ಜಿಲ್ಲಾ ಸಂಸ್ಕೃತ ಸಮ್ಮೇಳನದ ಉದ್ಘಾಟನೆ:
"ಪಠತು ಸಂಸ್ಕೃತಂ ವದತು ಸಂಸ್ಕೃತಂ
ಲಸತು ಸಂಸ್ಕೃತಂ ಚಿರಂ ಗೃಹೇ ಗೃಹೇಚ ಪುನರಪಿ"
ಸಮ್ಮೇಳನದ ಉದ್ಘಾಟಕರಾದ ಹೆಸರಾಂತ ಚಿತ್ರ ನಟ, ನಿರ್ದೇಶಕ ಮತ್ತು ನಿರ್ಮಾಪಕರಾದ ಶ್ರೀ ಕೆ.ಎಸ್.ಎಲ್. ಸ್ವಾಮಿ (ರವಿ)ಯವರನ್ನು ಮತ್ತು ಇತರ ಗಣ್ಯರನ್ನು ಆರತಿ ಬೆಳಗಿ, ತಿಲಕವಿಟ್ಟು ಕಲಶಗಳೊಂದಿಗೆ ಸ್ವಾಗತಿಸಿ ವೇದಿಕೆಗೆ ಕರೆತರಲಾಯಿತು. ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸುಶ್ರಾವ್ಯವಾದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಮ್ಮೇಳನದ ಕಾರ್ಯಾಧ್ಯಕ್ಷರಾದ ಶ್ರೀ ಅಟ್ಟಾವರ ರಾಮದಾಸ್ ಗಣ್ಯರನ್ನೂ, ಸರ್ವರನ್ನೂ ಸ್ವಾಗತಿಸಿದರು. ಸಂಸ್ಕೃತಭಾರತಿಯ ದಕ್ಷಿಣ ಕರ್ನಾಟಕ ಸಂಪರ್ಕ ಪ್ರಮುಖ ಶ್ರೀ ಶ್ರೀನಿವಾಸನ್ ಪ್ರಾಸ್ತಾವಿಕವಾಗಿ ಮಾತನಾಡಿ ಮೃತಭಾಷೆಯೆಂದು ಹೇಳಲಾಗುತ್ತಿದ್ದ ಸಂಸ್ಕೃತ ಇಂದಿಗೂ ಹೇಗೆ ಜೀವಂತವಿದೆ, ಪ್ರಸ್ತುತವಿದೆ ಎಂಬುದನ್ನು ಅಂಕಿ ಅಂಶಗಳೊಂದಿಗೆ ವಿವರಿಸಿದ್ದು ಚೇತೋಹಾರಿಯಾಗಿತ್ತು. ಒಂದು ಅದ್ಭುತವಾದ ಮತ್ತು ಅಮೂಲ್ಯವಾದ ಜ್ಞಾನಭಂಡಾರಕ್ಕೆ ಸಂಸ್ಕೃತ ಕೀಲಿಕೈ ಆಗಿದೆಯೆಂದರು. ಭಾರತಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗಿ ಗಣ್ಯರುಗಳು ಸಮ್ಮೇಳನಕ್ಕೆ ಅಧಿಕೃತ ಚಾಲನೆ ನೀಡಿದರು. ವೇದಿಕೆಯಲ್ಲಿ ಶ್ರೀಯುತರಾದ ಕೆ.ಎಸ್.ಎಲ್. ಸ್ವಾಮಿ, ಬೆಂಗಳೂರಿನ ಸಂಸ್ಕೃತ ವಿ.ವಿ.ಯ ನಿವೃತ್ತ ಕುಲಪತಿ ಶ್ರೀ ಮಲ್ಲೇಪುರಮ್ ವೆಂಕಟೇಶ, ಸಮ್ಮೇಳನದ ಗೌರವಾಧ್ಯಕ್ಷ ಸಿ.ಎಸ್.ಕೃಷ್ಣಸ್ವಾಮಿ, ಉಪಾಧ್ಯಕ್ಷ ಗೋವಿಂದರಾಜಶ್ರೇಷ್ಠಿ, ಶ್ರೀನಿವಾಸನ್, ಕಾಗಿನೆಲೆ ಮಹಾಸಂಸ್ಥಾನದ ಕನಕಗುರುಪೀಠದ ಕೃಷ್ಣರಾಜನಗರ ಶಾಖಾಮಠದ ಶ್ರೀ ಶ್ರೀ ಶಿವಾನಂದಪುರಿ ಮಹಾಸ್ವಾಮಿಯವರು, ಮಾದಿಗ ದಂಡೋರ ಸಮಿತಿಯ ರಾಜ್ಯಾಧ್ಯಕ್ಷ ಶಂಕರಪ್ಪ ಮತ್ತು ಸಂಯೋಜಕ ಹರಿಹರಪರ ಶ್ರೀಧರ ಉಪಸ್ಥಿತರಿದ್ದರು. ಶ್ರೀ ಪಿ.ವಿ.ಭಟ್ ನಿರೂಪಿಸಿದರು.
ಶ್ರೀ ಕೆ.ಎಸ್.ಎಲ್. ಸ್ವಾಮಿಯವರು ತಮ್ಮ ಉದ್ಘಾಟನಾ ಭಾಷಣದಲ್ಲಿ, 'ಸಂಸ್ಕೃತ ಕೇವಲ ಒಂದು ವರ್ಗದ ಅಥವ ಒಂದು ಜನಾಂಗಕ್ಕೆ ಸೀಮಿತವಾದ ಭಾಷೆಯಲ್ಲ. ಭಾರತ ಜಾತ್ಯಾತೀತ ಎಂದು ಕರೆಸಿಕೊಳ್ಳಬೇಕಾದರೆ, ಭಾಷಾ ಏಕತೆ ಸಾಧಿಸಬೇಕಾದರೆ ಸಂಸ್ಕೃತ ಬಳಕೆ ಆಗಲೇಬೇಕು. ಸಂಸ್ಕೃತವನ್ನು ನಾವು ಬೆಳೆಸಬೇಕಿಲ್ಲ. ಅದು ಆಗಲೇ ಬೆಳೆದಿದೆ. ಅದನ್ನು ನಾವು ಬಳಸಬೇಕು ಅನ್ನಬೇಕು. ದೇಶದ ಜ್ಞಾನ ಭಂಡಾರ ಮತ್ತು ಸಕಲ ಶಾಸ್ತ್ರಗಳನ್ನು ನಮ್ಮದಾಗಿಸಿಕೊಳ್ಳಬೇಕಾದರೆ ಸಂಸ್ಕೃತವನ್ನು ಕಲಿಯಲೇಬೇಕು ಮತ್ತು ಬಳಸಲೇಬೇಕು' ಎಂದು ನುಡಿದರು. ಸಮ್ಮೇಳನದ ಗೌರವಾಧ್ಯಕ್ಷ ಶ್ರೀ ಸಿ.ಎಸ್.ಕೃಷ್ಣಸ್ವಾಮಿಯವರು ಭಾರತೀಯತೆ ಉಳಿಯಬೇಕೆಂದರೆ ಸಂಸ್ಕೃತವನ್ನು ಮತ್ತೆ ಉಚ್ಛ್ರಾಯ ಸ್ಥಿತಿಗೆ ಏರಿಸುವ ಅಗತ್ಯತೆಯಿದೆಯೆಂದರು.