ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಶುಕ್ರವಾರ, ಸೆಪ್ಟೆಂಬರ್ 21, 2012

ಮನಸೆಂಬ ಮಾಯೆ


     ಕುಡಿಯುವುದು ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಕುಡುಕನ ಮನಸ್ಸೂ ಹೇಳುತ್ತದೆ, 'ಬೇಡ, ಕುಡಿಯಬೇಡ, ಒಳ್ಳೆಯದಲ್ಲ' ಅಂತ. ಆದರೆ, 'ಜೀವನದ ಅವಧಿ ಕಡಿಮೆ. ಇರುವಷ್ಟು ದಿನ ಮಜಾ ಮಾಡಿ, ಖುಷಿಪಟ್ಟು ಹೋಗೋಣ' ಎಂದು ಉಪದೇಶಿಸುವ ಅದೇ ಮನಸ್ಸು 'ಕುಡಿ, ಮಜಾ ಮಾಡು. ಸ್ನೇಹಿತರೊಂದಿಗೆ ಸೇರಿ ಎಲ್ಲವನ್ನೂ ಮರೆತು ಕುಡಿ, ನಿನಗೆ ಅದರಿಂದ ಸಂತೋಷ ಸಿಗುವುದಾದರೆ ಅದನ್ನು ಏಕೆ ಕಳೆದುಕೊಳ್ಳುತ್ತೀಯೆ' ಎಂದು ಪ್ರಚೋದಿಸುತ್ತದೆ. ಹಾಗೂ ಡೋಲಾಯಮಾನ ಸ್ಥಿತಿ ಮುಂದುವರೆದರೆ,  ಮಧ್ಯಮ ಮಾರ್ಗ ಸೂಚಿಸಿ ಹೇಳುತ್ತದೆ, 'ಇದೊಂದು ಸಲ ಕುಡಿದು ಬಿಡು, ಆಮೇಲೆ ಕುಡಿಯದಿದ್ದರಾಯಿತು.' ಕೊನೆಗೆ ಅವನು ಯೋಚನೆ ಮುಂದುವರೆಸಿದ್ದಂತೆಯೇ ಅವನ ಕಾಲುಗಳು ಬಾರಿನ ಹಾದಿ ಹಿಡಿದಿರುತ್ತವೆ.
     'ಯಾರು ಏನೇ ಅನ್ನಲಿ, ನನ್ನ ಮನಸ್ಸು ಒಪ್ಪಿದಂತೆ ಮಾಡುತ್ತೇನೆ, ಅದರಿಂದ ನನಗೆ ಸಂತೋಷವಾಗುತ್ತದೆ' ಎಂದು ಸಮರ್ಥಿಸಿಕೊಳ್ಳುತ್ತೇವೆ. 'ಖ' ಅಂದರೆ ಇಂದ್ರಿಯ, ಸು+ಖ-  ಯಾವುದು ಇಂದ್ರಿಯಕ್ಕೆ ಒಳ್ಳೆಯದಾಗಿ ಕಾಣುತ್ತೋ ಅದು ಸುಖ, ದುಃ+ಖ- ಯಾವುದು ಇಂದ್ರಿಯಕ್ಕೆ ಕೆಟ್ಟದಾಗಿ ಕಾಣುತ್ತೋ ಅದು ದುಃಖ. ವಾಸ್ತವವಾಗಿ ಆಲೋಚನೆ ಮಾಡಿ ನೋಡಿದರೆ, ನಾವು ಸುಖ ಎಂದು ತಿಳಿದುಕೊಂಡಿರುವುದು ದುಃಖವೇ ಆಗಿರಬಹುದು, ದುಃಖ ಎಂದು ತಿಳಿದುಕೊಂಡಿರುವುದು ಸುಖವೇ ಆಗಿರಬಹುದು, ತತ್ಕಾಲಕ್ಕೆ ಸಂತೋಷವಾಯಿತು ಅನ್ನಿಸುವ ಕ್ರಿಯೆಗಳು ನಂತರ ಮನಃಕ್ಲೇಷಕ್ಕೆ ಈಡು ಮಾಡಬಹುದು. ಈಗ ಕಷ್ಟ ಅನ್ನಿಸುವ ಸಂಗತಿಗಳು ನಂತರದಲ್ಲಿ ಸಂತೋಷ ಕೊಡುವುದೂ ಇದೆ. ಇಂದ್ರಿಯಗಳು ಆರೋಗ್ಯವಾಗಿದ್ದರೆ ಸುಖ, ದುಃಖ ನಮಗೆ ಗೊತ್ತಾಗೋದು. ಒಂದೇ ಮನಸ್ಸು ಹಲವು ರೀತಿಗಳಲ್ಲಿ ಹೇಳುತ್ತದೆ. ಮನಸ್ಸು ಹೇಳಿದಂತೆ ಕುಣಿದರೆ/ಕೇಳಿದರೆ ಒಳ್ಳೆಯದೂ ಆಗಬಹುದು, ಕೆಟ್ಟದೂ ಆಗಬಹುದು.
     ಮನಸ್ಸಿನ ಬಗ್ಗೆ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತೇವೆ, ಅಲ್ಲವೇ? ನಿದ್ದೆ ಮಾಡಿದಾಗ ಆ ಮನಸ್ಸು ಎಲ್ಲಿರುತ್ತದೆ? ಮನಸ್ಸು ಅಂತಿರಲಿ, ನಾವೇ ಇರುವುದಿಲ್ಲ. ನಿದ್ದೆಯಲ್ಲಿ 'ನಾನು' ಇಲ್ಲ, ಜಗತ್ತೂ ಇಲ್ಲ, ದೇವರೂ ಇಲ್ಲ, ಯಾರೂ ಇಲ್ಲ. ಏನೂ ಇಲ್ಲ, ಶೂನ್ಯ. ಆಗ ಸುಖವೂ ಇಲ್ಲ, ದುಃಖವೂ ಇಲ್ಲ. ವಿಚಾರಗಳ ಗೊಂದಲವಿಲ್ಲ. ದ್ವೈತ, ಅದ್ವೈತ, ತ್ರೈತ, ಇತ್ಯಾದಿ ಯಾವ 'ತ'ಗಳೂ ಇಲ್ಲ. ವಿವಿಧ ಧರ್ಮಗಳಿಲ್ಲ, ಜಾತಿ, ಮತ, ಪಂಗಡಗಳಿಲ್ಲ. ಅದೇ ಎಚ್ಚರವಾದ ತಕ್ಷಣ, ಮೊದಲು 'ನಾನು' ಏಳುತ್ತದೆ. ಆ 'ನಾನು'ಗೆ ಜಗತ್ತು ಕಾಣುತ್ತದೆ, ಇದಕ್ಕೆಲ್ಲಾ ಕಾರಣನಾದ 'ಅವನು' ಇದ್ದಾನೆ ಅನ್ನುತ್ತದೆ. ಅಂದರೆ ನಾನು ಬೇರೆ, ಜಗತ್ತು ಬೇರೆ, ದೇವರು ಬೇರೆ ಎಂದು ಅಂದುಕೊಳ್ಳುತ್ತದೆ. ನಿದ್ದೆಯಲ್ಲಿ ಇರದ ಸಂಗತಿಗಳು, ಎಚ್ಚರವಾದಾಗ ಬರುತ್ತವೆ. ನಾನು ತಹಸೀಲ್ದಾರ್, ನಾನು ಇಂಜನಿಯರ್, ನಾನು ಪ್ರಧಾನ ಮಂತ್ರಿ ಅನ್ನುವುದೆಲ್ಲಾ ಹುಟ್ಟುವುದು ಎಚ್ಚರವಾದಾಗ ಮಾತ್ರ, ನಿದ್ದೆಯಲ್ಲಿ ಅವು ಯಾವುವೂ ಇರುವುದಿಲ್ಲ. ಮನಸ್ಸಿನ ಮೇಲೆ ಮಾಯಾ ಮೋಹಿನಿ ಆಡುವ ಆಟಗಳಿವು.
     ಹೀಗಿರುವಾಗ ದೇವರು ಮನುಷ್ಯನಿಗೆ ಕೊಟ್ಟಿರುವ ವಿವೇಚನಾ ಶಕ್ತಿಯನ್ನು ಬಳಸಿಕೊಂಡು ಸರಿ-ತಪ್ಪುಗಳ ಸರಿಯಾದ ವಿಶ್ಲೇಷಣೆ ಮಾಡಿ ಮುನ್ನಡೆಯುವುದು ಸೂಕ್ತ. ಮನಸ್ಸಿನಲ್ಲಿ ದ್ವಂದ್ವವಿದ್ದು, ವಿವೇಚನಾ ಶಕ್ತಿ ಹೇಳಿದ ವಿಚಾರ ಕಡೆಗಣಿಸಿ 'ಯಾರು ಏನಾದರೂ ಅಂದುಕೊಳ್ಳಲಿ, ಹೀಗೆ ಮಾಡಿದರೆ ನನ್ನ ಮನಸ್ಸಿಗೆ ಸಂತೋಷವಾಗುತ್ತದೆ' ಎಂದು ಮಾಡಿದರೆ ಒಳಮನಸ್ಸು ನಿಮ್ಮನ್ನು ಪ್ರಶ್ನಿಸದೇ ಇರುವುದಿಲ್ಲ. ಹೀಗೆ ಮಾಡು ಎನ್ನುವುದೇ ಮನಸ್ಸು, ಹೀಗೇಕೆ ಮಾಡಿದೆ ಎಂದು ಪ್ರಶ್ನಿಸುವುದೂ ಅದೇ ಮನಸ್ಸೇ. ಮನಸ್ಸು ನಮ್ಮನ್ನು ನಿಯಂತ್ರಿಸುವ ಬದಲು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದೇ ದ್ವಂದ್ವವನ್ನು ಕೊನೆಗೊಳಿಸಲು ಸರಿಯಾದ ದಾರಿ. ಕೆಲವು ಸಂದರ್ಭಗಳಲ್ಲಿ ಅಂತರಾತ್ಮ ಒಪ್ಪುವಂತೆ ನಡೆದುಕೊಳ್ಳಲು ಕಷ್ಟವಾಗಬಹುದು. ಅನಿವಾರ್ಯವಾಗಿ ಮಾಡಿದ ಅಂತಹ ಕೆಲಸಗಳಿಗೆ ಕುಗ್ಗಬೇಕಿಲ್ಲ, ಆದರೆ ಹಾಗೆ ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ಹೋಗದೆ ಸರಿಯಾದ ಹಾದಿಯಲ್ಲಿ ನಡೆಯಲು ನಮ್ಮ ಪ್ರಯತ್ನ ಮುಂದುವರೆಸುವುದು ಸೂಕ್ತ.
-ಕ.ವೆಂ.ನಾಗರಾಜ್.
***************
[ಚಿತ್ರಕೃಪೆ: ಅಂತರ್ಜಾಲದಿಂದ ಹೆಕ್ಕಿದ್ದು]

8 ಕಾಮೆಂಟ್‌ಗಳು:

  1. ಮಾಗಿದ ಮಾತುಗಳು. ಮಾಗುತ್ತಿರುವವರು ಕೇಳಬೇಕಾದ ಮಾತುಗಳು.

    ಪ್ರತ್ಯುತ್ತರಅಳಿಸಿ
  2. ನಾಗರಾಜರೇ, ನಿಮ್ಮ ಹೇಳಿಕೆಯಲ್ಲೇ ದೋಷವಿದೆ! ಜೀವಿಯ ಅಂತರಾತ್ಮ ನಿರ್ಗುಣ ಪರಬ್ರಹ್ಮನ ಭಾಗ. ಅದು ಎಂದೂ ತಪ್ಪುಮಾಡುವುದಿಲ್ಲ. ತಪ್ಪುನಿರ್ಧಾರಗಳು ಒಪ್ಪಿತವಲ್ಲ ಎಂದು ಅಂತರಾತ್ಮ ಸಾರುತ್ತಿದ್ದರೂ ಮತ್ತೆ ಅದನ್ನೇ ಮಾಡಲು ಮುನ್ನುಗ್ಗುವುದು ಆತ್ಮವಂಚನೆ ಎನಿಸಿಕೊಳ್ಳುತ್ತದೆ. ಒಮ್ಮೆ ಮಾಡಿದ ವಂಚನೆ ಮುಂದೆ ಸತತವಾಗಿ ಅದನ್ನೇ ಅನುಮೋದಿಸುತ್ತದೆ. ಯಾವಾಗ ತನ್ನ ಮಾತನ್ನು ಕೇಳಲಿಲ್ಲವೋ ಆಗ ಅಂತರಾತ್ಮ ನಮ್ಮನ್ನೇ ಕೈ ಬಿಡುತ್ತದೆ; ಒಂದು ಕೆಲಸಕ್ಕೂ ಮುನ್ನ ಹಲವುಬಾರಿ ಆತ್ಮವಿಮರ್ಶೆ ಮಾಡಿಕೊಂಡು ಮುನ್ನುಗ್ಗಬೇಕಾಗುತ್ತದೆ; ಆತ್ಮ ’ಯಸ್’ ಎನ್ನುವವರೆಗೂ ಕಾಯಬೇಕಾಗುತ್ತದೆ. ಆತ್ಮಕ್ಕೆ ಐಹಿಕ ಲಜ್ಜೆ, ನಾಚಿಕೆ ಇವೆಲ್ಲಾ ನಾಟುವುದಿಲ್ಲ, ಆತ್ಮ ಪಕ್ಷಪಾತಿಯೂ ಅಲ್ಲ. ಅದು ದೇವಭಾಗ-ಮನಸ್ಸು ಜೀವಭಾಗ. ಆತ್ಮದ ಬಗೆಗೇ ನಾವು ಸಂಶಯ ಇಟ್ಟುಕೊಂಡರೆ ಆಗ ನಮ್ಮ ಹಾದಿ ತಪ್ಪುತ್ತದೆ.

    ರಾಜಕಾರಣಿಯ ಸಮಾಧಾನಕ್ಕಾಗಿ ಯಾವುದೋ ಮಾಡಬಾರದ ಕೆಲಸವನ್ನು ಮಾಡಲು ಮುಂದಾಗುತ್ತೇವೆ ಎಂದಿಟ್ಟುಕೊಳ್ಳೋಣ; ಆತ್ಮ "ಬೇಡಾ" ಎನ್ನುತ್ತದೆ. ರಾಜಕಾರಣಿಯ ಸಂಬಂಧ ಚೆನ್ನಾಗಿರಲಿ ಎಂಬ ಕಾರಣಕ್ಕೆ ಮನಸ್ಸು ಬೇಕು ಎನ್ನುತ್ತದೆ. ಈ ಎರಡರಲ್ಲಿ ಯಾವುದನ್ನು ಪುರಸ್ಕರಿಸಬೇಕು? ನಿಮ್ಮ ಅರ್ಥದಲ್ಲಿ ರಾಜಕಾರಣಿ ಹೇಳಿದ್ದನ್ನು ಮಾಡಿ ಶಹಭಾಸ್ ಗಿಟ್ಟಿಸಬೇಕಲ್ಲವೇ? ’ಗುಣಶೇಖರ ಮೂರ್ತಿ’ ಎಂಬವರು ಗಣೇಶನ ಬಗ್ಗೆ ಮಾತನಾಡುತ್ತಾರೆ, ಹಾಡುಗಳನ್ನೂ ಬರೆದಿದ್ದಾರೆ-ನನ್ನ ಬ್ಲಾಗಿನಲ್ಲಿ, ಅವರಿಗೆ ಅವರ ಪಾಡೇ ಅರಿವಿಲ್ಲ, ಅಂಥವರೂ ಮಾಗಿದ್ದನ್ನು ಹೇಳುತ್ತಾರೆ! ಯಾವುದು ಮಾಗಿದ್ದು ಎಂದು ತಿಳಿಯಬೇಕಲ್ಲವೇ? ಗಡ್ಡ ಗಾಳಿಗೂ ಹಣ್ಣಾಗುತ್ತದೆ, ಹಣ್ಣಾದ ಗಡ್ಡ ಮಾಗಿದೆ ಎನ್ನಲು ಸಾಧ್ಯವೇ?

    ಪ್ರತ್ಯುತ್ತರಅಳಿಸಿ
  3. ಭಟ್ಟರೇ, 1. ನನ್ನ ಮಾತುಗಳು ಮಾಗಿದ್ದು ಎಂದು ನಾನು ಹೇಳಿಕೊಂಡಿಲ್ಲ. ಆದ್ದರಿಂದ ಹಣ್ಣಾದ ಗಡ್ಡದ ಮಾಗುವಿಕೆಯ ಹೋಲಿಕೆ ನಾನು ಸ್ವೀಕರಿಸಿಲ್ಲ. ಸ್ವೀಕರಿಸದಿದ್ದರೆ ಅವು ಕೊಟ್ಟವರ ಬಳಿಯಲ್ಲೆ ಉಳಿಯುವುವು.
    2. ತಪ್ಪು ಮಾಡಬೇಕು ಎಂದು ನನ್ನ ಲೇಖನದಲ್ಲಿ ಎಲ್ಲಾದರೂ ಇದೆಯೇ? ತಿದ್ದಿಕೊಂಡು ನಡೆಯಲು ಸಾಧನೆ ಮುಂದುವರೆಸಬೇಕೆಂಬುದು ಸಾರ.
    3. ಇಲ್ಲಿನ ಮಾತುಗಳು ನನ್ನಂತಹ ಸಾಮಾನ್ಯರಿಗೆ ಅನ್ವಯಿಸುವುದು. ಪರಿಪೂರ್ಣ ಮಾನವರಿಗಲ್ಲ.
    4. ಒಬ್ಬ ದುಷ್ಟ ಒಬ್ಬ ಸಾಮಾನ್ಯನನ್ನು ಕುರಿತು, "ನನ್ನ ಕಾಲಿಗೆ ಬೀಳು, ಇಲ್ಲದಿದ್ದರೆ ಕೊಲ್ಲುವೆ" ಎಂದರೆ ಅವನು ಏನು ಮಾಡಬೇಕು? ಅಂತರಾತ್ಮ ಮಾತ್ರ ಹಾಗೆ ಮಾಡಲು ಒಪ್ಪಲಾರದು. ಹೇಳಿ, ಭಟ್ಟರೇ. ಪರಿಪೂರ್ಣ/ಸಿದ್ಧಪುರುಷನಾದರೆ ಸಾಯಲು ಸಿದ್ಧನಾದಾನು.
    5. ಗುಣಶೇಖರಮೂರ್ತಿಯವರ ಕುರಿತು ಉಲ್ಲೇಖ ಇಲ್ಲಿ ಅಪ್ರಸ್ತುತ. ಇದನ್ನು ಅವರಿಗೇ ತಿಳಿಸಿ.

    ಪ್ರತ್ಯುತ್ತರಅಳಿಸಿ
  4. ಆತ್ಮನುಸಂಧಾನ ಇರುವ ನೀತಿವಂತನಿಗೆ ನೀವು ಹೇಳಿದ ಪರಿಸ್ಥಿತಿ ಬರುವುದೇ ದುರ್ಲಭ, ಬಂದರೂ ಆಗ ಅವನೊಳಗಿನ ಆತ್ಮ ಏನು ಹೇಳುತ್ತದೋ ಅದನ್ನೇ ಕೇಳುವುದು ಉಚಿತ. ಬುದ್ಧ-ಅಂಗುಲೀಮಾಲರ ಕಥೆ ನಿಮಗೆ ಗೊತ್ತಿರಬಹುದು. ದುಷ್ಟನ ಮುಂದೆ ಆತ್ಮದ ಹೇಳಿಕೆಗೆ ಓಗೊಡದೇ ಓಟಕ್ಕಿತ್ತರೆ ದುಷ್ಟ ಅಟ್ಟಿಸಿಯೂ ಕೊಂದಾನು ! ದುಷ್ಟ ನಿಗ್ರಹಕ್ಕೆ ಸಾತ್ವಿಕ ಆತ್ಮದಲ್ಲಿ ಸಾಮರ್ಥ್ಯ ಅವಿತಿರುತ್ತದೆ ಎಂಬುದನ್ನು ನೀವು ಮನಗಾಣಬೇಕು. ನೀವು ನೀವೇ ಹೇಳಿದ್ದನ್ನು ಸಮರ್ಥಿಸ ಹೊರಟರೆ ನೀವು ಹೇಳಿದ್ದೇ ನಿಮಗೆ ತಟ್ಟುತ್ತದೆ. ಇಲ್ಲಿ ನಿಮ್ಮ ಹೇಳಿಕೆ ಸರ್ವಥಾ ತಪ್ಪು, ಆತ್ಮದ ಕರೆ ಎಂದಿಗೂ ಸತ್ಯ, ಆತ್ಮವಂಚನೆ ಮಾಡುವವನಿಗೆ ಯಾವ ರೂಪದ ಸಾಧನೆಯೂ ಸಾಧ್ಯವಿಲ್ಲ! ವೃಥಾ ಆತ್ಮ ಹೇಳಿದ್ದನ್ನು ಎಲ್ಲಾಸರ್ತಿ ಕೇಳಬಾರದು ಎಂದು ಎಂದಿಗೂ ಬಿಂಬಿಸಬೇಡಿ, ನಗೆಪಾಟಲಾದೀತು!

    ಪ್ರತ್ಯುತ್ತರಅಳಿಸಿ
  5. ನೀವು ಹೇಳಿದಂತೆ ವೃಥಾ ಆತ್ಮ ಹೇಳಿದ್ದನ್ನು ಎಲ್ಲಾಸರ್ತಿ ಕೇಳಬಾರದು ಎಂದು ಲೇಖನದಲ್ಲಿ ಬಿಂಬಿತವಾಗಿದೆಯೇ ಎಂದು ಹುಡುಕಿದೆ. ಕಾಣಲಿಲ್ಲ. ಎಷ್ಟೆಂದರೂ ನನ್ನದು ಮಾಗಿದ ದೃಷ್ಟಿಯಲ್ಲವಲ್ಲಾ! ಅಭಿನಂದನೆಗಳು, ನೀವು ಮಾಗಿದವರು!ನಿಮ್ಮ ಸಲಹೆ ನನ್ನ ಗಮನದಲ್ಲಿರುತ್ತದೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಾಗರಾಜರೇ, ನಾನು ಮಾಗಿದವನು ಎಂದು ಎಂದೂ ಹೇಳಿಕೊಳ್ಳಲಿಲ್ಲ, ಮೇಲೆ ಶ್ರೀಧರ್ ಅವರು ಬಳಸಿದ ಪದವನ್ನು ಅನುಸರಿಸಿದೆ ಅಷ್ಟೇ. ವಯಸ್ಸು ಆಗುತ್ತದೆ, ಶರೀರ ಮಾಗುತ್ತದೆ, ಆದರೆ ಮನಸ್ಸು ಸಾಮಾನ್ಯವಾಗಿ ಜನಸಾಮಾನ್ಯರಾದ ನಮಗೆ ಮಾಗುವುದಿಲ್ಲ, ಮಾಗಿದ ಮನಸ್ಸಿನಿಂದ ಬರುವ ಮಾತುಗಳೇ ಬೇರೇ ರೀತಿ ಇರುತ್ತವೆ; ಅಲ್ಲಿ ಗಾಢವಾದ ಆತ್ಮಾನುಭೂತಿ ಇರುತ್ತದೆ, ಅದು ನಿಜವಾದ ಪರಮಹಂಸರಿಗೆ ಮಾತ್ರ ಸಾಧ್ಯ! ಇದನ್ನು ನೀವು ಒಪ್ಪಿಕೊಳ್ಳುತ್ತೀರಿ ಎಂದುಕೊಳ್ಳುತ್ತೇನೆ, ನಿಮಗೆ ಹಲವು ಧನ್ಯವಾದಗಳು

      ಅಳಿಸಿ