ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶನಿವಾರ, ನವೆಂಬರ್ 29, 2014

ಸಹನೆಯ ಮಿತಿ

     "ಬೇಡಾ, ಕೆಣಕಬೇಡ, ತಲೆ ಕೆಟ್ಟರೆ ನಾನು ಮನುಷ್ಯ ಆಗಿರಲ್ಲ", "ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಪರಿಣಾಮ ನೆಟ್ಟಗಿರಲ್ಲ" -  ಇಂತಹ ಮಾತುಗಳನ್ನು ಕೇಳುತ್ತಿರುತ್ತೇವೆ. ಈ ಮಾತುಗಳ ಅಂತರಾರ್ಥ 'ಇದುವರೆಗೆ ಸಹಿಸಿಕೊಂಡಿದ್ದೇನೆ, ಇನ್ನು ಸಹಿಸಿಕೊಳ್ಳಲಾಗುವುದಿಲ್ಲ' ಎಂಬುದೇ ಆಗಿದೆ. ಸಹನೆಯ ಮಹತ್ವ ಕಾಣಬರುವುದು ಇಲ್ಲಿಯೇ! ಸಹನೆಯೆಂದರೆ ಪ್ರಚೋದನೆ, ಕಿರಿಕಿರಿ, ದುರಾದೃಷ್ಟ, ನೋವು, ಕ್ಲಿಷ್ಟಕರ ಸನ್ನಿವೇಶಗಳು, ಇತ್ಯಾದಿಗಳನ್ನು ತಾಳ್ಮೆ ಕಳೆದುಕೊಳ್ಳದೆ, ಸಿಟ್ಟು ಮಾಡಿಕೊಳ್ಳದೆ, ಭಾವನೆಗಳನ್ನು ಹೊರತೋರ್ಪಡಿಸದೇ ಸ್ಥಿತಪ್ರಜ್ಞತೆಯಿಂದ, ನಿರ್ಭಾವುಕತೆಯಿಂದ ಸಹಿಸಿಕೊಳ್ಳುವ ಒಂದು ಅದ್ಭುತ ಗುಣ. ಜನನಾಯಕರು, ಸಾಧು-ಸಂತರು, ಹಿರಿಯರುಗಳಲ್ಲಿ, ಸಾಧಕರಲ್ಲಿ ಈ ಗುಣ ಕಾಣಬಹುದು. ಇದೊಂದು ದೈವಿಕ ಗುಣ. ಸಹನಾಶೀಲರು ಸಾಮಾನ್ಯವಾಗಿ ಜನಾನುರಾಗಿಗಳಾಗಿರುತ್ತಾರೆ, ಜನರು ಇಷ್ಟಪಡುವವರಾಗಿರುತ್ತಾರೆ. ಮನುಷ್ಯ ಸಮಾಜದಲ್ಲಿ ಬಾಳಬೇಕಾದರೆ ಕೆಲವೊಮ್ಮೆ ಸಹಜವಾಗಿ, ಕೆಲವೊಮ್ಮೆ ತನ್ನ ಸಂತೋಷಕ್ಕಾಗಿ, ಕೆಲವೊಮ್ಮೆ ಇತರರ ಸಂತೋಷಕ್ಕಾಗಿ, ಕೆಲವೊಮ್ಮೆ ಅನಿವಾರ್ಯವಾಗಿ ಅನೇಕ ರೀತಿಯ ಮುಖವಾಡಗಳನ್ನು ಧರಿಸಬೇಕಾಗುತ್ತದೆ. ಮುಖವಾಡವೆಂದರೆ ತನಗೆ ಇಷ್ಟವಿರಲಿ, ಇಲ್ಲದಿರಲಿ ತನ್ನ ಮನಸ್ಸಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕಾಗಿ ಬರುವುದು, ಸರಳವಾಗಿ ಹೇಳಬೇಕೆಂದರೆ 'ಒಳಗಿರುವುದೇ ಒಂದು, ಹೊರಗೆ ತೋರುವುದೇ ಮತ್ತೊಂದು'! ಅವುಗಳ ಪೈಕಿ ಸಹನೆ ಅಥವ ತಾಳ್ಮೆ ಎಂಬುದು ಅತ್ಯಂತ ಸುಂದರವಾದ ಮುಖವಾಡ.
ಅತ್ತ ಮುಖ ಇತ್ತ ಮುಖ ಎತ್ತೆತ್ತಲೋ ಮುಖ
ಏಕಮುಖ ಬಹುಮುಖ ಸುಮುಖ ಕುಮುಖ|
ಮುಖದೊಳಗೊಂದು ಮುಖ ಹಿಮ್ಮುಖ ಮುಮ್ಮುಖ
ಮುಖಾಮುಖಿಯಲ್ಲಿ ನಿಜಮುಖವೆಲ್ಲೋ ಮೂಢ||
   
     ಸಹನೆಯ ಮಹತ್ವವನ್ನು ವೈಜ್ಞಾನಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ, ದಾರ್ಶನಿಕವಾಗಿ ಅನೇಕ ಮಗ್ಗಲುಗಳಲ್ಲಿ ವಿಶ್ಲೇಷಿಸಬಹುದು. ವಿಜ್ಞಾನದ ಆವಿಷ್ಕಾರಗಳು ವಿಜ್ಞಾನಿಗಳ ಸಹನಾಸಹಿತವಾದ ಶ್ರಮದ ಫಲವೇ ಆಗಿದೆ. ಪ್ರಯೋಗಗಳನ್ನು ಮಾಡುತ್ತಾ ಮಾಡುತ್ತಾ, ವಿಫಲರಾದರೂ ಪ್ರಯತ್ನ ಮುಂದುವರೆಸಿ ಯಶಸ್ವಿಯಾದವರ ಪಟ್ಟಿ ದೊಡ್ಡದಿದೆ. ಥಾಮಸ್ ಆಲ್ವಾ ಎಡಿಸನ್ ಹೇಳಿದ್ದಂತೆ ಒಂದು ಸಾವಿರ ಪ್ರಯೋಗಗಳು ವಿಫಲವಾದರೂ, ಆ ಒಂದು ಸಾವಿರ ವಿಫಲ ಪ್ರಯೋಗಗಳಿಂದ ಆ ರೀತಿ ಮಾಡಿದರೆ ಪ್ರಯೋಜನವಾಗುವುದಿಲ್ಲ ಎಂಬ ಸಂಗತಿ ಗೊತ್ತಾಗುವುದೂ ದೊಡ್ಡ ಸಂಗತಿಯೇ ಅಲ್ಲವೇ? ಛಲ ಬಿಡದ ತ್ರಿವಿಕ್ರಮರೆನಿಸಿಕೊಳ್ಳಲು ಸಹನೆ ಇರಲೇಬೇಕು. ಒಂದು ಕಾಗದವನ್ನೋ, ವಸ್ತುವನ್ನೋ ಇಟ್ಟುಕೊಂಡು ಅದರಲ್ಲಿ ಏನೋ ಮಾಡಬೇಕೆಂದು ಪ್ರಯತ್ನಿಸುವ ಪುಟ್ಟ ಮಗುವನ್ನು ಗಮನಿಸಿ. ಅದು ತದೇಕಚಿತ್ತದಿಂದ ಏನನ್ನೋ ಮಾಡುತ್ತಿರುತ್ತದೆ. ತನ್ನ ಮನಸ್ಸಿನಂತೆ ಆಗದಿದ್ದರೆ ಸಿಟ್ಟು ಮಾಡಿಕೊಂಡು ಅದನ್ನು ಎಸೆಯುತ್ತದೆ. ಆದರೆ ಅಲ್ಲಿಗೇ ನಿಲ್ಲಿಸುವುದಿಲ್ಲ, ಮತ್ತೆ ಅದನ್ನು ತೆಗೆದುಕೊಂಡು ಪ್ರಯತ್ನ ಮುಂದುವರೆಸುತ್ತದೆ. ಯಾರಾದರೂ ಹಿರಿಯರು ಅದಕ್ಕೆ ಸಹಾಯ ಮಾಡುತ್ತಾ, ಹೇಳಿಕೊಡುತ್ತಾ ಇದ್ದು, ಮಗು ತನ್ನ ಪ್ರಯತ್ನದಲ್ಲಿ ಯಶಸ್ವಿಯಾದರೆ ಆಗ ಅದು ಪಡುವ ಸಂತೋಷವನ್ನು ಕಂಡವರಿಗೂ ಸಂತೋಷವಾಗುತ್ತದೆ. ಹೀಗೆ ಸಹನೆ ಮೊಳಕೆಯೊಡೆಯುತ್ತದೆ. ಯಾವುದೇ ಸಾಧನೆಗೆ ಸಹನೆ ಬೇಕೇಬೇಕು. ಅಟ್ಟ ಹತ್ತಲಾಗದವನು ಬೆಟ್ಟ ಹತ್ತಲಾರ. ಯಾವುದೇ ದೊಡ್ಡ ಸಾಧನೆ ಕಾರ್ಯರೂಪಕ್ಕೆ ಬರುವುದು ಯಾರೂ ಗಮನಿಸದ ಒಂದು ಮೊದಲಿನ ಸಣ್ಣ ಹೆಜ್ಜೆಯಿಂದಲೇ ಎಂಬುದನ್ನು ನೆನಪಿಡೋಣ.
     ಧಾರ್ಮಿಕವಾಗಿಯೂ ಸಹನೆ ಅತ್ಯಂತ ಪ್ರಧಾನವಾಗಿ ಬೋಧಿಸಲ್ಪಟ್ಟ ವಿಷಯವಾಗಿದೆ. ದೇವರಿಗೆ ಹತ್ತಿರವಾಗಲು ಇರಬೇಕಾದ ರೀತಿ ನೀತಿಗಳನ್ನು ಸ್ಪಷ್ಟಪಡಿಸುವ ಧಾರ್ಮಿಕ ಸಂಪ್ರದಾಯಗಳು, ಕಟ್ಟಳೆಗಳು ಸಹನೆಗೆ ಪ್ರಾಧಾನ್ಯತೆ ನೀಡಿವೆಯೆಂದರೆ ತಪ್ಪಲ್ಲ. ಸನಾತನ ಕಾಲದಲ್ಲಿ ಮೋಕ್ಷ ಸಂಪಾದನೆಗಾಗಿ ತಪಸ್ಸು, ಧ್ಯಾನಗಳಲ್ಲಿ ತೊಡಗಿರುತ್ತಿದ್ದ ಸಾಧು-ಸಂತ-ಸಂನ್ಯಾಸಿಗಳು ಸಹನೆಯ ಪ್ರತೀಕರಾಗಿದ್ದರು. 'ನೀನೂ ಜೀವಿಸು, ಇತರರನ್ನೂ ಜೀವಿಸಲು ಬಿಡು' ಎಂಬ ಮಹಾವೀರನ ಬೋಧನೆಯಲ್ಲಿ ಕಾಣುವುದೂ ಸಹನೆಯ ನೀತಿಪಾಠವೇ. ಏಸುಕ್ರಿಸ್ತ ತನ್ನವರಿಗಾಗಿ ಅನೇಕ ಕಷ್ಟ ಕಾರ್ಪಣ್ಯಗಳನ್ನು ಸಹಿಸಿದ್ದವನು. 'ತಾಳ್ಮೆಯಿಂದಿರುವ ವ್ಯಕ್ತಿ ಯೋಧನಿಗಿಂತಲೂ ಶ್ರೇಷ್ಠ, ರಾಜ್ಯವನ್ನು ಗೆದ್ದವನಿಗಿಂತ ತನ್ನ ಭಾವನೆಗಳನ್ನು ನಿಯಂತ್ರಿಸಿ ಗೆದ್ದವನೇ ಶ್ರೇಷ್ಠ' ಎಂದು ಹೀಬ್ರೂ ಗಾದೆಯಿದೆ. ಒಬ್ಬ ಶ್ರೇಷ್ಠ ಮಹಮದೀಯ ಅಲ್ಲಾಹುವಿಗೆ ಸಮೀಪನಾಗಿರಬೇಕೆಂದರೆ ಶ್ರೇಷ್ಠ ರೀತಿಯಲ್ಲಿ ಜೀವಿಸಬೇಕು, ಅರ್ಥಾತ್ ಸಹನಾಮುಯಾಗಿರಬೇಕು. ಪರಿಪೂರ್ಣತೆಯ ಸಾಧನೆಗೆ ತಾಳ್ಮೆ ಅತ್ಯಂತ ಅಗತ್ಯವೆಂದು ಬೌದ್ಧ ಧರ್ಮ ಪ್ರತಿಪಾದಿಸುತ್ತದೆ.
     ಸನಾತನ ಧರ್ಮವಂತೂ ಸಹಿಷ್ಣುತೆಗ ಪ್ರಾಧಾನ್ಯತೆ ನೀಡಿದ ಧರ್ಮವಾಗಿದೆ. ಇದರಲ್ಲಿ ಸಹಿಷ್ಣುತೆಗೆ ೧೦ ಪರೀಕ್ಷೆಗಳಿವೆ. ಅವೆಂದರೆ:
೧. ಅಹಿಂಸೆ (ಯಾರನ್ನೂ ದೈಹಿಕವಾಗಿ, ಮಾನಸಿಕವಾಗಿ, ಬರವಣಿಗೆಯ ಮೂಲಕವಾಗಲೀ, ಮಾತಿನ ಮೂಲಕವಾಗಲೀ, ಇನ್ನು ಯಾವುದೇ ರೀತಿಯಲ್ಲಾಗಲೀ ನೋಯಿಸದಿರುವುದು.)
೨. ಸತ್ಯ,
೩. ಅಸ್ತೇಯ (ಇತರರ ವಸ್ತುಗಳನ್ನು ಭೌತಿಕವಾಗಿಯಾಗಲೀ, ಮಾನಸಿಕವಾಗಿಯಾಗಲಿ ಕದಿಯದಿರುವುದು),
೪. ಬ್ರಹ್ಮಚರ್ಯ (ಮದುವೆಯಾಗದೆ ಇರುವುದು ಎಂಬ ಅರ್ಥ ಮಾತ್ರವಲ್ಲದೆ, ಬ್ರಹ್ಮ=ಆಧ್ಯಾತ್ಮಿಕ ವಿಚಾರದಲ್ಲಿ ಸಂಚರಿಸುವುದು ಎಂಬ ಅರ್ಥವೂ ಇದೆ)
೫. ದಯೆ,
೬. ಮೋಸ ಮಾಡದಿರುವುದು,
೭. ಕ್ಷಮಾಗುಣ,
೮. ಧೃತಿ (ಯಾವುದೇ ಸಂದರ್ಭದಲ್ಲಿ, ಹಾನಿ, ನಷ್ಟ, ಅವಮಾನ, ಇತ್ಯಾದಿ ಸಂದರ್ಭಗಳಲ್ಲಿ ಧೃಢಚಿತ್ತತೆ)
೯. ಮಿತಾಹಾರ (ಅಗತ್ಯವಿರುವಷ್ಟೇ ಆಹಾರ ಸೇವನೆ) ಮತ್ತು
೧೦. ಶೌಚ (ದೈಹಿಕವಾಗಿ ಮತ್ತು ಮಾನಸಿಕವಾಗಿ ಶುದ್ಧವಾಗಿರುವುದು).
     ಮೇಲಿನ ೧೦ ಸಂಗತಿಗಳನ್ನು ಪಾಲಿಸುವವರಿಗೆ ಸಹನಾಶಕ್ತಿ ತಾನಾಗಿ ಒಲಿದು ಬರದೇ ಇರಲಾರದು.
     ಇಷ್ಟಾದರೂ ಮತೀಯ, ಧಾರ್ಮಿಕ ಅಸಹನೆಗಳು ಇಂದು ವಿಶ್ವದ ಬೃಹತ್ ಸಮಸ್ಯೆಯಾಗಿರುವುದಕ್ಕೆ ಕಾರಣ ಧರ್ಮಗಳದ್ದಲ್ಲ, ಅದನ್ನು ತಪ್ಪಾಗಿ ತಿಳಿದು ಅನುಸರಿಸುವ ಮತಾಂಧ ಅನುಯಾಯಿಗಳದು. ಎಲ್ಲಾ ಧರ್ಮಗಳ ಹಿರಿಯರೆನಿಸಿಕೊಂಡವರು ವಿಶ್ವಶಾಂತಿಯ ದೃಷ್ಟಿಯಿಂದ ಪರಸ್ಪರ ಸಮಾಲೋಚಿಸಿ ತಮ್ಮ ಅನುಯಾಯಿಗಳಿಗೆ ಸುಯೋಗ್ಯ ಮಾರ್ಗದರ್ಶನ ನೀಡದಿದ್ದರೆ ವಿನಾಶದ ಹಾದಿ ಖಂಡಿತವೆಂದರೆ ಅತಿಶಯೋಕ್ತಿಯಲ್ಲ. ಸಹನೆಯಿದ್ದಲ್ಲಿ ಸಮಸ್ಯೆಗಳಿಗೆ ಸ್ಥಳವಿರುವುದಿಲ್ಲ.
     ಸಹನೆ ಅನ್ನುವುದು ಮನಸ್ಸಿನ ಭಾವನೆಗಳನ್ನು ಹತೋಟಿಯಲ್ಲಿ ಇಡುವಂತಹ ನಿಯಂತ್ರಕ ಶಕ್ತಿ ಎಂಬುದನ್ನು ಅರಿತೆವು. ಸಹನೆ ಸಜ್ಜನರ ಆಸ್ತಿಯಾಗಿದ್ದು, ಉತ್ತಮ ಫಲಗಳನ್ನು ಕೊಡುತ್ತದೆ ಎಂಬುದೂ ಅನುಭವದ ಮಾತು. ಸಹನೆಯ ವಿರುದ್ಧ ಗುಣವಾದ ಅಸಹನೆಗೂ ಹಲವು ಮಗ್ಗಲುಗಳಿವೆ. ಸಹನೆಯ ಕಟ್ಟೆ ಒಡೆದಾಗ ಉಂಟಾಗುವ ಅಸಹನೆಯ ಪರಿಣಾಮ ಮಾತ್ರ ಘೋರವಾಗಿರುತ್ತದೆ. ಮಿತಿಯಾಗಿದ್ದಾಗ ವಿಷವೂ ಅಮೃತವಾಗಬಹುದು, ಅತಿಯಾದರೆ ಅಮೃತವೂ ವಿಷವಾಗಬಹುದು. ಅವರು ಮುಂದಿದ್ದಾರೆ, ನಾವು ಹಿಂದಿದ್ದೇವೆ ಎಂಬ ಕಾರಣದಿಂದ ಉಂಟಾಗುವ ಅಸಹನೆ ಹತೋಟಿಯಲ್ಲಿದ್ದರೆ ನಾವೂ ಮುಂದುವರೆಯಲು ಅದು ಪ್ರೇರಿಸಬಹುದು. ಮಿತಿ ಮೀರಿದರೆ ಅದು ಮುಂದಿರುವವರ ವಿರುದ್ಧದ ದ್ವೇಷವಾಗಿಯೂ ಪರಿವರ್ತಿತವಾಗಬಹುದು. ಇದು ಬಂಧು-ಬಳಗಗಳಲ್ಲಿ, ವೃತ್ತಿ ವಲಯಗಳಲ್ಲಿ, ಜಾತಿ-ಜಾತಿಗಳ ನಡುವೆ ಸಾಮಾನ್ಯವಾಗಿ ಕಾಣಬರುವಂತಹದು. ಸಂಘರ್ಷವಲ್ಲ, ವೈಚಾರಿಕ ಜಾಗೃತಿ ಮಾತ್ರ ಇದಕ್ಕೆ ಪರಿಹಾರ ಕೊಡಬಲ್ಲದು.
     ನಿರಂತರವಾದ ಕಿರುಕುಳ, ಯಾವುದೋ ಒಂದು ಕಾರಣದಿಂದಾದ ವೈಮನಸ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸತತವಾಗಿ ಮಾಡುವ ದ್ವೇಷ, ಇತ್ಯಾದಿಗಳು ಸಹನೆಯ ಕಟ್ಟೆ ಒಡೆಯಲು ಸಾಕಾಗುತ್ತದೆ. ಎಲಾಸ್ಟಿಕ್ಕಿನ ಎಳೆಯನ್ನು ಒಂದು ಹಂತದವರೆವಿಗೂ ತುಂಡಾಗದಂತೆ ಎಳೆಯಬಹುದು. ಆದರೆ ಅದರ ಧಾರಣಾಶಕ್ತಿ ಮೀರಿ ಎಳೆದರೆ ತುಂಡಾಗುತ್ತದೆ. ಮನುಷ್ಯರ ನಡುವಣ ವ್ಯವಹಾರವೂ ಹೀಗೆಯೇ. ಒಂದು ಹಂತದವರೆಗೆ ಸಹಿಸುತ್ತಾರೆ. ಇನ್ನು ಸಹಿಸಲು ಸಾಧ್ಯವೇ ಇಲ್ಲವೆಂದಾದಾಗ ಸ್ಫೋಟಕ ವಾತಾವರಣ ಉಂಟಾಗುತ್ತದೆ. ಆಗ ಮನಸ್ಸಿನ ನಿಯಂತ್ರಣ ಮೀರಿ ಸಹನೆಯ ಮುಖವಾಡ ಕಳಚುತ್ತದೆ, ಕ್ರೋಧಾಸುರ ಆವಾಹನೆಗೊಳ್ಳುತ್ತಾನೆ. ವಿವೇಕರಹಿತವಾದ ಆ ಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು, ಕೊಲೆ ಆಗಬಹುದು, ಆತ್ಮಹತ್ಯೆ ಮಾಡಿಕೊಳ್ಳಬಹುದು, ದೀರ್ಘಕಾಲದ ಸಂಬಂಧಗಳ ಇತಿಶ್ರೀ ಆಗಬಹುದು. ಏನೇ ಆದರೂ ಪರಿಣಾಮ ಮಾತ್ರ ಸಂಬಂಧಿಸಿದ ಯಾರಿಗೂ ಹಿತವಾಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಸಿಟ್ಟಿಗೊಳಗಾದ ವ್ಯಕ್ತಿ ರಾಕ್ಷಸನಂತೆಯೇ ವರ್ತಿಸುತ್ತಾನೆ. ಅವನ ಸ್ಥಿತಿ ಹೇಗಿರುತ್ತದೆಂದರೆ:

ಕೆಂಡ ಕಾರುವ ಕಣ್ಣು ಗಂಟಿಕ್ಕಿದ ಹುಬ್ಬು
ಅವಡುಗಚ್ಚಿದ ಬಾಯಿ ಮುಷ್ಟಿ ಕಟ್ಟಿದ ಕರವು |
ಕಂಪಿಸುವ ಕೈಕಾಲು ಬುಸುಗುಡುವ ನಾಸಿಕ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||

ಕಣ್ಣಿದ್ದು ಕುರುಡಾಗಿ ಕಿವಿಯಿದ್ದು ಕಿವುಡಾಗಿ
ವಿವೇಕ ಮರೆಯಾಗಿ ಕ್ರೂರತ್ವ ತಾನೆರಗಿ|
ತಡೆಯಬಂದವರ ತೊಡೆಯಲುದ್ಯುಕ್ತ
ಕ್ರೋಧಾಸುರಾವಾಹಿತ ನರನೆ ರಕ್ಕಸನು ಮೂಢ||
     ಕೋಪದಲ್ಲಿ ಕೊಯ್ದುಕೊಂಡ ಮೂಗು ಶಾಂತರಾದಾಗ ಬರುವುದಿಲ್ಲ ಎಂಬುದು ಸಹನೆಯ ಕಟ್ಟೆ ಒಡೆದವರಿಗೆ ತಿಳಿಯುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಅಸಹನೆಯ ಮುದ್ದು ಕೂಸುಗಳಾದ ಕೋಪ, ಮತ್ಸರ ಮತ್ತು ದ್ವೇಷಗಳು ವಿವೇಚನೆ ಮಾಡುವ ಶಕ್ತಿಯನ್ನು ನುಂಗಿಬಿಡುತ್ತವೆ.  ವಿವೇಚನಾಶಕ್ತಿ ನಾಶವಾಗಿರುವ ಆ ಸ್ಥಿತಿಯಲ್ಲಿ ಅನಾಹುತ ನಡೆದುಹೋಗುತ್ತದೆ. ಅದರ ದೀರ್ಘಕಾಲದ ಪರಿಣಾಮವನ್ನು ಸಂಬಂಧಿಸಿದವರಲ್ಲದೆ ಅವರ ಕುಟುಂಬದವರೂ ಎದುರಿಸಬೇಕಾಗುತ್ತದೆ.
     ಸಾಮೂಹಿಕವಾಗಿ ಉಂಟಾಗುವ ಅಸಹನೆ ಅರಾಜಕತೆ, ಅಶಾಂತಿಗೆ ಕಾರಣವಾಗುತ್ತದೆ. ಸಾಮೂಹಿಕ ಅಸಹನೆ, ಅಶಾಂತಿಗೆ ಇಂದಿನ ರಾಜಕೀಯ ವ್ಯವಸ್ಥೆ, ವಿವಿಧ ಮಾಧ್ಯಮಗಳು ಗಣನೀಯ ಪಾಲು ನೀಡುತ್ತಿವೆ. ಇದಕ್ಕೆ ಪರಿಹಾರವಿಲ್ಲವೇ ಅಂದರೆ ಖಂಡಿತಾ ಇದೆ. ಕಾಯಿಲೆ ಬಂದ ಮೇಲಿನ ಚಿಕಿತ್ಸೆಗಿಂತ ಕಾಯಿಲೆ ಬರದಂತೆ ನೋಡಿಕೊಳ್ಳುವುದೇ ಅತ್ಯುತ್ತಮವಾದ ಪರಿಹಾರ. ಸಹನೆ ಕಾಯ್ದುಕೊಳ್ಳಲು ಪೂರಕವಾದ ವಾತಾವರಣವನ್ನು ನಾವೇ ನಿರ್ಮಿಸಿಕೊಳ್ಳಬೇಕು. ನಮ್ಮ ಸ್ನೇಹಿತರು, ಪರಿಸರಗಳ ವಿಚಾರದಲ್ಲಿ ಜಾಗೃತರಾಗಿರಬೇಕು. ಹುಳುಕು ಹುಡುಕುವವರು ವಿಷ ಕಕ್ಕುತ್ತಾರೆ, ಒಳಿತು ಕಾಣುವವರು ಅಮೃತ ಸುರಿಸುತ್ತಾರೆ ಎಂಬುದು ಅನುಭವಿಗಳ ನುಡಿ. ಎಲ್ಲೆಲ್ಲೂ ಕೆಟ್ಟದನ್ನು ಕಾಣುವ ದೃಷ್ಟಿಕೋನ ಬದಲಾಯಿಸಿಕೊಂಡು ಒಳಿತನ್ನು ಅರಸುವ ಮನೋಭಾವ ಮೂಡಿದರೆ, ಲೇಖನದಲ್ಲಿ ತಿಳಿಸಿರುವ ಸಹಿಷ್ಣುತೆಗೆ ಪೂರಕವಾದ ೧೦ ಅಂಶಗಳ ಪಾಲನೆ ಮಾಡುವ ಪ್ರವೃತ್ತಿ ರೂಢಿಸಿಕೊಂಡರೆ ನಾವು ಖಂಡಿತಾ ಸಹನಶೀಲರಾಗುತ್ತೇವೆ. ಸಮಯಕ್ಕೆ ತನ್ನದೇ ಆದ ರಹಸ್ಯಗಳಿರುತ್ತವೆ. ಅದು ತನ್ನ ರಹಸ್ಯಗಳನ್ನು ಬಿಟ್ಟುಕೊಡುವವರೆಗೆ ಕಾಯುವುದೇ ಸಹನೆ! ತಾಳ್ಮೆ ಕಹಿಯಾಗಿರುತ್ತದೆ, ಆದರೆ ಅದರ ಫಲ ಸಿಹಿಯಾಗಿರುತ್ತದೆ. ಸಹನೆ ಎಂದಿಗೂ ದುರ್ಬಲರ ಅನಿವಾರ್ಯತೆಯಲ್ಲ, ಅದು ಬಲಶಾಲಿಗಳ ಆಯುಧ. ಸಹನೆ ಸಹಬಾಳ್ವೆಗೆ ಒತ್ತು ಕೊಡುತ್ತದೆ. ಅಸಹನೆಯ ಮೂಲ ಸ್ವಾರ್ಥಪರ ಚಿಂತನೆ. ಕೇವಲ ಸ್ವಕೇಂದ್ರಿತ ಚಿಂತನೆ ಮತ್ತು ವಿಚಾರಗಳು ಇತರರನ್ನು ದ್ವೇಷಿಸುವಂತೆ, ಸಹಿಸಿಕೊಳ್ಳದಿರುವಂತೆ ಮಾಡುತ್ತವೆ. ಸಹನೆ ಗುಣವಲ್ಲ, ಅದೊಂದು ಸಾಧನೆ. ಸಹನೆ ನಮ್ಮ ಸಂಪತ್ತೆನಿಸಲು ಅಸಹನೆಯ ಮೊಳಕೆ ನಮ್ಮೊಳಗೆ ಚಿಗುರದಂತೆ ಎಚ್ಚರವಿರಬೇಕು.
ನಿಜವೈರಿ ಹೊರಗಿಲ್ಲ ನಮ್ಮೊಳಗೆ ಇಹನು
ಉಸಿರು ನಿಲ್ಲುವವರೆಗೆ ಕಾಡುವವನಿವನು |
ಧೃಢಚಿತ್ತ ಸಮಚಿತ್ತಗಳಾಯುಧವ ಮಾಡಿ
ಒಳವೈರಿಯನು ಅಟ್ಟಿಬಿಡು ಮೂಢ ||
      "ಸಹನೆ ಚಾರಿತ್ರ್ಯವನ್ನು ನಿರ್ಮಿಸುತ್ತದೆ; ಚಾರಿತ್ರ್ಯವಂತರು ಚರಿತ್ರೆಯ ವಿಷಯವಾಗುತ್ತಾರೆ, ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುತ್ತಾರೆ."
-ಕ.ವೆಂ.ನಾಗರಾಜ್.
**************
15.10.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:



ಬುಧವಾರ, ನವೆಂಬರ್ 26, 2014

ಬಾಳ ಮುಸ್ಸಂಜೆಯಲ್ಲಿ - 2

ಹಿಂದಿನ ಲೇಖನಕ್ಕೆ ಲಿಂಕ್: ಬಾಳ ಮುಸ್ಸಂಜೆಯಲ್ಲಿ - 1

ಸಾಲ ಪಡೆದೆವು ನಾವು ಋಣಿಗಳಾದೆವು ನಾವು
ಶರೀರವಿತ್ತ ದೇವಗೆ ಹೆತ್ತವರ್ಗೆ ಹೊತ್ತವರ್ಗೆ |
ದಾರಿ ತೋರುವ ಗುರು ಹಿರಿಯರೆಲ್ಲರಿಗೆ
ಸಾಲವನು ತೀರಿಸದೆ ಮುಕ್ತಿಯುಂಟೆ ಮೂಢ ||
     ಭೋಗವಾದ, ಭೌತಿಕವಾದ ವಿಫಲವಾದಾಗ ನೆರವಿಗೆ ಬರುವುದು ಆಧ್ಯಾತ್ಮಿಕವಾದವೇ. ಪ್ರತಿ ವ್ಯಕ್ತಿ ತನ್ನ ಜೀವಿತಕಾಲದಲ್ಲಿ ದೇವಋಣ, ಪಿತೃಋಣ ಮತ್ತು ಆಚಾರ್ಯಋಣಗಳನ್ನು ತೀರಿಸಬೇಕೆಂದು ಧರ್ಮ ಸೂಚಿಸುತ್ತದೆ. ಪಿತೃಋಣವೆಂದರೆ ತಮ್ಮನ್ನು ಪಾಲಿಸಿದ, ಪೋಷಿಸಿದ ತಾಯಿ, ತಂದೆ, ಹಿರಿಯರುಗಳನ್ನು ಅವರ ವೃದ್ಧಾಪ್ಯ ಕಾಲದಲ್ಲಿ ಸಂತೋಷವಾಗಿರುವಂತೆ ನೋಡಿಕೊಳ್ಳುವುದೇ ಆಗಿದೆ. ಪಿತೃಋಣವೆಂದರೆ ಸತ್ತ ನಂತರ ಮಾಡುವ ಕ್ರಿಯಾಕರ್ಮಗಳಲ್ಲ, ಬದುಕಿದ್ದಾಗ ಸಲ್ಲಿಸಬೇಕಾದ ಸೇವೆಯಾಗಿದೆ. ವೃದ್ಧಾಪ್ಯವೆಂದರೆ ಅದು ಇನ್ನೊಂದು ರೀತಿಯಲ್ಲಿ ಬಾಲ್ಯಕಾಲವಿದ್ದಂತೆ. ಬಾಲ್ಯದಲ್ಲಿ ಪೋಷಣೆಯ ಅಗತ್ಯವಿರುವಂತೆ, ವೃದ್ಧಾಪ್ಯದಲ್ಲೂ ಇನ್ನೂ ಹೆಚ್ಚಿನ ಮೇಲ್ವಿಚಾರಣೆಯನ್ನು ಅವರ ಮಕ್ಕಳು ಮಾಡಬೇಕಾದುದು ಅಗತ್ಯ ಮತ್ತು ತಾವು ಅವರಿಂದ ಮಾಡಿಸಿಕೊಂಡಿದ್ದ ಪ್ರತಿಫಲಾಪೇಕ್ಷೆಯಿಲ್ಲದ ಸೇವೆಗೆ ಪ್ರತಿಯಾಗಿ ಸಲ್ಲಿಸಲೇಬೇಕಾದ ಋಣವಾಗಿರುತ್ತದೆ. ಇದನ್ನು ಮಾಡದಿದ್ದರೆ ಅವರ ಮಕ್ಕಳೂ ಅವರನ್ನೇ ಅನುಸರಿಸುವರಲ್ಲವೇ? ಇಂತಹ ಯೋಗ್ಯ ಸಂಸ್ಕಾರ ಕೊಡುವ ಮನೆಗಳು, ಶಿಕ್ಷಣ ಸಂಸ್ಥೆಗಳು ತಲೆ ಎತ್ತಬೇಕು. ಮೌಲ್ಯಯುತ, ಅಧಿಕಾರದಾಹವಿಲ್ಲದ ಆಡಳಿತ ವ್ಯವಸ್ಥೆ ರೂಪಿತವಾಗಬೇಕು. ಇದಕ್ಕಾಗಿ ಶ್ರಮಿಸಬೇಕಾದವರು ನಾವು ಮತ್ತು ನೀವೇ ಆಗಿದ್ದೇವೆ.
     ಇನ್ನು ಸಂಧ್ಯಾಕಾಲ ಸಮೀಪಿಸುತ್ತಿರುವವರೂ ಸಹ ತಮ್ಮ ಮುಂದಿನ ಜೀವನದ ಬಗ್ಗೆ ಚಿಂತಿಸಿ ಮುಂದುವರೆಯುವ ಪ್ರವೃತ್ತಿ ಬರಬೇಕಿದೆ. ಸನಾತನ ಧರ್ಮದಲ್ಲಿ ಉಕ್ತವಾದ ೧೬ ಸಂಸ್ಕಾರಗಳ ಪೈಕಿ ವಿವಾಹ, ವಾನಪ್ರಸ್ಥ ಮತ್ತು ಸಂನ್ಯಾಸ- ಈ ಮೂರು ಸಂಸ್ಕಾರಗಳು ಯೋಗ್ಯತಾನುಸಾರ ಅನುಸರಿಸಬೇಕಾದವುಗಳಾಗಿವೆ. ಮಾನವನ ಆಯಸ್ಸನ್ನು ಒಂದು ನೂರು ವರ್ಷಗಳು ಎಂದಿಟ್ಟುಕೊಂಡರೆ ಮೊದಲ ೨೫ ವರ್ಷಗಳು ಬ್ರಹ್ಮಚರ್ಯ, ನಂತರದ ೨೫ ವರ್ಷಗಳನ್ನು ಗೃಹಸ್ಥರಾಗಿ ಕಳೆದು, ನಂತರದ ೫೧ ರಿಂದ ೭೫ವರ್ಷಗಳು ವಾನಪ್ರಸ್ಥದ ಕಾಲ. ಅದರ ನಂತರ ಸಂನ್ಯಾಸಾಶ್ರಮ. ಇರುವ ಬಂಧಗಳು, ಬಂಧನಗಳನ್ನು ಕಳೆದುಕೊಂಡು ಜೀವಿಸಲು ಅತಿ ಅಗತ್ಯವಾದಷ್ಟನ್ನು ಮಾತ್ರ ಹೊಂದಿ ಆಧ್ಯಾತ್ಮಿಕ ಸಾಧನೆಗೆ ತೊಡಗುವ ಕಾಲವೇ ವಾನಪ್ರಸ್ಥವೆನಿಸುವುದು. ಇದು ಪರಿವರ್ತನಾ ಕಾಲ. ಈ ಸಾಧನೆಗಾಗಿ ಹಿಂದೆ ಕಾಡಿಗೆ ತೆರಳುತ್ತಿದ್ದರು. ಈಗ ಕಾಡುಗಳೇ ಇಲ್ಲ. ಇಂದಿನ ಕಾಲಮಾನದ ಪರಿಸ್ಥಿತಿಯಲ್ಲಿ ವಾನಪ್ರಸ್ಥದ ಮೂಲ ಪರಿಕಲ್ಪನೆಯನ್ನು ಸೂಕ್ತವಾಗಿ ಪರಿವರ್ತಿಸಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ೪೫-೫೦ರ ವಯಸ್ಸಿನಲ್ಲಿ ಇರುವವರು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಮುಂಚಿತವಾಗಿ ಯೋಜನೆ ಮಾಡಿಕೊಂಡು, ಮಾನಸಿಕವಾಗಿ ಸಿದ್ಧರಾಗಿದ್ದಲ್ಲಿ ನಿವೃತ್ತರಾದ ಕೂಡಲೇ ಉಂಟಾಗಬಹುದಾದ ಶೂನ್ಯಭಾವದಿಂದ ಹೊರಬರಬಹುದು. ನಿವೃತ್ತ ಜೀವನವನ್ನು ಒಳ್ಳೆಯ ರೀತಿಯಲ್ಲಿ ಕಳೆಯುವ ಸಾಧನವಾಗಿ ಮಾಡಿಕೊಳ್ಳುವುದನ್ನು ವಾನಪ್ರಸ್ಥವೆನ್ನೋಣ. ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ಒಳಿತನ್ನು ಕಾಣುವ ಮನೋಭಾವ ಬೆಳೆಸಿಕೊಂಡು, ಅಂತರಂಗ, ಬಹಿರಂಗಗಳಲ್ಲಿ ಸಾಮ್ಯತೆ ಸಾಧಿಸುವ ಕ್ರಿಯೆಯಲ್ಲಿ ತೊಡಗುವುದು ಕಡಿಮೆ ಸಾಧನೆಯಲ್ಲ. ಪ್ರಾಪಂಚಿಕ ಆಕರ್ಷಣೆಗಳಿಂದ ವಿಮುಕ್ತರಾಗಿ ಸರಳ ವಸ್ತ್ರಗಳನ್ನು ಧರಿಸಿ, ಸರಳ ಜೀವನವನ್ನು ನಡೆಸಿ ಆತ್ಮಚಿಂತನೆಯಲ್ಲಿ ತೊಡಗಬಹುದಾಗಿದೆ. ತನ್ನ ಚಿಂತನೆ, ಜ್ಞಾನಾಭಿವೃದ್ಧಿಗಳಿಗೆ ಪೂರಕವಾಗುವ ಸತ್ಸಂಗಗಳಲ್ಲಿ ಪಾಲುಗೊಳ್ಳುವುದು, ಅಂತಹ ಆದರ್ಶದ ಜೀವನ ಸಾಗಿಸುತ್ತಿರುವ ಧೀಮಂತರ ಮಾರ್ಗದರ್ಶನ ಪಡೆಯುವುದು ಸಹಕಾರಿಯಾಗುತ್ತದೆ. ಇಂತಹವರು ಸಹಜವಾಗಿ ದೇಶಾತೀತ, ಭಾಷಾತೀತ, ಜನಾಂಗಾತೀತ, ಮತಾತೀತ ಮಾನವರಾಗುತ್ತಾರೆ. ಕೌಟುಂಬಿಕ ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸಿ ನಿರ್ಲಿಪ್ತ, ನಿಶ್ಚಿಂತರಾಗುವುದು ಮೊದಲ ಕ್ರಮವಾಗಬೇಕು. ನಂತರದಲ್ಲಿ ಸಾಧ್ಯವಾದಷ್ಟು ಪ್ರಶಾಂತ ಕೊಠಡಿ ಅಥವ ಸ್ಥಳದಲ್ಲಿ ಇರಬೇಕು. ಕುಟುಂಬದವರು ಕೌಟುಂಬಿಕ ಸಮಸ್ಯೆ ಅಥವ ವಿಚಾರಗಳಿಗೆ ಸಲಹೆ, ಸಹಕಾರ ಬಯಸಿದಲ್ಲಿ ಕೊಡಬೇಕು. ಆದರೆ ಅವುಗಳಲ್ಲಿ ವ್ಯಸ್ತರಾಗಬಾರದು. ಕೌಟುಂಬಿಕ ಸಾಮರಸ್ಯ, ಬಂಧುಗಳ ಸಾಮರಸ್ಯ, ಜನಾಂಗದ ಸಾಮರಸ್ಯ, ಸಕಲ ಜೀವಕೋಟಿಯ ಸಾಮರಸ್ಯದ ಗುರಿಯಿರಬೇಕು. ಈ ದಿಸೆಯಲ್ಲಿ ಎಷ್ಟು ಸಾಧಿಸಲು ಸಾಧ್ಯ, ಸಾಧಿಸಿದೆವು ಎಂಬುದು ಮಹತ್ವದ್ದಲ್ಲ. ಸಣ್ಣ ಕೌಟುಂಬಿಕ ವ್ಯಾಪ್ತಿಯಿಂದ ಹೊರಬಂದು ವಿಶ್ವವೇ ಒಂದು ಕುಟುಂಬವಾಗಿದ್ದು ತಾನು ಅದರ ಭಾಗವೆಂದು ಭಾವಿಸುವ ಮನೋವೃತ್ತಿ ಬೆಳೆಸಿಕೊಳ್ಳಬೇಕು. ಸರ್ವರ ಹಿತ ಬಯಸುವ ಕೆಲಸ, ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು, ಬೆಂಬಲಿಸಬೇಕು. ಮನೋವಿಕಾರಗಳನ್ನು ನಿಯಂತ್ರಿಸಲು ಸಾಧನೆ ನಡೆಸಬೇಕು. ದುಷ್ಟ ವಿಚಾರಗಳಿಂದ ದೂರವಿದ್ದು, ಸದ್ವಿಚಾರಗಳ ಅನುಸರಣೆ, ಪ್ರಸರಣೆಗೆ ಗಮನ ಕೊಡಬೇಕು. ಒಳಿತನ್ನು, ಒಳ್ಳೆಯ ಸಂಗತಿಗಳನ್ನು ಗುರುತಿಸಿ ಗೌರವಿಸಬೇಕು. ಸಾಧ್ಯವಾದಷ್ಟೂ ಇತರರಿಗೆ ಹೊರೆಯಾಗದಂತೆ ಬಾಳಬೇಕು. 
     ಸಾಮಾನ್ಯವಾಗಿ ಒಬ್ಬೊಬ್ಬರಿಗೆ ಒಂದೊಂದು ವೃತ್ತಿ, ಪ್ರವೃತ್ತಿ, ಹವ್ಯಾಸಗಳು ತೃಪ್ತಿ, ಸಂತೋಷ ಕೊಡುವ ಸಂಗತಿಯಾಗಿರುತ್ತದೆ. ನಿವೃತ್ತಿಯೆಂದರೆ ಅಂತಹ ಹವ್ಯಾಸಗಳನ್ನು ನಿಲ್ಲಿಸುವುದಲ್ಲ. ಬದಲಾಗಿ ಅವುಗಳನ್ನು ಇತರರ ಹಿತಕ್ಕಾಗಿ ಬಳಸುವುದು. ಆದರೆ ಅದು ಹಣಗಳಿಕೆಯ ಸಾಧನವಾಗಬಾರದಷ್ಟೆ. ಒಬ್ಬ ನಿವೃತ್ತ ಶಿಕ್ಷಕ ಬಡ ಮಕ್ಕಳಿಗೆ ಉಚಿತವಾಗಿ ಪಾಠ ಹೇಳಬಹುದು, ಸಂಗೀತಗಾರ ತನ್ನ ಸಾಧನೆಯನ್ನು ಉತ್ತುಂಗಕ್ಕೇರಿಸುವುದರ ಜೊತೆಗೆ ಇತರರಿಗೆ ಸಂಗೀತ ಹೇಳಿಕೊಡಬಹುದು, ಬರಹಗಾರ ತನ್ನ ಅನುಭವದ ಸಾರಗಳನ್ನು ಬರಹದ ಮೂಲಕ ಅಭಿವ್ಯಕ್ತಿಸಬಹುದು ಮತ್ತು ಆ ಮೂಲಕ ಪರಿಣಾಮ ಬೀರಬಹುದು. ಇವೆಲ್ಲಾ ಉದಾಹರಣೆಗಳಷ್ಟೆ. ಕೇವಲ ಆತ್ಮತೃಪ್ತಿ ಮತ್ತು ಇತರರಿಗೆ ಮಾರ್ಗದರ್ಶಿಯಾಗಿರಲು ಮಾತ್ರ ಇವುಗಳ ಬಳಕೆಯಾಗಬೇಕು. ಪಡೆಯುವುದಕ್ಕಿಂತ ಕೊಡುವುದಕ್ಕೆ ಆದ್ಯತೆಯಿರಬೇಕು. ಅಷ್ಟಕ್ಕೂ ನಮ್ಮಲ್ಲಿರುವುದೆಲ್ಲಾ ನಾವು ಪಡೆದಿದ್ದೇ ಅಲ್ಲವೇ? ಬದುಕಿನ ಜಂಜಾಟದಲ್ಲಿ ತನ್ನತನಕ್ಕೆ ಅದುವರೆಗೆ ಸಿಕ್ಕದ ಆದ್ಯತೆಯನ್ನು ಜೀವನದ ಅಂತಿಮ ಘಟ್ಟದಲ್ಲಾದರೂ ಸಿಕ್ಕುವಂತೆ ನೋಡಿಕೊಂಡು 'ತಾನು ತಾನಾಗಿರಬೇಕು', ಅರ್ಥಾತ್ 'ತನಗಾಗಿ' ಬಾಳಬೇಕು. 'ತನಗಾಗಿ' ಬಾಳುವ ಈ ರೀತಿಯ ಬಾಳುವಿಕೆಯಲ್ಲಿ ಸ್ವಾರ್ಥವಿರಲಾರದು. ಏಕೆಂದರೆ, ಅದು ಆತ್ಮತೃಪ್ತಿಯ, ಆತ್ಮ ಚಿಂತನೆಯ, ಆತ್ಮಾನುಸಂಧಾನದ ಮಾರ್ಗ. ಒಂದು ರೀತಿಯಲ್ಲಿ ಅದು ಹಿಂದೆ ಮಾಡಿರಬಹುದಾದ ತಪ್ಪುಗಳಿಗೆ ಪ್ರಾಯಶ್ಚಿತ್ತವೂ ಆದೀತು. ಇಂತಹ ಕ್ರಿಯೆಯಿಂದ ಯುವಕರಿಗೆ ಸಹಜವಾಗಿ ನಾಯಕತ್ವ ಸಿಗುವುದಲ್ಲದೇ, ಅವರಿಗೆ ಸುಯೋಗ್ಯ ಮಾರ್ಗದರ್ಶನ ಸಹ ನೀಡಿದಂತಾಗುತ್ತದೆ. 'ಯಾರಂತೆ ಅಂದರೆ ಊರಂತೆ' ಎಂದುಕೊಂಡು ಅದುವರೆಗೆ ಹೇಗೆ ಹೇಗೋ ಸಾಗಿಸಿದ ಜೀವನವನ್ನು ಮರೆತು, ಮೌಲ್ಯಗಳನ್ನು ಕಡೆಗಣಿಸಿ ಬಾಳಿದ ಹಿಂದಿನ ದಿನಗಳನ್ನು ಮರೆತು, ಕಷ್ಟವಾದರೂ ಸರಿ, ಜೀವನದ ಉಳಿದ ಕೊನೆಯ ದಿನಗಳಲ್ಲಿ ಮೌಲ್ಯಗಳಿಗೆ ಅಂಟಿಕೊಂಡು ಬಾಳಿದರೆ ಅದು ಜೀವಕೋಟಿಗೆ ನೀಡುವ, ಭಗವಂತ ಮೆಚ್ಚುವ ಅತಿ ದೊಡ್ಡ ಕಾಣಿಕೆಯಾಗುತ್ತದೆ.
     ಆರೋಗ್ಯವಾಗಿದ್ದರೆ ವಯಸ್ಸು ಅನ್ನುವುದು ಕೇವಲ ಒಂದು ಸಂಖ್ಯೆ ಅಷ್ಟೆ. ಎಲ್ಲರೂ ಬಯಸುವುದು 'ವಿನಾ ದೈನ್ಯೇನ ಜೀವನಮ್ ಅನಾಯಾಸೇನ ಮರಣಮ್'. ಈ ಸ್ಥಿತಿ ನಮ್ಮದಾಗಬೇಕಾದರೆ, ಅದನ್ನು ಆಗಗೊಳಿಸುವುದು ಏಕಾಏಕಿ ಸಾಧ್ಯವಿಲ್ಲ, ಚಿಕ್ಕಂದಿನಿಂದಲೇ ಸಂಸ್ಕಾರಯುತ, ಅರೋಗ್ಯಯುತ ಜೀವನ ವಿಧಾನಗಳನ್ನು ಅನುಸರಿಸಿದರೆ ಮಾತ್ರ ಇವು ನಮ್ಮದಾಗುತ್ತವೆ. ಮೊದಲು ಹೇಗೆ ಹೇಗೋ ಇದ್ದು ಕೊನೆಯಲ್ಲಿ ಮಾತ್ರ ಸರಿಯಾಗಿರಬೇಕೆಂದರೆ ಸಾಧ್ಯವೇ? ಯಜುರ್ವೇದದ ಈ ಮಂತ್ರ ಹೇಗಿರಬೇಕೆಂಬುದಕ್ಕೆ ನಮಗೆ ದಾರಿ ತೋರಿಸುತ್ತಿದೆ: ಪಶ್ಶೇಮ ಶರದಃ ಶತಮ್ (ಒಳ್ಳೆಯದನ್ನು ನೋಡುತ್ತಾ ನೂರು ವರ್ಷಗಳ ಕಾಲ ಬಾಳೋಣ); ಜೀವೇಮ ಶರದಃ ಶತಮ್ (ನೂರು ವರ್ಷಗಳ ಕಾಲ ಜೀವಿಸೋಣ); ಹೇಗೆ? ಶೃಣವಾಮ ಶರದಃ ಶತಮ್ (ನೂರು ವರ್ಷಗಳ ಕಾಲ ಒಳ್ಳೆಯದನ್ನು ಕೇಳೋಣ); ಪ್ರಬ್ರವಾಮ ಶರದಃ ಶತಮ್ (ನೂರು ವರ್ಷಗಳ ಕಾಲ ಒಳ್ಳೆಯದನ್ನೇ ಆಡೋಣ); ಅದೀನಾಃ ಸ್ಯಾಮ ಶರದಃ ಶತಮ್ (ದೈನ್ಯತೆಯಿಲ್ಲದಂತೆ, ಸ್ವತಂತ್ರರಾಗಿ, ಆತ್ಮಗೌರವದಿಂದ ನೂರು ವರ್ಷಗಳ ಕಾಲ ಬಾಳೋಣ); ಈ ರೀತಿಯಾಗಿ, ಭೂಯಶ್ಚ ಶರದಃ ಶತಾತ್ (ನೂರು ವರ್ಷಗಳಿಗಿಂತ ಹೆಚ್ಚಾಗಿಯೂ ಜೀವಿಸೋಣ). ಇದು ಬಾಳಬೇಕಾದ ರೀತಿ. ಹೀಗೆ ಬಾಳಿದವರ ಅನೇಕ ಉದಾಹರಣೆಗಳು ನಮ್ಮ ಕಣ್ಣು ತೆರೆಸಬೇಕು. ಈ ರೀತಿ ಬಾಳಿದ ಕಾರಣದಿಂದಲೇ ಅನೇಕ ಮಹಿಮಾವಂತರನ್ನು ಅವರು ಕಾಲವಶರಾದ ಶತ ಶತಮಾನಗಳ ನಂತರವೂ ಇಂದಿಗೂ ನೆನಪಿಸಿಕೊಳ್ಳುತ್ತೇವೆ, ಗೌರವಿಸುತ್ತೇವೆ, ಪೂಜಿಸುತ್ತೇವೆ. ಕೇವಲ ಈಗಿನ ಉದಾಹರಣೆಗಳನ್ನೇ ನೋಡುವುದಾದರೆ ೧೦೬ ವರ್ಷಗಳ ಸಿದ್ದಗಂಗಾ ಶ್ರೀಗಳು, ೧೦೨ ವರ್ಷಗಳ ಪ್ರೊ. ಜಿ. ವೆಂಕಟಸುಬ್ಬಯ್ಯನವರು, ೧೧೭ ವರ್ಷಗಳ ಪಂಡಿತ ಸುಧಾಕರ ಚತುರ್ವೇದಿಗಳು- ಇವರುಗಳ ಬದುಕುಗಳು ಈ ವೇದಮಂತ್ರದ ಸಾಕಾರರೂಪವಾಗಿವೆ. ಪಂ. ಸುಧಾಕರ ಚತುರ್‍ವೇದಿಯವರು ಹೇಳುವಂತೆ ಯಾರು ಚೆನ್ನಾಗಿ ಆಲೋಚಿಸಿ, ಚೆನ್ನಾಗಿ ಯೋಚನೆ ಮಾಡಿಯೇ ಕಾರ್ಯ ಮಾಡುತ್ತಾರೋ ಅವರೇ ಮನುಷ್ಯರು. ನಮ್ಮ ಶರೀರದ ಆಕಾರ ಏನೋ ಮನುಷ್ಯನ ಆಕಾರದಲ್ಲೇ ಇರಬಹುದು, ಆದರೆ ನಡೆ ನುಡಿಯಲ್ಲಿ ಪಶುವೃತ್ತಿ ಇದ್ದರೆ ಏನು ಪ್ರಯೋಜನ?
ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ
ಸರಿಸರಿದು ಸಾಗಿ ಬರಲಿಹುದು ಸಾವು | 
ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ
ಜಾಣರಲಿ ಜಾಣರು ಬದುಕುವರು ಮೂಢ || 
     ಮುಪ್ಪು ಎಂದೊಡನೆ ನೆನಪಾಗುವುದು ಮುಂದೆ ಬರಲಿರುವ ಸಾವೇ! ಕೆಲವರು ಮಾತನಾಡುತ್ತಿರುತ್ತಾರೆ, 'ಮುಪ್ಪು ಬಂದು ಒದ್ದಾಡುವುದಕ್ಕಿಂತ ಮೊದಲೇ ಕೈಕಾಲು ಗಟ್ಟಿಯಾಗಿದ್ದಾಗಲೇ ಹೋಗಿಬಿಡಬೇಕು'. ಮುಪ್ಪನ್ನು ತಪ್ಪಿಸಿಕೊಳ್ಳುವುದೆಂದರೆ ಜೀವನದ ಅಮೂಲ್ಯ ಅನುಭವ ಪಡೆಯುವ, ಅದನ್ನು ಹಂಚಿಕೊಳ್ಳುವ ಅವಕಾಶದಿಂದ ವಂಚಿತರಾಗುವುದೇ ಆಗಿದೆ. ಯುವಕರಾಗಿದ್ದಾಗ ನಾವು ಕಲಿಯುತ್ತೇವೆ, ಆದರೆ ವಯಸ್ಸಾದಾಗ ಅರ್ಥ ಮಾಡಿಕೊಳ್ಳುತ್ತೇವೆ. ಯೌವನದಲ್ಲಿ ಎಲ್ಲಾ ಬಾಗಿಲುಗಳು ಹೊರಮುಖವಾಗಿ ತೆರೆದಿದ್ದರೆ, ಇಳಿ ವಯಸ್ಸಿನಲ್ಲಿ ಒಳಮುಖವಾಗಿ ತೆರೆಯುತ್ತವೆ. ನಿಜವಾದ ಅಂತರಂಗದ ದರ್ಶನವಾಗುವುದು ಆ ಸಮಯದಲ್ಲೇ! ವಯಸ್ಸಾದಾಗ ನಾವು ನಗುವುದನ್ನು ನಿಲ್ಲಿಸಬೇಕಿಲ್ಲ, ನಗುವುದನ್ನು ನಿಲ್ಲಿಸಿದಾಗ ನಮಗೆ ವಯಸ್ಸಾಗಿಬಿಡುತ್ತದೆ. ಆಶಾವಾದ ನಿಜವಾದ ಜೀವನವಾದರೆ, ನಿರಾಶಾವಾದ ಸಾವು. ಈ ಸಾವು ಅನ್ನುವುದು ನಿರ್ಲಜ್ಜ. ನಾವು ಕರೆದರೂ ಬರುತ್ತದೆ, ಕರೆಯದಿದ್ದರೂ ಬರುತ್ತದೆ. ಹಾಗಾಗಿ ಸಾವನ್ನು ಏಕೆ ನಾವಾಗಿ ಬಯಸಬೇಕು? ಸಾಯುವುದು ಸುಲಭ, ಆದರೆ ಬದುಕುವುದಿದೆಯಲ್ಲಾ, ಅದು ಕಷ್ಟ. ಕಷ್ಟವಾದರೂ 'ಬದುಕುವ' ಛಲ ಉಳಿಸಿಕೊಳ್ಳಬೇಕು. ಸಾವು ತಾನಾಗಿ ಬಂದಾಗ ಸಂತೋಷದಿಂದ ಸ್ವಾಗತಿಸಿ, 'ಬಾ, ಮೃತ್ಯುವೇ, ಬಾ. ನಾನು ಸಿದ್ಧನಿದ್ದೇನೆ' ಎಂದು ಹೇಳೋಣ. ಹಿರಿಯರೊಬ್ಬರು ಬದುಕಿಗೆ ವಿದಾಯ ಮತ್ತು ಪಂಚಭೂತಗಳಿಗೆ ಕೃತಜ್ಞತೆ ಸಲ್ಲಿಸುವ ಶ್ಲೋಕವನ್ನು ಉದ್ಧರಿಸುತ್ತಿದ್ದು, ಅದರ ಅರ್ಥ ಹೀಗಿದೆ: 'ತಾಯಿಯಾದ  ಭೂಮಿಯೇ, ತಂದೆಯಾದ ವಾಯುವೇ, ಸ್ನೇಹಿತನಾದ ತೇಜಸ್ಸೇ, ಬಂಧುವಾದ ಜಲವೇ, ಸಹೋದರನಾದ ಆಕಾಶವೇ, ನಿಮ್ಮೆಲ್ಲರಿಗೂ ಇದೋ ನನ್ನ ಕೊನೆಯ ನಮಸ್ಕಾರ. ನಿಮ್ಮ ಸಂಗದಿಂದ ಹುಟ್ಟಿದ, ಪುಣ್ಯಪ್ರಭಾವದಿಂದ ಪ್ರಾಪ್ತವಾದ, ನಿರ್ಮಲ ಜ್ಞಾನದಿಂದ ಪತ್ನಿ ಪುತ್ರಾದಿ ಸಮಸ್ತ ಮೋಹಜಾಲವನ್ನು ಕಳೆದುಕೊಂಡು ಪರಬ್ರಹ್ಮನಲ್ಲಿ ವಿಲೀನನಾಗಿ ಹೋಗುವೆನು'. ಪಂಚಭೂತಗಳಿಂದ ಈ ದೇಹ ಉತ್ಪತ್ತಿಯಾಗಿದೆ. ಪಂಚಭೂತಗಳ ಸಹಾಯದಿಂದಲೇ ಅಭಿವೃದ್ಧಿ ಹೊಂದಿದ್ದೇವೆ ಎಂಬ ಕೃತಜ್ಞತೆಯ ಭಾವದಿಂದ ವಿದಾಯ ಹೇಳುವುದು ಎಷ್ಟೊಂದು ಸಮಂಜಸವಾಗಿದೆ! ಪರಮಾತ್ಮ ಯಾವ ಜೀವಿ ಎಷ್ಟು ಕಾಲ ಬಾಳಬೇಕು, ಬದುಕಬೇಕು ಎಂದು ನಿರ್ಧರಿಸಿರುತ್ತಾನೆ. ಅದನ್ನು ಮೀರಿ ಮೊದಲೇ ಸಾಯುವುದೆಂದರೆ ನಮ್ಮ ಬದುಕಿನ ರೀತಿ ಸರಿಯಿರದೆ ಅಪಮೃತ್ಯು ಹೊಂದಿದಂತೆಯೇ, ಅವನ ಇಚ್ಛೆಯನ್ನು ಮೀರಿದಂತೆಯೇ ಎಂಬುದನ್ನು ಅರ್ಥ ಮಾಡಿಕೊಂಡರೆ, ನಾವು ಸರಿಯಾದ ರೀತಿಯಲ್ಲಿ ಬದುಕಬಹುದೇನೋ! ಎಲ್ಲರಿಗೂ ವಯಸ್ಸಾಗಿಯೇ ಆಗುತ್ತದೆ, ಅದರೆ 'ಹೆಚ್ಚು ಕಾಲ' ಬದುಕುವವರು ಎಷ್ಟು ಜನ? ಈ ಹೆಚ್ಚು ಕಾಲ ಎಂಬ ಪದದಲ್ಲಿ 'ಸತ್ತ ಮೇಲೂ ಜನಮಾನಸದಲ್ಲಿ ಬದುಕಿರುವವರೂ' ಸೇರುತ್ತಾರೆ. ಈಗಲೂ ಕಾಲ ಮಿಂಚಿಲ್ಲ. ಉಳಿದ ಬಾಳನ್ನಾದರೂ 'ಸರಿಯಾಗಿ' ಬಾಳಲು ಪ್ರಯತ್ನಿಸಿದರೆ ದೇವರ ಇಚ್ಛೆಯನ್ನು ಗೌರವಿಸಿದಂತೆ ಆಗುತ್ತದೆ. 
"ವೃದ್ಧಾಪ್ಯವೆಂಬುದು ಜೀವನದ ಕಿರೀಟ, ಗೌರವಿಸೋಣ; ಜೀವನನಾಟಕದ ಕೊನೆಯ ಅಂಕ, ಚೆನ್ನಾಗಿಸೋಣ."
-ಕ.ವೆಂ.ನಾಗರಾಜ್.
**************
8.10.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:

ಮಂಗಳವಾರ, ನವೆಂಬರ್ 25, 2014

ಬಾಳ ಮುಸ್ಸಂಜೆಯಲ್ಲಿ - 1

ಅರ್ಧ ಜೀವನವ ನಿದ್ದೆಯಲಿ ಕಳೆವೆ
ಬಾಲ್ಯ ಮುಪ್ಪಿನಲಿ ಕಾಲುಭಾಗವ ಕಳೆಯೆ|
ಕಷ್ಟ ಕೋಟಲೆ ಕಾಲೆ ಉದರಭರಣೆಗೆ
ಕಳೆದುಳಿವ ಬಾಳಿನಲಿ ತಿರುಳಿರಲಿ ಮೂಢ||
   ವಿಚಿತ್ರವೆನಿಸಿದರೂ ಸರಿಸುಮಾರು ಸರಿಯಾದ ಲೆಕ್ಕವಿದು. ಈ ಲೆಕ್ಕಾಚಾರದಲ್ಲಿ ನಾವು ನಿಜವಾಗಿ ಬದುಕುವುದೆಷ್ಟು ಎಂಬುದು ವಿಚಾರ ಮಾಡಬೇಕಾದ ಸಂಗತಿಯೇ ಆಗಿದೆ. ಹುಡುಗಾಟದ ಬಾಲ್ಯ ಕಳೆದು, ಜವಾಬ್ದಾರಿಯ ಜೀವನ ಪ್ರಾರಂಭಿಸಿ ಮಾಡುವ ಹೋರಾಟ, ಹಾರಾಟಗಳಲ್ಲಿ ಹೈರಾಣಾಗಿ ಒಂದು ಸ್ಥಿತಿಗೆ ಬಂದೆವು ಅನ್ನುವಷ್ಟರಲ್ಲಿ ಮುಪ್ಪು ಬಂದುಬಿಡುತ್ತದೆ. ಇಳಿವಯಸ್ಸು ತನ್ನ ವಧುವನ್ನು ಹುಡುಕಿಕೊಂಡು ಬಂದಾಗ ಅಡಗಿಕೊಳ್ಳಲು, ಅದರಿಂದ ತಪ್ಪಿಸಿಕೊಳ್ಳಲು ಈ ಪ್ರಪಂಚದಲ್ಲಿ ಸ್ಥಳವೇ ಇಲ್ಲ. ಹೇಗೆ ಬದುಕಬೇಕು, ಹೇಗೆ ಸಾಯಬೇಕು ಎಂಬುದಕ್ಕೆ ತರಬೇತಿ ಕೊಡುವವರಿದ್ದಾರೆ. ಅದರಂತೆ, ಹೇಗೆ ಇಳಿವಯಸ್ಸನ್ನು ಎದುರಿಸಬೇಕೆಂಬುದಕ್ಕೆ ತರಬೇತಿ ಕೊಡುವ ಶಾಲೆಗಳೂ ಬರಬೇಕಿದೆ. ಮಾನಸಿಕ ಮುಪ್ಪು ಮತ್ತು ದೈಹಿಕ ಮುಪ್ಪು, ಈ ಎರಡು ರೀತಿಯ ಮುಪ್ಪುಗಳ ಪರಿಣಾಮ ವೈಯಕ್ತಿಕ ಜೀವನದ ಮೇಲೆ ಬೀರದೇ ಇರುವುದಿಲ್ಲ. ಒಂದು ರೀತಿಯಲ್ಲಿ ನೋಡಿದರೆ ತಮ್ಮ ಅದುವರೆಗಿನ ಕಾರ್ಯಗಳ, ಕರ್ಮಗಳ ಫಲ ಅನುಭವಿಸುವ ಕಾಲವದು. ಜೊತೆಜೊತೆಗೆ, ಇನ್ನು ಹೆಚ್ಚು ಸಮಯವಿಲ್ಲ, ಮಾಡಬೇಕೆಂದಿರುವ, ಮಾಡದೇ ಉಳಿದಿರುವ ಕೆಲಸಗಳನ್ನು ಬೇಗ ಮುಗಿಸಿಬಿಡಬೇಕು ಎಂಬ ಭಾವ ಜಾಗೃತವಾಗುವ ಸಮಯ. ಬೇಡವೆಂದರೆ ಮುಪ್ಪು ಬರದಿದ್ದೀತೆ? ಈ ಅನಿವಾರ್ಯತೆಯನ್ನು ಆನಂದದಿಂದ ಅನುಭವಿಸುವ, ಇದ್ದುದನ್ನು ಇದ್ದಂತೆ, ಬರುವುದನ್ನು ಬಂದಂತೆ ಸ್ವೀಕರಿಸುವ ಮನೋಭಾವ ತಾಪವನ್ನು ಕಡಿಮೆ ಮಾಡುವ ರಾಮಬಾಣ. ಮುಪ್ಪನ್ನು ಯಶಸ್ವಿಯಾಗಿ ಎದುರಿಸುವ ಇನ್ನೊಂದು ವಿಧಾನವೆಂದರೆ ಏಕಾಂತದೊಂದಿಗೆ ಒಂದು ಗೌರವಾನ್ವಿತ ಒಪ್ಪಂದವನ್ನು ಮಾಡಿಕೊಳ್ಳುವುದು. ಮುಪ್ಪು - ಇದು ಒಳ್ಳೆಯದೂ ಹೌದು, ಕೆಟ್ಟದ್ದೂ ಹೌದು. ಎರಡು ಮಗ್ಗಲುಗಳ ಕಡೆಗೂ ದೃಷ್ಟಿ ಹಾಯಿಸೋಣ. 
     ಮುಪ್ಪು ಬಂದಾಗ ಸಾಮಾನ್ಯವಾಗಿ ಸಾವಿನ ಪ್ರಜ್ಞೆ ಜಾಗೃತವಾಗುತ್ತದೆ. ತಲೆ ನರೆಯುತ್ತದೆ ಅಥವ ಬೋಳಾಗತೊಡಗುತ್ತದೆ, ಹಲ್ಲುಗಳು ಉದುರಲು ಆರಂಭವಾಗುತ್ತವೆ, ಕಿವಿ ಮಂದವಾಗುತ್ತದೆ, ಶರೀರ ಕುಗ್ಗಲು ತೊಡಗುತ್ತದೆ, ದೃಷ್ಟಿ ಮಸುಕಾಗತೊಡಗುತ್ತದೆ, ರೋಗಗಳು, ಕೀಲುಗಳ ನೋವು ಬಾಧಿಸತೊಡಗುತ್ತದೆ. ಅದುವರೆವಿಗೆ ರಾಜನಂತೆ ಮೆರೆದವರಿಗೆ ಇನ್ನೊಬ್ಬರ ಆಶ್ರಯ ಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಅವರ ಪ್ರಾಮುಖ್ಯವೂ ಕಡಿಮೆಯಾಗುತ್ತಾ ಹೋಗುತ್ತದೆ. ಕೇವಲ ಕರ್ತವ್ಯ ಅಥವ ಪ್ರೀತಿಯ ಕಾರಣದಿಂದ ಅವರನ್ನು ನೋಡಿಕೊಂಡರೂ ಅವರಿಗೆ ಪ್ರಾಶಸ್ತ್ಯ ಕೊಡುವುದಿಲ್ಲ. ಈ ಸ್ಥಿತಿಗೆ ಮಾನಸಿಕವಾಗಿ ಸಿದ್ಧರಿರದವರ ಪಾಡು ಶೋಚನೀಯವಾಗುತ್ತದೆ. ಯುವಕರು ಕಷ್ಟಗಳನ್ನು ಎದುರಿಸುತ್ತಾರೆ, ಆದರೆ ವೃದ್ಧಾಪ್ಯದಲ್ಲಿ ಕಷ್ಟಗಳೇ ಅವರನ್ನು ಎದುರಿಸುತ್ತವೆ. ಕೈಕಾಲುಗಳು ಗಟ್ಟಿಯಾಗಿದ್ದಾಗ ಬದುಕಿನ ಅರ್ಥ ತಿಳಿಯದಿದ್ದವರಿಗೆ ಯೌವನ ಮುಕ್ಕಾಗಿ, ಗೆಳೆಯರು, ಬಂಧುಗಳು ದೂರವಾಗಿ, ನಿಂದೆ, ಮೂದಲಿಕೆಗಳನ್ನು ಎದುರಿಸಬೇಕಾಗಿ ಬಂದಾಗ ಅರ್ಥ ಗೊತ್ತಾದರೂ ಪ್ರಯೋಜನವಿರುವುದಿಲ್ಲ. ಮುಪ್ಪಿನ ದಾರುಣ ಸ್ಥಿತಿಯೆಂದರೆ, ವೃದ್ಧರು ಸ್ವತಃ ತಮ್ಮನ್ನು ತಾವು ಉಪಯೋಗವಿಲ್ಲದವರು, ಯಾರಿಗೂ ಪ್ರಯೋಜನಕ್ಕೆ ಬಾರದವರು, ತಮ್ಮನ್ನು ಯಾರೂ ಇಷ್ಟಪಡುವುದಿಲ್ಲ ಎಂದುಕೊಳ್ಳುವುದೇ ಆಗಿದೆ. ಆದರೆ ಸಂತೋಷವಾಗಿರುವ ಗುಟ್ಟೆಂದರೆ ಸದಾ ಚಟುವಟಿಕೆಯಿಂದಿರುವುದು, ಜೀವನದಲ್ಲಿ ಆಸಕ್ತಿ ಹೊಂದಿರುವುದು, ಸಾಧ್ಯವಿರುವಷ್ಟು ಇನ್ನೊಬ್ಬರಿಗೆ ಪ್ರಯೋಜನಕಾರಿಯಾಗಿರುವುದು. ವಯಸ್ಸು ಅನ್ನುವುದು ಸಂಗತಿಯ ಬಗ್ಗೆ ಮನಸ್ಸಿನ ಸ್ಥಿತಿಯಾಗಿದೆ. ಅದನ್ನು ಲೆಕ್ಕಿಸದಿದ್ದರೆ ಅದು ಸಂಗತಿಯೇ ಅಲ್ಲ. ಯಾರೇ ಆಗಲಿ, ಆಸಕ್ತಿಯನ್ನು ಕಳೆದುಕೊಂಡರೆ, ಅವರು ಇಪ್ಪತ್ತು ವರ್ಷದವರಾಗಲೀ, ಎಂಭತ್ತು ವರ್ಷದವರಾಗಲೀ, ಮುದುಕರೇ. ಆಸಕ್ತಿ ಇರುವವರು ಎಷ್ಟೇ ವಯಸ್ಸಿನವರಾಗಿರಲಿ, ಅವರು ಯುವಕರೇ! ಬದುಕಿನ ಅರ್ಥ ತಿಳಿದವರು ವೃದ್ಧಾಪ್ಯದಲ್ಲಿ ಹೊಗಳಿಕೆಗೆ ಉಬ್ಬದೆ, ತೆಗಳಿಕೆ, ಮೂದಲಿಕೆಗಳಿಗೆ ಕುಗ್ಗದೆ ಇರುವ ಮನೋಸ್ಥಿತಿಗೆ ತಲುಪಿರುತ್ತಾರೆ. 
     ಇನ್ನೊಂದು ರೀತಿಯ ಜನರೂ ಇರುತ್ತಾರೆ. ದೇಹಕ್ಕೆ ಮುಪ್ಪಡರಿದರೂ ಅವರ ತೀರದ ಆಸೆಗೆ ಮುಪ್ಪು ಬರುವುದೇ ಇಲ್ಲ. ತಮಾಷೆಯ ಈ ಪ್ರಸಂಗ ನೋಡಿ. ಒಮ್ಮೆ ಗೋಂದಾವಲೀ ಮಹಾರಾಜರು ಭಕ್ತರೊಬ್ಬರ ಮನೆಗೆ ಹೋಗಿದ್ದಾಗ, ಆ ಮನೆಯಲ್ಲಿದ್ದ ಸುಮಾರು ೯೦ ವರ್ಷದ ವೃದ್ಧೆ ಅವರನ್ನು ಉದ್ದೇಶಿಸಿ, "ಗುರುಗಳೇ, ನನಗೆ ನಿಮ್ಮ ಪಾದದ ಅಡಿಯಲ್ಲಿ ತಲೆಯಿಟ್ಟು ಸಾಯಬೇಕು ಎಂಬುದೊಂದೇ ಆಸೆ" ಅಂದಳಂತೆ. ಗುರುಗಳು ತಕ್ಷಣ ಪದಾಸನ ಹಾಕಿ ಕುಳಿತು, "ಅದಕ್ಕೇನಂತೆ, ಹಾಗೇ ಮಾಡಿ" ಅಂದರು. ಆ ವೃದ್ಧೆ ಗಾಬರಿಯಾಗಿ, "ಈಗಲೇ ಅಲ್ಲ ಗುರುಗಳೇ, ನನ್ನ ಮೊಮ್ಮಗಳ ಮದುವೆ ಆಗಬೇಕು. ಅವಳ ಮಗುವಿನ ನಾಮಕರಣ ನೋಡಿಕೊಂಡು ಸಾಯುತ್ತೇನೆ" ಎಂದಳಂತೆ. ಇಂತಹುದೇ ಇನ್ನೊಂದು ತಮಾಷೆಯ ಪ್ರಸಂಗ. ಒಮ್ಮೆ ಹಿರಿಯರೊಬ್ಬರು ಇನ್ನೇನು ಸಾವಿನ ಸಮೀಪವಿದ್ದಾರೆ ಎನ್ನುವ ಸ್ಥಿತಿಯಲ್ಲಿದ್ದಾಗ ಅವರ ಮಕ್ಕಳೆಲ್ಲಾ ಅವರ ಬಳಿಗೆ ಧಾವಿಸಿಬಂದರು. ಹಿರಿಯ ಮಗನನ್ನು ಕಂಡ ಆ ವೃದ್ಧ ಏನನ್ನೋ ಹೇಳಲು ಚಡಪಡಿಸಿದರೂ ಮಾತು ಹೊರಡುತ್ತಿರಲಿಲ್ಲ. ಅವರು ಯಾವುದೋ ಸಂಪತ್ತು, ಆಸ್ತಿಯ ಬಗ್ಗೆ ಏನೋ ಹೇಳಹೊರಟಿದ್ದಾರೆ ಎಂಬ ಅನುಮಾನ ಮಕ್ಕಳಿಗೆ. ಎಲ್ಲರಿಗೂ ಅದೇನೆಂದು ತಿಳಿಯುವ ಕುತೂಹಲ. ವೈದ್ಯರ ಹರಪ್ರಯತ್ನದಿಂದ ಕೊನೆಗೂ ಹಿರಿಯ ಮಗನಿಗೆ ಆ ವೃದ್ಧರು ಹೇಳಿದ್ದಿಷ್ಟು, "ಇಷ್ಟು ಬೇಗ ಏಕೆ ಅಂಗಡಿ ಬಾಗಿಲು ಹಾಕಿಕೊಂಡು ಬಂದೆ?" ಇದನ್ನು ಹೇಳಿದವರೇ ಶಾಶ್ವತವಾಗಿ ಕಣ್ಣು ಮುಚ್ಚಿದ್ದರು.
ದಿನಗಳುರುಳುವುವು ಅಂತೆ ಮನುಜನಾಯುವು
ಶಾಶ್ವತನು ತಾನೆಂಬ ಭ್ರಮೆಯು ಮುಸುಕಿಹುದು |
ಚದುರಂಗದ ರಾಜ ಮಂತ್ರಿ ರಥ ಕುದುರೆ ಕಾಲಾಳು
ಆಟದಂತ್ಯದಲಿ ಎಲ್ಲರೂ ಒಂದೆ ಮೂಢ || 
     ಮುಪ್ಪು ಯಾವಾಗ ಪ್ರಾರಂಭವಾಗುತ್ತದೆ? ಯಾವಾಗ ತಮ್ಮ ನಿಜವಾದ ವಯಸ್ಸನ್ನು ಮುಚ್ಚಿಡಲು ಪ್ರಾರಂಭಿಸುತ್ತಾರೋ ಆಗ ಮುಪ್ಪು ಕಾಲಿಡಲು ಪ್ರಾರಂಭಿಸಿದೆ ಎನ್ನಬಹುದು. ಮುಂದೆ ಹೇಳುವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಗಂಡಸರಿಗೆ ಸಾಮಾನ್ಯವಾಗಿ ೩೦ ಮತ್ತು ಹೆಂಗಸರಿಗೆ ಇನ್ನೂ ಮುಂಚೆಯೇ ಮುಪ್ಪು ಪ್ರಾರಂಭವಾಗುತ್ತದೆ, ಏಕೆಂದರೆ ಆಗ ಅವರು ತಮ್ಮ ನಿಜವಾದ ವಯಸ್ಸಿಗಿಂತ ಕಡಿಮೆ ವಯಸ್ಸು ಹೇಳಿಕೊಳ್ಳಲು, ತಾವಿನ್ನೂ ಚಿಕ್ಕವರು ಎಂದು ತೋರಿಸಿಕೊಳ್ಳಲು ಇಷ್ಟಪಡುವ ಅವಧಿಯದು. ಇದನ್ನು ಮುಕ್ತಾಯದ ಆರಂಭವೆನ್ನೋಣವೇ? ಬುದ್ಧಿವಂತ ಗಂಡ ಹೆಂಡತಿಯ ವಯಸ್ಸನ್ನು ಮರೆತು ಅವಳ ಜನ್ಮದಿನಾಂಕವನ್ನು ಮಾತ್ರ ನೆನಪಿಟ್ಟುಕೊಂಡಿರುತ್ತಾನಂತೆ. ಕಾಲ ಸರಿದಂತೆ ವಯಸ್ಸು ಹೆಚ್ಚುತ್ತಾ ಹೋಗುವುದು ಮತ್ತು ಹುಟ್ಟಿದವರೆಲ್ಲರೂ ಸಾಯುವರು ಎಂಬ ಸಾಮಾನ್ಯ ಅರಿವನ್ನೂ ಮರೆಸುವಂತೆ ಮಾಡುವ ಆ ಮಾಯೆಯ ಮಹಿಮೆ ಅಪಾರವೇ ಸರಿ. ವಯಸ್ಸಾದವರು ತಮಗೆ ಇನ್ನೂ ಸಾವು ಏಕೆ ಬರಲಿಲ್ಲವೆಂದು ಅಲವತ್ತುಕೊಳ್ಳುವುದನ್ನು ಕಾಣುತ್ತೇವೆ, ಇದು ವೃದ್ಧಾಪ್ಯದ ಕಾರಣದಿಂದ ಕಷ್ಟಪಡುವಾಗ ಆಡುವ ಮಾತಷ್ಟೇ ಆಗಿದೆ. ಸಾವು ನಿಜಕ್ಕೂ ಸನಿಹಕ್ಕೆ ಬಂದಾಗ ಅವರು ಸಾಯಲು ಬಯಸುವುದೇ ಇಲ್ಲ ಮತ್ತು ಮುಪ್ಪು ಅವರಿಗೆ ಹೊರೆ ಅನ್ನಿಸುವುದಿಲ್ಲ.
ವೃದ್ಧಾಶ್ರಮದಲ್ಲಿರುವ ಇವರ ಮನದಾಳವನ್ನು ಅರಿತವರಾರು?
     ಮುಪ್ಪಿನ ಕಾಲದ ಕಟು ವಾಸ್ತವತೆ, ಮುಪ್ಪು ಕುರಿತು ಹಿರಿಯರು ಮತ್ತು ಕಿರಿಯರ ದೃಷ್ಟಿಕೋನ ಹೇಗಿರಬೇಕು ಎಂಬ ಬಗ್ಗೆ ದೃಷ್ಟಿ ಹರಿಸಿದರೆ ಕಂಡು ಬರುವುದು ನಿರಾಶಾದಾಯಕ ಚಿತ್ರಣವೇ. ಈ ಉದಾಹರಣೆ ನೋಡಿ: ಅವರೊಬ್ಬರು ಆಗರ್ಭ ಶ್ರೀಮಂತರು. ಮಕ್ಕಳಿಬ್ಬರೂ ತಮ್ಮ ಸಂಸಾರದೊಂದಿಗೆ ಅಮೆರಿಕೆಯಲ್ಲಿದ್ದಾರೆ. ಪತಿ ತೀರಿದ ನಂತರ ಒಂಟಿಯಾದ ವೃದ್ಧೆ ವೃದ್ಧಾಶ್ರಮ ಸೇರಿದ್ದಾರೆ. ವೃದ್ಧಾಶ್ರಮದ ಕಟ್ಟಡಕ್ಕೆ ಆಕೆಯೇ ಉದಾರ ನೆರವು ನೀಡಿದ್ದಾರೆ. ಅವರ ಮಕ್ಕಳೂ ನಿಯತವಾಗಿ ಸಾಕಷ್ಟು ಹಣ ಕಳಿಸುತ್ತಾರೆ. ದೂರವಾಣಿಯಲ್ಲಿ ಮಾತನಾಡುತ್ತಾರೆ. ಆದರೆ, ಅವರು ನೆಮ್ಮದಿಯಿಂದ ಇದ್ದಾರೆಯೇ? ವೃದ್ಧಾಶ್ರಮದಲ್ಲಿ ಕಂಡು ಬರುವ ವೃದ್ಧ, ವೃದ್ಧೆಯರದು ಒಬ್ಬೊಬ್ಬರದು ಒಂದೊಂದು ರೀತಿಯ ಕಥೆ. ಮಕ್ಕಳು, ಸೊಸೆಯಂದಿರನ್ನು ದೂಷಿಸುವವರು, ಇದ್ದುದೆಲ್ಲವನ್ನೂ ಕಿತ್ತುಕೊಂಡು ಹೊರದೂಡಲ್ಪಟ್ಟವರು, ನೋಡಿಕೊಳ್ಳುವವರು ಯಾರೂ ಇಲ್ಲದವರು, ಅವಮಾನ ಸಹಿಸದೆ ಹೊರಬಂದವರು, ಹೀಗೆ ಹತ್ತು ಹಲವು ಕಾರಣಗಳು ಸಿಗುತ್ತವೆ. ನೋವು, ನಲಿವುಗಳನ್ನು ಹೇಳಿಕೊಳ್ಳದೆ ಮೌನವಾಗಿ ಸಹಿಸಿಕೊಂಡಿರುವವರು, ಕಾಯಿಲೆಗಳಿಂದ ಜರ್ಜರಿತರಾಗಿ ನರಳುವವರು, ನಿರ್ಲಿಪ್ತತೆ ಬೆಳೆಸಿಕೊಂಡವರು, ಕಣ್ಣುಗಳಲ್ಲಿ ಶೂನ್ಯ ನೋಟ ತುಂಬಿಕೊಂಡಿರುವವರು, ಕಳೆದ ತಿಂಗಳು ಇಷ್ಟು ಜನರು ಜೀವನಯಾತ್ರೆ ಅಂತ್ಯಗೊಳಿಸಿದರು, ನಮ್ಮ ಸರದಿ ಸದ್ಯದಲ್ಲೇ ಬರಲಿದೆ ಎಂಬ ಅರಿವಿರುವವರು, ಕಿರಿಕಿರಿಯ ಮನೋಭಾವದಿಂದ ಕುಟುಂಬದವರ ಕೆಂಗಣ್ಣಿಗೆ ಗುರಿಯಾದವರು, ಮುಂತಾದವರು ವೃದ್ಧಾಶ್ರಮಗಳಲ್ಲಿ ಕಾಣಸಿಗುತ್ತಾರೆ. ಹೆಚ್ಚಿನವರಿಗೆ ಸರ್ಕಾರದಿಂದ ಬರುವ ವೃದ್ಧಾಪ್ಯ ವೇತನ, ವಿಧವಾ ವೇತನಗಳು ಬರುತ್ತಿರುತ್ತವೆ. [ಮಕ್ಕಳೇ ತಮ್ಮ ತಂದೆ, ತಾಯಿಯರಿಗೆ ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಮುಂತಾದ ಸವಲತ್ತುಗಳನ್ನು ಮಾಡಿಸಿಕೊಡಲು ಓಡಾಡುವುದನ್ನು ನನ್ನ ಸೇವಾವಧಿಯಲ್ಲಿ ಕಂಡಿದ್ದೇನೆ. ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಿಲ್ಲವೆಂದು ಛಾಪಾ ಕಾಗದದಲ್ಲಿ ಮುಚ್ಚಳಿಕೆ ಬರೆದುಕೊಟ್ಟರೆ ಅವರಿಗೆ ವೇತನ ಮಂಜೂರು ಮಾಡದಿರಲು ಸಾಧ್ಯವೇ? ಸಂಧ್ಯಾಸುರಕ್ಷಾ ವೇತನ ಪಡೆಯುವವರು ಕಾರಿನಲ್ಲಿ ಓಡಾಡುವುದನ್ನೂ ಕಂಡಿದ್ದೇನೆ]. ಸ್ಟೇಡಿಯಮ್ಮಿನ ಕಟ್ಟೆಯಲ್ಲಿ, ಪಾರ್ಕುಗಳ ಬೆಂಚುಗಳಲ್ಲಿ ನಿವೃತ್ತರು, ವಯಸ್ಸಾದವರು ಕುಳಿತು ತಮ್ಮ ಗೋಳನ್ನು, ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಾ, ಇತರರನ್ನು ಶಪಿಸುತ್ತಾ, 'ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ' ಎನ್ನುವವರ ಗುಂಪು ಸಾಮಾನ್ಯವಾಗಿ ಕಂಡುಬರುತ್ತದೆ.
ವೃದ್ಧಾಪ್ಯ ಮುಸುಕಿರಲು ದಂತಗಳುದುರಿರಲು
ಕಿವಿಯು ಕೇಳದಿರೆ ನೋಟ ಮಸುಕಾಗಿರಲು|
ತನುವು ಕುಗ್ಗಿರಲು ಯಾರು ಗಣಿಸುವರು ನಿನ್ನ
ಜಯವಿರುವವರೆಗೆ ಭಯವಿಲ್ಲ ಮೂಢ||
     ವಯಸ್ಸಾದ ದೇಹ ಒಂದು ಹಳೆಯ ಹಾಳಾದ ವಾದ್ಯದಂತೆ. ಅದರ ಒಳಗಿನ ಆತ್ಮ ಅದರಿಂದ ಯೌವನದ ಸುಂದರ ಸ್ವರಗಳನ್ನು ಹೊರಡಿಸಲು ಪ್ರಯತ್ನಿಸುತ್ತದೆ. ಆದರೆ ಎಂತಹ ಉತ್ತಮ ಸಂಗೀತಗಾರನೂ ಅಂತಹ ವಾದ್ಯದಿಂದ ಮಧುರ ನಾದ ಹೊರಡಿಸಲಾರ. ಆ ಕಿತ್ತ ತಂತಿಗಳ ವಾದ್ಯ ನುರಿತ ಸಂಗೀತಕಾರನ ಆದೇಶವನ್ನೂ ಪಾಲಿಸುವುದಿಲ್ಲ. 'ಶೀರ್ಯತೇ ಇತಿ ಶರೀರಮ್'-ಜೀರ್ಣವಾಗುವ ಗುಣವಿರುವುದರಿಂದಲೇ ಇದಕ್ಕೆ ಶರೀರವೆನ್ನುತ್ತಾರೆ. ಹಿರಿಯರೊಬ್ಬರು ಕೊಟ್ಟ ವಿವರದಂತೆ, ರಾಜ ಭರ್ತೃಹರಿಯ ಕವಿವಾಕ್ಯದಲ್ಲಿ ವೃದ್ಧಾಪ್ಯದ ವರ್ಣನೆ ಈ ರೀತಿ ಇದೆ: 'ಗಾತ್ರಂ ಸಂಕುಚಿತಂ (ಶರೀರ ಕುಗ್ಗುವುದು), ಗತಿರ್ವಿಗಲಿತಾ (ನಡಿಗೆ ಕುಂಠಿತವಾಗುವುದು), ಭ್ರಷ್ಠಾಚ ದಂತಾವರೀ (ಹಲ್ಲಿನ ಸಾಲು ಕಳಚುವುದು), ದೃಷ್ಟಿರ್ನಶ್ಯತಿ (ನೋಟ ನಾಶವಾಗುವುದು), ವರ್ಧತೇ ಬಧಿರತಾ (ಕಿವುಡುತನ ಹೆಚ್ಚುವುದು), ವಕ್ತಚ ಲಾಲಾಯತೆ (ಬಾಯಲ್ಲಿ ಜೊಲ್ಲು ಸುರಿಯುವುದು), ವಾಕ್ಯಂ ನಾದ್ರೀಯತೇ ಚ ಬಾಂಧವಂ (ಬಂಧುಗಳು ಮಾತನ್ನು ಆದರಿಸರು), ಭಾರ್ಯಾ ನ ಶುಶ್ರೂಷತೇ (ಪತ್ನಿ ಶುಶ್ರೂಷೆ ಮಾಡುವುದಿಲ್ಲ), ಹಾ ಕಷ್ಟಂ ಪುರುಷಸ್ಯ ಜೀರ್ಣವಯಸಃ ಪುತ್ರೋಪ್ಯವಜ್ಞಾಯತೇ (ಅಯ್ಯೋ ಕಷ್ಟ, ಇಳಿ ವಯಸ್ಸಿನಲ್ಲಿ ಪುತ್ರನೂ ಕಡೆಗಣಿಸುತ್ತಾನೆ). ಹಿರಿಯರನ್ನು ಆದರಿಸದಿರುವ ರೀತಿ ಇಂದಿನ ಕಾಲದ ಸಮಸ್ಯೆಯಲ್ಲ, ಹಿಂದಿನಿಂದಲೂ ಇದೆ. ಇದಕ್ಕೆ ಕಾಲವನ್ನು ದೂಷಿಸುವಂತಿಲ್ಲ, ದೂಷಿಸಬೇಕಾಗಿರುವುದು, ಸರಿಪಡಿಸಬೇಕಾಗಿರುವುದು ಇದಕ್ಕೆ ಕಾರಣವಾದ ಸಂಗತಿಗಳನ್ನು ಎಂದು ಅರಿತರೆ ಒಳಿತು.
     ಜೀವನದ ಸಂಧ್ಯಾಕಾಲದಲ್ಲಿರುವವರ ದುಸ್ಥಿತಿಗೆ ಭೋಗವಾದ, ಭೌತಿಕವಾದ, ಉತ್ತಮ ಸಂಸ್ಕಾರಯುತ ಶಿಕ್ಷಣದ ಕೊರತೆ, ಇಂದಿನ ಮೌಲ್ಯ ರಹಿತ ಆಡಳಿತ ವ್ಯವಸ್ಥೆ ತಮ್ಮ ಕಾಣಿಕೆ ನೀಡಿವೆ. ಹಿಂದಿನ ಸಂಸ್ಕಾರಯುತ ಜೀವನ ಮತ್ತು ಶಿಕ್ಷಣ ಪದ್ಧತಿಯನ್ನು ಬದಲಿಸಿ ಗುಮಾಸ್ತರ ಸೈನ್ಯವನ್ನು ಸೃಷ್ಟಿಸುವ ಶಿಕ್ಷಣ ಪದ್ಧತಿ ಜಾರಿಗೆ ತಂದರೆ, ಇಂಗ್ಲಿಷ್ ಕಲಿತರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವೆಂಬ ಮನೋಭಾವ ಬೆಳೆಸಿದರೆ ಕರಿಚರ್ಮದ ಬ್ರಿಟಿಷರು ತಯಾರಾಗುತ್ತಾರೆ ಎಂಬ ಲಾರ್ಡ್ ಮೆಕಾಲೆಯ ಮಾತು ಸಾಕಾರವಾಗಿಬಿಟ್ಟಿದೆ. ಸುಮಾರು ನಾಲ್ಕು ಶತಮಾನಗಳ ಕಾಲ ಬ್ರಿಟಿಷರ ದಾಸ್ಯದಲ್ಲಿದ್ದ ಜನಾಂಗ ಇನ್ನೂ ಅವರು ಬೇರೂರಿಸಿರುವ ಮಾನಸಿಕ ದಾಸ್ಯದಲ್ಲೇ ತೊಳಲಾಡುತ್ತಿರುವುದು ದುರ್ದೈವದ ಸಂಗತಿ. ಭೋಗವಾದದ ದಾಸರಾಗಿ ಸಂಸ್ಕೃತಿ ಮರೆತ ಪಶುಗಳಂತೆ ವರ್ತಿಸುವುದು ಈಗ ಸಾಮಾನ್ಯವಾಗಿದೆ. ಸಾಫ್ಟ್ ವೇರ್ ಇಂಜನಿಯರ್ ಒಬ್ಬ ತನ್ನ ತಾಯಿಗೆ ಹಣ ಕಳುಹಿಸಿದ್ದನ್ನು ಆಕ್ಷೇಪಿಸಿ ಜಗಳವಾಡಿದ ಪತ್ನಿಯ (ಆಕೆಯೂ ಸಾಫ್ಟ್ ವೇರ್ ಇಂಜನಿಯರ್) ನಡವಳಿಕೆಯಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಈಚೆಗೆ ಓದಿದ್ದೆ. ನಿವೃತ್ತಿ ಅಂಚಿನಲ್ಲಿದ್ದ ಸರ್ಕಾರಿ ನೌಕರರನ್ನು ಹೆಂಡತಿ, ಮಕ್ಕಳೇ ಸೇರಿಕೊಂಡು ಕೊಂದು ಅನುಕಂಪದ ಆಧಾರದಲ್ಲಿ ನೌಕರಿಯನ್ನು ಗಿಟ್ಟಿಸಿಕೊಂಡಿರುವ, ಪಿಂಚಣಿ ಮತ್ತು ಇತರ ಸವಲತ್ತುಗಳನ್ನು ಪಡೆದಿರುವ ಉದಾಹರಣೆಗಳಿಗೆ ಕೊರತೆಯಿಲ್ಲ. ತಂದೆಯನ್ನೇ ತನ್ನ ಸ್ನೇಹಿತನ ಸಹಾಯದಿಂದ ಕೊಂದು ಅನುಕಂಪದ ಆಧಾರದಲ್ಲಿ ಗ್ರಾಮಲೆಕ್ಕಿಗನ ನೌಕರಿ ಪಡೆದಿದ್ದವನೊಬ್ಬನನ್ನು, ಕೊಲೆಗೆ ಸಹಕರಿಸಿದ ಅವನ ಸ್ನೇಹಿತನೇ ನಂತರದಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ವಸೂಲು ಮಾಡತೊಡಗಿದಾಗ ಬೇಸತ್ತು ಸ್ನೇಹಿತನನ್ನೂ ಕೊಂದ ಆರೋಪ ಹೊತ್ತು ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿದ್ದ ವ್ಯಕ್ತಿ ನನ್ನ ಅಧೀನ ನೌಕರನೊಬ್ಬನಾಗಿದ್ದ. ಆಸ್ತಿಯ ಆಸೆಗಾಗಿ ತಂದೆ, ತಾಯಿಯರನ್ನೇ ಕೊಂದವರನ್ನೂ ಕಂಡಿದ್ದೇವೆ. ಇಂತಹವರ ಮಕ್ಕಳೂ ಮುಂದೆ ತಮ್ಮ ಹಿರಿಯರನ್ನೇ ಅನುಕರಿಸುವುದಿಲ್ಲವೆಂಬುದಕ್ಕೆ ಖಾತ್ರಿಯಿದೆಯೇ? ವಿದ್ಯೆ ವಿನಯವನ್ನು ಕೊಡುತ್ತದೆ ಎಂಬುದು ಸನಾತನ ಸಂಸ್ಕಾರಯುತ ಶಿಕ್ಷಣ ಸಾರುತ್ತಿತ್ತು. ಇಂದು? ವಿನಯವನ್ನು ದೂರವಿಡುವ ಇಂದಿನ ಶಿಕ್ಷಣ ಪದ್ಧತಿ ಮಾನವೀಯತೆಯನ್ನು ಮರೆಸಿಬಿಟ್ಟಿದೆ.
'ನಮ್ಮ ಹಿರಿಯರನ್ನು ನಾವು ಗೌರವಿಸೋಣ; ನಮ್ಮ ಮಕ್ಕಳೂ ಮುಂದೆ ನಮ್ಮನ್ನು ಆದರಿಸಬಹುದು!'


-ಕ.ವೆಂ.ನಾಗರಾಜ್.
***************
1.10.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತ:


ಶುಕ್ರವಾರ, ನವೆಂಬರ್ 21, 2014

ತುತ್ತು ತಿನ್ನುವ ಮುನ್ನ . . .


     ಬೆಳಗೆರೆ ಕೃಷ್ಣಶಾಸ್ತ್ರಿಯವರ ಕೃತಿ 'ಯೇಗ್ದಾಗೆಲ್ಲಾ ಐತೆ'ಯಲ್ಲಿ ಉಲ್ಲೇಖಿತ ಪ್ರಸಂಗವಿದು. ಅವಧೂತ ಮುಕುಂದೂರು ಸ್ವಾಮಿಗಳು ಊಟಕ್ಕೆ ಕುಳಿತಿದ್ದ ಭಕ್ತರನ್ನು ಉದ್ದೇಶಿಸಿ ಹೀಗೆ ಹೇಳುತ್ತಾರೆ: "ಮುದ್ದೆ ಅಂತ ಊಟ ಇಲ್ಲ, ಸಿದ್ದಪ್ಪನಂತ ದೇವರಿಲ್ಲ ಅಂತಾರೆ. ಆದ್ರೆ ಒಂದ್ಮಾತು, ಈ ಮುದ್ದೆಗೆ ತಕ್ಕಷ್ಟು ಕಷ್ಟ ಮಾಡಿದ್ದೀನಿ ಅಂತ ನಿಮಗೆ ನೀವೇ ಕೇಳ್ಕಂಡು, ಹೇಳ್ಕಂಡು ಮುದ್ದೆ ಮುರೀರಪ್ಪಾ." ಎಂತಹ ದಿವ್ಯ ಸಂದೇಶ. ಡಿವಿಜಿಯವರ ಮಂಕುತಿಮ್ಮ ನಮ್ಮ ಆತ್ಮಸಾಕ್ಷಿಯನ್ನು ಕೆಣಕುತ್ತಾನೆ: 'ಅನ್ನವುಣುವಂದು ಕೇಳ್: ಅದನು ಬೇಯಿಸಿದ ನೀರ್ ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ?' ಯೋಚಿಸಬೇಕಲ್ಲವೇ? ಆಹಾರವನ್ನು ಪಡೆಯಲೂ ಅರ್ಹತೆ ಇರಬೇಕು ಎನ್ನುತ್ತದೆ ಈ ವೇದಮಂತ್ರ:
ಮೋಘಮನ್ನಂ ವಿಂದತೇ ಅಪ್ರಚೇತಾಃ ಸತ್ಯಂ ಬ್ರವೀಮಿ ವಧ ಇತ್ ಸ ತಸ್ಯ |
ನಾರ್ಯಮಣಂ ಪುಷ್ಯತಿ ನೋ ಸಖಾಯಂ ಕೇವಲಾಘೋ ಭವತಿ ಕೇವಲಾದೀ || (ಋಕ್.೧೦.೧೧೭.೬.)
     'ಸೋಮಾರಿಯೂ, ಅಜ್ಞಾನಿಯೂ ಆದವನು ವ್ಯರ್ಥವಾಗಿ ಆಹಾರವನ್ನು ಪಡೆಯುತ್ತಾನೆ. ಸತ್ಯ ಹೇಳುತ್ತೇನೆ, ಅವನು ಆಹಾರದ ಕೊಲೆಗಾರನೇ ಸರಿ. ಅವನು ದೇವರ ಶಾಸನವನ್ನಾಗಲೀ, ತನ್ನ ಆಪ್ತೇಷ್ಟರನ್ನಾಗಲೀ ಬಲಗೊಳಿಸುವುದಿಲ್ಲ. ಕುಳಿತು ತಿನ್ನುವ ಸೋಮಾರಿಯೂ, ಅಜ್ಞಾನಿಯೂ ಆದ ಅವನು ಪಾಪದ ಪ್ರತೀಕ' ಎಂಬುದು ಈ ಮಂತ್ರ ಅರ್ಥ. 
     ನನ್ನ ತಮ್ಮ ತನಗೆ ಬರುವ ಉತ್ತಮ ಸಂದೇಶವಿರುವ ಮಿಂಚಂಚೆಗಳನ್ನು ಹಂಚಿಕೊಳ್ಳುತ್ತಿರುತ್ತಾನೆ. ಅಂತಹ ಒಂದು ಮಿಂಚಂಚೆಯ ವಿಷಯ ಈ ಲೇಖನಕ್ಕೆ ಪ್ರೇರಿಸಿದೆ. ಆ ಮಿಂಚಂಚೆಯಲ್ಲಿ ಅಧ್ಯಯನ ಪ್ರವಾಸಕ್ಕಾಗಿ ಜರ್ಮನಿಗೆ ಹೋಗಿದ್ದವರೊಬ್ಬರು ತಮ್ಮ ಅನಿಸಿಕೆಯನ್ನು ಹೀಗೆ ಹಂಚಿಕೊಂಡಿದ್ದರು: "ಜರ್ಮನಿ ಒಂದು ಅತ್ಯಂತ ಪ್ರತಿಷ್ಠಿತ ಕೈಗಾರಿಕಾ ದೇಶ. ಅಲ್ಲಿ ಪ್ರಪಂಚದ ಅತ್ಯುತ್ತಮ ವಾಹನಗಳೆನಿಸಿದ ಬೆಂಜ್, ಸೀಮನ್ಸ್, ಬಿಎಂಡಬ್ಲ್ಯು, ಇತ್ಯಾದಿ ತಯಾರಾಗುತ್ತವೆ. ಆ ದೇಶದ ಒಂದು ಸಣ್ಣ ಹಳ್ಳಿಯಲ್ಲಿ ಅಣು ರಿಯಾಕ್ಟರ್ ಪಂಪು ಸಿದ್ಧವಾಗುತ್ತದೆ. ಅಂತಹ ಒಂದು ದೇಶದ ಜನರು ವೈಭವೋಪೇತವಾಗಿ ಜೀವಿಸುತ್ತಾರೆಂದು ಹೆಚ್ಚಿನವರು ಭಾವಿಸುತ್ತಾರೆ. ಪ್ರವಾಸದ ಮುನ್ನ ನಾನೂ ಹಾಗೆಯೇ ಭಾವಿಸಿದ್ದೆ. ನಾನು ಹ್ಯಾಂಬರ್ಗಿಗೆ ಬಂದಿಳಿದಾಗ ನನ್ನ ಅಲ್ಲಿನ ಸಹೋದ್ಯೋಗಿಗಳು ಒಂದು ರೆಸ್ಟೋರೆಂಟಿನಲ್ಲಿ ನಮಗೆ ಸ್ವಾಗತಕ್ಕೆ ಏರ್ಪಡಿಸಿದ್ದರು. ಹೋಟೆಲ್ಲಿನ ಬಹಳಷ್ಟು ಟೇಬಲ್ಲುಗಳು ಖಾಲಿಯಿದ್ದವು. ಒಂದು ಟೇಬಲ್ಲಿನಲ್ಲಿ ಯುವಜೋಡಿ ಊಟ ಮಾಡುತ್ತಿದ್ದರು. ಆ ಟೇಬಲ್ಲಿನ ಮೇಲೆ ಕೇವಲ ಎರಡು ಆಹಾರ ಖಾದ್ಯಗಳು ಮತ್ತು ಎರಡು ಕ್ಯಾನುಗಳು ಬೀರು ಮಾತ್ರ ಇತ್ತು. ನನಗೆ ಆ ಸರಳ ಆಹಾರ ರೋಚಕವಾಗಿರುತ್ತದೆಯೇ ಮತ್ತು ಆ ಹುಡುಗಿ ಆ ಜಿಪುಣನನ್ನು ಬಿಟ್ಟು ಹೋಗದಿರುತ್ತಾಳೆಯೇ ಎಂಬ ಅನುಮಾನವಾಯಿತು. ಇನ್ನೊಂದು ಟೇಬಲ್ಲಿನಲ್ಲಿ ಕೆಲವು ಮುದುಕಿಯರು ಊಟ ಮಾಡುತ್ತಿದ್ದರು. ಮಾಣಿ ಆಹಾರ ಪದಾರ್ಥ ತಂದು ಅವರಿಗೆ ಹಂಚಿಹಾಕಿದರೆ ಅವರು ಅವರ ತಟ್ಟೆಗಳಲ್ಲಿನ ಒಂದು ಅಗುಳನ್ನೂ ಬಿಡದಂತೆ ಮುಗಿಸುತ್ತಿದ್ದರು. ನಮಗೆ ಹಸಿವಾಗಿದ್ದರಿಂದ ನಮಗಾಗಿ ಹೆಚ್ಚಿನ ಆಹಾರಕ್ಕೆ ಬೇಡಿಕೆ ಇಡಲಾಗಿತ್ತು. ಬಹುಬೇಗನೇ ನಮಗೆ ಊಟ ಸರಬರಾಜಾಯಿತು. ನಮಗೆ ಬೇರೆ ಚಟುವಟಿಕೆಗಳಿದ್ದುದರಿಂದ ಊಟದಲ್ಲಿ ಹೆಚ್ಚು ಸಮಯ ಕಳೆಯದೆ ಮುಗಿಸಿ ಎದ್ದಾಗ ನಮ್ಮ ಟೇಬಲ್ಲಿನಲ್ಲಿ ಸುಮಾರು ಮೂರನೆ ಒಂದು ಭಾಗದಷ್ಟು ಆಹಾರ ಉಳಿದಿತ್ತು. ನಾವು ಹೋಟೆಲಿನಿಂದ ಹೊರಡುತ್ತಿದ್ದಾಗ ಯಾರೋ ನಮ್ಮನ್ನು ಕರೆದಂತಾಯಿತು. ಮುದುಕಿಯರು ನಮ್ಮ ಬಗ್ಗೆ ರೆಸ್ಟೋರೆಂಟಿನ ಮಾಲಿಕನಿಗೆ ದೂರುತ್ತಿದ್ದರು. ಅವರಿಗೆ ನಾವು ಆಹಾರವನ್ನು ಪೋಲು ಮಾಡಿದ್ದಕ್ಕೆ ಅಸಮಾಧಾನವಿತ್ತು. 'ನಮ್ಮ ಊಟಕ್ಕೆ ನಾವು ದುಡ್ಡು ಕೊಟ್ಟಿದ್ದೇವೆ. ನಾವು ಎಷ್ಟು ಉಳಿಸಿದೆವು ಅನ್ನುವ ವಿಷಯ ನಿಮಗೆ ಸಂಬಂಧಿಸಿದ್ದಲ್ಲ' ಎಂಬ ನನ್ನ ಸಹೋದ್ಯೋಗಿಯ ಮಾತಿನಿಂದ ಅವರಿಗೆ ಬಹಳ ಸಿಟ್ಟು ಬಂತು. ಒಬ್ಬಾಕೆ ಕೂಡಲೇ ತನ್ನ ಫೋನಿನಿಂದ ಯಾರಿಗೋ ಕರೆ ಮಾಡಿದಳು. ಸ್ವಲ್ಪ ಹೊತ್ತಿನಲ್ಲೇ ಸಾಮಾಜಿಕ ಭದ್ರತಾ ಸಂಸ್ಥೆಯ ಯೂನಿಫಾರಂ ಧರಿಸಿದ್ದ ಒಬ್ಬ ಅಧಿಕಾರಿ ಹಾಜರಾಗಿ ವಿಷಯ ತಿಳಿದುಕೊಂಡು ನಮಗೆ ೫೦ ಮಾರ್ಕುಗಳ ದಂಡ ವಿಧಿಸಿದ. ನಾವು ಸುಮ್ಮನಿದ್ದೆವು. ಸ್ಥಳೀಯ ಸಹೋದ್ಯೋಗಿ ದಂಡ ಕಟ್ಟಿ, ಪದೇ ಪದೇ ಕ್ಷಮಾಪಣೆ ಕೋರಿದ. ಆ ಅಧಿಕಾರಿ ನಮಗೆ ಗಂಭೀರ ಧ್ವನಿಯಲ್ಲಿ ಹೇಳಿದ: 'ನೀವು ಎಷ್ಟು ತಿನ್ನುತ್ತೀರೋ ಅಷ್ಟು ಮಾತ್ರ ತರಿಸಿಕೊಳ್ಳಿ. ಹಣ ನಿಮ್ಮದು, ಆದರೆ ಸಂಪನ್ಮೂಲಗಳು ಸಮಾಜದ್ದು. ಪ್ರಪಂಚದಲ್ಲಿ ಆಹಾರ ಸಿಗದ ಎಷ್ಟೋ ಜನರಿದ್ದಾರೆ. ಅದನ್ನು ವ್ಯರ್ಥಗೊಳಿಸಲು ನಿಮಗೆ ಕಾರಣಗಳಿಲ್ಲ.'  ನಮ್ಮ ಮುಖಗಳು ಕೆಂಪಾದವು. ಈ ಶ್ರೀಮಂತ ದೇಶದ ಜನರ ಮನೋಭಾವ ನಮ್ಮನ್ನು ನಾಚಿಕೆಗೀಡುಮಾಡಿತು. ನಾವು ಅಷ್ಟೇನೂ ಶ್ರೀಮಂತವಲ್ಲದ ದೇಶದಿಂದ ಬಂದವರಾದರೂ ನಾವು ಇತರರನ್ನು ತೃಪ್ತಿಪಡಿಸಲು ಬಹಳಷ್ಟು ಆಹಾರವನ್ನು ಬಡಿಸಿ ವ್ಯರ್ಥ ಮಾಡುತ್ತಿದ್ದುದು ನೆನಪಾಯಿತು. ಈ ಘಟನೆ ನಮ್ಮ ಕೆಟ್ಟ ಅಭ್ಯಾಸಗಳನ್ನು ತಿದ್ದಿಕೊಳ್ಳಲು ಒಂದು ಪಾಠವಾಯಿತು."
     ಅಧ್ಯಯನ ಪ್ರವಾಸಕ್ಕೆ ಹೋಗಿದ್ದವರಿಗೆ ಮಾತ್ರವಲ್ಲ, ನಮ್ಮೆಲ್ಲರಿಗೂ ಇದು ಪಾಠವಾಗಬೇಕು. ಯಾವುದಾದರೂ ಮದುವೆಯೋ, ಸಮಾರಂಭವೋ ನಡೆದರೆ ಅಲ್ಲಿ ಊಟ ಮಾಡಿದ ನಂತರ ಉಂಡವರು ಎಲೆಯಲ್ಲಿ ಉಳಿಸಿಹೋದ ಆಹಾರದ ಪ್ರಮಾಣ ನೂರಾರು ಜನರ ಹಸಿವನ್ನು ಇಂಗಿಸುವಷ್ಟು ಇರುತ್ತದೆ. ಮೇಲ್ಪಂಕ್ತಿ ಹಾಕಬೇಕಾದ ಸರ್ಕಾರದ ವತಿಯಿಂದ ನಡೆಯುವ ಸಮಾರಂಭಗಳಲ್ಲೇ, ಗಣ್ಯಾತಿಗಣ್ಯರುಗಳು ಭಾಗವಹಿಸುವ ಮೇಜುವಾನಿಗಳಲ್ಲೂ ಸಹ ಈ ರೀತಿ ಆಹಾರವನ್ನು ವ್ಯರ್ಥ ಮಾಡಲಾಗುತ್ತದೆ. ಹಸಿವಿನಿಂದ ಸುಮಾರು ೫ ಮಿಲಿಯನ್ ಮಕ್ಕಳು ಪ್ರಪಂಚದಲ್ಲಿ ಪ್ರತಿವರ್ಷ ಹಸಿವಿನಿಂದ ಸಾಯುತ್ತಾರೆಂದು ಒಂದು ಅಂದಾಜಿದೆ. ಆಫ್ರಿಕಾ, ಭಾರತ, ಪಾಕಿಸ್ತಾನದಂತಹ ದೇಶಗಳ ಮಕ್ಕಳೂ ಇದರಲ್ಲಿ ಸೇರಿದ್ದಾರೆ. ಪೂರ್ಣ ತಿನ್ನದೆ ಎಂಜಲು ಮಾಡಿ ತಿಪ್ಪೆಗೆ ಚೆಲ್ಲುವ ಹೆಚ್ಚಿನ ಪದಾರ್ಥಗಳು ಉಪಯೋಗಿಸಲು ಯೋಗ್ಯವಾದ ಪದಾರ್ಥಗಳೇ ಆಗಿರುತ್ತದೆ ಎಂಬುದು ಕಠಿಣ ಸತ್ಯವಾಗಿದೆ. ಹೋಟೆಲ್ಲಿನಲ್ಲಿ ತರಿಸಿಕೊಳ್ಳುವ ತಿಂಡಿಯನ್ನು ಪೂರ್ಣ ತಿನ್ನುವವರನ್ನು ಜುಗ್ಗ, ಕಂಜೂಸ್ ಎಂಬಂತೆ ನೋಡುವುದಲ್ಲದೆ, ಶಾಸ್ತ್ರಕ್ಕೆ ತಿಂದಂತೆ ಮಾಡಿ ಉಳಿಸುವುದನ್ನೇ ದೊಡ್ಡಸ್ತಿಕೆ ಎಂದು ಭಾವಿಸುವವರ ಸಂಖ್ಯೆಗೆ ಕಡಿಮೆಯೇನಿಲ್ಲ. ಪ್ರಾಣಿಗಳು ಹಸಿವಾದಾಗ ಮಾತ್ರ ತಿನ್ನುತ್ತವೆ, ಎಷ್ಟು ಬೇಕೋ ಅಷ್ಟನ್ನು ಮಾತ್ರ ತಿನ್ನುತ್ತವೆ. ಮನುಷ್ಯರೆನಿಸಿಕೊಂಡವರು ಪ್ರಾಣಿಗಳಿಗಿಂತ ಕಡೆಯಾಗಬಾರದಲ್ಲವೇ? ಉಳಿಸಿ ಚೆಲ್ಲುವುದಕ್ಕಿಂತ ಎಷ್ಟು ಬೇಕೋ ಅಷ್ಟು ಪಡೆದು ತಿನ್ನುವುದು ಒಳ್ಳೆಯದು. ಹಣ ಗಳಿಸಬಹುದು, ಆದರೆ ಪೋಲಾದ ಆಹಾರವನ್ನು ಮತ್ತೆ ತಯಾರಿಸಲು ಸಾಧ್ಯವೇ? ಒಂದು ಅನ್ನದ ಅಗುಳಿನಲ್ಲಿ ಎಷ್ಟು ಜನರ ಶ್ರಮ ಇರುತ್ತದೆ, ಅದು ಅಕ್ಕಿಯಾಗಲು, ಅನ್ನವಾಗಲು ಎಷ್ಟು ಸಮಯ ಬೇಕು ಎಂಬುದನ್ನು ನಾವು ಯಾರಾದರೂ ಚಿಂತಿಸುತ್ತೇವೆಯೇ? ಆದರೆ ಅದನ್ನು ವ್ಯರ್ಥ ಮಾಡಲು ಸಮಯವೇ ಬೇಕಿಲ್ಲ. ಇದು ತುತ್ತು ಅನ್ನಕ್ಕೂ ಪರದಾಡುವ ಲಕ್ಷಾಂತರ ಜನರಿಗೆ ಬಗೆಯುವ ದ್ರೋಹವಲ್ಲದೆ ಮತ್ತೇನು? ಈ ರೀತಿ ವ್ಯರ್ಥವಾಗುವ ಆಹಾರದಿಂದ ಪ್ರತಿವರ್ಷ ಸುಮಾರು ೫೦೦ ಮಿಲಿಯನ್ ಜನರ ಹಸಿವನ್ನು ಇಂಗಿಸಲು ಶಕ್ಯವಿದೆ!
     ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಸುಮಾರು ೫೮೦೦೦ ಕೋಟಿ ರೂಗಳಷ್ಟು ಆಹಾರ ಪದಾರ್ಥಗಳು ಮತ್ತು ಸುಮಾರು ೪೪೦೦೦ ಕೋಟಿ ರೂ.ಗಳಷ್ಟು ತರಕಾರಿ ಮತ್ತು ಹಣ್ಣುಗಳು ಹಾಳಾಗುತ್ತಿವೆ. ಆಸ್ಟ್ರೇಲಿಯಾದಲ್ಲಿ ಬೆಳೆಯುವ ಪ್ರಮಾಣದಷ್ಟು ಗೋಧಿ ಭಾರತದಲ್ಲಿ ಹಾಳಾಗುತ್ತಿದೆಯಂತೆ! ಅವೈಜ್ಞಾನಿಕ ವ್ಯವಸಾಯ ಕ್ರಮ, ಹವಾಮಾನ ವೈಪರೀತ್ಯ, ಸಾಗಾಣಿಕೆ, ದಾಸ್ತಾನು ಮಾಡುವ ರೀತಿಗಳಿಂದ ದವಸಗಳು ಹಾಳಾಗುತ್ತಿವೆ. ಅದರ ಜೊತೆಗೆ ಮೇಲೆ ತಿಳಿಸಿದ ಅಪೂರ್ಣ ಬಳಕೆಯ ಕಾರಣದಿಂದಲೂ ಅಪಾರ ಹಾನಿಯಾಗುತ್ತಿದೆ. ಖಾಸಗಿ ಗೋಡೌನುಗಳಿರಲಿ, ಸರ್ಕಾರದ ಗೋಡೌನುಗಳಲ್ಲಿಯೇ ಲಕ್ಷಾಂತರ ಟನ್ನುಗಳಷ್ಟು ದವಸ ಧಾನ್ಯಗಳು ಕೊಳೆತುಹೋಗುತ್ತವೆ. 'ಅನ್ನಭಾಗ್ಯ' ಯೋಜನೆಗಾಗಿ ಕರ್ನಾಟಕ ಸರ್ಕಾರ ನವೆಂಬರ್, 2013ರಿಂದ ಫೆಬ್ರವರಿ, 2014ರವರೆಗಿನ 4 ತಿಂಗಳ ಅವಧಿಯಲ್ಲಿ ಮಿಲ್ಲುಗಳ ಮಾಲಿಕರಿಂದ ಒತ್ತಾಯವಾಗಿ 1.61 ಲಕ್ಷ ಟನ್ ಅಕ್ಕಿಯನ್ನು ಸಂಗ್ರಹಿಸಿತು. ಇದರಲ್ಲಿ ಬಹುತೇಕ ಅಕ್ಕಿ ಹಾಳಾದ ಸ್ಥಿತಿಯಲ್ಲಿತ್ತು. ಅದರಲ್ಲೇ 93000 ಟನ್ ಅಕ್ಕಿಯನ್ನು ಜನರಿಗೆ ವಿತರಣೆ ಮಾಡಲಾಯಿತು. ವಿತರಿಸಲು ಸಾಧ್ಯವೇ ಇಲ್ಲದಷ್ಟು ಹಾಳಾದ 63000 ಟನ್ ಅಕ್ಕಿಯನ್ನು ವಿತರಿಸಲಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ, ಅಂದರೆ ಸಾರ್ವಜನಿಕರಿಗೆ ಸೇರಿದ, ಸುಮಾರು 200 ಕೋಟಿ ರೂ. ಹಣ ನಷ್ಟವಾಯಿತು. ವಿಪರ್ಯಾಸವೆಂದರೆ ಸರ್ಕಾರ ಮಿಲ್ ಮಾಲಿಕರಿಗೆ ಪೂರ್ಣ ಹಣ ಪಾವತಿಸಿತು. ಈ ನಷ್ಟದ ವಿರುದ್ಧ ಸರ್ಕಾರವಾಗಲೀ, ವಿರೋಧ ಪಕ್ಷವಾಗಲೀ, ಮಾಧ್ಯಮಗಳಾಗಲೀ ತಲೆ ಕೆಡಿಸಿಕೊಳ್ಳಲಿಲ್ಲ.  ಮಾಧ್ಯಮಗಳಂತೂ ಜನರನ್ನು ಕೆಣುಕುವಂತಹ ವಿಕೃತ ವಿಷಯಗಳಿಗೆ ಸಂಬಂಧಿಸಿದಂತೆ ಮಾತ್ರ ವಾರಗಟ್ಟಲೆ ಸುದ್ದಿ, ಚರ್ಚೆಗಳನ್ನು ಏರ್ಪಡಿಸುತ್ತಿರುತ್ತದೆ. ಇದು ಅವುಗಳಿಗೆ ಮಹತ್ವದ ಸಂಗತಿಯೇ ಆಗಲಿಲ್ಲ. ಲಾಭ ಪಡೆಯುವ ಸಲುವಾಗಿ ದವಸ ಧಾನ್ಯಗಳನ್ನು ಅಕ್ರಮವಾಗಿ ಕಳ್ಳ ದಾಸ್ತಾನು ಶೇಖರಿಸಿಡುವುದನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮ ಅನುಸರಿಸಬೇಕಿದೆ. ಇನ್ನೇನು ಹಾಳಾಗುತ್ತದೆ ಎಂಬ ಹಂತದಲ್ಲಿ ಮಾತ್ರ ಅವು ಹೊರಗೆ ಬರುತ್ತವೆ. ಆಹಾರ ಪದಾರ್ಥಗಳ ನಷ್ಟದ ಕಾರಣದಿಂದಲೇ ದೇಶ ಮತ್ತು ಸಮಾಜ ದೊಡ್ಡ ಆರ್ಥಿಕ ಹಿನ್ನಡೆ ಅನುಭವಿಸುತ್ತಿದೆ. ಆಹಾರ ಪದಾರ್ಥಗಳ ನಷ್ಟ ತಡೆಯುವಲ್ಲಿ ಜಪಾನ್ ಉತ್ತಮ ಆಡಳಿತಾತ್ಮಕ ಕ್ರಮ ಕೈಗೊಂಡಿದೆಯೆನ್ನಬಹುದು. ಕಂಟೈನರುಗಳು, ಪ್ಯಾಕೇಜುಗಳ ಬಗ್ಗೆ, ಆಹಾರದ ತ್ಯಾಜ್ಯದ ಮರುಬಳಕೆ ಬಗ್ಗೆ, ಆಹಾರದ ನಷ್ಟ ತಡೆಯವ ದಿಸೆಯಲ್ಲಿನ ಹಲವಾರು ಸಂಗತಿಗಳ ಬಗ್ಗೆ ಅಲ್ಲಿ ಕಾಯದೆ, ಕಾನೂನುಗಳು ಇವೆ. ಜೊತೆಗೆ ಅಲ್ಲಿನ ನಾಗರಿಕರೂ ತಮ್ಮ ನಾಗರಿಕ ಪ್ರಜ್ಞೆಯಿಂದ ಈ ದಿಸೆಯಲ್ಲಿ ನೆರವಾಗಿದ್ದಾರೆ. ನಮ್ಮಲ್ಲೂ ಈ ಬಗ್ಗೆ ಜನಜಾಗೃತಿ ಮೂಡಿಸಬೇಕು. ನಷ್ಟ ತಡೆಯುವುದರೊಂದಿಗೆ ಮರುಬಳಕೆಗೆ ಮತ್ತು ಪರಿಸರ ಸ್ನೇಹಿ ಬಳಕೆಗೆ ತ್ಯಾಜ್ಯಗಳನ್ನು ಬಳಸುವ ಬಗ್ಗೆ ಕಾನೂನು-ಕಟ್ಟಳೆಗಳನ್ನು ಮಾಡಿ ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಬೇಕು. ಆಹಾರ ಪದಾರ್ಥಗಳು, ತರಕಾರಿಗಳು ಕೆಡದಂತೆ ದಾಸ್ತಾನು ಇಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಆಹಾರದ ಸದ್ಬಳಕೆ ಮತ್ತು ಪೋಲು ಮಾಡದಿರುವ ಕುರಿತು ಶಾಲಾ ಪಠ್ಯಪುಸ್ತಕಗಳಲ್ಲಿ ಮಕ್ಕಳಿಗೆ ತಿಳುವಳಿಕೆ ನೀಡುವ ವಿಷಯ ಅಳವಡಿಸಬೇಕು.
           ಮದುವೆ ಮೊದಲಾದ ಸಂದರ್ಭಗಳಲ್ಲಿ ಆಹ್ವಾನಿಸಿದಷ್ಟು ಸಂಖ್ಯೆಯಲ್ಲಿ ಜನರು ಬರದಿದ್ದಾಗ ತಯಾರಾದ ಆಹಾರ ಪದಾರ್ಥಗಳು ಉಳಿದುಬಿಡುತ್ತವೆ. ಇಂತಹ ಸಂದರ್ಭಗಳಲ್ಲಿ ಅದು ವ್ಯರ್ಥವಾಗದಂತೆ ನೋಡಿಕೊಂಡಲ್ಲಿ ಅದು ಸಾಧನೆಯೇ ಸರಿ. ಅದನ್ನು ತ್ವರಿತವಾಗಿ ಅಂದೇ ವಿಲೇವಾರಿ ಮಾಡದಿದ್ದಲ್ಲಿ ತಿಪ್ಪೆಗೆ ಸೇರಿ ಸಾಮಾಜಿಕ ನಷ್ಟವಾಗುತ್ತದೆ. ನಗರಗಳಲ್ಲಿ ಸ್ವಯಂಸೇವಾಸಂಸ್ಥೆಗಳು ಕಲ್ಯಾಣ ಮಂಟಪಗಳು, ಪಾರ್ಟಿ ಹಾಲುಗಳಲ್ಲಿ ಉಳಿಯುವ ಇಂತಹ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅವಶ್ಯಕತೆ ಇರುವವರಿಗೆ ತಲುಪಿಸುವ ಕೆಲಸ ಮಾಡಬಹುದು, ಅರ್ಥಾತ್ ಬಡವರು ಮತ್ತು ಅಗತ್ಯವಿರುವವರಿಗಾಗಿ ಒಂದು ಆಹಾರ ಬ್ಯಾಂಕ್ ಸ್ಥಾಪಿಸುವ ಯೋಜನೆ ಮಾಡಬಹುದು. ಕನಿಷ್ಠ ಪಕ್ಷ ಒಂದು ಸಂಚಾರಿ ಕ್ಯಾಂಟೀನ್ ಇಟ್ಟು ರಿಯಾಯಿತಿ ದರಗಳಲ್ಲಿ ಮಾರಿದರೂ ತಪ್ಪಾಗುವುದಿಲ್ಲ. ಸೌದಿಯಲ್ಲಿ ಒಬ್ಬ ಸಹೃದಯಿ ತನ್ನ ಮನೆ ಪಕ್ಕದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಒಂದು ದೊಡ್ಡ ರೆಫ್ರಿಜರೇಟರ್ ಇಟ್ಟು ಅದರಲ್ಲಿ ಉಪಯೋಗಿಸಿ ಉಳಿದ ಆಹಾರ ಪದಾರ್ಥಗಳನ್ನು ಆತ ಮತ್ತು ಆತನ ಸ್ನೇಹಿತರು ಇಡುತ್ತಾರಂತೆ. ಅಗತ್ಯವಿರುವವರು ಯಾರು ಬೇಕಾದರೂ ನೇರವಾಗಿ ಇದನ್ನು ತೆಗೆದುಕೊಳ್ಳಬಹುದಂತೆ. ಭಿಕ್ಷೆ ಬೇಡುವ ಹೀನಾಯ ಸ್ಥಿತಿಯಿಂದ ತಪ್ಪಿಸುವ ಈ ಕೆಲಸ ಅಭಿನಂದನೀಯವಾಗಿದೆ ಮತ್ತು ಅನುಕರಣೀಯವಾಗಿದೆ. ಸಮಾರಂಭಗಳಲ್ಲಿ ಊಟಕ್ಕೆ ಹಾಕಿಸಿಕೊಂಡು ಉಳಿಸುವ ಆಹಾರ ಪದಾರ್ಥಗಳನ್ನು ತಿಪ್ಪೆಗೆ ಸುರಿದಾಗ ಭಿಕ್ಷುಕರು, ನಾಯಿಗಳು ಅದಕ್ಕಾಗಿ ಕಿತ್ತಾಡುವ ದೃಷ್ಯ ನೋಡಿಯಾದರೂ ನಾವು ಬದಲಾಗಬೇಕು. ತಿನ್ನೋಣ, ಎಷ್ಟು ಬೇಕೋ ಅಷ್ಟನ್ನು ಮಾತ್ರ ಹಾಕಿಸಿಕೊಂಡು ತಿನ್ನೋಣ. ಉಳಿದರೆ ಅದು ಇನ್ನೊಬ್ಬರ ಹಸಿವು ಹಿಂಗಿಸಲು ಸಹಕಾರಿ ಆಗುತ್ತದೆ ಎಂಬುದನ್ನು ಮರೆಯದಿರೋಣ. ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ ಎಂದು ಬೊಬ್ಬಿರಿಯುವ ನಾವು ಅದೇ ಆಹಾರ ಪದಾರ್ಥಗಳನ್ನು ಹೀಗೆ ಬೇಕಾಬಿಟ್ಟಿ ವ್ಯರ್ಥ ಮಾಡದಿದ್ದರೆ ಸಹಜವಾಗಿ ಅದು ಬೆಲೆ ನಿಯಂತ್ರಣಕ್ಕೂ ಸಹಕಾರಿಯಾಗುತ್ತದೆ. ಬೆಲೆ ಏರಿಕೆ ಮತ್ತಷ್ಟು ಜನರನ್ನು ಬಡತನಕ್ಕೆ ದೂಡುತ್ತದೆ ಎಂಬುದನ್ನು ಮರೆಯದಿರೋಣ. ನೆರೆಯ ಚೀನಾದಲ್ಲಿ ಅಂತರ್ಜಾಲಿಗರು ಒಂದು ಆಂದೋಳನ ಪ್ರಾರಂಭಿಸಿದ್ದಾರೆ, ಅದೆಂದರೆ ಸಮಾರಂಭಗಳಲ್ಲಿ, ಹೋಟೆಲುಗಳಲ್ಲಿ ತಿನ್ನದೆ ಉಳಿಸುವ ಆಹಾರವನ್ನು ಮನೆಗೆ ಕೊಂಡೊಯ್ದು ಉಪಯೋಗಿಸಲು ಪ್ರೇರಿಸುವುದು. ಇಲ್ಲೂ ಸಹ ಇಂತಹ ಆಂದೋಳನದ ಅಗತ್ಯವಿದೆ.
     ೧೯೭೩ರಲ್ಲಿ ಬರ ಪರಿಸ್ಥಿತಿ ಎದುರಾದಾಗ ಕರ್ನಾಟಕದ ಹಲವೆಡೆ ಜನರು ಆಹಾರಕ್ಕಾಗಿ ಹಪಹಪಿಸಿ ಅಂಗಡಿ, ಸೊಸೈಟಿಗಳನ್ನು ಲೂಟಿ ಮಾಡಿ ದವಸ ಧಾನ್ಯಗಳನ್ನು ಹೊತ್ತೊಯ್ದಿದ್ದರು. ದೇಶದ ಜನಸಂಖ್ಯೆ ಏರುತ್ತಲೇ ಇದೆ. ಆಹಾರದ ಅಗತ್ಯತೆ ಕೂಡಾ ಹೆಚ್ಚುತ್ತಿದೆ. ಆದರೆ ಆಹಾರ ಬೆಳೆಯುವ ಭೂಮಿ ಕಡಿಮೆಯಾಗುತ್ತಿದೆ. ಜಮೀನುಗಳಲ್ಲಿ ಕಟ್ಟಡಗಳು ತಲೆಯೆತ್ತುತ್ತಿವೆ. ಈ ಅಸಮತೋಲನದಿಂದ ಮುಂದೊಮ್ಮೆ ವಿಪ್ಲವ ಜರುಗಿದರೂ ಆಶ್ಚರ್ಯವಿಲ್ಲ. ಇದರ ಮುನ್ನರಿವಿನಿಂದ ಸರ್ಕಾರ ಮತ್ತು ಜನಗಳು ಎಚ್ಚೆತ್ತುಕೊಂಡು ಸಮತೋಲನ ಕಾಯ್ದುಕೊಳ್ಳಲಾದರೂ ಆಹಾರದ ದುರ್ಬಳಕೆ, ದುರ್ವಿನಿಯೋಗ ಮತ್ತು ಹಾಳಾಗುವುದನ್ನು ತಡೆಯಲು ಮನಸ್ಸು ಮಾಡಬೇಕಿದೆ. 
     ಭೂಮಿಯನ್ನು ಜೀವಿಸಲು ಉತ್ತಮ ಸ್ಥಳವೆಂದು ಅನ್ನಿಸಲು ಆಹಾರದ ಸದ್ಬಳಕೆ ಅನಿವಾರ್ಯವಾಗಿದೆ. ಹೆಚ್ಚು ವಿಸ್ತರಿಸದೆ ಮುಗಿಸಿಬಿಡೋಣ. ಏಕೆಂದರೆ ಅಹಾರ ವ್ಯರ್ಥ ಮಾಡುವುದರಿಂದ ಆಗುವ ಕೆಡುಕುಗಳ ಬಗ್ಗೆ ಹೇಳಿಯಾಗಿದೆ. ಬೇರೆಯವರು ಏನು ಮಾಡುತ್ತಾರೆ, ಏನು ಹೇಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳದೆ ಉತ್ತಮ ನಾಗರಿಕರಾಗಿ ವೈಯುಕ್ತಿಕವಾಗಿ ನಾವು ಮೊದಲು ಈ ದಿಸೆಯಲ್ಲಿ ಮುಂದುವರೆಯಬೇಕಿದೆ. 'ಕೊಳ್ಳೋಣ, ತಿನ್ನೋಣ ಮತ್ತು ವ್ಯರ್ಥ ಮಾಡೋಣ' ಎಂಬ ನಮ್ಮ ರೂಢಿಗತ ಪ್ರವೃತ್ತಿಯನ್ನು  'ಅಗತ್ಯವಿರುವಷ್ಟು ಮಾತ್ರ ಕೊಳ್ಳೋಣ ಮತ್ತು ಅಗತ್ಯವಿರುವಷ್ಟೇ ತಿನ್ನೋಣ' ಎಂಬುದಕ್ಕೆ ಬದಲಾಯಿಸಿಕೊಳ್ಳಬೇಕಿದೆ. ತುತ್ತು ಬಾಯಿಗಿಡುವ ಮುನ್ನ ಈ ವಿಚಾರ ನಮ್ಮ ತಲೆಗೆ ಬಂದರೆ ಆಹಾರ ನಮಗೆ ಅಮೃತವಾಗಿ ಕಂಡೀತು, ಅಮೂಲ್ಯವೆನಿಸೀತು!
-ಕ.ವೆಂ.ನಾಗರಾಜ್.
***************


ದಿ.18.8.2014ರ ಜನಹಿತ ಪತ್ರಿಕೆಯ 'ಜನಕಲ್ಯಾಣ' ಅಂಕಣದಲ್ಲಿ ಪ್ರಕಟಿತವಾಗಿದೆ.