ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಮಾರ್ಚ್ 19, 2014

ಆಯುರ್ಧಾರಾ-೭: ಆಯುರ್ವೇದ ತ್ರಿದೋಷ ಸಿದ್ಧಾಂತ-ಒಂದು ಪರಿಚಯ

 ಆಯುರ್ವೇದ ತ್ರಿದೋಷ ಸಿದ್ಧಾಂತ-ಒಂದು ಪರಿಚಯ

       ನಮ್ಮ ಶರೀರದ ರಚನೆ ಹಾಗೂ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವ ವಿಶಿಷ್ಟ ಸಿದ್ಧಾಂತಗಳನ್ನು ಆಯುರ್ವೇದದ ಶಾಸ್ತ್ರ ಗ್ರಂಥಗಳು ಪ್ರಸ್ತುತ ಪಡಿಸುತ್ತವೆ. ಅಂತಹ ಅನೇಕ ಮೂಲಭೂತ ಸಿದ್ಧಾಂತಗಳಲ್ಲಿ ಅತ್ಯಂತ ಪ್ರಮುಖವಾದದ್ದು ದೋಷ-ಧಾತು-ಮಲ ಸಿದ್ಧಾಂತ.
       'ದೋಷ ಧಾತು ಮಲಾ ಮೂಲಂ ಹಿ ಶರೀರಂ ||'(ಸುಶ್ರುತ ಸಂಹಿತಾ) ಎಂದು ಸುಶ್ರುತನು ತನ್ನ ಸಂಹಿತೆಯಲ್ಲಿ ಉಲ್ಲೇಖಿಸಿದ್ದಾನೆ. ಯಾವ ರೀತಿ ವೃಕ್ಷಗಳ ಸಂಭವ, ಸ್ಥಿತಿ ಹಾಗೂ ನಾಶಕ್ಕೆ ಅವುಗಳ ಮೂಲ ಅಥವಾ ಬೇರುಗಳು ಕಾರಣವೋ, ಅದೇ ರೀತಿ ನಮ್ಮಶರೀರದ ಸಂಭವ, ಸ್ಥಿತಿ ಹಾಗೂ ಲಯಗಳಿಗೆ ದೋಷ, ಧಾತು ಹಾಗು ಮಲಗಳು ಕಾರಣವಾಗಿವೆ. ಅಂದರೆ, ನಮ್ಮ ಶರೀರವು ದೋಷ-ಧಾತು-ಮಲಮಯವಾಗಿದೆ.
       ಈ ಸಂಚಿಕೆಯಲ್ಲಿ ತ್ರಿದೋಷ ಸಿದ್ಧಾಂತದ ಬಗ್ಗೆ ಪರಿಚಯ ಮಾಡಿಕೊಳ್ಳೋಣ.
       ನಮ್ಮ ಶರೀರದಲ್ಲಿ ವಾತ, ಪಿತ್ತ ಹಾಗು ಕಫ ಎಂಬ ಮೂರು ದೋಷಗಳು ಕಾರ್ಯಪ್ರವೃತ್ತವಾಗಿವೆ. ಅಂದರೆ ಶರೀರದ ಎಲ್ಲಾ ಕ್ರಿಯೆಗಳಿಗೂ ಈ ತ್ರಿದೋಷಗಳೇ ಕಾರಣವಾಗಿವೆ. ಈ ದೋಷಗಳು ಸಮಾವಸ್ಥೆಯಲ್ಲಿರುವಾಗ ಶರೀರವು ಸ್ವಸ್ಥವಾಗಿದ್ದು ಎಲ್ಲಾ ಕ್ರಿಯಾತ್ಮಕ ಚಟುವಟಿಕೆಗಳು ಸುವ್ಯವಸ್ಥಿತವಾಗಿ ನಡೆಯುತ್ತವೆ. ಇವು ವಿಕೃತಾವಸ್ಥೆಯಲ್ಲಿರುವಾಗ, ಶರೀರದ ಕ್ರಿಯೆಗಳೂ ವಿಕೃತಿ ಹೊಂದಿ, ವಿಕಾರ ಅಥವಾ ರೋಗವು ಉಂಟಾಗುತ್ತದೆ. ಆದ್ದರಿಂದ ಆಯುರ್ವೇದದಲ್ಲಿಯ ಶಾರೀರ ವಿಜ್ಞಾನ, ರೋಗ ಕಾರಣ, ನಿದಾನ, ದ್ರವ್ಯಗುಣ, ಆಹಾರ ವಿಜ್ಞಾನ, ಋತುಚರ್ಯೆ ಇತ್ಯಾದಿ ಪ್ರತಿಯೊಂದು ವಿಚಾರದಲ್ಲಿಯೂ ತ್ರಿದೋಷ ಜ್ಞಾನವು ಓತಪ್ರೋತವಾಗಿ ತುಂಬಿರುವುದು.
       ದೋಷಗಳು ಭೌತಿಕ ತತ್ವಗಳಾಗಿದ್ದು, ಪಂಚಮಹಾಭೂತಗಳಿಂದ ಇವುಗಳ ರಚನೆಯು ಉಂಟಾಗಿದೆ. ವಾತ ದೋಷವು ಆಕಾಶ ಹಾಗೂ ವಾಯು ಮಹಾಭೂತಗಳ ಪ್ರಾಬಲ್ಯದಿಂದಲೂ, ಪಿತ್ತ ದೋಷವು ಅಗ್ನಿ ಮಹಾಭೂತದ ಪ್ರಾಬಲ್ಯದಿಂದಲೂ, ಕಫ ದೋಷವು ಪೃಥ್ವಿ ಹಾಗೂ ಜಲ  ಮಹಾಭೂತಗಳ ಪ್ರಾಬಲ್ಯದಿಂದಲೂ ರಚಿಸಲ್ಪಟ್ಟಿವೆ.
              ವಿಸರ್ಗಾದಾನ ವಿಕ್ಷೇಪೈಃ ಸೋಮಸೂರ್ಯಾನಿಲಾ ಯಥಾ |
              ಧಾರಯಂತಿ ಜಗದ್ದೇಹಂ ಕಫ ಪಿತ್ತ ಅನಿಲಾಸ್ತಥಾ || (ಸುಶ್ರುತ)      
       ಚಂದ್ರನು ತನ್ನ ಸ್ವಭಾವ ಜನ್ಯವಾದ ಶೈತ್ಯ ಸಾಮರ್ಥ್ಯದಿಂದ, ಸೂರ್ಯನು ತನ್ನ ಸ್ವಭಾವ ಜನ್ಯವಾದ ಉಷ್ಣ ಸಾಮರ್ಥ್ಯದಿಂದ, ವಾಯುವು ತನ್ನ ಸ್ವಭಾವ ಜನ್ಯವಾದ ಗತಿ ಸಾಮರ್ಥ್ಯದಿಂದ, ಪ್ರಪಂಚದ ಬಲವನ್ನು ಕ್ರಮವಾಗಿ ಹೆಚ್ಚಿಸುವುದು, ಹ್ರಾಸ ಮಾಡುವುದು ಹಾಗೂ ಪ್ರಸರಿಸುವುದು ಈ ಕಾರ್ಯಗಳಿಂದ ಜಗತ್ತನ್ನು ಧಾರಣೆ ಮಾಡುವಂತೆ, ಕಫ, ಪಿತ್ತ ಹಾಗೂ ವಾತಗಳು ಶರೀರವೆಂಬ ಜಗತ್ತನ್ನು ಧಾರಣೆ ಮಾಡಿಕೊಂಡಿರುವವು.
       ಮೇಲಿನ ಶ್ಲೋಕದಲ್ಲಿ ಪ್ರಕೃತ್ಯಾರಂಭಕ ಶಕ್ತಿಗಳು ಬ್ರಹ್ಮಾಂಡ ಪಿಂಡಾಂಡಗಳೆರಡಲ್ಲಿಯೂ ಹೇಗೆ ಒಂದೇ ವಿಧವಾಗಿ ಕಾರ್ಯ ಮಾಡುವವೆಂಬುದನ್ನು ಹೇಳಿರುವರು.
       ಆಯುರ್ವೇದ ಶಾಸ್ತ್ರ ಗ್ರಂಥಗಳಲ್ಲಿ ತ್ರಿದೋಷಗಳು ಕೇವಲ ಶಕ್ತಿಗಳೇ ಎಂದಾಗಲೀ ಅಥವಾ ಕೇವಲ ದ್ರವ್ಯಗಳೇ ಎಂದಾಗಲೀ ಎಲ್ಲಿಯೂ ಹೇಳಿಲ್ಲ. ಎರಡೂ ಅರ್ಥ ಬರುವತೆ ಇವುಗಳ ಗುಣಕರ್ಮಗಳನ್ನು ವರ್ಣನೆ ಮಾಡಲಾಗಿದೆ. ಹಾಗಾದರೆ ಇವುಗಳ ಗುಣಗಳೇನು, ವಿಧಗಳೇನು, ಸ್ವರೂಪವೇನು, ಕಾರ್ಯಗಳೇನು ಇತ್ಯಾದಿ ವಿಚಾರವಾಗಿ ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ