ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಡಿಸೆಂಬರ್ 18, 2012

ಸಮನ್ವಯದ ಕೊಂಡಿಗಳಾಗೋಣ


     ಲಭ್ಯ ಸಾಹಿತ್ಯಗಳಲ್ಲಿ ಅತಿ ಪುರಾತನವೆಂದು ಪರಿಗಣಿಸಲ್ಪಟ್ಟಿರುವ ವೇದಗಳಲ್ಲಿ ಒಟ್ಟು 20,379 ಮಂತ್ರಗಳಿವೆಯೆಂದು ಹೇಳಲಾಗಿದೆ. ಋಗ್ವೇದ ಸಂಹಿತೆಯಲ್ಲಿ 10,552 ಮಂತ್ರಗಳು, ಯಜುರ್ವೇದ ಸಂಹಿತೆಯಲ್ಲಿ 1,975 ಮಂತ್ರಗಳು, ಸಾಮವೇದ ಸಂಹಿತೆಯಲ್ಲಿ 1,875 ಮಂತ್ರಗಳು ಮತ್ತು ಅಥರ್ವವೇದ ಸಂಹಿತೆಯಲ್ಲಿ 5,977 ಮಂತ್ರಗಳಿವೆ. ನಂತರದಲ್ಲಿ ರಚಿತಗೊಂಡ ಪುರಾಣಗಳು, ಪುಣ್ಯ ಕಥೆಗಳು, ರಾಮಾಯಣ, ಮಹಾಭಾರತಗಳನ್ನು ವೇದ ಸಾಹಿತ್ಯದೊಡನೆ ಥಳುಕು ಹಾಕಿ ಚರ್ಚೆ, ವಿಮರ್ಶೆ ಮಾಡುವುದು ಸೂಕ್ತವಾಗಲಾರದು. ಅವುಗಳಿಗೆ ವೇದವೇ ಆಧಾರವೆನಿಸಿದರೂ, ಅವುಗಳಲ್ಲಿ ಕಂಡು ಬರುವ ಎಲ್ಲಾ ಸಂಗತಿಗಳೂ ವೇದದ ಆಶಯವೇ ಆಗಿವೆ ಎನ್ನಲಾಗದು. ವೇದದ 20,379 ಮಂತ್ರಗಳಲ್ಲಿ ಎಲ್ಲಿಯೂ, ಹುಟ್ಟಿನಿಂದ ಬರುವ ಜಾತಿಯ ಕುರಿತು ಉಲ್ಲೇಖಗಳು, ಪ್ರಮಾಣಗಳು ಕಾಣಲಾರದು. ಮಂತ್ರಗಳಲ್ಲಿ ಬ್ರಾಹ್ಮಣ, ವೈಶ್ಯ, ಶೂದ್ರ, ಕ್ಷತ್ರಿಯ, ದಾಸ, ದಸ್ಯು ಇಂತಹ ಪದಗಳ ಬಳಕೆಯಾಗಿರುವುದು ಕಂಡು ಬಂದರೂ ಅವು ಹುಟ್ಟಿನಿಂದ ಬಂದ ಜಾತಿ ಸೂಚಕ ಪದಗಳಾಗಿವೆಯೆಂದು ಹೇಳಲಾಗುವುದಿಲ್ಲ. ನಮ್ಮ ಕಲ್ಪನೆಗೆ ಮೀರಿದ ಹಿಂದಿನ ಯಾವುದೋ ಒಂದು ಕಾಲಘಟ್ಟದಲ್ಲಿ ವರ್ಣ ವ್ಯವಸ್ಥೆ ವಿರೂಪಗೊಂಡು ಪ್ರಚಲಿತ ಜಾತಿ ಪದ್ಧತಿ ಮೈತಳೆದು ಬಂದಿರಬಹುದು. ವೇದಸಾಹಿತ್ಯದ ಮೂಲಪುರುಷನೆಂದು, ಗುರುಗಳ ಗುರುವೆಂದು ಕರೆಯಲ್ಪಡುವ ವ್ಯಾಸ ಮಹರ್ಷಿಯೇ ಹುಟ್ಟಿನಿಂದ ಬ್ರಾಹ್ಮಣನಲ್ಲ, ಅದು ಗಳಿಸಿದ ಬ್ರಾಹ್ಮಣಿಕೆ. ಸಪ್ತರ್ಷಿಗಳೂ  ಸಹ ಹುಟ್ಟಿನ ಬ್ರಾಹ್ಮಣರಲ್ಲವೆಂಬುದು ವಿಶೇಷ. ಇವಲ್ಲದೆ ಇಂತಹ ಅನೇಕಾನೇಕ ದೃಷ್ಟಾಂತಗಳು ಕಾಣಸಿಗುತ್ತವೆ.  'ಶಾಸ್ತ್ರಾದ್ರೂಢಿರ್ಬಲೀಯಸಿ' ಎಂಬ ಮಾತು ಸತ್ಯ. ಶಾಸ್ತ್ರಗಳಿಗಿಂತ ರೂಢಿಗತ ಸಂಪ್ರದಾಯ ಹೆಚ್ಚು ಬಲಶಾಲಿಯಂತೆ. ಇಂತಹ ರೂಢಿಗತವಾಗಿ ಬಂದ ಜಾತಿ ಪದ್ಧತಿ ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಲ್ಲ. ಇತರ ಧರ್ಮಗಳಲ್ಲೂ ಇವು ಪ್ರಚಲಿತವಿವೆ. ರೂಢಿಗತವಾಗಿ ಬಂದ ಸಂಪ್ರದಾಯಗಳನ್ನೇ ಧರ್ಮವೆನ್ನುತ್ತಾ, ಅದಕ್ಕೆ ಪೋಷಕ ಅಂಶಗಳನ್ನು ಸೇರಿಸುತ್ತಾ ಬಂದ ಸಂಪ್ರದಾಯವಾದಿಗಳು ಈ ಸ್ಥಿತಿಗೆ ಕಾರಣವೆಂದರೆ ತಪ್ಪಾಗಲಾರದು. ಹೊಸ ಹೊಸ ಸಂಪ್ರದಾಯಗಳು ದಿನೇ ದಿನೇ ಜಾರಿಗೆ ಬರುತ್ತಲೇ ಇವೆ, ಪ್ರಬಲವಾಗುತ್ತಲೂ ಇವೆ. ಪ್ರತಿ ತಿಂಗಳ ಚತುರ್ಥಿ ದಿನದಂದು ಮಾಡಲಾಗುತ್ತಿರುವ ಸಂಕಷ್ಟಹರ ಗಣಪತಿ ಪೂಜೆ ಇದಕ್ಕೆ ತಾಜಾ ಉದಾಹರಣೆ. ಈ ಸಂಪ್ರದಾಯ ಆರಂಭವಾದ ನಂತರದಲ್ಲಿ ಅನೇಕ ಸಂಕಷ್ಟಹರ ಗಣಪತಿ ದೇವಾಲಯಗಳು ನಿರ್ಮಾಣಗೊಂಡಿವೆ/ಗೊಳ್ಳುತ್ತಿವೆ. ಒಬ್ಬೊಬ್ಬ ದೇವಮಾನವರು/ದೇವಮಾನವರೆನಿಸಿಕೊಂಡವರು  ಪ್ರಬುದ್ಧಮಾನಕ್ಕೆ ಬರುತ್ತಿದ್ದಂತೆ ಅವರ ವಿಚಾರಗಳಿಗನುಗುಣವಾಗಿ ಹೊಸ ಹೊಸ  ಸಂಪ್ರದಾಯಗಳು, ಹೊಸ ಹೊಸ ಜಾತಿಗಳು, ಹೊಸ ಹೊಸ ದೇವಾಲಯಗಳು ಹುಟ್ಟಿವೆ, ಹುಟ್ಟುತ್ತಲಿವೆ, ಮುಂದೆಯೂ ಹುಟ್ಟುತ್ತವೆ. ಇವು ಎಲ್ಲಾ ಮತ/ಧರ್ಮಗಳಿಗೂ ಅನ್ವಯಿಸುವ ವಿಚಾರ. ಸಮಾಜ ಸುಧಾರಣೆಯ ದೃಷ್ಟಿಯಿಂದ ಹೊಸ ಸಂಪ್ರದಾಯಗಳು, ಜಾತಿಗಳು ಜನಿಸಿದರೂ, ಅನುಸರಿಸುವವರು ವಿಚಾರಕ್ಕೆ ಪ್ರಾಧಾನ್ಯತೆ ಕೊಡದೆ ಕೇವಲ ಆಚಾರಕ್ಕೆ ಪ್ರಾಧಾನ್ಯತೆ ಕೊಡುವ ಪರಿಸ್ಥಿತಿ ಇರುವವರೆಗೂ ಸುಧಾರಣೆ ಕನಸಿನ ಮಾತಾಗಿ ಉಳಿಯುತ್ತದೆ. 
      ಇಂದಿನ ಪರಿಸ್ಥಿತಿ ಸರಿಪಡಿಸಲು ದೂಷಿಸುವವರೊಂದಿಗೆ, ದೂಷಿಸಲ್ಪಡುವವರೂ ಪೂರ್ವಾಗ್ರಹ ಪೀಡಿತರಾಗದೆ ಒಳ್ಳೆಯ ರೀತಿ-ನೀತಿಗಳ ವ್ಯವಸ್ಥೆ ತರಲು ಕೈಜೋಡಿಸುವುದು ಅಗತ್ಯವಾಗಿದೆ. ಏಕೆಂದರೆ ಈಗಿರುವ ಈ ಇಬ್ಬರೂ ಇಂದಿನ ಈ ಸ್ಥಿತಿಗೆ ಕಾರಣರಲ್ಲ. ಯಾರೋ ಮಾಡಿದ ತಪ್ಪಿಗೆ ಇನ್ನು ಯಾರೋ ಮತ್ಯಾರನ್ನೋ ದೂಷಿಸುವುದರಿಂದ ಪರಿಸ್ಥಿತಿ ಸುಧಾರಿಸಬಹುದೆಂದು ನಿರೀಕ್ಷಿಸಲಾಗದು. ಪರಸ್ಪರರ ದೂಷಣೆಯಿಂದ ದೊರಕುವ ಫಲವೆಂದರೆ ಮನಸ್ಸುಗಳು ಕಹಿಯಾಗುವುದು, ಕಲುಷಿತಗೊಳ್ಳುವುದು ಅಷ್ಟೆ. ಸೈದ್ಧಾಂತಿಕವಾಗಿ ಯಾವುದೇ ವಿಚಾರವನ್ನು ಒಪ್ಪಬೇಕು ಅಥವ ವಿರೋಧಿಸಬೇಕೇ ಹೊರತು, ಅದು ವ್ಯಕ್ತಿಗಳ ನಡುವಣ ದ್ವೇಷವಾಗಿ ತಿರುಗಬಾರದು. ಎಲ್ಲರೂ ಒಂದೇ ರೀತಿಯಲ್ಲಿ ಯೋಚಿಸುವವರಾದರೆ, ನಡೆಯುವುದಾದರೆ ಈ ಜಗತ್ತು ನಡೆಯುವುದಾದರೂ ಹೇಗೆ? ನಮ್ಮ ನಮ್ಮ ವಿಚಾರಗಳನ್ನು ಬಿಟ್ಟುಕೊಡಬೇಕಿಲ್ಲ, ಇತರರ ವಿಚಾರಗಳನ್ನು ಒಪಲೇಬೇಕೆಂದಿಲ್ಲ. ಅವರವರ ವಿಚಾರ ಅವರಿಗಿರಲಿ. ನನ್ನ ವಿಚಾರವೇ ಸರಿ, ಅದನ್ನು ಎಲ್ಲರೂ ಒಪ್ಪಲೇಬೇಕೆಂಬ ಆಗ್ರಹ ಮಾತ್ರ ಸರಿಯೆನಿಸುವುದಿಲ್ಲ. ಕರುಣಾಮಯಿ ಪರಮಾತ್ಮ ಜೀವಜಗತ್ತಿನ ವಿಚಾರದಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಇವನು ಆಸ್ತಿಕ, ನನ್ನನ್ನು ಹಾಡಿ ಹೊಗಳುತ್ತಾನೆ, ಪೂಜಿಸುತ್ತಾನೆ ಎಂದು ಅವನಿಗೆ ವಿಶೇಷ ಅನುಗ್ರಹ ಕೊಡುವುದಿಲ್ಲ. ಅವನು ನಾಸ್ತಿಕ, ನನ್ನನ್ನು ನಂಬುವುದಿಲ್ಲ, ಹೀಗಳೆಯುತ್ತಾನೆ ಎಂದುಕೊಂಡು ಅವನಿಗೆ ಅನ್ನ, ನೀರು ಸಿಗದಂತೆ ಮಾಡುವುದೂ ಇಲ್ಲ. ಬಿಸಿಲು, ಮಳೆ, ಗಾಳಿ, ಬೆಂಕಿ, ಆಕಾಶಗಳೂ ಸಹ ಅನುಸರಿಸುವುದು ಪರಮಾತ್ಮನ ತಾರತಮ್ಯವಿಲ್ಲದ ಭಾವಗಳನ್ನೇ ಅಲ್ಲವೇ? ಹೀಗಿರುವಾಗ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸರಿ, ತಪ್ಪುಗಳ ವಿವೇಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ, ಪೂರ್ವಾಗ್ರಹಗಳನ್ನು ಬದಿಗಿಟ್ಟು ಚಿಂತನೆ ಮಾಡುವ ಮನೋಭಾವ ಮೂಡಿದರೆ ಅದು ನಿಜಕ್ಕೂ ಒಂದು ವೈಚಾರಿಕ ಕ್ರಾಂತಿಯೆನಿಸುತ್ತದೆ. ಒಂದು ನಾಣ್ಯಕ್ಕೆ ಎರಡು ಮುಖಗಳಿರುತ್ತವೆ. ಎರಡು ಮುಖಗಳೂ ವಿರುದ್ಧ ದಿಕ್ಕಿನಲ್ಲಿದ್ದರೂ ಪರಸ್ಪರ ಪೂರಕವಾಗಿರುತ್ತವೆ.  ದೂಷಿಸುವವರು ಮತ್ತು ದೂಷಿಸಲ್ಪಡುವವರ ನಡುವಣ ಸಮನ್ವಯದ ಕೊಂಡಿಗಳಾಗೋಣ. ಇದು ಬಹಳ ಕಷ್ಟದ ಕೆಲಸ, ಧೈರ್ಯವೂ ಇರಬೇಕು. ಏಕೆಂದರೆ ಇಂತಹವರು ಎರಡೂ ಕಡೆಗಳಿಂದ ಪೆಟ್ಟು ತಿನ್ನುತ್ತಾರೆ, ದೂಷಣೆಗೊಳಗಾಗುತ್ತಾರೆ. ಆದರೆ ಒಂದೊಮ್ಮೆ ಇಂತಹ ಕೊಂಡಿಗಳು ಬಲಶಾಲಿಯಾದರೆ ಎರಡೂ ಕಡೆಯವರು ಇವರ ಮಾತು ಕೇಳುತ್ತಾರೆ, ಸಮಾಜದಲ್ಲಿ ಸಾಮರಸ್ಯದ ವಾತಾವರಣ ನಿರ್ಮಾಣವಾಗುತ್ತದೆ. ವೈಚಾರಿಕ ಸಂಘರ್ಷವಿದ್ದರೂ ಅದು ವ್ಯಕ್ತಿಗತ ಸಂಘರ್ಷಕ್ಕೆ ತಿರುಗದಂತೆ ಎಚ್ಚರ ವಹಿಸುವುದು ಆರೋಗ್ಯಕರ ಸಮಾಜದ ಲಕ್ಷಣ. ಯಾವುದು ಒಳ್ಳೆಯದೋ ಅದನ್ನು ಸೀಕರಿಸುವ ಮನಸ್ಸು ಹೊಂದೋಣ. ಪೂರ್ವಾಗ್ರಹ ಪೀಡಿತರಾಗದಿರೋಣ. ಒಳ್ಳೆಯ ಸಂಗತಿಗಳು, ವಿಚಾರಗಳು ಯಾರಿಂದಲೇ ಬರಲಿ, ಎಲ್ಲಿಂದಲೇ ಬರಲಿ ಅದನ್ನು ಸ್ವಾಗತಿಸೋಣ.
     ಸಮಾನತೆಯ ಅಂಶವನ್ನು ಒತ್ತಿ ಹೇಳುವ ಕೆಲವು ವೇದಮಂತ್ರಗಳನ್ನು ಉದಾಹರಿಸುವೆ. ಮಂತ್ರಗಳ ಅರ್ಥ ವಿವರಣೆ ಪಂ. ಸುಧಾಕರ ಚತುರ್ವೇದಿಯವರದು.


ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ | ಮಧ್ಯಮಾಸೋ ಮಹಸಾ ವಿವಾವೃಧುಃ || ಸುಜಾತಾಸೋ ಜನುಷಾ ಪೃಶ್ನಿಮಾತರೋ | ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ || [ಋಗ್. ೫.೫೯.೬]
     ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ. ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ.


ಅಜ್ಯೇಷ್ಠಾಸೋ ಅಕನಿಷ್ಠಾಸ ಏತೇ | ಸಂ ಭ್ರಾತರೋ ವಾವೃಧುಃ 
ಸೌಭಗಾಯ || ಯುವಾ ಪಿತಾ ಸ್ವಪಾ ರುದ್ರ ಏಷಾಂ | ಸುದುಘಾ ಪೃಶ್ನಿಃ ಸುದಿನಾ  ಮರುದ್ಭ್ಯಃ || [ಋಗ್. ೫.೬೦.೫]
     ಈ ಮಾನವರು ತಮಗಿಂತ ಉಚ್ಛರನ್ನು ಹೊಂದಿಲ್ಲ, ನೀಚರನ್ನೂ ಹೊಂದಿಲ್ಲ, ಇವರು ಪರಸ್ಪರ ಅಣ್ಣ ತಮ್ಮಂದಿರು, ಸೌಭಾಗ್ಯಕ್ಕಾಗಿ ಮುಂದೆ ಸಾಗುತ್ತಾರೆ. ಆತ್ಮರಕ್ಷಕನೂ, ಅಜರನೂ ಆದ, ಪಾಪಿಗಳಿಗೆ ದಂಡ ವಿಧಿಸುವ ಭಗವಂತನು, ಇವರೆಲ್ಲರ ತಂದೆ. ಭೂಮಿದೇವಿ, ಮರ್ತ್ಯರಾದ ಈ ಮಾನವರಿಗಾಗಿ ಶುಭದಿನಗಳನ್ನು ತೋರಿಸುವವಳೂ, ಉತ್ತಮ ಜೀವನಪ್ರದ ರಸಗಳನ್ನು ಕರೆಯುವವಳೂ ಆಗಿದ್ದಾಳೆ.


ಸಮಾನೋ ಮಂತ್ರಃ ಸಮಿತಿಃ ಸಮಾನಂ ವ್ರತಂ ಸಹ ಚಿತ್ತಮೇಷಾಂ | ಸಮಾನೇನ ವೋ ಹವಿಷಾ ಜುಹೋಮಿ ಸಮಾನಂ ಚೇತೋ ಅಭಿಸಂವಿಶದ್ವಮ್ || [ಅಥರ್ವ.೬.೬೪.೨]
     ಈ ನಿಮ್ಮೆಲ್ಲರಿಗೂ ಮಂತ್ರವು ಸಮಾನವಾಗಿದೆ. ಸಮಿತಿಯೂ ಸಮಾನವಾಗಿದೆ. ವ್ರತವೂ ಸಮಾನವೇ. ನಿಮ್ಮ ಮನಸ್ಸು ಸಹಕರಿಸುವಂತಹುದಾಗಲಿ. ನಿಮ್ಮೆಲ್ಲರನ್ನೂ ಸಮಾನವಾದ ಭೋಗ್ಯವಸ್ತುವಿನೊಂದಿಗೆ ಯುಕ್ತರನ್ನಾಗಿ ಮಾಡುತ್ತೇನೆ. ಸಮಾನವಾದ ಆಹಾರ-ಪಾನೀಯಗಳನ್ನೇ ನೀಡುತ್ತೇನೆ. 


ನಮೋ ಜ್ಯೇಷ್ಠಾಯ ಚ ಕನಿಷ್ಠಾಯ ಚ ನಮಃ ಪೂರ್ವಜಾಯ ಚಾಪರಜಾಯ ಚ ನಮೋ ಮಧ್ಯಮಾಯ ಚಾಪಗಲ್ಫಾಯ ಚ ನಮೋ ಜಘನ್ಯಾಯ ಚ ಬುದ್ಧ್ಯಾಯ ಚ || [ಯಜು. ೧೬-೩೨]
     ಗುಣ-ಕರ್ಮ ಸ್ವಭಾವಗಳಿಂದ ದೊಡ್ಡವನಾಗಿರುವವನಿಗೆ ನಮಸ್ಕಾರ. ಹಾಗೆಯೇ ಗುಣ-ಕರ್ಮ ಸ್ವಭಾವಗಳಿಂದ ಚಿಕ್ಕವನಾಗಿರುವವನಿಗೂ ನಮಸ್ಕಾರ. ಮತ್ತು, ವಯಸ್ಸಿನಲ್ಲಿ ಹಿರಿಯನಿಗೆ ನಮಸ್ಕಾರ. ಹಾಗೂ ವಯಸ್ಸಿನಲ್ಲಿ ಕಿರಿಯನಿಗೂ ನಮಸ್ಕಾರ. ಅಂತೆಯೇ ನಡುವಯಸ್ಕನಿಗೆ ನಮಸ್ಕಾರ. ಅದೇ ರೀತಿ, ಅವಿಕಸಿತ ಶಕ್ತಿಯುಳ್ಳವನಿಗೆ ನಮಸ್ಕಾರ. ಹೀನ ಸ್ಥಿತಿಯಲ್ಲಿರುವವನಿಗೂ, ವಿಶಾಲ ಮನಸ್ಕನಿಗೂ ನಮಸ್ಕಾರ.


ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ || [ಅಥರ್ವ.೬.೬೪.೩]
     ನಿಮ್ಮ ಹಿತವು ಒಂದಿಗೇ ಆಗುವಂತೆ, ನಿಮ್ಮ ಮನಃಕಾಮನೆ ಸಮಾನವಾಗಿರಲಿ. ನಿಮ್ಮ ಹೃದಯಗಳು ಸಮಾನವಾಗಿರಲಿ. ನಿಮ್ಮ ಮನಸ್ಸುಗಳು ಸಮಾನವಾಗಿರಲಿ.


ಅಯಂ ನಾಭಾ ವದತಿ ವಲ್ಗು ವೋ ಗೃಹೇ | ದೇವಪುತ್ರಾ ಋಷಯಸ್ತಚ್ಛೃಣೋತನ || ಸುಬ್ರಹ್ಮಣ್ಯಮಂಗೀರಸೋ ವೋ ಅಸ್ತು | ಪ್ರತಿಗೃಭ್ಣೀತ ಮಾನವಂ ಸುಮೇಧಸಃ || [ಋಗ್.೧೦.೬೨.೪]
     ಭಗವಂತನ ಮಕ್ಕಳೇ, ಪ್ರಗತಿಶೀಲರೇ, ತತ್ತ್ವದರ್ಶನಸಮರ್ಥರೇ, ಉತ್ತಮ ಬುದ್ಧಿಸಂಪನ್ನರೇ, ಆತ್ಮನಲ್ಲಿ ರಮಿಸುವವರೇ, ದೇಹಧಾರಿಗಳಿಗೆ ದಾನ ಮಾಡುವ ಉದಾರಾತ್ಮರೇ, ವಿಶ್ವಬ್ರಹ್ಮಾಂಡಕ್ಕೆ ಕೇಂದ್ರಭೂತನಾದ ಈ ಪ್ರಭುವು, ನಿಮ್ಮ ಗೃಹಗಳಲ್ಲಿ/ಗ್ರಾಹ್ಯನಾದ ಆತ್ಮನಲ್ಲಿ ವ್ಯಾಪಕನಾಗಿ ಒಳ್ಳೆಯದನ್ನು ಪ್ರೇರಿಸುತ್ತಿದ್ದಾನೆ. ಆ ಒಳಕರೆಯನ್ನು ಆಲಿಸಿರಿ. ನಿಮ್ಮ ವೇದಜ್ಞಾನ ಕಲ್ಯಾಣಕಾರಿಯಾಗಲಿ. ಮಾನವೀಯ ಜ್ಞಾನ ಗ್ರಹಿಸಿರಿ.


ದ್ಯೌರ್ವಃ ಪಿತಾ ಪೃಥಿವಿ ಮಾತಾ ಸೋಮೋ ಭ್ರಾತಾದಿತಿ ಸ್ವಸಾ | ಅದೃಷ್ಟಾ ವಿಶ್ವದೃಷ್ಟಾಸ್ತಿಷ್ಟತೇಳಯತಾ ಸು ಕಮ್ || 
[ಋಗ್.೧.೧೯೧.೬]
     ಮಾನವರೇ, ಜ್ಯೋತಿರ್ಮಯ ಪರಮಾತ್ಮನು ತಂದೆ, ಭೂಮಿಯೇ ತಾ, ವಿವೇಕವೇ ಸೋದರ, ಅಖಂಡತೆ/ಪ್ರಾಮಾಣಿಕತೆ ಬಾಳಿಗೊದಗಿದ ಸೋದರಿ, ಕಣ್ಣಿಗೆ ಕಾಣುವವರೂ, ಕಾಣದಿರುವವರೂ ಸುಖದಿಂದ ಉಪಭೋಗಿಸಿರಿ, ಒಳ್ಳೆಯ ರೀತಿಯಲ್ಲಿ ಬಾಳಿರಿ.


ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ | ಸರ್ವಭೂತೇಷು ಚಾತ್ಮಾನಂ ತತೋ ನ ವಿ ಚಿಕಿತ್ಸತಿ || [ಯಜು.೪೦.೬.]
     ಯಾರು ಸಮಸ್ತ ಪ್ರಾಣಿಗಳೂ ತಮ್ಮಂತೆಯೇ ಇಚ್ಛಾ-ದ್ವೇಷ-ಪ್ರಯತ್ನ-ಸುಖ-ದುಃಖ-ಜ್ಞಾನಗಳನ್ನು ಹೊಂದಿದ ಆತ್ಮಗಳೇ ಎಂದು ಭಾವಿಸುವರೋ, ತಮ್ಮಂತೆಯೇ ಎಂದು ಕಂಡುಕೊಳ್ಳುವರೋ ಅವರು ಸಂದೇಹಗಳಿಗೆ ಸಿಲುಕುವುದಿಲ್ಲ.


ಯೇನ ದೇವಾ ನ ವಿಯಂತಿ ನೋ ಚ ವಿದ್ವಿಷತೇ ಮಿಥಃ | ತತ್ಕೃಣ್ಮೋ ಬ್ರಹ್ಮ ವೋ ಗೃಹೇ ಸಂಜ್ಞಾನಂ ಪುರುಷೇಭ್ಯಃ || 
[ಅಥರ್ವ.೩.೩೦.೪.]
     ಯಾವುದರಿಂದ ಉದಾರಾತ್ಮರಾದ ವಿದ್ವಾಂಸರು, ಒಡೆದು ಬೇರೆ ಬೇರೆಯಾಗುವುದಿಲ್ಲವೋ ಮತ್ತು ಪರಸ್ಪರ ವೈರ ಕಟ್ಟಿಕೊಳ್ಳುವುದಿಲ್ಲವೋ ಅಂತಹ ಅರಿವು ಕೊಡುವ ವೇದಜ್ಞಾನವನ್ನು ಮಾನವರಾದ ನಿಮ್ಮ ಸಲುವಾಗಿ ಉಂಟುಮಾಡುತ್ತೇವೆ.


     ಸದ್ವಿಚಾರಿಗಳಾಗೋಣ, ಸರಿಯೆಂದು ಕಂಡುದನ್ನು ಅನುಸರಿಸೋಣ, ನಿಜಮಾನವರಾಗೋಣ.
-ಕ.ವೆಂ. ನಾಗರಾಜ್.
[ಚಿತ್ರಕೃಪೆ: ರಾಯಲ್ಟಿ ಮುಕ್ತ ಕ್ಲಿಪ್ ಕಲೆ: www.dreamstime.com]

7 ಕಾಮೆಂಟ್‌ಗಳು:

  1. ಸರ್ ,

    ತುಂಬಾ ಒಳ್ಳೆಯ ಲೇಖನ ಸರ್. ಎಲ್ಲ ನಮ್ಮ ಅರ್ಧಂಬರ್ಧ ಧರ್ಮ ತಿಳುವಳಿಕೆ ಅಥವಾ ಹೇರುವಿಕೆ ಯಿಂದ ಉಂಟಾದ ಗೊಜಲಾಗಿದೆ.

    ಪ್ರತ್ಯುತ್ತರಅಳಿಸಿ
  2. Gopinath S K
    Yesterday 9:59 PM
    Well said sir.. The caste discrimination is taking a vicious path and people are
    taking wrong advantage of the same. Though it is not mentioned in any Vedas earlier, people have created it from earlier days for their personal advantages and now it has become irreversible..!!

    ಪ್ರತ್ಯುತ್ತರಅಳಿಸಿ
  3. ವಿವರಣೆಗಳು ಚೆನ್ನಾಗಿವೆ.
    "ಸರ್ವ ಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ" ಆಗಬೇಕಲ್ಲವೇ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ವೇದಭಾಷ್ಯ ಸಂಪುಟದಲ್ಲಿ ನೋಡಿದೆ. ಈಗ ಪ್ರಕಟಿತವಾದಂತೆ ಇದೆ. ಧನ್ಯವಾದ, ಕೃಷ್ಣಕುಮಾರರೇ.

      ಅಳಿಸಿ
  4. ನಮಸ್ಕಾರ ನಾಗರಾಜರೇ.
    ಈಶಾವಾಸ್ಯೋಪನಿಷತ್ತು ಎಂದರೆ ಯಜುರ್ವೇದದ ನಲುವತ್ತನೆಯ ಅಧ್ಯಾಯವೇ ಅಲ್ಲವೇ? ಇಲ್ಲಿ ನೋಡಿರಿ: http://www.shaivam.org/daily-prayers/prayer-upanishad-18.htm

    ಪ್ರತ್ಯುತ್ತರಅಳಿಸಿ
  5. ನಮಸ್ತೆ ಕೃಷ್ಣಕುಮಾರರೇ. ವೇದಗಳಿಗೆ ಸಾಯಣರು ಸಂಸ್ಕೃತದಲ್ಲಿ ಭಾಷ್ಯ ಬರೆದದ್ದು ತಿಳಿದದ್ದೇ. ನಂತರದಲ್ಲಿ 1946ರಲ್ಲಿ ಮೈಸೂರು ಮಹಾರಾಜರು ಋಗ್ವೇದಕ್ಕೆ ಸಾಯಣರ ಭಾಷ್ಯ ಆಧರಿಸಿ ಕನ್ನಡದಲ್ಲಿ ಭಾಷ್ಯ ಬರೆಸುವ ಕಾರ್ಯ ಮಾಡಿದ್ದರು. ಬೆಂಗಳೂರಿನ ವೇದಭಾಷ್ಯ ಪ್ರಕಾಶನ ಸಮಿತಿಯವರು ನಾಲ್ಕೂ ವೇದಗಳಿಗೆ ಕನ್ನಡದಲ್ಲಿ ಭಾಷ್ಯ ಬರೆಸುವ ಕೆಲಸ ನಡೆಸಿದ್ದಾರೆ. ಈಗಾಗಲೇ 18 ಸಂಪುಟಗಳು ಪ್ರಕಟವಾಗಿವೆ. ಪಂ. ಸುಧಾಕರ ಚತುರ್ವೇದಿಯವರು ಪ್ರಧಾನ ಸಂಪಾದಕರು, ವೇದತರಂಗ ಪತ್ರಿಕೆಯ ಸಂಪಾದಕರಾದ ಶ್ರೀ ಶ್ರುತಿಪ್ರಿಯರವರು ಸಂಪಾದಕರು, ಶ್ರೀಯುತ ವೇದಾಧ್ಯಾಯಿ ಸುಧಾಕರ ಶರ್ಮ, ಪಂ. ಉಪೇಂದ್ರ ಭೂಪಾಲ, ಡಾ. ಸುಧಾಕರ ಶಾಸ್ತ್ರಿ ಮತ್ತು ಡಾ. ವೀ.ವೆಂಕಟೇಶರು ಸದಸ್ಯರುಗಳಾಗಿರುವ ಸಮಿತಿ ಈ ಮಹತ್ ಕಾರ್ಯ ಮಾಡುತ್ತಿದೆ. 12ನೆಯ ಸಂಪುಟದಲ್ಲಿ ಈ ಮಂತ್ರವಿದ್ದು ಲೇಖನದಲ್ಲಿ ತಿಳಿಸಿರುವಂತೆ ಇದೆ. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ