ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಸೆಪ್ಟೆಂಬರ್ 1, 2010

ವೇದೋಕ್ತ ಜೀವನ ಪಥ - ಭಗವತ್ ಸ್ವರೂಪ -2

      ಈ ಸೃಷ್ಟಿ ಕೇವಲ ಮಾನಸಿಕ ಕಲ್ಪನೆಯಲ್ಲ, ಇದೊಂದು ಸ್ಥೂಲವಾದ ತತ್ವ, ಒಂದು ನಿರಾಕರಿಸಲಾರದ ಸತ್ಯ. ವಿಜ್ಞಾನವಾದ, ಮಾಯಾವಾದ ಯಾವ ವಾದವನ್ನೇ ಮುಂದೊಡ್ಡಿದರೂ ಕೂಡ, ಪಾಮರಕೋಟಿಯನ್ನು ಭ್ರಾಂತಿಗೆ ಸಿಕ್ಕಿಸಬಹುದೇ ಹೊರತು, ಜಗತ್ತಿಲ್ಲ ಎಂದು ಹೇಳಲಾಗುವುದಿಲ್ಲ. ಜಗತ್ತಿಲ್ಲ ಎನ್ನುವುದಾದರೆ ಹಾಗೆ ಹೇಳುವವನು ಎಲ್ಲಿ ಉಳಿದಾನು? ಕೇಳುವವನು ಯಾವನಿದ್ದಾನು? ಜಗತ್ತಿದೆ, ನಿಜವಾಗಿಯೂ ಇದೆ. ಭೌತವಿಜ್ಞಾನದ ಸಹಾಯದಿಂದ ಈ ಜಗತ್ತಿನ ಪ್ರತಿಯೊಂದು ಪರಮಾಣುವನ್ನೂ ಪ್ರತ್ಯೇಕಿಸಿ ನೋಡಬಹುದು. ಈ ವಿಶ್ವ ಜಡಪರಮಾಣುಗಳ ಸಂಘಾತದಿಂದ ರೂಪುಗೊಂಡುದು. ಸ್ವತಃ ಪರಮಾಣುಗಳಲ್ಲಿ, ನಿಯಮಪೂರ್ವಕವಾಗಿ ಒಟ್ಟುಗೂಡಿ ಈ ವಿಶ್ವವಾಗುವ ಶಕ್ತಿಯಿಲ್ಲ. ಅವುಗಳಲ್ಲಿ ನಿಯಮಪಾಲನೆ ಮಾಡಲು ಬೇಕಾದ ಜ್ಞಾನವಿಲ್ಲ. ಆದುದರಿಂದ ಈ ವಿಶ್ವದ ರಚಯಿತೃವಾದ ಯಾವುದೋ ಒಂದು ಶಕ್ತಿಯಿದೆ. ಕೇವಲ ಒಂದು ಭೂಮಿಯಲ್ಲ, ಒಂದು ಚಂದ್ರನಲ್ಲ, ಒಂದು ಸೂರ್ಯನೂ ಅಲ್ಲ, ಆ ಸೂರ್ಯನಿಗಿಂತಲೂ ಲಕ್ಷಾಂತರ ಪಾಲು ದೊಡ್ಡದಾಗಿದ್ದು, ಅನಂತ ಆಕಾಶದಲ್ಲಿ ಊಹಿಸಲಾಗದಷ್ಟು ದೂರದವರೆಗೆ ಹರಡಿಕೊಂಡು ಮೆರೆಯುತ್ತಿರುವ, ಎಣಿಕೆಗೆ ಸಿಕ್ಕದಂತಿರುವ ನಕ್ಷತ್ರಗಳ ಬೃಹತ್ಸಮೂಹವಿದೆ. ಇವನ್ನೆಲ್ಲಾ ರಚಿಸುವ ಸಾಮರ್ಥ್ಯ ಏಕದೇಶೀಯವಾದ, ಅಂದರೆ ಎಲ್ಲೋ ಒಂದು ಕಡೆ ಮಾತ್ರವಿರುವ ವ್ಯಕ್ತಿಗೆ ಅಥವಾ ಶಕ್ತಿಗೆ ಸಾಧ್ಯವಿಲ್ಲ. ಈ ವಿಶ್ವಬ್ರಹ್ಮಾಂಡ, ಕೇವಲ ಆಕಸ್ಮಿಕವಾಗಿ ಇರುವಿಕೆಗೆ ಬಂದಿದೆ ಎಂದು ಯಾವ ಬುದ್ಧಿಶಾಲಿಯೂ ತರ್ಕಿಸಲಾರನು. ಆಕಸ್ಮಿಕ ಘಟನೆಗಳಲ್ಲಿ ಜ್ಞಾನವನ್ನು ಸಾಂಕೇತಿಸುವ ನಿಯಮಗಳು ಎಂತಾದರೂ ಇದ್ದಾವು? ಹೀಗೆ ಆಲೋಚನೆ ಮಾಡಿದಾಗ ಪ್ರತಿಯೊಬ್ಬ ವಿಚಾರಶೀಲನೂ ಈ ಅನಂತದಂತೆ ಗೋಚರಿಸುವ ವಿಶ್ವದ ಕರ್ತೃವಾದ ಯಾವುದೋ ಒಂದು ಸರ್ವವ್ಯಾಪಕ, ಜ್ಞಾನಮಯೀ ಶಕ್ತಿ ಇದ್ದೇ ಇದೆ ಎಂದು ಒಪ್ಪಲೇಬೇಕಾಗುತ್ತದೆ. ಈ ಜ್ಞಾನಮಯೀ ವಿರಾಟ್ ಶಕ್ತಿಯ ವಿಷಯದಲ್ಲಿ ವೇದ ಏನು ಹೇಳುತ್ತದೋ ನೋಡೋಣ:-

ತದೇಜತಿ ತನ್ಮೈಜತಿ ತದ್ದೂರೇ ತದ್ವಂತಿಕೇ|
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ|| (ಯಜು.40.5.)

     [ತತ್ ಏಜತಿ] ಅದು ವಿಶ್ವಕ್ಕೆ ಗತಿ ನೀಡುತ್ತದೆ. [ತತ್ ನ ಏಜತಿ] ಅದು ಸ್ವತಃ ಚಲಿಸುವುದಿಲ್ಲ. [ತತ್ ದೂರೇ] ಅದು ದೂರದಲ್ಲಿದೆ.  [ತತ್ ಉ ಅಂತಿಕೇ] ಅದೇ ಹತ್ತಿರದಲ್ಲಿಯೂ ಇದೆ. [ತತ್ ಅಸ್ಮ ಸರ್ವಸ್ಯ ಅಂತಃ] ಅದು ಇದೆಲ್ಲದರ ಒಳಗೂ ಇದೆ. [ತತ್ ಉ ಅಸ್ಯ ಸರ್ವಸ್ಯ ಬಾಹ್ಯತಃ] ಅದೇ ಇದೆಲ್ಲದರ ಹೊರಗೂ ಇದೆ. 
    ಈ ಮಂತ್ರ ವಿಶ್ವಕ್ಕೆಲ್ಲಾ ಚಲನೆ ನೀಡುವ, ತಾನು ಮಾತ್ರ ಚಲಿಸದೆ ಧ್ರುವವಾಗಿ ನಿಂಇತಿರುವ, ಸರ್ವತ್ರ ವ್ಯಾಪಿಸಿರುವ ಚೇತನಶಕ್ತಿಯನ್ನು ವರ್ಣಿಸುತ್ತಲಿದೆ. ಎಲ್ಲರ ಅಂತರ್ಯದಲ್ಲಿಯೂ ಇದೆ; ಎಲ್ಲರಿಗಿಂತ ಬಹು ದೂರದಲ್ಲಿಯೂ ಇದೆ; ವಿಶ್ವದೊಳಗೂ ಇದೆ; ವಿಶ್ವದಿಂದ ಹೊರಕ್ಕೂ ಹರಡಿದೆ. ಆ ಅನಂತ ಚೇತನ, ಸರ್ವಥಾ ನಿರಾಕಾರವೇ ಆಗಿರಬೇಕು. ವಸ್ತುತಃ ಅದಿರುವುದು ಹಾಗೆಯೇ. ಅದರ ಭವ್ಯ ಸ್ವರೂಪವನ್ನು ನೋಡಿರಿ:-
ಅನೇಜದೇಕಂ ಮನಸೋ ಜವೀಯೋ ನೈನದ್ದೇವಾ ಆಪ್ನುವನ್ ಪೂರ್ವಮರ್ಶತ್|
ತದ್ಧಾವತೋ ನ್ಯಾನತ್ಯೇತಿ ತಿಷ್ಠತ್ಯಸ್ಮಿನ್ನಪೋ ಮಾತರಿಶ್ವಾ ದಧಾತಿ|| (ಯಜು.40.4.)
      [ಏಕಮ್] ಆ ಜ್ಞಾನಮಯೀ ಶಕ್ತಿ ಒಂದೇ ಇದೆ. [ಅನೇಜತ್] ಅದು ಚಲಿಸುವುದಿಲ್ಲ. [ಮನಸಃ ಜವೀಯಃ] ಮನಸ್ಸಿಗಿಂತಲೂ ವೇಗಶಾಲಿಯಾಗಿದೆ. [ದೇವಾಃ] ಶರೀರಗತವಾದ ಇಂದ್ರಿಯಗಳು, ಅಥವಾ ವಿದ್ವಜ್ಜನರೂ ಕೂಡಿ [ಏನತ್ ನ ಆಪ್ನುವತ್] ಇದನ್ನು ಹಿಡಿಯಲಾರದು. [ಪೂರ್ವಂ ಅರ್ಶತ್] ಏಕೆಂದರೆ, ಅದು ಅವರ ಹಿಡಿತಕ್ಕಿಂತ ಬಹು ಮೇಲೆ ವಿರಾಜಿಸುತ್ತಿದೆ. [ತತ್] ಅದು, [ಧಾವತಃ ಅನ್ಯಾನ್] ಓಡುತ್ತಿರುವ ಇತರರನ್ನು [ಅತಿ ಏತಿ] ಮೀರಿಸುತ್ತದೆ. [ತಿಷ್ಯತ್] ತಾನು ಮಾತ್ರ ಸ್ಥಿರವಾಗಿ ನಿಂತಿದೆ. [ತಸ್ಮಿನ್] ಅದರಲ್ಲಿದ್ದುಕೊಂಡೇ [ಮಾತರಿಶ್ವಾ] ಆಗಸದಲ್ಲಿ ಅಥವಾ ಭೂಮಾತೆಯ ಗರ್ಭದಲ್ಲಿರುವ ಜೀವಾತ್ಮನು [ಆಪಹ ದಧಾತಿ] ಕರ್ಮನಿರತನಾಗಿದ್ದಾನೆ.
     ಎಲ್ಲವೂ ಅದರಲ್ಲಿದೆ, ಅದು ಎಲ್ಲದರಲ್ಲಿಯೂ ಇದೆ. ಆ ವ್ಯಾಪಕತ್ವ ಸರ್ವಥಾ ಅತೀಂದ್ರಿಯ, ವಿದ್ವಜ್ಜನರ ಬುದ್ಧಿಯ ಹಿಡಿತದಿಂದಲೂ ಮೇಲಕ್ಕಿದೆ, ದೂರಕ್ಕಿದೆ. ಅದು ತಾನು ಕೂಟಸ್ಥವಾಗಿದ್ದರೂ, ಅಚಲವಾಗಿದ್ದರೂ, ಗತಿಯುಕ್ತವಾದ ಗ್ರಹೋಪಗ್ರಹಗಳಿಗಿಂತಲೂ, ಅವುಗಳ ಹಿಡಿತಕ್ಕಿಂತಲೂ ದೂರದಲ್ಲಿದೆ! ಜೀವರಾದ ನಾವೆಲ್ಲರೂ ಅದರಲ್ಲಿದ್ದುಕೊಂಡೇ ವಿವಿಧ ಕರ್ಮಗಳಲ್ಲಿ ತೊಡಗಿದ್ದೇವೆ. ಈ ಎರಡು ಮಂತ್ರಗಳು ಆ ಚೇತನಶಕ್ತಿಯ ಅನಂತ ವ್ಯಾಪಕತ್ವವನ್ನು ಸೊಗಸಾಗಿ ಚಿತ್ರಿಸಿವೆ.
-ಪಂ.ಸುಧಾಕರ ಚತುರ್ವೇದಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ