ವೇದಗಳ ಈ ಪ್ರೋತ್ಸಾಹಪ್ರದವಾದ ಕರೆಗೆ ಕಿವಿಗೊಡೋಣ:
ಸರ್ವೋ ವೈ ತತ್ರ ಜೀವತಿ ಗೌರಶ್ವಃ ಪುರುಷಃ ಪಶುಃ |
ಯತ್ರೇದಂ ಬ್ರಹ್ಮ ಕ್ರಿಯತೇ ಪರಿಧಿರ್ಜೀವನಾಯ ಕಮ್ || (ಅಥರ್ವ. 8.2.25)
[ಯತ್ರ] ಎಲ್ಲಿ [ಇದಂ ಬ್ರಹ್ಮ] ಈ ವೇದಜ್ಞಾನವು [ಕಮ್] ಅನುಕೂಲವಾದ ರೀತಿಯಲ್ಲಿ [ಜೀವನಾಯ ಪರಿಧಿಃ ಕ್ರಿಯತೇ] ಜೀವನದ ಸುತ್ತುಗಟ್ಟಾಗಿ ಮಾಡಲ್ಪಡುತ್ತದೋ [ತತ್ರ] ಅಲ್ಲಿ [ಗೌಃ] ಗೋವು [ಅಶ್ವಃ] ಕುದುರೆ [ಪುರುಷಃ] ಮಾನವ [ಪಶುಃ] ಇತರ ಜೀವರಾಶಿ [ಸರ್ವ] ಎಲ್ಲರೂ [ವೈ] ನಿಜವಾಗಿ [ಜೀವತಿ] ಜೀವಿಸುತ್ತವೆ.
ಬೇರೆ ಸಂಪ್ರದಾಯಗಳೊಂದಿಗೆ ವೇದೋಪದೇಶವನ್ನು ಹೋಲಿಸಲು ಸಾಧ್ಯವಿಲ್ಲ. ವೇದಗಳ ವೈಭವವೇ ಬೇರೆ, ಅವುಗಳ ಸ್ತರವೇ ಬೇರೆ. ಎಲ್ಲಾ ಜಾತಿಗಳವರೂ, ಎಲ್ಲಾ ಮತಗಳವರೂ ವೇದಗಳು ತಮ್ಮವೆಂದು ಹೇಳಿಕೊಳ್ಳಬಹುದು. ಏಕೆಂದರೆ ವೇದೋಪದೇಶ ಮಾನವ ಮಾತ್ರರ ಸರ್ವವಿಧೋತ್ಕರ್ಷಕ್ಕೆ ಎಂದಿಗೂ ನಿರರ್ಥಕವಾಗದ ದಿವ್ಯಸಾಧನ.
ಮಾನವಜೀವನ ಸಾರ್ಥಕವಾಗಬೇಕಾದರೆ ತನ್ನತನವನ್ನು ಪೂರ್ಣವಾಗಿ ಲಯವಾಗಿಸಬೇಕು. ತಾನು ಸಮಾಜಜೀವಿ, ಓರ್ವನೇ ಜೀವಿಸಲಾರೆ ಎಂಬ ಸತ್ಯವನ್ನು ತಿಳಿದು ಅದಕ್ಕೆ ಬೇಕಾದ ಸಮಸ್ತವನ್ನೂ ಅರಿಯದೆ ಮುಂದುವರೆಯಲು ಸಾಧ್ಯವಾಗದು. ಸಮಾಜದಿಂದ ಮುಂದೆ ಹೋಗುವಾಗ ರಾಷ್ಟ್ರದ ವಿಚಾರ ಬರುತ್ತದೆ. ಆದ್ದರಿಂದ ಸಮಾಜಪ್ರಜ್ಞೆ, ರಾಷ್ಟ್ರಪ್ರಜ್ಞೆ ಅಗತ್ಯವಾಗಿವೆ. ಇದನ್ನು ಅರಿಯಲು ತಾನು ಹೋಗಬೇಕಾದುದು ಎಲ್ಲಿಗೆ ಎಂಬುದರ ಸ್ಪಷ್ಟ ಅರಿವು ಆದಾಗ ಈ ಆದರ್ಶ ಸೂತ್ರಗಳಿಂದ ಸದಾ ಕರ್ತವ್ಯೋನ್ಮುಖರಾಗಬೇಕಾದುದು ಅನಿವಾರ್ಯವಾಗುತ್ತದೆ. ಆದ ಕಾರಣ ಜೀವನಾದರ್ಶನದ ವಿಚಾರಗಳನ್ನು ನಾವು ತಿಳಿದುಕೊಂಡು ಮುಂದಿನ ಜನಾಂಗಕ್ಕೆ ಮಾರ್ಗದರ್ಶನ ನೀಡಲು ಅನುಕೂಲವಾಗುವುದು.
-ಪಂ. ಸುಧಾಕರ ಚತುರ್ವೇದಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ