ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಸೋಮವಾರ, ನವೆಂಬರ್ 8, 2010

ಹಿಂದುತ್ವ ಸಸ್ಯಾಹಾರಿಯಾಗಬೇಕೆಂದು ಬಯಸುತ್ತದೆಯೇ?

     ಇತ್ತೀಚೆಗೆ ಎರಡು ಪ್ರಶ್ನೆಗಳನ್ನು ಕೇಳಲಾಯಿತು: ಹಿಂದುತ್ವ ದೇವರನ್ನು ನಂಬಬೇಕೆಂದು ಬಯಸುತ್ತದೆಯೇ? ಹಿಂದುತ್ವ ಸಸ್ಯಾಹಾರಿಯಾಗಬೇಕೆಂದು ಬಯಸುತ್ತದೆಯೇ? ನನ್ನ ಇತ್ತೀಚಿನ ಲೇಖನದಲ್ಲಿ ಮೊದಲನೆಯ ಪ್ರಶ್ನೆಗೆ ಉತ್ತರಿಸಿದ್ದೇನೆ. ಎರಡನೆಯ ಪ್ರಶ್ನೆಗೆ ಕೆಲವು ಚಿಂತನಗಳನ್ನು ನಿಮ್ಮ ಮುಂದಿಡುತ್ತೇನೆ.
     ಮೊದಲನೆಯ ಪ್ರಶ್ನೆಗೆ ಸಂಬಂಧಿಸಿದಂತೆ, ನಾನು ಹಿಂದುತ್ವ ಎಂದರೇನು ಮತ್ತು ಯಾರು ನಿಜವಾಗಿಯೂ ಹಿಂದು ಎಂಬ ಕುರಿತು ಚರ್ಚಿಸಿದ್ದೇನೆ. ಸಾರಾಂಶ ರೂಪದಲ್ಲಿ ಹೇಳಬೇಕೆಂದರೆ, ಹಿಂದುತ್ವ ಎನ್ನುವುದು ಸನಾತನ ಧರ್ಮ ಮತ್ತು ಆ ಧರ್ಮ ಅನಾದಿ ಕಾಲದ್ದು - ಅದು ಮೋಕ್ಷ ಸಂಪಾದನೆಯ ಮಾರ್ಗ ಹುಡುಕುವುದನ್ನು ಒಳಗೊಂಡಿದೆ. ಆದ್ದರಿಂದ ಯಾರು ಮೋಕ್ಷ ಬಯಸುತ್ತಾರೋ ಅವರು- ಅವರು ಯಾವ ರಾಷ್ಟ್ರೀಯರು, ಜಾತಿಯವರು, ಜನಾಂಗದವರು ಅಥವ ಲಿಂಗದವರು ಎಂಬ ಭೇಧವಿಲ್ಲದೆ- ನಿಜವಾದ ಹಿಂದು. ಆ ರೀತಿಯ ವಿಶಾಲ ಮನೋಭಾವದ ತಿಳುವಳಿಕೆಯಲ್ಲಿ ಹಿಂದುತ್ವ ಅನ್ನುವುದು ಜೀವನದ ರೀತಿ ಆಗುತ್ತದೆ, ಏಕೆಂದರೆ ಜೀವನದ ಮುಖ್ಯ ಉದ್ದೇಶವಾದ ಹುಡುಕಾಟವೇ ಹಿಂದೂ ಜೀವನದ ಗುರಿ.
     ಮೇಲಿನ ಹಿನ್ನೆಲೆಯಲ್ಲಿ, ಎಲ್ಲಾ ಇತರ ಪ್ರಶ್ನೆಗಳನ್ನು, ಹಿಂದುತ್ವ ಸಸ್ಯಹಾರಿಯಾಗಿರಬೇಕೆಂದು ಬಯಸುತ್ತದೆಯೇ ಎಂಬ ಪ್ರಶ್ನೆ ಸೇರಿದಂತೆ, ಬಿಡಿಸಲು ಸುಲಭವೆನಿಸುತ್ತದೆ. ಜೀವನದ ಉದ್ದೇಶ ಮುಕ್ತಿ ಅಥವ ಮೋಕ್ಷವನ್ನು ಪಡೆಯುವುದಾದ್ದರಿಂದ ಅದನ್ನು ಪಡೆಯುವವರೆಗೆ ನಾವು ಬದುಕಿರಬೇಕು. ಸಾವು ಮಾತ್ರ ಮಾನಸಿಕ ಜಾಗೃತಿಯಾದಾಗ ಬರುವ ನಾನತ್ವದ ಸಾವು ತರಬಲ್ಲದು. ಆದ್ದರಿಂದ ದೇಹವನ್ನು ಸಧೃಢವಾಗಿ ಇಟ್ಟುಕೊಳ್ಳುವುದು ನಮ್ಮ ಧರ್ಮ. ಅದರ ಅರ್ಥ ಬದುಕಲಿಕ್ಕಾಗಿ ತಿನ್ನಬೇಕು (ಇನ್ನೊಂದು ರೀತಿಯಲ್ಲಿ ಅಲ್ಲ - ತಿನ್ನುವ ಸಲುವಾಗಿ ಬದುಕುವುದು!)
     ಜೀವನ ಜೀವದ ಮೇಲೆ ಜೀವಿಸಿದೆ. ಅದು ಪ್ರಕೃತಿಯ ನಿಯಮ. ನಾನು ಒಂದು ಪ್ರಾಣಿಯನ್ನು ತಿನ್ನುತ್ತೇನೋ ಅಥವ ಒಂದು ಸಸ್ಯವನ್ನು ತಿನ್ನುತ್ತೇನೋ, ಒಟ್ಟಿನಲ್ಲಿ ಒಂದು ಜೀವವನ್ನು ನಾಶಪಡಿಸಿದಂತೆಯೇ. ಎಲ್ಲಾ ಬಗೆಯ ಜೀವಮಾತ್ರರಲ್ಲಿ ಮಾನವ ಇತರ ಜೀವಿಗಳಿಗಿಂತ ಭಿನ್ನ. ಅವನಿಗೆ ಒಳ್ಳೆಯದು ಯಾವುದು, ಕೆಟ್ಟದು ಯಾವುದು ಎಂದು ತುಲನೆ ಮಾಡುವ ಶಕ್ತಿಯಿದೆ. ಅದು ಅವನಿಗೆ ಆಯ್ಕೆಯ ಸ್ವಾತಂತ್ರ್ಯವನ್ನೂ ಕೊಟ್ಟಿದೆ. ಸಸ್ಯಗಳು ಕೇವಲ ದೇಹ ಮತ್ತು ಬಹುಷಃ ಪ್ರಾರಂಭಿಕ ಹಂತದ ಮನಸ್ಸು ಹೊಂದಿರಬಹುದು. ಪ್ರಾಣಿಗಳು ದೇಹ ಮತ್ತು ಭಾವನೆಗಳು ಹಾಗೂ ನೋವನ್ನು ವ್ಯಕ್ತಪಡಿಸುವ ಮನಸ್ಸು ಹೊಂದಿರುವುದರ ಜೊತೆಗೆ ಪ್ರಾರಂಭಿಕ ಹಂತದ ಬುದ್ಧಿಶಕ್ತಿ ಹೊಂದಿರಬಹುದು. ಮಾನವ ದೇಹ ಮಾತ್ರವಲ್ಲ, ಮನಸ್ಸು ಮತ್ತು ಪರಿಶೀಲಿಸುವ, ನಿರ್ಧರಿಸುವ ಮತ್ತು ಆಯ್ಕೆ ಮಾಡುವ ಉತ್ತಮ ಬೆಳವಣಿಗೆ ಹೊಂದಿದ ಬುದ್ಧಿಶಕ್ತಿಯನ್ನೂ ಹೊಂದಿದ್ದಾನೆ. ಅವನಿಗೆ ಯಾವಾಗಲೂ ಮೂರು ಅವಕಾಶಗಳಿವೆ - ಕರ್ತುಂ ಶಖ್ಯಂ, ಅಕರ್ತುಂ ಶಖ್ಯಂ ತಥಾ ಅನ್ಯಥಾ ಕರ್ತುಂ ಶಖ್ಯಂ - ಅವನು ಬೇಕೆಂದರೆ ಮಾಡಬಹುದು, ಮಾಡದಿರಬಹುದು ಮತ್ತು ಬೇರೆ ರೀತಿಯಲ್ಲಿ ಮಾಡಬಹುದು. ಪ್ರಾಣಿಗಳಿಗೆ ಮತ್ತು ಸಸ್ಯಗಳಿಗೆ ಆಯ್ಕೆಯ ಸ್ವಾತಂತ್ರ್ಯವಿರುವುದಿಲ್ಲ. ಅವು ಸಹಜ ರೀತಿಯಲ್ಲಿ ವರ್ತಿಸುತ್ತವೆ. ಹಸು ಊಟದ ಮುಂದೆ ಕುಳಿತು ತಾನು ಸಸ್ಯಹಾರಿಯಾಗಿರಬೇಕೋ ಅಥವ ಮಾಂಸಾಹಾರಿಯಾಗಿರಬೇಕೋ ಎಂದು ವಿಚಾರಿಸುತ್ತಾ ಕುಳಿತುಕೊಳ್ಳುವುದಿಲ್ಲ. ಅದೇ ರೀತಿ ಹುಲಿ ಸಹಾ. ಮನುಷ್ಯನಿಗೆ ಅಂತಹ ವಿವೇಚಿಸುವ ಬುದ್ಧಿ, ಶಕ್ತಿ ಇದೆ. ಸಸ್ಯಗಳು ಮತ್ತು ಪ್ರಾಣಿಗಳು ತಮ್ಮ ಕ್ರಿಯೆಗಳಲ್ಲಿ ಪಾಪ ಮಾಡುವುದಿಲ್ಲ, ಏಕೆಂದರೆ ಅವುಗಳ ಕ್ರಿಯೆಗಳಲ್ಲಿ ಇಚ್ಛಾಶಕ್ತಿ ಇರುವುದಿಲ್ಲ. ಆದರೆ ಮನುಷ್ಯನ ವಿಷಯದಲ್ಲಿ ಕಥೆಯೇ ಬೇರೆ. ನಿಮಗೆ ಈ ಚರ್ಚೆಯಲ್ಲಿ ಪಾಪವನ್ನು ಏಕೆ ತಂದೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಇರಲಿ, ವಿವರಿಸುತ್ತೇನೆ.
     ಪಾಪ ಎಂಬುದು ಮನಸ್ಸಿನ ತುಮುಲಗಳೇ ಹೊರತು ಮತ್ತೇನೂ ಅಲ್ಲ. ಈ ತುಮುಲಗಳೇ ಮೋಕ್ಷದೆಡೆಗಿನ ನನ್ನ ಪ್ರಯಾಣವನ್ನು ಅಡ್ಡಿಪಡಿಸುವುದು. ನಾನು ಸತ್ಯವನ್ನು ಸತ್ಯವಾಗೇ ಕಾಣಲು ಮನಸ್ಸು ಶುದ್ಧವಾಗಿರಬೇಕು (ಅಂದರೆ ತುಮುಲಗಳಿರಬಾರದು). (ಬೈಬಲ್ ಸಹ ಯಾರ ಮನಸ್ಸುಗಳು ಶುದ್ಧವಾಗಿದೆಯೋ ಅವರು ಅನುಗ್ರಹಿತರು ಎಂದು ಹೇಳುತ್ತದೆ.) ಪಾಪವನ್ನು ಹೆಚ್ಚು ವೈಜ್ಞಾನಿಕವಾಗಿ ವಿವರಿಸಬೇಕೆಂದರೆ - ಅದು ಮನಸ್ಸು ಮತ್ತು ಬುದ್ಧಿಶಕ್ತಿಗಳಲ್ಲಿನ ಅಂತರ. ಬುದ್ಧಿಶಕ್ತಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಗೊತ್ತಿರುತ್ತದೆ - ಆದರೂ ನಮಗೆ ತಪ್ಪೆಂದು ಗೊತ್ತಿದ್ದರೂ ಅದನ್ನೇ ಮಾಡುವಂತೆ ಆಗುತ್ತದೆ - ಅಂದರೆ ಬುದ್ಧಿಶಕ್ತಿ ಒಂದು ಹೇಳುತ್ತದೆ, ಆದರೆ ಬುದ್ಧಿಶಕ್ತಿ ಹೇಳಿದಂತೆ ಕೇಳಬೇಕಾದ ಮನಸ್ಸು ಬಂಡೆದ್ದು ತನಗೆ ಬೇಕಾದಂತೆ ಮಾಡುತ್ತದೆ. ಈ ಅಂತರವೇ ಪಾಪ. ಆ ರೀತಿ ಮಾಡಿದ ನಂತರ ಏನೋ ತಪ್ಪು ಮಾಡಿದ ಭಾವ ಮೂಡುತ್ತದೆ, ಏಕೆಂದರೆ ಬುದ್ಧಿಶಕ್ತಿ ತಾನು ಸೋತಿದ್ದರೂ ಸುಮ್ಮನಿರುವುದಿಲ್ಲ, ಅದು ನಾನು ಅದು ತಪ್ಪು ಎಂದು ಹೇಳಿದೆ. ಆದರೂ ಅದನ್ನು ಏಕೆ ಮಾಡಿದೆ? ಎಂದು ಚುಚ್ಚುತ್ತಲೇ ಇರುತ್ತದೆ. ಮನಸ್ಸಿನ ಶಾಂತಿ ಹೋದ ಮೇಲೆ ಮನುಷ್ಯನಿಗೆ ನರಕದ ಅನುಭವವಾಗುತ್ತದೆ. ಮನುಷ್ಯ ಪಾಪಕ್ಕಾಗಿ ಶಿಕ್ಷಿಸಲ್ಪಡುವುದಿಲ್ಲ, ಪಾಪದಿಂದ ಶಿಕ್ಷಿಸಲ್ಪಡುತ್ತಾನೆ. ಅದರ ಕುರಿತು ಚಿಂತಿಸಿ.
     ಎಲ್ಲಾ ಯೋಗಗಳೂ, ನೀವು ಸ್ಪಷ್ಟವಾಗಿ ವಿಮರ್ಶಿಸಿದರೆ, ದೇಹ, ಮನಸ್ಸು ಮತ್ತು ಬುದ್ಧಿಶಕ್ತಿಯನ್ನು ಒಗ್ಗೂಡಿಸುವ ಕ್ರಿಯೆಗಳೇ ಆಗಿವೆ. ಒಬ್ಬ ಯೋಗಿಗೆ - ಆತ ಏನು ಯೋಚಿಸುತ್ತಾನೆ, ಏನು ಮಾತನಾಡುತ್ತಾನೆ ಮತ್ತು ಏನು ಮಾಡುತ್ತಾನೆ ಎಲ್ಲವೂ ಒಂದೇ ರೀತಿಯದಾಗಿರುತ್ತದೆ, ಹೊಂದಾಣಿಕೆಯಿರುತ್ತದೆ (ಮನಸಾ -ವಾಚಾ - ಕರ್ಮಣಾ). ನಮ್ಮ ವಿಷಯದಲ್ಲಿ, ನಾವು ಯೋಚಿಸುವುದೇ ಒಂದು, ಆದರೆ ನಾವು ಏನು ಯೋಚಿಸುತ್ತೇವೆಯೋ ಅದನ್ನು ಹೇಳುವ ಧೈರ್ಯವಿರುವುದಿಲ್ಲ, ನಮ್ಮ ತುಟಿಗಳು ನಾವು ಯೋಚಿಸಿದ್ದಕ್ಕಿಂತ ಭಿನ್ನವಾಗಿ ಬೇರೇನನ್ನೋ ಹೇಳುತ್ತವೆ; ನಾವು ಆಡಿದ ಮಾತು ಮತ್ತು ನಂತರ ನಾವು ಮಾಡುವ ಕೆಲಸ, ಮತ್ತೆ ಅಲ್ಲಿ ವ್ಯತ್ಯಾಸ! - ಎಲ್ಲೂ ಸಮನ್ವಯತೆ ಇಲ್ಲವೇ ಇಲ್ಲ. ನಾವು ಗೊಂದಲದ ಜೀವನ ನಡೆಸುತ್ತಿದ್ದೇವೆ. ನಾವು ಇನ್ನೊಬ್ಬರನ್ನು ಮೋಸ ಮಾಡುವುದರ ಜೊತೆಗೆ ಇನ್ನೂ ಶೋಚನೀಯವೆಂದರೆ ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುತ್ತಿದ್ದೇವೆ, ಮತ್ತೂ ಶೋಚನೀಯವೆಂದರೆ ನಮಗೆ ಅದರ ಅರಿವೇ ಬರುವುದಿಲ್ಲ!
     ಈಗ ಒಂದು ಹುಲಿ ಬೇಟೆಯಾಡಿ ತಿಂದರೆ ಅದು ಪಾಪ ಮಾಡಿದಂತೆ ಆಗುವುದಿಲ್ಲ. ಏಕೆಂದರೆ ಅದರ ಬುದ್ಧಿಶಕ್ತಿ ಪ್ರಾರಂಭಿಕ ಹಂತದಲ್ಲಿದ್ದು, ಅದು ಕೊಲ್ಲುವ ಮುನ್ನ - ಕೊಲ್ಲಬೇಕೋ ಅಥವಾ ಬೇಡವೋ, ನಾನು ಮಾಂಸಾಹಾರಿಯಾಗಿರಬೇಕೋ ಅಥವ ಸಸ್ಯಾಹಾರಿಯಾಗಿರಬೇಕೋ - ಎಂದು ವಿಮರ್ಶಿಸುತ್ತಾ ಕೂರುವುದಿಲ್ಲ. ಅದಕ್ಕೆ ಹಸಿವಾದಾಗ, ಪ್ರಾಕೃತಿಕ ಬೇಡಿಕೆ ಈಡೇರಿಸಿಕೊಳ್ಳಲು ತನ್ನ ಬೇಟೆಯನ್ನು ಕೊಲ್ಲುತ್ತದೆ ಮತ್ತು ತಿನ್ನುತ್ತದೆ ಮತ್ತು ಅಗತ್ಯವಿರುವಷ್ಟು ತಿಂದ ನಂತರ ಉಳಿದುದನ್ನು ಬಿಡುತ್ತದೆ. ಅದಕ್ಕೆ ಹೊಟ್ಟೆಬಾಕತನ ಇಲ್ಲ. ಅದು ಅದರ ಸ್ವಧರ್ಮ. ಅದು ಸುಂದರ ಪರಿಸರ ವ್ಯವಸ್ಥೆಯನ್ನು ಪಾಲಿಸುತ್ತದೆ. ಮನುಷ್ಯನೊಬ್ಬ ಮಾತ್ರ ತನ್ನ ಹೊಟ್ಟೆಬಾಕತನದಿಂದ ಪರಿಸರ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದಾನೆ. ನಾನು ಸಸ್ಯಾಹಾರಿಯಾಗಿರಬೇಕೆ ಅಥವ ಮಾಂಸಾಹಾರಿಯಾಗಬೇಕೆ? ಎಂಬ ಪ್ರಶ್ನೆ ಅವನೊಬ್ಬನಿಂದ ಮಾತ್ರ ಬರಲು ಸಾಧ್ಯ. ಆ ಪ್ರಶ್ನೆ ಏಕೆ ಬರುತ್ತದೆ? ಏಕೆಂದರೆ ಅವನಿಗೆ ವಿವೇಚನೆ ಮಾಡುವ ಬುದ್ಧಿಶಕ್ತಿ ಇದೆ ಮತ್ತು ಅವನು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಇತರರನ್ನು ನೋಯಿಸಲು ಬಯಸದಿರುವುದರಿಂದ. ಆತನಿಗೆ ನೋವು ಎಂದರೆ ಏನೆಂದು ಗೊತ್ತಿದೆ, ಏಕೆಂದರೆ ಆತ ಇತರರು ಅವನಿಗೆ ನೋವುಂಟುಮಾಡಬಾರದೆಂದು ಬಯಸುತ್ತಾನೆ. ಸಸ್ಯಗಳೂ ಸಹ ಜೀವಿಗಳೇ, ಅವುಗಳಿಗೆ ನೋವುಂಟು ಮಾಡಬಹುದೇ? ಎಂದು ನೀವು ಕೇಳಬಹುದು. ಯಾವುದೇ ಜೀವ ವೈವಿಧ್ಯಕ್ಕೆ ಹಾನಿಯುಂಟು ಮಾಡದೆ ಬದುಕಲು ಸಾಧ್ಯವಿದ್ದರೆ ಅದು ಅತ್ಯುತ್ತಮ, ಆದರೆ ಅದು ಸಾಧ್ಯವಿಲ್ಲ. ಜೀವನ ಜೀವದ ಮೇಲೆ ಜೀವಿಸಿದೆ - ಅದು ಪ್ರಕೃತಿಯ ನಿಯಮ. ವಿವೇಚನಾಶಕ್ತಿಯುಳ್ಳ ಮನುಷ್ಯನಾಗಿ ನನ್ನ ಪಾತ್ರವೆಂದರೆ ನಾನು ಬದುಕಿರುವ ಸಲುವಾಗಿ ಪ್ರಕೃತಿಗೆ ಕನಿಷ್ಠ ಹಾನಿಯಾಗುವಂತೆ ನೋಡಿಕೊಳ್ಳುವುದು. ಸಸ್ಯಗಳ ನೋವಿನ ಬಗ್ಗೆ ನನಗೆ ಸ್ಪಷ್ಟ ತಿಳುವಳಿಕೆಯಿಲ್ಲ. ಆದ್ದರಿಂದ ಬದುಕಲಿಕ್ಕಾಗಿ ತಿನ್ನುವುದು ಮತ್ತು ತಿನ್ನಲಿಕ್ಕಾಗಿ ಬದುಕದಿರುವುದು ನಿರ್ಣಾಯಕ ಅಂಶವಾಗುತ್ತದೆ.
      ಭಗವದ್ಗೀತೆಯಲ್ಲಿ ಕೃಷ್ಣ ಒತ್ತಿ ಹೇಳುವುದೇನೆಂದರೆ ಒಬ್ಬ ಸಾಧಕ (ಮೋಕ್ಷಕ್ಕಾಗಿ ಹಂಬಲಿಸುವವನು) ಎಲ್ಲಾ ಜೀವಿಗಳ ವಿಷಯದಲ್ಲಿ ಅನುಕಂಪ ಹೊಂದಿರಬೇಕೆಂದು (ಸರ್ವ ಭೂತ ಹಿತೇರಥಾಃ). ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಬುದ್ಧಿಶಕ್ತಿ ಹರಿತವಾಗುತ್ತಾ ಹೋಗುತ್ತದೆ - ತೀಕ್ಷ್ಣ ಬುದ್ಧಿ ಸೂಕ್ಷ್ಮ ಬುದ್ಧಿಯಾಗುತ್ತಾ ಹೋಗುತ್ತದೆ. ಅಂದರೆ, ಮನಸ್ಸು ತಳಮಳರಹಿತ, ಶಾಂತ ಮತ್ತು ಸ್ವ-ನಿಯಂತ್ರಿತವಾಗುತ್ತದೆ. ಇತರರ ನೋವುಗಳಿಗೆ ಸ್ಪಂದಿಸುವ ಗುಣ ಸಹ ಬೆಳೆಯುತ್ತಾ ಹೋಗುತ್ತದೆ. ಆದ್ದರಿಂದ ಸಸ್ಯಾಹಾರಿಯಾಗುವುದು ಸೂಕ್ತ.
     ಸಾಂಪ್ರದಾಯಿಕ ಮಾಂಸಾಹಾರಿಗಳೂ ಸಹ ನಾಯಿಗಳು ಮತ್ತು ಬೆಕ್ಕುಗಳು ಅಥವ ಇತರ ಮಾನವ ಪ್ರಾಣಿಗಳನ್ನು ತಿನ್ನಲು ಇಷ್ಟಪಡುವುದಿಲ್ಲ! ಏಕೆ? ಎಷ್ಟೇ ಆದರೂ ಮಾಂಸ ಅಂದರೆ ಮಾಂಸವೇ! ಆದರೆ ಬಳಕೆಯಿಂದ ಅನುಕಂಪ ಬೆಳೆದಿರುತ್ತದೆ. ಮಾನವನನ್ನೇ ಹೋಲುವ ಆದರೆ ಪ್ರಾರಂಭಿಕ ಬುದ್ಧಿಶಕ್ತಿ ಹೊಂದಿರುವ ಹಲವು ಎರಡು ಕಾಲಿನ ಪ್ರಾಣಿಗಳಿವೆ. ಅವು ಪ್ರಾಣಿಗಳಂತೆ ವರ್ತಿಸುತ್ತವೆ. ಆದರೆ ವಿಕಸನವಾಗುತ್ತಾ ಹೋದಂತೆ ಅವುಗಳ ಬುದ್ಧಿಶಕ್ತಿ ಬೆಳೆಯುತ್ತಾ ಹೋಗುತ್ತದೆ ಎಂಬುದನ್ನು ಗಮನಿಸಿದರೆ ಪ್ರಕೃತಿಯಿಂದ ಎಷ್ಟು ಬೇಕೋ ಅಷ್ಟನ್ನು ಪಡೆದು ಸಸ್ಯಾಹಾರಿಯಾಗಿರುವುದು ಸೂಕ್ತವೆನಿಸುತ್ತದೆ. ಕೇವಲ ನಾಲಗೆಯ ಚಪಲವನ್ನು ತೃಪ್ತಿ ಪಡಿಸುವ ಸಲುವಾಗಿ ಯಾವುದೇ ಜೀವವಿಧಗಳನ್ನು ಘಾಸಿಗೊಳಿಸಬಾರದು.
     ಹಿಂದೂ ಒಬ್ಬ ಸಸ್ಯಾಹಾರಿಯಾಗಿರಬೇಕೇ? ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಾಗಲೇ ಉದ್ಭವಿಸಿರಬಹುದು, ನಿಮ್ಮ ಹೊಟ್ಟೆಯನ್ನು ತೃಪ್ತಿಪಡಿಸಲು ಇತರ ಜೀವಗಳನ್ನು ನೋಯಿಸಬಾರದೆಂಬ ಸೂಕ್ಷ್ಮತೆ ನಿಮಗೆ ಇದೆಯೆಂದು ಭಾವಿಸುವೆ. ಹಾಗಿದ್ದಲ್ಲಿ ನೀವು ಮಾಂಸಾಹಾರದಿಂದ ದೂರವಿರುವುದು ಉತ್ತಮ ಮತ್ತು ಆಗ ನೀವು ನಿಮ್ಮ ಬುದ್ಧಿಶಕ್ತಿಯೊಂದಿಗೆ ಶಾಂತವಾಗಿರಬಹುದು. ನೀವು ಸೂಕ್ಷ್ಮ ಭಾವನೆಯುಳ್ಳವರಾಗಿದ್ದರೆ, ನಿಮ್ಮ ಬುದ್ಧಿಶಕ್ತಿ ಹೇಳುವುದೇ ಒಂದಾದರೆ ಮತ್ತು ನಿಮ್ಮ ಮನಸ್ಸು ಕೆಳ ಸಂತೋಷಗಳನ್ನು ಬಯಸಿ ಬೇರೆ ದಾರಿಯಲ್ಲಿ ನಿರ್ದೇಶಿಸಿದರೆ ಮತ್ತು ನೀವು ನಿಮ್ಮ ಬುದ್ಧಿ ಹೇಳಿದ ದಾರಿ ಬಿಟ್ಟು ನಡೆದರೆ ನೀವು ಪಾಪ ಮಾಡಿದಂತೆ ಆಗುತ್ತದೆ. ಕೃಷ್ಣ ಹೇಳಿದಂತೆ ಅದು ನಿಮ್ಮ ಸ್ವಧರ್ಮದ ವಿರುದ್ಧವಾಗುತ್ತದೆ. ಜೊತೆಗೆ, ಈಗ ಸಾಂಪ್ರದಾಯಿಕ ಮಾಂಸಾಹಾರಿಗಳೂ ಸಸ್ಯಾಹಾರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ, ಇತರ ಪ್ರಾಣಿಗಳ ಬಗ್ಗೆ ಅನುಕಂಪದಿಂದಲ್ಲ, ಆದರೆ ಅದು ತಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲವೆಂಬ ಕಾರಣಕ್ಕಾಗಿ.
     ನಾನಾಗಲೇ ತಿಳಿಸಿದ್ದೇನೆ, ಹಿಂದುತ್ವದಲ್ಲಿ ಹೀಗೆ ಮಾಡಿ ಮತ್ತು ಹೀಗೆ ಮಾಡಬೇಡಿ ಎಂಬುದಿಲ್ಲ, ಆದರೆ ನೀವು ನಿಮ್ಮ ಸ್ವಂತದ ಮಾಡಬಹುದಾದ ಮತ್ತು ಮಾಡಬಾರದ ಸಂಗತಿಗಳನ್ನು ನಿಮ್ಮ ಬುದ್ಧಿಶಕ್ತಿಯ ಮೌಲ್ಯ, ಸಂಸ್ಕೃತಿ, ಶಿಕ್ಷಣ ಮತ್ತು ಬದುಕಿನ ಪ್ರಾಥಮಿಕ ಗುರಿ ಆಧರಿಸಿ ನಿರ್ಧರಿಸಿಕೊಳ್ಳಿ. ನಿಮ್ಮ ಸ್ವಧರ್ಮವನ್ನು ನೀವು ಪಾಲಿಸುವುದರಿಂದ ನೀವು ನಿಮ್ಮೊಂದಿಗೆ ಸಮಾಧಾನದಿಂದಿರುವುದನ್ನು ಕಂಡುಕೊಳ್ಳುವಿರಿ. ಅದನ್ನು ಬೇರೆಯವರು ನಿರ್ಣಯಿಸುವುದಲ್ಲ, ನೀವೇ ನಿರ್ಣಯಿಸಿಕೊಳ್ಳುವುದು. ನೀವು ತಳಮಳಕ್ಕೆ ಒಳಗಾದಿರೆಂದರೆ ಅದರ ಅರ್ಥ ನೀವು ಅದರಿಂದ ಮನಸ್ಸಿನ ಶಾಂತಿ ಕಳೆದುಕೊಳ್ಳುತ್ತಿರುವಿರೆಂದು ಮತ್ತು ಅದೇ ಪಾಪ. ನಿಮ್ಮನ್ನು ನೀವೇ ನೀವು ತಿನ್ನುವ ಕೋಳಿ ಅಥವ ಹಸು ಎಂದಿಟ್ಟುಕೊಳ್ಳಿ. ನೀವು ನಿಮ್ಮನ್ನು ತಿನ್ನುವವರನ್ನು ಸಸ್ಯಾಹಾರಿಗಳಾಗಲು ಮತ್ತು ನಿಮ್ಮ ಜೀವ ಉಳಿಸಲು ಹೇಳುವುದಿಲ್ಲವೇ? ನೀವು ಪ್ರಾಣಿಯನ್ನು ನೀವೇ ಕೊಲ್ಲುತ್ತಿಲ್ಲವೆಂದೂ ಮತ್ತು ನೀವು ತಿಂದರೂ, ತಿನ್ನದಿದ್ದರೂ ಪ್ರಾಣಿಗಳು ಕೊಲೆಯಾಗುವುವು ಎಂದು ಹೇಳದಿರಿ. ನೀವು ತಿನ್ನದಿದ್ದರೆ ಒಂದು ಪ್ರಾಣಿ ಉಳಿಯುತ್ತದೆ. ಅದೇ ಬೇಡಿಕೆ ಮತ್ತು ಪೂರೈಕೆ. ನಾನು ಸ್ವತಃ ಕದಿಯದಿರಬಹುದು, ಆದರೆ ಕದ್ದ ಮಾಲನ್ನು ಅದು ಕದ್ದಮಾಲು ಎಂದು ಗೊತ್ತಿದ್ದೂ ಕೊಂಡರೆ, ಅದು ಅಪರಾಧ! ಅಲ್ಲವೇ? ಈಗ ಕೃತಕ ಮಾಂಸಗಳೂ ದೊರೆಯುತ್ತವೆ - ಆದ್ದರಿಂದ ಸತ್ತ ಮಾಂಸಕ್ಕೇಕೆ ಹಂಬಲಿಸಬೇಕು? ನಿಮ್ಮ ಹೊಟ್ಟೆಯನ್ನು ಸತ್ತ ಪ್ರಾಣಿಯ ಸ್ಮಶಾನವಾಗಬೇಕೆಂದು ಏಕೆ ಬಯಸುವಿರಿ?
     ಹಿಂದುತ್ವದ ದೃಷ್ಟಿಯಿಂದ ನೋಡಿದರೆ ಅದು ಇದನ್ನೆಲ್ಲಾ ಗಮನಿಸುವುದೇ ಇಲ್ಲ. ಅದು ಬಯಸುವುದೇನೆಂದರೆ ಸನಾತನ ಧರ್ಮದ ದಾರಿಯಲ್ಲಿ ನಡೆಯಬೇಕೆಂದಷ್ಟೆ. ಆದ್ದರಿಂದ ನಿಮ್ಮ ಮನಸ್ಸನ್ನು ಶಾಂತವಾಗಿ ಮತ್ತು ತಳಮಳರಹಿತವಾಗಿರುವಂತೆ ನೋಡಿಕೊಳ್ಳಲು ಏನು ಮಾಡಬೇಕೋ ಅದನ್ನು ಮಾಡಿ. ಮನಸ್ಸಿನ ಶುದ್ಧತೆಯೇ ಮೋಕ್ಷ ಪಡೆಯುವ ದಾರಿ ಮತ್ತು ಅದು ಮಾನವ ಜೀವನದ ಗುರಿ. ನಾವು ಇಷ್ಟಪಟ್ಟು ಮಾಡಿದ ಕ್ರಿಯೆಗಳಿಂದ ಈ ಸಂಸಾರದ ಜಂಜಾಟಕ್ಕೆ ಸಿಲುಕಿದ್ದು, ನಾವು ಇಷ್ಟಪಟ್ಟು ಮಾಡುವ ಸಾಧನೆಯೊಂದೇ ಅದರಿಂದ ಹೊರಬರಲು ಸಾಧ್ಯ. ಭಗವಂತ ನಮಗೆ ಇದನ್ನು ಸಾಧಿಸಲು ಬುದ್ಧಿಶಕ್ತಿ ಕೊಟ್ಟಿದ್ದಾನೆ. ಕೃಷ್ಣ ಘೋಷಿಸಿದ್ದಾನೆ -ಪರಧರ್ಮಕ್ಕಿಂತ ಸ್ವಧರ್ಮದಲ್ಲಿ ಸಾಯುವುದು ಮೇಲು. ಸ್ವಧರ್ಮ (ಅದು ನೀವು ಯಾವ ಜಾತಿ ಅಥವ ಧರ್ಮಕ್ಕೆ ಸೇರಿರುವಿರಿ ಎಂಬುದಲ್ಲ) ಎಂದರೆ ಅಂತಿಮವಾಗಿ ನಿಮ್ಮ ಬುದ್ಧಿಶಕ್ತಿ ಅಥವ ಅಂತಃಸಾಕ್ಷಿ ಏನು ಹೇಳುತ್ತದೆಯೋ ಅದು. ಏಕೆಂದರೆ, ಕ್ರಿಯೆ ಮಾಡಿದ ನಂತರ ನಿಮ್ಮ ಮನಸ್ಸೇ ನಿಮ್ಮ ಬುದ್ಧಿಶಕ್ತಿಯೊಂದಿಗೆ ಲೆಕ್ಕ ಇತ್ಯರ್ಥ ಮಾಡಿಕೊಳ್ಳಬೇಕಿರುವುದು.
     ನಿಮಗೆ ನೀವೇ ಒಂದು ಉಪಕಾರ ಮಾಡಿಕೊಳ್ಳಿರಿ - ನಿಮಗೆ ಯಾವುದು ಅಗತ್ಯವಿದೆಯೋ ಅದನ್ನು ತಿನ್ನಿ ಮತ್ತು ಯಾವುದು ನಿಜವಾಗಿಯೂ ಅಗತ್ಯವಿಲ್ಲವೋ ಅದನ್ನು ಬಿಟ್ಟುಬಿಡಿ. ಆ ರೀತಿಯಲ್ಲಿ ನಿಮ್ಮ ಜೀವನವನ್ನು ಸರಳ, ಶಾಂತ ಮತ್ತು ಕಡಿಮೆ ಕೊಲೆಸ್ಟರಾಲ್ ನೊಂದಿಗೆ ಆರೋಗ್ಯವಂತವಾಗಿ ಮಾಡಿಕೊಳ್ಳಿ.
*********
     ಮೂರ್ಖ ಮಾತ್ರ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಬುದ್ಧಿವಂತ ಗಂಭೀರವಾಗಿ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾನೆ.
ಜಾಣ ಗಂಭೀರವಾಗಿ ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆತನಿಗೆ ಜೀವನವೆಂದರೆ ಅತ್ಯುತ್ತಮವಾಗಿ ಆಡಬೇಕಾದ ಆಟ! ಗೆಲ್ಲಲಿ ಅಥವ ಸೋಲಲಿ, ಆಡುವುದರಲ್ಲಿ ಖುಷಿಯಿದೆ.
*********
ಮೂಲ ಇಂಗ್ಲಿಷ್ ಲೇಖನ: ಡಾ. ಕೆ. ಸದಾನಂದ, ವಾಷಿಂಗ್ಟನ್, ಡಿ.ಸಿ. ೨೦೩೭೫.
ಕನ್ನಡ ಅನುವಾದ :        ಕವಿ ನಾಗರಾಜ್.

ಏನಂತೆ? ? . . . . ! !

ಏನಂತೆ? ಸೋತರೇನಂತೆ?
ಸೋಲೆಂಬುದೇನೆಂದು ತಿಳಿಯಿತಂತೆ !
ಗೆಲುವಿನ ದಾರಿಯದು ಕಂಡಿತಂತೆ !!

ಏನಂತೆ? ಬಿದ್ದರೇನಂತೆ ?
ನೋವೆಂಬುದೇನೆಂದು ತಿಳಿಯಿತಂತೆ !
ನೋಡಿ ನಡೆಯಲು ಕಲಿತೆನಂತೆ !!

ಏನಂತೆ? ಹಸಿವಾದರೇನಂತೆ ?
ದುಡಿದು ಉಣ್ಣಲು ಮಾರ್ಗವಂತೆ !
ಹಳಸಿದ ಅನ್ನವೂ ರುಚಿಯಂತೆ !!

ಏನಂತೆ? ದುಃಖವಾದರೇನಂತೆ ?
ಸಂತೋಷದ ದಾರಿ ಸಿಕ್ಕಿತಂತೆ !
ಸುಖವೆಂಬುದೊಳಗೇ ಇದೆಯಂತೆ !!

ಏನಂತೆ? ತಪ್ಪಾದರೇನಂತೆ ?
ನಡೆ ತಿದ್ದಿ ಸಾಗುವ ಮನಸಂತೆ !
ತಲೆ ಎತ್ತಿ ನಡೆಯುವ ಕನಸಂತೆ !!

ಏನಂತೆ? ನಿಂದಿಸಿದರೇನಂತೆ ?
ನಿಂದಕರ ಬಾಯಿ ಹೊಲಸಂತೆ !
ನಾನಾರೆಂದು ನನಗೆ ತಿಳಿಯಿತಂತೆ !!

ಏನಂತೆ? ಸೂರಿಲ್ಲದಿರೇನಂತೆ ?
ಲೋಕವೆ ನನ್ನ ಮನೆಯಂತೆ !
ಬಹು ದೊಡ್ಡ ಮನೆಯೇ ನನ್ನದಂತೆ !!

ಏನಂತೆ? ದಿಕ್ಕಿಲ್ಲದಿರೇನಂತೆ ?
ಜನರೆಲ್ಲ ನನ್ನ ಬಂಧುಗಳಂತೆ !
ಬಲು ದೊಡ್ಡ ಸಂಸಾರ ನನ್ನದಂತೆ !!

-ಕ.ವೆಂ.ನಾಗರಾಜ್.

ಭಾನುವಾರ, ನವೆಂಬರ್ 7, 2010

ಮೂಢ ಉವಾಚ -21

ಭಯದ ಮಹಿಮೆಯನರಿಯದವರಾರಿಹರು?
ಭಯವಿಲ್ಲದಾ ಜೀವಿಯದಾವದಿರಬಹುದು?|
ನಿಶಾಭಯ ಏಕಾಂತಭಯ ಅಭದ್ರತೆಯ ಭಯ
ಭಯದಿಂದ ಮೂಡಿಹನೆ ಭಗವಂತ ಮೂಢ?||


ಭೋಗಿಯಾದವಗೆ ರೋಗಿಯಾಗುವ ಭಯ
ರೋಗಿಯಾದವಗೆ ಸಾವು ಬಂದೆರಗುವ ಭಯ|
ಅಭಿಮಾನಧನನಿಗೆ ಮಾನಹಾನಿಯ ಭಯ
ಭಯದ ಕಲ್ಪನೆಯೇ ಭಯಾನಕವು ಮೂಢ||


ಸತ್ಕುಲಜಾತನಿಗೆ ಹೆಸರು ಕೆಡುವ ಭಯ
ಧನವಿರಲು ಚೋರಭಯ ಮೇಣ್ ರಾಜಭಯ|
ಸಜ್ಜನರಿಂಗೆ ಕುಜನರು ಕಾಡುವ ಭಯ
ಭಯ ಭಯ ಭಯಮಯವೀ ಲೋಕ ಮೂಢ||


ಸಿರಿವಂತನಿಗೆ ದಾರಿದ್ರ್ಯ ಬಂದೀತೆಂಬ ಭಯ
ಬಲಶಾಲಿಯಾದವಗೆ ಶತ್ರು ಸಂಚಿನ ಭಯ|
ಮೇಲೇರಿದವಗೆ ಕೆಳಗೆ ಬಿದ್ದೇನೆಂಬ ಭಯ
ಭಯಮುಕ್ತನವನೊಬ್ಬನೇ ವಿರಾಗಿ ಮೂಢ||
*************
-ಕವಿನಾಗರಾಜ್.

ಗುರುವಾರ, ಅಕ್ಟೋಬರ್ 28, 2010

ಮೊರೆ






ಸರಿಸಿಬಿಡು ಮೂಢಮನ ಆವರಿತ ಪೊರೆಯಾ|
ತೆರೆದುಬಿಡು ಕಿಟಕಿಯನು ಒಳಬರಲಿ ಬೆಳಕು||
ರೂಢಿರಾಡಿಯಲಿ ಸಿಲುಕಿ ತೊಳಲಾಡುತಿಹೆ ನಾನು|
ಕರುಣೆದೋರೈ ದೇವ ಸತ್ಪಥದಿ ಮುನ್ನಡೆಸು||

ಸರ್ವರೊಳ್ಳಿತ ಬಯಸಿ ಸ್ವಂತಹಿತ ಕಡೆಗಿಟ್ಟೆ|
ಸರ್ವದೂಷಿತನಾಗಿ ನೆಲೆಗಾಣದಿದೆ ಮನವು||
ಅರಿಗಳಾರರ ಬಂದಿ ದಿಕ್ಕೆಟ್ಟು ಕುಳಿತಿರುವೆ|
ಸದ್ಗುರುವೆ ಕೃಪೆದೋರಿ ಹಿಡಿದೆತ್ತಿ ಸಂತಯಿಸು||


ಪಂಡಿತನು ನಾನಲ್ಲ ಪಾಂಡಿತ್ಯವೆನಗಿಲ್ಲ|
ಒಳಮನದ ನುಡಿಯೊಂದೆ ಆಸರೆಯು ನನಗೆಲ್ಲ||
ಹುಲುಮನುಜ ನಾನಾಗಿ ಭಾವಬಂಧಿಯು ನಾನು|
ಸಮಚಿತ್ತ ಕರುಣಿಸೈ ನೆಮ್ಮದಿಯ ನೀನೀಡು||
**********************
-ಕವಿನಾಗರಾಜ್.

ಬುಧವಾರ, ಅಕ್ಟೋಬರ್ 20, 2010

ಮೂಢ ಉವಾಚ -20

ಕೋಪಿಷ್ಠರೊಡನೆ ಬಡಿದಾಡಬಹುದು
ಅಸಹನೀಯವದು ಮಚ್ಚರಿಗರ ಪ್ರೇಮ|
ಪರರುತ್ಕರ್ಷ ಸಹಿಸರು ಕರುಬಿಯುರಿಯುವರು
ಉದರದುರಿಯನಾರಿಸುವರಾರೋ ಮೂಢ||


ಭುಕ್ತಾಹಾರ ಜೀರ್ಣಿಸುವ ವೈಶ್ವಾನರ*
ಕಂಡವರನು ಸುಡುವನೆ ಅಸೂಯಾಪರ|
ಶತಪಾಲು ಲೇಸು ಮಂಕರೊಡನೆ ಮೌನ
ಬೇಡ ಮಚ್ಚರಿಗರೊಡನೆ ಸಲ್ಲಾಪ ಮೂಢ||


ಸದ್ಗುಣಕಮಲಗಳು ಕಮರಿ ಕಪ್ಪಡರುವುವು
ಸರಿಯು ತಪ್ಪೆನಿಸಿ ತಪ್ಪು ಒಪ್ಪಾಗುವುದು|
ಅರಿವು ಬರುವ ಮುನ್ನಾವರಿಸಿ ಬರುವ ಮತ್ಸರವು
ನರರ ಕುಬ್ಜರಾಗಿಸುವುದು ಮೂಢ||
[* ವೈಶ್ವಾನರ ಎಂಬುದು ಹೊಟ್ಟೆಯೊಳಗೆ ಇರುವ ಕಿಚ್ಚು. ತಾಯಿಯ ಗರ್ಭದಲ್ಲಿರುವಾಗಲೇ ಹುಟ್ಟುವ ಈ ಕಿಚ್ಚು ತಿಂದ ಆಹಾರವನ್ನು ಜೀರ್ಣಿಸುತ್ತದೆ.]
********************
-ಕ.ವೆಂ.ನಾಗರಾಜ್.

ಭಾನುವಾರ, ಅಕ್ಟೋಬರ್ 3, 2010

ಮೂಢ ಉವಾಚ -19

ಮದಭರಿತ ಮನುಜನ ಪರಿಯೆಂತು ನೋಡು
ನಡೆಯುವಾ ಗತ್ತು ನುಡಿಯುವಾ ಗಮ್ಮತ್ತು|
ಮೇಲರಿಮೆಯಾ ಭೂತ ಅಡರಿಕೊಂಡಿಹುದು
ಭೂತಕಾಟವೇ ಬೇಡ ದೂರವಿರು ಮೂಢ||


ಕಣ್ಣೆತ್ತಿ ನೋಡರು ಪರರ ನುಡಿಗಳನಾಲಿಸರು
ದರ್ಪದಿಂ ವರ್ತಿಸುತ ಕೊಬ್ಬಿ ಮೆರೆಯುವರು|
ಮೂಲೋಕದೊಡೆಯರೇ ತಾವೆಂದು ಭಾವಿಸುತ
ಮದೋನ್ಮತ್ತರೋಲಾಡುವರು ಮೂಢ||


ಮದೋನ್ಮತ್ತನಾ ಮಹಿಮೆಯನೆಂತು ಬಣ್ಣಿಸಲಿ?
ಉದ್ಧಟತನವೆ ಮೈವೆತ್ತು ದರ್ಪದಿಂ ದಿಟ್ಟಿಸುವ|
ಎದುರು ಬಂದವರ ಕಡೆಗಣಿಸಿ ತುಳಿಯುವ
ಮದಾಂಧನದೆಂತ ಠೇಂಕಾರ ನೋಡು ಮೂಢ||


ಮದಸೊಕ್ಕಿ ಮೆರೆದವರೊಡನಾಡಬಹುದೆ?
ನಯ ವಿನಯ ಸನ್ನಡತೆಗವಕಾಶ ಕೊಡದೆ|
ವಿಕಟನರ್ತನಗೈವ ಮದವದವನತಿ ತರದೆ?|
ನರಾರಿ ಮದದೀಪರಿಯ ನೀನರಿ ಮೂಢ||
**************
-ಕವಿನಾಗರಾಜ್.

ಶನಿವಾರ, ಅಕ್ಟೋಬರ್ 2, 2010

ಆಹಾ, ನಾವ್ ಆಳುವವರು!

ಆಹಾ, ನಾವ್ ಆಳುವವರು
ಓಹೋ ನಾವ್ ಅಳಿಸುವವರು ||ಪ||


ಕುರ್ಚಿಯ ಕಾಲ್ಗಳನೊತ್ತುವೆವು
ತಡೆದರೆ ಕೈಯನೆ ಕಡಿಯುವೆವು|

ದೇಶವ ಪೊರೆಯುವ ಹಿರಿಗಣರು
ಖಜಾನೆ ಕೊರೆಯುವ ಹೆಗ್ಗಣರು|


ಜಾತ್ಯಾತೀತರು ಎನ್ನುವೆವು
ಜಾತೀಯತೆಯ ಬೆಳೆಸುವೆವು|


ಗಾಂಧಿಯ ನಾಮ ಜಪಿಸುವೆವು
ಬ್ರಾಂದಿಯ ಕುಡಿದು ಮಲಗುವೆವು|


ಬಿದ್ದರೆ ಪಾದವ ಹಿಡಿಯುವೆವು
ಎದ್ದರೆ ಎದೆಗೆ ಒದೆಯುವೆವು|


ಪಾದಯಾತ್ರೆಯನು ಮಾಡುವೆವು
ಕುರ್ಚಿಯ ಕನಸನು ಕಾಣುವೆವು|


ಗೆದ್ದವರನೆ ನಾವ್ ಕೊಳ್ಳುವೆವು
ಸ್ವಂತದ ಸೇವೆಯ ಮಾಡುವೆವು|

ಸಮಾಜ ಸೇವಕರೆನ್ನುವೆವು
ದೇಶವ ಹರಿದು ತಿನ್ನುವೆವು|
*********
-ಕವಿನಾಗರಾಜ್.

ಬುಧವಾರ, ಸೆಪ್ಟೆಂಬರ್ 29, 2010

ಮೂಢ ಉವಾಚ -8

                 ನನ್ನದು?
ಇರುವುದು ನಿನದಲ್ಲ ಬರುವುದು ನಿನಗಲ್ಲ
ತರಲಾರದ ನೀನು ಹೊರುವೆಯೇನನ್ನು?
ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ
ಫಲಧಾರೆ ಹರಿಯಗೊಡು ಮರುಳು ಮೂಢ ||

               ದೀಪಾವಳಿ
ಒಡಲಗುಡಿಯ ರಜ-ತಮಗಳ ಗುಡಿಸಿ
ಒಳಗಣ್ಣಿನಲಿ ಕಂಡ ಸತ್ವವನು ಉರಿಸಿ |
ಮನದ ಕತ್ತಲ ಕಳೆದು ತಿಳಿವಿನ ಬೆಳಕ
ಪಸರಿಪುದೆ ದೀಪಾವಳಿ ತಿಳಿ ಮೂಢ ||

              ಸಮಪಾಲು
ಅಹುದಿಹುದು ಅಡೆತಡೆಯು ಬಾಳಹಾದಿಯಲಿ
ಸಾಗಬೇಕರಿತು ಪತಿ ಪತ್ನಿ ಜೊತೆಜೊತೆಯಲಿ |
ಸಮಪಾಲು ಪಡೆದಿರಲು ನೋವು ನಲಿವಿನಲಿ
ಬಾಳು ಬಂಗಾರ ಬದುಕು ಸಿಂಗಾರ ಮೂಢ ||

             ನೀತಿವಂತ
ನೀತಿವಂತರ ನಡೆಯು ನ್ಯಾಯಕಾಸರೆಯು
ನುಡಿದಂತೆ ನಡೆಯುವರು ಸವಿಯ ನೀಡುವರು |
ಪ್ರಾಣವನೆ ಪಣಕಿಟ್ಟು ಮಾತನುಳಿಸುವರು
ಜಗದ ಹಿತ ಕಾಯ್ವ ಧೀರರವರು ಮೂಢ ||
************
-ಕ.ವೆಂ.ನಾಗರಾಜ್

ಬುಧವಾರ, ಸೆಪ್ಟೆಂಬರ್ 22, 2010

ಮೂಢ ಉವಾಚ -7

ಸೂತ್ರ
ಸರಸರನೆ ಮೇಲೇರಿ ಗಿರಕಿ ತಿರುಗಿ
ಪರಪರನೆ ಹರಿದು ದಿಕ್ಕೆಟ್ಟು ತಲೆಸುತ್ತಿ
ಬೀಳುವುದು ಗಾಳಿಪಟ ಬಂಧ ತಪ್ಪಿದರೆ
ಸೂತ್ರ ಹರಿದರೆ ಎಚ್ಚರವಿರು ಮೂಢ


ನಾನತ್ವ
ತಾನೇ ಸರಿ ತನ್ನದೇ ಸರಿ ಕಾಣಿರಿ
ಎಂಬ ಸರಿಗರ ಸಿರಿಗರ ಬಡಿದ ಪರಿ
ಏನು ಪೇಳ್ವುದೋ ತಿಪ್ಪೆಯ ಒಡೆಯ
ತಾನೆಂಬ ಶುನಕದ ಹಿರಿಮೆಗೆ ಮೂಢ


ಹೆದರಿಕೆ
ಅವರಿಲ್ಲ ಇವರಿಲ್ಲ ನಿನ್ನವರು ಯಾರಿಲ್ಲ
ಹಿತವಿಲ್ಲದ ಕಹಿಪ್ರವರ ಜಗಕೆ ಬೇಕಿಲ್ಲ
ಬಿದ್ದೆದ್ದು ನಡೆಯದಿರೆ ಒಗೆಯುವರು ಕಲ್ಲ
ಹೆದರಿಕೆ ಸಲ್ಲ ದೇವನಿಹನಲ್ಲ ಮೂಢ

ತೃಪ್ತಿ
ಉಣ್ಣಲುಡಲಿರಬೇಕು ನೆರಳಿರಬೇಕು
ಮನವರಿತು ಅನುಸರಿಪ ಮಡದಿ ಬೇಕು
ಬೆಳಕಾಗಿ ಬಾಳುವ ಮಕ್ಕಳಿರಬೇಕು
ಇರುವುದೇ ಸಾಕೆಂಬ ಮನ ಬೇಕು ಮೂಢ
***********
-ಕ.ವೆಂ.ನಾಗರಾಜ್

ಭಾನುವಾರ, ಸೆಪ್ಟೆಂಬರ್ 12, 2010

ಮೂಢ ಉವಾಚ -6

ಅರಿವು
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ

ಕೊಂಬೆ
ರಸಭರಿತ ಫಲಮೂಲ ಕೊಂಬೆ ತಾನಲ್ಲ
ಫಲಸತ್ವ ಸಾಗಿಪ ಮಾರ್ಗ ತಾನಹುದು
ಮಾಡಿದೆನೆನಬೇಡ ನಿನ್ನದೆನಬೇಡ
ಜಗವೃಕ್ಷರಸ ಹರಿವ ಕೊಂಬೆ ನೀನು ಮೂಢ

ಯಾರು?
ಕೆಲಸವಿರೆ ಓಲೈಸುವರು ಇಲ್ಲದಿರೆ ಹೀನೈಸುವರು
ಎಲ್ಲರ ಸೇವೆ ಬಯಸುವರು ತಾನಾರಿಗೂ ಆಗರು
ಕಂಡರೂ ಕಾಣದೊಲು ನಟಿಸುವ ಚತುರರಿವರು
ಇವರೊಳು ನೀಯಾರು ನಾಯಾರು ಹೇಳು ಮೂಢ

ಯಾರು?
ಆಪತ್ತಿಗಾಗುವರಿಹರು ತಿರುಗಿ ನೋಡದವರಿಹರು
ಒಳಿತು ಹಾರೈಸುವರಿಹರು ಕೆಡಕು ಬಯಸುವರಿಹರು
ಒಳಿತು ಮಾಡದ ಕೆಡಕು ಎಣಿಸಲರಿಯರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ
*************
-ಕವಿನಾಗರಾಜ್.

ಶುಕ್ರವಾರ, ಆಗಸ್ಟ್ 20, 2010

ಮೂಢ ಉವಾಚ -4

ಪ್ರೀತಿಯ ಶಕ್ತಿ
ವೈರಿಯ ಅಬ್ಬರಕೆ ಬರೆಯೆಳೆಯಬಹುದು
ಕಪಟಿಯಾಟವನು ಮೊಟಕಿಬಿಡಬಹುದು
ಮನೆಮುರುಕರನು ತರುಬಿಬಿಡಬಹುದು
ಪ್ರೀತಿಯ ಆಯುಧಕೆ ಎಣೆಯುಂಟೆ ಮೂಢ

ನಲ್ನುಡಿ
ನಿಂದನೆಯ ನುಡಿಗಳು ಅಡಿಯನೆಳೆಯುವುವು
ಮೆಚ್ಚುಗೆಯ ಸವಿಮಾತು ಪುಟಿದೆಬ್ಬಿಸುವುದು
ಪರರ ನಿಂದಿಪರ ಜಗವು ಹಿಂದಿಕ್ಕುವುದು
ವಂದಿತನಾಗು ನಲ್ನುಡಿಯೊಡೆಯನಾಗು ಮೂಢ

ಯಾರು?
ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು
ಬೆಸೆಯುವರಿಹರು ಬೆಸೆದುಕೊಂಬವರಿಹರು
ಮುರಿಯುವವರಿಹರು ಮುರಿದುಕೊಂಬವರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ

ಜಗದ ಪರಿ
ಗಂಟಿರಲು ನಂಟಿಹುದು ಇಲ್ಲದಿರೆ ಏನಹುದು
ಕಸುವಿರಲು ಬಂಧುಗಳು ಇಲ್ಲದಿರೆ ಉಂಡೆಲೆಯು
ನಗುವಿರಲು ನೆಂಟತನ ಇಲ್ಲದಿರೆ ಒಂಟಿತನ
ಜಗದ ಪರಿಯಿದು ಏನೆನುವಿಯೋ ಮೂಢ
**************
-ಕವಿನಾಗರಾಜ್.

ಭಾನುವಾರ, ಆಗಸ್ಟ್ 15, 2010

ಮೂಢ ಉವಾಚ -3

ಏಕೆ ಹೀಗೆ?
ಅದರದು ಮನ ಕುಹಕಿಗಳ ಕುಟುಕಿಗೆ
ಬೆದರದು ತನು ಪಾತಕಿಗಳ ಧಮಕಿಗೆ|
ಮುದುಡುವುದು ಮನವು ಕದಡುವುದು
ಪ್ರಿಯರ ಹೀನೈಕೆಗೆ ಹೀಗೇಕೋ ಮೂಢ||

ಕೋಪ
ಅಡಿಗಡಿಗೆ ಕಾಡಿ ಶಿರನರವ ತೀಡಿ
ಮಿಡಿದಿಹುದು ಉಡಿಯೊಳಗಿನ ಕಿಡಿಯು|
ಗಡಿಬಿಡಿಯಡಲಡಿಯಿಡದೆ ತಡೆತಡೆದು
ಸಿಡಿನುಡಿಯ ನೀಡು ಸಿಹಿಯ ಮೂಢ||

ಯಶದ ಹಾದಿ
ಒಲವೀವುದು ಗೆಲುವು ಬಲವೀವುದು
ಜೊತೆಜೊತೆಗೆ ಮದವು ಮತ್ತೇರಿಸುವುದು|
ಸೋಲಿನವಮಾನ ಛಲ ಬೆಳೆಸುವುದು
ಯಶದ ಹಾದಿ ತೋರುವುದೋ ಮೂಢ|

ಬಿರುಕು
ಆತುರದ ಮಾತು ಮಾನ ಕಳೆಯುವುದು
ಕೋಪದ ನಡೆನುಡಿ ಸಂಬಂಧ ಕೆಡಿಸುವುದು|
ತಪ್ಪರಿತು ಒಪ್ಪಿದೊಡೆ ಬಿರುಕು ಮುಚ್ಚುವುದು
ಬಿರುಕು ಕಂದರವಾದೀತು ಜೋಕೆ ಮೂಢ||


-ಕ.ವೆಂ.ನಾಗರಾಜ್.

ಗುರುವಾರ, ಆಗಸ್ಟ್ 12, 2010

ಸತ್ಯ

ಕಷ್ಟವೇನಲ್ಲ,
ಹುಡುಕಿದರೆ ಸಿಕ್ಕೀತು
ಬದುಕಲಗತ್ಯದ ಪ್ರೀತಿ!

ಕಠಿಣಾತಿ ಕಷ್ಟ,
ಹುಡುಕಿದರೂ ಸಿಕ್ಕದು
ಎಲ್ಲಿಹುದದು ಸತ್ಯ?

ಅಯ್ಯೋ ಮರುಳೆ,
ಪಂಡಿತೋತ್ತಮರೆಂದರು
ದೇವರೇ ಸತ್ಯ!

ದೇವರು? ಸತ್ಯ?
ಎಲ್ಲಿಹುದದು ಸತ್ಯ?
ಇನ್ನು ದೇವರು?

ಸಿಕ್ಕರೂ ಸತ್ಯ,
ಮುಖವಾಡದಡಗಿಹುದು ಸತ್ಯ,
ಅರ್ಥವಾಗದ ಸತ್ಯ!

ಅರ್ಥೈಸಿದರೆ ಸತ್ಯ,
ಪಥ್ಯವಾದರೆ ಸತ್ಯ,
ದೇವನೊಲಿವ, ಸತ್ಯ!
****
-ಕವಿನಾಗರಾಜ್.

ಮಂಗಳವಾರ, ಆಗಸ್ಟ್ 10, 2010

ಮೂಢ ಉವಾಚ -2

ಲೋಭ
ಸ್ನೇಹ ಪ್ರೀತಿಯಲು ಲಾಭವನೆ ಅರಸುವರು 
ಕಿಂಚಿತ್ತು ಪಡೆಯಲು ಶಾಶ್ವತವ ಕಳೆಯುವರು |
ವಿಶ್ವಾಸದಮೃತಕೆ ವಿಷವ ಬೆರೆಸುವರಿಹರು 
ಇಂಥವರ ಸಂಗದಿಂ ದೂರವಿರು ಮೂಢ||

ನಾನತ್ವ
ತಾವೆ ಮೇಲೆಂಬರು ಇತರರನು ಹಳಿಯುವರು 
ಪರರೇಳಿಗೆಯ ಸಹಿಸರು ಕಟುಕಿ ಮಾತಾಡುವರು |
ಅರಿಯರವರು ಇತರರಿಗೆ ಬಯಸುವ ಕೇಡದು 
ಎರಡಾಗಿ ಬಂದೆರಗುವುದೆಂಬುದನು ಎಲೆ ಮೂಢ ||

ಬಯಕೆ
ಬಯಕೆಗೆ ಕೊನೆಯಿಲ್ಲ ಬಯಕೆಗೆ ಮಿತಿಯಿಲ್ಲ 
ಬಯಕೆ ಬೀಜಾಸುರನ ಸಂತತಿಗೆ ಸಾವಿಲ್ಲ |
ಬಯಕೆ ಜೀವನವು ಬಯಸುವುದು ತಪ್ಪಲ್ಲ 
ಸ್ವಬಲವೇ ಹಂಬಲಕೆ ಬೆಂಬಲವು ಮೂಢ ||
-ಕ.ವೆಂ.ನಾಗರಾಜ್.

ಶನಿವಾರ, ಆಗಸ್ಟ್ 7, 2010

ಮೂಢ ಉವಾಚ -1

ನಿಜಮುಖ
ಅತ್ತಮುಖ ಇತ್ತಮುಖ ಎತ್ತೆತ್ತಲೋ ಮುಖ 
ಏಕಮುಖ ಬಹುಮುಖ ಸುಮುಖ ಕುಮುಖ !
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ 
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ ||

ಒಳಿತು - ಕೆಡುಕು
ಸಜ್ಜನನು ಬೇರಲ್ಲ ದುರ್ಜನನು ಬೇರಿಲ್ಲ 
ಬುದ್ಧನೂ ಬೇರಲ್ಲ ಹಿಟ್ಲರನೂ ಬೇರಿಲ್ಲ |
ಕೆಡುಕದು ಬೇರಲ್ಲ ಒಳ್ಳಿತದು ಬೇರಿಲ್ಲ 
ಎಲ್ಲ ನೀನೆ ಎಲ್ಲವೂ ನಿನ್ನೊಳಗೆ ಮೂಢ ||

ಮಹಿಮೆ
ಅತಿವಿನಯ ತೋರುವರು ಸುಮ್ಮನೆ ಹೊಗಳುವರು 
ಸೇವೆಯನು ಗೈಯುವರು ನಂಬಿಕೆಯ ನಟಿಸುವರು |
ನೀನೆ ಗತಿ ನೀನೆ ಮತಿ ಪರದೈವವೆನ್ನುವರು 
ಕುರ್ಚಿಯಾ ಮಹಿಮೆಯದು ಉಬ್ಬದಿರು ಮೂಢ ||

ಹಣ - ಗುಣ
ಗತಿಯು ತಿರುಗುವುದು ಮತಿಯು ಅಳಿಯುವುದು
ಬಂಧುತ್ವ ಮರೆಸುವುದು ಸ್ನೇಹಿತರು ಕಾಣಿಸರು |
ನಾನತ್ವ ಮೆರೆಯುವುದು ಪೊರೆಯು ಮುಸುಕುವುದು 
ಹಣವು ಗುಣವ ಹಿಂದಿಕ್ಕುವುದು ಕಾಣೋ ಮೂಢ ||
-ಕ.ವೆಂ.ನಾಗರಾಜ್.

ಗುರುವಾರ, ಆಗಸ್ಟ್ 5, 2010

ಮಕ್ಕಳಿಗೆ ಕಿವಿಮಾತು


ಬಾಳಸಂಜೆಯಲಿ ನಿಂತಿಹೆನು ನಾನಿಂದು
ಮನಸಿಟ್ಟು ಕೇಳಿರಿ ಹೇಳುವೆನು ಮಾತೊಂದು

ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು
ಅಂತರಾಳದ ನುಡಿಗಳಿವು ಹೃದಯದಲ್ಲಿದ್ದದ್ದು

ಗೊತ್ತಿಹುದು ನನಗೆ ರುಚಿಸಲಾರದು ನಿಮಗೆ
ಸಂಬಂಧ ಉಳಿಸುವ ಕಳಕಳಿಯ ಮಾತು

ಗೊತ್ತಿಹುದು ನನಗೆ ಪ್ರಿಯವಹುದು ನಿಮಗೆ
ಸಂಬಂಧ ಕೆಡಿಸುವ ಬಣ್ಣ ಬಣ್ಣದ ಮಾತು

ಹುಳುಕು ಹುಡುಕುವರೆಲ್ಲೆಲ್ಲು ವಿಷವನೆ ಕಕ್ಕುವರು
ಒಳಿತು ಕಾಣುವರೆಲ್ಲೆಲ್ಲು ಅಮೃತವ ಸುರಿಸುವರು

ದಾರಿಯದು ಸರಿಯಿರಲಿ ಅನೃತವನಾಡದಿರಿ
ತಪ್ಪೊಪ್ಪಿ ಸರಿನಡೆವ ಮನ ನಿಮಗೆ ಇರಲಿ

ಗೌರವಿಸಿ ಹಿರಿಯರ ಕಟುಮಾತನಾಡದಿರಿ
ಅಸಹಾಯಕರ ಶಾಪ ತಂದೀತು ಪರಿತಾಪ

ದೇವರನು ಅರಸದಿರಿ ಗುಡಿಗೋಪುರಗಳಲ್ಲಿ
ದೇವನಿಹನಿಲ್ಲಿ ನಮ್ಮ ಹೃದಯಮಂದಿರದಲ್ಲಿ

ಇಟ್ಟಿಗೆ ಕಲ್ಲುಗಳ ಜೋಡಿಸಲು ಕಟ್ಟಡವು
ಹೃದಯಗಳ ಜೋಡಿಸಿರಿ ಆಗುವುದು ಮನೆಯು

ಮಕ್ಕಳೇ ನಾ ನಂಬಿದಾ ತತ್ವ ಪಾಲಿಸುವಿರಾ?
ಬಾಳ ಪಯಣದ ಕೊನೆಗದುವೆನಗೆ ಸಂಸ್ಕಾರ
-ಕ.ವೆಂ.ನಾಗರಾಜ್.

ಬುಧವಾರ, ಜುಲೈ 28, 2010

ಸ್ವಾರ್ಥ



         
ಸ್ವಾರ್ಥದ ಭೂತ ದ್ವೇಷದ ಕತ್ತಿ ಸೆಳೆದಿತ್ತು
ಕಂಡ ಕಂಡವರ ಗುಂಡಿಗೆಯ ಬಗೆದಿತ್ತು

ಅಪ್ಪ ಅಮ್ಮದಿರಿಲ್ಲ ಅಣ್ಣ ತಮ್ಮದಿರಿಲ್ಲ
ಗಂಡ ಹೆಂಡತಿಯಿಲ್ಲ ಮಕ್ಕಳು ಮರಿಯಿಲ್ಲ

ಯಾರನೂ ಉಳಿಸಿಲ್ಲ, ಬೇಡಿದರೂ ಬಿಡಲಿಲ್ಲ
ನಗುವು ಬಂದೀತೆಂದು ಹಲ್ಲು ಮುರಿದಿತ್ತು

ಓಡಿ ಹೋದಾರೆಂದು ಕಾಲ ತುಂಡರಿಸಿತ್ತು
ಬೇಡವೆಂದವರ ಕೈಯ ಕಡಿದಿತ್ತು

ಕಣ್ಣೀರು ಒರೆಸುವರ ಕಣ್ಣ ಬಗೆದಿತ್ತು
ಕೈಚೆಲ್ಲಿ ಕುಳಿತವರ ಬೆದರಿ ಬೆಂಡಾದವರ
ಗಂಟಲನು ಸೀಳಿ ಗಹಗಹಿಸಿ ನಕ್ಕಿತ್ತು

ನೊಂದು ಬೆಂದ ಅತೃಪ್ತ ಆತ್ಮಗಳು
ತಿರುಗಿ ಬೀಳುವ ವೇಳೆ ಕಾಲ ಮಿಂಚಿತ್ತು
                             -ಕ.ವೆಂ.ನಾಗರಾಜ್

[ಚಿತ್ರ: ಅಂತರ್ಜಾಲದಿಂದ ಹೆಕ್ಕಿದ್ದು.]

ಭಾನುವಾರ, ಜುಲೈ 25, 2010

ಏನಂತೆ? ? . . .! !

ಏನಂತೆ? ಸೋತರೇನಂತೆ?
ಸೋಲೆಂಬುದೇನೆಂದು ತಿಳಿಯಿತಂತೆ!
ಗೆಲುವಿನ ದಾರಿಯದು ಕಂಡಿತಂತೆ!!

ಏನಂತೆ? ಬಿದ್ದರೇನಂತೆ?
ನೋವೆಂಬುದೇನೆಂದು ತಿಳಿಯಿತಂತೆ!
ನೋಡಿ ನಡೆಯಲು ಕಲಿತೆನಂತೆ!!

ಏನಂತೆ? ಹಸಿವಾದರೇನಂತೆ?
ದುಡಿದು ಉಣ್ಣಲು ಮಾರ್ಗವಂತೆ!
ಹಳಸಿದ ಅನ್ನವೂ ರುಚಿಯಂತೆ!!

ಏನಂತೆ? ದುಃಖವಾದರೇನಂತೆ?
ಸಂತೋಷದ ದಾರಿ ಸಿಕ್ಕಿತಂತೆ!
ಸುಖವೆಂಬುದೊಳಗೇ ಇದೆಯಂತೆ!!

ಏನಂತೆ? ತಪ್ಪಾದರೇನಂತೆ?
ನಡೆ ತಿದ್ದಿ ಸಾಗುವ ಮನಸಂತೆ!
ತಲೆ ಎತ್ತಿ ನಡೆಯುವ ಕನಸಂತೆ!

ಏನಂತೆ? ನಿಂದಿಸಿದರೇನಂತೆ?
ನಿಂದಕರ ಬಾಯಿ ಹೊಲಸಂತೆ!
ನಾನಾರೆಂದು ನನಗೆ ತಿಳಿಯಿತಂತೆ!!

ಏನಂತೆ? ಸೂರಿಲ್ಲದಿರೇನಂತೆ?
ಲೋಕವೆ ನನ್ನ ಮನೆಯಂತೆ!
ಬಹು ದೊಡ್ಡ ಮನೆಯೇ ನನ್ನದಂತೆ!!

ಏನಂತೆ? ದಿಕ್ಕಿಲ್ಲದಿರೇನಂತೆ?
ಜನರೆಲ್ಲ ನನ್ನ ಬಂಧುಗಳಂತೆ!
ಬಲು ದೊಡ್ಡ ಸಂಸಾರ ನನ್ನದಂತೆ!!

? ? ! !