ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಫೆಬ್ರವರಿ 14, 2014

ಸಾಧನಾ ಪಥ

ಹಿಡಿದ ಗುರಿಯನು ಸಾಧಿಸುವವರೆಗೆ
ಮುಂದಿಟ್ಟ ಹೆಜ್ಜೆಯನು  ಹಿಂದಕ್ಕೆ ಇಡದೆ |
ಆವೇಶ ಉತ್ಸಾಹ ನರನಾಡಿಯಲಿರಿಸೆ
ಯಶವರಸಿ ಹರಸದಿಹುದೆ ಮೂಢ || 
     ಹೇಗೋ ಜೀವಿಸಬೇಕೆನ್ನುವವರು ಕಷ್ಟಪಡುವುದಿಲ್ಲ. ಅವರು ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು, ಸರಿ-ತಪ್ಪುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಬಾಳುತ್ತಾರೆ. ಆದರೆ ಹೀಗೆಯೇ ಜೀವಿಸಬೇಕೆಂದುಕೊಂಡವರಿಗೆ ಅಡ್ಡಿ, ಅಡಚಣೆಗಳು, ಕಷ್ಟಗಳ ಸರಮಾಲೆಯೇ ಎದುರಾಗುತ್ತದೆ. ಆದರೆ ಅವರು ಅವೆಲ್ಲವನ್ನೂ ಎದುರಿಸಿ, ಅಗತ್ಯ ಬಿದ್ದರೆ ಪ್ರಾಣವನ್ನೂ ಪಣಕ್ಕಿಟ್ಟು ತಾವಂದುಕೊಂಡಂತೆಯೇ ಬದುಕುತ್ತಾರೆ. ಹಾಗೆ ಯಶಸ್ವಿಯಾಗಿ ಬದುಕುವವರನ್ನು ಸಾಧಕರೆನ್ನುತ್ತಾರೆ. ಅಂತಹ ಸಾಧಕರನ್ನು ಜಗತ್ತು ಗೌರವಿಸುತ್ತದೆ. ಹೇಗೋ ಬದುಕುವವರೂ ಸಹ  ಸಾಧಕರನ್ನು ಮೆಚ್ಚುಗೆಯಿಂದ, ಗೌರವದಿಂದ ಕಾಣುತ್ತಾರೆ. ಸಾಧಕರನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವುದೂ ಅಪರೂಪವಲ್ಲ. ಆದರೆ, ಸಾಧಕರ ಸಾಧನೆಯ ಹಿಂದಿನ ದಿವ್ಯ ಸಂದೇಶವನ್ನು ಎಲ್ಲರೂ ಮರೆತುಬಿಡುತ್ತೇವೆ. ಅದೆಂದರೆ, 'ಅಂತಹ ಸಾಧನೆಯನ್ನು ಯಾರು ಬೇಕಾದರೂ ಮಾಡಬಹುದು' ಎಂಬುದೇ! ಸಾಧನೆ ಮಾಡಲು ಹಿಂಜರಿಯುವ ಸಾಮಾನ್ಯರಿಗೆ, 'ಅವರು ದೇವಾಂಶ ಸಂಭೂತರು, ಮಹಾಮಹಿಮರು. ಅವರೆಲ್ಲಿ, ನಾವೆಲ್ಲಿ', 'ಉಂಟೇ, ಉಂಟೇ, ಏನು ಹೇಳುತ್ತಿದ್ದೀರಿ? ಅವರೊಡನೆ ನಮ್ಮನ್ನು ಹೋಲಿಸುವುದೇ!' ಎಂಬಂತಹ ಕುಂಟು ನೆಪಗಳೂ ನೆರವಿಗೆ ಬರುತ್ತದೆ. ಆದರೆ ನಿಜವಾದ ಕಾರಣವೆಂದರೆ, ಅವರಿಗೆ ಕಷ್ಟಪಡುವುದು ಬೇಕಿರುವುದಿಲ್ಲ ಮತ್ತು ಮೌಲ್ಯಗಳು, ನೀತಿ-ನಿಯಮಗಳು ಎಂದುಕೊಂಡು ಬೇಕಿಲ್ಲದ ತೊಂದರೆಗಳನ್ನು ಮೈಮೇಲೆ ಏಕೆ ಎಳೆದುಕೊಳ್ಳಬೇಕು ಎಂಬ ಮನೋಭಾವ. ಹೇಗೋ ಜೀವಿಸುವವರಿಗೆ ಸ್ವಾರ್ಥ ಪ್ರಮುಖವಾಗಿರುತ್ತದೆ. ಅದಕ್ಕಾಗಿ ಸಮಾಜದ ಹಿತ ಅವರಿಗೆ ಗೌಣವೆನಿಸುತ್ತದೆ. ಈ ಮನೋಭಾವವೇ ಸಮಾಜ ಇಂದು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಮೂಲವೆಂಬುದು ಆಳವಾಗಿ ಚಿಂತಿಸಿದರೆ ಅರ್ಥವಾದೀತು. ಒಂದಂತೂ ಸತ್ಯ, ನೀತಿ-ನಿಯಮ, ಮೌಲ್ಯಗಳಿಗೆ ಬೆಲೆ ಕೊಡುವವರ, ಅದಕ್ಕಾಗಿ ಸ್ವಂತದ ಹಿತ ತ್ಯಾಗ ಮಾಡುವ ಸಾಧಕರಿಂದ ಸಮಾಜ ಲಾಭ ಪಡೆಯುತ್ತದೆ. ಈ ಕಾರಣಕ್ಕಾಗಿಯೇ ಸಮಾಜ ಸಾಧಕರನ್ನು ಗೌರವದಿಂದ ಕಾಣುತ್ತದೆ, ಕಾಣಲೇಬೇಕು.
ಸೋತೆನೆಂದೆನಬೇಡ ಸೋಲು ನೀನರಿತೆ
ಬಿದ್ದೆನೆಂದೆನಬೇಡ ನೋವು ನೀನರಿತೆ |
ಸೋಲರಿತು ನೋವರಿತು ಹಸಿವರಿತು
ಜಗವರಿಯೆ ನೀನೇ ಗೆಲುವೆ ಮೂಢ ||
     ಸಾಧಕರು ಇದ್ದಕ್ಕಿದ್ದಂತೆ ಮೂಡಿಬರುವುದಿಲ್ಲ. ಅವಿರತ ಶ್ರಮ ಅವರ ಸಾಧನೆಯ ಬೆನ್ನಿಗಿರುತ್ತದೆ. 'ಸರ್ವಜ್ಞನೆಂಬುವನು ಗರ್ವದಿಂದಾದವನೆ, ಹಲವಂ ಬಲ್ಲವರಿಂದ ಕಲಿತು . . ವಿದ್ಯೆಯ ಪರ್ವತವೆ ಆದ ಸರ್ವಜ್ಞ' ಎಂಬ ತ್ರಿಪದಿ ಸರ್ವಜ್ಞನ ಸಾಧನೆಯ ಹಾದಿಯ ಕಿರುನೋಟ ಬೀರುತ್ತದೆ. ಸಾಧಕರ ಜೀವನವನ್ನು ಅವಲೋಕಿಸಿದರೆ ಕಂಡು ಬರುವ ವಿಚಾರಗಳು ಸಾಧನೆಯ ಹಾದಿಯಲ್ಲಿರುವವರ ಕಣ್ತೆರೆಸುವಂತಹವು. ತನ್ನನ್ನು ತಾನು ಅರಿತುಕೊಳ್ಳುವುದು ಸಾಧನಾಪಥದ ಮೊದಲ ಹೆಜ್ಜೆಯಾದರೆ, ಸತತ ಪರಿಶ್ರಮ, ಬರುವ ಕಷ್ಟಗಳು, ನೋವುಗಳನ್ನು ಸಹಿಸಿಕೊಳ್ಳುವ ಶಕ್ತಿ, ಯಾವುದೇ ಸಂದರ್ಭಗಳಲ್ಲಿ ನಂಬಿದ ತತ್ವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಸಾಮಾನ್ಯವಾಗಿ ಸಾಧಕರಲ್ಲಿ ಕಂಡು ಬರುವ ಗುಣಗಳು. ಸೋಲುಗಳು, ಎಡರು-ತೊಡರುಗಳು ಅವರ ಧೃತಿಗೆಡಿಸುವ ಬದಲಾಗಿ ಜಗತ್ತನ್ನು ಅರಿಯುವ ಅವರ ಹಸಿವನ್ನು, ಪಟ್ಟು ಬಿಡದೆ ಮತ್ತೆ ಮುಂದುವರೆಯುವ ಛಲವನ್ನು ಹೆಚ್ಚಿಸುತ್ತಾ ಹೋಗುತ್ತದೆ. ಸಹಜವೆಂಬಂತೆ ಸಾಧಕ ದುಷ್ಕರ್ಮಗಳಿಂದ ದೂರವಿದ್ದು, ಸತ್ಕರ್ಮಗಳನ್ನು ಮಾಡುತ್ತಾ ಹೋಗುತ್ತಾನೆ. 
ಮೊಂಡುವಾದಗಳಿಲ್ಲ ಗರ್ವ ಮೊದಲೇ ಇಲ್ಲ
ಧನ ಪದವಿ ಕೀರ್ತಿ ಮೆಚ್ಚುಗೆಯು ಬೇಕಿಲ್ಲ |
ಸೋಲು ಗೆಲವುಗಳ ಸಮದಿ ಕಾಣಲುಬಲ್ಲ
ಧೀರನವನೆ ನಿಜನಾಯಕನು ಮೂಢ ||
     'ಅಲ್ಪ ವಿದ್ಯಾವಂತ ಮಹಾಗರ್ವಿ, ಮಹಾವಿದ್ಯಾವಂತ ಘನಪಂಡಿತ' ಎಂಬ ಲೋಕೋಕ್ತಿಗೆ ತಕ್ಕಂತೆ ಸಾಧಕನಿಗೆ ತಾನೇ ದೊಡ್ಡವನು, ಎಲ್ಲವನ್ನೂ ತಿಳಿದವನು ಎಂಬ ದರ್ಪ,  ಅಹಂಕಾರವಿರುವುದಿಲ್ಲ. ತನ್ನ ಮಾತನ್ನು ಇತರರು ಕೇಳದಿದ್ದರೆ, ಅವಗಣಿಸಿದರೆ ಆತನಿಗೆ ಸಿಟ್ಟು ಬರುವುದಿಲ್ಲ. ಮೆಚ್ಚಿ ಹೊಗಳಿದರೂ ಅವನಿಗೆ ಲೆಕ್ಕಕ್ಕಿಲ್ಲ. ಇತರರು ಏನೆಂದುಕೊಂಡಾರೋ ಎಂಬ ಅಳುಕು, ಅಂಜಿಕೆ, ಲಜ್ಜೆಗಳಿಲ್ಲದೆ ನಿರ್ಲಿಪ್ತತೆಯಿಂದ ತನ್ನ ಕಾರ್ಯ ತಾನು ಮಾಡುತ್ತಿರುತ್ತಾನೆ. ಅವನಿಗೆ ಬಿಸಿಲು, ಮಳೆ, ಚಳಿ, ಗಾಳಿ, ಇತ್ಯಾದಿ ವೈಪರೀತ್ಯಗಳು ಅಡ್ಡಿಯೆನಿಸುವುದಿಲ್ಲ. ಕಾರ್ಯಕ್ಕೆ ಬೇಕಾದ ಅವಶ್ಯಕತೆಗಳು ಸಮೃದ್ಧಿಯಾಗಿರಲಿ, ಕೊರತೆಯಿರಲಿ ಬಾಧಕವೆನಿಸದು. ಒಬ್ಬ ಯಶಸ್ವಿ ವ್ಯಕ್ತಿ ತನ್ನ ಸಾಮರ್ಥ್ಯವನ್ನು ಅರಿತು ಕೆಲಸವನ್ನು ಕೈಗೆತ್ತಿಕೊಳ್ಳುತ್ತಾನೆ. ಅದನ್ನು ವ್ಯವಸ್ಥಿತವಾಗಿ ಮಾಡುತ್ತಾನೆ. ಹಾಗೆ ಮಾಡುವಾಗ ಯಾವುದೊಂದನ್ನೂ ಸಣ್ಣದೆಂಬ ಭಾವನೆಯಿಂದ ಕಡೆಗಣಿಸುವುದಿಲ್ಲ. ಮಾಡಬಲ್ಲೆನೆಂಬ ಧೃಢ ವಿಶ್ವಾಸವಿದ್ದು, ಹಿಡಿದ ಕೆಲಸವನ್ನು ಮಧ್ಯೆ ನಿಲ್ಲಿಸುವುದಿಲ್ಲ. ವ್ಯರ್ಥವಾಗಿ ಕಾಲಹರಣ ಮಾಡುವುದಿಲ್ಲ. ಚಂಚಲತೆಯಿಂದ ದೂರವಿದ್ದು, ಕೆಲಸವನ್ನು ವಿಚಲಿತಗೊಳಿಸುವ ಸಂಗತಿಗಳಿಂದ ದೂರವಿದ್ದುಬಿಡುತ್ತಾನೆ. ಸಿಗಲು ಸಾಧ್ಯವಿಲ್ಲವೆಂಬುದನ್ನು ಬಯಸದೆ, ಕಳೆದುಹೋದದ್ದರ ಬಗ್ಗೆ ಚಿಂತಿಸದೆ, ಆತಂಕದ ಸ್ಥಿತಿಯಲ್ಲೂ ಧೃತಿ ಕಳೆದುಕೊಳ್ಳದಿರುವವನು ನಾಯಕನೆನಿಸಿಕೊಳ್ಳುತ್ತಾನೆ.
ಪರರು ನಮಿಪುವ ತೇಜವಿರುವವನು
ಕೆಡುಕ ಸೈರಿಸಿ  ಕ್ಷಮಿಪ ಗುಣದವನು |
ನಾನತ್ವ ದೂರ ನಡೆನುಡಿಯು ನೇರ
ಸಾತ್ವಿಕನು ಸಾಧಕನು ಅವನೆ ಮೂಢ || 
     ಸಾಮಾನ್ಯರಲ್ಲಿ ಕಾಣುವ ಮತ್ಸರ ಸಾಧಕರಿಂದ ದೂರವಿರುತ್ತದೆ. ಈ ಮತ್ಸರ ಸಾಮಾನ್ಯರಿರಲಿ, ಅಪ್ರತಿಮರೆನಿಸಿಕೊಂಡವರನ್ನೂ ಕಾಡುತ್ತದೆ. ರಾಜಕಾರಣಿಗಳಲ್ಲಿ, ಅಧಿಕಾರಿಗಳಲ್ಲಿ, ಸಾಹಿತಿಗಳಲ್ಲಿ, ವೈಚಾರಿಕವಾಗಿ ಪ್ರಬುದ್ಧರೆನಿಸಿದವರಲ್ಲಿ, ಅಷ್ಟೇ ಏಕೆ ಜೀವನದ ಎಲ್ಲಾ ರಂಗಗಳಲ್ಲಿ ತಾನು ಎಲ್ಲರಿಗಿಂತ ಶ್ರೇಷ್ಠರೆನಿಸಬೇಕು, ತನಗಿಂತ ಹೆಚ್ಚು ಗೌರವ ಇತರರಿಗೆ ಸಿಗಬಾರದು ಎನ್ನುವ ಹಪಾಹಪಿತನ ಒಂದಲ್ಲಾ ಒಂದು ಹಂತದಲ್ಲಿ ತನ್ನ ಅವತಾರವನ್ನು ತೋರಿಸಿಬಿಡುತ್ತದೆ. ಕನ್ನಡದ ಉನ್ನತ ಪ್ರಶಸ್ತಿಯನ್ನು ಪಡೆದವರೊಬ್ಬರು ತಾನು ಸದಾ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ತವಕದಿಂದ ವೈಚಾರಿಕ ಪ್ರಜ್ಞೆಯನ್ನೇ ಕಳೆದುಕೊಂಡು ಅಪದ್ಧವಾಗಿ ಮಾತನಾಡುವುದನ್ನು ಕಂಡಿದ್ದೇವೆ. ಆದರೆ ನಿಜವಾದ ಸಾಧಕ ನಾನತ್ವದಿಂದ ದೂರವೇ ಉಳಿದಿರುತ್ತಾನೆ. ಶ್ರೇಷ್ಠ ವಿಚಾರವನ್ನು ಚೆನ್ನಾಗಿ ಮಂಡಿಸುವವರನ್ನು, ಶ್ರೇಯಸ್ಕರವಾದ ಕಾರ್ಯವನ್ನು ಯಾರೇ ಮಾಡಿದರೂ ಕಂಡು ಸಂತೋಷಿಸಿ ಅವರ ಬೆನ್ನು ತಟ್ಟುತ್ತಾನೆಯೇ ಹೊರತು ಕರುಬುವುದಿಲ್ಲ. ಸಾಧಕರಿಗೆ ಸಿಗುವ ಜನಮನ್ನಣೆಯನ್ನು ಕಂಡು ಕರುಬುವವರು ಸಾಧಕರಿಗೆ ಕೇಡು ಬಗೆಯಲು ಪ್ರಯತ್ನಿಸಿದರೂ, ಅದನ್ನು ನಿರ್ಲಕ್ಷಿಸುವ ಅಸಾಮಾನ್ಯ ಗುಣ ಸಾಧಕರಿಗೆ ಮಾತ್ರ ಒಲಿದಿರುತ್ತದೆ.
ನುಡಿದಂತೆ ನಡೆದು ಮಾದರಿಯು ತಾನಾಗೆ
ಪರರ ಮನವರಿತು ನಡೆವ ಕರುಣೆಯಿರಲಾಗೆ |
ಕರಗತವು ತಾನಾಗೆ ಕೆಲಸ ಮಾಡಿಪ ಕಲೆಯು 
ನಾಯಕನು ಉದಯಿಸುವ ಕಾಣು ಮೂಢ ||
     ಈ ಘಟನೆಯ ಬಗ್ಗೆ ನೀವೂ ಕೇಳಿರಬಹುದು ಅಥವ ಓದಿರಬಹುದು. ಒಮ್ಮೆ ರಾಮಕೃಷ್ಣ ಪರಮಹಂಸರ ಹತ್ತಿರ ಒಬ್ಬ ತಾಯಿ ತನ್ನ ಮಗನನ್ನು ಕರೆದುಕೊಂಡು ಬಂದು, "ಪೂಜ್ಯರೇ, ನನ್ನ ಮಗನಿಗೆ ಜಿಲೇಬಿ ತಿನ್ನುವ ಚಪಲ ಜಾಸ್ತಿ. ಎಷ್ಟು ಕೊಟ್ಟರೂ ತಿನ್ನುತ್ತಾನೆ, ಮತ್ತೆ ಮತ್ತೆ ಕೇಳುತ್ತಾನೆ. ಅಷ್ಟೊಂದು ತಿಂದರೆ ಅವನ ಆರೋಗ್ಯ ಏನಾಗಬೇಕು? ನೀವು ಸ್ವಲ್ಪ ಬುದ್ಧಿ ಹೇಳಿ ಪೂಜ್ಯರೇ" ಎಂದು ಕೇಳಿಕೊಳ್ಳುತ್ತಾಳೆ. ರಾಮಕೃಷ್ಣರು ಆ ತಾಯಿಗೆ ಒಂದು ವಾರ ಬಿಟ್ಟು ಬರಲು ಹೇಳುತ್ತಾರೆ. ಒಂದು ವಾರದ ನಂತರದಲ್ಲಿ ಮತ್ತೆ ಕೆಲವು ದಿನಗಳು ಬಿಟ್ಟು ಬರಲು ಹೇಳುತ್ತಾರೆ. ಇದು ನಾಲ್ಕು-ಐದು ಸಲ ಮುಂದುವರೆಯುತ್ತದೆ. ಕೊನೆಗೆ ಒಂದು ದಿನ ರಾಮಕೃಷ್ಣರು ಮಗುವನ್ನು ಹತ್ತಿರ ಕರೆದು ಪ್ರೀತಿಯಿಂದ ತಲೆ ನೇವರಿಸುತ್ತಾ, "ಮಗು ತುಂಬಾ ಜಿಲೇಬಿ ತಿನ್ನುವುದು ಒಳ್ಳೆಯದಲ್ಲ. ಅಪರೂಪಕ್ಕೆ ಸ್ವಲ್ಪ ತಿನ್ನು. ಜಾಸ್ತಿ ತಿನ್ನಬೇಡ" ಎನ್ನುತ್ತಾರೆ. ಮಗುವಿಗೆ ಅವರು ಹೇಳಿದ ರೀತಿ ಒಪ್ಪಿಗೆಯಾಗುತ್ತದೆ. ಅದರಂತೆ ಪಾಲಿಸುತ್ತದೆ ಕೂಡಾ! ಆ ತಾಯಿಗೆ ಆಶ್ಚರ್ಯವಾಗುತ್ತದೆ. ಈ ಮಾತನ್ನು ಅವರು ಮೊದಲ ದಿನವೇ ಹೇಳಬಹುದಿತ್ತಲ್ಲಾ ಎಂದು ಮನಸ್ಸಿನಲ್ಲಿ ಅಂದುಕೊಂಡರೂ ಆಗ  ವಿಚಾರಿಸದೆ ಇನ್ನೊಂದು ದಿನ ತಾನೊಬ್ಬಳೇ ಬಂದಾಗ ಈ ಪ್ರಶ್ನೆ ಕೇಳಿಯೇಬಿಡುತ್ತಾಳೆ. ರಾಮಕೃಷ್ಣರು ನಗುತ್ತಾ ಹೇಳುತ್ತಾರೆ, "ತಾಯಿ, ನನಗೂ ಜಿಲೇಬಿ ಅಂದರೆ ಬಹಳ ಇಷ್ಟ. ಅದನ್ನು ತಿನ್ನಬೇಕೆಂಬ ಚಪಲದಿಂದ ಬಿಡಿಸಿಕೊಳ್ಳಲು ನನಗೆ ಅಷ್ಟು ಸಮಯ ಬೇಕಾಯಿತು." ದೊಡ್ಡವರ ರೀತಿಯೇ ಹಾಗೆ! ಇನ್ನೊಬ್ಬರಿಗೆ ಹೇಳುವ ಮುನ್ನ ಅದನ್ನು ತಾವು ಅನುಸರಿಸಿರಬೇಕು. ಅವರ ಅಂತರಂಗ ಮತ್ತು ಬಹಿರಂಗಗಳಲ್ಲಿ ಭಿನ್ನತೆ ಇಲ್ಲ. ಹೇಳುವುದೊಂದು ಮಾಡುವುದು ಮತ್ತೊಂದು ಅನ್ನುವುದು ಇಲ್ಲವೇ ಇಲ್ಲ. ಅಂತಹವರ ಮಾತಿನಲ್ಲಿ ಶಕ್ತಿ ಇರುತ್ತದೆ. ಆ ಶಕ್ತಿ ಹೊರಗಿನದಲ್ಲ. ಒಳಗಿನಿಂದ ಬಂದುದು. ಆ ಮಾತುಗಳನ್ನು ಕೇಳಿದವರು ಮಂತ್ರಮುಗ್ಧರಂತೆ ಅನುಸರಿಸುವುದಕ್ಕೆ ಇರುವ ವಿಶೇಷ ಕಾರಣವೇ ಇದಾಗಿದೆ. 
ದ್ವೇಷವದು ದೂರ ಸರ್ವರಲಿ ಸಮಭಾವ
ಎಲ್ಲರಲು ಅಕ್ಕರೆ ಕರುಣೆಯಲಿ ಸಾಗರ |
ಮಮಕಾರವಿಲ್ಲ ಗರ್ವವದು ಮೊದಲಿಲ್ಲ
ಸಮಚಿತ್ತದವನೆ ನಿಜ ಸಾಧಕನು ಮೂಢ || 
     ಆದಿ ಶಂಕರಾಚಾರ್ಯ ವಿರಚಿತ ಸಾಧನಾಪಂಚಕ ಒಬ್ಬ ಸಾಧಕ ಹೇಗೆ ಇರಬೇಕೆಂಬುದನ್ನು ತಿಳಿಸುವ ಒಂದು ಅಪೂರ್ವ ರಚನೆ. ನಿತ್ಯ ವೇದಾಧ್ಯಯನ, ಮಾಡುವ ಕೆಲಸಗಳನ್ನು ಭಗವಂತ ಆರಾಧನೆ ಎಂದು ಭಾವಿಸಿ ಮಾಡುವುದು, ಅಂತರಂಗದ ಕೊಳೆಯನ್ನು ತೊಡೆದು ಹಾಕುವುದು, ಮೋಹದ ಸಂಕೋಲೆಯಿಂದ ಹೊರಬರುವುದು, ಜ್ಞಾನಿಗಳ ಸತ್ಸಂಗ, ಯೋಗ್ಯ ಗುರುಗಳ ಆಶ್ರಯ, ವಿತಂಡ ವಾದಗಳಿಂದ ದೂರವಿರುವುದು, ಸಮಚಿತ್ತ ಹೊಂದುವುದು, ಇತ್ಯಾದಿಗಳು ಸಾಧಕನಿಗೆ ಇರಬೇಕೆಂದು ಅದು ಹೇಳುತ್ತದೆ. 
ಹೊರಶುಚಿಯೊಡನೆ ಒಳಶುಚಿಯು ಇರಲು
ಮಾನಾಪಮಾನದಲುದಾಸೀನನಾಗಿರಲು |
ನಿರ್ಭಯತೆ ಮೇಳವಿಸೆನಿಸೆ ಸಮರ್ಥ
ದೇವಪ್ರಿಯನವನಲ್ಲದಿನ್ಯಾರು ಮೂಢ ||
     'ಅಬ್ಬಬ್ಬಾ, ಸಾಧಕರಾಗುವುದು ಇಷ್ಟೊಂದು ಕಷ್ಟವೇ! ಇನ್ನೂ ಏನಾದರೂ ಇದೆಯೋ?' ಎಂಬ ಪ್ರಶ್ನೆ ಮೂಡುತ್ತದೆ. 'ಹೌದು, ಇನ್ನೂ ಇದೆ' ಎಂಬುದು ಸಾಧಕರ ನಡೆ-ನುಡಿಗಳನ್ನು ಕಂಡವರಿಗೆ ಅರಿವಾಗದೇ ಇರದು. ಅವರು 'ತಾನೇ ಸರಿ, ತನ್ನದೇ ಸರಿ' ಅನ್ನುವುದಿಲ್ಲ. ಒಂದು ಪುಟ್ಟ ಮಗುವೂ ಏನನ್ನೋ ಹೇಳುತ್ತಿದ್ದರೂ ಅದನ್ನೂ ಬೆರಗಾಗಿ ಕಣ್ಣರಳಿಸಿ ಕೇಳುವ ಆ ತನ್ಮಯತೆ ಸಾಧಕರಿಗಲ್ಲದೆ ಬೇರೆ ಯಾರಿಗೆ ಬಂದೀತು! ಎಲ್ಲವನ್ನೂ 'ಕೇಳುವ' ಆ ಗುಣ ಅನನ್ಯ. ಅವರು ಮೇಲು, ಇವರು ಕೀಳು, ಅವನು ಬಡವ, ಇವನು ಶ್ರೀಮಂತ, ಇತ್ಯಾದಿ ತಾರತಮ್ಯ ಮಾಡುವುದಿಲ್ಲ. ಎಂತಹ ಸ್ಥಿತಿಯಲ್ಲೂ ಆನಂದ ಕಾಣುವ ಗುಣ, ಆಸೆ, ಆಮಿಷಗಳಿಂದ ಮೈಮರೆತು ದಾರಿ ತಪ್ಪದ ನಡತೆ, ಅಪಾಯವನ್ನೆದುರಿಸುವ ಗಟ್ಟಿತನ, ಹೀನ-ದೀನರ ಸೇವೆಯನ್ನು ದೇವರ ಪೂಜೆಯೆಂದು ಭಾವಿಸುವ ಉದಾತ್ತತೆ, ಸರಳತೆ, ನಿಷ್ಕಾಮ ಕರ್ಮ, ಅಚಲ ವಿಶ್ವಾಸ, ಹೊರಮನದ ಕೋರಿಕೆಗಳನ್ನು ಅಲ್ಲಗಳೆದು ಒಳಮನದ ಕರೆಯನ್ನು ಆಲಿಸಿ ಅದರಂತೆ ಜೀವಿಸುವ ಕಲೆ ಸಾಧಕರ ಅಮೂಲ್ಯ ಸಂಪತ್ತು. ಇಷ್ಟೆಲ್ಲಾ ಇದ್ದ ಮೇಲೆ, ಅವರು ದೇವರೇ ಸರಿ, ಸಾಮಾನ್ಯ ಮನುಷ್ಯರಲ್ಲವೇ ಅಲ್ಲ, ಸಾಮಾನ್ಯರು ಹೀಗಿರಲು ಸಾಧ್ಯವೇ ಇಲ್ಲ ಎಂದು ನಿರ್ಧರಿಸಿ ಅವರನ್ನು ಆರಾಧಿಸಲು ಪ್ರಾರಂಭಿಸಿಬಿಡುತ್ತೇವೆ. ಇಂದು ಅನೇಕ ಸಾಧು-ಸಂತ-ಮಹಾಂತರ ಗುಡಿಗಳನ್ನು ಕಟ್ಟಿ ನಿತ್ಯ ಪೂಜೆ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಹಾಗೆ ಪೂಜಿಸುವವರದೇ ಒಂದು ಪಂಥವಾಗಿ ಬಿಡುತ್ತದೆ. ಹೊಸ ಹೊಸ ರೀತಿ-ನೀತಿಗಳು, ಕಟ್ಟಳೆಗಳು, ಸಂಪ್ರದಾಯಗಳು ರೂಢಿಗೆ ಬಂದುಬಿಡುತ್ತವೆ. ಅವರನ್ನು ಆರಾಧಿಸುವುದು ತಪ್ಪೇ, ಪೂಜಿಸಬಾರದೇ ಎಂದು ಸಿಟ್ಟಾಗದಿರಿ. ನಮಗೆ ಯೋಗ್ಯ ಮಾರ್ಗದರ್ಶನ ಮಾಡಿದವರನ್ನು, ಮಾಡುವವರನ್ನು ಆರಾಧಿಸುವುದು ತಪ್ಪಲ್ಲವೇ ಅಲ್ಲ. ಅದರೆ ಅದರಲ್ಲಿ ಒಂದು ಅಪಾಯವಿದೆ. ಅಂತಹ 'ಪೂಜ್ಯ'ರುಗಳನ್ನು 'ಹೊರಗೆ' ಇಟ್ಟುಬಿಡುವುದೇ ಆ ಅಪಾಯ. ಸಾಷ್ಟಾಂಗ ನಮಸ್ಕಾರ ಮಾಡಿ, ಆರತಿ ಬೆಳಗಿ, ತೀರ್ಥ-ಪ್ರಸಾದಗಳನ್ನು ಪಡೆದು ಕೃತಕೃತ್ಯರಾದೆವೆಂದು ಅಂದುಕೊಂಡುಬಿಡುತ್ತೇವೆ. ವಿಚಾರ ಮಾಡೋಣ. ಹೃದಯ ಮಂದಿರಗಳಲ್ಲಿ ಅವರನ್ನು ಪ್ರತಿಷ್ಠಾಪಿಸಿ ಮಾಡುವ ಪೂಜೆಯೇ ನಿಜವಾದ ಪೂಜೆ. ಅವರು ತೋರಿದ ಹಾದಿಯಲ್ಲಿ ನಡೆಯುವುದೇ ಅವರಿಗೆ ಸಲ್ಲಿಸಬಹುದಾದ ಯೋಗ್ಯ ಗುರುಕಾಣಿಕೆ. ಹಾಗೆ ನಡೆದು ಸಾಧಿಸುವುದೇ ನಮಗೆ ಸಿಗುವ ಪೂಜಾಫಲ ಎಂಬುದನ್ನು ಅರಿಯೋಣ.
-ಕ.ವೆಂ.ನಾಗರಾಜ್.
[ಬಳಸಿರುವ ಚಿತ್ರ ಅಂತರ್ಜಾಲದಿಂದ ಹೆಕ್ಕಿದುದು]
[24-02-2014ರ 'ಜನಮಿತ್ರ' ಪತ್ರಿಕೆಯಲ್ಲಿ ಪ್ರಕಟಿತ 'ಚಿಂತನ']

2 ಕಾಮೆಂಟ್‌ಗಳು:

  1. H A Patil on February 19, 2014 - 4:34pm
    ಕವಿ ನಾಗರಾಜ ರವರಿಗೆ ವಂದನೆಗಳು
    ಸಾಧನಾ ಪಥ ನಮ್ಮ ಸಾಗಿರುವ ಆದರೆ ಅದು ಸಾಗಬೇಕಾದ ದಾರಿಯ ಬಗೆಗೆ ಕೂಲಂಕುಷ ನಿರೂಪಣೆಯನ್ನು ಈ ಲೇಖನದ ಮೂಲಕ ನೀಡಿದ್ದೀರಿ. ನೀವು ವಿವರಿಸಿದ ಸಾಧನಾ ಪಥ ನಮ್ಮೆಲ್ಲರ ಸಾಧನಾ ಪಥವಾಬೇಕು ಅಂದಾಗ ಮಾತ್ರ ಮನುಷ್ಯ ಬದುಕು ಸಹನೀಯವಾಗಲು ಸಾಧ್ಯ, ಉತ್ತಮ ಲೇಖನ ನೀಡಿದ್ದೀರಿ ಧನ್ಯವಾದಗಳು.

    kavinagaraj on February 20, 2014 - 8:28am
    ವಂದನೆಗಳು, ಪಾಟೀಲರೇ.

    ಪ್ರತ್ಯುತ್ತರಅಳಿಸಿ
  2. Naveen HonnalaMarch 7, 2014 at 5:04 PM
    ಧನ್ಯವಾದಗಳು ನಾಗರಾಜ ರವರಿಗೆ,
    ಇಂದಿನ ನಮ್ಮ ನಾಯಕರುಗಳು ಮತ್ತು ಅವರನ್ನು ಹಿಂಬಾಲಿಸುವ ಎಲ್ಲರೂ ಈ ವಿಚಾರಗಳನ್ನು ಸರಿಯಾಗಿ ಮನನ ಮಾಡಿಕೊಂಡರೆ ಬದಲಾವಣೆ ಅತೀ ಶಿಘ್ರದಲ್ಲಿ ಆಗಬಹುದು. ಆದರೆ ಇವರುಗಳೆಲ್ಲಾ ಸ್ವತಃ ತಮ್ಮಲ್ಲಿ ಬದಲಾವಣೆ ಮಾಡಿಕೊಳ್ಳದೇ ಇತರರಿಗೆ ಉಪದೇಶ ನೀಡುತ್ತಾರೆ. ಕೆಲವರಿಗೆ ಅಧಿಕಾರ ಹಾಗೂ ಮನ್ನಣೆಯ ದಾಹ, ಇನ್ನೂ ಕೆಲವರಿಗೆ ತಮ್ಮ ತಪ್ಪುಗಳಿಂದ ರಕ್ಷಿಸಿಕೊಳ್ಳಲು ಅಭಯ ಹಸ್ತದ ಅವಶ್ಯಕತೆ ಅಷ್ಟೇ. ಯಾರಲ್ಲೂ ನಿಜವಾದ ತ್ಯಾಗ ಭಾವ ಇಲ್ಲವಾದ್ದರಿಂದ ಎಲ್ಲರನ್ನು ಒಂದೇ ತತ್ವದಡಿಗೆ ಒಗ್ಗೂಡಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ನನ್ನ ಅನಿಸಿಕೆ. ವೇದದಲ್ಲಿ ಅಷ್ಟೊಂದು ಜ್ಙಾನವಿದೆ, ನಿಮ್ಮಂತಹ ಅದೆಷ್ಟೋ ವ್ಯಕ್ತಿಗಳು ತಮ್ಮ ವಿಚಾರಧಾರೆಯನ್ನು ಜನರಿಗಾಗಿ ನೀಡುತ್ತಿದ್ದಾರೆ. ಆದರೂ ಇಲ್ಲಿ ಸುಧಾರಣೆಯಾಗುವುದಿಲ್ಲ ಯಾಕೆ ಎಂದು ನನಗೆ ಅರ್ಥವಾಗುತ್ತಿಲ್ಲ. ಬಹುಶಃ ನಾವ್ಯಾರು ಸಹ ಪರಮಹಂಸರ ಹಾಗೆ ಇತರರಿಗೆ ಬುದ್ದಿ ಹೇಳುವ ಮುನ್ನ ನಮ್ಮ ಅಂತರಾತ್ಮವನ್ನೊಮ್ಮೆ ಪರಿಕ್ಷಿಸುವುದಿಲ್ಲ ಎನ್ನುವುದೇ ಕಾರಣ ಎಂದು ನನಗನ್ನಿಸುವುದು. ನಿಮ್ಮ ಈ ಲೇಖನದಿಂದ ನನಗೆ ತುಂಬಾ ಉಪಯುಕ್ತ ವಿಚಾರಗಳು ಸಿಕ್ಕಿವೆ. ಮತ್ತೊಮ್ಮೆ ಧನ್ಯವಾದಗಳು
    Kavi NagarajMarch 10, 2014 at 8:22 AM
    ವಂದನೆ, ನವೀನ ಹೊನ್ನಾಳರೇ.

    ಪ್ರತ್ಯುತ್ತರಅಳಿಸಿ