ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಮಾರ್ಚ್ 26, 2014

ಹುಟ್ಟಿದರು ಎನಲವರು ಸತ್ತಿರಲೇ ಇಲ್ಲ!

ಹುಟ್ಟದೇ ಇರುವವರು ಸಾಯುವುದೆ ಇಲ್ಲ
ಹುಟ್ಟಿದರು ಎನಲವರು ಸತ್ತಿರಲೆ ಇಲ್ಲ |
ಸತ್ತರು ಎನಲವರು ಹುಟ್ಟಿರಲೆ ಇಲ್ಲ
ಹುಟ್ಟುಸಾವುಗಳೆರಡು ಮಾಯೆ ಮೂಢ ||

     "ಶ್ರೀ. . . . . . . . . . . . ರವರು ಅತ್ಯಂತ ಜನಾನುರಾಗಿಯಾಗಿದ್ದು, ನಮಗೆಲ್ಲಾ ತುಂಬಾ ಬೇಕಾದವರಾಗಿದ್ದರು. ಅವರನ್ನು ಕಳೆದುಕೊಂಡು ನಾವು ಅನಾಥರಾಗಿದ್ದೇವೆ. ಅವರ ಅಗಲಿಕೆಯ ದುಃಖವನ್ನು ಸಹಿಸುವುದು ನಮಗೇ ಇಷ್ಟು ಕಷ್ಟವಾಗಿರುವಾಗ ಅವರ ಕುಟುಂಬದವರಿಗೆ ಇನ್ನು ಹೇಗಾಗಿರಬೇಕು? ಅವರ ಕುಟುಂಬದವರೆಲ್ಲರಿಗೂ ದುಃಖವನ್ನು ಸಹಿಸುವ ಶಕ್ತಿಯನ್ನು ಆ ದಯಾಮಯನಾದ ಭಗವಂತ ಕೊಡಲಿ ಎಂದು ಪ್ರಾರ್ಥಿಸೋಣ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ನಾವೆಲ್ಲರೂ ಎದ್ದುನಿಂತು ಎರಡು ನಿಮಿಷ ಮೌನ ಶ್ರದ್ಧಾಂಜಲಿ ಸಲ್ಲಿಸೋಣ" - ಗಣ್ಯರೊಬ್ಬರ ನಿಧನದ ಸಂದರ್ಭದಲ್ಲಿ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ವೇದಿಕೆಯಲ್ಲಿದ್ದವರೊಬ್ಬರು ಈ ರೀತಿಯಲ್ಲಿ ಕರೆ ಕೊಡುತ್ತಿದ್ದರು. ಮೃತ ಗಣ್ಯರ ಅಂತ್ಯಸಂಸ್ಕಾರ ಅದಾಗಲೇ ಆಗಿಹೋಗಿತ್ತು. ಅಗ್ನಿಯಲ್ಲಿ ಅರ್ಪಿತವಾದ ಶರೀರ ಪಂಚಭೂತಗಳಲ್ಲಿ ಲೀನವಾಗಿತ್ತು. ಹಾಗಾದರೆ ಆ ಶರೀರದೊಂದಿಗೆ ಗುರುತಿಸಿಕೊಂಡಿದ್ದ ಆತ್ಮ ಇನ್ನೂ ಇತ್ತೇ? ಶರೀರ ಹೋದರೂ ಆತ್ಮ ಇರುತ್ತದೆಯೇ? ಸದ್ಗತಿ ಸಿಗುವುದು ಅಂದರೆ ಏನು? . . ಇತ್ಯಾದಿ ಪ್ರಶ್ನೆಗಳು ಕಾಡತೊಡಗಿದವು. ಶರೀರಕ್ಕೆ ಹೊರತಾದ ಆತ್ಮ ಒಂದು ಇದೆ ಅನ್ನುವುದನ್ನು ಒಪ್ಪಿ, ಅದಕ್ಕೆ ಸದ್ಗತಿ ಬಯಸಿ ಮಾಡುವ ಕ್ರಿಯೆಯೇ ಉತ್ತರಕ್ರಿಯಾದಿ ಸಂಸ್ಕಾರಗಳು. ಶರೀರವನ್ನು ಹೂಳುವುದಿರಬಹುದು, ಸುಡುವುದಿರಬಹುದು, ಪಾರ್ಸಿಗಳು ಮಾಡುವಂತೆ ರಣಹದ್ದುಗಳಿಗೆ ದೇಹವನ್ನು ಆಹಾರವಾಗಿ ಉಣಿಸುವುದಿರಬಹುದು, ಏನಾದರೂ ಇರಬಹುದು. ಇಂತಹ ಕ್ರಿಯೆಗಳಿಂದ ಮೃತಶರೀರ ಪಂಚಭೂತಗಳಲ್ಲಿ ವಿಲೀನವಾಗಲು ಸಹಕಾರಿಯಾಗುತ್ತದೆ.
     'ಜೀವಾತ್ಮ ಅನ್ನುವ ವಸ್ತು ಇರುವುದಿಲ್ಲ. ಅದು ಶರೀರದೊಂದಿಗೆ ಸಹಜವಾಗಿ ಉಂಟಾಗುವ ಚೈತನ್ಯವಿಶೇಷ. ಶರೀರ ನಷ್ಟವಾದೊಡನೆ ಅದೂ ನಾಶವಾಗುತ್ತದೆ' ಎಂಬ ವಾದವೂ ಇದೆ. ವಿಚಾರ ಮಾಡೋಣ. ಈ ಶರೀರ ಅನ್ನುವುದು ಜಡವಸ್ತುಗಳಿಂದ ಕೂಡಿದ ಒಂದು ಸುಂದರ ನಿರ್ಮಾಣ. ಪರಮಾತ್ಮ ನಿರ್ಮಿಸಿದ ನವರಸದ ಅರಮನೆ. ಅದಕ್ಕೆ ಚೈತನ್ಯ ಬಂದಿರುವುದು ಅದರೊಳಗಿರುವ ಪ್ರಾಣ/ಚೈತನ್ಯ/ಜೀವಾತ್ಮ/ಯಾವುದೋ ಶಕ್ತಿಯಿಂದ ಎಂದು ಒಪ್ಪಬಹುದಲ್ಲವೇ? ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಯಾವುದೇ ಮೂಲವಸ್ತುವಿಗೆ ನಾಶವಿರುವುದಿಲ್ಲ. ಅದು ರೂಪಾಂತರ ಹೊಂದಿದರೂ ಒಂದಲ್ಲಾ ಒಂದು ರೂಪದಲ್ಲಿ ಅಸ್ತಿತ್ವದಲ್ಲಿರುತ್ತದೆ. ಮೃತ ಶರೀರವನ್ನು ಸುಟ್ಟಾಗ ಅಥವ ಯಾವುದೇ ರೀತಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದಾಗ ಅದು ಬೂದಿಯಾಗಿಯೋ, ಆವಿಯಾಗಿಯೋ, ಮಣ್ಣಾಗಿಯೋ, ನೀರಾಗಿಯೋ ರೂಪಾಂತರ ಹೊಂದುತ್ತದೆ. ಆ ಶರೀರದೊಳಗಿದ್ದ ಜೀವ ಚೈತನ್ಯ ಏನಾಗುತ್ತದೆ? ನಾಶವಾಗುತ್ತದೆ ಎಂದರೆ ಅದು ಇನ್ನೂ ಯಾವುದೋ ರೀತಿಯಲ್ಲಿ ಇರಲೇಬೇಕಲ್ಲವೇ? ಮೊದಲು ಅದು ಯಾವ ರೂಪದಲ್ಲಿತ್ತು? ಅಂತ್ಯ ಸಂಸ್ಕಾರದ ನಂತರ ಯಾವ ರೂಪ ಹೊಂದುತ್ತದೆ ಎಂಬುದು ಯಾರಿಗೆ ಗೊತ್ತಿದೆ? ಶರೀರದೊಂದಿಗೆ ಸಹಜವಾಗಿ ಉಂಟಾಗುವ ಜೀವ ಚೈತನ್ಯವೆಂದರೆ ಅದನ್ನು ಸ್ಟೃಸಿದವರು ಯಾರು? ಜಡವಸ್ತು ತನ್ನಿಂದ ತಾನೇ ಏನಾದರೂ ಸ್ಟೃಸಲು ಸಾಧ್ಯವಿದೆಯೇ? ಇಲ್ಲ ಅನ್ನುತ್ತದೆ ವಿಜ್ಞಾನ. ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲಾರದು. ಒಂದು ವೇಳೆ ಜಡವಸ್ತು ಏನಾದರೂ ಸೃಷ್ಟಿಸಲು ಸಾಧ್ಯ ಎಂದು ವಾದಕ್ಕೋಸ್ಕರವಾಗಿ ಒಪ್ಪಿಕೊಂಡರೂ ಅದರಿಂದ ಮತ್ತೊಂದು ಜಡವಸ್ತು ನಿರ್ಮಾಣ ಸಾಧ್ಯವೇ ಹೊರತು ಚೈತನ್ಯದಿಂದ ಕೂಡಿದ ವಸ್ತು ನಿರ್ಮಾಣ ಆಗಲಾರದು. ಇರುವ ವಸ್ತುಗಳಿಂದ ಇಲ್ಲದ ವಸ್ತುವಿನ ಸೃಷ್ಟಿ ಹೇಗೆ ಸಾಧ್ಯ? ಆದ್ದರಿಂದ ಶರೀರ ಜೀವ ಚೈತನ್ಯವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಶರೀರದೊಳಗೆ ಜೀವ ಚೈತನ್ಯ ಸೇರಿದೆಯೇ ಹೊರತು, ಶರೀರದಿಂದ ಚೈತನ್ಯ ಉಂಟಾಗಿಲ್ಲ ಅನ್ನುವುದು ಹೆಚ್ಚು ತಾರ್ಕಿಕ. ಹೀಗೆಯೇ ಮುಂದುವರೆಸೋಣ. ಆ ಚೈತನ್ಯ ಮೊದಲು ಶರೀರದೊಳಗಿದ್ದಾಗ ವ್ಯಕ್ತಿ ಜೀವಂತನಾಗಿದ್ದ, ಇಲ್ಲದಾದಾಗ ಮೃತನಾದ ಅನ್ನಬಹುದು. ಹೊರಗಿನಿಂದ ವ್ಯಕ್ತಿಯ ಶರೀರದೊಳಗೆ ಬಂದು ಸೇರಿದ್ದ ಆ ಚೈತನ್ಯ ವ್ಯಕ್ತಿಯ ಮರಣಾನಂತರ ಶರೀರದ ಹೊರಗೆ ಇರುತ್ತದೆ. ಬದುಕಿದ್ದಾಗ ಒಂದು ರೂಪದಲ್ಲಿ, ಸತ್ತಾಗ ಇನ್ನೊಂದು ರೂಪದಲ್ಲಿ ಇರುತ್ತದೆ ಎಂದಾದರೆ ಯಾವ ರೂಪದಲ್ಲಿ ಇದ್ದೀತು ಅನ್ನುವುದು ಯಾರಿಗೆ ತಿಳಿದಿದೆ? ಇಂತಹ ವಿಶಿಷ್ಟ ಚೈತನ್ಯವನ್ನೇ ಜ್ಞಾನಿಗಳು ಜೀವಾತ್ಮ ಎನ್ನುತ್ತಾರೆ. ಜೀವಾತ್ಮಕ್ಕೆ ಹುಟ್ಟೂ ಇಲ್ಲ, ಸಾವೂ ಇಲ್ಲ ಅನ್ನುವುದು ಈ ಅರ್ಥದಲ್ಲೇ ಇರಬೇಕು. 
     'ಪುನರಪಿ ಜನನಂ ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ' - ಶ್ರೀ ಶಂಕರಾಚಾರ್ಯರ ಈ ಉಕ್ತಿ ಪುನರ್ಜನ್ಮವನ್ನು ಸಮರ್ಥಿಸುವುದರೊಂದಿಗೆ ಜೀವಚೈತನ್ಯದ ಅಮರತ್ವವನ್ನೂ ಸಾರುತ್ತಿದೆ. ಭಾರತೀಯ ವೈಚಾರಿಕರು ಪುನರ್ಜನ್ಮವನ್ನು ನಂಬುತ್ತಾರೆ. ಭಾರತೀಯ ಧರ್ಮಶಾಸ್ತ್ರಗಳೂ ಪುನರ್ಜನ್ಮ ಸಿದ್ಧಾಂತವನ್ನು ಎತ್ತಿ ಹಿಡಿದಿವೆ. ಪುನರ್ಜನ್ಮವಿದ್ದಲ್ಲಿ ಹಳೆಯ ಶರೀರ ನಷ್ಟವಾದ ಮೇಲೆ, ಅದು ಪಂಚಭೂತಗಳಲ್ಲಿ ಸೇರಿಹೋದಮೇಲೆ ಹಿಂದಿನ ಶರೀರದಲ್ಲಿದ್ದ ಜೀವಚೈತನ್ಯ ಬೇರೆ ಶರೀರದ ಮೂಲಕವೇ ಪ್ರಕಟಗೊಳ್ಳಬೇಕು/ಪುನರ್ಜನ್ಮ ಹೊಂದಬೇಕು.
     ಸಕಲ ಜೀವಿಗಳನ್ನು ಸೃಷ್ಟಿಸಿದವನು ಭಗವಂತ ಎಂದೂ ಸಹ ವಾದವಿದೆ. ಯಾವುದರಿಂದ ಸೃಷ್ಟಿಸಿದ? ಶೂನ್ಯದಿಂದಂತೂ ಆಗಿರಲಾರದು. ಶೂನ್ಯದಿಂದ ಸೃಷ್ಟಿ ಅನ್ನುವುದನ್ನು ವಿಜ್ಞಾನ ಸಹ ಒಪ್ಪುವುದಿಲ್ಲ. ಎಲ್ಲಾ ಜೀವಿಗಳೂ ಪರಮಾತ್ಮನ ಅಂಶಗಳೇ ಅಂದರೆ, ಇಷ್ಟೊಂದು ಜೀವಜಂತುಗಳು ಇರುವಾಗ ಅವೆಲ್ಲವನ್ನೂ ಪರಮಾತ್ಮ ತನ್ನ ಅಂಶದಿಂದಲೇ ಸೃಷ್ಟಿಸಿದ ಅಂದರೆ, ಸೃಷ್ಟಿಯ ನಂತರ ಅವನು  ಪರಿಪೂರ್ಣ ಎಂದೆನಿಸಿಕೊಳ್ಳಲಾರನು. ಭಗವಂತ ಸೃಷ್ಟಿಸಿದ ಅಂದರೆ ಏಕೆ  ಸೃಷ್ಟಿಸಿದ ಎಂಬ ಪ್ರಶ್ನೆ ಬರುತ್ತದೆ. ಅವನಿಗೆ ಬೇಕಾಗಿತ್ತು, ಅದಕ್ಕಾಗಿ  ಸೃಷ್ಟಿಸಿದ ಅಂದರೆ 'ಬೇಕು' ಅನ್ನುವ ಭಾವನೆ ಬಂದ ತಕ್ಷಣ ಪರಮಾತ್ಮನಿಗೆ ಏನೂ ಬೇಕಿಲ್ಲದಾಗ, ಯಾವುದರ ಅಗತ್ಯವೂ ಇಲ್ಲದಿರುವಾಗ, ಇಂತಹ ಸೃಷ್ಟಿಗೆ ಅರ್ಥವೇ ಉಳಿಯುವುದಿಲ್ಲ, ಅಲ್ಲದೆ ಪರಮಾತ್ಮ ಪರಿಪೂರ್ಣ ಎಂಬ ಗುಣವಿಶೇಷತೆಗೆ ಧಕ್ಕೆ ಬರುತ್ತದೆ. ಸೂಕ್ತವಾದ ವಾದವೆಂದರೆ ಎಷ್ಟು ಜೀವಜಂತುಗಳಿವೆಯೋ ಅಷ್ಟು ಜೀವಾತ್ಮಗಳಿವೆ ಅನ್ನುವುದು, ಆ ಜೀವಾತ್ಮಗಳೂ ಪರಮಾತ್ಮನಂತೆ ಹುಟ್ಟು-ಸಾವುಗಳಿಲ್ಲದವು, ಪರಮಾತ್ಮನ ಪ್ರಜೆಗಳು ಅನ್ನುವುದು! ಶರೀರದೊಡನೆ ಇದ್ದಾಗ ಆತ್ಮಗಳು ಮಾಡುವ ಕರ್ಮವನ್ನನುಸರಿಸಿ ಹೊಸ ಜನ್ಮ ಪಡೆಯುವುವು. ಆ ಜನ್ಮ ಮಾನವಜನ್ಮವೇ ಆಗಬೇಕೆಂದಿಲ್ಲ, ಇಂತಹ ಲಿಂಗವೇ ಆಗಬೇಕೆಂದಿಲ್ಲ. ಅಥರ್ವವೇದ ಹೇಳುತ್ತದೆ: 
ತ್ವಂ ಸ್ತ್ರೀ ತ್ವಂ ಪುಮಾನಸಿ ತ್ವಂ ಕುಮಾರ ಉತ ವಾ ಕುಮಾರೀ |
ತ್ವಂ ಜೀರ್ಣೋ ದಂಡೇನ ವಂಚಸಿ ತ್ವಂ ಜಾತೋ ಭವಸಿ ವಿಶ್ವತೋಮುಖಃ ||  ಅಥರ್ವ: ೧೦.೮.೨೭)
     ಇದರ ಅರ್ಥ ಜೀವಾತ್ಮನೇ, ನೀನು ಸ್ತ್ರೀ, ನೀನು ಪುರುಷ, ನೀನು ಕುಮಾರ ಮತ್ತು ನೀನು ಕುಮಾರಿ. ವೃದ್ಧನಾಗಿ, ನಂತರ ಮತ್ತೆ ಜನಿಸಿ ಎಲ್ಲೆಡೆಯೂ ಮುಖ ಮಾಡುವೆ. ಭಗವಂತನಂತೆ ಜೀವಾತ್ಮನೂ ಲಿಂಗರಹಿತನಾಗಿದ್ದು ಧರಿಸಿದ ಶರೀರವನ್ನು ಅವಲಂಬಿಸಿ ಹೆಣ್ಣು, ಗಂಡು ಅನ್ನಿಸಿಕೊಳ್ಳುವುದು.
     ಮೃತ ಶರೀರವನ್ನು 'ವ್ಯಕ್ತಿಯ ಹೆಣ', 'ವ್ಯಕ್ತಿಯ ದೇಹ(ಬಾಡಿ)' ಅನ್ನುತ್ತೇವೆಯೇ ಹೊರತು 'ವ್ಯಕ್ತಿ' ಅನ್ನುವುದಿಲ್ಲ. ಅಂದರೆ ಕೇವಲ ಶರೀರ ವ್ಯಕ್ತಿಯೆನಿಸುವುದಿಲ್ಲ. ಶರೀರದೊಳಗೆ ಜೀವಾತ್ಮನಿದ್ದಾಗ ಅದು ನಾಗರಾಜ, ಶ್ರೀಧರ, ಅಬ್ದುಲ್, ಡಿಸೋಜಾ, ಊರ್ಮಿಳಾ, ಇತ್ಯಾದಿಗಳಿಂದ ಗುರುತಿಸಲ್ಪಡುತ್ತದೆ. ಎಂತಹ ಚೋದ್ಯ! ಶರೀರಕ್ಕೆ ಸಾವಿದೆ, ಚೈತನ್ಯಕ್ಕಿಲ್ಲ. ಮಾಯೆಯೆಂದರೆ, ಶರೀರದೊಳಗಿನ ಚೈತನ್ಯವೂ ತನ್ನನ್ನು ಶರೀರದೊಂದಿಗೇ ಗುರುತಿಸಿಕೊಳ್ಳುತ್ತದೆ, ತಾನೇ ವ್ಯಕ್ತಿಯೆಂದು ಭಾವಿಸುತ್ತದೆ, ಚಿಂತನ-ಮಂಥನ ಮಾಡುತ್ತದೆ, ಸಕಲ ಸುಖವೂ ತನಗೇ ಬೇಕೆನ್ನುತ್ತದೆ, ಶರೀರ ಸಾಯುವವರೆಗೂ ಆ ಶರೀರ ನಾಶವಾಗುವುದನ್ನು ಬಯಸುವುದೇ ಇಲ್ಲ! ಆ ಶರೀರ ಮನುಷ್ಯನದಾಗಿರಬಹುದು ಅಥವ ಮನುಷ್ಯ ತಿಂದು ತೇಗುವ ಕೋಳಿ, ಹಂದಿಯದಾಗಿರಬಹುದು, ಬೇರೆ ಯಾವುದೇ ಜೀವಜಂತುವಾಗಿರಬಹುದು! ಇದೆಂತಹ ಸೃಷ್ಟಿ ರಹಸ್ಯ!
ಪ್ರಾಣವಿದ್ದರೆ ತ್ರಾಣ ಪ್ರಾಣದಿಂದಲೆ ನೀನು
ಪ್ರಾಣವಿರದಿರೆ ದೇಹಕರ್ಥವಿಹುದೇನು?|
ನಿನಗರ್ಥ ನೀಡಿರುವ ಜೀವಾತ್ಮನೇ ನೀನು 
ನೀನಲ್ಲ ತನುವೆಂಬುದರಿಯೋ ಮೂಢ|| 

ಹಿಂದೆ ಇರಲಿಲ್ಲ ಮುಂದೆ ಇರದೀ ದೇಹ
ಈಗಿರುವ ದೇಹಕರ್ಥ ಬಂದುದು ಹೇಗೆ|
ಶುದ್ಧ ಬುದ್ಧಿಯಲಿ ನೋಡೆ ತಿಳಿದೀತು ನಿನಗೆ
ಅಂತರಾತ್ಮನ ಕರೆಯು ಕೇಳಿಪುದು ಮೂಢ|| 

ಕಾಣದದು ನಯನ ಕಿವಿಗೆ ಕೇಳಿಸದು
ಮುಟ್ಟಲಾಗದು ಕರ ತಿಳಿಯದು ಮನ |
ಬಣ್ಣಿಸಲು ಸಿಗದು ಪ್ರಮಾಣಕೆಟುಕದು
ಅವ್ಯಕ್ತ ಆತ್ಮದರಿವು ಸುಲಭವೇ ಮೂಢ? || 

ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ || 

-ಕ.ವೆಂ.ನಾಗರಾಜ್.
**************
[17-10-2013ರ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಿತ]



ಶುಕ್ರವಾರ, ಮಾರ್ಚ್ 21, 2014

ನಾವೆಷ್ಟು ಒಳ್ಳೆಯವರು?

ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು|
ಮಾಡಿದೆನೆನಬೇಡ ನಿನದೆನಬೇಡ
ಜಗವೃಕ್ಷರಸ ಹರಿವ ಕೊಂಬೆ ನೀ ಮೂಢ||
     ಕೊಂಬೆಯಲ್ಲಿ ಗೊಂಚಲು ಗೊಂಚಲಾಗಿ ಬಿಟ್ಟ ಫಲಗಳನ್ನು ಕಂಡು ಕೊಂಬೆ ತನ್ನಿಂದ ಈ ಫಲಗಳು ಎಂದು ಹೆಮ್ಮೆ ಪಡಬಹುದೇ? ಮರದ ಬೇರು, ವಿವಿಧ ಅಂಗಾಂಗಗಳು ನೆಲ, ಜಲ, ಗಾಳಿ, ಬೆಳಕುಗಳಿಂದ ಪಡೆದ  ಸತ್ವಗಳು ಕೊಂಬೆಯ ಮೂಲಕ ಸಾಗಿ ರೂಪಿತವಾದುದೇ ಫಲ. ಅದಕ್ಕೆ ಕೊಂಬೆಯೂ ಸಹಕಾರಿಯೇ ಹೊರತು ಅದೇ ಮೂಲವಲ್ಲ. ಅದೇ ರೀತಿ ನಾವು ಏನನ್ನು ಮಾಡಿದ್ದೇವೆ, ಸಾಧಿಸಿದ್ದೇವೆ ಎಂದು ಅಂದುಕೊಳ್ಳುತ್ತೀವೋ ಅದಕ್ಕೆ ನಾವೂ ಕಾರಣರು ಎಂದಷ್ಟೇ ಹೇಳಿಕೊಳ್ಳಬಹುದು. ನಾವೇ ಕಾರಣರು ಎಂದು ಹೇಳಲಾಗದು. ನಾವು ವಾಹಕಗಳಷ್ಟೆ. ಎಂತಹ ವಾಹಕರು ಎಂಬುದು ನಮ್ಮಿಂದ ಆಗುವ ಕಾರ್ಯಗಳು ತೋರಿಸುತ್ತವೆ. ಒಳ್ಳೆಯ ವಾಹಕಗಳಾಗಿದ್ದಲ್ಲಿ ಒಳ್ಳೆಯ ಫಲಗಳು, ಕೆಟ್ಟದಾಗಿದ್ದಲ್ಲಿ ಕೊಳೆತ, ಕೆಟ್ಟ ಫಲಗಳು ಗೋಚರಿಸುತ್ತವೆ. 
     ಕಲ್ಮಶಭರಿತ ನೀರನ್ನು ಶುದ್ಧವಾದ ಪಾತ್ರೆಗೆ ಹಾಕಿದಾಕ್ಷಣ ನೀರು ಶುದ್ಧವಾಗುವುದಿಲ್ಲ. ಅದೇ ರೀತಿ ಶುದ್ಧವಾದ ನೀರನ್ನು ಕಲ್ಮಶಭರಿತ ಪಾತ್ರೆಗೆ ಹಾಕಿದರೆ ನೀರೂ ಅಶುದ್ಧವಾಗುತ್ತದೆ. ಆದ್ದರಿಂದ ನಾವು ಶುದ್ಧ ವಾಹಕಗಳಾಗಬೇಕೆಂದರೆ ಎಚ್ಚರಿಕೆಯಿಂದಿರಬೇಕು. ನಮ್ಮ ಆಹಾರ -ಅಂದರೆ, ಕೇವಲ ತಿನ್ನುವುದು, ಕುಡಿಯುವುದು ಮಾತ್ರ ಅಲ್ಲ ನೋಡುವುದು, ಕೇಳುವುದು, ಗ್ರಹಿಸುವುದು, ಇತ್ಯಾದಿಗಳೂ ಸೇರಿ- ಶುದ್ಧವಾಗಿರಬೇಕು. ಒಂದು ಉದಾಹರಣೆ ನೋಡೋಣ: ಸ್ನೇಹಿತರೊಬ್ಬರ ಮನೆಯಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಅವರ ೩ ವರ್ಷದ  ಚಿಕ್ಕ ಮಗು ಒಬ್ಬರು ಹಿರಿಯರನ್ನು ಕುರಿತು 'ನೀನು ಪೆದ್ದ, ದಂಡ' ಎಂದಿತು. ಚಿಕ್ಕ ಮಗುವಾದ್ದರಿಂದ ಆ ಮಗುವಿನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಹಿರಿಯರು ಯಾವುದೋ ಕಾರಣಕ್ಕೆ ಹೊರಗೆ ಹೋದಾಗ ಅಲ್ಲಿದ್ದ ಮಗುವಿನ ಸಂಬಂಧಿಯೊಬ್ಬರು  "ಮಗು  ಸರಿಯಾಗಿ ಹೇಳಿತು, ಬಿಡು, ಅವರು ಮಾಡುವುದೂ ಹಾಗೆಯೇ, ಇರುವುದೂ ಹಾಗೆಯೇ"  ಎಂದರು.  ಅಲ್ಲೇ ಕುಳಿತಿದ್ದ ಮಗು ಖುಷಿಯಿಂದ ಇದನ್ನು ಕೇಳಿಸಿಕೊಂಡಿತು. ಈ ಪ್ರಸಂಗ ನನ್ನನ್ನು ವಿಚಾರಕ್ಕೆ ದೂಡಿತು. ಹಿರಿಯರಿಗೂ ಆ  ಸಂಬಂಧಿಗೂ ಅಷ್ಟಾಗಿ ಸರಿಯಿರಲಿಲ್ಲ. ಅದು ಮಗುವಿನ ಮೂಲಕ ಹೊರಬಿತ್ತು ಅಷ್ಟೆ. ಅವರು ಹಿರಿಯರ ಬೆನ್ನ ಹಿಂದೆ ಯಾವಾಗಲೋ ಆಡಿದ ಮಾತುಗಳನ್ನು ಮಗು ಪುನರುಚ್ಛರಿಸಿತ್ತಷ್ಟೆ ಹೊರತು ಅದು ಮಗುವಿನ ಸ್ವಂತ ಮಾತಾಗಿರಲಿಲ್ಲ. ಈಗ ಅವರು ಆಡಿದ ಮಾತಿನಿಂದ ಮಗುವಿಗೆ ತಾನು ಮಾಡಿದ್ದು ಸರಿ ಎಂದು ಶಹಭಾಸಗಿರಿ ಕೊಟ್ಟಂತಾತು. ಮಗು ಮುಂದೆ ಇಂತಹ ಮಾತುಗಳನ್ನು ಇನ್ನೂ ಹೆಚ್ಚು ಹೆಚ್ಚಾಗಿ ಆಡಲು ಪ್ರೇರೇಪಿಸಿದಂತೆ ಆಯಿತು. ಕಲುಷಿತ ಭಾವನೆಯನ್ನು ವಾಹಕರಾಗಿ ಅವರು ಆ ಮಗುವಿಗೂ ಹರಿಸಿದರಲ್ಲವೇ? ಇದು ಸರಿಯೇ?  ಮಕ್ಕಳು ನಿಷ್ಕಲ್ಮಶವಾದ ಪಾತ್ರೆಯಿದ್ದಂತೆ. ಆ ಪಾತ್ರೆಗೆ ಕಲ್ಮಶಗಳನ್ನು ತುಂಬಬಾರದಿತ್ತಲ್ಲವೇ?
     ಮನುಷ್ಯನ ಸ್ವಭಾವವೇ ವಿಚಿತ್ರ. ತನಗೆ ಬೇಕಾದವರ ಬಗ್ಗೆ ಯಾರಾದರೂ ಪ್ರಿಯವಾದ ವಿಷಯ ಹೇಳಿದರೆ ಅದಕ್ಕೆ ಮತ್ತಷ್ಟು ಒತ್ತುಕೊಟ್ಟು ಇನ್ನೊಬ್ಬರಿಗೆ ಹೇಳುತ್ತಾನೆ. ತನಗಾಗದವರ ಬಗ್ಗೆ ಒಳ್ಳೆಯ ಸಂಗತಿ ಕೇಳಿದರೆ ಅದನ್ನು ತಿರುಚಿ ತಮ್ಮ ಕೆಟ್ಟ ಅಭಿಪ್ರಾಯ ಸೇರಿಸಿ ಹೇಳುತ್ತಾನೆ. ಅವರ ಬಗ್ಗೆ ಕೆಟ್ಟ ವಿಷಯ ಕೇಳಿದರಂತೂ ಸಂಭ್ರಮಿಸಿ ಎಲ್ಲರಿಗೂ ಹರಡುತ್ತಾನೆ. (ಇಂದಿನ ಕೆಲವು ಟಿವಿ ಮಾಧ್ಯಮಗಳು ಇಂತಹ ಪ್ರವೃತ್ತಿಗೆ ಉತ್ತಮವಾದ ಉದಾಹರಣೆ.) ಆತ್ಮೀಯರು ಸೀನಿದರೆ ಸಾಕು, ಏನೋ ಆಗಿಹೋಯಿತೆಂದು ಕಳವಳ ಪಡುತ್ತಾರೆ. ಇಷ್ಟಪಡದವರು ಗಂಭೀರ ಕಾಯಿಲೆಯಿಂದ ನರಳುತ್ತಿದ್ದರೂ 'ಅವರಿಗೇನಾಗಿದೆ? ಇನ್ನೂ ಗಟ್ಟಿಗಡತವಾಗಿದ್ದಾರೆ. ಇನ್ನೂ ಎಷ್ಟು ಜನರನ್ನು ಹಾಳುಮಾಡಬೇಕೋ?' ಎಂದು ಉದ್ಗರಿಸುತ್ತಾರೆ. ಇಂತಹವರನ್ನು ಒಳ್ಳೆಯ ವಾಹಕರೆನ್ನಬಹುದೆ? ಸಂಬಂಧಗಳು ಹಾಳಾಗುವುದು ಇಂತಹ ನಡವಳಿಕೆಗಳಿಂದಲೇ.
     ಇನ್ನು ಕೆಲವರಿರುತ್ತಾರೆ. ಕೆಟ್ಟ ವಿಷಯ ಕೇಳಿದರೆ ಕೇಳಿಸಿಕೊಂಡು ಸುಮ್ಮನಾಗುತ್ತಾರೆಯೇ ಹೊರತು ಅದನ್ನು ಹರಡಲು ಹೋಗುವುದಿಲ್ಲ. ಒಳ್ಳೆಯ ವಿಷಯಗಳಿಗೆ ಸ್ಪಂದಿಸುತ್ತಾರೆ. ಇವರು ಒಳ್ಳೆಯ ವಾಹಕರು. ಇಂತಹವರನ್ನು ಸಾಮಾನ್ಯವಾಗಿ ಜನ ಒಳ್ಳೆಯವರೆಂದು ಗುರುತಿಸುತ್ತಾರೆ. ಇವರ ಮಾತುಗಳಿಗೆ ಗೌರವ ಕೊಡುತ್ತಾರೆ. ಸಂಬಂಧಗಳು ಉಳಿಯುವುದು, ಬೆಳೆಯುವುದು ಇಂತಹವರಿಂದಲೇ ಎಂಬುದರಲ್ಲಿ ಅನುಮಾನವಿಲ್ಲ. ಕುಟುಂಬದ ಮುಖ್ಯಸ್ಥ ಮುಖ್ಯ ವಾಹಕನಾದರೆ ಕುಟುಂಬದ ಸದಸ್ಯರುಗಳು ಉಪವಾಹಕಗಳಿದ್ದಂತೆ. ವಾಹಕ, ಉಪವಾಹಕಗಳಲ್ಲಿ ಯಾವುದೇ ಒಂದು ಸರಿಲ್ಲದಿದ್ದರೂ ಒಂದು ಘಟಕವಾಗಿ ಕುಟುಂಬಕ್ಕೇ ಕೆಟ್ಟ ಹೆಸರು ಬರುತ್ತದೆ. ಈ ವಿಚಾರದಲ್ಲಿ ಎಚ್ಚರವಿರುವುದು ಒಳ್ಳೆಯದು. ಒಬ್ಬರಿದ್ದಂತೆ ಇನ್ನೊಬ್ಬರು ಇಲ್ಲದಿರುವುದರಿಂದ ಇದಕ್ಕೆ ಪರಿಹಾರ ಕಷ್ಟಸಾಧ್ಯ. ಗೀತೆಯ 'ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನಾ' ಎಂಬಂತೆ ಬಂದದ್ದನ್ನು ಸ್ವೀಕರಿಸಿ ನಡೆಯುವುದೊಂದೇ ಆಗ ಉಳಿಯುವ ಮಾರ್ಗ. ಆದರೆ ಒಬ್ಬರ ಕಾರಣದಿಂದ ಕುಟುಂಬದ ಎಲ್ಲರಿಗೂ ಕೆಟ್ಟ ಹೆಸರು ಬರುವಂತಾಗುವುದು ಒಳ್ಳೆಯ ಲಕ್ಷಣವಂತೂ ಅಲ್ಲ. ನಾವು ಆಡುವ ಮಾತುಗಳು ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತವೆ. ಆಡುವ ಮಾತುಗಳು ಹೇಗಿರಬೇಕೆಂದು ಋಗ್ವೇದದ ಈ ಮಂತ್ರ ಮಾರ್ಗದರ್ಶನ ನೀಡುತ್ತಿದೆ: 
ಸಕ್ತುಮಿವ ತಿತಉನಾ ಪುನಂತೋ ಯತ್ರ ಧೀರಾ ಮನಸಾ ವಾಚಮಕ್ರತ |
ಅತ್ರಾ ಸಖಾಯಃ ಸಖ್ಯಾನಿ ಜಾನತೇ ಭದ್ರೈಷಾಂ ಲಕ್ಷ್ಮೀರ್ನಿಹಿತಾಧಿ ವಾಚಿ || (ಋಕ್. ೧೦.೭೧.೨.)
     ಜರಡಿಯಿಂದ ಹಿಟ್ಟನ್ನು ಶೋಧಿಸುವಂತೆ ಬುದ್ಧಿವಂತರು ಆಡುವ ಮಾತನ್ನು ಮನಸ್ಸಿನಲ್ಲಿ ಶೋಧಿಸಿ ನಂತರ ಮಾತನಾಡುತ್ತಾರೆ. ಈ ರೀತಿ ಆಲೋಚಿಸಿ ಮಾತನಾಡುವವರಿಂದ ಜನರಲ್ಲಿ ಸ್ನೇಹಭಾವನೆ ಬೆಳೆಯುತ್ತದೆ. ಮನುಷ್ಯನ ನಿಜವಾದ ಸಂಪತ್ತು ಮಾತಿನಲ್ಲಿಯೇ ಅಡಗಿದೆ ಎಂಬ ಈ ಮಂತ್ರದ ಅರ್ಥವನ್ನು ತಿಳಿದು ಆಚರಿಸಿದಲ್ಲಿ ಒಳಿತೇ ಆಗುತ್ತದೆ. 
     ನಾವೆಷ್ಟು ಒಳ್ಳೆಯವರು ಎಂಬುದರ ಅಳತೆಗೋಲು ನಮ್ಮಲ್ಲೇ ಇದೆ. ಕುಟುಂಬದ ಸದಸ್ಯರುಗಳ, ಬಂಧುಗಳ, ಸ್ನೇಹಿತರ ಪಟ್ಟಿ ಮಾಡಿರಿ. ಆ ಹೆಸರುಗಳ ಮುಂದೆ ಎರಡು ಕಲಮುಗಳು ಇರಲಿ. ಒಂದು ಕಲಮಿನಲ್ಲಿ ನಿಮ್ಮ ದೃಷ್ಟಿಯಲ್ಲಿ  ಅವರು ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ದಾಖಲಿಸಿ. ಇನ್ನೊಂದು ಕಲಮಿನಲ್ಲಿ ಅವರ ದೃಷ್ಟಿಯಲ್ಲಿ ನೀವು  ಒಳ್ಳೆಯವರೋ, ಕೆಟ್ಟವರೋ ಎಂಬುದನ್ನು ದಾಖಲಿಸಿ. ಒಂದು ಆಶ್ಚರ್ಯದ ಸಂಗತಿ ನಿಮಗೇ ಗೋಚರಿಸುವುದು. ಸಾಮಾನ್ಯವಾಗಿ ಎರಡು ಕಲಮುಗಳ ವಿವರ ಒಂದೇ ಆಗಿರುತ್ತದೆ. ನೀವು ಒಳ್ಳೆಯವರೆಂದು ಹೇಳುವವರು ನಿಮ್ಮನ್ನೂ ಒಳ್ಳೆಯವರೆಂದು ಭಾವಿಸುವರು. ನೀವು ಕೆಟ್ಟವರೆನ್ನುವವರು ನಿಮ್ಮನ್ನು ಒಳ್ಳೆಯವರೆಂದು ಹೇಳಲಾರರು. ಕೊನೆಯಲ್ಲಿ ಎಷ್ಟು ಒಳ್ಳೆಯವರು ಮತ್ತು ಕೆಟ್ಟವರು ಎಂಬುದನ್ನು ಲೆಕ್ಕ ಹಾಕಿರಿ. ಒಳ್ಳೆಯವರು ಎಂಬ ಸಂಖ್ಯೆ ಜಾಸ್ತಿ ಬಂದರೆ ನೀವು ಒಳ್ಳೆಯವರೇ. ಕೆಟ್ಟವರು ಎಂಬ ವಿವರ ಹೆಚ್ಚಾಗಿದ್ದರೆ ತಿದ್ದಿಕೊಳ್ಳುವ, ಬದಲಾಗುವ ಅಗತ್ಯವಿದೆ ಎಂದೇ ಅರ್ಥ. ಈ ಜಗತ್ತು ಕನ್ನಡಿಯಿದ್ದಂತೆ. ಒಳ್ಳೆಯವರಿಗೆ ಒಳ್ಳೆಯದಾಗಿ, ಕೆಟ್ಟವರಿಗೆ ಕೆಟ್ಟದಾಗಿ ಕಾಣುತ್ತದೆ. ಕನ್ನಡಿಯ ಪ್ರತಿಬಿಂಬವೂ ಅಷ್ಟೆ. ನಾವು ಎಷ್ಟು ದೂರದಲ್ಲಿರುತ್ತೇವೋ ಪ್ರತಿಬಿಂಬವೂ ಅಷ್ಟೇ ದೂರದಲ್ಲಿರುತ್ತದೆ. ಇದರ ಅರ್ಥವನ್ನು ಬಿಡಿಸಿ ಹೇಳುವ ಅಗತ್ಯವಿಲ್ಲವಲ್ಲವೇ?
     ಈ ಬದುಕು ಮೂರುದಿನದ್ದು ಎಂಬುದು ಎಲ್ಲರಿಗೂ ಗೊತ್ತಿದ್ದರೂ ನಾವು ಚಿರಂಜೀವಿಗಳು ಎಂಬಂತೆ ವರ್ತಿಸುತ್ತೇವೆ. ಇತರರ ಬಗ್ಗೆ "ಅವನು ಏಕೆ ಹಾಗಾಡುತ್ತಾನೆ? ಹೋಗುವಾಗ ಎಲ್ಲಾ ಹೊತ್ತುಕೊಂಡು ಹೋಗುತ್ತಾನಾ?" ಎಂದು ಹೇಳುವ ನಾವು ಅದೇ ತತ್ವವನ್ನು ನಮಗೆ ಹೇಳಿಕೊಳ್ಳುತ್ತೇವೆಯೇ? ಒಂದು ವೇಳೆ ನಾವು ಸದ್ಯದಲ್ಲೇ ಸಾಯುತ್ತೇವೆ ಎಂಬುದು ನಮ್ಮ ಅರಿವಿಗೆ ಬಂದಾಗ ಮತ್ತು ಏನಾದರೂ ಹೇಳಲು ಐದು ನಿಮಿಷ ಮಾತ್ರ ಅವಕಾಶ ಸಿಕ್ಕಾಗ ನಾವು ಏನು ಹೇಳಬಹುದು, ಊಹಿಸಿಕೊಳ್ಳಿ. ಆ ಮಾತನ್ನು ಈಗಲೇ ಏಕೆ ಹೇಳಬಾರದು? ಜೀವನ ಪೂರ್ತಿ ಉತ್ತಮ ರೀತಿಯಲ್ಲಿ ಬಾಳಲು ಸಿದ್ಧತೆ ಮಾಡಿಕೊಳ್ಳುವುದರಲ್ಲಿಯೇ ಕಳೆಯುವ ನಾವು ಉತ್ತಮವಾಗಿ ಬಾಳುವುದಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ.
     ಸಂಬಂಧಗಳಲ್ಲಿ ಬರುವ ದೊಡ್ಡ ಸವಾಲೆಂದರೆ  ಏನನ್ನಾದರೂ ಪಡೆಯುವ ಸಲುವಾಗಿಯೇ ಸಂಬಂಧಗಳನ್ನು  ಹೆಚ್ಚಿನವರು ಬೆಳೆಸುವುದೇ ಆಗಿದೆ. ಅವರು ಇತರರು ತಮಗೆ ಒಳಿತು ಮಾಡಲಿ ಎಂದು ಬಯಸಿ ಸಂಬಂಧ ಬೆಳೆಸುತ್ತಾರೆ. ಸಂಬಂಧಗಳು ಏನನ್ನಾದರೂ ಕೊಡುವ ಸಲುವಾಗಿ, ಪಡೆಯುವ ಸಲುವಾಗಿ ಅಲ್ಲ ಎಂದುಕೊಂಡರೆ ಸಂಬಂಧಗಳು ಉಳಿಯುತ್ತವೆ, ಬೆಳೆಯುತ್ತವೆ.  ಬರ್ನಾರ್ಡ್ ಶಾ ಹೇಳಿದಂತೆ "ಸಾಯುವ ಮುನ್ನ ನಮ್ಮಲ್ಲಿರುವ ಒಳ್ಳೆಯದನ್ನೆಲ್ಲಾ ಕೊಟ್ಟುಬಿಡೋಣ." ಸಂತೋಷ ಹಂಚಿಕೊಳ್ಳೋಣ; ಅದು ದ್ವಿಗುಣಗೊಳ್ಳುತ್ತದೆ. ದುಃಖವನ್ನೂ ಹಂಚಿಕೊಳ್ಳೋಣ; ಅದು ಅರ್ಧ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ, ಒಡಲಗುಡಿಯ ರಜ-ತಮಗಳ ಗುಡಿಸಿ ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ ಮನದ ಕತ್ತಲ ಕಳೆದು ತಿಳಿವಿನ ಬೆಳಕ ಪಸರಿಸೋಣ; ಒಳ್ಳೆಯವರಾಗೋಣ. 
 -ಕ.ವೆಂ.ನಾಗರಾಜ್.
**************
[03-10-2013ರ 'ಜನಮಿತ್ರ'ದಲ್ಲಿ ಪ್ರಕಟವಾಗಿದೆ.]



ಬುಧವಾರ, ಮಾರ್ಚ್ 19, 2014

ಆಯುರ್ಧಾರಾ-೭: ಆಯುರ್ವೇದ ತ್ರಿದೋಷ ಸಿದ್ಧಾಂತ-ಒಂದು ಪರಿಚಯ

 ಆಯುರ್ವೇದ ತ್ರಿದೋಷ ಸಿದ್ಧಾಂತ-ಒಂದು ಪರಿಚಯ

       ನಮ್ಮ ಶರೀರದ ರಚನೆ ಹಾಗೂ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವ ವಿಶಿಷ್ಟ ಸಿದ್ಧಾಂತಗಳನ್ನು ಆಯುರ್ವೇದದ ಶಾಸ್ತ್ರ ಗ್ರಂಥಗಳು ಪ್ರಸ್ತುತ ಪಡಿಸುತ್ತವೆ. ಅಂತಹ ಅನೇಕ ಮೂಲಭೂತ ಸಿದ್ಧಾಂತಗಳಲ್ಲಿ ಅತ್ಯಂತ ಪ್ರಮುಖವಾದದ್ದು ದೋಷ-ಧಾತು-ಮಲ ಸಿದ್ಧಾಂತ.
       'ದೋಷ ಧಾತು ಮಲಾ ಮೂಲಂ ಹಿ ಶರೀರಂ ||'(ಸುಶ್ರುತ ಸಂಹಿತಾ) ಎಂದು ಸುಶ್ರುತನು ತನ್ನ ಸಂಹಿತೆಯಲ್ಲಿ ಉಲ್ಲೇಖಿಸಿದ್ದಾನೆ. ಯಾವ ರೀತಿ ವೃಕ್ಷಗಳ ಸಂಭವ, ಸ್ಥಿತಿ ಹಾಗೂ ನಾಶಕ್ಕೆ ಅವುಗಳ ಮೂಲ ಅಥವಾ ಬೇರುಗಳು ಕಾರಣವೋ, ಅದೇ ರೀತಿ ನಮ್ಮಶರೀರದ ಸಂಭವ, ಸ್ಥಿತಿ ಹಾಗೂ ಲಯಗಳಿಗೆ ದೋಷ, ಧಾತು ಹಾಗು ಮಲಗಳು ಕಾರಣವಾಗಿವೆ. ಅಂದರೆ, ನಮ್ಮ ಶರೀರವು ದೋಷ-ಧಾತು-ಮಲಮಯವಾಗಿದೆ.
       ಈ ಸಂಚಿಕೆಯಲ್ಲಿ ತ್ರಿದೋಷ ಸಿದ್ಧಾಂತದ ಬಗ್ಗೆ ಪರಿಚಯ ಮಾಡಿಕೊಳ್ಳೋಣ.
       ನಮ್ಮ ಶರೀರದಲ್ಲಿ ವಾತ, ಪಿತ್ತ ಹಾಗು ಕಫ ಎಂಬ ಮೂರು ದೋಷಗಳು ಕಾರ್ಯಪ್ರವೃತ್ತವಾಗಿವೆ. ಅಂದರೆ ಶರೀರದ ಎಲ್ಲಾ ಕ್ರಿಯೆಗಳಿಗೂ ಈ ತ್ರಿದೋಷಗಳೇ ಕಾರಣವಾಗಿವೆ. ಈ ದೋಷಗಳು ಸಮಾವಸ್ಥೆಯಲ್ಲಿರುವಾಗ ಶರೀರವು ಸ್ವಸ್ಥವಾಗಿದ್ದು ಎಲ್ಲಾ ಕ್ರಿಯಾತ್ಮಕ ಚಟುವಟಿಕೆಗಳು ಸುವ್ಯವಸ್ಥಿತವಾಗಿ ನಡೆಯುತ್ತವೆ. ಇವು ವಿಕೃತಾವಸ್ಥೆಯಲ್ಲಿರುವಾಗ, ಶರೀರದ ಕ್ರಿಯೆಗಳೂ ವಿಕೃತಿ ಹೊಂದಿ, ವಿಕಾರ ಅಥವಾ ರೋಗವು ಉಂಟಾಗುತ್ತದೆ. ಆದ್ದರಿಂದ ಆಯುರ್ವೇದದಲ್ಲಿಯ ಶಾರೀರ ವಿಜ್ಞಾನ, ರೋಗ ಕಾರಣ, ನಿದಾನ, ದ್ರವ್ಯಗುಣ, ಆಹಾರ ವಿಜ್ಞಾನ, ಋತುಚರ್ಯೆ ಇತ್ಯಾದಿ ಪ್ರತಿಯೊಂದು ವಿಚಾರದಲ್ಲಿಯೂ ತ್ರಿದೋಷ ಜ್ಞಾನವು ಓತಪ್ರೋತವಾಗಿ ತುಂಬಿರುವುದು.
       ದೋಷಗಳು ಭೌತಿಕ ತತ್ವಗಳಾಗಿದ್ದು, ಪಂಚಮಹಾಭೂತಗಳಿಂದ ಇವುಗಳ ರಚನೆಯು ಉಂಟಾಗಿದೆ. ವಾತ ದೋಷವು ಆಕಾಶ ಹಾಗೂ ವಾಯು ಮಹಾಭೂತಗಳ ಪ್ರಾಬಲ್ಯದಿಂದಲೂ, ಪಿತ್ತ ದೋಷವು ಅಗ್ನಿ ಮಹಾಭೂತದ ಪ್ರಾಬಲ್ಯದಿಂದಲೂ, ಕಫ ದೋಷವು ಪೃಥ್ವಿ ಹಾಗೂ ಜಲ  ಮಹಾಭೂತಗಳ ಪ್ರಾಬಲ್ಯದಿಂದಲೂ ರಚಿಸಲ್ಪಟ್ಟಿವೆ.
              ವಿಸರ್ಗಾದಾನ ವಿಕ್ಷೇಪೈಃ ಸೋಮಸೂರ್ಯಾನಿಲಾ ಯಥಾ |
              ಧಾರಯಂತಿ ಜಗದ್ದೇಹಂ ಕಫ ಪಿತ್ತ ಅನಿಲಾಸ್ತಥಾ || (ಸುಶ್ರುತ)      
       ಚಂದ್ರನು ತನ್ನ ಸ್ವಭಾವ ಜನ್ಯವಾದ ಶೈತ್ಯ ಸಾಮರ್ಥ್ಯದಿಂದ, ಸೂರ್ಯನು ತನ್ನ ಸ್ವಭಾವ ಜನ್ಯವಾದ ಉಷ್ಣ ಸಾಮರ್ಥ್ಯದಿಂದ, ವಾಯುವು ತನ್ನ ಸ್ವಭಾವ ಜನ್ಯವಾದ ಗತಿ ಸಾಮರ್ಥ್ಯದಿಂದ, ಪ್ರಪಂಚದ ಬಲವನ್ನು ಕ್ರಮವಾಗಿ ಹೆಚ್ಚಿಸುವುದು, ಹ್ರಾಸ ಮಾಡುವುದು ಹಾಗೂ ಪ್ರಸರಿಸುವುದು ಈ ಕಾರ್ಯಗಳಿಂದ ಜಗತ್ತನ್ನು ಧಾರಣೆ ಮಾಡುವಂತೆ, ಕಫ, ಪಿತ್ತ ಹಾಗೂ ವಾತಗಳು ಶರೀರವೆಂಬ ಜಗತ್ತನ್ನು ಧಾರಣೆ ಮಾಡಿಕೊಂಡಿರುವವು.
       ಮೇಲಿನ ಶ್ಲೋಕದಲ್ಲಿ ಪ್ರಕೃತ್ಯಾರಂಭಕ ಶಕ್ತಿಗಳು ಬ್ರಹ್ಮಾಂಡ ಪಿಂಡಾಂಡಗಳೆರಡಲ್ಲಿಯೂ ಹೇಗೆ ಒಂದೇ ವಿಧವಾಗಿ ಕಾರ್ಯ ಮಾಡುವವೆಂಬುದನ್ನು ಹೇಳಿರುವರು.
       ಆಯುರ್ವೇದ ಶಾಸ್ತ್ರ ಗ್ರಂಥಗಳಲ್ಲಿ ತ್ರಿದೋಷಗಳು ಕೇವಲ ಶಕ್ತಿಗಳೇ ಎಂದಾಗಲೀ ಅಥವಾ ಕೇವಲ ದ್ರವ್ಯಗಳೇ ಎಂದಾಗಲೀ ಎಲ್ಲಿಯೂ ಹೇಳಿಲ್ಲ. ಎರಡೂ ಅರ್ಥ ಬರುವತೆ ಇವುಗಳ ಗುಣಕರ್ಮಗಳನ್ನು ವರ್ಣನೆ ಮಾಡಲಾಗಿದೆ. ಹಾಗಾದರೆ ಇವುಗಳ ಗುಣಗಳೇನು, ವಿಧಗಳೇನು, ಸ್ವರೂಪವೇನು, ಕಾರ್ಯಗಳೇನು ಇತ್ಯಾದಿ ವಿಚಾರವಾಗಿ ಮುಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.

ಮಂಗಳವಾರ, ಮಾರ್ಚ್ 18, 2014

ಮರೆತುಬಿಡಿ, ಚೆನ್ನಾಗಿರಿ

     ಹಿರಿಯರೊಬ್ಬರು ನಿಧನರಾಗುವ ಮುನ್ನ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: 'ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ'. ಸಂಬಂಧಪಟ್ಟವರು, ಪಡದಿದ್ದವರು ಎಲ್ಲರಿಗೂ ಈ ಮಾತು ಹೇಳುತ್ತಿದ್ದುದು, ಕೈಹಿಡಿದುಕೊಂಡು ಈ ಮಾತು ಪುನರುಚ್ಛರಿಸುತ್ತಿದ್ದುದು, ಕೆಲವರಿಂದ ಈ ಕುರಿತು ಭಾಷೆ ಪಡೆಯುತ್ತಿದ್ದುದನ್ನು ಕಂಡ ಕೆಲವರಿಗೆ ಅದು ಅರಳು ಮರಳಿನ ಮಾತಿನಂತೆ ಕಂಡಿದ್ದಿರಬಹುದು. ಆದರೆ ಅಂತರ್ಮುಖಿಯಾಗಿ ಯೋಚಿಸಿದಾಗ ಉತ್ತಮ ಬದುಕಿನ ಸಂದೇಶ ಇದರಲ್ಲಡಗಿರುವುದು ಗೋಚರಿಸದೆ ಇರದು. 'ಲೋಕೋ ಭಿನ್ನರುಚಿಃ' ಎಂಬಂತೆ ಭಿನ್ನ ಅಭಿರುಚಿಗಳ ಜನರ ನಡುವೆ ಸಮನ್ವಯ ಸಾಧಿಸಬೇಕೆಂದರೆ ಈ ಸಂದೇಶದ ಪಾಲನೆಯಿಂದ ಮಾತ್ರ ಸಾಧ್ಯ.
     ಸುಮಾರು ಹದಿನೈದು ವರ್ಷಗಳ ಹಿಂದಿನ ಪ್ರಸಂಗವಿದು. ಅರಕಲಗೂಡಿನಲ್ಲಿ ತಹಸೀಲ್ದಾರನಾಗಿದ್ದಾಗ ಒಂದು ಜಮೀನಿನ ತಕರಾರು ಪ್ರಕರಣ ನನ್ನ ಮುಂದೆ ಬಂದಿತ್ತು. ಗಂಡ ಅಪಘಾತದಲ್ಲಿ ಮೃತನಾದ ನಂತರ ಆತನ ಹೆಸರಿನಲ್ಲಿದ್ದ  ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಡಲು ಮಧ್ಯ ವಯಸ್ಕ ವಿಧವೆ ಕೋರಿದ್ದ ಅರ್ಜಿಗೆ ಗಂಡನ ಅಣ್ಣಂದಿರು ತಕರಾರು ಸಲ್ಲಿಸಿದ್ದರು. ವಿಚಾರಣೆ ಕಾಲದಲ್ಲಿ ತಿಳಿದು ಬಂದಿದ್ದೇನೆಂದರೆ ಮೃತನ ತಂದೆ-ತಾಯಿಗೆ ನಾಲ್ಕು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು. ಮೃತನನ್ನು ಹೊರತುಪಡಿಸಿ ಉಳಿದವರೆಲ್ಲಾ ಒಳ್ಳೆಯ ಸ್ಥಿತಿಯಲ್ಲಿದ್ದರು. ಮಗಳನ್ನು ಸಿರಿವಂತ ಕುಟುಂಬಕ್ಕೆ ಕೊಟ್ಟು ವಿವಾಹ ಮಾಡಲಾಗಿತ್ತು. ಹಿರಿಯ ಮಗ ಬೆಂಗಳೂರಿನ ಸರ್ಕಾರಿ ಕಾಲೇಜೊಂದರ ಪ್ರೊಫೆಸರ್, ಎರಡನೆಯವನು ತುಮಕೂರಿನಲ್ಲಿ ಇಂಜನಿಯರ್, ಕೊನೆಯ ಮಗ ಪ್ರೌಢಶಾಲೆಯ ಉಪಾಧ್ಯಾಯ. ಮೃತ ವ್ಯಕ್ತಿ ಮೂರನೆಯವನಾಗಿದ್ದು ಅವಿದ್ಯಾವಂತ. ತಂದೆ-ತಾಯಿಗೆ ಪಿತ್ರಾರ್ಜಿತವಾಗಿ ಬಂದಿದ್ದ ನಾಲ್ಕು ಎಕರೆ ತರಿ ಜಮೀನು ಇತ್ತು. ಒಳ್ಳೆಯ ಸ್ಥಿತಿಯಲ್ಲಿದ್ದ ಉಳಿದ ಮಕ್ಕಳು ಅವಿದ್ಯಾವಂತ ಸಹೋದರನೂ ಚೆನ್ನಾಗಿರಲಿ, ಹಳ್ಳಿಯನ್ನು ಬಿಟ್ಟುಬರಲು ಇಚ್ಛಿಸದ ತಂದೆ-ತಾಯಿಗೆ ಆಸರೆಯಾಗಿರಲಿ ಎಂಬ ಭಾವನೆಯಿಂದ ಪಿತ್ರಾರ್ಜಿತ ಸ್ವತ್ತನ್ನು ಅವನ ಹೆಸರಿಗೆ ಖಾತೆ ಮಾಡಿಕೊಡಲು ಒಪ್ಪಿಗೆ ಸೂಚಿಸಿ, ಜಮೀನಿನ ಮೇಲಿನ ತಮ್ಮ ಹಕ್ಕನ್ನು ಬಿಟ್ಟುಕೊಟ್ಟು ಅವನ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದರು. ಬಡಕುಟುಂಬದ ಹೆಣ್ಣನ್ನು ಮದುವೆಯಾಗಿದ್ದ  ಅವನ ಬದುಕಿಗೂ ಇದರಿಂದ ಭದ್ರತೆ ಬಂದಿತ್ತು. ಕೆಲವು ವರ್ಷಗಳ ನಂತರ ಆತ ಅಪಘಾತದಲ್ಲಿ ತೀರಿದಾಗ ಜಮೀನಿನ ಪಾಲು ಕೇಳುವುದರೊಂದಿಗೆ ಮೃತನ ಹೆಂಡತಿಯ ಹೆಸರಿಗೆ ಖಾತೆ ಮಾಡಿಕೊಡಬಾರದೆಂದು  ಮೃತನ ಅಣ್ಣಂದಿರು ತಕರಾರು ಮಾಡಿದ್ದರು. ಜಮೀನು ಕೈತಪ್ಪಿದಲ್ಲಿ ಆಸರೆಯಿಲ್ಲದೆ ಬೀದಿಗೆ ಬೀಳಲಿದ್ದ ಮೃತನ ಹೆಂಡತಿ, ಮದುವೆ ವಯಸ್ಸಿಗೆ ಬಂದಿದ್ದ ಅವನ ಮಗಳ ಕುರಿತು ತಕರಾರುದಾರರಿಗೆ ಮರುಕವಿರಲಿಲ್ಲ. ಕೊನೆಯ ಮಗನೊಬ್ಬ ಮಾತ್ರ ಅತ್ತಿಗೆಯ ಪರವಾಗಿ ಮಾತನಾಡಿದ್ದ. ಅಧಿಕಾರದಲ್ಲಿದ್ದ ಪ್ರಭಾವಿ ರಾಜಕಾರಣಿಯೊಬ್ಬರು ತಕರಾರುದಾರರ ಪರವಾಗಿ ತೀರ್ಪು ನೀಡಲು ಒಂದು ರೀತಿಯ ಬೆದರಿಕೆಯ ಒತ್ತಾಯ ಮಾಡಿದ್ದರು. ಕಾಲೇಜು ಪ್ರೊಫೆಸರರು ಹತ್ತು ಸಾವಿರ ರೂ. ಲಂಚದ ಆಮಿಷ ಒಡ್ಡಿದ್ದರು. ಇದನ್ನು ಲೆಕ್ಕಿಸದೆ, ಜಮೀನಿನ ಮೇಲಿನ ಹಕ್ಕನ್ನು ಮೊದಲೇ ಬಿಟ್ಟುಕೊಟ್ಟು ಮೃತನ ಹೆಸರಿಗೆ ಖಾತೆ ಮಾಡಿಕೊಡಲು ತಕರಾರುದಾರರು ಹಿಂದೆ ಬರೆದುಕೊಟ್ಟಿದ್ದ ಒಪ್ಪಿಗೆ ಪತ್ರ ಹಾಗೂ ಮೃತ ಗಂಡನ ಹೆಸರಿನಲ್ಲಿದ್ದ ಜಮೀನು ಇವುಗಳನ್ನು ಪರಿಗಣಿಸಿ ಮೃತನ ಪತ್ನಿಯ ಹೆಸರಿಗೆ ಖಾತೆ ಮಾಡಲು ತೀರ್ಪು ನೀಡಿದಾಗ ಜಮೀನು ಕೈತಪ್ಪಿ ಹೋಗುವುದೆಂದೇ ಆತಂಕದಲ್ಲಿದ್ದ ಆ ಬಡ ಹೆಣ್ಣು ಮಗಳು ತನ್ನ ಮಗಳೊಂದಿಗೆ ಬಂದು ಕಣ್ಣೀರಿಡುತ್ತಾ ಕೃತಜ್ಞತೆ ವ್ಯಕ್ತಪಡಿಸಿದ್ದಳು. ಆಗ ಆಕೆ ಕಾಲೇಜು ಪ್ರೊಫೆಸರರ ಪತ್ನಿಗೂ ತನಗೂ ಒಮ್ಮೆ ಸಂಸಾರಕ್ಕೆ ಸಂಬಂಧಿಸಿದ ವಿಷಯಕ್ಕೆ ಜಗಳವಾಗಿತ್ತೆಂದೂ, ಕುಟುಂಬಗಳಲ್ಲಿ ಪರಸ್ಪರ ಮನಸ್ತಾಪಕ್ಕೆ ಇದೇ ಕಾರಣವಾಗಿ ಈ ಹಂತಕ್ಕೆ ಬಂದು ತಾನು ಬೀದಿಗೆ ಬೀಳುವ ಪ್ರಸಂಗ ಒದಗಿತೆಂದೂ ಕಣ್ಣೀರಿಟ್ಟು ಹೇಳಿದ್ದಳು. ಮುಂದೊಮ್ಮೆ ಕಾಲೇಜು ಪ್ರೊಫೆಸರರು ಭೇಟಿಯಾದಾಗ ಅವರೊಂದಿಗೆ ಸಮಾಲೋಚಿಸಿ, ಚರ್ಚಿಸಿ, ಮನವೊಲಿಸಿ ದೊಡ್ಡ ಸ್ಥಾನದಲ್ಲಿರುವ ಅವರು ಪ್ರಸಂಗ ಇಲ್ಲಿಗೇ ಮುಕ್ತಾಯಗೊಳಿಸಿದಲ್ಲಿ ಆಗುವ ಸತ್ಪರಿಣಾಮದ ಕುರಿತು ಹಾಗೂ ಇದರಿಂದ ನಿಜಕ್ಕೂ ದೊಡ್ಡವರೆನಿಸಿಕೊಳ್ಳುತ್ತೀರೆಂದು ಮನವರಿಕೆ ಮಾಡಿಕೊಟ್ಟಾಗ ತೀರ್ಪಿನ ವಿರುದ್ಧ ಅವರು ಸಲ್ಲಿಸಬೇಕೆಂದಿದ್ದ್ದ ಮೇಲುಮನವಿಯನ್ನು ಸಲ್ಲಿಸಲಿಲ್ಲ. ಕೆಟ್ಟ ಘಳಿಗೆಯೊಂದರಲ್ಲಿ ಕುಟುಂಬದ ಸದಸ್ಯರುಗಳಲ್ಲಿ ಉಂಟಾಗುವ ಮನಸ್ತಾಪ ಮಾನವೀಯತೆಯನ್ನೇ ಹೇಗೆ ಮರೆಸುತ್ತದೆ ಎಂಬುದನ್ನು ತೋರಿಸುವುದಷ್ಟೇ ಈ ಪ್ರಸಂಗ ಉಲ್ಲೇಖಿಸಿದ ಉದ್ದೇಶ. ಹಲವಾರು ಕಾರಣಗಳಿಗಾಗಿ ಉಂಟಾಗುವ ಜಗಳ, ಮನಸ್ತಾಪಗಳನ್ನು ಮರೆತು ಪರಸ್ಪರರನ್ನು ಕ್ಷಮಿಸಿ ಮುನ್ನಡೆದಲ್ಲಿ ಸಂಬಂಧಗಳು ಉಳಿದುಕೊಳ್ಳುತ್ತವೆ. ಇಲ್ಲದಿದ್ದಲ್ಲಿ ಸಂಬಂಧಗಳು ಹಳಸುತ್ತದೆ. ಹಳಸಿದ ಸಂಬಂಧಗಳ ಲಾಭ ಇತರರಿಗೆ ಆಗುತ್ತದೆ. ಸಂಬಂಧಿಸಿದವರು ನಗೆಪಾಟಲಿಗೆ ಒಳಗಾಗುವರಲ್ಲದೆ ಅವರ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯ ಹೊರಟುಹೋಗುತ್ತದೆ. ಸಂಬಂಧಗಳು ಕಳಚಿದ ಬಗ್ಗೆ ಮನದಾಳದಲ್ಲಿ ನೋವು ಉಳಿಯುತ್ತದೆ. ಹೊಂದಿಕೊಂಡು ನಡೆದಲ್ಲಿ ಸಂಬಂಧಗಳು ಮಧುರವಾಗಿ ಉಳಿಯದಿದ್ದರೂ ಹಾಳಾಗುವುದಿಲ್ಲ. ಈ ಹಿನ್ನೆಲೆಯಲ್ಲಿ 'ಎಲ್ಲಾ ಮರೆತುಬಿಡಿ, ಚೆನ್ನಾಗಿರಿ' ಎಂಬ ಮಾತು ಅರ್ಥಪೂರ್ಣವೆನಿಸುತ್ತದೆ. ಮನ ನೋಯುವಂತಹ ಕೆಲವು ಸಂಗತಿಗಳು ಘಟಿಸಿದ  ಸಂದರ್ಭಗಳಲ್ಲಿ ತಕ್ಷಣದಲ್ಲಿ ಕೋಪದಿಂದ ಪ್ರತಿಕ್ರಿಯೆ ವ್ಯಕ್ತಪಡಿಸದೆ ಇದ್ದಲ್ಲಿ ಸಂಬಂಧಗಳು ಉಳಿದುಕೊಳ್ಳುತ್ತವೆ.
      ಹೊಂದಾಣಿಕೆಯಿದ್ದಲ್ಲಿ ಸಂಬಂಧಗಳು ಚೆನ್ನಾಗಿರುತ್ತದೆ. ಸಂಬಂಧಗಳು ಚೆನ್ನಾಗಿದ್ದಲ್ಲಿ ಜೀವನ ಸಹನೀಯವೆನಿಸುತ್ತದೆ. ಸಂಬಂಧಗಳು ಹಾಳಾಗಲು ಕಾರಣಗಳೇನು ಎಂದು ವಿಶ್ಲೇಷಿಸುವುದು ಋಣಾತ್ಮಕ ಚಿಂತನೆಯಾಗುತ್ತದೆ. ಸಂಬಂಧಗಳು ಹಾಳಾಗದಿರಲು ಏನು ಮಾಡಬಹುದು ಎಂದು ಧನಾತ್ಮಕವಾಗಿ ನೋಡೋಣ. ಸಂಬಂಧಗಳು ಉಳಿಯಬೇಕೆಂದರೆ - ೧. ಸಂಬಂಧಗಳು ಇರಬೇಕು, ಉಳಿಯಬೇಕು, ಬೆಳೆಯಬೇಕು ಎಂಬ ಮನೋಭಾವ, ೨. ಕುಟುಂಬ ಎಂದರೆ ಕೇವಲ ಗಂಡ, ಹೆಂಡತಿ ಮತ್ತು ಮಕ್ಕಳು ಮಾತ್ರ ಎಂಬ ಸೀಮಿತ ಪರಿಧಿಯಿಂದ ಹೊರಬರುವುದು. ೩. ಕುಟುಂಬದ ಸದಸ್ಯರುಗಳಲ್ಲಿ ಭಿನ್ನಾಭಿಪ್ರಾಯಗಳಿದ್ದಲ್ಲಿ ಮನಸ್ತಾಪಗಳ ಸಂದರ್ಭಗಳು ಬಾರದಂತೆ ನೋಡಿಕೊಳ್ಳುವುದು, ೪. ತಾಳ್ಮೆ, ಸಹನೆಯಿಂದ ವರ್ತಿಸುವುದು, ಕೋಪತಾಪದ ಸಂದರ್ಭಗಳಲ್ಲಿ ತಕ್ಷಣ ಪ್ರತಿಕ್ರಿಯಿಸದೆ ಸೂಕ್ತ ಸಮಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು, ೫. ಮೂರನೆಯ ವ್ಯಕ್ತಿಗಳು ಮೂಗು ತೂರಿಸಿ ಸಂಬಂಧಗಳನ್ನು ಕೆಡಿಸಲು ಅವಕಾಶ ಕೊಡಬಾರದು, ಅವರು ಹೇಳುವ ಮಾತುಗಳಲ್ಲಿ ನಿಜವಿದ್ದರೂ ಅದಕ್ಕೆ ಪ್ರಾಮುಖ್ಯತೆ ನೀಡದಿರುವುದು, ೬. ಇರುವ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಬರಲು ಸಂಬಂಧಿಗಳಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು, ಆದರೆ ನಮಗಿಂತ ಚೆನ್ನಾಗಿರುವ ಸಂಬಂಧಿಗಳ ಕುರಿತು ಹೊಟ್ಟೆಕಿಚ್ಚು ಪಡದೆ, ಉತ್ತಮ ಸ್ಥಿತಿಯಲ್ಲಿರದವರನ್ನು ಕಡೆಗಣಿಸದೆ ಇರುವ ಮನೋಭಾವ ಇರಬೇಕು. ನಾವು ದೊಡ್ಡವರಾಗಲು ಇತರರನ್ನು ಚಿಕ್ಕವರಾಗಿ ಬಿಂಬಿಸಬೇಕಿಲ್ಲ. ನಾವು ದೊಡ್ಡತನದಿಂದ ವರ್ತಿಸಬೇಕಷ್ಟೆ. ೭. ಮಾತುಕತೆಗಳಲ್ಲಿ ಸಂಯಮವಿರಬೇಕು. ವ್ಯಕ್ತಿಗಳನ್ನು ಮುದುಕ, ಮುದುಕಿ, ಕುಂಟ, ಕುರುಡ, ಕುಳ್ಳ, ಲಂಬು, ಪೆದ್ದ, ಹುಚ್ಚ, ಇತ್ಯಾದಿ ವಿಶೇಷತೆಗಳನ್ನು ಜೋಡಿಸಿ ಎದುರಿನಿಂದಾಗಲೀ, ಹಿಂದಿನಿಂದಾಗಲೀ ಸಂಬೋಧಿಸಬಾರದು. ಇತರರ ಅಭಿಪ್ರಾಯಗಳನ್ನು ಅವು ನಮಗೆ ಸರಿಯೆನಿಸದಿದ್ದರೂ ಗೌರವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಎದುರಿಗಿಲ್ಲದ ವ್ಯಕ್ತಿಗಳ ಬಗ್ಗೆ ಸಹ ಹಗುರವಾಗಿ ಮಾತನಾಡಬಾರದು. ಒಂದಲ್ಲಾ ಒಂದು ಸಂದರ್ಭದಲ್ಲಿ ಆ ಮಾತು ಅವರಿಗೆ ತಲುಪುತ್ತದೆ ಹಾಗೂ ಅದರಿಂದ ಮಾತನಾಡಿದವರು ಸಣ್ಣವರಾಗುತ್ತಾರೆ ಎಂಬ ಅರಿವಿರಬೇಕು.  ೮. ತಮ್ಮದು ತಪ್ಪು ಎಂದು ಕಂಡುಬಂದರೆ ಹಿಂಜರಿಕೆ ತೋರದೆ ಒಪ್ಪಿಕೊಂಡು ಸರಿಪಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದು, ೯. ಸಂಬಂಧಗಳನ್ನು ಕೆಡಿಸುವವರಿಂದ ದೂರವಿರುವುದು, ೧೦. ಯಾರನ್ನೂ ದೂರದಿರುವುದು, ಯಾರಿಗೂ ಕೇಡೆಣಿಸದಿರುವುದು, . . ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇದರಲ್ಲಿನ ಒಂದೊಂದು ಅಂಶಗಳ ಕುರಿತೂ ಸ್ವವಿಮರ್ಶೆ ಮಾಡಿಕೊಳ್ಳುವುದು ಪ್ರತಿಯೊಬ್ಬರಿಗೆ ಅವಶ್ಯವಾಗಿದೆ.
     'ಬಾಳು, ಬಾಳಗೊಡು' ಎಂದ ಮಹಾವೀರ, 'ನಿನ್ನಂತೆಯೇ ನಿನ್ನ ನೆರೆಯವನನ್ನು ಪ್ರೀತಿಸು' ಎಂದ ಏಸುಕ್ರಿಸ್ತ, 'ಇವನಾರವ, ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವನೆಂದೆಣಿಸಯ್ಯ' ಎಂದ ಬಸವಣ್ಣ,  'ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು' ಎಂದ ಸರ್ವಜ್ಙನೇ ಮುಂತಾದ ದಾರ್ಶನಿಕರು, ಸಂತರು ಒತ್ತಿ ಹೇಳುವುದು ಒಂದೇ ವಿಷಯ - ಮನುಷ್ಯನಿಗೆ ಇರಬೇಕಾಧ ಹೊಂದಾಣಿಕೆಯ ಮನೋಭಾವ. ನಮ್ಮದು ತಪ್ಪಿದ್ದರೆ ತಿದ್ದಿಕೊಂಡು ನಡೆಯೋಣ. ಇತರರ ತಪ್ಪನ್ನು ಕ್ಷಮಿಸೋಣ. ಕ್ಷಮಿಸುವ ಮನೋಭಾವ ದೈವತ್ವದ ಗುಣ. ಸ್ವಾಮಿ ವಿವೇಕಾನಂದರ ಈ ವಾಣಿಯನ್ನುನೆನಪಿನಲ್ಲಿಡೋಣ:
     "ಇತರರಿಗೆ ಒಳಿತು ಮಾಡುವುದೇ ಧರ್ಮ; ಇತರರನ್ನು ಘಾಸಿಗೊಳಿಸುವುದು ಅಧರ್ಮ. ಶಕ್ತಿ ಮತ್ತು ಪುರುಷತ್ವವೇ ಧರ್ಮ; ದುರ್ಬಲತೆ ಮತ್ತು ಹೇಡಿತನಗಳೇ ಅಧರ್ಮ. ಸ್ವಾತಂತ್ರ್ಯವೇ ಧರ್ಮ; ಗುಲಾಮಗಿರಿಯೇ ಅಧರ್ಮ. ಇತರರನ್ನು ಪ್ರೀತಿಸುವುದು ಧರ್ಮ; ದ್ವೇಷಿಸುವುದೇ ಅಧರ್ಮ. ದೇವರಲ್ಲಿ ಮತ್ತು ತನ್ನಲ್ಲಿ ತಾನು ನಂಬಿಕೆಯಿರಿಸಿಕೊಳ್ಳುವುದೇ ಧರ್ಮ; ಅಪನಂಬಿಕೆಯೇ ಅಧರ್ಮ. ಇತರರ ಬಗ್ಗೆ ದೂಷಿಸಿ ಮಾತನಾಡುವುದು ತಪ್ಪು. ಬಹಳಷ್ಟು ಸಂಗತಿಗಳು ಮನಸ್ಸಿನಲ್ಲಿ ಮೂಡಬಹುದು; ಅವುಗಳನ್ನು ವ್ಯಕ್ತಪಡಿಸುತ್ತಾ ಹೋದರೆ ಕ್ರಮೇಣ ಸಣ್ಣ ಮಣ್ಣುಗುಡ್ಡೆಯೇ ಬೆಟ್ಟವಾಗುತ್ತದೆ. ಕ್ಷಮಿಸಿದರೆ ಮತ್ತು ಕ್ಷಮಿಸಿ ಮರೆತುಬಿಟ್ಟರೆ ಎಲ್ಲವೂ ಸುಖಾಂತ್ಯವಾಗುತ್ತದೆ."  ಎಂತಹ ಸತ್ವಯುತವಾದ, ಸತ್ಯವಾದ ಮಾತಿದು! 
ಅಡಿಗಡಿಗೆ ಕಾಡಿ ಶಿರನರವ ತೀಡಿ
ಮಿಡಿದಿಹುದು ಉಡಿಯೊಳಗಿನ ಕಿಡಿಯು||
ಗಡಿಬಿಡಿಯಲಡಿಯಿಡದೆ ತಡೆತಡೆದು
ಸಿಡಿನುಡಿಯ ನೀಡು ಸಿಹಿಯ ಮೂಢ||
                              -ಕ.ವೆಂ. ನಾಗರಾಜ್,



ಮಂಗಳವಾರ, ಮಾರ್ಚ್ 11, 2014

ಮಾಡಿದ್ದುಣ್ಣೋ ಮಹರಾಯ!

ಎಂಥ ಸತ್ಯ ಎಂಥ ಸತ್ಯ ಎಂಥ ಸತ್ಯವು |
ಅಟ್ಟಿದ್ದೇ ಉಣಬೇಕು ಎಂಬ ಸತ್ಯವು || ಪ ||

ಒಂಬತ್ತು ಬಾಗಿಲಿನ ದೇವಮಂದಿರ
ಮಂದಿರದ ಅಧಿಪತಿಯೆ ಸತ್ಯಸುಂದರ |
ಸುತ್ತೆಲ್ಲ ಹರಿದಿಹುದು ನವರಸಧಾರಾ
ಮಾಯೆಯ ಮುಸುಕಿನಲಿ ಜೀವನಸಾರ || ೧ ||

ಮಂದಿರದ ಒಳಗಿಹುದು ಕಾಣದ ಪಾತ್ರೆ
ಅಂಕಿಲ್ಲದ ಡೊಂಕಿಲ್ಲದ ಸೋರದ ಪಾತ್ರೆ |
ದೇವನ ಲೆಕ್ಕದಲಿ ದೋಷವೆಂಬುದಿಲ್ಲ
ಬೇಯುತಿದೆ ಪಾತ್ರೆಯಲಿ ಮಾಡಿದಡುಗೆಯೆಲ್ಲ || ೨ ||

ಮಾಡಿದ ಕರ್ಮವದು ಬೆನ್ನನು ಬಿಡದು
ಧನಕನಕ ಬಂಧು ಬಳಗ ನೆರವಿಗೆ ಬರದು |
ಅಟ್ಟಡುಗೆಯುಣ್ಣದೆ ವಿಧಿಯೆ ಇಲ್ಲವು
ರಸಪಾಕವ ಮಾಡುವುದೆ ಇರುವ ದಾರಿಯು || ೩ ||
-ಕ.ವೆಂ.ನಾ.
*************
ಪ್ರೇರಣೆ:
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ ||  (ಅಥರ್ವ.೧೨.೩.೪೮)
     ಅರ್ಥ:  ಈಶ್ವರೀಯ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ. ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ ಮಧ್ಯೆ ಸೇರಿಕೊಂಡು, ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದೆ. ಬೇಯಿಸಿದ ಅನ್ನ (ಕರ್ಮಫಲವಿಪಾಕ) ಅದನ್ನು ಪಾಕ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ.

ಭಾನುವಾರ, ಮಾರ್ಚ್ 9, 2014

ದೇವನ ನೆನೆಯುವೆ

ಬೆಳಗಾಗಿ ನಾನೆದ್ದು ದೇವನ ನೆನೆಯುವೆ
ಪರಮಸಂಪದದೊಡೆಯ ತೇಜಸ್ವಿಯ |
ಭೂತಾಯಿಯಂತೆ ಮತ್ತೆ ಆಗಸದಂತೆ
ಎಲ್ಲೆಲ್ಲೂ ಇರುವವಗೆ ಶರಣೆನ್ನುವೆ || ೧ ||

ಬುದ್ಧಿಗೊಡೆಯ ಜಗದೀಶನ ನೆನೆಯುವೆ
ಕರ್ಮಫಲದಾತ ಜ್ಯೋತಿರ್ಮಯನ |
ಮಂಗಳಮಯ ಸಕಲ ಲೋಕಪ್ರಿಯ
ದೇವಾಧಿದೇವನಿಗೆ ಶರಣೆನ್ನುವೆ || ೨ ||

ನಿತ್ಯವಿಜಯಿಯಾದ ಒಡೆಯನ ನೆನೆಯುವೆ 
ಸಕಲ ಲೋಕಾಧಾರ ತೇಜಸ್ವಿಯ |
ಪಾತಕಿಕಂಟಕ ಸತ್‌ಪ್ರಕಾಶ ಈಶ
ಸರ್ವಜ್ಞ ದೇವನಿಗೆ ಶರಣೆನ್ನುವೆ || ೩ ||

ಮನೋಧಿನಾಯಕ ದೇವನ ಬೇಡುವೆ
ಕೊಡು ಮತಿಯ ಕೊಡು ಸಕಲ ಸಂಪತ್ತಿಯ |
ಮಾಡೆನ್ನ ಸತ್ಪ್ರಜೆಯ ಬೆಳೆಸುತಲಿ ಸಜ್ಜನರ
ಸತ್ಯಕ್ಕಾಧೀಶ ದೇವ ಶರಣೆನ್ನುವೆ || ೪ ||

ಪರಮ ಬೆಳಕಿನೊಡೆಯ ದೇವನ ಬೇಡುವೆ
ಕರುಣಿಸು ರಕ್ಷೆ ಮೇಣ್ ಸಕಲಸುಖವ |
ಸಜ್ಜನರ ಸುಮತಿಯ ಪಾಲಿಸುವ ಮನವ
ನೀಡೆಂದು ಬೇಡುತ ಶರಣೆನ್ನುವೆ || ೫ ||

ಜಗದಂತರಾತ್ಮನೆ ವಿದ್ವಜ್ಜನರ ಬೇಡುವೆ
ನಿಮ್ಮಂತೆ ಎಮಗೂ ಸಿಗಲಿ ಸದ್ಬುದ್ಧಿ |
ಸಕಲಜಗವು ನಿನ್ನ ಹಾಡಿ ಹೊಗಳುತಲಿರಲು
ದಾರಿ ತೋರೈ ಪ್ರಭುವೆ ಶರಣೆನ್ನುವೆ || ೬ ||
-ಕ.ವೆಂ.ನಾ.
************** 
ಆಧಾರ:
ಓಂ ಪ್ರಾತರಗ್ನಿಂ ಪ್ರಾತರಿಂದ್ರಂ ಹವಾಮಹೇ ಪ್ರಾತರ್ಮಿತ್ರಾವರುಣಾ ಪ್ರಾತರಶ್ವಿನಾ |
ಪ್ರಾತರ್ಭಗಂ ಪೂಷಣಂ ಬ್ರಹ್ಮಣಸ್ಪತಿಂ ಪ್ರಾತಃ ಸೋಮಮುತ ರುದ್ರಂ ಹುವೇಮ || (ಋಕ್.೭.೪೧.೧.)

ಓಂ ಪ್ರಾತರ್ಜಿತಂ ಭಗಮುಗ್ರಂ ಹುವೇಮ ವಯಂ ಪುತ್ರಮದಿತೇರ್ಯೋ ವಿಧರ್ತಾಃ |
ಆಧ್ರಶ್ಚಿದ್ ಯಂ ಮನ್ಯಮಾನಸ್ತುರಶ್ಚಿದ್ ರಾಜಾ ಚಿದ್ ಯಂ ಭಗಂ ಭಕ್ಷೀತ್ಯಾಹ || (ಋಕ್.೭.೪೧.೨.)

ಓಂ ಭಗ ಪ್ರಣತೇರ್ಭಗ ಸತ್ಯರಾಧೋ ಭಗೇಮಾಂ ಧಿಯಮುದವಾ ದದನ್ನಃ |
ಭಗ ಪ್ರ ಣೋ ಜನಯ ಗೋಭರಶ್ವೈರ್ಭಗ ಪ್ರ ನೃಭಿರ್ನೃವಂತಃ ಸ್ಯಾಮ || (ಋಕ್.೭.೪೧.೩.)

ಓಂ ಉತೇದಾನೀಂ ಭಗವಂತಃ ಸ್ಯಾಮೋತ ಪ್ರಪಿತ್ವ ಉತ ಮಧ್ಯೇ ಅಹ್ನಾಂ |
ಉತೋದಿತಾ ಮಘವನ್ ತ್ಸೂರ್ಯಸ್ಯ ವಯಂ ದೇವಾನಾಂ ಸುಮತೌ ಸ್ಯಾಮ || (ಋಕ್.೭.೪೧.೪.)

ಓಂ ಭಗ ಏವ ಭಗವಾನ್ ಅಸ್ತು ದೇವಸ್ತೇನ ವಯಂ ಭಗವಂತಃ ಸ್ಯಾಮ | 
ತಂ ತ್ವಾ ಭಗ ಸರ್ವ ಇಜ್ಜೋಹವೀ ತಿ ಸ ನೋ ಭಗ ಪುರಏತಾ ಭವೇಹಃ || (ಋಕ್.೭.೪೧.೫.) 
ಚಿತ್ರ: ಅಂತರ್ಜಾಲದಿಂದ ಹೆಕ್ಕಿದ ರಾಯಲ್ಟಿ ಮುಕ್ತ ಚಿತ್ರ (dreamstine.com)

ಸೋಮವಾರ, ಮಾರ್ಚ್ 3, 2014

ಜೀವನ ಸಂಧ್ಯಾಕಾಲ -2

ಸಾಲ ಪಡೆದೆವು ನಾವು ಋಣಿಗಳಾದೆವು ನಾವು
ಶರೀರವಿತ್ತ ದೇವಗೆ ಹೆತ್ತವರ್ಗೆ ಹೊತ್ತವರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||
     ಭೋಗವಾದ, ಭೌತಿಕವಾದ ವಿಫಲವಾದಾಗ ನೆರವಿಗೆ ಬರುವುದು ಆಧ್ಯಾತ್ಮಿಕವಾದವೇ. ಪ್ರತಿ ವ್ಯಕ್ತಿ ತನ್ನ ಜೀವಿತಕಾಲದಲ್ಲಿ ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ತೀರಿಸಬೇಕೆಂದು ಧರ್ಮ ಸೂಚಿಸುತ್ತದೆ. ಪಿತೃಋಣವೆಂದರೆ ತಮ್ಮನ್ನು ಪಾಲಿಸಿದ, ಪೋಷಿಸಿದ ತಾಯಿ, ತಂದೆ, ಹಿರಿಯರುಗಳನ್ನು ಅವರ ವೃದ್ಧಾಪ್ಯ ಕಾಲದಲ್ಲಿ ಸಂತೋಷವಾಗಿರುವಂತೆ ನೋಡಿಕೊಳ್ಳುವುದೇ ಆಗಿದೆ. ಪಿತೃಋಣವೆಂದರೆ ಸತ್ತ ನಂತರ ಮಾಡುವ ಕ್ರಿಯಾಕರ್ಮಗಳಲ್ಲ, ಬದುಕಿದ್ದಾಗ ಸಲ್ಲಿಸಬೇಕಾದ ಸೇವೆಯಾಗಿದೆ. ವೃದ್ಧಾಪ್ಯವೆಂದರೆ ಅದು ಇನ್ನೊಂದು ರೀತಿಯಲ್ಲಿ ಬಾಲ್ಯಕಾಲವಿದ್ದಂತೆ. ಬಾಲ್ಯದಲ್ಲಿ ಪೋಷಣೆಯ ಅಗತ್ಯವಿರುವಂತೆ, ವೃದ್ಧಾಪ್ಯದಲ್ಲೂ ಇನ್ನೂ ಹೆಚ್ಚಿನ ಮೇಲ್ವಿಚಾರಣೆಯನ್ನು ಅವರ ಮಕ್ಕಳು ಮಾಡಬೇಕಾದುದು ಅಗತ್ಯ ಮತ್ತು ತಾವು ಅವರಿಂದ ಮಾಡಿಸಿಕೊಂಡಿದ್ದ ಪ್ರತಿಫಲಾಪೇಕ್ಷೆಯಿಲ್ಲದ ಸೇವೆಗೆ ಪ್ರತಿಯಾಗಿ ಸಲ್ಲಿಸಲೇಬೇಕಾದ ಋಣವಾಗಿರುತ್ತದೆ. ಇದನ್ನು ಮಾಡದಿದ್ದರೆ ಅವರ ಮಕ್ಕಳೂ ಅವರನ್ನೇ ಅನುಸರಿಸುವರಲ್ಲವೇ? ಇಂತಹ ಯೋಗ್ಯ ಸಂಸ್ಕಾರ ಕೊಡುವ ಮನೆಗಳು, ಶಿಕ್ಷಣ ಸಂಸ್ಥೆಗಳು ತಲೆ ಎತ್ತಬೇಕು. ಮೌಲ್ಯಯುತ, ಅಧಿಕಾರದಾಹವಿಲ್ಲದ ಆಡಳಿತ ವ್ಯವಸ್ಥೆ ರೂಪಿತವಾಗಬೇಕು. ಇದಕ್ಕಾಗಿ ಶ್ರಮಿಸಬೇಕಾದವರು ನಾವು ಮತ್ತು ನೀವೇ ಆಗಿದ್ದೇವೆ.
     ಇನ್ನು ಸಂಧ್ಯಾಕಾಲ ಸಮೀಪಿಸುತ್ತಿರುವವರೂ ಸಹ ತಮ್ಮ ಮುಂದಿನ ಜೀವನದ ಬಗ್ಗೆ ಚಿಂತಿಸಿ ಮುಂದುವರೆಯುವ ಪ್ರವೃತ್ತಿ ಬರಬೇಕಿದೆ. ಸನಾತನ ಧರ್ಮದಲ್ಲಿ ಉಕ್ತವಾದ ೧೬ ಸಂಸ್ಕಾರಗಳ ಪೈಕಿ ವಿವಾಹ, ವಾನಪ್ರಸ್ಥ ಮತ್ತು ಸಂನ್ಯಾಸ- ಈ ಮೂರು ಸಂಸ್ಕಾರಗಳು ಯೋಗ್ಯತಾನುಸಾರ ಅನುಸರಿಸಬೇಕಾದವುಗಳಾಗಿವೆ. ಮಾನವನ ಆಯಸ್ಸನ್ನು ಒಂದು ನೂರು ವರ್ಷಗಳು ಎಂದಿಟ್ಟುಕೊಂಡರೆ ಮೊದಲ ೨೫ ವರ್ಷಗಳು ಬ್ರಹ್ಮಚರ್ಯ, ನಂತರದ ೨೫ ವರ್ಷಗಳನ್ನು ಗೃಹಸ್ಥರಾಗಿ ಕಳೆದು, ನಂತರದ ೫೧ ರಿಂದ ೭೫ವರ್ಷಗಳು ವಾನಪ್ರಸ್ಥದ ಕಾಲ. ಅದರ ನಂತರ ಸಂನ್ಯಾಸಾಶ್ರಮ. ಇರುವ ಬಂಧಗಳು, ಬಂಧನಗಳನ್ನು ಕಳೆದುಕೊಂಡು ಜೀವಿಸಲು ಅತಿ ಅಗತ್ಯವಾದಷ್ಟನ್ನು ಮಾತ್ರ ಹೊಂದಿ ಆಧ್ಯಾತ್ಮಿಕ ಸಾಧನೆಗೆ ತೊಡಗುವ ಕಾಲವೇ ವಾನಪ್ರಸ್ಥವೆನಿಸುವುದು. ಇದು ಪರಿವರ್ತನಾ ಕಾಲ. ಈ ಸಾಧನೆಗಾಗಿ ಹಿಂದೆ ಕಾಡಿಗೆ ತೆರಳುತ್ತಿದ್ದರು. ಈಗ ಕಾಡುಗಳೇ ಇಲ್ಲ. ಇಂದಿನ ಕಾಲಮಾನದ ಪರಿಸ್ಥಿತಿಯಲ್ಲಿ ವಾನಪ್ರಸ್ಥದ ಮೂಲ ಪರಿಕಲ್ಪನೆಯನ್ನು ಸೂಕ್ತವಾಗಿ ಪರಿವರ್ತಿಸಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ೪೫-೫೦ರ ವಯಸ್ಸಿನಲ್ಲಿ ಇರುವವರು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಮುಂಚಿತವಾಗಿ ಯೋಜನೆ ಮಾಡಿಕೊಂಡು, ಮಾನಸಿಕವಾಗಿ ಸಿದ್ಧರಾಗಿದ್ದಲ್ಲಿ ನಿವೃತ್ತರಾದ ಕೂಡಲೇ ಉಂಟಾಗಬಹುದಾದ ಶೂನ್ಯಭಾವದಿಂದ ಹೊರಬರಬಹುದು. ನಿವೃತ್ತ ಜೀವನವನ್ನು ಒಳ್ಳೆಯ ರೀತಿಯಲ್ಲಿ ಕಳೆಯುವ ಸಾಧನವಾಗಿ ಮಾಡಿಕೊಳ್ಳುವುದನ್ನು ವಾನಪ್ರಸ್ಥವೆನ್ನೋಣ. ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ಒಳಿತನ್ನು ಕಾಣುವ ಮನೋಭಾವ ಬೆಳೆಸಿಕೊಂಡು, ಅಂತರಂಗ, ಬಹಿರಂಗಗಳಲ್ಲಿ ಸಾಮ್ಯತೆ ಸಾಧಿಸುವ ಕ್ರಿಯೆಯಲ್ಲಿ ತೊಡಗುವುದು ಕಡಿಮೆ ಸಾಧನೆಯಲ್ಲ. ಪ್ರಾಪಂಚಿಕ ಆಕರ್ಷಣೆಗಳಿಂದ ವಿಮುಕ್ತರಾಗಿ ಸರಳ ವಸ್ತ್ರಗಳನ್ನು ಧರಿಸಿ, ಸರಳ ಜೀವನವನ್ನು ನಡೆಸಿ ಆತ್ಮಚಿಂತನೆಯಲ್ಲಿ ತೊಡಗಬಹುದಾಗಿದೆ. ತನ್ನ ಚಿಂತನೆ, ಜ್ಞಾನಾಭಿವೃದ್ಧಿಗಳಿಗೆ ಪೂರಕವಾಗುವ ಸತ್ಸಂಗಗಳಲ್ಲಿ ಪಾಲುಗೊಳ್ಳುವುದು, ಅಂತಹ ಆದರ್ಶದ ಜೀವನ ಸಾಗಿಸುತ್ತಿರುವ ಧೀಮಂತರ ಮಾರ್ಗದರ್ಶನ ಪಡೆಯುವುದು ಸಹಕಾರಿಯಾಗುತ್ತದೆ. ಇಂತಹವರು ಸಹಜವಾಗಿ ದೇಶಾತೀತ, ಭಾಷಾತೀತ, ಜನಾಂಗಾತೀತ, ಮತಾತೀತ ಮಾನವರಾಗುತ್ತಾರೆ. ಕೌಟುಂಬಿಕ ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸಿ ನಿರ್ಲಿಪ್ತ, ನಿಶ್ಚಿಂತರಾಗುವುದು ಮೊದಲ ಕ್ರಮವಾಗಬೇಕು. ನಂತರದಲ್ಲಿ ಸಾಧ್ಯವಾದಷ್ಟು ಪ್ರಶಾಂತ ಕೊಠಡಿ ಅಥವ ಸ್ಥಳದಲ್ಲಿ ಇರಬೇಕು. ಕುಟುಂಬದವರು ಕೌಟುಂಬಿಕ ಸಮಸ್ಯೆ ಅಥವ ವಿಚಾರಗಳಿಗೆ ಸಲಹೆ, ಸಹಕಾರ ಬಯಸಿದಲ್ಲಿ ಕೊಡಬೇಕು. ಆದರೆ ಅವುಗಳಲ್ಲಿ ವ್ಯಸ್ತರಾಗಬಾರದು. ಕೌಟುಂಬಿಕ ಸಾಮರಸ್ಯ, ಬಂಧುಗಳ ಸಾಮರಸ್ಯ, ಜನಾಂಗದ ಸಾಮರಸ್ಯ, ಸಕಲ ಜೀವಕೋಟಿಯ ಸಾಮರಸ್ಯದ ಗುರಿಯಿರಬೇಕು. ಈ ದಿಸೆಯಲ್ಲಿ ಎಷ್ಟು ಸಾಧಿಸಲು ಸಾಧ್ಯ, ಸಾಧಿಸಿದೆವು ಎಂಬುದು ಮಹತ್ವದ್ದಲ್ಲ. ಸಣ್ಣ ಕೌಟುಂಬಿಕ ವ್ಯಾಪ್ತಿಯಿಂದ ಹೊರಬಂದು ವಿಶ್ವವೇ ಒಂದು ಕುಟುಂಬವಾಗಿದ್ದು ತಾನು ಅದರ ಭಾಗವೆಂದು ಭಾವಿಸುವ ಮನೋವೃತ್ತಿ ಬೆಳೆಸಿಕೊಳ್ಳಬೇಕು. ಸರ್ವರ ಹಿತ ಬಯಸುವ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು, ಬೆಂಬಲಿಸಬೇಕು. ಮನೋವಿಕಾರಗಳನ್ನು ನಿಯಂತ್ರಿಸಲು ಸಾಧನೆ ನಡೆಸಬೇಕು. ದುಷ್ಟ ವಿಚಾರಗಳಿಂದ ದೂರವಿದ್ದು, ಸದ್ವಿಚಾರಗಳ ಅನುಸರಣೆ, ಪ್ರಸರಣೆಗೆ ಗಮನ ಕೊಡಬೇಕು. ಒಳಿತನ್ನು, ಒಳ್ಳೆಯ ಸಂಗತಿಗಳನ್ನು ಗುರುತಿಸಿ ಗೌರವಿಸಬೇಕು. ಸಾಧ್ಯವಾದಷ್ಟೂ ಇತರರಿಗೆ ಹೊರೆಯಾಗದಂತೆ ಬಾಳಬೇಕು. 
     ಸಾಮಾನ್ಯವಾಗಿ ಒಬ್ಬೊಬ್ಬರಿಗೆ ಒಂದೊಂದು ವೃತ್ತಿ, ಪ್ರವೃತ್ತಿ, ಹವ್ಯಾಸಗಳು ತೃಪ್ತಿ, ಸಂತೋಷ ಕೊಡುವ ಸಂಗತಿಯಾಗಿರುತ್ತದೆ. ನಿವೃತ್ತಿಯೆಂದರೆ ಅಂತಹ ಹವ್ಯಾಸಗಳನ್ನು ನಿಲ್ಲಿಸುವುದಲ್ಲ. ಬದಲಾಗಿ ಅವುಗಳನ್ನು ಇತರರ ಹಿತಕ್ಕಾಗಿ ಬಳಸುವುದು. ಆದರೆ ಅದು ಹಣಗಳಿಕೆಯ ಸಾಧನವಾಗಬಾರದಷ್ಟೆ. ಒಬ್ಬ ನಿವೃತ್ತ ಶಿಕ್ಷಕ ಬಡ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಬಹುದು, ಸಂಗೀತಗಾರ ತನ್ನ ಸಾಧನೆಯನ್ನು ಉತ್ತುಂಗಕ್ಕೇರಿಸುವುದರ ಜೊತೆಗೆ ಇತರರಿಗೆ ಸಂಗೀತ ಹೇಳಿಕೊಡಬಹುದು, ಬರಹಗಾರ ತನ್ನ ಅನುಭವದ ಸಾರಗಳನ್ನು ಬರಹದ ಮೂಲಕ ಅಭಿವ್ಯಕ್ತಿಸಬಹುದು ಮತ್ತು ಆ ಮೂಲಕ ಪರಿಣಾಮ ಬೀರಬಹುದು. ಇವೆಲ್ಲಾ ಉದಾಹರಣೆಗಳಷ್ಟೆ. ಕೇವಲ ಆತ್ಮತೃಪ್ತಿ ಮತ್ತು ಇತರರಿಗೆ ಮಾರ್ಗದರ್ಶಿಯಾಗಿರಲು ಮಾತ್ರ ಇವುಗಳ ಬಳಕೆಯಾಗಬೇಕು. ಪಡೆಯುವುದಕ್ಕಿಂತ ಕೊಡುವುದಕ್ಕೆ ಆದ್ಯತೆಯಿರಬೇಕು. ಅಷ್ಟಕ್ಕೂ ನಮ್ಮಲ್ಲಿರುವುದೆಲ್ಲಾ ನಾವು ಪಡೆದಿದ್ದೇ ಅಲ್ಲವೇ? ಬದುಕಿನ ಜಂಜಾಟದಲ್ಲಿ ತನ್ನತನಕ್ಕೆ ಅದುವರೆಗೆ ಸಿಕ್ಕದ ಆದ್ಯತೆಯನ್ನು ಜೀವನದ ಅಂತಿಮ ಘಟ್ಟದಲ್ಲಾದರೂ ಸಿಕ್ಕುವಂತೆ ನೋಡಿಕೊಂಡು 'ತಾನು ತಾನಾಗಿರಬೇಕು', ಅರ್ಥಾತ್ 'ತನಗಾಗಿ' ಬಾಳಬೇಕು. 'ತನಗಾಗಿ' ಬಾಳುವ ಈ ರೀತಿಯ ಬಾಳುವಿಕೆಯಲ್ಲಿ ಸ್ವಾರ್ಥವಿರಲಾರದು. ಏಕೆಂದರೆ, ಅದು ಆತ್ಮತೃಪ್ತಿಯ, ಆತ್ಮ ಚಿಂತನೆಯ, ಆತ್ಮಾನುಸಂಧಾನದ ಮಾರ್ಗ. ಒಂದು ರೀತಿಯಲ್ಲಿ ಅದು ಹಿಂದೆ ಮಾಡಿರಬಹುದಾದ ತಪ್ಪುಗಳಿಗೆ ಪ್ರಾಯಶ್ಚಿತ್ತವೂ ಆದೀತು. ಇಂತಹ ಕ್ರಿಯೆಯಿಂದ ಯುವಕರಿಗೆ ಸಹಜವಾಗಿ ನಾಯಕತ್ವ ಸಿಗುವುದಲ್ಲದೇ, ಅವರಿಗೆ ಸುಯೋಗ್ಯ ಮಾರ್ಗದರ್ಶನ ಸಹ ನೀಡಿದಂತಾಗುತ್ತದೆ. 'ಯಾರಂತೆ ಅಂದರೆ ಊರಂತೆ' ಎಂದುಕೊಂಡು ಅದುವರೆಗೆ ಹೇಗೆ ಹೇಗೋ ಸಾಗಿಸಿದ ಜೀವನವನ್ನು ಮರೆತು, ಮೌಲ್ಯಗಳನ್ನು ಕಡೆಗಣಿಸಿ ಬಾಳಿದ ಹಿಂದಿನ ದಿನಗಳನ್ನು ಮರೆತು, ಕಷ್ಟವಾದರೂ ಸರಿ, ಜೀವನದ ಉಳಿದ ಕೊನೆಯ ದಿನಗಳಲ್ಲಿ ಮೌಲ್ಯಗಳಿಗೆ ಅಂಟಿಕೊಂಡು ಬಾಳಿದರೆ ಅದು ಜೀವಕೋಟಿಗೆ ನೀಡುವ, ಭಗವಂತ ಮೆಚ್ಚುವ ಅತಿ ದೊಡ್ಡ ಕಾಣಿಕೆಯಾಗುತ್ತದೆ.
     ಆರೋಗ್ಯವಾಗಿದ್ದರೆ ವಯಸ್ಸು ಅನ್ನುವುದು ಕೇವಲ ಒಂದು ಸಂಖ್ಯೆ ಅಷ್ಟೆ. ಎಲ್ಲರೂ ಬಯಸುವುದು 'ವಿನಾ ದೈನ್ಯೇನ ಜೀವನಮ್ ಅನಾಯಾಸೇನ ಮರಣಮ್'. ಈ ಸ್ಥಿತಿ ನಮ್ಮದಾಗಬೇಕಾದರೆ, ಅದನ್ನು ಆಗಗೊಳಿಸುವುದು ಏಕಾಏಕಿ ಸಾಧ್ಯವಿಲ್ಲ, ಚಿಕ್ಕಂದಿನಿಂದಲೇ ಸಂಸ್ಕಾರಯುತ, ಅರೋಗ್ಯಯುತ ಜೀವನ ವಿಧಾನಗಳನ್ನು ಅನುಸರಿಸಿದರೆ ಮಾತ್ರ ಇವು ನಮ್ಮದಾಗುತ್ತವೆ. ಮೊದಲು ಹೇಗೆ ಹೇಗೋ ಇದ್ದು ಕೊನೆಯಲ್ಲಿ ಮಾತ್ರ ಸರಿಯಾಗಿರಬೇಕೆಂದರೆ ಸಾಧ್ಯವೇ? ಯಜುರ್ವೇದದ ಈ ಮಂತ್ರ ಹೇಗಿರಬೇಕೆಂಬುದಕ್ಕೆ ನಮಗೆ ದಾರಿ ತೋರಿಸುತ್ತಿದೆ: ಪಶ್ಶೇಮ ಶರದಃ ಶತಮ್ (ಒಳ್ಳೆಯದನ್ನು ನೋಡುತ್ತಾ ನೂರು ವರ್ಷಗಳ ಕಾಲ ಬಾಳೋಣ); ಜೀವೇಮ ಶರದಃ ಶತಮ್ (ನೂರು ವರ್ಷಗಳ ಕಾಲ ಜೀವಿಸೋಣ); ಹೇಗೆ? ಶೃಣವಾಮ ಶರದಃ ಶತಮ್ (ನೂರು ವರ್ಷಗಳ ಕಾಲ ಒಳ್ಳೆಯದನ್ನು ಕೇಳೋಣ); ಪ್ರಬ್ರವಾಮ ಶರದಃ ಶತಮ್ (ನೂರು ವರ್ಷಗಳ ಕಾಲ ಒಳ್ಳೆಯದನ್ನೇ ಆಡೋಣ); ಅದೀನಾಃ ಸ್ಯಾಮ ಶರದಃ ಶತಮ್ (ದೈನ್ಯತೆಯಿಲ್ಲದಂತೆ, ಸ್ವತಂತ್ರರಾಗಿ, ಆತ್ಮಗೌರವದಿಂದ ನೂರು ವರ್ಷಗಳ ಕಾಲ ಬಾಳೋಣ); ಈ ರೀತಿಯಾಗಿ, ಭೂಯಶ್ಚ ಶರದಃ ಶತಾತ್ (ನೂರು ವರ್ಷಗಳಿಗಿಂತ ಹೆಚ್ಚಾಗಿಯೂ ಜೀವಿಸೋಣ). ಇದು ಬಾಳಬೇಕಾದ ರೀತಿ. ಹೀಗೆ ಬಾಳಿದವರ ಅನೇಕ ಉದಾಹರಣೆಗಳು ನಮ್ಮ ಕಣ್ಣು ತೆರೆಸಬೇಕು. ಈ ರೀತಿ ಬಾಳಿದ ಕಾರಣದಿಂದಲೇ ಅನೇಕ ಮಹಿಮಾವಂತರನ್ನು ಅವರು ಕಾಲವಶರಾದ ಶತ ಶತಮಾನಗಳ ನಂತರವೂ ಇಂದಿಗೂ ನೆನಪಿಸಿಕೊಳ್ಳುತ್ತೇವೆ, ಗೌರವಿಸುತ್ತೇವೆ, ಪೂಜಿಸುತ್ತೇವೆ. ಕೇವಲ ಈಗಿನ ಉದಾಹರಣೆಗಳನ್ನೇ ನೋಡುವುದಾದರೆ ೧೦೬ ವರ್ಷಗಳ ಸಿದ್ದಗಂಗಾ ಶ್ರೀಗಳು, ೧೦೨ ವರ್ಷಗಳ ಪ್ರೊ. ಜಿ. ವೆಂಕಟಸುಬ್ಬಯ್ಯನವರು, ೧೧೭ ವರ್ಷಗಳ ಪಂಡಿತ ಸುಧಾಕರ ಚತುರ್ವೇದಿಗಳು- ಇವರುಗಳ ಬದುಕುಗಳು ಈ ವೇದಮಂತ್ರದ ಸಾಕಾರರೂಪವಾಗಿವೆ. ಪಂ. ಸುಧಾಕರ ಚತುರ್‍ವೇದಿಯವರು ಹೇಳುವಂತೆ ಯಾರು ಚೆನ್ನಾಗಿ ಆಲೋಚಿಸಿ, ಚೆನ್ನಾಗಿ ಯೋಚನೆ ಮಾಡಿಯೇ ಕಾರ್ಯ ಮಾಡುತ್ತಾರೋ ಅವರೇ ಮನುಷ್ಯರು. ನಮ್ಮ ಶರೀರದ ಆಕಾರ ಏನೋ ಮನುಷ್ಯನ ಆಕಾರದಲ್ಲೇ ಇರಬಹುದು, ಆದರೆ ನಡೆ ನುಡಿಯಲ್ಲಿ ಪಶುವೃತ್ತಿ ಇದ್ದರೆ ಏನು ಪ್ರಯೋಜನ?
ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ
ಸರಿಸರಿದು ಸಾಗಿ ಬರಲಿಹುದು ಸಾವು | 
ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ
ಜಾಣರಲಿ ಜಾಣರು ಬದುಕುವರು ಮೂಢ || 
     ಮುಪ್ಪು ಎಂದೊಡನೆ ನೆನಪಾಗುವುದು ಮುಂದೆ ಬರಲಿರುವ ಸಾವೇ! ಕೆಲವರು ಮಾತನಾಡುತ್ತಿರುತ್ತಾರೆ, 'ಮುಪ್ಪು ಬಂದು ಒದ್ದಾಡುವುದಕ್ಕಿಂತ ಮೊದಲೇ ಕೈಕಾಲು ಗಟ್ಟಿಯಾಗಿದ್ದಾಗಲೇ ಹೋಗಿಬಿಡಬೇಕು'. ಮುಪ್ಪನ್ನು ತಪ್ಪಿಸಿಕೊಳ್ಳುವುದೆಂದರೆ ಜೀವನದ ಅಮೂಲ್ಯ ಅನುಭವ ಪಡೆಯುವ, ಅದನ್ನು ಹಂಚಿಕೊಳ್ಳುವ ಅವಕಾಶದಿಂದ ವಂಚಿತರಾಗುವುದೇ ಆಗಿದೆ. ಯುವಕರಾಗಿದ್ದಾಗ ನಾವು ಕಲಿಯುತ್ತೇವೆ, ಆದರೆ ವಯಸ್ಸಾದಾಗ ಅರ್ಥ ಮಾಡಿಕೊಳ್ಳುತ್ತೇವೆ. ಯೌವನದಲ್ಲಿ ಎಲ್ಲಾ ಬಾಗಿಲುಗಳು ಹೊರಮುಖವಾಗಿ ತೆರೆದಿದ್ದರೆ, ಇಳಿ ವಯಸ್ಸಿನಲ್ಲಿ ಒಳಮುಖವಾಗಿ ತೆರೆಯುತ್ತವೆ. ನಿಜವಾದ ಅಂತರಂಗದ ದರ್ಶನವಾಗುವುದು ಆ ಸಮಯದಲ್ಲೇ! ವಯಸ್ಸಾದಾಗ ನಾವು ನಗುವುದನ್ನು ನಿಲ್ಲಿಸಬೇಕಿಲ್ಲ, ನಗುವುದನ್ನು ನಿಲ್ಲಿಸಿದಾಗ ನಮಗೆ ವಯಸ್ಸಾಗಿಬಿಡುತ್ತದೆ. ಆಶಾವಾದ ನಿಜವಾದ ಜೀವನವಾದರೆ, ನಿರಾಶಾವಾದ ಸಾವು. ಈ ಸಾವು ಅನ್ನುವುದು ನಿರ್ಲಜ್ಜ. ನಾವು ಕರೆದರೂ ಬರುತ್ತದೆ, ಕರೆಯದಿದ್ದರೂ ಬರುತ್ತದೆ. ಹಾಗಾಗಿ ಸಾವನ್ನು ಏಕೆ ನಾವಾಗಿ ಬಯಸಬೇಕು? ಸಾಯುವುದು ಸುಲಭ, ಆದರೆ ಬದುಕುವುದಿದೆಯಲ್ಲಾ, ಅದು ಕಷ್ಟ. ಕಷ್ಟವಾದರೂ 'ಬದುಕುವ' ಛಲ ಉಳಿಸಿಕೊಳ್ಳಬೇಕು. ಸಾವು ತಾನಾಗಿ ಬಂದಾಗ ಸಂತೋಷದಿಂದ ಸ್ವಾಗತಿಸಿ, 'ಬಾ, ಮೃತ್ಯುವೇ, ಬಾ. ನಾನು ಸಿದ್ಧನಿದ್ದೇನೆ' ಎಂದು ಹೇಳೋಣ. ಹಿರಿಯರೊಬ್ಬರು ಬದುಕಿಗೆ ವಿದಾಯ ಮತ್ತು ಪಂಚಭೂತಗಳಿಗೆ ಕೃತಜ್ಞತೆ ಸಲ್ಲಿಸುವ ಶ್ಲೋಕವನ್ನು ಉದ್ಧರಿಸುತ್ತಿದ್ದು, ಅದರ ಅರ್ಥ ಹೀಗಿದೆ: 'ತಾಯಿಯಾದ  ಭೂಮಿಯೇ, ತಂದೆಯಾದ ವಾಯುವೇ, ಸ್ನೇಹಿತನಾದ ತೇಜಸ್ಸೇ, ಬಂಧುವಾದ ಜಲವೇ, ಸಹೋದರನಾದ ಆಕಾಶವೇ, ನಿಮ್ಮೆಲ್ಲರಿಗೂ ಇದೋ ನನ್ನ ಕೊನೆಯ ನಮಸ್ಕಾರ. ನಿಮ್ಮ ಸಂಗದಿಂದ ಹುಟ್ಟಿದ, ಪುಣ್ಯಪ್ರಭಾವದಿಂದ ಪ್ರಾಪ್ತವಾದ, ನಿರ್ಮಲ ಜ್ಞಾನದಿಂದ ಪತ್ನಿ ಪುತ್ರಾದಿ ಸಮಸ್ತ ಮೋಹಜಾಲವನ್ನು ಕಳೆದುಕೊಂಡು ಪರಬ್ರಹ್ಮನಲ್ಲಿ ವಿಲೀನನಾಗಿ ಹೋಗುವೆನು'. ಪಂಚಭೂತಗಳಿಂದ ಈ ದೇಹ ಉತ್ಪತ್ತಿಯಾಗಿದೆ. ಪಂಚಭೂತಗಳ ಸಹಾಯದಿಂದಲೇ ಅಭಿವೃದ್ಧಿ ಹೊಂದಿದ್ದೇವೆ ಎಂಬ ಕೃತಜ್ಞತೆಯ ಭಾವದಿಂದ ವಿದಾಯ ಹೇಳುವುದು ಎಷ್ಟೊಂದು ಸಮಂಜಸವಾಗಿದೆ! ಪರಮಾತ್ಮ ಯಾವ ಜೀವಿ ಎಷ್ಟು ಕಾಲ ಬಾಳಬೇಕು, ಬದುಕಬೇಕು ಎಂದು ನಿರ್ಧರಿಸಿರುತ್ತಾನೆ. ಅದನ್ನು ಮೀರಿ ಮೊದಲೇ ಸಾಯುವುದೆಂದರೆ ನಮ್ಮ ಬದುಕಿನ ರೀತಿ ಸರಿಯಿರದೆ ಅಪಮೃತ್ಯು ಹೊಂದಿದಂತೆಯೇ, ಅವನ ಇಚ್ಛೆಯನ್ನು ಮೀರಿದಂತೆಯೇ ಎಂಬುದನ್ನು ಅರ್ಥ ಮಾಡಿಕೊಂಡರೆ, ನಾವು ಸರಿಯಾದ ರೀತಿಯಲ್ಲಿ ಬದುಕಬಹುದೇನೋ! ಎಲ್ಲರಿಗೂ ವಯಸ್ಸಾಗಿಯೇ ಆಗುತ್ತದೆ, ಅದರೆ 'ಹೆಚ್ಚು ಕಾಲ' ಬದುಕುವವರು ಎಷ್ಟು ಜನ? ಈ ಹೆಚ್ಚು ಕಾಲ ಎಂಬ ಪದದಲ್ಲಿ 'ಸತ್ತ ಮೇಲೂ ಜನಮಾನಸದಲ್ಲಿ ಬದುಕಿರುವವರೂ' ಸೇರುತ್ತಾರೆ. ಈಗಲೂ ಕಾಲ ಮಿಂಚಿಲ್ಲ. ಉಳಿದ ಬಾಳನ್ನಾದರೂ 'ಸರಿಯಾಗಿ' ಬಾಳಲು ಪ್ರಯತ್ನಿಸಿದರೆ ದೇವರ ಇಚ್ಛೆಯನ್ನು ಗೌರವಿಸಿದಂತೆ ಆಗುತ್ತದೆ. 
"ವೃದ್ಧಾಪ್ಯವೆಂಬುದು ಜೀವನದ ಕಿರೀಟ, ಗೌರವಿಸೋಣ; ಜೀವನನಾಟಕದ ಕೊನೆಯ ಅಂಕ, ಚೆನ್ನಾಗಿಸೋಣ."
-ಕ.ವೆಂ.ನಾಗರಾಜ್.
**************
10.3.2014ರ ಜನಮಿತ್ರ ಪತ್ರಿಕೆಯ 'ಚಿಂತನ' ಅಂಕಣದಲ್ಲಿ ಪ್ರಕಟಿತ: