ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಮಂಗಳವಾರ, ಮಾರ್ಚ್ 8, 2011

ವೇದೋಕ್ತ ಜೀವನ ಪಥ - ಜೀವಾತ್ಮ ಸ್ವರೂಪ -6

ವೇದೋಕ್ತ ಕರ್ಮಫಲಸಿದ್ಧಾಂತ ಸರ್ವತಂತ್ರ, ಸಾರ್ವಭೌಮ, ಸಾರ್ವಕಾಲಿಕ ಸತ್ಯ. ಇಲ್ಲಿ ನೋಡಿರಿ:-
ಸ ಕಿಲ್ಬಿಷಮತ್ರ ಸಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.೧೨.೩.೪೮)
     [ಅತ್ರ] ಈ ಈಶ್ವರೀಯ ನ್ಯಾಯವಿಧಾನದಲ್ಲಿ [ಕಿಲ್ಬಿಷಂ] ಯಾವ ಒಡಕೂ, ದೋಷವೂ ಇಲ್ಲ. [ಆಧಾರಃ ನ ಅಸ್ತಿ] ಬೇರೆ ಯಾವ ಆಧಾರವೂ ಇಲ್ಲ. [ಯತ್ ಮಿತ್ರೈಃ ಸಮ್] ಸ್ನೇಹಿತರ ಮಧ್ಯೆ ಸೇರಿಕೊಂಡು [ಅಮಮಾನ ಏತಿ] ನಾನು ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ [ನ] ಇಲ್ಲ. [ನ ಏತತ್ ಅನೂನಂ ಪಾತ್ರಮ್] ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ [ನಿಹಿತಮ್] ಗೂಢವಾಗಿ ಇಡಲ್ಪಟ್ಟಿದೆ. [ಪಕ್ವಃ] ಬೇಯಿಸಿದ ಅನ್ನ, ಕರ್ಮಫಲವಿಪಾಕ [ಪಕ್ತಾರಮ್] ಅದನ್ನು ಪಾಕ ಮಾಡಿದವನನ್ನು ಪುನಃ [ಆ ವಿಶಾತಿ] ಮರಳಿ ಪ್ರವೇಶಿಸಿಯೇ ತೀರುತ್ತದೆ.
     ಅರ್ಥ ಸ್ಪಷ್ಟವಾಗಿದೆ. ಕರ್ಮಫಲಭೋಗ ಎಲ್ಲರಿಗೂ ಅನಿವಾರ್ಯ. ಆದ ಕಾರಣ ಅನ್ಯ ವ್ಯಕ್ತಿಯ ಹೆಗಲ ಮೇಲೆ ತನ್ನ ಪಾಪದ ಹೊರೆ ಹೊರಿಸಿ, ತಾನು ಮುಕ್ತನಾಗುತ್ತೇನೆಂದು ಭಾವಿಸುವುದು ಆತ್ಮಘಾತಕವಾದ ಘೋರ ಅಜ್ಞಾನ. ಈ ಬಗ್ಗೆ ಅಜ್ಞಾನದಿಂದ ದೂರ ಸರಿಯಬೇಕು. ಮಾನವನು ಹುಟ್ಟಿನಿಂದಲೇ ಪಾಪಿ, ಆದುದರಿಂದ ಅವನು ಯಾವನೋ ದೇವಪುತ್ರನ ನೆರವಿಲ್ಲದೆ ಭಗವಮತನ ರಾಜ್ಯದಲ್ಲಿ ಪ್ರವೇಶಿಸಲಾರ - ಎನ್ನುವುದಕ್ಕಿಮತ ಘೋರ ಪಾತಕವಿಲ್ಲ. ಭಗವಂತನ ರಾಜ್ಯ ಬೇರೆಲ್ಲೋ ತೇಲಾಡುತ್ತಿಲ್ಲ. ಸರ್ವವ್ಯಾಪಕನಾದ ಪ್ರಭುವಿನ ರಾಜ್ಯ ಇಲ್ಲಿಯೇ ಇದೆ. ವೇದಗಳು ಮೋಕ್ಷದ ಮಾರ್ಗವನ್ನು ಹೀಗೆ ವರ್ಣಿಸುತ್ತವೆ:
ಶುನಃಶೇಪೋ ಹ್ಯಹ್ವದ್ ಗೃಭೀತಸ್ ತ್ರ್ರಿಷ್ವಾದಿತ್ಯಂ ದ್ರುಪದೇಷು ಬದ್ಧಃ |
ಅವೈನಂ ರಾಜಾ ವರುಣಃ ಸಸೃಜ್ಯಾದ್ ವಿದ್ವಾನ್ ಅದಬ್ಧೋ ವಿ ಮುಮೋಕ್ತು ಪಾಶಾನ್ || (ಋಕ್.೧.೨೪.೧೩)
     [ತ್ರಿಷು ದ್ರುಪದೇಷು ಗೃಭೀತಸ್ ಬದ್ಧಃ] ಸತ್ವ, ರಜಸ್ಸು, ತಮಸ್ಸು ಎಂಬ ಮೂರು ಗುಣಗಳ ಅಥವಾ ತನು-ಮನ-ವಚನ ಎಂಬ ಮೂರು ಗೂಟಗಳಿಗೆ ಕಟ್ಟುಬಿದ್ದ, [ಶುನಃಶೇಪಃ] ಸುಖಾಭಿಲಾಷಿಯಾದ ಜೀವನು [ಆದಿತ್ಯಂ ಹಿ ಅಹ್ವತ್] ಅಖಂಡನಾದ ಪ್ರಭುವಿಗೆ ಮೊರೆಯಿಡುತ್ತಾನೆ. [ರಾಜಾ ವರುಣಃ] ವಿಶ್ವಸಾಮ್ರಾಟ್ ವರಣೀಯ ಪ್ರಭುವು [ಏನಂ ಅವ ಸಸೃಜಾತ್] ಇವನನ್ನು ಸಡಿಲಗೊಳಿಸುತ್ತಾನೆ. [ಅದಬ್ಧಃ ವಿದ್ವಾನ್] ಪ್ರಾಕೃತ ಮೋಹಕ್ಕೆ ಅಡಿಯಾಳಾಗದ ವಿದ್ವಾನ್ ಜೀವನು [ಪಾಶಾನ್ ವಿ ಮುಮೋಕ್ತು] ತನ್ನ ಬಂಧನಗಳನ್ನು ತಾನೇ ಕಡಿದುಹಾಕಬೇಕು.
     ಹೌದು, ಮಧ್ಯಸ್ಥನಿಗೆ ಇಲ್ಲಿ ಎಡೆಯೇ ಇಲ್ಲ. ಪ್ರಭೂಪಾಸನೆ ಮಾಡಬೇಕು. ಆಗ ಪ್ರಭು ಭೋಗವಿಲಾಸದ ಕಟ್ಟನ್ನು ಸಡಿಲಿಸುತ್ತಾನೆ. ಜ್ಞಾನಿಯಾದ ಜೀವನು ತನ್ನ ಪಾಶಗಳನ್ನು ತಾನೇ ಕಡಿಯಬೇಕು. ಒಬ್ಬನೇ ಏನು ದೇವಪುತ್ರ? ದೇವಪುತ್ರಾ ಋಷಯಃ (ಋಕ್. ೧೦.೬೨.೪) - ದೇವಪುತ್ರರೇ! ತತ್ವದರ್ಶಿಗಳೇ - ಎಂದು ಎಲ್ಲರನ್ನೂ ವೇದ ಸಂಬೋಧಿಸಿರುವುದನ್ನು ಪಾಠಕರಾಗಲೇ ಓದಿದ್ದಾರೆ. ಮಾನವ, ಜನ್ಮದಿಂದಲೇ ಪಾಪಿ ಎನ್ನುವುದು ಅಜ್ಞಾನದ ಪರಮಾವಧಿ. ವೇದದ ಈ ಉದ್ಭೋದನವನ್ನು ಆಲಿಸಿ, ಮುಂದಿನ ಅಧ್ಯಾಯ ಪ್ರಾರಂಭಿಸೋಣ.
ಶುಕ್ರೋಸಿ ಭ್ರಾಜೋಸಿ ಸ್ವಶಸಿ ಜ್ಯೋತಿರಸಿ |
ಆಪ್ನುಹಿ ಶ್ರೇಯಾಂಸಮತಿ ಸಮಂ ಕ್ರಾಮ || (ಅಥರ್ವ. ೨.೧೧.೫)
     ಓ ಮಾನವ! [ಶುಕ್ರಃ ಅಸಿ] ನೀನು ನರ್ಮಲನಾಗಿದ್ದೀಯೆ. [ಭ್ರಾಜಃ ಅಸಿ] ಪಾಪದಾಹಕ ಪ್ರಕಾಶವಾಗಿದ್ದೀಯೆ. [ಸ್ವಃ ಅಸಿ] ಸುಖಸ್ವರೂಪನಾಗಿದ್ದೀಯೆ. [ಜ್ಯೋತಿಃ ಅಸಿ] ಜ್ಞಾನದ ಜ್ಯೋತಿಯಾಗಿದ್ದೀಯೆ. [ಶ್ರೇಯಾಂಸಂ ಆಪ್ನುಹಿ] ಶ್ರೇಯಸ್ಸನ್ನು ಸಾಧಿಸಿಕೋ. [ಸಮಂ ಅತಿಕ್ರಾಮ] ಆಧ್ಯಾತ್ಮ ಪಥದಲ್ಲಿ ಸಮನಾದವನನ್ನು ಮೀರಿಸಿ ಮುಂದೆ ನಡೆ.
-೦-೦-೦-೦-

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ