ಎಂದಿನಂತೆ ಫೇಸ್ ಬುಕ್ ತೆರೆದಾಗ ಯುವಬರಹಗಾರ್ತಿಯೊಬ್ಬರ ಕವನ ಗಮನ ಸೆಳೆಯಿತು. ಕವನಕ್ಕೆ ಲೈಕುಗಳ ಮೇಲೆ ಲೈಕುಗಳಿದ್ದವು. ವಾವ್, ಸೂಪರ್, ವಂಡರ್ ಫುಲ್, ಕೀಪಿಟಪ್, ನೀನು ಎಷ್ಟು ಚೆನ್ನಾಗಿ ಬರೆದಿದ್ದೀಯಾ!, ಮುಂದುವರೆಸು, ಎಂಬಂತಹ ಹಲವಾರು ಮೆಚ್ಚುಗೆಯ ಪ್ರತಿಕ್ರಿಯೆಗಳಿದ್ದವು. ಅದನ್ನು ನೋಡಿದವನು ನನ್ನ ಪುಟವನ್ನು ತೆರೆದು ನೋಡಿದೆ. ಅದೇ ಕವನ ಈಕೆಯ ಕವನ ಪ್ರಕಟವಾಗುವುದಕ್ಕಿಂತ ಕೆಲವು ದಿನಗಳ ಮೊದಲೇ ನನ್ನ ಹೆಸರಿನಲ್ಲಿ ಪ್ರಕಟವಾಗಿತ್ತು. ಕೇವಲ ನಾಲ್ಕೈದು ಲೈಕುಗಳಿದ್ದವು. ಮತ್ತೊಮ್ಮೆ ಆ ಬರಹಗಾರ್ತಿಯ ಪುಟ ವೀಕ್ಷಿಸಿದೆ. ನನ್ನ ಪುಟದ ಕವನದಲ್ಲಿದ್ದ ಸಣ್ಣ ಬೆರಳಚ್ಚಿನ ದೋಷ ಸಹ ಯಥಾವತ್ ಅಲ್ಲಿತ್ತು. ಅರ್ಥವಾಯಿತಲ್ಲವೇ? ನಾನು ನನ್ನ ಪ್ರತಿಕ್ರಿಯೆ ದಾಖಲಿಸಿದೆ, "ತುಂಬಾ ಚೆನ್ನಾಗಿದೆ. ಆಶ್ಚರ್ಯವೆಂದರೆ ನಿಮ್ಮ ಕವನ ಪ್ರಕಟವಾಗುವ ನಾಲ್ಕು ದಿನಗಳ ಮೊದಲೇ ನಾನು ಪ್ರಕಟಿಸಿದ ಕವನ ಸಹ ಒಂದಕ್ಷರವೂ ಬದಲಾವಣೆಯಾಗದೆ ಹೀಗೆಯೇ ಮೂಡಿಬಂದಿದೆ. ಇಬ್ಬರ ವಿಚಾರವೂ ಒಂದೇ ರೀತಿ ಇದೆ. ಗೊತ್ತಿಲ್ಲದವರು ಕೃತಿಚೌರ್ಯವೆಂದುಬಿಡುತ್ತಾರೆ. ನಿಮ್ಮ ಮುಂದಿನ ಕವನ ಪ್ರಕಟಿಸುವ ಮುನ್ನ ದಯವಿಟ್ಟು ಹುಷಾರಾಗಿರಿ. ಆ ಕವನವನ್ನೂ ಸಹ ನಾನೋ ಅಥವ ನನ್ನಂತಹವರು ಇನ್ನು ಯಾರೋ ಮೊದಲೇ ಪ್ರಕಟಿಸಿಬಿಟ್ಟಿರುವ ಸಾಧ್ಯತೆ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಪ್ರಕಟಿಸಿ. ಶುಭವಾಗಲಿ". ಸುಮಾರು ಅರ್ಧ ಗಂಟೆಯ ನಂತರದಲ್ಲಿ ನೋಡಿದರೆ ನನ್ನ ಪ್ರತಿಕ್ರಿಯೆ ಡಿಲೀಟ್ ಆಗಿತ್ತು. ನಾನೂ ನನ್ನ ಗೆಳೆಯರ ಪಟ್ಟಿಯಿಂದ ಆ ಬರಹಗಾರ್ತಿಯ ಹೆಸರನ್ನು ಡಿಲೀಟ್ ಮಾಡಿದೆ. ನಂತರದ ಬೆಳವಣಿಗೆಯಲ್ಲಿ ಆಕೆ ಕ್ಷಮೆ ಕೋರಿ ಸಂದೇಶ ಕಳುಹಿಸಿದ್ದಳು. ವಿಷಯ ಮುಕ್ತಾಯವಾಯಿತು.
ಅಸ್ತೇಯದ -ಅಂದರೆ ಕದಿಯದಿರುವುದರ- ಬಗ್ಗೆ ಬರೆಯಬೇಕೆಂದುಕೊಂಡವನಿಗೆ ಮೇಲಿನ ವಿಷಯದಿಂದಲೇ ಬರವಣಿಗೆ ಪ್ರಾರಂಭಿಸಲು ಅನುಕೂಲವಾಯಿತು. ಕದಿಯದಿರುವುದು ಎಂಬುದರಲ್ಲೇ ಅಸ್ತೇಯದ ಅರ್ಥ ಅಡಗಿದೆ. ಸ್ವಾಮಿ ಶಿವಾನಂದರು ಹೇಳುತ್ತಾರೆ, 'ಆಸೆಯೇ ಕಳ್ಳತನದ ಮೂಲ'! ಆಸೆ ದುಃಖಕ್ಕೆ ಮೂಲವೆಂಬುದು ಬುದ್ಧವಾಣಿ. ಇದೇ ಆಸೆಯೇ ಕಳ್ಳತನವೂ ಸೇರಿದಂತೆ ಹಲವು ದುಷ್ಟಸಂಗತಿಗಳಿಗೆ ಮತ್ತು ಆ ಮೂಲಕ ನಮ್ಮ ಕಷ್ಟಪರಂಪರೆಗಳಿಗೆ ಮೂಲವೆನ್ನಬಹುದು. ಕಳ್ಳತನಕ್ಕೆ ಸಂಬಂಧಿಸಿದಂತೆ ಗಾಂಧೀಜಿಯವರ ಬಾಲ್ಯದ ಘಟನೆಗಳನ್ನು ಇಲ್ಲಿ ಉಲ್ಲೇಖಿಸಬಹುದು. ಚಿಕ್ಕಂದಿನಲ್ಲಿ ಸಿಗರೇಟು ಸೇದಿ ಅಲೆ ಅಲೆಯಾಗಿ ಹೊಗೆ ಬಿಡುವುದನ್ನು ಕಂಡು ಆಕರ್ಷಿತರಾದ ಗಾಂಧಿ ಮತ್ತು ಆತನ ಗೆಳೆಯ ಮೊದಮೊದಲು ಸೇದಿ ಬಿಸಾಕಿದ ಸಿಗರೇಟು ತುಂಡುಗಳನ್ನು ಆಯ್ದು ಸೇದಿ ಹೊಗೆ ಬಿಡಲು ಪ್ರಯತ್ನಿಸಿದ್ದರು. ಆ ತುಂಡುಗಳಿಂದ ಅವರಿಗೆ ಮಜ ಸಿಗಲಿಲ್ಲ. ಅದಕ್ಕಾಗಿ ಅವರು ಮನೆಯ ಆಳಿನ ಜೇಬಿನಿಂದ ಕೆಲವು ಕಾಸುಗಳನ್ನು ಎಗರಿಸಿ ಸಿಗರೇಟು ಸೇದಿದ್ದರು. ಆದರೆ ಸಿಗರೇಟನ್ನು ಸೇದಲು ದುಡ್ಡನ್ನು ಹಿರಿಯರಿಂದ ಕೇಳುವಂತಿಲ್ಲ, ಅವರಿಗೆ ಕಾಣುವಂತೆ ಸೇದುವಂತಿಲ್ಲ. ಸೇದುವ ಆಸೆಯನ್ನೂ ಹತ್ತಿಕ್ಕುವಂತಿಲ್ಲ. ಹೀಗಾಗಿ ಬೇಸರವೆನಿಸಿ ದತ್ತೂರದ ಬೀಜಗಳನ್ನು ತಿಂದು ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸು ಮಾಡಿದ್ದರಂತೆ. ಆದರೆ ಧೈರ್ಯ ಸಾಲದೆ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವವರೆಗೂ ಮನಸ್ಸು ಮಾಡಿಸಿದ್ದ ಆ ಸಿಗರೇಟು ಸೇವನೆಯಿಂದ ದೂರವಿರಲು ನಿರ್ಧರಿಸಿ, ತುಂಡು ಸಿಗರೇಟುಗಳನ್ನು ಆಯುವುದು, ಕಾಸು ಕದಿಯುವುದನ್ನು ಆಗಿನಿಂದ ನಿಲ್ಲಿಸಿದ್ದರು. ಧೂಮಪಾನ ಕೆಟ್ಟದ್ದು, ಅಪಾಯಕಾರಿ ಎಂಬ ತೀರ್ಮಾನಕ್ಕೆ ಅವರು ಬಂದಿದ್ದರು.
ಗಾಂಧಿ ಸುಮಾರು ೧೨ ವರ್ಷದವರಿದ್ದಾಗ ಮೇಲಿನ ಘಟನೆ ನಡೆದಿದ್ದರೆ, ಇನ್ನೊಂದು ಗಂಭೀರವಾದ ಘಟನೆ ಅವರು ೧೫ ವರ್ಷದವರಿದ್ದಾಗ ನಡೆದದ್ದು. ಹಣದ ಅಗತ್ಯವಿದ್ದುದರಿಂದ ತನ್ನ ಅಣ್ಣನ ಚಿನ್ನದ ತೋಳುಬಂದಿಯಿಂದ ಒಂದು ಚೂರು ಚಿನ್ನವನ್ನು ಅವರು ಕಳ್ಳತನ ಮಾಡಿದ್ದರು. ಆದರೆ ಈ ಕಳ್ಳತನದ ಬಗ್ಗೆ ಅವರ ಮನಸ್ಸಿನಲ್ಲಿ ದೊಡ್ಡ ಆಂದೋಲನ ಏರ್ಪಟ್ಟು ಮುಂದೆ ಕದಿಯದಿರಲು ನಿರ್ಧರಿಸಿದ್ದಲ್ಲದೆ ಪಶ್ಚಾತ್ತಾಪದಿಂದ ನೊಂದು ತಂದೆಯವರಿಗೆ ಘಟನೆಯ ವಿವರಗಳಿರುವ ಪತ್ರ ಬರೆದು ತಮ್ಮ ತಪ್ಪಿಗೆ ಶಿಕ್ಷೆ ಕೊಡಬೇಕೆಂದೂ, ಇನ್ನುಮುಂದೆ ಹೀಗೆ ಮಾಡುವುದಿಲ್ಲವೆಂದೂ ತಿಳಿಸಿ ಸ್ವತಃ ತಂದೆಯವರಿಗೆ ಪತ್ರ ಕೊಟ್ಟು ತಲೆ ತಗ್ಗಿಸಿ ನಿಂತಿದ್ದರು. ಫಿಸ್ತುಲದಿಂದ ನರಳುತ್ತಿದ್ದ ತಂದೆ ಹಾಸಿಗೆಯಲ್ಲಿ ಮಲಗಿದ್ದವರು ಪತ್ರ ಓದಲು ಎದ್ದು ಕುಳಿತಿದ್ದರು. ತಂದೆಯ ಕೋಪವನ್ನು ನಿರೀಕ್ಷಿಸಿದ್ದ ಗಾಂಧಿಗೆ ಅದಕ್ಕೆ ಬದಲಾಗಿ ಅವರು ಪತ್ರ ಓದಿದ ನಂತರ ಕಣ್ಣು ಮುಚ್ಚಿ ಒಂದು ನಿಮಿಷ ಕುಳಿತಿದ್ದು, ನಂತರ ಆ ಪತ್ರವನ್ನು ಚೂರು ಚೂರಾಗಿ ಹರಿದು ಹಾಕಿದ್ದರು ಮತ್ತು ಮತ್ತೆ ಹಾಸಿಗೆಯ ಮೇಲೆ ಮಲಗಿ ಕಣ್ಣೀರು ಸುರಿಸಿದ್ದರು. ಏನೂ ಮಾತಾಡಿರಲಿಲ್ಲ. ಗಾಂಧಿ ಸಹ ಕಣ್ಣೀರು ಸುರಿಸಿದ್ದರು. ತಂದೆಯ ಕಣ್ಣೀರ ಹನಿಗಳು ಮಗನ ಹೃದಯವನ್ನು ಶುದ್ಧಿಗೊಳಿಸಿದ್ದವು. ಅಹಿಂಸೆ ಮತ್ತು ಅಸ್ತೇಯದ ಮಹತ್ವ ಗಾಂಧಿಗೆ ಮನವರಿಕೆಯಾಗಿದ್ದು ಆಗಲೇ!
ಅಸ್ತೇಯದ ಕಲ್ಪನೆಗೆ ಬಲ ಬರಬೇಕೆಂದರೆ ಪ್ರಾಮಾಣಿಕ ರೀತಿಯಲ್ಲಿ ಗಳಿಸಿದ್ದರಲ್ಲಿ ತೃಪ್ತಿಪಟ್ಟುಕೊಳ್ಳಬೇಕು. ನಮಗೆ ಇಲ್ಲದುದು ಅವರಲ್ಲಿ ಇದೆ ಎಂಬ ಬಗ್ಗೆಯೇ ಮನಸ್ಸನ್ನು ಹರಿಬಿಟ್ಟರೆ, ನಮ್ಮದಲ್ಲದುದನ್ನು ತೆಗೆದುಕೊಳ್ಳುವುದನ್ನು ಮನಸ್ಸು ಸ್ವೀಕರಿಸುತ್ತದೆ ಮತ್ತು ಅದು ಕಳ್ಳತನಕ್ಕೆ ಎಡೆ ಮಾಡಿಕೊಡುತ್ತದೆ. 'ಅವನಿಗೆ ಅಷ್ಟೊಂದು ಇದೆ, ಅದರಲ್ಲಿ ಸ್ವಲ್ಪ ತೆಗೆದುಕೊಂಡರೆ ಅವನಿಗೇನೂ ನಷ್ಟವಾಗುವುದಿಲ್ಲ'ವೆಂದುಕೊಂಡರೆ, ನಾವು ನಮಗೇ ಕದಿಯಲು ಅನುಮತಿಸಿದಂತೆ ಆಗುತ್ತದೆ. ಕ್ರಮೇಣ ಇದು ಅಭ್ಯಾಸವಾಗಿ ಇಂತಹ ಸಂಗತಿಗಳು ತಪ್ಪು ಎಂದು ಅನ್ನಿಸುವುದೇ ಇಲ್ಲ. ನಾವು ಕೇಳಿರುವ ಹಾಸ್ಯ ಚಟಾಕಿಯೊಂದನ್ನು ಉದಾಹರಿಸುವೆ. ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಹುಡುಗನೊಬ್ಬ ಸಹಪಾಠಿಯೊಬ್ಬನ ನೋಟ್ ಪುಸ್ತಕ ಕದ್ದಿದ್ದುದನ್ನು ಗಮನಿಸಿದ ತಾಯಿ ಮಗನನ್ನು ಗದರಿಸಿದ್ದಲ್ಲದೆ ತಂದೆಯ ಗಮನಕ್ಕೂ ತರುತ್ತಾಳೆ. ಆ ತಂದೆ ಹೇಳುತ್ತಾನೆ, "ಆ ಪುಸ್ತಕ ಕದಿಯುವುದಕ್ಕೆ ಏಕೆ ಹೋದೆ? ಕಳ್ಳತನ ಮಾಡುವುದು ತಪ್ಪು ಮಗು. ನನಗೇ ಹೇಳಿದ್ದರೆ ನಾನೇ ಆಫೀಸಿನಿಂದ ಬೇಕಾದಷ್ಟು ಕಾಗದ ತಂದುಕೊಡುತ್ತಿರಲಿಲ್ಲವೇ?" ಇಂತಹುದನ್ನು ತಪ್ಪು ಎಂದು ಭಾವಿಸದಷ್ಟು ನಮ್ಮ ಮನಸ್ಸು ತಿದ್ದಲ್ಪಟ್ಟಿರುತ್ತದೆ.
ಅಗತ್ಯಕ್ಕಿಂತ ಹೆಚ್ಚು ಹೊಂದುವುದೂ, ಅದು ಆಹಾರವಾಗಿರಬಹುದು, ಹಣವಾಗಿರಬಹುದು, ಆಸ್ತಿಯಾಗಿರಬಹುದು, ಒಂದು ರೀತಿಯ ಸ್ತೇಯವಾಗುತ್ತದೆ ಎಂಬುದು ಜ್ಞಾನಿಗಳ ಮಾತು. ನಮಗೆ, ನಮ್ಮ ಕುಟುಂಬದವರಿಗೆ ಎಷ್ಟು ಬೇಕು, ಏನು ಬೇಕು ಎಂದು ನಿರ್ಧರಿಸಿ ಅದಕ್ಕೆ ತಕ್ಕಷ್ಟು ಹೊಂದುವುದು ವಿವೇಕವಾದುದು ಎಂಬುದೂ ಅವರದೇ ವಿವೇಕದ ನುಡಿಗಳು. ಕಲಿತ ಜ್ಞಾನವನ್ನು ಇತರರಿಗೆ ಹಂಚದಿದ್ದರೆ ಅದೂ ಕಳ್ಳತನದಂತೆ ಎಂದು ಶತಾಯು ಪಂ. ಸುಧಾಕರ ಚತುರ್ವೇದಿಯವರು ಹೇಳುತ್ತಿರುತ್ತಾರೆ. ಇಂತಹ ಮಾತುಗಳು ರುಚಿಸುವುದು ಕಷ್ಟವೇ. ನಮ್ಮ ನಾಯಕರನ್ನೇ ನೋಡಿ, ಕೋಟಿ ಕೋಟಿ ಸಾರ್ವಜನಿಕರ ಹಣವನ್ನು ಬಾಚಿಕೊಂಡರೂ ಅವರುಗಳಿಗೆ ತೃಪ್ತಿ ಸಿಗುತ್ತದೆಯೇ? ಅಂತಹ ನುಂಗಣ್ಣರಿಗೆ ಅಸ್ತೇಯದ ಪಾಠ ಹೇಳಿದರೆ ಕೇಳುತ್ತಾರೆಯೇ? ಹೋಗಲಿ ಬಿಡಿ, ಏಕೆಂದರೆ ಅಂತಹವರನ್ನು ನಮ್ಮ ಪ್ರತಿನಿಧಿಗಳೆಂದು ಆರಿಸಿರುವವರು ನಾವೇ ಅಲ್ಲವೇ?
ಕದಿಯದಿರುವುದು ಎಂಬುದು ಅತ್ಯಂತ ಸರಳ, ಆದರೆ ಪಾಲಿಸಲು ಬಹಳ ಕಷ್ಟವಾದ ಜೀವನದ ನಿಯಮ. ಪಾಲಿಸುವವರು ಶ್ರೇಷ್ಠರು, ಸಾಧಕರೇ ಸರಿ. ಅಸ್ತೇಯದಲ್ಲಿ ಮೂರು ವಿಧಗಳಿವೆ - ಕಾಯಾ, ವಾಚಾ, ಮನಸಾ. ಕಾಯಾ ಅಥವ ಭೌತಿಕ ಅಸ್ತೇಯವೆಂದರೆ, ನಮ್ಮದಲ್ಲದ ವಸ್ತುವನ್ನು ಬಲವಂತವಾಗಿ ಅಥವ ಮೋಸದಿಂದ ಅಥವ ಕಳ್ಳತನದಿಂದ ಅದರ ಮಾಲಿಕರ ಅನುಮತಿಲ್ಲದೆ ಹೊಂದದಿರುವುದು. ವಾಚಾ ಅಸ್ತೇಯವೆಂದರೆ, ಇನ್ನೊಬರಿಗೆ ಸೇರಬೇಕಾದ ಗೌರವ, ವೈಭವ, ಗುಣಗಳನ್ನು ಮಾತಿನಲ್ಲಾದರೂ ಹೊಂದದಿರುವುದು, ಇತರರ ಗುಣಗಳ ಬಗ್ಗೆ ಹಗುರವಾಗಿ ಮಾತನಾಡದಿರುವುದು ಸೇರುತ್ತದೆ. ಮಾನಸಿಕ ಅಥವ ಬೌದ್ಧಿಕ ಆಸ್ತೇಯ ಕ್ಲಿಷ್ಟಕರವಾದುದು. 'ಅವನಿಗೆ ಅಷ್ಟೊಂದು ಹಣವಿದೆ. ಅದರಲ್ಲಿ ಸ್ವಲ್ಪವಾದರೂ ನನಗೆ ಸಿಕ್ಕಿದ್ದರೆ' ಎಂದು ಮನಸ್ಸಿನಲ್ಲೂ ಯೋಚಿಸದಿರುವುದು. ಇದರ ಅರ್ಥ, ಸಂಪತ್ತು ಹೊಂದುವುದನ್ನು ಬಯಸಬಾರದೆಂದಲ್ಲ, ಅದಕ್ಕಾಗಿ ಶ್ರಮಿಸಬೇಕಷ್ಟೆ.
ನಾವು, ನೀವು ಸಾಮಾನ್ಯವಾಗಿ ಕಾಣಬಹುದಾದ ಪ್ರಸಂಗದ ಬಗ್ಗೆ ಗಮನ ಹರಿಸೋಣ. ಒಂದು ಡಿಪಾರ್ಟ್‌ಮೆಂಟಲ್ ಸ್ಟೋರಿಗೆ ಖರೀದಿಗೆ ಹೋಗುತ್ತೇವೆಂದುಕೊಳ್ಳೋಣ. ಒಂದು ವಸ್ತುವನ್ನು ಇತರರಿಗೆ ಕಾಣದಂತೆ ಕದ್ದು ಜೇಬಿನಲ್ಲೋ, ಮತ್ತೆಲ್ಲೋ ಇಟ್ಟುಕೊಂಡು ಅದಕ್ಕೆ ದುಡ್ಡು ಕೊಡದೆ ಹೊರಬಂದರೆ ಅದು ಕಳ್ಳತನವೆಂದು ನಮಗೇ ಗೊತ್ತಾಗುತ್ತದೆ. ಆದರೆ ಸಾಮಗ್ರಿಗಳನ್ನು ತೆಗೆದುಕೊಂಡು ಬಿಲ್ಲು ಮಾಡಿಸುವ ಸಂದರ್ಭದಲ್ಲಿ ಅಂಗಡಿಯವರು ಯಾವುದಾದರೂ ಒಂದು ವಸ್ತುವಿಗೆ ಬಿಲ್ಲು ಮಾಡುವುದನ್ನು ಮರೆತನೆಂದು ಇಟ್ಟುಕೊಳ್ಳಿ. ನಮಗೆ ಅದು ಗೊತ್ತಾದರೂ ಸುಮ್ಮನಿದ್ದರೆ, ನಾವು ಕದ್ದು ತೆಗೆದುಕೊಂಡು ಹೋಗುವ ವಸ್ತುವಿಗೂ ಇದಕ್ಕೂ ವ್ಯತ್ಯಾಸವಿದೆಯೇ? ಈ ಪ್ರಸಂಗದಲ್ಲಿ ತಪ್ಪು ನಮ್ಮದಲ್ಲ, ಆ ಅಂಗಡಿಯವನದು ಎಂದುಕೊಂಡುಬಿಡುತ್ತೇವೆ. ತುಂಬಾ ರೇಟು ಹಾಕುತ್ತಾನೆ, ಇದರಿಂದ ಅವನಿಗೇನೂ ನಷ್ಟವಾಗುವುದಿಲ್ಲವೆಂದು ಸಮಾಧಾನ ಮಾಡಿಕೊಂಡುಬಿಡುತ್ತೇವೆ. ಅಂಗಡಿಯಿಂದ ವಸ್ತುವನ್ನು ಕದಿಯದೆ ಇರುವುದಕ್ಕೆ ಎರಡು ಕಾರಣಗಳಿರುತ್ತವೆ: ಒಂದು, ಸಿಕ್ಕಿಹಾಕಿಕೊಂಡರೆ ಮರ್ಯಾದೆ ಹೋಗುತ್ತದೆ ಎಂಬ ಭಯ ಮತ್ತು ಇನ್ನೊಂದು, ಕದಿಯುವುದು ತಪ್ಪು ಎಂಬ ಅರಿವು. ಕದಿಯುವುದು ತಪ್ಪು ಎಂಬ ಮನೋಭಾವ ಇದ್ದರೆ ಬಿಲ್ಲು ಹಾಕದೆ ಇರುವ ವಸ್ತುವಿನ ಬಗ್ಗೆ ಅಂಗಡಿಯವರ ಗಮನ ಸೆಳೆಯುತ್ತೇವೆ. ಇಲ್ಲದಿದ್ದರೆ ಇಲ್ಲ. ಚಿಲ್ಲರೆ ವಾಪಸು ಕೊಡುವಾಗ ಕೊಡಬೇಕಾದ ಮೊತ್ತಕ್ಕಿಂತ ಹೆಚ್ಚು ಕೊಟ್ಟರೆ, ಹೆಚ್ಚಾಗಿ ಕೊಟ್ಟುದನ್ನು ಇಟ್ಟುಕೊಳ್ಳುತ್ತೇವೆಯೋ ಅಥವ ವಾಪಸು ಕೊಡುತ್ತೇವೆಯೋ ಎಂಬುದಕ್ಕೂ ಇದೇ ಮಾನದಂಡ ಅನ್ವಯಿಸುತ್ತದೆ. ಕದಿಯುವುದು ತಪ್ಪು ಎಂಬುದನ್ನು ಅರಿತರೆ ನಾವು ಕದಿಯುವುದಿಲ್ಲ. ಹಾಗೆಯೇ ಕದಿಯುವುದರಿಂದ ನಮ್ಮ ಮತ್ತು ಇತರರ ಅಶಾಂತಿಗೆ, ತಳಮಳಕ್ಕೆ, ಅಸಮಾಧಾನಗಳಿಗೆ ಕಾರಣವಾಗುತ್ತದೆ ಎಂದು ಭಾವಿಸುವುದಾದರೆ ಆಗಲೂ ಸಹ ಕದಿಯುವುದಿಲ್ಲ.
ಸತ್ಯ, ಅಪರಿಗ್ರಹ ಮತ್ತು ಅಸ್ತೇಯ ಅವಿಭಾಜ್ಯ ಸಂಗತಿಗಳು. ಅಕ್ರಮ ಮತ್ತು ಅನೈತಿಕ ಸಂಬಂಧಗಳು, ಪತ್ನಿ/ಪತಿಗೆ ಗೊತ್ತಾಗುವಂತೆ ಆಗಲಿ, ಗೊತ್ತಾಗದಿರುವಂತೆ ಆಗಲಿ ಅದು ಕಳ್ಳತನವೇ ಸರಿ. ಪತಿ/ಪತ್ನಿಗೆ ಗೊತ್ತಾಗದಂತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದು, ನಾನು ಯಾರಿಗೂ ಮೋಸ ಮಾಡುತ್ತಿಲ್ಲವೆಂದರೆ ಅದನ್ನು ಒಪ್ಪಲಾಗುವುದಿಲ್ಲ. ಅಕ್ರಮ ಸಂಬಂಧದ ಬಗ್ಗೆ ಸಂಗಾತಿಗೆ ತಿಳಿದಾಗ ಅವರು ಮೊದಲಿನಂತೆ ವಿಶ್ವಾಸ/ಪ್ರೀತಿ ತೋರಿಸುತ್ತಾರೆಯೇ? ಇಲ್ಲವೆಂದಾದರೆ, ಅವರು ಅಕ್ರಮ ಸಂಬಂಧದ ಬಗ್ಗೆ ತಿಳಿಯದೆ ಇದ್ದಾಗ ತೋರಿಸುವ ಪ್ರ್ರೀತಿಯನ್ನು ಕಳ್ಳತನದಿಂದ, ಮೋಸದಿಂದ ಪಡೆಯುತ್ತಿದ್ದರು ಎಂದು ಆಗುವುದಿಲ್ಲವೇ? ಅಕ್ರಮ ಸಂಬಂಧವಿಲ್ಲದಿದ್ದರೂ ಅಕ್ರಮ ಸಂಬಂಧದ ಆರೋಪ ಮಾಡಿ ಒಬ್ಬರು ಇನ್ನೊಬ್ಬರ ನೆಮ್ಮದಿಯನ್ನು ಕದಿಯವುದನ್ನೂ ಕಾಣುತ್ತಿರುತ್ತೇವೆ, ಅಷ್ಟೇ ಏಕೆ, ಜೀವನವನ್ನೇ ಹಾಳು ಮಾಡುವುದನ್ನೂ (ದರೋಡೆ ಮಾಡುವುದು ಅನ್ನಬಹುದೇ?) ಕಾಣುತ್ತಿರುತ್ತೇವೆ.
'ನಾನು ಏನು ಪಡೆಯಬಲ್ಲೆ' ಮತ್ತು 'ನಾನು ಏನು ಕೊಡಬಲ್ಲೆ' ಎಂಬುದರಲ್ಲಿನ ಮನೋಭಾವದ ವ್ಯತ್ಯಾಸ ಅಗಾಧವಾಗಿದೆ. 'ನಾನು ಏನು ಪಡೆಯಬಲ್ಲೆ' ಎಂಬುದರಲ್ಲಿ ಬಯಕೆಯ, ಕೊರತೆಯ ಭಾವ ಮತ್ತು ಕೂಡಿಡುವ ಮನಸ್ಥಿತಿ ಇರುತ್ತದೆ. 'ನಾನು ಏನು ಕೊಡಬಲ್ಲೆ' ಎಂಬುದರಲ್ಲಿ ಪ್ರೀತಿಯ ನೆರಳಿರುತ್ತದೆ. ಪ್ರೀತಿಯನ್ನು ನಮ್ಮ ದೇಹಕ್ಕೆ, ಸ್ವಂತಕ್ಕೆ, ಇತರರಿಗೆ ಮತ್ತು ಪ್ರಕೃತಿಗೆ ಕೊಡುವ, ಹಂಚುವ ಮನಸ್ಥಿತಿ ಇರುತ್ತದೆ. ಒಂದು ಗಾದೆ ಇದೆ, "ನಾವು ಕೊಟ್ಟರೆ ನಮಗೆ ಸಿಗುತ್ತದೆ". ಅಸ್ತೇಯ ಅನಗತ್ಯವಾಗಿ, ನಮ್ಮದಲ್ಲದ್ದನ್ನು ಪಡೆಯುವುದನ್ನು ತಡೆಯುತ್ತದೆ. ಇದು ಇನ್ನೊಂದು ರೀತಿಯಲ್ಲಿ ಸುತ್ತಲಿನವರಿಗೆ, ಸಮಾಜಕ್ಕೆ ಪ್ರೀತಿಯನ್ನು ತೋರಿಸುವ ಅದ್ಭುತ ನಡೆಯಾಗುತ್ತದೆ.
ಉಳ್ಳವರು ಮಾಡುವ ಕಳ್ಳತನ ಕ್ಷಮಾರ್ಹವಲ್ಲ. ಆದರೆ ಹಸಿವಿನಿಂದ ನರಳುತ್ತಿರುವವರು ಬದುಕಲು ಆಹಾರ ಕಳವು ಮಾಡಿದರೆ ತಪ್ಪಾಗುವುದೆ? ಈ ವಿಷಯದಲ್ಲಿ ಅವರ ತಪ್ಪಿಗಿಂತ ಸಮಾಜದ ತಪ್ಪೇ ಹೆಚ್ಚು. ಹೀನರನ್ನು, ದೀನರನ್ನು ಪ್ರೀತಿಯಿಂದ ಕಾಣಬೇಕು, ಅವರನ್ನು ಮೇಲೆತ್ತಬೇಕು ಎಂಬುದು ಪ್ರತಿ ಧರ್ಮದ ಸಾರ. ಹಸಿದವರಿಗೆ ಅನ್ನವಿಕ್ಕುವುದು ಅತ್ಯಂತ ದೊಡ್ಡ ಧರ್ಮ. ಅವರು ಇತರರಂತೆ ಬಾಳಲು ಅನುಕೂಲ ಮಾಡಿಕೊಡುವುದು ಅದಕ್ಕಿಂತ ಹೆಚ್ಚಿನ ಧರ್ಮ. ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಹಸಿವಿನಿಂದ ಬಳಲಿ ಆಹಾರ ಕದಿಯುವ ಪ್ರಮೇಯ ಬರಲಾರದು.
ನಮ್ಮ ಬಗ್ಗೆ ನಾವೇ ಮೋಸ ಮಾಡಿಕೊಳ್ಳುವುದೂ ಇದೆ. ನಾಲಿಗೆಗೆ ರುಚಿ ಎಂದು ತಿನ್ನಬಾರದುದನ್ನು ತಿಂದರೆ, ಚಪಲಕ್ಕಾಗಿ ಮಾದಕ ದ್ರವ್ಯಗಳನ್ನು ಸೇವಿಸಿದರೆ, ದೇಹ ಸುಸ್ಥಿತಿಯಲ್ಲಿರಲು ವ್ಯಾಯಾಮ ಮಾಡದಿದ್ದರೆ ನಾವು ನಮ್ಮದೇ ದೇಹದ ಆರೋಗ್ಯದ ಕಳವು ಮಾಡಿದಂತೆ ಆಗುವುದಿಲ್ಲವೇ? ಕೇವಲ ಕಳವು ಅಲ್ಲ, ದೇಹದ ವಿರುದ್ಧ ಹಿಂಸೆಯನ್ನೂ ಕೊಟ್ಟಂತೆ ಆಗುತ್ತದೆ. ನಾವು ಯಾರ ವಿರುದ್ಧವೋ ಕಿರುಚಾಡಿದರೆ, ನಿಂದಿಸಿದರೆ ನಮ್ಮದೇ ಮನಸ್ಸಿನ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದಲ್ಲದೆ, ಇತರರಲ್ಲೂ ಅಶಾಂತಿ ಉಂಟುಮಾಡಿ ಅವರ ಸಮಾಧಾನದ ಕಳುವನ್ನೂ ಮಾಡುತ್ತೇವೆ. ಆತ್ಮಾವಲೋಕನ ಮಾಡಿಕೊಂಡಾಗ ನನ್ನನ್ನೂ ಸೇರಿಸಿ ನಾವುಗಳು ಎಷ್ಟರಮಟ್ಟಿಗೆ ಅಸ್ತೇಯದ ಪಾಲನೆ ಮಾಡುತ್ತಿದ್ದೇವೆ ಎಂಬುದು ನಮಗೇ ಗೊತ್ತಾಗುತ್ತದೆ. ನಾವು ಏನು ಮಾಡಬಹುದು ಎಂಬುದು ಸಹ ನಮಗೇ ತಿಳಿಯುತ್ತದೆ. ಏನು ಮಾಡಬೇಕೆಂದು ನಾವೇ ನಿರ್ಧರಿಸಿಕೊಳ್ಳೋಣ. ಕದಿಯದಿರುವುದು ಸುಲಭವಲ್ಲ ಅಲ್ಲವೇ?
-ಕ.ವೆಂ.ನಾಗರಾಜ್.
**************
[ಜನಮಿತ್ರದಲ್ಲಿನ 'ಚಿಂತನ' ಅಂಕಣದಲ್ಲಿ 21-04-2014ರಲ್ಲಿ ಪ್ರಕಟಿತ]