ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಆಗಸ್ಟ್ 2, 2011

ಇಂತಹವರೂ ಇರುತ್ತಾರೆ!

     ಕುಟುಂಬದ ಯಾರಾದರೂ ಸದಸ್ಯರು ಅಥವ ಆತ್ಮೀಯರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರೆ ಅವರಿಗಾಗಿ ಕುಟುಂಬದ ಇನ್ನೊಬ್ಬರು (ಗಂಡ/ಹೆಂಡತಿ/ಮಗ/ಮಗಳು/ಸೋದರ/ ಸೋದರಿ/ಸ್ನೇಹಿತ/ಸ್ನೇಹಿತೆ, ಇತ್ಯಾದಿ) ತಮ್ಮ ಕಿಡ್ನಿಯೊಂದನ್ನು ದಾನ ಮಾಡಲು ಮುಂದೆ ಬರುವವರು ಇರಬಹುದು. ಆದರೆ ಪರಿಚಯವೇ ಇಲ್ಲದ, ಇಂತಹ ಸಮಸ್ಯೆ ಇರುವ ಯಾರಾದರೂ ಕಡುಬಡವರಿಗೆ ತಾವು ಬದುಕಿರುವಾಗಲೇ ತಮ್ಮ ಕಿಡ್ನಿಯೊಂದನ್ನು ದಾನ ಮಾಡಲು ಮುಂದೆ ಬಂದವರನ್ನು ಕಂಡಿದ್ದೀರಾ? ಅಂತಹ ಧೀಮಂತ ಮಹಿಳೆಯೊಬ್ಬರು ಇದ್ದಾರೆ, ಅವರೇ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದ ಶ್ರೀಮತಿ ಶಕುಂತಲಾ ಮಂಜುನಾಥರವರು.
               ಪತಿ ಮಂಜುನಾಥ ಮತ್ತು ಮಗ ಪ್ರವೀಣನೊಂದಿಗೆ ಶ್ರೀಮತಿ ಶಕುಂತಲಾ.
     ಸಾಣೇನಹಳ್ಳಿ ಶ್ರೀಗಳು ಪಂಡಿತಾರಾಧ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ನೇತ್ರದಾನ ಶಿಬಿರವೊಂದರಲ್ಲಿ ನೇತ್ರದಾನ ಮಾಡಲು ಮುಂದೆ ಬಂದ ಹಲವರು ಆ ಬಗ್ಗೆ ತಮ್ಮ ಒಪ್ಪಿಗೆ ಪತ್ರ ಬರೆದುಕೊಡುತ್ತಿದ್ದರು. ಶ್ರೀಮತಿ ಶಕುಂತಲಾ ಮಂಜುನಾಥರವರು ಬರೆದುಕೊಟ್ಟ ಪತ್ರದಲ್ಲಿದ್ದ ಒಕ್ಕಣೆ:
     "ನಾನು ನನ್ನ ಕಣ್ಣುಗಳನ್ನು ದಾನ ಮಾಡುತ್ತೇನೆ. ಇದು ನಾನು ಮೃತಳಾದ ಮೇಲೆ ಆಗುವ ಕಾಯಕ. ಆದರೆ ನಾನು ಜೀವಿತಾವಧಿಯಲ್ಲೇ ಕಡುಬಡವರಿಗೆ ನನ್ನ ಒಂದು ಮೂತ್ರಪಿಂಡ ಕಿಡ್ನಿ ಕೊಡಲು ಬಯಸಿದ್ದೇನೆ. ದಯವಿಟ್ಟು ಇದಕ್ಕೆ ಅವಕಾಶ ಕಲ್ಪಿಸಿಕೊಡಿ."
     ಈ ವಿಷಯವನ್ನು ಸಂಬಂಧಿಸಿದ ಸಂಸ್ಥೆ/ಆಸ್ಪತ್ರೆಗೆ ತಿಳಿಸುವ ಬಗ್ಗೆ ಆಕೆಗೆ ಏನೂ ಗೊತ್ತಿರಲಿಲ್ಲ. ಅಲ್ಲದೆ ಬಡವರಿಗೆ ಒದಗುವ ಖರ್ಚು ಹೊಂದಿಸಲು ಅವರಿಗೆ ಆಗದೇ ಇರಬಹುದಾದ್ದರಿಂದ, ಸ್ವಾಮಿಗಳಿಗೆ ಹೇಳಿದರೆ ಅವರು ಸಹಕಾರ ನೀಡಿ ಒಳ್ಳೆಯದಾಗಬಹುದೆಂಬ ಕಾರಣದಿಂದ ಅವರಿಗೆ ಪತ್ರ ಬರೆದುಕೊಟ್ಟಿದ್ದರು. ೫೦ ವರ್ಷದ ಶ್ರೀಮತಿ ಶಕುಂತಲಾ ಮಂಜುನಾಥರವರ ಪತಿ ಮಂಜುನಾಥರವರು ಒಬ್ಬ ಸಾಮಾನ್ಯ ರೈತ, ತೃಪ್ತ ಜೀವನ ನಡೆಸುತ್ತಿರುವವರಾಗಿದ್ದು ಪತ್ನಿಯ ನಿರ್ಧಾರದ ಬಗ್ಗೆ ಅವರ ಸಂಪೂರ್ಣ ಸಮ್ಮತಿ ಇದೆ. ಅವರ ಇಬ್ಬರು ಹೆಣ್ಣುಮಕ್ಕಳ ಮದುವೆ ಆಗಿದೆ. ಒಬ್ಬ ಗಂಡು ಮಗ ಪ್ರವೀಣ ತಾಯಿ ಮಾಡುವುದಾಗಿ ಹೇಳಿರುವ ಕೆಲಸ ಒಳ್ಳೆಯದಾಗಿದ್ದು ತಾನು ಏನೂ ಹೇಳುವುದಿಲ್ಲವೆನ್ನುತ್ತಾನೆ.
     ನೊಂದವರಿಗಾಗಿ ಮಿಡಿಯುವ ಹೃದಯವೀಣೆಯ ನಾದ ಎಲ್ಲರಿಗೂ ಕೇಳಲಿ, ಇತರರೂ ಪ್ರೇರಿತರಾಗಲಿ ಎಂಬುದೇ ಈ ಕಿರುಬರಹದ ಉದ್ದೇಶ.
********************
-ಕ.ವೆಂ.ನಾಗರಾಜ್.
(ಆಧಾರ: ವಿಜಯ ಕರ್ನಾಟಕ - ದಿ. ೧೦-೦೭-೨೦೧೧).

ಸೋಮವಾರ, ಆಗಸ್ಟ್ 1, 2011

ವೇದ ವಿಚಾರ ಚಿಂತನ - ಒಂದು ಸಾರ್ಥಕ ಕಾರ್ಯಕ್ರಮ

     ಬೇಲೂರಿನ ಶ್ರೀ ವಿಶ್ವನಾಥ ಶರ್ಮರು ಕಳೆದ ವಾರ ದೂರವಾಣಿ ಮೂಲಕ ೩೧-೦೭-೨೦೧೧ ರ ಭಾನುವಾರದಂದು ಚನ್ನರಾಯಪಟ್ಟಣದಲ್ಲಿ ಹಲವಾರು ಆಸಕ್ತರು ವೇದಾಭ್ಯಾಸ ಮಾಡುತ್ತಿದ್ದು, ಕಲಿಯಲು ಪ್ರಾರಂಭಿಸಿ ಒಂದು ವರ್ಷ ಪೂರ್ಣಗೊಂಡ ನಿಮಿತ್ತ ಒಂದು ಕಾರ್ಯಕ್ರಮ ಇಟ್ಟುಕೊಂಡಿದ್ದು ಆ ಕಾರ್ಯಕ್ರಮಕ್ಕೆ ಬರುವಂತೆ ಕೋರಿದ್ದರು. ಚನ್ನರಾಯಪಟ್ಟಣದ ಚೈತನ್ಯ ವಿದ್ಯಾಸಂಸ್ಥೆಯ ಮುಖ್ಯಸ್ಥರು ಶ್ರೀ ರಮೇಶ್‌ರವರೂ ಸಹ ದೂರವಾಣಿ ಮುಖೇನ ಆಹ್ವಾನಿಸಿದ್ದಲ್ಲದೆ ಆಹ್ವಾನ ಪತ್ರಿಕೆ ಸಹ ಕಳಿಸಿದ್ದರು. ನನಗೂ ಸಹ ವಿಷಯ ಆಸಕ್ತಿದಾಯಕವಾದುದಾದ್ದರಿಂದ ಅಂದು ಬೆಳಿಗ್ಗೆ ೭-೧೫ರ ಬಸ್ಸಿಗೆ ಹೊರಟು ೮-೧೫ಕ್ಕೆ ಸ್ಥಳದಲ್ಲಿದ್ದೆ. ಕಾರ್ಯಕ್ರಮ ಬೆ. ೮-೩೦ಕ್ಕೆ ಆರಂಭವಾಗುತ್ತಿದ್ದರಿಂದ ಪೂರ್ಣ ಕಾರ್ಯಕ್ರಮ ವೀಕ್ಷಿಸುವ ಉದ್ದೇಶ ನನಗಿದ್ದರಿಂದ ಸಕಾಲದಲ್ಲಿ ಅಲ್ಲಿದ್ದೆ. ಯಶಸ್ವಿಯಾಗಿ ನಡೆದ ಕಾರ್ಯಕ್ರಮ ಅಲ್ಲಿ ಬಂದಿದ್ದ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಆ ಕಾರ್ಯಕ್ರಮದ ಸಂಕ್ಷಿಪ್ತ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಳ್ಳುವೆ.

    
     ವೈದಿಕ ಅಗ್ನಿಹೋತ್ರದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಾಲ್ಕು ದಂಪತಿಗಳು ಭಾಗವಹಿಸಿದ್ದ ಅಗ್ನಿಹೋತ್ರದ ಮಹತ್ವವನ್ನು ವೇದತರಂಗ ಮಾಸಪತ್ರಿಕೆಯ ಸಂಪಾದಕರಾದ ಬೆಂಗಳೂರಿನ ಶ್ರೀ ಶ್ರುತಿಪ್ರಿಯರವರು ವಿವರಿಸಿದ್ದಲ್ಲದೆ ಪ್ರತಿಮಂತ್ರದ ಅರ್ಥವನ್ನು ಮನಮುಟ್ಟುವಂತೆ ತಿಳಿಹೇಳಿದರು. ಸಮರ್ಪಣಾ ಮನೋಭಾವದಿಂದ ಮಾಡುವ ಅಗ್ನಿಹೋತ್ರದಿಂದ ಆಂತರಿಕ ಹಾಗೂ ಬಾಹ್ಯ ಶುದ್ಧಿಗೆ, ಪರಿಸರ ಶುದ್ಧಿಗೆ ಹೇಗೆ ಸಹಕಾರಿಯಾಗುವುದೆಂದು ವಿವರಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಶ್ರೀ ರಮೇಶ್ ರವರು ವೇದಾಭ್ಯಾಸದ ಕಲಿಕೆ ಕಳೆದ ಒಂದು ವರ್ಷದಿಂದ ನಡೆದ ರೀತಿಯ ಬಗ್ಗೆ, ಅದು ಯಶಸ್ವಿಗೊಳ್ಳಲು ಕಾರಣರಾದವರ ಬಗ್ಗೆ ವಿಸ್ತೃತವಾಗಿ ತಿಳಿಸಿ ಸಂಬಂಧಿಸಿದವರಿಗೆ ಕೃತಜ್ಞತೆ ವ್ಯಕ್ತಪಡಿಸಿದರು. ಸುಮಾರು ೪೦ ವೇದಾಭ್ಯಾಸಿಗಳು ಕಳೆದ ಒಂದು ವರ್ಷದಿಂದ ಅಭ್ಯಾಸ ಮಾಡುತ್ತಿದ್ದು, ತಾವು ಕಲಿತ ಕೆಲವು ವೇದಮಂತ್ರಗಳನ್ನು ಸುಸ್ವರವಾಗಿ ಸಾಮೂಹಿಕವಾಗಿ ಹೇಳಿದ್ದು ಕಲಿಕೆಯ ಸಾರ್ಥಕತೆಯನ್ನು ತೋರಿಸಿತು.

     ಮುಖ್ಯಭಾಷಣ ಮಾಡಿದ ಶ್ರೀ ಶ್ರುತಿಪ್ರಿಯರವರು ಚಿಕ್ಕ ವಯಸ್ಸಿನ ಬಾಲಕರೂ ಸೇರಿದಂತೆ ಎಲ್ಲಾ ವಯೋಮಾನದವರೂ ಕಲಿಕೆಯಲ್ಲಿ ತೊಡಗಿದ ಬಗ್ಗೆ ಪ್ರಶಂಸೆಯ ನುಡಿಗಳನ್ನಾಡಿ ಇದು ಇತರರಿಗೆ ಪ್ರೇರಣೆ ನೀಡುವ ಸಂಗತಿಯೆಂದರು. ವೇದ ಯಾವುದೇ ಒಂದು ನಿರ್ದಿಷ್ಟ ಜಾತಿಗೆ ಸೇರಿದ್ದಾಗಿರದೆ ಇಡಿಯ ಮನುಕುಲಕ್ಕೆ ಸೇರಿದ್ದಾಗಿದ್ದು, ಎಲ್ಲಾ ಜಾತಿಯವರೂ, ಮಹಿಳೆಯರೂ ವೇದಾಭ್ಯಾಸಕ್ಕೆ ತೊಡಗಬೇಕೆಂದು ಆಶಿಸಿದರು. ಜಾತಿ ವ್ಯವಸ್ಥೆಯ ವಿಷಯವನ್ನು ಭಾಷಣದ ಪ್ರಮುಖ ವಿಷಯವಾಗಿ ಆರಿಸಿಕೊಂಡ ಅವರು ಪ್ರಾಚೀನ ಕಾಲದ ವರ್ಣವ್ಯವಸ್ಥೆಯನ್ನು ಜಾತಿಗಳಾಗಿಸಿ, ಜಾತಿಭೇದ ಹುಟ್ಟುಹಾಕಿ, ಮೇಲು-ಕೀಳು, ಸ್ಪೃಷ್ಯ-ಅಸ್ಪೃಷ್ಯ ಇತ್ಯಾದಿಗಳಿಗೆ ಸಿಲುಕಿಸಲು ಅಜ್ಞಾನ ಮತ್ತು ಸಂಕುಚಿತ ಮನೋಭಾವವೇ ಕಾರಣವೆಂದು ವಿಶ್ಲೇಷಿಸಿದರು. ಜಾತಿ ಹುಟ್ಟಿನಿಂದಲ್ಲ, ಆಚರಣೆಯಿಂದ ಬರುತ್ತದೆ. ತಾವು ಮಾಡುವ ಕರ್ಮಕ್ಕನುಸಾರವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬುದಾಗಿ ಪರಿಗಣಿಸಲಾಗುತ್ತಿದ್ದು, ನಂತರದಲ್ಲಿ ಹುಟ್ಟಿನಿಂದ ಜಾತಿ ಎಂಬುದು ರೂಢಿಗತವಾಗಿ ಬಳಸಲ್ಪಟ್ಟು ವೇದವನ್ನು ತಿಳಿಯದವರು ದೂಷಿಸುವಂತೆ ಆದ ಪರಿಸ್ಥಿತಿಯನ್ನು ಬಿಚ್ಚಿಟ್ಟರು. ವೇದದಲ್ಲಿ ಎಲ್ಲೂ ಅಸಮಾನತೆಯ ಸೊಲ್ಲಿಲ್ಲ, ಮೇಲು-ಕೀಳುಗಳ ತಾರತಮ್ಯವಿಲ್ಲ, ನಿಜವಾಗಿ ವೇದೋಕ್ತ ರೀತಿಯಲ್ಲಿ ಜೀವನ ನಡೆಸಿದರೆ ಇಂತಹ ಕೀಳು ಆಚರಣೆಗಳು ನಶಿಸುವುದಾಗಿ ಅಭಿಪ್ರಾಯಪಟ್ಟರು. ಸ್ವತಃ ವೇದವ್ಯಾಸರು ಒಬ್ಬ ಬೆಸ್ತನ ಮಗ, ಕೌಂಡಿನ್ಯ ಋಷಿ ಮೂಲತಃ ಕ್ಷೌರಿಕ, ಮಹಾಪತಿವ್ರತೆಯಾಗಿದ್ದ ಅರುಂಧತಿ ಒಬ್ಬ ಅಂತ್ಯಜೆ, ಮರ್ಯಾದಾ ಪುರುಷೋತ್ತಮ ಶ್ರೀರಾಮ ಕ್ಷತ್ರಿಯ, ಹೀಗೆ ಹಲವಾರು ವಾಸ್ತವ ವಿಚಾರಗಳನ್ನು ಮುಂದಿಟ್ಟ ಅವರು ಮಾನವ ಕುಲದ ಏಕತೆಗೆ ವೇದ ಇದೆಯೇ ಹೊರತು ಮತ್ತೇನಲ್ಲವೆಂದರು. ಪರಮಾತ್ಮ ಎಲ್ಲವನ್ನೂ ಕೊಟ್ಟಿದ್ದಾನೆ, ಅದನ್ನು ಪಡೆಯುವ ಬಳಸುವ ರೀತಿಯನ್ನು ನಾವು ಕಲಿತುಕೊಳ್ಳಬೇಕಷ್ಟೆ ಎಂದ ಅವರು ನಮ್ಮ ಸ್ಥಿತಿ ಇಂದು ಬಂಗಾರದ ಬೆಟ್ಟದ ಮೇಲೆ ಕುಳಿತ ಭಿಕ್ಷುಕನಂತಿದೆಯೆಂದು ವಿಷಾದಿಸಿದರು. ಸತ್ಯವನ್ನು ಅರಿಯುವಲ್ಲಿ ಶ್ರದ್ಧೆ, ಬುದ್ಧಿ ಮತ್ತು ತರ್ಕದ ಸಮನ್ವಯವಾದರೆ ಸಾಧ್ಯವೆಂದರು.
     ಶ್ರೀ ವಿಶ್ವನಾಥ ಶರ್ಮರವರು ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರ ಆದೇಶದಂತೆ ತಾವು ಪ್ರತಿವಾರ ಚನ್ನರಾಯಪಟ್ಟಣಕ್ಕೆ ಬಂದು ವೇದಪಾಠ ಮಾಡುತ್ತಿದ್ದು, ಅನಿವಾರ್ಯವಾಗಿ ಬರಲಾಗದಿದ್ದ ಸಂದರ್ಭಗಳಲ್ಲಿ ಶ್ರೀ ನಾಗರಾಜಮೂರ್ತಿ, ಗೋಪಿನಾಥ ಶಾಸ್ತ್ರಿ, ವಿಶ್ವನಾಥ, ಮುಂತಾದವರು ಪಾಠ ಮತ್ತು ಅಭ್ಯಾಸ ನಿಲ್ಲದಂತೆ ನೋಡಿಕೊಂಡುದಕ್ಕೆ ಕೃತಜ್ಞತೆ ಹೇಳಿದರು. ತಾವು ಈ ಸ್ಥಿತಿಗೆ ಬರಲು ಕಾರಣೀಭೂತರಾದ ತಮ್ಮ ತಂದೆ-ತಾಯಿ ಮತ್ತು ಗುರುಗಳನ್ನು ಸ್ಮರಿಸಿಕೊಂಡರು. ಮನುರ್ಭವ - ಮಾನವನಾಗು ಎಂದು ವೇದ ಹೇಳುತ್ತದೆ. ತಾನು ಕಲಿತಿದ್ದನ್ನು ಇತರರಿಗೆ ತಿಳಿಸಿ ಜ್ಞಾನ ಪ್ರಸರಣ ಮಾಡುವುದು ಕರ್ತವ್ಯವಾಗಿದೆ, ಈ ಕರ್ತವ್ಯವನ್ನು ತಾನು ಮಾಡುತ್ತಿದ್ದೇನೆ ಎಂದ ಅವರು ಪಿತೃ ಋಣ, ಮಾತೃ ಋಣ, ಗುರು ಋಣದಂತೆ ಸಮಾಜ ಋಣ ಸಹ ಇದ್ದು ಜ್ಞಾನ ಪ್ರಸರಣ ಕಾರ್ಯ ಸಮಾಜದ ಋಣ ತೀರಿಸುವ ಕೆಲಸವೆಂದು ವಿನಮ್ರರಾಗಿ ಹೇಳಿದರು.
     ಗೀತಗಾಯನ, ಧನ್ಯವಾದ ಸಮರ್ಪಣೆ, ಸಾಯಂಕಾಲದ ಅಗ್ನಿಹೋತ್ರ, ವೈದಿಕ ರಾಷ್ಟ್ರಗೀತೆ ಮತ್ತು ಶಾಂತಿ ಮಂತ್ರದೊಂದಿಗೆ ಹೀಗೊಂದು ಸಾರ್ಥಕ ಕಾರ್ಯಕ್ರಮ ಸಂಪನ್ನಗೊಂಡಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆಲ್ಲಾ ಒಳ್ಳೆಯ ಭೋಜನದ ವ್ಯವಸ್ಥೆಯಾಗಿತ್ತು. ಈ ಕಾರ್ಯಕ್ರಮ ಆಯೋಜಿಸಿದ್ದ ಚೈತನ್ಯ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಶ್ರೀ ರಮೇಶ್ ಮತ್ತು ಸತ್ಸಂಗದ ಎಲ್ಲಾ ಸಹಕಾರಿಗಳು, ವೇದಾಭ್ಯಾಸಿಗಳು, ಗುರುಗಳು ಅಭಿನಂದನಾರ್ಹರಾಗಿದ್ದಾರೆ.
******************
-ಕ.ವೆಂ.ನಾಗರಾಜ್.