ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ಜೂನ್ 29, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -6: ಆಚಾರ ಮತ್ತು ವಿಚಾರ


     ಪಂ. ಸುಧಾಕರ ಚತುರ್ವೇದಿಯವರು ವೇದದ ಹೆಸರಿನಲ್ಲಿ ನಡೆಸುವ ಅವೈದಿಕ ಆಚರಣೆಗಳ ಕುರಿತು ಅಸಮಾಧಾನಿಗಳು. ಅವರ ಮಾತುಗಳಲ್ಲಿ ಸತ್ಯದ ಪ್ರಖರತೆ ಇದೆ, ಅನ್ಯಾಯದ ಆಚರಣೆಗಳನ್ನು ಮುಲಾಜಿಲ್ಲದೆ ವಿರೋಧಿಸುವ ಕಠಿಣತೆ ಇದೆ, ಹಾಸ್ಯ, ವ್ಯಂಗ್ಯಗಳ ಲೇಪವೂ ಇದೆ. ನಾವು ಮಾಡುವ ಕ್ರಿಯೆಗಳಿಗೆ ಅರ್ಥವಿರಬೇಕು, ಗೊತ್ತಿರದಿದ್ದರೆ ತಿಳಿದುಕೊಳ್ಳಬೇಕು ಎಂಬುದು ಅವರ ಆಗ್ರಹ. ವಿನೋದಪ್ರಿಯರೂ ಆದ ಪಂಡಿತರು ಬ್ರಹ್ಮಚಾರಿಗಳು. ಬ್ರಹ್ಮಚಾರಿ ಎಂದರೆ ಕೇವಲ ಮದುವೆಯಾಗದಿರುವುದಲ್ಲ, ಬ್ರಹ್ಮನಲ್ಲಿ ಚರಿಸುವವನು ಎಂದೂ ಆರ್ಥ. ನಿಜವಾದ ಅರ್ಥದಲ್ಲಿ ಬ್ರಹ್ಮಚಾರಿಯಾಗಿರುವ ಪಂಡಿತರನ್ನು ಒಬ್ಬರು ಅವರು ಏಕೆ ಮದುವೆಯಾಗಲಿಲ್ಲ ಎಂದು ಕೇಳಿದ್ದರಂತೆ. ಅದಕ್ಕೆ ಪಂಡಿತರು, 'ನನ್ನ ತಾರುಣ್ಯ ಅಧ್ಯಯನ ಮತ್ತು ಸ್ವಾತಂತ್ರ್ಯ ಹೋರಾಟಗಳಲ್ಲಿ ಕಳೆಯಿತು. ಸುಮಾರು 15 ವರ್ಷಗಳು ಜೈಲಿನಲ್ಲಿದ್ದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ನನಗೆ 51 ವರ್ಷಗಳಾಗಿದ್ದವು. ಆ ವಯಸ್ಸಿನಲ್ಲಿ ನನಗೆ ಯಾರು ಹೆಣ್ಣು ಕೊಡುತ್ತಾರೆ?' ಎಂದು ಹಾಸ್ಯವಾಗಿ ಉತ್ತರಿಸಿದ್ದರಂತೆ! ಇವರ ವಿಚಾರಧಾರೆಯ 6ನೆಯ ಕಂತು ಇಲ್ಲಿದೆ.
****************
ಆಚಾರ-ವಿಚಾರ
     ಕೆಲವರು ಸಂಪ್ರದಾಯಸ್ಥ ಮಡಿವಂತರಿರುತ್ತಾರೆ. ಅವರು ಸ್ನಾನ ಮಾಡಿಕೊಂಡು ಬರುವಾಗ ಎದುರಿಗೆ ಇತರರು ಬರುವಂತೆಯೇ ಇಲ್ಲ. ಬ್ರಾಹ್ಮಣರ ಪೈಕಿಯೂ ಇತರ ಪಂಗಡದವರು ಬಂದರೂ, 'ನಮಸ್ಕಾರ ಆಚಾರ್ರೇ, ದೀಕ್ಷಿತರೇ' ಅಂತ ಹೇಳಿಬಿಡ್ತಾರೆ. ಅವರು ಹೋದ ನಂತರ ಬಚ್ಚಲು ಮನೆಗೆ ಹೋಗಿ ಪುನಃ ಸ್ನಾನ ಮಾಡಿಕೊಂಡು 'ಶುಚಿಯಾದೆ' ಅಂದುಕೊಳ್ಳುತ್ತಾರೆ! ಪಕ್ಕದ ಮನೆಯಲ್ಲಿ ಬಿಡುವ ಹೂವು ಕದ್ದು ಕಿತ್ತು ದೇವರಿಗೆ ಪೂಜೆ ಮಾಡುತ್ತಾರೆ. ಇದರಿಂದ ಪುಣ್ಯ ಬರುತ್ತದೆಯೇ? ಇದರಲ್ಲಿ ಎರಡು ಪಾಪದ ಕೆಲಸ ಆಗುತ್ತದೆ. ಹೂವನ್ನು ಕದ್ದು ಕಿತ್ತಿದ್ದೊಂದು ಪಾಪ, ಇನ್ನೂ ಅರಳದಿರುವ ಹೂವು, ಅಲ್ಲೇ ಇದ್ದಿದ್ದರೆ ಪೂರ್ತಿ ಅರಳಿ ಬೀಳುವವರೆಗೆ ಎಷ್ಟು ಪರಿಮಳ ಬೀರಿ ಮುದ ತರುತಿತ್ತೋ, ಆ  ಹೂವನ್ನು ಕಿತ್ತು ಬಾಡಿಸಿದ್ದು ಇನ್ನೊಂದು. ಅದನ್ನು ಕಿತ್ತರೆ ಅದಕ್ಕೆ ನೋವಾಗುತ್ತದೆ, ನಮಗೆ ಗೊತ್ತಾಗುವುದಿಲ್ಲ.  ನಾನು ಹೇಳುವುದು ನಿಮಗೆ ಇಷ್ಟವಾಗದೇ ಹೋಗಬಹುದು, ನಿಮಗೆ ಕೋಪ ಬರಬಹುದು. ಆದರೆ, ಹೀಗೆ ಆಲೋಚನೆ ಮಾಡಿ ಯಾರು ನಡೆದುಕೊಳ್ಳುತ್ತಾರೊ ಅವರನ್ನು ಮನುಷ್ಯ ಅಂತ ಕರೆಯಬಹುದು, ಆಲೋಚನೆ ಮಾಡದಿರುವವರು ಕೇವಲ ಮನುಷ್ಯರ ಆಕಾರ ಹೊಂದಿರುವವರು ಅಷ್ಟೆ.
ಯಾವ ಶಾಸ್ತ್ರ?
    ಮನಸ್ಸಿನಲ್ಲಿ ಎಲ್ಲರೂ ಸುಖವಾಗಿರಲಿ ಅನ್ನುತ್ತೇವೆ, ಆದರೆ  'ನಾವು' ಅನ್ನುವುದನ್ನು ಬಿಡುವುದಿಲ್ಲ. ನಮ್ಮ ಸ್ವಾರ್ಥವನ್ನು ನಾವು ಬಿಡುವುದಿಲ್ಲ. 'ಗೋಬ್ರಾಹ್ಮಣೇಭ್ಯಃ ಶುಭಂಭವತು' ಅಂತೀವಿ, ಗೋವು, ಬ್ರಾಹ್ಮಣರಿಗೆ -ಅವರೂ ಒಂದು ತರಹ ಪ್ರಾಣಿಗಳೇ ಅಂದುಕೊಳ್ಳಿ - ಶುಭವಾಗಲಿ ಅಂತ. ಈ ಗೋವು, ಬ್ರಾಹ್ಮಣರು ಈ ಪ್ರಪಂಚದಿಂದ ಹೊರಗಿದ್ದಾರೆಯೇ? 'ಲೋಕಾ:ಸಮಸ್ತಾಃ ಸುಖಿನೋಭವಂತು' ಎಂದು ವೇದ ಹೇಳುತ್ತಿರುವಾಗ ಇವೆರಡನ್ನು ಮಾತ್ರಾ ಎತ್ತಿ ಏಕೆ ತೋರಿಸಬೇಕು? ಹೀಗೆ ತಂದೆಗೆ ಹೇಳಿದಾಗ ಅವರಿಗೆ ಬಹಳ ಕೋಪ ಬರುತ್ತಿತ್ತು. 'ಏನಪ್ಪಾ ನೀನು, ಶಾಸ್ತ್ರಕ್ಕೆ ವಿರುದ್ಧವಾಗಿ ಮಾತನಾಡುತ್ತೀ' ಅನ್ನುತ್ತಿದ್ದರು. 'ಅದು ಯಾವ ಶಾಸ್ತ್ರ?' ಅಂತ ಕೇಳಿದರೆ ಅವರಿಗೆ ಸರಿಯಾಗಿ ಉತ್ತರ ಕೊಡಲಾಗುತ್ತಿರಲಿಲ್ಲ, 'ಶಾಸ್ತ್ರ ಅಂದರೆ ಶಾಸ್ತ್ರ ಕಣಯ್ಯಾ' ಎಂದು ಸಿಡುಕುತ್ತಿದ್ದರು. ನನ್ನ ತಾಯಿ, 'ಅವನ ಮೇಲೆ ಏಕೆ ಸಿಡುಕುತ್ತೀರಿ? ಗೊತ್ತಿದ್ದರೆ ಉತ್ತರ ಹೇಳಿ, ಇಲ್ಲದಿದ್ದರೆ ಸುಮ್ಮನಿರಿ' ಎಂದು ಅನ್ನುತ್ತಿದ್ದರು. ಸಂಸ್ಕೃತದಲ್ಲಿ ಇರುವುದೆಲ್ಲಾ ಶಾಸ್ತ್ರವಾ?  ಇವೆಲ್ಲಾ ಆಲೋಚನೆ ಮಾಡಿದರೆ ಮಾತ್ರ ಗೊತ್ತಾಗುವುದೇ ಹೊರತು, ಇಲ್ಲದಿದ್ದರೆ ಗೊತ್ತಾಗುವುದಿಲ್ಲ.
ಹೇಳುವುದು ಒಂದು . . .
   ನಾವು ಸತ್ಕರ್ಮಕ್ಕೆ ವಿಮುಖರಾಗದಿರೋಣ, ಐಶ್ವರ್ಯ ಇದ್ದಾಗ ಆಡಂಬರದಿಂದ ಹಬ್ಬ, ನಾಮಕರಣ, ಉಪನಯನ, ಮದುವೆ, ಇತ್ಯಾದಿಗೆ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಬಡವ ಏನು ಮಾಡಬೇಕು? ಬಡವ, ಭಾಗ್ಯವಂತ ಎಲ್ಲಾ ನಾವು ಮಾಡಿಕೊಂಡಿರೋದು, ಬೆಂಕಿಯಲ್ಲಿ, ಗಾಳಿಯಲ್ಲಿ, ಭೂಮಿಯಲ್ಲಿ, ಆಕಾಶದಲ್ಲಿ, ನೀರಿನಲ್ಲಿ ಎಲ್ಲಾ ಕಡೆ ಐಶ್ವರ್ಯ ತುಂಬಿಕೊಂಡಿದೆ. ಬುದ್ಧಿಹೀನರಾದ ನಾವು ಆ ಐಶ್ವರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತೇವೆ. ವಾಯುವಿನಲ್ಲಿ ಪ್ರಾಣ ಕೊಡುವ ಶಕ್ತಿ ಇದೆ. ಜನ ಹೋಮ, ಹವನ ಮಾಡಿ ಗಾಳಿಯಲ್ಲಿ ಶುದ್ಧತೆ ಹರಡುವುದಿಲ್ಲ, ಬೀಡಿ, ಸಿಗರೇಟು, ಚುಟ್ಟಾ ಸೇದಿ ಗಾಳಿಯಲ್ಲಿ ಹೊಗೆ ಬಿಟ್ಟು ಅವರೂ ಹಾಳಾಗಿ ನಮ್ಮಂತಹವರನ್ನೂ ಹಾಳು ಮಾಡುತ್ತಾರೆ. ಯಾತಕ್ಕೆ? ಪಂಚಭೂತಗಳನ್ನು ಶುದ್ಧವಾಗಿಡಲು ಕರ್ಮ ಮಾಡಬೇಕು. ಯಜ್ಞ ಮಾಡುವುದಕ್ಕೆ ತುಪ್ಪ ಇಲ್ಲ, ಯಾವುದೋ ಎಣ್ಣೆ ಹಾಕುವುದು, ಅದೂ ಇಲ್ಲ, ವನಸ್ಪತಿ,  ಹಾಕಬೇಕಾದ ಸಮಿತ್ತು ಇಲ್ಲ, ಯಾವುದೋ ಕಡ್ಡಿ ಹಾಕಿದರಾಯಿತು. ಈ ರೀತಿ ಮಾಡಿದರೆ ಸರಿಯೇ? ಅದರಲ್ಲಿ ಸತ್ವ ಇಲ್ಲ. ಹಾಕಬೇಕಾದ್ದನ್ನು ಹಾಕದೆ ಬಿಟ್ಟು ಯಜ್ಞ ಮಾಡಿದರೇನು, ಬಿಟ್ಟರೇನು! ನನಗೆ ಗೊತ್ತಿರುವ ಒಂದು ಕುಟುಂಬ ಇದೆ, ಒಮ್ಮೆ ಅವರ ಮನೆಯಲ್ಲಿ ಯಜ್ಞ ಮಾಡುವಾಗ ಮನೆಯ ಯಜಮಾನಿಯಾದ ಅಜ್ಜಿ -ಅವರೂ ಉಪಾಧ್ಯಾಯಿನಿ ಆಗಿದ್ದವರು- ತನ್ನ ಅಳಿಯನಿಗೆ ತುಪ್ಪ ತರಲು ಹೇಳಿದರು. ಅವರು ಅಡಿಗೆ ಮನೆಯಿಂದ ತುಪ್ಪ ತಂದರೆ, 'ಅದಲ್ಲಾ, ಅದು ತಿನ್ನುವ ತುಪ್ಪ, ಯಜ್ಞಕ್ಕೆ ಅಂತ ಇಟ್ಟಿರುವ ಬೇರೆ ತುಪ್ಪ ತನ್ನಿ' ಅಂತ ಹೇಳಿದರು. ಇಂಥ ಯಜ್ಞ ಯಾಕೆ ಮಾಡಬೇಕು? ಮಾಡಲೇಬಾರದು. ಬದಲಿಗೆ ನಾಸ್ತಿಕರಾಗಿ, ನಾನು ಒಪ್ಪುತ್ತೇನೆ. ಆಸ್ತಿಕತೆ ಹೆಸರಿನಲ್ಲಿ ಎಲ್ಲರ ತಲೆ ಬೋಳಿಸುವ ಕೆಲಸ ಇದೆಯಲ್ಲಾ, ಅದು ಮಹಾ ಪಾಪ. ಒಬ್ಬರು ಮಹಾಶಯರು ಹೇಳಿದ್ದರು, 'ನೀನು ನಾಸ್ತಿಕ ಕಣಯ್ಯಾ' ಅಂತ. 'ಆಗಲಿ, ನಿಮ್ಮ ಆಶೀರ್ವಾದದಿಂದ ನಾನು ನಾಸ್ತಿಕನಾಗೇ ಇರುತ್ತೇನೆ' ಎಂದು ಉತ್ತರಿಸಿದ್ದೆ.
     [ಟಿಪ್ಪಣಿ: ಬೂಟಾಟಿಕೆಯ ನಡವಳಿಕೆಗಳಿಗೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಮಾರುಕಟ್ಟೆಗಳಲ್ಲಿ, ದೇವಸ್ಥಾನಗಳ ಸಮೀಪದಲ್ಲಿ ದೇವರಿಗೆ ನೈವೇದ್ಯ ಕೊಡುವ ಸಲುವಾಗಿಯೇ ಮಾರಾಟ ಮಾಡುವ ಕಾಯಿ, ಹೂವು, ಹಣ್ಣುಗಳನ್ನು ಗಮನಿಸಿ. ಆ ಬಾಳೆಹಣ್ಣುಗಳು ಹಣ್ಣೇ ಆಗಿರುವುದಿಲ್ಲ, ಕಾಯಿ ಆಗಿರುತ್ತದೆ, ಅಲ್ಲದೆ ಪುಟ್ಟ ಗಾತ್ರದವು. ನಾವೇ ತಿನ್ನುವುದಾದರೆ ಅಂತಹವುಗಳನ್ನು ನಾವು ಕೊಳ್ಳುವುದೇ ಇಲ್ಲ. ಮದುವೆ, ಸಮಾರಂಭಗಳು, ಇತ್ಯಾದಿಗಳಲ್ಲಿ ಉಡುಗೊರೆ ಕೊಡುವ ಸಲುವಾಗಿಯೇ ಕಡಿಮೆ ದರದ, ಕಡಿಮೆ ಅಳತೆಯ ಬಟ್ಟೆಗಳನ್ನು, ಪದಾರ್ಥಗಳನ್ನು ಕೊಳ್ಳುತ್ತೇವೆ. ಉಡುಗೊರೆ ಪಡೆದವರೂ ಅದನ್ನು ಉಪಯೋಗಿಸಲಾರರು. ಅದನ್ನು ಬೇರೊಬ್ಬರಿಗೆ ಉಡುಗೊರೆಯಾಗಿ ದಾಟಿಸಿಬಿಡುತ್ತಾರೆ! ದೇವರಿಗೆ, ಇನ್ನೊಬ್ಬರಿಗೆ ಕೊಡುವುದಾದರೆ ಒಂದು ತರಹ, ನಮಗೇ ಅದರೆ ಮತ್ತೊಂದು ತರಹ! ಕೊಡುವುದಾದರೆ ನಾವು ಉಪಯೋಗಿಸುವಂತಹುದೇ ಕೊಡೋಣ, ಇಲ್ಲದಿದ್ದರೆ ಕೊಡದಿರುವುದೇ ಒಳ್ಳೆಯದಲ್ಲವೇ?]
ಸ್ತ್ರೀಯರು ಮತ್ತು ವೇದ
     ನಮ್ಮ ತಾಯಿ, ತಂದೆ ರಾತ್ರಿ ಹೊತ್ತು ಹವನಕ್ಕೆ ಕುಳಿತುಕೊಳ್ಳೋರು, ತಂದೆ ಮಂತ್ರ ಹೇಳೋರು, ತಾಯಿ ಬಾಯಿ ಮುಚ್ಚಿಕೊಂಡು ಕೂರೋರು, ನಾನು ಕೇಳ್ತಾ ಇದ್ದೆ, "ಅಮ್ಮಾ, ಯಾಕೆ ಹೀಗೆ? ನೀನು ಏಕೆ ಮಂತ್ರ ಹೇಳೊದಿಲ್ಲ?" ಅವರು ಹೇಳುತ್ತಿದ್ದರು: "ಅಯ್ಯೋ, ಹೆಂಗಸರು ವೇದ ಹೇಳೋದು ಉಂಟಾ? ಮಹಾ ಪಾಪ." ಉತ್ತರ ಕೊಡೋಕ್ಕೆ ಆಗದೇ ಹೋದರೆ ಇಂತಹಾ ಮಾತುಗಳನ್ನು ಆಡುವ ಇತರ ಪಂಡಿತರೆನಿಸಿಕೊಂಡವರ ಮಾತನ್ನೇ ಅವರು ಹೇಳಿದ್ದರು.  ವೇದದಲ್ಲಿ ಋಷಿಗಳಿದ್ದಾರಲ್ಲಾ, ಹಾಗೆಯೇ ಋಷಿಕೆಯರೂ ಇದ್ದಾರೆ. ಋಗ್ವೇದದಲ್ಲಿ 97 ಋಷಿಕೆಯರನ್ನು ಗುರುತಿಸಿದ್ದೇನೆ. ಇನ್ನು ಅಥರ್ವವೇದ, ಯಜುರ್ವೇದ ಇವನ್ನೆಲ್ಲಾ ತೆಗೆದುಕೊಂಡರೆ ಇನ್ನು ಎಷ್ಟು ಜನ ಋಷಿಕೆಯರನ್ನು ಗುರುತಿಸಬಹುದು ಊಹಿಸಿ. ಅವರೆಲ್ಲಾ ಪಾಪ ಮಾಡಿದರಾ? ಋಷಿಕೆಯರೆಲ್ಲಾ ವೇದಮಂತ್ರಗಳಿಗೆ ವ್ಯಾಖ್ಯಾನ ಮಾಡಿದ್ದಾರೆ, ಅವರೆಲ್ಲಾ ಪಾಪ ಮಾಡಿದವರಾ? ಅವರೆಲ್ಲಾ ಪಾಪ ಮಾಡಿದ್ದರೆ ಅವರ ಹಿಂದೆಯೇ ನಾವೂ ಹೋಗೋಣ, ಈ ಪುಣ್ಯಾತ್ಮರು ಇದ್ದಾರಲ್ಲಾ, ಅವರು ಇಲ್ಲೇ ಇರಲಿ, ನಾವು ಪಾಪ ಮಾಡಿದೋರ ಜೊತೆ ಹೋಗೋಣ!
ಪ್ರಾಣಿಬಲಿ
     ಯಜ್ಞ ಅಂದಕೂಡಲೆ ಪಶುಬಲಿ ಬೇಕೇಬೇಕು ಅಂತಾರೆ. ಯಾವ ಯಜ್ಞ ಹಿಂಸೆಯಿಂದ ಕೂಡಿರುವುದಿಲ್ಲವೋ -ಅಧ್ವರ, ಅಂದರೆ ಹಿಂಸೆಯಿಲ್ಲದ್ದು- ಅದೇ ಯಜ್ಞ ಎಂದು ವೇದದಲ್ಲಿ ಸ್ಪಷ್ಟವಾಗಿದೆ. ಯಜ್ಞಕ್ಕೆ ಬಲಿ ಕೊಡುವ ಪದ್ಧತಿ ಏಕೆ, ಹೇಗೆ ಸೇರಿತೋ ಗೊತ್ತಿಲ್ಲ. ಕೋಣಬಲಿ ಕೊಟ್ಟರೆ ಶ್ರೇಷ್ಠವಂತೆ, ಅದರಿಂದ ಸೂರ್ಯದೇವನಿಗೆ ತೃಪ್ತಿಯಾಗುತ್ತಂತೆ! ಕಾಲಕಾಲಕ್ಕೆ ಮಳೆ, ಬೆಳೆ ಕೊಡುತ್ತಾನಂತೆ! ಅದು ಹೇಗೆ ತೃಪ್ತಿಯಾಗುತ್ತೋ! ಅದಕ್ಕಾಗಿ ಪಾಪ, ಆ ಕೋಣನನ್ನು ಬಲಿಕೊಡಬೇಕೆ? ನಾನು . . . . ಸಮೀಪದ ಒಂದು ಮಠದ ಮುಖ್ಯಸ್ಥ . . .ರನ್ನು ಕೇಳಿದೆ: 'ಸ್ವಾಮಿ, ನೀವು ಯಾಕೆ ಪ್ರಾಣಿಹಿಂಸೆ ಮಾಡ್ತೀರಿ?' ಅವರು ಹೇಳಿದರು: 'ನಾವು ಎಲ್ಲಾ ಪ್ರಾಣಿಗಳನ್ನೂ ಬಲಿ ಕೊಡಲ್ಲ, ಸಸ್ಯಾಹಾರಿ, ಸಾಧು ಪ್ರಾಣಿ ಮಾತ್ರ ಬಲಿ ಕೊಡ್ತೀವಿ, ಅವು ಶುದ್ಧವಾಗಿರುತ್ತವೆ, ಅವನ್ನು ಬಲಿ ಕೊಟ್ಟರೆ ಸೂರ್ಯನಾರಾಯಣನಿಗೆ ತೃಪ್ತಿಯಾಗುತ್ತೆ'. ನಾನು ಹೇಳಿದೆ: 'ನನ್ನ ಜೊತೆಗೆ ಬನ್ನಿ, ಕೆಲವು ತಿಂಗಳು ನಿಮಗೆ ವಡೆ, ಚಕ್ಕುಲಿ, ಏನೂ ಕೊಡಲ್ಲ, ಬರೀ ಹುಲ್ಲೇ ತಿನ್ನಿಸಿ ಆಮೇಲೆ ಯಜ್ಞಕ್ಕೆ ಬಲಿ ಕೊಡುತ್ತೇನೆ, ಸೂರ್ಯದೇವನಿಗೆ ತುಂಬಾ ಸಂತೋಷ ಆಗುತ್ತೆ'. ಅವರು 'ಅಯ್ಯೋ, ನಾನು ಮನುಷ್ಯ' ಅಂದರು. 'ಮನುಷ್ಯ ಎಂದು ಏಕೆ ಹೇಳುತ್ತೀರಿ? ಮನುಷ್ಯ ಜಾತಿಗೆ ಏಕೆ ಅವಮಾನ ಮಾಡುತ್ತೀರಿ? ಆಲೋಚನೆ ಮಾಡಿ ಕೆಲಸ ಮಾಡುವವನು ಮನುಷ್ಯ ಎಂದು ಶಾಸ್ತ್ರ ಹೇಳುತ್ತೆ. ಆಲೋಚನೆ ಮಾಡದೆ ಕೆಲಸ ಮಾಡುವ ನೀವು ಹೇಗೆ ಮನುಷ್ಯ?' ಎಂದು ಕೇಳಿದೆ. ಯಜ್ಞ ಶ್ರೇಷ್ಠವಾದ ಕರ್ಮ. ಅಂತಹ ಯಜ್ಞದ ಹೆಸರಿನಲ್ಲಿ ಇಂತಹ ಪಾಪ ಏಕೆ ಮಾಡಬೇಕು? ಯಾವತ್ತೂ ಮಾಡಬಾರದು. 'ದೇವೋ ದುರ್ಬಲ ಘಾತಕಃ' ಅನ್ನುತ್ತಾರೆ. ಜಗತ್ತಿನ ಎಲ್ಲಾ ಜೀವಿಗಳೂ ದೇವರ ಮಕ್ಕಳೇ ಆಗಿರುವಾಗ ಅವನ ಮಕ್ಕಳ ಬಲಿಯನ್ನು ಅವನೇ ಬಯಸುವನೇ? ಪಶುಬಲಿಯಿಂದ ತೃಪ್ತನಾಗುವ ದೇವರು ದೇವರೇ ಅಲ್ಲ.
ಸತ್ಯಂ ಬ್ರೂಯಾತ್. . .
     'ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನಬ್ರೂಯಾತ್ ಸತ್ಯಮಪ್ರಿಯಂ'. ಸತ್ಯ ಹೇಳಬೇಕು, ಆದರೆ ಆ ಸತ್ಯವನ್ನು ಹಿತವಾಗಿ ಹೇಳಬೇಕು, ಅಪ್ರಿಯವಾದ ಸತ್ಯ ಹೇಳಬಾರದು ಎಂದು ಇದರ ಅರ್ಥ. ಕುಂಟನನ್ನು ಕುಂಟ ಎಂದರೆ, ಕುರುಡನನ್ನು ಕುರುಡ ಎಂದರೆ ಅದು ಸತ್ಯ ಇದ್ದರೂ ಕೇಳಿಸಿಕೊಂಡವರಿಗೆ ನೋವಾಗುತ್ತದೆ. ನಮ್ಮ ಗುರುಗಳು ಹೇಳುತ್ತಿದ್ದರು, ಕುರುಡನನ್ನು ಪ್ರಜ್ಞಾಚಕ್ಷು ಎನ್ನಬೇಕು ಎಂದು. ಮಹರ್ಷಿ ದಯಾನಂದರ ಗುರು ಸ್ವಾಮಿ ವಿರಜಾನಂದರೂ ಕುರುಡರೇ. ಅವರು ನಿಜಕ್ಕೂ ಪ್ರಜ್ಞಾಚಕ್ಷುಗಳಾಗಿದ್ದರು. ಒಬ್ಬ ಕಳ್ಳ ಒಬ್ಬ ಗುರು ಹತ್ತಿರ ಉಪದೇಶ ಕೇಳಲು ಹೋಗುತ್ತಿದ್ದನಂತೆ. ಸತ್ಯವನ್ನೇ ಹೇಳಬೇಕು ಎಂಬ ಗುರುಗಳ ಮಾತನ್ನು ಕೇಳಿದ ಕಳ್ಳ, 'ನಾನು ನಿಜ ಹೇಳಿದರೆ ನನ್ನ ಜೀವನ ಹೇಗೆ ನಡೆಯಬೇಕು ಸ್ವಾಮಿ' ಅಂದಾಗ ಗುರು ಹೇಳಿದರು: 'ಸತ್ಯದ ಮಾರ್ಗದಲ್ಲಿ ನಡೆಯದಿದ್ದರೂ ಪರವಾಗಿಲ್ಲ, ಯಾರಾದರೂ ಕೇಳಿದರೆ ಸತ್ಯವನ್ನೇ ಹೇಳು'. ಅವನು ಒಮ್ಮೆ ದಾರಿಯಲ್ಲಿ ಹೋಗುತ್ತಿರುವಾಗ ಅವನನ್ನು ಒಬ್ಬರು ಕೇಳಿದರು: 'ಯಾವ ಕಡೆಗೆ ಪ್ರಯಾಣ?' ಆಗ ಕಳ್ಳ 'ಇಂಥವರ ಮನೆಗೆ ಕನ್ನ ಹಾಕಲು ಹೋಗುತ್ತಿದ್ದೇನೆ' ಎಂದು ಸತ್ಯ ಹೇಳಿದರೆ ಏನಾಗುತ್ತದೆ? ಅವನು ಸೀದಾ ಹೋಗುವುದು ಪೋಲಿಸ್ ಸ್ಟೇಷನ್ನಿಗೆ, ಆಮೇಲೆ ಜೈಲಿಗೆ! ಆದ್ದರಿಂದ, ಸತ್ಯದ ಮಾರ್ಗದಲ್ಲೂ ನಡೆಯಬೇಕು, ಸತ್ಯವನ್ನೂ ನುಡಿಯಬೇಕು.
ಯಾರು ಆರ್ಯರು?
     ಯಾವನು ಪ್ರಗತಿಶೀಲನೋ, progressive view ಯಾರಿಗೆ ಇರುತ್ತೋ ಅವನನ್ನು ಆರ್ಯ ಅನ್ನಬಹುದು. ನಾವು ಹಾಗಲ್ಲ, ಆರ್ಯ(gentleman)  ಅಂತ  ಹೇಳಿಕೊಳ್ತೇವೆ, ನಮ್ಮ ವೃತ್ತಿ ನೋಡಿದರೆ ಎಲ್ಲಾ ಅನಾರ್ಯರ ರೀತಿಯೇ! ಮತ್ತು ಆರ್ಯನಾಗಿರುವವನು ಪ್ರಗತಿಶೀಲನಾಗಿರಬೇಕು, progressive ಆಗಿರಬೇಕು. ಇವತ್ತು ಇರುವುದಕ್ಕಿಂತ ಹೆಚ್ಚು ಒಳ್ಳೆಯವನಾಗುತ್ತಿರಬೇಕು, ಹೆಚ್ಚು ಸತ್ಯವಂತನಾಗಬೇಕು, ಧರ್ಮಾತ್ಮನಾಗಬೇಕು ಅನ್ನುವ ಮನೋಭಾವ ಇರಬೇಕು. ಅದೇ ಇಲ್ಲದೇ ಹೋದರೆ? ಅಂತಹವರನ್ನು ಆರ್ಯ ಎನ್ನಲು ಸಾಧ್ಯವೇ?
-ಕ.ವೆಂ.ನಾಗರಾಜ್.
***************
ದಿನಾಂಕ ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಬುಧವಾರ, ಜೂನ್ 24, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -5: ಆಶಾವಾದವೇ ಜೀವನ, ನಿರಾಶಾವಾದವೇ ಮರಣ


     ಪಂ. ಸುಧಾಕರ ಚತುರ್ವೇದಿಯವರಿಗೆ ವೇದವೇ ಉಸಿರಾಗಿದೆ, ಸಾರ್ವಕಾಲಿಕ ಮೌಲ್ಯ ಸಾರುವ ವೇದಗಳ ಸಂದೇಶ ಸಾರುವುದೇ ಅವರ ಜೀವನ ಧ್ಯೇಯವಾಗಿದೆಯೆಂದರೆ ತಪ್ಪಿಲ್ಲ. ವೇದದ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಆಚರಣೆಗಳು ಅವೈದಿಕವಾಗಿರುವ ಬಗ್ಗೆ ಅಸಮಾಧಾನಿಯಾಗಿರುವ ಅವರು ಅಂತಹ ಆಚರಣೆಗಳನ್ನು ಖಂಡಿಸಿ ತಿಳುವಳಿಕೆ ನೀಡುವ ಕಾಯಕ ಮುಂದುವರೆಸಿದ್ದಾರೆ. 'ವೇದೋಕ್ತ ಜೀವನ ಪಥ'ವೆಂಬ ಕಿರು ಪುಸ್ತಕದಲ್ಲಿ ಜೀವನದ ಮೌಲ್ಯಗಳು, ಜೀವಾತ್ಮ, ಪರಮಾತ್ಮ, ಪ್ರಕೃತಿಗಳ ಸ್ವರೂಪ, ಮಾನವ ಧರ್ಮ, ಚತುರ್ವರ್ಣಗಳು, ಬ್ರಹ್ಮಚರ್ಯಾದಿ ಚತುರಾಶ್ರಮಗಳು, ದೈನಂದಿನ ಕರ್ಮಗಳು, ಷೋಡಶ ಸಂಸ್ಕಾರಗಳು, ರಾಜನೀತಿ, ಸಾಮಾಜಿಕ ಜೀವನ, ಚತುರ್ವಿಧ ಪುರುಷಾರ್ಥಗಳನ್ನು ವೇದದ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದು, ಅದರಂತೆ ನಡೆದದ್ದೇ ಆದಲ್ಲಿ ಜೀವನ ಸಾರ್ಥಕವಾಗುವುದು. ಇಂದಿಗೂ ೧೧೮ ವರ್ಷಗಳ ಪಂಡಿತರ ವೈಚಾರಿಕ ಪ್ರಖರತೆಯ ಹೊಳಪು ಮಾಸಿಲ್ಲ, ನೆನಪು ಕುಂದಿಲ್ಲ. ಇವರ ಜೀವನೋತ್ಸಾಹ ಬತ್ತದ ಚಿಲುಮೆಯಾಗಿದ್ದು ದೇಹ, ಮನಸ್ಸು, ಬುದ್ಧಿಗಳನ್ನು ಹಿಡಿತದಲ್ಲಿಟ್ಟುಕೊಂಡಿರುವುದೇ ಇದಕ್ಕೆ ಕಾರಣವಿರಬಹುದು. ಪ್ರಶಸ್ತಿ, ಸನ್ಮಾನಗಳಿಗಾಗಿ ಲಾಬಿ ನಡೆಸುವವರೇ ತುಂಬಿರುವ, ಅದಕ್ಕಾಗಿ ತಮ್ಮತನವನ್ನೇ ಮಾರಿಕೊಳ್ಳುವವರಿರುವ ಈ ದೇಶದಲ್ಲಿ ಪ್ರಚಾರದಿಂದ ದೂರವಿರುವ ಇವರು ನಿಜವಾದ ಭಾರತರತ್ನರೆಂದರೆ ತಪ್ಪಿಲ್ಲ. ಇಂತಹವರು ನಮ್ಮೊಡನೆ ಇರುವುದೇ ನಮ್ಮ ಸೌಭಾಗ್ಯ, ಪುಣ್ಯವೆನ್ನಬೇಕು. ಇವರ ವಿಚಾರಧಾರೆಯ 5ನೆಯ ಕಂತು ಇಲ್ಲಿದೆ.
****************
     ವೇದ ಹೇಳುತ್ತದೆ, ಸರಿಯಾಗಿ ಬಾಳಿದರೆ ಜಮದಗ್ನಿಗೆ 300 ವರ್ಷ ಆಯಸ್ಸು ಎಂದು! ಜಮದಗ್ನಿ ಅಂದರೆ ಋಷಿಯಲ್ಲ, ಅಗ್ನಿಯನ್ನು ತನ್ನ ವಶದಲ್ಲಿಟ್ಟುಕೊಂಡವರು, ಅಗ್ನಿಹೋತ್ರ ಮಾಡುವ ಗೃಹಸ್ಥ/ಗೃಹಿಣಿ- ಅವರನ್ನು ಜಮದಗ್ನಿ ಎಂದು ಕರೆಯುತ್ತಾರೆ. ನಿಜವಾಗಿ ಅರ್ಥ ಇಟ್ಟುಕೊಂಡು ಆಚರಿಸಿದರೆ, ಅಂದರೆ ಅಗ್ನಿಯನ್ನು ವಶದಲ್ಲಿಟ್ಟುಕೊಂಡರೆ 300 ವರ್ಷ ಬದುಕಬಹುದು. ಅಷ್ಟೊಂದು ಭಗವಂತ ನಮಗೆ ಹೇಳಿರುವಾಗ ನಾವು ಯಾಕೆ ಸಾಯಬೇಕು, ಸಾಯಬೇಕು ಅನ್ನಬೇಕು? ಆ ಸಾವು ಇದೆಯಲ್ಲಾ, ಅದು ನಿರ್ಲಜ್ಜ. ನೀವು ಕರೆದರೂ ಬರುತ್ತೆ, ಕರೆಯದಿದ್ದರೂ ಬರುತ್ತೆ. ಯಾವತ್ತೂ ನೀವು ಸಾಯಬೇಕು ಎಂದು ಆಸೆಪಡಲೇಬೇಡಿ. 'ಜೀವೇದ ಶರದಶ್ಶತಮ್' ಕನಿಷ್ಠ ಪಕ್ಷ ನೂರು ವರ್ಷ ಆದರೂ ಬದುಕಿರಬೇಕು, ನೂರು ವರ್ಷಕ್ಕಿಂತ ಹೆಚ್ಚುಕಾಲ ಬದುಕೋಣ. ಲೋಕಾರೂಢಿಯ ಮಾತು 'ಶತಾಯುರ್ ವಯಃ ಪುರುಷಃ' ಅಂತ, ಒಬ್ಬ ಮನುಷ್ಯನ ವಯಸ್ಸು ನೂರು ವರ್ಷ, ನೂರು! ಆಶ್ಚರ್ಯ ಪಡಬೇಡಿ, ನಾವು ಆಸ್ತಿಕರು, ಭಗವಂತನಲ್ಲಿ ನಂಬಿಕೆ ಇರುವವರು, ಜೀವನವನ್ನು ಪರಿಪಕ್ವವಾಗಿ ಇಟ್ಟುಕೊಳ್ಳಬೇಕು ಅನ್ನುವವರು, ನಾವು ಏಕೆ ಆಸೆ ಕಳೆದುಕೊಳ್ಳಬೇಕು? ರಷ್ಯಾದಲ್ಲಿ ಕೆಲವು ಪ್ರದೇಶಗಳಿವೆ, 'ಡಡ್ ಸೀ' ಅಂತ, ಸತ್ತ ಸಮುದ್ರ, ಅದು ಯಾವ ಕಾಲದಲ್ಲಿ ನೀರಿತ್ತೋ, ಈಗ ನೀರಿಲ್ಲ, ಅದರ ಸುತ್ತಮುತ್ತ ಎಲ್ಲಾ ಸಾವೇ! ಅಂತಹ ಕಡೆ ಕೂಡ ಒಬ್ಬ ಮುದುಕ 190 ವರ್ಷ ಬದುಕಿದ್ದನಂತೆ. ತಿನ್ನಬಾರದ್ದೆಲ್ಲಾ ತಿಂದುಕೊಂಡು, ಕುಡಿಯಬಾರದ್ದೆಲ್ಲಾ ಕುಡಿದುಕೊಂಡು, ಮಾಡಬಾರದ್ದೆಲ್ಲಾ ಮಾಡಿಕೊಂಡು 190 ವರ್ಷ ಬದುಕಿದ್ದ. ಅಂಥವನೇ ಅಷ್ಟು ಕಾಲ ಬದುಕಿದ್ದಾಗ ಪವಿತ್ರವಾಗಿ ಬಾಳುವ ನಮಗೇಕೆ ಸಾಧ್ಯವಿಲ್ಲ? ನಾವು ಸೋತುಬಿಡುತ್ತೇವೆ, ಅದೇ ಕಷ್ಟ,  ಸೋಲಿನ ಮನೋಭಾವ ಇದೆಯಲ್ಲಾ, ನಿರಾಶಾವಾದ ಅದು ತುಂಬಾ ಕೆಟ್ಟದ್ದು. ನಾನು ದುರ್ಯೋಧನನ ಉದಾಹರಣೆ ಕೊಡುತ್ತೇನೆ. ಭೀಷ್ಮ ಹೋದರು, ದ್ರೋಣ ಹೋದರು, ಕರ್ಣನೂ ಹೋದ. ಆದರೆ ಶಲ್ಯ ಇನ್ನೂ ಇದ್ದಾನೆ, ಅವನು ಪಾಂಡವರನ್ನು ಜಯಿಸಿ ನನಗೆ ಗೆಲುವು ತಂದುಕೊಡುತ್ತಾನೆ ಎಂಬ ವಿಶ್ವಾಸ ಅವನಿಗೆ. ಶಲ್ಯನೂ ಹೋದ, ದುರ್ಯೋಧನನೂ ಸತ್ತ, ಅದು ಬೇರೆ ವಿಷಯ. ಆದರೆ ಬದುಕುವ ಅವನ ಆತ್ಮವಿಶ್ವಾಸ ಇತ್ತಲ್ಲಾ, ಅದು ಮೆಚ್ಚುವಂತಹುದು. ಮುಖ್ಯವಾಗಿ ನನ್ನ ಗುರು ಸ್ವಾಮಿ ಶ್ರದ್ಧಾನಂದಜೀಯವರು ಹೇಳುತ್ತಿದ್ದರು - Optimism is life, Pessimism is death itself! - ಆಶಾವಾದವೇ ನಿಜವಾದ ಜೀವನ, ನಿರಾಶಾವಾದವೇ ಸಾವು!
ಸಾವನ್ನು ಸ್ವಾಗತಿಸುವ ಧೈರ್ಯ
     ಸಾವನ್ನು ಏಕೆ ಬಯಸಬೇಕು? ಅದು ಬಂದೇ ಬರುತ್ತೆ, ಬಂದಾಗ ಹೋಗೋಣ, ಸಾವು ಬಂದಾಗ ಸ್ವಾಗತಿಸೋಣ, ಯಮನಿಗೆ ನಮಸ್ಕರಿಸಿ ಹೊರಡೋಣ. ಯಮ ಅಂದರೆ ಕೋಣನ ಮೇಲೆ ಕುಳಿತುಕೊಂಡು ಬರುತ್ತಾನೆ ಅಂತಾರಲ್ಲ, ಅವನಲ್ಲ, ಸಂಪೂರ್ಣ ಜಗತ್ತನ್ನೇ ತನ್ನ ವಶದಲ್ಲಿಟ್ಟುಕೊಂಡಿರುವ ಜಗನ್ನಿಯಾಮಕ ಭಗವಂತ, ಅವನು ಯಮ! ಅವನು ಅನ್ಯಾಯವಾಗಿ ಯಾರಿಗೂ ಸಾವು ಕೊಡುವುದಿಲ್ಲ, ಯಾವನ ಇಚ್ಛೆಯಿಂದಲೇ ಅಮೃತ ಸಿಕ್ಕುತ್ತೋ, ಯಾವನ ಇಚ್ಛೆಯಿಂದ ಸಾವು ಸಿಗುತ್ತದೋ ಆ ಯಮನಿಗೆ ನಮಸ್ಕಾರ! ಸಾವು, ಬಾಳು ಎರಡೂ ಅವನ ವಶದಲ್ಲೇ ಇದೆ, ಆ ಪರಮಾತ್ಮ ಯಾವ ಜೀವ ಎಷ್ಟು ಬಾಳಬೇಕು, ಬದುಕಬೇಕು ಅದನ್ನು ನಿರ್ಧರಿಸಿರುತ್ತಾನೆ, ಅದು ತೀರುವವರೆಗೂ ಸಾಯುವಹಾಗಿಲ್ಲ. ಬಾವಿಗೆ ಬಿದ್ದು, ನೇಣು ಹಾಕಿಕೊಂಡು ಮುಂಚೆಯೇ ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ, ಅದು ನಿಜವಾದ ಸಾವಲ್ಲ, ಅಪಮೃತ್ಯು. ಅದು ಯಾರಿಗೂ ಬೇಡ. ಅದಾಗೇ ಸಾವು ಬಂದಾಗ 'ಬಾ ಮೃತ್ಯು, ಕರೆದುಕೊಂಡು ಹೋಗು' ಎಂದು ಹೇಳುವ ಧೈರ್ಯ ನಮಗೆಲ್ಲಿ ಬರಬೇಕು! ಸ್ವಾಮಿ ದಯಾನಂದರಿಗೆ ಸಾವು ಬಂದಾಗ ಅವರು ಅಳುಕಲಿಲ್ಲ, 'ಭಗವಂತ, ನಿನ್ನ ಇಚ್ಛೆ, ಕರೆದುಕೊಂಡು ಹೋಗು' ಎಂದರು. ಅವರಿಗೆ ಸಾಯಬೇಕೆಂದಿರಲಿಲ್ಲ. ಭಗವಂತನ ಇಚ್ಛೆಯಿದ್ದರಿಂದ ಸಾಯಲು ಸಿದ್ಧರಾದರು, ಅಷ್ಟೆ. ಬದುಕುವುದಕ್ಕೆ ಆ ಹಟ ಇರಬೇಕು. ಯಾವತ್ತೂ ಸಾಯಬೇಕೆಂದು ಬಯಸಬೇಡಿ. ಏಕೆಂದರೆ ಆ ಆಸೆ ಇದೆಯಲ್ಲಾ ಅದು ದುರಾಸೆ, ಅದು ನಮ್ಮ ನಿಜವಾದ ನಿಶ್ಚಯ ಶಕ್ತಿಯನ್ನೇ ಹಾಳುಮಾಡಿಬಿಡುತ್ತದೆ.
[ಟಿಪ್ಪಣಿ: ಸ್ವಾಮಿ ದಯಾನಂದರ ಸಾವು:
     ಸತ್ಯವಿಚಾರವನ್ನು ದಿಟ್ಟವಾಗಿ ಹೇಳುತ್ತಿದ್ದ ಮಹರ್ಷಿ ದಯಾನಂದ ಸರಸ್ವತಿಯವರನ್ನು ಕೊಲೆ ಮಾಡಲು ಅನೇಕ ಸಂಚುಗಳು ನಡೆದಿದ್ದವು. ಕೆಲವು ಸಲ ಅವರಿಗೆ ಗುಟ್ಟಾಗಿ ವಿಷಪ್ರಾಶನವನ್ನೂ ಮಾಡಿಸಿದ್ದರು. ಹಠಯೋಗದ ಅಭ್ಯಾಸಿಗಳಾಗಿದ್ದ ಅವರು ವಿಷವನ್ನು ಹೊರಹಾಕುವಲ್ಲಿ ಯಶಸ್ವಿಯಾಗಿದ್ದರು. ಒಮ್ಮೆ ಪರಮತದ ಕೆಲವು ವಿದ್ರೋಹಿಗಳು ಅವರನ್ನು ನದಿಯಲ್ಲಿ ಮುಳುಗಿಸಿ ಸಾಯಿಸಲು ಪ್ರಯತ್ನಿಸಿದ್ದರು. ಕಟ್ಟುಮಸ್ತು ದೇಹದ ದಯಾನಂದರು ಅವರನ್ನೇ ನೀರಿನೊಳಗೆ ಎಳೆದುಕೊಂಡು ಹೋಗಿ ಇನ್ನೇನು ಅವರುಗಳು ಸಾಯುತ್ತಾರೆ ಎಂಬ ಸ್ಥಿತಿಯಲ್ಲಿದ್ದಾಗ ಅವರಿಗೆ ಎಚ್ಚರಿಕೆ ಕೊಟ್ಟು ಹೊರಗೆ ಬಿಟ್ಟಿದ್ದರು. ಆದರೆ ಕೊನೆಗೂ ಅವರು ವಿಷಪ್ರಾಶನಕ್ಕೆ ಬಲಿಯಾದರು.     1883ರಲ್ಲಿ ಜೋಧಪುರದ ಮಹಾರಾಜರ ಆಹ್ವಾನದ ಮೇಲೆ ಅವರ ಅತಿಥಿಯಾಗಿ ಹೋಗಿ ಅರಮನೆಯಲ್ಲಿ ತಂಗಿದ್ದರು. ಮಹಾರಾಜನಿಗೆ ಅವರ ಶಿಷ್ಯನಾಗಿ ಉಪದೇಶಗಳನ್ನು ತಿಳಿಯುವ ಆಸಕ್ತಿಯಿತ್ತು. ಒಮ್ಮೆ ದಯಾನಂದರು ಮಹಾರಾಜರ ವಿಶ್ರಾಂತಿ ಕೊಠಡಿಗೆ ಹೋದ ಸಂದರ್ಭದಲ್ಲಿ ಮಹಾರಾಜರು ನನ್ಹಿಜಾನ್ ಎಂಬ ನೃತ್ಯಗಾತಿಯ ಜೊತೆಗೆ ಇದ್ದುದನ್ನು ಕಂಡರು. ದಯಾನಂದರು ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಧೈರ್ಯವಾಗಿ ಮತ್ತು ನೇರವಾಗಿ ಮಹಾರಾಜರಿಗೆ ಸ್ತ್ರೀ ಸಹವಾಸ ಬಿಡಲು ಮತ್ತು ಒಬ್ಬ ನಿಜವಾದ ಆರ್ಯ(ಸಭ್ಯ)ನಂತೆ ಧರ್ಮ ಪಾಲನೆ ಮಾಡುವಂತೆ ಹೇಳಿದರು. ದಯಾನಂದರ ಸಲಹೆ ಆ ನೃತ್ಯಗಾತಿಯನ್ನು ಕೆರಳಿಸಿತು ಮತ್ತು ಸೇಡಿಗಾಗಿ ಹಪಹಪಿಸುವಂತೆ ಮಾಡಿತು. ಅಡಿಗೆಭಟ್ಟನಿಗೆ ಆಕೆ ಲಂಚ ನೀಡಿ ದಯಾನಂದರಿಗೆ ಆಹಾರದಲ್ಲಿ ವಿಷ ಬೆರೆಸಿ ಕೊಡಲು ಒಪ್ಪಿಸಿದಳು. ಅಡಿಗೆ ಭಟ್ಟ ರಾತ್ರಿಯ ಮಲಗುವ ಸಮಯದಲ್ಲಿ ವಿಷ ಮತ್ತು ನುಣ್ಣಗೆ ಪುಡಿ ಮಾಡಿದ ಗಾಜಿನ ಹರಳುಗಳನ್ನು ಸೇರಿಸಿದ ಹಾಲನ್ನು ದಯಾನಂದರಿಗೆ ಕುಡಿಯಲು ಕೊಟ್ಟ. ಹಾಲು ಕುಡಿದು ಮಲಗಿದ ದಯಾನಂದರಿಗೆ ಕೆಲ ಸಮಯದಲ್ಲಿಯೇ ಹೊಟ್ಟೆಯ ಒಳಗೆ ಸುಡುವ ಅನುಭವವಾದಾಗ ಎಚ್ಚರವಾಗಿ ತಮಗೆ ವಿಷ ಉಣಿಸಿದ್ದಾರೆಂದು ಗೊತ್ತಾಗಿ ವಿಷವನ್ನು ಹೊರಹಾಕಲು ಪ್ರಯತ್ನಿಸಿದರು. ಆದರೆ ಅದಾಗಲೇ ತಡವಾಗಿತ್ತು. ವಿಷವಾಗಲೇ ರಕ್ತ ಸೇರಿಬಿಟ್ಟಿತ್ತು. ಅವರು ಹಾಸಿಗೆ ಹಿಡಿದು ಅಸಾಧ್ಯ ನೋವನ್ನು ಸಹಿಸಬೇಕಾಯಿತು. ಅನೇಕ ವೈದ್ಯರುಗಳು ನೀಡಿದ ಚಿಕಿತ್ಸೆ ಫಲಕಾರಿ ಆಗಲಿಲ್ಲ. ಅವರ ದೇಹದಲ್ಲಿ ಎಲ್ಲೆಲ್ಲೂ ರಕ್ತ ಸೋರುವ ಹುಣ್ಣುಗಳಾದವು. ಅವರ ಸ್ಥಿತಿಯನ್ನು ನೋಡಲಾಗದ ಅಡಿಗೆಭಟ್ಟ ಕಣ್ಣೀರು ಸುರಿಸುತ್ತಾ ಬಂದು ದಯಾನಂದರಲ್ಲಿ ತನ್ನ ತಪ್ಪು ಒಪ್ಪಿಕೊಂಡ. ಅಂತಹ ಸಾವಿನ ಸಮೀಪದಲ್ಲಿ ಇದ್ದಾಗಲೂ ದಯಾನಂದರು ಆತನನ್ನು ಕ್ಷಮಿಸಿದ್ದಲ್ಲದೆ, ಅವನಿಗೆ ಒಂದು ಥೈಲಿಯಲ್ಲಿ ಹಣ ನೀಡಿ ಆದಷ್ಟು ಬೇಗ ರಾಜ್ಯ ತೊರೆದು ಹೋಗಿ ಮಹಾರಾಜರ ಭಟರಿಂದ ಜೀವ ಉಳಿಸಿಕೊಳ್ಳಲು ಸಲಹೆ ನೀಡಿದ್ದರು. 30-10-1883ರಲ್ಲಿ ಅವರು ದೇಹತ್ಯಾಗ ಮಾಡಿದರು. ಅಂತಹ ಸಾವನ್ನೂ ಸಹ ಅವರು ಆದರದಿಂದ ಬರಮಾಡಿಕೊಂಡಿದ್ದರು.]
ಸತ್ಯವನ್ನೇ ಹೇಳುವುದೆಂದರೆ . .
     ಕೋರ್ಟುಗಳಲ್ಲಿ ಪ್ರಮಾಣ ಮಾಡಿಸುತ್ತಾರೆ: 'ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ' ಅಂತ. ಆದರೆ ಲಾಯರ್ ಹೇಳಿಕೊಟ್ಟಿರುತ್ತಾರೆ -'ಸತ್ಯ ಅಂತ ಎಲ್ಲಾ ಹೇಳಿದರೆ ಕೆಡುತ್ತೀಯ, ನಾನು ಹೇಳಿಕೊಟ್ಟದ್ದೇ ಸತ್ಯ, ಅದನ್ನೇ ಹೇಳು' ಅಂತ. ನಾನು ತಮಾಷೆ ಮಾಡುತ್ತಿರುತ್ತೇನೆ, ಲಾಯರ್ ಅಂದರೆ ಲೈಯರ್ ಅಂತ! ಮಾಡುತ್ತಾ ಇರುವುದು ಹಾಗೇನೇ, ಇವತ್ತು ಇರುವುದೂ ಹಾಗೇನೇ. ಇಂದಿನ ಸತ್ಯದ ಸ್ಥಿತಿ ಇದು.
-ಕ.ವೆಂ.ನಾಗರಾಜ್.
***************
ದಿನಾಂಕ 13.5.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಗುರುವಾರ, ಜೂನ್ 11, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -4: ಆತ್ಮವಂಚನೆ ಸಲ್ಲದು


     ಪಂ. ಸುಧಾಕರ ಚತುರ್ವೇದಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಂಡಿದ್ದವರು. ಗಾಂಧೀಜಿಯವರ ಒಡನಾಟ ಹೊಂದಿದವರಾಗಿದ್ದರು. ಪಂಡಿತರು ಇದ್ದ ಗುರುಕುಲಕ್ಕೆ ಗಾಂಧೀಜಿಯವರು ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಇವರು ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದಂತೆ, ಗಾಂಧೀಜಿಯವರೂ ಇವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿಯವರ ಹತ್ಯೆಯಾಗುವವರೆಗೂ ಇವರಿಬ್ಬರ ಸ್ನೇಹ ಮುಂದುವರೆದಿತ್ತು.  ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಪ್ರತ್ಯಕ್ಷ ಸಾಕ್ಷಿಯಾಗಿದ್ದವರು. ಕ್ರಾಂತಿಕಾರಿ ಭಗತ್ ಸಿಂಗರಿಗೆ ಕೆಲಕಾಲ ಗುರುವೂ ಆಗಿದ್ದವರು. ತಾವು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಸ್ವಾಮಿ ಶ್ರದ್ಧಾನಂದರ ಪ್ರೋತ್ಸಾಹ ಕಾರಣವಾದರೂ ವೇದದ 'ಅದೀನಾಃ ಸ್ಯಾಮ ಶರದಃ ಶತಂ, ಭೂಯಶ್ಚ ಶರದಃ ಶತಾತ್' - 'ನೂರು ವರ್ಷಕ್ಕೂ ಹೆಚ್ಚುಕಾಲ ಸ್ವಾತಂತ್ರ್ಯದಿಂದ ಬಾಳೋಣ' ಎಂಬ ಅರ್ಥದ ಸಾಲು ಸಂಗ್ರಾಮಕ್ಕೆ ಪ್ರೇರಿಸಿತ್ತು ಎಂದು ಹೇಳುತ್ತಾರೆ. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆಂಗ್ಲರ ನಡವಳಿಕೆ ಇವರ ಮತ್ತು ಇವರಂತಹ ಸಾವಿರಾರು ಜನರ ಸ್ವಾಭಿಮಾನವನ್ನು ಕೆಣಕಿ ಹೋರಾಟ ಕಾವು ಪಡೆದಿತ್ತು. ಹೋರಾಟ ಕಾಲದಲ್ಲಿ ಕೃಶ ಶರೀರದವರಾದರೂ ಇವರ ಮನೋಬಲ ಮತ್ತು ಛಲದಿಂದಾಗಿ ಅನೇಕ ಪ್ರಾಣಾಂತಿಕ ಪೆಟ್ಟುಗಳನ್ನು ಹಲವಾರು ಬಾರಿ ತಿಂದರೂ ಸಹಿಸಿ ಅರಗಿಸಿಕೊಂಡವರು. ದಂಡಿ ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸತ್ಯಾಗ್ರಹಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದವರು. ಸುಮಾರು 15 ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಭಾರತ-ಪಾಕಿಸ್ತಾನದ ವಿಭಜನೆಯ ಕಾಲದ ಭೀಕರ ಮಾರಣಹೋಮವನ್ನು ಕಂಡ ನೆನಪು ಮಾಸದೆ ಇರುವವರು. ಒಟ್ಟಿನಲ್ಲಿ ಹೇಳಬೇಕೆಂದರೆ ಇವರು ನಮ್ಮೊಡನಿರುವ ಇತಿಹಾಸದ ಜೀವಂತ ನೈಜ ಪ್ರತಿನಿಧಿ. ಇವರ ವಿಚಾರಧಾರೆಯ ನಾಲ್ಕನೆಯ ಕಂತು ಇಲ್ಲಿದೆ.
*************
ಗಾಂಧೀಜಿ ಮತ್ತು ಉಪವಾಸ
     ಗಾಂಧೀಜಿ ಮತ್ತು ಪಂಡಿತರ ನಡುವೆ ಮಧುರ ಸ್ನೇಹವಿತ್ತು. ಪಂಡಿತರನ್ನು ಅವರು ಕರ್ನಾಟಕಿ ಎಂದು ಕರೆಯುತ್ತಿದ್ದರು. ಗಾಂಧೀಜಿ ಜೊತೆ ಮಾತನಾಡುವಾಗ ಪಂಡಿತರು ಕೆಳುತ್ತಿದ್ದರಂತೆ: "ಗಾಂಧೀಜಿ, ನೀವು ಮಾತುಮಾತಿಗೆ ಉಪವಾಸ, ಉಪವಾಸ ಅಂತ ಮಾಡ್ತೀರಲ್ಲಾ, ಅದು ಹಿಂಸೆಯಲ್ಲವೋ?" ಗಾಂಧೀಜಿ "ಯಾಕಪ್ಪಾ ಹಾಗೆ ಹೇಳ್ತೀಯಾ?" ಅಂದಾಗ ಪಂಡಿತರು ಕೇಳಿದ್ದರು: "ನೀವು ಬೇರೆಯವರನ್ನು ಉಪವಾಸ ಕೆಡವಿದರೆ ಅದೂ ಪಾಪವೇ, ನೀವು ಉಪವಾಸ ಮಾಡಿದರೆ ನಿಮ್ಮ ಆತ್ಮಕ್ಕೆ ಉಪವಾಸ ಮಾಡಿಸಿದ ಹಾಗೆ ಆಯಿತು, ಇದು ಎಲ್ಲಿಯ ಪುಣ್ಯ? ಇದರಿಂದ ಯಾರಿಗೆ ಲಾಭ?" ಗಾಂಧಿ ಒಂದೇ ಮಾತು ಹೇಳಿಬಿಟ್ಟರು: "ಅಪ್ಪಾ, ನೀನೇ ಮಹಾತ್ಮ, ನಾನಲ್ಲ." ಸ್ವಲ್ಪ ಚೇಷ್ಟೆ ಸ್ವಭಾವದ ಪಂಡಿತರು ಹೇಳಿದ್ದರು: "ಗಾಂಧೀಜಿ, ದಯವಿಟ್ಟು ನನ್ನನ್ನು ಮಹಾತ್ಮ ಅಂತ ಕರೀಬೇಡಿ. ಯಾಕೆ ಅಂದರೆ, ಮಹಾತ್ಮನಾದ ರಾವಣ ಸೀತೆಯನ್ನು ಅಪಹರಿಸಿದ ಅಂತ ರಾಮಾಯಣದಲ್ಲಿದೆ. ನಾನು ಯಾವ ಸೀತೆಯನ್ನೂ ಅಪಹರಿಸಿಲ್ಲ. ಆದ್ದರಿಂದ ನನಗೆ ಮಹಾತ್ಮ ಅನ್ನಬೇಡಿ, ಅದನ್ನು ನೀವೇ ಇಟ್ಟುಕೊಳ್ಳಿ". "ನಿನ್ನ ಹತ್ತಿರ ತರ್ಕ ಮಾಡುವುದಿಲ್ಲಪ್ಪಾ" ಎಂದು ನಗುತ್ತಾ ಹೇಳಿದ ಗಾಂಧೀಜಿ ಸುಮ್ಮನಾಗಿಬಿಟ್ಟಿದ್ದರಂತೆ.
     ಬಡತನ ಅನ್ನುವುದು ಒಂದು ಅಭಿಶಾಪ. ಭಗವಂತ ಸರ್ವೈಶ್ಯರ್ಯ ಸಂಪನ್ನ. ಅವನ ಮಕ್ಕಳು ನಾವು ಬಡತನದಲ್ಲಿದ್ದರೆ ಅವನಿಗೆ ಸಂತೋಷವಿರುತ್ತೇನು? ಅವನ ಮಕ್ಕಳು ನಾವು ಚೆನ್ನಾಗಿ ತಿನ್ನಬೇಕು, ಸುಖವಾಗಿರಬೇಕು, ಅದು ಭಗವಂತನ ಆಸೆ. ನಾವು ಬಲವಂತವಾಗಿ ಉಪವಾಸ ಮಾಡಿದರೆ ಅವನಿಗೆ ಸಂತೋಷ ಆಗುತ್ತೆ ಅಂತ ಮಾಡಿದ್ದೀರಾ?
     ಗಾಂಧೀಜಿಯವರ ಪತ್ನಿ ಕಸ್ತೂರಿಬಾ ಹೇಳುತ್ತಿದ್ದರಂತೆ: "ನಮ್ಮ ಯಜಮಾನರು 7 ದಿನ, 15 ದಿನ, 21 ದಿನ ಹೀಗೆಲ್ಲಾ ಉಪವಾಸ ಮಾಡುತ್ತಾರೆ.  ಸ್ವಲ್ಪ ಸ್ವಲ್ಪ ದಿನ ಏಕೆ, ಪೂರ್ಣ ಸಾಯುವವರೆಗೂ ಉಪವಾಸ ಮಾಡಿ ಸತ್ತುಬಿಡಲಿ, ನಾಲ್ಕು ದಿನ ಅತ್ತು ಸುಮ್ಮನಾಗುತ್ತೇನೆ, ನಂತರ ಮರೆತುಬಿಡುತ್ತೇನೆ" ಅಂತ. ಆ ಸಾಧ್ವಿಯ ಬಾಯಲ್ಲಿ, ಮಹಾಪತಿವ್ರತೆಯ ಬಾಯಲ್ಲಿ ಅಂತಹ ಮಾತು ಬರಬೇಕಾದರೆ ಆಕೆ ಎಷ್ಟು ನೊಂದಿರಬೇಕು, ಊಹಿಸಿ.
ಬದುಕೋಣ
     ಪ್ರಬಲ ಬದುಕುವ ಇಚ್ಛೆಗೆ ಪಂಡಿತರು ಜೀವಂತ ಸಾಕ್ಷಿಯಾಗಿದ್ದಾರೆ. ಅವರು ಹೇಳುತ್ತಾರೆ: "ಸ್ವಲ್ಪ ಯೋಚನೆ ಮಾಡಿ, ಒಂದು ಜೈಲಿನಲ್ಲಿ ಬೆಳಿಗ್ಗೆಂದ ಸಾಯಂಕಾಲದವರೆಗೆ ಕುಳಿತುಕೊಂಡರೆ ಎಷ್ಟು ಬೇಸರವಾಗುತ್ತದೆ. ಅಂತಹುದರಲ್ಲಿ ಒಟ್ಟು 13 ವರ್ಷ ಜೈಲಿನಲ್ಲಿ -ಕರಾಚಿಯಿಂದ ಹಿಡಿದು ಬೆಂಗಳೂರು ಸೆಂಟ್ರಲ್ ಜೈಲಿನವರೆಗೆ, ಕೊಚ್ಚಿ, ಆಂಧ್ರ ಸೇರಿ ಹಲವು ಜೈಲುಗಳಲ್ಲಿ -ಕಳೆದಿದ್ದೇನೆ. ಅಲ್ಲಿನ ರೊಟ್ಟಿ, ಅನ್ನ ಎಲ್ಲಾ ತಿಂದಿದ್ದೇನೆ. ಅದೂ ಎಂತಹ ರೊಟ್ಟಿ? ಹಿಟ್ಟಿನಲ್ಲಿ ಬೇಕಂತಲೇ ಮರಳು ಸೇರಿಸಿ ತಿನ್ನಕ್ಕಾಗಬಾರದು ಎಂದು ಮಾಡಿದ್ದ ರೊಟ್ಟಿ. ಸಾರಿನಲ್ಲೂ ಬೇಳೆಕಾಳು ಕಡಿಮೆ, ಮರಳೇ ಜಾಸ್ತಿ. ಅದನ್ನೇ ತಿಂದು ಬದುಕಬೇಕು. ಭಗವಂತನ ದಯೆ ಅಂತ ಕಾಣುತ್ತೆ, ಅಂತಹುದನ್ನು ತಿಂದೂ ಸಹ ಈಗಲೂ ಬದುಕಿದ್ದೀನಿ, ಇನ್ನೂ ಸಾಯುವ ಯೋಚನೆಯಿಲ್ಲ್ಲ. ಏಕೆಂದರೆ ಬದುಕುವುದು ಕಷ್ಟ, ಸಾಯುವುದು ಸುಲಭ, ಬಹಳ ಸುಲಭ. ಸುಲಭವೆಂದು ಹೇಳಿ ಸಾಯಲು ಹೋಗಬಾರದು. ಪೂರ್ಣವಾಗಿ ಬದುಕಬೇಕು." ಜವಾಹರಲಾಲ್ ನೆಹರುರವರೂ ಸಹ ಬಂದಿಯಾಗಿ ಜೈಲಿನಲ್ಲಿರುತ್ತಿದ್ದರೆ ಅವರಿಗೆ ಜೈಲಿನಲ್ಲಿ ರಾಜೋಪಚಾರ ಸಿಗುತ್ತಿತ್ತು. ಪತ್ರಿಕೆಗಳನ್ನು ಓದಲು ಕೊಡುತ್ತಿದ್ದರು, ಮನೆಯಿಂದ ಊಟ ಬರುತ್ತಿತ್ತು, ಪ್ರತ್ಯೇಕ ಕೊಠಡಿಯಲ್ಲಿ ಇರಿಸುತ್ತಿದ್ದರು.
ಆತ್ಮವಂಚನೆ ಬೇಡ
     ಸರ್ದಾರ್ ಭಗತ್ ಸಿಂಗ್ ಹೆಸರು ಎಲ್ಲರೂ ಕೇಳಿಯೇ ಇರುತ್ತಾರೆ, ಮಹಾನ್ ಕ್ರಾಂತಿಕಾರಿ, ಅವನು ಪಂಡಿತರ ಶಿಷ್ಯ. ಲಾಹೋರಿನಲ್ಲಿ ದಯಾನಂದ ಕಾಲೇಜಿನಲ್ಲಿ ಅವನು ಓದುತ್ತಿದ್ದಾಗ ಪಂಡಿತರು ಗಣಿತದ ಪಾಠ ಹೇಳಲು ಹೋಗುತ್ತಿದ್ದರು. ಒಂದು ಸಲ ಅವನು ಪಂಡಿತರ ಹತ್ತಿರ ಬಂದು ಹೇಳಿದ್ದ: "ಪಂಡಿತಜಿ, ನಾನು ಲೆಕ್ಕದಲ್ಲಿ ಸ್ವಲ್ಪ ಹಿಂದೆ. ಕಡಿಮೆ ಅಂಕ ಬಂದರೆ, ಕರುಣೆ ಇದ್ದರೆ ನನಗೆ ಐದು ಅಂಕ ಸೇರಿಸಿ ಕೊಟ್ಟರೆ ಉಪಕಾರವಾಗುತ್ತದೆ". ಪಂಡಿತರ ಉತ್ತರ: "ಲಕ್ಷಣವಾಗಿ ಫೇಲಾಗು. ನಾನು ಅಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ." 'ಇವನು ನನ್ನ ಶಿಷ್ಯ, ಇವನು ಉದ್ಧಾರವಾಗಲಿ' ಎಂದು ಅಂಕ ಸೇರಿಸಿಕೊಟ್ಟು ಆತ್ಮವಂಚನೆ ಮಾಡಿಕೊಳ್ಳಲು ಪಂಡಿತರು ಸಿದ್ಧರಿರಲಿಲ್ಲ. ನಂತರದ ಕಥೆ ಎಲ್ಲರಿಗೂ ತಿಳಿದೇ ಇದೆ. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡು ದೇಶಕ್ಕಾಗಿ ಬಲಿದಾನ ಮಾಡಿದ ಪುಣ್ಯಾತ್ಮ!
ಭಗವಂತನಿಗೆ ಪ್ರಿಯವಾದ ಕೆಲಸ
     ಭಗವಂತನಿಗೆ ಅನೇಕ ಹೆಸರುಗಳಿವೆ, ಸೋಮ ಅನ್ನುವುದೂ ಅವನ ಹೆಸರೇ. ಆ ಸೋಮ ಅನ್ನುವುದಕ್ಕೆ ಬೇಕಾದಷ್ಟು ಅರ್ಥ ಇದೆ. ಭಕ್ತಿರಸ ಅಂತಲೂ ಅರ್ಥ ಇದೆ, ಜಗತ್ತಿನ ಪ್ರೇರಕ, ಉತ್ಪಾದಕ ಅನ್ನುವ ಅರ್ಥವೂ ಇದೆ. ದೇವತೆಗಳ ಉತ್ಪಾದಕ, ಪ್ರೇರಕನೂ ಅವನೇ. ಅವನನ್ನು ಪ್ರಾರ್ಥನೆ ಮಾಡುವುದನ್ನು ಬಿಟ್ಟು ಅವನ ಹೆಸರಿನಲ್ಲಿ ಬೇರೆ ಯಾವ ಯಾವುದನ್ನೋ ಪೂಜೆ ಮಾಡುತ್ತಾ ಹೋದರೆ ಫಲ ಸಿಗುತ್ತಾ? ಮತ್ತೆ ಆ ಸೋಮ ವಿಶ್ವಪ್ರಿಯ.  ಪ್ರತಿದಿನ ಅವನಿಗೆ ಪ್ರಿಯವಾದ ಕೆಲಸವನ್ನು ಮಾಡಿಕೊಂಡು ಹೋಗುವುದೇ ಪೂಜೆ. ಭಗವಂತನಿಗೆ ಪ್ರಿಯವಾದ ಕೆಲಸ ಯಾವುದು? ಅವನಿಗೇನು ಉದ್ಧಾರ ಆಗಬೇಕಿಲ್ಲ. ಉದ್ಧಾರ ಆಗಬೇಕಾಗಿರುವುದು ನಮಗೆ. ನಾವು ಅಂದರೆ ನಮ್ಮ ಸಮೂಹ. ನಮ್ಮ ಸಮೂಹದ ಉದ್ಧಾರಕ್ಕಾಗಿ ನಾವು ಕೆಲಸ ಮಾಡಬೇಕಾಗಿದೆ. ಪೀಡಿಸೋದು, ಎಲ್ಲರನ್ನೂ ಗೋಳು ಹುಯ್ಕೊಳ್ಳೋದು, ಅನ್ಯಾಯ ಮಾಡೋದು, ಮತ್ತೆ ನಾನು ಭಗವದ್ಭಕ್ತ ಕಣಯ್ಯಾ ಅನ್ನೋದು, ಎಂಥಾ ಭಕ್ತರು? ಅವನಿಗೆ ಪ್ರಿಯರಾಗಿ, ಭಗವಂತನ ಮಕ್ಕಳು ನಾವೆಲ್ಲಾ, ಕಷ್ಟ, ಕಾರ್ಪಣ್ಯದಲ್ಲಿರುವವರಿಗೆ, ಬಡವರಿಗೆ, ಬಗ್ಗರಿಗೆ, ದೀನ ದಲಿತರಿಗೆ ಸಹಾಯ ಮಾಡಿದರೆ ನಿಜವಾದ ಭಗವಂತನ ಭಕ್ತರು ಅನ್ನಬಹುದು.
ಭಗವಂತನ ಮಕ್ಕಳ ಸೇವೆ ಭಗವಂತನ ಸೇವೆ
     ಅಯ್ಯೋ, ಅವನು ನಾಸ್ತಿಕ, ದೇವಸ್ಥಾನಕ್ಕೇ ಹೋಗೋದಿಲ್ಲ, ಅವನ ಮಾತು ಕೇಳ್ಬೇಡಿ ಅಂತ ಹೇಳ್ತಾರೆ. ಒಳ್ಳೇ ತಮಾಷೆ ಆಯ್ತಲ್ಲಾ ಇದು! ದೇವಸ್ಥಾನದಲ್ಲಿ ಮಾತ್ರ ಅವನಿದ್ದಿದ್ದರೆ ಬೇರೆ ಇನ್ನೆಲ್ಲೂ ಇಲ್ಲ ಅಂತಿದ್ದರೆ ಅಲ್ಲಿಗೆ ಹೋಗಬೇಕಾಗಿತ್ತು. ಸರ್ವವ್ಯಾಪಕ ಅಂತೀರಿ, ಎಲ್ಲಾ ಕಡೆಯೂ ಇದ್ದಾನೆ ಅಂತೀರಿ, ನಿಮ್ಮ ಹೃದಯಕ್ಕಿಂತ ದೊಡ್ಡ ಮಂದಿರ ಬೇಕಾ? ನಿಮ್ಮ ಹೃದಯದಲ್ಲೂ ಪರಮಾತ್ಮನಿದ್ದಾನೆ. ಸುಖವಾಗಿ ಆ ಪರಮಾತ್ಮನ ಕುರಿತು ಧ್ಯಾನ ಮಾಡಿ. ನಿಜವಾಗಿ ನಿಮಗೆ ಆನಂದ ಸಿಕ್ಕುತ್ತೆ. ಈ ಮಾತನ್ನು ನಾನು ನೂರು ವರ್ಷಗಳ ಅನುಭವದಿಂದ ಹೇಳುತ್ತಿದ್ದೇನೆ. ನಾನು ಆ ಸ್ಥಿತಿಯಲ್ಲಿ ಇರುವಾಗ ಈ ಪ್ರಪಂಚ ಏನೂ ಇರುವುದೇ ಇಲ್ಲ. ನನ್ನ ದೃಷ್ಟಿಯ ಒಳಗೆ ಈ ಪ್ರಪಂಚ ಇರೋದೆ ಇಲ್ಲ, ಇರೋದು ನನ್ನೊಳಗಿನ ಪರಮಾತ್ಮ ಒಬ್ಬನೇ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು;  ಭಗವಂತನ ಮಕ್ಕಳ ಸೇವೆಯೇ ಭಗವಂತನ ಸೇವೆ.
     ದೇವಸ್ಥಾನಗಳನ್ನು ಕಟ್ಟುವ ಬದಲು ಧರ್ಮಶಾಲೆ ಕಟ್ಟಿಸಿ, ಅನಾಥಾಲಯಗಳನ್ನು ಕಟ್ಟಿಸಿ, ಛತ್ರಗಳನ್ನು ನಿರ್ಮಾಣ ಮಾಡಿ, ಜನ ವಾಸ ಮಾಡಲಾದರೂ ಆಗುತ್ತೆ, ಅದು ಬಿಟ್ಟು ದೇವಸ್ಥಾನದಲ್ಲಿ ಮಾತ್ರ ಅವನಿದ್ದಾನೆ, ಬೇರೆ ಕಡೆ ಇಲ್ಲ ಅನ್ನೋದು ಸರಿಯಲ್ಲ. ಮೊದಲೇ ಅಜ್ಞಾನದಲ್ಲಿ ನರಳುತ್ತಿದ್ದೇವೆ, ನಮ್ಮನ್ನು ಇನ್ನೂ ಅಜ್ಞಾನಕ್ಕೆ ತಳ್ಳಿ ನೋಡೋದು ಎಷ್ಟು ಸರಿ? ಇದು ತಪ್ಪಬೇಕು. ಭಗವಂತನ ಮಕ್ಕಳ ಸೇವೆ ಮಾಡುವುದಕ್ಕೆ ನಮಗೆ ಉದಾರವಾದ ಮನಸ್ಸು ಕೊಡು ಅಂತ ದೇವರಲ್ಲಿ ಪ್ರಾರ್ಥಿಸಬೇಕು.
ಒಳ್ಳೆಯ ರೀತಿ ಬಾಳೋಣ
      ಯಾರು ಏನೇ ಅನ್ನಲಿ, ನಿಮ್ಮನ್ನು ಶತ್ರುವಾಗೇ ಕಾಣಲಿ, ನೀವು ಮಾತ್ರಾ 'ನಾನು ಎಲ್ಲರ ಮಿತ್ರ' ಎಂದುಕೊಳ್ಳಿ, ಇತರರು ನಿಮ್ಮನ್ನು ದ್ವೇಷಿಸಲಿ, ಪ್ರತಿಯಾಗಿ ನೀವು ದ್ವೇಷಿಸಲು ಹೋಗಬೇಡಿ. 'ದೊಡ್ಡಮಾತು, ಮಹಾತ್ಮರಿಗೆ ಅರ್ಥವಾಗುತ್ತೆ, ನಮಗೆ ಅರ್ಥವಾಗಲ್ಲ, ನಮಗೆ ಯಾಕೆ?' ಅಂದುಕೊಂಡು 'ಅವನು ಎರಡು ಮಾತು ಬೈದನಲ್ಲಾ, ಹತ್ತು ಮಾತು ಜಾಡಿಸಿಬಿಡುತ್ತೇನೆ' ಅಂದರೆ ಅವನದು ಎರಡು, ನಿಮ್ಮದು ಹತ್ತು, ಹನ್ನೆರಡು ಮಾತು ಕೇಳಿ ಬಂತು, ಯಾರ ಉದ್ಧಾರಕ್ಕೆ? ನಾವು ಈರೀತಿ ಯೋಚನೆ ಮಾಡುವುದನ್ನು ಕಲಿಯಬೇಕು, ಯೋಚನೆ ಮಾಡದೆ ಯಾವ ಕೆಲಸವನ್ನೂ ಮಾಡಬಾರದು, ವಿದ್ಯೆ, ಜ್ಞಾನದಿಂದ ಮಾಡುವ ಕೆಲಸದಲ್ಲಿ ಶಕ್ತಿ ತುಂಬಿಕೊಂಡಿರುತ್ತದೆ,  ಎಲ್ಲರೊಡನೆ ಮೃದುವಾಗಿ, ಮಧುರವಾಗಿ ಮಾತನಾಡಬೇಕೆಂದು ವೇದ ಹೇಳುತ್ತದೆ. ಮಾತು ಜೇನುತುಪ್ಪದಂತಿರಬೇಕೆಂದು ಹೇಳುತ್ತದೆ. ಒಳ್ಳೆಯ ಮಾತು ಎಲ್ಲಿ ಕೇಳುತ್ತೇವೆ? ಒಬ್ಬರನ್ನೊಬ್ಬರು ಬಯ್ಯುವುದು, ಒಬ್ಬರನ್ನೊಬ್ಬರು ಹಂಗಿಸುವುದು, ಇದರಲ್ಲೇ ಕಳೆಯುತ್ತೇವೆ. ಆಲೋಚನೆ ಮಾಡೋಣ, ಒಳ್ಳೆಯ ರೀತಿ ಬಾಳೋಣ. ಸತ್ಸಂಗಕ್ಕೆ ಬರುವುದರಿಂದ ಇನ್ನೂ ಒಂದು ಅನುಕೂಲವಿದೆ. ಅದೆಂದರೆ ಆ ಒಂದು ಗಂಟೆಯ ಅವಧಿಯಲ್ಲಾದರೂ ಕೆಟ್ಟ ಮಾತುಗಳನ್ನಾಡುವುದು, ನೋಯಿಸುವುದು, ಇತ್ಯಾದಿಗಳು ಇರುವುದಿಲ್ಲ!
ಭೇದ ಮಾಡದ ಭಗವಂತ  
     ಹಾಸ್ಯಮಯವಾಗಿ ಇಂದಿನ ಸ್ಥಿತಿ ಕುರಿತು ಪಂಡಿತರು ವಿಮರ್ಶಿಸುವ ಪರಿಯಿದು: ಸರ್ಕಾರಿ ಚಿಹ್ನೆ ಹಾಕ್ತಾರೆ - "ಸತ್ಯಮೇವ ಜಯತೇ". ಇದು ಯಾರ ಜೀವನದಲ್ಲೂ ಇಲ್ಲ, ದೊಡ್ಡ ನಾಯಕರುಗಳಿಂದ ಹಿಡಿದು ಒಬ್ಬ ಸಾಧಾರಣ ಮಿನಿಸ್ಟರ್‌ವರೆಗೂ ಯಾರಿಗೂ ಇಲ್ಲ. ಒಂದು ಸಲ ಒಬ್ಬ ಅಂತಿದ್ದನಂತೆ; 'ಪರಮಾತ್ಮ ನೀನು ಬಲೇ ಕಂತ್ರಿ, ಯಾಕೆ ನಾನಾಗಲಿಲ್ಲ ಮಂತ್ರಿ? ನನ್ನನ್ನು ಮಂತ್ರಿನೂ ಮಾಡಲಿಲ್ಲ, ನೀನೆಂಥಾ ದೇವ್ರು, ಕಂತ್ರಿ ನೀನು.' ನಮ್ಮ ದೌರ್ಬಲ್ಯವನ್ನು ಮುಚ್ಚಿಕೊಳ್ಳುವುದಕ್ಕೆ ಆ ದೌರ್ಬಲ್ಯವನ್ನು ಪರಮಾತ್ಮನ ಮೇಲೆ ಹಾಕೋದು! ಇಷ್ಟು ತಿಳ್ಕೊಳ್ಳಿ, ನಿಮ್ಮ ನಿಂದೆ, ನಿಮ್ಮ ಸ್ತುತಿ ಯಾವುದೂ ಭಗವಂತನ ಮೇಲೆ ಪರಿಣಾಮ ಬೀರುವುದಿಲ್ಲ. ಹೊಗಳಿದರು ಅಂತ ಕೇಳಿದ್ದನ್ನೆಲ್ಲಾ ಕೊಟ್ಟುಬಿಡುವುದಿಲ್ಲ, ಬೈದುಬಿಟ್ಟರು, ಅವರು ನಾಸ್ತಿಕರು ಅಂತ ಅವರ ಆಹಾರವನ್ನು ಕಿತ್ತುಕೊಳ್ಳುವುದಿಲ್ಲ, ನಾಸ್ತಿಕರು ಹೆಚ್ಚಿರುವ ರಷ್ಯದವರು ನಮಗಿಂತ ಚೆನ್ನಾಗಿ ಊಟ ಮಾಡ್ತಾರೆ. ಭಗವಂತ ಅವರ ಅನ್ನ ಕಿತ್ತುಕೊಳ್ಳಲಿಲ್ಲ. ನನ್ನನ್ನೇ ಇಲ್ಲ ಅಂತ ಹೇಳ್ತಾರಲ್ಲಾ, ಅವರೆಲ್ಲಾ ನಾಸ್ತಿಕರು ಅಂತ ಅನ್ನ ಕಿತ್ತುಕೊಳ್ಳೋದಿಲ್ಲ, ಆಸ್ತಿಕರಿಗೂ ಅನ್ನ ಕೊಡ್ತಾನೆ, ನಾಸ್ತಿಕರಿಗೂ ಅನ್ನ ಕೊಡ್ತಾನೆ. ನಮ್ಮ ಕುಂದುಕೊರತೆಗಳನ್ನು ಭಗವಂತನ ಮೇಲೆ ಹೊರಿಸುವುದು ಸರಿಯಲ್ಲ.
-ಕ.ವೆಂ.ನಾಗರಾಜ್.
**************
ದಿನಾಂಕ 04.05.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಮಹಿಳೆಯರು ನಡೆಸಿದ ಅಗ್ನಿಹೋತ್ರ - ಬಿಟಿವಿ ವರದಿ

     ದಿನಾಂಕ 31.5.2015ರಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ವಂದೇಮಾತರಮ್ ಹೋಟೆಲಿನ ಸಭಾಂಗಣದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರು 'ವೇದಚಿಂತನ ಗೋಷ್ಠಿ' ನಡೆಸಿದರು, ಸಂದೇಹಗಳಿಗೆ ಉತ್ತರಿಸಿದರು. ಹಾಸನದ ವೇದಭಾರತಿಯಿಂದ ಆಯೋಜಿತವಾಗಿದ್ದ ಈ ಕಾರ್ಯಕ್ರಮದ ಆರಂಭದಲ್ಲಿ ವೇದಭಾರತಿಯ ಮಹಿಳಾ ಸದಸ್ಯರು ಅಗ್ನಿಹೋತ್ರ ಮಾಡಿದರು. ಇದನ್ನು ಬಿ ಟಿವಿ ಸುದ್ದಿಯಾಗಿ ಬಿತ್ತರಿಸಿತು. ಸುದ್ದಿಯಲ್ಲಿ ಮಹಿಳೆಯರು ಪೌರೋಹಿತ್ಯ ಮಾಡಲು ಮುಂದೆ ಬಂದಿರುವ ಬಗ್ಗೆ ಸುದ್ದಿ ವಾಚಕಿ ಶ್ಲಾಘಿಸಿ ಮಾತನಾಡಿದರು. ವೇದಾಭ್ಯಾಸಕ್ಕೂ, ಪೌರೋಹಿತ್ಯಕ್ಕೂ ಸಂಬಂಧ ಕಲ್ಪಿಸುವ ಇಂದಿನ ರೂಢಿಗತ ತಿಳುವಳಿಕೆಯಿಂದ ಆಕೆ ಮಾತನಾಡಿರಬಹುದು. ವೇದಾಭ್ಯಾಸ ಅಂದರೆ ಕೇವಲ ಪೂಜಾಮಂತ್ರಗಳಷ್ಟೇ ಅಲ್ಲ ಎಂಬ ಬಗ್ಗೆ ಇನ್ನೂ ಜನರಿಗೆ ಅರಿವಾಗಬೇಕಿದೆ

ಮಂಗಳವಾರ, ಜೂನ್ 2, 2015

ಪಂ. ಸುಧಾಕರ ಚತುರ್ವೇದಿಯವರ ವಿಚಾರಧಾರೆ -3: ವೈಚಾರಿಕ ಶಕ್ತಿ ಬೆಳೆಸಿಕೊಳ್ಳೋಣ


     ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ, ಶತಾಯು ಪಂಡಿತ ಸುಧಾಕರ ಚತುರ್ವೇದಿಯವರ ಪೂರ್ವಿಕರು ತುಮಕೂರಿನ ಕ್ಯಾತ್ಸಂದ್ರದವರಾದರೂ ಇವರು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ  ಬೆಂಗಳೂರಿನಲ್ಲಿಯೇ. ಶಿಕ್ಷಣ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಶ್ರೀ ಟಿ.ವಿ. ಕೃಷ್ಣರಾವ್ ಮತ್ತು  ಶ್ರೀಮತಿ ಲಕ್ಷ್ಮಮ್ಮನವರ ಮಗನಾಗಿ 1897ರ ರಾಮನವಮಿಯಂದು ಬಳೇಪೇಟೆಯಲ್ಲಿದ್ದ ಮನೆಯಲ್ಲಿ ಜನಿಸಿದ ಇವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದರೂ ಅರ್ಥವಿಲ್ಲದ ಕುರುಡು ಸಂಪ್ರದಾಯಗಳನ್ನು ಒಪ್ಪದಿದ್ದವರು, ಸರಿ ಅನ್ನಿಸಿದ್ದನ್ನು ಮಾತ್ರ ಮಾಡಿದವರು. ಅಪ್ಪಟ ಕನ್ನಡಿಗರಾದ ಪಂ. ಸುಧಾಕರ ಚತುರ್ವೇದಿಯವರು ತಮ್ಮ 13ನೆಯ ವಯಸ್ಸಿನಲ್ಲಿಯೇ  ಉತ್ತರ ಭಾರತದ ಹರಿದ್ವಾರದ ಹತ್ತಿರದ ಕಾಂಗಡಿ ಗುರುಕುಲಕ್ಕೆ ಸೇರಿ ಉಪನಿಷತ್ತು, ವ್ಯಾಕರಣ, ಛಂದಸ್ಸು, ಗಣಿತ, ಜ್ಯೋತಿಷ್ಯ, ಷಡ್ದರ್ಶನಗಳು ಸೇರಿದಂತೆ ವೇದಾಧ್ಯಯನ ಮಾಡಿದವರು. ಮಹರ್ಷಿ ದಯಾನಂದ ಸರಸ್ವತಿಯವರ ವಿಚಾರಗಳಿಂದ ಪ್ರಭಾವಿತರಾಗಿದ್ದು, ಸ್ವಾಮಿ ಶ್ರದ್ಧಾನಂದರ ಪ್ರೀತಿಯ ಶಿಷ್ಯರಾಗಿ ಬೆಳೆದವರು. ನಾಲ್ಕೂ ವೇದಗಳನ್ನು ಅಧ್ಯಯಿಸಿದ ಅವರು ನಿಜ ಅರ್ಥದಲ್ಲಿ ಚತುರ್ವೇದಿಯಾಗಿ, 'ಚತುರ್ವೇದಿ' ಎಂಬ ಸಾರ್ಥಕ ಹೆಸರು ಗಳಿಸಿದವರು.  ಜಾತಿ ಭೇದ ತೊಲಗಿಸಲು ಸಕ್ರಿಯವಾಗಿ ತೊಡಗಿಕೊಂಡವರು. ನೂರಾರು ಅಂತರ್ಜಾತೀಯ ವಿವಾಹಗಳನ್ನು ಮುಂದೆ ನಿಂತು ಮಾಡಿಸಿದವರು ಮತ್ತು ಅದಕ್ಕಾಗಿ ಬಂದ ವಿರೋಧಗಳನ್ನು ಎದುರಿಸಿದವರು. ವೇದದಲ್ಲಿ ವರ್ಣವ್ಯವಸ್ಥೆಯಿದೆಯೇ ಹೊರತು, ಹುಟ್ಟಿನಿಂದ ಬರುವ ಜಾತಿಪದ್ಧತಿ ಇಲ್ಲವೆಂದು ಪ್ರತಿಪಾದಿಸಿದವರು, ಮನುಷ್ಯರೆಲ್ಲಾ ಒಂದೇ ಜಾತಿ, ಬೇಕಾದರೆ ಗಂಡು ಜಾತಿ, ಹೆಣ್ಣುಜಾತಿ ಅನ್ನಬಹುದು ಎಂದವರು. ಸಾಹಿತಿಯಾಗಿಯೂ ಸಹ ಅನೇಕ ಕೃತಿಗಳನ್ನು ಜನಹಿತವನ್ನು ಮನದಲ್ಲಿ ಇಟ್ಟುಕೊಂಡೇ ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ರಚಿಸಿದವರು. ಅವರ ವಿಚಾರಧಾರೆಯ ಮೂರನೆಯ ಕಂತು ಇಲ್ಲಿದೆ.
*****************
ಅರ್ಪಣಾಭಾವ
     ಅಗ್ನಿಹೋತ್ರ ಮಾಡುವಾಗ  ಮೊದಲು ಒಂದುಸಲ 'ಅಯಂತ ಇಧ್ಮ'  ಎಂದು ಹೇಳುತ್ತೇವೆ. ಆಮೇಲೆ 5ಸಲ . 'ಅಯಂತ ಇಧ್ಮ' ಎಂದು ಹೇಳುತ್ತೇವೆ. ಅಗ್ನಿಹೋತ್ರ ಮಾಡುವ ವಿಚಾರದಲ್ಲಿ ತಿಳಿದುಕೊಳ್ಳಬೇಕಾದ್ದಿದೆ. ವಾಯುಶುದ್ಧಿ, ಜಲಶುದ್ದಿ ಇವೆಲ್ಲಾ ಇದ್ದದ್ದೇ. ಎಲ್ಲರಿಗೂ ಅರ್ಥವಾಗುತ್ತೆ. ಆಧ್ಯಾತ್ಮಿಕ ಭಾವನೆಯನ್ನು ಸಹ ಅರ್ಥ ಮಾಡಿಕೊಳ್ಳಬೇಕು. ಹೋಮ, ಹವನ ಮಾಡಿದೆವು ಅಂತೀವಿ, ನಮ್ಮ ಉದ್ಧಾರವಾಗುತ್ತೋ, ಭಗವಂತನ ಉದ್ಧಾರವಾಗುತ್ತೋ ತಿಳಿದುಕೊಳ್ಳುವುದಿಲ್ಲ., ಭಗವಂತ, ನೀನು ಮಹಾನ್ ಅಗ್ನಿ, 'ಅಯಂ ಆತ್ಮಾ ತೇ ಇಧ್ಮ' - ನನ್ನ ಆತ್ಮ ಇದು ನಿನಗೆ ಸಮಿತ್ತು-  ಅಂತ. ನಾನು ಸಮಿತ್ತು. ನನ್ನ ಆತ್ಮ ಇದೆಯಲ್ಲಾ, ಭಗವಂತಾ, ಅದನ್ನು ನಿನಗೆ ಸಮರ್ಪಿಸುತ್ತಿದ್ದೇನೆ, ಅಂತ. ಅರ್ಥ ಮಾಡಿಕೊಳ್ಳಿ, ಅಗ್ನಿಯಲ್ಲಿ ಬೆಳಕಿದೆ, ಸಮಿತ್ತಿನಲ್ಲಿ ಸ್ವತಃ ಬೆಳಕಿಲ್ಲ. ಅಗ್ನಿಯೊಡನೆ ಬೆರೆತಾಗ ಸಮಿತ್ತು ಉರಿದು ಬೆಳಕು ಕೊಡುತ್ತದೆ. ಹೀಗೆ, ಪರಮಾತ್ಮ ಜ್ಯೋತಿಸ್ವರೂಪ, ಸರ್ವಶಕ್ತ, ನಮ್ಮ ಆತ್ಮ ಅಲ್ಪಜ್ಞ, ಅಲ್ಪಶಕ್ತ. ಒಳ್ಳೆ ಕೆಲಸಾನೂ ಮಾಡ್ತೇವೆ, ಕೆಟ್ಟ ಕೆಲಸಾನೂ ಮಾಡ್ತೇವೆ. ಒಳ್ಳೆ ಕೆಲಸ ಮಾಡಿದಾಗ ಸ್ವಲ್ಪ ಮೇಲೇರುತ್ತೇವೆ, ಕೆಟ್ಟ ಕೆಲಸ ಮಾಡಿದಾಗ ಕೆಳಕ್ಕೆ ಬೀಳುತ್ತೇವೆ. ಈ ಏಳೋದು, ಬೀಳೋದು ನಮ್ಮ ಹಣೆಬರಹ. ಅದರ ಫಲವೇನೇ ಈ ಸುಖ-ದುಃಖ ಅನ್ನುವುದು,.ಒಳ್ಳೆ ಕೆಲಸ ಮಾಡಿದಾಗ ಸುಖ, ಕೆಟ್ಟ ಕೆಲಸ ಮಾಡಿದಾಗ ದುಃಖ. ಇದು ಇದ್ದದ್ದೇ. ಇದನ್ನು ಇಲ್ಲವೆನ್ನುವಂತಿಲ್ಲ. ಇದನ್ನು ಮೀರಿ, ಪರಮಾತ್ಮನಲ್ಲಿ ಆತ್ಮ ಸಮರ್ಪಣೆ ಮಾಡಿಕೊಂಡರೆ ಜೀವಾತ್ಮಕ್ಕೆ ಪ್ರಕಾಶ ಬರುತ್ತದೆ. ಜೀವಾತ್ಮ ಸಮಿತ್ತಿದ್ದಂತೆ, ಅದಕ್ಕೆ ಸ್ವಯಂಪ್ರಕಾಶವಿಲ್ಲ, ಪರಮಾತ್ಮನೆಂಬ ಅಗ್ನಿಯೊಂದಿಗೆ ಒಂದಾದಾಗ ಅದಕ್ಕೆ ಪ್ರಕಾಶ ಬರುತ್ತದೆ.  ಈಶ್ವರ ಸನ್ನಿಧಾನ ಅಂತ ಹೇಳ್ತೀವಲ್ಲಾ, ಏನಿದರ ಅರ್ಥ?  ತ್ರಿಕರಣ ಪೂರ್ವಕವಾಗಿ ನಮ್ಮನ್ನು ಅಂದರೆ  ಆತ್ಮನನ್ನು ಪರಮಾತ್ಮನೊಂದಿಗೆ ಅರ್ಪಿಸಿಕೊಂಡಾಗ ನಮಗೆ ಪರಮಾನಂದ ಸಿಕ್ಕುತ್ತೆ.
ನಾವೆಲ್ಲರೂ ದೇವರ ಮಕ್ಕಳು
     ಯಾರೋ ಒಬ್ಬರನ್ನು ದೇವರ ಮಗ ಅನ್ನುವುದು ಎಷ್ಟು ಸರಿ? ವೇದ ಹೇಳುತ್ತೆ: 'ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ  . . . .  ' ಈ ದಿವ್ಯವಾದ ಲೋಕ ಲೋಕಾಂತರದಲ್ಲಿ ಎಷ್ಟು ಜನ ಬದುಕಿದ್ದಾರೆ, ಜೀವಿಸಿದ್ದಾರೆ, ಅವರೆಲ್ಲಾ 'ಅಮೃತಸ್ಯ ಪುತ್ರಾಃ' - ಅವರೆಲ್ಲರೂ ಆ ಅಮರನಾದ ಪರಮಾತ್ಮನ ಮಕ್ಕಳೇ. ಯಾರೋ ಒಬ್ಬರನ್ನು ಮಾತ್ರ ದೇವರ ಮಗ ಅನ್ನುವುದು ಸರಿಯಲ್ಲ.
ಚೇತನ ಅಚೇತನ ವಸ್ತುವನ್ನು ಪೂಜಿಸಬೇಕೆ?
     'ಯಥಾ ಪ್ರಕಾರ ಸತ್ಸಂಗಕ್ಕೆ ಬಂದ್ರು, ಕೂತ್ಕೊಂಡ್ರು, 'ಪಂಡಿತಜಿ ಬಹಳ ಸೊಗಸಾಗಿ ಮಾತನಾಡಿದರು' ಅನ್ನೋದು. ಹೊರಗೆ ಹೋಗುವಾಗ ಕೇಳಿದ್ದನ್ನೆಲ್ಲಾ ಪಂಡಿತಜಿಗೇ ಬಿಟ್ಟು ಹೋಗೋದು. ತೆಗೆದುಕೊಂಡು ಹೋಗೋದು ಏನೂ ಇಲ್ಲ, ಮನೆಗೆ ಹೋದ ಮೇಲೆ ಅದೇ ಪ್ರಕಾರ ಮೂರ್ತಿ ಪೂಜೆ, ಅದೇ ಪ್ರಕಾರ ನಡೆದುಕೊಳ್ಳುವುದು, ಮೂರ್ತಿಪೂಜೆ ಮಾಡಲೇಬೇಕು ಅನ್ನುವ ಹಟ ಇದ್ದರೆ, ಪರಮಾತ್ಮನ ಮೂರ್ತಿ ಆಚಾರ್ಯ, ತಂದೆಗೆ ಪ್ರಜಾಪತಿ ಸ್ಥಾನ, ತಾಯಿಯೇ ಪೃಥ್ವಿ, ಅವರುಗಳನ್ನು ಪೂಜೆ ಮಾಡಿ, ಅದು ಬಿಟ್ಟು ಜೀವ ಇಲ್ಲದ ಅಚೇತನವಾದ ವಸ್ತುಗಳನ್ನು ಎದುರಿಗೆ ಇಟ್ಟುಕೊಂಡು ಅಡ್ಡ ಬೀಳುವುದೇಕೆ? ಅವಕ್ಕೆ ಗೊತ್ತಾಗುತ್ತಾ?'- ಇದು ಚತುರ್‍ವೇದಿಯವರು ಅರಿತು ಆಚರಿಸಬೇಕೆಂಬುದಕ್ಕೆ ಒತ್ತು ಕೊಟ್ಟ ಪರಿ.
ಭಗವಂತನ ಭಕ್ತರ ಭಯ!
     ನನಗೆ ಭಕ್ತರ ಭಯ, ಭಗವಂತನ ಭಯವಿಲ್ಲ, ಭಗವಂತನ ಭಕ್ತರಿದ್ದಾರಲ್ಲಾ, ಅವರದ್ದೇ ಯಾವಾಗಲೂ ಅಪಾಯವೇ. ಹಿಂದೆ ಒಮ್ಮೆ ಗ್ರಾಮದೇವತೆಯ ಉತ್ಸವ ಮೂರ್ತಿ ಹೊತ್ತುಕೊಂಡು ಬಂದು ನಮ್ಮ ಬಾಡಿಗೆ ಮನೆಯ ಮುಂದೆ ನಿಲ್ಲಿಸಿದರು. ಉತ್ಸವ ಮಾಡುವಾಗ ಗ್ರಾಮದೇವತೆಯ ಕಥೆ ಹೇಳುವುದಿಲ್ಲ, ಸಂಬಂಧವಿಲ್ಲದ ಸಿನೆಮಾ ಹಾಡುಗಳನ್ನು ಹಾಕಿಕೊಂಡು ಕುಣೀತಾ ಹೋಗೋದು. ಇದೆಂಥಾ ಭಕ್ತಿ? ನಾನು ಹೇಳಿದೆ: "ತೆಗೆದುಕೊಂಡು ಹೋಗ್ರಪ್ಪಾ, ಬೇರೆ ಎಲ್ಲಾದರೂ ಕೂಡಿಸಿಕೊಳ್ಳಿ, ಯಾಕೆ ನಮ್ಮ ಪ್ರಾಣ ತಿಂತೀರಿ?" - ಅರ್ಥವಿಲ್ಲದ ಆಚರಣೆಗಳ ಕುರಿತು ಪಂಡಿತರು ಅಸಮಾಧಾನ ವ್ಯಕ್ತಪಡಿಸಿದ ಪರಿ ಇದು!
ವಿದ್ವಾಂಸರಲ್ಲಿ ದೇವರನ್ನು ಕಾಣೋಣ
     ಈ ಪ್ರಪಂಚದಲ್ಲಿ ಯಾರು ವಿದ್ವಾಂಸರು ಇರುತ್ತಾರೋ ಅವರನ್ನೇ ದೇವರು ಅನ್ನಬಹುದು. ಆ ವಿದ್ವಾಂಸರಲ್ಲಿ ಫಟಿಂಗರೂ ಇರುತ್ತಾರೆ, ಎಲ್ಲರೂ ಒಳ್ಳೆಯವರಿರುವುದಿಲ್ಲ. ಜನರಿಗೆ  ಟೋಪಿ ಹಾಕುವುದಕ್ಕೆ ಏನು ಬೇಕೋ ಅದನ್ನು ಹೇಳುವವರು ಇರುತ್ತಾರೆ. ಋಜು ಮಾರ್ಗದಲ್ಲಿ, ನೇರ ಮಾರ್ಗದಲ್ಲಿ ಯಾರು ನಡೆಯುತ್ತಾರೋ ಅಂತಹ ವಿದ್ವಾಂಸರ ಬುದ್ಧಿ ನಮಗೆ ಬರಲಿ, ವಿದ್ವಾಂಸರುಗಳು ನೇರವಾದ ಮಾರ್ಗವನ್ನು ತೋರಿಸಬೇಕು. 'ಜ್ಞಾನ ಕೊಡುವ, ಫಲ ಕೊಡುವ ವಿದ್ವಾಂಸರೇ ನಮಗೆ ಉಪದೇಶ ಕೊಡಿ' ಇದು ವೇದ ಹೇಳುವ ಮಾತು. ಆ ಪುಣ್ಯಾತ್ಮನಿಗೇ ಜ್ಞಾನ ಇಲ್ಲದೇ ಹೋದರೆ, ಅವನೇ ಅವಿದ್ಯಾವಂತನಾದರೆ ಅವನಿಂದ ನಮಗೆ ಏನು ಸಿಕ್ಕುತ್ತೆ? ಆದ್ದರಿಂದ ವಿದ್ವಾಂಸರಿಗೆ ಶರಣಾಗಬೇಕು, ಜ್ಞಾನಿಗಳಿಗೆ ಶರಣಾಗಬೇಕು, ಅವರನ್ನು ನಾವು ಪ್ರಾರ್ಥನೆ ಮಾಡಬೇಕು.
     ಗಂಭೀರವಾಗಿ ಯೋಚಿಸಿ, ಆಲೋಚಿಸಿ, ವೇದದ ಮಂತ್ರ ಹೇಳುತ್ತೆ, ಸತ್ಕರ್ಮ ಮಾಡುವುದನ್ನು ಬಿಟ್ಟು ಬೇರೆಡೆ ಹೊರಳದಿರೋಣ, ನಾವು ಯಾವ ದಾರಿಯಲ್ಲಿ ಹೋಗಬೇಕೋ ಆ ದಾರಿಯನ್ನು ಬಿಟ್ಟು ಹೋಗದಿರೋಣ, ಸರ್ವೈಶ್ವರ್‍ಯನಾದ ಪರಮಾತ್ಮ ನಮಗೆ ಬದುಕು ಕೊಟ್ಟಿದ್ದಾನೆ, ಜೊತೆಗೆ ಐಶ್ವರ್ಯವನ್ನೂ ಕೊಟ್ಟಿದ್ದಾನೆ. ಸೋಮ ಅನ್ನುವ ಪದ ಇದೆ, ಆ ಪದಕ್ಕೆ 40 ಅರ್ಥ ಇದೆ. ಎಲ್ಲಾ ಬೇಡ, 2-3 ಅರ್ಥ ನೋಡೋಣ, ಒಂದು ಮಥನ ಮಾಡು ಅಂತ. ಹಾಲನ್ನು ಸುಮ್ಮನೆ ಇಟ್ಟರೆ ಕೆನೆ ಸಿಕ್ಕುವುದಿಲ್ಲ, ಕಾಯಿಸಿ ಹೆಪ್ಪಿಟ್ಟರೆ ಮೊಸರಾಗುತ್ತದೆ, ಮಥಿಸಿದರೆ ಬೆಣ್ಣೆ ಸಿಗುತ್ತದೆ, ಆ ಮಥನ ಶಕ್ತಿ ನಿಮ್ಮಲ್ಲಿರಬೇಕು.  ಇನ್ನೊಂದು ವಿಚಾರ ಮಾಡುವ ಶಕ್ತಿ, ಆಲೋಚನೆ ಮಾಡುವ ಶಕ್ತಿ. ಗುರೂಜಿ ಎಲ್ಲಾ ಯೋಚನೆ ಮಾಡಿಬಿಟ್ಟಿದ್ದಾರೆ, ನಾವೇನು ಯೋಚನೆ ಮಾಡುವುದು ಬೇಡ, ಅವರು ಹೇಳಿದಂತೆ ನಡೆದರೆ ಸಾಕು ಎಂದು ಭಾವಿಸುವುದು ಸರಿಯಲ್ಲ. ಗುರು ಅಂದರೆ ಎರಡು ನಮೂನೆ - ಒಂದು ಸತ್ಯೋಪದೇಶ ಮಾಡುವವನು, ಇನ್ನೊಂದು ಭಾರ ಅಂತ. ಈಗ ಹೆಚ್ಚಿನ ಗುರುಗಳು ಭಾರವಾಗಿರುವವರೇ.
ಮೂರ್ತಿಪೂಜೆಯ ತಪ್ಪು ಕಲ್ಪನೆ
     ಪಂಡಿತರು ಮೂರ್ತಿಪೂಜೆ ಕುರಿತ ಚರ್ಚೆಯೊಂದರ ಸಂದರ್ಭವನ್ನು ವಿವರಿಸಿದ್ದು ಹೀಗೆ: ಒಮ್ಮೆ ಆರ್ಯ ಸಮಾಜದ ಒಬ್ಬ ದೊಡ್ಡ ವಿದ್ವಾಂಸರು ಮತ್ತು ಮಾಧವಾಚಾರ್ಯ ಅನ್ನುವ ಪೌರಾಣಿಕರ ನಡುವೆ ಹೈದರಾಬಾದಿನಲ್ಲಿ ಮೂರ್ತಿಪೂಜೆ ಕುರಿತು ಚರ್ಚೆ, ಜಿಜ್ಞಾಸೆ ನಡೆಯುತ್ತಿತ್ತು. ಆ ಮಾಧವಾಚಾರ್ಯರಿಗೆ ಇನ್ನೇನೂ ಉಪಾಯ ಹೊಳೆಯಲಿಲ್ಲ, ದಯಾನಂದರ ಫೋಟೋ ತಂದು ಎದುರಿಗೆ ಇಟ್ಟರು. "ನೀವು ಮೂರ್ತಿ ಪೂಜೆ ಮಾಡಲ್ಲ ಅಲ್ವಾ? ಹಾಗಾದರೆ ಈ ದಯಾನಂದರ ಫೋಟೋಗೆ ಎಕ್ಕಡದಿಂದ ಹೊಡೀರಿ, ನೋಡೋಣ" ಅಂದರು. ಆ ವಿದ್ವಾಂಸ ಪುಣ್ಯಾತ್ಮ ಯೋಚನೆ ಮಾಡಲಿಲ್ಲ, ಆ ದಯಾನಂದರ ಫೋಟೋಗೆ ಚಚ್ಚಿಯೇ ಬಿಟ್ಟರು. ನಾನು ಹೇಳಿದೆ, "ಪಂಡಿತಜಿ, ನಿಮ್ಮ ಬುದ್ಧೀನೂ ಜೇಡಿ ಮಣ್ಣಾಯಿತಾ? ಆ ಫೋಟೋ ಯಾರದು? ದಯಾನಂದರದು. ಆ ದಯಾನಂದರಿಗೆ ಒಂದು ಆಕಾರ ಇತ್ತು. ಅವರ ಫೋಟೋ ಹಿಡಿಯುವುದು ಸಾಧ್ಯವಿತ್ತು. ಹಾಗಾಗಿ ನೀವು ಮಾಡಿದ್ದು ಸರಿಯಲ್ಲ. ನಿರಾಕಾರನಾದ ಭಗವಂತನ ಫೋಟೋ ಹಿಡಿಯುವುದಕ್ಕೆ ಸಾಧ್ಯವಿದೆಯೇ? ಇಲ್ಲದಿರುವಾಗ ಕಲ್ಪನೆಯ ಆಕಾರವನ್ನು ಭಗವಂತ ಅನ್ನಬಹುದೇ ಎಂದು ಕೇಳಬಹುದಿತ್ತಲ್ಲವೇ?"
ಪರಮಾತ್ಮ ಎಲ್ಲಿದ್ದಾನೆ ಎಂಬುದಕ್ಕೆ ಪಂಡಿತರು ಹೇಳಿದ್ದಿದು:
     'ನನಗೆ ಒಂದು ಟೈಟಲ್ಲು ಸಿಕ್ಕಿದೆ, ಪಂಡಿತಜಿ ಸುಮ್ಮನೆ ವೇದ, ವೇದ ಅಂತ ಹೇಳ್ತಾರೆ, ಅವರು ನಾಸ್ತಿಕರು, ದೇವಸ್ಥಾನಕ್ಕೆ ಹೋಗೋದಿಲ್ಲ, ಮಸೀದಿಗೆ ಹೋಗೋದಿಲ್ಲ, ಚರ್ಚಿಗೂ ಹೋಗೋದಿಲ್ಲ. ಹೌದು, ನಾನು ಎಲ್ಲಿಗೂ ಹೋಗುವುದಿಲ್ಲ. ಆ ಎಲ್ಲಾ ನನ್ನ ಎದೆಯಲ್ಲೇ ಇದೆ. ದೇವಸ್ಥಾನವೂ ನನ್ನ ಎದೆಯಲ್ಲಿದೆ, ಮಸೀದಿಯೂ ನನ್ನ ಎದೆಯಲ್ಲಿದೆ, ಚರ್ಚೂ ನನ್ನ ಎದೆಯಲ್ಲಿದೆ. ಪರಮಾತ್ಮ ಇಲ್ಲೇ ಇದ್ದಾನೆ. ನಾನು ಹೊರಗೆ ಇನ್ನೆಲ್ಲಿ ಅವನನ್ನು ಹುಡುಕಲು ಹೋಗಬೇಕು? ಇದು ಒಂದು ಪ್ರಶ್ನೆ, ಇದನ್ನು ಸ್ವಲ್ಪ ದರ್ಶನ ಶಾಸ್ತ್ರಕ್ಕೆ ಹೋಗಬೇಕು. 'ವ್ಯಾಪ್ಯ-ವ್ಯಾಪಕ'- ವ್ಯಾಪಕ ಪರಮಾತ್ಮ, ಬೊಂಬೆಯಲ್ಲೂ ಇದ್ದಾನೆ, ಬೊಂಬೆಯ ಹೊರಗೂ ಇದ್ದಾನೆ, ಎಲ್ಲಾ ಕಡೆಯೂ ಇದ್ದಾನೆ, ನೀವು ಪೂಜೆ ಮಾಡುವುದು ವ್ಯಾಪ್ಯನನ್ನೋ, ವ್ಯಾಪಕನನ್ನೋ? ವಿಗ್ರಹ ಪೂಜೆ ಮಾಡ್ತಾ ಇದ್ದರೆ, ಸ್ಪಷ್ಟವಾಗಿದೆ, ನೀವು ವ್ಯಾಪಕನನ್ನಲ್ಲ, ವ್ಯಾಪ್ಯನನ್ನು ಪೂಜೆ ಮಾಡ್ತಾ ಇದೀರಿ. ಬಲ್ಬು ಇದೆ, ಅದರಲ್ಲಿ ವಿದ್ಯುತ್ ಇದೆ, ಸ್ವಿಚ್ ಹಾಕಿದರೆ ಅದರಲ್ಲಿ ಲೈಟು ಹತ್ತುತ್ತದೆ, ಆ ಸ್ವಿಚ್ಚೇ ಇಲ್ಲದಿದ್ದರೆ ಆ ಬಲ್ಬು 100 ವೋಲ್ಟಿನದಾಗಿರಲಿ, 1000 ವೋಲ್ಟಿನದಾಗಿರಲಿ, ಹತ್ತುತ್ತಾ? ಸ್ವಿಚ್ಚು ಒತ್ತಿದರೇ ಹತ್ತುವುದು, ಇಲ್ಲದಿದ್ದರೆ ಹತ್ತುವುದಿಲ್ಲ, ಹಾಗೆಯೇ ನಿಮಗೆ ಧ್ಯಾನ ಅನ್ನುವುದು ಸ್ವಿಚ್ಚು, ಆ ಸ್ವಿಚ್ಚಿರಬೇಕು, ಆ ಸ್ವಿಚ್ಚು ನಿಮ್ಮ ಎದೆಯಲ್ಲೇ ಇದೆ. ಆಗ ಪರಮಾತ್ಮನನ್ನು ನೀವು ಕಂಡುಕೊಳ್ಳುತ್ತೀರಿ, ಜ್ಞಾನಕ್ಕೇ ಸೊನ್ನೆ ಬಿದ್ದಿದ್ದರೆ ಪರಮಾತ್ಮನೂ ಇಲ್ಲ, ಜೀವಾತ್ಮನೂ ಇಲ್ಲ, ಎಲ್ಲಾ ಬರೀ ಮಾತು, ಟೊಳ್ಳು ಮಾತು,'
ಸುಪ್ಪತ್ತಿಗೆ
     ಪುರಾಣದ ಕಥೆಗಳು, ನಾಟಕ, ನೃತ್ಯ ಇವುಗಳನ್ನು ನೋಡ್ತಾ ಇದ್ದರೆ ರಾತ್ರಿ ಪೂರ್ತಾ ನಿದ್ದೆ ಬರುವುದಿಲ್ಲ, ವೇದ, ಉಪನಿಷತ್ತುಗಳ ವಿಚಾರ ಕೇಳ್ತಾ ಇದ್ದರೆ ಸ್ವಲ್ಪ ಹೊತ್ತಿಗೇ ನಿದ್ದೆ ಬಂದುಬಿಡುತ್ತೆ. ಒಬ್ಬ ಭಕ್ತ ಕೇಳಿದ, 'ಯಾಕೆ ಸ್ವಾಮಿ, ಹೀಗಾಗುತ್ತೆ?' ಅದಕ್ಕೆ ದಯಾನಂದರು ಹೇಳಿದ್ದರು: 'ಪುರಾಣದ ಕಥೆಗಳು, ನಾಟಕ, ನೃತ್ಯ, ಎಲ್ಲಾ ಮುಳ್ಳಿನ ಹಾಸಿಗೆ ಇದ್ದಂತೆ, ವೇದ, ಉಪನಿಷತ್ತುಗಳು ಸುಪ್ಪತ್ತಿಗೆ ಇದ್ದಂತೆ. ಮುಳ್ಳಿನ ಹಾಸಿಗೆ ಮೇಲೆ ಮಲಗಿದರೆ ನಿದ್ದೆ ಹೇಗೆ ಬರಬೇಕು? ಸುಪ್ಪತ್ತಿಗೆ ಮೇಲೆ ಮಲಗಿದರೆ ನಿದ್ದೆ ಬರದೆ ಇದ್ದರೆ ಇನ್ನು ಯಾವುದರ ಮೇಲೆ ಬರಬೇಕು?'
-ಕ.ವೆಂ.ನಾಗರಾಜ್.
***************
ದಿನಾಂಕ 29.04.2015ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ: