ಮಿತ್ರ ಅಶೋಕಕುಮಾರರು ಅಶ್ವತ್ಥಾಮನ್ ನಾಟಕದಲ್ಲಿ ಬರುವ 'ಇಂದೇನೋ ಮುಂದೇನೋ ಮುನ್ನ ಆಳ್ ಕಾಣನ್!' ಎಂಬ ಸಾಲಿನ ಅರ್ಥ ವಿವರಿಸಲು ಕೇಳಿದಾಗ ನನಗೆ ಹಳೆಯ ಘಟನೆಯೊಂದು ನೆನಪಾಯಿತು. ಕೆಲವು ವರ್ಷಗಳ ಹಿಂದೆ ಹಾಸನದ ವಿಜಯನಗರ ಬಡಾವಣೆಗೆ ಹೋಗುವ ಸಲುವಾಗಿ ಸಂತೆಪೇಟೆಯ ಬಳಿ ಸ್ಕೂಟರ್ ನಿಲ್ಲಿಸಿಕೊಂಡು ಸಿಗ್ನಲ್ಲಿಗಾಗಿ ಕಾಯುತ್ತಿದ್ದೆ. ಹಸಿರು ನಿಶಾನೆ ಕಂಡ ಕೂಡಲೇ ವಾಹನಗಳು ಆತುರದಿಂದ ಮುಂದೆ ಹೊರಟ ಸಮಯದಲ್ಲಿಯೇ ಒಂದು ನಾಯಿಯ ಕೊನೆಯ ಚೀತ್ಕಾರ ಕೇಳಿಸಿ ಕಣ್ಣು ಹಾಯಿಸಿದೆ. ಲಾರಿಯ ಹಿಂಬದಿಯ ಚಕ್ರಕ್ಕೆ ಸಿಕ್ಕಿದ್ದ ನಾಯಿ ಕೊನೆಯುಸಿರೆಳೆದಿತ್ತು. ಹಾಗೆಂದು ಆ ನಾಯಿ ಇದ್ದಕ್ಕಿದ್ದಂತೆ ಸಿಕ್ಕಿ ಸತ್ತಿದ್ದಾಗಿರಲಿಲ್ಲ. ಆ ಲಾರಿ ಬಹಳ ಸಮಯದಿಂದ ಅಲ್ಲಿ ನಿಂತಿತ್ತು. ಮಟ ಮಟ ಮಧ್ಯಾಹ್ನದ ಉರಿಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಆ ನಾಯಿ ಲಾರಿಯ ಹಿಂಬದಿಯ ಚಕ್ರಗಳ ಮುಂದೆ ನೆರಳಿನಲ್ಲಿ ಹಿತವಾಗಿ ಮಲಗಿ ನಿದ್ರಿಸಿತ್ತು. ನಾನು ಸಿಗ್ನಲ್ಲಿಗಾಗಿ ಕಾಯುತ್ತಿದ್ದಾಗ ಅದನ್ನು ಗಮನಿಸಿದ್ದೆ. ಚಾಲಕನ ಹೊರಡುವ ಸಮಯ ಬಂದಿದ್ದ ಸಮಯಕ್ಕೆ ಸರಿಯಾಗಿ ಸಿಗ್ನಲ್ ಬಂದುದರಿಂದ ತಕ್ಷಣ ಆತ ಲಾರಿಯನ್ನೇರಿ ನಾಯಿಯನ್ನು ಗಮನಿಸದೆ ಲಾರಿ ಚಲಿಸಿದ್ದರಿಂದ ಅದು ಪರಲೋಕವಾಸಿಯಾಗಿಬಿಟ್ಟಿತ್ತು. ಕೆಲವೇ ಸಮಯದ ಹಿಂದೆ ನೆರಳಿನಲ್ಲಿ ಮಲಗಿ ನಿಶ್ಚಿಂತೆಯಿಂದ ನಿದ್ರಿಸುತ್ತಿದ್ದ ನಾಯಿ ಚಿರನಿದ್ರೆಗೆ ಜಾರಿತ್ತು. ಈ ಕ್ಷಣಕ್ಕೆ ಏನೋ, ಮುಂದಿನ ಕ್ಷಣಕ್ಕೆ ಏನೋ ಎಂಬುದನ್ನು ತಿಳಿಯದ ನಶ್ವರ ಜೀವನದ ದರ್ಶನವನ್ನು ಆ ನಾಯಿಯ ಅಂತ್ಯ ನನಗೆ ತೋರಿಸಿತ್ತು. ಆ ನಾಯಿಗೇನೋ ವಿವೇಚನಾ ಶಕ್ತಿ ಇರಲಿಲ್ಲ. ಇದ್ದಿದ್ದರೆ ಲಾರಿಯ ಚಕ್ರದ ಮುಂದೆ ಮಲಗುತ್ತಿರಲಿಲ್ಲ. ಬೇರೆಲ್ಲೋ ಸುರಕ್ಷ್ಷಿತವೆನ್ನಿಸಿದ ಸ್ಥಳದಲ್ಲಿ ಮಲಗುತ್ತಿತ್ತು. ಆದರೆ, ವಿವೇಚನಾ ಶಕ್ತಿ ಇರುವ ಮನುಷ್ಯರೇ ಅವಿವೇಕತನದಿಂದ ವರ್ತಿಸುತ್ತಾರೆ ಎಂದರೆ ಚೋದ್ಯವೆನಿಸುವುದಾದರೂ ಸತ್ಯವಾಗಿದೆ. ಲಾರಿಯ ಚಾಲಕ ವಿವೇಕತನದಿಂದ ವರ್ತಿಸಿದ್ದರೆ ನಾಯಿಯ ಪ್ರಾಣ ಉಳಿಯುತ್ತಿತ್ತು.
ನಮ್ಮ ಬದುಕು ಶಾಶ್ವತವಲ್ಲವೆಂದು ತಿಳಿದಿದ್ದರೂ ನಾವು ಚಿರಂಜೀವಿಗಳೆಂದು ಭಾವಿಸುವಂತೆ ಮಾಡುವ ಅದೆಂತಹುದೋ ನಮ್ಮೊಳಗೆ ಇದೆ! ಅದೇ ನಮ್ಮ ವಿವೇಚನಾ ಶಕ್ತಿಗೆ ತಡೆ ಒಡ್ಡುವ ಕೆಲಸ ಮಾಡುತ್ತದೆ. 'ಖ' ಎಂದರೆ ಇಂದ್ರಿಯ. ಸುಖ ಎಂದರೆ ಇಂದ್ರಿಯಗಳಿಗೆ ಯಾವುದು ಹಿತವೆನ್ನಿಸುವುದೋ ಅದು ಮತ್ತು ದುಃಖವೆಂದರೆ ಇಂದ್ರಿಯಗಳಿಗೆ ಯಾವುದು ಅಹಿತವೆನಿಸುವುದೋ ಅದು ಎಂದು ಅಂದುಕೊಳ್ಳುತ್ತೇವೆ. ಇಲ್ಲೂ ಸಮಸ್ಯೆಯಿದೆ. ಈಗ ಸುಖವೆಂದುಕೊಂಡಿದ್ದು ಮುಂದೆ ದುಃಖವಾಗಿ ಕಾಡುವುದಿದೆ. ಈಗ ದುಃಖವಾಗಿ ಕಂಡಿದ್ದು ಮುಂದೆ ಸುಖವಾಗಿ ಪರಿಣಮಿಸಬಹುದಾದುದೂ ಇದೆ. ಔಷಧಿ ನಾಲಿಗೆಗೆ ಕಹಿಯಾದರೂ ದೇಹಕ್ಕೆ ಉಪಕಾರಿ. ಆದರೆ ಹಿತವೆಂದು ಭಾವಿಸಿ ಕುಡಿಯುವ ಮಾದಕ ದ್ರವ್ಯ? ಮಜಾ ಇದೆ ಎಂದು ಕುಡಿಯುತ್ತಾರೆ, ದೊಡ್ಡಸ್ತಿಕೆಗಾಗಿ ಕುಡಿಯುತ್ತಾರೆ, ಕೊನೆಗೆ ದುಃಖ ಮರೆಯುವ ಸಲುವಾಗಿ ಎನ್ನುತ್ತಲೂ ಕುಡಿಯುತ್ತಾರೆ. ಆದರೆ ಮೆದುಳಿನ ಮೇಲೆ ಪ್ರಭಾವ ಬೀರುವ ಆ ದ್ರವ ಕ್ರಮೇಣ ಶರೀರದ ಆರೋಗ್ಯವನ್ನೇ ಹದಗೆಡಿಸಿ ನಾನಾ ರೋಗಗಳಿಗೆ ಆಸ್ಪದ ನೀಡಿ ಜೀವನವನ್ನೇ ನರಕ ಮಾಡಬಹುದು. ಕುಡಿತವೇ ಚಟವಾಗಿರಿಸಿಕೊಂಡವರು ಸಮಾಜದ ದೃಷ್ಟಿಯಲ್ಲಿ ಕೀಳಾಗಿ ಕಾಣಲ್ಪಡುತ್ತಾರೆ ಎಂಬುದೂ ಸತ್ಯ. ಎಲ್ಲವೂ ಗೊತ್ತಿದ್ದೂ ಕುಡಿಯುತ್ತಾರೆಂದರೆ, ಅವರ ವಿವೇಚನಾ ಶಕ್ತಿಯ ಬಗ್ಗೆ ಸಂದೇಹ ಬರುತ್ತದೆ. ಶೋಕಿಗಾಗಿ ಸೇದುವ ಸಿಗರೇಟು, ಬೀಡಿಗಳು ಸೇದುವವರದು ಮಾತ್ರವಲ್ಲ, ಜೊತೆಗಿರುವವರ ಆರೋಗ್ಯವನ್ನೂ ಕೆಡಿಸುತ್ತದೆ. 'ಇರುವುದು ಎರಡು ದಿನ, ಮಜಾ ಮಾಡಿ ಹೋಗೋಣ' ಎಂಬ ಮನೋಭಾವದ ಅವರು, "ಕುಡಿಯುವುದಿಲ್ಲ, ಸೇದುವುದಿಲ್ಲ, ಮಜಾ ಮಾಡುವುದಿಲ್ಲ ಎನ್ನುವುದಾದರೆ ಬದುಕಿರುವುದಾದರೂ ಏಕೆ?" ಎಂಬ ಪ್ರಶ್ನೆಯನ್ನೂ ಮುಂದೊಡ್ಡುತ್ತಾರೆ. ಜಗತ್ತಿನಲ್ಲಿ ಇದು ಬೇಕೇ ಬೇಕು ಅಥವ ಇದು ಬೇಡವೇ ಬೇಡ ಎಂಬಂತಹ ಯಾವುದೇ ಸಂಗತಿಗಳಿಲ್ಲ. ಆದರೆ ಇತಿ-ಮಿತಿಯಲ್ಲಿದ್ದರೆ ಎಲ್ಲವೂ ಹಿತವೇ. ಅತಿಯಾದರೆ ಎಲ್ಲವೂ ಕಷ್ಟವೇ. ಇಂದಿನ ಕ್ಷಣಿಕ ಸುಖಕ್ಕಾಗಿ ವರ್ಷಗಟ್ಟಲೇ ನರಳುತ್ತಾ, ಕೊರಗುತ್ತಾ ಸಾಯುವ ಸ್ಥಿತಿ ಬಂದರೆ ಅದು ಬದುಕುವ ಪರಿಯಂತೂ ಖಂಡಿತಾ ಅಲ್ಲ.
ವಿವೇಚನಾ ಶಕ್ತಿಯನ್ನು ಸಮರ್ಪಕವಾಗಿ ಬಳಸಿದ್ದರೆ ನಮಗೆ ನೂರು ವರ್ಷಗಳ ಆಸುಪಾಸಿನವರೆಗೆ ಮಾತ್ರ ಜೀವಿಸಿರಬಲ್ಲೆವು ಎಂಬ ಅರಿವು ಜಾಗೃತವಾಗಿರುತ್ತಿತ್ತ್ತಲ್ಲದೆ, ನಾಲ್ಕು ಜನರಿಗೆ ಉಪಕಾರಿಯಾಗಿಯೂ ಇರುತ್ತಿದ್ದವು. ಈ ಭೂಮಿಯಲ್ಲಿ ಎಂತೆಂತಹ ರಾಜ, ಮಹಾರಾಜರುಗಳು, ಚಕ್ರವರ್ತಿಗಳು ಆಳಿಹೋಗಿದ್ದಾರೆ. ಇಡೀ ಜಗತ್ತನ್ನೇ ತಮ್ಮದಾಗಿಸಿಕೊಳ್ಳಬೇಕೆಂಬ ಹಂಬಲವಿದ್ದ ಅವರು ಹೋಗುವಾಗ ಏನನ್ನೂ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಈಗಲೂ ನಮ್ಮ ಎಷ್ಟೋ ರಾಜಕಾರಣಿಗಳು, ಅಧಿಕಾರಿಗಳು, ಪುಂಡರು, ಗೂಂಡಾಗಳ ಹತ್ತಿರ ಅದೆಷ್ಟು ಕೋಟಿ ಕೋಟಿ ಬೆಲೆಬಾಳುವ ಹಣ, ಆಸ್ತಿಗಳಿವೆಯೋ ಗೊತ್ತಿಲ್ಲ. ಆದರೂ ಅವರುಗಳಿಗೆ ಅಜೀರ್ಣವಾಗಿಲ್ಲ. ಕೊನೆಯಲ್ಲಿ ಒಂದು ದಿನ ಒಂದು ಸಣ್ಣ ಗುಂಡುಸೂಜಿಯನ್ನೂ ತೆಗೆದುಕೊಂಡು ಹೋಗಲು ಅವರಿಗೆ ಸಾಧ್ಯವಿಲ್ಲ. ದೇವರು ಅದ್ಭುತ ಸಮಾನತಾವಾದಿ. ಹುಟ್ಟುವಾಗ ಏನನ್ನೂ ತೆಗೆದುಕೊಂಡು ಬರಲು ಅವಕಾಶ ಕೊಡುವುದಿಲ್ಲ. ಹಾಗೆಯೇ ಹೋಗುವಾಗಲೂ ಏನನ್ನೂ ಕೊಂಡುಹೋಗಲು ಬಿಡುವುದಿಲ್ಲ.
ಇನ್ನೂ ಬೇಕು, ಬೇಕು ಎಂಬ ಅನಂತ ಅತೃಪ್ತತೆಯನ್ನು ಹೊಂದಿರುವ ಮನುಷ್ಯ ತಾನು ಈಗಲೇ ಸಾಯುವುದಿಲ್ಲ ಎಂದು ಭಾವಿಸಿ ಕೊನೆಯವರೆಗೂ ಬೇಕು ಅನ್ನುತ್ತಲೇ ಒಂದು ದಿನ ಕಂತೆ ಒಗೆಯುತ್ತಾನೆ. ಅವಧೂತರೊಬ್ಬರು ಭಕ್ತರ ಮನೆಯೊಂದಕ್ಕೆ ಬಂದಾಗ ಆ ಮನೆಯಲ್ಲಿದ್ದ 90ರ ಆಸುಪಾಸಿನ ವಯಸ್ಸಿನ ವೃದ್ಧೆಯೊಬ್ಬರು ಅವರಿಗೆ, "ಸ್ವಾಮಿ, ಜೀವನದಲ್ಲಿ ನಾನು ಅನುಭವಿಸಬೇಕಾದದ್ದೆಲ್ಲವನ್ನೂ ಅನುಭವಿಸಿಬಿಟ್ಟಿದ್ದೇನೆ. ಇನ್ನು ಏನೂ ಉಳಿದಿಲ್ಲ. ನಿಮ್ಮ ಪಾದದ ಬಳಿಯಲ್ಲಿ ಪ್ರಾಣ ಬಿಡಲು ಅವಕಾಶವಾದರೆ ಅದಕ್ಕಿಂತ ಪುಣ್ಯ ಮತ್ತೊಂದಿಲ್ಲ" ಎಂದರಂತೆ. ಆ ಅವಧೂತರು, "ಅದಕ್ಕೇನಂತೆ, ಹಾಗೆಯೇ ಮಾಡಿ" ಎಂದು ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತುಬಿಟ್ಟರಂತೆ. ಗಾಬರಿಯಾದ ಆ ವೃದ್ಧೆ, "ಈಗಲೇ ಅಲ್ಲ ಸ್ವಾಮೀಜಿ, ನನ್ನ ಮೊಮ್ಮಗಳ ಮದುವೆ ನೋಡಬೇಕು. ಅವಳ ಮಕ್ಕಳನ್ನು ಆಡಿಸಬೇಕು. ಈ ಆಸೆ ಪೂರೈಸಿಕೊಂಡು ಕಣ್ಣು ಮುಚ್ಚುತ್ತೇನೆ" ಎಂದಳಂತೆ! ಇಂತಹ ಉದಾಹರಣೆಗಳು ಸಾಕಷ್ಟು ಕಂಡುಬರುತ್ತವೆ.
ನಾನು ಇಂತಹ ದಿನ ಸಾಯುತ್ತೇನೆ ಎಂಬುದು ಗೊತ್ತಾದರೆ ಮನುಷ್ಯನ ನಡವಳಿಕೆಯೇ ಬದಲಾಗಿಬಿಡುತ್ತದೆ. ಈಗಿನ ಸ್ಥಿತಿ ಹೇಗಿದೆಯೆಂದರೆ ನಮ್ಮ ಎಲ್ಲಾ ಒಳ್ಳೆಯ ನಡವಳಿಕೆಗಳನ್ನು ಕೊನೆಗಾಲಕ್ಕೆ ಮೀಸಲಿರಿಸುತ್ತೇವೆ. ಅಂತಹ ಸಮಯ ಬಂದಾಗ ನೂರೆಂಟು ಕಾಯಿಲೆ, ಕಸಾಲೆಗಳಿಂದ ನರಳುತ್ತಾ, ಪರಾಧೀನರಾಗಿ ಮಾಡುವ ಮನಸ್ಸಿದ್ದರೂ ಮಾಡಲಾಗದ ಸ್ಥಿತಿಗೆ ಬಂದಿರುತ್ತೇವೆ. ಜನಿಸಿದ ನಂತರ ಉಸಿರಾಡಲು ಪ್ರಾರಂಭಿಸಿದ ನಂತರದಲ್ಲಿ ಆ ಉಸಿರು ನಿಲ್ಲುವವರೆಗೂ ಬೇಕು, ಬೇಕು ಎಂತಲೇ ಒದ್ದಾಡುತ್ತಿರುತ್ತೇವೆ. ಹೀಗಾಗಿ ನಾವೂ ನೆಮ್ಮದಿಯಿಂದ ಇರುವುದಿಲ್ಲ, ಇತರರನ್ನೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ. ಪ್ರತಿಯೊಂದು ಸಲ ಉಸಿರಾಡಿದಾಗಲೂ, ಉಸಿರು ನಿಲ್ಲುವ ಸಮಯಕ್ಕೆ ಹತ್ತಿರ ಹೋಗುತ್ತಿರುತ್ತೇವೆ ಎಂಬ ಪರಿಜ್ಞಾನ ಬಂದರೆ, ಇರುವುದರಲ್ಲಿ ತೃಪ್ತಿ ಪಟ್ಟುಕೊಳ್ಳುವ ಮನೋಭಾವ ಬಂದರೆ ಸಂತೋಷ ನಮ್ಮದಾಗುತ್ತದೆ, ಇನ್ನೊಬ್ಬರಿಗೂ ಸಂತೋಷ ಹಂಚಬಲ್ಲವರಾಗುತ್ತೇವೆ. ಅಶ್ವತ್ಥಾಮನ್ ನಾಟಕದ 'ಇಂದೇನೋ ಮುಂದೇನೋ ಮುನ್ನ ಆಳ್ ಕಾಣನ್!' ಎಂಬ ಸಾಲಿನ ನಂತರದಲ್ಲಿ ಬರುವ ಈ ಸಾಲು ಸಹ ಅರ್ಥಗರ್ಭಿತವಾಗಿದೆ: 'ಬಂದುದನೆ ಕೊಂಡುಂಡು ತಾಳ್ದವನೆ ಜಾಣನ್!'