ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ನವೆಂಬರ್ 26, 2014

ಬಾಳ ಮುಸ್ಸಂಜೆಯಲ್ಲಿ - 2

ಹಿಂದಿನ ಲೇಖನಕ್ಕೆ ಲಿಂಕ್: ಬಾಳ ಮುಸ್ಸಂಜೆಯಲ್ಲಿ - 1

ಸಾಲ ಪಡೆದೆವು ನಾವು ಋಣಿಗಳಾದೆವು ನಾವು
ಶರೀರವಿತ್ತ ದೇವಗೆ ಹೆತ್ತವರ್ಗೆ ಹೊತ್ತವರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||
     ಭೋಗವಾದ, ಭೌತಿಕವಾದ ವಿಫಲವಾದಾಗ ನೆರವಿಗೆ ಬರುವುದು ಆಧ್ಯಾತ್ಮಿಕವಾದವೇ. ಪ್ರತಿ ವ್ಯಕ್ತಿ ತನ್ನ ಜೀವಿತಕಾಲದಲ್ಲಿ ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ತೀರಿಸಬೇಕೆಂದು ಧರ್ಮ ಸೂಚಿಸುತ್ತದೆ. ಪಿತೃಋಣವೆಂದರೆ ತಮ್ಮನ್ನು ಪಾಲಿಸಿದ, ಪೋಷಿಸಿದ ತಾಯಿ, ತಂದೆ, ಹಿರಿಯರುಗಳನ್ನು ಅವರ ವೃದ್ಧಾಪ್ಯ ಕಾಲದಲ್ಲಿ ಸಂತೋಷವಾಗಿರುವಂತೆ ನೋಡಿಕೊಳ್ಳುವುದೇ ಆಗಿದೆ. ಪಿತೃಋಣವೆಂದರೆ ಸತ್ತ ನಂತರ ಮಾಡುವ ಕ್ರಿಯಾಕರ್ಮಗಳಲ್ಲ, ಬದುಕಿದ್ದಾಗ ಸಲ್ಲಿಸಬೇಕಾದ ಸೇವೆಯಾಗಿದೆ. ವೃದ್ಧಾಪ್ಯವೆಂದರೆ ಅದು ಇನ್ನೊಂದು ರೀತಿಯಲ್ಲಿ ಬಾಲ್ಯಕಾಲವಿದ್ದಂತೆ. ಬಾಲ್ಯದಲ್ಲಿ ಪೋಷಣೆಯ ಅಗತ್ಯವಿರುವಂತೆ, ವೃದ್ಧಾಪ್ಯದಲ್ಲೂ ಇನ್ನೂ ಹೆಚ್ಚಿನ ಮೇಲ್ವಿಚಾರಣೆಯನ್ನು ಅವರ ಮಕ್ಕಳು ಮಾಡಬೇಕಾದುದು ಅಗತ್ಯ ಮತ್ತು ತಾವು ಅವರಿಂದ ಮಾಡಿಸಿಕೊಂಡಿದ್ದ ಪ್ರತಿಫಲಾಪೇಕ್ಷೆಯಿಲ್ಲದ ಸೇವೆಗೆ ಪ್ರತಿಯಾಗಿ ಸಲ್ಲಿಸಲೇಬೇಕಾದ ಋಣವಾಗಿರುತ್ತದೆ. ಇದನ್ನು ಮಾಡದಿದ್ದರೆ ಅವರ ಮಕ್ಕಳೂ ಅವರನ್ನೇ ಅನುಸರಿಸುವರಲ್ಲವೇ? ಇಂತಹ ಯೋಗ್ಯ ಸಂಸ್ಕಾರ ಕೊಡುವ ಮನೆಗಳು, ಶಿಕ್ಷಣ ಸಂಸ್ಥೆಗಳು ತಲೆ ಎತ್ತಬೇಕು. ಮೌಲ್ಯಯುತ, ಅಧಿಕಾರದಾಹವಿಲ್ಲದ ಆಡಳಿತ ವ್ಯವಸ್ಥೆ ರೂಪಿತವಾಗಬೇಕು. ಇದಕ್ಕಾಗಿ ಶ್ರಮಿಸಬೇಕಾದವರು ನಾವು ಮತ್ತು ನೀವೇ ಆಗಿದ್ದೇವೆ.
     ಇನ್ನು ಸಂಧ್ಯಾಕಾಲ ಸಮೀಪಿಸುತ್ತಿರುವವರೂ ಸಹ ತಮ್ಮ ಮುಂದಿನ ಜೀವನದ ಬಗ್ಗೆ ಚಿಂತಿಸಿ ಮುಂದುವರೆಯುವ ಪ್ರವೃತ್ತಿ ಬರಬೇಕಿದೆ. ಸನಾತನ ಧರ್ಮದಲ್ಲಿ ಉಕ್ತವಾದ ೧೬ ಸಂಸ್ಕಾರಗಳ ಪೈಕಿ ವಿವಾಹ, ವಾನಪ್ರಸ್ಥ ಮತ್ತು ಸಂನ್ಯಾಸ- ಈ ಮೂರು ಸಂಸ್ಕಾರಗಳು ಯೋಗ್ಯತಾನುಸಾರ ಅನುಸರಿಸಬೇಕಾದವುಗಳಾಗಿವೆ. ಮಾನವನ ಆಯಸ್ಸನ್ನು ಒಂದು ನೂರು ವರ್ಷಗಳು ಎಂದಿಟ್ಟುಕೊಂಡರೆ ಮೊದಲ ೨೫ ವರ್ಷಗಳು ಬ್ರಹ್ಮಚರ್ಯ, ನಂತರದ ೨೫ ವರ್ಷಗಳನ್ನು ಗೃಹಸ್ಥರಾಗಿ ಕಳೆದು, ನಂತರದ ೫೧ ರಿಂದ ೭೫ವರ್ಷಗಳು ವಾನಪ್ರಸ್ಥದ ಕಾಲ. ಅದರ ನಂತರ ಸಂನ್ಯಾಸಾಶ್ರಮ. ಇರುವ ಬಂಧಗಳು, ಬಂಧನಗಳನ್ನು ಕಳೆದುಕೊಂಡು ಜೀವಿಸಲು ಅತಿ ಅಗತ್ಯವಾದಷ್ಟನ್ನು ಮಾತ್ರ ಹೊಂದಿ ಆಧ್ಯಾತ್ಮಿಕ ಸಾಧನೆಗೆ ತೊಡಗುವ ಕಾಲವೇ ವಾನಪ್ರಸ್ಥವೆನಿಸುವುದು. ಇದು ಪರಿವರ್ತನಾ ಕಾಲ. ಈ ಸಾಧನೆಗಾಗಿ ಹಿಂದೆ ಕಾಡಿಗೆ ತೆರಳುತ್ತಿದ್ದರು. ಈಗ ಕಾಡುಗಳೇ ಇಲ್ಲ. ಇಂದಿನ ಕಾಲಮಾನದ ಪರಿಸ್ಥಿತಿಯಲ್ಲಿ ವಾನಪ್ರಸ್ಥದ ಮೂಲ ಪರಿಕಲ್ಪನೆಯನ್ನು ಸೂಕ್ತವಾಗಿ ಪರಿವರ್ತಿಸಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ೪೫-೫೦ರ ವಯಸ್ಸಿನಲ್ಲಿ ಇರುವವರು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಮುಂಚಿತವಾಗಿ ಯೋಜನೆ ಮಾಡಿಕೊಂಡು, ಮಾನಸಿಕವಾಗಿ ಸಿದ್ಧರಾಗಿದ್ದಲ್ಲಿ ನಿವೃತ್ತರಾದ ಕೂಡಲೇ ಉಂಟಾಗಬಹುದಾದ ಶೂನ್ಯಭಾವದಿಂದ ಹೊರಬರಬಹುದು. ನಿವೃತ್ತ ಜೀವನವನ್ನು ಒಳ್ಳೆಯ ರೀತಿಯಲ್ಲಿ ಕಳೆಯುವ ಸಾಧನವಾಗಿ ಮಾಡಿಕೊಳ್ಳುವುದನ್ನು ವಾನಪ್ರಸ್ಥವೆನ್ನೋಣ. ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ಒಳಿತನ್ನು ಕಾಣುವ ಮನೋಭಾವ ಬೆಳೆಸಿಕೊಂಡು, ಅಂತರಂಗ, ಬಹಿರಂಗಗಳಲ್ಲಿ ಸಾಮ್ಯತೆ ಸಾಧಿಸುವ ಕ್ರಿಯೆಯಲ್ಲಿ ತೊಡಗುವುದು ಕಡಿಮೆ ಸಾಧನೆಯಲ್ಲ. ಪ್ರಾಪಂಚಿಕ ಆಕರ್ಷಣೆಗಳಿಂದ ವಿಮುಕ್ತರಾಗಿ ಸರಳ ವಸ್ತ್ರಗಳನ್ನು ಧರಿಸಿ, ಸರಳ ಜೀವನವನ್ನು ನಡೆಸಿ ಆತ್ಮಚಿಂತನೆಯಲ್ಲಿ ತೊಡಗಬಹುದಾಗಿದೆ. ತನ್ನ ಚಿಂತನೆ, ಜ್ಞಾನಾಭಿವೃದ್ಧಿಗಳಿಗೆ ಪೂರಕವಾಗುವ ಸತ್ಸಂಗಗಳಲ್ಲಿ ಪಾಲುಗೊಳ್ಳುವುದು, ಅಂತಹ ಆದರ್ಶದ ಜೀವನ ಸಾಗಿಸುತ್ತಿರುವ ಧೀಮಂತರ ಮಾರ್ಗದರ್ಶನ ಪಡೆಯುವುದು ಸಹಕಾರಿಯಾಗುತ್ತದೆ. ಇಂತಹವರು ಸಹಜವಾಗಿ ದೇಶಾತೀತ, ಭಾಷಾತೀತ, ಜನಾಂಗಾತೀತ, ಮತಾತೀತ ಮಾನವರಾಗುತ್ತಾರೆ. ಕೌಟುಂಬಿಕ ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸಿ ನಿರ್ಲಿಪ್ತ, ನಿಶ್ಚಿಂತರಾಗುವುದು ಮೊದಲ ಕ್ರಮವಾಗಬೇಕು. ನಂತರದಲ್ಲಿ ಸಾಧ್ಯವಾದಷ್ಟು ಪ್ರಶಾಂತ ಕೊಠಡಿ ಅಥವ ಸ್ಥಳದಲ್ಲಿ ಇರಬೇಕು. ಕುಟುಂಬದವರು ಕೌಟುಂಬಿಕ ಸಮಸ್ಯೆ ಅಥವ ವಿಚಾರಗಳಿಗೆ ಸಲಹೆ, ಸಹಕಾರ ಬಯಸಿದಲ್ಲಿ ಕೊಡಬೇಕು. ಆದರೆ ಅವುಗಳಲ್ಲಿ ವ್ಯಸ್ತರಾಗಬಾರದು. ಕೌಟುಂಬಿಕ ಸಾಮರಸ್ಯ, ಬಂಧುಗಳ ಸಾಮರಸ್ಯ, ಜನಾಂಗದ ಸಾಮರಸ್ಯ, ಸಕಲ ಜೀವಕೋಟಿಯ ಸಾಮರಸ್ಯದ ಗುರಿಯಿರಬೇಕು. ಈ ದಿಸೆಯಲ್ಲಿ ಎಷ್ಟು ಸಾಧಿಸಲು ಸಾಧ್ಯ, ಸಾಧಿಸಿದೆವು ಎಂಬುದು ಮಹತ್ವದ್ದಲ್ಲ. ಸಣ್ಣ ಕೌಟುಂಬಿಕ ವ್ಯಾಪ್ತಿಯಿಂದ ಹೊರಬಂದು ವಿಶ್ವವೇ ಒಂದು ಕುಟುಂಬವಾಗಿದ್ದು ತಾನು ಅದರ ಭಾಗವೆಂದು ಭಾವಿಸುವ ಮನೋವೃತ್ತಿ ಬೆಳೆಸಿಕೊಳ್ಳಬೇಕು. ಸರ್ವರ ಹಿತ ಬಯಸುವ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು, ಬೆಂಬಲಿಸಬೇಕು. ಮನೋವಿಕಾರಗಳನ್ನು ನಿಯಂತ್ರಿಸಲು ಸಾಧನೆ ನಡೆಸಬೇಕು. ದುಷ್ಟ ವಿಚಾರಗಳಿಂದ ದೂರವಿದ್ದು, ಸದ್ವಿಚಾರಗಳ ಅನುಸರಣೆ, ಪ್ರಸರಣೆಗೆ ಗಮನ ಕೊಡಬೇಕು. ಒಳಿತನ್ನು, ಒಳ್ಳೆಯ ಸಂಗತಿಗಳನ್ನು ಗುರುತಿಸಿ ಗೌರವಿಸಬೇಕು. ಸಾಧ್ಯವಾದಷ್ಟೂ ಇತರರಿಗೆ ಹೊರೆಯಾಗದಂತೆ ಬಾಳಬೇಕು. 
     ಸಾಮಾನ್ಯವಾಗಿ ಒಬ್ಬೊಬ್ಬರಿಗೆ ಒಂದೊಂದು ವೃತ್ತಿ, ಪ್ರವೃತ್ತಿ, ಹವ್ಯಾಸಗಳು ತೃಪ್ತಿ, ಸಂತೋಷ ಕೊಡುವ ಸಂಗತಿಯಾಗಿರುತ್ತದೆ. ನಿವೃತ್ತಿಯೆಂದರೆ ಅಂತಹ ಹವ್ಯಾಸಗಳನ್ನು ನಿಲ್ಲಿಸುವುದಲ್ಲ. ಬದಲಾಗಿ ಅವುಗಳನ್ನು ಇತರರ ಹಿತಕ್ಕಾಗಿ ಬಳಸುವುದು. ಆದರೆ ಅದು ಹಣಗಳಿಕೆಯ ಸಾಧನವಾಗಬಾರದಷ್ಟೆ. ಒಬ್ಬ ನಿವೃತ್ತ ಶಿಕ್ಷಕ ಬಡ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಬಹುದು, ಸಂಗೀತಗಾರ ತನ್ನ ಸಾಧನೆಯನ್ನು ಉತ್ತುಂಗಕ್ಕೇರಿಸುವುದರ ಜೊತೆಗೆ ಇತರರಿಗೆ ಸಂಗೀತ ಹೇಳಿಕೊಡಬಹುದು, ಬರಹಗಾರ ತನ್ನ ಅನುಭವದ ಸಾರಗಳನ್ನು ಬರಹದ ಮೂಲಕ ಅಭಿವ್ಯಕ್ತಿಸಬಹುದು ಮತ್ತು ಆ ಮೂಲಕ ಪರಿಣಾಮ ಬೀರಬಹುದು. ಇವೆಲ್ಲಾ ಉದಾಹರಣೆಗಳಷ್ಟೆ. ಕೇವಲ ಆತ್ಮತೃಪ್ತಿ ಮತ್ತು ಇತರರಿಗೆ ಮಾರ್ಗದರ್ಶಿಯಾಗಿರಲು ಮಾತ್ರ ಇವುಗಳ ಬಳಕೆಯಾಗಬೇಕು. ಪಡೆಯುವುದಕ್ಕಿಂತ ಕೊಡುವುದಕ್ಕೆ ಆದ್ಯತೆಯಿರಬೇಕು. ಅಷ್ಟಕ್ಕೂ ನಮ್ಮಲ್ಲಿರುವುದೆಲ್ಲಾ ನಾವು ಪಡೆದಿದ್ದೇ ಅಲ್ಲವೇ? ಬದುಕಿನ ಜಂಜಾಟದಲ್ಲಿ ತನ್ನತನಕ್ಕೆ ಅದುವರೆಗೆ ಸಿಕ್ಕದ ಆದ್ಯತೆಯನ್ನು ಜೀವನದ ಅಂತಿಮ ಘಟ್ಟದಲ್ಲಾದರೂ ಸಿಕ್ಕುವಂತೆ ನೋಡಿಕೊಂಡು 'ತಾನು ತಾನಾಗಿರಬೇಕು', ಅರ್ಥಾತ್ 'ತನಗಾಗಿ' ಬಾಳಬೇಕು. 'ತನಗಾಗಿ' ಬಾಳುವ ಈ ರೀತಿಯ ಬಾಳುವಿಕೆಯಲ್ಲಿ ಸ್ವಾರ್ಥವಿರಲಾರದು. ಏಕೆಂದರೆ, ಅದು ಆತ್ಮತೃಪ್ತಿಯ, ಆತ್ಮ ಚಿಂತನೆಯ, ಆತ್ಮಾನುಸಂಧಾನದ ಮಾರ್ಗ. ಒಂದು ರೀತಿಯಲ್ಲಿ ಅದು ಹಿಂದೆ ಮಾಡಿರಬಹುದಾದ ತಪ್ಪುಗಳಿಗೆ ಪ್ರಾಯಶ್ಚಿತ್ತವೂ ಆದೀತು. ಇಂತಹ ಕ್ರಿಯೆಯಿಂದ ಯುವಕರಿಗೆ ಸಹಜವಾಗಿ ನಾಯಕತ್ವ ಸಿಗುವುದಲ್ಲದೇ, ಅವರಿಗೆ ಸುಯೋಗ್ಯ ಮಾರ್ಗದರ್ಶನ ಸಹ ನೀಡಿದಂತಾಗುತ್ತದೆ. 'ಯಾರಂತೆ ಅಂದರೆ ಊರಂತೆ' ಎಂದುಕೊಂಡು ಅದುವರೆಗೆ ಹೇಗೆ ಹೇಗೋ ಸಾಗಿಸಿದ ಜೀವನವನ್ನು ಮರೆತು, ಮೌಲ್ಯಗಳನ್ನು ಕಡೆಗಣಿಸಿ ಬಾಳಿದ ಹಿಂದಿನ ದಿನಗಳನ್ನು ಮರೆತು, ಕಷ್ಟವಾದರೂ ಸರಿ, ಜೀವನದ ಉಳಿದ ಕೊನೆಯ ದಿನಗಳಲ್ಲಿ ಮೌಲ್ಯಗಳಿಗೆ ಅಂಟಿಕೊಂಡು ಬಾಳಿದರೆ ಅದು ಜೀವಕೋಟಿಗೆ ನೀಡುವ, ಭಗವಂತ ಮೆಚ್ಚುವ ಅತಿ ದೊಡ್ಡ ಕಾಣಿಕೆಯಾಗುತ್ತದೆ.
     ಆರೋಗ್ಯವಾಗಿದ್ದರೆ ವಯಸ್ಸು ಅನ್ನುವುದು ಕೇವಲ ಒಂದು ಸಂಖ್ಯೆ ಅಷ್ಟೆ. ಎಲ್ಲರೂ ಬಯಸುವುದು 'ವಿನಾ ದೈನ್ಯೇನ ಜೀವನಮ್ ಅನಾಯಾಸೇನ ಮರಣಮ್'. ಈ ಸ್ಥಿತಿ ನಮ್ಮದಾಗಬೇಕಾದರೆ, ಅದನ್ನು ಆಗಗೊಳಿಸುವುದು ಏಕಾಏಕಿ ಸಾಧ್ಯವಿಲ್ಲ, ಚಿಕ್ಕಂದಿನಿಂದಲೇ ಸಂಸ್ಕಾರಯುತ, ಅರೋಗ್ಯಯುತ ಜೀವನ ವಿಧಾನಗಳನ್ನು ಅನುಸರಿಸಿದರೆ ಮಾತ್ರ ಇವು ನಮ್ಮದಾಗುತ್ತವೆ. ಮೊದಲು ಹೇಗೆ ಹೇಗೋ ಇದ್ದು ಕೊನೆಯಲ್ಲಿ ಮಾತ್ರ ಸರಿಯಾಗಿರಬೇಕೆಂದರೆ ಸಾಧ್ಯವೇ? ಯಜುರ್ವೇದದ ಈ ಮಂತ್ರ ಹೇಗಿರಬೇಕೆಂಬುದಕ್ಕೆ ನಮಗೆ ದಾರಿ ತೋರಿಸುತ್ತಿದೆ: ಪಶ್ಶೇಮ ಶರದಃ ಶತಮ್ (ಒಳ್ಳೆಯದನ್ನು ನೋಡುತ್ತಾ ನೂರು ವರ್ಷಗಳ ಕಾಲ ಬಾಳೋಣ); ಜೀವೇಮ ಶರದಃ ಶತಮ್ (ನೂರು ವರ್ಷಗಳ ಕಾಲ ಜೀವಿಸೋಣ); ಹೇಗೆ? ಶೃಣವಾಮ ಶರದಃ ಶತಮ್ (ನೂರು ವರ್ಷಗಳ ಕಾಲ ಒಳ್ಳೆಯದನ್ನು ಕೇಳೋಣ); ಪ್ರಬ್ರವಾಮ ಶರದಃ ಶತಮ್ (ನೂರು ವರ್ಷಗಳ ಕಾಲ ಒಳ್ಳೆಯದನ್ನೇ ಆಡೋಣ); ಅದೀನಾಃ ಸ್ಯಾಮ ಶರದಃ ಶತಮ್ (ದೈನ್ಯತೆಯಿಲ್ಲದಂತೆ, ಸ್ವತಂತ್ರರಾಗಿ, ಆತ್ಮಗೌರವದಿಂದ ನೂರು ವರ್ಷಗಳ ಕಾಲ ಬಾಳೋಣ); ಈ ರೀತಿಯಾಗಿ, ಭೂಯಶ್ಚ ಶರದಃ ಶತಾತ್ (ನೂರು ವರ್ಷಗಳಿಗಿಂತ ಹೆಚ್ಚಾಗಿಯೂ ಜೀವಿಸೋಣ). ಇದು ಬಾಳಬೇಕಾದ ರೀತಿ. ಹೀಗೆ ಬಾಳಿದವರ ಅನೇಕ ಉದಾಹರಣೆಗಳು ನಮ್ಮ ಕಣ್ಣು ತೆರೆಸಬೇಕು. ಈ ರೀತಿ ಬಾಳಿದ ಕಾರಣದಿಂದಲೇ ಅನೇಕ ಮಹಿಮಾವಂತರನ್ನು ಅವರು ಕಾಲವಶರಾದ ಶತ ಶತಮಾನಗಳ ನಂತರವೂ ಇಂದಿಗೂ ನೆನಪಿಸಿಕೊಳ್ಳುತ್ತೇವೆ, ಗೌರವಿಸುತ್ತೇವೆ, ಪೂಜಿಸುತ್ತೇವೆ. ಕೇವಲ ಈಗಿನ ಉದಾಹರಣೆಗಳನ್ನೇ ನೋಡುವುದಾದರೆ ೧೦೬ ವರ್ಷಗಳ ಸಿದ್ದಗಂಗಾ ಶ್ರೀಗಳು, ೧೦೨ ವರ್ಷಗಳ ಪ್ರೊ. ಜಿ. ವೆಂಕಟಸುಬ್ಬಯ್ಯನವರು, ೧೧೭ ವರ್ಷಗಳ ಪಂಡಿತ ಸುಧಾಕರ ಚತುರ್ವೇದಿಗಳು- ಇವರುಗಳ ಬದುಕುಗಳು ಈ ವೇದಮಂತ್ರದ ಸಾಕಾರರೂಪವಾಗಿವೆ. ಪಂ. ಸುಧಾಕರ ಚತುರ್‍ವೇದಿಯವರು ಹೇಳುವಂತೆ ಯಾರು ಚೆನ್ನಾಗಿ ಆಲೋಚಿಸಿ, ಚೆನ್ನಾಗಿ ಯೋಚನೆ ಮಾಡಿಯೇ ಕಾರ್ಯ ಮಾಡುತ್ತಾರೋ ಅವರೇ ಮನುಷ್ಯರು. ನಮ್ಮ ಶರೀರದ ಆಕಾರ ಏನೋ ಮನುಷ್ಯನ ಆಕಾರದಲ್ಲೇ ಇರಬಹುದು, ಆದರೆ ನಡೆ ನುಡಿಯಲ್ಲಿ ಪಶುವೃತ್ತಿ ಇದ್ದರೆ ಏನು ಪ್ರಯೋಜನ?
ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ
ಸರಿಸರಿದು ಸಾಗಿ ಬರಲಿಹುದು ಸಾವು | 
ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ
ಜಾಣರಲಿ ಜಾಣರು ಬದುಕುವರು ಮೂಢ || 
     ಮುಪ್ಪು ಎಂದೊಡನೆ ನೆನಪಾಗುವುದು ಮುಂದೆ ಬರಲಿರುವ ಸಾವೇ! ಕೆಲವರು ಮಾತನಾಡುತ್ತಿರುತ್ತಾರೆ, 'ಮುಪ್ಪು ಬಂದು ಒದ್ದಾಡುವುದಕ್ಕಿಂತ ಮೊದಲೇ ಕೈಕಾಲು ಗಟ್ಟಿಯಾಗಿದ್ದಾಗಲೇ ಹೋಗಿಬಿಡಬೇಕು'. ಮುಪ್ಪನ್ನು ತಪ್ಪಿಸಿಕೊಳ್ಳುವುದೆಂದರೆ ಜೀವನದ ಅಮೂಲ್ಯ ಅನುಭವ ಪಡೆಯುವ, ಅದನ್ನು ಹಂಚಿಕೊಳ್ಳುವ ಅವಕಾಶದಿಂದ ವಂಚಿತರಾಗುವುದೇ ಆಗಿದೆ. ಯುವಕರಾಗಿದ್ದಾಗ ನಾವು ಕಲಿಯುತ್ತೇವೆ, ಆದರೆ ವಯಸ್ಸಾದಾಗ ಅರ್ಥ ಮಾಡಿಕೊಳ್ಳುತ್ತೇವೆ. ಯೌವನದಲ್ಲಿ ಎಲ್ಲಾ ಬಾಗಿಲುಗಳು ಹೊರಮುಖವಾಗಿ ತೆರೆದಿದ್ದರೆ, ಇಳಿ ವಯಸ್ಸಿನಲ್ಲಿ ಒಳಮುಖವಾಗಿ ತೆರೆಯುತ್ತವೆ. ನಿಜವಾದ ಅಂತರಂಗದ ದರ್ಶನವಾಗುವುದು ಆ ಸಮಯದಲ್ಲೇ! ವಯಸ್ಸಾದಾಗ ನಾವು ನಗುವುದನ್ನು ನಿಲ್ಲಿಸಬೇಕಿಲ್ಲ, ನಗುವುದನ್ನು ನಿಲ್ಲಿಸಿದಾಗ ನಮಗೆ ವಯಸ್ಸಾಗಿಬಿಡುತ್ತದೆ. ಆಶಾವಾದ ನಿಜವಾದ ಜೀವನವಾದರೆ, ನಿರಾಶಾವಾದ ಸಾವು. ಈ ಸಾವು ಅನ್ನುವುದು ನಿರ್ಲಜ್ಜ. ನಾವು ಕರೆದರೂ ಬರುತ್ತದೆ, ಕರೆಯದಿದ್ದರೂ ಬರುತ್ತದೆ. ಹಾಗಾಗಿ ಸಾವನ್ನು ಏಕೆ ನಾವಾಗಿ ಬಯಸಬೇಕು? ಸಾಯುವುದು ಸುಲಭ, ಆದರೆ ಬದುಕುವುದಿದೆಯಲ್ಲಾ, ಅದು ಕಷ್ಟ. ಕಷ್ಟವಾದರೂ 'ಬದುಕುವ' ಛಲ ಉಳಿಸಿಕೊಳ್ಳಬೇಕು. ಸಾವು ತಾನಾಗಿ ಬಂದಾಗ ಸಂತೋಷದಿಂದ ಸ್ವಾಗತಿಸಿ, 'ಬಾ, ಮೃತ್ಯುವೇ, ಬಾ. ನಾನು ಸಿದ್ಧನಿದ್ದೇನೆ' ಎಂದು ಹೇಳೋಣ. ಹಿರಿಯರೊಬ್ಬರು ಬದುಕಿಗೆ ವಿದಾಯ ಮತ್ತು ಪಂಚಭೂತಗಳಿಗೆ ಕೃತಜ್ಞತೆ ಸಲ್ಲಿಸುವ ಶ್ಲೋಕವನ್ನು ಉದ್ಧರಿಸುತ್ತಿದ್ದು, ಅದರ ಅರ್ಥ ಹೀಗಿದೆ: 'ತಾಯಿಯಾದ  ಭೂಮಿಯೇ, ತಂದೆಯಾದ ವಾಯುವೇ, ಸ್ನೇಹಿತನಾದ ತೇಜಸ್ಸೇ, ಬಂಧುವಾದ ಜಲವೇ, ಸಹೋದರನಾದ ಆಕಾಶವೇ, ನಿಮ್ಮೆಲ್ಲರಿಗೂ ಇದೋ ನನ್ನ ಕೊನೆಯ ನಮಸ್ಕಾರ. ನಿಮ್ಮ ಸಂಗದಿಂದ ಹುಟ್ಟಿದ, ಪುಣ್ಯಪ್ರಭಾವದಿಂದ ಪ್ರಾಪ್ತವಾದ, ನಿರ್ಮಲ ಜ್ಞಾನದಿಂದ ಪತ್ನಿ ಪುತ್ರಾದಿ ಸಮಸ್ತ ಮೋಹಜಾಲವನ್ನು ಕಳೆದುಕೊಂಡು ಪರಬ್ರಹ್ಮನಲ್ಲಿ ವಿಲೀನನಾಗಿ ಹೋಗುವೆನು'. ಪಂಚಭೂತಗಳಿಂದ ಈ ದೇಹ ಉತ್ಪತ್ತಿಯಾಗಿದೆ. ಪಂಚಭೂತಗಳ ಸಹಾಯದಿಂದಲೇ ಅಭಿವೃದ್ಧಿ ಹೊಂದಿದ್ದೇವೆ ಎಂಬ ಕೃತಜ್ಞತೆಯ ಭಾವದಿಂದ ವಿದಾಯ ಹೇಳುವುದು ಎಷ್ಟೊಂದು ಸಮಂಜಸವಾಗಿದೆ! ಪರಮಾತ್ಮ ಯಾವ ಜೀವಿ ಎಷ್ಟು ಕಾಲ ಬಾಳಬೇಕು, ಬದುಕಬೇಕು ಎಂದು ನಿರ್ಧರಿಸಿರುತ್ತಾನೆ. ಅದನ್ನು ಮೀರಿ ಮೊದಲೇ ಸಾಯುವುದೆಂದರೆ ನಮ್ಮ ಬದುಕಿನ ರೀತಿ ಸರಿಯಿರದೆ ಅಪಮೃತ್ಯು ಹೊಂದಿದಂತೆಯೇ, ಅವನ ಇಚ್ಛೆಯನ್ನು ಮೀರಿದಂತೆಯೇ ಎಂಬುದನ್ನು ಅರ್ಥ ಮಾಡಿಕೊಂಡರೆ, ನಾವು ಸರಿಯಾದ ರೀತಿಯಲ್ಲಿ ಬದುಕಬಹುದೇನೋ! ಎಲ್ಲರಿಗೂ ವಯಸ್ಸಾಗಿಯೇ ಆಗುತ್ತದೆ, ಅದರೆ 'ಹೆಚ್ಚು ಕಾಲ' ಬದುಕುವವರು ಎಷ್ಟು ಜನ? ಈ ಹೆಚ್ಚು ಕಾಲ ಎಂಬ ಪದದಲ್ಲಿ 'ಸತ್ತ ಮೇಲೂ ಜನಮಾನಸದಲ್ಲಿ ಬದುಕಿರುವವರೂ' ಸೇರುತ್ತಾರೆ. ಈಗಲೂ ಕಾಲ ಮಿಂಚಿಲ್ಲ. ಉಳಿದ ಬಾಳನ್ನಾದರೂ 'ಸರಿಯಾಗಿ' ಬಾಳಲು ಪ್ರಯತ್ನಿಸಿದರೆ ದೇವರ ಇಚ್ಛೆಯನ್ನು ಗೌರವಿಸಿದಂತೆ ಆಗುತ್ತದೆ. 
"ವೃದ್ಧಾಪ್ಯವೆಂಬುದು ಜೀವನದ ಕಿರೀಟ, ಗೌರವಿಸೋಣ; ಜೀವನನಾಟಕದ ಕೊನೆಯ ಅಂಕ, ಚೆನ್ನಾಗಿಸೋಣ."
-ಕ.ವೆಂ.ನಾಗರಾಜ್.
**************
8.10.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

3 ಕಾಮೆಂಟ್‌ಗಳು:

  1. ತು೦ಬಾ ಮನನೀಯ ವಾಗಿದೆ. ಸಕಾಲಿಕ ಲೇಖನ. ಅತ್ಯುತ್ತಮ ವಿಚಾರಗಳನ್ನು ಹ೦ಚಿಕೊ೦ಡಿದ್ದೀರಿ ನಾಗರಾಜ್ ರವರೆಗೆ. ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. Sripada Rao Manjunath
      ಬಾಳ ಮುಸ್ಸಂಜೆಯಲ್ಲಿ ಭಾಗ ಒಂದು ಮತ್ತು ಎರಡನ್ನೂ ಓದಿದೆ ತುಂಬ ಚೆನ್ನಾಗಿ ಬರೆದಿದ್ದೀರ. ವಾಸ್ತವ ಕಹಿಯಾದರೂ ನಿಜ. ವೃದ್ದಾಪ್ಯಕ್ಕೆ ಮಾನಸಿಕ ಸಿದ್ದತೆಗಳನ್ನು ಪ್ರತಿಯೊಬ್ಬರೂ ಮಾಡಿಕೊಳ್ಳಲು ಕೆಲವು ಸಲಹೆ ಹಾಗೂ ಸೂಚನೆಗಳನ್ನು ಮತ್ತು ಸಾಧ್ಯತೆಗಳನ್ನು, ಪರ್ಯಾಯ ವ್ಯವಸ್ಥೆಗಳ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದರೆ ಚೆನ್ನಿತ್ತು ಎನಿಸಿತು. ನಿಸ್ವಾರ್ಥ ಬದುಕಿನ ಅವಶ್ಯಕತೆಯನ್ನು ಮತ್ತು ಪರೋಪಕಾರ ಮನೋಭಾವದ ನಡವಳಿಕೆಯನ್ನು ಇನ್ನು ಸ್ವಲ್ಪ ಒತ್ತಿ ಹೇಳಿದ್ದರೆ ಚೆನ್ನಾಗಿತ್ತು ಎಂಬುದು ನನ್ನ ವಯ್ಯಕ್ತಿಕ ಅನಿಸಿಕೆ ಅಷ್ಟೆ. ಬರಹ ತುಂಬ ಮನಮುಟ್ಟುವಂತಿದೆ ಎನ್ನಲು ನನಗಂತು ಸಂಕೋಚವಿಲ್ಲ. ಇನ್ನು ಹೆಚ್ಚು ಹೆಚ್ಚು ವೈಚಾರಿಕ ಬರಹಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇನೆ. ಇಷ್ಟು ವೈಚಾರಿಕವಾದ ಅಚ್ಚುಕಟ್ಟಾದ ಎಲ್ಲರಿಗೂ ಉಪಯುಕ್ತವಾದ ಅಂಕಣವನ್ನು ಓದಿ ವೀಕ್ಷಿಸುವರ ಅತೀ ಕಡಿಮೆ ಸಂಖ್ಯೆ ಕಂಡು ನಿಜಕ್ಕೂ ಬೇಸರ ತಂದಿದೆ ಮತ್ತು ಬಹಳ ನಿರಾಸೆ ಮೂಡಿಸಿದೆ. ಭೋಧಪ್ರದವಾದದ್ದೆಲ್ಲವನ್ನು ಏಕೆ ಹೀಗೆ ನಿರ್ಲಕ್ಷಿಸುತ್ತಾರೆಂದು ಅರ್ಥವಾಗುತ್ತಿಲ್ಲ. ರಂಜನೆಯೇ ಜೀವನದ ಗುರಿ ಎನ್ನುವಂತೆ ಇದೆ ನಮ್ಮ yuva ಮಿತ್ರರುಗಳ ನಡವಳಿಕೆ.

      Kavi Nagaraj
      ಮೆಚ್ಚುಗೆಯ ಅನಿಸಿಕೆಗೆ ಧನ್ಯವಾದಗಳು, ಶ್ರೀಪಾದರಾಯರೇ.

      ಅಳಿಸಿ