್. 9.63.4.)
     ಈ ಆಲಸ್ಯ-ಪ್ರಮಾದರಹಿತರೂ, ಶುಭ್ರವಾದ ಆಚಾರ-ವಿಚಾರಗಳನ್ನುಳ್ಳವರೂ, ಶಾಂತಿಗುಣಪ್ರಧಾನರೂ ಆದ ಉತ್ತಮ ಮಾನವರು, ಧರ್ಮದ ಪ್ರವಾಹದೊಂದಿಗೆ ನಡೆಯುತ್ತಾ, ಕುಟಿಲ ಭಾವನೆಗಳನ್ನು ದಾಟಿ, ಮುಂದೆ ಸಾಗುತ್ತಾರೆ.
ಇಂದ್ರಂ ವರ್ಧಂತೋ ಅಪ್ತುರಃ ಕೃಣ್ವಂತೋ ವಿಶ್ವಮಾರ್ಯಮ್ | ಅಪಘ್ನಂತೋ ಅರಾವ್ಣಃ || (ಋಕ್. 9.63.5.)
    ಕಾರ್ಯ ಮಾಡುವುದರಲ್ಲಿ ವೇಗಶಾಲಿಗಳಾದ ಇವರು, ತಮ್ಮ ಆತ್ಮವಿಕಾಸ ಮಾಡಿಕೊಳ್ಳುತ್ತಾ, ಸಮಸ್ತ ಜಗತ್ತನ್ನೂ ಶ್ರೇಷ್ಠವಾಗಿ ಮಾಡುತ್ತಾ, ಸಂಕುಚಿತ ಭಾವನೆಗಳನ್ನು ತುಂಡರಿಸಿ ಚೆಲ್ಲುತ್ತಾರೆ.
ಸುತಾ ಅನು ಸ್ವಮಾ ರಜೋsಭ್ಯರ್ಷಂತಿ ಬಭ್ರವಃ || ಇಂದ್ರಂ ಗಚ್ಛಂತ ಇಂದವಃ || (ಋಕ್. 9.63.6.)
     ಭಗವಂತನ ಮಕ್ಕಳಾದ ನಿರ್ಮಲಚರಿತರಾದ, ನೀರಸಜೀವನವನ್ನು ಸರಸಗೊಳಿಸುವ ಇವರು, ಸರ್ವಶಕ್ತಿಮಾನ್ ಪ್ರಭುವಿನೆಡೆಗೆ ಹೋಗುತ್ತಾ, ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ, ನಿರಂತರವಾಗಿ ಜೀವನದ ಎಲ್ಲ ಮುಖಗಳಿಂದಲೂ ಮುಂದುವರೆಯುತ್ತಾರೆ.
     ಮಂತ್ರಗಳು ಅತೀ ಸ್ಪಷ್ಟವಾಗಿವೆ. ಆದರ್ಶ ಜೀವನಪಥದ ವೈಭವವಿದು. ತಾವು ಒಳ್ಳೆಯವರಾದರೆ ಸಾಲದು. ಸಂಪೂರ್ಣ ಮಾನವ ಸಮಾಜವನ್ನೇ ಒಳಿತಾಗಿ ಮಾಡಬೇಕು. ಈರೀತಿ ಆಗುವ ಮತ್ತು ಮಾಡುವ ಶಕ್ತಿ ಸಿದ್ಧಿಸುವುದು ನಿಷ್ಕಳ ಜ್ಞಾನಪ್ರಾಪ್ತಿಯಿಂದ, ಪರಿಶುದ್ಧ ಕರ್ಮಾನುಷ್ಠಾನದಿಂದ, ಪವಿತ್ರ ಮನಸ್ಸಿನಿಂದ ಪರಮಾತ್ಮನ ಉಪಾಸನೆಯನ್ನು ಆಚರಿಸುವುದರಿಂದ!
     ಈ ಮಂತ್ರ ಮಾನವರಿಗೆ ಹೇಗೆ ನಡೆಯಬೇಕೆಂಬ ಬಗ್ಗೆ ಮಾರ್ಗದರ್ಶನ ನೀಡುತ್ತಿದೆ:
ಅಶ್ಮನ್ವತೀ ರೀಯತೇ ಸಂ ರಭದ್ವಮುತ್ತಿಷ್ಠತ ಪ್ರ ತರತಾ ಸಖಾಯಃ |
ಅತ್ರಾ ಜಹೀಮೋ ಅಸನ್ನಶೇವಾಃ ಶಿವಾನ್ ವಯಮುತ್ತರೇಮಾಭಿ ವಾಜಾನ್ || (ಋಕ್.10.53.8)
     ದೊಡ್ಡ ದೊಡ್ಡ ವಿಪತ್ತುಗಳೆಂಬ ಕಲ್ಲು ಗುಂಡುಗಳಿಂದ ಕೂಡಿದ ಈ ಜಗನ್ನದಿ ಹರಿಯುತ್ತಿದೆ. ಮಿತ್ರರೇ, ಏಳಿರಿ, ಒಟ್ಟಾಗಿರಿ, ದಾಟಿರಿ. ಕೆಟ್ಟದ್ದನ್ನೆಲ್ಲಾ ಇಲ್ಲಿಯೇ ಬಿಟ್ಟುಬಿಡೋಣ. ಒಳ್ಳೆಯದನ್ನೆಲ್ಲಾ ಮಾತ್ರ ತೆಗೆದುಕೊಂಡು ಮುಂದೆ ಹೋಗೋಣ! ಎಂತಹ ಉದಾತ್ತವಾದ ಕರೆಯಿದು! ಆದರ್ಶ ಮಾನವರಾಗಿ ಬದುಕುವುದು ನಮ್ಮ ಧ್ಯೇಯವಾಗಲಿ.
"ಮಾನವ ಧರ್ಮವನ್ನು ಪಾಲಿಸೋಣ, ನಿಜ ಮಾನವರಾಗಿ ಬಾಳೋಣ"
                                      (ಮುಗಿಯಿತು.)
-ಕ.ವೆಂ.ನಾಗರಾಜ್.
***************
ದಿನಾಂಕ  12.8.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ: