ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಸೆಪ್ಟೆಂಬರ್ 11, 2016

ಸಮಯದ ಕ್ಷಣಕ್ಷಣವೂ ಅಂತಿಮ!


ಸಿಕ್ಕಾಗ ಸಮಯವನು ತಕ್ಕಾಗಿ ಬಳಸಿದೊಡೆ
ಸಿಕ್ಕದುದು ಸಿಕ್ಕುವುದು ದಕ್ಕದುದು ದಕ್ಕುವುದು |
ಕಳೆಯಿತೆಂದರೆ ಒಮ್ಮೆ ಸಿಕ್ಕದದು ಜಾಣ
ಕಾಲದ ಮಹತಿಯಿದು ಕಾಣು ಮೂಢ ||
     "ನಿನ್ನೆ ಕಾರ್ಯಕ್ರಮ ಎಷ್ಟು ಚೆನ್ನಾಗಿತ್ತು ಗೊತ್ತಾ? ನೀನು ಯಾಕೋ ಬರಲಿಲ್ಲ?" ಎಂಬ ಪ್ರಶ್ನೆಗೆ ಅವನು ಉತ್ತರಿಸಿದ್ದ, "ಏನ್ ಮಾಡಲೋ? ನನಗಂತೂ ಒಂದ್ ನಿಮಿಷಾನೂ ಪುರುಸೊತ್ತೇ ಇರಲ್ಲ". ಆದರೆ ನಿಜವಾದ ಸಂಗತಿಯೆಂದರೆ ಕಾರ್ಯಕ್ರಮ ನಡೆದ ಸಮಯದಲ್ಲಿ ಆತ ತನ್ನ ಗೆಳೆಯನೊಂದಿಗೆ ಬಾರಿನಲ್ಲಿ ಕುಡಿಯುತ್ತಾ ಕುಳಿತಿದ್ದ. ಹಾಗಾಗಿ ಅವನಿಗೆ ಪುರುಸೊತ್ತಿರಲಿಲ್ಲ. ಅಷ್ಟಕ್ಕೂ ಈ ಪುರುಸೊತ್ತು ಅಂದರೆ ಏನು? ಏನಾದರೂ ಮಾಡಲು ಅಗತ್ಯವಾದ ಸಮಯ ಅಷ್ಟೇ. ನಾವು ಸಮಯದೊಂದಿಗೇ  ಇರುತ್ತೇವೆ, ಆದರೂ ನಮಗೆ ಸಮಯವಿರುವುದಿಲ್ಲ! ಈ ಸಮಯ ಒಬ್ಬರಿಗೆ ಒಂದೊಂದು ತರಹ ಇರುತ್ತದೆಯೇ? ಒಬ್ಬರಿಗೆ 24 ಗಂಟೆ, ಇನ್ನೊಬ್ಬರಿಗೆ 20 ಗಂಟೆಯಂತೆ ಇರುತ್ತದೆಯೇ? ಎಲ್ಲರಿಗೂ ಇರುವುದು ಇಪ್ಪನಾಲ್ಕೇ ಗಂಟೆಗಳು! ವಿವೇಕಾನಂದ, ಬುದ್ಧ, ಬಸವಣ್ಣ, ಮಹಾವೀರ, ಮಹಾತ್ಮ ಗಾಂಧಿ, ಗೋಳ್ವಾಲ್ಕರ್, ಚಂದ್ರಶೇಖರ ಆಜಾದ್, ಭಗತ್ ಸಿಂಗ್, ಆಶ್ಫಾಕ್ ಉಲ್ಲಾ ಮುಂತಾದವರಿಗೆ ಇದ್ದದ್ದು, ಈಗ ನಮ್ಮ ನಡುವೆಯೇ ಇರುವ ಸಿದ್ಧಗಂಗಾ ಶ್ರೀಗಳು, ಪಂ. ಸುಧಾಕರ ಚತುರ‍್ವೇದಿಯವರು, ನರೇಂದ್ರ ಮೋದಿ ಮುಂತಾದವರಿಗೂ ಇರುವುದು ನಮ್ಮ ನಿಮ್ಮೆಲ್ಲರಿಗೂ ಇರುವಷ್ಟೇ ಸಮಯ! ಸಮಯ ನಿಜವಾದ ಸಮತಾವಾದಿ. ಅದು ಶ್ರೀಮಂತರಿಗೆ, ಬಡವರಿಗೆ, ಆ ಜಾತಿಯವರಿಗೆ, ಈ ಜಾತಿಯವರಿಗೆ, ದಲಿತರಿಗೆ, ಬಲಿತರಿಗೆ, ಕರಿಯರಿಗೆ, ಬಿಳಿಯರಿಗೆ, ದಡ್ಡರಿಗೆ, ಜಾಣರಿಗೆ, ಚಿಕ್ಕವರಿಗೆ, ದೊಡ್ಡವರಿಗೆ, ಗಂಡಸರಿಗೆ, ಹೆಂಗಸರಿಗೆ, ಇತ್ಯಾದಿ ಯಾವುದೇ ಭೇದ ಮಾಡದೇ ಎಲ್ಲರಿಗೂ ಒಂದೇ ರೀತಿಯ ಸಮಯ ಕೊಡುತ್ತದೆ.
     ಒಬ್ಬ ಯಶಸ್ವಿ ವ್ಯಕ್ತಿಗೆ, ಮಾಡಲು ಬೇಕಾದಷ್ಟು ಕೆಲಸಗಳು ಇದ್ದವರಿಗೆ ಸಮಯ ಸಿಗುತ್ತದೆ. ಆದರೆ ಸೋಮಾರಿಗಳಿಗೆ ಸಿಗುವುದಿಲ್ಲ. ಚಟುವಟಿಕೆಯಿಂದ ಕೂಡಿದ ವ್ಯಕ್ತಿ ಎಲ್ಲಾ ಕೆಲಸಗಳಿಗೂ ಪುರುಸೊತ್ತು ಮಾಡಿಕೊಳ್ಳುತ್ತಾನೆ, ಸಿಗುವ ಸಣ್ಣ ಅವಕಾಶವನ್ನೂ ಉಪಯೋಗಿಸಿಕೊಳ್ಳುತ್ತಾನೆ. ಅದು ಯಶಸ್ವಿಯ ಗುಣ, ಸಾಧಕನ ಲಕ್ಷಣ. ಪುರುಸೊತ್ತಿಲ್ಲ ಅನ್ನುವವರು ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂಬ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಗೊತ್ತು ಗುರಿಯಿಲ್ಲದೆ ಹೇಗೋ ಕೆಲಸ ಮಾಡುವವರಾಗಿರುತ್ತಾರೆ. ಸಾಧಕರಿಗೂ, ಸಾಮಾನ್ಯರಿಗೂ ಇರುವ ವ್ಯತಾಸ ಉಪಯೋಗಿಸಿಕೊಳ್ಳುವ ಸಮಯದ ರೀತಿಯಲ್ಲಿದೆ. ಸಮಯ ಎಲ್ಲರಿಗೂ ಉಚಿತವಾಗಿ ಸಿಗುತ್ತದೆ, ಯಾರೂ ಹಣ ಕೊಡಬೇಕಿಲ್ಲ. ಹಾಗೆಂದು ಅದಕ್ಕೆ ಬೆಲೆಯಿಲ್ಲ ಎಂದಲ್ಲ. ಅದು ಅಮೂಲ್ಯವಾದುದು. ಅದನ್ನು ಕೊಳ್ಳಲಾಗುವುದಿಲ್ಲ. ಅದನ್ನು ನಾವು ಇಟ್ಟುಕೊಳ್ಳಬಹುದು, ಖರ್ಚು ಮಾಡಬಹುದು. ಆದರೆ ಒಮ್ಮೆ ಕಳೆದುಕೊಂಡರೆ ಅದನ್ನು ಪುನಃ ಪಡೆಯಲಾಗುವುದೇ ಇಲ್ಲ!
     ಹೇಗೋ ಜೀವನ ನಡೆಸಿದರಾಯಿತು ಅನ್ನುವವರು ಸಮಯದ ಬಗ್ಗೆ ಮಹತ್ವ ಕೊಡಲಾರರು. ಹುಟ್ಟಿದ, ಇದ್ದ, ಒಂದು ದಿನ ಸತ್ತ ಎಂಬ ರೀತಿಯಲ್ಲಿ ಬಾಳಿದವರನ್ನು ಸಮಾಜವಿರಲಿ, ಅವರ ಕುಟುಂಬಸ್ಥರೇ ಕಾಲಾನಂತರದಲ್ಲಿ ಮರೆತುಬಿಡುತ್ತಾರೆ. ನೂರು ವರ್ಷಗಳು ಪೂರ್ಣವಾಗಿ ಬಾಳುವವರ ಸಂಖ್ಯೆ ಕಡಿಮೆ. ಸರಾಸರಿ 80ರಿಂದ90 ವರ್ಷದವರೆಗೆ ಬದುಕುತ್ತಾರೆ ಎಂದಿಟ್ಟುಕೊಳ್ಳೋಣ. ಇದರಲ್ಲಿ ಸುಮಾರು ಮೂರನೆಯ ಒಂದು ಭಾಗದಷ್ಟು, ಕೆಲವರಿಗೆ ಅದಕ್ಕೂ ಹೆಚ್ಚು,  ಅವಧಿ ನಿದ್ದೆಯಲ್ಲಿ ಕಳೆದುಹೋಗುತ್ತದೆ. ಬಾಲ್ಯ ಮತ್ತು ಮುಪ್ಪಿನ ಅವಧಿಯಲ್ಲಿ ಸುಮಾರು ಮೂರನೆಯ ಒಂದು ಭಾಗ ಕಳೆಯುತ್ತದೆ. ಉಳಿಯುವ ಮೂರನೆಯ ಒಂದರಷ್ಟು ಭಾಗದಲ್ಲಿ ಸಂಸಾರದ ಜಂಜಾಟ, ಕಾಯಿಲೆ-ಕಸಾಲೆಗಳು, ಇನ್ನಿತರ ಸಂಗತಿಗಳಿಗೆ ಸಮಯ ಕೊಡಬೇಕು. ಇಷ್ಟೆಲ್ಲಾ ಆಗಿ ಉಳಿಯುವ ಅವಧಿಯಲ್ಲಿ ಏನಾದರೂ ಸಾಧನೆ ಮಾಡುವುದಾದರೆ ಮಾಡಬೇಕು ಎಂದರೆ ಸಮಯದ ಮಹತ್ವದ ಅರಿವು ಆಗುತ್ತದೆ. ಇಷ್ಟಾಗಿಯೂ ಸಾಧನೆ ಮಾಡುವವರಿದ್ದಾರೆ ಎಂದರೆ ಅವರು ಸಮಯದ ಸದ್ವಿನಿಯೋಗ ಮಾಡಿಕೊಳ್ಳುವವರು, ಸಮಯದ ಮಹತ್ವ ಅರಿತವರೇ ಸರಿ. ನಿಜವಾಗಿಯೂ ಸಮಯದ ಅಭಾವವಿಲ್ಲ. ಇರುವುದು ಸಮಯವನ್ನು ಉಪಯೋಗಿಸಿಕೊಳ್ಳುವ ಜಾಣತನದ ಅಭಾವ ಅಷ್ಟೆ. ಹೆಚ್ಚಿನ ಸಮಯ ಹಳೆಯ ಕಷ್ಟ-ನಷ್ಟಗಳ ಕುರಿತು ಚಿಂತಿಸುವುದರಲ್ಲಿ, ಹಗಲು ಕನಸು ಕಾಣುವಲ್ಲಿ ಕಳೆದುಹೋಗುತ್ತದೆ. ಸಮಯದ ಒಂದೊಂದು ಕ್ಷಣವೂ ಅಂತಿಮವೇ, ಏಕೆಂದರೆ ಆ ಕ್ಷಣಗಳು ಮತ್ತೆ ಸಿಗುವುದೇ ಇಲ್ಲ. ನಿಜವಾದ ಸಂಗತಿಯೆಂದರೆ ಸಮಯ ವ್ಯರ್ಥವಾಗುವುದಿಲ್ಲ, ವ್ಯರ್ಥವಾಗುವುದು ನಮ್ಮ ಜೀವನ, ಇರುವ ಸಮಯವನ್ನು ಉಪಯೋಗಿಸಿಕೊಳ್ಳದಿದ್ದರೆ!
     ಹೊತ್ತೇ ಹೋಗುವುದಿಲ್ಲ ಎನ್ನುವವರು, ಟೈಮ್ ಕಳೆಯಲು ಏನಾದರೂ ಮಾಡಬೇಕಲ್ಲಾ ಅನ್ನುವವರು, ಇಸ್ಪೀಟು ಆಡುವವರು, ಪಾರ್ಕಿನ ಕಟ್ಟೆಗಳು, ಬೆಂಚುಗಳಲ್ಲಿ ಕುಳಿತು ಹರಟುವವರು, ಇತರರ ವಿಚಾರಗಳಲ್ಲಿ ಮೂಗು ತೂರಿಸುವವರು, ಮುಂತಾದವರು ನಮ್ಮ ನಡುವೆ ಕಂಡುಬರುತ್ತಾರೆ. ಇವರಿಗೆ ಮಾಡಬೇಕಾದ ಕೆಲಸಗಳಿಗೆ ಮಾತ್ರ ಪುರುಸೊತ್ತು ಸಿಗುವುದಿಲ್ಲ. ಸಮಯ ಕಳೆಯುವವರಿಗೆ ವಾಸ್ತವವಾಗಿ ಸಮಯವೇ ಅವರನ್ನು ಕಳೆಯುತ್ತಿದೆ ಎಂಬುದರ ಅರಿವಾಗುವುದಿಲ್ಲ. ಟೈಮ್ ಪಾಸ್ ಅಲ್ಲ, ಲೈಫ್ ಲಾಸ್! ಇದರಿಂದಾಗಿ ಸ್ವತಃ ತೊಂದರೆಗಳನ್ನೂ ಅನುಭವಿಸುತ್ತಾರೆ. ಆದರೆ ಆಗ ಕಾಲ ಮಿಂಚಿದ ಮೇಲೆ ಚಿಂತಿಸಿದಂತೆ ಆಗಿರುತ್ತದೆ. ನಮ್ಮ ಟೈಮೇ ಸರಿಯಿಲ್ಲ ಎಂದು ಉದ್ಗರಿಸುತ್ತಾರೆ. ಸರಿಯಿಲ್ಲದಿರುವುದು ಟೈಮೋ. ಅವರೋ? ಇಲ್ಲಿ ಇನ್ನೊಂದು ಅಪಾಯವೂ ಇದೆ. ದುಡಿದು ಉಣ್ಣುವವರು ಸಮಯವನ್ನು ಗೌರವಿಸುವವರಾದರೆ, ದುಡಿಯದೇ ಉಣ್ಣಬಯಸುವವರಲ್ಲಿ ಕೆಲವರಾದರೂ ಶ್ರಮಪಡದೇ ಹಣ ಗಳಿಸಲು ಕಳ್ಳತನ, ದರೋಡೆ, ವಂಚನೆ, ಇತ್ಯಾದಿಗಳಲ್ಲಿ ತೊಡಗಿ ಸಮಾಜಕಂಟಕರೂ ಆಗುವವರಿರುತ್ತಾರೆ.
     ಸಮಯ ಅದ್ಭುತ ಸಂಜೀವಿನಿ ಇದ್ದಂತೆ. ಅದು ನೋವನ್ನು ಮರೆಸುತ್ತದೆ, ಸತ್ಯವನ್ನು ಹೊರತರುತ್ತದೆ, ಪಾಪಿಗಳನ್ನು ಶಿಕ್ಷಿಸುತ್ತದೆ, ನ್ಯಾಯ ನೀಡುತ್ತದೆ. ಅದು ಕಿಲಾಡಿ ಕೂಡಾ! ಕಾಯುವವರಿಗೆ ದೀರ್ಘವಾಗಿರುತ್ತದೆ, ಭಯಪಡುವವರ ಹತ್ತಿರ ಧಾವಿಸುತ್ತದೆ, ಶೋಕಿಸುವವರಿಗೆ, ಚಿಂತಿಸುವವರಿಗೆ ಅತಿ ಉದ್ದವಾಗಿರುತ್ತದೆ, ಸಂತೋಷಪಡುವವರಿಗೆ ಚಿಕ್ಕದಾಗಿರುತ್ತದೆ, ಆದರೆ ಅದನ್ನು ಪ್ರೀತಿಸುವವರಿಗೆ ಮಾತ್ರ ಶಾಶ್ವತವಾಗಿರುತ್ತದೆ. ಸಂತೋಷವಾಗಿರುವುದಕ್ಕೆ ಸಮಯ ಕಂಡುಕೊಳ್ಳದಿದ್ದರೆ, ದುಃಖ ಪಡುವುದಕ್ಕೆ ಸಮಯ ಬಂದುಬಿಡುತ್ತದೆ.      ಕಾಲಾಯ ತಸ್ಮೈ ನಮಃ. ಕನಸು ನನಸಾಗಬೇಕಾದರೆ ಅದಕ್ಕಾಗಿ ನಿಶ್ಚಿತ ಸಮಯವನ್ನು ಕೊಡಲೇಬೇಕು.
     ನಮ್ಮ ಏಳಿಗೆಯಲ್ಲಿ, ಅಭಿವೃದ್ಧಿಯಲ್ಲಿ ಸುತ್ತಲಿನ ಸಮಾಜದ ಕೊಡುಗೆ ಅಪಾರವಾಗಿದೆ. ಸಮಾಜದ ಋಣ ತೀರಿಸಲು ಸಮಾಜಕ್ಕಾಗಿಯೂ ದಿನದ ಸ್ವಲ್ಪ ಕಾಲವನ್ನಾದರೂ ಮೀಸಲಿಡುವುದು ನಮ್ಮ ಕರ್ತವ್ಯವಾಗಬೇಕು. ದಿನನಿತ್ಯದ ಕೆಲಸಗಳು, ನಿದ್ದೆ, ಮನೆಕೆಲಸಗಳು, ವ್ಯಾಯಾಮ, ಅಧ್ಯಯನ, ಧ್ಯಾನ, ಇತ್ಯಾದಿಗಳಿಗೆ ನಿಗದಿತ ಸಮಯವನ್ನು ಧಾರಾಳವಾಗಿ ಕೊಟ್ಟರೂ, ದಿನಕ್ಕೆ ಒಂದೆರಡು ಗಂಟೆಗಳನ್ನಾದರೂ ಸಮಾಜ, ದೇಶ, ಧರ್ಮ ಸಂಬಂಧಿತ ಕೆಲಸಗಳಿಗೆ ಸಮಯಾವಕಾಶ ಮಾಡಿಕೊಳ್ಳುವುದು ಕಷ್ಟವೇನಲ್ಲ. ಕಷ್ಟ ಸಮಯದ ಅಭಾವದ್ದಲ್ಲ, ಸೋಮಾರಿ ಮನಸ್ಸಿನದು. ಸ್ವಂತ ಕೆಲಸಗಳಿಗಲ್ಲದೆ ಸಮಾಜ, ದೇಶಕ್ಕಾಗಿ, ಜನಸೇವೆಗಾಗಿ ಸಮಯವನ್ನು ಮೀಸಲಾಗಿಡುವವರೇ ದೊಡ್ಡವರು. ಮನಸ್ಸು ಮಾಡಿದರೆ ನಾವೂ ದೊಡ್ಡವರಾಗಬಹುದು! ನಮಗೂ ಸಮಯವಿದೆ!!
-ಕ.ವೆಂ.ನಾಗರಾಜ್.

ಮುಕ್ತಿಪಥ



      ಆದಿಗುರು ಶ್ರೀ ಶಂಕರಾಚಾರ್ಯ ವಿರಚಿತ 'ಸಾಧನಾಪಂಚಕಮ್' ಒಬ್ಬ ಸಾಧಕ ಅನುಸರಿಸಬೇಕಾದ ರೀತಿ-ನೀತಿಗಳನ್ನು ತಿಳಿಸುವ ಅಪೂರ್ವ ರಚನೆ. ಪರಮ ಸತ್ಯದ ದರ್ಶನ ಮಾಡಿಸುವ ಶ್ರೇಯಸ್ಕರ, ಸನ್ಮಾರ್ಗದ ಪಥವನ್ನು ತೋರಿಸುವ ಈ ಪಂಚಕದಲ್ಲಿ ಒಂದೊಂದರಲ್ಲಿ 8 ಸೂತ್ರಗಳಂತೆ ಒಟ್ಟು  40 ಸೂತ್ರಗಳನ್ನು ಅಳವಡಿಸಲಾಗಿದೆ. ಇದರ ಕನ್ನಡ ಭಾವಾನುವಾದವನ್ನು ಮೂಢನ ಮುಕ್ತಕಗಳ ರೂಪದಲ್ಲಿ ಸಹೃದಯರ ಮಂದಿಟ್ಟಿರುವೆ. ಮೂಲ ಕೃತಿಯನ್ನೂ ಇಲ್ಲಿ ಅವಗಾಹನೆಗೆ ಮಂಡಿಸಿದೆ.  
     ಮುಕ್ತಿಪಥ 
(ಆದಿಗುರು ಶ್ರೀ  ಶಂಕರಾಚಾರ್ಯರ ಸಾಧನಾ ಪಂಚಕದ 
ಕನ್ನಡ ಭಾವಾನುವಾದ - ಮೂಢನ ಮುಕ್ತಕಗಳ ರೂಪದಲ್ಲಿ)
ನಿತ್ಯ ವೇದಾಧ್ಯಯನ ಮಾಡುವವನಾಗಿ
ವೇದೋಕ್ತ ಕರ್ಮಗಳ ಪಾಲಿಸುವನಾಗಿ |
ಈಶಾರಾಧನೆಯಾಗೆ ಕರ್ಮಗಳು ಸಕಲ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧ || 

ಹಾದಿ ತಪ್ಪಿಸುವ ಕರ್ಮಗಳ ತ್ಯಜಿಸಿ
ಅಂತರಂಗದ ಕೊಳೆಯ ತೊಳೆದುಹಾಕಿ |
ಹೊರಸುಖದ ದೋಷವನು ಗುರುತಿಸುವನಾಗೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೨ ||

ನಿನ್ನ ನಿಜರೂಪವನು ತಿಳಿಯಲೆಣಿಸಿರಲು
ಮೋಹ ಸಂಕಲೆಯ ಕಳೆಯಹೊರಟಿರಲು |
ಜ್ಞಾನಿಗಳ ಸಂಗದಲಿ ನಿಜವನರಿಯುತಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೩ ||

ಪರಮಾತ್ಮನಲಿ ಭಕ್ತಿ ಧೃಢವಾಗಿ ತಾನಿರಲು
ಶಾಂತಿ ಮತ್ತಿತರ ಗುಣಗಳನೆ ಪಡೆದಿರಲು |
ಸ್ವಾರ್ಥಪರ ಕರ್ಮದಲಿ ಆಸಕ್ತಿ ತ್ಯಜಿಸಿದೊಡೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೪ ||

ಸದ್ವಿದ್ಯದಾತರಲಿ ಆಶ್ರಯವ ಪಡೆದಿರಲು
ಸದ್ಗುರು ಪಾದಸೇವೆಯನು ನಿತ್ಯ ಗೈದಿರಲು |
ತಿಳಿಯಲುಜ್ಜುಗಿಸೆ ಓಂಕಾರದರ್ಥವನು 
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೫ ||

ಉಪನಿಷದ್ವಾಕ್ಯಗಳು ಸುಮನನವಾಗಿರಲು
ವಾಕ್ಯಾಂತರಾರ್ಥದ ಜಿಜ್ಞಾಸೆ ಮಾಡುತಲಿ |
ಉನಿಷದ್ವಾಕ್ಯವದೆ ನಿಜಜ್ಞಾನವೆನಿಸಿರಲು
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೬ || 

ವಿತಂಡವಾದದೊಡೆ ಇರಿಸಿ ಅಂತರವ
ಉಪನಿಷತ್ತಿನ ಪಥವೆ ನಿನ್ನ ಪಥವೆನಿಸಿರಲು |
ಬ್ರಹ್ಮಾನುಭವದಲ್ಲಿ ಒಂದಾಗಿ ಸಾಗುತಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೭ ||

ಗರ್ವದಲಿ ಮೆರೆಯದಿರು ಎಂದೆಂದಿಗು
ಶರೀರವಿದು ನೀನಲ್ಲ ನೆನಪಿಟ್ಟಿರು |
ತಿಳಿದವರ ಕೂಡೆ ವಾದವನು ಮಾಡದಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೮ ||

ಹಸಿವು ರೋಗಗಳ ಪರಿಹರಿಸಿಕೊಳಬೇಕು
ದಿನನಿತ್ಯದಾಹಾರ ಔಷಧಿಯೊಲಿರಬೇಕು |
ರುಚಿಯಾದ ಭೋಜನವ ಬಯಸದಿರಲಾಗಿ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೯ || 

ತಾನಾಗಿ ಬಂದುದೇ ಪರಮಾನ್ನವೆನಬೇಕು
ಶೀತೋಷ್ಣ ಆದಿಗಳ ಸಹಿಸಿಕೊಳಬೇಕು |
ಅನುಚಿತ ಮಾತುಗಳನಾಡದಿರೆ ಮನುಜ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೦ || 

ನಿರ್ಲಿಪ್ತಭಾವವನು ಹೊಂದಿದವನಾಗಿ
ನಿಂದಾಪನಿಂದೆಗಳ ಗಣಿಸದಿರಬೇಕು |   
ಏಕಾಂತದಲಿ ಸುಖವನರಸುತಿರಲಾಗಿ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೧ ||

ಪರಮಾತ್ಮನಲಿ ಚಿತ್ತ ಲೀನವಿರಿಸಲುಬೇಕು
ಎಲ್ಲೆಲ್ಲು ಅವನನ್ನೆ ಕಾಣುತಿರಬೇಕು |
ಜಗವಿದು ಮನಸಿನಾಟವೆಂದೆಣಿಸುತಿರೆ
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೨ ||

ಪೂರ್ವಕರ್ಮಗಳ ಫಲವನನುಭವಿಸಬೇಕು
ಒದಗುವ ಫಲದಿಂದ ಹೆದರದಿರಬೇಕು |
ಕರ್ಮಫಲವನನುಭವಿಸಿ ಕಳೆದಿರಲು
ಮುಕ್ತಿಪಥದಲಿ ನೀನು ಮುನ್ನಡೆವೆ ಮೂಢ || ೧೩ || 

ಬ್ರಹ್ಮಾನುಭವದಲ್ಲಿ ಅಚಲನಾಗಿರುತಿರಲು
ಪರಮಾನಂದವದು ಸನಿಹದಲಿರದೇನು |
ಆದಿಗುರು ಶಂಕರರು ತೋರಿರುವ ಮಾರ್ಗ
ಮನುಜಕುಲಕಿದು ಉತ್ತಮವು ಮೂಢ || ೧೪ ||
-ಕ.ವೆಂ.ನಾಗರಾಜ್.
***************
'ಸಾಧನಾ ಪಂಚಕಮ್'
ವೇದೋ ನಿತ್ಯಮಧೀಯತಾಂ ತದುದಿತಂ ಕರ್ಮ ಸ್ವನುಷ್ಠೀಯತಾಂ
ತೇನೇಶಸ್ಯ ವಿಧೀಯತಾಂ ಅಪಚಿತಿಃ ಕಾಮ್ಯೇ ಮತಿಸ್ತ್ಯಜತಾಮ್ |
ಪಾಪೌಘಃ ಪರುಧೂಯತಾಂ ಭವಸುಖೇ ದೋಷೋsನುಸಂಧೀಯತಾಂ
ಆತ್ಮೇಚ್ಛಾ ವ್ಯವಸೀಯತಾಂ ನಿಜಗೃಹಾತ್ ತೂರ್ಣಂ ವಿನಿರ್ಗಮ್ಯತಾಮ್ || ೧ ||

ಸಂಗಃಸತ್ಸು ವಿಧೀಯತಾಂ ಭಗವತೋ ಭಕ್ತಿರ್ದೃಢಾsಧೀಯತಾಂ 
ಶಾಂತ್ಯಾದಿಃ ಪರಿಚೀಯತಾಂ ದೃಢತರಂ ಕರ್ಮಾಶು ಸನ್ತ್ಯಜ್ಯತಾಮ್ |
ಅದ್ವಿದ್ವಾಬುಪಸೃಪ್ಯತಾಂ ಪ್ರತಿದಿನಂ ತತ್ಪಾದುಕಾ ಸೇವ್ಯತಾಂ
ಬ್ರಹ್ಮೈಕಾಕ್ಷರಮರ್ಥ್ಯತಾಂ ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್ || ೨ ||

ವಾಕ್ಯಾರ್ಥಶ್ಚ ವಿಚಾರ್ಯತಾಂ ಶ್ರುತಿಶಿರಃ ಪಕ್ಷಃ ಸಮಾಶ್ರೀಯತಾಂ
ದುಸ್ತರ್ಕಾತ್ ಸುವಿರಮ್ಯತಾಂ ಶ್ರುತಿಮತಸ್ತರ್ಕೋsನುಸಂಧೀಯತಾಮ್ |
ಬ್ರಹ್ಮಾಸ್ಮೀತಿ ವಿಭಾವ್ಯತಾಂ ಅಹರಹರ್ಗರ್ವಃ ಪರಿತ್ಯಜ್ಯತಾಂ
ದೇಹೇsಹಂ ಮತಿರುಝ್ಯುತಾಂ ಬುಧಜನೈರ್ವಾದಃ ಪರಿತ್ಯಜ್ಯತಾಮ್ || ೩ ||

ಕ್ಷುದ್ ವ್ಯಾಧಿಶ್ಚ ಚಿಕಿತ್ಸ್ಯತಾಂ ಪ್ರತಿದಿನಂ ಭಿಕ್ಷೌಷಧಂ ಭುಜ್ಯತಾಂ
ಸ್ವಾದ್ಯನ್ನಂ ನ ತು ಯಾಚ್ಯತಾಂ ವಿಧಿವಶಾತ್ ಪ್ರಾಪ್ತೇನ ಸಂತುಷ್ಟತಾಮ್ |
ಶೀತೋಷ್ಣಾದಿ ವಿಷಹ್ಯತಾಂ ನ ತು ವೃಥಾ ವಾಕ್ಯಂ ಸಮುಚ್ಚಾರ್ಯತಾಂ
ಔದಾಸೀನ್ಯಮಭೀಷ್ಟತಾಂ ಜನಕೃಪಾನೈಷ್ಠುರ್ಯಮುತ್ ಸೃಜ್ಯತಾಮ್ || ೪ ||

ಏಕಾಂತೇ ಸುಖಮಾಸ್ಯತಾಂ ಪರತರೇ ಚೇತಃ ಸಮಾಧೀಯತಾಂ
ಪೂರ್ಣಾತ್ಮಾ ಸುಸಮೀಕ್ಷತಾಂ ಜಗದಿದಂ ತದ್ಭಾದಿತಂ ದೃಶ್ಯತಾಮ್ |
ಪ್ರಾಕ್ಕರ್ಮ ಪ್ರವಿಲಾಪ್ಯತಾಂ ಚಿತಿಬಲಾನ್ನಾಪ್ಯುತ್ತರೈಃ ಶ್ಲಿಷ್ಯತಾಂ
ಪ್ರಾರಬ್ಧಂ ತ್ವಿಹ ಭುಜ್ಯತಾಂ ಅಥ ಪರಬ್ರಹ್ಮಾತ್ಮನಾ ಸ್ಥೀಯತಾಮ್ || ೫ ||

ಶನಿವಾರ, ಸೆಪ್ಟೆಂಬರ್ 3, 2016

ಹೀಗೆಯೇ ಇರುವುದಿಲ್ಲ!


ಒಂದು ಕಾಲದ ಭವ್ಯ ರಾಜಮಹಾರಾಜರೆಲ್ಲಿ
ಚತುರ ಮಂತ್ರಿ ಚಂದ್ರಮುಖಿ ರಾಣಿಯರದೆಲಿ |
ವೈಭವ ಆಡಂಬರ ಕೀರ್ತಿ ಪತಾಕೆಗಳೆಲ್ಲಿ
ನಿನ್ನ ಕಥೆಯೇನು ಹೊರತಲ್ಲ ಮೂಢ ||
     'ಇದು ಹೀಗೆಯೇ ಇರುವುದಿಲ್ಲ' ಎಂಬ ಅರಿವು ನಮಗೆ ಬರುವುದೇ ಇಲ್ಲ; ಬಂದಿದ್ದರೆ ನಾವು ಹೀಗೆ ಇರುತ್ತಿರಲಿಲ್ಲ. ಈ ಭೂಮಿಯನ್ನು ಎಂತೆಂತಹ ರಾಜರು, ಮಹಾರಾಜರು, ಚಕ್ರವರ್ತಿಗಳು ಆಳಿಹೋಗಿದ್ದಾರೆ| ಒಬ್ಬರಿಗಿಂತ ಒಬ್ಬರು ಪ್ರಚಂಡರೇ! ಸಮುದ್ರಕ್ಕೇ ಸೇತುವೆ ಕಟ್ಟಿ ದುಷ್ಟ ರಾವಣನನ್ನು ಸದೆಬಡಿದ ರಾಮಚಂದ್ರ, ಸಂಖ್ಯೆ ಮತ್ತು ಸಾಮರ್ಥ್ಯದ ದೃಷ್ಟಿಯಿಂದ ಬಲಿಷ್ಠರಾಗಿದ್ದ ಕೌರವರನ್ನು ಸೋಲಿಸಿ ಚಕ್ರಾಧಿಪನೆನಿಸಿದ ಧರ್ಮರಾಯ ಮುಂತಾದವರು ಈ ಭೂಮಿಗೆ ಒಡೆಯರೆನಿಸಿದ್ದರು. ಸೂರ್ಯ ಮುಳುಗದ ಸಾಮ್ಯಾಜ್ಯದ ನಾಯಕರೆನಿಸಿದ್ದ ಬ್ರಿಟಿಷರು ಶತಮಾನಗಳ ಕಾಲ ಈ ದೇಶವನ್ನು ಆಳಿದ್ದರು. ಹಲವು ಶತಮಾನಗಳ ಕಾಲ ಮೊಗಲರ ಅಧಿಪತ್ಯದಲ್ಲಿ ದೇಶವಿತ್ತು. ಛತ್ರಪತಿ ಶಿವಾಜಿ, ಅಶೋಕ, ವಿಷ್ಣುವರ್ಧನ, ಕೃಷ್ಣದೇವರಾಯ, ರಾಣಾ ಪ್ರತಾಪಸಿಂಹರಂತಹವರೂ ದೊಡ್ಡ ಸಾಮ್ರಾಜ್ಯಗಳಿಗೆ ರಾಜರಾಗಿದ್ದರು. ಅವರುಗಳು ಯಾರೂ ಈಗ ಇಲ್ಲ. ಆದರೆ ಅವರು ಆಳಿದ್ದ ಭೂಮಿ ಮಾತ್ರ ಅವರೊಡನೆ ಹೋಗದೆ ಇಲ್ಲಿಯೇ ಇದೆ. ಹುಟ್ಟುವಾಗ ನಮ್ಮೊಡನೆ ಏನೂ ಇರಲಿಲ್ಲ, ಸಾಯುವಾಗಲೂ ನಮ್ಮೊಡನೆ ಯಾವುದೂ ಬರುವುದಿಲ್ಲ. ಪ್ರಪಂಚದ ಅತಿ ದೊಡ್ಡ ಶ್ರೀಮಂತರ ಹೆಸರುಗಳನ್ನು ಕೇಳುತ್ತಿರುತ್ತೇವೆ. ಅವರ ಶ್ರೀಮಂತಿಕೆ ಅವರು ಬದುಕಿರುವವರೆಗೆ ಮಾತ್ರ! ಸತ್ತಾಗ ಒಂದು ಗುಂಡುಸೂಜಿಯನ್ನೂ ಅವರು ತೆಗೆದುಕೊಂಡುಹೋಗಲಾರರು! ಸ್ವಿಸ್ ಬ್ಯಾಂಕಿನಲ್ಲಿ ಗುಟ್ಟಾಗಿ ಸಾವಿರಾರು ಕೋಟಿ ಸಂಪತ್ತು ಇಟ್ಟು ದೇಶಕ್ಕೆ ಮೋಸ ಮಾಡಬಹುದು. ಆದರೆ ಸಾಯುವಾಗ ಗುಟ್ಟಾಗಿ ತೆಗೆದುಕೊಂಡು ಹೋಗಲು ಮಾತ್ರ ಆಗದು!
     'ಹೀಗೆಯೇ ಇರುವುದಿಲ್ಲ!' -  ನೀವು ಒಬ್ಬ ದೊಡ್ಡ ಅಧಿಕಾರಸ್ಥಾನದಲ್ಲಿರುವಿರೇ? ಈ ಅಧಿಕಾರ ನಿಮ್ಮೊಂದಿಗೆ ಸದಾ ಇರಲಾರದು. ಮುಂದೊಮ್ಮೆ ನಿಮಗಿಂತ ಅರ್ಹ ವ್ಯಕ್ತಿಯೊಬ್ಬರು ಆ ಸ್ಥಾನದಲ್ಲಿ ಬಂದು ಕುಳಿತಾರು! ಯಾವುದೋ ಕಾರಣದಿಂದ ನೀವು ಅಧಿಕಾರ ಕಳೆದುಕೊಳ್ಳಬಹುದು. ಅದಕ್ಕೆ ನಿಮ್ಮ ವಯಸ್ಸು, ಅನಾರೋಗ್ಯ, ವೈಫಲ್ಯ ಇತ್ಯಾದಿಗಳು ಕಾರಣವಾಗಬಹುದು. ಗಳಿಸಿಕೊಂಡ ಅಧಿಕಾರ ಕಳೆದುಹೋಗುವುದು ಅಸಹಜವಲ್ಲ, ಆದರೆ ನೋವು ಕೊಡುವಂತಹದು. ಅಧಿಕಾರ ಶಾಶ್ವತವಲ್ಲ ಎಂಬ ಅರಿವಿದ್ದರೆ ದುಃಖದ ಪ್ರಮಾಣ ಕಡಿಮೆಯಾಗುತ್ತದೆ.
ಬರುವಾಗ ತರಲಾರೆ ಹೋಗುವಾಗ ಒಯ್ಯೆ
ಇಹುದು ಬಹುದೆಲ್ಲ ಸಂಚಿತಾರ್ಜಿತ ಫಲ |
ಸಿರಿ ಸಂಪದದೊಡೆಯ ನೀನಲ್ಲ ನಿಜದಿ ದೇವ
ಅಟ್ಟಡುಗೆಯುಣ್ಣದೆ ವಿಧಿಯಿಲ್ಲ ಮೂಢ ||
     'ಹೀಗೆಯೇ ಇರುವುದಿಲ್ಲ!' - ನಿಜ, ಸ್ವತಃ ನಾವು ಹೀಗೆಯೇ ಇರುತ್ತೇವೆಯೇ? ಹುಟ್ಟಿದಾಗ ಸಣ್ಣ ಮಗುವಾಗಿ ಮುದ್ದು ಮುದ್ದಾಗಿದ್ದವರು ಬೆಳೆಯುತ್ತಾ ಬೆಳೆಯುತ್ತಾ ಬದಲಾಗುತ್ತಾ ಹೋಗುತ್ತೇವೆ. ತುಂಟಾಟ ಮಾಡುವ ಬಾಲಕರಾಗುತ್ತೇವೆ, ಏನು ಬೇಕಾದರೂ ಮಾಡಬಲ್ಲೆವೆಂಬ ಹುಮ್ಮಸ್ಸಿನ ತರುಣರಾಗುತ್ತೇವೆ, ಪ್ರೌಢರಾಗಿ ಸಂಸಾರದ ನೊಗಕ್ಕೆ ಹೆಗಲು ಕೊಡುತ್ತೇವೆ, ಮುಂದೊಮ್ಮೆ ವೃದ್ಧರಾಗಿ ಕೈಕಾಲುಗಳಲ್ಲಿ ಶಕ್ತಿ ಕುಂದಿ ನಿತ್ರಾಣರಾಗುತ್ತೇವೆ. ವಯಸ್ಸಿನಲ್ಲಿದ್ದಾಗ, ಅಧಿಕಾರವಿದ್ದಾಗ ಯಜಮಾನರಾಗಿ ಮೆರೆದಿದ್ದವರು ಇತರರ ಆಶ್ರಯ ಬಯಸುವ ಪ್ರಸಂಗ ಬರುತ್ತದೆ. ನಡು ವಯಸ್ಸಿನಲ್ಲಿ ಇರುವ ಒಳ್ಳೆಯ ವರಮಾನ ಬರುವ ನೌಕರಿ ಅಥವ ವಹಿವಾಟು, ಸುಂದರ ಪತ್ನಿ, ಚುರುಕಿನ ಮಕ್ಕಳು, ಭವ್ಯವಾದ ವಾಸದ ಬಂಗಲೆ, ಓಡಾಡಲು ಐಷಾರಾಮಿ ಕಾರು, ಇತ್ಯಾದಿಗಳೆಲ್ಲವೂ ಮೊದಲು ಇರಲಿಲ್ಲ ಅಲ್ಲವೇ? ಕಾಲ ಸರಿದಂತೆ ನಮಗೂ ವಯಸ್ಸಾಗುತ್ತದೆ, ಪತ್ನಿಗೂ ವಯಸ್ಸಾಗುತ್ತದೆ. ಸೌಂದರ್ಯ ಮಾಸುತ್ತದೆ, ಚರ್ಮ ಸುಕ್ಕುಗಟ್ಟುತ್ತದೆ, ವಿವಿಧ ಕಾಯಿಲೆಗಳು ಅಡರಿಕೊಳ್ಳುತ್ತವೆ, ತಲೆಕೂದಲು ನೆರೆಯುತ್ತದೆ, ಉದುರುತ್ತದೆ. ಇದು ಸಹಜ ಕ್ರಿಯೆ. ಮೊದಲು ಇಲ್ಲದುದು ಕೊನೆಯಲ್ಲೂ ಇರುವುದಿಲ್ಲ. ಈ ಅರಿವು ಇದ್ದರೆ ಪೂರ್ವ ತಯಾರಿ ಮಾಡಿಕೊಂಡು ಸಂಧ್ಯಾಕಾಲವನ್ನು ಸಾಧ್ಯವಾದಷ್ಟು ಹಿತವಾಗಿ ಕಳೆಯಲು ಅವಕಾಶವಿರುತ್ತದೆ.
ಯೌವನವು ಮುಕ್ಕಾಗಿ ಸಂಪತ್ತು ಹಾಳಾಗಿ
ಗೆಳೆಯರು ಮರೆಯಾಗಿ ಕೈಕಾಲು ಸೋತಿರಲು |
ನಿಂದೆ ಮೂದಲಿಕೆ ಸಾಲಾಗಿ ಎರಗಿರಲು
ಬದುಕಿನರ್ಥ ತಿಳಿದೇನು ಫಲ ಮೂಢ ||
     'ಹೀಗೆಯೇ ಇರುವುದಿಲ್ಲ!' - ಹಗಲು, ರಾತ್ರಿಗಳು ಒಂದಾದ ನಂತರ ಒಂದು ಬರುತ್ತವೆ, ಹೋಗುತ್ತವೆ. ಕಷ್ಟಗಳು ಬಂದು ಅನುಭವಿಸಲಾಗದೆ ಒದ್ದಾಡುವಾಗ ತಾಳ್ಮೆಯಿಂದಿರಲು ಈ ಸೂತ್ರ ನೆರವಾಗುತ್ತದೆ. ಕಷ್ಟಗಳು ಹೊಸದಾಗಿ ಬಂದದ್ದಲ್ಲವೇ? ಒಂದೊಮ್ಮೆ ಹೋಗುತ್ತವೆ. ಅಲ್ಲಿಯವರೆಗೂ ಸಹಿಸುವ ಮತ್ತು ಅದನ್ನು ಎದುರಿಸುವ ಶಕ್ತಿ ಇಟ್ಟುಕೊಳ್ಳಬೇಕಷ್ಟೆ. ಈಸಬೇಕು, ಇದ್ದು ಜೈಸಬೇಕು! ಬಂದದ್ದು ಹೋಗಲೇಬೇಕು, ಹೋದದ್ದು ಬರಲೇಬೇಕು, ಇದು ಪ್ರಕೃತಿನಿಯಮವೆಂದು ಅರಿತರೆ ಅರ್ಧ ಕಷ್ಟ ಕಡಿಮೆಯಾದಂತೆಯೇ.
ತೊಡರು ಬಹುದೆಂದು ಓಡದಿರು ದೂರ
ಓಡಿದರೆ ಸೋತಂತೆ ಸಿಗದು ಪರಿಹಾರ |
ಸಮಸ್ಯೆಯ ಜೊತೆಯಲಿರುವವನೆ ಧೀರ
ಒಗಟಿನೊಳಗಿಹುದು ಉತ್ತರವು ಮೂಢs ||
     'ಹೀಗೆಯೇ ಇರುವುದಿಲ್ಲ!' - ಇದು ಸಮದರ್ಶಿಗೆ, ಸಾಧಕನಿಗೆ ಅರ್ಥವಾಗುವ ವಿಚಾರ. ಜನಸಾಮಾನ್ಯರಾದ ನಮಗೆ ಇದು ಅರ್ಥವಾಗುವುದು ಕಷ್ಟ. ಆ ದೇವರು ಅದು ಯಾವ ಭ್ರಾಮಕ ಅಂಶವನ್ನು ನಮ್ಮೊಳಗೆ ತುರುಕಿದ್ದಾನೋ ಗೊತ್ತಿಲ್ಲ. ನಾವು ಚಿರಂಜೀವಿಗಳಂತೆ ವರ್ತಿಸುತ್ತೇವೆ, ಎಲ್ಲವೂ ನಮಗೆ ಬೇಕು ಎಂಬ ಹಪಾಹಪಿಯಲ್ಲೇ ಜೀವನ ಕಳೆದುಬಿಡುತ್ತೇವೆ. ಕಳೆದುಕೊಳ್ಳಲು ಏನೂ ಇರದವನಿಗೆ ಇರುವ ನೆಮ್ಮದಿ ಎಲ್ಲವೂ ಇರುವ ಶ್ರೀಮಂತನಿಗೆ ಇರಲಾರದು. ನೈಜ ಪರಿವ್ರಾಜಕರು, ಅವಧೂತರಲ್ಲಿ ಈ ಗುಣವನ್ನು ಕಾಣಬಹುದು. ಯಾವುದೇ ವಸ್ತು, ಸಂಗತಿ, ಜೀವಿ ಇರುವಂತೆಯೇ ಇರುವುದಿಲ್ಲ, ಕ್ಷಣಕ್ಷಣಕ್ಕೂ ಬದಲಾಗುತ್ತಲೇ ಇರುತ್ತದೆ ಎಂಬ ಅರಿವು ಮೂಡಿದಾಗ ಅದು ಚಮತ್ಕಾರವನ್ನೇ ಮಾಡುತ್ತದೆ. ನವಕೋಟಿ ನಾರಾಯಣನೆಂದು ಹೆಸರು ಪಡೆದಿದ್ದ ಅಂದಿನ ಕಾಲಕ್ಕೆ ಆಗರ್ಭ ಶ್ರೀಮಂತನಾಗಿದ್ದವನು ಎಲ್ಲವನ್ನೂ ದಾನ ಮಾಡಿ ತಂಬರಿ ಹಿಡಿದು ಮನೆ ಬಿಟ್ಟು ಹೊರಟು ಪುರಂದರದಾಸನಾದದ್ದು, ಪರರನ್ನು ದೋಚಿ ಜೀವಿಸುತ್ತಿದ್ದ ಬೇಟೆಗಾರ ವಾಲ್ಮೀಕಿಯಾದದ್ದು, ಬುದ್ಧ ಮತ್ತು ಮಹಾವೀರರು ಐಹಿಕ ಸುಖ-ಭೋಗಗಳನ್ನು ತ್ಯಜಿಸಿ ವಿರಾಗಿಗಳಾದದ್ದು, ಇತ್ಯಾದಿಗಳೆಲ್ಲವೂ ಈ ಅರಿವು ಅವರಲ್ಲಿ ಮೂಡಿದುದರ ಫಲವೇ ಆಗಿದೆ. ಶಾಂತರಾಗಿ ಕುಳಿತು ಚಿಂತಿಸಿದರೆ ಮೂಡುವ ಈ ಅರಿವು ಕಷ್ಟ ಬಂದರೆ ಅಳುಕದ, ಸುಖದಲ್ಲಿ ಹಿಗ್ಗದ, ನಮ್ಮಲ್ಲಿ ಮಾನವೀಯತೆಯ ಒರತೆಯನ್ನು ಚಿಮ್ಮಿಸುವ ಸಾಧನವಾಗದೇ ಇರದು.
-ಕ.ವೆಂ.ನಾಗರಾಜ್.
**************
ದಿನಾಂಕ 18.05.2016 ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ: