ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಭಾನುವಾರ, ಸೆಪ್ಟೆಂಬರ್ 30, 2012

‘ವೇದಗಳು ಎಲ್ಲ ಕಾಲಕ್ಕೂ ಪ್ರಸ್ತುತ’-ಮಾಧ್ಯಮ ಸಂವಾದದಲ್ಲಿ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರು



ಹಾಸನ, ಸೆ. ೨೯: ವೇದಗಳು ಹಳಸಲು ಎಂದಾಗಲಿ, ಕಾಲ ಮಿತಿಯುಳ್ಳ ಅಪ್ರಸ್ತುತ ವಿಷಯವೆಂದಾಗಲಿ ತಿಳಿಯುವುದೇ ಅಜ್ಞಾನ ಹಾಗೂ ತಪ್ಪು ಕಲ್ಪನೆಯಾಗಿದೆ; ವೇದಗಳು ಎಲ್ಲ ಕಾಲಕ್ಕೂ ಪ್ರಸ್ತುತವೇ ಆಗಿವೆ ಎಂದು ಬೆಂಗಳೂರಿನ ವೇದಾಧ್ಯಾಯಿ ಸುಧಾಕರ ಶರ್ಮರು  ಪ್ರತಿಪಾದಿಸಿದರು.
ಭಾನುವಾರ ವೇದಗಳ ಕುರಿತಾದ ಮುಕ್ತ ಸಂವಾದ ನಡೆಸಿಕೊಡಲಿಕ್ಕಾಗಿ ಇಂದು ನಗರಕ್ಕೆ ಭೇಟಿ ನೀಡಿದ್ದ ಅವರು, ಇಂದು ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಏರ್ಪಡಿಸಿದ್ದ ‘ಮಾಧ್ಯಮ ಸಂವಾದ’ದಲ್ಲಿ ಭಾಗವಹಿಸಿ ವೇದಗಳ ಕುರಿತಾದ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸಿದರು.

     ಹುಟ್ಟಿದಂದಿನಿಂದ ಹಿಡಿದು ಸಾಯುವವರೆಗೂ ಮಾನವ ಜೀವಿಯ ಜತೆಯಾಗಿಯೇ ಇರುವ ಹಾಗೂ ಇರಬೇಕಾದ ಹಲವಾರು ಸತ್ಯ ಸಂಗತಿಗಳ ಕುರಿತು ತಿಳಿವಳಿಕೆ, ಜ್ಞಾನ ಹಾಗೂ ಮುನ್ನಡೆಯಲು ಮಾರ್ಗದರ್ಶನ ಮಾಡುವುದರಿಂದ ವೇದಗಳು ಎಂದೆಂದಿಗೂ ಪ್ರಸ್ತುತವೇ ಎಂದು ಹಲವು ನಿದರ್ಶನಗಳ ಸಹಿತ ತಿಳಿಸಿಕೊಟ್ಟ ಅವರು, ಮತ್ತೊಬ್ಬರನ್ನು ಹಾಳು ಮಾಡುವ ಗುಣ, ಹಿಂಸೆ, ತಾರತಮ್ಯ ಅಥವಾ ಭೇದ ಭಾವ ಇತ್ಯಾದಿ ಯಾವುದೇ ನಕಾರಾತ್ಮಕ ಅಂಶಗಳು ವೇದಗಳಲ್ಲಿಲ್ಲ ಎಂದು ತಿಳಿಸಿದರು. ಮನು ಸ್ಮೃತಿ ಸೇರಿದಂತೆ ಹಲವಾರು ಸ್ಮೃತಿಗಳು ಆಯಾ ಕಾಲ ಕಾಲಮಾನಗಳಿಗೆ ತಕ್ಕಂತೆ ರಚಿತವಾದ ನಿಯಮಗಳೇ ಹೊರತು ಅವು ಪ್ರಸ್ತುತವಾಗುವುದಿಲ್ಲ ಹಾಗೂ ಹಲವಾರು ಕಲಬೆರಕೆ ಅಂಶಗಳೂ ಸಹ ಸೇರಿರುವುದರಿಂದ ಅವು ಪರಮ ಪ್ರಮಾಣವೂ ಆಗುವುದಿಲ್ಲ; ಆದರೆ ಮೂಲ ವೇದಗಳು ಮಾತ್ರ ಎಲ್ಲ ವಿಷಯಗಳಿಗೂ ಪರಮ ಪ್ರಮಾಣವಾಗುತ್ತವೆ. ಏಕೆಂದರೆ ವೇದಗಳೊಂದಿಗೆ ವ್ಯಾಕರಣ, ಶಿಕ್ಷಾ, ಛಂದಸ್ಸು, ಜ್ಯೋತಿಷ (ಖಗೋಳ ವಿಜ್ಞಾನವೇ ಹೊರತು ಈಗಿನ ಫಲ ಜ್ಯೋತಿಷ್ಯ ಅಲ್ಲ), ನಿರುಕ್ತ ಮತ್ತು ಕಲ್ಪ ಎಂಬ ಈ ೬ ವೇದಾಂಗಗಳ ಚೌಕಟ್ಟಿನ ನಡುವೆ ವೇದಗಳು ಬಂಧಿಸಲ್ಪಟ್ಟಿರುವುದರಿಂದ ಅವು ಸುರಕ್ಷಿತವಾಗಿವೆ. ಯಾವುದೇ ಕಲಬೆರಕೆಯಾಗಲಿ; ತಿದ್ದುಪಡಿಯಾಗಲಿ; ಬದಲಾವಣೆಯಾಗಲಿ ಮಾಡಲು ಸಾಧ್ಯವಾಗಿಲ್ಲ; ಸಾಧ್ಯವಾಗುವುದೂ ಇಲ್ಲ. ಹೀಗಾಗಿ ಅವರು ಪರಮ ಪ್ರಮಾಣವೇ ಸರಿ; ಆದರೆ ಇದೇ ಮಾತನ್ನು ಇತರೆ ಪುರಾಣ ಪುಣ್ಯ ಕಥೆಗಳ ಬಗ್ಗೆ ಹೇಳುವಂತಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಹಲವು ಸಮರ್ಥನೆಗೊಂದಿಗೆ ಉತ್ತರ ಬಿಡಿಸಿಟ್ಟರು.

       ಬ್ರೀಟೀಷರ  ಮೆಕಾಲೆ ಪ್ರಣೀತವಾದ ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಯಾರ ಉದ್ಧಾರವೂ ಸಾಧ್ಯವಿಲ್ಲ. ಈಗಿನ ಎಲ್.ಕೆ.ಜಿ.ಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗಿನ ಯಾವುದೇ ಸರ್ಟಿಫಿಕೇಟ್ ಆಧಾರಿತ ಶಿಕ್ಷಣದಲ್ಲಿ ಹೊರಗಿನ ವಿಷಯಗಳನ್ನು ಬಲವಂತವಾಗಿ ಮನುಷ್ಯನ ಮೆದುಳಿಗೆ ತುರುಕುವುದಾಗಿದೆ. ಆದ್ದರಿಂದ ಅದು ನಿಜವಾದ ಶಿಕ್ಷಣವೇ ಅಲ್ಲ. ಮನುಷ್ಯನೊಳಗಿನ ಪ್ರತಿಭೆ ಅಥವಾ ಶಕ್ತಿಯನ್ನು ಸಮಾಜದ ಉದ್ಧಾರಕ್ಕಾಗಿ ಹೊರಗೆ ಹಾಕುವುದೇ ನಿಜವಾದ ಶಿಕ್ಷಣ. ಆದರೆ ಅದು ನಡೆಯುತ್ತಿಲ್ಲ. ಈಗೆಲ್ಲಾ ಉಲ್ಟಾ ಶಿಕ್ಷಣವಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ವಿಷಾದಿಸಿ, ಶಾಲೆಯ ಮೆಟ್ಟಿಲನ್ನೂ ಹತ್ತದವರು ಪ್ರತಿಭಾವಂತರಾಗಿ ಸಮಾಜ ಸುಧಾರಣೆ ಮಾಡಿದವರ ಪಟ್ಟಿಯನ್ನೇ ಮುಂದಿಟ್ಟರು!

     ವೇದಗಳು ಜಗತ್ತಿನ ಸರ್ವರಿಗಾಗಿಯೇ ಇವೆ; ವೇದ ಎಂದರೆ ಜ್ಞಾನ ಎಂದರ್ಥ. ಅವು ಎಲ್ಲೂ ಜಾತಿ ಪದ್ಧತಿ, ಲಿಂಗ ಭೇದ, ಮೂರ್ತಿ ಪೂಜೆಗಳನ್ನು ಹೇಳಿಲ್ಲ; ಅವೆಲ್ಲ ಶತಮಾನಗಳಿಂದೀಚೆಗೆ ಹುಟ್ಟಿಕೊಂಡ ಸ್ವಾರ್ಥ ಲಾಲಸೆಯ ಪಿಡುಗುಗಳಾಗಿವೆ. ವೇದಗಳು ವಾಸ್ತವವಾಗಿ ವೇದಗಳು ವರ್ಣಗಳ ಕುರಿತು ಹೇಳುತ್ತವೆ; ವರ್ಣ ಎಂದರೆ ಜಾತಿಯಲ್ಲ; ಅದು ‘ಆಯ್ಕೆ’ ಎಂದರ್ಥ. ಸಾಮಾಜಿಕ ಅನಿಷ್ಟಗಳಾದ ಅಜ್ಞಾನ, ಅನ್ಯಾಯ, ಅಭಾವ ಮತ್ತು ಆಲಸ್ಯಗಳ ವಿರುದ್ಧ ಹೋರಾಡಲು ಯಾರಿಗೆ ಯೋಗ್ಯತೆ ಇದೆಯೋ; ಯಾರು ಆ ರೀತಿ ಹೋರಾಟ ಮಾಡಲು ‘ಆಯ್ಕೆ’ ಮಾಡಿಕೊಳ್ಳುವರೋ ಅಂತಹವರಿಗೆ ಕ್ರಮವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ಹೆಸರು. ಅಂತಹ ಮನೋಭಾವ ಹುಟ್ಟಿನಿಂದಲೇ ಬರಬೇಕೆಂದೇನೂ ಇಲ್ಲ; ಯೋಗ್ಯತೆಯಿಂದ ಗಳಿಸಬೇಕು. ಈ ನಾಲ್ವರಲ್ಲಿ ಯಾರೂ ಜೇಷ್ಠರೂ ಅಲ್ಲ; ಕನಿಷ್ಠರೂ ಅಲ್ಲ. ಸಮಾಜೋದ್ಧಾರಕ್ಕೆ ಈ ಎಲ್ಲರೂ ಅಗತ್ಯವಾಗಿ ಬೇಕಾದವರೇ ಆಗಿದ್ದಾರೆ. ಹೀಗಾಗಿ ಈ ಅರ್ಥದಲ್ಲಿ ವರ್ಣಾಶ್ರಮಗಳು ಎಂದೆಂದಿಗೂ ಪ್ರಸ್ತುತ ಎಂದು ಶರ್ಮಾಜಿ ವ್ಯಾಖ್ಯಾನಿಸಿದರು.
      ಅರ್ಥಪೂರ್ಣವಾಗಿ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ‘ವೇದ ಭಾರತೀ’ ಸಂಚಾಲಕರುಗಳಾದ ಹರಿಹರಪುರ ಶ್ರೀಧರ್, ಕವಿ ನಾಗರಾಜ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ ಹಾಜರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಪ್ರಭಾಕರ ಸ್ವಾಗತಿಸಿ, ವಂದಿಸಿದರು.
-ಎಚ್.ಎಸ್. ಪ್ರಭಾಕರ 

ಶನಿವಾರ, ಸೆಪ್ಟೆಂಬರ್ 29, 2012

ವೇದಾಧ್ಯಾಯೀ ಶ್ರೀ ಸುಧಾಕರಶರ್ಮ ಕಿರು ಪರಿಚಯ



     ಈಗ್ಗೆ ೧ ವರ್ಷದ ಹಿಂದೆ ‘ಖತಾರ್’ ಎಂಬ ಖಾಸಗಿ ಧಾರ್ಮಿಕ ಟಿ.ವಿ. ವಾಹಿನಿಯಲ್ಲಿ ವಿವಿಧ ಮತ ಧರ್ಮಗಳ ಗುರುಗಳ ನಡುವೆ ಧಾರ್ಮಿಕ ಚರ್ಚೆಯೊಂದು ನೇರ ಸಂವಾದ ರೂಪದಲ್ಲಿ ನಡೆದಿತ್ತು. ಆ ಗುರುಗಳ ನಡುವೆ ‘ಬದುಕುವ ಕಲೆ’ ಕಲಿಸುವ ಓರ್ವ ಗುರು ಭಾರತ ದೇಶವನ್ನು ಪ್ರತಿನಿಧಿಸಿದ್ದರು. ಆದರೆ ಪರಸ್ಪರ ವಾದ ವಿವಾದ ಸಾಗಿದಂತೆ ನಮ್ಮ ಗುರುಗಳಿಗೆ ಸೋಲುಂಟಾಯಿತು! ಈ ಮಹನೀಯರು ನಮ್ಮ ಮನುಕುಲದ ಜ್ಞಾನ ಭಂಡಾರವೆನಿಸಿದ ವೇದಗಳನ್ನು ಬದಿಗಿಟ್ಟು, ನಮ್ಮ ಪರಂಪರೆ ನಡುವೆ ಸಾಗಿ ಬಂದಿರುವ ಕೆಲಸಕ್ಕೆ ಬಾರದ ಪುರಾಣಗಳು-ಪುಣ್ಯ ಕಥೆಗಳನ್ನು ಆಧರಿಸಿ ತಮ್ಮ ವಾದ ಮಂಡಿಸಲು ಯತ್ನಿಸಿದ್ದೇ ಅವರ ಸೋಲಿಗೆ ಕಾರಣವಾಯಿತು. ಅವರ ಜಾಗದಲ್ಲಿ ಪಂಡಿತ್ ಸುಧಾಕರ ಚತುರ್ವೇದಿಗಳೋ ಅಥವಾ ಅವರ ಶಿಷ್ಯ ಸುಧಾಕರ ಶರ್ಮರೋ ಇದ್ದಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತು! ಅಂದಹಾಗೆ ಯಾರು ಈ ಸುಧಾಕರ ಶರ್ಮ?


     ಪ್ರಳಯದ ಭೀತಿ, ವಾಸ್ತು, ಜ್ಯೋತಿಷ್ಯ, ವ್ರತಾಚರಣೆ, ವಿಶೇಷ ಪೂಜೆ ಅವುಗಳಿಂದ ಸಿಗುತ್ತದೆನ್ನುವ ಪ್ರತಿಫಲ ಇತ್ಯಾದಿ ಕುತೂಹಲಕಾರಿ ವಿಷಯಗಳನ್ನು ತಿಳಿಯಲು ಕಾತರರಾಗುವ ನಾವು ಟಿ.ವಿ. ಮುಂದೆ ಕುಳಿತು ಅಂತಹ ಕಾರ್ಯಕ್ರಮಗಳನ್ನು ಎವೆಯಿಕ್ಕದೆ ವೀಕ್ಷಿಸುತ್ತೇವೆ. ಇಂತಹ ಅಸಂಬದ್ಧ ಪುರಾಣಗಳು, ಪುಣ್ಯ ಕಥೆಗಳು, ಪೂಜೆ, ಪುನಸ್ಕಾರದಂತಹ ವಿಷಯಗಳಾವುವೂ ವೇದದಲ್ಲಿಲ್ಲ; ಜಗತ್ತಿನಲ್ಲಿ ಮನುಷ್ಯ ಹೇಗೆ ಬದುಕಬೇಕು ಎಂಬುದನ್ನು ಬೋಧಿಸುವ ‘ಮನುಕುಲದ ಸಂವಿಧಾನ’ವೇ ವೇದ ಎಂಬ ಸತ್ಯ ಸಂಗತಿಗಳನ್ನು ವೇದ ಮಂತ್ರಗಳ ನಿಜವಾದ ಅರ್ಥ ಬಿಡಿಸಿಟ್ಟು ತಿಳಿಸಿಕೊಡುವ ದಾರ್ಶನಿಕರೇ ವೇದಾಧ್ಯಾಯಿ ಸುಧಾಕರಶರ್ಮ! ‘ಚಂದನ’ ವಾಹಿನಿಯಲ್ಲಿ ಪ್ರತಿ ಭಾನುವಾರ ಬೆಳಗ್ಗೆ ೯-೩೦ ರಿಂದ ಪ್ರಸಾರವಾಗುತ್ತಿರುವ ‘ಹೊಸ ಬೆಳಕು’ ಧಾರಾವಾಹಿಯ ಕೇಂದ್ರ ಬಿಂದು- ಒಂದೇ ಮಾತಿನಲ್ಲಿ ಹೇಳಬೇಕೆಂದರೆ ವೇದ, ವಿಜ್ಞಾನ ಹಾಗೂ ವೈಚಾರಿಕತೆ- ಈ ಮೂರನ್ನೂ ಮೇಳೈಸಿಕೊಂಡಿರುವ ಅಪರೂಪದ ವಿಶಿಷ್ಟ ಬಹುಮುಖ ವ್ಯಕ್ತಿತ್ವದ ಜ್ಞಾನ ವೃದ್ಧ ಈ ವ್ಯಕ್ತಿ!!

     ಪ್ರಸ್ತುತ ಭಾರತ ದೇಶ ಸಾಗುತ್ತಿರುವ ಹಾದಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ವೇದಗಳ ಕುರಿತು ಚರ್ಚಿಸಲು ಹೊರಟಾಗ ಯಾರಾದರೂ ಮೂಗು ಮುರಿದರೆ ಅಥವಾ ‘ಅನಿಷ್ಟಕ್ಕೆಲ್ಲ ಶನೇಶ್ವರ ಹೊಣೆ’ ಎಂಬಂತೆ ವೇದಗಳನ್ನು ದೂಷಿಸಿದರೆ ಅದು ಸಹಜ ಹಾಗೂ ತಪ್ಪು ಅವರದಲ್ಲ! ಏಕೆಂದರೆ ವೇದಗಳ ಕುರಿತು ಶತ ಶತಮಾನಗಳಿಂದಲೂ ಹರಿದುಬಂದ ತಪ್ಪು ಕಲ್ಪನೆಗಳು, ಪ್ರಕ್ಷಿಪ್ತಗಳು, ಅರೆಬೆಂದ ಎರವಲು ಜ್ಞಾನ, ಗೊಡ್ಡು ಸಂಪ್ರದಾಯಗಳು, ವಿಚಾರವಿಲ್ಲದ ಆಚರಣೆಗಳು, ಜೀವನ ಶೈಲಿ ಇತ್ಯಾದಿ ಅನಿಷ್ಟ ಕಲಸು ಮೇಲೋಗರಗಳ ನಡುವೆ ಭಾರತೀಯರು ಬೆಳೆದು ಬಂದಿರುವ ಬಗೆಯೇ ಇದಕ್ಕೆ ಕಾರಣ. ವೇದಗಳು ವಜ್ರವಿದ್ದಂತೆ; ಆದರೆ ಅಜ್ಞಾನದಿಂದಾಗಿ ವಜ್ರವನ್ನು ತಿಪ್ಪೆಗೆ ಎಸೆಯಲಾಗಿದೆ; ಅದು ವಜ್ರದ ತಪ್ಪಲ್ಲವಲ್ಲ!? ಜಗತ್ತಿಗೇ ಶಾಂತಿ ಪಾಠ ಹೇಳಿದ ನಮ್ಮ ದೇಶದ ಸದ್ಯದ ಪರಿಸ್ಥಿತಿಗೆ ಕೈಗನ್ನಡಿಯಾಗಿ ಖತಾರ್ ಟಿ.ವಿ. ಪ್ರಕರಣ ರೂಪದಲ್ಲಿ ಇನ್ನೊಂದು ವಿಪರ್ಯಾಸ ಸೇರ್ಪಡೆಯಾಯಿತಷ್ಟೆ.

   ವೇದಾಧ್ಯಾಯಿ ಎಂದ ಕೂಡಲೇ ಸಂತನೋ, ಮುನಿಯೋ ಅಥವಾ ಯಾವುದೋ ಮಠದ ಸ್ವಾಮೀಜಿಯೋ ಎಂದೇನೂ ಭಾವಿಸಬೇಕಾಗಿಲ್ಲ. ಬಹುಮುಖ ವಿದ್ಯಾರ್ಹತೆ- ಅಂದರೆ ವಿಜ್ಞಾನ. ಸಂಸ್ಕೃತ ಹಾಗೂ ಲೆಕ್ಕ ಶಾಸ್ತ್ರ (ಐ.ಸಿಡಬ್ಲ್ಯುಎ) ಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ವೇದಾಧ್ಯಾಯಿಯೂ ಆಗಿದ್ದು ಸಾಮಾನ್ಯರಲ್ಲಿ ಅಸಾಮಾನ್ಯ ಎಂದು ಧಾರಾಳವಾಗಿ ಹೇಳಬಹುದು! ಈ ಹಿಂದೆ ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿದ್ದ ದಿ. ಎನ್. ಶ್ರೀಕಂಠಯ್ಯ ಅವರ ಪುತ್ರರಾದ ಶ್ರೀಯುತರು, ಮಹಾತ್ಮ ಗಾಂಧಿಯವರ ನಿಕಟವರ್ತಿ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಚತುರ್ವೇದಗಳ ಪಂಡಿತ ಸುಧಾಕರ ಚತುರ್ವೇದಿ ಅವರ ಶಿಷ್ಯರಾಗಿದ್ದಾರೆ. ಇವರ ಇಡೀ ಸುಖೀ ಕುಟುಂಬವೇ ವೇದೋಕ್ತ!
     ೧೯೭೩ ರಿಂದಲೂ ಬೆಂಗಳೂರು ಆಕಾಶವಾಣಿಯ ನಾಟಕ ಕಲಾವಿದರೂ, ಹಲವು ಮಹತ್ವದ ಕೃತಿಗಳ ರಚನಾಕಾರರೂ ಆಗಿರುವ ಶರ್ಮ ಅವರು ನಮ್ಮ ಪರಂಪರೆಯಲ್ಲಿ ಸಾಗಿಬಂದಿರುವ ಅನಿಷ್ಟ ಆಚರಣೆಗಳು, ಗೊಡ್ಡು ಸಂಪ್ರದಾಯಗಳ ಕಟ್ಟಾ ವಿರೋಧಿಯಾಗಿರುವುದರಿಂದ ‘ಖಂಡಿತವಾದಿ ಲೋಕ ವಿರೋಧಿ’ ಎಂಬಂತೆ ಸಂಪ್ರದಾಯಸ್ಥ ವೈದಿಕರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ‘ಮದುವೆ-ಏಕೆ-ಯಾವಾಗ-ಹೇಗೆ?’, ‘ಮೃತ್ಯುವೇ ನಮಸ್ಕಾರ’, ‘ಜ್ಯೋತಿಷಿಗಳೇ ಸತ್ಯದ ಕೊಲೆ ಮಾಡಬೇಡಿ!’, ‘ವಾಸ್ತು ಬೀಳದಿರಿ ಬೇಸ್ತು!"; ‘ಜನಿವಾರದಲ್ಲಿ ಬ್ರಾಹ್ಮಣ್ಯವಿಲ್ಲ’ ಇತ್ಯಾದಿ ಮಹತ್ವದ ಕೃತಿಗಳ ರಚನಾಕಾರರಾದ ಇವರು ಕರ್ನಾಟಕದಾದ್ಯಂತ ಹಾಗೂ ಪಕ್ಕದ ಆಂಧ್ರ ಪ್ರದೇಶದಲ್ಲೂ ವೇದಗಳ ಕುರಿತು ನಿರಂತರ ಉಪನ್ಯಾಸ ಹಾಗೂ ಪ್ರವಚನಗಳನ್ನು ನೀಡುತ್ತಿದ್ದಾರೆ.
     ವೇದಗಳ ಕುರಿತಾದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಮಹತ್ವಪೂರ್ಣ ಪ್ರಬಂಧಗಳನ್ನು ಮಂಡಿಸಿರುವ ಶರ್ಮಾಜಿ, ವೇದ ಮಂತ್ರಾರ್ಥಗಳ ವಿವರಣೆ ಸಹಿತವಾಗಿ ಬ್ರಾಹ್ಮಣೇತರರು, ಮಹಿಳೆಯರು ಹಾಗೂ ಬಾಲಕಿಯರಿಗೂ ಸಹ ಉಪನಯನ ಸಂಸ್ಕಾರ ಮಾಡಿಸಿದ್ದಾರೆ; ಮಾಡಿಸುತ್ತಾರೆ! ವ್ಯಕ್ತಿತ್ವ ವಿಕಸನ, ಕೌಟುಂಬಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಕೌನ್ಸಿಲಿಂಗ್ (ಸಮಾಲೋಚನೆ) ಮಾಡುವ ಶ್ರೀಯುತರನ್ನು, ರಾಜ್ಯದ ಅನೇಕ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ಟಿ.ವಿ. ಮಾಧ್ಯಮಗಳು ಹಲವು ಕಾರ್ಯಕ್ರಮಗಳ ಮೂಲಕ ಪರಿಚಯಿಸಿವೆ; ಅವರ ಲೇಖನಗಳನ್ನು ಪ್ರಕಟಿಸುತ್ತಿವೆ ಹಾಗೂ ತಮ್ಮ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿವೆ.
     ಬೆಂಗಳೂರು ನಿವಾಸಿಗಳಾಗಿರುವ ಶ್ರೀಯುತರು, ತಮ್ಮ ಮಕ್ಕಳನ್ನು ಹೊರಗಿನ ಯಾವುದೇ ಶಾಲೆಗಳಿಗೂ ಕಳುಹಿಸದೆ ಮನೆಯಲ್ಲೇ ಗುರುಕುಲ ಮಾದರಿ ವೇದ ಶಿಕ್ಷಣ ಕೊಡಿಸಿದ್ದು, ಯಾವ ಪದವೀಧರರಿಗಿಂತಲೂ ಕಡಿಮೆಯಿಲ್ಲದೆ ಒಂದು ಕೈ ಹೆಚ್ಚಾಗಿಯೇ ಬುದ್ಧಿವಂತರನ್ನಾಗಿ ಬೆಳೆಸಿದ್ದಾರೆಂದರೆ ಅಚ್ಚರಿಯೇ ಸರಿ!

-ಎಚ್.ಎಸ್. ಪ್ರಭಾಕರ, ಹಿರಿಯ ಪತ್ರಕರ್ತರು,
ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಪತ್ರಕರ್ತರ ಸಂಘ,
ಎಚ್.ಆರ್.ಎಸ್. ಕಾಂಪೌಂಡ್, ೬ನೇ ಕ್ರಾಸ್,
ಕೆ.ಆರ್. ಪುರಂ, ಹಾಸನ-೫೭೩ ೨೦೧

ಭಾನುವಾರ, ಸೆಪ್ಟೆಂಬರ್ 23, 2012

ನಮ್ಮ ಆಚರಣೆಗಳು, ಸಂಪ್ರದಾಯಗಳು ವೇದೋಕ್ತವೇ?

'ವೇದಜೀವನ'ದ ಓದುಗರಿಗೆ,
ನಮಸ್ಕಾರಗಳು.
ದಿನಾಂಕ 30-09-2012ರಂದು ಹಾಸನದಲ್ಲಿ ಒಂದು ಒಳ್ಳೆಯ ವಿಚಾರ ಪ್ರಚೋದಕ ಕಾರ್ಯಕ್ರಮವಿದೆ. ಆಹ್ವಾನ ಪತ್ರಿಕೆ ಇದೋ ಇಲ್ಲಿದೆ. ಬಿಡುವು ಮಾಡಿಕೊಂಡು ಭಾಗವಹಿಸಿ. ಬರುವ ಕುರಿತು ಪೂರ್ವಭಾವಿಯಾಗಿ ತಿಳಿಸಬಹುದೇ?


ಶುಕ್ರವಾರ, ಸೆಪ್ಟೆಂಬರ್ 21, 2012

ಮನಸೆಂಬ ಮಾಯೆ


     ಕುಡಿಯುವುದು ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಕುಡುಕನ ಮನಸ್ಸೂ ಹೇಳುತ್ತದೆ, 'ಬೇಡ, ಕುಡಿಯಬೇಡ, ಒಳ್ಳೆಯದಲ್ಲ' ಅಂತ. ಆದರೆ, 'ಜೀವನದ ಅವಧಿ ಕಡಿಮೆ. ಇರುವಷ್ಟು ದಿನ ಮಜಾ ಮಾಡಿ, ಖುಷಿಪಟ್ಟು ಹೋಗೋಣ' ಎಂದು ಉಪದೇಶಿಸುವ ಅದೇ ಮನಸ್ಸು 'ಕುಡಿ, ಮಜಾ ಮಾಡು. ಸ್ನೇಹಿತರೊಂದಿಗೆ ಸೇರಿ ಎಲ್ಲವನ್ನೂ ಮರೆತು ಕುಡಿ, ನಿನಗೆ ಅದರಿಂದ ಸಂತೋಷ ಸಿಗುವುದಾದರೆ ಅದನ್ನು ಏಕೆ ಕಳೆದುಕೊಳ್ಳುತ್ತೀಯೆ' ಎಂದು ಪ್ರಚೋದಿಸುತ್ತದೆ. ಹಾಗೂ ಡೋಲಾಯಮಾನ ಸ್ಥಿತಿ ಮುಂದುವರೆದರೆ,  ಮಧ್ಯಮ ಮಾರ್ಗ ಸೂಚಿಸಿ ಹೇಳುತ್ತದೆ, 'ಇದೊಂದು ಸಲ ಕುಡಿದು ಬಿಡು, ಆಮೇಲೆ ಕುಡಿಯದಿದ್ದರಾಯಿತು.' ಕೊನೆಗೆ ಅವನು ಯೋಚನೆ ಮುಂದುವರೆಸಿದ್ದಂತೆಯೇ ಅವನ ಕಾಲುಗಳು ಬಾರಿನ ಹಾದಿ ಹಿಡಿದಿರುತ್ತವೆ.
     'ಯಾರು ಏನೇ ಅನ್ನಲಿ, ನನ್ನ ಮನಸ್ಸು ಒಪ್ಪಿದಂತೆ ಮಾಡುತ್ತೇನೆ, ಅದರಿಂದ ನನಗೆ ಸಂತೋಷವಾಗುತ್ತದೆ' ಎಂದು ಸಮರ್ಥಿಸಿಕೊಳ್ಳುತ್ತೇವೆ. 'ಖ' ಅಂದರೆ ಇಂದ್ರಿಯ, ಸು+ಖ-  ಯಾವುದು ಇಂದ್ರಿಯಕ್ಕೆ ಒಳ್ಳೆಯದಾಗಿ ಕಾಣುತ್ತೋ ಅದು ಸುಖ, ದುಃ+ಖ- ಯಾವುದು ಇಂದ್ರಿಯಕ್ಕೆ ಕೆಟ್ಟದಾಗಿ ಕಾಣುತ್ತೋ ಅದು ದುಃಖ. ವಾಸ್ತವವಾಗಿ ಆಲೋಚನೆ ಮಾಡಿ ನೋಡಿದರೆ, ನಾವು ಸುಖ ಎಂದು ತಿಳಿದುಕೊಂಡಿರುವುದು ದುಃಖವೇ ಆಗಿರಬಹುದು, ದುಃಖ ಎಂದು ತಿಳಿದುಕೊಂಡಿರುವುದು ಸುಖವೇ ಆಗಿರಬಹುದು, ತತ್ಕಾಲಕ್ಕೆ ಸಂತೋಷವಾಯಿತು ಅನ್ನಿಸುವ ಕ್ರಿಯೆಗಳು ನಂತರ ಮನಃಕ್ಲೇಷಕ್ಕೆ ಈಡು ಮಾಡಬಹುದು. ಈಗ ಕಷ್ಟ ಅನ್ನಿಸುವ ಸಂಗತಿಗಳು ನಂತರದಲ್ಲಿ ಸಂತೋಷ ಕೊಡುವುದೂ ಇದೆ. ಇಂದ್ರಿಯಗಳು ಆರೋಗ್ಯವಾಗಿದ್ದರೆ ಸುಖ, ದುಃಖ ನಮಗೆ ಗೊತ್ತಾಗೋದು. ಒಂದೇ ಮನಸ್ಸು ಹಲವು ರೀತಿಗಳಲ್ಲಿ ಹೇಳುತ್ತದೆ. ಮನಸ್ಸು ಹೇಳಿದಂತೆ ಕುಣಿದರೆ/ಕೇಳಿದರೆ ಒಳ್ಳೆಯದೂ ಆಗಬಹುದು, ಕೆಟ್ಟದೂ ಆಗಬಹುದು.
     ಮನಸ್ಸಿನ ಬಗ್ಗೆ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತೇವೆ, ಅಲ್ಲವೇ? ನಿದ್ದೆ ಮಾಡಿದಾಗ ಆ ಮನಸ್ಸು ಎಲ್ಲಿರುತ್ತದೆ? ಮನಸ್ಸು ಅಂತಿರಲಿ, ನಾವೇ ಇರುವುದಿಲ್ಲ. ನಿದ್ದೆಯಲ್ಲಿ 'ನಾನು' ಇಲ್ಲ, ಜಗತ್ತೂ ಇಲ್ಲ, ದೇವರೂ ಇಲ್ಲ, ಯಾರೂ ಇಲ್ಲ. ಏನೂ ಇಲ್ಲ, ಶೂನ್ಯ. ಆಗ ಸುಖವೂ ಇಲ್ಲ, ದುಃಖವೂ ಇಲ್ಲ. ವಿಚಾರಗಳ ಗೊಂದಲವಿಲ್ಲ. ದ್ವೈತ, ಅದ್ವೈತ, ತ್ರೈತ, ಇತ್ಯಾದಿ ಯಾವ 'ತ'ಗಳೂ ಇಲ್ಲ. ವಿವಿಧ ಧರ್ಮಗಳಿಲ್ಲ, ಜಾತಿ, ಮತ, ಪಂಗಡಗಳಿಲ್ಲ. ಅದೇ ಎಚ್ಚರವಾದ ತಕ್ಷಣ, ಮೊದಲು 'ನಾನು' ಏಳುತ್ತದೆ. ಆ 'ನಾನು'ಗೆ ಜಗತ್ತು ಕಾಣುತ್ತದೆ, ಇದಕ್ಕೆಲ್ಲಾ ಕಾರಣನಾದ 'ಅವನು' ಇದ್ದಾನೆ ಅನ್ನುತ್ತದೆ. ಅಂದರೆ ನಾನು ಬೇರೆ, ಜಗತ್ತು ಬೇರೆ, ದೇವರು ಬೇರೆ ಎಂದು ಅಂದುಕೊಳ್ಳುತ್ತದೆ. ನಿದ್ದೆಯಲ್ಲಿ ಇರದ ಸಂಗತಿಗಳು, ಎಚ್ಚರವಾದಾಗ ಬರುತ್ತವೆ. ನಾನು ತಹಸೀಲ್ದಾರ್, ನಾನು ಇಂಜನಿಯರ್, ನಾನು ಪ್ರಧಾನ ಮಂತ್ರಿ ಅನ್ನುವುದೆಲ್ಲಾ ಹುಟ್ಟುವುದು ಎಚ್ಚರವಾದಾಗ ಮಾತ್ರ, ನಿದ್ದೆಯಲ್ಲಿ ಅವು ಯಾವುವೂ ಇರುವುದಿಲ್ಲ. ಮನಸ್ಸಿನ ಮೇಲೆ ಮಾಯಾ ಮೋಹಿನಿ ಆಡುವ ಆಟಗಳಿವು.
     ಹೀಗಿರುವಾಗ ದೇವರು ಮನುಷ್ಯನಿಗೆ ಕೊಟ್ಟಿರುವ ವಿವೇಚನಾ ಶಕ್ತಿಯನ್ನು ಬಳಸಿಕೊಂಡು ಸರಿ-ತಪ್ಪುಗಳ ಸರಿಯಾದ ವಿಶ್ಲೇಷಣೆ ಮಾಡಿ ಮುನ್ನಡೆಯುವುದು ಸೂಕ್ತ. ಮನಸ್ಸಿನಲ್ಲಿ ದ್ವಂದ್ವವಿದ್ದು, ವಿವೇಚನಾ ಶಕ್ತಿ ಹೇಳಿದ ವಿಚಾರ ಕಡೆಗಣಿಸಿ 'ಯಾರು ಏನಾದರೂ ಅಂದುಕೊಳ್ಳಲಿ, ಹೀಗೆ ಮಾಡಿದರೆ ನನ್ನ ಮನಸ್ಸಿಗೆ ಸಂತೋಷವಾಗುತ್ತದೆ' ಎಂದು ಮಾಡಿದರೆ ಒಳಮನಸ್ಸು ನಿಮ್ಮನ್ನು ಪ್ರಶ್ನಿಸದೇ ಇರುವುದಿಲ್ಲ. ಹೀಗೆ ಮಾಡು ಎನ್ನುವುದೇ ಮನಸ್ಸು, ಹೀಗೇಕೆ ಮಾಡಿದೆ ಎಂದು ಪ್ರಶ್ನಿಸುವುದೂ ಅದೇ ಮನಸ್ಸೇ. ಮನಸ್ಸು ನಮ್ಮನ್ನು ನಿಯಂತ್ರಿಸುವ ಬದಲು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದೇ ದ್ವಂದ್ವವನ್ನು ಕೊನೆಗೊಳಿಸಲು ಸರಿಯಾದ ದಾರಿ. ಕೆಲವು ಸಂದರ್ಭಗಳಲ್ಲಿ ಅಂತರಾತ್ಮ ಒಪ್ಪುವಂತೆ ನಡೆದುಕೊಳ್ಳಲು ಕಷ್ಟವಾಗಬಹುದು. ಅನಿವಾರ್ಯವಾಗಿ ಮಾಡಿದ ಅಂತಹ ಕೆಲಸಗಳಿಗೆ ಕುಗ್ಗಬೇಕಿಲ್ಲ, ಆದರೆ ಹಾಗೆ ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ಹೋಗದೆ ಸರಿಯಾದ ಹಾದಿಯಲ್ಲಿ ನಡೆಯಲು ನಮ್ಮ ಪ್ರಯತ್ನ ಮುಂದುವರೆಸುವುದು ಸೂಕ್ತ.
-ಕ.ವೆಂ.ನಾಗರಾಜ್.
***************
[ಚಿತ್ರಕೃಪೆ: ಅಂತರ್ಜಾಲದಿಂದ ಹೆಕ್ಕಿದ್ದು]

ಶನಿವಾರ, ಸೆಪ್ಟೆಂಬರ್ 15, 2012

ವೇದೋಕ್ತ ಜೀವನ ಪಥ: ಬ್ರಹ್ಮಚರ್ಯಾದಿ ಚತುರಾಶ್ರಮಗಳು -೨: ಗೃಹಸ್ಥಾಶ್ರಮ


     ಎರಡನೆಯದು ಗೃಹಸ್ಥಾಶ್ರಮ. ಯುವಕ-ಯುವತಿಯರು ಪ್ರಥಮಾಶ್ರಮದಲ್ಲಿ ಗಳಿಸಿದ ಶಕ್ತಿಗಳನ್ನು, ಸಮಾಜದ, ರಾಷ್ಟ್ರದ ಅಥವಾ ಜಗತ್ತಿನ ಹಿತಕ್ಕಾಗಿ ಉಪಯೋಗಿಸಲು, ವಿವಾಹಿತರಾಗಿ ಗೃಹಸ್ಥಾಶ್ರಮವನ್ನು ಪ್ರವೇಶಿಸುತ್ತಾರೆ. ಕೆಲವು ಸಂಪ್ರದಾಯಗಳು ನಂಬಿರುವಂತೆ, ವಿವಾಹ ಒಂದು ಪಾಪವಲ್ಲ. ಅದು ಪಾಪವಾಗಿದ್ದಲ್ಲಿ ಭಗವಂತ ಸ್ತ್ರೀ-ಪುರುಷ ಭೇದವನ್ನು ಸೃಷ್ಟಿಸುತ್ತಿರಲಿಲ್ಲ. ಸೂಕ್ತವಾದ ವಿಚಾರದೃಷ್ಟಿಯಿಂದ ಅವಲೋಕಿಸಿದರೆ, ವಿವಾಹಿತ ಜೀವನ, ಮನು ಹೇಳುವಂತೆ ಜ್ಯೇಷ್ಠಾಶ್ರಮ, ಕಾಳಿದಾಸನು ಹೇಳುವಂತೆ ಸರ್ವೋಪಕಾರಕ್ಷಮ. ಬ್ರಹ್ಮಚಾರಿಗಳು, ವಾನಪ್ರಸ್ಥಿಗಳು ಮತ್ತು ಸಂನ್ಯಾಸಿಗಳು ತಮ್ಮ ಜೀವನ ಪೋಷಣೆಗಾಗಿ ಅವಲಂಬಿಸಿರುವುದು ಗೃಹಸ್ಥರನ್ನೇ. ರಾಷ್ಟ್ರದ ಹಾಗೂ ಸಮಾಜದ ಆಗು ಹೋಗುಗಳು ನಿಂತಿರುವುದಾದರೂ ಗೃಹಸ್ಥರ ಮೇಲೆಯೇ. ವೇದಗಳಲ್ಲಿ ಗೃಹಸ್ಥಾಶ್ರಮವನ್ನು ಬಹಳವಾಗಿ ಕೊಂಡಾಡಲಾಗಿದೆ. ಸಂ ಜಾಸ್ಪತ್ಯಂ ಸುಯಮಮಾ ಕೃಣುಷ್ವ || (ಋಕ್.೫.೨೮.೩.) - ಓ ನರ! ಓ ನಾರಿ! ದಾಂಪತ್ಯವನ್ನು ಪರಸ್ಪರ ಸಂಯಮಯುಕ್ತವಾಗಿ ಮಾಡಿರಿ - ಎಂಬ ವೇದಾದೇಶವನ್ನು ಚಿತ್ತದಲ್ಲಿ ಮೂಡಿಸಿಕೊಂಡು, ಭೋಗವಿಲಾಸಕ್ಕೆ ಬಲಿ ಬೀಳದೆ, ಸಂಯತ ಜೀವನ ನಡೆಸುವ ಪಕ್ಷದಲ್ಲಿ, ಗೃಹಸ್ಥಾಶ್ರಮಕ್ಕಿಂತ ಸುಖಕರವಾದ ಸ್ವರ್ಗ ಬೇರಾವುದೂ ಇಲ್ಲ. ಗೃಹಸ್ಥ-ಗೃಹಿಣಿಯರು ಹೇಗಿರಬೇಕು? ವೇದ ಹೇಳುತ್ತದೆ:-

ಸ್ಯೋನಾದ್ಯೋನೇರಧಿ ಬುಧ್ಯಮಾನೌ ಹಸಾಮುದೌ ಮಹಸಾ ಮೋದಮಾನೌ |
ಸುಗೂ ಸುಪುತ್ರೌ ಸುಗೃಹೌ ತರಾಥೋ ಜೀವಾವುಷಸೋವಿಬಾತೀಃ || (ಅಥರ್ವ.೧೪.೨.೪೩.)

[ಸ್ಯೋನಾತ್ ಯೋನೇಃ ಅಧಿ] ಮಂಗಳಕರವಾದ ಗೃಹದಲ್ಲಿ, [ಬುಧ್ಯಮಾನೌ] ತಮ್ಮ ಉತ್ತರದಾಯಿತ್ವದ ಬಗ್ಗೆ ಜಾಗರೂಕರಾಗಿ, [ಹಸಾಮುದೌ] ನಗುತ್ತಾ ನಗಿಸುತ್ತಾ, [ಮಹಸಾ] ತಮ್ಮ ಸ್ವಂತ ಮಹಿಮೆಯಿಂದ [ಮೋದಮಾನೌ] ಹರ್ಷವನ್ನನುಭವಿಸುತ್ತಾ, [ಸುಗೂ] ಪರಿಶುದ್ಧ ಚಾರಿತ್ರ್ಯವಂತರೂ, [ಸುಪುತ್ರೌ] ಉತ್ತಮ ಸಂತತಿಯುಕ್ತರೂ, [ಸುಗೃಹೌ] ದೈನಿಕ ಹಾಗೂ ವಿಶೇಷ ಯಜ್ಞಾದಿಗಳಿಂದ ಉತ್ಕೃಷ್ಟವಾದ ಗೃಹಗಳನ್ನುಳ್ಳವರೂ, [ಜೀವೌ] ಪ್ರಸ್ಫುಟಿತ ಚೈತನ್ಯದಿಂದ ಉತ್ಸಾಹಿಗಳೂ ಆಗಿ, [ವಿಭಾತೀಃ ಉಷಸಃ] ಜ್ಯೋತಿರ್ಮಯವಾದ ಉಷಃಕಾಲಗಳನ್ನು, [ತರಾಥಃ] ದಾಟುವವರಾಗಿರಿ.
     ಇದು ವೇದೋಕ್ತ ಗಾರ್ಹಸ್ಥ್ಯದ ಆಕರ್ಷಕ ಚಿತ್ರ. ಗೃಹಸ್ಥರು ಕೇವಲ ತಮ್ಮ ಸುಖಕ್ಕಾಗಿ ಜೀವಿಸುವುದಿಲ್ಲ. ಅವರು ಸಮಾಜಕ್ಕಾಗಿ ಮಾಡಬೇಕಾದ ಅನೇಕ ಕರ್ತವ್ಯಗಳಿವೆ. ಅವನ್ನು ಪಂಚ ಮಹಾ ಯಜ್ಞಗಳಲ್ಲಿ ಚರ್ಚಿಸೋಣ.
***************
ಹಿಂದಿನ ಲೇಖನಕ್ಕೆ ಇಲ್ಲಿ ಕ್ಲಿಕ್ಕಿಸಿ:ಬ್ರಹ್ಮಚರ್ಯಾಶ್ರಮ


ಮಂಗಳವಾರ, ಸೆಪ್ಟೆಂಬರ್ 11, 2012

ವೇದಪಾಠ-5

1.ಮಾತೃ ಭ್ಯೋನಮ:| ಪಿತೃಭ್ಯೋನಮ:| ಆಚಾರ್ಯೇಭ್ಯೋನಮ:| ಶ್ರೀ ಗುರುಭ್ಯೋನಮ:|
ಈ ಮಂತ್ರವನ್ನು ನಾವೆಲ್ಲಾ ಕೇಳಿದ್ದೇವೆ. ನಮಗೆ  ಈ ಮಂತ್ರಗಳು ಎಷ್ಟು ಅರ್ಥವಾಗಿವೆ?  
2. ಮಾತೃ ಭ್ಯೋನಮ:........ಇತ್ಯಾದಿ ಹೇಳುವಾಗ ನಮ್ಮ ಜವಾಬ್ದಾರಿ ಏನು?
3. ಜನಿವಾರ ಏನು ಸೂಚಿಸುತ್ತದೆ?
4. ಭಕ್ತ ಅಂದರೆ ಯಾರು?
5. ಪ್ರಣವ ಅಂದರೇನು?
6. ಓಂಕಾರ ಏಕೆ?
7. ಪೂಜೆ ಅಂದರೇನು?

ಪೂರ್ಣ ಮಾಹಿತಿಗೆ ಮತ್ತು ವೇದಪಾಠಕ್ಕಾಗಿ ಇಲ್ಲಿ ಕ್ಲಿಕ್ಕಿಸಿ:
 ವೇದಸುಧೆಡಾಟ್ ಕಾಮ್  

ಭಾನುವಾರ, ಸೆಪ್ಟೆಂಬರ್ 9, 2012

ವೇದ ಪಾಠ-4


ಇಂದು ನಡೆದ ವೇದ ಪಾಠದಲ್ಲಿ ಇಲ್ಲಿರುವ ಮಂತ್ರದ ಪೂರ್ವಾರ್ಧ ಭಾಗವನ್ನು ಮಾತ್ರ ಹೇಳಿಕೊಡಲಾಗಿದೆ. ವೇದ ಪಾಠದ ಆರಂಭದಲ್ಲಿ ರೆಕಾರ್ಡ್ ಮಾಡಿಲ್ಲವಾದ್ದರಿಂದ ಸ್ವರ ಪರಿಚಯ, ಹಾಗೂ ಪಾಠದ ಆರಂಭದ ಭಾಗವನ್ನು ಪ್ರಕಟಿಸಲು ಸಾಧ್ಯವಾಗಿಲ್ಲ. ಇದೇ ಪಾಠವನ್ನು ಪುನ: ಮಾಡ ಲಾಗುತ್ತದೆ. ಇಂದು ಗುರುಗಳಾದ ವೇದಾಧ್ಯಾಯೀ ಶ್ರೀ ವಿಶ್ವನಾಥ ಶರ್ಮರು ಮಂಗಳೂರಿನಲ್ಲಿ ನಡೆಯುತ್ತಿರುವ ಒಂದು ವೇದ ಸಂಬಂಧಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದರಿಂದ ಅವರ ಶಿಷ್ಯರಾದ ಚನ್ನರಾಯಪಟ್ಟಣದ ಶ್ರೀ ಪ್ರಸಾದ್ ಅವರು ವೇದ ಪಾಠವನ್ನು ಮಾಡಿರುತ್ತಾರೆ. ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮರು ದಿನಾಂಕ 11.9.2012 ರಂದು ಮಂಗಳವಾರ ಬೆಳಿಗ್ಗೆ 10.30 ಕ್ಕೆ ವಿಶೇಷ ಪಾಠವನ್ನು ಮಾಡ ಲಿದ್ದಾರೆ. ಇಂದು ಹೇಳಿಕೊಟ್ಟಿರುವ ಮಂತ್ರದ ಅರ್ಥ-ವಿವರಣೆಯನ್ನು ಕೊಡಲಿದ್ದಾರೆ. ಅದರ ಆಡಿಯೋ ಕ್ಲಿಪ್ ಕೂಡ ಅಳವಡಿಸಲಾಗುವುದು. ಅಲ್ಲದೆ ಸ್ವರಬದ್ಧ ಉಚ್ಚಾರಣೆ ಬಗ್ಗೆಯೂ ತಿಳಿಸಲು ಕೋರಲಾಗುವುದು. ಈ ಮೇಲ್ ಮೂಲಕ ಪಾಠವನ್ನು ಪಡೆಯುತ್ತಿರುವ ಹಾಗೂ ಇದೇ ತಾಣದಮೂಲಕ ಅನುಸರಿಸುತ್ತಿರುವ ವಿದ್ಯಾರ್ಥಿಗಳಲ್ಲಿ ವಿನಂತಿ ಏನೆಂದರೆ ನೀವು ಇಲ್ಲಿ ಹೇಳಿಕೊಡುತ್ತಿರುವ ಮಂತ್ರಗಳನ್ನು ಸ್ವರ ತಪ್ಪದಂತೆ ಕಂಠಪಾಠ ಮಾಡುವುದು ಅವಶ್ಯಕ. ಸ್ವರಬದ್ಧ ಉಚ್ಚಾರಣೆಗೆ ನಿತ್ಯ ಅಭ್ಯಾಸ ಅನಿವಾರ್ಯ. ಮಂತ್ರಗಳು ಚಿಕ್ಕದಾದ್ದರಿಂದ "ಏನು ಮಹಾ?" ಎಂಬ ಉದಾಸೀನ ಬೇಡ. ಅಭ್ಯಾಸ ಮಾಡಿದಮೇಲೆ ನಿಮ್ಮ ಧ್ವನಿಯಲ್ಲಿ ರೆಕಾರ್ಡ್ ಮಾಡಿ ಕೇಳಿ ಅಲ್ಲದೆ ಗುರುಗಳ ಪಾಠಕ್ಕೆ ತಾಳೆ ಮಾಡಿಕೊಂಡು ನೋಡಿ. ಶುದ್ಧ ಸ್ವರ ಕ್ಕೆ ಗಮನ ಈಗಲೇ ಕೊಟ್ಟರೆ ಮುಂದೆ ಸುಲಭವಾಗುವುದು. ಹೀಗೂ ಮಾಡಬಹುದು...ನಿಮ್ಮ ಧ್ವನಿಯಲ್ಲಿ ವಿಶ್ವಾನಿ ದೇವ...ಮಂತ್ರವನ್ನು ರೆಕಾರ್ಡ್ ಮಾಡಿ ವೇದಸುಧೆಗೆ ಮೇಲ್ ಮಾಡಿದರೆ ಗುರುಗಳ ಗಮನಕ್ಕೆ ತರಲಾಗುವುದು.
ವೇದಪಾಠ-4 ರ ಆಡಿಯೋ ಗಾಗಿ ಇಲ್ಲಿ  ನೇರವಾಗಿ vedasudhe.com  ಪ್ರವೇಶಿಸಿ.

ಶುಕ್ರವಾರ, ಸೆಪ್ಟೆಂಬರ್ 7, 2012

ಭಕ್ತಿ - ಹೀಗೊಂದು ವಿಚಾರ



     ಮಾನವನಿಗೂ ಪಶು-ಪಕ್ಷಿ-ಕ್ರಿಮಿ-ಕೀಟಗಳಿಗೂ ಒಂದು ಮೂಲಭೂತ ವ್ಯತ್ಯಾಸ ಗಮನಿಸಬಹುದಾದುದೆಂದರೆ ಮಾನವನಿಗೆ ಇರುವ ವಿವೇಚನೆ ಮಾಡುವ ಶಕ್ತಿ. ಆತ ಮಾಡಬಲ್ಲ, ಮಾಡದಿರಲೂ ಬಲ್ಲ, ಬೇರೆಯದನ್ನೇ ಮಾಡಬಲ್ಲ. ಆತ ಕೇವಲ ಸ್ವಾಭಾವಿಕ ಜ್ಞಾನದಿಂದ ತೃಪ್ತನಾಗುವುದಿಲ್ಲ. ಏಕೆಂದರೆ ಅವನ ಮನಸ್ಸು ಏಕೆ?, ಹೇಗೆ? ಎಂಬ ಪ್ರಶ್ನೆಗಳನ್ನು ಕೇಳುವ ವಿಕಾಸದ ಸ್ಥಿತಿಯನ್ನು ಮುಟ್ಟಿರುತ್ತದೆ. ಪ್ರಶ್ನೆ ಕೇಳುವ ಭಾಗ್ಯ ಮತ್ತು ಅದಕ್ಕೆ ಉತ್ತರ ಹುಡುಕುವ ಅಭಿಲಾಷೆ ಮಾನವನ ಸಂಪತ್ತು. ಸ್ವಾಭಾವಿಕ ಜ್ಞಾನದಲ್ಲೇ ತೃಪ್ತರಾಗಿ ನೈಮಿತ್ತಿಕ ಜ್ಞಾನ ಬಯಸದವರ ಮಾನಸಿಕ ಬೆಳವಣಿಗೆ ಕುಂಠಿತವಾಗಿ ಆಕಾರದಲ್ಲಿ ಮಾತ್ರ ಮಾನವರಾಗಿರುತ್ತಾರೆ. ಮಾನವನ ಪರಿಪೂರ್ಣ ವಿಕಾಸಕ್ಕೆ ಇಂದ್ರಿಯ ಗಮ್ಯವಾದ ಭೌತಿಕ ವಿಷಯಗಳ ಜ್ಞಾನದೊಂದಿಗೆ, ಅತೀಂದ್ರಿಯ ವಿಷಯಗಳಾದ ಪರಮಾತ್ಮ, ಜೀವಾತ್ಮ, ಬಂಧ, ಮೋಕ್ಷ, ಧರ್ಮ, ಇತ್ಯಾದಿಗಳ ಕುರಿತು ಜಿಜ್ಞಾಸೆ ಸಹ ಇರಬೇಕಾಗುತ್ತದೆ. ಹೆಚ್ಚು ಹೆಚ್ಚು ಅಂತರ್ಮುಖಿಗಳಾದಾಗ, ಶ್ರವಣ, ಮನನ, ಮಥನ, ಮಂಥನಗಳನ್ನು ನಡೆಸಿದಷ್ಟೂ ಅವನ ತಿಳಿವಳಿಕೆ ಹೆಚ್ಚುತ್ತಾ ಹೋಗುತ್ತದೆ. ಎಷ್ಟೋ ಸಂಗತಿಗಳನ್ನು ಅರಿಯಲಾಗುವುದಿಲ್ಲ, ಆದರೆ ಅನುಭವಿಸಬಹುದಾಗಿದೆ. ನಮಗೆ ಗೊತ್ತಿಲ್ಲದ ಸಂಗತಿಗಳನ್ನು ಗೊತ್ತು ಮಾಡಿಕೊಳ್ಳುವುದು ಗುರಿ ಎಂದಿಟ್ಟುಕೊಂಡರೆ, ಅದನ್ನು ತಲುಪಲು ಪಡೆದುಕೊಳ್ಳುವ ಸಹಾಯವನ್ನು ಸಾಧನ ಮತ್ತು ಗುರಿ ತಲುಪಿದರೆ ಸಾಧನೆ ಎನ್ನಬಹುದು. ಈ ಪ್ರಯತ್ನದಲ್ಲಿರುವವರು ಸಾಧಕರು. ಗುರಿ ತಲುಪಿದಾಗ ಆಗುವ ಆನಂದವನ್ನು ಮೋಕ್ಷ ಅನ್ನಬಹುದು, ಬೇರೆ ಯಾವುದೇ ಪದದಿಂದ ಗುರುತಿಸಬಹುದು. ಇಂತಹ ಸಾಧ್ಯ(ಗುರಿ), ಸಾಧನೆ, ಸಾಧನ, ಸಾಧಕರ ಮಧ್ಯದಲ್ಲಿ ಉದ್ಭವವಾಗುವುದೇ ಭಕ್ತಿ! ಬ್ರಹ್ಮಾಂಡವನ್ನು, ಅಖಿಲ ಜಗತ್ತನ್ನು ನಿಯಂತ್ರಿಸುವ ಶಕ್ತಿಯನ್ನು ಪರಮಾತ್ಮ ಅಥವ ವಿಶ್ವ ಚೇತನ ಎಂದಿಟ್ಟುಕೊಂಡರೆ ಆ ಶಕ್ತಿಯನ್ನು ಅರಿಯುವ ಪ್ರಯತ್ನವನ್ನು ಭಕ್ತ ಮಾಡುತ್ತಾನೆ. ಆ ಪ್ರಯತ್ನವನ್ನೇ ಭಕ್ತಿ ಎನ್ನಬಹುದು. ಆ ಭಕ್ತಿ ಭಕ್ತನ ಶಕ್ತ್ಯಾನುಸಾರ ಇರುತ್ತದೆ.
     ಭಕ್ತಿಯಲ್ಲಿ ಕೃತಜ್ಞತೆ, ಪ್ರೀತಿ, ಭಯ, ಕೋಪ, ವಾತ್ಸಲ್ಯ, ಬೇಸರ, ಮಮತೆ, ರೋಷ, ಅನುನಯ, ಆನಂದ, ದುಃಖ, ಇತ್ಯಾದಿ ಭಾವಗಳನ್ನು ಕಾಣಬಹುದು. ಈ ಅಖಂಡ ಜಗತ್ತನ್ನು ಸೃಷ್ಟಿಸಿ ಅದನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟ ಭಗವಂತನನ್ನು ಕೃತಜ್ಞತಾ ಭಾವದಿಂದ ಸ್ಮರಿಸಬಹುದು. ಅವನ ಕರುಣೆಯನ್ನು ನೆನೆದು ಅವನನ್ನು ಪ್ರೀತಿಸಬಹುದು. ಇಷ್ಟೊಂದು ಅಗಾಧ ಶಕ್ತಿಯನ್ನು, ಸೃಷ್ಟಿಯ ಬೃಹತ್ತತೆಯನ್ನು ಕಂಡು ಬೆರಗಾಗಿ ಭಯ ಪಡಲೂಬಹುದು, ಇತರರಿಗೆ ಕೊಟ್ಟ ಅವಕಾಶವನ್ನು ತನಗೆ ಕೊಡದ ಬಗ್ಗೆ ಕೋಪಿಸಿಕೊಳ್ಳಲೂಬಹುದು, ಅವನನ್ನು ಓಲೈಸಿ ಒಳಿತನ್ನು ಬೇಡಲೂಬಹುದು,. . . . ., ಹೀಗೆ ಪಟ್ಟಿ ಬೆಳೆಸುತ್ತಾ ಹೋಗಬಹುದು. ಇಂತಹ ಭಾವಗಳು ಭಕ್ತರ ಮನೋಭಾವವನ್ನು -ಅವರವರ ಭಕುತಿಗೆ- ಅವಲಂಬಿಸಿರುತ್ತದೆ. ಭಕ್ತರಲ್ಲಿ ನಾಲ್ಕು ರೀತಿಯ ಭಕ್ತರಿದ್ದಾರೆಂದು - ಆರ್ತ, ಅರ್ಥಾರ್ಥಿ, ಜಿಜ್ಞಾಸು, ಜ್ಞಾನಿ- ಭಗವದ್ಗೀತೆ ಹೇಳುತ್ತದೆ. ತನಗೆ ಇರುವ ತೊಂದರೆಯನ್ನು ಪರಿಹರಿಸಲು ಪ್ರಾರ್ಥಿಸುವವನು ಆರ್ತ, ಸಂಪತ್ತು, ಐಶ್ವರ್ಯ, ಇತ್ಯಾದಿ ಅನುಕೂಲಗಳನ್ನು ಬಯಸುವವನು ಅರ್ಥಾರ್ಥಿ, ಜ್ಞಾನ ಬಯಸುವವನು ಜಿಜ್ಞಾಸು ಮತ್ತು ಪ್ರತಿಯಾಗಿ ಏನನ್ನೂ ಬಯಸದೆ, ಅವನನ್ನು ಹೊಂದುವ ಪ್ರಯತ್ನದಲ್ಲೇ ಆನಂದ ಕಾಣುವವನು ಜ್ಞಾನಿ. ನಾರದ ಭಕ್ತಿ ಸೂತ್ರದಲ್ಲಿ ಭಕ್ತಿಯ ವಿವಿಧ ಮಜಲುಗಳನ್ನು ಹೇಳಲಾಗಿದೆ. (ಭಗವಂತನ ವಿಚಾರಗಳ ಕುರಿತು) ಶ್ರವಣಾಸಕ್ತಿ, ಅವನನ್ನು ಭಜಿಸುವ ಕೀರ್ತನಾಸಕ್ತಿ, ರೂಪಾಸಕ್ತಿ, ಪೂಜಾಸಕ್ತಿ, ದಾಸ್ಯಾಸಕ್ತಿ, ಸಖ್ಯಾಸಕ್ತಿ, ಆತ್ಮನಿವೇದನೆ, ಸಖ್ಯಭಾವ, ವಾತ್ಸಲ್ಯಭಾವ, ತನ್ಮಯಭಾವ, ವಿರಹಭಾವ, ಇತ್ಯಾದಿಗಳನ್ನು ಅಲ್ಲಿ ವಿವರಿಸಿದೆ. ಇರಲಿ, ಇವುಗಳನ್ನೆಲ್ಲಾ ವಿವರಿಸುತ್ತಾ ಹೋದರೆ ದೀರ್ಘ ಬರಹವಾಗುವುದು. ಲೋಕದ ಕಣ್ಣಿನಲ್ಲಿ ಹುಚ್ಚರಂತೆ ಕಂಡು ಬರುವ ಕೆಲವು ಅವಧೂತರು, ಸಾಧು-ಸಂತರ ಭಕ್ತಿಯನ್ನು ವಿವರಿಸಲು ಸಾಧ್ಯವೇ? ರಾಮಕೃಷ್ಣ ಪರಮ ಹಂಸರನ್ನೂ ಹುಚ್ಚರೆಂದು ಜರಿದವರಿಗೇನೂ ಕಡಿಮೆಯಿರಲಿಲ್ಲ.
     ಒಂದೆರಡು ಸರಳ ಉದಾಹರಣೆಗಳನ್ನು ಕೊಟ್ಟು ಭಕ್ತಿಯಲ್ಲಿ ರಾಗ-ದ್ವೇಷಗಳೂ ಇವೆ, ನವರಸಗಳೂ ಇವೆ ಎಂದು ಮುಕ್ತಾಯ ಹಾಡುವೆ. ಪರಮಾತ್ಮನನ್ನು ದ್ವೇಷಿಸುವ ಹಿರಣ್ಯಕಶಿಪು ಮುಂತಾದ ಅಸುರರನ್ನು ದ್ವೇಷ ಭಕ್ತಿಗೆ ಉದಾಹರಣೆಯಾಗಿ ಕೊಡಬಹುದು. ಪ್ರಾಸಂಗಿಕವಾಗಿ ಒಂದು ಕಥೆ ಹೇಳುವೆ. ಒಬ್ಬ ವಿಷ್ಣು ಭಕ್ತ ಪ್ರವಾಸ ಮಾಡುತ್ತಾ ಹೋಗುತ್ತಿದ್ದಾಗ ದಾರಿಯಲ್ಲಿ ಹರಿಹರನ ವಿಗ್ರಹವಿರುವ ಒಂದು ದೇವಸ್ಥಾನ ಕಂಡ. ವಿಷ್ಣು-ಶಿವರಿಬ್ಬರೂ ಇರುವ ವಿಗ್ರಹಕ್ಕೆ ಪೂಜೆ ಮಾಡಲು ಅವನ ಮನಸ್ಸು ಒಪ್ಪಲಿಲ್ಲ. ಸರಿ, ತಾನು ಮಾಡುವ ಪೂಜೆಯನ್ನು ಶಿವ ನೋಡಬಾರದೆಂದು ಅವನ ಕಣ್ಣನ್ನು ಮುಚ್ಚಿದ, ಧೂಪದ ವಾಸನೆಯನ್ನು ಶಿವನ ನಾಸಿಕ ಗ್ರಹಿಸಬಾರದೆಂದು ಆ ಮೂಗಿನ ಹೊಳ್ಳೆಗೆ ಹತ್ತಿಯಿಟ್ಟ, ನೈವೇದ್ಯ ಸಿಗದಿರಲೆಂದು ಶಿವನ ಬಾಯಿಯ ಭಾಗ ಮುಚ್ಚಿದ, ಶಿವನ ಕಿವಿ ತನ್ನ ಪೂಜಾ ಮಂತ್ರ ಕೇಳಬಾರದೆಂದು ಕಿವಿಗೂ ಹತ್ತಿ ತುರುಕಿದ. ಹೀಗೆಲ್ಲಾ ಮಾಡಿ ಪೂಜೆ ಮುಗಿಸಿದಾಗ ಭಕ್ತನ ಎದುರು ಶಿವ ಪ್ರತ್ಯಕ್ಷನಾದ. ಭಕ್ತ ಅವನನ್ನು ಕುರಿತು, "ನೀನೇಕೆ ಬಂದೆ? ನಾನು ಪ್ರಾರ್ಥಿಸಿದ್ದು ವಿಷ್ಣುವನ್ನು" ಅಂದ. ಶಿವ ಹೇಳಿದ, "ಭಕ್ತಾ, ನೀನು ನಿನ್ನ ಪೂಜೆಯುದ್ದಕ್ಕೂ ವಿಷ್ಣುವನ್ನು ನೆನೆಸಲೇ ಇಲ್ಲ. ಬದಲಾಗಿ ನನಗೆಲ್ಲಿ ನಿನ್ನ ಪೂಜೆ ತಲುಪೀತೋ ಅಂತಲೇ ನನ್ನನ್ನೇ ನೆನೆಸುತ್ತಿದ್ದೆ. ನನ್ನನ್ನೇ ನೀನು ನೆನೆಯುತ್ತಿದ್ದರಿಂದ ನಾನು ಬಂದೆ."
     ಗ್ರಾಮಗಳ ದೇವಸ್ಥಾನಗಳಲ್ಲಿ ದೇವರಿಗೆ ಪೂಜೆ ಮಾಡಿ ಪ್ರಸಾದ ಕೇಳಿ (ಮನದಲ್ಲೇ ನೆನಸಿಕೊಂಡು ದೇವರ ವಿಗ್ರಹವನ್ನೇ ನೋಡುತ್ತಾ ಹೂವಿನ ಪ್ರಸಾದ ಕೇಳುವ ಪದ್ಧತಿಯಿದೆ. ಬಲಗಡೆ ಹೂವು ಬಿದ್ದರೆ ಶುಭ, ಎಡಗಡೆ ಬಿದ್ದರೆ ಅಶುಭ ಎಂದುಕೊಳ್ಳುತ್ತಾರೆ. ಇದರ ವೈಜ್ಞಾನಿಕ ವಿಶ್ಲೇಷಣೆ ಇಲ್ಲಿ ಅಪ್ರಾಸಂಗಿಕ) ಕುಳಿತ ಭಕ್ತ/ಭಕ್ತೆಯರನ್ನು ಗಮನಿಸಿದ್ದೀರಾ? ಕೆಲವರು "ಏಕಪ್ಪಾ/ ಏಕಮ್ಮಾ ಇಷ್ಟೊಂದು ಸತಾಯಿಸುತ್ತಿಯಾ? ಆಗುವುದಾದರೆ ಪ್ರಸಾದ ಕೊಡು, ಆಗಲ್ಲಾ ಅಂತಲಾದರೂ ಹೇಳಿಬಿಡು" ಅಂತ ವಿಗ್ರಹದೊಂದಿಗೆ ಸಂಭಾಷಣೆಯನ್ನೂ ಮಾಡುತ್ತಿರುತ್ತಾರೆ. ಬರಬಾರದ ಕಷ್ಟ-ನಷ್ಟಗಳಾದಾಗ, 'ಈ ದೇವರು ಅನ್ನುವವನು ಇದ್ದಿದ್ದರೆ ನನಗೆ ಹೀಗೆ ತೊಂದರೆ ಕೊಡುತ್ತಿರಲಿಲ್ಲ. ಇನ್ನು ಅವನನ್ನು ಪೂಜೆ ಮಾಡುವುದಿಲ್ಲ' ಎಂದು ಘೋಷಿಸುವವರನ್ನೂ ನಾವು ಕಾಣುತ್ತಿರುತ್ತೇವೆ. ನಾವು ಮಾಡುವ ಕರ್ಮಗಳಿಗೆ ನಾವೇ ಹೊಣೆ, ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ನಮ್ಮ ಕರ್ಮಫಲಗಳನ್ನು ನಾವೇ ಅನುಭವಿಸಬೇಕು ಎಂದು ತಿಳಿದು ನಡೆಯುವ ನಿರ್ಲಿಪ್ತ ಭಕ್ತರನ್ನೂ ಕಾಣುತ್ತೇವೆ. ಕೆಡುಕನ್ನು ಯಾರಿಗೂ ಬಯಸದೆ, ಸಾಧ್ಯವಾದಷ್ಟೂ ಎಲ್ಲರ ಹಿತ/ಒಳಿತನ್ನೇ ಬಯಸುವ, ಪ್ರತಿಫಲ ಬಯಸದ ಭಕ್ತರ ಭಕ್ತಿ ಶ್ರೇಷ್ಠವಾದುದು ಎಂಬುದರಲ್ಲಿ ಎರಡು ಮಾತಿರಲಿಕ್ಕಿಲ್ಲ. 

ಮಂಗಳವಾರ, ಸೆಪ್ಟೆಂಬರ್ 4, 2012