ಫಲಸತ್ವ ಸಾಗಿಪ ಮಾರ್ಗ ತಾನಹುದು|
ಮಾಡಿದೆನೆನಬೇಡ ನಿನದೆನಬೇಡ
ಜಗವೃಕ್ಷರಸ ಹರಿವ ಕೊಂಬೆ ನೀ ಮೂಢ||
ಕೊಂಬೆಯಲ್ಲಿ ಗೊಂಚಲು ಗೊಂಚಲಾಗಿ ಬಿಟ್ಟ ಫಲಗಳನ್ನು ಕಂಡು ಕೊಂಬೆ ತನ್ನಿಂದ ಈ ಫಲಗಳು ಎಂದು ಹೆಮ್ಮೆ ಪಡಬಹುದೇ? ಮರದ ಬೇರು, ವಿವಿಧ ಅಂಗಾಂಗಗಳು ನೆಲ, ಜಲ, ಗಾಳಿ, ಬೆಳಕುಗಳಿಂದ ಪಡೆದ ಸತ್ವಗಳು ಕೊಂಬೆಯ ಮೂಲಕ ಸಾಗಿ ರೂಪಿತವಾದುದೇ ಫಲ. ಅದಕ್ಕೆ ಕೊಂಬೆಯೂ ಸಹಕಾರಿಯೇ ಹೊರತು ಅದೇ ಮೂಲವಲ್ಲ. ಅದೇ ರೀತಿ ನಾವು ಏನನ್ನು ಮಾಡಿದ್ದೇವೆ, ಸಾಧಿಸಿದ್ದೇವೆ ಎಂದು ಅಂದುಕೊಳ್ಳುತ್ತೀವೋ ಅದಕ್ಕೆ ನಾವೂ ಕಾರಣರು ಎಂದಷ್ಟೇ ಹೇಳಿಕೊಳ್ಳಬಹುದು. ನಾವೇ ಕಾರಣರು ಎಂದು ಹೇಳಲಾಗದು. ನಾವು ವಾಹಕಗಳಷ್ಟೆ. ಎಂತಹ ವಾಹಕರು ಎಂಬುದು ನಮ್ಮಿಂದ ಆಗುವ ಕಾರ್ಯಗಳು ತೋರಿಸುತ್ತವೆ. ಒಳ್ಳೆಯ ವಾಹಕಗಳಾಗಿದ್ದಲ್ಲಿ ಒಳ್ಳೆಯ ಫಲಗಳು, ಕೆಟ್ಟದಾಗಿದ್ದಲ್ಲಿ ಕೊಳೆತ, ಕೆಟ್ಟ ಫಲಗಳು ಗೋಚರಿಸುತ್ತವೆ.
ಕಲ್ಮಶಭರಿತ ನೀರನ್ನು ಶುದ್ಧವಾದ ಪಾತ್ರೆಗೆ ಹಾಕಿದಾಕ್ಷಣ ನೀರು ಶುದ್ಧವಾಗುವುದಿಲ್ಲ. ಅದೇ ರೀತಿ ಶುದ್ಧವಾದ ನೀರನ್ನು ಕಲ್ಮಶಭರಿತ ಪಾತ್ರೆಗೆ ಹಾಕಿದರೆ ನೀರೂ ಅಶುದ್ಧವಾಗುತ್ತದೆ. ಆದ್ದರಿಂದ ನಾವು ಶುದ್ಧ ವಾಹಕಗಳಾಗಬೇಕೆಂದರೆ ಎಚ್ಚರಿಕೆಯಿಂದಿರಬೇಕು. ನಮ್ಮ ಆಹಾರ -ಅಂದರೆ, ಕೇವಲ ತಿನ್ನುವುದು, ಕುಡಿಯುವುದು ಮಾತ್ರ ಅಲ್ಲ ನೋಡುವುದು, ಕೇಳುವುದು, ಗ್ರಹಿಸುವುದು, ಇತ್ಯಾದಿಗಳೂ ಸೇರಿ- ಶುದ್ಧವಾಗಿರಬೇಕು. ಒಂದು ಉದಾಹರಣೆ ನೋಡೋಣ: ಸ್ನೇಹಿತರೊಬ್ಬರ ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಅವರ ೩ ವರ್ಷದ ಚಿಕ್ಕ ಮಗು ಒಬ್ಬರು ಹಿರಿಯರನ್ನು ಕುರಿತು 'ನೀನು ಪೆದ್ದ, ದಂಡ' ಎಂದಿತು. ಚಿಕ್ಕ ಮಗುವಾದ್ದರಿಂದ ಆ ಮಗುವಿನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಹಿರಿಯರು ಯಾವುದೋ ಕಾರಣಕ್ಕೆ ಹೊರಗೆ ಹೋದಾಗ ಅಲ್ಲಿದ್ದ ಮಗುವಿನ ಸಂಬಂಧಿಯೊಬ್ಬರು "ಮಗು ಸರಿಯಾಗಿ ಹೇಳಿತು, ಬಿಡು, ಅವರು ಮಾಡುವುದೂ ಹಾಗೆಯೇ, ಇರುವುದೂ ಹಾಗೆಯೇ" ಎಂದರು. ಅಲ್ಲೇ ಕುಳಿತಿದ್ದ ಮಗು ಖುಷಿಯಿಂದ ಇದನ್ನು ಕೇಳಿಸಿಕೊಂಡಿತು. ಈ ಪ್ರಸಂಗ ನನ್ನನ್ನು ವಿಚಾರಕ್ಕೆ ದೂಡಿತು. ಹಿರಿಯರಿಗೂ ಆ ಸಂಬಂಧಿಗೂ ಅಷ್ಟಾಗಿ ಸರಿಯಿರಲಿಲ್ಲ. ಅದು ಮಗುವಿನ ಮೂಲಕ ಹೊರಬಿತ್ತು ಅಷ್ಟೆ. ಅವರು ಹಿರಿಯರ ಬೆನ್ನ ಹಿಂದೆ ಯಾವಾಗಲೋ ಆಡಿದ ಮಾತುಗಳನ್ನು ಮಗು ಪುನರುಚ್ಛರಿಸಿತ್ತಷ್ಟೆ ಹೊರತು ಅದು ಮಗುವಿನ ಸ್ವಂತ ಮಾತಾಗಿರಲಿಲ್ಲ. ಈಗ ಅವರು ಆಡಿದ ಮಾತಿನಿಂದ ಮಗುವಿಗೆ ತಾನು ಮಾಡಿದ್ದು ಸರಿ ಎಂದು ಶಹಭಾಸಗಿರಿ ಕೊಟ್ಟಂತಾತು. ಮಗು ಮುಂದೆ ಇಂತಹ ಮಾತುಗಳನ್ನು ಇನ್ನೂ ಹೆಚ್ಚು ಹೆಚ್ಚಾಗಿ ಆಡಲು ಪ್ರೇರೇಪಿಸಿದಂತೆ ಆಯಿತು. ಕಲುಷಿತ ಭಾವನೆಯನ್ನು ವಾಹಕರಾಗಿ ಅವರು ಆ ಮಗುವಿಗೂ ಹರಿಸಿದರಲ್ಲವೇ? ಇದು ಸರಿಯೇ? ಮಕ್ಕಳು ನಿಷ್ಕಲ್ಮಶವಾದ ಪಾತ್ರೆಯಿದ್ದಂತೆ. ಆ ಪಾತ್ರೆಗೆ ಕಲ್ಮಶಗಳನ್ನು ತುಂಬಬಾರದಿತ್ತಲ್ಲವೇ?
ಮನುಷ್ಯನ ಸ್ವಭಾವವೇ ವಿಚಿತ್ರ. ತನಗೆ ಬೇಕಾದವರ ಬಗ್ಗೆ ಯಾರಾದರೂ ಪ್ರಿಯವಾದ ವಿಷಯ ಹೇಳಿದರೆ ಅದಕ್ಕೆ ಮತ್ತಷ್ಟು ಒತ್ತುಕೊಟ್ಟು ಇನ್ನೊಬ್ಬರಿಗೆ ಹೇಳುತ್ತಾನೆ. ತನಗಾಗದವರ ಬಗ್ಗೆ ಒಳ್ಳೆಯ ಸಂಗತಿ ಕೇಳಿದರೆ ಅದನ್ನು ತಿರುಚಿ ತಮ್ಮ ಕೆಟ್ಟ ಅಭಿಪ್ರಾಯ ಸೇರಿಸಿ ಹೇಳುತ್ತಾನೆ. ಅವರ ಬಗ್ಗೆ ಕೆಟ್ಟ ವಿಷಯ ಕೇಳಿದರಂತೂ ಸಂಭ್ರಮಿಸಿ ಎಲ್ಲರಿಗೂ ಹರಡುತ್ತಾನೆ. (ಇಂದಿನ ಕೆಲವು ಟಿವಿ ಮಾಧ್ಯಮಗಳು ಇಂತಹ ಪ್ರವೃತ್ತಿಗೆ ಉತ್ತಮವಾದ ಉದಾಹರಣೆ.) ಆತ್ಮೀಯರು ಸೀನಿದರೆ ಸಾಕು, ಏನೋ ಆಗಿಹೋಯಿತೆಂದು ಕಳವಳ ಪಡುತ್ತಾರೆ. ಇಷ್ಟಪಡದವರು ಗಂಭೀರ ಕಾಯಿಲೆಯಿಂದ ನರಳುತ್ತಿದ್ದರೂ 'ಅವರಿಗೇನಾಗಿದೆ? ಇನ್ನೂ ಗಟ್ಟಿಗಡತವಾಗಿದ್ದಾರೆ. ಇನ್ನೂ ಎಷ್ಟು ಜನರನ್ನು ಹಾಳುಮಾಡಬೇಕೋ?' ಎಂದು ಉದ್ಗರಿಸುತ್ತಾರೆ. ಇಂತಹವರನ್ನು ಒಳ್ಳೆಯ ವಾಹಕರೆನ್ನಬಹುದೆ? ಸಂಬಂಧಗಳು ಹಾಳಾಗುವುದು ಇಂತಹ ನಡವಳಿಕೆಗಳಿಂದಲೇ.
ಇನ್ನು ಕೆಲವರಿರುತ್ತಾರೆ. ಕೆಟ್ಟ ವಿಷಯ ಕೇಳಿದರೆ ಕೇಳಿಸಿಕೊಂಡು ಸುಮ್ಮನಾಗುತ್ತಾರೆಯೇ ಹೊರತು ಅದನ್ನು ಹರಡಲು ಹೋಗುವುದಿಲ್ಲ. ಒಳ್ಳೆಯ ವಿಷಯಗಳಿಗೆ ಸ್ಪಂದಿಸುತ್ತಾರೆ. ಇವರು ಒಳ್ಳೆಯ ವಾಹಕರು. ಇಂತಹವರನ್ನು ಸಾಮಾನ್ಯವಾಗಿ ಜನ ಒಳ್ಳೆಯವರೆಂದು ಗುರುತಿಸುತ್ತಾರೆ. ಇವರ ಮಾತುಗಳಿಗೆ ಗೌರವ ಕೊಡುತ್ತಾರೆ. ಸಂಬಂಧಗಳು ಉಳಿಯುವುದು, ಬೆಳೆಯುವುದು ಇಂತಹವರಿಂದಲೇ ಎಂಬುದರಲ್ಲಿ ಅನುಮಾನವಿಲ್ಲ. ಕುಟುಂಬದ ಮುಖ್ಯಸ್ಥ ಮುಖ್ಯ ವಾಹಕನಾದರೆ ಕುಟುಂಬದ ಸದಸ್ಯರುಗಳು ಉಪವಾಹಕಗಳಿದ್ದಂತೆ. ವಾಹಕ, ಉಪವಾಹಕಗಳಲ್ಲಿ ಯಾವುದೇ ಒಂದು ಸರಿಲ್ಲದಿದ್ದರೂ ಒಂದು ಘಟಕವಾಗಿ ಕುಟುಂಬಕ್ಕೇ ಕೆಟ್ಟ ಹೆಸರು ಬರುತ್ತದೆ. ಈ ವಿಚಾರದಲ್ಲಿ ಎಚ್ಚರವಿರುವುದು ಒಳ್ಳೆಯದು. ಒಬ್ಬರಿದ್ದಂತೆ ಇನ್ನೊಬ್ಬರು ಇಲ್ಲದಿರುವುದರಿಂದ ಇದಕ್ಕೆ ಪರಿಹಾರ ಕಷ್ಟಸಾಧ್ಯ. ಗೀತೆಯ 'ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನಾ' ಎಂಬಂತೆ ಬಂದದ್ದನ್ನು ಸ್ವೀಕರಿಸಿ ನಡೆಯುವುದೊಂದೇ ಆಗ ಉಳಿಯುವ ಮಾರ್ಗ. ಆದರೆ ಒಬ್ಬರ ಕಾರಣದಿಂದ ಕುಟುಂಬದ ಎಲ್ಲರಿಗೂ ಕೆಟ್ಟ ಹೆಸರು ಬರುವಂತಾಗುವುದು ಒಳ್ಳೆಯ ಲಕ್ಷಣವಂತೂ ಅಲ್ಲ. ನಾವು ಆಡುವ ಮಾತುಗಳು ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತವೆ. ಆಡುವ ಮಾತುಗಳು ಹೇಗಿರಬೇಕೆಂದು ಋಗ್ವೇದದ ಈ ಮಂತ್ರ ಮಾರ್ಗದರ್ಶನ ನೀಡುತ್ತಿದೆ:
ಸಕ್ತುಮಿವ ತಿತಉನಾ ಪುನಂತೋ ಯತ್ರ ಧೀರಾ ಮನಸಾ ವಾಚಮಕ್ರತ |
ಅತ್ರಾ ಸಖಾಯಃ ಸಖ್ಯಾನಿ ಜಾನತೇ ಭದ್ರೈಷಾಂ ಲಕ್ಷ್ಮೀರ್ನಿಹಿತಾಧಿ ವಾಚಿ || (ಋಕ್. ೧೦.೭೧.೨.)
ಜರಡಿಯಿಂದ ಹಿಟ್ಟನ್ನು ಶೋಧಿಸುವಂತೆ ಬುದ್ಧಿವಂತರು ಆಡುವ ಮಾತನ್ನು ಮನಸ್ಸಿನಲ್ಲಿ ಶೋಧಿಸಿ ನಂತರ ಮಾತನಾಡುತ್ತಾರೆ. ಈ ರೀತಿ ಆಲೋಚಿಸಿ ಮಾತನಾಡುವವರಿಂದ ಜನರಲ್ಲಿ ಸ್ನೇಹಭಾವನೆ ಬೆಳೆಯುತ್ತದೆ. ಮನುಷ್ಯನ ನಿಜವಾದ ಸಂಪತ್ತು ಮಾತಿನಲ್ಲಿಯೇ ಅಡಗಿದೆ ಎಂಬ ಈ ಮಂತ್ರದ ಅರ್ಥವನ್ನು ತಿಳಿದು ಆಚರಿಸಿದಲ್ಲಿ ಒಳಿತೇ ಆಗುತ್ತದೆ.
ನಾವೆಷ್ಟು ಒಳ್ಳೆಯವರು ಎಂಬುದರ ಅಳತೆಗೋಲು ನಮ್ಮಲ್ಲೇ ಇದೆ. ಕುಟುಂಬದ ಸದಸ್ಯರುಗಳ, ಬಂಧುಗಳ, ಸ್ನೇಹಿತರ ಪಟ್ಟಿ ಮಾಡಿರಿ. ಆ ಹೆಸರುಗಳ ಮುಂದೆ ಎರಡು ಕಲಮುಗಳು ಇರಲಿ. ಒಂದು ಕಲಮಿನಲ್ಲಿ ನಿಮ್ಮ ದೃಷ್ಟಿಯಲ್ಲಿ ಅವರು ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ದಾಖಲಿಸಿ. ಇನ್ನೊಂದು ಕಲಮಿನಲ್ಲಿ ಅವರ ದೃಷ್ಟಿಯಲ್ಲಿ ನೀವು ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ದಾಖಲಿಸಿ. ಒಂದು ಆಶ್ಚರ್ಯದ ಸಂಗತಿ ನಿಮಗೇ ಗೋಚರಿಸುವುದು. ಸಾಮಾನ್ಯವಾಗಿ ಎರಡು ಕಲಮುಗಳ ವಿವರ ಒಂದೇ ಆಗಿರುತ್ತದೆ. ನೀವು ಒಳ್ಳೆಯವರೆಂದು ಹೇಳುವವರು ನಿಮ್ಮನ್ನೂ ಒಳ್ಳೆಯವರೆಂದು ಭಾವಿಸುವರು. ನೀವು ಕೆಟ್ಟವರೆನ್ನುವವರು ನಿಮ್ಮನ್ನು ಒಳ್ಳೆಯವರೆಂದು ಹೇಳಲಾರರು. ಕೊನೆಯಲ್ಲಿ ಎಷ್ಟು ಒಳ್ಳೆಯವರು ಮತ್ತು ಕೆಟ್ಟವರು ಎಂಬುದನ್ನು ಲೆಕ್ಕ ಹಾಕಿರಿ. ಒಳ್ಳೆಯವರು ಎಂಬ ಸಂಖ್ಯೆ ಜಾಸ್ತಿ ಬಂದರೆ ನೀವು ಒಳ್ಳೆಯವರೇ. ಕೆಟ್ಟವರು ಎಂಬ ವಿವರ ಹೆಚ್ಚಾಗಿದ್ದರೆ ತಿದ್ದಿಕೊಳ್ಳುವ, ಬದಲಾಗುವ ಅಗತ್ಯವಿದೆ ಎಂದೇ ಅರ್ಥ. ಈ ಜಗತ್ತು ಕನ್ನಡಿಯಿದ್ದಂತೆ. ಒಳ್ಳೆಯವರಿಗೆ ಒಳ್ಳೆಯದಾಗಿ, ಕೆಟ್ಟವರಿಗೆ ಕೆಟ್ಟದಾಗಿ ಕಾಣುತ್ತದೆ. ಕನ್ನಡಿಯ ಪ್ರತಿಬಿಂಬವೂ ಅಷ್ಟೆ. ನಾವು ಎಷ್ಟು ದೂರದಲ್ಲಿರುತ್ತೇವೋ ಪ್ರತಿಬಿಂಬವೂ ಅಷ್ಟೇ ದೂರದಲ್ಲಿರುತ್ತದೆ. ಇದರ ಅರ್ಥವನ್ನು ಬಿಡಿಸಿ ಹೇಳುವ ಅಗತ್ಯವಿಲ್ಲವಲ್ಲವೇ?
ಈ ಬದುಕು ಮೂರುದಿನದ್ದು ಎಂಬುದು ಎಲ್ಲರಿಗೂ ಗೊತ್ತಿದ್ದರೂ ನಾವು ಚಿರಂಜೀವಿಗಳು ಎಂಬಂತೆ ವರ್ತಿಸುತ್ತೇವೆ. ಇತರರ ಬಗ್ಗೆ "ಅವನು ಏಕೆ ಹಾಗಾಡುತ್ತಾನೆ? ಹೋಗುವಾಗ ಎಲ್ಲಾ ಹೊತ್ತುಕೊಂಡು ಹೋಗುತ್ತಾನಾ?" ಎಂದು ಹೇಳುವ ನಾವು ಅದೇ ತತ್ವವನ್ನು ನಮಗೆ ಹೇಳಿಕೊಳ್ಳುತ್ತೇವೆಯೇ? ಒಂದು ವೇಳೆ ನಾವು ಸದ್ಯದಲ್ಲೇ ಸಾಯುತ್ತೇವೆ ಎಂಬುದು ನಮ್ಮ ಅರಿವಿಗೆ ಬಂದಾಗ ಮತ್ತು ಏನಾದರೂ ಹೇಳಲು ಐದು ನಿಮಿಷ ಮಾತ್ರ ಅವಕಾಶ ಸಿಕ್ಕಾಗ ನಾವು ಏನು ಹೇಳಬಹುದು, ಊಹಿಸಿಕೊಳ್ಳಿ. ಆ ಮಾತನ್ನು ಈಗಲೇ ಏಕೆ ಹೇಳಬಾರದು? ಜೀವನ ಪೂರ್ತಿ ಉತ್ತಮ ರೀತಿಯಲ್ಲಿ ಬಾಳಲು ಸಿದ್ಧತೆ ಮಾಡಿಕೊಳ್ಳುವುದರಲ್ಲಿಯೇ ಕಳೆಯುವ ನಾವು ಉತ್ತಮವಾಗಿ ಬಾಳುವುದಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ.
ಸಂಬಂಧಗಳಲ್ಲಿ ಬರುವ ದೊಡ್ಡ ಸವಾಲೆಂದರೆ ಏನನ್ನಾದರೂ ಪಡೆಯುವ ಸಲುವಾಗಿಯೇ ಸಂಬಂಧಗಳನ್ನು ಹೆಚ್ಚಿನವರು ಬೆಳೆಸುವುದೇ ಆಗಿದೆ. ಅವರು ಇತರರು ತಮಗೆ ಒಳಿತು ಮಾಡಲಿ ಎಂದು ಬಯಸಿ ಸಂಬಂಧ ಬೆಳೆಸುತ್ತಾರೆ. ಸಂಬಂಧಗಳು ಏನನ್ನಾದರೂ ಕೊಡುವ ಸಲುವಾಗಿ, ಪಡೆಯುವ ಸಲುವಾಗಿ ಅಲ್ಲ ಎಂದುಕೊಂಡರೆ ಸಂಬಂಧಗಳು ಉಳಿಯುತ್ತವೆ, ಬೆಳೆಯುತ್ತವೆ. ಬರ್ನಾರ್ಡ್ ಶಾ ಹೇಳಿದಂತೆ "ಸಾಯುವ ಮುನ್ನ ನಮ್ಮಲ್ಲಿರುವ ಒಳ್ಳೆಯದನ್ನೆಲ್ಲಾ ಕೊಟ್ಟುಬಿಡೋಣ." ಸಂತೋಷ ಹಂಚಿಕೊಳ್ಳೋಣ; ಅದು ದ್ವಿಗುಣಗೊಳ್ಳುತ್ತದೆ. ದುಃಖವನ್ನೂ ಹಂಚಿಕೊಳ್ಳೋಣ; ಅದು ಅರ್ಧ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ, ಒಡಲಗುಡಿಯ ರಜ-ತಮಗಳ ಗುಡಿಸಿ ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ ಮನದ ಕತ್ತಲ ಕಳೆದು ತಿಳಿವಿನ ಬೆಳಕ ಪಸರಿಸೋಣ; ಒಳ್ಳೆಯವರಾಗೋಣ.
-ಕ.ವೆಂ.ನಾಗರಾಜ್.
**************
[03-10-2013ರ 'ಜನಮಿತ್ರ'ದಲ್ಲಿ ಪ್ರಕಟವಾಗಿದೆ.]
**************
[03-10-2013ರ 'ಜನಮಿತ್ರ'ದಲ್ಲಿ ಪ್ರಕಟವಾಗಿದೆ.]
Sammilana Suresh
ಪ್ರತ್ಯುತ್ತರಅಳಿಸಿSathya....
Sathish Ankush
ಅಳಿಸಿsuper
ವಂದನೆಗಳು ಶಿವಕುಮಾರ್ ನೇಗಿಮನಿಯವರೇ.
ಪ್ರತ್ಯುತ್ತರಅಳಿಸಿ